“ಔಟ್ ಬ್ಯಾಕ್ ಎಂದು ಬಿಳಿಯರು ಕರೆದರೂ ಅದು ನಿಜಕ್ಕೂ ಸಮುದ್ರದಿಂದ ಎರಡು ಘಂಟೆ ಪ್ರಯಾಣದ ಒಳನಾಡು ಪ್ರದೇಶ. ಸಮುದ್ರದ ಗಾಳಿ ಇಲ್ಲಿಗೆ ಸೋಕುವುದೂ ಇಲ್ಲ. ನೀರಿನ ಸೆಲೆ ಕಡಿಮೆ. ಎಲ್ಲೆಲ್ಲೂ ಗಮ್ ಟ್ರೀ ಮತ್ತು ಪೇಪರ್ ಬ್ಯಾಕ್ ಟ್ರೀ. ಹಕ್ಕಿಗಳ ಕಲರವವಿದ್ದರೂ ಅದೆಲ್ಲೋ ಬಹುದೂರ ಇರುತ್ತವಷ್ಟೇ. ಈ ಶಬ್ದವಿಲ್ಲದ ನಿಶ್ಚಲತೆ ಯಾರನ್ನೂ ಕಂಗೆಡಿಸುತ್ತದೆ.ಕನಿಷ್ಟಪಕ್ಷ ಒಂದು ಜೀರುಂಡೆ ಹಾಡು ಇದ್ದರೂ ಎಷ್ಟು ಚೆನ್ನ! ಅದರ ಬದಲು ಕಣ್ಣಿಗೆ ಕಾಣದ, ಶಬ್ದ ಮಾಡದ ಜೇಡಗಳ ವಿವಿಧ ಜಾತಿಗಳಿವೆ ಇಲ್ಲಿ.”
ಡಾ.ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಅಂಕಣ.

 

ಇತ್ತೀಚೆಗೆ ಗೆಳತಿಯೊಬ್ಬಳು ಅವಳ ಮತ್ತು ನನ್ನ ಕ್ಯಾನ್ಬೆರಾ ದಿನಗಳ ಬಗ್ಗೆ ಯಾತಕ್ಕೋ ನೆನಪಿಸಿದಳು. ನಮ್ಮಿಬ್ಬರಿಗೂ ಆ ಕಾಲದಲ್ಲಿ ಕ್ಯಾನ್ಬೆರಾ ನಗರ ಇಷ್ಟವಾಗಿರಲಿಲ್ಲ. ಸಂಸ್ಕೃತಿ ಮತ್ತು ವಾಣಿಜ್ಯ ಕಾರಣಗಳಿಂದ ಮಹಾನಗರಗಳಾದ ಮೆಲ್ಬೋರ್ನ್ ಮತ್ತು ಸಿಡ್ನಿ ಸದಾ ಇಡೀ ದೇಶದ ನಾಡಿಬಡಿತವಾಗಿ ಸದ್ದು ಮಾಡುತ್ತಿರುತ್ತವೆ. ಬಲು ಪೈಪೋಟಿ ಮತ್ತು ತಿಕ್ಕಾಟಗಳು ಯಾವಾಗಲೂ ಇದ್ದದ್ದೇ ಎಂದು ಅಲ್ಲಿ ಅವರು, ಇಲ್ಲಿ ಇವರು ಮೂಗು ಮುರಿಯುತ್ತಾರೆ. ಈ ಎರಡು ನಗರಗಳ ಮಧ್ಯೆ ಓ ಶಿವನೇ ಎಂದು ಏನೂ ಇಲ್ಲದ ವಿರಾಗಿ ಭೂಮಿಯಲ್ಲಿ ದೇಶದ ರಾಜಧಾನಿ ಕ್ಯಾನ್ಬೆರಾ ಕೂತುಬಿಟ್ಟಿದೆ. ಯಾಕಾಗಿ ಈ ರಾಜಧಾನಿ ನಗರವನ್ನು ಪೂರ್ತಿಯಾಗಿ ಹೀಗೆ ಇಷ್ಟು ಕೃತ್ರಿಮವಾಗಿ ಕಟ್ಟಿದರೋ ಅಂತ ಸುತ್ತಲಿದ್ದ ಎಲ್ಲರೂ ಸದಾ ಗೊಣಗುವವರು. ಮರಗಿಡಗಳನ್ನೂ ಕೂಡ ಆ ಬ್ರಿಟನ್, ಕೆನಡಾ, ಅಮೇರಿಕ, ಯುರೋಪ್ ಎಂಬಂತೆ ಎಲ್ಲೆಲ್ಲಿಂದಲೋ ತಂದು ಇಲ್ಲ್ಯಾಕೆ ನೆಟ್ಟಿದ್ದಾರೆ. ಥೂ ಈ ಬರಡು ನಗರವನ್ನು ರಾಜಧಾನಿ ಎಂದು ಕರೆಯಲೇಬೇಕಾ ಎಂಬ ಗೊಣಗಾಟ ಇದ್ದೆ ಇರುತ್ತದೆ. ಹೆಚ್ಚಿನ ರಾಜಕಾರಣಿಗಳು ಮೆಲ್ಬೋರ್ನ್ ಅಥವಾ ಸಿಡ್ನಿಯಲ್ಲಿ ಇರುವ ಪರಿಪಾಠ. ಅವರನ್ನ ನೋಡಿ ಸಾಮಾನ್ಯ ಜನರ ಗೋಳು ಇನ್ನೂ ಹೆಚ್ಚುತ್ತದೆ. ಮಾನವನಿರ್ಮಿತ ಅಸಂಬದ್ಧ ತಪ್ಪುಗಳಲ್ಲಿ ಇದು ಅತ್ಯಂತ ಕುರೂಪ ತಳೆದ ಮೊಡವೆ ಎಂದು ಆ ನನ್ನ ಗೆಳತಿ ವರ್ಣಿಸುವಾಗ ಅವಳ ಬಾಯಿಂದ ಹೊರಡುವ ಸಿಗರೇಟ್ ಹೊಗೆ ಆ ಒಣಚಳಿಯ ರಾತ್ರಿಯಲ್ಲಿ ಕರಗಿಹೋಗುವುದನ್ನೇ ನಾನು ನೋಡುತ್ತಿದ್ದೆ. ಅವಳು ಮಿಶ್ರ ಜನಾಂಗೀಯ ಹೆಂಗಸು. ಮೂರು ವಿಭಿನ್ನ ಜನಾಂಗಗಳ ಮೂಲಜರು. ನಾನೊಂದು ಹೈಬ್ರಿಡ್ ಪದಾರ್ಥ ಎಂದು ಹೇಳಿಕೊಂಡು ಎಲ್ಲರನ್ನೂ ಗಲಿಬಿಲಿಗೊಳಿಸುತ್ತಿದ್ದಳು.

ನಗರ ಸುತ್ತಾಟಕ್ಕೆಂದು ಒಮ್ಮೆ ನಾನೊಬ್ಬಳೇ ಹೋಗಿದ್ದೆ. ಅಬರಿಜಿನಲ್ ಜನರ ಟೆಂಟ್ ಎಂಬಸಿ (Tent Embassy) ಯನ್ನ ಸುಮ್ಮನೆ ನಿಂತು ನೋಡುತ್ತಿದ್ದೆ. ಆಗ ಅವರ ವಿಷಯಗಳು ನನಗೆ ಅಷ್ಟೊಂದು ತಿಳಿದಿರಲಿಲ್ಲ. ಅವರಲ್ಲೇ ಒಬ್ಬರು ವಾಟ್ ಕ್ಲಾನ್ ಯು ಫ್ರಮ್ ಡಾರ್ಲ್? (What clan you from, Darl (darling)) ಎಂದು ಕೇಳಿದಾಗ ಅರ್ಥವಾಗದೆ ಜಾಗ ಖಾಲಿ ಮಾಡಿದ್ದೆ. ಗೆಳತಿಗೆ ಹೇಳಿದಾಗ ಅವಳು ಬಿದ್ದುಬಿದ್ದು ನಕ್ಕಿದ್ದಳು. ಅವರು ನಿನ್ನನ್ನ ಅಬರಿಜಿನಲ್ ಹುಡುಗಿ ಎಂದುಕೊಂಡರು, ಇಂಡಿಯನ್ ಅಬರಿಜಿನಲ್ ಥರ ಕಾಣಿಸುವುದೇ! ಬಲು ವಿಚಿತ್ರ, ಎಂದು ನಕ್ಕುಬಿಟ್ಟಿದ್ದಳು. ಈ ದೇಶವೇ ಒಂದು ವಿಚಿತ್ರದಂತೆ ನನಗೆ ಕಾಣಿಸತ್ತೆ, ಒಂಥರಾ ಜನ ಕಳೆದುಹೋಗಿ ಉಳಿದುಕೊಂಡ ಪಳೆಯುಳಿಕೆಗಳಂತೆ ಕಾಣುತ್ತಾರೆ ಎಂದಿದ್ದೆ. “ಓಹ್ ಗೋ ಆನ್, ಸೇ ಮೋರ್, ಕೀಪ್ ಟಾಕಿಂಗ್,” ಎಂದವಳ ನಗು!

