ಮನುಷ್ಯನ ತರ್ಕದಾಚೆಗೆ ಸೃಷ್ಟಿಯ ಮಿಡಿತವಿರುತ್ತದೆ. “ಅನುಭವವು ಜಗತ್ತಿನ ಕಾರಣಗಳನ್ನು ಹುಡುಕುತ್ತಿದೆ. ಅನುಭಾವವು ಜಗತ್ತಿನ ಕರ್ತೃವನ್ನೇ ಹುಡುಕುತ್ತಿದೆ. ಅನುಭವಕ್ಕೆ ತಿಳಿಯಾದ, ಹದವಾದ, ಸ್ಥಿರವಾದ ಎಚ್ಚರವೇ ಬೇಕು; ಅದಷ್ಟೇ ಸಾಕು. ಅನುಭಾವಕ್ಕೆ ಇದೇ ಜಾತಿಯ ಎಚ್ಚರವೇ ಬೇಕು. ಆದರೆ ಅದು ಕನಸಿನಾಚೆಯ ನಿದ್ದೆಯಲ್ಲ. ನಿದ್ದೆಯಾಚೆಗಿನೆಚ್ಚರ. ನಿದ್ದೆಯಾಚೆಗೊಂದು ಎಚ್ಚರದ ಹಿಮಾಲಯವಿದೆ. ಅದರ ಎತ್ತರದಿಂದ ಬಹಳ ವಿಸ್ತಾರವಾದ ದೃಶ್ಯವು ಗೋಚರವಾಗುವುದು. ಈ ಎತ್ತರದ ಮೇಲಿನ ಎಚ್ಚರಕ್ಕೆ ‘ಸಮಾಧಿ’ ಎಂದು ಹೇಳುವರು.
ನೆನ್ನೆಯಷ್ಟೇ ಬಿಡುಗಡೆಯಾದ ವರಕವಿ ದ.ರಾ. ಬೇಂದ್ರೆ ಕುರಿತ ‘ಕಂಡವರಿಗಷ್ಟೇʼ ಪುಸ್ತಕಕ್ಕೆ ಡಾ. ಗೀತಾ ವಸಂತ ಬರೆದ ಸಂಪಾದಕೀಯ ನುಡಿಗಳು

 

ತಿಳಿಯದ್ಯಾವುದೋ ಕಂಪು ಎಳೀತದ ತುಂಬಿ ಹುಚ್ಚು ಆಗಿ…

ಈ ಕಂಪಿನ ಕರೆಯ ಬೆನ್ನುಹತ್ತಿ ದಶಕವೇ ಕಳೆಯಿತು. ತೀರದ ದಾಹದಂತೆ, ಒಳಸುಳಿಯ ಸೆಳೆತದಂತೆ, ಅರ್ಥಕೊಗ್ಗದ ಮಂತ್ರದಂತೆ ಅನುರಣಿಸುತ್ತಲೇ ಇರುತ್ತದೆ ನನ್ನೊಳಗೆ ಇದು. ಈ ಬಂಧದ ಸೂತ್ರ ತಿಳಿಯದೇ ತಳಮಳಿಸಿದ್ದೇನೆ. ಬೇಂದ್ರೆ ಎಂಬ ಮಾಯಕ ಶಕ್ತಿಗೆ ಸುಮ್ಮನೇ ಮಣಿದಿದ್ದೇನೆ. ಅವರ ಕಾವ್ಯ ಬುದ್ದಿಯ ಕಸರತ್ತಲ್ಲ, ಅದು ಜೀವಮೂಲವನ್ನೇ ತಾಕಿ ಹೊರಬರುವ ಜೀವಂತ ಪ್ರಕ್ರಿಯೆ. ಈ ಕರುಳ ಬಳ್ಳಿಯ ಸೊಲ್ಲಿಗೆ ಕಿವಿಗೊಟ್ಟು ಆ ಕಂಪನದಲ್ಲಿ ಅದ್ದಿಹೋದಂತೆ ಭಾಸವಾಗುತ್ತದೆ.

