ನಮಗೆ ಸಿರಿತನವನ್ನು ತಂದುಕೊಟ್ಟ ಯಂತ್ರಗಳು ನಮ್ಮನ್ನು ದೀನರನ್ನಾಗಿಸಿ ಬೇಡುವ ಸ್ಥಿತಿಗಿಳಿಸಿವೆ. ನಮ್ಮ ಜ್ಞಾನ ನಮ್ಮನ್ನು ಸಿಡುಕರನ್ನಾಗಿಸಿದೆ. ನಮ್ಮ ಜಾಣತನ, ನಮ್ಮನ್ನು ಕಟುಕರನ್ನಾಗಿ, ನಿರ್ದಯಿಗಳನ್ನಾಗಿ ಮಾಡಿದೆ. ನಾವು ಅತಿಯಾಗಿ ಆಲೋಚಿಸುತ್ತೇವೆ; ತುಂಬಾ ಕಡಿಮೆ ಸಂವೇದಿಸುತ್ತೇವೆ. ನಮಗೀಗ ಯಂತ್ರಜ್ಞಾನಕ್ಕಿಂತಲೂ ಹೆಚ್ಚಾಗಿ ಮಾನವೀಯತೆ ಬೇಕಾಗಿದೆ. ಜಾಣತನಕ್ಕಿಂತ ಹೆಚ್ಚಿಗೆ ಕರುಣೆ ಮತ್ತು ಮಾರ್ದವತೆಗಳ ಅಗತ್ಯವಿದೆ. ಗುಣಗಳಿಲ್ಲದೆ ಬದುಕು ಬರ್ಬರವಾಗಿ, ಎಲ್ಲವನ್ನೂ ಕಳೆದುಕೊಂಡಿದ್ದೇವೆ.
ಎನ್.ಬಿ. ಚಂದ್ರಮೋಹನ್‌ ಅನುವಾದಿಸಿದ ಚಾರ್ಲಿ ಚಾಪ್ಲಿನ್‌ ನ ‘ದಿ ಗ್ರೇಟ್ ಡಿಕ್ಟೇಟರ್ ನ ಮುಕ್ತಾಯದ ಭಾಷಣ

 

ಚಾಪ್ಲಿನ್‍ ನ ಅತ್ಯಂತ ಮಹತ್ವದ ‘ದಿ ಗ್ರೇಟ್ ಡಿಕ್ಟೇಟರ್’ ಚಿತ್ರದ ಮುಕ್ತಾಯ ಭಾಷಣದ ಒಂದೊಂದು ಸಾಲೂ ಇಂದಿನ ಮನುಷ್ಯನ ಸ್ವಯಂಕೃತಾಪರಾಧಗಳ ಬಿಕ್ಕಟ್ಟಿಗೆ ಸಿದ್ಧ ಉತ್ತರಗಳಂತಿದೆ. ನಾಜಿಗಳ ಕ್ರೌರ್ಯದ ನಡುವೆಯೇ ದಿಕ್ಕೆಟ್ಟ ಮನುಕುಲದ ಸಮಷ್ಟಿ ಅಭಿವ್ಯಕ್ತಿಯೆಂಬಂತೆ ಈ ಚಿತ್ರ ರೂಪುಗೊಂಡದ್ದು ನೂರಾರು ಚಳವಳಿಗಳಿಗೆ ಸಮನೆಂಬಂತೆ, ಸಾಹಸ, ಅದ್ಭುತ ಕಲೆಗಾರಿಕೆ ಮತ್ತು ಸಹಜ ಮಾನವ ಕಾಳಜಿಗಳ ಫಲವಾಗಿ, ಸ್ಥಳ, ಕಾಲ, ಸನ್ನಿವೇಶಗಳು ಬದಲಾಗಿದ್ದರೂ ಈ ಕ್ಷಣಕ್ಕೂ ಜನಾಂಗಶಾಹೀ ಕ್ರೌರ್ಯದ ಭಯ, ತಲ್ಲಣ, ಅಸಹಾಯಕತೆಗಳ ಕಪಿಮುಷ್ಟಿಯಿಂದ ಜಗತ್ತು ಪಾರಾಗಿಲ್ಲ. ಹಾಗಾಗಿಯೇ ಈ ಮುಕ್ತಾಯ ಭಾಷಣದ ಓದು ಅರಿವುಗಳ ಪ್ರಸ್ತುತತೆ ಹಿಂದಿಗಿಂತಲೂ ಈಗ ಹೆಚ್ಚಿದೆ; ಅನಿವಾರ್ಯವಾಗಿದೆ, ಯಂತ್ರ ನಾಗರೀಕತೆಯ ಅಪಾಯಗಳನ್ನು ಮುಂದಾಗಿ ಗ್ರಹಿಸಿದ ಉದಾತ್ತ ಉನ್ನತ ಪ್ರತಿಭೆ ಚಾರ್ಲಿ ಚಾಪ್ಲಿನ್.

