ಇದು ನನ್ನ ಒಬ್ಬನ ಸಮಸ್ಯೆಯೋ ಅಥವಾ ನನ್ನಂತಹ ಅಲೆಮಾರಿಗಳ ಸಮಸ್ಯೆಯೋ ತಿಳಿದಿಲ್ಲ. ಈ ಅಲೆಮಾರಿ ವಿಭಾಗ ಜಿಎಸ್‌ಐ (ಜಿಯಾಲಿಜಿಕಲ್ ಸರ್ವೇ ಆಫ್ ಇಂಡಿಯಾ) ಸೇರಿ ೨೫ ವರ್ಷಗಳೇ ಕಳೆದುಹೋಗಿವೆ.  ಈ ೨೫ ವರ್ಷಗಳಲ್ಲಿ ೩೬೫ ದಿನಗಳು, ಅಲ್ಲ ರಾತ್ರಿಗಳು ಎಲ್ಲೆಲ್ಲಿ ಮಲಗಿದ್ದೆನೋ ಒಂದೊಂದಾಗಿ ನೆನೆದುಕೊಂಡರೆ ಕೆಲವು ರಾತ್ರಿಗಳಾದರೂ ಮೈಜುಮ್ಮೆನ್ನುತ್ತವೆ ಅಥವಾ ಅಬ್ಬಾ, ಅಬ್ಬಬ್ಬಾ! ಎನಿಸುತ್ತವೆ. ನನಗೊಂದು ಕೆಟ್ಟ ಚಾಳಿ ಇದೆ. ಅದೇನಂದರೆ ನಾನು ಎಲ್ಲೇ ಮಲಗಲಿ ಮೊದಲ ರಾತ್ರಿ, ಬಹಳ ಹೊತ್ತಿನವರೆಗೂ ನಿದ್ದೆ ನನ್ನ ಹತ್ತಿರಕ್ಕೆ ಸುಳಿಯುವುದೇ ಇಲ್ಲ. ಯಾವುದೋ ಜಾವದಲ್ಲಿ ನಿದ್ದೆ ಬಂದರೂ… ಹಿತ್ತಲಲ್ಲಿ ಸುಳಿಯುತ್ತಿದ್ದ ಕನಸುಗಳು ನುಸಿಳಿಕೊಂಡು ಬಂದು ತಲೆಯ ಹತ್ತಿರ ಕುಳಿತುಬಿಡುತ್ತವೆ. ಯಾವುದೋ ಒಂದು ಹೊತ್ತಿಗೆ ಅವು ಮಾಡುವ ಕೀಟಲೆಗಳಿಂದ ಅರೆ ಪ್ರಜ್ಞಾವಾಸ್ಥೆಯಲ್ಲಿರುವ ನನ್ನ ಸ್ಮೃತಿ ಪಟಲದ ಮೇಲೆ ಅವು ದಾಳಿ ಮಾಡುತ್ತಿದ್ದಾಗ ಅರೆ ಎಚ್ಚರ-ಅರೆ ನಿದ್ದೆಯಲ್ಲಿ ನಾನು ತೋಳಲಾಡಲು ಪ್ರಾರಂಭಿಸುತ್ತೇನೆ. ಅಂತೂ ನನಗೆ ಅದು ಹಗಲೋ-ರಾತ್ರಿಯೋ, ಕತ್ತಲೋ-ಬೆಳಕೋ, ಆಕಾಶವೋ-ಭೂಮಿಯೋ, ಮನೆಯೋ-ಅತಿಥಿಗೃಹವೋ-ಬಯಲು ಟೆಂಟೋ, ಎಲ್ಲಿ ಮಲಗಿದ್ದೀನೋ ಒಂದೂ ಗೊತ್ತಾಗುವುದಿಲ್ಲ.