ಬೇಂದ್ರೆಯವರ ಬದುಕು ಮತ್ತು ಬರಹ ಎರಡೂ ಇಂಥ ಅವ್ಯಕ್ತ ತಳಮಳಗಳ ನೇಯ್ಗೆ. ಒಡಲ ನೂಲನ್ನೇ ನೇಯ್ದು ಕಾವ್ಯವಾಗಿಸುವ ಈ ಪರಿ ಅಪರೂಪದ್ದು. ಕಾವ್ಯಕ್ಕೆ ತನ್ನನ್ನೇ ತೆತ್ತುಕೊಂಡ ಈ ಗಾರುಡಿಗನ ಕಾವ್ಯವು ಪ್ರಜ್ಞೆಯ ಎಲ್ಲ ಸ್ತರಗಳನ್ನು ಆವರಿಸಿ ನಿಲ್ಲುವಂಥದ್ದು. ಕಾಣದ ಕೈಯೊಳಗಿನ ಮಾಯಾಕಿನ್ನರಿಯಂತೆ ನುಡಿಯುವಂಥದ್ದು. ಯಾಕೆ ಕಾಡುತ್ತಾನೆ ಈತ ಈ ಪರಿ? ನನಗೆ, ನಿಮಗೆ, ಈ ಎಲ್ಲರಿಗೆ? ಮನದೊಳಗೆ ಕೂತು ಕೂಗುವ ಈ ಕೋಗಿಲೆ ನಮ್ಮನ್ನೇ ಮರುಳುಗೊಳಿಸಿದೆ. ತೆರೆದಷ್ಟೂ ಅಗಾಧವಾದ ಆಳವನ್ನೂ, ಅಪಾರವಾದ ವಿಸ್ತಾರವನ್ನೂ ಕಾಣಿಸುತ್ತಿದೆ.

ಇದು ಮಂತ್ರ ; ಅರ್ಥಕೊಗ್ಗದ ಶಬ್ದಗಳ ಪವಣಿಸುವ ತಂತ್ರ;
ತಾನೆ ತಾನೆ ಸಮರ್ಥಛಂದ ; ದೃಗ್ಭಂಧ ದಿ
ಗ್ಭಂಧ; ಪ್ರಾಣದ ಕೆಚ್ಚು ಕೆತ್ತಿ ರಚಿಸಿದೆ; ಉಸಿರ
ಹೆದೆಗೆ ಹೂಡಿದ ಗರಿಯ ಗುರಿಯ ನಿರಿಯಿಟ್ಟು ಬರು
ತಿದೆ ತೂರಿ ಲೀಲೆಯಲನಾಯಾಸ… (ಗಾರುಡಿಗ)

ಪ್ರಾಣದ ಕೆಚ್ಚು ಕೆತ್ತಿ ರಚಿಸುವ ಈ ಲೀಲೆಯಲ್ಲಿ ಎಲ್ಲವೂ ಇದೆ. ಈ ಕಾವ್ಯವು ಮನಸ್ಸಿನ ಜಾಗೃತ, ಸ್ವಪ್ನ, ಸುಷುಪ್ತಿ, ತುರೀಯಾವಸ್ಥೆಗಳನ್ನೆಲ್ಲ ಬಾಣದಂತೆ ಭೇದಿಸಿ ಹೊಮ್ಮುವ ವಾಣಿ. ಒಳಮುಖವಾಗಿ ಚಲಿಸುತ್ತ, ಅಲ್ಲಿ ಆದ ದರ್ಶನವನ್ನು ಹೊರಗೆ ತುಳುಕಿಸುವಂಥದ್ದು. ಪರಾ, ಪಶ್ಯಂತಿ, ವಾಕ್, ವೈಖರಿ ವಾಣಿಗಳನ್ನು ಪಡಿಮೂಡಿಸುವಂಥದ್ದು. ಮಾತು ಮಂತ್ರವಾಗಲು, ಜೀವನ ಸ್ವತಂತ್ರವಾಗಲು ಹವಣಿಸಿದ ಬೇಂದ್ರೆ ಎಂಬ ಈ ವರಕವಿ ನಮ್ಮ ನಡುವೆಯೇ ಬೇಂದ್ರೆ ಮಾಸ್ತರ್ ಆಗಿ ಇದ್ದಿದ್ದು ನಿಜಕ್ಕೂ ಭುವನದ ಭಾಗ್ಯವೇ.