ಟಿಪ್ಪಣಿ:

ಮೊದಲ ಮಹಾಯುದ್ಧದ ನೋವುಗಳು ಗಾಯಗಳು ಇನ್ನೂ ಹಸಿಯಾಗಿಯೇ ಇದ್ದುವು. ಆಗಲೇ ಎರಡನೇ ಮಹಾಯುದ್ಧದ ಕರಾಳ ಛಾಯೆ ಆವರಿಸತೊಡಗಿತ್ತು. ಆ ಸಮಯದಲ್ಲಿ ಚಾಪ್ಲಿನ್ ತನ್ನ ಪ್ರಿಯತಮೆ ಪೌಲೆಟ್ಟಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಒಂದು ರಮ್ಯ ಕಥಾನಕದ ಕಲ್ಪನೆಗೆ ತೊಡಗಿದ. ಆದರೆ ಅವನೇ ಹೇಳುವಂತೆ ಅಡಾಲ್ಫ್ ಹಿಟ್ಲರನ ಪ್ರಚ್ಛನ್ನ ವಿಕಟಾಕೃತಿ ಪಕ್ಕದಲ್ಲಿಯೇ ವಿಜೃಂಭಿಸುತ್ತಿರುವಾಗ, ಪ್ರೇಮ ಮತ್ತು ಪ್ರೀತಿಗಳನ್ನು ಕುರಿತು ಯೋಚಿಸುವುದು ಹೇಗೆ ಸಾಧ್ಯವಾದೀತು, ಇದರ ಜತೆಗೆ ವೈಯಕ್ತಿಕ ಬದುಕಿನಲ್ಲಿ ಪೌಲೆಟ್ಟಿಯೊಂದಿಗೆ ಕೆಲವು ಭಿನ್ನಾಭಿಪ್ರಾಯಗಳು ಮೂಡಿ, ಚಾಪ್ಲಿನ್ ಅಸಮಾಧಾನಿಯಾಗಿದ್ದ.

ಗೆಳೆಯ ಅಲೆಕ್ಸಾಂಡರ್ ಕೋಡಾರ್ ಒಮ್ಮೆ ಹೀಗೆ ಪ್ರಸ್ತಾಪಿಸಿ, ಹಿಟ್ಲರನನ್ನು ದೃಷ್ಟಿಯಲ್ಲಿರಿಸಿಕೊಂಡು, ತದ್ರೂಪ ಪ್ರಮಾದವನ್ನಾಧರಿಸಿದ ಕಥೆಯೊಂದನ್ನು ರಚಿಸಲು ಸೂಚಿಸಿದ್ದ. ಆದರೆ ಆರಂಭದಲ್ಲಿ ಸ್ವತಃ ಚಾಪ್ಲಿನ್ ಈ ಬಗ್ಗೆ ಅಷ್ಟೇನೂ ಆಸಕ್ತಿ ವಹಿಸಲಿಲ್ಲ. ಆದರೆ ಮುಂದೆ ತಾನು ಕಲ್ಪಿಸಿದ್ದ ಸಜ್ಜನ, ಕವಿ, ಕನಸುಗಾರ ಹಾಗೂ ಸೊಗಸಿನ ಬಗ್ಗೆ ಅನಂತವಾದ ನಂಬಿಕೆ ಇರುವ “ಪೋಕರಿ” (Tramp)ಮತ್ತು ಹಿಟ್ಲರನ ಮೀಸೆಗಳ ಸಾಮ್ಯದ ಬಗ್ಗೆ ಪ್ರಸ್ತಾಪಿಸಿ, ಚಾಪ್ಲಿನನೇ ಎರಡೂ ಪಾತ್ರಗಳನ್ನು ನಿರ್ವಹಿಸಬಹುದಾದ ಸಾಧ್ಯತೆ ವ್ಯಕ್ತವಾದಾಗ ಚಾಪ್ಲಿನ್ ಇಂಥದೊಂದು ಚಿತ್ರ ನಿರ್ಮಾಣಕ್ಕೆ ಪೂರ್ಣವಾಗಿ ಆಕರ್ಷಿತನಾದ.

