ಮಾತೃಭಾಷೆ/ಪ್ರಾದೇಶಿಕ ಭಾಷೆಯಲ್ಲಿನ ಶಿಕ್ಷಣಕ್ಕೆ ಒತ್ತು ನೀಡುತ್ತಿರುವ ರಾಷ್ಟ್ರೀಯ ಶಿಕ್ಷಣ ನೀತಿ – 2020 ಈ ವಿಷಯದಲ್ಲಿ ಹೊಸ ಬಾಗಿಲುಗಳನ್ನು ತೆರೆಯುವ ಸಾಧ್ಯತೆಯನ್ನು ತೋರಿಸಿದೆ. ವಿಶ್ವೇಶ್ವರಯ್ಯ ತಂತ್ರಜ್ಞಾನ ವಿಶ್ವವಿದ್ಯಾಲಯ (ವಿಟಿಯು)ದ ಉಪಕುಲಪತಿಗಳಾದ ಡಾ.ಕರಿಸಿದ್ಧಪ್ಪನವರ ಮುಂಚೂಣಿಯಲ್ಲಿ ಯಂತ್ರಜ್ಞಾನಗಳ (ಇಂಜಿನಿಯರಿಂಗ್) ವಿಷಯಗಳಲ್ಲಿ ಕನ್ನಡ ವಿಜ್ಞಾನ ಬೋಧನೆಯ ಪ್ರಯತ್ನಗಳು ಪ್ರಾರಂಭವಾಗಿವೆ. ಇಲ್ಲಿನ ಮೊದಲನೆಯ ವರ್ಷದ ಯಂತ್ರಜ್ಞಾನ ಶಿಕ್ಷಣದ ವಿದ್ಯಾರ್ಥಿಗಳಿಗೆ ಕನ್ನಡ ಪಠ್ಯಪುಸ್ತಕಗಳನ್ನು ಮುತುವರ್ಜಿ ವಹಿಸಿ ತಯಾರಿಸುತ್ತಿರುವುದು ಒಂದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಮೂವತ್ನಾಲ್ಕನೆಯ ಬರಹ
ಶಿಕ್ಷಣದ ಯಾವುದೇ ಹಂತದಲ್ಲಾದರೂ ವಿದ್ಯಾರ್ಥಿಗಳ ಕಲಿಕೆಯ ದೃಷ್ಟಿಯಿಂದ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಗಳ ಮಹತ್ವವು ಚರ್ಚಾತೀತ ವಿಷಯ. ಕನ್ನಡನಾಡಿನಲ್ಲಿ ಓದುವ ಮಕ್ಕಳಿಗೆ ಅವರ ಶಿಕ್ಷಣದ ಎಲ್ಲ ಹಂತಗಳಲ್ಲೂ ಕನ್ನಡದ ಮೂಲಕ ಶಿಕ್ಷಣ ದೊರೆತಲ್ಲಿ ಅವರ ಗ್ರಹಿಕೆಯ ಮಟ್ಟ ಹೆಚ್ಚುತ್ತದೆ ಮತ್ತು ಕಲಿಕೆಯು ಸುಗಮಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ, ಉನ್ನತ ಶಿಕ್ಷಣದ ವಿಜ್ಞಾನ ಪಾಠಗಳಲ್ಲಿ ಕನ್ನಡ ಬಳಕೆಯ ಸ್ಥಿತಿಗತಿ, ಹಾಗೂ ಭವಿಷ್ಯದ ಹೆಜ್ಜೆಗಳನ್ನು ಕುರಿತು ಈ ಪ್ರಬಂಧವು ಗಮನ ವಹಿಸಿದೆ. ಅಧ್ಯಯನದ ಅನುಕೂಲಕ್ಕಾಗಿ ಇಲ್ಲಿ ಪದವಿ ಪೂರ್ವಶಿಕ್ಷಣ ಹಾಗೂ ಅದಕ್ಕಿಂತ ಮೇಲಿನ ತರಗತಿಗಳನ್ನು ಉನ್ನತ ಶಿಕ್ಷಣವೆಂದು ಪರಿಗಣಿಸಲಾಗಿದೆ.
ಮೊದಲು ಎರಡು ವಾಸ್ತವಿಕ ಸಂಗತಿಗಳತ್ತ ನಾವು ಗಮನ ಹರಿಸಬೇಕಿದೆ.
- ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಸಹ `ವಿಜ್ಞಾನವನ್ನು ಇಂಗ್ಲೀಷಿನಲ್ಲಿ ಕಲಿಯಬೇಕಾಗುತ್ತದೆ’ ಎಂಬ ಭಯದಿಂದಾಗಿ ಉನ್ನತ ಶಿಕ್ಷಣದ ಹಂತದಲ್ಲಿ ವಿದ್ಯಾರ್ಥಿಗಳು ವಿಜ್ಞಾನವನ್ನು ತೆಗೆದುಕೊಳ್ಳಲು ಹಿಂಜರಿಯುತ್ತಾರೆ.
- ಕನ್ನಡ ಮಾಧ್ಯಮದಲ್ಲಿ ವಿಜ್ಞಾನ ವಿಷಯಗಳಲ್ಲಿ ಉನ್ನತ ಶಿಕ್ಷಣವನ್ನು ನೀಡುವುದರಲ್ಲಿ ನಮ್ಮ ವ್ಯವಸ್ಥೆಯು ಮಾಡಿರುವ ಕಾರ್ಯವು ತುಂಬ ಸೀಮಿತವಾಗಿದೆ.
