ಅದೇನೂ ಭಾರೀ ದೊಡ್ಡ ಪಬ್ಬಲ್ಲದಿದ್ದರೂ ಅಲ್ಲಿ ವೈಭವಗಳಿಗೇನೂ ಕಮ್ಮಿಯಿರಲಿಲ್ಲ. ಮುಂದೆ ಕೆಲವೇ ದಿನಗಳಲ್ಲಿ ಆ ಪಬ್ಬು ಮುಚ್ಚಲ್ಪಟ್ಟು, ಮುಂದೊಮ್ಮೆ ಆ ರಸ್ತೆಯಲ್ಲಿ ಹೋಗುವಾಗ ಮತ್ಯಾವುದೋ ಹೆಸರಿನ ಕಂಪನಿಯೊಂದು ಬೋರ್ಡು ತೊಟ್ಟುಕೊಂಡು ನಿಂತಿರುವುದು ಕಣ್ಣಿಗೆ ಬಿದ್ದಿತ್ತು. ಈ ಮಹಾನಗರಿಯ ಚಂಚಲತೆಯೇ ಅಂಥದ್ದು. ನೆನ್ನೆ ಹಳಕಲು-ಪೊದೆಗಳಿದ್ದ ಜಾಗದಲ್ಲಿ ಬೆಳಗಾಗುವಷ್ಟರಲ್ಲಿ ರಂಗ್ ಬಿರಂಗೀ ಕಟ್ಟವೊಂದು ತಲೆಯೆತ್ತಿಬಿಡುತ್ತದೆ. ಮನೆಯಂತೆ ಕಾಣುವ ಬಿಲ್ಡಿಂಗ್ ನೊಳಗೆ ನೂರಿನ್ನೂರು ಉದ್ಯೋಗಿಗಳಿರುವ ಕಂಪನಿಯೇ ಅಡಗಿಕೊಂಡಿರುತ್ತದೆ. ನೆನ್ನೆಯಷ್ಟೇ ಪ್ರಾರ್ಥನಾ ಮಂದಿರವಾಗಿದ್ದು, ಹತ್ತಾರು ಜನರ ಓಂಕಾರದಿಂದ ತುಂಬಿಹೋಗಿದ್ದ ಸಮುಚ್ಚಯವೊಂದು ನಾಳೆಯಾಗುವಷ್ಟರಲ್ಲಿ ಹತ್ತಾರು ಬಾಡಿಬಿಲ್ಡರ್ಗಳ ಕಸರತ್ತು ಶಾಲೆಯಾಗಿ ಬದಲಾಗಿಬಿಡುತ್ತದೆ! ಇಲ್ಲಿ ಯಾವ ರೂಪವೂ ಶಾಶ್ವತವಲ್ಲ.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”ಯ ಬರಹ ನಿಮ್ಮ ಓದಿಗೆ
ಎಲ್ಲೋ ಎದ್ದ ಚಂಡ ಮಾರುತಗಳ ಛಾಯೆ ಬೆಂಗಳೂರಿನ ಬಾನನ್ನು ಆವರಿಸಿತ್ತು. ಬಿಸಿಲಿನ ಜಾಗದಲ್ಲೀಗ ಮೋಡಗಳ ಮುಸುಕು ಮೊಬ್ಬು ತೆರೆದ ಕಿಟಕಿಗಳ ಮೂಲಕ ನಮ್ಮ ಆಫೀಸನ್ನು ಪ್ರವೇಶಿಸುತ್ತಿತ್ತು. ಸೋಮವಾರವಾಗಿದ್ದರಿಂದ ಕಚೇರಿಯ ಎಲ್ಲರೂ ಗೃಹಸಚಿವಾಲಯದ ಉದ್ಯೋಗಿಗಳಂತೆ ಗನಗಂಭೀರರಾಗಿ ಕೆಲಸ ಮಾಡುತ್ತಿದ್ದರು. ಬಾಕಿ ಇದ್ದ ಕೆಲಸಗಳೆಲ್ಲ ಮದುವೆ ಊಟದ ಅಡುಗೆ ಕೊಠಡಿಯಲ್ಲಿ ಬೇರೆ ಬೇರೆ ಒಲೆಗಳ ಮೇಲೆ ಬೇಯುತ್ತಿರುವ ಬೇರೆ ಬೇರೆ ಪದಾರ್ಥಗಳಂತೆ ಮತ್ತೆ ಮತ್ತೆ ನನ್ನ ಗಮನವನ್ನು ಚೂರುಚೂರಾಗಿ ತಮ್ಮತ್ತ ಸೆಳೆಯುತ್ತಲೇ ಇದ್ದವು. ಹೀಗೇ ನಡೆದರೆ ಇವತ್ತು ಯಾವೊಂದು ಕೆಲಸವೂ ಸರಿಯಾಗಿ ಮುಗಿಯುವುದಿಲ್ಲವೆಂದು ಯೋಚಿಸುತ್ತಿದ್ದಾಗಲೇ ಲ್ಯಾವೆಲ್ಲೆ ರಸ್ತೆಯ ಕ್ಲೈಂಟೊಬ್ಬರ ಆಫೀಸಿಗೆ ತುರ್ತಾಗಿ ಯಾರನ್ನಾದರೂ ಕಳಿಸಬೇಕೆಂಬ ಆದೇಶ ಮೇಲಿನವರಿಂದ ಬಂತು. ಸಾಧಾರಣವಾಗಿ ಇಂತಹಾ ಕೆಲಸಗಳಿಗೆ ನಾನು ಹೋಗುವುದಿಲ್ಲವಾದರೂ ಇಂದು ಬೇರೆ ಯಾರೂ ಇರಲಿಲ್ಲವಾದ್ದರಿಂದ ಬೇರೆ ವಿಧಿಯಿಲ್ಲದೇ ಅರ್ಧ ಬೆಂದ ಕೆಲಸಗಳನ್ನು ಹಾಗೇ ಬಿಟ್ಟು ಹೊರಟೆ.