“ದಿ ಗ್ರೇಟ್ ಡಿಕ್ಟೇಟರ್” ಚಿತ್ರ ನಿರ್ಮಾಣದ ಆರಂಭದಿಂದಲೂ ಚಾಪ್ಲಿನ್ ಆತಂಕಗಳನ್ನು ಅನುಭವಿಸುವುದು ಅನಿವಾರ್ಯವಾಯಿತು. ಸೆನ್ಸಾರಿನ ತೊಂದರೆಗೆ ಸಿಲುಕಿಕೊಳ್ಳಬಹುದಾದ ಊಹೆಗಳು ಹರಡಿದ್ದವು. ಇಂಗ್ಲೆಂಡ್ ಮತ್ತು ಅಮೆರಿಕೆಗಳಲ್ಲಿ ಇಂಥದೊಂದು ಚಿತ್ರಪ್ರದರ್ಶನಗೊಳ್ಳಬಹುದಾದ ಸಾಧ್ಯತೆಯ ಬಗೆಗೇ ಸಂಶಯಗಳನ್ನು ಬಿತ್ತಲಾಯಿತು. ಏನೇ ಇದ್ದರೂ ಚಾಪ್ಲಿನ್ ಹಿಟ್ಲರನನ್ನು ಗೇಲಿ ಎಬ್ಬಿಸಲೇಬೇಕೆಂದು ನಿರ್ಧರಿಸಿಯಾಗಿತ್ತು. ಆದರೆ ಮುಂದೆ ಅವನೇ ಹೇಳಿದಂತೆ “ನಾಜಿಗಳ ಕೂಟ ಶಿಬಿರಗಳಲ್ಲಿನ ಕ್ರೌರ್ಯದ ಬಗ್ಗೆ ಪೂರ್ಣ ತಿಳಿದಿದ್ದಲ್ಲಿ, ಈ ನರರಾಕ್ಷಸನ ಬಗ್ಗೆ ಕೇವಲ ತಮಾಷೆ ಮಾಡುವುದು ಸಾಧ್ಯವಿರುತ್ತಿರಲಿಲ್ಲವೇನೋ” ಅಂತೂ ನಾಜಿಗಳ ಶುದ್ಧ ರಕ್ತದ ಸಂತತಿಯ ಪರಿಕಲ್ಪನೆಯನ್ನು, ನಗೆಪಾಟಲು ಮಾಡಿ, ಅವರ ಪೊಳ್ಳು ಪ್ರತಿಷ್ಠೆಯ ಉಬ್ಬನ್ನು ಚುಚ್ಚಬೇಕೆಂದು ಚಾಪ್ಲಿನ್ ನಿಶ್ಚಯಿಸಿದ್ದ.

ಚಿತ್ರವನ್ನು ಪೂರೈಸುವುದು ಸುಲಭದ ಕೆಲಸವೇನೂ ಆಗಲಿಲ್ಲ. ಚಿತ್ರಮುಗಿದ ಮುನ್ನವೇ ಬ್ರಿಟನ್ ನಾಜಿಗಳ ಮೇಲೆ ಯುದ್ಧವನ್ನು ಘೋಷಿಸಿತ್ತು. ಅಮೆರಿಕವಂತೂ ಇನ್ನೂ ನೇರವಾಗಿ ಯುದ್ಧವನ್ನು ಪ್ರವೇಶಿಸಿರಲಿಲ್ಲ. ಮುಂದೆ ಚಾರಿತ್ರಿಕವಾಗಿ “ಮಿತ್ರರಾಷ್ಟ್ರ”ಗಳ ಯಾದಿಯಲ್ಲಿ ಮುಂಚೂಣಿಗೆ ನಿಂತು ಹಿಟ್ಲರನ ವಿರುದ್ಧ ಯುದ್ಧ ಸಾರಿದ ಅಮೆರಿಕ ಮತ್ತು ಇಂಗ್ಲೆಂಡ್‍ ಗಳು ಸೈದ್ಧಾಂತಿಕ ಬದ್ಧತೆಯಿಂದೇನೂ ನಾಜಿಗಳನ್ನು ವಿರೋಧಿಸುತ್ತಿರಲಿಲ್ಲ. ರಶಿಯಾವನ್ನು ಆಕ್ರಮಿಸುವ ಹಿಟ್ಲರನ ನಿರ್ಧಾರ ಪ್ರಕಟವಾದಾಗ, ಮೊದಮೊದಲು ಇವೆರಡೂ ದೇಶಗಳು ನೆಮ್ಮದಿಯನ್ನೇ ಪಡೆದಿರಬಹುದು. ಇಂಥ ಪರಿಸ್ಥಿತಿಯಲ್ಲಿ ಹಿಟ್ಲರನನ್ನು ಗೇಲಿ ಎಬ್ಬಿಸುವ ಚಿತ್ರದ ಬಗ್ಗೆ ಅವುಗಳಿಂದ ಉತ್ತೇಜನ ನಿರೀಕ್ಷಿಸುವುದು ಹೇಗೆ ಸಾಧ್ಯ? ಆದರೆ ಮುಂದೆ ಯುದ್ಧ ತೀವ್ರಗೊಂಡಾಗ ಮಾತ್ರ ಚಿತ್ರವನ್ನು ಪೂರ್ಣಗೊಳಿಸಲು ಸಂದೇಶಗಳು ಬರತೊಡಗಿದವು.