ಮೇಲ್ನೋಟಕ್ಕೆಯೇ ಢಾಳಾಗಿ ಕಾಣುವ ಈ ಎರಡು ಅಂಶಗಳ ಹಿಂದಿನ ವಾಸ್ತವಿಕ ಸನ್ನಿವೇಶವನ್ನು ತುಸು ಗಮನವಿಟ್ಟು ನೋಡಿದರೆ, ಶಿಕ್ಷಣ ವ್ಯವಸ್ಥೆಯ ಆಧಾರ ಸ್ತಂಭಗಳಾದ ಶಿಕ್ಷಕರ ಮನಸ್ಥಿತಿಯಲ್ಲಿ ಮತ್ತು ಶಿಕ್ಷಣದ ಮುಖ್ಯ ಅಂಗಗಳಾದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರ ಮನಸ್ಥಿತಿಯಲ್ಲಿ ಆಗಬೇಕಾದ ಬದಲಾವಣೆಯು ನಮ್ಮ ಗಮನಕ್ಕೆ ಬರುತ್ತದೆ. ಕೆಲವು ಅಪವಾದಗಳನ್ನು ಹೊರತು ಪಡಿಸಿದರೆ ಬಹುತೇಕರ ಮನಸ್ಸಿನಲ್ಲಿ `ಕನ್ನಡದಲ್ಲಿ ಉನ್ನತ ಶಿಕ್ಷಣ ಹಂತದಲ್ಲಿ ವಿಜ್ಞಾನವನ್ನು ಕಲಿಸಲು ಸಾಧ್ಯವಿಲ್ಲ’ ಎಂಬ ಪ್ರಬಲವಾದ ಅನಿಸಿಕೆ ಇದೆ. ಇದರ ಫಲಿತವಾಗಿ, ಶಿಕ್ಷಣದ ಬೆನ್ನುಮೂಳೆಯಾದ ಪಠ್ಯಪುಸ್ತಕಗಳ ನಿರ್ಮಾಣವು ಉನ್ನತ ಹಂತದ ವಿಜ್ಞಾನ ಶಿಕ್ಷಣಕ್ಕೆ ಸಂಬಂಧಪಟ್ಟಂತೆ, ಕನ್ನಡದಲ್ಲಿ ಫಲಪ್ರದವಾಗಿ ಆಗಿಲ್ಲ. ಈ ಕುರಿತು ಒಟ್ಟು ಸಮಾಜದಲ್ಲಿ ಅರಿವು ಮೂಡಬೇಕಿದೆ, ಇನ್ನೂ ಖಚಿತವಾಗಿ ಹೇಳಬೇಕೆಂದರೆ ಜನಮಾನಸವನ್ನು ತಿದ್ದುವ ಕೆಲಸ ಆಗಬೇಕಿದೆ. ಅನೇಕ ಸವಾಲುಗಳಿಂದ ಕೂಡಿದ ಈ ಕೆಲಸವನ್ನು ಮಾಡಲು ಬೇಕಾಗುವ ಇಚ್ಛಾಶಕ್ತಿ ಮತ್ತು ಕಾರ್ಯಶಕ್ತಿಗಳು ಕಡಿಮೆ ಪ್ರಮಾಣದವೇನಲ್ಲ. ಈ ಕ್ಷೇತ್ರದಲ್ಲಿ ಆಸಕ್ತಿ ಮತ್ತು ಕಳಕಳಿಗಳಿಂದ ಕೆಲಸ ಮಾಡುತ್ತಿರುವ ಕೆಲವೇ ಕೆಲವು ವ್ಯಕ್ತಿಗಳ ಭಗೀರಥ ಪ್ರಯತ್ನವು ಮುಂದುವರಿಯುತ್ತಿದೆ ಹಾಗೂ ಅಂಥವರ ಪ್ರಯತ್ನಕ್ಕೆ ಸಮಾಜದ ಮುಖ್ಯವಾಹಿನಿಯ ಬೆಂಬಲದ ಅಗತ್ಯವು ಈಗ ಬಹಳವಾಗಿ ಬೇಕಿದೆ.
ಉನ್ನತ ಶಿಕ್ಷಣದ ಹಂತದಲ್ಲಿ ವಿಜ್ಞಾನವನ್ನು ಕನ್ನಡದಲ್ಲಿ ಹೇಳುವ ಅಗತ್ಯವಾದರೂ ಏನು ಎಂಬ ಪ್ರಶ್ನೆ ಬಂದರೆ ಅದಕ್ಕೆ ಎರಡು ಉತ್ತರಗಳಿವೆ.
- ವಿಜ್ಞಾನವನ್ನು ಓದಲು ಇಂಗ್ಲಿಷ್ ಒಂದು ಕಡ್ಡಾಯ ಪೂರ್ವಾಪೇಕ್ಷಿತ ಸಂಗತಿಯಾಗಬೇಕಿಲ್ಲ. ಇಂಗ್ಲಿಷ್ ಬಳಸದ ಜಪಾನ್, ಜರ್ಮನಿಯಂತಹ ದೇಶಗಳು ವಿಜ್ಞಾನದಲ್ಲಿ ಮಹೋನ್ನತ ಸಾಧನೆ ಮಾಡಿವೆ. ನಮ್ಮ ಗ್ರಾಮೀಣ ಸಮಾಜದ ವಿಜ್ಞಾನ ಪ್ರೇಮಿ ಮಕ್ಕಳಿಗೆ ಇಂಗ್ಲಿಷ್ ಬರುವುದಿಲ್ಲ ಎಂಬ ಕಾರಣಕ್ಕೆ ಗಂಭೀರ ವಿಜ್ಞಾನವನ್ನು ಓದುವ ಅವಕಾಶವು ತಪ್ಪಿಹೋಗಬಾರದು.