ಯಾವ ಲೋಕದ ಧ್ವನಿಗಳೋ, ಮನುಷ್ಯರೋ-ಪ್ರಾಣಿಗಳೋ, ಎಲ್ಲೋ ನೇತಾಡುತ್ತಿರುತ್ತೇನೆ. ಇಂತಹ ಸಮಯದಲ್ಲಿ ನನ್ನ ಕಣ್ಣುಗಳ ಮುಂದೆ ವಿಚಿತ್ರ ಲೋಕಗಳು ತೆರೆದುಕೊಳ್ಳುತ್ತವೆ. ನನ್ನ ಬೆನ್ನಿನ ಹಿಂದೆ ನಿಧಾನವಾಗಿ ದೃಢವಾದ ಎರಡು ರೆಕ್ಕೆಗಳು ಮೂಡುತ್ತವೆ. ತಲೆಯಲ್ಲಿ ಹಕ್ಕಿಗಳಿಗೆ ಅಥವಾ ವಿಮಾನಗಳಿಗೆ ಇರುವಂತಹ ಒಂದು ಜುಟ್ಟು, ಹಿಂದೆ ಒಂದು ಬಾಲ ಸರಾಗವಾಗಿ ಹೊರಹೊಮ್ಮಿ ಕೆಲವೇ ಕ್ಷಣಗಳಲ್ಲಿ ಗಾಳಿಯನ್ನು ಸೀಳಿಕೊಂಡು ಹಾರಿಹೋಗಲು ಸಜ್ಜಾಗಿಬಿಡುತ್ತವೆ. ಇನ್ನೇನು ಬೆಟ್ಟ-ಗುಡ್ಡ, ಕಾಡು-ಕಣಿವೆ ಎಲ್ಲದರ ಮೇಲೆ ತೇಲಾಡುತ್ತ ಹಕ್ಕಿಯಂತೆ ಹಾರುತ್ತಾ ಹೋಗುತ್ತೇನೆ. ಮಧ್ಯೆಮಧ್ಯೆ ಮಿದುಳುಕಾಯಿಯ ಒಳಗಿಂದ ಏನೋ ಅಡಚಣೆಯ ತರಂಗಗಳು ಅಡ್ಡಿ ಪಡಿಸುತ್ತಿರುವಂತೆ ತೋರುತ್ತವೆ. ಹಾರಾಡಲು ಆಗದಂತೆ, ತಡೆಯುತ್ತಿರುತ್ತವೆ. ಆದರೂ ಆಕಾಶದ ಕೆಳಗೆ ಭೂಮಿಯ ಮೇಲೆ ಹಾರುತ್ತಿರುವ ಹಕ್ಕಿಯಂತೆ, ಬೀಸುವ ಗಾಳಿಗೆ ಆಕಡೆ ಈಕಡೆ ವಿಮಾನದಂತೆ ತಲೆ ತಿರುಗಿಸುತ್ತ ಗಾಳಿಯಲ್ಲಿ ಸಮತೋಲನೆಯನ್ನು ಕಾಪಾಡಿಕೊಳ್ಳುತ್ತ ಸಾಗುತ್ತೇನೆ. ತಲೆ ಮೇಲಿರುವ ಜುಟ್ಟು, ಬೆನ್ನಿನ ಮೇಲಿರುವ ರೆಕ್ಕೆಗಳು, ಎಲ್ಲದರ ಹಿಂದೆ ಇರುವ ಜೀವವಿಕಾಸದ ಕೊಂಡಿ, ಬಾಲ ಹಿಂದೆಯೇ ಹಾರಿ ಬರುತ್ತಿರುತ್ತದೆ. ಈ ಕೊಂಡಿಯಲ್ಲಿ ಮಿಲಿಯಾಂತರ ವರ್ಷಗಳ ವೈಜ್ಞಾನಿಕ ಆಲೋಚನೆಗಳ ಕಾಂಪ್ಯಾಕ್ಟ್ ಡಿಸ್ಕ್ ಸೇರಿಕೊಂಡಿರಬೇಕು. ಕೆಲವೊಮ್ಮೆ ಈ ಬಾಲ ಹಿಂದೆ ಇದೆಯೊ ಇಲ್ಲ ಕಡಿದು ಬಿದ್ದಿದಿಯೊ ಎಂಬ ಆತಂಕ ಹುಟ್ಟುತ್ತದೆ. ಪಾಪ, ಬಾಲಕ್ಕೂ ಅದೇ ರೀತಿಯ ಆತಂಕ ಇರಲೇಬೇಕು?