ಚಿತ್ರದ ಪೂರೈಕೆಗೆ ದೊಡ್ಡ ಮೊತ್ತವೇ ಬೇಕಾಗಿತ್ತು. ಪೂರ್ವ ಸಿದ್ಧತೆಗಳಿಗೇ ಸಾಕಷ್ಟು ವೆಚ್ಚವಾಗಿತ್ತು. ಚಿತ್ರ ಪೂರೈಸಿ ಪ್ರದರ್ಶನಕ್ಕೆ ಸಿದ್ಧವಾಗುತ್ತಲೇ ಬೆದರಿಕೆಯ ಕರೆಗಳು ಹೆಚ್ಚಾದವು. ಪ್ರದರ್ಶನವಾದರೆ ಬಾಂಬ್‍ ಗಳನ್ನು ಎಸೆಯುವ ಬೆದರಿಕೆಗಳೂ ಬಂದವು. ಆದರೆ ಚಿತ್ರ ಪ್ರದರ್ಶನಗೊಂಡಾಗ ಇದೇನೂ ಆಗಲಿಲ್ಲ. ಬದಲಿಗೆ ಜನ ಅತ್ಯದ್ಭುತವಾಗಿ ಸ್ವಾಗತಿಸಿದರು. ಹಣಗಳಿಕೆಯ ದೃಷ್ಟಿಯಿಂದಲೂ, ಹಿಂದೆ ಇದ್ದ ಅಂಜಿಕೆ ತಪ್ಪಿತು. ಆದರೆ ಕೆಲವು ಪತ್ರಿಕಾ ವಿಮರ್ಶೆಗಳು ಮಾತ್ರ ಮಿಶ್ರ ಪ್ರತಿಕ್ರಿಯೆ ತೋರಿದವು. ಕೆಲವಂತೂ ಸರ್ವಾಧಿಕಾರಿಯ “ಮುಕ್ತಾಯ ಭಾಷಣ” ಅಪ್ರಸ್ತುತವೆಂದು ಅಪಸ್ವರ ತೆಗೆದವು. ಅಲ್ಲಿನ ಮಾತುಗಳು “ಕಮ್ಯೂನಿಸಮ್ಮಿನ ಕಡೆಗೆ ಬೊಟ್ಟು ಮಾಡುತ್ತಿವೆ” ಎಂದು ಬೊಬ್ಬೆ ಹಾಕಿದರು. ಆದರೆ ಜನ ಮಾತ್ರ ಅದನ್ನು ಇಡಿಯಾಗಿ ಮೆಚ್ಚಿದರು.

ಅಂದಿನ ಹಾಲಿವುಡ್‍ ನ ಪ್ರಮುಖ ನಿರ್ದೇಶಕರಲ್ಲಿ ಒಬ್ಬನಾಗಿದ್ದ ಅರ್ಜಿ ಎಲ್‍ಮೇಯೋ ಇಡೀ ಭಾಷಣವನ್ನು ಕ್ರಿಸ್‍ಮಸ್ ಶುಭಾಶಯದ ಕಾರ್ಡ್‍ ನಲ್ಲಿ ಮುದ್ರಿಸಲು ಅನುಮತಿ ಕೋರಿದ. ಭಾಷಣದ ಬಗ್ಗೆ ಅವನು ಹೀಗೆ ಬರೆಯುತ್ತಾನೆ: “ನಾನು ಲಿಂಕನ್ನನ ಕಾಲದಲ್ಲಿ ಬದುಕಿದ್ದರೆ, ಖಂಡಿತವಾಗಿಯೂ, ಅವನ ಗೆಟ್ಟಿಸ್‍ಬರ್ಗ್ ಭಾಷಣವನ್ನು ನಿಮಗೆ ಕಳಿಸುತ್ತಿದ್ದೆ. ಏಕೆಂದರೆ ಅದು ಆ ಕಾಲದ ಅತ್ಯಂತ ಸ್ಫೂರ್ತಿದಾಯಕ ಮತ್ತು ಮಹತ್ವದ ಸಂದೇಶವನ್ನು ಒಳಗೊಂಡಿತ್ತು. ಇಂದು ಬೇರೆ ತೆರನ ಬಿಕ್ಕಟ್ಟನ್ನು ನಾವು ಎದುರಿಸುತ್ತಿದ್ದೇವೆ. ಈಗ ಮತ್ತೊಬ್ಬ, ಹೃದಯದಾಳದಿಂದ ಪ್ರಾಮಾಣಿಕ ಕಳಕಳಿಯ ಮಾತುಗಳನ್ನಾಡಿದ್ದಾನೆ. ನನಗೆ ಅವನು ಹೆಚ್ಚಿಗೇನೂ ತಿಳಿಯದಿದ್ದರೂ, ಅವನ ಮಾತುಗಳು ನನ್ನನ್ನು ತೀವ್ರವಾಗಿ ತಟ್ಟುತ್ತವೆ. ನಾನು ಅದರಿಂದ ಸ್ಫೂರ್ತಿಗೊಂಡಿದ್ದೇನೆ. ನೀವು ಕೂಡ ಆ ಭರವಸೆಯ ಭಾವದಲ್ಲಿ ಪಾಲುಗಾರರಾಗಿರಬಹುದೆಂದು ನಂಬಿ ಚಾರ್ಲಿ ಚಾಪ್ಲಿನ್ ಭಾಷಣದ ಪೂರ್ಣ ಸಾರವನ್ನು ನಿಮಗೆ ಕಳುಹಿಸಿಕೊಡುತ್ತಿದ್ದೇನೆ…..”

