”ಆ ಮರಣಕ್ಕೆ ನೇರ ಸಾಕ್ಷಿಯಾದ ನಾನು ತಲ್ಲಣಿಸಿ ಹೋದೆ. ನಾನಷ್ಟೇ ಅಲ್ಲ ನನ್ನೊಡನೆ ನಿಂತಿದ್ದ ಎಲ್ಲರೂ… ಹೆಂಗಸೊಬ್ಬಳ ಚೀತ್ಕಾರ ಕೇಳಿತು. ರಾಜ್ ಮೈದಾನಿ ಪ್ರಜ್ಞೆತಪ್ಪಿ ಕುಸಿದುಬಿದ್ದರು. ಅವರ ಅಕ್ಕಪಕ್ಕದಲ್ಲಿದ್ದ ಮೂರ್ನಾಲ್ಕುಜನ ರಾಜ್ ಎಂದು ಜೋರಾಗಿ ಕೂಗಿ ಅವರ ಸುತ್ತುವರೆದು ನಿಂತರು. ನಮ್ಮನ್ನು ಕಾಯುತ್ತಿದ್ದವ ಅಲ್ಲಿಗೆ ಓಡಿದ. ಅರ್ಥವಾಗದ ಭಾಷೆಯಲ್ಲಿ ಚೀರುವ ಧ್ವನಿಯಲ್ಲಿ ಕೂಗುತ್ತ ರಾಜ್ ಸುತ್ತ ನಿಂತ ಜನರನ್ನು ತಳ್ಳಲಾರಂಭಿಸಿದ”
ಸಧ್ಯದಲ್ಲೇ ಬಿಡುಗಡೆಯಾಗಲಿರುವ ಎಂ.ಆರ್.ದತ್ತಾತ್ರಿಯವರ ಹೊಸ ಕಾದಂಬರಿಯ ಕೆಲವು ಪುಟಗಳು.

 

ರಂಜನೀ,
ಈ ರೀತಿ ಕೊರೆಯುವ ಮನುಷ್ಯರು ನಿನಗೆ ಇಷ್ಟವಾಗುವುದಿಲ್ಲ, ಗೊತ್ತು. ಆದರೂ ಒಂದು ಸಣ್ಣ ಫಿಲಾಸಫಿಯನ್ನು ಹಂಚಿಕೊಳ್ಳುತ್ತೇನೆ ಕೇಳು. ನಮ್ಮೆಲ್ಲ ಯೋಚನೆಗಳಿಗೂ ಎರಡು ಮುಖಗಳಿರುತ್ತವೆ. ಒಂದು ಅತಿ ಬುದ್ಧಿವಂತಿಕೆಯದು ಮತ್ತೊಂದು ಅತಿ ದಡ್ಡತನದ್ದು. ಯಾವ ಮುಖವನ್ನು ನೋಡುತ್ತಿದ್ದೀಯಾ ಎನ್ನುವುದರ ಮೇಲೆ ಅದು ಬುದ್ಧಿವಂತಿಕೆಯದೋ ದಡ್ಡತನದ್ದೋ ತೀರ್ಪಿಗೆ ಬಂದುಬಿಡುತ್ತೇವೆ. ಇಂದಿನ ಅತಿಬುದ್ಧಿವಂತಿಕೆಯ ನಿರ್ಧಾರ ಮಳೆಗಾಲವೊಂದು ಕಳೆಯುವುದರೊಳಗೆ ಅತಿದಡ್ಡತನದ್ದು ಎಂದು ಅನ್ನಿಸಿಕೊಳ್ಳಬಹುದು. ಹೀಗೆ ಮಾಡಿದರೂ ಸಾಯುತ್ತೇನೆ ಹಾಗೆ ಮಾಡಿದರೂ ಸಾಯುತ್ತೇನೆ ಎನ್ನುವಾಗ ಏನು ಮಾಡಿದರೂ ನಡೆಯುತ್ತದೆ, ಕಣ್ಣುಕಟ್ಟಿ ರಸ್ತೆಗಳು ಕೂಡುವಲ್ಲಿ ಬಿಟ್ಟು, `ಹೋಗು’ ಎಂದಂತೆ. ಸರಿಯಾದ ರಸ್ತೆಯಲ್ಲಿ ಹೋದರೆ ನೀನು ಹೀರೋ, ತಪ್ಪಾದ ರಸ್ತೆಯನ್ನು ತುಳಿದರೆ ನೀನು ಜೀರೋ. ಅಂದು ಬಂದೂಕುಗಳಿಗೆ ಎದೆಕೊಟ್ಟು ನಿಂತವರಲ್ಲಿ ಉಳಿದದ್ದು ನಾನೊಬ್ಬನೇ ಆದರೆ ನಾನು ಹೀರೋ, ಮಹಾಕ್ಷತ್ರಿಯ. ಅವರೆಲ್ಲ ಉಳಿದು ನಾನೊಬ್ಬ ಮೂರ್ಖತನದಿಂದ ತೊಡೆ ಮುರಿದುಕೊಂಡು ಹಾಸಿಗೆಯಲ್ಲಿ ಮಲಗಿದ್ದರೆ ನಾನೊಬ್ಬ ದೊಡ್ಡ ಕಮಂಗಿ. ಕಾಮನ್ ಸೆನ್ಸ್ಇಲ್ಲದವನು. ಆದರೆ ತಮಾಷೆ ನೋಡು, ಈ ಕಪ್ಪುಬಿಳಿ ಮುಖಗಳು ಫ್ಯಾನ್ ತಿರುಗಿದಂತೆ ಹೇಗೆ ಬದಲಾಗುತ್ತಿರುತ್ತವೆ ಎಂದರೆ ಸಾಯುವತನಕ ನಿನಗಷ್ಟಕ್ಕೆ ಕೂಡ ನೀನು ಹೀರೋನೋ ಜೀರೋನೋ ತಿಳಿಯುವುದಿಲ್ಲ, ಬೇರೆಯವರ ಮನೆ ಹಾಳಾಗಲಿ.