ಏನೇ ಹೇಳಿ, ಕಚೇರಿಯಲ್ಲಿ ಕಂಪ್ಯೂಟರ್ ಎದುರಿನ ಬಿಸಿ ಹಂಡೆಯಂತಹಾ ಕುರ್ಚಿಯಲ್ಲಿ ಕುಳಿತು ಬೇಯುವುದಕ್ಕಿಂತಲೂ ಬೆಂಗಳೂರಿನ ಜನನಿಬಿಡ ಬೀದಿಗಳಲ್ಲಿ ಅಲೆಯುವುದರಲ್ಲೇ ಏನೋ ಒಂದು ರೀತಿಯ ನೆಮ್ಮದಿಯಿದೆ. ಆಗಿನ್ನೂ ಬೆಂಗಳೂರಿನಲ್ಲಿ ಮೆಟ್ರೋ ಇಷ್ಟೊಂದು ವ್ಯಾಪಕವಾಗಿರಲಿಲ್ಲ. ಬರಿದೆ ಎರಡು ಸಾಲುಗಳಲ್ಲಿ ಸೀಮಿತ ದೂರಕ್ಕೆ ಕಾರ್ಯ ನಿರ್ವಹಿಸುತ್ತಿದ್ದವು. ಹೀಗಾಗಿ ಸದಾ ಹೆಜ್ಜೆಗೊಂದು ಸಿಗ್ನಲ್ಲಿನಲ್ಲಿ ಸಿಕ್ಕಿಕೊಳ್ಳುವ ಬಸ್ಸಿನಲ್ಲಿ ಓಡಾಡುತ್ತಿದ್ದ ನನ್ನಂಥವರಿಗೆ ಇದು ಬೆರಗಿನ ಸಾರಿಗೆಯಾಗಿತ್ತು. ಮೆಟ್ರೋ ಎನ್ನುವ ಕಂಬದ ಮೇಲಿನ ಪುಷ್ಪಕ ವಿಮಾನದ ಎತ್ತರದಲ್ಲಿ ನಿಂತು ರೇಡಿಯೋದೊಳಗಿನ ಸರ್ಕೀಟ್ ಬೋರ್ಡಿನಂತೆ ಕಾಣುವ ಕಟ್ಟಡಗಳ ಗುಪ್ಪೆಗಳನ್ನೂ, ಗುಂಗುರು ಕೂದಲಿಗೆ ಹೂಮುಡಿದ ತರುಣಿಯರಂತೆ ಕಾಣುವ ಮೇಫ್ಲವರ್ ಮರಗಳನ್ನೂ, ಆಟಿಕೆಯ ವಾಹನಗಳು ಓಡಾಡುತ್ತಿರುವಂತೆ ಕಾಣುವ ನೀಲಿ ಟಾರಿನ ರಸ್ತೆಗಳನ್ನೂ, ತೇಲು ಲೋಕದ ಚಕ್ರವರ್ತಿಗಳಂತೆ ಅಲೆದಾಡಿಕೊಂಡಿರುವ ಮೋಡಗಳನ್ನೂ ನೋಡುವ ಮಜವೇನೆನ್ನುವುದು ಗಮನಿಸಿದವರಿಗೆ ಮಾತ್ರ ಗೊತ್ತು. ಅಲ್ಲಿ ಇಡೀ ಬೆಂಗಳೂರೇ ಬಿಸಿಬಿಸಿ ಚೇರುಗಳಲ್ಲಿ ಬಂಧಿಯಾಗಿರುವಾಗ ನಾನು ಮಾತ್ರ ಮೋಡದ ವಿಮಾನದಲ್ಲಿ ಕುಳಿತು ತೇಲುತ್ತಿರುವಂತೆ ಅದೇನೋ ಒಂದು ಸ್ವಚ್ಛಂದ ಭಾವ. ತಿಂಗಳಿಗೆ ಒಮ್ಮೆಯೋ, ಎರೆಡುಬಾರಿಯೋ ಬರುವ ಈ ಅಪರೂಪದ ಸುತ್ತಾಟದ ಸ್ವತಂತ್ರವನ್ನು ನಾನಂತೂ ಕಳೆದುಕೊಳ್ಳಲು ಬಯಸುತ್ತಿರಲಿಲ್ಲ.
ಮೇಲೆ ಆಗಸದಲ್ಲಿ ಮೋಡಗಳು ಢಾಳಾಗಿಯೇ ಕವಿದಿದ್ದವಾದ್ದರಿಂದ ಸೂರ್ಯನ ಬಿಸಿಲು ಮುಸುಕಿನ ಹಿಂದಿನ ಬೆಳಕಿನ ಅವಶೇಷದಂತೆ ಕ್ಷೀಣವಾಗಿತ್ತು. ಅತ್ತ ಸೆಖೆಯೂ ಅಲ್ಲದ, ಇತ್ತ ಮಳೆಯೂ ಅಲ್ಲದ ಇದು ಹೊರಗಡೆ ಓಡಾಡಲಿಕ್ಕೆ ಹೇಳಿಮಾಡಿಸಿದ ವಾತಾವರಣ. ಮೆಟ್ರೋದಿಂದ ಇಳಿದು ಎಂಜಿ ರೋಡಿನ ಹೆಚ್ಚು ಸಂದಣಿಯಿಲ್ಲದ ರಸ್ತೆಯ ವಿಶಾಲ ಫುಟ್ಪಾತಿನಲ್ಲಿ ನಡೆಯತೊಡಗಿದೆ. ಹತ್ತಾರು ಅಪರಿಚಿತ ಮುಖಗಳು ತಮ್ಮತಮ್ಮ ಮೊಬೈಲ್ಗಳಲ್ಲಿ, ಕಿವಿಗೆ ಕಚ್ಚಿಕೊಂಡಿರುವ ಇಯರ್ ಫೋನ್ ಕೇಳಿಸುತ್ತಿರುವ ಹಾಡುಗಳಲ್ಲಿ, ತೋಳಿಗೆ ಕೊಂಡಿ ಬೆಸೆದಿರುವ ತಮ್ಮ ಗರ್ಲ್ ಫ್ರೆಂಡ್/ ಬಾಯ್ ಫ್ರೆಂಡ್ನೊಂದಿಗಿನ ಉನ್ಮತ್ತ ಹರಟೆಯಲ್ಲಿ ತನ್ಮಯರಾಗಿ ನನಗೆದುರಾಗಿ ನಡೆದು ಬರುತ್ತಿದ್ದವು. ಈ ಅಪರಿಚಿತ ಸಂದಣಿಯಲ್ಲಿ ಇದ್ದೂ ಇಲ್ಲದಂತೆ ನಡೆಯುತ್ತಾ ಕ್ಲೈಂಟ್ ಕಚೇರಿಯ ದಾರಿ ಹಿಡಿದೆ.
