ಕೊನ್ನೊಗ್ವಾಡೆಯೆಸ್ಕಿ ಬುಲೆವಾಕ್ಕೆ, ಎರಡು ದಿನದ ಹಿಂದೆ ಹುಡುಗಿ ಸಿಕ್ಕಿದ್ದಳಲ್ಲ, ಅದೇ ಬೀದಿಗೆ ತಿರುಗುವಾಗ, ಅವನ ನಗು ಹೊರಟು ಹೋಯಿತು. ಬೇರೆಯ ಯೋಚನೆಗಳು ತಲೆ ಎತ್ತುವುದಕ್ಕೆ ಶುರುಮಾಡಿದವು. ಆ ದಿನ ಆ ಹುಡುಗಿ ಹೋದ ಮೇಲೆ ಬಹಳ ಹೊತ್ತು ಕೂತು ಯೋಚನೆ ಮಾಡಿದ್ದೆನಲ್ಲಾ ಆ ಬೆಂಚಿನ ಹತ್ತಿರ ಹೋಗುವುದು ಬೇಡ ಅನ್ನಿಸಿತು. ಅವನು ಇಪ್ಪತ್ತು ಕೊಪೆಕ್ ಕೊಟ್ಟಿದ್ದ ಮೀಸೆ ಪೋಲೀಸಿನವನು ಮತ್ತೆ ಕಣ್ಣಿಗೆ ಬಿದ್ದರೆ ಕಷ್ಟವಾಗತ್ತೆ ಅನ್ನಿಸಿತು.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಎರಡನೆಯ ಭಾಗದ ಎರಡನೆಯ ಅಧ್ಯಾಯ

 

‘ಈಗಾಗಲೇ ಹೋಗಿ ಸರ್ಚುಮಾಡಿದ್ದರೆ? ನಾನು ರೂಮಿಗೆ ಹೋದಾಗ ಅವರು ಅಲ್ಲಿದ್ದರೆ?’

ರೂಮು ಹಾಗೇ ಇತ್ತು. ಯಾರೂ ಬಂದಿರಲಿಲ್ಲ, ಏನೂ ಆಗಿರಲಿಲ್ಲ. ನಸ್ತಾಸ್ಯ ಕೂಡ ಏನೂ ಮುಟ್ಟಿರಲಿಲ್ಲ. ದೇವರೇ! ಆ ವಸ್ತುಗಳನ್ನೆಲ್ಲ ಅದು ಹೇಗೆ ತಾನೇ ಆ ತೂತಿನಲ್ಲಿ ಬಿಟ್ಟು ಹೋದನೋ?

ಆ ಮೂಲೆಗೆ ಧಾವಿಸಿದ. ವಾಲ್ ಪೇಪರಿನ ಹಿಂದೆ ಕೈ ಹಾಕಿ ಅಲ್ಲಿದ್ದದ್ದನ್ನೆಲ್ಲ ತೆಗೆದು ಜೇಬಿಗೆ ತುಂಬಿಕೊಂಡ. ಒಟ್ಟು ಎಂಟು ಇದ್ದವು.

ಅವೆಲ್ಲವನ್ನೂ ಕೋಟಿನ, ಪ್ಯಾಂಟಿನ ಬೇರೆ ಬೇರೆ ಜೇಬುಗಳಲ್ಲಿ ತೀರ ಎದ್ದು ಕಾಣದ ಹಾಗೆ ಅಡಗಿಸಿಟ್ಟ. ಜೊತೆಗೆ ಪರ್ಸನ್ನೂ ತೆಗೆದುಕೊಂಡ. ಬಾಗಿಲು ಹಾಗೇ ಬಿಟ್ಟು ರೂಮಿನಿಂದ ಹೊರಟ. ಗಟ್ಟಿ ಮನಸ್ಸು ಮಾಡಿದ್ದ. ಚುರುಕಾಗಿ ಹೆಜ್ಜೆ ಹಾಕಿದ. ‘ನುಚ್ಚು ನೂರಾಗಿದ್ದೇನೆ,’ ಎಂದು ಒಳಗೊಳಗೇ ಅನಿಸುತಿದ್ದರೂ ಪೂರಾ ಎಚ್ಚರವಾಗಿದ್ದ. ಬೆನ್ನು ಹತ್ತಿ ಬಂದಾರೆಂಬ ಭಯವಿತ್ತು. ‘ಇನ್ನರ್ಧ ಗಂಟೆಯೊಳಗೆ, ಇಲ್ಲಾ ಇನ್ನು ಕಾಲುಗಂಟೆಯೊಳಗೆ, ಮೇಲಿನಿಂದ ಆರ್ಡರು ಬರುತ್ತದೆ, ನನ್ನ ಮೇಲೆ ನಿಗಾ ಇಡುತ್ತಾರೆ, ಅಷ್ಟರೊಳಗೆ ಎಲ್ಲ ಸುಳಿವು ಅಡಗಿಸಬೇಕು, ಈಗಲೇ ಎಚ್ಚರವಿರುವಾಗ, ಶಕ್ತಿ ಇರುವಾಗ…’ ಹೋಗುವುದಾದರೂ ಎಲ್ಲಿಗೆ?

ಅದನ್ನ ಬಹಳ ಹಿಂದೆಯೇ ತೀರ್ಮಾನ ಮಾಡಿದ್ದ. ‘ಎಲ್ಲಾನೂ ಕಾಲುವೆಗೆ ಎಸೆಯಬೇಕು, ನೀರು ಕೊಚ್ಚಿಕೊಂಡು ಹೋಗಿ ಸಾಕ್ಷಿ ಎಲ್ಲ ಮಾಯವಾಗತವೆ, ಮುಗೀತು.’ ಹಿಂದಿನ ರಾತ್ರಿ ಸನ್ನಿಯ ಸ್ಥಿತಿಯಲ್ಲಿ ಈ ತೀರ್ಮಾನ ಮಾಡಿಕೊಂಡಿದ್ದ. ಎಚ್ಚರ ಮೂಡಿದಾಗಲೆಲ್ಲ, ‘ಬೇಗ… ಬೇಗ… ಹೋಗಿ ಎಲ್ಲಾ ಎಸೆಯಬೇಕು,’ ಅಂದುಕೊಂಡು ಏಳುವ ಪ್ರಯತ್ನ ಮಾಡಿದ್ದ ನೆನಪು ಉಳಿದಿತ್ತು. ಹಾಗೆ ಎಸೆದುಬಿಡುವುದು ಮಾತ್ರ ತೀರ ಕಷ್ಟದ ಕೆಲಸವೇ ಆಯಿತು. ಎಕಟೆರಿನಿನ್ಸ್ಕಿ ಕೆನಾಲ್‌ ನ ಬದಿಯಲ್ಲಿ ಅರ್ಧ ಗಂಟೆಗಿಂತ ಹೆಚ್ಚು ಹೊತ್ತು ಸುತ್ತಾಡಿದ, ಹಾಗೆ ಸುತ್ತಾಡುತ್ತ ಕಾಲುವೆಗೆ ಇಳಿಯುವ ಮೆಟ್ಟಿಲುಗಳ ಮೇಲೆ ಒಂದು ಕಣ್ಣು ಇಟ್ಟೇ ಇದ್ದ. ಅಂದುಕೊಂಡ ಕೆಲಸ ಮಾಡುವ ಅವಕಾಶವೇ ಸಿಗಲಿಲ್ಲ. ತೆಪ್ಪಗಳು ಇರುತಿದ್ದವು ಅಥವ ಹೆಂಗಸರು ಬಟ್ಟೆ ಒಗೆಯುತಿದ್ದರು, ಇಲ್ಲಾ ದೋಣಿಗಳನ್ನು ಕೊನೆಯ ಮೆಟ್ಟಿಲ ಗೂಟಕ್ಕೆ ಕಟ್ಟಿರುತಿದ್ದರು. ಎಲ್ಲೆಲ್ಲೂ ಜನವೋ ಜನ. ಮೇಲೆ, ಸೇತುವೆಯ ಅಂಚಿನಲ್ಲಿ ನಡೆದಾಡುವ ಯಾರು ಬೇಕಾದರೂ ಎಲ್ಲಿಂದಲಾದರೂ ಅವನನ್ನು ನೋಡಬಹುದಾಗಿತ್ತು. ಉದ್ದೇಶಪೂರ್ವಕವಾಗಿ ಮೆಟ್ಟಿಲು ಇಳಿದು ಬಂದು ಕಾಲುವೆಗೆ ಏನೋ ಎಸೆದದ್ದನ್ನು ನೋಡಿದರೆ ಯಾರಿಗಾದರೂ ಸಂಶಯ ಹುಟ್ಟುತಿತ್ತು. ಪುಟ್ಟ ಡಬ್ಬಿಗಳು ಮುಳುಗದೆ ತೇಲಿದರೆ? ಹೌದು, ತೇಲುತ್ತವೆ. ಎಲ್ಲರಿಗೂ ಕಾಣುತ್ತವೆ. ಎದುರಿಗೆ ಸಿಕ್ಕವರೆಲ್ಲ ಮುಂದೆ ಹೋದಮೇಲೆ ತಿರುಗಿ ನೋಡುತಿದ್ದಾರೆ, ಎಲ್ಲರಿಗೂ ಅವನನ್ನು ನೋಡುವುದೇ ಕೆಲಸ ಅನ್ನಿಸುತಿತ್ತು. ‘ಹೌದಾ, ಇದು ನನ್ನ ಕಲ್ಪನೆಯಾ?’ ಅಂತ ಕೇಳಿಕೊಂಡ.

ನೆವಾ ಹೊಳೆಯ ಪಕ್ಕದಲ್ಲೇ ಸಾಗಿದರೆ ಒಳ್ಳೆಯದು ಅನ್ನುವುದು ಹೊಳೆಯಿತು. ಅಲ್ಲಿ ಜನ ಕಡಮೆ, ಎದ್ದು ಕಾಣುವುದಿಲ್ಲ, ಕೆಲಸ ಸುಲಭ, ಎಲ್ಲಕ್ಕಿಂತ ಹೆಚ್ಚಾಗಿ ಹೊಳೆ ತುಂಬ ದೂರ. ಆಶ್ಚರ್ಯವಾಯಿತು. ಸುಮ್ಮನೆ ತಲೆ ಕೆಡಿಸಿಕೊಂಡು, ಕಳವಳಪಟ್ಟುಕೊಂಡು ಅರ್ಧಗಂಟೆ ಅಲೆದದ್ದಾಯಿತು, ಅದೂ ಅಪಾಯ ತುಂಬಿದ ಜಾಗದಲ್ಲಿ! ಮೊದಲೇ ಯಾಕೆ ಹೊಳೆಯಲಿಲ್ಲ? ಅರೆ ನಿದ್ರೆಯಲ್ಲಿ ತೀರ್ಮಾನ ಮಾಡಿಕೊಂಡಿದ್ದೆನೆಂದು ಪೂರಾ ಅರ್ಧಗಂಟೆ ದಂಡ ಮಾಡಿದ್ದಾಯಿತು! ಮನಸ್ಸು ಚದುರುತ್ತಿದೆ, ಮರೆವು ಹೆಚ್ಚುತಿದೆ ಅನ್ನಿಸಿತು. ಬೇಗ ಹೋಗಬೇಕು!