ಈ ನಡುವೆ ದಿಂಬಿನ ಮೇಲಿರುವ ತಲೆಯಲ್ಲಿ ಕಣ್ಣು ಮುಚ್ಚಿಕೊಂಡಿದ್ದರೂ ಯಾವುದೋ ಲೋಕಗಳು ತೆರೆದುಕೊಳ್ಳುತ್ತವೆ. ಪ್ರಜ್ಞೆಯಲ್ಲಿರುವಾಗ ಕೆಲವರು ‘ನಿಮಗೆ ನಿದ್ದೆಯಲ್ಲಿ ಬರುವ ಕನಸುಗಳು ಬ್ಲಾಕ್ ಆಂಡ್ ವೈಟೋ, ಕಲ್ಲರೋ?’ ಎಂದು ಕೇಳುತ್ತಾರೆ. ಆದರೆ ನನಗೆ ಮಾತ್ರ ಭೂಮಿಯ ಮೇಲಿರುವ ಅಸಲಿ ಬಣ್ಣಗಳು ಕನಸುಗಳಲ್ಲಿ ಕಾಣಿಸಿಕೊಳ್ಳುತ್ತವೆ. ಬಹಳಷ್ಟು ಪ್ರಾಣಿಗಳಿಗೆ ಎಲ್ಲವೂ ಕಪ್ಪು ಬಿಳುಪಾಗಿ ಕಾಣಿಸುತ್ತದೆ ಎನ್ನುತ್ತಾರೆ ಕೆಲವರು. ಹಾಗಾದರೆ ಗೂಳಿ, ಸೀರೆ ಉಟ್ಟುಕೊಂಡಿರುವ ಮಹಿಳೆಯರನ್ನು ಮಾತ್ರ ಓಡಿಸಿಕೊಂಡು ಹೋಗುವುದು ಹೇಗೆ? ವಿಷಯ ಬದಲಿಸುವುದು ಸರಿಯಲ್ಲ ಎನ್ನುತ್ತೀದ್ದೀರಿ ತಾನೇ? ಇಂತಹ ಹೊತ್ತಿನಲ್ಲಿ ಕೆಲವು ವಿಚಿತ್ರ ಲೋಕಗಳು ತೆರದುಕೊಳ್ಳುತ್ತವೆ. ಅವು ಯಾವ ಕಾಲಕ್ಕೆ ಸೇರಿದವೊ ಗೊತ್ತಾಗುವುದಿಲ್ಲ. ಕತೆಗಳೋ ಕವಿತೆಗಳೋ ಜನಪದವೋ ಗೊತ್ತಾಗುವುದಿಲ್ಲ. ಮನುಷ್ಯರು ಕಂಡುಹಿಡಿದಿರುವ ಕಾಲ ಅಥವಾ ತೇದಿ, ವರ್ಷಗಳು; ಇದರಲ್ಲಿ ಅವರು ಎಷ್ಟು ಕಾಲದ ಹಿಂದಿನ ಜನರೋ ಕತೆಗಳೋ ಹಿಡಿದುಕೊಳ್ಳಲು ಹೋದಾಗ ಅವರು ಮಾಯವಾಗಿಬಿಟ್ಟಿರುತ್ತಾರೆ. ಎದ್ದು ಕುಳಿತುಕೊಂಡ ತಕ್ಷಣ ಕನಸಿನಲ್ಲಿ ಬಂದಿದ್ದ, ಆ ಕತೆ ಕವಿತೆ, ಜನರ ಹಾವಭಾವ, ಚಲನೆ, ಅವರು ತೊಟ್ಟಿರುವ ಬಟ್ಟೆಬರೆ, ಆ ಸೂರ್ಯನ ಬೆಳಕು (ನಮ್ಮ ಸೂರ್ಯನೋ ಬೇರೆ ಪ್ರಪಂಚದ ಸೂರ್ಯನೋ ಗೊತ್ತಿಲ್ಲ) ಗಿಡಮರ, ಬೆಟ್ಟಗುಡ್ಡ, ಕಾಡುಕಣಿವೆ, ನದಿ ಆಕಾಶ ಎಲ್ಲವನ್ನೂ ಕನ್ನಡ ಅಕ್ಷರಗಳಲ್ಲಿ ಹಿಡಿದುಬಿಡಬೇಕು ಎನಿಸುತ್ತದೆ. ಏಕೆಂದರೆ ನಾನು ಕನ್ನಡ ಬರೆಯುವ ಲೇಖಕ. ಕನ್ನಡದಲ್ಲಿ ಬರೆಯುವುದರಿಂದ ಆರಕ್ಕೆ ಏರಲಿಲ್ಲ, ಮೂರಕ್ಕೆ ಇಳಿಯಲಿಲ್ಲ ಎನ್ನುವ ಕೊರಗಿದ್ದರೂ, ಕನ್ನಡ ಬರೆದೂ ಬರೆದು ಕನ್ನಡಿಗರ ಗೋಳೊಯ್ದುಕೊಳ್ಳತ್ತಲೇ ಇದ್ದೀನಿ.