ಎಂಜಿ ರೋಡೆನ್ನುವುದೇ ಆಡಂಬರದ ಇನ್ನೊಂದು ಹೆಸರು. ಎಂತಹಾ ತಮಾಷೆ ನೋಡಿ: ಇಡೀ ಜೀವಮಾನವನ್ನೇ ಕೇವಲ ಒಂದು ಪಂಚೆ, ಧೋತರ ಹೊದ್ದುಕೊಂಡು ಇನ್ನಿಲ್ಲದಷ್ಟು ಸರಳವಾಗಿ ಕಳೆದ ಗಾಂಧೀತಾತನ ಹೆಸರಿಟ್ಟುಕೊಂಡಿರುವ ಈ ರಸ್ತೆ ದುಬಾರಿ, ಶೋಕಿ, ಆಡಂಬರಗಳಿಗೆ ಮತ್ತೊಂದು ಹೆಸರಾಗಿದೆ! ಬರೀ ಒಂದು ಜೊತೆ ಬಟ್ಟೆಗೆ ಇಡೀ ಬಟ್ಟೆಯಂಗಡಿಯ ಬೆಲೆಯನ್ನು ಕೇಳುವ ಕ್ಲಾತ್ ಶಾಪ್ಗಳು, ನಾನು ಜೀವಮಾನದಲ್ಲೆಂದೂ ಕೊಳ್ಳದ ದುಬಾರಿ ಪ್ಯಾಂಟು-ಶರ್ಟುಗಳನ್ನು ತೊಟ್ಟು ಕುಹುಕದ ಲುಕ್ಕು ಕೊಡುತ್ತಾ ನಿಂತಿರುವ ಬೋಳುಮಂಡೆಯ ಬೊಂಬೆಮಾನವರು, ಮನುಷ್ಯರಿಂದಲೇ ಕಲಿತಿರುವ ಗೌರವ-ಪ್ರೀತಿಗಳಿಲ್ಲದ ಯಾಂತ್ರಿಕ ನಮಸ್ಕಾರವನ್ನು ಮನುಷ್ಯರಿಗೇ ಹಿಂದಿರುಗಿಸುತ್ತಾ ಒಳಗೆ ಬರುವಂತೆ ಕರೆಯುತ್ತಿರುವ ಸೀರೆಯುಟ್ಟ ಸ್ವಯಂಚಾಲಿತ ವಿಗ್ರಹಗಳು, ಪಾರದರ್ಶಕ ಗಾಜಿನ ಗೋಡೆಯ ಮುಖಾಂತರ ತನ್ನೊಳಗಿನ ಸರಕುಗಳನ್ನು ಪ್ರದರ್ಶಿಸುತ್ತಾ ರಸ್ತೆಯಲ್ಲಿ ಓಡಾಡುವವರ ಗಮನ ಸೆಳೆಯುವ ಮುಂಗಟ್ಟುಗಳು, ಕೃತಕ ಪರಿಮಳವನ್ನು ರಸ್ತೆಗೆಲ್ಲಾ ಬೀರುತ್ತಾ ಹಸಿವಿಲ್ಲದವರಿಗೂ ಹಸಿವು ಹುಟ್ಟಿಸುವ ರೆಸ್ಟೋರೆಂಟುಗಳು, ಅವುಗಳ ಹಜಾರದ ಕಂಬಗಳನ್ನು ತಬ್ಬಿನಿಂತಿರುವ, ಸದಾ ಹಸಿರಾಗಿರುವ, ಘಮಲು-ಚಿಗುರುಗಳಿಲ್ಲದ ಪ್ಲಾಸ್ಟಿಕ್ ಬಳ್ಳಿ-ಗಿಡಗಳು, ತಲೆ ಕೂದಲು ತೆಗೆಯುವುದಕ್ಕೆ ತಲೆಯನ್ನೇ ತೆಗೆಯುವಷ್ಟು ಚಾರ್ಜ್ ಮಾಡುವ ಸೆಲ್ಯೂನ್ಗಳು, ಅವುಗಳ ಹೊರಗೆ ಕರಡಿ, ಮುಳ್ಳುಹಂದಿಗಳೂ ನಾಚುವಂತಹಾ ಕೇಶ ವಿನ್ಯಾಸ ಮಾಡಿಕೊಂಡು ನಿಂತಿರುವ ಸಿನಿಮಾ, ಕ್ರಿಕೆಟ್ ತಾರೆಯರ ಪೋಸ್ಟರ್ಗಳು, ಹೈಹೀಲ್ಡು ಹಾಕಿಕೊಂಡೇ ಹುಟ್ಟಿದವರೇನೋ ಎಂಬಂತೆ ನಾಜೂಕಿನ ಕುದುರೆ ನಡಿಗೆ ನಡೆಯುವ ಉತ್ತರ ಭಾರತದ ಚತುರೆಯರು, ಅವರು ಈಗಷ್ಟೇ ಶಾಪಿಂಗ್ನಲ್ಲಿ ಕೊಂಡ ವಸ್ತುಗಳ ಕವರ್ ಹಿಡಿದು ಹಿಂಬಾಲಿಸಿಕೊಂಡು ಹೋಗುತ್ತಿರುವ ಅವರ ಬಾಯ್ ಫ್ರೆಂಡುಗಳು, ಚೊಂಯ್ ಚೊಂಯ್ ಎಂದು ದೋಸೆ ಹೊಯ್ದಂತೆ ಮಾತಾನಾಡುತ್ತಾ, ನಗುತ್ತಾ, ಚೀನೀ ಸಿನೆಮಾವೊಂದರ ದೃಶ್ಯದಂತೆ ಕಣ್ಮುಂದೆ ಹಾದುಹೋಗುವ ಚೀನಾದ ಹುಡುಗಿಯರು, ಇಲ್ಲೇ ಎಲ್ಲೋ ವಿಮಾನ ನಿಲ್ಲಿಸಿ ಕೆಳಗಿಳಿದು ಬಂದವರಂತೆ ಕಾಣುವ ಅಚ್ಚಬಿಳಿ ನಗೆಯ ವಿದೇಶೀಯರು… ಹೀಗೆ ಎಂಜಿ ರೋಡು ವರ್ಣರಂಜಿತ ಚಿತ್ರಗಳಾಗಿ ಕಣ್ಮುಂದೆ ಚಲಿಸುತ್ತಿತ್ತು.
