ಒಂದು ನಿರ್ದಿಷ್ಟ ಪಠ್ಯವು ಇವತ್ತಿನ ತನಕ ರಂಗದಲ್ಲಿ ವ್ಯಾಖ್ಯಾನಗೊಂಡ ಲೋಕದೃಷ್ಟಿಯೊಳಗೆ ಮತ್ತು ಒಂದು ಕಲಾರೂಪದ ಮಿತಿಯೊಳಗೇ ಹೇಗೆ ವಿಸ್ತಾರಗೊಳ್ಳುತ್ತದೆ ಎನ್ನುವುದನ್ನು ನೋಡದಿದ್ದರೆ ಪ್ರದರ್ಶನಕ್ಕೆ ನ್ಯಾಯ ಒದಗಿಸಿದಂತಾಗುವುದಿಲ್ಲ. ಇದು ಒಂದು ಪ್ರದರ್ಶನದ ವಿಮರ್ಶೆಯಲ್ಲ. ಆದರೆ ಒಂದು ಪಾತ್ರವನ್ನು ಹೇಗೆ ಆ ಮಿತಿಯೊಳಗೇ ಅನಾವರಣಗೊಳಿಸಿ, ಬೇರೆ ರೀತಿಯ ಅಸ್ಮಿತೆಯನ್ನು ಸ್ಥಾಪಿಸಬಹುದೆಂದು ತೋರಿಸಿದ ಒಂದು ಅಪೂರ್ವ ಚಿತ್ರಣವನ್ನು ಇಲ್ಲಿ ಹಂಚಿಕೊಳ್ಳಲಾಗಿದೆ. ಉದಾಹರಣೆಯಾಗಿ ದಾಕ್ಷಾಯಿಣಿ ಪಾತ್ರವನ್ನು ಕೈಗೆತ್ತಿಕೊಳ್ಳಲಾಗಿದೆ. ಅನೇಕ ಪ್ರಸಂಗಗಳಲ್ಲಿ ಚಿತ್ರಣಗೊಂಡ ದಾಕ್ಷಾಯಿಣಿಯ ಪಾತ್ರಗಳನ್ನು ಗಮನಿಸಿ, ಅದರ ಆಧಾರದಲ್ಲಿ ಈ ವಿಶ್ಲೇಷಣೆ ನಡೆಸಲಾಗಿದೆ.
ಯಕ್ಷಾರ್ಥ ಚಿಂತಾಮಣಿಯಲ್ಲಿ ಕೃತಿ ಆರ್. ಪುರಪ್ಪೇಮನೆ ಬರಹ 

 

ದಾಕ್ಷಾಯಿಣಿ ಮತ್ತು ಶಿವನ ಕತೆ ಕನ್ನಡದ ಓದುಗರಿಗೆಲ್ಲ ತಿಳಿದೇ ಇದೆ. ಕವಿ ದೇವಿದಾಸ ಬರೆದ ಗಿರಿಜಾ ಕಲ್ಯಾಣ ಪ್ರಸಂಗದ ಮೊದಲ ಭಾಗ ದಕ್ಷಾಧ್ವರ ಅಥವಾ ದಕ್ಷಯಜ್ಞವೆಂದು ರಂಗಪಠ್ಯವಾಗಿ ಯಕ್ಷಗಾನದಲ್ಲಿ ಪ್ರಚಲಿತವಾಗಿದೆ. ರಂಗದಲ್ಲಿ ಎಲ್ಲ ಭಾಗವೂ ಎಲ್ಲಾ ಪ್ರದರ್ಶನದಲ್ಲೂ ಪೂರ್ತಿಯಾಗಿ ಕತೆಯು ಪ್ರದರ್ಶಿಸಲ್ಪಡುತ್ತದೆ ಎಂದಲ್ಲ. ಅವತ್ತಿನ ಸಮಯ, ಕಲಾವಿದರುಗಳನ್ನು ನೋಡಿಕೊಂಡು ಕೆಲವೊಂದು ಭಾಗ ಅಭಿನಯಿಸದೇ ಕತೆಯಾಗಿ ಮಾತ್ರ ಹೇಳಲ್ಪಡುತ್ತದೆ. ಕೂಟ(ತಾಳಮದ್ದಲೆ)ದಲ್ಲಿ ಮಾತು-ಮಂಥನಕ್ಕೆ ಅವಕಾಶವಿರುವ ಜಾಗ ಹೆಚ್ಚು ವಿಸ್ತರಿಸಲಾದರೆ, ಆಟದಲ್ಲಿ ದೃಶ್ಯ ವೈಭವವಿರುವುದನ್ನು ಬಿಡದೇ ರಂಗಕ್ಕೆ ತರುತ್ತಾರೆ. ಆದರೆ ಎಲ್ಲಾ ಪ್ರದರ್ಶನಗಳಲ್ಲಿ ಬರುವ ಮುಖ್ಯವಾದ ಮೂರು ದೃಶ್ಯ; ಜ್ಞಾನಸತ್ರದ ಸಭೆಯಲ್ಲಿ ದಕ್ಷನಿಗಾಗುವ ಅವಮಾನ, ಅದರಿಂದ ತಳೆಯುವ ಯಜ್ಞ ಮಾಡುವ ನಿರ್ಧಾರ, ಕೈಲಾಸದಲ್ಲಿ ನಡೆಯುವ ಬ್ರಾಹ್ಮಣ, ಶಿವ, ಸತಿಯರ ನಡುವಿನ ಸಂವಾದದ ಕೊನೆಯಲ್ಲಿ ಅವಳು ಒಬ್ಬಳೇ ದಕ್ಷಯಜ್ಞಕ್ಕೆ ಹೋಗುವುದು ಮತ್ತು ಮುಂದೆ ದಕ್ಷನ ಯಜ್ಞಶಾಲೆಯಲ್ಲಿ ಅವಳ ಮರಣ ಮತ್ತು ವೀರಭದ್ರನ ಪ್ರತೀಕಾರ.