ಮನೋಜ ಮತ್ತು ಅವನ ಪಕ್ಕದವನು ಏನೋ ಪಿಸುಗುಟ್ಟಿ ಮಾತನಾಡುತ್ತಿರುವುದು ನನ್ನ ಗಮನಕ್ಕೆ ಬಂದಿತ್ತು. ಆದರೆ ಏನು ಎಂದು ತಿಳಿಯಲಿಲ್ಲ. ಕೊನೆಗೆ ಮನೋಜ ನನ್ನೊಂದಿಗೆ ಪಿಸುಗುಟ್ಟಿದ.

‘ಹೊರಗಿನ ಪ್ರಪಂಚವನ್ನು ಸಂಪರ್ಕಿಸಲು ಇನ್ನೂ ಒಂದು ವಿಧಾನವಿದೆಯಂತೆ.’
‘ಹೇಗೆ?’
‘ಸರ್ವರ್ ಕಂಸೋಲಿನಿಂದ.’
`ಎಲ್ಲಿದೆ ಸರ್ವರ್ ಕಂಸೋಲು?’
`ಸರ್ವರ್ ರೂಮಿನಲ್ಲಿ.’

ಗಸ್ತು ತಿರುಗುತ್ತಿದ್ದವರಲ್ಲಿ ಒಬ್ಬ ಮಧ್ಯಕ್ಕೆ ಓಡಿಹೋಗಿ ತನ್ನ ನಾಯಕನೊಂದಿಗೆ ಏನನ್ನೋ ಪಿಸುಗುಟ್ಟುತ್ತಿದ್ದ. ಇನ್ನೊಬ್ಬ ನಿಂತವರನ್ನು ದುರುಗುಟ್ಟಿಕೊಂಡು ತಿರುಗುತ್ತಲೆಯಿದ್ದ. ಒಬ್ಬ ಹಾಲಿನ ಎದುರುಗೋಡೆಗೆ ಆತುನಿಂತು ಇಡೀ ಆಫೀಸನ್ನು ಗಮನಿಸುತ್ತಿದ್ದ. ಒಬ್ಬ ಮತ್ತೊಂದು ದಿಕ್ಕಿನಲ್ಲಿ ಕುರ್ಚಿ-ಟೇಬಲ್ಲುಗಳಿಂದ ಮುಚ್ಚಿದ ಬಾಗಿಲಿಗೆ ಬೆನ್ನು ಹಾಕಿ ನಿಂತಿದ್ದ. ನನ್ನ ಲೆಕ್ಕಕ್ಕೆ ಸಿಕ್ಕ ಕಡೆಯವನು ನಾಯಕನ ಹಿಂಭಾಗದಲ್ಲಿ ಏಳೆಂಟು ಅಡಿ ದೂರದಲ್ಲಿ ಕಾನ್ಫರೆನ್ಸ್ ರೂಮಿಗೂ ರಾಜ್ ಮೈದಾನಿಯ ಕ್ಯಾಬಿನ್ ಗೂ ನಡುವೆ ನಿಂತಿದ್ದ.