- ಈ ಕಾಲವು ವಿಜ್ಞಾನ ತಂತ್ರಜ್ಞಾನಗಳ ಯುಗ. ಈ ಕಾಲದ ಪರಿಭಾಷೆಯಲ್ಲಿ ಕನ್ನಡವು ಮಾತಾಡಬೇಕೆಂದರೆ ಆಧುನಿಕ ವೈಜ್ಞಾನಿಕ ಸಂಶೋಧನೆಗಳನ್ನು ಕನ್ನಡದಲ್ಲಿ ಹೇಳಲು ಸಾಧ್ಯವಾಗುವಂತೆ ನಾವು ಅದನ್ನು ಸಜ್ಜುಗೊಳಿಸಬೇಕು. ಕನ್ನಡದ ಬೆಳವಣಿಗೆ ಹಾಗೂ ಅರ್ಥಪೂರ್ಣ ಉಳಿವಿಗೆ ಅತ್ಯಂತ ಮುಖ್ಯವಾದ ವಿಷಯ ಇದು.

ಈಗ ಇರುವಂತಹ ಪರಿಸ್ಥಿತಿಯನ್ನು ಅವಲೋಕಿಸಿದರೆ ಪದವಿಪೂರ್ವ ಶಿಕ್ಷಣ ಹಾಗೂ ಪದವಿ ಶಿಕ್ಷಣಗಳ ಸಂದರ್ಭದ ಪರಸ್ಪರ ತುಸು ಭಿನ್ನವಾದ ಗುಣಲಕ್ಷಣಗಳು ನಮ್ಮ ಅರಿವಿಗೆ ಬರುತ್ತವೆ. ಕರ್ನಾಟಕದ ಗ್ರಾಮೀಣ ಪ್ರದೇಶದ ಕೆಲವು ಮಹಾವಿದ್ಯಾಲಯಗಳಲ್ಲಿ, ಕನ್ನಡ ಮಾಧ್ಯಮದಲ್ಲಿ ಪದವಿಪೂರ್ವ ಹಂತದ ವಿಜ್ಞಾನ ಶಿಕ್ಷಣವನ್ನು ನೀಡಲಾಗುತ್ತಿದೆಯಾದರೂ ಅಷ್ಟೇನೂ ಉತ್ಸಾಹದಾಯಕವಾದ ಸನ್ನಿವೇಶ ಇಲ್ಲಿಲ್ಲ. ಕೆಲವು ವರ್ಷಗಳ ಹಿಂದೆ ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಪ್ರಕಟಿಸಿದ ಪದವಿಪೂರ್ವ ತರಗತಿಗಳ ವಿಜ್ಞಾನಕನ್ನಡ ಪಠ್ಯಪುಸ್ತಕಗಳು ಹಾಗೂ ಬೇರೆ ಪಠ್ಯಪುಸ್ತಕಗಳು ಸಂಬಂಧಪಟ್ಟ ಅಧ್ಯಾಪಕರ ಹಾಗೂ ವಿದ್ಯಾರ್ಥಿಗಳ ಮನಸ್ಸನ್ನು ಗೆಲ್ಲುವಲ್ಲಿ ಸಫಲವಾಗಿಲ್ಲ. ಇದಕ್ಕೆ ಕಾರಣವೇನೆಂದರೆ ಸಾಮಾನ್ಯವಾಗಿ ವಿಜ್ಞಾನಕನ್ನಡದ ಪಠ್ಯಪುಸ್ತಕಗಳನ್ನು ಇಂಗ್ಲಿಷ್ ವಿಜ್ಞಾನ ಪಠ್ಯಪುಸ್ತಕಗಳ ನೀರಸ ಅನುವಾದವೆಂಬಂತೆ ನಿರ್ಮಿಸುವ ಮನಸ್ಥಿತಿ. ಮೊದಲೇ ಕನ್ನಡ ಮಾಧ್ಯಮದ ಬಗ್ಗೆ ಇರುವ ಅಸಡ್ಡೆಯ ಜೊತೆಗೆ ಕಲಿಸುವವರಲ್ಲಾಗಲೀ, ಕಲಿಯುವವರಲ್ಲಾಗಲೀ ಹುಮ್ಮಸ್ಸು, ಉಲ್ಲಾಸ ಮೂಡಿಸದ ಪಠ್ಯಪುಸ್ತಕಗಳು `ಬರಗಾಲದಲ್ಲಿ ಅಧಿಕ ಮಾಸ’ ಎಂಬ ಸ್ಥಿತಿ ತಂದಿವೆ.
ಇನ್ನು ವಿಜ್ಞಾನ ಪದವಿ ಶಿಕ್ಷಣದ ವಿಷಯಕ್ಕೆ ಬರೋಣ. ಇಲ್ಲಂತೂ ಕನ್ನಡ ಮಾಧ್ಯಮದ ಬೋಧನೆ ಇಲ್ಲ. ಇನ್ನು ಈ ಪಾಠ ಮಡುವ ಅಧ್ಯಾಪಕರು ಕನ್ನಡದ ಬಗ್ಗೆ ಹೇಗೆ ಯೋಚಿಸುತ್ತಾರೆ ಎಂಬುದನ್ನು ಪರಿಶೀಲಿಸೋಣವೇ?