ನೆವಾ ಹೊಳೆಯ ದಿಕ್ಕಿಗೆ ನಡೆದ. ಹೋಗುತ್ತಿರುವಾಗ ಇನ್ನೊಂದು ಯೋಚನೆ ಹುಟ್ಟಿತು. ‘ಹೊಳೆ ಯಾಕೆ? ನೀರಿಗೆ ಯಾಕೆ ಹಾಕಬೇಕು? ನದಿಯ ಪಕ್ಕದಲ್ಲೇ ದೂರ ಹೋಗಿ, ಕೊಮೆನ್ನಿ ದ್ವೀಪದಲ್ಲಿ ಎಲ್ಲಾದರೂ, ಕಾಡಿನಲ್ಲೋ, ಪೊದೆಯೊಳಗೋ ಮರದ ಕೆಳಗೋ ನೆಲ ತೋಡಿ ಬಚ್ಚಿಟ್ಟು ಜಾಗ ಗುರುತು ಮಾಡಿಕೊಂಡರೆ ಆಗದೇ? ಸ್ಪಷ್ಟವಾಗಿ ಯೋಚನೆ ಮಾಡಲು ಆಗದಿದ್ದರೂ ಇದೇ ಒಳ್ಳೆಯದು ಅನ್ನಿಸಿತು. ದ್ವೀಪಕ್ಕೆ ಹೋಗುವುದಕ್ಕಾಗಲಿಲ್ಲ. ಇನ್ನೇನೋ ಆಯಿತು. ವೋಝ್ನೆಸೆನ್ಸ್ಕಿ ಹೆದ್ದಾರಿಯಿಂದ ಚೌಕಕ್ಕೆ ಬರುವ ಹೊತ್ತಿಗೆ ಎಡಗಡೆಯಲ್ಲಿ ಯಾವುದೋ ಅಂಗಳಕ್ಕೆ ಹೋಗುವ ಓಣಿ ಕಾಣಿಸಿತು. ಓಣಿಯ ಬದಿಗೆ ಖಾಲೀ ಗೋಡೆ; ಗೇಟಿನ ಒಳಗೆ ನಾಲ್ಕು ಅಂತಸ್ತಿನ ಕಟ್ಟಡದ ಸುಣ್ಣ ಬಳಿಯದ ಗೋಡೆ. ಇನ್ನೊಂದು ಬದಿಯಲ್ಲಿ, ಖಾಲೀ ಗೋಡೆಗೆ ಸಮಾನಾಂತರವಾಗಿ ಅಂಗಳದೊಳಕ್ಕೆ ಸಾಗಿದ್ದ ಮರದ ಹಲಗೆಗಳ ಬೇಲಿ. ಇಪ್ಪತ್ತು ಹೆಜ್ಜೆಯಷ್ಟು ದೂರ ಚಾಚಿಕೊಂಡಿದ್ದ ಮರದ ಹೋರ್ಡಿಂಗು, ಮತ್ತೆ ತಟ್ಟನೆ ಎಡಕ್ಕೆ ತಿರುಗುವ ಓಣಿ.

ಇದು ಬಂದೋಬಸ್ತಾದ, ಹೆಚ್ಚು ಜನ ಓಡಾಡದ ಜಾಗ. ಒಂದಷ್ಟು ಸಾಮಗ್ರಿಗಳು ಅಲ್ಲಲ್ಲೆ ಬಿದ್ದಿದ್ದವು. ಅಂಗಳ ದಾಟಿ ಇನ್ನೂ ಹಿಂದೆ, ಮರದ ಹಲಗೆಯ ಬೇಲಿಯ ಹಿಂದೆ ಮಸಿ ಹಿಡಿದ ಕಲ್ಲಿನ ತಗ್ಗು ಚಾವಣಿ ಇರುವ ಕಟ್ಟಡ-ಎಂಥದೋ ವರ್ಕ್‍ಶಾಪು. ಕುದುರೆ ಗಾಡಿ ರಿಪೇರಿ ಮಾಡುವನದೋ, ಕಬ್ಬಿಣದ ಕೆಲಸದವನದೋ, ಅಂಗಡಿಯೋ ಅಂಥದೇ ಇನ್ನೇನೋ ಇರಬಹುದು. ಗೇಟಿನಿಂದ ಶುರುವಾಗಿ ಅಲ್ಲಿಯವರೆಗೆ ಎಲ್ಲಕ್ಕೂ ಮಸಿಯ ಧೂಳು ಮೆತ್ತಿತ್ತು. ‘ಇಲ್ಲಿ ಬಿಸಾಕಿ ಹೋದರೆ!’ ಅನ್ನುವ ಯೋಚನೆ ಅವನ ಮನಸ್ಸಿಗೆ ಬಂದಿತು. ಅಂಗಳದಲ್ಲಿ ಯಾರೂ ಕಾಣಲಿಲ್ಲ. ಗೇಟು ದಾಟಿದ. ಅಂಗಳದಲ್ಲಿ ಮರದ ಹಲಗೆಯ ಬೇಲಿಯ ಪಕ್ಕದಲ್ಲಿ ಒಂದು ತೊಟ್ಟಿ ಇತ್ತು. ಫ್ಯಾಕ್ಟರಿ ಕೆಲಸಗಾರರು, ಗಾಡಿಯವರು, ಕುದುರೆ ಸಾಕುವವರು ಇರುವಲ್ಲಿ ಕಾಣುವಂಥ ತೊಟ್ಟಿ. ಅಲ್ಲಿ ಬೇಲಿಯ ಹಲಗೆಯ ಮೇಲೆ ‘ಹತಿಕ್ರಮ ಪ್ರವೇಸ ನಿಸಿದ್ದ’ ಎಂದು ಬರೆದಿತ್ತು. ‘ಇಲ್ಲೇ ಎಲ್ಲಾದರೂ ಬಿಸಾಕಿ ಹೊರಟು ಹೋದರೆ ಆಯಿತು!’

ಇನ್ನೂ ಒಂದು ಸಾರಿ ಸುತ್ತಲೂ ನೋಡಿದ. ಆಗಲೇ ಜೇಬಿಗೆ ಕೈ ಹಾಕಿದ್ದ. ಹೊರಗಿನ ಗೋಡೆಯ ಹತ್ತಿರ, ಗೇಟು ಮತ್ತು ತೊಟ್ಟಿಯ ನಡುವಿನ ಸುಮಾರು ಎರಡು ಅಡಿ ಜಾಗದಲ್ಲಿ ದೊಡ್ಡದೊಂದು ವಡ್ಡಕಲ್ಲು, ಸುಮಾರು ಐವತ್ತು ಪೌಂಡು ತೂಕದ್ದು ರಸ್ತೆಯಂಚಿನ ಗೋಡೆಗೆ ಒರಗಿ ಬಿದ್ದಿತ್ತು. ಆ ಗೋಡೆಯ ಆಚೆಗೆ ಫುಟ್‌ಪಾತು ಇತ್ತು. ಜನ ಓಡಾಡುವ ಸದ್ದು ಕೇಳುತಿತ್ತು. ಆದರೂ ಅಲ್ಲಿ ನಡೆದಾಡುವವರಿಗೆ ಈ ಜಾಗ ಕಾಣುತ್ತಿರಲಿಲ್ಲ. ಯಾರಾದರೂ ರಸ್ತೆಯಿಂದ ಓಣಿಯಲ್ಲಿ ಬಂದು ಗೇಟು ದಾಟಿದರೆ ಇವನು ಕಾಣಿಸುತಿದ್ದ ಅಷ್ಟೆ. ಬೇಗ ಮುಗಿಸಬೇಕು ಅನ್ನುವ ಆತುರ ಹುಟ್ಟಿತು.

ಬಗ್ಗಿದ. ಕಲ್ಲನ್ನು ಎರಡೂ ಕೈಯಲ್ಲಿ ಹಿಡಿದು, ಮೈಯ ಕಸುವೆಲ್ಲ ಬಳಸಿಕೊಂಡು ಪಕ್ಕಕ್ಕೆ ಉರುಳಿಸಿದ. ಕಲ್ಲಿದ್ದ ಜಾಗದಲ್ಲಿ ನೆಲ ಪೊಳ್ಳು ಬಿದ್ದಿತ್ತು. ಜೇಬಿನಲ್ಲಿದ್ದ ವಸ್ತುಗಳನ್ನೆಲ್ಲ ಅಲ್ಲಿ ಹಾಕಿದ. ಮತ್ತೆ ಉಸಿರು ಕಟ್ಟಿ ಕಲ್ಲನ್ನು ಮೊದಲಿದ್ದ ಜಾಗಕ್ಕೆ ಉರುಳಿಸಿದ. ಮೊದಲಿದ್ದ ಹಾಗೆ. ಆದರೂ ಕಲ್ಲು ಒಂದಿಷ್ಟೆ ಮೇಲೆದ್ದ ಹಾಗೆ ಕಾಣುತಿತ್ತು. ಕಾಲಲ್ಲಿ ನೆಲ ಕೆದರಿ ಒಂದಷ್ಟು ಧೂಳು ಮಣ್ಣನ್ನು ಕಲ್ಲಿನ ಬುಡಕ್ಕೆ ದಬ್ಬಿದ. ಯಾವ ಸುಳಿವೂ ಸಿಗುವ ಹಾಗಿರಲಿಲ್ಲ.

ಅಲ್ಲಿಂದ ಹೊರಬಿದ್ದು ಚೌಕದ ಕಡೆಗೆ ಹೆಜ್ಜೆ ಹಾಕಿದ. ಅವತ್ತು ಬೆಳಗ್ಗೆ ಸ್ಟೇಶನ್ನಿನಲ್ಲಿ ಆದ ಹಾಗೇ ಈಗಲೂ ಒಂದು ಕ್ಷಣ ಸಹಿಸಲಾಗದಷ್ಟು ಸಂತೋಷ ಅವನ ಮನಸ್ಸನ್ನು ತುಂಬಿತ್ತು. ‘ಎಲ್ಲಾ ಸುಳಿವೂ ನಾಪತ್ತೆ ಮಾಡಿದೆ. ಯಾರು ತಾನೇ ಹೋಗಿ ಆ ಕಲ್ಲಿನ ಕೆಳಗೆ ನೋಡುತ್ತಾರೆ? ಆ ಮನೆ ಕಟ್ಟಿದಾಗಿನಿಂದ ಅಲ್ಲೇ ಬಿದ್ದಿದೆ ಅಂತ ಅನ್ನಿಸತ್ತೆ, ಇನ್ನೂ ಎಷ್ಟೋ ಕಾಲ ಅಲ್ಲೇ ಇರತ್ತೆ. ಅಕಸ್ಮಾತ್ ಯಾರಿಗಾದರೂ ಸಿಕ್ಕಿದರೂ ನನ್ನ ಯೋಚನೆ ಯಾಕೆ ಬರತ್ತೆ? ಮುಗಿಯಿತು! ಇನ್ನು ಯಾವ ಸಾಕ್ಷಿಯೂ ಇಲ್ಲ!’ ನಕ್ಕ. ಚೌಕಕ್ಕೆ ಹೋಗುವವರೆಗೂ ನರ್ವಸ್ ಆಗಿ, ಸದ್ದಿಲ್ಲದೆ, ತನ್ನಷ್ಟಕ್ಕೇ ನಗುತ್ತಾ ಇದ್ದೆ ಅನ್ನುವುದು ಅವನ ನೆನಪಿನಲ್ಲಿ ಉಳಿದಿತ್ತು.

