ಮೊನ್ನೆ ಮಟಮಟ ಮಧ್ಯಾಹ್ನದ ಹೊತ್ತು ಜೀನ್ಸ್ ಟಿ-ಶರ್ಟ್ ತೊಟ್ಟು ಬಂದಿದ್ದ ಮರಕಡಿಯುವವನು, ಅಲ್ಲೇ ಪಕ್ಕದ ಮನೆಯ ಕಂಪೌಂಡ್ ಮೇಲಿಂದ ಸಾಹಸ ಮಾಡಿ ಮರ ಹತ್ತುವುದರೊಳಗೆ ಸುಸ್ತಾಗಿ ಹೋಗಿದ್ದ. ಅಂತೂ ಅನಿವಾರ್ಯವಾಗಿ ನಾಲ್ಕು ಕೊಂಬೆಗಳನ್ನು ಕಡಿದು, ಅಲ್ಲೇ ಪಕ್ಕದಲ್ಲಿದ್ದ ನನ್ನ ಜೊತೆ ಅವನಿಗೂ ಎರಡು ಸೀನು ಬಂದು “ಡಸ್ಟ್ ಅಲರ್ಜಿ” ಮೇಡಂ ಎಂದು ಹಾಗೆ ಮೂಗು ತಿರುಚಿದ. ಅವನಿಗೆ ಟೀ ಮಾಡಿ ಇನ್ನೇನೋ ಹೇಳಬೇಕೆಂದು ಮಾಡಿದರೆ, ಅವನು ಆಗಲೇ ಐವತ್ತೋ ನೂರೋ ಹಿಡಿದು ಹೋಗಿಯಾಗಿತ್ತು.

ಆಗಲೇ ನನಗೆ ತುಂಡು ಬಟ್ಟೆಯನ್ನು ತೊಟ್ಟು ಕತ್ತಿಯನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ಸರಸರನೆ ಮರ ಹತ್ತಿ ಕಾಯಿ ಕೊಯ್ಯುವುದೋ ಗೆಲ್ಲು ಕಡಿಯುವುದೋ, ಇನ್ನೂ ಏನೂ ಹೇಳದೆ ಎಲ್ಲಾ ಮಾಡಿಕೊಡುತ್ತಿದ್ದ ನಮ್ಮೂರ ತುಕ್ರನ ನೆನಪಾಯಿತು. ಅವನು ದಣಿದು ಬಂದು ಕಾಯುತ್ತಿದ್ದ ಬೆಲ್ಲದ ತುಂಡಿಗೋ, ಒಂದು ಚಾ ಕುಡಿದರೆ ಲಾಯಕಿತ್ತು ಅಮ್ಮಾ ಎಂಬ ಮುಗ್ದ ನಗುವಿಗೋ ತುಂಬಿ ಬಂದಿತ್ತು.

ಏನೇನೋ ನೆನಪಾಗುತ್ತಾ ನಮ್ಮ ಹಾಸ್ಟೆಲ್ ನಲ್ಲಿ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದ ನಂಜಮ್ಮನ ಮುಖ ತೇಲಿ ಬಂತು. ಪ್ರೀತಿಯಿಂದ ಎಲ್ಲಾ ಕೆಲಸಗಳನ್ನು ಮಾಡುತ್ತಾ ಅದೇನೋ ಜಾತಿಯ ಕಾರಣಕ್ಕೆ ಟಾಯ್ಲೆಟ್ ತೊಳೆಯುವುದೊಂದು ನಿಷಿದ್ದವಾಗಿತ್ತಂತೆ. ಅತೀ ಸಂಕೋಚದ ಅವಳ ಮುಖ ಕರುಣಾರಸ ಉಕ್ಕಿಸಲು, ಇಂತಹ ಕೆಲಸವನ್ನು ಅವಳಿಂದ ಮಾಡಿಸಿದರೆ ಅದರಿಂದ ನಮಗೇ ಪಾಪ ಅಂಟಿಕೊಳ್ಳುತ್ತದೆಂಬಂತೆ ಮಾತನಾಡುತ್ತಿದ್ದಳು. ನನ್ನ ಪಾಪಗಳೇ ಸಾಕಷ್ಟು ಇರುವಾಗ ಇನ್ನು ಅವರಿವರ ಪಾಪ, ಶಾಪ ಕಟ್ಟಿಕೊಳ್ಳುವುದು ಬೇಡವೆಂದು ಸುಮ್ಮನಾದೆ. ಆದರೆ ಪಾಪ ಅವಳಿಗೆ ಹಾಸ್ಟೆಲ್ ಹುಡುಗಿಯರ ಶಾಪ ತಪ್ಪಿರಲಿಲ್ಲ.