ಪದವಿ ಹಂತದ ಬಹಳಷ್ಟು ವಿಜ್ಞಾನ ಅಧ್ಯಾಪಕರಲ್ಲಿ “ಕ್ಲಿಷ್ಟ ಮತ್ತು ಗಂಭೀರ ವಿಜ್ಞಾನ ವಿಷಯಗಳನ್ನು ಕನ್ನಡದಲ್ಲಿ ಹೇಳಲಾಗದು, ಪಾಠ ಹೇಳಲು ಸೂಕ್ತ ಕನ್ನಡ ಪದಗಳು ಸಿಗುವುದಿಲ್ಲ” ಎಂಬ ಭಾವನೆ ಇದೆ. ಜೊತೆಗೆ, ಇಂಗ್ಲಿಷ್ ಮಾಧ್ಯಮದಲ್ಲಿ ಪಾಠ ಹೇಳುವ ಈ ಅಧ್ಯಾಪಕರು ತಮ್ಮ ಮತ್ತು ವಿದ್ಯಾರ್ಥಿಗಳ ಮಾತೃಭಾಷೆ ಅಥವಾ ಪ್ರದೇಶದ ಭಾಷೆಯಾದ ಕನ್ನಡವನ್ನು ತರಗತಿಗಳಲ್ಲಿ ಅನೌಪಚಾರಿಕ ರೀತಿಯಲ್ಲಿ ಕನ್ನಡವನ್ನು ಬಳಸುವ ಕ್ರಮ ಒಂದಿದೆ. ಕ್ರಿಯಾಪದಗಳು, ವಾಕ್ಯಪೂರಕಗಳು, ಉದಾಹರಣೆಗೆ: `ಅಲ್ವಾ’, `ಅರ್ಥ ಆಯ್ತಾ’, `ಸರಿ ತಾನೆ’?, `ಇಲ್ಲಿ ಬರುತ್ತೆʼ, `ಹೀಗೆ ಆಗುತ್ತೆ’ ……. ಇಂತಹ ಪದಗಳನ್ನು ಅವರು ತರಗತಿಯಲ್ಲಿ ಬಳಸುತ್ತಾರೆ. “ಏನಾದರೂ ಅರ್ಥ ಆಗದಿದ್ದಾಗ ಅದನ್ನು ಕನ್ನಡದಲ್ಲಿ ಹೇಳುತ್ತೇವೆ” ಎನ್ನುವ ಕೆಲವು ಅಧ್ಯಾಪಕರಿದ್ದಾರೆ. ಇಲ್ಲೊಂದು ಕುತೂಹಲಕರ ಸಂಗತಿ ಇದೆ. ತಾವು ತರಗತಿಯಲ್ಲಿ ಕನ್ನಡದಲ್ಲಿ ಮಾತಾಡಿದರೆ ವಿದ್ಯಾರ್ಥಿಗಳೊಂದಿಗೆ ಆಪ್ತ ಸಂಪರ್ಕ ಸಾಧಿಸುತ್ತೇವೆ ಎಂಬ ಭಾವನೆಯು ಕೆಲವು ವಿಜ್ಞಾನ ಅಧ್ಯಾಪಕರಲ್ಲಿದೆ! ಆದರೆ ಗಂಭೀರ ಶೈಕ್ಷಣಿಕ ವಿಚಾರಗಳನ್ನು ಕನ್ನಡದಲ್ಲಿ ಹೇಳಬೇಕು ಎಂಬ ಪ್ರಬಲ ಇಚ್ಛೆಯಾಗಲೀ, ಈ ಬಗ್ಗೆ ಆಳವಾದ ಕಾಳಜಿಯಾಗಲೀ, ಕೆಲವು ಅಪವಾದಗಳನ್ನು ಹೊರತು ಪಡಿಸಿ ಬಹಳ ಜನ ಅಧ್ಯಾಪಕರಲ್ಲಿ ಕಾಣುವುದಿಲ್ಲ. ವಿದ್ಯಾರ್ಥಿಗಳಿಗೆ ಕಷ್ಟವೆನ್ನಿಸುವ ವಿಷಯಗಳನ್ನು ತಾವು ಕನ್ನಡದಲ್ಲಿ ಕೆಲವೊಮ್ಮೆ ವಿವರಿಸಿದರೂ ಆ ವಿದ್ಯಾರ್ಥಿಗಳು ತಮ್ಮ ಮೌಖಿಕ ಪರೀಕ್ಷೆಗಳಲ್ಲಿ ಅಥವಾ ಉದ್ಯೋಗದ ಸಂದರ್ಶನಗಳಲ್ಲಿ ಇಂಗ್ಲೀಷಿನಲ್ಲಿ ಮಾತಾಡಬೇಕಾಗುವುದರಿಂದ, ತರಗತಿಯಲ್ಲಿ ಕನ್ನಡದಲ್ಲಿ ಮಾತಾಡಲು ತಾವು ಅವರನ್ನು ಪ್ರೋತ್ಸಾಹಿಸುವುದಿಲ್ಲ ಎನ್ನುತ್ತಾರೆ ಈ ಅಧ್ಯಾಪಕರು.