`ಸರ್ವರ್ ರೂಮು ಎಲ್ಲಿದೆ?’ ಎಂದು ಪಿಸುಗುಟ್ಟಿದೆ. `ನೀನು ಒರಗಿರುವ ಗೋಡೆಯ ಹಿಂಭಾಗದ್ದೇ’ ಎಂದ. `ನಿನ್ನ ಬಲಭಾಗದಲ್ಲಿ ಬಾಗಿಲು ಕಾಣುತ್ತದಲ್ಲ ಅದೇ ಎಂಟ್ರೆನ್ಸ್.’

ನನ್ನ ಬಲಭಾಗಕ್ಕೆ ತಿರುಗಿ ನೋಡಿದೆ. ಕುತ್ತಿಗೆ ತಿರುಗಿಸಲೂ ಭಯವಾಗುತ್ತಿತ್ತು. ಈಗಾಗಲೇ ಇಬ್ಬರನ್ನು ಹೊಡೆದುರುಳಿಸಿ ಏನೂ ಆಗದವರಂತೆ ಅವರ ದೇಹಗಳನ್ನು ತುಳಿದು ಓಡಾಡುವ ಈ ರಾಕ್ಷಸರು ಬರೀ ಕುತ್ತಿಗೆ ತಿರುಗಿಸಿದ್ದಕ್ಕೆ ಶೂಟ್ ಮಾಡಲು ಹೇಸದವರು. ನನ್ನ ಕಿವಿಗೆ ಬಿದ್ದಏಟು ಭಗಭಗನೆ ಉರಿಯುತ್ತಿತ್ತು. ಸವರಿಕೊಳ್ಳಲೂ ಹೆದರಿಕೆ.

ನಿಧಾನವಾಗಿ ಕತ್ತು ಹೊರಳಿಸಿ ಒರಗಿದ ಗೋಡೆಯೆಡೆಗೆ ದೃಷ್ಟಿಹಾಯಿಸಿ ನನ್ನ ಬಲಭಾಗದೆಡೆಗೆ ನೋಡಿದೆ. ಸರ್ವರ್ ರೂಮಿನ ಬಾಗಿಲು ಕಾಣಿಸಿತು. ನನ್ನಿಂದ ಸುಮಾರು ಹತ್ತು ಮೀಟರಿರಬಹುದು.

‘ಹೇಗಾದರೂ ಆ ರೂಮಿಗೆ ತೂರಿಕೊಂಡು ಸರ್ವರ್ ನಿಂದ ಪೊಲೀಸರನ್ನು ಸಂಪರ್ಕಿಸಬೇಕು’ ಎಂದ. ಆ ಭಯದ ವಾತಾವರಣದಲ್ಲೂ ಅವನ ಮಾತುಗಳು ನನ್ನಲ್ಲಿ ನಗು ಬರಿಸಿದವು. ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ಮಾತ್ರ ಸಾಧ್ಯವಾಗುವಂತಹದ್ದು. ಹಾಲಿವುಡ್ ಆ್ಯಕ್ಷನ್ ಮೂವಿಗಳನ್ನು ವಿಪರೀತ ನೋಡಿದರೆ ನಿಜಜೀವನದಲ್ಲಿ ಬರುವ ಭ್ರಮೆಯಿದು.

`ಏನು ಮಾತನಾಡುತ್ತಿದ್ದೀಯಾ! ಸಾಧ್ಯವಾಗುವುದಿಲ್ಲ’. ‘ಏಕೆ?’ ಎಂದ. ‘ಏನು ಹುಡುಗಾಟವಾಡುತ್ತಿದ್ದೀಯಾ! ಒಂದು ಹೆಜ್ಜೆ ಅತ್ತಇತ್ತ ಇಟ್ಟರೂ ಶೂಟ್ ಮಾಡುತ್ತಾರೆ.’

‘ನಾವೇನು ಮಾಡದಿದ್ದರೂ ಕೊನೆಗೆ ಆಗುವುದು ಅದಷ್ಟೇ. ನೈನ್ ಇಲೆವೆನ್ ಥರ.’