ನಾನು ಎಲ್ಲಿ ಮಲಗಿದ್ದೀನಿ? ನನ್ನ ಸುತ್ತಮುತ್ತಲೂ ಏನೇನಿದೆ? ಯಾರ್‍ಯಾರಿದ್ದಾರೆ? ಹಗಲೋ-ರಾತ್ರಿಯೋ, ಕತ್ತಲೋ-ಬೆಳಕೋ, ಆಕಾಶವೋ-ಭೂಮಿಯೋ, ಅತಿಥಿಗೃಹವೊ, ಬಯಲುಟೆಂಟೋ ಒಂದೂ ಗೊತ್ತಾಗುವುದಿಲ್ಲ. ಏಳಲು ಪ್ರಯತಿಸುತ್ತೇನೆ, ಎದ್ದು ಕುಳಿತುಕೊಳ್ಳಲು ಬಹಳ ಕಾಲವಾಗಬಹುದು. ಆದರೂ ಪ್ರಯತ್ನಿಸುತ್ತೇನೆ. ಯಾವತ್ತಾದರೂ ಒಂದು ದಿನ ಗ್ಯಾರಂಟಿಯಾಗಿ ಎದ್ದು ಕುಳಿತುಕೊಳ್ಳುತ್ತೇನೆ. ಅಕ್ಕಪಕ್ಕ ನಿಶಬ್ದವಾಗಿದ್ದರೆ ಚನ್ನಾಗಿರುತ್ತದೆ. ನನ್ನ ಕನಸುಗಳಲ್ಲಿ ಕಾಣಿಸಿಕೊಂಡ ಎಲ್ಲಾ ಕತೆ ಕವನ, ಕಾಲ ದೇಶ, ಕೆರೆ ಕುಂಟೆ, ಜನರು ಕೊನೆಗೆ ಪ್ರಾಣಿಗಳು ಎಲ್ಲದರ ಬಗ್ಗೆ ಬರೆದುಬಿಡಬೇಕು. ಹಾಸಿಗೆ ಪಕ್ಕದಲ್ಲಿಯೇ ಪೋಲ್ಡಿಂಗ್ ಟೇಬಲ್ ಇಟ್ಟಿದ್ದೀನಿ. ಅದರ ಮೇಲೆ ಬಟ್ಟಲಲ್ಲಿರುವ ಹಲವು ಪೆನ್ನುಗಳಲ್ಲಿ ಇಂಕ್ ಕೂಡ ಇದೆ. ಪಕ್ಕದಲ್ಲಿ ಪೇಪರ್ ಕೂಡ ಇಟ್ಟಿದ್ದೀನಿ. ಅದೆಲ್ಲಾ ಸರಿ ನನಗೆ ಪ್ರಜ್ಞೆ ಬರುವುದು ಯಾವಾಗ? ಅದನ್ನೆಲ್ಲ ಬರೆದಿಡುವುದು ಯಾವಾಗ? ಸಮಸ್ಯೆ ಎಂದರೆ, ಪ್ರಜ್ಞೆ ಬಂದು, ನಾನು ಎದ್ದು ಕುಳಿತುಕೊಳ್ಳುವುದು. ಎಷ್ಟೋ ಸಲ ಕಷ್ಟಪಟ್ಟು ಕನಸುಗಳಿಂದ ಬಿಡಿಸಿಕೊಂಡು ಎದ್ದು ಕುಳಿತುಕೊಂಡಿದ್ದೀನಿ. ಪೆನ್ನು ಪೇಪರ್ ತೆಗೆದುಕೊಂಡು ಕನಸಿನಲ್ಲಿ ನೋಡಿದ ವಿಷಯಗಳನ್ನು ಬೆರಳುಗಳಿಗೆ ತರಲು ತೀವ್ರವಾಗಿ ಆಲೋಚಿಸಿ ಏನೂ ಆಗದೆ ಮತ್ತೆ ಮಲಗಿ ಕನಸುಗಳಿಗೆ ಜಾರಿಕೊಂಡಿದ್ದೀನಿ; ಮತ್ತೆ ಅದೇ ಗೋಳು. ಎಲ್ಲವೂ ನನ್ನ ಅಕ್ಷರಗಳಿಗೆ ಸಿಕ್ಕಿ ಸಿಗದಂತೆ ಓಡಿಹೋಗುತ್ತವೆ.

