”ಪ್ರಭು ಅವರ ಕತೆಗಳಲ್ಲಿ ಮನುಷ್ಯ ಜಗತ್ತಿನೊಡನೆ ತಾನು ಇಟ್ಟುಕೊಳ್ಳುವ ಸಂಬಂಧದಲ್ಲೇ ತನ್ನತನವನ್ನು ಕಂಡುಕೊಳ್ಳುತ್ತಾನೆಂಬ ಕಾಣ್ಕೆಯಿದೆ. ಸಂಬಂಧವೆನ್ನುವುದು ವೈಯಕ್ತಿಕವಾಗಿರುವಂತೆ ಸಾಮಾಜಿಕವೂ ಆಗಿರುವುದುಂಟು. ಹಾಗಾಗಿ ಅದನ್ನು ವಿವಿಧ ಮಗ್ಗುಲುಗಳಿಂದ ಪರಿಶೀಲಿಸಬೇಕಾಗುತ್ತದೆ. ಪ್ರಭು ಅವರು ತೀರ ಸಹಜವೆನ್ನಿಸುವಂಥ ಕ್ರಿಯಾಕ್ಷೇತ್ರವೊಂದನ್ನು ನೆಲೆಗೊಳಿಸಿ, ಆ ನೆಲೆಯಲ್ಲೇ ದಿನನಿತ್ಯದ ಭ್ರಾಮಕ ಅಂಶಗಳನ್ನೂ ಮನೋಲೋಕದ ವಿದ್ಯಮಾನಗಳನ್ನೂ ವಿಮರ್ಶೆಗೆ ಒಳಪಡಿಸುತ್ತಾರೆ. ಫ್ಯಾಂಟಾಸ್ಟಿಕ್ ನಿರೂಪಣಾ ವಿಧಾನದ ಯಶಸ್ಸಿರುವುದೇ ಇಲ್ಲಿ”  
ಕನ್ನಡ ಕಥಾಲೋಕದ ಅಪರೂಪದ ಕಸುಬುಗಾರ ಎಂ.ಎಸ್.ಕೆ.ಪ್ರಭು ಅವರ ಸಮಗ್ರ ಕಥೆಗಳ ಸಂಕಲನಕ್ಕೆ ಸಹೃದಯ ವಿಮರ್ಶಕ ಎಸ್. ದಿವಾಕರ್ ಬರೆದ ಪ್ರಸ್ತಾವನೆ.

 

ಇಂಗ್ಲಿಷ್ ಲೇಖಕ ಜಿ.ಕೆ. ಚೆಸ್ಟರ್ ಟನ್ ಬರೆದ ‘ದಿ ಮ್ಯಾನ್ ಹು ವಾಸ್ ಫ್ರೈಡೇ’ಎಂಬ ಕಾದಂಬರಿಯಲ್ಲಿ ಒಂದು ಪಾತ್ರ (ಬಹುಶಃ ಆ ಪಾತ್ರದ ಹೆಸರು ಲುಸಿಯನ್ ಗ್ರಿಗೊರಿ ಇರಬೇಕು) “ರೈಲು ನಿಲ್ದಾಣದಲ್ಲಿರುವ ಗುಮಾಸ್ತರಾಗಲೀ ಪ್ರಯಾಣಿಕರಾಗಲೀ ತೀರ ದುಃಖದಲ್ಲಿರುವಂತೆ, ಬಸವಳಿದವರಂತೆ ಕಾಣಿಸುವುದೇಕೆ?” ಎಂದು ಪ್ರಶ್ನಿಸಿ ಅದಕ್ಕೆ ತಾನೇ ಹೀಗೆ ಉತ್ತರಿಸುತ್ತದೆ: “ಯಾಕೆಂದರೆ ಅವರಿಗೆ ರೈಲು ಸರಿಯಾಗಿ ಹೋಗುತ್ತದೆಯೆಂದು ತಿಳಿದಿರುವುದರಿಂದ; ಯಾಕೆಂದರೆ ತಾವು ಯಾವ ಊರಿಗೆ ಟಿಕೆಟ್ ತೆಗೆದುಕೊಂಡಿದ್ದಾರೋ ಆ ಊರನ್ನು ಖಂಡಿತ ತಲಪುತ್ತೇವೆಂಬ ಭರವಸೆಯಿರುವುದರಿಂದ; ಯಾಕೆಂದರೆ ಅವರಿಗೆ ಒಂದು ನಿಲ್ದಾಣ ಬಿಟ್ಟ ಮೇಲೆ ಇನ್ನೊಂದು ನಿಲ್ದಾಣ ಬರುತ್ತದೆಯೆಂದು ಗೊತ್ತಿರುವುದರಿಂದ”. ನಮ್ಮ ಜೀವನದಲ್ಲಿ ಪ್ರತಿಯೊಂದೂ ಹೀಗೆ ಕಾಲಕಾಲಕ್ಕೆ ತಪ್ಪದೆ ನಡೆದುಬಿಟ್ಟರೆ ನಾವು ಸಂತೋಷಪಡಲಾದೀತೆ? ಬದುಕೆನ್ನುವುದು ಅನಿರೀಕ್ಷಿತಗಳ ಗೋಜಲಾಗಿರುವುದರಿಂದ ಅಲ್ಲಿ ಯಾವುದೇ ವೇಳಾಪಟ್ಟಿಗೆ ಬೆಲೆಯಿಲ್ಲವಷ್ಟೆ. ಕನ್ನಡದ ಅನನ್ಯ ಕತೆಗಾರ ಎಂ.ಎಸ್.ಕೆ.ಪ್ರಭು ಅವರ ಕತೆಗಳನ್ನು ಓದುವಾಗಲೆಲ್ಲ ನನಗೆ ಈ ಮೇಲಿನ ಪ್ರಸಂಗ ನೆನಪಾಗುತ್ತದೆ.

ನನಗೆ ಅವರ ಪರಿಚಯವಾದದ್ದು 1971-72ರ ಸುಮಾರಿನಲ್ಲಿ, ಬೆಂಗಳೂರಿನ ಗಾಂಧಿಬಜಾರಿನಲ್ಲಿ. ನಮ್ಮ ಮೊದಲ ಭೇಟಿಯಲ್ಲೇ ಅವರು ‘ನೀವಿದನ್ನು ಓದಬೇಕು’ಎಂದು ಒಂದು ಕತೆಯ ಹಸ್ತಪ್ರತಿ ಕೊಟ್ಟರು. ಆ ರಾತ್ರಿ ಅದನ್ನು ಓದಿಮುಗಿಸಿದ ನನಗೆ ಅನುಭವದ ಹೊಸಲೋಕವೊಂದು ತೆರೆದುಕೊಂಡಂತಾಗಿತ್ತು. ಕನ್ನಡದಲ್ಲಂತೂ ನಾನು ಅದುವರೆಗೂ ಅಂಥದೊಂದು ಕತೆಯನ್ನು ಓದಿರಲಿಲ್ಲ. ಮರುದಿನ ಅದನ್ನು ಗೋಪಾಲಕೃಷ್ಣ ಅಡಿಗರಿಗೆ ಕೊಟ್ಟೆ. ಅವರೂ ಆ ಕತೆಯನ್ನು ಅದೆಷ್ಟು ಇಷ್ಟಪಟ್ಟರೆಂದರೆ ತಾವು ಸಂಪಾದಿಸುತ್ತಿದ್ದ ತ್ರೈಮಾಸಿಕ ‘ಸಾಕ್ಷಿ’ಯ ಮುಂದಿನ ಸಂಚಿಕೆಯಲ್ಲಿ ಅದನ್ನು ಪ್ರಮುಖವಾಗಿ ಪ್ರಕಟಿಸಿದರು. ಪ್ರಭುವಿನ ಸ್ವೋಪಜ್ಞ ಕತೆಗಾರಿಕೆಯನ್ನು ಬೆಳಕಿಗೆ ತಂದ ಆ ಕತೆಯ ಹೆಸರು ‘ಎರಡು ತೆಂಗಿನಮರದುದ್ದದ ಮನುಷ್ಯ’. ಇಷ್ಟು ದಶಕಗಳ ನಂತರವೂ ಆ ಕತೆ ತನ್ನ ಪರಿಪೂರ್ಣ ಆಕೃತಿಯಿಂದಾಗಿ, ಕಲಾತ್ಮಕ ನಿರ್ವಹಣೆಯಿಂದಾಗಿ ಈಗಲೂ ಬೆರಗುಗೊಳಿಸುತ್ತದೆ.

(ಎಂ.ಎಸ್.ಕೆ.ಪ್ರಭು )

ವಾಸ್ತವವಾದೀ ಮಾರ್ಗದಿಂದ ಜೀವನದ, ಸೃಷ್ಟಿಯ ಸೂಕ್ಷ್ಮಾತಿಸೂಕ್ಷ್ಮಗಳನ್ನು ಗ್ರಹಿಸಲಾಗದೆಂದು ನಂಬಿದ್ದ ಪ್ರಭು ಆ ಮಾರ್ಗದಲ್ಲಿ ಒಂದೇ ಒಂದು ಕತೆಯನ್ನೂ ಬರೆಯಲಿಲ್ಲವೆನ್ನುವುದು ಗಮನಾರ್ಹ. ಕಥಾಸಾಹಿತ್ಯದಲ್ಲಿ ಅವರು ಅನುಸರಿಸಿದ್ದು ಫ್ಯಾಂಟಾಸ್ಟಿಕ್ ಅಥವಾ ಅದ್ಭುತರಮ್ಯ ಮಾರ್ಗವನ್ನು. ಆ ಮಾರ್ಗವನ್ನು ಕುರಿತು ಅವರೇ ಬರೆದ ಒಂದು ಸುದೀರ್ಘ ಲೇಖನದ ಈ ಸಾಲುಗಳು ತೀರ ಅರ್ಥಪೂರ್ಣ: “ಮನುಷ್ಯನನ್ನು ಅವನ ಇಂದಿನ ಸ್ಥಿತಿಗೆ ಬಂಧಿಸುವ ಶಕ್ತಿಗಳನ್ನು ಸ್ವಲ್ಪ ಪರಿಶೀಲಿಸಬೇಕು. ಮೊದಲನೆಯದಾಗಿ ಅವನ ಆಲೋಚನಾಕ್ರಮ. ಎರಡನೆಯದು, ಮನುಷ್ಯ ತಾನು ನಿಂತ ನೆಲೆಯಿಂದ, ಅವನ ಕಣ್ನೆಲೆಯಿಂದ (ಪರ್ಸ್ಪೆಕ್ಟಿವ್) ಗ್ರಹಿಸಿದ ಅರ್ಥವೇ, ಅನುಭವವೇ ಸಂಪೂರ್ಣ ಎಂದು ಘೋಷಿಸುವುದು. ಮೂರನೆಯದು ತಾನೇ ಸೃಷ್ಟಿಸಿಕೊಂಡು ಪ್ರೀತಿಯಿಂದ ಬೆಳೆಸಿದ ವಿಜ್ಞಾನ, ತಂತ್ರಜ್ಞಾನಗಳ ದಬ್ಬಾಳಿಕೆಯ ವಿಪರ್ಯಾಸ. ನಾಲ್ಕನೆಯದು ವ್ಯಾವಹಾರಿಕ ಜಗತ್ತಿನ ಕಠೋರ ಸತ್ಯಗಳು. ನಂತರ, ಹೊಸ ಸತ್ಯ, ಹೊಸ ಅರ್ಥ, ಹೊಸ ಅನುಭವಗಳನ್ನು ಹೊಂದುವ ಅದಮ್ಯ ಬಯಕೆ. ಹೀಗೆ ವಾಸ್ತವತೆಯ ಬಗೆಗಿನ ಅತೃಪ್ತಿಯಿಂದ ಹುಟ್ಟುವ ಫ್ಯಾಂಟಸಿ ಸಾಹಿತ್ಯ ಮನುಷ್ಯನ ಕೆಲವು ಮೂಲಭೂತವಾದ ಹಾಗೂ ಆದರ್ಶಯುತವಾದ ಆಶೋತ್ತರಗಳನ್ನು ಪ್ರತಿಬಿಂಬಿಸುತ್ತದೆ. ಜೊತೆಯಲ್ಲಿಯೇ ಅವನ ಇಂದಿನ ಶೋಚನೀಯ ಅವಸ್ಥೆಗೆ ಕಾರಣಗಳೇನು ಎಂಬುದನ್ನೂ ವಿಶ್ಲೇಷಿಸಲು ಯತ್ನಿಸುತ್ತದೆ.” ಈ ಹಿನ್ನೆಲೆಯಲ್ಲಿ ನೋಡಿದಾಗ ಪ್ರಭು ಬರೆದ ಕತೆಗಳೆಲ್ಲವೂ ನಮ್ಮ ರೂಢಿಗತ ವಾಸ್ತವವಾದಕ್ಕೆ ಸವಾಲೊಡ್ಡುವಂತಿವೆ. ಕಣ್ಣಿಗೆ ಕಂಡದ್ದಷ್ಟೇ ಸತ್ಯವಲ್ಲ ಎಂಬ ನಂಬಿಕೆಯಿಂದ ಅರಳಿಕೊಳ್ಳುವ ಅವರ ಕತೆಗಳು ಮನುಷ್ಯನಾದವನು ಕೇಳಿಕೊಂಡು ಉತ್ತರ ಪಡೆಯಲಾಗದ ಕೆಲವು ಪ್ರಶ್ನೆಗಳನ್ನು ಹೊಸ ಬೆಳಕಿನಲ್ಲಿ ಪರಿಶೀಲಿಸುತ್ತವೆ. ವ್ಯಕ್ತಿಯೊಬ್ಬನ ಒಂದು ಸಣ್ಣ ದೈಹಿಕ ಊನದ ಮೂಲಕ, ಅವನಿಗೆ ಸಂಬಂಧಪಟ್ಟ ಒಂದು ತೋರಿಕೆಯ ಮೂಲಕ ಅವನ ಪಿತೃಪಿತಾಮಹರ ಕಂಪ್ಯೂಟರಿನಲ್ಲಿ ಕೆತ್ತಿರಬಹುದಾದ ಬೀಜಾಕ್ಷರಗಳನ್ನೂ ಭವಿಷ್ಯದ ಸಂಭವನೀಯ ಘಟನಾ ಪರಂಪರೆಯನ್ನೂ ಒಟ್ಟಿಗೆ ಹೊಳೆಯಿಸುವ ಆಶಯದಿಂದಾಗಿ ಅವರ ಕತೆಗಳು ರೂಢಿಯ ಆಲೋಚನಾಕ್ರಮವನ್ನೇ ಪ್ರಶ್ನಿಸುವಂತಿವೆ.

ಫ್ಯಾಂಟಾಸ್ಟಿಕ್ ಅಥವಾ ಅದ್ಭ್ಬುತರಮ್ಯ ಕತೆಗಳು ಮನುಷ್ಯನ ಭೀತಿಯಷ್ಟೇ ಹಳೆಯವು. ರಾಮಾಯಣ, ಮಹಾಭಾರತ, ಝೆಂದ್-ಅವೆಸ್ತ, ಬೈಬಲ್, ಒಡಿಸ್ಸಿ, ಅರೇಬಿಯನ್ ನೈಟ್ಸ್ ಮೊದಲಾದ ಕೃತಿಗಳಲ್ಲಿ ವಾಸ್ತವಕ್ಕೆ ತೀರ ವಿರುದ್ಧವಾದ ಅತೀಂದ್ರಿಯ ಘಟನೆಗಳು ತುಂಬಿಕೊಂಡಿವೆ. ಈ ಪ್ರಕಾರದಲ್ಲಿ ತಮ್ಮ ಸೃಜನಶೀಲತೆಯನ್ನು ಪ್ರಕಟಿಸಿದ ಮೊದಲಿಗರೆಂದರೆ ಬಹುಶಃ ಚೀನೀಯರು. ಉದಾಹರಣೆಗೆ ಚುವಾಂಗ್ ತ್ಸು ಬರೆದ ‘ಕನಸು ಮತ್ತು ವಾಸ್ತವ’ ಎಂಬ ಈ ಅತಿಸಣ್ಣ ಕತೆಯನ್ನು ನೋಡಬಹುದು:

ಒಂದಾನೊಂದು ಕಾಲದಲ್ಲಿ ರೆಕ್ಕೆ ಬಿಡಿಯುತ್ತ ಅಲ್ಲಲ್ಲಿ ಹಾರಾಡುತ್ತಿರುವ
ಒಂದು ಚಿಟ್ಟೆಯಾಗಿರುವಂತೆ ನಾನೊಂದು ಕನಸು ಕಂಡೆ. ಇದ್ದಕ್ಕಿದ್ದಂತೆ
ಎಚ್ಚರವಾಯಿತು. ನೋಡಿದರೆ ನಾನು ನಾನಾಗಿಯೇ ಮಲಗಿದ್ದೆ. ಮೊದಲು
ನಾನೇ ಒಂದು ಚಿಟ್ಟೆಯಾಗಿರುವಂತೆ ಕನಸು ಕಾಣುತ್ತಿದ್ದೆನೋ ಅಥವಾ
ಈಗ ನಾನೇ ಒಬ್ಬ ಮನುಷ್ಯನಾಗಿರುವಂತೆ ಕನಸು ಕಾಣುತ್ತಿರುವ ಚಿಟ್ಟೆಯೋ
ನನಗಂತೂ ಸಂಶಯ.

ನಾವು ಸಾಹಿತ್ಯಲೋಕವನ್ನು ಮೊಟ್ಟಮೊದಲು ಪ್ರವೇಶಿಸಿದಾಗ ನಮಗಾಗುವುದು ಒಂದು ಬಗೆಯ ಜ್ಞಾನೋದಯ. ಅದು ಸಂತೋಷದ, ಸಂಭ್ರಮದ, ಏನು ಬೇಕಾದರೂ ನಡೆದೀತೆಂಬ ಅನಿರೀಕ್ಷಿತ ವಿದ್ಯಮಾನಗಳ ಜ್ಞಾನೋದಯ. ಸಾಹಿತ್ಯದ ಹಲವು ಪ್ರಭೇದಗಳಲ್ಲಿ ಫ್ಯಾಂಟಾಸ್ಟಿಕ್ ಸಾಹಿತ್ಯವೆನ್ನುವುದು ಕೂಡ ಈ ಜ್ಞಾನವನ್ನು ಪರಿಶೋಧಿಸುತ್ತದೆ; ನಮ್ಮ ದಿನನಿತ್ಯದ ಜಗತ್ತನ್ನು ಒಂದು ಹೊರಕವಚವಾಗಿ ಮಾಡಿಕೊಂಡು ಅದರ ಮೂಲಕ ವಿವರಿಸಲಾಗದ್ದನ್ನು ಸೃಷ್ಟಿಸುತ್ತದೆ; ನಮ್ಮ ಮರೆತುಹೋದ ಕನಸುಗಳನ್ನು ಬಡಿದೆಬ್ಬಿಸುತ್ತದೆ. ಫ್ಯಾಂಟಾಸ್ಟಿಕ್ ಸಾಹಿತ್ಯ ಅಚ್ಚರಿಯ ಮೇಲೆ, ಅದರದೇ ನಿಯಮಗಳಿಂದ ಹುಟ್ಟಿದ ಅನಿರೀಕ್ಷಿತ ತರ್ಕದ ಮೇಲೆ ಬದುಕಿರುತ್ತದೆ. ಹಾಗಾಗಿ ಅದು ಪ್ರತಿಯೊಂದನ್ನೂ ವಿವರಿಸುವುದಿಲ್ಲ.

ಫ್ಯಾಂಟಾಸ್ಟಿಕ್ ಸಾಹಿತ್ಯದ ಸಂರಚನೆಯ ಬಗ್ಗೆ, ಅದರ ಸ್ವರೂಪ ಮತ್ತು ಆಶಯಗಳ ಬಗ್ಗೆ ಅನೇಕ ಮಂದಿ ಪಾಶ್ಚಾತ್ಯ ವಿಮರ್ಶಕರು ಬರೆದಿದ್ದಾರೆ. ಅವರಲ್ಲಿ ಝೆವೆತಾನ್ ತೊದೊರೋವ್, ಹೋರ್ಹೆ ಲೂಯಿಸ್ ಬೋರ್ಹೆಸ್, ಬಿಯೋಯ್ ಕಸಾರೆಸ್, ಜ್ಷಾನ್-ಪಾಲ್ ಸಾತ್ರ್, ರೋಸ್ಮೇರಿ ಜಾಕ್ಸನ್, ಎರಿಕ್ ಎಸ್. ರ್ಯಾಬ್ಕಿನ್, ಆಲ್ಬರ್ತೊ ಮಂಗುಎಲ್ ಮತ್ತು ವಿಲಿಯಂ ಆರ್.ಅರ್ವಿನ್ ಮುಖ್ಯರು. ಅವರಲ್ಲಿ ಕೆಲವರ ವಿಚಾರಗಳನ್ನು ಸಂಗ್ರಹಿಸಿ ಹೇಳುವುದಾದರೆ: ಫ್ಯಾಂಟಾಸ್ಟಿಕ್ ಎಂಬ ಪದವೇ ಅದರ ಸಂದಿಗ್ಧಾರ್ಥವನ್ನು ಸೂಚಿಸುತ್ತದೆ. ಅಂದರೆ ಅದು ಅ-ವಾಸ್ತವಿಕ. ಬದುಕಿಯೂ ಅಲ್ಲದ ಸತ್ತೂ ಅಲ್ಲದ ಸ್ಥಿತಿಯಲ್ಲಿರುವ ದೆವ್ವದಂತೆ. ಅದು ಇರುವಿಕೆ ಮತ್ತು ಇಲ್ಲದಿರುವಿಕೆಗಳ ನಡುವೆ (ಅಸ್ತಿತ್ವದ ಮತ್ತು ಶೂನ್ಯದ ನಡುವೆ) ಒಂದು ಭೂತದಂತೆ ಕಾಣಿಸಿಕೊಳ್ಳುತ್ತದೆ. ವಾಸ್ತವವನ್ನುಸ್ವೀಕರಿಸಿ ಅದನ್ನು ಮುರಿಯಬಯಸುವ ಈ ವಿಧಾನ ವಾಸ್ತವವನ್ನೇ ಪುನರ್ಜೋಡಿಸಬಹುದು ಅಥವಾ ತಲೆಕೆಳಗುಮಾಡಬಹುದು; ಆದರೆ ವಾಸ್ತವದಿಂದ ಮಾತ್ರ ತಪ್ಪಿಸಿಕೊಳ್ಳಲಾಗದು.