ಇಂತಿಪ್ಪ ಸಮಯದಲ್ಲಿ, ಮರಕಡಿಯುವವನು, ನಂಜಮ್ಮ, ತುಕ್ರ, ಜಾತಿ ಎಂದು ಯಾವುದೋ ಅಸ್ಮೃತಿ ಗೋಚರಿಸಿದಂತಾಗಿ, ಎರಡಕ್ಷರ ಬರೆಯೋಣವೆಂದು ಅಂದುಕೊಳ್ಳುವಾಗ ನವೋದಯ, ನವ್ಯ, ಪ್ರಗತಿಶೀಲ, ಬಂಡಾಯಗಳು ಅಟ್ಟಿಸಿಕೊಂಡು ಬಂದಂತಾಯಿತು. ಅಂತಹ ನಾಮಾವಾಳಿಗಳ ಮಾತಿರಲಿ, ಬರೆಯುವುದು ಕವಿತೆಯೋ, ಕತೆಯೋ ಪ್ರಬಂಧವೋ ಎಂಬ ಗೊಂದಲವೂ ಉಂಟಾಯಿತು. ಹಾಗೆಯೇ ಮೊನ್ನೆ ತಾನೆ ನೋಡಿದ ಯೋಗರಾಜ ಭಟ್ಟರ ಪಂಚರಂಗಿಯ ನೆನಪಾಗಿ ಪ್ರಪಂಚವೆಲ್ಲಾ ಗುಜರಿ ಸಾಮಗ್ರಿಗಳಂತೆ ಭಾಸವಾಯಿತು. ಅಲ್ಲಿ ನಾಯಕನಿಗೆ ಅನ್ನಿಸುವಂತೆ ದಲಿತರುಗಳು, ಬ್ರಾಹ್ಮಣರುಗಳು, ಮುಸ್ಲಿಮರುಗಳು, ಸಮಾನತೆಗಳು, ಕುರುಬರುಗಳು ಪೀಠಾರೋಹಣಗಳು ಹಾಗೂ ಎಲ್ಲರ ವ್ಯರ್ಥ ಸಮರ್ಥನೆಗಳು.

ಹೀಗೆ ಏನೇನೋ ಅನ್ನಿಸಿ ಪ್ರಶ್ನೆ ಪತ್ರಿಕೆಯಲ್ಲಿ ಒಂದು ವಾಕ್ಯದಲ್ಲಿ ಉತ್ತರಿಸಿ ಎಂದಿದ್ದರೆ, ಹತ್ತು ಅಂಕದ ಪ್ರಶ್ನೆಗೆ ಉತ್ತರಿಸುವಂತೆ ಪಾಯಿಂಟ್ಸ್ ಗಳನ್ನು ಕೊಡುತ್ತಾ ಸಮರ್ಥಿಸುತ್ತಾರೆ. ಶಂಕರ, ಮಧ್ವ, ಬುದ್ಧ, ಅಂಬೇಡ್ಕರ್, ಗಾಂಧಿ, ಕ್ರಿಸ್ತನೆಂದು, ಅವರು ಆಡಿದ ಮಾತುಗಳ ಅನ್ವರ್ಥ, ಗೂಢಾರ್ಥ, ದ್ವಂದ್ವಾರ್ಥ, ವಿಶೇಷಾರ್ಥ, ಅನರ್ಥಗಳು ಇವರಿಗೆ ತಿಳಿದಿಲ್ಲವೆಂದು ಅವರು, ಅವರಿಗೆ ತಿಳಿದಿಲ್ಲವೆಂದು ಇವರು ಹೊಂದಿಸಿ ಬರೆಯಲಾಗದೆ, ಬಿಟ್ಟ ಸ್ಥಳಗಳನ್ನೂ ತುಂಬಿಸಲಾಗುವುದಿಲ್ಲ. ಕೊನೆಗೆ ಧರ್ಮ, ಸಾಹಿತ್ಯ, ಇನ್ನೇನೋ ಮೂಲ ಸಮಸ್ಯೆಯನ್ನು ಮರೆತು ಪ್ರಶ್ನೆ ಪತ್ರಿಕೆಯ ಕೊನೆಯಲ್ಲಿ ಪ್ರಬಂಧವನ್ನು ಬರೆಯಲು ಇರುವಂತೆ, ಅದನ್ನು ಬರೆದು ಸುಮ್ಮನೆ ದ್ವನಿಯಿಲ್ಲದ ಮಾತುಗಳಂತಾಗುತ್ತವೆ.

