ಅಜ್ಜ ಅಡ್ಕಾರಿಗೆ ಹೋದದ್ದು ಯಾಕೆ ಎಂದು ಅಮೇಲೆ ತಿಳಿಯಿತು. ಅವರು ಕ್ಷೌರ ಮಾಡಿಸಿಕೊಳ್ಳಲು ಹೋಗಿದ್ದರು. ಮರುದಿನ ಅಮ್ಮ ಅಜ್ಜನ ಸ್ವಚ್ಛ ಬಟ್ಟೆಗಳನ್ನು ಮಡಚಿ ತಂದು ಅಜ್ಜನಿಗೆ ಕೊಟ್ಟರು. ನಾನು ಕಿಸ್ತು ಕಟ್ಟಲು ಹೋಗುವ ನಮ್ಮ ಅಜ್ಜನ ಸಡಗರವನ್ನು ಗಮನಿಸುತ್ತಿದ್ದೆ. ಯಾವುದೋ ರಾಜಕಾರ್ಯಕ್ಕೆ ಹೋಗುವವರಂತೆ ಅಜ್ಜ ಸಂಭ್ರಮಿಸುತ್ತಿದ್ದರು. ಒಗೆದು ಶುಚಿಯಾಗಿದ್ದ ಮೊಣಕಾಲಿನ ಕೆಳಗೆ ಬರುವಂಥ ಮುಂಡು ಉಟ್ಟು, ಅರೆ ಕೈ ತೋಳಿನ ಅಂಗಿ ಹಾಕಿ ಮುಂಡಾಸು ಕಟ್ಟಿ ಠಾಕುಠೀಕಾಗಿ ನಮ್ಮಜ್ಜ ಕಿಸ್ತು ಕಟ್ಟಲು ಹೊರಟರು.
ಡಾ. ಬಿ. ಜನಾರ್ದನ ಭಟ್ ಸಾದರಪಡಿಸುವ ಓಬಿರಾಯನಕಾಲದ ಕಥಾಸರಣಿಯಲ್ಲಿ ಕುಕ್ಕೇಟಿ ಮಾಧವ ಗೌಡ ಬರೆದ ಕಥೆ ‘ಕಿಸ್ತು ತೆರಲು ತೆರಳುತ್ತಿದ್ದ  ನಮ್ಮಜ್ಜನ  ಶಿಸ್ತು’

 

ನಾನು ನಾಲ್ಕನೆಯ ತರಗತಿಯಲ್ಲಿ ಓದುತ್ತಿದ್ದೆನೆಂದು ನೆನಪು. ಒಂದು ಸಂಜೆ ಶಾಲೆಯಿಂದ ಮನೆಗೆ ಬರುವಾಗ ಇಳಿವಯಸ್ಸಿನವರೊಬ್ಬರು ನಮ್ಮ ಅಜ್ಜನ ಜೊತೆಯಲ್ಲಿ ಏನೋ ಮಾತನಾಡುತ್ತಾ ಇದ್ದರು. (ಬಹುಶಃ ಅವರು ಉಗ್ರಾಣಿಯಾಗಿರಬೇಕು). ನಮ್ಮ ಅಜ್ಜಿ (ಅವ್ವ) ಅವರಿಗೆ ಕುಡಿಯಲು ತಂದುಕೊಟ್ಟರು. (ಹಾಲೋ, ಕಷಾಯವೋ ಇರಬೇಕು). ಅದನ್ನು ಕುಡಿದಾದ ಮೇಲೆ ಅವರು ಅಜ್ಜನಿಗೆ ವಂದಿಸಿ ಹೋದರು.

ಅನಂತರ ಅಜ್ಜ ನನ್ನ ಅಮ್ಮನನ್ನು ಕರೆದು “ಕಾವೇರಿ, ನಾಳೆ ಶಿಸ್ತು ಕಟ್ಟಿಕೆ ಹೋಕೆ ಉಟ್ಟು. ನನ್ನ ಬಟ್ಟೆ ಒಗ್ದ್ ಇಸ್” ಎಂದು ಹೇಳಿದರು. ಹೀಗೆ ಹೇಳಿದ ಕೂಡಲೇ ಅಜ್ಜ ಅಡ್ಕಾರಿಗೆ ಹೊರಟರು.