ಹಾಗೆ ನೋಡಿದರೆ, ಫ್ಯಾಂಟಸಿ ಎನ್ನುವುದು ಪ್ರತಿಮೆಗಳ, ಆಶೋತ್ತರಗಳ, ಸುಪ್ತಪ್ರಜ್ಞೆಯ ಅತ್ಯುತ್ತಮ ಸೃಷ್ಟಿ. ದ್ವಿ-ವ್ಯಕ್ತಿತ್ವ, ಅಜೇಯತೆ, ಅದೃಶ್ಯವಾಗುವಿಕೆ, ರೂಪಾಂತರ ಮೊದಲಾದವು ಆ ಸೃಷ್ಟಿಯ ಫಲವಾಗಿದ್ದು ಅವು ಅಂತಿಮವಾಗಿ ‘ವಾಸ್ತವಿಕತೆ’ಯ ವಿಚಾರಣೆ ನಡೆಸಿ ವಾಸ್ತವಿಕತೆಗೂ ಅವಾಸ್ತವಿಕತೆಗೂ, ಆತ್ಮಕ್ಕೂ ಅನಾತ್ಮಕ್ಕೂ, ಪ್ರಜ್ಞೆಗೂ ಸುಪ್ತಪ್ರಜ್ಞೆಗೂ ಇರುವ ಸಂಬಂಧಗಳನ್ನು ಪ್ರಶ್ನಿಸುತ್ತವೆ. ಜೊತೆಗೆಸುಲಭವಾಗಿ ಸ್ಪಷ್ಟಪಡಿಸಲಾಗದ ವಿಚಾರಕ್ಕೊಂದು ಭಾಷೆಯನ್ನೂ ಹುಡುಕಿಕೊಳ್ಳುತ್ತವೆ. ಫ್ಯಾಂಟಾಸ್ಟಿಕ್ ಕತೆಗಳಲ್ಲಿ ಸಾಮಾನ್ಯವಾಗಿ ಐದುಬಗೆಯ ವಸ್ತುಗಳುಂಟು: 1. ಕಾಲ: ಕಾಲಕ್ಕೆ ಎರಡು ವಿಭಿನ್ನ ಅಸ್ತಿತ್ವಗಳಿದ್ದು ಅವುಗಳಲ್ಲಿ ಒಂದು ನಮಗೆ, ಇನ್ನೊಂದು ಇನ್ನುಳಿದ ಜಗತ್ತಿಗೆ. 2. ಪ್ರೇತ ಸಂಚಾರ: ಸತ್ತವರು ಸೇಡು ತೀರಿಸಿಕೊಳ್ಳುವುದಕ್ಕಾಗಿ, ತಡವಾದೊಂದು ಘೋಷಣೆ ಮಾಡುವುದಕ್ಕಾಗಿ, ಗೋರಿಯಾಚೆಗೂ ಪ್ರೀತಿಸುವುದಕ್ಕಾಗಿ. 3. ಕನಸುಗಳು: ವಾಸ್ತವದ ಒಂದು ಭಾಗವಾಗಿ, ಒಂದು ಮುನ್ನೆಚ್ಚರಿಕೆಯಾಗಿ, ನಾವೂ ಕೂಡ ಕನಸುಗಳಿಂದ ಸೃಷ್ಟಿಯಾದವರೆಂದು ನಮಗೆ ತಿಳಿಸುವುದಕ್ಕಾಗಿ. 4. ರೂಪಾಂತರಗಳು: ಮನುಷ್ಯ ಪ್ರಾಣಿ, ಕೀಟಗಳಾಗುವುದು, ಪ್ರಾಣಿ ಮನುಷ್ಯನಾಗುವುದು, ಗುಡಿಸಲು ಅರಮನೆಯಾಗುವುದು, ಅರಮನೆ ಹಾಳುಸುರಿಯುವ ಭಗ್ನಮಂದಿರವಾಗುವುದು, ಕೈತೋಟ ದಂಡಕಾರಣ್ಯವಾಗುವುದು. 5. ಸಾದೃಶ್ಯ: ಒಂದಕ್ಕೊಂದು ಸಂಬಂಧವಿಲ್ಲದ ಕ್ರಿಯೆಗಳು ರಹಸ್ಯವಾಗಿ ಪರಸ್ಪರ ಪ್ರಭಾವಿಸುವುದು, ಇಲ್ಲಿನ ತೀರ ಅಪರಿಚಿತ, ಅನಿರೀಕ್ಷಿತ ಘಟನೆಯೊಂದು ಇನ್ನೆಲ್ಲೋ ದುರಂತವೊಂದಕ್ಕೆ ಕಾರಣವಾಗುವ ಮೂಲಕ ಜಗತ್ತಿನಲ್ಲಿ ಪ್ರತಿಯೊಂದಕ್ಕೂ ಸಂಬಂಧವಿದೆ ಎಂದು ಸ್ಥಾಪಿಸುವುದು.

ನಾವು ಸಾಹಿತ್ಯಲೋಕವನ್ನು ಮೊಟ್ಟಮೊದಲು ಪ್ರವೇಶಿಸಿದಾಗ ನಮಗಾಗುವುದು ಒಂದು ಬಗೆಯ ಜ್ಞಾನೋದಯ. ಅದು ಸಂತೋಷದ, ಸಂಭ್ರಮದ, ಏನು ಬೇಕಾದರೂ ನಡೆದೀತೆಂಬ ಅನಿರೀಕ್ಷಿತ ವಿದ್ಯಮಾನಗಳ ಜ್ಞಾನೋದಯ. ಸಾಹಿತ್ಯದ ಹಲವು ಪ್ರಭೇದಗಳಲ್ಲಿ ಫ್ಯಾಂಟಾಸ್ಟಿಕ್ ಸಾಹಿತ್ಯವೆನ್ನುವುದು ಕೂಡ ಈ ಜ್ಞಾನವನ್ನು ಪರಿಶೋಧಿಸುತ್ತದೆ; ನಮ್ಮ ದಿನನಿತ್ಯದ ಜಗತ್ತನ್ನು ಒಂದು ಹೊರಕವಚವಾಗಿ ಮಾಡಿಕೊಂಡು ಅದರ ಮೂಲಕ ವಿವರಿಸಲಾಗದ್ದನ್ನು ಸೃಷ್ಟಿಸುತ್ತದೆ; ನಮ್ಮ ಮರೆತುಹೋದ ಕನಸುಗಳನ್ನು ಬಡಿದೆಬ್ಬಿಸುತ್ತದೆ. ಫ್ಯಾಂಟಾಸ್ಟಿಕ್ ಸಾಹಿತ್ಯ ಅಚ್ಚರಿಯ ಮೇಲೆ, ಅದರದೇ ನಿಯಮಗಳಿಂದ ಹುಟ್ಟಿದ ಅನಿರೀಕ್ಷಿತ ತರ್ಕದ ಮೇಲೆ ಬದುಕಿರುತ್ತದೆ. ಹಾಗಾಗಿ ಅದು ಪ್ರತಿಯೊಂದನ್ನೂ ವಿವರಿಸುವುದಿಲ್ಲ.

ಕಥಾ ಸಾಹಿತ್ಯದಲ್ಲಿ ಬಳಕೆಯಾಗುವ ನಿರೂಪಣಾ ತಂತ್ರ, ಕಥಾಸಂವಿಧಾನ, ಅನಿರೀಕ್ಷಿತ ಮುಕ್ತಾಯ, ಪ್ರಯೋಗಶೀಲತೆ, ಅಚ್ಚರಿ ಹುಟ್ಟಿಸುವ ಪರಿಣಾಮ ಮೊದಲಾದವುಗಳನ್ನು ಅಧ್ಯಯನಮಾಡಿದಾಗ ಸೃಜನಶೀಲ ಸಾಹಿತ್ಯ ಓದುಗರನ್ನು ಹೇಗೆಲ್ಲ ಬದಲಾಯಿಸುವುದೆಂದು, ತತ್ಪರಿಣಾಮವಾಗಿ ಓದುಗರು ಏನೆಲ್ಲ ಬದಲಾವಣೆಗಳನ್ನುಅಪೇಕ್ಷಿಸುತ್ತಾರೆಂದು ನಮಗೆ ಸ್ಪಷ್ಟವಾಗುತ್ತದೆ. ಕವಿ ಎಸ್ರಾ ಪೌಂಡ್ ಬರೆದ ಕವಿತೆಯೊಂದರ ಸಾಲು: ‘ಏಜ್ ಡಿಮ್ಯಾಂಡೆಡ್ ಅನ್ ಇಮೇಜ್ ಆಫ್ ಇಟ್ಸ್ ಆಕ್ಸೆಲರೇಟೆಡ್ ಗ್ರಿಮೇಸ್….’ ಇದರ ಅರ್ಥ ಒಂದು ಕಾಲಘಟ್ಟವನ್ನು ಅರ್ಥಮಾಡಿಕೊಳ್ಳುವುದಕ್ಕೆ ಹೊಸದೊಂದೇ ಪ್ರತಿಮೆ ಅಗತ್ಯವೆನ್ನುವುದು. ಈ ದೃಷ್ಟಿಯಿಂದ ನೋಡಿದಾಗ ಪ್ರಭು ನಮ್ಮ ಕಾಲಕ್ಕೊಂದು ಅರ್ಥಪೂರ್ಣ ಪ್ರತಿಮೆ ಒದಗಿಸಿದರೆನ್ನಬೇಕು. ಅವರ ಕಥನ ಶೈಲಿ ಕಳೆದೊಂದು ಶತಮಾನದ ಕನ್ನಡ ಕಥಾಶೈಲಿಗೆ ಹತ್ತಿರವಾಗಿದ್ದೂ ಬಹಳಷ್ಟು ಭಿನ್ನವಾಗಿರುವುದನ್ನು, ಅಷ್ಟೇ ಪ್ರಯೋಗಶೀಲವಾಗಿರುವುದನ್ನು ಮರೆಯುವಂತಿಲ್ಲ. ಅವರ ಕತೆಗಳಲ್ಲಿ ನವಪುರಾಣ, ಅಸ್ತಿತ್ವವಾದಿ ಭೀಕರತೆ, ಅತಿವಾಸ್ತವಿಕತೆ, ಮಾಂತ್ರಿಕ ವಾಸ್ತವ, ಅಲಿಗರಿ, ಅಸಂಗತ, ಅಕರಾಳವಿಕರಾಳ, ಹೀಗೆ ಬಗೆಬಗೆಯ ನಿರೂಪಣೆಗಳಿದ್ದು, ಎಲ್ಲವೂ ಫ್ಯಾಂಟಸೀ ಎಂಬ ಪ್ರತಿ-ವಾಸ್ತವಲೋಕವನ್ನು ಸುಸಂಗತವೆನಿಸುವಂತೆ ಕಟ್ಟಿಕೊಡುತ್ತವೆ.