ಹಾರಿ ಹಾರಿ ಸುಸ್ತಾದ ನನಗೆ ಇನ್ನು ಮುಂದೆ ಹೋಗುವುದು ಕಷ್ಟ ಎನಿಸುತ್ತದೆ. ಈ ಹಕ್ಕಿಗಳು ಇವೆಯಲ್ಲ ಕೆಲವು ಕೇವಲ ಹಿಡಿಯಷ್ಟು ಗಾತ್ರ, ಕೆಲವು ಹೆಚ್ಚೆಂದರೆ ಐದಾರು ಕೇಜಿ ತೂಕ, ಇನ್ನೂ ಹೆಚ್ಚೆಂದರೆ ಕೆಲವು ಹತ್ತು ಕೆಜಿ ತೂಕ. ಆದರೆ ಅವು ಉತ್ತರ ಧ್ರುವದಿಂದ ದಕ್ಷಿಣ ಧ್ರುವ, ಸೈಬೀರಿಯಾ ಹಿಮಾಲಯದಂತಹ ಪರ್ವತ ಶ್ರೇಣಿಗಳನ್ನು ನಾನ್‌ಸ್ಟಾಪ್ ವಿಮಾನಗಳಂತೆ ಹಾರಿಬಿಡುತ್ತವೆ. ಇವುಗಳಿಗೆ ಎಷ್ಟು ಶಕ್ತಿ ಇರಬಹುದು ಅಥವಾ ಈ ಪಕ್ಷಿಗಳ ದೃಢ ಸಂಕಲ್ಪ ಹಿಮಾಲಯದಷ್ಟು ಎತ್ತರವೆ? ನಮ್ಮ ಹನುಮಂತ ಕೇವಲ ೨೩ ಕಿ.ಮೀಟರು ದೂರ ಹಾರಿದ್ದೆ ದೊಡ್ಡ ವಿಷಯವಾಗಿಬಿಟ್ಟಿದೆ ನಮಗೆ. ಪಾಪ ಈ ಪಕ್ಷಿಗಳು? ಮತ್ತೆ ವಿಷಯ ಬಿಟ್ಟು ಹೊರಗೋಗಬಿಟ್ಟೆನೆ? ಹೀಗೆ ಅರೆಪ್ರಜ್ಞಾವಾಸ್ಥೆಯಲ್ಲಿ ನಿದ್ದೆ-ಪ್ರಜ್ಞೆಗಳ ಮಧ್ಯೆ ತೊಳಲಾಡುತ್ತಿದ್ದಾಗ ಕನಸುಗಳಲ್ಲಿ ಕಂಡ ಕತೆಗಳು ನನ್ನ ಕೈಗೆ ಸಿಕ್ಕಿ ಸಿಗದೆ ಹಾರಿಹೋಗುತ್ತವೆ. ಮುಂದೆಯೂ ಹಾಗೇ ಆಗುತ್ತದೆಯೊ ಏನೋ? ಈ ಸಲ ನಿದ್ದೆಯಿಂದ ಎದ್ದು ಕುಳಿತಾಗ ನಿಜವಾಗಿಯೂ ಬರೆದುಬಿಡಬೇಕು. ಸತ್ಯವಾಗಿಯೂ ಅವು ಅದ್ಭುತ ಕತೆಗಳಾಗಿಬಿಡುತ್ತವೆ. ಕನ್ನಡ ಪತ್ರಿಕೆಗಳ ಸಂಪಾದಕರು ಭಾರಿ ಚೂಸಿ. ನನ್ನ ಈ ಪರಲೋಕದ ಕತೆಗಳನ್ನು ಅವರು ಪ್ರಕಟಿಸುತ್ತಾರೋ ಇಲ್ಲ, ಡಸ್ಟ್‌ಬಿನ್‌ಗೆ ಎಸೆದುಬಿಡುತ್ತಾರೋ ಏನೋ? ಮನುಷ್ಯರು ಅಂತರ್ಜಾಲಕ್ಕೆ ಕಳುಹಿಸಿದ ಉಪಗ್ರಹಗಳ ಬೋಲ್ಟ್ ನಟ್ಟುಗಳು ಸವೆದು ಅವೆಲ್ಲ ಈಗಾಗಲೆ ಸ್ಪೇಸ್ ಡೆಬ್ರಿಗೆ ಬಿದ್ದು ಕೊಳೆಯುತ್ತಿವೆ.