ತನಗೆ ಇಷ್ಟವಿಲ್ಲದವನನ್ನು ಮದುವೆಯಾದ ಮಗಳು ಮತ್ತು ಅಳಿಯನ ಮೇಲೆ ದಕ್ಷನು ಹಗೆ ಸಾಧಿಸಿದ ಕತೆಯಾಗಿ ಇಡೀ ಪ್ರಸಂಗವನ್ನು ನೋಡಬಹುದು. ಶಿವನ ಜೀವನ ವಿಧಾನದ ಕೊಳಕು, ಅವನ ಸ್ಮಶಾನ ವಾಸ, ಭೂತ ಪಿಶಾಚಿ ಸೈನಿಕರು ಮತ್ತು ಮಾಂಸಾಹಾರಿ ಅಸುರರು ದೇವರೆಂದು ಒಪ್ಪುವ ಇವನ ಕೈಗೆ ಮಗಳನ್ನು ಕೊಟ್ಟಿದ್ದು ಮಂಗನ ಕೈಗೆ ಮಾಣಿಕ್ಯ ಕೊಟ್ಟಂತಾಗಿದೆ ಎನ್ನುತ್ತಾನೆ ದಕ್ಷ. ಅಪ್ಪನಾದ ಬ್ರಹ್ಮನ ಮಾತಿನಿಂದಾಗಿ ಸುಮ್ಮನುಳಿದೆ ಎನ್ನುವುದೆಲ್ಲ ಪದ್ಯಗಳಲ್ಲೆ ಇದೆ. ಈ ಕತೆಯು ಮರ್ಯಾದಾ ಹತ್ಯೆಯ ಇನ್ನೊಂದು ವಿಧವೆಂದೊ ಅಥವಾ ಅದರ ಮೂಲ ಇದೆಂದೊ ಹೇಗೂ ಕಾಣಿಸುತ್ತದೆ. ಅಲ್ಲದೇ ಯಕ್ಷಗಾನದೊಳಗಿನ ಪುರಾಣದ ಕಥೆ ತೋರಿಸುವ ಚಾರಿತ್ರಿಕ ನೆನಪುಗಳನ್ನು ನೋಡಿದಾಗ, ಸ್ತ್ರೀ ಪಾತ್ರಗಳನ್ನು ಯಕ್ಷಗಾನ ನಿರ್ವಹಿಸುವ ರೀತಿಯಲ್ಲೇ ಹಲವು ವೈರುಧ್ಯಗಳಿವೆ. ಅದನ್ನು ಇಲ್ಲಿ ವಿಸ್ತರಿಸುವುದಿಲ್ಲ.

ಆದರೆ ಒಂದು ನಿರ್ದಿಷ್ಟ ಪಠ್ಯವು ಇವತ್ತಿನ ತನಕ ರಂಗದಲ್ಲಿ ವ್ಯಾಖ್ಯಾನಗೊಂಡ ಲೋಕದೃಷ್ಟಿಯೊಳಗೆ ಮತ್ತು ಒಂದು ಕಲಾರೂಪದ ಮಿತಿಯೊಳಗೇ ಅದು ಹೇಗೆ ವಿಸ್ತಾರಗೊಳ್ಳುತ್ತದೆ ಎನ್ನುವುದನ್ನು ನೋಡದಿದ್ದರೆ ಪ್ರದರ್ಶನಕ್ಕೆ ನ್ಯಾಯ ಒದಗಿಸಿದಂತಾಗುವುದಿಲ್ಲ. ಇದು ಒಂದು ಪ್ರದರ್ಶನದ ವಿಮರ್ಶೆಯಲ್ಲ. ಆದರೆ ಒಂದು ಪಾತ್ರವನ್ನು-ಇಲ್ಲಿ ದಾಕ್ಷಾಯಿಣಿಯದು-ಹೇಗೆ ಆ ಮಿತಿಯೊಳಗೇ ಅನಾವರಣಗೊಳಿಸಿ, ಬೇರೆ ರೀತಿಯ ಅಸ್ಮಿತೆಯನ್ನು ಸ್ಥಾಪಿಸಬಹುದೆಂದು ತೋರಿಸಿದ ಒಂದು ಅಪೂರ್ವ ಚಿತ್ರಣವನ್ನು ಇಲ್ಲಿ ಹಂಚಿಕೊಳ್ಳುವುದೇ ಈ ಲೇಖನದ ಉದ್ದೇಶ. ಈ ಚಿತ್ರಣವನ್ನು, ನಾನು ನೋಡಿದ ಇತರ ದಾಕ್ಷಾಯಿಣಿಯ ಪಾತ್ರಗಳ ಅನುಭವದಲ್ಲಿ, ಮತ್ತು ಆ ಪ್ರಸಂಗವನ್ನು ನಮ್ಮ ತಂಡದಲ್ಲಿ ಮಾಡುವಾಗ ಸಾಧ್ಯವಾದ ಆಲೋಚನೆಗಳ ಸಂದರ್ಭದಲ್ಲಿಟ್ಟು ನೋಡಿದ್ದರಿಂದಲೇ ಈ ಚಿತ್ರಣ ತೋರಿಸಿಕೊಟ್ಟ ಹಾದಿಯ ಮಹತ್ವವನ್ನು ಒಮ್ಮೆ ನಿಂತು ಇಲ್ಲಿ ಅವಲೋಕಿಸುವುದು ಮುಖ್ಯವೆನಿಸಿತು.