‘ಬೆತ್ತಲೆ ಅರಸನ ರಾಜರಹಸ್ಯ’, ‘ಮುಖಾಬಿಲೆ’ಮತ್ತು ‘ಗರ’– ಇವು ಪ್ರಭು ಅವರು ಮೂರು ಕಥಾ ಸಂಕಲನಗಳು. ಇವುಗಳಲ್ಲಿ ಕೊನೆಯದು ಪ್ರಕಟವಾದದ್ದು ಅವರ ಮರಣಾನಂತರ (2000). ಈ ಮೂರು ಸಂಕಲನಗಳಲ್ಲಿ ಒಟ್ಟು ಹದಿನೆಂಟು ಕತೆಗಳಿದ್ದು ಬಹುಮಟ್ಟಿಗೆ ಎಲ್ಲವೂ ಗುರುತ್ವಾಕರ್ಷಣೆಯ ನಿಯಮಗಳನ್ನು ರದ್ದುಮಾಡುವಂತಿವೆ. ಉದಾಹರಣೆಗೆ ಬೇರೆಯವರ ರೂಪಕ್ಕೆ ತನ್ನ ರೂಪವನ್ನು ಪರಿವರ್ತಿಸಿಕೊಳ್ಳುವವನೊಬ್ಬ ಕೊನೆಗೆ ತನ್ನತನವನ್ನೇ ಕಳೆದುಕೊಳ್ಳುವುದು; ಜನಸಂಪರ್ಕವಿಲ್ಲದವನೊಬ್ಬ ಮುಟ್ಟಿದವರೆಲ್ಲರನ್ನೂ ಗುಂಡುಸೂಜಿಯಂತೆ ಚುಚ್ಚುವುದು; ಜನರು ಪಕ್ಷಿಗಳನ್ನು ಹಿಡಿಯಬೇಕಾದ ಅನಿವಾರ್ಯಕ್ಕೆ ಸಿಕ್ಕಿ ತಮ್ಮ ಕೈಗಳನ್ನು ಉದ್ದುದ್ದ ಬೆಳೆಸಿಕೊಳ್ಳುವುದು; ಒಂದು ಬೆಕ್ಕು ಮಾತಾಡುವುದಷ್ಟೇ ಅಲ್ಲ, ಟೆಲಿಫೋನ್ ಕೂಡ ಮಾಡುವುದು; ಒಬ್ಬನ ಅಂಗೈಯಿಂದ ಹುಡಿ ಹುಡಿ ಮಣ್ಣು ಉದುರುವುದು, ಸರ್ವಾಧಿಕಾರಿಯೊಬ್ಬ ಉಟ್ಟ ಬಟ್ಟೆಯನ್ನು ಕಳಚುವ ಅವಾಸ್ತವಿಕ ಕ್ರಿಯೆಯಲ್ಲಿ ತೊಡಗುವುದು; ಒಬ್ಬನ ನಾಲಿಗೆ ಇದ್ದಕ್ಕಿದ್ದಂತೆ ಉದ್ದವಾಗುತ್ತ ಹೋಗುವುದು; ಐನ್ಸ್ಟೈನ್ ಎಂಬುವವನಿಂದ ತಟ್ಟಿಸಿಕೊಂಡ ಅವನ ಹೆಂಡತಿ ಚಪ್ಪಟೆಯಾಗುತ್ತಾ ಕೊನೆಗೆ ಗೋಡೆಗೆ ಅಂಟಿಕೊಂಡುಬಿಡುವುದು; ಒಬ್ಬ ವ್ಯಕ್ತಿಯನ್ನು ಅವನು ನೋಡುತ್ತಿದ್ದ ಕನ್ನಡಿಯೇ ಭ್ರಮಾಲೋಕಕ್ಕೆ ಕರೆದೊಯ್ದುಬಿಡುವುದು– ಇವು ಯಾವುವೂ ವಾಸ್ತವ ಜಗತ್ತಿನಲ್ಲಿ ಸಂಭವಿಸುವಂಥವಲ್ಲ.

ವಾಸ್ತವ ಜಗತ್ತಿನ ಸಮಸ್ಯೆಯೆಂದರೆ ನಮಗಿರುವುದು ಅದೊಂದೇ ಜಗತ್ತು. ಅದರಲ್ಲಿರುವುದು ಗೋಜಲು, ಕಗ್ಗಂಟು, ಅವ್ಯವಸ್ಥೆ. ಅಲ್ಲಿ ಧೂಳು ತುಂಬಿಕೊಳ್ಳುತ್ತದೆ, ವಿನಾಕಾರಣ ಜನರು ಸಾಯುತ್ತಾರೆ, ಅಪರಾಧವೆಸಗಿದರೆ ಒಮ್ಮೊಮ್ಮೆ ಲಾಭವಾಗುತ್ತದೆ, ಪ್ರೀತಿಸಿದರೆ ತೊಂದರೆಗೀಡಾಗುವಂತಾಗುತ್ತದೆ. ಆದರೆ ನಾವು ಕಾಲ್ಪನಿಕ ಎನ್ನಬಹುದಾದ ಫ್ಯಾಂಟಸೀ ಜಗತ್ತನ್ನು ಪ್ರವೇಶಿಸಿದಾಗ ಅದು ನಿಜವಾದ ಜಗತ್ತಿಗೊಂದು ಪರ್ಯಾಯ ಜಗತ್ತಾಗಿ ನಮ್ಮನ್ನು ಬರಮಾಡಿಕೊಳ್ಳುತ್ತದೆ; ನಮಗೆ ಒಂದಲ್ಲ ಒಂದು ಬಗೆಯ, ವಾಸ್ತವವಲ್ಲದ ಸುವ್ಯವಸ್ಥಿತ ಜಗತ್ತಿನಲ್ಲಿ ಸ್ವಲ್ಪ ಕಾಲ ಓಡಾಡಿಕೊಂಡಿರುವ ಅವಕಾಶ ನೀಡುತ್ತದೆ. ‘ಬ್ಲ್ಯಾಕ್ ವಾಟರ್’, ‘ವೈಟ್ ಫೈರ್’ಗಳಂಥ ಫ್ಯಾಂಟಾಸ್ಟಿಕ್ ಕಥಾ ಸಂಕಲನಗಳನ್ನು ಸಂಪಾದಿಸಿರುವ ಅರ್ಜೆಂಟೀನಾದ ಲೇಖಕ ಆಲ್ಬರ್ತೊ ಮಂಗುಎಲ್ ಬರೆದಿರುವುದನ್ನು ನೋಡಿ: “ಫ್ಯಾಂಟಾಸ್ಟಿಕ್ ಎನ್ನುವುದು ನಮ್ಮ ಮನಸ್ಸಿನಲ್ಲಿ ನಾವೇ ಸೃಷ್ಟಿಸಿದ, ಅದಕ್ಕೊಂದು ಭೂಗೋಳವನ್ನೂ ಕಲ್ಪಿಸಿದ ದೇಶ”. ಪ್ರಭುವಿನ ಕತೆಗಳಲ್ಲಿರುವುದು ಅಂಥ ದೇಶಗಳ ವಿದ್ಯಮಾನಗಳು.

‘ಎರಡು ತೆಂಗಿನ ಮರದುದ್ದದ ಮನುಷ್ಯ’ ಕತೆಯ ನಾಯಕ ಸೃಷ್ಟಿಯ ಪ್ರತಿಯೊಂದು ವಿದ್ಯಮಾನವೂ ಬುದ್ಧಿಶಕ್ತಿಯ ಅಧೀನವಾಗಬೇಕೆಂದು ಬಯಸುವವನು. ಅದಕ್ಕಾಗಿ ಅವನು ತನ್ನ ಎಲ್ಲ ಪ್ರಶ್ನೆಗಳನ್ನೂ ಒಂದೇ ಪ್ರಶ್ನೆಯಾಗಿ ಹೆಣೆದು ಅದನ್ನು ತನ್ನ ತಲೆಯ ಮೇಲೆ ಹೊತ್ತುಕೊಳ್ಳುತ್ತಾನೆ. ಹಾಗೆ ಹೊತ್ತುಕೊಂಡದ್ದೇ ಎರಡು ತೆಂಗಿನ ಮರದುದ್ದದಷ್ಟು ಎತ್ತರವಾಗುತ್ತಾನೆ. ಪರಿಹಾರಕ್ಕಾಗಿ ವಾಸ್ತವ ಜಗತ್ತಿನ ಎಲ್ಲ ಮಾರ್ಗಗಳನ್ನೂ ಪ್ರಯತ್ನಿಸಿ ಕಡೆಗೆ ಅವನು ಪಡೆದುಕೊಳ್ಳುವ ಉತ್ತರ ಯಾರೂ ಓದಲಾಗದ, ಲಿಪಿಯೇ ಇಲ್ಲದ ಭಾಷೆಯಲ್ಲಿರುತ್ತದೆ. ಅವನು ಪ್ರಶ್ನೆಗಳನ್ನು ಕೇಳುವುದು ಎಷ್ಟು ನಿಜವೋ ಅವನು ಉತ್ತರಗಳನ್ನು ಹುಡುಕುವುದೂ ಅಷ್ಟೇ ವಾಸ್ತವಿಕವಾದದ್ದು. ಆದರೆ ಭೂಮಂಡಲವನ್ನೂ ಒಳಗೊಂಡು ಇಡೀ ವಿಶ್ವದ ಬಗ್ಗೆ ನಾವು ಕೇಳುವ ಎಲ್ಲ ಪ್ರಶ್ನೆಗಳಿಗೂ ಉತ್ತರವಿಲ್ಲ. ನಾವು ಬದುಕಿನ ಅರ್ಥವೇನೆಂದು ತಿಳಿಯಬಯಸುವುದು ಕೂಡ ಒಂದು ಅರ್ಥರಹಿತ ಪ್ರಯತ್ನ. ಈ ಕತೆಯಲ್ಲಿ ಇಂಥ ವಿಚಾರಗಳೇ ಒಂದು ರೂಪಕವಾಗಿ ಆಕಾರ ಪಡೆದುಕೊಳ್ಳುತ್ತವೆ.