ಸ್ವಲ್ಪ ವರ್ಷದ ಕೆಳಗೆ ಅಗ್ರಿಮೆಂಟ್ ಒಂದಕ್ಕೆ ಸಹಿ ಪಡೆಯಲೋಸುಗ ಇಲ್ಲಿನ ಪಬ್ವೊಂದಕ್ಕೆ ಹೋಗಬೇಕಾಗಿ ಬಂದಿತ್ತು. ಹೊರಗಡೆಯಿಂದ ನೋಡಲಿಕ್ಕೆ ಇನ್ನುಳಿದ ಕಟ್ಟಡಗಳಂತೆಯೇ ಕಾಣುತ್ತಿದ್ದ ಅದರ ಒಳಹೊಕ್ಕಾಗ ಬೇರೆಯದೇ ಆದ ಪ್ರಪಂಚವೊಂದರೊಳಗೆ ಬಂದಂತೆನಿಸಿತ್ತು. ಹೊರಗಿನ ಲೋಕದ ಸಮಸ್ತ ಬೆಳಕನ್ನೂ ತಡೆಹಿಡಿದ ಅಲ್ಲಿನ ಕೋಣೆಗಳೊಳಗೆ ಮೊಬ್ಬು ಬೆಳಕನ್ನು ಕಾರುವ ಬಣ್ಣದ ಬಲ್ಬುಗಳನ್ನು ಬೆಳಗಿಸಿದ್ದರು. ವಾರದ ಮಧ್ಯದ ದಿನವಾಗಿದ್ದರಿಂದ ಗಿರಾಕಿಗಳ್ಯಾರೂ ಇರಲಿಲ್ಲವಾದರೂ ಅಲ್ಲೆಲ್ಲೋ ದೂರದ ಕುರ್ಚಿಯಂತಹಾ ರಚನೆಯ ಮೇಲೆ ಆಸೀನವಾಗಿದ್ದ ಜೋಡಿಯೊಂದು ಕುಳಿತಲ್ಲೇ ಪುಟ್ಟ ಸ್ವರ್ಗವೊಂದನ್ನು ರಚಿಸಿಕೊಂಡು ಆನಂದದಲ್ಲಿ ತೇಲಾಡುತ್ತಿತ್ತು. ಇದು ಕತ್ತಲೆಯೊಳಗಿನ ಬೆಳಕೋ ಅಥವಾ ಬೆಳಕಿನೊಳಗಿನ ಕತ್ತಲೆಯೋ ಎಂದು ಕಣ್ಣು ಬಾಯಿ ಬಿಟ್ಟುಕೊಂಡು ನೋಡುತ್ತಿದ್ದ ನನ್ನನ್ನು ಆ ಪಬ್ನ ಅಕೌಂಟೆಂಟ್ ತನ್ನ ಮಾಲಿಕನಿದ್ದಲ್ಲಿಗೆ ಕರೆದೊಯ್ದಿದ್ದ. ಯಾರೋ ನಲವತ್ತು-ಐವತ್ತು ದಾಟಿದ ಘನಗಂಭೀರ ವ್ಯಕ್ತಿಯನ್ನು ನಿರೀಕ್ಷಿದ್ದ ನನಗೆ ಅಲ್ಲಿ ತನ್ನ ಕೈಕೆಳಗಿನವರ ಮೇಲೆಲ್ಲಾ ಅಧಿಕಾರ ಪ್ರದರ್ಶಿಸುತ್ತಿದ್ದ, ಬಾಲಿವುಡ್ ನಟನನ್ನು ಹೋಲುವಂತಹಾ ಕಟ್ಟುಮಸ್ತಿನ ಯುವಕನೊಬ್ಬ ಕಂಡಿದ್ದ. ಅಗ್ರಿಮೆಂಟ್ ಕಾಪಿಯ ಪ್ರತಿ ಪುಟದಲ್ಲೂ ಸಹಿ ಮಾಡಿ ಎಂದು ಕೇಳಿದ್ದಕ್ಕೆ ‘ಇತ್ನೇ ಆಟೋಗ್ರಾಫ್ ಕ್ಯೋಂ ಡಾಲೂ? ಮೈ ಶಾರೂಖ್ ಖಾನ್ ಹೂಂ ಕ್ಯಾ?’ ಎಂದು ಕೋಪವೋ, ತಮಾಷೆಯೋ ಅರ್ಥವಾಗದ ಧಾಟಿಯಲ್ಲಿ ಹೇಳಿದವನಿಂದ ಸಹಿ ಪಡೆದು ಹೊರಬೀಳುವಷ್ಟರಲ್ಲಿ ಸಾಕುಸಾಕಾಗಿತ್ತು.