ವಲೊಂಗೊಂಗ್ ಮತ್ತು ಕ್ಯಾನ್ಬೆರಾ ಪ್ರದೇಶದ ಔಟ್ ಬ್ಯಾಕ್ ಜಾಗಗಳನ್ನ ಆ ವರ್ಷ ಒಂದಷ್ಟು ಪರಿಚಯ ಮಾಡಿಕೊಂಡಿದ್ದೆ. ನನಗಿಷ್ಟವಾಯಿತು ಅಂತಲ್ಲ, ಅನಿವಾರ್ಯ ಕಾರಣಗಳಿಂದಾಗಿ ಆ ವರ್ಷ ಕ್ಯಾನ್ಬೆರಾದಲ್ಲಿ ಹೆಚ್ಚಿನ ಕಾಲ ಕಳೆಯಬೇಕಿತ್ತು. ಪ್ರಯಾಣದ ಮೂಲಕ, ಒಂದಷ್ಟು ಸ್ಥಳವಿವರಗಳನ್ನು ಓದಿಕೊಂಡು ಅವುಗಳ ಪರಿಚಯವಾಗಿತ್ತು. ಅದಕ್ಕೂ ಮುಂಚೆ ಆಸ್ಟ್ರೇಲಿಯಾದಲ್ಲಿ ನನ್ನ ಬಂಧುಬಾಂಧವರು ಎಂಬಂತೆ ಇದ್ದ ನನ್ನ ವಲೊಂಗೊಂಗ್ ಸ್ನೇಹಿತ ದಂಪತಿಯಿಂದ ರಾಜಧಾನಿಯ ಚರಿತ್ರೆ ಮತ್ತು ಸುತ್ತಮುತ್ತಲೂ ಹರಡಿದ್ದ ಔಟ್ ಬ್ಯಾಕ್ ಪಟ್ಟಣಗಳು ಮತ್ತು ಅದರ ಹಳ್ಳಿಗಳ ಪರಿಚಯವಾಗಿತ್ತು. ವಲೊಂಗೊಂಗ್ ನ ದಕ್ಷಿಣವನ್ನು ಬಿಟ್ಟು ಪಶ್ಚಿಮದಲ್ಲಿ ಹೊರಟು ಕ್ಯಾನ್ಬೇರಾದ ಹಾದಿ ಹಿಡಿದರೆ ಒಮ್ಮೆಗೆ ಬೆಟ್ಟಗಳು ಎದುರಾಗುತ್ತವೆ. ಮಿಟ್ಟಗೊಂಗ್, ಬೋರಾಲ್, ಮಾಸ್ ವೇಲ್, ನಂತರ ಬಂಡನೂನ್ ಮತ್ತು ರಾಬರ್ಟ್ ಸನ್ ಪಟ್ಟಣಗಳು ಇಲ್ಲಿ ಹೆಸರುವಾಸಿ. ಹೈನುಗಾರಿಕೆ, ಕೃಷಿ, ಜಾನುವಾರು ಸಾಕಾಣಿಕೆ ಮತ್ತು ಅಲ್ಲಲ್ಲಿ ವಿನ್ಯಾರ್ಡ್, ವೈನ್ ತಯಾರಿಕೆ, ಆಲಿವ್ ತೋಟಗಳು ಇತ್ಯಾದಿ ಇಲ್ಲಿನ ಪ್ರಸಿದ್ಧ ವ್ಯಾಪಾರಗಳು. ಚಳಿಗಾಲದಲ್ಲಿ ಬಲು ಚಳಿ, ಬೇಸಗೆ ಹಿತವಾಗಿರುತ್ತದೆ. ಬ್ರಿಟಿಷರು ಈ ಪ್ರದೇಶವನ್ನು ಬಲು ಇಷ್ಟಪಡುತ್ತಾರೆ. ಅಲ್ಲಲ್ಲಿ ಪ್ರಸಿದ್ಧ ಕಲಾಕಾರರು, ಸಾಹಿತಿಗಳು ನೆಲೆಸಿದ್ದಾರೆ ಎಂದು ಆ ದಂಪತಿ ಅವರ ಹೆಸರುಗಳನ್ನ ಕೂಡ ಹೇಳಿದರು. ಶಾಲೆಯಲ್ಲಿ, ಕಾಲೇಜಿನಲ್ಲಿ ನಾನು ಹೆಚ್ಚು ಓದಿಕೊಂಡದ್ದು ಬ್ರಿಟಿಷ್ ಮತ್ತು ಅಮೇರಿಕನ್ ಸಾಹಿತಿಗಳ ಬಗ್ಗೆ. ಈ ಹೊಸ ಆಸ್ಟ್ರೇಲಿಯನ್ ಸಾಹಿತಿಗಳ ಹೆಸರು ಯಾಕೋ ತಲೆಯಲ್ಲಿ ನಿಲ್ಲಲಿಲ್ಲ.