ಕಥಾ ಸಾಹಿತ್ಯದಲ್ಲಿ ಬಳಕೆಯಾಗುವ ನಿರೂಪಣಾ ತಂತ್ರ, ಕಥಾಸಂವಿಧಾನ, ಅನಿರೀಕ್ಷಿತ ಮುಕ್ತಾಯ, ಪ್ರಯೋಗಶೀಲತೆ, ಅಚ್ಚರಿ ಹುಟ್ಟಿಸುವ ಪರಿಣಾಮ ಮೊದಲಾದವುಗಳನ್ನು ಅಧ್ಯಯನಮಾಡಿದಾಗ ಸೃಜನಶೀಲ ಸಾಹಿತ್ಯ ಓದುಗರನ್ನು ಹೇಗೆಲ್ಲ ಬದಲಾಯಿಸುವುದೆಂದು, ತತ್ಪರಿಣಾಮವಾಗಿ ಓದುಗರು ಏನೆಲ್ಲ ಬದಲಾವಣೆಗಳನ್ನುಅಪೇಕ್ಷಿಸುತ್ತಾರೆಂದು ನಮಗೆ ಸ್ಪಷ್ಟವಾಗುತ್ತದೆ. ಕವಿ ಎಸ್ರಾ ಪೌಂಡ್ ಬರೆದ ಕವಿತೆಯೊಂದರ ಸಾಲು: ‘ಏಜ್ ಡಿಮ್ಯಾಂಡೆಡ್ ಅನ್ ಇಮೇಜ್ ಆಫ್ ಇಟ್ಸ್ ಆಕ್ಸೆಲರೇಟೆಡ್ ಗ್ರಿಮೇಸ್….’ ಇದರ ಅರ್ಥ ಒಂದು ಕಾಲಘಟ್ಟವನ್ನು ಅರ್ಥಮಾಡಿಕೊಳ್ಳುವುದಕ್ಕೆ ಹೊಸದೊಂದೇ ಪ್ರತಿಮೆ ಅಗತ್ಯವೆನ್ನುವುದು. ಈ ದೃಷ್ಟಿಯಿಂದ ನೋಡಿದಾಗ ಪ್ರಭು ನಮ್ಮ ಕಾಲಕ್ಕೊಂದು ಅರ್ಥಪೂರ್ಣ ಪ್ರತಿಮೆ ಒದಗಿಸಿದರೆನ್ನಬೇಕು.

‘ಬೆತ್ತಲೆ ಅರಸನ ರಾಜ ರಹಸ್ಯ’ ಆಡಳಿತ ವ್ಯವಸ್ಥೆಯನ್ನು ಪ್ರತಿನಿಧಿಸುವ ಅರಸನಿಂದ ಪ್ರಾರಂಭವಾಗಿ ಅವನ ಅಸ್ವಸ್ಥತೆ ಹೇಗೆ ಇಡೀ ದೇಶದ ಅಸ್ವಸ್ಥತೆಗೆ ಕಾರಣವಾಗುವದೆಂದು ಸಾಂಕೇತಿಕವಾಗಿ ಚಿತ್ರಿಸುತ್ತದೆ. ದೇಶ, ಆಡಳಿತ, ಕಲೆ, ಜೀವನ, ವಿಕೃತ ಮನಸ್ಸು, ನಿರಂಕುಶತೆ ಮೊದಲಾದುವುಗಳನ್ನು ಪರಿಶೋಧಿಸುವ ಈ ಕತೆಯಲ್ಲಿ ರಾಜನ ಮೈಯುರಿ, ಅದರ ಶಮನಕ್ಕಾಗಿ ಕವಿಗಳು ರಚಿಸುವ ಶೃಂಗಾರ ಕಾವ್ಯ, ಅವನ ಚುಚ್ಚುಗಣ್ಣಿನ ಇರಿತಕ್ಕೆ ಸಿಕ್ಕಿ ಪ್ರಜ್ಞೆ ಕಳೆದುಕೊಳ್ಳುವ ಹೆಣ್ಣುಗಳು, ಅರಮನೆಯಿಂದ ತಪ್ಪಿಸಿಕೊಂಡ ಮಧುಚಂದ್ರನಂತಹ ಕವಿಗಳೇ ಆ ಹೆಣ್ಣುಗಳಿಗೆ ಪ್ರಾಣವೂಡಿ ಮತ್ತೆ ದೇಶದ ಸ್ವಾಸ್ಥ್ಯವನ್ನು ಕಾಪಾಡಬೇಕಾದ ಸ್ಥಿತಿ, ಇವು ಎಲ್ಲವೂ ವ್ಯವಸ್ಥೆಯೊಂದು ಒಳಗೇ ಕೊಳೆಯತೊಡಗಿದಾಗ ಅದಕ್ಕೆ ಯಾವುದೇ ಮದ್ದಿಲ್ಲವೆಂಬ ವಿಚಾರವನ್ನು ಧ್ವನಿಸುತ್ತವೆ. ರಾಜ ಬೆತ್ತಲಾಗುವ ಕ್ರಿಯೆಯಲ್ಲಿಯೇ ಇದರ ಸೂಚನೆಯಿದೆ.

ಸ್ಮೃತಿ-ವಿಸ್ಮೃತಿಗಳ ಭಿತ್ತಿಯಲ್ಲಿ ವ್ಯಕ್ತಿಯೊಬ್ಬನ ಸುಪ್ತಮನಸ್ಸಿನ ಮಹಾಲೋಕವನ್ನು ತೆರೆದಿಡುವ ಕತೆ ‘ಪಾತಾಳದಿಂದತ್ತ ಆಕಾಶದಿಂದತ್ತ’. ಈ ಕತೆಯ ವೆಂಕಟಗಿರಿ ತನ್ನ ನೆನಪಿನ ಶಕ್ತಿಯಿಂದ ಬಾಲ್ಯಕಾಲಕ್ಕೆ ಹೇಗೋ ಹಾಗೆ ಪೂರ್ವಜನ್ಮಕ್ಕೂ ಹೋಗಿಬರಬಲ್ಲ; ಯಾವುದೋ ಜನ್ಮದಲ್ಲಿ ತಾನೊಬ್ಬ ಮಹಾನುಭಾವನಾಗಿರಲೇಬೇಕೆಂದು ಭ್ರಮಿಸಬಲ್ಲ. ಅನಿರೀಕ್ಷಿತವಾಗಿ ಸಿಕ್ಕುವ ಉಂಗುರವನ್ನು ಹಾಕಿಕೊಂಡದ್ದೇ ಅವನಿಗೆ ತನ್ನ ಶಾಲೆಯ ಗೆಳತಿ ಶಕುಂತಲೆಯ ನೆನಪಾಗಿ ತನ್ನ ವರ್ತಮಾನದಲ್ಲೂ ಬೆಂಬಿಡದಿದ್ದ ಭೂತದಿಂದ ಬಿಡುಗಡೆಯಾಗುತ್ತದೆ. ಕಾಲದ ಅನಂತತೆಯನ್ನು ಕುರಿತು, ಅದರ ಹಿಮ್ಮುಖ ಮುಮ್ಮುಖ ಚಲನೆಯನ್ನು ಕುರಿತು, ಅದು ಮನುಷ್ಯರ ಮೇಲೆ ಉಂಟುಮಾಡುವ ಪರಿಣಾಮವನ್ನು ಕುರಿತು ಒಂದು ಸಂಕೀರ್ಣಾನುಭವವನ್ನು ನೀಡುವ ಈ ಕತೆ ಪ್ರಭು ಅವರ ಮಹತ್ವಾಕಾಂಕ್ಷೆಯ ಸೃಷ್ಟಿ.

