ಶಾಂತಿಯವರು ವಸ್ತುವಿನ ಆಯ್ಕೆಯಲ್ಲಿ ತೋರಿಸುವ ಕಾಳಜಿ ಬಹಳ ಮುಖ್ಯ. ಅವರ ಕಥೆಗಳಲ್ಲಿ ವಸ್ತು ವೈವಿಧ್ಯತೆಯನ್ನು ಕಾಣಬಹುದು. ಶಾಂತಿಯವರು ಕಥೆಯ ವಿಚಿತ್ರ ತಿರುವುಗಳು ಮತ್ತು ಕುತೂಹಲವನ್ನು ಕೊನೆಯವರೆಗೂ ಕಾಯ್ದುಕೊಂಡು ಹೋಗುವ ಆಕರ್ಷಕ ರೀತಿಯಿಂದಾಗಿ ಓದುಗರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡುತ್ತಾರೆ. ಜಯರಾಮ ಹುಚ್ಚನಾದ ಕಥೆ ಅದಕ್ಕೊಂದು ಉತ್ತಮ ನಿದರ್ಶನ. ಜಯರಾಮ ಹುಚ್ಚ ಯಾಕಾದ ಎನ್ನುವುದನ್ನು ತಿಳಿಯಲಿಕ್ಕೆ ನಾವು ಪೂರಾ ಕಥೆಯನ್ನು ಓದಲೇಬೇಕು. ಓದುತ್ತಾ ಓದುತ್ತಾ ಕಥೆ ಓದುಗನನ್ನು ಇನ್ನಿಲ್ಲದಂತೆ ಒಳಗೊಳ್ಳತೊಡಗುತ್ತದೆ. ಅವರ ಕಥೆಗಳಲ್ಲಿ ಬರುವ ಭಾವುಕ ವಿವರಣೆಯಂತೂ ಕಣ್ಣಲ್ಲಿ ನೀರು ತುಂಬಿಸಿಬಿಡುತ್ತವೆ.
ಆಶಾ ಜಗದೀಶ್ ಅಂಕಣ

 

ಒಂದು ವಿಚಿತ್ರ ಮನಸ್ಥಿತಿಯಲ್ಲಿ ಯಾವ ಪೂರ್ವ ತಯಾರಿ ಇಲ್ಲದೆ ಕಥೆ ಹುಟ್ಟುತ್ತದೆ ಎನಿಸುತ್ತದೆ ನನಗೆ. ಕಥೆ ಆಗಿಯಾದ ನಂತರದ ಸ್ಥಿತಿಗಿಂತಲೂ ಕಥೆ ಹರಳುಗಟ್ಟುವ ಪ್ರತಿ ಹಂತದ ವಿಶಿಷ್ಟ ಪರಿಮಳ ಉಂಟುಮಾಡುವ ಅನುಭೂತಿಯೇ ನನಗೆ ಹೆಚ್ಚು ಇಷ್ಟ. ಕಥೆಯೊಂದರ ಓದುವಿಕೆಗೂ ಇದನ್ನು ಅನ್ವಯಿಸಿಕೊಳ್ಳಬಹುದು. ಒಂದು ತೀವ್ರತೆ, ಪ್ರಾಮಾಣಿಕತೆ ಇಲ್ಲದ ಕಥೆ ಮನಸ್ಸಿನಲ್ಲಿ ಹೆಚ್ಚುಕಾಲ ನಿಲ್ಲಲಾರದು. ಆ ರೀತಿ ಪ್ರಾಮಾಣೀಕರಿಸಿದಂತೆ ಮನಸಿಗೆ ನಾಟಿದ ಕಥೆಗಳನ್ನು ಇತ್ತೀಚೆಗೆ ಗುಚ್ಛವಾಗಿ ಓದಿದೆ. ಅದು ಶಾಂತಿ ಅಪ್ಪಣ್ಣರ ಎರಡನೇ ಕಥಾಸಂಕಲನ “ಒಂದು ಬಾಗಿಲು ಮತ್ತು ಮೂರು ಚಿಲ್ಲರೆ ವರ್ಷಗಳು”.