ಅಜ್ಜನವರು ಬಟ್ಟೆ ತೊಳೆದು ಹಾಕು, ಕಿಸ್ತು ಕಟ್ಟಲಿದೆ ಎಂದು ನಮ್ಮ ತಾಯಿಯವರಲ್ಲಿ ಹೇಳಿದ್ದನ್ನು ಕೇಳಿ, “ಇದೇನೋ ಒಂದು ದೊಡ್ಡ ಸಂಗತಿ ಇರಬೇಕು” ಎಂದೆಣಿಸಿ, ನಮ್ಮ ತಂದೆ (ಕೊರಗಪ್ಪ ಗೌಡರು) ಯವರಲ್ಲಿ ಕೇಳಿದೆ, “ಕಿಸ್ತು ಕಟ್ಟುವುದೆಂದರೆ ಎಂಥ? ಅಜ್ಜ ಬಟ್ಟೆ ಒಗ್ದ್ ಹಾಕ್ಲಿಕೆ ಹೇಳಿದ್ರಲ್ಲಾ?” ಎಂದು.
ನಮ್ಮ ತಂದೆಯವರು ಹೇಳಿದರು, “ಕಿಸ್ತು ಅಂದರೆ ನಮ್ಮ ಆಸ್ತಿಯ ಭೂ ಕಂದಾಯ. ಅದನ್ನು ವಸೂಲು ಮಾಡ್ಲಿಕ್ಕೆ ಪಟೇಲರು ತೋಟಪ್ಪಾಡಿ (ಒಂದು ಸ್ಥಳದ ಹೆಸರು)ಗೆ ಬರುತ್ತಾರೆ. ಈ ಊರಿನವರೆಲ್ಲಾ ನಾಳೆ ಕಂದಾಯ ಕಟ್ಟಲಿಕ್ಕೆ ಅಲ್ಲಿಗೆ ಹೋಗ್ತಾರೆ. ಹಾಗೆ ಅಜ್ಜನೂ ಹೋಗ್ತಾರೆ.”

ಅಜ್ಜ ಅಡ್ಕಾರಿಗೆ ಹೋದರು ಎಂದೆನಲ್ಲಾ?

ಅಜ್ಜ ಅಡ್ಕಾರಿಗೆ ಹೋದದ್ದು ಯಾಕೆ ಎಂದು ಅಮೇಲೆ ತಿಳಿಯಿತು. ಅವರು ಕ್ಷೌರ ಮಾಡಿಸಿಕೊಳ್ಳಲು ಹೋಗಿದ್ದರು. ಮರುದಿನ ಅಮ್ಮ ಅಜ್ಜನ ಸ್ವಚ್ಛ ಬಟ್ಟೆಗಳನ್ನು ಮಡಚಿ ತಂದು ಅಜ್ಜನಿಗೆ ಕೊಟ್ಟರು.

ನಾನು ಕಿಸ್ತು ಕಟ್ಟಲು ಹೋಗುವ ನಮ್ಮ ಅಜ್ಜನ ಸಡಗರವನ್ನು ಗಮನಿಸುತ್ತಿದ್ದೆ. ಯಾವುದೋ ರಾಜಕಾರ್ಯಕ್ಕೆ ಹೋಗುವವರಂತೆ ಅಜ್ಜ ಸಂಭ್ರಮಿಸುತ್ತಿದ್ದರು. ಒಗೆದು ಶುಚಿಯಾಗಿದ್ದ ಮೊಣಕಾಲಿನ ಕೆಳಗೆ ಬರುವಂಥ ಮುಂಡು ಉಟ್ಟು, ಅರೆ ಕೈ ತೋಳಿನ ಅಂಗಿ ಹಾಕಿ ಮುಂಡಾಸು ಕಟ್ಟಿ ಠಾಕುಠೀಕಾಗಿ ನಮ್ಮಜ್ಜ ಕಿಸ್ತು ಕಟ್ಟಲು ಹೊರಟರು.