ಕೊನ್ನೊಗ್ವಾಡೆಯೆಸ್ಕಿ ಬುಲೆವಾಕ್ಕೆ, ಎರಡು ದಿನದ ಹಿಂದೆ ಹುಡುಗಿ ಸಿಕ್ಕಿದ್ದಳಲ್ಲ, ಅದೇ ಬೀದಿಗೆ ತಿರುಗುವಾಗ, ಅವನ ನಗು ಹೊರಟು ಹೋಯಿತು. ಬೇರೆಯ ಯೋಚನೆಗಳು ತಲೆ ಎತ್ತುವುದಕ್ಕೆ ಶುರುಮಾಡಿದವು. ಆ ದಿನ ಆ ಹುಡುಗಿ ಹೋದ ಮೇಲೆ ಬಹಳ ಹೊತ್ತು ಕೂತು ಯೋಚನೆ ಮಾಡಿದ್ದೆನಲ್ಲಾ ಆ ಬೆಂಚಿನ ಹತ್ತಿರ ಹೋಗುವುದು ಬೇಡ ಅನ್ನಿಸಿತು. ಅವನು ಇಪ್ಪತ್ತು ಕೊಪೆಕ್ ಕೊಟ್ಟಿದ್ದ ಮೀಸೆ ಪೋಲೀಸಿನವನು ಮತ್ತೆ ಕಣ್ಣಿಗೆ ಬಿದ್ದರೆ ಕಷ್ಟವಾಗತ್ತೆ ಅನ್ನಿಸಿತು: ‘ದೆವ್ವ ಹಿಡಿಯಲಿ ಅವನನ್ನ!’

ಕೋಪ ತುಂಬಿಕೊಂಡು ಮನಸ್ಸು ಎಲ್ಲೋ ಇರುವವನ ಹಾಗೆ ಹೆಜ್ಜೆ ಹಾಕಿದ. ಅವನ ವಿಚಾರಗಳೆಲ್ಲ ಒಂದೇ ಪಾಯಿಂಟಿನ ಸುತ್ತ ಸುತ್ತುತಿವೆ ಅನಿಸುತಿತ್ತು. ಅಂಥದೊಂದು ಪಾಯಿಂಟು ಇದೆ, ಈಗ, ಈಗ, ಎರಡು ತಿಂಗಳಲ್ಲಿ ಇದೇ ಮೊದಲನೆಯ ಸಾರಿ ಅದನ್ನ ಎದುರಿಸುತಿದ್ದೇನೆ ಅನ್ನಿಸಿತು.

ತಡೆಯಲಾಗದಷ್ಟು ಸಿಟ್ಟು ಬಂದು, ‘ಹಾಳಾಗಲಿ ಎಲ್ಲಾ! ಮಾಡಿದೆ ಅಂದ ಮೇಲೆ ಮಾಡಿದೆ ಅಷ್ಟೆ. ಸಾಯಲಿ ಅವಳು. ಹೊಸ ಬದುಕಂತೆ, ಥೂ! ದೇವರೇ, ಎಷ್ಟು ಸ್ಟುಪಿಡ್ ಇದೆಲ್ಲ! ಇವತ್ತು ಎಷ್ಟು ಸುಳ್ಳು ಹೇಳಿದೆ! ಸ್ಟೇಶನ್ನಿನಲ್ಲಿ ಆ ದರಿದ್ರ ಲೆಫ್ಟಿನೆಂಟು ಇಲ್ಯಾ ಪೆಟ್ರೊವಿಚ್‌ ನ ಎದುರಿಗೆ ನಾನು ನಾಯಿ ಕುನ್ನಿ ಥರ ಬಾಲ ಆಡಿಸಿದೆ! ನನ್ನದೇ ತಪ್ಪು! ಅವರೆಲ್ಲ ಮೂರು ಕಾಸಿನವರು, ಆದರೂ ಅವರ ಕಾಲು ನೆಕ್ಕಿದೆನಲ್ಲಾ! ಹೀಗಾಗಬಾರದು, ಹೀಗಾಗಬಾರದು!’ ಅಂದುಕೊಂಡ.

ತಟ್ಟನೆ ನಿಂತ. ಸರಳವಾದ, ಹೊಸತಾದ, ಅನಿರೀಕ್ಷಿತವಾದೊಂದು ಪ್ರಶ್ನೆ ಹುಟ್ಟಿಕೊಂಡು ಅವನನ್ನು ತಬ್ಬಿಬ್ಬು ಮಾಡಿತು.

‘ಪೆದ್ದನ ಹಾಗಲ್ಲ, ವಿಚಾರವಂತನಾಗಿ ಈ ಕೆಲಸಮಾಡಿದ್ದೇ ನಿಜವಾಗಿದ್ದರೆ, ನನ್ನ ಕೆಲಸಕ್ಕೆ ನಿರ್ದಿಷ್ಟವಾದ ಗುರಿ, ಉದ್ದೇಶ ಇದ್ದದ್ದೇ ನಿಜವಾದರೆ, ಇದುವರೆಗೂ ನಾನು ಯಾಕೆ ಆ ಪರ್ಸು ತೆಗೆದು ನೋಡಿಲ್ಲ, ನನಗೇನು ಲಾಭವಾಗಿದೆ ತಿಳಕೊಂಡಿಲ್ಲ, ಈ ಹಿಂಸೆಯನ್ನೆಲ್ಲ ಯಾಕೆ ಅನುಭವಿಸತಾ ಇದೇನೆ? ಒಳಗೇನಿದೆ ಅಂತ ಇನ್ನೂ ನೋಡದೇ ಇರುವ ಪರ್ಸನ್ನು ನೀರಿಗೆಸೆಯುವುದು ಯಾಕೆ?’

ನಿಜ, ನಿಜ. ಈ ಪ್ರಶ್ನೆ ಹೊಸದೇನೂ ಅಲ್ಲ, ಮೊದಲೇ ಅವನ ತಲೆಗೆ ಬಂದಿತ್ತು. ಎಲ್ಲಾ ವಸ್ತುಗಳನ್ನೂ ಹೊಳೆಗೆ ಎಸೆಯಬೇಕೆಂದು ಅವತ್ತು ರಾತ್ರಿ ನಿರ್ಧಾರ ಮಾಡಿದಾಗ ಯಾವುದೇ ಹಿಂಜರಿಕೆ ಇರಲಿಲ್ಲ, ‘ಮಾಡಬೇಕಾದ್ದೇ ಹೀಗೆ, ಇನ್ನೇನೂ ಇಲ್ಲ,’ ಅನ್ನುವ ಭಾವವೇ ಇತ್ತು. ಅವನಿಗೆ ಗೊತ್ತಿತ್ತು, ನೆನಪಿತ್ತು, ನಿನ್ನೆಯ ದಿನ ಟ್ರಂಕಿನ ಮುಂದೆ ಕೂತು ಡಬ್ಬಿಗಳನ್ನು ಹೊರಗೆ ತೆಗೆಯುತ್ತಿರುವಾಗ ಆಗಲೇ ಈ ನಿರ್ಧಾರ ಗಟ್ಟಿಯಾಗಿತ್ತು.

‘ನನಗೆ ಖಾಯಿಲೆ, ಅದಕ್ಕೇ ನಾನೇನು ಮಾಡತಾ ಇದೇನೋ ಗೊತ್ತಾಗದೆ ಮನಸ್ಸಿಗೆ ಹಿಂಸೆ ಮಾಡಿಕೊಂಡು ಒದ್ದಾಡಿದೆ. ನಿನ್ನೆ, ಮೊನ್ನೆ, ಎಷ್ಟೊಂದು ದಿನದಿಂದ ನನಗೆ ನಾನೇ ಹಿಂಸೆಕೊಟ್ಟುಕೊಂಡೆ! ಖಾಯಿಲೆ ವಾಸಿ ಆಗತ್ತೆ, ಹುಷಾರಾಗತೇನೆ, ಹಿಂಸೆ ತಪ್ಪತ್ತೆ!’ ಅನ್ನುವ ತೀರ್ಮಾನಕ್ಕೆ ಬಂದ. ‘ಹುಷಾರಾಗದೆ ಇದ್ದರೆ? ದೇವರೇ, ಸಾಕಾಗಿ ಹೋಗಿದೆ!’ ಅಂದುಕೊಂಡ. ಎಲ್ಲೂ ನಿಲ್ಲದೆ ನಡೆದ. ‘ಮನಸ್ಸು ತಿರುಗಿಸುವುದಕ್ಕೆ ಏನಾದರೂ ಮಾಡಬೇಕು, ಏನು ಮಾಡಲಿ?’ ಹೊಳೆಯಲಿಲ್ಲ. ಒಂದೊಂದು ನಿಮಿಷ ಕಳೆದ ಹಾಗೂ ‘ಇದನ್ನು ದಾಟಿಕೊಳ್ಳಲು ಸಾಧ್ಯವೇ ಇಲ್ಲ,’ ಅನ್ನುವಂಥ ಭಾವವೊಂದು ಮನಸ್ಸನ್ನು ತುಂಬಿಕೊಳ್ಳುತ್ತಿತ್ತು. ಸುತ್ತಲೂ ಕಂಡ ಜನ, ವಸ್ತು, ಜಗತ್ತಿನ ಬಗ್ಗೆಯೇ ಹುಟ್ಟಿದ ಅಸಹ್ಯ ಭಾವ ಅವನ ಮೈಯಿಗೂ ತಿಳಿಯುತ್ತಿತ್ತು. ಜನದ ಮುಖ, ನಡಿಗೆ, ದೇಹದ ಚಲನವಲನ ಎಲ್ಲವೂ ‘ಥೂ!’ ಅನಿಸುತಿದ್ದವು. ಆ ಕ್ಷಣದಲ್ಲಿ ಯಾರಾದರೂ ಅವನನ್ನು ಮಾತಾಡಿಸಿದ್ದರೆ ಅವರ ಮೇಲೆ ಉಗುಳುತಿದ್ದ, ಅವರ ಮೇಲೆ ಬಿದ್ದು ಕಚ್ಚುತಿದ್ದ…

ವಾಸಿಲೆಯೆವ್ಸ್ಕಿ ಐಲ್ಯಾಂಡಿನ ಲಿಟಲ್ ನೇವಾದ ಏರಿಯ ಮೇಲೆ ನಡೆಯುತ್ತಿರುವಾಗ ಸೇತುವೆ ಸಿಗುತ್ತದಲ್ಲ, ಅಲ್ಲಿ ತಟ್ಟನೆ ನಿಂತ. ‘ಅವನ ಮನೆ ಇಲ್ಲೇ ಇದೆ. ತಿರುಗೀ ರಝುಮಿಖಿನ್ ಮನೆ ಹತ್ತಿರ ಬಂದಿದೇನೆ. ತಿರುಗೀ ಮತ್ತೇ ಅದೇ ಹಳೇ ಕತೆ… ಅಲ್ಲಾ, ಬರಬೇಕು ಅಂತಾ ಬಂದೆನೋ? ಸುಮ್ಮನೆ ಹೀಗೇ ಬಂದೆನೋ? ಹೇಗಾದರೂ ಒಂದೇ. ‘ಅದನ್ನ’ ಮುಗಿಸಿದ ಮಾರನೇಗೇ ಹೋಗಿ ಅವನನ್ನ ಹೋಗಿ ನೋಡಬೇಕು ಅಂದುಕೊಂಡಿದ್ದೆ. ಅಲ್ಲದೇನೇ ಈಗ ಇನ್ನು ನಡೆಯಕ್ಕೂ ಆಗಲ್ಲ…’ ಅಂದುಕೊಂಡ.
ಐದನೆಯ ಮಹಡಿಯಲ್ಲಿದ್ದ ರಝುಮಿಖಿನ್‌ ನ ರೂಮಿಗೆ ಹೋದ.