ಸದರನ್ ಹೈಲ್ಯಾಂಡ್ಸ್ (Southern Highlands) ನೆತ್ತಿ ತಲುಪಿದರೆ ಮೋಡಗಳಲ್ಲಿರುತ್ತೀವಿ. ಈ S ಸದರನ್ ಹೈಲ್ಯಾಂಡ್ಸ್ ಆಸ್ಟ್ರೇಲಿಯಾ ದೇಶದ ಬಲಭುಜವಂತೆ. ಕ್ರಮೇಣ ಈ ಬೆಟ್ಟಗಳು ಸ್ನೋವೀ ಮೌಂಟೇನ್ಸ್ (Snowy Mountains) ಜೊತೆಗೂಡುತ್ತವೆ. ಆ ಪರ್ವತಗಳ ಎತ್ತರ ಹೆಚ್ಚು, ಆದ್ದರಿಂದ ಹಿಮವನ್ನ ಹಿಡಿದಿಟ್ಟುಕೊಂಡು ಚಳಿಗಾಲದಲ್ಲಿ ಹಿಮಪರ್ವತಗಳಾಗುತ್ತವೆ. ಇಡೀ ಆಸ್ಟ್ರೇಲಿಯಾದಲ್ಲಿ ಅವೇ ಸ್ಕೀಯಿಂಗ್ ಮಾಡಲು ಪ್ರಶಸ್ತವಾದ ಪರ್ವತ ಪ್ರದೇಶ. ಆಸ್ಟ್ರೇಲಿಯನ್ನರಿಗೆ (ಬಿಳಿಯರು ಎಂದು ಓದಿಕೊಳ್ಳಬೇಕು) ಬಲು ಪ್ರಿಯವಾದ ಹಿಮಪಟ್ಟಣ ಜಿಂಡಬೈನ್ ಇರುವುದು ಇಲ್ಲೇ. ಹಿಮವಿರುವ ಎರಡು, ಮೂರು ತಿಂಗಳುಗಳು ಈ ಪರ್ವತಗಳು ಚಿನ್ನದ ಮೊಟ್ಟೆಯಿಡುವ ಬಾತುಕೋಳಿಯಂತೆ. ಆಗ ಸುತ್ತಮುತ್ತಲಿನ ಔಟ್ ಬ್ಯಾಕ್ ಪ್ರದೇಶಗಳೆಲ್ಲ ನಿಡುಸುಯ್ದು ನಿಟ್ಟುಸಿರುಬಿಡುತ್ತವೆಯೇನೋ!

ನಿಧಾನವಾಗಿ ಘಟ್ಟಗಳನ್ನು ಇಳಿಯುತ್ತಿದ್ದರೆ ಇದ್ದಕ್ಕಿದ್ದಂತೆ ಮಟ್ಟಸ ಪ್ರದೇಶ, ಬೃಹತ್ ಸರೋವರವಿರುವ (ಒಣಗಿರುವ) ಗೋಲ್ಬೌರ್ನ್ ದೊಡ್ಡಪಟ್ಟಣ ಸಿಗುತ್ತದೆ. ಪ್ರತಿಯೊಂದು ಪಟ್ಟಣವೂ ಮತ್ತೊಂದರ ಫೋಟೋಕಾಪಿ. ಅದೇ ಪಬ್, ಅದೇ ಹೊಟೆಲ್, ಒಂದು ಪ್ರತ್ಯೇಕ ಚಿಹ್ನೆಯ ಪ್ರತಿಮೆ, ಜನರಿಲ್ಲದ ಮೂರುಮತ್ತೊಂದು ರಸ್ತೆಗಳು, ಅದೇಅದೇ ವಿನ್ಯಾಸದ ಕಟ್ಟಡಗಳು… ನೋಡುತ್ತಿದ್ದರೆ ಪಂಜರದೊಳಗೆ ಬಂಧಿಸಿದ ಭಾವನೆ. ಗಿರಕಿ ಹೊಡೆದೂ ಹೊಡೆದೂ ಮತ್ತದೇ ಜಾಗಕ್ಕೆ ಬಂದಂತೆ. ಹಾಲಿವುಡ್ ನ ವೈಲ್ಡ್ ವೆಸ್ಟರ್ನ್ ಕೌಬಾಯ್ (wild western cowboy), ಕ್ಲೈಂಟ್ ಈಸ್ಟ್ ವುಡ್ (Clint Eastwood) ಸಿನಿಮಾಗಳಲ್ಲಿ ನೋಡಿದ್ದ ಕಳೆದುಹೋಗಿದ್ದ ಹಳೆಕಾಲದ ಪ್ರೇತಪಟ್ಟಣಗಳು. ಅಲ್ಲಿಂದ ತಪ್ಪಿಸಿಕೊಂಡು ಹೋದರೆ ಸಾಕು ಅನ್ನೋಥರದ ಏಕಾಂಗಿತನವಿತ್ತು ಅಲ್ಲಿ!