ಪದವಿ ಹಂತದ ವಿಜ್ಞಾನ ಶಿಕ್ಷಣದಲ್ಲಿ ಕನ್ನಡದ ಬಗ್ಗೆ ಇದ್ದ ಸ್ವಲ್ಪ ಕಾಳಜಿ ಕೂಡ ಈ ನಡುವೆ ಕಡಿಮೆ ಆಗಿದೆ ಎಂಬುದನ್ನು ಸ್ಪಷ್ಟ ಪಡಿಸುವ ಒಂದು ಗಮನಿಕೆ(ಅಬ್ಸರ್ವೇಷನ್) ಹೀಗಿದೆ ನೋಡಿ. ಕೆಲವು ವರ್ಷಗಳ ಹಿಂದೆ ಪದವಿ ಹಂತದ ವಿಜ್ಞಾನ ವಿಷಯಗಳ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆಯು ಕನ್ನಡ ಮತ್ತು ಇಂಗ್ಲಿಷ್ ಎರಡೂ ವಿಷಯಗಳಲ್ಲಿ ಮುದ್ರಿತವಾಗುತ್ತಿತ್ತು. ಪಾಠಗಳು ಆಂಗ್ಲಭಾಷೆಯಲ್ಲಿ ನಡೆದರೂ ಕೂಡ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಉತ್ತರ ಬರೆಯುವ ಅವಕಾಶವನ್ನು ಈ ಎರಡು ಭಾಷೆಯಲ್ಲಿನ ಪ್ರಶ್ನೆಪತ್ರಿಕೆಗಳು ಕಲ್ಪಿಸುತ್ತಿದ್ದವು. ಆದರೆ ಕನ್ನಡದಲ್ಲಿ ಉತ್ತರಗಳನ್ನು ಬರೆಯುವ ವಿದ್ಯಾರ್ಥಿಗಳ ಸಂಖ್ಯೆ ತೀರಾ ಕಡಿಮೆ ಇರುತ್ತಿತ್ತು ಎಂಬುದು ವಿಜ್ಞಾನ ವಿಭಾಗಗಳ ಕೆಲವು ಹಿರಿಯ ಅಧ್ಯಾಪಕರ ಅನುಭವಜನ್ಯ ಅನಿಸಿಕೆ. `ಬಾಣಲೆಯಿಂದ ಬೆಂಕಿಗೆ’ಎಂಬಂತೆ ಈಗ ಈ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಈಗ ಹಲವು ವಿಶ್ವವಿದ್ಯಾಲಯಗಳ ವಿಜ್ಞಾನ ವಿಷಯಗಳ ಪದವಿ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳಲ್ಲಿ ಕನ್ನಡ ಸಂಪೂರ್ಣವಾಗಿ ಮಾಯವಾಗಿದೆ. ಇದಕ್ಕೆ ನೀಡಲಾಗುವ ಕಾರಣ ಅಂದರೆ `ಉತ್ತಮ ಅನುವಾದಕರ ಕೊರತೆ’ ಎಂಬುದು. ಪ್ರಶ್ನೆಪತ್ರಿಕೆಯ ಕನ್ನಡ ಅನುವಾದಕರಿಗೆ ಒಂದು ಮೊತ್ತದ ಸಂಭಾವನೆ ಇರುತ್ತಿದ್ದು, ಅದನ್ನು ಉಳಿಸುವ ಆರ್ಥಿಕ ಉದ್ದೇಶವೂ ಇಲ್ಲಿದೆಯೇನೋ ಹೇಳಲಾಗದು. ಒಟ್ಟಿನಲ್ಲಿ ಎರಡು ಭಾಷೆಗಳಲ್ಲಿ ಪ್ರಕಟವಾಗುತ್ತಿದ್ದ ಪದವಿ ಮಟ್ಟದ ವಿಜ್ಞಾನ ಪ್ರಶ್ನೆಪತ್ರಿಕೆ ಈಗ ಅನೇಕ ಕಡೆಗಳಲ್ಲಿ ಗತಕಾಲದ ಸಂಗತಿಯಾಗಿಬಿಟ್ಟಿದೆ!
*****
ಈಗ ನಾವು, ಬಹಳಷ್ಟು ಪದವಿ ವಿಜ್ಞಾನ ಅಧ್ಯಾಪಕರಲ್ಲಿ ಇರುವಂತಹ “ಕ್ಲಿಷ್ಟ ಹಾಗೂ ಗಂಭೀರ ವಿಷಯಗಳನ್ನು ಕನ್ನಡದಲ್ಲಿ ಹೇಳಲು ಸಾಧ್ಯವಿಲ್ಲ” ಎಂಬ ಅಪಕಲ್ಪನೆಯನ್ನು ಹೋಗಲಾಡಿಸುವ ಬಗ್ಗೆ ಯೋಚಿಸೋಣ.
ಕನ್ನಡದಲ್ಲಿ ಯಾವುದೇ ಕ್ಲಿಷ್ಟ ಅಥವಾ ಗಂಭೀರ ವಿಜ್ಞಾನ ವಿಷಯವನ್ನಾದರೂ ಅರ್ಥವಾಗುವಂತೆ ವಿವರಿಸಬಹುದು ಎಂಬುದನ್ನು ಕನ್ನಡದಲ್ಲಿ ಸಿಕ್ಕುವ ಅಪಾರ ಪ್ರಮಾಣದ ವೈಜ್ಞಾನಿಕ ಬರವಣಿಗೆ ತೋರಿಸಿಯೇ ಇದೆ. ಶಿವರಾಮ ಕಾರಂತ, ಆರ್.ಎಲ್. ನರಸಿಂಹಯ್ಯನವರಂತಹ ಪ್ರಾರಂಭಿಕ ಹಂತದ ವಿಜ್ಞಾನ ಬರಹಗಾರರಿಂದ ಹಿಡಿದು ಈಚೆಗೆ ನಮ್ಮನ್ನಗಲಿದ ಸುಧೀಂದ್ರ ಹಾಲ್ದೊಡ್ಡೇರಿಯವರ ತನಕ ಅನೇಕ ಬರಹಗಾರರು ಇದನ್ನು ತೋರಿಸಿಕೊಟ್ಟಿದ್ದಾರೆ, ಹಾಗೂ ಈಗಲೂ ಪ್ರತಿ ಹೊಸ ಕನ್ನಡವಿಜ್ಞಾನ ಲೇಖನವೂ ಇದನ್ನು ಮತ್ತೆ ಮತ್ತೆ ರುಜುವಾತು ಪಡಿಸುತ್ತಿದೆ. ಆದರೂ ವಿಜ್ಞಾನ ಅಧ್ಯಾಪನಕ್ಷೇತ್ರದಲ್ಲಿ ಈ ಬಗ್ಗೆ ಸಕಾರಾತ್ಮಕ ಚಿಂತನೆಯ ಕೊರತೆಗೆ ಕಾರಣಗಳೇನು ಎಂದು ಯೋಚಿಸಿದರೆ ಮೇಲ್ನೋಟಕ್ಕೆ ಕಾಣದ ಅನೇಕ ಕಾರಣಗಳು ಗೋಚರವಾಗುತ್ತವೆ.