ಯಕ್ಷ ಸಂಭ್ರಮ ಟ್ರಸ್ಟ್, ಸಿರಸಿ ಸಂಘಟಿಸಿದ ಈ ದಕ್ಷಾಧ್ವರ ತಾಳಮದ್ದಲೆಯಲ್ಲಿ, ದಾಕ್ಷಾಯಿಣಿ ಪಾತ್ರ ಮಾಡಿದವರು ವಾಸುದೇವ ರಂಗಾ ಭಟ್, ಮಧೂರು. ಅವರ ಜೊತೆಗಿದ್ದ ಇತರ ಹಿಮ್ಮೇಳ, ಮುಮ್ಮೇಳ ಕಲಾವಿದರೆಲ್ಲರೂ ಅವರಂತೆ ವೃತ್ತಿಪರವಾಗಿ ಯಕ್ಷಗಾನದಲ್ಲಿ ತೊಡಗಿಸಿಕೊಂಡಿರುವವರೆ. ಪ್ರಸಂಗದ ಪದ್ಯಗಳ ಆಯ್ಕೆಯೊ ಅಥವಾ ಅದರ ನಡೆಯೊ- ಎಲ್ಲವೂ ಈಗ ರಂಗದಲ್ಲಿ, ಪ್ರೇಕ್ಷಕ ಸಮುದಾಯದಲ್ಲಿ ಒಪ್ಪಿತವಾಗಿರುವ ವೃತ್ತಿಪರ ದಾರಿಯಲ್ಲೇ ಈ ಅನಾವರಣ ಆದದ್ದೆಂದು ಹೇಳಲು ಈ ಮಾಹಿತಿ.

ಕವಿ, ದಾಕ್ಷಾಯಿಣಿ ಮತ್ತು ಶಿವನ ಸಂಬಂಧವನ್ನು ನೆಲೆಗೊಳಿಸುವುದು, ಮೇಲೆ ಹೇಳಿದ ಕೈಲಾಸದ ದೃಶ್ಯದಲ್ಲಿ. ಅಲ್ಲಿ ದಾಕ್ಷಾಯಿಣಿ ಬ್ರಾಹ್ಮಣರಿಂದ ಯಾಗದ ಸುದ್ದಿ ಕೇಳಿದ್ದನ್ನು ಶಿವನಿಗೆ ಹೇಳುವಾಗಲೇ, ಅವಳಿಗೆ ಕರೆ ಬರದಿದ್ದಕ್ಕೆ ಅಳುಕಿದ್ದುದರಿಂದಲೇ ಅಪ್ಪನನ್ನು ‘ನಿಮ್ಮಯ ಮಾವ’ ಎಂದು ಸಂಬೋಧಿಸುತ್ತಾ, ದಕ್ಷನಿಗೂ ಶಿವನಿಗೂ ಇರುವ ಸಂಬಂಧವನ್ನು ನೆನಪು ಮಾಡುತ್ತಾಳೆ. ಮುಂದಿನ ಪದ್ಯದಲ್ಲಿ ಅಲ್ಲಿಗೆ ಹೋಗೋಣ, ಯಾಗದ ‘ಅಖಿಲ ವೈಭವಗಳನ್ನು’ ನೋಡಿ ನಾಳೆಯೇ ಬರೋಣ, ಎನ್ನುತ್ತಾಳೆ. ಈ ಪದ್ಯದಲ್ಲೇ ಶಿವನಿಂದ ಬರಬಹುದಾದ ವಿರೋಧದ ಅಂದಾಜಿನಲ್ಲೇ, ತನ್ನ ಮನಸ್ಸಿನ ಆಸೆಗಳನ್ನು ಯಾವಾಗಲೂ ಪೂರೈಸುವ ಗಂಡನಾಗಿ ಮಾಡುವ ಯಾವತ್ತಿನ ಕೆಲಸಗಳಂತೆಯೇ ಇದು, ಅಲ್ಲಿಗೆ ಹೋಗದೇ ತನ್ನ ‘ಮನ ಸೈರಿಸದು’ ಎಂದು ಅಗ್ರಹಿಸುತ್ತಾಳೆ. ಮುಂದಿನ ಪದ್ಯಗಳಲ್ಲಿ ಅಕ್ಕತಂಗಿಯರನ್ನು ಕಾಣಬೇಕೆಂದೂ, ಕಾಂತನ ಮನೆಗೂ, ಅಮ್ಮನ ಮನೆಗೂ, ಗುರುವಿನ ಮನೆಗೂ, ಅರಸನ ಮನೆಗೂ ಕರೆ ಬೇಕೆಂಬುದಿಲ್ಲ ಎನ್ನುತ್ತಾಳೆ. ಅವಳ ಈ ಸಂದರ್ಭದ ಕೊನೆಯ ಪದ್ಯದಲ್ಲಿ, ಗಂಡನೊಟ್ಟಿಗೆ ಎಷ್ಟೇ ಸಂತೋಷದಿಂದಿದ್ದರೂ ಹೆಂಡತಿಗೆ ತವರು ಮನೆಯ ಹಬ್ಬಕ್ಕೆ ಹೋಗುವ ಬಯಕೆ ಲೋಕವೇ ಒಪ್ಪುವಂತದ್ದು ಎಂದೂ ಹೇಳುತ್ತಾಳೆ. ಇಲ್ಲೆಲ್ಲಾ ಬೇರೆ ಬೇರೆ ಪ್ರದರ್ಶನದ ಶಿವ-ದಾಕ್ಷಾಯಿಣಿಯರು ಬೇರೆ ಬೇರೆ ವಿಧದಲ್ಲಿ ದಾಂಪತ್ಯದೊಳಗಿನ ತಮ್ಮ ಸಂಬಂಧವನ್ನು ಹುಡುಕಿಕೊಳ್ಳುತ್ತಾರೆ.
ನಮ್ಮ ತಂಡದ ಪಾತ್ರಧಾರಿಗಳಿಗೆ ಈ ಅನುಭವಗಳು ಸ್ವಂತದ್ದೂ ಆಗಿರುವುದರಿಂದ, ತಾವು ಹುಟ್ಟಿ ಬೆಳೆದ ಪರಿಸರದಿಂದ, ಮನೆಯವರ ವಾತ್ಸಲ್ಯದಿಂದ ದೂರ ಬರುವ ಮತ್ತು ಹೊಸದಕ್ಕೆ ಎಲ್ಲಾ ರೀತಿಯಲ್ಲೂ ಹೊಂದಿಕೊಳ್ಳುವ ಅನಿವಾರ್ಯತೆಯನ್ನು ಸಮಾಜ ಗಂಡಿಗೆ ಕೊಟ್ಟಿಲ್ಲವೆನ್ನುವುದನ್ನು ನೆನಪಿಸಿ, ಈ ಸಮಯದ ಕಷ್ಟಗಳನ್ನು ಸ್ವಲ್ಪವಾದರೂ ಹಗುರ ಮಾಡಬಹುದಾದ, ತವರು ಮನೆಯ ತಿರುಗಾಟ ಎಷ್ಟು ಪ್ರಮುಖವಾದದ್ದೆಂದೂ ಹೇಳಲೆತ್ನಿಸುತ್ತಾರೆ.