ರಝುಮಿಖಿನ್ ಮನೆಯಲ್ಲೆ ಇದ್ದ. ಬರೆಯುತ್ತ ಕೂತಿದ್ದ. ಅವನೇ ಎದ್ದು ಬಂದು ಬಾಗಿಲು ತೆಗೆದ. ಅವರು ಒಬ್ಬರನ್ನೊಬ್ಬರು ನೋಡಿ ನಾಲ್ಕು ತಿಂಗಳಾಗಿತ್ತು. ರಝುಮಿಖಿನ್ ಹರಕಲು ಡ್ರೆಸೆಂಗ್ ಗೌನು ತೊಟ್ಟಿದ್ದ. ಕಾಲುಚೀಲವಿಲ್ಲದೆ ಬರಿಯ ಶೂ ಹಾಕಿದ್ದ, ತಲೆ ಕೆದರಿತ್ತು, ಕ್ಷೌರ ಮಾಡಿರಲಿಲ್ಲ, ಸ್ನಾನ ಮಾಡಿರಲಿಲ್ಲ.

‘ಓ, ನೀನಾ?’ ಅಂದು ಗೆಳೆಯನ್ನು ತಲೆಯಿಂದ ಕಾಲಿನವರೆಗೂ ನೋಡಿ, ಸಿಳ್ಳೆ ಹಾಕಿದ. ‘ಇಷ್ಟು ಗತಿಗೆಟ್ಟಿದೀಯಾ! ನನಗಿಂತ ಅಧ್ವಾನವಾಗಿದೀಯ! ದಣಿವಾಗಿರಬೇಕು, ಕೂತುಕೋ!’ ಅಂದ.

ತನ್ನ ರೂಮಿನಲ್ಲಿದ್ದ ಸೋಫಾಕ್ಕಿತಲೂ ಕಂಗಾಲು ಸ್ಥಿತಿಯಲ್ಲಿದ್ದ ಸೋಫಾದ ಮೇಲೆ ಕುಸಿದು ಕೂತ ರಾಸ್ಕೋಲ್ನಿಕೋವ್. ಗೆಳೆಯನ ಮೈಗೆ ಹುಷಾರಿಲ್ಲ ಅನ್ನುವುದನ್ನು ರಝುಮಿಖಿನ್‌ಗೆ ಗೊತ್ತಾಯಿತು.

‘ತೀರ ಹುಷಾರಿಲ್ಲ ನಿನಗೆ, ಗೊತ್ತಿದೆಯಾ?’ ಅನ್ನುತ್ತ ನಾಡಿ ಹಿಡಿದು ನೋಡಿದ. ರಾಸ್ಕೋಲ್ನಿಕೋವ್ ಕೈ ಹಿಂದಕ್ಕೆ ಎಳೆದುಕೊಂಡ.

‘ಬೇಡ, ನಾನು ಬಂದಿದ್ದು… ನಾನು… ಮನೆ ಪಾಠ ಯಾವುದೂ ಇಲ್ಲ… ಪಾಠಕ್ಕೆ ಮನೆ ಗೊತ್ತು ಮಾಡು…’

‘ಬಡಬಡಿಸತಾ ಇದೀಯ! ಗೊತ್ತಾ!’ ಅವನನ್ನೇ ಗಮನವಿಟ್ಟು ನೋಡುತ್ತ ರಝುಮಿಖಿನ್ ಹೇಳಿದ.

‘ಇಲ್ಲಾ!’ ಅನ್ನುತ್ತ ರಾಸ್ಕೊಲ್ನಿಕೋವ್ ಎದ್ದ. ಮಹಡಿ ಮೆಟ್ಟಿಲು ಹತ್ತುತ್ತಿರುವಾಗ ತಾನು ಗೆಳೆಯನ ಎದುರಿಗೆ ಹೋಗಿ ನಿಂತೇನು ಅನ್ನುವ ಯೋಚನೆಯೂ ಬಂದಿರಲಿಲ್ಲ ಅವನಿಗೆ. ಜಗತ್ತಿನಲ್ಲಿ ಯಾರ ಮುಖವನ್ನು ನೊಡುವುದಕ್ಕೂ ಮನಸ್ಸಿಲ್ಲ ಅನ್ನುವುದು ತಟ್ಟನೆ ಹೊಳೆಯಿತು. ಪಿತ್ಥ ಕೆರಳಿ, ಉಸಿರಾಡುವುದ ಕಷ್ಟವೆನಿಸಿ, ರಝುಮಿಖಿನ್‌ ರೂಮಿನ ಹೊಸ್ತಿಲು ದಾಟಿದ.
ಬಾಗಿಲ ಹತ್ತಿರ ಹೋಗಿ, ‘ಗುಡ್ ಬೈ!’ ಅಂದ.

‘ಅಯ್ಯೋ ಎಡವಟ್ಟಾ, ತಾಳು!’

‘ಇಲ್ಲಾ, ಹೋಗತೇನೆ!’ ಅನ್ನುತ್ತ ಮತ್ತೆ ಕೈ ಹಿಂದೆಳೆದುಕೊಂಡ.

‘ಮತ್ತೆ ಬಂದಿದ್ದು ಯಾಕೆ! ತಲೆ ಕೆಟ್ಟಿದೆಯಾ? ನೀನು ಹೀಗೆ ಹೋದರೆ ನನಗೆ ಅವಮಾನ ಮಾಡಿದ ಹಾಗೆ… ಬಿಡಲ್ಲ ನಿನ್ನ.’

‘ಸರಿ, ಕೇಳು. ನಾನು ನಿನ್ನ ಹತ್ತಿರ ಬಂದದ್ದು ಯಾಕೆ ಅಂದರೆ ನನಗೆ ಸಹಾಯ ಮಾಡುವವರು ಬೇರೆ ಯಾರೂ ಗೊತ್ತಿಲ್ಲ… ಮಿಕ್ಕವರಿಗಿಂತ ನಿನಗೆ ಕರುಣೆ ಜಾಸ್ತಿ, ನೀನು ಜಾಣ, ಅಂದರೆ ಮಾತು ಬಲ್ಲವನು… ಆದರೆ ಈಗ ಮಾತ್ರ ನನಗೆ ಏನೂ ಬೇಕಾಗಿಲ್ಲ, ಏನೇನೂ ಬೇಕಾಗಿಲ್ಲ, ಯಾರ ಸಹಾಯಾನೂ ಬೇಡ, ಯಾರೂ ಅಯ್ಯೋ ಪಾಪ ಅನ್ನುವುದು ಬೇಕಾಗಿಲ್ಲ… ಒಬ್ಬನೇ ಇರಬೇಕು! ಬಿಡು, ಬಿಟ್ಟು ಬಿಡಿ ನನ್ನ ಪಾಡಿಗೆ ನನ್ನ!’

‘ಒಂದು ನಿಮಿಷ ತಾಳಯ್ಯಾ! ಇದು ಪೂರಾ ಹುಚ್ಚು! ನಿನ್ನ ಇಷ್ಟ ಬಂದ ಹಾಗೆ ಮಾಡಿಕೋ, ನನಗೇನು? ನನಗೂ ಮನೆ ಪಾಠ ಯಾವುದೂ ಇಲ್ಲ. ಇಲ್ಲದೆ ಇದ್ದರೆ ಕತ್ತೆ ಬಾಲ. ಇಲ್ಲೊಬ್ಬ ಪುಸ್ತಕ ವ್ಯಾಪರಿ ಇದಾನೆ. ಚೋರ್ ಬಜಾರ್‌ ನಲ್ಲಿ. ಮನೆಯ ಪಾಠ ಸಿಗುವ ಬದಲು ಅವನು ಸಿಕ್ಕಿದಾನೆ. ಚೆರುಬಿಮೋವ್ ಅಂತ ಅವನ ಹೆಸರು. ‘ಪಾಠದ ಮನೆ ಐದು, ಐದು ಗೊತ್ತು ಮಾಡಿಕೊಡತೇನೆ, ಇವನನ್ನ ಬಿಡು.’ ಅಂದರೂ ಬಿಡಲ್ಲ ನಾನು. ಪುಸ್ತಕ ಪ್ರಿಂಟು ಮಾಡಿ ಮಾರಾಟ ಕೂಡ ಮಾಡತಾನೆ. ವಿಜ್ಞಾನದ ಪುಸ್ತಕ. ಹೇಗೆ ಮಾರಾಟ ಆಗುತ್ತವೆ ಅನ್ನತೀಯ! ಪುಸ್ತಕಗಳ ಹೆಸರೇ ದುಡ್ಡು ಬರುವ ಹಾಗೆ ಮಾಡತವೆ! ನಾನು ಪೆದ್ದ ಅಂತ ಹೇಳತಿದ್ದೆ ನೀನು. ದೇವರೇ! ನನಗಿಂತ ಪೆದ್ದರು ಬಹಳ ಜನ ಇದಾರೆ!

ಇತ್ತೀಚೆಗೆ ಬೀಸುತ್ತಿರುವ ಹೊಸ ಗಾಳಿಯಲ್ಲಿ ಅವನೂ ತೂರಿಕೊಂಡಿದ್ದಾನೆ. ಅವನಿಗೆ ವಿಜ್ಞಾನ ಸಾಸುವೆ ಕಾಳಿನಷ್ಟೂ ಗೊತ್ತಿಲ್ಲ. ಆದರೂ ಅವನ ಬೆನ್ನು ಚಪ್ಪರಿಸತೇನೆ. ಈಗ ಇಲ್ಲಿ ಎರಡು ಶೀಟಿನಷ್ಟು ಲೇಖನ ಇದೆ, ಜರ್ಮನ್ ಭಾಷೆಯದು. ಅತ್ಯಂತ ಮೂರ್ಖ ವೈಜ್ಞಾನಿಕ ಲೇಖನ ಅದು. ಹೆಂಗಸರು ಮನುಷ್ಯರೇ ಅಲ್ಲವೇ ಅನ್ನುವ ಪ್ರಶ್ನೆಯನ್ನು ಚರ್ಚೆ ಮಾಡತ್ತೆ. ಹೆಂಗಸರು ಕೂಡ ಮನುಷ್ಯರು ಎಂಬುದನ್ನು ಗಂಭೀರವಾಗಿ ಸಾಧಿಸಿ ತೋರಿಸತ್ತೆ. ಸ್ರ್ರೀಯರನ್ನು ಕುರಿತು ಇಗ ನಡೆಯುತ್ತಾ ಇರುವ ಚರ್ಚೆಗೆ ಹೊಂದಿಕೊಳ್ಳುವ ಹಾಗೆ ಚೆರುಬಿಮೋವ್ ಅದನ್ನು ಸಿದ್ಧಮಾಡುತ್ತಾ ಇದ್ದಾನೆ. ನಾನು ತರ್ಜುಮೆ ಮಾಡತೇನೆ, ಅವನು ಅದನ್ನ ಇನ್ನೊಂದಿಷ್ಟು ದೊಡ್ಡದಾಗಿ ಬೆಳಸತಾನೆ. ನಾವಿಬ್ಬರೂ ಕೂತು ಅಲಂಕಾರಮಯವಾದ ಅರ್ಧ ಪುಟದಷ್ಟು ಉದ್ದವಾದ ಶೀರ್ಷಿಕೆ ಹುಡುಕುತ್ತೇವೆ.. ಅವನು ಪುಟ್ಟ ಪುಸ್ತಕಮಾಡಿ ಐವತ್ತು ಕೊಪೆಕ್‍ ಗೆ ಒಂದು ಪ್ರತಿಯ ಹಾಗೆ ಮಾರುತ್ತಾನೆ. ಚೆನ್ನಾಗಿ ಹೋಗತ್ತವೆ ಪುಸ್ತಕ!

