‘ತೆಂಕಣ ಗಾಳಿ ಸೋಂಕಿದೊಡಂ…’ ಅಂತ ನೀವು ಪಾಠ ಶುರುಹಚ್ಚಿಕೊಂಡರೆ ತರಗತಿಯಲ್ಲಿ ಥೇಟ್ ಬನವಾಸಿಯ ವಾತಾವರಣ. ಪಂಪನೂ ಒಮ್ಮೆ ಕುಂತು ಕೇಳಬೇಕು, ಹಾಗಿರುತ್ತಿತ್ತು ಆ ವಿಶ್ಲೇಷಣೆ. ಕನ್ನಡ ಭಾಷೆಯನ್ನು ‘ಸುಲಿದ ಬಾಳೆಯ ಹಣ್ಣಿನಂದದಿ’ ಎಂದ ಕವಿವಾಣಿ ಹಳಗನ್ನಡದಲ್ಲೂ ನಿಜವಾಗುತ್ತಿದ್ದುದು ನಿಮ್ಮ ತರಗತಿಯಲ್ಲಿ ಮಾತ್ರ. ಈಗಲೂ ಕಿವಿಯೊಳಗೆ ಪಂಪನ ಅದೇ ಕವಿತೆ, ಅದೇ ಮೊದಲ ಕವಿತೆ.

ನಿಮಗೆ ಕವಿತೆ ಅಂದ್ರೆ ಅದ್ಯಾಕೆ ಅಷ್ಟೊಂದು ಇಷ್ಟ ಅಂತ ನಮ್ಮನ್ನೂ ಕವಿತೆ ಬೆನ್ನು ಹತ್ತುವತನಕ ಗೊತ್ತಾಗಿರಲಿಲ್ಲ. ಆಗ ಎದೆಯಲ್ಲಿ ಮೊಳೆತ ಪ್ರೀತಿ ಬೆಟ್ಟವಾಯಿತು, ಹೂವಾಯಿತು, ತೊರೆಯಾಯಿತು, ಕಡೆಗೊಂದು ಸುಂದರ ಚಿತ್ರವಾಯಿತು. ಆಮೇಲೆ ಕೇಳಬೇಕೇ… ನೀವು ಕಾಲಿಟ್ಟೊಡನೆ ತರಗತಿಯ ತುಂಬಾ ಕವಿತೆಗಳ ಹೂಗೊಂಚಲು, ಮುದಗೊಳಿಸುವ ಘಮಲು.

ಊಹೂಂ, ನೀವು ಕವಿತೆ ಹೇಳದ ದಿನವೇ ಗೊತ್ತಿಲ್ಲಬಿಡಿ. ಆ ಪುಟಾಣಿ ಗಾತ್ರದ ಕವಿತೆಗಳಂತೂ ವ್ಹಾ…ವ್ಹಾ… ಅದೊಂದು ದಿನ ನಿಮ್ಮ ಕೊಠಡಿಗೆ ಬಂದಿದ್ದ ನನಗೆ ತೀವ್ರ ಅಚ್ಚರಿ, ನೀವು ತರಗತಿಯಲ್ಲಿ ಹೇಳುತ್ತಿದ್ದ ಮುಕ್ಕಾಲು ಪಾಲು ಕವಿತೆಗಳು ನಿಮ್ಮವೇ ಎಂಬುದು ನನಗೆ ಗೊತ್ತಾಗಿಹೋಗಿತ್ತು. ಆದರೂ ಯಾವತ್ತಿಗೂ ಅವು ನಿಮ್ಮವೇ ಅಂತ ಬಾಯಿಬಿಟ್ಟವರಲ್ಲವಲ್ಲ..!

ಭಾವತುಂಬಿ, ಮೆಲ್ಲಗೆ ಕೈ ಏರಿಳಿಸುತ್ತಾ ಮೆಲುದನಿಯಲ್ಲಿ ಕವಿತೆ ಕಾಣಿಸಲು ಶುರುಮಾಡಿದಿರೆಂದರೆ ನಾವೆಲ್ಲಾ ಭಾವಪರವಶ. ಆಗಸ್ಟ್ ಮುಗೀತಾ ಬಂತು. ಎಲ್ಲರೂ ಶಿಕ್ಷಕ ದಿನಾಚರಣೆಗೆ ತಯಾರಾಗ್ತಿದ್ದಾರೆ. ಆದರೆ ಅದೊಂದು ಆಚರಣೆ ಅಂತ ನನಗೆ ಯಾವತ್ತೂ ಅನ್ನಿಸಿಯೇ ಇಲ್ಲ. ಇದೋ ಮನಸ್ಸಲ್ಲೇ ನಮಿಸುತ್ತಿದ್ದೇನೆ ಮೇಸ್ಟ್ರೇ… ಯಾಕೋ ಮಾತು ಬರಿದಾಯ್ತೇನೋ ಅನ್ನಿಸ್ತಿದೆ. ನಂದೊಂದು ಕೊನೇ ಆಸೆ- ಒಂದೇ ಒಂದು ಪುಟಾಣಿ ಕವಿತೆ….. ಪ್ಲೀಸ್….