ಶಿವ ಕೊನೆಗೆ, ಜ್ಞಾನಸತ್ರದಲ್ಲಿ ನಡೆದ ವಿಷಯವನ್ನು ಹೇಳಿ, ಯಾಗ ಮಾಡುವುದು, ಕರೆಯದಿರುವುದು ದ್ವೇಷದ ಸಾಧನೆಗಾಗಿ. ಅಲ್ಲಿಗೆ ಹೋಗುವುದು ಉಚಿತವಲ್ಲ ಅನ್ನುತ್ತಾನೆ. ನಂತರದಲ್ಲಿ ಶಿವ, ಇವಳಿಗೆ ಕೇಡು ಬಂತೆಂದು, ಇನ್ನು ಮಾತಿಗೆ ಇವಳನ್ನು ಬಗ್ಗಿಸುವ ಶಕ್ತಿಯಿಲ್ಲವೆಂದೂ ಮೌನ ವಹಿಸಿರುವ ಪದ್ಯ ಇರುವುದರಿಂದಲೇ ದಾಕ್ಷಾಯಿಣಿಗೆ ಮುಂದಿನ ಪದ್ಯಗಳಲ್ಲಿ ಸಾಕಷ್ಟು ಜಾಗ ಸಿಗುತ್ತದೆ. ಸಂಭಾಷಣೆಗೆ ತೆರೆದುಕೊಳ್ಳದ ಪಠ್ಯದ ಈ ಸಂದರ್ಭದ ಅವಕಾಶವನ್ನು ಗುರುತಿಸಿಕೊಂಡಿರುವುದು ಕೂಡ ಅಷ್ಟೇ ಅನನ್ಯವಾದದ್ದು.
ಈ ದಾಕ್ಷಾಯಿಣಿಯ ಪಾತ್ರ ಸಾಗಿಬಂದ ಹಾದಿಯ ಮಹತ್ವವನ್ನು ಹೀಗೆ ಗುರುತಿಸಬಹುದೆಂದೆನಿಸುತ್ತದೆ.

1 ಹಿಂದಿನ ದಾಕ್ಷಾಯಿಣಿಯರು, ‘ಹೋಗಬೇಡ’ ಎನ್ನುವ ಶಿವನ ‘ವಚನ’ಕ್ಕಿರುವ ಸಂಕಲ್ಪ ಬಲದ ಬಗ್ಗೆ ಮಾತಾಡುತ್ತಾ, ಹೆಣ್ಣಿಗೆ ಇರುವ ತಾಯಿಮನೆಯ ಸೆಳೆತ, ಗಂಡನನ್ನು ಬಿಟ್ಟು ಹೋಗುವ ದುಃಖ, ಇವುಗಳನ್ನೇ ಹಲವು ರೀತಿಯಲ್ಲಿ ಹೇಳುವುದಕ್ಕೆ ಪ್ರಯತ್ನಿಸಿದ್ದಾರೆ. ನಮ್ಮ ಹೊಸ ದಾಕ್ಷಾಯಣಿ, ಶಿವ ಹೇಳಿದ ತನ್ನಪ್ಪನ ಶಿವವಿರೋಧದ ಘಟನೆಗೆ ಉತ್ತರವಾಗಿ, ತನ್ನ ತಂದೆ ಮಾಡುವ ತಪ್ಪನ್ನು ಎಚ್ಚರಿಸುವುದು ಅವಳ ಕರ್ತವ್ಯದ ಭಾಗವಾಗಿ ನೋಡುತ್ತಾಳೆ. ಶಿವವೈಷಮ್ಯದ ಪಾತಕದಿಂದ ಮನೆಯವರನ್ನು ವಿಮುಕ್ತಿಗೊಳಿಸದೆ ಇರುವುದು ಮಗಳಾಗಿ ಸಾಧುವೇ ಎಂದು ಪ್ರಶ್ನಿಸುತ್ತಾ, ಅಮ್ಮನ ಮನೆಯಲ್ಲಿ ವಿಪತ್ತು ಉಂಟಾಗುತ್ತದೆ ಎಂದು ಗೊತ್ತಾದ ಮೇಲೆ, ಅಲ್ಲಿ ಹೋಗದೆ ಇಲ್ಲಿರುವುದೇ ತಪ್ಪೆನ್ನುವುದನ್ನು ವಿವರಿಸುತ್ತಾಳೆ. ತನ್ನ ತವರಿನವರಿಂದಲೇ ಗಂಡನಿಗೆ ಅವಮಾನವಾದರೆ, ಅದನ್ನು ಸರಿ ಪಡಿಸುವುದು ಪತ್ನಿಯಾದವಳ ಕರ್ತವ್ಯವೂ ಹೌದು. ಅದ್ದರಿಂದಲೇ ಇಲ್ಲಿಗೆ ಹೋಗಲೇಬೇಕಾಗಿರುವುದು ಅವಳಲ್ಲದೆ ಅವನಲ್ಲ ಎನ್ನುತ್ತಾಳೆ. ಇದು ನಾನೊಬ್ಬಳೇ ಹೋಗುತ್ತೇನೆಂದು ಹೇಳಲೇಬೇಕಾದ ಪ್ರಸಂಗದೊಳಗಿನ ಮಾತಿಗೂ ಅನುಕೂಲವಾಗುವಂತಿದೆ.