ಅಲ್ಲಿಗೆ ಮಾತು ನಿಲ್ಲಿಸಿದೆವು. ಮೊದಲನೆಯದಾಗಿ ನಾನು ಸೇಲ್ಸ್ ಮನುಷ್ಯ. ನನಗೆ ಸರ್ವರ್ ನಿಂದ ಹೊರ ಪ್ರಪಂಚಕ್ಕೆ ಸಂದೇಶ ಕಳುಹಿಸಬಹುದಾದ ಯಾವ ಟೆಕ್ನಿಕಲ್ ಪರಿಣತಿಯಿಲ್ಲ. ಮೇಲಾಗಿ, ಇಲ್ಲಿಂದ ಅಲ್ಲಿಗೆ ಹೋಗುವುದು ಹೇಗೆ, ಹೋದರೂ ಶಬ್ದವಾಗದಂತೆ ಸರ್ವರ್ ಗಳ ಮೇಲೆ ಕೆಲಸ ಮಾಡುವುದು ಹೇಗೆ, ಸರ್ವರುಗಳಿಂದ ವಾಯ್ಸ್ ಕಾಲ್ ಮಾಡುವುದು ಸಾಧ್ಯವೇ, ಮಾಡಿದರೂ ಯಾವ ನಂಬರಿಗೆ ಮಾಡಬೇಕು, 911 ಸಾಧ್ಯವಾ, ಪೊಲೀಸರು ವಾಪಸ್ಸು ಫೋನ್ ಮಾಡಿದರೆ ಸರ್ವರ್ಗೆ ಬರುತ್ತದಾ?… ರಮ್ಯಕಲ್ಪನೆಯಷ್ಟೆ.

ನನ್ನ ಬಲಭಾಗಕ್ಕೆ ತಿರುಗಿ ನೋಡಿದೆ. ಕುತ್ತಿಗೆ ತಿರುಗಿಸಲೂ ಭಯವಾಗುತ್ತಿತ್ತು. ಈಗಾಗಲೇ ಇಬ್ಬರನ್ನು ಹೊಡೆದುರುಳಿಸಿ ಏನೂ ಆಗದವರಂತೆ ಅವರ ದೇಹಗಳನ್ನು ತುಳಿದು ಓಡಾಡುವ ಈ ರಾಕ್ಷಸರು ಬರೀ ಕುತ್ತಿಗೆ ತಿರುಗಿಸಿದ್ದಕ್ಕೆ ಶೂಟ್ ಮಾಡಲು ಹೇಸದವರು. ನನ್ನ ಕಿವಿಗೆ ಬಿದ್ದಏಟು ಭಗಭಗನೆ ಉರಿಯುತ್ತಿತ್ತು. ಸವರಿಕೊಳ್ಳಲೂ ಹೆದರಿಕೆ.

ಅದೇ ಸಮಯಕ್ಕೆ ಎರಡು ಘಟನೆಗಳು ಒಟ್ಟಿಗೆ ನಡೆದವು. ಮೊದಲನೆಯದು, ಕೆಫೆಟೇರಿಯಾದ ಸ್ಟೋರ್ ರೂಮಿನಲ್ಲಿ ಅಡಗಿದ್ದ ಒಬ್ಬ ವ್ಯಕ್ತಿಯನ್ನು ಮುಸುಕುಧಾರಿಯೊಬ್ಬ ತಲೆಗೂದಲು ಹಿಡಿದು ಎಳೆದುತಂದಿದ್ದು. ತೆಳ್ಳಗೆ ಕುಳ್ಳಗೆ ಎಲ್ಲಿಬೇಕಾದರೂ ಅಡಗಲು ಅನುಕೂಲವಾದ ದೇಹವುಳ್ಳ ಆ ವ್ಯಕ್ತಿ ಭಾರತೀಯನಂತೆ ಕಾಣುತ್ತಿದ್ದ. ‘ಐಯಾಂ ಸಾರಿ, ಐಯಾಂ ಸಾರಿ’ ಎಂದು ಬಡಬಡಿಸುತ್ತಿದ್ದ. `ವೆಂಕಟ್ರಾವ್’ ಎಂದ ಮನೋಜ್ ಆಶ್ಚರ್ಯದಲ್ಲಿ. `ಎಲ್ಲಿ ಅಡಗಿದ್ದ ಇಷ್ಟು ಹೊತ್ತು?’