ಅದೇನೂ ಭಾರೀ ದೊಡ್ಡ ಪಬ್ಬಲ್ಲದಿದ್ದರೂ ಅಲ್ಲಿ ವೈಭವಗಳಿಗೇನೂ ಕಮ್ಮಿಯಿರಲಿಲ್ಲ. ಮುಂದೆ ಕೆಲವೇ ದಿನಗಳಲ್ಲಿ ಆ ಪಬ್ಬು ಮುಚ್ಚಲ್ಪಟ್ಟು, ಮುಂದೊಮ್ಮೆ ಆ ರಸ್ತೆಯಲ್ಲಿ ಹೋಗುವಾಗ ಮತ್ಯಾವುದೋ ಹೆಸರಿನ ಕಂಪನಿಯೊಂದು ಬೋರ್ಡು ತೊಟ್ಟುಕೊಂಡು ನಿಂತಿರುವುದು ಕಣ್ಣಿಗೆ ಬಿದ್ದಿತ್ತು. ಈ ಮಹಾನಗರಿಯ ಚಂಚಲತೆಯೇ ಅಂಥದ್ದು. ನೆನ್ನೆ ಹಳಕಲು-ಪೊದೆಗಳಿದ್ದ ಜಾಗದಲ್ಲಿ ಬೆಳಗಾಗುವಷ್ಟರಲ್ಲಿ ರಂಗ್ ಬಿರಂಗೀ ಕಟ್ಟವೊಂದು ತಲೆಯೆತ್ತಿಬಿಡುತ್ತದೆ. ಮನೆಯಂತೆ ಕಾಣುವ ಬಿಲ್ಡಿಂಗ್ ನೊಳಗೆ ನೂರಿನ್ನೂರು ಉದ್ಯೋಗಿಗಳಿರುವ ಕಂಪನಿಯೇ ಅಡಗಿಕೊಂಡಿರುತ್ತದೆ. ನೆನ್ನೆಯಷ್ಟೇ ಪ್ರಾರ್ಥನಾ ಮಂದಿರವಾಗಿದ್ದು, ಹತ್ತಾರು ಜನರ ಓಂಕಾರದಿಂದ ತುಂಬಿಹೋಗಿದ್ದ ಸಮುಚ್ಚಯವೊಂದು ನಾಳೆಯಾಗುವಷ್ಟರಲ್ಲಿ ಹತ್ತಾರು ಬಾಡಿಬಿಲ್ಡರ್ಗಳ ಕಸರತ್ತು ಶಾಲೆಯಾಗಿ ಬದಲಾಗಿಬಿಡುತ್ತದೆ! ಇಲ್ಲಿ ಯಾವ ರೂಪವೂ ಶಾಶ್ವತವಲ್ಲ. ಯಾವ ವೇಷವೂ ಖಾಯಂ ಅಲ್ಲ. ಬದಲಾಗುವ ವೇಷ ಹಾಗೂ ಬೆಳವಣಿಗೆಯ ಹೊರತಾಗಿ ಇಲ್ಲಿ ಬೇರಾವುದೂ ಬಹುಕಾಲ ಉಳಿಯುವುದೇ ಇಲ್ಲ!
*****
ಹಳೆಯ ನೆನಪುಗಳನ್ನು ಮೆಲಕು ಹಾಕುತ್ತಾ, ನಡೆಯುತ್ತಾ ಮುಖ್ಯ ರಸ್ತೆಯನ್ನು ದಾಟಿ ಒಳ ರಸ್ತೆಯೊಂದರೊಳಕ್ಕೆ ತಲುಪಿದೆ. ಎಂಜಿ ರಸ್ತೆಯ ಮತ್ತೊಂದು ವಿಶೇಷವೆಂದರೆ ಆಧುನಿಕತೆಯೇ ಮೈದಳೆದಂತಿರುವ ಅತ್ಯಾಧುನಿಕ ಬಿಲ್ಡಿಂಗ್ ಗಳ ಸಾಲಿನ ಮಧ್ಯದಲ್ಲಿ ಅಚಾನಕ್ಕಾಗಿ ಕಣ್ಣಿಗೆ ಬೀಳುವ ಪುರಾತನ ಸ್ಮಾರಕದಂತಹಾ ಹಳೆಯ ಕಟ್ಟಡಗಳು! ಮೆಟ್ರೋ ರೈಲಿನ ಪಕ್ಕ ಹಳೆಯ ಪ್ಯಾಸೆಂಜರ್ ಉಗಿಬಂಡಿಯನ್ನಿಟ್ಟಂತೆ ಕಾಣುವ ಈ ವಿಶಾಲ ಸೌಧಗಳನ್ನು ನೋಡಿದಾಗೆಲ್ಲಾ ಹಳೆಯ ಸಿನೆಮಾಗಳಲ್ಲಿ ನೋಡಿದ್ದ ಈಸ್ಟ್ ಮನ್ ಬೆಂಗಳೂರಿನ ಚಿತ್ರ ಕಣ್ಮುಂದೆ ಬರುತ್ತದೆ. ಒಂದು ಕಾಲದಲ್ಲಿ ಇಡೀ ದೇಶದ ಅತ್ಯಾಧುನಿಕತೆಯ ಪ್ರತೀಕವಾಗಿದ್ದ ಈ ರಚನೆಗಳು ಇಂದು ಯಾರೂ ಹೊಗ್ಗದ ಪಾಳು ಕಟ್ಟಡಗಳು! ಇಂಚಿಂಚೂ ಲಕ್ಷ ಲಕ್ಷ ಬೆಲೆ ಬಾಳುವ ಇಂತಹಾ ಬಂಗಾರದ ಬೀದಿಯಲ್ಲೂ ಚದರ ಚದರಗಟ್ಟಲೆ ಖಾಲಿ ಅಂಗಳವನ್ನೂ, ಶಿಲಾಯುಗದ ಪಳೆಯುಳಿಕೆಯಂತೆ ಕಾಣುವ ಕೈತೋಟವನ್ನೂ ಅಕ್ಕಪಕ್ಕದಲ್ಲಿ ಉಳಿಸಿಕೊಂಡು ನಿಂತಿರುವ ಬಿಲ್ಡಿಂಗ್ ಗಳಿವು. ಎಲ್ಲಿಹೋದರು ಇಲ್ಲೆಲ್ಲಾ ಓಡಾಡಿ, ಮೆರೆದಾಡಿ, ಇವುಗಳ ವೈಭವದ ಕಿರೀಟಕ್ಕೊಂದು ಗರಿ ಸಿಕ್ಕಿಸಿದವರು? ಈ ಕಟ್ಟಡಗಳನ್ನೇ ಮಹಾನಗರಿಯ ವೈಭವದ ಸಂಕೇತವೆಂದು ಬಿಂಬಿಸಿ, ತಮ್ಮ ಸಿನೆಮಾಗಳಲ್ಲಿ ಪ್ರತಿಫಲಿಸಿದವರು? ಎಂತಹಾ ವೈಭವವಾದರೂ ಸರಿಯುವ ಕಾಲದ ಕಾಲಡಿಯಲ್ಲಿ ಇಂದಲ್ಲ ನಾಳೆ ಧೂಳೇ ಎನ್ನುವ ಅನನ್ಯ ಸತ್ಯವನ್ನು ಸಾರುತ್ತಾ ನಿಂತಿರುವ ಈ ಕಟ್ಟಡಗಳನ್ನು ನೋಡುತ್ತಾ ಮುಂದಡಿಯಿಟ್ಟೆ.