ಕಾಲ ಕಾಲಕ್ಕೆ ಒಂದು ಪ್ರಕಾರ ತಾನು ಮುನ್ನಡೆಯಲಿಕ್ಕೆ ಬೇಕಾದ ಚಲನೆ ಮತ್ತು ತಿರುವನ್ನು ಪಡೆದುಕೊಳ್ಳಲು ಬೇಕಾದ ಪ್ರಚೋದನೆ ಅದು. ಈ ಸುಂದರ ಕಥಾಸಂಕಲನವನ್ನು “ಸಂಗಾತ ಪುಸ್ತಕ” (ಸಂಗಾತ ಸಾಹಿತ್ಯ ಪತ್ರಿಕೆಯ ಸಂಪಾದಕರಾದ ಟಿ.ಎಸ್.ಗೊರವರ ರವರು) ಪ್ರಕಾಶನ ಬಹಳ ಅಂದವಾಗಿ ಹೊರತಂದಿದೆ.

(ಶಾಂತಿ ಅಪ್ಪಣ್ಣ)

ಶಾಂತಿಯವರು ಚಿಂತನೆಯನ್ನು ಮಥಿಸುವ ಪ್ರಕ್ರಿಯೆ ಮತ್ತು ಅದನ್ನು ತಮ್ಮ ಕಥೆಗಳಿಗಾಗಿ ಬ್ಲೆಂಡ್ ಮಾಡಿ ಬಳಸುವ ರೀತಿ ಬಹಳ ಚಂದ. ಅವರ ಕಥೆಯ ಭಾಷೆ ಇನ್ನೂ ಸೊಗಸು ಮತ್ತು ಹೇಳಬೇಕಿರುವುದನ್ನು ಸ್ಪಷ್ಟವಾಗಿ ಹೇಳಲಿಕ್ಕೆ ಅದು ಒದಗಿ ಬರುವ ರೀತಿ ಸುಲಲಿತ. ಈ ಕಾರಣಕ್ಕೇ ಅವರ ಕಥೆಗಳನ್ನು ಓದುವಾಗ ಇದನ್ನು ಇನ್ನೊಂದು ರೀತಿಯಲ್ಲೂ ಹೇಳಬಹುದಿತ್ತು ಎಂದು ಅನಿಸುವುದೇ ಇಲ್ಲ. ಇದನ್ನು ಹೀಗೆ ಹೇಳಿದ್ದೇ ಸರಿ ಅಂತನಿಸಿಬಿಡುತ್ತದೆ. ಈ ಎಲ್ಲ ಕಾರಣಕ್ಕೂ ಅವರ ಕಥೆಗಳನ್ನು ಓದುವುದೇ ಒಂದು ಖುಷಿ.

ಬೆಟ್ಟ ಗುಡ್ಡ ತಿಟ್ಟೇರಿ ಹತ್ತಿ ಇಳಿದು ಉನ್ಮತ್ತ ಶಿಖರ ಮುಟ್ಟಿದ ನಂತರ ಅನುಭವಿಸುವ ಸುಖದ ಆಯಾಸವಿರುತ್ತದಲ್ಲ ಅದರಾಚೆಗೂ ಸುಖವನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ಅಂತಹ ಸುಖದ ಓದು ಅವರ ಬರಹದ್ದು. ಶಾಂತಿಯವರು ತಮ್ಮ ಕಥೆಗಳಲ್ಲಿ ಸಂಕೀರ್ಣ ವಸ್ತುವೊಂದನ್ನು ಸರಳ ಅಂತ್ಯಕ್ಕೆ ಒಯ್ಯುತ್ತಾರೆ. ತಮ್ಮ ಕಥೆಗಳಲ್ಲಿ ಅವರು ಸೃಷ್ಟಿಸುವ ಪಾತ್ರಗಳಾದರೂ ಇಲ್ಲೇ ಎಲ್ಲೋ ನಮ್ಮ ಪಕ್ಕದಲ್ಲೇ ಅವಿತಿದ್ದಾರೆ ಅನಿಸಿ ಆಪ್ತವಾಗತೊಡಗುತ್ತಾರೆ. ಹಾಗಾಗಿಯೇ ಓದಿಯಾದ ಬಹಳ ಕಾಲದ ನಂತರವೂ ಅವರೆಲ್ಲ ವ್ಯಕ್ತಿಗಳಷ್ಟೇ ತೀವ್ರವಾಗಿ ಕಾಡತೊಡಗುತ್ತಾರೆ. ಮೂರೂ ಚಿಲ್ಲರೆ ವರ್ಷಗಳ ನಂತರ ಬಂದಿರುವ ಈ ಪುಸ್ತಕ ಮತ್ತಷ್ಟು ನುರಿತ ಕೈಗಳಿಂದ ಕಲಾತ್ಮಕವಾಗಿ ಮೂಡಿಬಂದಿದೆ.