ಎಲ್ಲಾ ಪ್ರದರ್ಶನಗಳಲ್ಲಿ ಬರುವ ಮುಖ್ಯವಾದ ಮೂರು ದೃಶ್ಯ; ಜ್ಞಾನಸತ್ರದ ಸಭೆಯಲ್ಲಿ ದಕ್ಷನಿಗಾಗುವ ಅವಮಾನ, ಅದರಿಂದ ತಳೆಯುವ ಯಜ್ಞ ಮಾಡುವ ನಿರ್ಧಾರ, ಕೈಲಾಸದಲ್ಲಿ ನಡೆಯುವ ಬ್ರಾಹ್ಮಣ, ಶಿವ, ಸತಿಯರ ನಡುವಿನ ಸಂವಾದದ ಕೊನೆಯಲ್ಲಿ ಅವಳು ಒಬ್ಬಳೇ ದಕ್ಷಯಜ್ಞಕ್ಕೆ ಹೋಗುವುದು ಮತ್ತು ಮುಂದೆ ದಕ್ಷನ ಯಜ್ಞಶಾಲೆಯಲ್ಲಿ ಅವಳ ಮರಣ ಮತ್ತು ವೀರಭದ್ರನ ಪ್ರತೀಕಾರ.

ಈ ಮಾತುಗಳು ಅವಳಿಗೆ, ಶಿವನಿಂದ ಹೊರತಾದ ವ್ಯಕ್ತಿತ್ವವನ್ನು, ಅರ್ಥಗಾರಿಕೆಯ ಭಾಷೆಯಲ್ಲಿ ಹೇಳುವುದಾದರೆ ಹೊಸದೊಂದು ಕರ್ತೃತ್ವವನ್ನು ಕೊಡುತ್ತದೆ. ಇದು ತ್ರಿಮೂರ್ತಿಗಳಲ್ಲೊಬ್ಬನಾದ, ಪರ್ವತದಂತಹ ದೇವರ ಎದುರಿಗೇ ಅವಳ ಅಸ್ತಿತ್ವಕ್ಕೊಂದು ಹೊಸ ಅರ್ಥ ಹುಡುಕಿಕೊಳ್ಳುವುದು. ಆದರೆ ಇದು ಎಲ್ಲದರ ಹೊರಗೆ ನಿಂತ ವ್ಯಕ್ತಿ ಸ್ವಾತಂತ್ರ್ಯವಲ್ಲ. ಪುರಾಣವು ಹೆಣ್ಣಿಗೆ ಕೊಟ್ಟ ಮೌಲ್ಯವಾದ ದಾಂಪತ್ಯ ನಿಷ್ಠೆಯ ಸಂಕಥನದ ಭಾಗವೇ ಆಗಿರುವಂತದ್ದು. ತನ್ನತನವನ್ನಾದರೂ ಒತ್ತೆಯಿಟ್ಟು ಪತಿಯ ಒಳಿತನ್ನು ಬಯಸುವ, ಅವನನ್ನು ಅನುಸರಿಲೇಸಬೇಕಾದ ಅವಳ ಕರ್ತವ್ಯದ ಪರಿಧಿಯೊಳಗೇ, ಈಗ ನಾವು ಪ್ರಸಂಗದಿಂದ ಹೊರಗೆ ವ್ಯಕ್ತಿಯ ಸ್ವಾಯತ್ತತೆ ಎಂದು ಗುರುತಿಸಬಹುದಾದುದನ್ನು ದಾಕ್ಷಾಯಿಣಿ ಸಾಧಿಸಿಕೊಳ್ಳುತ್ತಾಳೆ. ವ್ಯಕ್ತಿಯ ಸ್ವಾಯತ್ತತೆ ಎಷ್ಟೇ ಒಳ್ಳೆಯ ಆದರ್ಶವಾದರೂ, ಅದು ವ್ಯಕ್ತಿಯು ಭಾಗವಾದ ಸಮುದಾಯವನ್ನು ಒಳಗೊಂಡು ಬರದಿದ್ದರೆ, ಅಥವಾ ಆ ಸಮುದಾಯದ ಜನನುಡಿಯಲ್ಲಿ ಬರದಿದ್ದರೆ ಅದರ ಉಪಯೋಗಕ್ಕೆ ಸೀಮಿತತೆ ಇದೆ. ಯಕ್ಷಗಾನದ ರಂಗ ಸಂಪ್ರದಾಯ, ಮತ್ತು ಪ್ರೇಕ್ಷಕರ ಸಮುದಾಯವೆರಡನ್ನೂ ತನ್ನ ಜೊತೆ ಜೊತೆಗೆ ಕರೆದುಕೊಂಡು ಹೋಗುವ ಈ ಪ್ರಯೋಗದ ಪರಿಣಾಮವೂ, ಅದರ ಬಾಳಿಕೆಯೂ ಹೆಚ್ಚು.

2 ಶಿವನ ಮೌನಕ್ಕೇನು ಅರ್ಥ ಎಂದು ವಿಶ್ಲೇಶಿಸುವಲ್ಲಿ, ಯಾಕೆ ಮೌನ ಎಂದು ಪ್ರಶ್ನಿಸುವಲ್ಲಿ, ದಾಕ್ಷಾಯಿಣಿ, ನಾನು ಹೋಗದಿರುವುದರಿಂದ ಅಲ್ಲಿಯ ಪಾಪದ ಕೆಲಸ ಸರಿಯಾಗುತ್ತದೆಯಾದರೆ, ತನ್ನನ್ನು ಕಟ್ಟಿಹಾಕಿಕೊಂಡಾದರೂ ತನ್ನ ಹೋಗುವ ಆಸೆಯನ್ನು ಹತ್ತಿಕ್ಕಿಕೊಳ್ಳುತ್ತೇನೆ ಎನ್ನುತ್ತಾಳೆ. ಹಾಗೇ ಆಗುವುದಾದರೆ ಮೌನ ಬಿಟ್ಟು ಮಾತಾಡಿ ಎಂದು ಅಗ್ರಹಿಸುತ್ತಾಳೆ. ನನ್ನ ಸರ್ವಸ್ವವನ್ನೂ ನಿನಗೆ ಕೊಟ್ಟಾದ ಮೇಲೆ, ‘ನಿಲ್ಲದು ಮನ ಅಲ್ಲಿಗೆ ಪೋಗದೆʼ ಎಂದು ನನಗೆ ಅನ್ನಿಸುತ್ತಿರುವುದ್ಯಾಕೆ?, ನನ್ನ ಮನಸ್ಸಿನ ಒಡೆಯನೂ, ದೇವರೂ ಆದ ನೀನೆ ಉತ್ತರ ಹೇಳೆನ್ನುವ ಮಾತು, ಈಗ ಅವಳ ಕೆಲಸಕ್ಕೆ ಅವನನ್ನು ಬಾಧ್ಯಸ್ಥನನ್ನಾಗಿಸಿಬಿಡುತ್ತದೆ. ಶಿವ-ದಾಕ್ಷಾಯಿಣಿಯರ ಮೊದಲ ಭಾಗದ ಪದ್ಯಗಳ ವಿವರಣೆಯನ್ನು ಕೊಟ್ಟಿರುವುದು ಇದಕ್ಕೇ.