‘ಮುಖಾಬಿಲೆ’ ಎಂಬ ಕತೆಯಲ್ಲಿ ವ್ಯಕ್ತಿಯ ಅಸ್ತಿತ್ವ ಮತ್ತು ಅನನ್ಯತೆಗಳ ಪ್ರಶ್ನೆ ಇದೆ. ಗೋಪಾಲಕೃಷ್ಣ ಅಡಿಗರ ‘ಮೂಲಕ ಮಹಾಶಯರು’ ಎಂಬ ಕವನದ ಆಶಯವನ್ನು ಇನ್ನೊಂದು ಮಗ್ಗುಲಿನಿಂದ ಪರಿಶೀಲಿಸುವ ಈ ಕತೆ ಬೇರೆಯವರ ಮುಖಗಳನ್ನು ಅನುಕರಿಸುತ್ತ ತನ್ನತನವನ್ನೇ ಕಳೆದುಕೊಳ್ಳುವ “ಅವನ ಮುಖದ ಮೇಲ್ಮೈ ಲಕ್ಷಣಗಳು ಪಾತ್ರಗಳ ತುಳಿತದ ಆಘಾತಕ್ಕೆ ಸಿಕ್ಕಿ ಆಕಾರಗಳನ್ನು ನೀಗಿಕೊಂಡು ಅಂಗಾಂಗಗಳ ಸೀಮಾರೇಖೆಗಳು ಅಳಿಸಿಹೋಗಿ, ಮುಖ ಕುತ್ತಿಗೆಯ ಮೇಲೆ ಡಬ್ಬು ಹಾಕಿದ ವಿಕೃತ ಮಡಕೆಯಂತಾಯಿತು.”
ಫ್ಯಾಂಟಸೀ ಕತೆಗಳು ಪರಿಚಿತವಾದದ್ದನ್ನು ಅಪರಿಚಿತಗೊಳಿಸಬಲ್ಲ ರೂಪಾಂತರವನ್ನು ಸಾಧಿಸುವುದಕ್ಕಾಗಿ ಎಷ್ಟೆಲ್ಲ ಬಗೆಗಳಲ್ಲಿ ಕನ್ನಡಿಗಳನ್ನು, ಗಾಜುಗಳನ್ನು, ಪ್ರತಿಫಲನಗಳನ್ನು ಬಳಸುತ್ತವೆಯೆಂಬುದು ನಿಜಕ್ಕೂ ಆಶ್ಚರ್ಯಕರ. ವಲೇರಿ ಬ್ರುಸೋಫ್ ಬರೆದ ‘ದಿ ಮಿರರ್’, ಸ್ಟೀವನ್ಸನ್ನನ ‘ಡಾಕ್ಟರ್ ಜೆಕಿಲ್ ಅಂಡ್ ಮಿಸ್ಟರ್ ಹೈಡ್’, ಆಸ್ಕರ್ ವೈಲ್ಡನ ‘ಪಿಕ್ಚರ್ ಆಫ್ ಡೊರಿಯನ್ ಗ್ರೇ’ ಮೊದಲಾದ ಕೃತಿಗಳಲ್ಲಿ ಕನ್ನಡಿಯದೇ ನಿರ್ಣಾಯಕ ಕ್ರಿಯೆ. ಪ್ರಭು ಬರೆದ ‘ಗರ’ ಕತೆಯ ನಾಯಕ ಲೋಕಯ್ಯನಿಗೂ ಕನ್ನಡಿಗಳ ಹುಚ್ಚು. ಒಂದು ದಿನ ಕನ್ನಡಿಯೊಂದನ್ನು ಒರೆಸುತ್ತಿರುವಾಗ ಅವನಿಗೆ ತನ್ನ ನಾಲಗೆಯಲ್ಲಿರುವ ‘ಕಪ್ಪಗಿನ ಒಂದು ರೂಪಾಯಿ ಅಗಲದ ಮಚ್ಚೆ’ಕಾಣಿಸುತ್ತದೆ. ಅದು ಅವನ ಸುಪ್ತ ಕಾಮದ ಪ್ರತೀಕವಾಗಿ ಉದ್ದುದ್ದ ಬೆಳೆಯುತ್ತ, ತನ್ನ ಸಂಪರ್ಕಕ್ಕೆ ಬಂದವರೆಲ್ಲರನ್ನೂ ಸ್ಪರ್ಶಿಸಿ ಅವರನ್ನು ಮುಜುಗರಕ್ಕೆ ಈಡುಮಾಡುತ್ತದೆ. ಕನಸು-ವಾಸ್ತವಗಳು ಕಲಸಿಕೊಂಡಂತಿರುವ ಈ ಕತೆಯಲ್ಲಿ ಲೋಕಯ್ಯ ಜನ್ಮ ಜನ್ಮಾಂತರಗಳನ್ನು ಹಾದು ಬರುವ ಕ್ರಮವೇ ಕುತೂಹಲಕರ. ಮಧ್ಯ ವಯಸ್ಸಿನಲ್ಲಿರುವ ಅವನು ತನ್ನ ಬಾಲ್ಯಕ್ಕೆ ಹಿಂತಿರುಗುತ್ತಾನೆ, ಸತ್ತ ತಂದೆ ಮತ್ತೆ ಜೀವ ತಳೆದು ಅವನನ್ನು ಎಚ್ಚರಿಸುತ್ತಾನೆ, ಹನ್ನೆರಡು ವರ್ಷಗಳ ಹಿಂದೆ ಕಾಲವಾದ ಪುರಾತನ ಮುದುಕಿ ಗುಂಡಜ್ಜಿ ಅವನ ವಂಶಚರಿತ್ರೆಯನ್ನು ನಿರೂಪಿಸುತ್ತಾಳೆ. ಈ ಅಲೌಕಿಕ ಘಟನೆಗಳು ಭೂತಕಾಲದ ಬೀಜ ಭವಿಷ್ಯದಲ್ಲಿರಬಹುದೆಂಬ ಸಂದೇಹಕ್ಕೆ ಪೂರಕವಾಗಿಯೇ ನಡೆಯುತ್ತವೆ. ಒಟ್ಟಿನಲ್ಲಿ ಇದೊಂದು ಜನ್ಮಾಂತರದ ಕತೆಯಾಗಿರುವಂತೆ ಒಬ್ಬ ಮನುಷ್ಯನ ಮಾನಸ ಸಂಚಾರದ ಕತೆಯೂ ಹೌದು.

‘ಅವಸ್ಥಾಂತರ’ ಕತೆಯಲ್ಲಿ ಮುದಿ ದಾರ್ಶನಿಕನೊಬ್ಬ ಲೋಕರಹಸ್ಯಗಳನ್ನು ಚಿಂತಿಸುತ್ತ ಸುದೀರ್ಘ ಕಾಲ ಬದುಕಿರಬೇಕೆಂಬ ತನ್ನ ಒಳ ಮನಸ್ಸಿನ ಅತಿಯಾಸೆಗೆ ಬಲಿಯಾಗುವ ಚಿತ್ರವಿದೆ. ಅವನು ಚಿಟ್ಟೆ, ನಾಯಿ, ಕುದುರೆ, ಹಕ್ಕಿ, ಮೊಸಳೆ, ಆನೆ, ಹಾವು, ಆಮೆ, ಹೀಗೆ ಬಗೆಬಗೆಯ ಅವತಾರಗಳನ್ನು ತಳೆದು ಕೊನೆಗೆ ಬ್ರಹ್ಮನೇ ಆಗಿ ಸರ್ವನಾಶಕ್ಕೆ ಕಾರಣನಾಗುವುದು ಮನುಷ್ಯ ಕಲ್ಪನೆಯ ವ್ಯಾಪಕತೆಗೊಂದು ಅಲಿಗರಿಯಾಗುತ್ತದೆ. ‘ಹಕ್ಕಿಗಳು ಮತ್ತು ಕೈಗಳು’ಒಂದು ನಾಗರಿಕತೆಯ ಅಧಃಪತನವನ್ನು ಸೂಚಿಸುವ, ಮನುಷ್ಯನ ಅತಿಯಾಸೆಯ ಪರಿಣಾಮಗಳನ್ನು ಶೋಧಿಸುವ ಒಂದು ಸಾಂಕೇತಿಕ ಕತೆ. ಸಂತೋಷ ಸಮೃದ್ಧಿಗಳಿಂದ ತುಂಬಿ ತುಳುಕುವ ಶಾಲ್ಮಲೀ ದ್ವೀಪದಲ್ಲಿ ಹಿಂದೆಂದೋ ಅಳಿದುಹೋದ ‘ಡೋಡೊ’ಹಕ್ಕಿಗಳನ್ನು ನೆನಪಿಸುವಂಥ ಕಲವಿಂಕ ಪಕ್ಷಿಗಳಿವೆ. ಈ ಪಕ್ಷಿಗಳ ಸಂಪರ್ಕದಲ್ಲಿರುವವರೆಗೂ ಮನುಷ್ಯರ ಸುಖ, ನೆಮ್ಮದಿಗಳಿಗೆ ಬಾಧಕವಿಲ್ಲ. ಆದರೆ ಮನುಷ್ಯನ ಆಕ್ರಮಣಶೀಲತೆ, ಅವನ ಆಸೆಬುರುಕತನ, ಸುಖವೆನ್ನುವ ಮರೀಚಿಕೆಯನ್ನು ಸೃಷ್ಟಿಸುವ ವಿಜ್ಞಾನ ಮೊದಲಾದುವು ಆ ಪಕ್ಷಿಗಳನ್ನು ಹಾರಿಹೋಗುವಂತೆ ಮಾಡುವ ಮೂಲಕ ಆ ದ್ವೀಪದ ಸ್ವಾಸ್ಥ್ಯವನ್ನು ಕೆಡಿಸುತ್ತವೆ. ನೆಲದಲ್ಲಿರುವ ಪಕ್ಷಿಗಳು ನೆಮ್ಮದಿಯನ್ನು ಸಂಕೇತಿಸಿದರೆ ಮನುಷ್ಯ ಉದ್ದುದ್ದ ಬೆಳೆಸಿಕೊಳ್ಳುವ ಕೈಗಳು ಅವನ ವೈಜ್ಞಾನಿಕ ಆಶೋತ್ತರಗಳನ್ನು ಸಂಕೇತಿಸುತ್ತವೆ. ಪರಿಸರನಾಶವನ್ನು ಕುರಿತು ಚರ್ಚಿಸಲಾಗುತ್ತಿರುವ ನಮ್ಮ ಕಾಲದಲ್ಲಿ ಈ ಕತೆ ಮನುಷ್ಯನ ಬಗ್ಗೆ, ಪರಿಸರದ ಬಗ್ಗೆ ಹೊಸದೊಂದು ಜಿಜ್ಞಾಸೆಯನ್ನು ಹುಟ್ಟಿಸುವಂತಿದೆ.

ಸ್ಮೃತಿ-ವಿಸ್ಮೃತಿಗಳ ಭಿತ್ತಿಯಲ್ಲಿ ವ್ಯಕ್ತಿಯೊಬ್ಬನ ಸುಪ್ತಮನಸ್ಸಿನ ಮಹಾಲೋಕವನ್ನು ತೆರೆದಿಡುವ ಕತೆ ‘ಪಾತಾಳದಿಂದತ್ತ ಆಕಾಶದಿಂದತ್ತ’. ಈ ಕತೆಯ ವೆಂಕಟಗಿರಿ ತನ್ನ ನೆನಪಿನ ಶಕ್ತಿಯಿಂದ ಬಾಲ್ಯಕಾಲಕ್ಕೆ ಹೇಗೋ ಹಾಗೆ ಪೂರ್ವಜನ್ಮಕ್ಕೂ ಹೋಗಿಬರಬಲ್ಲ; ಯಾವುದೋ ಜನ್ಮದಲ್ಲಿ ತಾನೊಬ್ಬ ಮಹಾನುಭಾವನಾಗಿರಲೇಬೇಕೆಂದು ಭ್ರಮಿಸಬಲ್ಲ. ಅನಿರೀಕ್ಷಿತವಾಗಿ ಸಿಕ್ಕುವ ಉಂಗುರವನ್ನು ಹಾಕಿಕೊಂಡದ್ದೇ ಅವನಿಗೆ ತನ್ನ ಶಾಲೆಯ ಗೆಳತಿ ಶಕುಂತಲೆಯ ನೆನಪಾಗಿ ತನ್ನ ವರ್ತಮಾನದಲ್ಲೂ ಬೆಂಬಿಡದಿದ್ದ ಭೂತದಿಂದ ಬಿಡುಗಡೆಯಾಗುತ್ತದೆ. ಕಾಲದ ಅನಂತತೆಯನ್ನು ಕುರಿತು, ಅದರ ಹಿಮ್ಮುಖ ಮುಮ್ಮುಖ ಚಲನೆಯನ್ನು ಕುರಿತು, ಅದು ಮನುಷ್ಯರ ಮೇಲೆ ಉಂಟುಮಾಡುವ ಪರಿಣಾಮವನ್ನು ಕುರಿತು ಒಂದು ಸಂಕೀರ್ಣಾನುಭವವನ್ನು ನೀಡುವ ಈ ಕತೆ ಪ್ರಭು ಅವರ ಮಹತ್ವಾಕಾಂಕ್ಷೆಯ ಸೃಷ್ಟಿ.