ಉದ್ದೇಶಪೂರ್ವಕವಾಗಿ ಮೆಟ್ಟಿಲು ಇಳಿದು ಬಂದು ಕಾಲುವೆಗೆ ಏನೋ ಎಸೆದದ್ದನ್ನು ನೋಡಿದರೆ ಯಾರಿಗಾದರೂ ಸಂಶಯ ಹುಟ್ಟುತಿತ್ತು. ಪುಟ್ಟ ಡಬ್ಬಿಗಳು ಮುಳುಗದೆ ತೇಲಿದರೆ? ಹೌದು, ತೇಲುತ್ತವೆ. ಎಲ್ಲರಿಗೂ ಕಾಣುತ್ತವೆ.

ತರ್ಜುಮೆ ಮಾಡಿದ್ದಕ್ಕೆ ನನಗೆ ಶೀಟ್‍ ಗೆ ಆರು ರೂಬಲ್ ಕೊಡತಾನೆ. ಒಟ್ಟು ಹದಿನೈದು ರೂಬಲ್ಲು. ನಾನು ಆರು ರೂಬಲ್ ಅಡ್ವಾನ್ಸು ತಗೊಂಡಿದ್ದೆ. ಇದು ಮುಗಿದ ಮೇಲೆ ತಿಮಿಂಗಿಲದ ಬಗ್ಗೆ ಬರೆಯುತ್ತೇವೆ. ಆಮೇಲೆ ಕನ್ಫೆಶನ್ಸ್ ಪುಸ್ತಕದ ಎರಡನೆಯ ಭಾಗದಿಂದ ಅತಿ ಬೋರು ಹೊಡೆಸುವ ಭಾಗವನ್ನು ತರ್ಜುಮೆ ಮಾಡತೇವೆ. ಯಾಕೆಂದರೆ ಅದನ್ನು ಬರೆದ ರೂಸೋ ಉದಾರವಾದೀ ರಾಡಿಶೇವ್ ಪಂಥದವನು ಅಂತ ಯಾರೋ ಚೆರುಬಿಮೋವ್‍ ಗೆ ಹೇಳಿದ್ದಾರೆ. ದೆವ್ವ ಹಿಡಿಯಲಿ ಅವನನ್ನ! ನಾನಂತೂ ಹೌದೂ ಅನ್ನಲ್ಲ, ಅಲ್ಲ ಅನ್ನಲ್ಲ. ಈಗ ಹೇಳು, ‘ಹೆಂಗಸರು ಮನುಷ್ಯರೇ?’ ಲೇಖನದ ಎರಡನೆಯ ಶೀಟು ತರ್ಜುಮೆ ಮಾಡುವುದಕ್ಕೆ ನಿನಗೆ ಆಸಕ್ತಿ ಇದೆಯಾ? ಇದ್ದರೆ ಈಗಲೇ ಈ ಪೇಜುಗಳನ್ನ ತಗೊಂಡು ಹೋಗು, ಪೆನ್ನು, ಹಾಳೆ ಎಲ್ಲಾ ಅವನೇ ಕೊಡತಾನೆ, ಇಗೋ ಮೂರು ರೂಬಲ್; ಯಾಕೆ ಅಂದರೆ, ಪೂರ್ತಿ ತರ್ಜುಮೆ ಮಾಡುವುದಕ್ಕೆ ನಾನು ಆಗಲೇ ಮುಂಗಡ ಪಡೆದು ಆಗಿದೆ. ಹಾಗಾಗಿ ಮೂರು ರೂಬಲ್ ನಿನ್ನ ಪಾಲಿಗೆ. ಬರೆದು ಮುಗಿಸಿದ ಮೇಲೆ ಇನ್ನೂ ಮೂರು ರೂಬಲ್ ಸಿಗುತ್ತವೆ.

ಆಮೇಲೆ, ಇನ್ನೊಂದು ವಿಷಯ. ಇದನ್ನ ನಾನು ನಿನಗೆ ಮಾಡುತ್ತಿರುವ ಉಪಕಾರ ಅಂತ ತಿಳಿಯ ಬೇಡ. ನೀನು ರೂಮಿನೊಳಕ್ಕೆ ಕಾಲಿಡುತಿದ್ದ ಹಾಗೇ ನಿನ್ನನ್ನ ಹೇಗೆ ಬಳಸಿಕೊಳ್ಳಬಹುದು ಅನ್ನುವ ಯೋಚನೆ ಬಂತು. ನನಗೆ ಸ್ಪೆಲ್ಲಿಂಗು ಸರಿಯಾಗಿ ಬರಲ್ಲ, ಅಲ್ಲದೆ ನನಗೆ ಗೊತ್ತಿರುವ ಜರ್ಮನ್ ಭಾಷೆ ಕೂಡ ಚೂರು ಪಾರು ಅಷ್ಟೇ. ಹೇಗೋ ನಿಭಾಯಿಸುತ್ತಿದ್ದೆ. ಈಗ ನೀನು ಸಿಕ್ಕೆಯಲ್ಲ, ಕೆಲಸ ಇನ್ನೂ ಚೆನ್ನಾಗಿ ಆಗತ್ತೆ. ಯಾರಿಗೆ ಗೊತ್ತು, ಕೆಟ್ಟದಾಗೂ ಆಗಬಹುದು… ಏನನ್ನುತ್ತೀ? ಕೆಲಸ ಒಪ್ಪಿಕೊಳ್ಳುತ್ತೀಯಾ?’

ರಾಸ್ಕೋಲ್ನಿಕೋವ್ ಒಂದೂ ಮಾತಾಡದೆ ಜರ್ಮನ್ ಲೇಖನದ ಪುಟಗಳನ್ನೂ ಮೂರು ರೂಬಲನ್ನೂ ಎತ್ತಿಕೊಂಡ. ರಝುಮಿಖಿನ್ ಬೆರಗಾಗಿ ಕಣ್ಣರಳಿಸಿ ನೋಡುತ್ತಿದ್ದ. ಮೊದಲನೆಯ ಸಾಲನ್ನು ಓದಿದ ತಕ್ಷಣ ರಾಸ್ಕೋಲ್ನಿಕೋವ್ ತಟ್ಟನೆ ತಿರುಗಿದ, ಜರ್ಮನ್ ಲೇಖನವನ್ನೂ ಮೂರು ರೂಬಲನ್ನೂ ರಝುಮಿಖಿನ್ ಎದುರಿಗೆ ಇಟ್ಟು ಒಂದೂ ಮಾತಾಡದೆ ಹೊರಟು ಹೋದ.

‘ಜ್ವರ ನೆತ್ತಿಗೆ ಏರಿದೆಯಾ, ಏನು ಕಥೆ?’ ರಝುಮ್ಖಿನ್ ಚೀರಾಡಿದ. ‘ಇದೇನು ಆಟ ಕಟ್ಟಿದ್ದೀಯಾ? ನನ್ನ ತಲೆ ಕೆಡಿಸಿಬಿಟ್ಟೆ… ಅಯ್ಯೋ ದೆವ್ವಾ, ಯಾಕೆ ಬಂದೆ ಇಲ್ಲಿಗೆ?’

‘ತರ್ಜುಮೆ ಮಾಡುವ ಕೆಲಸ… ಬೇಕಾಗಿಲ್ಲ… ನನಗೆ…’ ರಾಸ್ಕೋಲ್ನಿಕೋವ್ ಗೊಣಗಿದ. ಆಗಲೇ ಮೆಟ್ಟಿಲಿಳಿಯುತ್ತಿದ್ದ.

‘ಮತ್ತೇನಯ್ಯಾ ಬೇಕು ನಿನಗೆ?’ ರಝುಮ್ಕಿನ್ ಮೇಲಿನಿಂದ ಒದರಿದ. ಇವನು ಮಾತಿಲ್ಲದೆ ಕೆಳಕ್ಕೆ ಇಳಿಯುತ್ತಿದ್ದ.

‘ಏಯ್! ಎಲ್ಲಿಗೆ ಹೋಗತಾ ಇದೀಯಾ?’

ಉತ್ತರ ಬರಲಿಲ್ಲ.

‘ದೆವ್ವಾ ನೀನು!’

ರಾಸ್ಕೋಲ್ನಿಕೋವ್ ಆಗಲೇ ಹೊರಕ್ಕೆ ಬಂದಿದ್ದ. ನಿಕೊಲೆವ್ಸ್ಕಿ ಸೇತುವೆಯ ಮೇಲೆ ಹೋಗುತ್ತ ಮತ್ತೆ ಪೂರಾ ಎಚ್ಚರಗೊಂಡ. ಯಾಕೆಂದರೆ ಅವನ ಮಟ್ಟಿಗೆ ತೀರ ಅಹಿತವಾದ ಘಟನೆ ನಡೆಯಿತು. ಯಾಕೋ ಏನೋ ಅವನು ಗಾಡಿಗಳ ಓಡಾಟಕ್ಕೆ ಮಾಡಿದ್ದ ಸೇತುವೆ ರಸ್ತೆಯ ಮಧ್ಯಭಾಗದಲ್ಲಿ ನಡೆಯುತ್ತಿದ್ದ. ಸಾರೋಟು ಗಾಡಿ ಹೊಡೆಯುತ್ತಿದ್ದವನು ಚಾವಟಿ ಎತ್ತಿ ರಾಸ್ಕೋಲ್ನಿಕೋವ್ ಬೆನ್ನಿನ ಮೇಲೆ ಬಾರಿಸಿದ. ಅವನು ಮೂರು ನಾಲ್ಕು ಸಾರಿ ಕೂಗಿ ಹೇಳಿದರೂ ರಾಸ್ಕೋಲ್ನಿಕೋವ್ ಇನ್ನೇನು ಕುದುರೆಯ ಕಾಲಿಗೆ ಸಿಕ್ಕಿಬೀಳುತ್ತಿದ್ದ. ತಟ್ಟನೆ ಪಕ್ಕಕ್ಕೆ ಹಾರಿಕೊಂಡ ರಾಸ್ಕೋಲ್ನಿಕೋವ್ ಸಿಟ್ಟಿನಲ್ಲಿ ಹಲ್ಲು ಕಚ್ಚಿ ಗುರುಗುಟ್ಟಿದ. ಅವನ ಸುತ್ತಮುತ್ತ ನಗುವಿನ ಅಲೆ ಎದ್ದಿತ್ತು.

‘ಸರಿಯಾಗಿ ಆಯಿತು ಅವನಗೆ!’