ಈ ಮನುಷ್ಯನೆಂಬ ಕೆಟ್ಟ ಹುಳ ಭೂಮಿಯನ್ನು ಕೊಳಕು ಮಾಡಿದ್ದಲ್ಲದೆ ಅಂತರಿಕ್ಷವನ್ನೂ ತಿಪ್ಪೆಗುಂಡಿ ಮಾಡುತ್ತಿದ್ದಾನೆ. ಈಗ ಮನುಷ್ಯನ ಆಲೋಚನೆಗಳೆಲ್ಲ ಅಂತರ್ಜಾಲ ಸೇರಿ ಮಾಯಾಜಾಲ ಪೆಟ್ಟಿಗೆ ತುಂಬಿಹೋಗುತ್ತಿದೆ. ಪೃಥ್ವಿಯ ಮೇಲಿರುವ ಜನರೆಲ್ಲ ಕತೆ ಕವನ, ಸಿನಿಮಾ ಹಾಡುಪಾಡು, ವಿಜ್ಞಾನ ತಂತ್ರಜ್ಞಾನ ಎಲ್ಲವನ್ನೂ ಇಲ್ಲಿ ತುಂಬುತ್ತಿದ್ದಾರೆ. ಇಲ್ಲಿ ಎಷ್ಟು ತುಂಬಬಹುದು? ಎಷ್ಟು ದೊಡ್ಡ ಸರ್ವರ್ ಗಳನ್ನು ಮನುಷ್ಯ ನಿರ್ಮಿಸಬಹುದು? ನಾನು ಕನಸಿನಲ್ಲಿ ನೋಡಿದ ಎಲ್ಲವೂ ಅಲ್ಲಿರಬಹುದಲ್ಲವೇ? ನಾನು ನೋಡಿದ ಎಲ್ಲವನ್ನೂ ಯಾಕಾದರೂ ಅಲ್ಲಿ ತುಂಬುಬೇಕು? ಎಲ್ಲವೂ ಮೊದಲೆ ಅಲ್ಲಿರಬೇಕಲ್ಲವೆ? ಒಹೋ! ನಾನು ಎಲ್ಲಿಗೋಗಿಬಿಟ್ಟೆ? ನಾನು ಮಲಗಿದ್ದೀನಿ ಅಲ್ಲವೇ? ಈ ೨೫ ವರ್ಷಗಳಲ್ಲಿ ಬಸ್ಸು, ರೈಲು, ವಿಮಾನ ಪ್ರಯಾಣದೊಂದಿಗೆ ತಿಂಗಳಿಗೆ ಸರಾಸರಿ ೪೦೦೦೦-೫೦೦೦೦ ಕಿ.ಮೀಟರು ದೂರವನ್ನು ಬರೀ ಜೀಪುಗಳಲ್ಲೆ ಓಡಾಡಿ ಎಲ್ಲೆಲ್ಲಿ ಮಲಗಿದ್ದೀನೋ ಜ್ಞಾಪಕವಿಲ್ಲ, ಇನ್ನು ನಮ್ಮ ಚಾಲಕರ ಬಗ್ಗೆ ಬರೆದರೆ ನಿಮ್ಮ ತಲೆ ನಿಜವಾಗಿಯೂ ಕೆಟ್ಟೆ ಹೋಗಬಹುದು. ಒಟ್ಟಿನಲ್ಲಿ ಭಾರತ ದೇಶದ ಮೂಲೆಮೂಲೆಗಳಲ್ಲಿ ಮರಗಳ ಕೆಳಗೆ, ಸ್ಮಶಾನಗಳ ಮೇಲೆ, ಟೆಂಟಿನೊಳಗೆ, ಕಾಡು ಮೇಡು ಕಣಿವೆ, ಹಳ್ಳಿ ಪಟ್ಟಣ, ಅತಿಥಿಗೃಹ ಮನೆ ನಗರಗಳ ಸುಸಜ್ಜಿತ ಹೋಟೆಲುಗಳು ಹೀಗೆ ಸೂರ್ಯ ಮುಳಗಿದ ಕಡೆಯಲ್ಲ ಮಲಗಿದ್ದೀನಿ.