ಈ ಸಂಕಲನದ ಮೊದಲ ಕಥೆ “ಈ ಕಥೆಗೆ ಹೆಸರಿಲ್ಲ”. ಕಥೆಯೊಳಗೊಂದು ಕಥೆಯನ್ನು ಹೆಣೆಯುವ ತಂತ್ರವನ್ನು ಶಾಂತಿಯವರು ಇಲ್ಲಿ ಬಹಳ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಮೂಲ ಕಥೆಯಷ್ಟೇ ತೀವ್ರವಾಗಿ ಒಳಗಿನ ಇನ್ನೊಂದು ಕಥೆಯೂ ನಮ್ಮನ್ನು ಬಹಳಷ್ಟು ಕಾಡುತ್ತದೆ. ಗಂಡಸು ಫ್ಲರ್ಟ್ ಮಾಡುವ ತನ್ನ ಬುದ್ಧಿಗೆ ಯಾವ ಹೆಸರನ್ನಾದರೂ ಕೊಟ್ಟು ಕರೆದುಕೊಳ್ಳಬಹುದು. ಅದು ಅಸತ್ಯವೆಂದು ಗೊತ್ತಿದ್ದರೂ ನಂಬಿಸಿಕೊಳ್ಳುವ ಬಲಹೀನತೆಯೊಂದು ಹೆಣ್ಣಿಗಿರುತ್ತದೆ. ಇದರ (ದುರು)ಉಪಯೋಗವನ್ನೂ ಅವ ಸರಿಯಾಗಿ ಪಡೆದುಕೊಳ್ಳುತ್ತಾನೆ ಅನಿಸುತ್ತದೆ.

ಈ ಕಥೆಯ ಒಳ ಕಥೆಯ ಕಥಾನಾಯಕಿ ತನ್ನ ಸಂಸಾರದಲ್ಲಿ ಸಿಗದ ಮಾನಸಿಕ ಸಾಂಗತ್ಯವನ್ನು ತನ್ನ ಗೆಳೆಯನಲ್ಲಿ ಕಂಡುಕೊಂಡಿದ್ದಳಾ! ಹಾಗಿದ್ದರೂ ತಪ್ಪೇನಿದೆ.. ಗಂಡು ಹೆಣ್ಣಿನ ಮಾನಸಿಕ ವ್ಯವಹಾರಕ್ಕೆ ಹಾದರದ ಕೆಸರೆರೆಚುವ ಅನುಮಾನದ ಕಣ್ಣುಗಳು ಅವಳ ಖಾಲಿತನದ ಬಗ್ಗೆ ಯಾವತ್ತೂ ಯೋಚಿಸುವುದೇ ಇಲ್ಲವಲ್ಲ ಯಾಕೆ… ಕೊನೆಗೆ ಆ ಗೆಳೆಯ ಸತ್ತಾಗ ಇವಳು ವಿಧವೆಯಂತೆ ವರ್ತಿಸುದು, ಮತ್ತು ಅವಳ ಸಂಪಾದನೆಯಲ್ಲಿ ತನ್ನ ಬದುಕಿಡೀ ಸಾಗಿ ಬಂದ ಅವಳ ಆ ಗಂಡ ಕೊನೆಗೆ ಅವಳ ಈ ವರ್ತನೆಯನ್ನೂ ವಿರೋಧಿಸದೆ ಉಳಿದಾಗ ಸಣ್ಣ ಅನುಕಂಪವನ್ನೂ ಸಹ ಅವನಿಗೆ ಮುಟ್ಟಿಸಲು ಮನಸು ಬರುವುದಿಲ್ಲ. ಸಹಚರ್ಯೆಯ ನಿಜವಾದ ಅರ್ಥದಲ್ಲಿ ಬದುಕಿದ ಯಾವ ಗಂಡಸೂ ಹಾಗೆ ತನ್ನ ಹೆಂಡತಿಯೊಂದಿಗೆ ಇರಲು ಸಾಧ್ಯವಿಲ್ಲ. ನಮ್ಮ ಸುತ್ತಮುತ್ತಲಿನ ಬಹಳಷ್ಟು ಸಂಸಾರಗಳು ಇಂತಹ ಸಸಾರತೆಯಿಂದ ಬಳಲುತ್ತಿರುತ್ತವೆ, ಒಟ್ಟು ಬದುಕುವ ಯಾಂತ್ರಿಕ ಕ್ರಿಯೆಯ ಕೀಲುಗೊಂಬೆಗಳಂತೆ.