‘ಕಾನೂನು ಅಂದರೆ ಲೆಕ್ಕಕ್ಕೇ ಇಲ್ಲ ಇವರಿಗೆ!’

‘ಗೊತ್ತಾ ನಿಮಗೆ, ಇಂಥವರು ಕುಡಿದವರ ಥರ ಆಟಕಟ್ಟಿ ಬೇಕು ಅಂತಲೇ ಗಾಡಿ ಕೆಳಗೆ ಬೀಳತಾರೆ. ಆಮೇಲೆ, ಪಾಪ, ಗಾಡಿಯವರಿಗೆ ತೊಂದರೆ ಶುರುವಾಗತ್ತೆ!’

‘ಇಂಥಾವರು ಹೀಗೇ ಕಾಸು ಮಾಡಿಕೊಳ್ಳತಾರೆ…’

ರಸ್ತೆ ಪಕ್ಕದ ಕಂಬಿಗೆ ಅವನು ಒರಗಿ ನಿಂತು, ಮುಂದೆ ಹೋಗುತಿದ್ದ ಗಾಡಿಯನ್ನು ನೋಡುತ್ತಾ ಅರ್ಥಹೀನವಾಗಿ ಸಿಟ್ಟುಮಾಡಿಕೊಂಡು ಬೆನ್ನುಜ್ಜಿಕೊಳ್ಳುತ್ತಿರುವಾಗ ತಟ್ಟನೆ ಯಾರೋ ಅವನ ಕೈಗೆ ದುಡ್ಡಿಟ್ಟರು. ತಿರುಗಿ ನೋಡಿದ. ಯಾರೋ ವ್ಯಾಪಾರಸ್ಥನ ವಯಸ್ಸಾದ ಹೆಂಡತಿ. ತಲೆಗೆ ಕರ್ಚೀಫು ಕಟ್ಟಿಕೊಂಡಿದ್ದಳು, ಹೋತದ ಚರ್ಮದ ಶೂ ತೊಟ್ಟಿದ್ದಳು, ಅವಳ ಜೊತೆಯಲ್ಲಿದ್ದ ಹುಡುಗಿ, ತಲೆಗೆ ಪುಟ್ಟ ಹ್ಯಾಟು ಇಟ್ಟುಕೊಂಡು, ಹಸಿರು ಬಣ್ಣದ ಛತ್ರಿ ಹಿಡಿದಿದ್ದಳು. ಅವಳ ಮಗಳು ಅನಿಸುತ್ತಿತ್ತು. ‘ತಗೊಳ್ಳಪ್ಪಾ, ಏಸು ಕ್ರಿಸ್ತ ಒಳ್ಳೆಯದು ಮಾಡಲಿ!’ ಅಂದಳು ತೆಗೆದುಕೊಂಡ. ಅವರು ಹೊರಟು ಹೋದರು. ಅದು ಇಪ್ಪತ್ತು ಕೊಪೆಕ್ ನಾಣ್ಯ. ಅವನ ಬಟ್ಟೆ, ಅವನ ಅವಸ್ಥೆ ನೋಡಿ, ಅರ್ಧ ಕೊಪೆಕ್ ಭಿಕ್ಷೆ ಕೊಡಿ ಎಂದು ರಸ್ತೆಯಲ್ಲಿ ಬಿಕ್ಕೆ ಬೇಡುವವನು ಅಂದುಕೊಂಡಿರಬೇಕು ಅವರು. ಬೆನ್ನಮೇಲೆ ಚಾವಟಿ ಏಟು ತಿಂದದ್ದನ್ನು ನೋಡಿ ಅವರಿಗೆ ಕರುಣೆ ಉಕ್ಕಿ ಇಪ್ಪತ್ತು ಕೊಪೆಕ್ ನಾಣ್ಯ ಕೊಟ್ಟಿದ್ದರು.

ಇಪ್ಪತ್ತು ಕೊಪೆಕ್ ಭದ್ರವಾಗಿ ಹಿಡಿದು, ಸುಮಾರು ಹತ್ತು ಹೆಜ್ಜೆ ನಡೆದು, ನೆವಾ ನದಿಯತ್ತ ಮುಖಮಾಡಿ ಅರಮನೆಯನ್ನು ನೋಡಿದ. ಆಕಾಶದಲ್ಲಿ ಮೋಡದ ಸುಳಿವೂ ಇರಲಿಲ್ಲ. ನದಿಯ ನೀರು ನೀಲ ವರ್ಣದಲಿ ಮಿರುಗುತ್ತಿತ್ತು. ನೆವಾ ನದಿ ಹೀಗೆ ಕಾಣುವುದು ಅಪರೂಪ. ಅವನು ಈಗ ಸೇತುವೆಯ ಮೇಲೆ ನಿಂತು ನೋಡುತ್ತಿದ್ದ ಜಾಗದಿಂದ ಕೆಥಡ್ರೆಲ್ಲಿನ ಗುಮ್ಮಟ ಸ್ಪಷ್ಟವಾಗಿ ಕಾಣುತ್ತಿತ್ತು. ಈ ಜಾಗ ಚಾಪೆಲ್ಲಿನಿಂದ ಇಪ್ಪತ್ತು ಹೆಜ್ಜೆ ದೂರದಲ್ಲಿತ್ತು, ಚಾಪೆಲ್ ಗುಡಿ ಮಿನುಗುತ್ತಿತ್ತು. ಸ್ವಚ್ಛವಾದ ವಾತಾವರಣದಲ್ಲಿ ಆ ಗುಡಿಯಲ್ಲಿದ್ದ ಒಂದೊಂದೂ ಅಲಂಕಾರವನ್ನೂ ಸ್ಪಷ್ಟವಾಗಿ ಕಾಣಬಹುದಾಗಿತ್ತು ಚಾವಟಿ ಏಟಿನ ನೋವು ತಗ್ಗಿತ್ತು. ರಾಸ್ಕೋಲ್ನಿಕೋವ್ ತನಗೆ ಬಿದ್ದ ಏಟನ್ನು ಮರೆತಿದ್ದ. ಸ್ಪಷ್ಟವಾಗಿರದ ಯಾವುದೋ ಚಿಂತೆ ಅವನನ್ನು ಪೂರಾ ಆವರಿಸಿಕೊಂಡು ತೊಂದರೆ ಕೊಡುತ್ತಿತ್ತು.

ದೂರದಲ್ಲಿ ದೃಷ್ಟಿ ನೆಟ್ಟು ಬಹಳ ಹೊತ್ತು ಸುಮ್ಮನೆ ನೋಡುತ್ತ ನಿಂತಿದ್ದ. ಆ ಜಾಗ ಅವನಿಗೆ ತುಂಬ ಚೆನ್ನಾಗಿ ಪರಿಚಯವಿತ್ತು. ಅವನು ಯೂನಿವರ್ಸಿಟಿಗೆ ಹೋಗುತ್ತಿದ್ದಾಗ ಮನೆಗೆ ಮರಳುವ ದಾರಿಯಲ್ಲಿ ಈ ಇದೇ ಜಾಗದಲ್ಲಿ ಆಗಾಗ ನಿಲ್ಲುತ್ತಿದ್ದ. ಸುಮಾರು ನೂರು ಬಾರಿಯಾದರೂ ಹಾಗೆ ನಿಂತಿರಬಹುದು, ನಿಂತು ಕಣ್ಣೆದುರಿನ ದೃಶ್ಯವೈಭವವನ್ನು ದಿಟ್ಟಿಸಿರಬಹುದು. ಹಾಗೆ ಪ್ರತಿಬಾರಿ ನೋಡಿದಾಗಲೂ ಸ್ಪಷ್ಟವಾಗಿರದ ಹೀಗೇ ಎಂದು ನಿರ್ಣಯಿಸಲಾಗದ ಯಾವುದೋ ಭಾವದ ಚಿತ್ರ ಮೂಡಿ ಬೆರಗು ಹುಟ್ಟಿಸುತ್ತಿತ್ತು. ಕಣ್ಣೆದುರಿನ ವೈಭವದ ದೃಶ್ಯ ತಣ್ಣಗೆ ಕೊರೆಯುವ ಉಸಿರುಬಿಡುತ್ತಿದೆ ಎಂದು ಈ ದೂರದಲ್ಲೂ ಅನಿಸುತ್ತಿತ್ತು; ಈ ಅದ್ಭುತ ನೊಟದ ಆತ್ಮ ಕಿವುಡ, ಮೂಕ ಅನ್ನಿಸುತ್ತಿತ್ತು ಅವನಿಗೆ… ಇಂಥ ನಿಗೂಢ ವಿಷಣ್ಣ ಭಾವ ಇಲ್ಲಿಗೆ ಬಂದಾಗಲೆಲ್ಲ ಪ್ರತಿಬಾರಿಯೂ ಮೂಡುವುದಲ್ಲಾ ಎಂದು ಅವನಿಗೆ ಆಶ್ಚರ್ಯವಾಗುತ್ತಿತ್ತು. ತನ್ನ ಮೇಲೆ ತನಗೇ ನಂಬಿಕೆ ಇರದೆ ಈ ವಿಷಣ್ಣ ಭಾವದ ಒಗಟು ಬಿಡಿಸುವ ಕೆಲಸ ಮುಂದೂಡುತ್ತಲೇ ಇದ್ದ. ಈಗ ಇದ್ದಕಿದ್ದ ಹಾಗೆ ಹಳೆಯ ಪ್ರಶ್ನೆಗಳು ಗೊಂದಲಗಳು ತಟ್ಟನೆ ತಲೆ ಎತ್ತಿದವು. ಅವೆಲ್ಲ ಈಗ ನೆನಪಿಗೆ ಬಂದದ್ದು ಆಕಸ್ಮಿಕವಲ್ಲ ಅನ್ನಿಸಿತು. ಹಿಂದೆ ನಿಂತಿದ್ದ ಜಾಗದಲ್ಲೇ ಈಗಲೂ ನಿಂತಿದ್ದೇನೆ ಅನ್ನುವುದೇ ವಿಚಿತ್ರ ಹಾಗೆಯೇ ಮೊದಲು ಆಸಕ್ತಿ ಹುಟ್ಟಿಸುತ್ತಿದ್ದ ದೃಶ್ಯಗಳೇ ಈಗಲು ಆಸಕ್ತಿ ಕೆರಳಿಸುತ್ತಿರುವುದು, ಮೊದಲು ಹುಟ್ಟುತಿದ್ದ ಪ್ರಶ್ನೆಗಳೇ ಆಲೋಚನೆಗಳೇ ಈಗಲೂ ಹುಟ್ಟುವುದು ಕೂಡ ವಿಚಿತ್ರ ಅನ್ನಿಸಿತು ಅವನಿಗೆ.