ಔಟ್ ಬ್ಯಾಕ್ ಎಂದು ಬಿಳಿಯರು ಕರೆದರೂ ಅದು ನಿಜಕ್ಕೂ ಸಮುದ್ರದಿಂದ ಎರಡು ಘಂಟೆ ಪ್ರಯಾಣದ ಒಳನಾಡು ಪ್ರದೇಶ. ಸಮುದ್ರದ ಗಾಳಿ ಇಲ್ಲಿಗೆ ಸೋಕುವುದೂ ಇಲ್ಲ. ನೀರಿನ ಸೆಲೆ ಕಡಿಮೆ. ಎಲ್ಲೆಲ್ಲೂ ಗಮ್ ಟ್ರೀ ಮತ್ತು ಪೇಪರ್ ಬ್ಯಾಕ್ ಟ್ರೀ. ಹಕ್ಕಿಗಳ ಕಲರವವಿದ್ದರೂ ಅದೆಲ್ಲೋ ಬಹುದೂರ ಇರುತ್ತವಷ್ಟೇ. ಈ ಶಬ್ದವಿಲ್ಲದ ನಿಶ್ಚಲತೆ ಯಾರನ್ನೂ ಕಂಗೆಡಿಸುತ್ತದೆ. ಕನಿಷ್ಟಪಕ್ಷ ಒಂದು ಜೀರುಂಡೆ ಹಾಡು ಇದ್ದರೂ ಎಷ್ಟು ಚೆನ್ನ! ಅದರ ಬದಲು ಕಣ್ಣಿಗೆ ಕಾಣದ, ಶಬ್ದ ಮಾಡದ ಜೇಡಗಳ ವಿವಿಧ ಜಾತಿಗಳಿವೆ ಇಲ್ಲಿ. ಜೀವ ತೆಗೆಯುವ ಜೇಡ, ಹಾವುಗಳ ದೇಶದಲ್ಲಿ ಇದ್ದು ಅಭ್ಯಾಸವಾಗಿದ್ದರೂ ನಾಲ್ಕುವರ್ಷಗಳ ಹಿಂದೆ ಅಂಥದ್ದೊಂದು ಜೇಡ ನನ್ನ ಎಡಕೈಗೆ ಕುಟುಕಿ, ವಿಷವೇರಿ ಎರಡು ದಿನ ಆಸ್ಪತ್ರೆಗೆ ದಾಖಲಾಗಿದ್ದೆ.

ನಿಧಾನವಾಗಿ ಘಟ್ಟಗಳನ್ನು ಇಳಿಯುತ್ತಿದ್ದರೆ ಇದ್ದಕ್ಕಿದ್ದಂತೆ ಮಟ್ಟಸ ಪ್ರದೇಶ, ಬೃಹತ್ ಸರೋವರವಿರುವ (ಒಣಗಿರುವ) ಗೋಲ್ಬೌರ್ನ್ ದೊಡ್ಡಪಟ್ಟಣ ಸಿಗುತ್ತದೆ. ಪ್ರತಿಯೊಂದು ಪಟ್ಟಣವೂ ಮತ್ತೊಂದರ ಫೋಟೋಕಾಪಿ. ಅದೇ ಪಬ್, ಅದೇ ಹೊಟೆಲ್, ಒಂದು ಪ್ರತ್ಯೇಕ ಚಿಹ್ನೆಯ ಪ್ರತಿಮೆ, ಜನರಿಲ್ಲದ ಮೂರುಮತ್ತೊಂದು ರಸ್ತೆಗಳು, ಅದೇಅದೇ ವಿನ್ಯಾಸದ ಕಟ್ಟಡಗಳು… ನೋಡುತ್ತಿದ್ದರೆ ಪಂಜರದೊಳಗೆ ಬಂಧಿಸಿದ ಭಾವನೆ.