- ಇಪ್ಪತ್ತು-ಮೂವತ್ತು ವರ್ಷಗಳ ಹಿಂದೆ ಪದವಿಪೂರ್ವ ಕಾಲೇಜುಗಳಲ್ಲಿ ಇದ್ದೇ ಇರುತ್ತಿದ್ದ ವಿಜ್ಞಾನ ಶಿಕ್ಷಣದ ಪದವಿಪೂರ್ವ ಹಂತಗಳಲ್ಲಿ ಕನ್ನಡ ಮಾಧ್ಯಮದ ಒಂದು ತರಗತಿ ವರ್ಗ(ಸೆಕ್ಷನ್) ಈಗ ಬಹಳಷ್ಟು ಕಡೆಗಳಲ್ಲಿ ಮಾಯವಾಗಿದೆ. ಹೀಗಾಗಿ ಇದಕ್ಕೆ ಸಂಬಂಧಿಸಿದ ಪಠ್ಯಪುಸ್ತಕ ನಿರ್ಮಾಣ, ಬೋಧನೆ, ವಿದ್ಯಾರ್ಥಿಗಳ ಕನ್ನಡಅಭಿವ್ಯಕ್ತಿಯನ್ನುತಿದ್ದುವಿಕೆ ಮುಂತಾದಯಾವ ಕೆಲಸಗಳೂ ಶ್ರದ್ಧೆ, ಆಸಕ್ತಿ, ಉತ್ಸಾಹಗಳಿಂದ ನಡೆಯುತ್ತಿಲ್ಲ.
- “ಇಂಗ್ಲಿಷ್ ಬರುವುದಿಲ್ಲ ಎಂದರೆ ಅದು ನಾಚಿಕೆ ಪಟ್ಟುಕೊಳ್ಳಬೇಕಾದ ವಿಷಯ” ಎಂಬ ವಸಾಹತುಶಾಹಿ ಮನೋಧರ್ಮ ಈಗಲೂ ಅನೇಕರಲ್ಲಿ ಜೀವಂತವಾಗಿದೆ. ತಮ್ಮನ್ನು ತಾವು ಉತ್ತಮ ಅಧ್ಯಾಪಕರು ಎಂದು ರುಜುವಾತು ಪಡಿಸಿಕೊಳ್ಳಬೇಕಾದರೆ ಅದು ಇಂಗ್ಲಿಷ್ ಮಾತಾಡುವುದರಿಂದ ಮಾತ್ರ ಸಾಧ್ಯ ಎಂಬ ಭಾವನೆಯು ಸಾಕಷ್ಟು ಅಧ್ಯಾಪಕರಲ್ಲಿದೆ. ಇದು ಸಹಜವಾಗಿ ಅವರ ವಿದ್ಯಾರ್ಥಿಗಳಿಗೂ ಸೋಸಿ ಬರುತ್ತದೆ. ಇನ್ನು ಸಮಾಜದಲ್ಲಿ, ಪೋಷಕರಲ್ಲಿ ಇರುವ `ಇಂಗ್ಲಿಷ್ಮೋಹ’ವಂತೂ ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. `ಇಂಗ್ಲಿಷ್ ಮಾತಾಡುವವರು ಬುದ್ಧಿವಂತರು’’ ಎಂಬ ಭಾವನೆಯು ನಮ್ಮ ಸಮಾಜದಲ್ಲಿ ತೀರಾ ಬಲವಾದದ್ದು.
- ಕನ್ನಡದಲ್ಲಿ ಪ್ರಕಟವಾಗುವಂತಹ ವಿಜ್ಞಾನ ಲೇಖನಗಳನ್ನು ಓದಬೇಕು ಎಂದು ಬಯಸುವ ವಿಜ್ಞಾನ ಅಧ್ಯಾಪಕರ ಸಂಖ್ಯೆಕಡಿಮೆ. ಹಾಗೂ ತಾವು ಕನ್ನಡದಲ್ಲಿ ಬರೆಯಬೇಕು ಎಂಬ ಇಚ್ಛೆಯುಳ್ಳ ವಿಜ್ಞಾನ ಅಧ್ಯಾಪಕರ ಸಂಖ್ಯೆಯಂತೂ ಇನ್ನೂ ಕಡಿಮೆ. ಉದಾಹರಣೆಗೆ ಭೌತಶಾಸ್ತ್ರ ವಿಷಯದಲ್ಲಿನ ಪಿಎಚ್.ಡಿ. ಸಂಶೋಧನಾ ಪ್ರಬಂಧವನ್ನು ಕನ್ನಡದಲ್ಲಿ ಬರೆದು ಸಲ್ಲಿಸಿದ ಅಧ್ಯಾಪಕಿ ಡಾ.ವೈ.ಸಿ.ಕಮಲರಂಥವರ ಉದಾಹರಣೆಗಳು ಈ ಸನ್ನಿವೇಶಕ್ಕೆ ಅಪವಾದವೇ ಹೊರತು ನಿಯಮವಲ್ಲ.