ತಂದೆಯ ಮನೆಯಲ್ಲಿ ನಡೆಯುವ ಕಾರ್ಯಕ್ಕೆ ಹೋಗೋಣ ಅಥವಾ ನಾನು ಹೋಗುತ್ತೇನೆ ಎಂದು ಹೇಳುವಾಗ ಎಷ್ಟೆಲ್ಲ ಪದ್ಯಗಳಲ್ಲಿ, ಎಷ್ಟೆಲ್ಲಾ ರೀತಿಯಲ್ಲಿ ಅವಳು ತನ್ನ ಬಯಕೆಗೆ ಸಮರ್ಥನೆಯನ್ನು ಕೊಡಬೇಕಾಗುತ್ತದೆ. ಅಲ್ಲಿ ಶಿವ ಅವಳಿಗೆ, ಅವಳಿರುವ ಮನೆಗೆ ಯಜಮಾನನಾಗಿ ಕೂತ ಪತಿ. ಅವನಿಗೆ ಅಲ್ಲಿ ಪದ್ಯಗಳೂ ಇಲ್ಲದಿರುವುದರಿಂದ ಅವನು ನ್ಯಾಯಾಧೀಶನಂತೆ ಅಲ್ಲೊಂದು ಇಲ್ಲೊಂದು ಮಾತಾಡುತ್ತಾ ಕೂತಿರಬೇಕಾಗುತ್ತದೆ. ತನ್ನ ಬಯಕೆಯ ಆಳ ಅಗಲವನ್ನು ತೆಗೆದು ತೋರಿಸುವ, ಅದಕ್ಕಾಗಿ ಅವಲತ್ತುಕೊಳ್ಳುವ, ವಾದಗಳನ್ನು ಮಂಡಿಸಬೇಕಾದ ಜವಾಬ್ದಾರಿ ದಾಕ್ಷಾಯಿಣಿಯದ್ದಾಗಿರುತ್ತದೆ. ಉತ್ತರದಾಯಿತ್ವವು ಶಿವನ ಕಡೆಗೆ ತಿರುಗಿದ ನಂತರ ಅವರ ಸ್ಥಾನಗಳೇ ಅದಲು ಬದಲಾಗುತ್ತದೆ.

ಇದು ರಂಗದಲ್ಲಿ ತೋರಿದ ರೀತಿಯು ಅತ್ಯಂತ ಶಕ್ತಿಯುತವಾಗಿದ್ದಕ್ಕೆ, ಇಲ್ಲಿಯ ದಾಕ್ಷಾಯಿಣಿಯ ಶೈಲಿಯೂ ಕಾರಣ. ಅವಳ ಮಾತುಗಳನ್ನು ಇಲ್ಲಿ ನನ್ನ ನೆನಪಿನಲ್ಲಿದ್ದಂತೆ ಬರೆಯುವಾಗ ಇದಕ್ಕೆ ಭಾವವಿಲ್ಲ. ಸಿನಿಮಾ, ನಾಟಕಗಳಲ್ಲಿ ಮೆಥೆಡ್ ಆ್ಯಕ್ಟಿಂಗ್ ಎಂದು ಕರೆಯಬಹುದಾದ ರೀತಿಯ ಪಾತ್ರದೊಂದಿಗಿನ ತಾದಾತ್ಮ್ಯತೆಯನ್ನು, ಮತ್ತು ಅದಕ್ಕೆ ತಕ್ಕನಾದ ಅಭಿವ್ಯಕ್ತಿಗೆ ಹೊಂದುವ ಭಾಷೆ, ಮಾತಿನ ಧಾಟಿ, ಉಸಿರಿನ ಏರಿಳಿತವನ್ನು ತಾಳಮದ್ದಲೆಯ ಶೈಲಿಯಲ್ಲಿ ಹುಡುಕಿಕೊಂಡಿರುವುದು, ದಾಕ್ಷಾಯಿಣಿಯ ನಿಲುವುಗಳನ್ನು ಸಮರ್ಥವಾಗಿ ರಂಗ ಸಂಪ್ರದಾಯದೊಳಗೆ ತರುತ್ತದೆ. ತನ್ನ ಬೇಡಿಕೆಯನ್ನು ಆದರ್ಶ ಸತಿಯಾದವಳು ಹೇಗೆ ಅನುನಯಿಸಿ ಪತಿಗೆ ಹೇಳಬೇಕೊ ಅಂತಹ ಭಾವದಲ್ಲೇ ಅವಳ ನಿಲುವುಗಳು ಪ್ರಕಟಗೊಳ್ಳುತ್ತದೆ. ಯಕ್ಷಗಾನದ ನಾಟಕೀಯತೆಯನ್ನು, ವೇಷಭೂಷಣಗಳಿಲ್ಲದೆ ಬರೀ ಮಾತಿನಲ್ಲಿ ತರುವ ಒಂದು ಮಾರ್ಗವಾಗಿಯು ಈ ಶೈಲಿಯನ್ನು ಗಮನಿಸಬೇಕಾಗಿದೆ.