ಇಂದಿಗೂ ಕೂಡ ನಮಗೆ ಅವನ ಹಾಗೆಯೇ ಅನ್ನಿಸುತ್ತಿದೆ. ಈ ಮಾತುಗಳ ಬಗೆಗಿನ ಅಂಥ ಒಂದು ನಿರಂತರ ಪ್ರಸ್ತುತತೆ ಅತ್ಯಂತ ಮೆಚ್ಚುಗೆಯ ವಿಷಯವೇನೋ ನಿಜ. ಆದರೆ ಬದಲಾಗದಿರುವ ನಮ್ಮ ಬದುಕಿನ ಪರಿಸ್ಥಿತಿಯ ಬಗ್ಗೆ ಭಯ ಮತ್ತು ನಾಚಿಕೆಗಳೂ ಉಂಟಾಗಬಹುದೇನೊ. ಅದೇನೇ ಇರಲಿ, ಮತ್ತೊಮ್ಮೆ ಮೆಲುಕು ಹಾಕಬೇಕೆನ್ನಿಸಿದ್ದರಿಂದ ಗ್ರೇಟ್ ಡಿಕ್ಟೇಟರನ….. ಮುಕ್ತಾಯದ ಭಾಷಣವನ್ನು ಇಲ್ಲಿ ಅನುವಾದಿಸಲು ಪ್ರಯತ್ನಪಟ್ಟಿದ್ದೇನೆ.

“ನಾಜಿಗಳ ಕೂಟ ಶಿಬಿರಗಳಲ್ಲಿನ ಕ್ರೌರ್ಯದ ಬಗ್ಗೆ ಪೂರ್ಣ ತಿಳಿದಿದ್ದಲ್ಲಿ, ಈ ನರರಾಕ್ಷಸನ ಬಗ್ಗೆ ಕೇವಲ ತಮಾಷೆ ಮಾಡುವುದು ಸಾಧ್ಯವಿರುತ್ತಿರಲಿಲ್ಲವೇನೋ” ಅಂತೂ ನಾಜಿಗಳ ಶುದ್ಧ ರಕ್ತದ ಸಂತತಿಯ ಪರಿಕಲ್ಪನೆಯನ್ನು, ನಗೆಪಾಟಲು ಮಾಡಿ, ಅವರ ಪೊಳ್ಳು ಪ್ರತಿಷ್ಠೆಯ ಉಬ್ಬನ್ನು ಚುಚ್ಚಬೇಕೆಂದು ಚಾಪ್ಲಿನ್ ನಿಶ್ಚಯಿಸಿದ್ದ.

ಭಾಷಣದ ಅನುವಾದ:

ಕ್ಷಮಿಸಿ. ಚಕ್ರವರ್ತಿಯಾಗುವುದನ್ನು ನಾನೆಂದೂ ಬಯಸುವುದಿಲ್ಲ. ಅದು ನನ್ನ ವ್ಯವಹಾರವಲ್ಲ. ಯಾರನ್ನಾದರೂ ಆಕ್ರಮಿಸಲು ಅಥವ ಆಳಲು ನಾನು ಇಷ್ಟಪಡಲಾರೆ. ಸಾಧ್ಯವಾದಷ್ಟೂ, ಎಲ್ಲರಿಗೂ ಸಹಾಯ ಮಾಡಲು ಮಾತ್ರ ಬಯಸುತ್ತೇನೆ. ಯಹೂದಿಗಳು, ಕ್ರೈಸ್ತರು, ಕರಿಯರು, ಬಿಳಿಯರು – ಎಲ್ಲರಿಗೂ ಸಾಧ್ಯವಿದ್ದಷ್ಟೂ ನೆರವಾಗಲು ಇಚ್ಛಿಸುತ್ತೇನೆ.

ನೀವೆಲ್ಲ ಒಬ್ಬರಿಗೊಬ್ಬರು ನೆರವಾಗಬೇಕು. ಮಾನವ ಜೀವಿಗಳೇ ಹೀಗಿರಬೇಕು. ನಾವು ಸಂತೋಷದಲ್ಲಿ ಬದುಕಬೇಕಿರುವುದು ಒಬ್ಬ ಮತ್ತೊಬ್ಬನ ಪೀಡನೆಯಿಂದಲ್ಲ. ಒಬ್ಬನು ಮತ್ತೊಬ್ಬನನ್ನು ದ್ವೇಷಾಸೂಯೆಗಳಿಂದ ನೋಡುವುದು ಬೇಡ. ಈ ವಿಶ್ವದಲ್ಲಿ ಪ್ರತಿಯೊಬ್ಬನಿಗೂ ಅವಕಾಶವಿದೆ. ಪ್ರತಿಯೊಬ್ಬನಿಗೂ ಸಾಕುಗುವಷ್ಟನ್ನು ಕೊಡುವಷ್ಟು ಈ ಸುಂದರ ಪೃಥ್ವಿ ಸಮೃದ್ಧವಾಗಿದೆ. ಬಾಳುವೆಯ ಹಾದಿ ಸೌಂದರ್ಯ ಮತ್ತು ಸ್ವಾತಂತ್ರ್ಯದ್ದು. ಆದರೆ ನಾವು ದಾರಿ ತಪ್ಪಿದ್ದೇವೆ. ದುರಾಸೆ ಮನುಷ್ಯರ ಆತ್ಮಗಳನ್ನು ವಿಷಪೂರಿತವಾಗಿಸಿದೆ. ಜಗತ್ತನ್ನು ದ್ವೇಷ ಅಸೂಯೆಗಳಿಂದ ಸೀಳಿದೆ. ನಮ್ಮನ್ನು ರಕ್ತಪಾತ ಮತ್ತು ಸಂಕಟಗಳಲ್ಲಿ ಮುಳುಗಿಸಿಬಿಟ್ಟಿದೆ. ನಾವು ವೇಗವನ್ನು ವರ್ಧಿಸಿದ್ದೇವೆ. ಆದರೆ ನಮ್ಮನ್ನು ನಾವು ಒಳಗೆ ಕದವಿಕ್ಕಿ ಬಂಧಿಸಿಕೊಂಡಿದ್ದೇವೆ.