ಬೇಂದ್ರೆ ಧಾರವಾಡದ ಕಾಮನಕಟ್ಟೆಯ ಬೀದಿಗಳಲ್ಲಿ ಸಂಚರಿಸುತ್ತ, ಗೊಂದಲಿಗರ ಹಾಡಿಗೆ, ಮುಸ್ಲಿಮರ ಅಲಾಯಿ ಕುಣಿತಕ್ಕೆ, ಗುಗ್ಗುಳದ ಮೆರವಣಿಗೆಗೆ, ಪುರವಂತರ ವಚನಗಳ ಗತ್ತಿಗೆ ಮಾರುಹೋಗುತ್ತಿದ್ದರು. ಗೊಂದಲಿಗರ ಹಾಡಿನ ಭಕ್ತಿಯ ಉನ್ಮನಿ, ಭಜನೆ ಮೇಳದ ಗುಂಗು ತಮ್ಮ ಕಾವ್ಯದಲ್ಲಿ ಮೂಡಬೇಕೆಂದು ಅವರು ಬಯಸಿದರು. ಆತ್ಮವಾಣಿಯನ್ನು ಜನವಾಣಿಯಾಗಿಸುವ ಶಕ್ತಿ ಅವರಿಗೆ ದೊರೆತದ್ದೇ ಈ ದೇಸೀಯತೆಯ ಕಸುವಿನಲ್ಲಿ. ಬೇಂದ್ರೆಯವರು ಹುಟ್ಟಿನಿಂದ ವೈದಿಕ ಬ್ರಾಹ್ಮಣರಾದರೂ ಪ್ರಜ್ಞೆಯಿಂದ ಅವಧೂತರಂತೆ ಬೆಳೆಯಲು ಅವರು ಬದುಕಿದ ಅವೈದಿಕ ಪರಿಸರವೇ ಕಾರಣವಾಯ್ತು. ನೆಲದೊಂದಿಗಿನ ಈ ಕರುಳಬಳ್ಳಿಯ ಸಂಬಂಧ ಅವರ ಸಂವೇದನೆಯನ್ನು ಉದ್ದಕ್ಕೂ ಅರಳಿಸುತ್ತಹೋಯಿತು.

ನಿನ್ನ ಕಣ್ಣ ಕಡಗೋಲಿಂದ
ನನ್ನ ಹೃದಯ ಕಡೆಯೇ ತಾಯಿ

ಎನ್ನುವ ಬೇಂದ್ರೆಯ ಹೃದಯ ಸಮುದ್ರವನ್ನು ಅವರ ಐವರು ತಾಯಂದಿರು ಕಡೆದಿದ್ದಾರೆ. ‘ವಿಶ್ವಮಾತೆಯ ಗರ್ಭಕಲಮಜಾತ ಪರಾಗ ಪರಮಾಣು ಕೀರ್ತಿ ನಾನು’ ಎಂದು ಎದ್ದುನಿಲ್ಲುತ್ತಲೇ ‘ಕನ್ನಡದ ತಾಯಿ ತಾವರೆಯಪರಿಮಳವುಂಡು ಬೀರುತಿಹ ಗಾಳಿ ನಾನು’ ಎಂದು ಪರಂಪರೆಗೆ ಮಣಿಯುತ್ತಾರೆ. ವಿಶ್ವಮೈತ್ರಿಯನ್ನು ಧ್ಯಾನಿಸುವ ಕವಿ ತನ್ನೊಳಗೆ ವಿಶ್ವವನ್ನೂ, ವಿಶ್ವದ ಹೆಣಿಗೆಯೊಳಗೆ ತನ್ನನ್ನೂ ಕಾಣುತ್ತಾ ಆ ಅಭೇದದಲ್ಲಿ ಬೆರಗಾಗಿ ನಿಲ್ಲುತ್ತಾರೆ. ಹೀಗೆ ‘ಕಾಣುವ’ ಕಣ್ಣು ಅವರಿಗೆ ಹಲವು ಮೂಲಗಳಿಂದ ಒದಗಿದೆ. ವಿಶ್ವದ ಎಲ್ಲ ಅನುಭಾವಿ ಪಂಥಗಳನ್ನು ಅವರು ಮಾನಸಿಕವಾಗಿ ಒಡನಾಡಿದ್ದಾರೆ. ಐರ್ಲ್ಯಾಂಡಿನ ಅನುಭಾವಿ ಕವಿ ಏಈ ಹಾಗೂ ಅರಬ್ಬೀ ಕವಿ ಖಲೀಲ್ ಜಿಬ್ರಾನ್‍ ರ ಅನುಭಾವಿಕ ಉಕ್ತಿಗಳು ಬೇಂದ್ರೆಯವರಿಗೆ ಪ್ರೇರಣೆ ನೀಡಿವೆ. “ಏಈ ಕವಿ ನನ್ನ ಜೀವನದ ಲೋಲಕದಲ್ಲಿ ಕಿರಣದಂತೆ ಸೇರಿದ್ದಾನೆ. ಜಿಬ್ರಾನ್ ನನಗೆ ಎಣ್ಣೆ ಮಜ್ನ ಮಾಡಿಸಿ ಎರೆದು, ತೊಟ್ಟಿಲ ನಿದ್ರೆಯಲ್ಲಿಯೇ ಕನಸಿನ ಆಕಾಶಕ್ಕೆ ಎತ್ತಿ ಒಯ್ದಿದ್ದಾನೆ” (ಸಾಹಿತ್ಯದ ವಿರಾಟ್ ಸ್ವರೂಪ, ಪು.98) ಎನ್ನುತ್ತಾರೆ. ಇಂಥ ವಿಶ್ವರೂಪಕಗಳನ್ನು ಭರತೇಶ, ಶ್ರೀಕೃಷ್ಣ, ಅಲ್ಲಮರಲ್ಲಿಯೂ ಅವರು ಕಾಣುತ್ತಾರೆ. ಭರತಮುನಿ ಕಾಳಿದಾಸ, ಅಭಿನವಗುಪ್ತರಿಂದಲೂ ಅದನ್ನೇ ಕಲಿತೆನೆಂದು ಹೇಳುತ್ತಾರೆ.