ಇಲ್ಲೆಲ್ಲಾ ಮನೆಯೆಂದರೆ ಕೇವಲ ಮನೆ ಮಾತ್ರ. ಆದರೆ ಊರಿನಲ್ಲಿ? ಮನೆ, ಅದರೆದುರಿನ ವಿಶಾಲವಾದ ಅಂಗಳ, ಪುಟ್ಟದೊಂದು ಕೈತೋಟ, ಹಿಂದಿರುವ ದನದ ಕೊಟ್ಟಿಗೆ… ಇವೆಲ್ಲವೂ ಸೇರಿಯೇ ಒಂದು ಮನೆ. ಒಂದು ಕಟ್ಟಡದ ಬೆನ್ನಿಗೆ ಇನ್ನೊಂದು ಬೆನ್ನು ತಗುಲಿಸಿಕೊಂಡು ನಿಂತಿರುವ, ಮನೆಯಿಂದ ಒಂದು ಹೆಜ್ಜೆ ಹೊರಗಿಟ್ಟರೆ ಒಂದೋ ರಸ್ತೆಗೆ, ಇಲ್ಲಾ ಎದುರಿನ ಮನೆಯ ಜಗುಲಿಯೊಳಕ್ಕೇ ಹೊಗ್ಗಿಬಿಡುವ ಈ ಪಟ್ಟಣದಲ್ಲಿ ಚಿಕ್ಕಪುಟ್ಟ ಅಂಗಳವಿರುವ ಮನೆಗಳನ್ನು ನೋಡಿದರೆ ಮನಸ್ಸಿಗೇನೋ ಒಂದು ರೀತಿಯ ಖುಷಿಯೆನಿಸುತ್ತದೆ. ಬೃಹತ್ ಕಾಂಪೌಂಡುಗಳಿಂದ ಬಂಧಿಸಲ್ಪಟ್ಟಿರುವ ದೊಡ್ಡ ದೊಡ್ಡ ಕುಳಗಳ ಬೃಹತ್ ಬಂಗಲೆಗಳೆದುರು ಹಾದುಹೋಗುವಾಗ ದೈತ್ಯ ಗೇಟುಗಳ ಸಂದಿಯಿಂದ ಗೋಚರಿಸುವ ಇಷ್ಟೇ ಇಷ್ಟು ಅಂಗಳ, ಹೂಗಿಡಗಳನ್ನು ನೋಡುವಾಗ ತಮ್ಮ ಬಳಿ ರಾಶಿಬಿದ್ದಿರುವ ದುಡ್ಡಿನಿಂದಲ್ಲದಿದ್ದರೂ ಬೆಂಗಳೂರಿನಲ್ಲೂ ಇಂತಹ ಕೈತೋಟದ ಮಧ್ಯೆ ಬದುಕುತ್ತಿರುವ ಕಾರಣಕ್ಕಾಗಿಯಾದರೂ ಇವರು ಪುಣ್ಯವಂತರು ಎಂದೆನಿಸುತ್ತದೆ. ಲ್ಯಾವೆಲ್ಲೆ ರೋಡ್ನತ್ತ ಸಾಗುತ್ತಾ ಅಂಗಡಿ, ಶೋರೂಮ್ಗಳ ಗದ್ದಲ ಅಷ್ಟಾಗಿಲ್ಲದ ಒಳರಸ್ತೆಯೊಂದರಲ್ಲಿ ನಡೆಯುವಾಗ ಇಂತಹದೇ ಅನೇಕ ಮನೆಗಳಿರುವ ವಠಾರದಂತಹಾ ಬೀದಿಯೊಂದು ಎದುರಾಯ್ತು. ಏನಿಲ್ಲವೆಂದರೂ ಕೆಲವು ಕೋಟಿಗಳಿಗೆ ಮೀರಿ ತೂಗುವ ಈ ಬಂಗಲೆಗಳೆಲ್ಲ ಮೇಲೆ ಹೇಳಿದಂಥದೇ ರಕ್ಕಸ ಕಾಂಪೌಂಡುಗಳಿಂದ ಬಂಧಿಸಲ್ಪಟ್ಟಿದ್ದವು. ಹೊರಗಿನ ಗಲಾಟೆ, ಧೂಳು, ಟ್ರಾಫಿಕ್ಕುಗಳ್ಯಾವುದೂ ಬಾಧಿಸದ, ಈ ನಗರಿಯೊಳಗಿದ್ದುಕೊಂಡೂ ಇಲ್ಲಿನ ಗೌಜುಗಳಿಗೆ ಸಲ್ಲದ ಇವು ಬೇರೆಯದೇ ಊರಿನ ತುಣುಕುಗಳಂತೆ ಭಾಸವಾದವು. ಆಗೊಮ್ಮೆ ಈಗೊಮ್ಮೆ ಆ ದೈತ್ಯ ಗೇಟು ತೆರೆದು, ಒಳಗಿನಿಂದ ಕಿಟಕಿ ಮುಚ್ಚಿದ ಕಾರೊಂದು ಹೊರಹೋಗುವಾಗಷ್ಟೇ ಈ ನಗರಿಯ ಗೌಜುಗಳಿಗೆ ತೆರೆದುಕೊಳ್ಳುವ ಇವು ಮರುಕ್ಷಣವೇ ಮುಂಚಿನ ಏಕಾಂತಕ್ಕೆ ಮರಳಿಬಿಡುತ್ತವೆ. ನಂತರ ಇವುಗಳೊಳಗೆ ನಡೆಯುವ ಶ್ರೀಮಂತ ಜಗತ್ತಿನ ಸಂಭಾಷಣೆ, ಹಾಡು, ಕುಣಿತ, ಮೋಜು, ಉದ್ಗಾರ, ಬೇಸರ, ಸಿಟ್ಟು, ಸೆಡವು, ರಹಸ್ಯಗಳು ಕೇಳಿಸಿದರೂ ನಮಗೆ ಅರ್ಥವಾಗಲಾರವೇನೋ?