ನಗಬೇಕು ಅಂತಲೂ ಅನಿಸಿತ್ತು ಅವನಿಗೆ, ಎದೆ ಮಾತ್ರ ಭಾರವಾಗಿ ನೋವಾಗುವಷ್ಟು ಬಿಗಿದುಕೊಂಡಿತ್ತು. ತನ್ನ ಗತಕಾಲವನ್ನು, ಗತಕಾಲದ ಯೋಚನೆಗಳನ್ನು, ಗತಕಾಲದ ಕೆಲಸಗಳನ್ನು, ಗತಕಾಲದ ವಿಷಯಗಳನ್ನು, ಗತಕಾಲದ ಭಾವ-ಬಿತ್ರಗಳನ್ನು, ಈ ದೃಶ್ಯವನ್ನು, ಜೊತೆಗೆ ತನ್ನನ್ನೂ ಮತ್ತೆಲ್ಲವನ್ನೂ ಉಳಿದೆಲ್ಲವನ್ನೂ ಅಲ್ಲೆಲ್ಲೋ ಕೆಳಗೆ, ತನ್ನ ಪಾದಗಳ ಅಡಿಯಲ್ಲಿ ಕಾಣುತ್ತಿದ್ದ ಹಾಗಿತ್ತು… ಕಂಡೂ ಕಾಣದಹಾಗಿತ್ತು. ತಾನೆಲ್ಲೋ ಮೇಲಕ್ಕೆ ಹಾರುತ್ತಿರುವ ಹಾಗೆ, ಮಿಕ್ಕೆಲ್ಲವೂ ಕಣ್ಣಿಗೆ ಮರೆಯಾಗುತ್ತಿದ್ದ ಹಾಗಿತ್ತು. ತನಗೇ ಅರಿವಿಲ್ಲದೆ ಕೈ ಬೀಸಿದ. ಮುಷ್ಠಿಯಲ್ಲಿ ಬಿಗಿಯಾಗಿ ಹಿಡಿದಿದ್ದ ಇಪ್ಪತ್ತು ಕೊಪೆಕ್ ನಾಣ್ಯ ಗಮನಕ್ಕೆ ಬಂದಿತು. ಮುಷ್ಠಿ ಬಿಚ್ಚಿ ನೋಡಿದ. ನಾಣ್ಯವನ್ನು ದಿಟ್ಟಿಸಿದ. ಅದನ್ನು ನದಿಗೆ ಬೀಸಿ ಎಸೆದ. ಆಮೇಲೆ ಹಿಂದಕ್ಕೆ ತಿರುಗಿ ಮನೆಗೆ ಹೋದ. ಕತ್ತರಿ ಆಡಿಸಿ ತನ್ನನ್ನು ತಾನು ಎಲ್ಲದರಿಂದಲೂ ಎಲ್ಲರಿಂದಲೂ ಕತ್ತರಿಸಿಕೊಂಡ ಅನ್ನುವ ಹಾಗಿತ್ತು.

ಅವನು ಮನೆ ಸೇರಿದ್ದು ಮಾತ್ರ ಸಾಯಂಕಾಲಕ್ಕೇನೇ. ಅಂದರೆ ಅವನು ಸುಮಾರು ಆರು ಗಂಟೆಗಳಷ್ಟು ಕಾಲ ನಡೆಯುತ್ತಲೇ ಇದ್ದ ಎಂದರ್ಥ. ಎಲ್ಲಿಗೆ ಹೋಗಿದ್ದೆ, ಹೇಗೆ ವಾಪಸು ಬಂದೆ, ಯಾವುದೂ ಅವನಿಗೆ ಏನೇನೂ ನೆನಪಿರಲಿಲ್ಲ. ಬಟ್ಟೆ ತೆಗೆದ, ದಣಿದ ಕುದುರೆಯ ಹಾಗೆ ಕಂಪಿಸಿದ, ಸೋಫಾದ ಮೇಲೆ ಮಲಗಿದ, ಓವರ್‍ ಕೋಟನ್ನು ಮೈಮೇಲೆ ಎಳೆದುಕೊಂಡ, ತಕ್ಷಣವೇ ಮರವೆಯಲ್ಲಿ ಅದ್ದಿಹೋದ…

ಸಂಜೆಗತ್ತಲಲ್ಲಿ ಇದ್ದಕಿದ್ದ ಹಾಗೆ ಎಚ್ಚರ ಹುಟ್ಟಿತ್ತು. ಭಯಂಕರ ಗದ್ದಲ, ಕೂಗಾಟಗಳು ಅವನನ್ನು ಎಬ್ಬಿಸಿದ್ದವು. ದೇವರೇ! ಎಂಥ ಕೂಗಾಟ, ಕಿರುಚಾಟ! ಅಷ್ಟು ಅಸಹಜವಾದ ದನಿಗಳನ್ನು ಅನವೆಂದೂ ಕೇಳಿರಲಿಲ್ಲ, ಕಂಡಿರಲಿಲ್ಲ. ಹಾಗೆ ಊಳಿಡುತ್ತಾ ಕಿರುಚುತ್ತಾ ಗುರುಗುಡುತ್ತಾ, ಅಳುತ್ತಾ ಹೊಡೆಯುತ್ತಾ ಬೈಯುತ್ತಾ ಇರುವ ಸದ್ದು. ಮನುಷ್ಯರಾದವರು ಹೀಗೆ ಮೃಗವಾಗಬಹುದು, ಹೀಗೆ ಆಕ್ರೋಶಗೊಳ್ಳಬಹುದು ಅನ್ನುವ ಕಲ್ಪನೆಯೂ ಅವನಿಗೆ ಯಾವತ್ತೂ ಬಂದಿರಲಿಲ್ಲ. ಭೀತನಾಗಿ ಎದ್ದು, ಹಾಗೇ ಕೂತಿದ್ದ. ಕ್ಷಣ ಕ್ಷಣವೂ ಅವನ ಎದೆ ಹಿಂಸೆಪಡುತ್ತಿತ್ತು, ಕುಸಿಯುತ್ತಿತ್ತು, ಹೊಡೆದಾಟ, ಕೂಗಾಟ, ಬೈಗಳು ಇನ್ನೂ ಹೆಚ್ಚಾಗುತ್ತಲೇ ಇದ್ದವು. ಓನರಮ್ಮನ ದನಿ ಅವನಿಗೆ ತಟ್ಟನೆ ಗುರುತು ಸಿಕ್ಕಿತು. ಆಶ್ಚರ್ಯವಾಯಿತು. ಚೀರುತ್ತಿದ್ದಳು, ಗೋಳಿಡುತ್ತಿದ್ದಳು, ದಡಬಡಿಸಿ ಮಾತಾಡುತ್ತಾ ಆಡುತಿದ್ದ ಮಾತನ್ನು ನುಂಗುತ್ತಿದ್ದಳು. ಏನು ಹೇಳುತ್ತಿದ್ದಾಳೆ ಅನ್ನುವುದೇ ತಿಳಿಯುತ್ತಿರಲಿಲ್ಲ. ಯಾಚಿಸುತ್ತಿದ್ದಳು, ಹೊಡೆಯಬೇಡಿ ಅನ್ನುತ್ತಿದ್ದಳು, ಅವಳನ್ನು ಯಾರೋ ನಿಷ್ಕರುಣೆಯಿಂದ ಹೊಡೆಯುತ್ತಿದ್ದರು.

ಹೊಡೆಯುತ್ತಿದ್ದವನ ದನಿಯಲ್ಲಿ ಇದ್ದ ಆಕ್ರೋಶದಿಂದಾಗಿ ಬರಿಯ ಗೊರಗೊರ ಸದ್ದು ಮಾತ್ರ ಕೇಳುತ್ತಿತ್ತು. ಅವನೂ ಏನೋ ಅನ್ನುತ್ತಿದ್ದ, ಆಕ್ರೋಶ, ಆತುರ, ಮಾತಿನ ಜೋರು ಎಲ್ಲಾ ಸೇರಿ ಅವನ ನಾಲಗೆ ತೊದಲುತ್ತಿತ್ತು. ರಾಸ್ಕೋಲ್ನಿಕೋವ್ ಇದ್ದಕಿದ್ದ ಹಾಗೆ ತರಗುಟ್ಟಿಹೋದ. ಆ ದನಿ ಇಲ್ಯಾ ಪೆಟ್ರೊವಿಚ್‍ ನದೆಂದು ಗುರುತು ಸಿಕ್ಕಿತ್ತು. ಪೋಲೀಸು ಇಲ್ಯಾ ಪೆಟ್ರೊವಿಚ್ ಇಲ್ಲಿಗೆ ಬಂದಿದ್ದಾನೆ, ಓನರಮ್ಮನನ್ನು ಒದೆಯುತ್ತ ಅವಳ ತಲೆಯನ್ನು ಮೆಟ್ಟಿಲಿಗೆ ಘಟ್ಟಿಸುತ್ತಿದ್ದಾನೆ-ಸದ್ದು, ಕೂಗಾಟ, ದಪ್ ದಪ್ ಶಬ್ದಗಳಿಂದ ಅಷ್ಟಂತೂ ತಿಳಿಯುತ್ತಿತ್ತು. ಆದರೆ, ಯಾಕೆ? ಏನಾಗುತ್ತಿದೆ? ಜಗತ್ತು ತಲೆಕೆಳಗಾಯಿತೋ ಏನು ಕಥೆ? ಕೆಳಗಿನ ಮಹಡಿಗಳಲ್ಲಿ ಜನ ಗುಂಪು ಸೇರುತ್ತಿರುವುದು ಅವರ ಮಾತಿನ ದನಿ, ಉದ್ಗಾರ, ಬಾಗಿಲು ತಟ್ಟುವ ಶಬ್ದ, ಚೀರಾಟ, ದಡಾರನೆ ಮುಚ್ಚಿಕೊಳ್ಳುವ ಬಾಗಿಲು, ಓಡುವ ಹೆಜ್ಜೆ ಸದ್ದುಗಳಿಂದ ತಿಳಿಯುತ್ತಿತ್ತು ‘ಯಾಕೆ? ಯಾಕೆ? ಏನಾಗುತ್ತಿದೆ?’ ರಾಸ್ಕೋಲ್ನಿಕೋವ್ ಮತ್ತೆ ಮತ್ತೆ ಕೇಳಿಕೊಳ್ಳುತ್ತಿದ್ದ. ತನಗೆ ಪೂರಾ ಹುಚ್ಚು ಹಿಡಿದಿರಬಹುದು ಅನ್ನಿಸಿತು. ಇಲ್ಲ. ಎಲ್ಲವೂ ಸ್ಪಷ್ಟವಾಗಿ ಕೇಳುತ್ತಿತ್ತು!…

ಹಾಗಾದರೆ ಅವರು ಅವನ ಹತ್ತಿರವೂ ಬರಬಹುದು, ‘ಯಾಕೆಂದರೆ ‘ಅದೇ’ ಕಾರಣಕ್ಕೆ… ನಿನ್ನೆ ನಡೆಯಿತಲ್ಲ, ಆ ಕಾರಣಕ್ಕೆ… ದೇವರೇ!’ ಅಗುಳಿಹಾಕಿದರೆ, ಚಿಲಕ ಸಿಕ್ಕಿಸಿದರೆ ವಾಸಿ ಅನ್ನಿಸಿತು. ಕೈ ಎತ್ತುವುದಕ್ಕೂ ಆಗಲಿಲ್ಲ. ಅಲ್ಲದೆ, ಅದೆಲ್ಲ ವ್ಯರ್ಥ ಕೆಲಸ! ಭಯ ಹಿಮದ ಹಾಗೆ ಅವನ ಮನಸ್ಸನ್ನೆಲ್ಲ ಆವರಿಸಿ ಹಿಂಸೆ ಕೊಟ್ಟು ಮೈಮನಸನ್ನೆಲ್ಲ ಹಿಮ್ಮೆಟ್ಟಿಸಿಬಿಟ್ಟಿತ್ತು. ಸುಮಾರು ಹತ್ತು ನಿಮಿಷಗಳಷ್ಟು ಕಾಲ ನಡೆದ ಈ ಗದ್ದಲ ಕೊನೆಗೂ ತಗ್ಗುತ್ತ ಬಂದಿತು. ಓನರಮ್ಮ ನರಳುತ್ತಿದ್ದಳು, ಗೊಣಗುತ್ತಿದ್ದಳು. ಇಲ್ಯಾ ಪೆಟ್ರೊವಿಚ್ ಇನ್ನೂ ಹೆದರಿಸುತ್ತಾ ಬೈಯುತ್ತಾ ಇದ್ದ…. ಕೊನೆಗೆ ಅವನ ದನಿಯೂ ತಗ್ಗಿತು. ಆಮೇಲೆ, ಅವನ ಮಾತೂ ಇಲ್ಲ.