ಶಾಂತಿಯವರು ಚಿಂತನೆಯನ್ನು ಮಥಿಸುವ ಪ್ರಕ್ರಿಯೆ ಮತ್ತು ಅದನ್ನು ತಮ್ಮ ಕಥೆಗಳಿಗಾಗಿ ಬ್ಲೆಂಡ್ ಮಾಡಿ ಬಳಸುವ ರೀತಿ ಬಹಳ ಚಂದ. ಅವರ ಕಥೆಯ ಭಾಷೆ ಇನ್ನೂ ಸೊಗಸು ಮತ್ತು ಹೇಳಬೇಕಿರುವುದನ್ನು ಸ್ಪಷ್ಟವಾಗಿ ಹೇಳಲಿಕ್ಕೆ ಅದು ಒದಗಿ ಬರುವ ರೀತಿ ಸುಲಲಿತ. ಈ ಕಾರಣಕ್ಕೇ ಅವರ ಕಥೆಗಳನ್ನು ಓದುವಾಗ ಇದನ್ನು ಇನ್ನೊಂದು ರೀತಿಯಲ್ಲೂ ಹೇಳಬಹುದಿತ್ತು ಎಂದು ಅನಿಸುವುದೇ ಇಲ್ಲ.

ಇಲ್ಲಿನ ಎರಡನೇ ಕಥೆ “ಒಂದು ಬಾಗಿಲು ಮತ್ತು ಮೂರು ಚಿಲ್ಲರೆ ವರ್ಷಗಳು”. ಇದೊಂದು ತೀವ್ರ ಒಳ ಹರಿವಿರುವ ನದಿಯೊಂದರ ಸುಳಿಯಂತಹಾ ಕಥೆ. ಕಥಾ ನಾಯಕಿ ಅಭಿರಾಮಿ ಒಂದು ಅತ್ಯಂತ ಗಟ್ಟಿ ಪಾತ್ರ. ಗಂಡಾಗಿ ಹುಟ್ಟಿ ಹೆಣ್ಣಾಗಿ ಬದಲಾದವಳು, ಗಂಡಿನ ಸದೃಢ ಶರೀರ ಹೆಣ್ಣಿನ ಲಾಲಿತ್ಯವೆರೆಡೂ ಹದವಾಗಿ ಬೆರೆತು ಆದ ಸೌದರ್ಯದ ಖನಿ. ಅವಳಿಗೆ ಅವನು ಮನಸೋತದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಆದರೆ ಸಾಮಾನ್ಯ ಗಂಡೊಬ್ಬ ಜೈವಿಕವಾಗಿ ಹೆಣ್ಣೂ ಅಲ್ಲದ ಗಂಡೂ ಅಲ್ಲದ, ಮಗುವೊಂದನ್ನು ಹೆರಲಾಗದ ಹೆಣ್ಣಲ್ಲದ ಹೆಣ್ಣನ್ನು ಮದುವೆಯಾಗುವ ಸಲೀಸಾದ ಅವಕಾಶವೊಂದು ಸಮಾಜದಲ್ಲಿ ಇಲ್ಲವೇ ಇಲ್ಲ ಎನ್ನುವುದು ದುರಂತ. ಅವನಿಗೂ ಅವಳು ಬೇಕು ಆದರೆ ಸಮಾಜ ಮತ್ತು ಕುಟುಂಬಕ್ಕಾಗಿ ಅವನು ಮನಸಿಲ್ಲದ ಮನಸಿನಿಂದ ತ್ಯಾಗ ಮಾಡಬೇಕಾಗಿದೆ. ಆದರಿಲ್ಲಿ ಅಭಿರಾಮಿ ಅವನಿಗೆ ಆ ಕಷ್ಟವನ್ನೂ ಕೊಡದೆ ತಾನೇ ಅವನಿಂದ ಅವನ ಭವಿಷ್ಯಾಕ್ಕಾಗಿ ದೂರವಾಗುವುದು ಅವಳ ಸುಂದರ ಮನಸಿಗೆ ನಿದರ್ಶನ.