ಜೀವನದಲ್ಲಿ ವಿಶೇಷವಾದುದೇನನ್ನೂ ಸಾಧಿಸದ ಪತ್ರಕರ್ತನೊಬ್ಬನ ಸುಪ್ತಕಾಮನೆಗಳನ್ನು ಚಿತ್ರಿಸುವಕತೆ ‘ಚಿಲ್ಬಿ’. ಇದರಲ್ಲಿ ಮನುಷ್ಯರಂತೆ ಮಾತಾಡುವ, ಟೆಲಿಫೋನನ್ನು ಕೂಡ ಉಪಯೋಗಿಸಬಲ್ಲ ಒಂದು ಅಸಾಮಾನ್ಯ ಬೆಕ್ಕಿದೆ. ಅದು ಅವನ ನೀರಸ ಬದುಕನ್ನು ಸ್ವಲ್ಪಮಟ್ಟಿಗಾದರೂ ಬದಲಾಯಿಸುವ ಪ್ರಾಣಿ. ಕಥಾನಾಯಕ ಅದರ ಮಾತನ್ನು ಕೇಳಿದ್ದೇ “ನನ್ನ ಕುಂಡಲಿನಿ ಜಾಗೃತವಾಗಿದೆ. ಇದರ ಮಾತು ನನಗೆ ಅರ್ಥವಾಗುತ್ತೆ. ನನ್ನ ಮಾತನ್ನು ಇದು ಅರ್ಥಮಾಡಿಕೋತಾ ಇದೆ. ನಾನೀಗ ಸಾಮಾನ್ಯ ಮನುಷ್ಯನಲ್ಲ” ಎಂದು ಬೀಗುತ್ತಾನೆ. ಆದರೆ ಕ್ರಮೇಣ ಆ ಬೆಕ್ಕೇ ಅವನ ಅಹಂಕಾರದ ಬಲೂನನ್ನು ಚುಚ್ಚಿ ಅವನನ್ನು ಮತ್ತೆ ವಾಸ್ತವಕ್ಕೆ ಕರೆತರುವ ವ್ಯಂಗ್ಯ ಈ ಕತೆಯಲ್ಲಿದೆ.

ನಾವೊಂದು ಫ್ಯಾಂಟಾಸ್ಟಿಕ್ ಕತೆಯನ್ನು ಓದಿದಾಗ ಯಾವುದು ನಮ್ಮ ಮನಸ್ಸನ್ನು ಸೆರೆಹಿಡಿಯುತ್ತದೆ? ಬಹುಶಃ ನಾವು ಕೇವಲ ಕಲ್ಪಿಸಿಕೊಂಡದ್ದಕ್ಕೆ ನಮ್ಮ ಬದುಕಿನಲ್ಲಿ, ಅಷ್ಟೇಕೆ, ಈ ಜಗತ್ತಿನಲ್ಲಿ, ಒಂದು ಜಾಗವಿದೆಯೆಂದು ನಮ್ಮ ಮನವೊಲಿಸುವ ಅದರ ಆಶಯ. ಯಶಸ್ವಿಯಾದೊಂದು ಫ್ಯಾಂಟಾಸ್ಟಿಕ್ ಕತೆ ವಾಸ್ತವ ಜೀವನದಲ್ಲಿ ವಿವರಿಸಲಾಗದ್ದನ್ನು ಪ್ರತಿಧ್ವನಿಸಬಹುದು; ನಮ್ಮ ಕನಸುಗಳ, ಭಯಗಳ, ಸುಖಸಂತೋಷಗಳ ಆಚೆಗೆ ಏನಿದೆಯೆಂಬುದನ್ನು ಸೂಚಿಸಬಹುದು; ಕಣ್ಣಿಗೆ ಕಾಣದ್ದನ್ನು, ಮಾತಿಗೆ ಸಿಕ್ಕದ್ದನ್ನು ವಿವರಿಸಬಹುದು; ಕಡೆಗೆ ನಮ್ಮ ಜೀವನವೇ ಫ್ಯಾಂಟಾಸ್ಟಿಕ್ ಎಂದು ಸಿದ್ಧಪಡಿಸಿ ತೋರಿಸಬಹುದು. ಪ್ರಭು ಅವರ ಕೆಲವು ಕತೆಗಳು ಸಂದಿಗ್ಧದಲ್ಲಿ ಪರ್ಯವಸಾನಗೊಳ್ಳುವಂತಿವೆ. ಅದಕ್ಕೆ ಕಾರಣ ಅವರಿಗೆ ಪಾತ್ರಗಳ ಬಗ್ಗೆ ತೀರ್ಪು ಕೊಡುವ ಇರಾದೆಯಿಲ್ಲ; ಕಥೆಯ ಕ್ರಿಯೆಯಲ್ಲಿ ಇದ್ದಕ್ಕಿದ್ದಂತೆ ವ್ಯತ್ಯಯವಾಗುವುದರಿಂದ ಪಾತ್ರಗಳ ಪಾಡು ಕೊನೆಗೇನಾಗುತ್ತದೆಯೆಂಬುದನ್ನು ಓದುಗರೇ ತಮ್ಮ ಕಲ್ಪನಾಶಕ್ತಿಯಿಂದ ಮುಕ್ತಾಯಗೊಳಿಸಬೇಕು. ಅವರ ಕತೆಗಳಲ್ಲಿ ಓದುಗ ಮೊದಲೇ ಏನನ್ನೂ ನಿರೀಕ್ಷಿಸುವಂತಿಲ್ಲ. ಅವುಗಳಲ್ಲಿ ವ್ಯಂಗ್ಯವಿದೆ, ಸೂಕ್ಷ್ಮ ನಿರೀಕ್ಷಣಾ ಪ್ರತಿಭೆಯಿದೆ, ಅಪರಿಮಿತ ಸೃಜನಶೀಲತೆಯಿದೆ.

ಪ್ರಭು ಅವರ ಕತೆಗಳಲ್ಲಿ ಮನುಷ್ಯ ಜಗತ್ತಿನೊಡನೆ ತಾನು ಇಟ್ಟುಕೊಳ್ಳುವ ಸಂಬಂಧದಲ್ಲೇ ತನ್ನತನವನ್ನು ಕಂಡುಕೊಳ್ಳುತ್ತಾನೆಂಬ ಕಾಣ್ಕೆಯಿದೆ. ಸಂಬಂಧವೆನ್ನುವುದು ವೈಯಕ್ತಿಕವಾಗಿರುವಂತೆ ಸಾಮಾಜಿಕವೂ ಆಗಿರುವುದುಂಟು. ಹಾಗಾಗಿ ಅದನ್ನು ವಿವಿಧ ಮಗ್ಗುಲುಗಳಿಂದ ಪರಿಶೀಲಿಸಬೇಕಾಗುತ್ತದೆ. ಪ್ರಭು ಅವರು ತೀರ ಸಹಜವೆನ್ನಿಸುವಂಥ ಕ್ರಿಯಾಕ್ಷೇತ್ರವೊಂದನ್ನು ನೆಲೆಗೊಳಿಸಿ, ಆ ನೆಲೆಯಲ್ಲೇ ದಿನನಿತ್ಯದ ಭ್ರಾಮಕ ಅಂಶಗಳನ್ನೂ ಮನೋಲೋಕದ ವಿದ್ಯಮಾನಗಳನ್ನೂ ವಿಮರ್ಶೆಗೆ ಒಳಪಡಿಸುತ್ತಾರೆ. ಫ್ಯಾಂಟಾಸ್ಟಿಕ್ ನಿರೂಪಣಾ ವಿಧಾನದ ಯಶಸ್ಸಿರುವುದೇ ಇಲ್ಲಿ. ಫ್ರಾಂಝ್ ಕಾಫ್ಕಾ ನ ಬರಹಗಳಲ್ಲಿ ಫ್ಯಾಂಟಾಸ್ಟಿಕ್ ವಿಧಾನಕ್ಕೆ ಸೇರಬಲ್ಲ ಅನೇಕ ಗುಣಲಕ್ಷಣಗಳಿವೆಯಷ್ಟೆ. ಅವನಿದ್ದ ಐತಿಹಾಸಿಕ ಸನ್ನಿವೇಶ ಹೇಗಿತ್ತೆಂದರೆ ಅವನು ಸಮಾಜದಲ್ಲಿದ್ದೂ ಅದರಲ್ಲಿ ಭಾಗಿಯಾಗಲಾರದ ಅನಾಥ ಸ್ಥಿತಿಯನ್ನು ಅಭಿವ್ಯಕ್ತಿಗೊಳಿಸುವುದಕ್ಕಾಗಿ ಫ್ಯಾಂಟಾಸ್ಟಿಕ್ ವಿಧಾನವನ್ನೇ ನೆಚ್ಚಿಕೊಳ್ಳಬೇಕಾಯಿತು. ಅವನ ಕತೆಗಳು, ಅಸಂಪೂರ್ಣ ಕಾದಂಬರಿಗಳು ವಾಸ್ತವದ ತಳಹದಿಯ ಮೇಲೆಯೇ ಅರಳಿಕೊಳ್ಳುವ ‘ಫ್ಯಾಂಟಸೀ’ಗಳು. ‘ಮೆಟಮಾರ್ಫಸಿಸ್’ ಎಂಬ ಅವನ ಪ್ರಸಿದ್ಧ ಕತೆಯನ್ನೇ ತೆಗೆದುಕೊಳ್ಳಿ. ಅಲ್ಲಿ ನಮ್ಮ ನಿಮ್ಮಂತೆ ಮನುಷ್ಯನಾಗಿದ್ದ ಗ್ರಿಗೊರ್ ಸಾಂಸ ಒಂದು ದಿನ ಅದೆಷ್ಟು ಸಹಜ ರೀತಿಯಲ್ಲಿ ಒಂದು ಹುಳುವಾಗಿಬಿಡುತ್ತಾನೆಂದರೆ ಓದುಗನಿಗೆ ಅವನ ಆ ರೂಪಾಂತರ ಒಂದಿಷ್ಟೂ ಅಸಹಜವೆನ್ನಿಸುವುದಿಲ್ಲ. ಪ್ರಭು ಅವರ ಕತೆಗಳ ಭ್ರಾಮಕ, ಅಲೌಕಿಕ ಘಟನೆಗಳಿಗೂ ಇಂಥ ಸಹಜತೆಯ ಸ್ಪರ್ಶವಿದ್ದು, ಅವು ಹೆಚ್ಚೆಂದರೆ ಒಂದು ಬಗೆಯ ಒಡಪುಗಳಾಗುತ್ತವೆ. ಅವುಗಳನ್ನು ಬಿಡಿಸಬೇಕಾದವರು ಓದುಗರೇ.