ನಮಗೆ ಸಿರಿತನವನ್ನು ತಂದುಕೊಟ್ಟ ಯಂತ್ರಗಳು ನಮ್ಮನ್ನು ದೀನರನ್ನಾಗಿಸಿ ಬೇಡುವ ಸ್ಥಿತಿಗಿಳಿಸಿವೆ. ನಮ್ಮ ಜ್ಞಾನ ನಮ್ಮನ್ನು ಸಿಡುಕರನ್ನಾಗಿಸಿದೆ. ನಮ್ಮ ಜಾಣತನ, ನಮ್ಮನ್ನು ಕಟುಕರನ್ನಾಗಿ, ನಿರ್ದಯಿಗಳನ್ನಾಗಿ ಮಾಡಿದೆ. ನಾವು ಅತಿಯಾಗಿ ಆಲೋಚಿಸುತ್ತೇವೆ; ತುಂಬಾ ಕಡಿಮೆ ಸಂವೇದಿಸುತ್ತೇವೆ. ನಮಗೀಗ ಯಂತ್ರಜ್ಞಾನಕ್ಕಿಂತಲೂ ಹೆಚ್ಚಾಗಿ ಮಾನವೀಯತೆ ಬೇಕಾಗಿದೆ. ಜಾಣತನಕ್ಕಿಂತ ಹೆಚ್ಚಿಗೆ ಕರುಣೆ ಮತ್ತು ಮಾರ್ದವತೆಗಳ ಅಗತ್ಯವಿದೆ. ಈ ಗುಣಗಳಿಲ್ಲದೆ ಬದುಕು ಬರ್ಬರವಾಗಿ, ಎಲ್ಲವನ್ನೂ ಕಳೆದುಕೊಂಡಿದ್ದೇವೆ.

ವಿಮಾನಗಳು ಮತ್ತು ರೇಡಿಯೋಗಳು, ನಮ್ಮನ್ನು ಹತ್ತಿರಗೊಳಿಸಿವೆ. ಇವೆಲ್ಲವುಗಳ ಮೂಲ ಸ್ವಭಾವ ಮನುಷ್ಯನ ಅಂತರಾಳದ ಒಳಿತಿಗಾಗಿ ಆಕ್ರಂದಿಸುತ್ತದೆ, ವಿಶ್ವಭ್ರಾತೃತ್ವಕ್ಕಾಗಿ ನಮ್ಮೆಲ್ಲರ ಐಕ್ಯತೆಗಾಗಿ ಆಕ್ರಂದಿಸುತ್ತದೆ. ಈಗಲೂ ನನ್ನ ದನಿ, ಜಗತ್ತಿನ ಲಕ್ಷೋಪಲಕ್ಷ ಜನರನ್ನು ತಲುಪುತ್ತಿದೆ ಲಕ್ಷಾಂತರ ಹತಾಶ ಜೀವಿಗಳನ್ನು ಹೆಂಗಸರನ್ನು ಮತ್ತು ಪುಟ್ಟ ಮಕ್ಕಳನ್ನು ಮುಗ್ಧಜನರನ್ನು ಸೆರೆಗಿಕ್ಕಿ ಮನುಷ್ಯರನ್ನು ಹಿಂಸೆಗೆ ತಳ್ಳುವ ಕ್ರೂರ ವ್ಯವಸ್ಥೆಗೆ ಬಲಿಯಾದವರನ್ನು ಮುಟ್ಟುತ್ತಿದೆ. ನನ್ನ ದನಿ ಕೇಳಿಸುವ ಅವರೆಲ್ಲರಿಗೆ ನಾನು ಹೇಳುತ್ತೇನೆ “ಹತಾಶರಾಗಬೇಡಿ…. ನಮ್ಮ ಮೇಲೆ ಬಂದಿರುವ ಸಂಕಟ ಕೇವಲ ದುರಾಸೆಯ ಮತ್ತು ಮಾನವ ಪ್ರಗತಿಯ ಪಥದಿಂದ ಭಯಗೊಂಡ ಜನರಿಂದ ಸಂಭವಿಸಿದ್ದು. ಮನುಷ್ಯರ ದ್ವೇಷ ಕಳೆಯುತ್ತದೆ, ಸರ್ವಾಧಿಕಾರಿಗಳು ಸಾಯುತ್ತಾರೆ. ಜನರಿಂದ ಅವರು ಕಸಿದುಕೊಂಡ ಸ್ವಾತಂತ್ರ್ಯ ಮತ್ತೆ ಜನರಿಗೇ ದೊರಕುತ್ತದೆ. ಎಲ್ಲಿಯವರೆಗೆ ಮನುಷ್ಯರಿಗೆ ಸಾವು ತಪ್ಪುವುದಿಲ್ಲವೋ ಅಲ್ಲಿಯವರೆಗೂ ಸ್ವಾತಂತ್ರ್ಯ ಅವಿನಾಶಿಯಾಗುಳಿಯುತ್ತದೆ.