*****
ಕನ್ನಡಪ್ರಿಯ ಮನಸ್ಸುಗಳಿಗೆ ಕಪ್ಪುಮೋಡದಂತೆ ಭಾಸವಾಗಿ ಬೇಸರ ಹುಟ್ಟಿಸುವ ಮೇಲ್ಕಂಡ ಪರಿಸ್ಥಿತಿಯಲ್ಲಿ ಒಂದು ಬೆಳ್ಳಿ ಅಂಚು ಕಾಣಿಸುತ್ತಿದೆ. ಅದೇನೆಂದರೆ, ಮಾತೃ಼ಭಾಷೆ/ಪ್ರಾದೇಶಿಕ ಭಾಷೆಯಲ್ಲಿನ ಶಿಕ್ಷಣಕ್ಕೆ ಒತ್ತು ನೀಡುತ್ತಿರುವ ರಾಷ್ಟ್ರೀಯ ಶಿಕ್ಷಣ ನೀತಿ – 2020 ಈ ವಿಷಯದಲ್ಲಿ ಹೊಸ ಬಾಗಿಲುಗಳನ್ನು ತೆರೆಯುವ ಸಾಧ್ಯತೆಯನ್ನು ತೋರಿಸಿದೆ. ವಿಶ್ವೇಶ್ವರಯ್ಯ ತಂತ್ರಜ್ಞಾನ ವಿಶ್ವವಿದ್ಯಾಲಯ (ವಿಟಿಯು)ದ ಉಪಕುಲಪತಿಗಳಾದ ಡಾ.ಕರಿಸಿದ್ಧಪ್ಪನವರ ಮುಂಚೂಣಿಯಲ್ಲಿ ಯಂತ್ರಜ್ಞಾನಗಳ (ಇಂಜಿನಿಯರಿಂಗ್) ವಿಷಯಗಳಲ್ಲಿ ಕನ್ನಡ ವಿಜ್ಞಾನ ಬೋಧನೆಯ ಪ್ರಯತ್ನಗಳು ಪ್ರಾರಂಭವಾಗಿವೆ. ಇಲ್ಲಿನ ಮೊದಲನೆಯ ವರ್ಷದ ಯಂತ್ರಜ್ಞಾನ ಶಿಕ್ಷಣದ ವಿದ್ಯಾರ್ಥಿಗಳಿಗೆ ಕನ್ನಡ ಪಠ್ಯಪುಸ್ತಕಗಳನ್ನು ಮುತುವರ್ಜಿ ವಹಿಸಿ ತಯಾರಿಸುತ್ತಿರುವುದು ಒಂದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.
ಸರ್ಕಾರ ಹಾಗೂ ಶಿಕ್ಷಣ ವ್ಯವಸ್ಥೆಯ ಸಂಘಟಿತ ಪ್ರಯತ್ನಗಳಿಂದ ನಾವು ಈ ದಿಸೆಯಲ್ಲಿ ಸಾಕಷ್ಟು ಮುನ್ನಡೆ ಸಾಧಿಸಬಹುದು. ಮನಸ್ಸಿದ್ದರೆ ಮಾರ್ಗವಿದೆ. ಈಗ ಆಗಬೇಕಾದ ಕೆಲಸಗಳ ಪಟ್ಟಿ ಹೀಗಿದೆ.
- ಪ್ರತಿ ಮಹಾವಿದ್ಯಾಲಯದಲ್ಲೂ ಕಡ್ಡಾಯವಾಗಿ ಕನ್ನಡ ಮಾಧ್ಯಮದ ಪದವಿ ವಿಜ್ಞಾನ ತರಗತಿ ಇರುವಂತಹ ಸನ್ನಿವೇಶವು ನಿರ್ಮಾಣ ಆಗಬೇಕು.
- ಓದಲು ಸಂತೋಷವಾಗುವಂತಹ ಕನ್ನಡ ವಿಜ್ಞಾನ ಪಠ್ಯಪುಸ್ತಕಗಳು ಉನ್ನತ ಶಿಕ್ಷಣ ಹಂತದಲ್ಲಿ ಬರಬೇಕು. ಈ ದೃಷ್ಟಿಯಿಂದ 1985ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗವು ಪ್ರಕಟಿಸಿದ ವಿಜ್ಞಾನ ಪಠ್ಯಪುಸ್ತಕಗಳನ್ನು ಗಮನಿಸಬೇಕು (ಉದಾಹರಣೆಗೆ ಭೌತ ವಿಜ್ಞಾನ ಪರಿಚಯ – ಪ್ರೊ.ಎಸ್.ಆರ್.ಶಂಕರ ನಾರಾಯಣ ಮತ್ತು ತಂಡ)
- ಎಲ್ಲ ವಿಜ್ಞಾನ ವಿಷಯಗಳಲ್ಲೂ ಉತ್ತಮವಾದ ಇಂಗ್ಲಿಷ್- ಕನ್ನಡ ಪದಕೋಶಗಳು ಪ್ರಕಟವಾಗಬೇಕು. ಆಗ, ಬೋಧಕರು ಮತ್ತು ವಿದ್ಯಾರ್ಥಿಗಳಿಗೆ ಕನ್ನಡ ವಿಜ್ಞಾನ ಪದಗಳ ಕೊರತೆಯು ಕಾಣುವುದಿಲ್ಲ. ಹೀಗೆ ಪದಕೋಶಗಳನ್ನು ಮಾಡುವಾಗ ಪದಗಳ ಆಯ್ಕೆಯಲ್ಲಿ ಸರಳತೆ ಇರಬೇಕು ಮತ್ತು ಆದಷ್ಟೂ ಆಡುನುಡಿಗೆ ಮನ್ನಣೆ ಕೊಡಬೇಕು.