ಇದೊಂದು ಗಂಟಲುಬ್ಬಿಸುವ ಕಥೆ. ಅವಳ ಮುದ್ದು ಮನಸಿಗೆ ಯಾವ ಬೆಲೆಯಿಲ್ಲದಂಥಾಗುವುದು ಓದುಗರಲ್ಲೂ ವ್ಯಥೆ ಉಂಟುಮಾಡುತ್ತದೆ. “ನೋವೆಂಬುದು ಪಡೆದ ಪ್ರೀತಿಗೆ ಕಟ್ಟುವ ಕಂದಾಯವೇ?” ಹೌದಲ್ಲ… ಕಥೆಯಲ್ಲಿ ಬರುವ ಹೀಗೊಂದು ಸಾಲು ಕಥೆ ಮುಗಿದಾದ ನಂತರವೂ ಕಾಡುತ್ತಾ ಉಳಿಯುತ್ತದೆ.

ಮೂರನೇ ಕಥೆ “ನಮ್ಮವರು”. ಬ್ರಜೇಶ ತನಗೆ ಹಾಗೂ ತನ್ನ ತಂಗಿಯರಿಗೆ ವಂಶಪಾರಂಪರ್ಯವಾಗಿ ಬಂದ ಎತ್ತರವನ್ನು ಸಂಭಾಳಿಸಲಾಗದೆ ಪಡಿಪಾಟಲು ಪಡುವುದನ್ನು ಕಲ್ಪಿಸಿಕೊಳ್ಳುವಷ್ಟು ಚಂದ ಚಿತ್ರಿಸುತ್ತಾ ಹೋಗುತ್ತಾರೆ ಶಾಂತಿಯವರು. ಬ್ರಜೇಶ ತನ್ನ ಅತಿ ಎತ್ತರದ ಕಾರಣಕ್ಕಾಗಿ ನಗೆಪಾಟಲಿಗೀಡಾಗುವುದು, ಕೀಳರಿಮೆ ಬೆಳೆಸಿಕೊಳ್ಳುವುದು, ಅವನ ತಂಗಿಯರಿಗೆ ಮದುವೆಯಾಗದೆ ಹೋಗುವುದು ಸಾಲದ್ದಕ್ಕೆ ಮನೆ ಮತ್ತು ತುಂಬು ಕುಟುಂಬದ ಜವಾಬ್ದಾರಿಯೂ ಕತ್ತಿಗೆ ಬಿದ್ದು ಅವನನ್ನು ಮತ್ತಷ್ಟು ಹೈರಾಣು ಮಾಡುತ್ತದೆ.

ಇದರ ನಡುವೆಯೇ ಸಣ್ಣದೊಂದು ಸಮಾಧಾನದಂತೆ ಸಿಕ್ಕ ಸರ್ಕಾರಿ ಕೆಲಸವೂ ಅವನನ್ನು ಕಾಡಿಸಲು ಹತ್ತಿದಾಗ ಅವನು ಅನುಭವಿಸುವ ಮಾನಸಿಕ ತೊಳಲಾಟ, ಓದುಗರಲ್ಲೂ ಮರುಕವನ್ನುಂಟುಮಾಡುತ್ತದೆ. ಮತ್ತು ಮತ್ತೊಂದು ಜಿಗುಪ್ಸೆ ಹುಟ್ಟಿಸುವ ವಿಷಯ ಜಾತಿ. ಜಾತಿ ಹೇಗೆ ತನ್ನ ಬೇರುಗಳನ್ನು ಅಜ್ಞಾತ ತಮಂಧದ ಜಾಗಗಳಲ್ಲಿಯೂ ನುಸುಳಿಸಿ ತನ್ನ ಕಬಂಧ ಬಾಹುಗಳಿಂದ ಹಿಡಿದಿಟ್ಟಿದೆ ಎಂಬ ವಿಷಾದ.

