ನಾ ಸಿಕ್ಕಲಿಲ್ಲ

ನನಗೆ ಗೊತ್ತು
ನೀನು ಹುಡುಕುತ್ತಿದ್ದೆ
ಆದರೆ..
ನನ್ನನ್ನಲ್ಲ
ನಾ ನಿನಗೆ
ಸಿಕ್ಕಲಿಲ್ಲ

ಕಟ್ಟೆಯ ಕೆಳಗೆ
ಮೆಟ್ಟಿಲ ಪಕ್ಕ
ಬಚ್ಚಲಲ್ಲಿ
ಹಿತ್ತಲಲ್ಲಿ
ಯಲ್ಲೆಂದರಲ್ಲಿ
ಎಲ್ಲಿ ಹುಡುಕಿದರೂ
ನಾ ಸಿಕ್ಕಲಿಲ್ಲ

ತಿಳಿಯಲಿಲ್ಲ ನಾನೇನೆಂದು
ನಿನಗೆ
ನೀನೇನೆಂದು ತಿಳಿಯಲಿಲ್ಲ
ನನಗೆ,
ತಿಳಿಯುವ ಜರೂರತ್ತು
ಇರಲಿಲ್ಲ
ಇಬ್ಬರಿಗೂ
ನಾ ನಿನಗೆ
ನೀ ನನಗೆ
ಸಿಕ್ಕಲಿಲ್ಲ

ಪುರಾತನ ಸಿಕ್ಕುಗಳಲ್ಲಿ
ಸಿಕ್ಕಿದ್ದೆವು
ನಾವಿಬ್ಬರೂ
ಬಿಡಿಸಿಕೊಳ್ಳಬೇಕಿನ್ನು
ಸಿಕ್ಕುಗಳ ಬಾಚಿ
ಒಬ್ಬರನ್ನೊಳಬ್ಬರು ಹೊಕ್ಕು
ಹುಡುಕಿದರೂ
ಸಿಕ್ಕಲಿಲ್ಲ

ಭುವಿಮುಗಿಲಿಗೆಷ್ಟು
ಅಂತರ?
ಹಿಗ್ಗಿದಷ್ಟೂ ಕುಗ್ಗಿದೆವು
ಬಸಿರುಗಟ್ಟುವ ಸಂಜೆ
ಮತ್ತೆ ನೀ ನೆನಪಾದೆ
ಆದರೆ ನಾ ನಿನಗೆ
ನೀ ನನಗೆ
ಎಂದೂ ದಕ್ಕುವುದೂ
ಇಲ್ಲ