ನಮ್ಮನ್ನು ಕಾವಲು ಕಾಯುತ್ತಿದ್ದವನೂ ಸೇರಿದಂತೆ ಇಬ್ಬರು ಮುಸುಕುಧಾರಿಗಳು ವೆಂಕಟರಾವ್ ನನ್ನು ಎಳೆದುಕೊಂಡು ಬರುವಲ್ಲಿಗೆ ಓಡಿದರು. ಅವರಲ್ಲೊಬ್ಬ ಮೊದಲು ಮಾಡಿದ ಕೆಲಸವೆಂದರೆ ವೆಂಕಟರಾವ್ ನ ಫೋನನ್ನು ಕಿತ್ತುಕೊಂಡು ಯಾರಿಗಾದರೂ ಕಾಲ್ ಮಾಡಿದ್ದಾನಾ ಎಂದು ಪರಿಶೀಲಿಸಿದ್ದು. ಮರುಕ್ಷಣಕ್ಕೆ ಫೋನು ಮತ್ತು ವೆಂಕಟರಾವ್ ಇಬ್ಬರನ್ನೂ ನೆಲಕ್ಕೆ ಕುಕ್ಕಿದರು. ಮೂವರೂ ಸೇರಿ ಅವನನ್ನು ಝಾಡಿಸಿ ಒದೆಯುತ್ತಿದ್ದರು. ವೆಂಕಟರಾವ್ ಚಿತ್ರವಿಚಿತ್ರವಾದ ಕರುಳು ಕಿತ್ತುಬರುವ ಶಬ್ದವನ್ನು ಮಾಡುತ್ತಿದ್ದ. ಕುಸಿದುಬಿದ್ದವ ನನಗೆ ಕಾಣುತ್ತಿರಲಿಲ್ಲ. ಮಧ್ಯದಲ್ಲಿದ್ದ ಟೇಬಲ್ಲು, ಕುರ್ಚಿ, ಮತ್ತು ಆ ಭಾಗವನ್ನು ಬೇರ್ಪಡಿಸುವ ಅರ್ಧಗಾಜಿನ ಗೋಡೆಯ ಭರ್ತಿ ತುಂಬಿದ್ದ ಕಂಪನಿಯ ಪೋಸ್ಟರ್ ಗಳು ಅವನನ್ನು ನಮ್ಮಿಂದ ಮರೆ ಮಾಡಿದ್ದವು. ಒಂದು ಗುಂಡಿನ ಶಬ್ದದೊಂದಿಗೆ ವೆಂಕಟರಾವ್ ನ ಗದ್ದಲ ನಿಂತು ಹೋಯಿತು.

ಆ ಮರಣಕ್ಕೆ ನೇರ ಸಾಕ್ಷಿಯಾದ ನಾನು ತಲ್ಲಣಿಸಿ ಹೋದೆ. ನಾನಷ್ಟೇ ಅಲ್ಲ ನನ್ನೊಡನೆ ನಿಂತಿದ್ದ ಎಲ್ಲರೂ… ಹೆಂಗಸೊಬ್ಬಳ ಚೀತ್ಕಾರ ಕೇಳಿತು. ರಾಜ್ ಮೈದಾನಿ ಪ್ರಜ್ಞೆತಪ್ಪಿ ಕುಸಿದುಬಿದ್ದರು. ಅವರ ಅಕ್ಕಪಕ್ಕದಲ್ಲಿದ್ದ ಮೂರ್ನಾಲ್ಕುಜನ ರಾಜ್ ಎಂದು ಜೋರಾಗಿ ಕೂಗಿ ಅವರ ಸುತ್ತುವರೆದು ನಿಂತರು. ನಮ್ಮನ್ನು ಕಾಯುತ್ತಿದ್ದವ ಅಲ್ಲಿಗೆ ಓಡಿದ. ಅರ್ಥವಾಗದ ಭಾಷೆಯಲ್ಲಿ ಚೀರುವ ಧ್ವನಿಯಲ್ಲಿ ಕೂಗುತ್ತ ರಾಜ್ ಸುತ್ತ ನಿಂತ ಜನರನ್ನು ತಳ್ಳಲಾರಂಭಿಸಿದ.