ಜನರಿಲ್ಲದ ಔಟ್ ಬ್ಯಾಕ್ ನಿಸರ್ಗಕ್ಕೆ ಹೊಕ್ಕರೆ ಎಲ್ಲವೂ ನಿಶ್ಚಲ, ಸ್ತಬ್ಧ, ಮೂಕವಾದಂತೆ. ಆ ವಿಶಾಲತೆಯಲ್ಲಿ ತಿರುತಿರುಗಿ ನೋಡಿದರೆ ಯಾರೋ ನನ್ನನ್ನೇ ನೋಡುತ್ತಿದ್ದಾರೆ ಅನ್ನಿಸುತಿತ್ತು. ಅದು ಭಯದ ಸಂವೇದನೆಯಲ್ಲ, ಆದರೆ ಇಲ್ಲಿರಲು ನನಗೆ ಧೈರ್ಯವಿಲ್ಲ ಎಂಬಂತಹ ಎದೆಬಡಿತ. ಯಾರದ್ದೋ ನೆಲದಲ್ಲಿ ಅವರ ಅಪ್ಪಣೆಯಿಲ್ಲದೆ ನಾನು ನಿಂತಿದ್ದೀನಿ ಎಂಬಂತೆ ಆ ಔಟ್ ಬ್ಯಾಕ್ ನನ್ನನ್ನು ಹೊರ ನೂಕುತ್ತಿತ್ತು. ಬೆಂಗಳೂರಿನಲ್ಲಿದ್ದಾಗ ಪ್ರತಿ ಬಾರಿ ಪಶ್ಚಿಮಘಟ್ಟಗಳ ಕಾಡುಗಳಿಗೆ ಹೋದಾಗಲೆಲ್ಲಾ ಇಲ್ಲೇ ಕಳೆದುಹೋದರೆ ಸಾಕು, ಜನ್ಮಸಾರ್ಥಕ ಎಂದುಕೊಳ್ಳುತ್ತಿದ್ದೆ. ಆದರೆ ಇಲ್ಲಿ ಈ ಆಸ್ಟ್ರೇಲಿಯನ್ ಔಟ್ ಬ್ಯಾಕ್ ನಲ್ಲಿ ಕಳೆದುಹೋಗುವ ಅವಕಾಶಗಳು ಹೇರಳವಾಗಿದ್ದವು. ವಿಪರ್ಯಾಸವೆಂದರೆ, ಸದ್ಯ, ಕಳೆದುಹೋಗದೆ ಸುರಕ್ಷಿತವಾಗಿ ನಮ್ಮ ಸ್ಥಳ ಸೇರಿಕೊಂಡರೆ ಸಾಕು ಎನ್ನುವವರೇ ಎಲ್ಲರೂ.

ಔಟ್ ಬ್ಯಾಕ್ ಹೊಕ್ಕ ಜನರ (ಪ್ರವಾಸಿಗರು, ಚಾರಣಿಗರು, ವಿದ್ಯಾರ್ಥಿಗಳು) ಸುರಕ್ಷತೆಯ ಬಗ್ಗೆ ಸರ್ಕಾರ ಬಹಳ ಗಮನಕೊಡುತ್ತದೆ. ಮೊನ್ನೆಮೊನ್ನೆ ಹಾಗೆ ಆಕಸ್ಮಿಕವಾಗಿ ಕಳೆದುಹೋದ ಚೀನಾದೇಶದ ಪ್ರವಾಸಿಗಳೊಬ್ಬಳ ಪತ್ತೆಗಾಗಿ ಬಹಳ ಮುತುವರ್ಜಿ ವಹಿಸಿದ್ದರು. ಅವಳು ಅಂತೂ ಪತ್ತೆಯಾದಳು. ಸಿಡ್ನಿಯಿಂದ ಎರಡು ಗಂಟೆಗಳ ಪ್ರಯಾಣದ ದೂರದಲ್ಲಿ ನೀಲ ಪರ್ವತಗಳಿವೆ (Blue Mountains). ನಮ್ಮ ನೀಲಗಿರಿ ಬೆಟ್ಟಗಳಿಗೂ ಇವಕ್ಕೂ ಯಾವ ಹೋಲಿಕೆಯೂ ಇಲ್ಲ. ಅಲ್ಲಿನ ಒಂದು ವ್ಯೂ ಪಾಯಿಂಟ್ ನಲ್ಲಿ ನಿಂತು ಸುತ್ತಲೂ ದೃಷ್ಟಿ ಹರಿಸಿದರೆ ಆಸ್ಟ್ರೇಲಿಯನ್ ಔಟ್ ಬ್ಯಾಕ್ ಬಗ್ಗೆ ಒಂದು ಕಿರುನೋಟ ಸಿಗುತ್ತದೆ. ಸಮುದ್ರದಂತೆ ಹಬ್ಬಿರುವ ಬೆಟ್ಟಗಳು, ಕಣಿವೆಗಳು, ಗಿರಿಕಂದರಗಳು ನೂರಾರು ಕಿಲೋಮೀಟರ್ ಇವೆ. ಅಲ್ಲಿ ಕಳೆದುಹೋದರೆ?! ಎಂದು ವಿಚಾರ ಮಾಡಿದರೂ ಸಾಕು ಮೈ ಜುಮ್ಮೆನ್ನುತ್ತಿತ್ತು.