ಸೈನಿಕರೆ, ಈ ಕ್ರೂರಿಗಳಿಗೆ ನಿಮ್ಮನ್ನು ನೀವು ಮಾರಿಕೊಳ್ಳಬೇಡಿ. ನಿಮ್ಮನ್ನು ಹತಾಶರಾಗಿಸುವ ಇವರು ಗುಲಾಮರಾಗಿಸುವ ಇವರು ನಿಮ್ಮ ಬದುಕನ್ನು ಪಗಡೆಯಾಗಿಸುವ ಇವರು ನೀವು ಏನು ಮಾಡಬೇಕೆಂದು ಹೇಳುವವರು ಏನನ್ನು ಯೋಚಿಸಬೇಕೆಂದು, ಏನನ್ನು ಭಾವಿಸಬೇಕೆಂದು ಹೇಳುತ್ತಾರೆ; ನಿಮ್ಮನ್ನು ಕವಾಯಿತು ಮಾಡಿಸುತ್ತಾರೆ. ಪಥ್ಯವಿಡುತ್ತಾರೆ, ದನಗಳಂತೆ ಕಾಣುತ್ತಾರೆ ಮತ್ತು ಫಿರಂಗಿಗಳ ಬಾಯಿಯ ಮೇವಾಗಿ ಬಳಸುತ್ತಾರೆ. ಈ ಅಸಹಜ ಮನುಷ್ಯರಿಗೆ ಯಂತ್ರಬುದ್ಧಿಯ, ಯಂತ್ರಹೃದಯಗಳ ಈ ಯಂತ್ರಮಾನವರಿಗೆ ನಿಮ್ಮನ್ನು ನೀವು ಮಾರಿಕೊಳ್ಳಬೇಡಿ. ನೀವು ಯಂತ್ರಗಳಲ್ಲ, ನೀವು ಮನುಷ್ಯರು. ನಿಮ್ಮ ಹೃದಯಗಳಲ್ಲಿ ಮಾನವ ಪ್ರೇಮವನ್ನುಳ್ಳವರು ದ್ವೇಷಿಸಬೇಡಿ. ಪ್ರೇಮರಹಿತವಾದ ದ್ವೇಷ ಕೇವಲ ಪ್ರೇಮರಹಿತವಾದದ್ದು ಮತ್ತು ಅಸಹಜವಾದದ್ದು.

ಸೈನಿಕರೆ, ದಾಸ್ಯಕ್ಕಾಗಿ ಹೊಡೆದಾಡಬೇಡಿ. ಸ್ವಾತಂತ್ರ್ಯಕ್ಕಾಗಿ ಹೋರಾಡಿ; ಹದಿನೇಳನೆಯ ಅಧ್ಯಾಯದಲ್ಲಿ ಸಂತ ಲೂಕನು ಹೇಳಿದಂತೆ ದೇವರ ಸಾಮ್ರಾಜ್ಯ ಮನುಷ್ಯನ ಅಂತರಂಗದಲ್ಲಿಯೇ ಇದೆ. ಒಬ್ಬ ಮನುಷ್ಯನಲ್ಲಲ್ಲಾ, ಒಂದು ಗುಂಪಿನವರಲ್ಲಲ್ಲಾ, ಎಲ್ಲಾ ಮನುಷ್ಯರೊಳಗಡೆಯಲ್ಲಿ. ನಿಮ್ಮೊಳಗೆ. ನೀವು ಜನರು. ಯಂತ್ರಗಳನ್ನು ನಿರ್ಮಿಸುವ ಶಕ್ತಿ ಪಡೆದಿದ್ದೀರಿ. ಸುಖವನ್ನು ಸೃಷ್ಟಿಸಬಲ್ಲ ಶಕ್ತಿ ಪಡೆದಿದ್ದೀರಿ. ಈ ಬದುಕನ್ನು ಸುಂದರ ಮತ್ತು ಸ್ವತಂತ್ರವಾಗಿಸುವ ಶಕ್ತಿಯನ್ನು ನೀವು ಮನುಷ್ಯರಾಗಿ ಪಡೆದಿದ್ದೀರಿ. ಈ ಬದುಕನ್ನು ಒಂದು ಅದ್ಭುತ ಸಾಹಸವನ್ನಾಗಿಸುವ ಶಕ್ತಿ ಪಡೆದಿದ್ದೀರಿ. ಆಗ ಪ್ರಜಾಪ್ರಭುತ್ವದ ಹೆಸರಿನಲ್ಲಿ ನಾವು ಆ ಶಕ್ತಿಯನ್ನು ಉಪಯೋಗಿಸೋಣ. ನಾವೆಲ್ಲಾ ಒಟ್ಟಾಗೋಣ. ನಾವು ಹೊಸದೊಂದು ಜಗತ್ತಿಗಾಗಿ ಹೋರಾಡೋಣ. ಮನುಷ್ಯನಿಗೆ ದುಡಿಯಲು ಒಂದು ಅವಕಾಶವನ್ನು ನೀಡುವಂಥ ಒಂದು ಸಭ್ಯ ಜಗತ್ತು ಯೌವನಕ್ಕೊಂದು ಭವಿಷ್ಯವನ್ನು, ವೃದ್ಧಾಪ್ಯಕ್ಕೊಂದು ಭದ್ರತೆಯನ್ನು ಕೊಡಬಲ್ಲ ಜಗತ್ತು ಅದು. ಇದೇ ಭರವಸೆಗಳನ್ನು ಮುಂದಿಟ್ಟು, ಕಟುಕರೂ ಅಧಿಕಾರಕ್ಕೆ ಏರಿದ್ದಾರೆ. ಆದರೆ ಅವರು ಸುಳ್ಳು ಹೇಳುತ್ತಾರೆ. ಭರವಸೆಗಳನ್ನು ಅವರು ಎಂದಿಗೂ ಈಡೇರಿಸುವುದಿಲ್ಲ. ಅವರೆಂದೂ ಅದನ್ನು ಮಾಡುವುದಿಲ್ಲ. ಸರ್ವಾಧಿಕಾರಿಗಳು ತಮ್ಮನ್ನು ಸ್ವತಂತ್ರಗೊಳಿಸಿಕೊಳ್ಳುತ್ತಾರೆ. ಆದರೆ ಜನರನ್ನು ಗುಲಾಮರನ್ನಾಗಿಸುತ್ತಾರೆ.