ಅದೇ ಸಮಯಕ್ಕೆ ಮನೋಜನ ಎಡಭಾಗಕ್ಕೆ ನಿಂತ ವ್ಯಕ್ತಿ, ಒಬ್ಬ ಬಿಳಿಯ, ತನ್ನ ಜಾಗದಿಂದ ಮೆಲ್ಲನೆ ಸರಿದು ಮನೋಜನ ಹಿಂಭಾಗದಿಂದ ನನ್ನನ್ನು ದಾಟಿಕೊಂಡು ಸಾಲಿನ ಕೊನೆಯವನಾಗಿ ನಿಂತಿದ್ದ ನನ್ನ ಬಲಭಾಗಕ್ಕೆ ಬಂದು ಪಕ್ಕಕ್ಕೆ ನಿಂತು `ದೆ ಆರ್ ನಾಟ್ ವಾಚಿಂಗ್ ಅಸ್ ನೌ. ಲೆಟ್ ಅಸ್ ಗೆಟ್ ಇನ್ ಟು ದ ಸರ್ವರ್ ರೂಂ’ ಎಂದು ಕೈ ಜಗ್ಗಿ ಎಳೆದು ಕುಕ್ಕರುಗಾಲಿನಲ್ಲಿ ಸರ್ವರ್ ರೂಮಿನೆಡೆಗೆ ತೆವಳಲಾರಂಭಿಸಿದ. `ನೋ. ಐ ಡೋಂಟ್ ಕಮ್!’ ಎಂದೆ ಗಾಬರಿಯಲ್ಲಿ. `ಬಟ್ ಐ ಕಾಂಟ್ ಡೂ ದಟ್ ಅಲೋನ್’ ಎಂದು ಹತಾಶೆಯಿಂದ ನನ್ನೆಡೆಗೆ ಮತ್ತು ಮನೋಜನೆಡೆಗೆ ನೋಡಿದ. `ಹೋಗು. ಇಲ್ಲಿರುವುದಕ್ಕಿಂತ ಅದೇ ಸೇಫ್’ ಎಂದು ಮನೋಜ್ ಪಿಸುಗುಟ್ಟಿದ. ಹಾಗಿದ್ದರೆ ಅವನೇಕೆ ಹೋಗಲಿಲ್ಲ ಎನ್ನುವ ಪ್ರಶ್ನೆ ಈಗ ಹಾಸಿಗೆಯಲ್ಲಿ ಮಲಗಿದ್ದಾಗ ಬರುತ್ತಿದೆ, ಆಗ ಬರಲಿಲ್ಲ. `ಐಯಾಂ ನಾಟ್ ಎ ಟೆಕ್ನಿಕಲ್’ ಎಂದು ಪಿಸುಗುಟ್ಟಿದೆ. `ಹೂ ಕೇರ್ಸ್. ಐ ಕ್ಯಾನ್ ಟೇಕ್ ಕೇರ್ ಆಫ್ ಇಟ್’ ಎಂದ ಬಿಳಿಯ ಇನ್ನೂ ಬಂದಿಲ್ಲ ಎನ್ನುವ ಅಸಹನೆಯಿಂದ. ಕುಕ್ಕರಗಾಲಿನಲ್ಲಿ ತೆವಳುತ್ತ ಅವನನ್ನು ಹಿಂಬಾಲಿಸಿದೆ. ನನ್ನ ಮುಂದಿದ್ದವ ಎತ್ತರದವ. ಬಗ್ಗಿ ಮೊಣಕಾಲಿನಲ್ಲಿ ತೆವಳುವಾಗ ಅವನ ತೋಳಿನ ಸ್ನಾಯುಗಳು ಬಳುಕುವ ರೀತಿಗೆ ಬಲವಾನನೆಂಬ ಅಂದಾಜು ಮೂಡುತ್ತಿತ್ತು.

ಕೆಲವೇ ಸೆಕೆಂಡಿನಲ್ಲಿ ಸರ್ವರ್ ರೂಮಿನ ಬಾಗಿಲ ಬಳಿಯಿದ್ದೆವು. ಕುಕ್ಕರುಗಾಲಿನಲ್ಲಿ ಕುಳಿತಂತೆಯೇ ಬಾಗಿಲನ್ನು ಜೋರಾಗಿ ತಳ್ಳಿದ. ನಮ್ಮ ಅದೃಷ್ಟಕ್ಕೆ ಅದು ಶಬ್ದವಾಗದಂತೆ ತೆರೆದುಕೊಂಡಿತು. ಕಪ್ಪೆಯಂತೆ ಕುಪ್ಪಳಿಸಿ ಒಳಸೇರಿ ಬಾಗಿಲು ಹಿಡಿದು ನನ್ನೆಡೆಗೆ ನೋಡಿದ. ನಾನೂ ಕುಪ್ಪಳಿಸಿ ಒಳಸೇರಿದೆ. ಮೆಲ್ಲನೆ ಬಾಗಿಲು ಮುಚ್ಚಿಕೊಂಡಿತು. ಬಾಗಿಲು ಮುಚ್ಚಿಕೊಳ್ಳುವ ಮುನ್ನದ ಸಣ್ಣಕಿಂಡಿಯಲ್ಲಿ ವೆಂಕಟರಾವ್ ನ ಸುತ್ತ ನಿಂತಿದ್ದ ಮುಸುಕುಧಾರಿಗಳಲ್ಲಿ ಒಬ್ಬ ಈ ಕಡೆ ನೋಡಿದಂತೆ ನನಗೆ ಭಾಸವಾಯಿತು. ಹಾಗೆ ಅನ್ನಿಸಿದ ಮರುಸೆಕೆಂಡಿಗೆ ಬಾಗಿಲು ಹಾಕಿಕೊಂಡಿತು. ಬೋಲ್ಟ್ ಹಾಕಬಹುದಾ ಎಂದು ನೋಡಿದೆ. ಆ ಬಾಗಿಲಿಗೆ ಅದೇನೂ ಇರಲಿಲ್ಲ.