ಒಮ್ಮೆ ನಾನು, ಜೀಬಿ ಹಾಗೆ ಔಟ್ ಬ್ಯಾಕ್ ಸುತ್ತುತ್ತಾ ನಿಜವಾಗಲೂ ಕಳದೇ ಹೋಗಿಬಿಟ್ಟಿದ್ದೆವು. ಮುಖ್ಯರಸ್ತೆ ಮಾಯವಾಗಿತ್ತು. ಎಲ್ಲಿದ್ದೆವು ಎಂಬ ಒಂದೂ ಸುಳಿವೇ ಇರಲಿಲ್ಲ. ಒಂದು ದಿನಕ್ಕೆ ಬೇಕಾದ ಕನಿಷ್ಠ ಆಹಾರ, ನೀರು ನಮ್ಮ ಬಳಿ ಇತ್ತು ಅಷ್ಟೇ. ಆಸ್ಟ್ರೇಲಿಯನ್ ಬುಷ್ ನಲ್ಲಿ ಕಳೆದುಹೋಗುವುದು ಎಂದರೆ ಅದು ಸಾವೇ ಸರಿ ಎಂದು ಜೊತೆಗಿದ್ದವರು ಹಾಕುವ ವಾಸನೆಯಿಲ್ಲದ ಒಗ್ಗರಣೆ ಬೇರೆ! ಭೂಪಟದ ಪುಸ್ತಕವನ್ನು ತೆಗೆದು, ಪುಟಗಳನ್ನು ಹುಡುಕಿ, ನಾವಿದ್ದ ಪ್ರದೇಶದ ಉದ್ದ-ಅಗಲ ಲೆಕ್ಕಾಚಾರ ಹಾಕಿ ಅಂತೂ ಇಂತೂ ಗಿರಕಿಹೊಡೆಯುತ್ತಾ ಕೊನೆಗೂ ಕ್ಯಾನ್ಬೆರಾ ಸೇರಿದೆವು. ಆಗಲೂ ನನಗೆ ಅದೇ ಸಂಶಯ – ಆ ಸ್ಥಳ ಬೇಕಾಗಿಯೇ ನನ್ನನ್ನು ಹೊರದೂಡಿತ್ತು. ಅಬರಿಜಿನಿಗಳು ಅವರ ಪ್ರತಿ ಜಾಗಕ್ಕೂ, ನೀರಿನ ಮೂಲಕ್ಕೂ, ಬೆಟ್ಟಗುಡ್ಡಗಳಿಗೂ, ಮರಗಳಿಗೂ ಒಂದೊಂದು ಶಕ್ತಿದೇವರಿದೆ (spirit), ಎಲ್ಲರಿಗೂ ಅವರ ಪವಿತ್ರ ಜಾಗಗಳಲ್ಲಿ ಸೀದಾಸಾದಾ ಪ್ರವೇಶವಿಲ್ಲ, ಎಂದು ಹೇಳುತ್ತಾರೆ. ಆ ಜಾಗದ ಸ್ಪಿರಿಟ್ ಶಕ್ತಿಗೆ ನಾವಲ್ಲಿ ಹೋಗುವುದು ಇಷ್ಟವಾಗಲಿಲ್ಲವೆಂದರೆ ನಮ್ಮನ್ನು ಅದು ದೂರ ತಳ್ಳುತ್ತದೆ ಎಂದು ಡ್ರೀಮ್ ಟೈಮ್ ಕಥೆಗಳು ಹೇಳುತ್ತವೆ. ಪ್ರವಾಸದ ಹುಚ್ಚಿನಲ್ಲಿ ಔಟ್ ಬ್ಯಾಕ್ ನಲ್ಲಿ ಎಲ್ಲಂದರಲ್ಲಿ ಸುತ್ತುತ್ತಾ ಅಪರಿಚಿತರು ಕ್ರಮೇಣ ಈ ನೆಲದ ಬಗ್ಗೆ ಭಯಭೀತರಾಗುವುದು ಸಾಮಾನ್ಯ ಸಂಗತಿಯಂತೆ.