ಈಗ ನಾವು ಜಗತ್ತನ್ನು ಮುಕ್ತವಾಗಿರಿಸಲು ಹೋರಾಡೋಣ. ರಾಷ್ಟ್ರೀಯ ಗಡಿಗಳನ್ನು ಅಳಿಸಿಹಾಕುವುದಕ್ಕೆ, ದುರಾಸೆಯನ್ನು ಅಳಿಸುವುದಕ್ಕೆ, ದ್ವೇಷ ಮತ್ತು ಅಸಹನೆಗಳನ್ನು ಅಳಿಸುವುದಕ್ಕಾಗಿ ಹೋರಾಡೋಣ. ನಾವು ನ್ಯಾಯನಿಷ್ಠ ಪ್ರಪಂಚಕ್ಕಾಗಿ ಹೋರಾಡೋಣ. ವಿಜ್ಞಾನ ಮತ್ತು ಪ್ರಗತಿಗಳು ನಮ್ಮೆಲ್ಲ ಸುಖದ ಕಡೆಗೆ ನಮ್ಮನ್ನು ಕರೆದೊಯ್ಯುವ ಜಗತ್ತು. ಸೈನಿಕರೇ, ಪ್ರಜಾಪ್ರಭುತ್ವದ ಹೆಸರಲ್ಲಿ ನಾವೆಲ್ಲಾ ಒಂದಾಗೋಣ.

ಹನ್ನಾ, ಕೇಳಿಸುತ್ತಿದೆಯಲ್ಲವೆ! ನೀನು ಎಲ್ಲಿಯೇ ಇರು. ನೋಡು ನೋಡು ಹನ್ನಾ, ಮೋಡಗಳು ಸರಿಯುತ್ತಿವೆ. ಸೂರ್ಯ ಮೂಡುತ್ತಿದ್ದಾನೆ. ನಾವು ಕತ್ತಲಿಂದ ಹೊರಬಂದು, ಬೆಳಕಿನ ಕಡೆಗೆ ಹೊರಟಿದ್ದೇವೆ. ನಾವು ಹೊಸದೊಂದು ಜಗತ್ತಿಗೆ ಬಂದಿದ್ದೇವೆ. ಕರುಣೆಯಿಂದ ಕೂಡಿದ ಜಗತ್ತು ಮನುಷ್ಯರು ತಮ್ಮ ಲೋಭಗಳನ್ನು, ದ್ವೇಷ ಕ್ರೌರ್ಯಗಳನ್ನು ಮೀರಿನಿಂತ ಜಗತ್ತು. ನೋಡು ಹನ್ನಾ, ಮನುಷ್ಯನ ಆತ್ಮ ರೆಕ್ಕೆಗಳನ್ನು ಪಡೆದು ಹಾರಲು ಹೊರಟಿದೆ. ಅವನೀಗ ಕಾಮನಬಿಲ್ಲಿಗೆ, ಭರವಸೆಯ ಬೆಳಕಿಗೆ ಹಾರುತ್ತಿದ್ದಾನೆ. ನೋಡು ಹನ್ನಾ, ನೋಡು.