ಇಂತಹಾ ಭವ್ಯ ಮನೆಗಳನ್ನು ನೋಡುವಾಗ ನನಗೆ ಪತ್ತೇದಾರಿ ಕಾದಂಬರಿಗಳಲ್ಲಿ ಬರುವ ನಿಗೂಢ ಬಂಗಲೆಗಳು ನೆನಪಾಗುತ್ತವೆ. ಮಳೆ ಸುರಿಯುವ ನಡುರಾತ್ರೆಗಳಲ್ಲಿ ಕೊಲೆಗಳಾಗುವುದು, ಮೇಲಿನ ಮಹಡಿಯಿಂದ ಕೊಲೆಗಾರ ಜಿಗಿದು ಪಾರಾಗುವುದು, ಮಾರನೇ ದಿನ ಬಾಯಲ್ಲಿ ಸುಡುವ ಸಿಗರೇಟ್ ಕಚ್ಚಿಹಿಡಿದಿರುವ ನಮ್ಮ ಕಥಾನಾಯಕ ಪತ್ತೇದಾರ ಬಂದು ತನ್ನ ಬುದ್ಧಿವಂತಿಕೆ ಪ್ರದರ್ಶಿಸುವುದು, ಕೊನೆಗೆ ಕೊಲೆಗಾರ ಸಿಕ್ಕಿಬೀಳುವುದು… ಇವೆಲ್ಲಾ ಕಥೆಗಳು ನಡೆಯುವುದು ಇಂತಹಾ ನಿಗೂಢ ಬಂಗಲೆಗಳಲ್ಲೇ ಅಲ್ವಾ? ಕಾದಂಬರಿ, ಕಥೆ, ಸಿನೆಮಾ, ಧಾರಾವಾಹಿಗಳಲ್ಲಿ ಇಂತಹಾ ಮನೆಗಳನ್ನೇ ನೋಡಿ ಕಲ್ಪಿಸಿಕೊಂಡಿದ್ದ ನಾನು ಬೆಂಗಳೂರಿಗೆ ಬರುವ ಮೊದಲು ಇಲ್ಲಿನ ಪ್ರತಿಯೊಂದು ಮನೆಯೂ ಹೀಗೇ ಇರುತ್ತದೆಂದೇ ನಂಬಿದ್ದೆ.
*****
ಎಂಜಿ ರಸ್ತೆಯ ಅದೆಷ್ಟೋ ಕಟ್ಟಡಗಳನ್ನು ನೋಡುವಾಗ ವಿದೇಶಕ್ಕೆ ಹೋಗಿರುವ ಗೆಳೆಯರು ಫೇಸ್ಬುಕ್ಕಿನಲ್ಲಿ ಹಂಚಿಕೊಳ್ಳುವ ಪ್ಯಾರಿಸ್, ಜರ್ಮನಿ, ಫ್ರಾನ್ಸ್ ನಗರಿಗಳು ನೆನಪಾಗುತ್ತವೆ. ಚೂಪಾಕಾರದ ರಚನೆಗಳಿರುವ, ಪುರಾತನ ಕ್ರಿಶ್ಚಿಯನ್ ಪಟ್ಟಣಗಳನ್ನು ನೆನಪಿಸುವ ಇವೆಲ್ಲವೂ ಬ್ರಿಟೀಶರ ಕಾಲದ ರಚನೆಗಳೇನೋ ಎಂದು ಆಗಾಗ ಅನಿಸುವುದಿದೆ. ಇನ್ನು ಚರ್ಚ್ ಸ್ಟ್ರೀಟಿನಲ್ಲಿ ನಡೆಯುವಾಗ ಮೊದಲು ನೆನಪಾಗುವುದು ಕೆಲ ವರ್ಷಗಳ ಕೆಳಗೆ ಅಲ್ಲಿ ನಡೆದಿದ್ದ ಬಾಂಬ್ ಬ್ಲಾಸ್ಟ್. ವಾರಾಂತ್ಯದ ಸಂಜೆಗಳಲ್ಲಿ ನೂರಾರು ಬಣ್ಣದ ದೀಪಗಳಿಂದ ಅಲಂಕರಿಸಿಕೊಂಡು ನೂಕುನುಗ್ಗಲಿನಿಂದ ತುಂಬುವ ಈ ಎಲ್ಲ ರಸ್ತೆಗಳ ಮೇಲೆ ಮೊದಲಿನಿಂದಲೂ ಭಯೋತ್ಪಾದಕರಿಗೊಂದು ಕಣ್ಣಿದ್ದೇ ಇದೆ. ಇಲ್ಲಿ ಜರುಗುವ ಸಣ್ಣ ಉತ್ಪಾತವೂ ಇಡೀ ದೇಶದ ಗಮನ ಸೆಳೆಯುತ್ತದೆನ್ನುವುದನ್ನು ತಿಳಿದೇ ಅವರ ಕೆಂಗಣ್ಣು ಮತ್ತೆ ಮತ್ತೆ ಇತ್ತ ಸುಳಿಯುವುದೋ ಏನೋ? ಪ್ರತಿಷ್ಠೆಯೆನ್ನುವುದು ಕಿರೀಟದ ಗರಿಯಾದಂತೆಯೇ ಒಮ್ಮೊಮ್ಮೆ ಕೊರಳಿಗೆ ಉರುಳೂ ಆಗುತ್ತದೆ.
