ಮುಂಗಾರು ಸುರಿಯುತ್ತದೆ
ಆಕಾಶವೆಲ್ಲಾ ಕಪ್ಪುಮೋಡದ ಸಂದಣಿ
ದಡಬಡಿಸಿ ಒಣಬಟ್ಟೆ ತೆಗೆಯುವಷ್ಟರಲ್ಲಿ
ದಪ್ಪದಪ್ಪ ಜೋರು ಹನಿ
ಎದುರು ವಠಾರದಲಿ ಪುಟ್ಟದೊಂದು
ನದಿ ಹುಟ್ಟಿ, ನಮ್ಮ ಮನೆಗುಂಟ ಹರಿದು
ಮೋರಿ ಸೇರುತ್ತದೆ ರಸ್ತೆ ತಿರುವಿನಲ್ಲಿ

ರಸ್ತೆಬದಿ ಸಿಗರೇಟು ಸುಡುತ್ತಿದ್ದ
ಹುಡುಗಿಯರು ತೆಳುದಾವಣಿಯೊಂದನು
ಕೆಲವೊಮ್ಮೆ ಬಿಡಿಹಾಳೆಗಳನು ಹೊಚ್ಚಿ
ಓಡಿಬರುವರು ಜೋರುನಗೆಯಲಿ
ಪಿ.ಜಿ. ಸೇರಲು..

ಈಗಿನ್ನೂ ಮೊದಲ ಮಳೆಗಾಲಕ್ಕೆ
ಸಜ್ಜಾದ ಗುಂಡನಿಗೆ
ಅಜ್ಜಿ ತೋರುತ್ತಾಳೆ ಮಳೆ ಕಿಟಕಿಯಿಂದ
ಮೊನ್ನೆ ಮದುವೆಯಾದ ಜೋಡಿ
ಕೋಣೆ ಸೇರುತ್ತಾರೆ, ಗುಡುಗು ಸದ್ದಿಗೆ
ಬೆಚ್ಚಿ ತೋಳುಹಿಡಿಯುತ್ತಾಳೆ ಮಡದಿ
ಯಾರದೋ ಮನೆ ಕಾಫಿ ಪರಿಮಳ,
ಮತ್ತೆಲ್ಲಿಯದೋ ಈರುಳ್ಳಿ ಘಮಲು
ತೇಲಿ ಬರುತ್ತದೆ ಒಮ್ಮೆಯೂ ತಪ್ಪದೆ

ನಾನು ನಿಲ್ಲುತ್ತೇನೆ ಮನೆಯ ಹೊರಗೆ
ಮಳೆಹಾಡಿಗೆ ಕುಣಿಯಲು ಗೆಜ್ಜೆ ಬೇಕಿಲ್ಲ
ಲಜ್ಜೆ ಕಾಡಿದರೆ, ಹೊಸ್ತಿಲಲಿ ನಿಂತು
ಮಳೆ ಕಣ್ತುಂಬಲು ಶುಲ್ಕವಿಲ್ಲ
ಏಕೆ ಈಗೀಗ ಕಾಣುವುದಿಲ್ಲ ಕಾಗದದ ದೋಣಿ
ಆಲಿಕಲ್ಲಿಗೇಕೆ ಇಲ್ಲ ಮಕ್ಕಳ ಪೈಪೋಟಿ
ಮಳೆ ಸುರಿದು ಇಳೆ ಸಾಫಾದ ಘಳಿಗೆ
ಅಪ್ಪನನು ಹುಡುಕುತ್ತೇನೆ ಶುಭ್ರ ಆಗಸದಾಚೆ
ಮಳೆಯ ಹಾಡಿಗೆ, ಎದೆಕದವ ತೆರೆಯಲು
ಕಲಿಸಿಕೊಟ್ಟಿದ್ದು ಅಪ್ಪನೇ

ನಾಗಶ್ರೀ ಎಸ್ ಬೆಂಗಳೂರು ನಿವಾಸಿ
ವಾಣಿಜ್ಯ ಶಾಸ್ತ್ರವನ್ನು ಓದಿದ ಇವರಿಗೆ ಸಾಹಿತ್ಯದಲ್ಲಿ ಅಪಾರ ಆಸಕ್ತಿ
ಆಕಾಶವಾಣಿ ಎಫ್. ಎಂ. ರೇನ್ಬೋದಲ್ಲಿ ಆರ್.ಜೆ ಹಾಗೂ ದೂರದರ್ಶನದಲ್ಲಿ ನಿರೂಪಕಿಯಾಗಿ ಕೆಲಸಮಾಡುತ್ತಿದ್ದಾರೆ.