ಬೇಂದ್ರೆಯವರಿಗೆ ಅರವಿಂದರು ಜ್ಞಾನ ದೀಕ್ಷೆಯನ್ನಿತ್ತರೆ, ರವೀಂದ್ರರು ರಸದೀಕ್ಷೆಯನ್ನಿತ್ತ ಗುರು. ಧರ್ಮ, ತತ್ವಜ್ಞಾನ, ರಾಜಕಾರಣಕ್ಕಿಂತ ಭಿನ್ನವಾದುದು ಕಾವ್ಯ. ರಸಸ್ಪರ್ಷದಿಂದ ಮನವನ್ನು ಉನ್ಮನಗೊಳಿಸುವ ಮಾಂತ್ರಿಕತೆಯನ್ನು ಅದು ಉಂಟುಮಾಡುತ್ತದೆ ಎಂಬ ತಿಳಿವು ರವೀಂದ್ರರನ್ನು ಓದುವಂತೆ ಪ್ರೇರೇಪಿಸಿತು. ಅರವಿಂದ ಹಾಗೂ ಶ್ರೀಮಾತೆಯವರು ಬೇಂದ್ರೆಯವರ ಪ್ರಜ್ಞೆಯಲ್ಲಿ ಸೇರಿಹೋಗಿದ್ದಾರೆ. ಅವರಿಗೆ ಮಾನಸಲೋಕದ ಸಾಕ್ಷಾತ್ಕಾರ ಮಾಡಿಸಿದ ಗುರು ಅರವಿಂದರು. ರವೀಂದ್ರರು ಸೌಂದರ್ಯದ ಸೋಪಾನಗಳನ್ನು ತೆರೆದು ತೋರಿಸಿದರೆ, ಅರವಿಂದರು ಸತ್ಯದ ಸಹಸ್ರಮುಖಗಳನ್ನು ದರ್ಶನಮಾಡಿಸಿದ್ದಾರೆ. ಕನ್ನಡದ ವಚನ ಪರಂಪರೆ ಹಾಗೂ ದಾಸ ಪರಂಪರೆಗಳನ್ನು ಒಡನಾಡಿದ ಬೇಂದ್ರೆಯವರು ಭಕ್ತಕವಿಗಳ ಭಾವಶಕ್ತಿ ದೊಡ್ಡದೆಂಬುದನ್ನು ಮನಗಂಡಿದ್ದಾರೆ. ಜನವಾಣಿಯಾದ ತತ್ವಪದಗಳ ದೇಸೀ ಅನುಭಾವದಕಸುವಿಗೆ ಶರಣೆಂದಿದ್ದಾರೆ.