ಸಮಾಜ ಬೆಳೆಯುತ್ತಿದೆ. ಜನಿವಾರ ಕಿತ್ತವರು. ಹೊಸದಾಗಿ ಹಾಕಿಕೊಳ್ಳುವವರು, ನಂಜಮ್ಮ, ತುಕ್ರ, ಮರ ಕಡಿಯುವವನು, ನವ್ಯ, ಬಂಡಾಯ ಎಲ್ಲವೂ ಒಂದು ಹಣೆಪಟ್ಟಿ ಇಲ್ಲದೆ ಬದುಕಲು ಸಾದ್ಯವಾಗುತ್ತಿಲ್ಲ. ಅಲ್ಲಿಯವರು ಇಲ್ಲಿ, ಇಲ್ಲಿಯವರು ಅಲ್ಲಿ, ಮೇಲಿನವರು ಕೆಳಗೆ, ಕೆಳಗಿನವರು ಮೇಲೆ ಸಂಚರಿಸುತ್ತಾ ಅಲ್ಲಲ್ಲೇ ಬಲಿಷ್ಠರಾಗುತ್ತಿದ್ದರೆ, ಎಲ್ಲರೂ ಎಲ್ಲಾ ಕೆಲಸಗಳನ್ನು ಮಾಡುತ್ತಾರೆ. ಆದರೆ ತುಕ್ರನಂತಲ್ಲ. ಅದೇ ಬಲಿಷ್ಠತೆಯಲ್ಲಿ ಕವಲುಗಳಾಗಿ ನಿಚ್ಚಳವಾದ ಹಣೆಪಟ್ಟಿಯ ಜೊತೆಗೆ. ಒಂದು ಸಡಿಲತೆಯೊಂದಿಗೆ ಅದರಷ್ಟೇ, ಅಥವಾ ಅದಕ್ಕಿಂತಲೂ ಹೆಚ್ಚಾಗಿ ಬಿಗಿಗೊಳ್ಳುತ್ತಾ ಅಲ್ಲಲ್ಲೇ ತಮ್ಮ ತಮ್ಮ ಗೂಡು ಕಟ್ಟುತ್ತಿವೆ. ನಾವು ಮಲಗಿ ನಿದ್ದೆಯಲ್ಲೇ ಹಣೆಪಟ್ಟಿಯನ್ನು ಕಳಚಿ ಹೆಸರಿಲ್ಲದೆ ಬಾಳುವ ಕನಸು ಕಾಣಬೇಕಷ್ಟೆ.

ಏನೂ ತೋಚದೆ ಕೊಂಬೆಗಳನ್ನು ಕಡಿದು, ಎಡಕ್ಕೆ ಸೊಟ್ಟಗೆ ಬಾಗಿ ಮುಂದೆ ವಿಶಾಲವಾಗಿ ಬೊಚ್ಚು ಬಾಯಿಯ ಅಜ್ಜಿ ಪ್ರೀತಿಯಿಂದ ನಕ್ಕು ಮಾಡಿಸುವಂತೆ ಮೆಲ್ಲಗೆ ಗಾಳಿಗೆ ಅಲ್ಲಾಡುತ್ತಾ, ಹಿಂದೆ ಅಸ್ತಿತ್ವವೇ ಇಲ್ಲದಂತೆ ಕಾಣುವ ಮರದ ಕೆಳಗೆ ನವೋದಯದ ಯಾವುದೋ ಪುಸ್ತಕವನ್ನು ಓದುತ್ತಾ ಕುಳಿತಿದ್ದೇನೆ. ಅಲ್ಲಿಯೇ ಕೆಳಗೆ ಹಣೆಪಟ್ಟಿ ಕಟ್ಟಿಕೊಂಡವರು, ಅಂಟಿಕೊಳ್ಳಲೂ ಆಗದೆ, ಕಿತ್ತುಕೊಳ್ಳಲೂ ಆಗದೆ ಜೊತಾಡುತ್ತಿರುವವರು, ಹೆಸರು ಹುಡುಕುವವರು, ಇರುವವರು, ಇಲ್ಲದವರು ಎಲ್ಲರನ್ನೂ ನೋಡುತ್ತಾ……..