ನಂತರದ ಕಥೆ “ಹೀಗೇ ಜೊತೆ ಜೊತೆಯಲಿ”. ನಾವು ಯಾವುದನ್ನು ಬಯಸಿರುವುದಿಲ್ಲವೋ ಅದು ನಡೆಯುತ್ತದೆ ಮತ್ತು ಯಾವುದನ್ನು ಬಯಸಿರುತ್ತೇವೋ ಅದು ಕನಸಾಗಿ ಕಾಡುತ್ತದೆ. ಸಂಸಾರ ಒಂದು ವ್ಯವಸ್ಥೆ ಮತ್ತದೆ ಬಹು ಸುಂದರವಾದ ವ್ಯವಸ್ಥೆ. ಅದಕ್ಕೊಂದು ಯಾಂತ್ರಿಕ ಚಲನೆ ಬೇಕೇಬೇಕು. ಆದರೆ ಮನಸಿರುವವರಿಗೆ ಅದಷ್ಟೇ ಸಾಲುವುದಿಲ್ಲ. ಅವರಿಗೆ ಅದರ ಜೊತೆಗೊಂದು ಭಾವನಾತ್ಮಕ ಬಂಧವೂ ಬೇಕು. ಯಾವಾಗ ಅದು ಭಾವನೆಗಳಿಲ್ಲದ ಬರಿದೆ ಯಾಂತ್ರಿಕತೆಯಾಗಿಬಿಡುತ್ತದೋ ಆಗ ಅವರಿಗೆ ಅದರೆಡೆಗಿನ ಸೆಳೆತವೂ ಇಲ್ಲವಾಗಿಬಿಡುತ್ತದೆ.

ಈ ಕಥೆಯಲ್ಲಿನ ಕಥಾನಾಯಕನ ಕಥೆಯೂ ಅವನ ಸುಪ್ತ ಮನಸಿನ ಬಯಕೆಯ ನಿರೀಕ್ಷೆಯೂ ಇದ್ದಿರಬಹುದು ಎಂಬ ಅನುಮಾನ, ಅವನ ಹೆಂಡತಿ ವಿನಿಯ ನಡವಳಿಕೆಯಿಂದ ಮತ್ತಷ್ಟು ಗಾಢವಾಗುತ್ತದೆ. ಅವನಿಗೆ ಪ್ರೀತಿಸುವ, ಪ್ರೀತಿಯಿಂದ ಸ್ಪರ್ಷಿಸುವ, ಅನುಕಂಪದಿಂದ ಮುದ್ದಿಸುವ ಒಂದು ಸಹ ಜೀವ ಬೇಕು. ತಾನು ನಿರಪೇಕ್ಷೆಯಿಂದ ಪ್ರೀತಿಸಲಿಕ್ಕೆ, ತನ್ನನ್ನೇ ಬಲವಾಗಿ ನಂಬಿದ, ತಾನಿಲ್ಲದೆ ಬದುಕೇ ಇಲ್ಲ ಎನ್ನುವ ಜೀವವೊಂದು ಬೇಕು ಅವನಿಗೆ. ಅದೇ ಅವನ ಕಥೆಯ ರಾಜೀ ಮತ್ತು ಸಮೀರರಾಗಿ ಪ್ರತ್ಯಕ್ಷವಾಗುತ್ತಾರೆ. ಕೊನೆಗೆ ಅವನ ನಿರೀಕ್ಷೆ ಆಸೆ ಹಂಬಲಗಳನ್ನು ಕಥೆಯ ರೂಪದಲ್ಲಿ ಓದಿ ರೊಚ್ಚಿನಿಂದ ಗಾಳಿಗೆ ತೂರುವ ವಿನಿಯ ನಡತೆ ಅವರಿಬ್ಬರ ನಡುವೆ ಎಲ್ಲವೂ ಸರಿ ಇಲ್ಲ ಎಂಬುದನ್ನು ದೃಢಪಡಿಸುತ್ತದೆ. ಕಥೆ ಬರಿ ಕಥೆಯಷ್ಟೇ ಆಗುವ ಸಂಭವವಿದ್ದರೂ ಇಲ್ಲಿ ಅದು ಕಥೆಯಾಗಷ್ಟೇ ಉಳಿದಿಲ್ಲದಿರುವುದಕ್ಕೆ ಕಥಾನಾಯಕ ಕೊಡುವ ಅವನ ವೈಯಕ್ತಿಕ ಜೀವನದ ವಿವರಗಳು ಸಾಕ್ಷಿಯಾಗುತ್ತವೆ.