3 ಈ ಭಾಗದ ದಾಕ್ಷಾಯಿಣಿಯ ಕೊನೆಯ ಪದ್ಯಗಳಿಗೆ, ಹೆಣ್ಣಿಗೆ ಯಾವುದು ಸಹಜ ಸ್ವಭಾವವೆಂದೂ ಹೇಳಲಾಗುತ್ತದೆಯೊ ಅದನ್ನೇ ಉಪಯೋಗಿಸಿಕೊಂಡು ಒಂದು ಪ್ರತಿರೋಧದ ಮಾದರಿಯಂತದ್ದನ್ನು ಕಟ್ಟುತ್ತಾಳೆ. ಒಬ್ಬ ಒಳ್ಳೆಯ ಗೃಹಿಣಿಗೆ ಇರಬೇಕಾದ ಆದರ್ಶದ ಸ್ವಭಾವವನ್ನು ತೋರುತ್ತಲೇ ಪ್ರತಿರೋಧವನ್ನೂ ಅವಳ ಸ್ವಭಾವಕ್ಕೆ ಸಹಜವಾಗಿಸುತ್ತಾಳೆ. ಅದು ಮಾತೃತ್ವದ್ದು, ಕರುಣೆಯದ್ದು, ವಾತ್ಸಲ್ಯದ್ದು. ಇದೆಲ್ಲವೂ ಈ ಪ್ರಸಂಗದೊಳಗೂ ಹೊರಗೂ ಹೆಣ್ಣಿನ ‘ಸಹಜ ಗುಣ’ವೆಂದು ಸಮಾಜ ಅಂದುಕೊಂಡಿದ್ದು. ಶಿವ ಸುಮ್ಮನೆ ಕುಳಿತಿದ್ದಾನೆಂದರೆ, ಈ ಯಜ್ಞ ಸರಿಯಾಗಿ ನಡೆಯುವುದಿಲ್ಲ. ಅಲ್ಲೊಂದು ಆಪತ್ತು ಎದುರಾಗುತ್ತದೆ. ಅಪ್ಪ ತಪ್ಪು ಮಾಡಿದ್ದಾನೆಂದರೂ, ಅಲ್ಲಿರುವ ಅಮ್ಮನನ್ನು ಅಕ್ಕತಂಗಿಯರನ್ನು ನೋಡಬಾರದೇ? ಮಮತೆಯಿಲ್ಲದೆ ‘ಜಗನ್ಮಾತೆ’ಯಾಗುವುದಾದರೂ ಹೇಗೆ ಎಂದು ಕೇಳುತ್ತಾಳೆ.

ಶಿವನ ಮೌನಕ್ಕೆ ಅರ್ಥ ಹುಡುಕುವ, ತನ್ನ ಒಳಗನ್ನು ಅವನಿಗೆ ಅರ್ಥ ಮಾಡಿಸುವ ಧಾವಂತ, ಬಂಧುಗಳಿಗೆ ಏನಾಗುತ್ತದೆಯೊ ಎಂಬ ಆತಂಕ, ಶಿವನನ್ನು ಹೀಗೆ ಹಠಾತ್ತಾನೆ ಬಿಟ್ಟು ಹೋಗಬೇಕಾಗಿರುವುದಕ್ಕೆ ದುಃಖ, ಅಲ್ಲಿ ತಾನು ತನ್ನ ಕರ್ತವ್ಯವನ್ನು ನಿಭಾಯಿಸಬಲ್ಲನೇ ಎಂಬ ಅಧೀರತೆ, ಇವೆಲ್ಲವನ್ನೂ ಉದ್ವೇಗದಲ್ಲಿ, ಭಾವ ತೀವ್ರತೆಯ ಮಾತಿನಲ್ಲಿ ತೋರಿಸುವಾಗ ನಮಗೆ ಹಲವು ಪ್ರಶ್ನೆಗಳು ಸಹಪಠ್ಯಗಳಾಗಿ ಕಾಣಿಸತೊಡಗುತ್ತವೆ. ಇದು ತಮ್ಮ ಪ್ರೀತಿಯ ಪರೀಕ್ಷೆಯೆ? ಶಿವನ ಮೇಲಿರುವುದು ಪ್ರೀತಿಯಾದರೆ ಬಂಧುಗಳ ಮೇಲಿರುವುದು ಮೋಹವೇ? ಅವಳು ಜೀವವಾಗಿರುವುದು ಮತ್ತು ಅವ ದೇವನಾಗಿರುವುದರಿಂದ, ಇದು ಮೋಹ-ಪ್ರೀತಿಯ ವ್ಯತ್ಯಾಸಕ್ಕೆ ದೊರಕಿದ ಹೊಸ ವ್ಯಾಖ್ಯಾನವೇ? ಇಬ್ಬರು ಗಂಡಸರ ಅವಳ ಮೇಲಿನ ತಮಗಷ್ಟೇ ಸೀಮಿತವಾದ ಒಡೆತನದ ಬಯಕೆ, ಅವಳನ್ನು ಒಬ್ಬನನ್ನೇ ಆಯ್ಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆಗೆ ತಳ್ಳಿತೆ?