- ವಿದ್ಯಾರ್ಥಿಗಳಿಗೆ ವಿಜ್ಞಾನವನ್ನು ಕನ್ನಡದಲ್ಲಿ ಬರೆಯಲು ಪ್ರೋತ್ಸಾಹಿಸಬೇಕು. ವಿಜ್ಞಾನ ಬರಹಗಾರರ ಹೊಸ ಹೊಸ ಪೀಳಿಗೆಗಳು ಬರಬೇಕು. ವಿವಿಧ ಶೈಲಿಗಳ ವಿಜ್ಞಾನಕನ್ನಡ ಬರವಣಿಗೆಗಳನ್ನು ಮತ್ತು ಸಾಹಿತ್ಯ ಪ್ರಕಾರಗಳನ್ನು ಅಧ್ಯಾಪಕರು ವಿದ್ಯಾರ್ಥಿಗಳ ಗಮನಕ್ಕೆ ತರಬೇಕು. ವಿಚಾರ ಪ್ರಬಂಧ, ಹಾಸ್ಯ ಲೇಖನ, ಕತೆ ಹೇಳುವ ಶೈಲಿ, ನಾಟಕ, ಕಾದಂಬರಿ. ಬಾಲಸಾಹಿತ್ಯ, ವಿಶ್ವಕೋಶ……………………………. ಹೀಗೆ. ವಿಜ್ಞಾನದಂತೆ ಅದರ ಬರವಣಿಗೆಯೂ ಬಹುಮುಖೀ ನೆಲೆಗಳನ್ನು ಹೊಂದಿರುವಂಥದ್ದರ ಅರಿವು ವಿದ್ಯಾರ್ಥಿಗಳಲ್ಲಿ ಮೂಡಬೇಕು.
- ಕನ್ನಡದ ಅಂಕೀಯ(ಡಿಜಿಟಲ್) ಅಸ್ತಿತ್ವಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡಬೇಕು. ಕನ್ನಡವು ಯುವಜನತೆಯನ್ನು ತಲುಪಲು ಇದರಿಂದ ತುಂಬ ಅನುಕೂಲವಾಗುತ್ತದೆ.

ಒಟ್ಟಿನಲ್ಲಿ ಉನ್ನತ ಶಿಕ್ಷಣದ ವಿಜ್ಞಾನ ಪಾಠಗಳಲ್ಲಿ ಕನ್ನಡದ ಬಳಕೆಯ ಕ್ಷೇತ್ರದಲ್ಲಿ ಆಗಬೇಕಾದ ಕೆಲಸ ಅಪಾರವಾಗಿದೆ. ಈ ವಿಷಯದಲ್ಲಿ ಸಂಬಂಧ ಪಟ್ಟವರ ಇಚ್ಛಾಶಕ್ತಿಯು ತುಂಬ ಮುಖ್ಯವಾದದ್ದು. ಇಚ್ಛಾಶಕ್ತಿ ಉಂಟಾಗಬೇಕಾದರೆ ಮನಸ್ಥಿತಿಗಳು ಬದಲಾಗುವುದು ಮುಖ್ಯ. ಮಾತೃಭಾಷೆ/ಪ್ರಾದೇಶಿಕ ಭಾಷೆಯಲ್ಲಿ ಉನ್ನತ ಶಿಕ್ಷಣ ನೀಡುವುದೆಂದರೆ ಅದು ನಮ್ಮ ವಿದ್ಯಾರ್ಥಿಗಳ ಕಲಿಕೆಯನ್ನು ಸುಲಭ ಮತ್ತು ಸುಗಮಗೊಳಿಸುತ್ತದೆ ಮಾತ್ರವಲ್ಲ, ಕನ್ನಡದಲ್ಲಿ ನೂತನಜ್ಞಾನ ನಿರ್ಮಾಣವಾಗುವುದಕ್ಕೂ ಕಾರಣವಾಗಿ ಕನ್ನಡಭಾಷೆ ಬೆಳೆಯುತ್ತದೆ. “ಕನ್ನಡವು ಕನ್ನಡವ ಕನ್ನಡಿಸುತಿರಲಿ” ಎಂದು ನುಡಿದ ವರಕವಿ ಬೇಂದ್ರೆಯವರ ಆಶಯವು ಆಗ ನಿಜಗೊಳ್ಳುತ್ತದೆ. ಕನ್ನಡದ ಅಂಕೀಯ(ಡಿಜಿಟಲ್) ನವೋದಯವನ್ನು ಅಂದರೆ ಅಂತರ್ಜಾಲಾವೃತ ಗಣಕಪ್ರಪಂಚದಲ್ಲಿ ಕನ್ನಡದ ಅಭ್ಯುದಯವನ್ನು ಶ್ರೀಮಂತವಾಗಿಸಲು ಸಹ ಇದರಿಂದ ಸಹಾಯವಾಗುತ್ತದೆ.

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.