ಗಡಿಯಾರದಲ್ಲಿ ಗಂಟೆ, ನಿಮಿಷ, ಸೆಕೆಂಡುಗಳ ಮುಳ್ಳುಗಳು ಶಾಶ್ವತವಾಗಿ ನಿಂತುಹೋದಂತೆ. ಏನೂ ಅಲುಗಾಡುವುದಿಲ್ಲ, ಏನೂ ಮಾತನಾಡುವುದಿಲ್ಲ. ಆ ಮೌನದಲ್ಲಿ ಅದೇನೋ ಶೋಕವಿದೆ ಎಂಬಂತೆ ಅನ್ನಿಸುತ್ತಿರುತ್ತೆ. ಒಮ್ಮೊಮ್ಮೆ ನನಗೆ ಹಳೆಯ ಹಾಲಿವುಡ್ ಚಲನಚಿತ್ರ ಮೆಕೆನ್ನಾಸ್ ಗೋಲ್ಡ್ ನೆನಪಿಗೆ ಬರುತ್ತಿತ್ತು. ಅದರಲ್ಲಿ ಆ ನೇಟಿವ್ ಅಮೇರಿಕನ್ ಹಿರಿಯನ ಮುಖದಲ್ಲಿ ಆ ಇಡೀ ಚಿತ್ರ ಲಾಕ್ ಆಗಿತ್ತು. ಚಿನ್ನಕ್ಕಾಗಿ ಬಾಯಿಬಿಡುವ ದುರಾಸೆಕೋರರು, ಅಲ್ಲೊಂದು ಹಿಂಸೆಯ ಭಾಷೆ ಮಾತನಾಡದ ನಮ್ಮ ಹೀರೋ, ಹಿಂಸೆಗೊಳಗಾದ ಮೂಲನಿವಾಸಿಗಳು. ಎಲ್ಲರೂ ಕಳೆದುಹೋಗುವವರೇ ಅಲ್ಲಿ. ಅದನ್ನು ಆ ಹಿರಿಯನ ಮುಖ ಪದೇ ಪದೇ ಹೇಳುತ್ತದೆ. ಹಾಗೆ ಈ ಆಸ್ಟ್ರೇಲಿಯನ್ ನೆಲ ಸದಾ ಮಾತನಾಡುತ್ತಲೇ ಇದೆಯೇನೋ. ನೆಲದೊಂದಿಗೆ ಬದುಕಿಬಾಳಿದ ಮೂಲನಿವಾಸಿಗಳು, ಹಿಂಸೆಯ ಭಾಷೆ ಮಾತನಾಡುವ ಬಿಳಿಯರು, ಅಲ್ಲೂ, ಇಲ್ಲೂ ಸಲ್ಲದ ನಾವು ವಲಸಿಗರು. ಒಂದರ್ಥದಲ್ಲಿ ಈ ದೇಶದ ನೆಲವೇ ಮುಖಮುಚ್ಚಿಕೊಂಡು, ಬೇಕಂತಲೇ ಕಳೆದುಹೋಗಿದೆ ಎಂಬಂತೆ.

ಒಮ್ಮೆ ಆ ನನ್ನ ಗೆಳತಿಯ ಬಳಿ ಅದರ ಬಗ್ಗೆ ಕೇಳಿದೆ. “ಯಾರದ್ದೋ ಮನೆಯಲ್ಲಿ ಹೇಳದೆ ಕೇಳದೆ ಮೋಜು ಮಾಡಲು ಹೋದರೆ ಇನ್ನೇನಾಗುತ್ತದೆ? ಈ ಬಿಳಿಯರಿಗೆ ಮಾತ್ರ ಅಂತಹ ಭೀತಿ, ಎಷ್ಟಾದರೂ ಆಕ್ರಮಣಕಾರರು. ಮೂಲನಿವಾಸಿಗಳಿಗೆ ಕನಸೊಂದಿತ್ತು. ಆದರೆ ಬರುಬರುತ್ತಾ ಅದರ ಶಾಖ ಕುಂದುತ್ತಿದೆ. ಮುಂದಿನ ಪೀಳಿಗೆಯ ಯುವಜನರು ಆ ಕನಸನ್ನು ಹೇಗೆ ಕಾಣಲು ಬಯಸುತ್ತಾರೋ ಅದು ಮುಂದಿನ ದಶಕದಲ್ಲಿ ಬಹಳ ಮುಖ್ಯವಾಗುತ್ತದೆ. ನಿನ್ನಂತಹ ವಲಸಿಗರು ಆ ದೇಶವನ್ನು ಅಪ್ಪಿಕೊಳ್ಳಬೇಕಷ್ಟೆ. ಆದರೂ ಈ ಆಸ್ಟ್ರೇಲಿಯಾ ಅನ್ನೋ ನೆಲ ಇದೆ ನೋಡು, ಇದು ಅತ್ಯಂತ ಪುರಾತನವಾದದ್ದು. ಭಾರಿ ಹಳೆ ಜೀವ ಅದರದ್ದು. ಆ ಜೀವ ಉಸಿರಾಡುವುದು ನಮ್ಮ ಅರಿವಿಗೆ ಅದು ಹೇಗೋ ಬರುತ್ತದೆ. ಆ ಜೀವಕ್ಕೆ ಅದೇನೋ ವಿಶೇಷ ಅಂತಃಸತ್ವವಿದೆ”, ಅಂದಳು. ಆ ದಿನ ಯಾಕೋ ಅವಳ ಮಾತು ನೂರಕ್ಕೆ ನೂರು ಸತ್ಯ ಅನ್ನಿಸಿಬಿಟ್ಟಿತು. ದಶಕ ಕಳೆದು ನೋಡಿದರೆ ಎಲ್ಲರೂ ಮುಂದೆ ಸಾಗುವ ಕನಸನ್ನು ಅವರದ್ದೇ ಆದ ವೇಗದಲ್ಲಿ ನೋಡುತ್ತಿದ್ದಾರೆ. ಅದರಲ್ಲಿ ವಲಸಿಗರ ಪಾತ್ರ ಹೆಚ್ಚುತ್ತಿದೆ.