ಇಂದಿಗೂ ಆ ದೃಶ್ಯ ನನ್ನ ಕಣ್ಣೆದುರು ಬರುತ್ತದೆ. ಕಂದಾಯ (ತೆರಿಗೆ) ಕಟ್ಟುವುದು ನಮ್ಮ ಮುಖ್ಯ ಕರ್ತವ್ಯ ಎಂಬ ಮುತುವರ್ಜಿ ಮತ್ತು ಆ ಸಂಭ್ರಮವನ್ನು ನೆನೆಪಿಸಿಕೊಂಡಾಗ ನಮ್ಮ ಹಿರಿಯರ ಬಗ್ಗೆ ಹೆಮ್ಮೆಯೆನಿಸುತ್ತದೆ.

ಮನಃಪೂರ್ವಕವಾಗಿ ತೆರಿಗೆ ಕಟ್ಟುವ ಅಂದಿನವರ ಪ್ರಾಮಾಣಿಕ ಪ್ರಜ್ಞೆ ಇಂದಿನವರಿಗೂ ಅನುಕರಣೀಯ, ಮುಂದಿನವರಿಗೆ ದಾರಿ ದೀಪ.

(ಕಿಸ್ತು : ವಾರ್ಷಿಕವಾಗಿ ಪಾವತಿಸುವ ಭೂಕಂದಾಯದ ಒಂದೊಂದು ಕಂತು)

******

(ಮೂಲ : ಹಳಬರ ಜೋಳಿಗೆ : 1998. ಸಂ. ಜಯಮ್ಮ ಚೆಟ್ಟಿಮಾಡ)
ಟಿಪ್ಪಣಿ:
ಕುಕ್ಕೇಟಿ ಮಾಧವ ಗೌಡ : ಸುಳ್ಯದ ದಿ. ಕುಕ್ಕೇಟಿ ಮಾಧವ ಗೌಡರು ಸುಮಾರು 45 ವರ್ಷಗಳ ಕಾಲ ದಸ್ತಾವೇಜು ಬರಹಗಾರರಾಗಿ ಕೆಲಸಮಾಡುತ್ತ ಜನಾನುರಾಗಿಯಾಗಿದ್ದರು. ಅವರ ಹಿರಿಯರಾದ ಕುಕ್ಕೇಟಿ ಚೆನ್ನ ಗೌಡ ವಾ ಸುಬ್ಬ ಗೌಡರು 1837 ರ ಕಲ್ಯಾಣಪ್ಪನ ಕ್ರಾಂತಿಯ ಸಂದರ್ಭದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಯೋಧರಾಗಿದ್ದರು. ಮಂಗಳೂರನ್ನು ಹದಿಮೂರು ದಿನ ಆಳಿದ ಕ್ರಾಂತಿಕಾರಿಗಳ ತಂಡದಲ್ಲಿದ್ದ ಅವರನ್ನು ಆಮೇಲೆ ಬ್ರಿಟಿಷರು ಬಂಧಿಸಿ ಗಡೀಪಾರು ಶಿಕ್ಷೆ ವಿಧಿಸಿದ್ದರು.
ಈ ಅನುಭವಕಥನದಲ್ಲಿ ಕುಕ್ಕೇಟಿಯವರು ಹಿಂದಿನ ಕಾಲದ ಜನರ ಪ್ರಾಮಾಣಿಕತೆ, ಶಿಸ್ತು ಮತ್ತು ನಿಷ್ಠೆಗಳಿಗೆ ಉದಾಹರಣೆಯಾಗಬಲ್ಲ ಘಟನೆಯೊಂದನ್ನು ನಿರೂಪಿಸಿದ್ದಾರೆ.