ಸ್ವಲ್ಪ ತಡೆಯಿರಿ? ಅರೆ ಪ್ರಜ್ಞಾವಸ್ಥಿತಿಯಿಂದ ವಾಸ್ಥವ ಬಾಗಿಲಿನ ಹತ್ತಿರಕ್ಕೆ ಬರುತ್ತಿದ್ದೀನಿ. ನೀರವ ರಾತ್ರಿ, ಎಲ್ಲವೂ ನಿಶಬ್ದ. ಆದರೂ ಪ್ರಕೃತಿ ಯಾವುದೋ ಚಟುವಟಿಕೆಯಲ್ಲಿ ತೊಡಗಿದೆ. ನಿಶಬ್ದದಿಂದ ಸದ್ದಿನ ಕಡೆಗೆ, ಕಿವಿಗಳಿಗೆ ಏನೋ ಕೇಳಿಸುತ್ತಿದೆ. ಕತೆಗಳು ಮಾತ್ರ ನನ್ನನ್ನು ಕನಸಿನಲ್ಲಿ ಕಾಡಿ ದೂರ ದೂರ ಹಾರಿ ಹೋಗುತ್ತಿವೆ. ಈ ರಾತ್ರಿಯೂ ಅವುಗಳನ್ನು ಹಿಡಿಯಲಾಗಲಿಲ್ಲ. ನಿಮ್ಮನ್ನು ಇಷ್ಟು ದೂರ ಕರೆದು ತಂದು ಅಬ್ರಪ್ಟಾಗಿ ಇಲ್ಲಿ ನಿಲ್ಲಿಸಿದ್ದಕ್ಕೆ ಕ್ಷಮೆ ಇರಲಿ. ನಾನು ಏನು ಮಾಡಲಿ? ನನ್ನ ಯೋಗ್ಯತೆಯೇ ಇಷ್ಟು. ಸಾಧ್ಯವಾದರೆ ನಿಮ್ಮ ಕನಸುಗಳಲ್ಲಿ ಬರುವ ಕತೆಗಳನ್ನು ನೀವೆ ಬರೆಯಿರಿ, ಇಲ್ಲ ನನಗೆ ಹೇಳಿ. ಈಗ ಹಾಸಿಗೆ ಮೇಲೆ ಎದ್ದು ಕುಳಿತಿದ್ದೀನಿ. ನಾನು ಎಲ್ಲಿದ್ದೀನಿ? ಸ್ವಲ್ಪಸ್ವಲ್ಪ ಅರ್ಥವಾಗುತ್ತಿದೆ. ಶಿಲ್ಲಾಂಗ್‌ನ ಲೈಹಿತ್‌ಮುಖ್‌ರಹ ಕಾಲೋನಿಯ ಒಂದು ಅಪಾರ್ಟ್‌ಮೆಂಟ್‌ನ ಕೆಳಅಂತಸ್ತಿನ ಮೊದಲನೇ ಮನೆಯಲ್ಲಿ ಒಬ್ಬನೇ ಕುಳಿತಿದ್ದೀನಿ. ನೀರವ ರಾತ್ರಿ. ಈ ಪರ್ವತಗಳಿಗೆ ಈಗ ಹೇಳತೀರದಷ್ಟು ಚಳಿ. ನಾನು ಹುಟ್ಟಿದ ಬ್ಯಾಟರಾಯನಹಳ್ಳಿ ಇಲ್ಲಿಂದ ಕನಿಷ್ಠ ೩೦೦೦ ಕಿ.