ಸಂತೋಷ ಸಮೃದ್ಧಿಗಳಿಂದ ತುಂಬಿ ತುಳುಕುವ ಶಾಲ್ಮಲೀ ದ್ವೀಪದಲ್ಲಿ ಹಿಂದೆಂದೋ ಅಳಿದುಹೋದ ‘ಡೋಡೊ’ಹಕ್ಕಿಗಳನ್ನು ನೆನಪಿಸುವಂಥ ಕಲವಿಂಕ ಪಕ್ಷಿಗಳಿವೆ. ಈ ಪಕ್ಷಿಗಳ ಸಂಪರ್ಕದಲ್ಲಿರುವವರೆಗೂ ಮನುಷ್ಯರ ಸುಖ, ನೆಮ್ಮದಿಗಳಿಗೆ ಬಾಧಕವಿಲ್ಲ. ಆದರೆ ಮನುಷ್ಯನ ಆಕ್ರಮಣಶೀಲತೆ, ಅವನ ಆಸೆಬುರುಕತನ, ಸುಖವೆನ್ನುವ ಮರೀಚಿಕೆಯನ್ನು ಸೃಷ್ಟಿಸುವ ವಿಜ್ಞಾನ ಮೊದಲಾದುವು ಆ ಪಕ್ಷಿಗಳನ್ನು ಹಾರಿಹೋಗುವಂತೆ ಮಾಡುವ ಮೂಲಕ ಆ ದ್ವೀಪದ ಸ್ವಾಸ್ಥ್ಯವನ್ನು ಕೆಡಿಸುತ್ತವೆ. ನೆಲದಲ್ಲಿರುವ ಪಕ್ಷಿಗಳು ನೆಮ್ಮದಿಯನ್ನು ಸಂಕೇತಿಸಿದರೆ ಮನುಷ್ಯ ಉದ್ದುದ್ದ ಬೆಳೆಸಿಕೊಳ್ಳುವ ಕೈಗಳು ಅವನ ವೈಜ್ಞಾನಿಕ ಆಶೋತ್ತರಗಳನ್ನು ಸಂಕೇತಿಸುತ್ತವೆ. ಪರಿಸರನಾಶವನ್ನು ಕುರಿತು ಚರ್ಚಿಸಲಾಗುತ್ತಿರುವ ನಮ್ಮ ಕಾಲದಲ್ಲಿ ಈ ಕತೆ ಮನುಷ್ಯನ ಬಗ್ಗೆ, ಪರಿಸರದ ಬಗ್ಗೆ ಹೊಸದೊಂದು ಜಿಜ್ಞಾಸೆಯನ್ನು ಹುಟ್ಟಿಸುವಂತಿದೆ.

(ಎಸ್. ದಿವಾಕರ್)

ಪ್ರಭು ಆಗಾಗ ಕನ್ನಡಕ್ಕೆ ಅನುವಾದಿಸಿದ ಕತೆಗಳು ಅವರ ‘ಕೆಲವು ವಿದೇಶಿ ಕತೆಗಳು’ ಎಂಬ ಸಂಕಲನದಲ್ಲಿವೆ. ಈ ಕತೆಗಳಲ್ಲಿ ಒಂದು ಕತೆಯೂ ವಾಸ್ತವವಾದಿ ಮಾರ್ಗದಲ್ಲಿಲ್ಲ. ಅಂದರೆ ಪ್ರಭು ಅನುವಾದಿಸುವುದಕ್ಕಾಗಿ ಆರಿಸಿಕೊಂಡ ಎಲ್ಲ ಕತೆಗಳಲ್ಲೂ ಫ್ಯಾಂಟಸಿ ಅಂಶವೇ ಪ್ರಮುಖವಾಗಿರುವುದನ್ನು ಗಮನಿಸಬೇಕು. ಈ ಸಂಕಲನದಲ್ಲಿರುವ ಪುಷ್ಕಿನ್, ಗೊಗೋಲ್, ಹ್ಯೂಗೊ ವಾನ್ ಹಾಫ್ಮನ್ಸ್ತಾನ್, ರ್ಯೂನೊಸುಕೆ ಅಕುತಗಾವ, ಹ್ವಾನ್ ಯೋಸೆ ಅರ್ರೆಯೋಲ, ಲೂಯಿಜಿ ಪಿರಾಂಡೆಲೊ, ಗ್ಯುಂಥರ್ ಗ್ರಾಸ್, ಜುಲಿಯೊಕೋರ್ತಜಾರ್, ಇಲ್ಸೆ ಐಕಿಂಗರ್, ಜಿ.ಕೆ.ಚೆಸ್ಟರ್ಟನ್, ಜೇಮ್ಸ್ ಥರ್ಬರ್ ಮೊದಲಾದವರ ದುರಂತ-ಸುಖಾಂತ ಕತೆಗಳು ತಮ್ಮ ಪಾತ್ರಗಳ ತೀರ ನಾಜೂಕಾದ ಕ್ರೌರ್ಯ ಮತ್ತು ಹಿಂಸೆಗಳನ್ನು ಪರಿಶೋಧಿಸುತ್ತವೆ. ಅವುಗಳಲ್ಲಿರುವ ಮಾಂತ್ರಿಕತೆ, ಒಗಟು, ಚಕ್ರವ್ಯೂಹ, ಎಲ್ಲವೂ ದಿನನಿತ್ಯದ ಬದುಕಿನ ಒಂದು ಭಾಗವಾಗಿರುವಂತೆ ಭಾಸವಾಗುತ್ತವೆಯೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಬಂಡವಾಳಶಾಹಿ ಸೃಷ್ಟಿಸಿರುವ ಜಾತ್ಯತೀತ ಸಂಸ್ಕೃತಿಯಲ್ಲಿ ಆಧುನಿಕ ಫ್ಯಾಂಟಸೀ ರೂಢಿಗತವಾದದ್ದನ್ನು ಬುಡಮೇಲುಗೊಳಿಸುವ ಸಾಹಿತ್ಯವಾಗಿದೆ. ಫ್ಯಾಟಾಸ್ಟಿಕ್ ವಿಧಾನವನ್ನು ಪರಿಚಯಿಸುವುದೆಂದರೆ ಅಗಲಿಕೆ, ಅಸೌಖ್ಯ, ಅಲೌಕಿಕ ಮೊದಲಾದುವನ್ನು ತೀರ ಪರಿಚಿತವಾಗಿರುವ, ಸುಸಾಂಗತ್ಯದ ಸ್ಥಾನದಲ್ಲಿ ತಂದಿಡುವುದೆಂದೇ ಅರ್ಥ. ಸಮಕಾಲೀನ ಮನುಷ್ಯನಿಗೆ ಅವನು ಸೃಷ್ಟಿಸಿರುವ ಸಮಾಜವನ್ನು, ಅದರ ಸಂಕೀರ್ಣ ಸ್ವರೂಪವನ್ನು ತೋರಿಸಿಕೊಡಬಲ್ಲ ಹಲವು ವಿಧಾನಗಳಲ್ಲಿ ಫ್ಯಾಂಟಸೀ ಮಾರ್ಗವೂ ಒಂದು.ಈ ಮಾರ್ಗ ಕಾವ್ಯಕ್ಕೆ ಹತ್ತಿರವಾಗಿರುವುದರಿಂದ ಇಲ್ಲಿ ಯಾವುದೇ ತರ್ಕಕ್ಕೂ ಜಾಗವಿಲ್ಲ. ರಷ್ಯನ್ ಲೇಖಕ ಇವಾನ್ ತುರ್ಗೆನೆವ್ನ ಪ್ರಕಾರ “ಎರಡು ಎರಡು ನಾಲ್ಕಾಗದಿರಲಿ ಎಂಬುದೇ ಮನುಷ್ಯ ದೇವರನ್ನು ಕುರಿತು ಮಾಡುವ ಪ್ರಾರ್ಥನೆ”.

ಈ ಪುಸ್ತಕದ ಯಾವುದೇ ಪುಟವನ್ನು ತೆರೆದು ಓದಿ, ನಿಮಗೆ ತಕ್ಷಣ ಕಾಣಿಸುವುದು ಮಾಸ್ತಿಯವರಿಂದ ಮೊಗಳ್ಳಿಯವರೆಗೆ ಯಾವ ಕತೆಗಾರರಲ್ಲೂ ಕಾಣದ, ವಾಸ್ತವವಾದೀ ಕತೆಗಳಿಗಿಂತ ತೀರ ಭಿನ್ನವಾದ ಹೊಸ ಧಾಟಿ, ಹೊಸ ಪ್ರತಿಮೆ, ಹೊಸ ದೃಷ್ಟಿ; ವ್ಯಕ್ತಿನಿಷ್ಠವಾಗಿದ್ದೂ ಸಮಾಜದೃಷ್ಟಿಯನ್ನು ಬಿಟ್ಟುಕೊಡದ ಸ್ವೋಪಜ್ಞತೆ. ಕಥಾ ಸಾಹಿತ್ಯ ಹೆಚ್ಚು ಅಥೆಂಟಿಕ್ ಆಗಬೇಕೆಂಬ ಉದ್ದೇಶದಿಂದ ವಾಸ್ತವವಾದವನ್ನೇ ಗಟ್ಟಿಯಾಗಿ ಹಿಡಿದುಕೊಂಡಿರುವ, ಸಮಾಜಶಾಸ್ತ್ರೀಯ, ಮಾನವಶಾಸ್ತ್ರೀಯ ವಿವರಗಳಿಗೇ ಮನ್ನಣೆ ನೀಡಲಾಗುತ್ತಿರುವ ಈ ಕಾಲದಲ್ಲಿ ಪ್ರಭು ಅವರ ಈ ಕತೆಗಳು ಹಿಂದೆಂದಿಗಿಂತಲೂ ಇಂದು ಹೆಚ್ಚು ಅಭ್ಯಾಸಯೋಗ್ಯ. ಯಾಕೆಂದರೆ ಹೊಸ ಪೀಳಿಗೆಯ ಕತೆಗಾರರಿಗೆ ಅವು ಅನುಭವದ ಅಭಿವ್ಯಕ್ತಿಗೆ ಹೊಸ ಹಾದಿಗಳನ್ನು ತೋರಿಸಿಕೊಡುವಷ್ಟು ಶಕ್ತವಾಗಿವೆ. ವಿಪರ್ಯಾಸವೆಂದರೆ ಇದುವರೆಗೆ ಅವರ ಯಾವ ಕಥಾ ಸಂಕಲನವೂ ಪುನರ್ಮುದ್ರಣಗೊಳ್ಳದಿದ್ದದ್ದು, ಈ ಹಿನ್ನೆಲೆಯಲ್ಲಿ ಅವರ ಎಲ್ಲ ಕತೆಗಳನ್ನೂ ಒಳಗೊಂಡಿರುವ ಪ್ರಸ್ತುತ ಸಂಕಲನ ನಿಜಕ್ಕೂ ಸ್ವಾಗತಾರ್ಹ. ಇದು ಹೊಸ ಪೀಳಿಗೆಯ ಓದಿಗೂ ವಿಮರ್ಶಕರ ಮರುಓದಿಗೂ ನೆರವಾಗುವುದರಲ್ಲಿ ಸಂಶಯವಿಲ್ಲ.

(ಕಲಾಕೃತಿಗಳು: ಸಲ್ವಾಡರ್ ಡಾಲಿ, ಸ್ಪೇನ್ ನ ಪ್ರಖ್ಯಾತ ಸರ್ರಿಯಲಿಸ್ಟ್ ಕಲಾವಿದ)