ಚಂಚಲತೆ, ಮೋಹ, ಮಮತೆ, ಅಂತಃಕರಣ, ತಾಯ್ತನ ಎಂದೆಲ್ಲಾ ವರ್ಣಿಸಲ್ಪಡುವ ಮಹಿಳೆಯ ‘ಸಹಜ’ ಸ್ವಭಾವದ ಹರಹಿನ ಹಿನ್ನಲೆಯಲ್ಲೇ, ಒಂದು ಕಡೆ ಅವಳು ಶಿವನ ಪ್ರೀತಿಯನ್ನೂ ಮತ್ತೊಂದೆಡೆ ಅಪ್ಪನ ದಾರ್ಷ್ಟ್ಯವನ್ನೂ ಎದುರಿಸುತ್ತಾಳೆ. ಶಿವನ ಪ್ರೀತಿಯೂ ಅವಳಿಗೆ ಮೋಹಪಾಶವೇ. ‘ಇಲ್ಲಿರಲಾರದ, ಅಲ್ಲಿಗೆ ಹೋಗಲಾರದ’ ಮನಸ್ಥಿತಿಯ ‘ಚಂಚಲತೆಗೂ’ ಅವಳು ಒಂದು ಜೀವಪರವಾದ, ಎಲ್ಲರನ್ನೂ ಒಳಗೊಳ್ಳುವ ಆಶಾವಾದದ ಹಾದಿಯನ್ನು ತೋರಿಸುತ್ತಾಳೆ. ಅವಳಿಗೆ ಇಂತಹ ಬಿಕ್ಕಟ್ಟನ್ನು ತಂದ ಇಬ್ಬರ ಒಡೆತನದ, ಹಕ್ಕಿನ ಪ್ರೀತಿಯು ಬೆಂಕಿಯಾಗಿ ಅವಳ ಸಾವಿಗೆ ಕಾರಣವಾಗುವುದಲ್ಲದೇ ಆ ಉಳಿದಿಬ್ಬರನ್ನೂ ಸುಡುತ್ತದೆ ಎಂದೂ ಲೋಕಕ್ಕೆ ತೋರಿಸುವ ‘ಜಗನ್ಮಾತೆ’ಯಾಗುತ್ತಾಳೆ.

ಶಿವ ಇಲ್ಲಿ ತಾನಾಗಿಯೇ ಅಚಲನಲ್ಲ. ಅವನನ್ನು ಅಚಲನನ್ನಾಗಿ ಮಾಡುವುದಕ್ಕಾಗಿಯೇ, ಅವಳು ಚಂಚಲಳಾಗಬೇಕಾಗಿದೆ. ಶಿವನ ಮೇಲಿನ ಅವಳ ಪ್ರೀತಿ ಭಕ್ತಿಯೂ ಹೌದು, ಅದೊಂದು ವಿಶ್ವಾಸವೂ ಹೌದು. ಹಾಗಾಗಿಯೆ ಇಲ್ಲಿ ಅವಳು ಬರೀ ಸತಿಯಲ್ಲ, ಶಿವನ ಪ್ರಣಯಿನಿ ಮಾತ್ರ ಅಲ್ಲ. ಶಿವನನ್ನು ಪ್ರೀತಿಸುವಂತೆಯೇ ಅವಳು ಬಂಧುಗಳನ್ನೂ ತನ್ನ ಮಾತೃತ್ವದೊಳಗೆ ಸೇರಿಸಿಕೊಳ್ಳಬೇಕಾದದ್ದು ಅವಳ ‘ಲೀಲೆʼ. ‘ನಾನಾಗಿಯೇ ಹೋಗುವೆನಾದರೂ ನಾನಾಗಿಯೇ ಬರುವವಳಲ್ಲ. ನಿನಗೆ ಬೇಕಾದರೆ ಕರೆಸಿಕೊ’ಎನ್ನುತ್ತಾಳೆ. ಶಿವನನ್ನು ಅಚಲನನ್ನಾಗಿ ಮಾಡುವುದೇ ಅವಳ ಈ ನಿರ್ಧಾರ. ಇದು ಮುಂದಿನ ಪಾರ್ವತಿಯ ಕತೆಗೆ ಸೂಚನೆ ಕೊಡುವ ಜೊತೆಗೆ ಶಿವನಿಗೆ ಅವನ ಜವಾಬ್ದಾರಿಯನ್ನೂ ನೆನಪಿಸುತ್ತದೆ. ಹಾಗಾಗಿಯೇ, ಮಾತೃತ್ವ, ಮಾತೃತ್ವದೊಂದಿಗೇ ಬರುತ್ತದೆ ಎನ್ನಲಾದ ಮೋಹ, ಚಂಚಲತೆ, ಹೆಣ್ಣಿನ ‘ಸಹಜ’ ಸ್ವಭಾವವೊಂದೇ ಅಲ್ಲ ಅದು ಜಗತ್ತಿನ ತಂದೆಯಾದ ಶಿವನೂ ಹಿಡಿಯಬೇಕಾದ ಮಾರ್ಗ ಎನ್ನುವುದನ್ನು ದಾಕ್ಷಾಯಿಣಿಯ ಮಾತುಗಳು ಧ್ವನಿಸುತ್ತವೆ.

ಇನ್ನೂ ಬರೆದರೆ ಅದು ಅವತ್ತಿನ ದಾಕ್ಷಾಯಿಣಿಯಾಗದೇ, ಅವತ್ತಿನ ಪ್ರದರ್ಶನದ ನಂತರ ನನ್ನೊಳಗೆ ಬೆಳೆದ ದಾಕ್ಷಾಯಿಣಿಯಾಗುತ್ತಾ ಹೋಗುವ ಸಾಧ್ಯತೆ ಕಾಣುತ್ತಿದೆಯಾದ್ದರಿಂದ ಇಲ್ಲಿಗೆ ನಿಲ್ಲಿಸಬೇಕಾಗಿದೆ. ಪ್ರಸಂಗದ ಆಶಯಕ್ಕೆ ಚ್ಯುತಿಯಾಗದಂತೆ, ಅದರ ಮುಂದಿನ ನಡೆಗಳಿಗೆ ಇನ್ನಷ್ಟು ಅರ್ಥವನ್ನು ಹೊಳೆಸುವಂತೆ, ಪ್ರಸಂಗದೊಳಗಿನ ಲೋಕದೃಷ್ಟಿಯ ಜೊತೆಗೊಂದು ಸಾಧುವಾದ ಸಂಧಾನ ಮಾಡಿಕೊಂಡು, ಹೊಸ ದಾಕ್ಷಾಯಿಣಿಯನ್ನು ಸೃಷ್ಟಿಸಿದ್ದು ಗಮನಿಸಬೇಕಾದ ಒಂದು ಹೆಜ್ಜೆ ಎಂದು ಅವತ್ತಿನ ಪ್ರದರ್ಶನದ ನಂತರ ನನಗನಿಸಿದ್ದರಿಂದ ಹಂಚಿಕೊಂಡಿದ್ದೇನೆ.