ಎಂಜಿ ರಸ್ತೆಯಲ್ಲಿ ನಡೆಯುವಾಗೆಲ್ಲಾ ಪ್ರತೀ ಹೊಸವರ್ಷದ ಹಿಂದಿನ ದಿನ ಸಾವಿರಾರು ಯುವಕ-ಯುವತಿಯರು ಕುಣಿದು, ಕುಪ್ಪಳಿಸಿ, ಕೇಕೆ ಹಾಕಿಹೋದ ಧ್ವನಿಗಳೆಲ್ಲಾ ಪ್ರತಿಧ್ವನಿಸಿದಂತೆನಿಸುತ್ತದೆ. ಕೆಲ ವರ್ಷಗಳ ಹಿಂದೆ ಅದೇ ದಿನ ಇಲ್ಲಿ ಕೆಲ ಪುಂಡರು ತೋರಿದ್ದ ಅನುಚಿತ ವರ್ತನೆಗೆ ಇಡೀ ಬೆಂಗಳೂರೇ ತಲೆತಗ್ಗಿಸುವಂತಾಗಿದ್ದು ನೆನಪಿನಲ್ಲಿನ್ನೂ ಹಸಿರಾಗಿಯೇ ಇದೆ. ಭಾರತದ ಇನ್ನೂ ಅದೆಷ್ಟೋ ರಾಜ್ಯಗಳಲ್ಲಿ ಎಂಜಿ ರೋಡುಗಳಿವೆಯಾದರೂ ಈ ರಸ್ತೆಯ ಚಾರ್ಮ್ ಅವ್ಯಾವುದಕ್ಕೂ ಬಾರದೋ ಏನೋ? ಜಗತ್ತಿನ ಅನೇಕ ಪ್ರಸಿದ್ಧ ಬೀದಿಗಳಿಗಿರುವಂತೆಯೇ ಎಂಜಿ ರಸ್ತೆಗೂ ಎರೆಡು ಮುಖಗಳಿವೆ. ಒಂದು- ಮೇಲಕ್ಕೆ ಕಾಣುವ ಹಗಲಿನದ್ದು. ಇನ್ನೊಂದು- ಮೇಲ್ನಿಲುವಿಗೆ ದೊರಕದ, ಒಳಗೊಳಗೇ ತೆರೆದುಕೊಳ್ಳುವ ಕತ್ತಲ ಸಾಮ್ರಾಜ್ಯದ್ದು. ತುಂಬು ಹಗಲಿನಲ್ಲಿ ಇಲ್ಲಿನ ಬೀದಿಗಳಲ್ಲಿ ಸುಮ್ಮನೆ ನಡೆದುಹೋಗುವ ನನಗೇ ಏನೆಲ್ಲಾ ಅನ್ನಿಸುವಾಗ ಇನ್ನು ಇಲ್ಲೇ ಆಡಿಬೆಳೆದ, ಒಡನಾಡಿದ, ಇಲ್ಲಿನ ಕತ್ತಲ ಓಣಿಗಳಲ್ಲಿ ಹೊಕ್ಕುಹೊಂಟಿರುವವರಿಗೆ ಇನ್ನೇನೆಲ್ಲಾ ತಿಳಿದಿರಬಹುದು? ನಾವೆಂದೂ ಕಾಣದ ಎಂಜಿ ರಸ್ತೆಯ ಅದೆಷ್ಟು ರೋಚಕ, ವಿನೋದ, ರಹಸ್ಯ ಸಂಗತಿಗಳಿದ್ದಾವೋ ಯಾರಿಗೆ ಗೊತ್ತು?

ನಡೆಯುತ್ತ ನಡೆಯುತ್ತ ಇಡೀ ಎಂಜೀ ರೋಡೇ ಮುಗಿದುಹೋಯಿತು. ಮರಳಿ ಮೆಟ್ರೋ ನಿಲ್ದಾಣಕ್ಕೆ ಬಂದರೆ ಅದು ಮಧ್ಯಾಹ್ನದ ಬಿಡುವಿನಲ್ಲಿ ಜನರಹಿತವಾಗಿ ಯಾವುದೋ ಹಳ್ಳಿ ಮನೆಯ ಪ್ರಶಾಂತ ಹಜಾರದಂತೆ ಕಾಣುತ್ತಿತ್ತು. ಬೆಂಗಳೂರಿನ ಗಿಜಿಗಿಜಿಯಲ್ಲಿ ಇಂತಹಾ ಕೆಲ ಕ್ಷಣದ ಶಾಂತ ನೋಟಗಳೂ ಯಾವುದೇ ಧ್ಯಾನದಷ್ಟು ನೆಮ್ಮದಿ ಹುಟ್ಟಿಸುತ್ತವೆ. ಅಷ್ಟರಲ್ಲಿ ಖಾಲಿ ಸೀಟುಗಳ ಮೆಟ್ರೋ ರೈಲು ಬಂತು. ಒಳಗೆ ಹತ್ತಿ ಅದರ ವಿಶಾಲ ಗಾಜುಗಳ ಕಿಟಕಿಯಲ್ಲಿ ಹೊರಗೆ ನೋಡುತ್ತ ಕುಳಿತೆ. ಕೆಳಗಡೆ ಅಗಲ ರಸ್ತೆಗಳ, ಕಸ ಎಸೆಯದ ಶುದ್ಧ ಚಪ್ಪಡಿ ಹಾಸಿನ, ವೈಭವೋಪೇತ ಅಂಗಡಿಗಳ ಎಂಜೀ ರೋಡು ಹಿಂದಕ್ಕೆ ಸರಿಯತೊಡಗಿತು.
ಮಳಿಗೆಯೊಂದರ ಹೊರಗೆ ನಿಂತಿದ್ದ ಗೊಂಬೆಯೊಂದು ಹೋಗಿ ಬನ್ನಿ ಎನ್ನುವಂತೆ ಕೈ ಮುಗಿಯಿತು.

ವಿನಾಯಕ ಅರಳಸುರಳಿ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೋಕಿನ ಅರಳಸುರಳಿ ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಕಾಂ ಪದವಿ ಪಡೆದಿದ್ದು ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟ್ಸ್ ಹುದ್ದೆ ನಿರ್ವಹಿಸುತ್ತಿದ್ದಾರೆ. ಸಣ್ಣ ಕಥೆ, ಲಲಿತ ಪ್ರಬಂಧ ಹಾಗೂ ಕವಿತೆಗಳನ್ನು ಬರೆದಿದ್ದು ‘ನವಿಲುಗರಿ ಮರಿ ಹಾಕಿದೆ’ ಹೆಸರಿನ ಲಲಿತ ಪ್ರಬಂಧ ಸಂಕಲನ ಹಾಗೂ ‘ಮರ ಹತ್ತದ ಮೀನು’ ಕಥಾ ಸಂಕಲನಗಳು ಪ್ರಕಟವಾಗಿವೆ.