ಮಬ್ಬು ನೀಲಿಬೆಳಕಿನ ಮತ್ತು ಮೈಕೊರೆಯುವ ಚಳಿಯ ಆ ಪುಟ್ಟಕೋಣೆಯಲ್ಲಿ ಎರಡು ಚಿಕ್ಕ ರಾಕ್ ಗಳಲ್ಲಿ ಮಿನುಗುವ ನೀಲಿ ನಕ್ಷತ್ರಗಳಷ್ಟೆ ತುಂಬಿದ್ದವು. ಅವುಗಳ ಗುಂಯ್ ಗುಡುವ ಶಬ್ದ. ಹಿಂದೆ ಎಂದೋ, ನನ್ನ ಮೊದಲ ಕಂಪನಿಯಲ್ಲಿ ಟ್ರೈನಿ ಇಂಜಿನಿಯರಾಗಿ ಸೇರಿದಾಗ ಎಕ್ಸ್ಪೋಷರ್ ಗೋಸ್ಕರ ಒಂದು ಇಂತಹದ್ದೇ ಆದರೆ ಇದಕ್ಕಿಂತ ಹತ್ತುಪಟ್ಟು ದೊಡ್ಡದಾದ ಡೇಟಾಸೆಂಟರಿಗೆ ಭೇಟಿಯಿತ್ತದ್ದು ಬಿಟ್ಟರೆ ಮತ್ತೆಂದೂ ಇಂತಹ ತಣ್ಣನೆಯ ಕೋಣೆಯನ್ನು ಹೊಕ್ಕಿರಲಿಲ್ಲ.

ನನ್ನೊಡನೆ ಬಂದ ಬಿಳಿಯ ನನ್ನಷ್ಟೇ ವಿಹ್ವಲನಾಗಿ ನಿಂತಿದ್ದು ನನಗೆ ಗಾಬರಿಯನ್ನುತಂದಿತು. `ಯು ನೊ ವಾಟ್ ಟು ಡು, ಈಸೆಂಟಿಟ್?’ ಎಂದೆ. `ಗೋ ಅರೌಂಡ್ ಆ್ಯಂಡ್ ಸರ್ಚ್ ದ ಲೇಬಲ್ ಆಘಿ2998. ಐ ಹ್ಯಾವ್ ಆ್ಯಕ್ಸೆಸ್ ಆನ್ ದಟ್ ಸರ್ವರ್’. ನಾನು ಹುಡುಕಲಾರಂಭಿಸಿದೆ. ನನ್ನನ್ನು ಕೆಲಸಕ್ಕೆ ಹಚ್ಚಿದ್ದು ನೆಪಮಾತ್ರ ಎನ್ನುವಂತೆ ಅವನು ನೇರವಾಗಿ ಎರಡನೆ  ರಾಕ್ ನ ಮೂಲೆಗೆ ಹೋಗಿ ಕೀಬೋರ್ಡ್ ಎಳೆದು ಮಾನಿಟರ್ ಆನ್ ಮಾಡಿದ. ಕಪ್ಪುಪರದೆಯ ಮೇಲೆ ಮೂಡುವ ನೀಲಿ ಅಕ್ಷರಗಳ ಬೆಳಕು ಕೋಣೆಯೊಳಗೆ ತುಂಬಿತು. ‘ಐ ಗಾಟ್ ಇಟ್. ಕಮ್ ಹಿಯರ್’ ಎಂದು ಕೂಗಿದ. ಗಾಬರಿಯಲ್ಲಿ ನಾನು `ಯುವರ್ ವಾಯ್ಸ್ ಈಸ್ ಲೌಡ್’ ಎಂದೆ. ಅದಕ್ಕವನು `ನಾಟ್ ಟು ವರಿ. ದಿಸ್ ಈಸ್ ಎ ಸೌಂಡ್ ಪ್ರೂಫ್ ರೂಂ’ ಎಂದ.