‘ನಿಜವಾಗಿ ಹೊರಟು ಹೋದನಾ? ದೇವರೇ!’ ಹ್ಞೂಂ. ಈಗ ಓನರಮ್ಮನೂ ಹೋಗುತ್ತಿದ್ದಳು. ನರಳುತ್ತಾ ಅಳುತ್ತಾ ಹೋಗುತ್ತಿದ್ದಳು…. ಈಗ ಕೇಳಿಸಿದ ಬಾಗಿಲು ಮುಚ್ಚಿದ ಶಬ್ದ ಅವಳ ಮನೆಯದ್ದೇ…. ಮೆಟ್ಟಿಲ ಮೇಲೆ ಸೇರಿದ್ದ ಜನರ ಗುಂಪೂ ಈಗ ಚದುರುತ್ತ ಎಲ್ಲರೂ ಅವರವರ ಮನೆಗೆ ಹೋಗುತ್ತಿದ್ದರು—ಆಶ್ಚರ್ಯಪಡುತ್ತ, ಉದ್ಗಾರ ತೆಗೆಯುತ್ತ, ವಾದಮಾಡುತ್ತ, ಆಗಾಗ ದನಿ ಏರಿಸುತ್ತ, ಮತ್ತೆ ಪಿಸುಮಾತಾಗುತ್ತ ಚೆದುರಿದರು. ಬಹಳ ಜನ ಇದ್ದಿರಬೇಕು. ಅಪಾರ್ಟ್‍ಮೆಂಟಿನವರೆಲ್ಲ ಬಂದ ಹಾಗಿತ್ತು. ‘ದೇವರೇ, ಹೇಗೆ ಸಾಧ್ಯ ಇದೆಲ್ಲ! ಅವನು ಯಾಕೆ ಬಂದಿದ್ದ ಇಲ್ಲಿಗೆ, ಯಾಕೆ?’

ರಾಸ್ಕೋಲ್ನಿಕೋವ್ ದಣಿದಿದ್ದ. ಹಾಗೇ ಸೋಫಾದ ಮೇಲೆ ಒರಗಿದ. ಕಣ್ಣು ಮುಚ್ಚಲು ಆಗಲಿಲ್ಲ. ಎಂದೂ ಅನುಭವಿಸಿರದಂಥ ಭಯವನ್ನು, ಇದಕ್ಕೆ ಕೊನೆಯಿಲ್ಲ ಅನ್ನುವಂಥ ಭಯವನ್ನು ಅನುಭವಿಸುತ್ತ, ನರಳುತ್ತ ಅರ್ಧಗಂಟೆ ಹಾಗೇ ಮಲಗಿದ್ದ. ಇದ್ದಕಿದ್ದ ಹಾಗೆ ಅವನ ರೂಮಿನಲ್ಲಿ ಬೆಳಕು ತುಂಬಿತ್ತು. ನಸ್ತಾಸ್ಯ ಮೇಣದ ಬತ್ತಿ ಹಿಡಿದು ಊಟ ತಂದಿದ್ದಳು. ಅವನನ್ನು ಗಮನವಿಟ್ಟು ನೋಡಿ, ಮಲಗಿಲ್ಲವೆಂದು ತಿಳಿದು, ಮೇಣದ ಬತ್ತಿಯನ್ನು ಮೇಜಿನ ಮೇಲಿಟ್ಟು, ತಟ್ಟೆಯಲ್ಲಿ ಬ್ರೆಡ್ಡು, ಉಪ್ಪು, ಸೂಪ್ ಬಡಿಸಿ ಅಣಿಮಾಡಿದಳು.

‘ನೀನು ನಿನ್ನೆಯಿಂದ ಏನೂ ತಿಂದಿಲ್ಲ, ಬೆಟ್ ಕಟ್ಟತೇನೆ ಬೇಕಾದರೆ! ಇಡೀ ದಿನ ಸುಮ್ಮನೆ ಅಲೆಯುತ್ತಾ ಇದ್ದೆ. ಈಗ ಜ್ವರ ಬಂದು ಮೈಯೆಲ್ಲ ನಡುಗುತ್ತಾ ಇದೆ,’ ಅಂದಳು.

‘ನಸ್ತಾಸ್ಯಾ, ಅವರು ಯಾಕೆ ಓನರಮ್ಮನ್ನ ಹೊಡೆಯುತ್ತಾ ಇದ್ದರು?’
ಅವನನ್ನೇ ದಿಟ್ಟಿಸಿ ನೋಡಿದಳು.

‘ಓನರಮ್ಮನನ್ನ ಯಾರು ಹೊಡೆಯುತ್ತಾ ಇದ್ದರು?’

‘ಈಗ… ಅರ್ಧ ಗಂಟೆ ಮೊದಲು. ಪೋಲೀಸು ಮುಖ್ಯಸ್ಥನ ಸಹಾಯಕ ಇಲ್ಯಾ ಪೆಟ್ರೊವಿಚ್… ಮೆಟ್ಟಿಲ ಮೇಲೆ… ಅವಳನ್ನ ಯಾಕೆ ಹಾಗೆ ಹೊಡೆಯುತ್ತಾ ಇದ್ದ?… ಇಲ್ಲಿಗೆ ಯಾಕೆ ಬಂದಿದ್ದ ಅವನು?’

ನಸ್ತಾಸ್ಯ ಅವನನ್ನೇ ಗಮನವಿಟ್ಟು ನೋಡುತ್ತಿದ್ದಳು. ಹುಬ್ಬು ಗಂಟಿಕ್ಕಿಕೊಂಡು, ಮಾತಿಲ್ಲದೆ ಸುಮ್ಮನೆ ನೋಡುತ್ತಲೇ ಇದ್ದಳು, ಬಹಳ ಹೊತ್ತು. ಅವನಿಗೆ ಕಸಿವಿಸಿಯಾಯಿತು. ಅವಳ ನೋಟದಿಂದ ಭಯವೂ ಹುಟ್ಟಿತು.

‘ನಸ್ತಾಸ್ಯಾ, ಯಾಕೆ ಸುಮ್ಮನಾದೆ?’ ಕೊನೆಗೊಮ್ಮೆ ಕ್ಷೀಣವಾಗಿ ಕೇಳಿದ.

‘ರಕ್ತ,’ ಸ್ವಲ್ಪ ಹೊತ್ತಾದಮೇಲೆ ಮೆಲ್ಲನೆ ದನಿಯಲ್ಲಿ ತನಗೇ ಹೇಳಿಕೊಳ್ಳುತ್ತಿರುವ ಹಾಗೆ ‘ರಕ್ತ’ ಅಂದಳು.

‘ರಕ್ತ!… ಯಾವ ರಕ್ತ?…’ ಮುಖ ಬಿಳಿಚಿಕೊಂಡು, ಗೋಡೆಯ ಕಡೆಗೆ ಜರುಗುತ್ತಾ ಗೊಣಗಿದ. ನಸ್ತಾಸ್ಯ ಮೌನವಾಗಿ ಅವನನ್ನೇ ನೋಡುತ್ತಿದ್ದಳು.

‘ಓನರಮ್ಮನನ್ನ ಯಾರೂ ಹೊಡೆಯಲಿಲ್ಲ,’ ಕಠಿಣವಾದ, ದೃಢವಾದ ದನಿಯಲ್ಲಿ ಮತ್ತೆ ಅದನ್ನೇ ಹೇಳಿದಳು. ಅವನು ಉಸಿರಾಡುವುದನ್ನೂ ನಿಲ್ಲಿಸಿ ಅವಳನ್ನೇ ನೋಡುತ್ತಿದ್ದ.

‘ನಾನೇ ಕೇಳಿಸಿಕೊಂಡೆ… ನಿದ್ದೆ ಮಾಡತಿರಲಿಲ್ಲ… ಕೂತಿದ್ದೆ,’ ಇನ್ನೂ ಕ್ಷೀಣ ದನಿಯಲ್ಲಿ ಮಾತಾಡುತ್ತಿದ್ದ. ‘ಬಹಳ ಹೊತ್ತು ಕೇಳಿಸಿಕೊಂಡೆ… ಪೋಲೀಸು ಮುಖ್ಯಸ್ಥನ ಸಹಾಯಕ ಬಂದಿದ್ದ… ಎಲ್ಲಾ ಅಪಾರ್ಟ್‍ಮೆಂಟಿನವರೂ ಹೊರಕ್ಕೆ ಬಂದು ಮೆಟ್ಟಿಲ ಮೇಲೆ ನಿಂತು ನೋಡತಿದ್ದರು…’

‘ಯಾರೂ ಬಂದಿರಲಿಲ್ಲ ಇಲ್ಲಿಗೆ. ನಿನ್ನೊಳಗೆ ರಕ್ತ ಕುದೀತಿದೆ. ರಕ್ತಕ್ಕೆ ಹೊರಕ್ಕೆ ಬರುವ ದಾರಿ ಇಲ್ಲದೆ ಅಲ್ಲಲ್ಲೇ ಗಡ್ಡೆಕಟ್ಟಿಕೊಂಡರೆ ಹೀಗೆ ಏನೇನೋ ಕಾಣುವುದಕ್ಕೆ ಶುರುವಾಗತ್ತೆ… ಈಗ ನೀನು ತಿನ್ನುತ್ತೀಯೋ ಇಲ್ಲವೋ?’

ಅವನು ಮಾತಾಡಲಿಲ್ಲ. ನಸ್ತಾಸ್ಯಾ ಅವನನ್ನೇ ಒಂದೇ ಸಮ ನೋಡುತ್ತಿದ್ದಳು. ನಿಂತಲ್ಲಿಂದ ಕದಲಲಿಲ್ಲ.

‘ನೀರು ಕೊಡು… ನಸ್ತಾಸ್ಯಾ.’

ಕೆಳಕ್ಕಿಳಿದು ಹೋಗಿ ಎರಡೇ ನಿಮಿಷದಲ್ಲಿ ಮಣ್ಣಿನ ಹೂಜಿಯಲ್ಲಿ ನೀರು ತಂದಳು. ಆಮೇಲೆ ಏನಾಯಿತೋ ಅವನಿಗೆ ನೆನಪು ಉಳಿಯಲೇ ಇಲ್ಲ. ಒಂದು ಗುಟುಕು ತಣ್ಣೀರು ಕುಡಿದ, ಸ್ವಲ್ಪ ನೀರು ಎದೆಯ ಮೇಲೆ ಬಿತ್ತು. ಆಮೇಲೆ ಅವನ ಪ್ರಜ್ಞೆ ಹೊರಟು ಹೋಯಿತು.