ಶಾಂತಿಯವರು ವಸ್ತುವಿನ ಆಯ್ಕೆಯಲ್ಲಿ ತೋರಿಸುವ ಕಾಳಜಿ ಬಹಳ ಮುಖ್ಯ. ಅವರ ಕಥೆಗಳಲ್ಲಿ ವಸ್ತು ವೈವಿಧ್ಯತೆಯನ್ನು ಕಾಣಬಹುದು. ಶಾಂತಿಯವರು ಕಥೆಯ ವಿಚಿತ್ರ ತಿರುವುಗಳು ಮತ್ತು ಕುತೂಹಲವನ್ನು ಕೊನೆಯವರೆಗೂ ಕಾಯ್ದುಕೊಂಡು ಹೋಗುವ ಆಕರ್ಷಕ ರೀತಿಯಿಂದಾಗಿ ಓದುಗರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡುತ್ತಾರೆ. ಜಯರಾಮ ಹುಚ್ಚನಾದ ಕಥೆ ಅದಕ್ಕೊಂದು ಉತ್ತಮ ನಿದರ್ಶನ. ಜಯರಾಮ ಹುಚ್ಚ ಯಾಕಾದ ಎನ್ನುವುದನ್ನು ತಿಳಿಯಲಿಕ್ಕೆ ನಾವು ಪೂರಾ ಕಥೆಯನ್ನು ಓದಲೇಬೇಕು. ಓದುತ್ತಾ ಓದುತ್ತಾ ಕಥೆ ಓದುಗನನ್ನು ಇನ್ನಿಲ್ಲದಂತೆ ಒಳಗೊಳ್ಳತೊಡಗುತ್ತದೆ. ಅವರ ಕಥೆಗಳಲ್ಲಿ ಬರುವ ಭಾವುಕ ವಿವರಣೆಯಂತೂ ಕಣ್ಣಲ್ಲಿ ನೀರು ತುಂಬಿಸಿಬಿಡುತ್ತವೆ. ಅಷ್ಟೊಂದು ತೀವ್ರವಾಗಿ ಭಾವನೆಗಳಿಗೆ ಒಡ್ಡಿಕೊಳ್ಳಬಲ್ಲ ಅವರ ಕಥೆಗಳು, ಎಲ್ಲಿಯೂ ಅದರೊಳಗೆ ಮುಳುಗಿ ಕಳೆದು ಹೋಗುವುದಿಲ್ಲ. ಅದರ ಬಿಗುವಿನಿಂದ ಬಿಡಿಸಿಕೊಂಡು ಮೇಲೆದ್ದು ತಾರ್ಕಿಕ ಅಂತ್ಯವನ್ನು ಮುಟ್ಟುತ್ತವೆ. ಅದೇ ಅವರ ಕಥೆಗಳ ಯಶಸ್ಸು.

“ಒಂದು ಬಾಗಿಲು ಮತ್ತು ಮೂರು ಚಿಲ್ಲರೆ ವರ್ಷಗಳು” ಎನ್ನುವ ಸಂಕಲನದ ಅಷ್ಟೂ ಕಥೆಗಳಿಗೂ ಒಗ್ಗಿಕೊಳ್ಳುವ ಮಾತುಗಳಿವು. ಒಟ್ಟು ಹದಿಮೂರು ಕಥೆಗಳನ್ನೊಳಗೊಂಡ ಈ ಸಂಕಲನದ ಅಷ್ಟೂ ಕಥೆಗಳೂ ಓದುಗರಿಗೆ ಇಷ್ಟವಾಗುತ್ತವೆ. ಈ ಪುಸ್ತಕ ಹೊಕ್ಕು ಸುತ್ತಾಡಿ ಬಂದ ಮೇಲೆ ಹಿಂದೆ ಬರುವವರಿಗೊಂದು ಪ್ರವೇಶ ಕೊಡಲಿಕ್ಕೆಂದು ಕೆಲವೇ ಕಥೆಗಳ ಬಗ್ಗೆ ಇಲ್ಲಿ ಬರೆದೆ. ಉಳಿದ ಕಥೆಗಳನ್ನೂ ಸೇರಿಸಿಕೊಂಡು ಓದಿ ಬರಲು “ಒಂದು ಬಾಗಿಲು..” ಇದ್ದೇ ಇದೆ…