`ಐ ಹ್ಯಾಡ್ ಆ್ಯಕ್ಸೆಸ್ ಸಿಕ್ಸ್ ಮಂತ್ಸ್ ಬ್ಯಾಕ್. ಐ ಹೋಪ್ ಎವರಿಥಿಂಗ್ ರಿಮೈನ್ಡ್ ಸೇಮ್’ ಎಂದೆನ್ನುತ್ತ ಲಾಗಿನ್ ಸ್ಕ್ರೀನಿನಲ್ಲಿ ತನ್ನ ಯೂಸರ್ ನೇಮ್ ಮತ್ತು ಪಾಸ್ ವರ್ಡನ್ನು ಟೈಪ್ ಮಾಡಿದ. ಆ ಗಾಬರಿಯ ಸಂದರ್ಭದಲ್ಲೂ ಅವನ ಮುಖದ ಮೇಲೊಂದು ಸಣ್ಣ ವಿಜಯದ ನಗು ಕಾಣಿಸಿಕೊಂಡಿತು.

ಧಡ್ಡನೆ ಯಾರೋ ಬಾಗಿಲನ್ನು ಒದ್ದು ಒಳ ಪ್ರವೇಶಿಸಿದರು. ಆ ಶಬ್ದಕ್ಕೆ ಹೆದರಿದವನಂತೆ ಬಿಳಿಯ ಹಿಂದಕ್ಕೆ ಹಾರಿದ. ಅವನ ತಲೆ ಸರಿಯಾಗಿ ನನ್ನ ಮೂಗಿಗೆ ಬಡಿದು ಸಣ್ಣಚೀತ್ಕಾರದೊಂದಿಗೆ ಹಿಂದಕ್ಕೆ ಜರುಗಿದೆ. ಆ ಮಬ್ಬು ನೀಲಿ ಬೆಳಕಿನಲ್ಲಿ ನುಗ್ಗಿದ ವ್ಯಕ್ತಿಯ ಆಕಾರ ಅಸ್ಪಷ್ಟವಾಗಿ ಕಾಣುತ್ತಿತ್ತು. ಎಲ್ಲವೂ ಕಪ್ಪುಮಯವಾಗಿದ್ದವನ ಬಂದೂಕು ಮಾತ್ರ ಆ ಮಂದ ಬೆಳಕಿಗೂ ಹೊಳೆಯುತ್ತಿತ್ತು. ಕಪ್ಪಾಕೃತಿಯ ಮುಖವಾಡದ ಮುಖ ನಮ್ಮೆಡೆಗೆ ನೋಡಿತು. ಅದಷ್ಟೇ ಚಿತ್ರ ಅವನದ್ದು ನನ್ನ ಮನಸ್ಸಿನಲ್ಲಿ ಉಳಿದಿರುವುದು. ಅವನ ಮೊದಲ ಗುಂಡು ಬಿಳಿಯನ ಎದೆಯನ್ನು ಹೊಕ್ಕಿತು. ಅವನು ತಳ್ಳಲ್ಪಟ್ಟವನಂತೆ ಹಿಂದೆ ಬಿದ್ದು ನನ್ನನ್ನೂ ಬೀಳಿಸಿದ. ನಾನು ಗಾಳಿಯಲ್ಲಿ ತೇಲಿದವನಂತೆ ಬಿದ್ದು ಹಿಂಭಾಗದಿಂದ ನೆಲಕ್ಕೆ ಕುಕ್ಕಿ ಕಾಲುಗಳು ಮೇಲೆದ್ದವು. ಅದೇ ಸಮಯಕ್ಕೆ ಬಂದ ಎರಡನೆಗುಂಡು ನನ್ನ ಎಡತೊಡೆಯನ್ನು ಸೀಳಿತು. ಅವನ ಮೂರನೆಯ ಗುಂಡು ನೀಲಿಬೆಳಕಿನ ಸರ್ವರ್ ಮಾನಿಟರನ್ನು ಭೇದಿಸಿ ಬೆಂಕಿಯನ್ನು ಹೊರಹಾಕಿ ಆ ಮಾನಿಟರು ಮತ್ತೊಂದಕ್ಕೋ ರಾಕ್ ಗೋ ಅಪ್ಪಳಿಸಿ ದೊಡ್ಡ ಸದ್ದನ್ನು ಮಾಡಿತು. ಆ ರೂಮಿನ ಎಲ್ಲಾ ನೀಲಿ ನಕ್ಷತ್ರಗಳೂ ಏಕಕಾಲಕ್ಕೆ ನಂದಿಹೋಗಿ ಸಾವಿನಷ್ಟೇ ಕಪ್ಪಾದ ಕತ್ತಲೆ ಆವರಿಸಿಕೊಂಡಿತು.

(ಕಾದಂಬರಿ: ತಾರಾಬಾಯಿಯ ಪತ್ರ, ಲೇಖಕರು: ಎಂ. ಆರ್. ದತ್ತಾತ್ರಿ, ಪ್ರಕಾಶನ: ಛಂದ ಪುಸ್ತಕ, ಬೆಲೆ:110)