ಮೀಟರು ದೂರದಲ್ಲಿದೆ. ನನ್ನ ಪತ್ನಿ ಮತ್ತು ಮಗ ಬೆಂಗಳೂರಿನಲ್ಲಿದ್ದಾರೆ. ಅವರು ಯಾವುದಾದರೂ ಕನಸುಗಳನ್ನು ಕಾಣುತ್ತಿದ್ದಾರೋ ಇಲ್ಲವೋ ಗೊತ್ತಿಲ್ಲ. ನಾನು ಮಾತ್ರ ಒಂಟಿ. ಕಿಟಕಿಗಳಿಂದ ಬೀಳುತ್ತಿರುವ ಸಣ್ಣ ಬೆಳಕಿನಲ್ಲಿ ಟೇಬಲು ಕಾಣಿಸುತ್ತಿದೆ, ಬಟ್ಟಲು ತುಂಬಿಕೊಂಡಿರುವ ಪೆನ್ನುಗಳು ಕೈಗೆ ತೆಗೆದುಕೊಳ್ಳುವಂತೆ ಸವಾಲಾಕುತ್ತಿವೆ. ಲ್ಯಾಪ್‌ಟಾಪ್ ಕಪ್ಪೆಚಿಪ್ಪಿನಂತೆ ಚಳಿಗೆ ಮುದುರಿ ಮಲಗಿಕೊಂಡಿದೆ. ಪಾಪ ಅದನ್ನು ಲೆದರ್ ಬ್ಯಾಗಿನಲ್ಲಿಡಲು ಮರೆತುಬಿಟ್ಟಿದ್ದೆ. ನಾಲ್ಕು ಕಡೆ ಗೋಡೆಗಳು, ಒಂದು ಗೋಡೆಯಲ್ಲಿ ಬಾಗಿಲು ಅರೆ ತೆರೆದುಕೊಂಡು ದಾರಿ ಇಲ್ಲಿದೆ ಎನ್ನುತ್ತಿದೆ.

ಈ ನನ್ನ ಒಂಟಿತನ ಪಾರಾಗಬೇಕಾದರೆ, ಸೂರ್ಯನು ದಯೆ ತೋರಬೇಕು. ಎಂದಿನಂತೆ ದೈನಂದಿನ ಕರ್ಮಗಳನ್ನು ಮುಗಿಸಿ ರಸ್ತೆಗೆ ಬರಬೇಕು. ಬಹಳ ಖುಷಿಯ ವಿಷಯವೆಂದರೆ, ಶಿಲ್ಲಾಂಗ್‌ಗೆ ಬಂದು ಒಂಟಿಯಾದ ಮೇಲೆ ಮೊದಲ ಬಾರಿಗೆ ಅಡಿಗೆ ಮಾಡುವುದನ್ನು ಕಲಿತುಕೊಂಡಿದ್ದೀನಿ. ಅದಕ್ಕೆ ಮುಂಚೆ ಎಲ್ಲೆ ಹೋದರೂ ಒಬ್ಬ ಅಡಿಗೆಯವನನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದೆ. ಬೆಂಗಳೂರಿನಿಂದ ಬಂದಿರುವ ನಾವು ಐದಾರು ಸಹೋದ್ಯೋಗಿಗಳು ಈಗೀಗ ಬೆಳಿಗ್ಗೆ, ಸಾಯಂಕಾಲ ತಿಂಡಿ ಏನು? ಅಡಿಗೆ ಏನು ಮಾಡಿದ್ದೀರಿ? ಎಂದು ಒಬ್ಬರನ್ನೊಬ್ಬರು ಕೇಳಿಕೊಳ್ಳುತ್ತೇವೆ. ಅಷ್ಟೇ ಅಲ್ಲ ಅಡಿಗೆ ಮಾಡುವುದು ಇಷ್ಟು ಸಲೀಸೆ ಎಂದೂ ಕೂಡ ಮಾತನಾಡಿಕೊಳ್ಳುತ್ತೇವೆ.