ಕನ್ನಡದಲ್ಲಿ ಅಲ್ಲಮಪ್ರಭು ಬಿತ್ತಿದ ಅನುಭಾವದ ಬೀಜವು ಬೆಳೆದು ಹೆಮ್ಮರವಾಗಿ ಬೇಂದ್ರೆಯವರೆಗೂ ತನ್ನ ಕುಡಿ ಚಾಚಿದೆ. ಅಲ್ಲಮನ ಅರಿವಿನ ನಿಗೂಢತೆ ಹಾಗೂ ಬೆಡಗಿನ ಭಾಷೆ ಎರಡನ್ನೂ ಬೇಂದ್ರೆಯವರ ಕಾವ್ಯವು ಅಂತಸ್ಥವಾಗಿಸಿಕೊಂಡಿದೆ. ಕನ್ನಡದಲ್ಲಿ ಅನುಭಾವಿಗಳ ಸಮೃದ್ಧ ಪರಂಪರೆಯನ್ನು ಗುರುತಿಸುವ ಬೇಂದ್ರೆ ತಮ್ಮನ್ನೂ ಅದರ ಕೊಂಡಿಯಾಗಿ ಗುರುತಿಸಿಕೊಳ್ಳುತ್ತಾರೆ. ಇದನ್ನು ‘ಅನುಭಾವಿಗಳ ಜಾತಿ’ ಎಂದು ಗುರುತಿಸುವ ಬೇಂದ್ರೆ ಅಲ್ಲಮನ್ನು’ಪ್ರೀತಿಯ ಜಾತಿಗಾರ’ ಎಂದೇ ಸಂಬೋಧಿಸಿದ್ದಾರೆ.

ಮರಾಠಿ ಸಂತ ಪರಂಪರೆಯೊಂದಿಗೆ ತಮ್ಮ ಮೂಲವನ್ನು ನೆಟ್ಟ ಅವರು ಅವಧೂತ ಗುರುಪರಂಪರೆಯಿಂದ ಅನುಭಾವಬೋಧ ಪಡೆದಿದ್ದಾರೆ. ಇದೆಲ್ಲಕ್ಕೂ ಮಿಗಿಲಾಗಿ ಅಚ್ಚರಿ ಹುಟ್ಟಿಸುವುದು ಬೇಂದ್ರೆ ತಮ್ಮನ್ನು ‘ಹುಟ್ಟಾ ಹಣ್ಣು’ ಎಂದು ಕರೆದುಕೊಂಡಿರುವುದು. ಅನುಭಾವಿಕ ಸ್ಪಂದನೆಗಳನ್ನು ಸ್ವೀಕರಿಸಲು ಹದಗೊಂಡ ಪ್ರಜ್ಞೆ ಅವರಲ್ಲಿ ಬಾಲ್ಯದಿಂದಲೇ ಇತ್ತು. ಬಾಲ್ಯದ ಎಲ್ಲ ಹುಡುಗಾಟಗಳ ಮಧ್ಯೆಯೂ ಅದು ಛಕ್ಕನೇ ಮಿಂಚುತ್ತಿತ್ತು. ಇಂಥ ಅನುಭವಗಳ ಗಹನತೆ ಅವರ ಸಣ್ಣಸೋಮವಾರ, ತುಂಬಿತ್ತು ಹಾಲಗೇರಿ ಮುಂತಾದ ಪದ್ಯಗಳಲ್ಲಿ ಕಾಣಸಿಗುತ್ತದೆ. ಅವರ ಜೋಗಿ ಕವಿತೆಯಂತೂ ನಿಸರ್ಗದ ನಿಗೂಢತೆ ಹಾಗೂ ಚಿತ್ತದ ನಿಗೂಢತೆಗಳನ್ನು ಜಡೆಯಂತೆ ಹೆಣೆದ ಕವಿತೆ.

ಕಾವ್ಯವನ್ನು ಉತ್‍ಯೋಗವೆಂದು ಕರೆದ ಅವರ ಕಾವ್ಯದಲ್ಲಿ ಯೌಗಿಕ ಅನುಭವಗಳ ಸರಣಿಯೇ ಕಾಣಿಸುತ್ತದೆ. ವಿಶ್ವದ ಲಯದೊಂದಿಗೆ ಲಯಗೊಂಡ ಮನಸ್ಸಿನ ಸ್ಥಿತಿಯನ್ನು, ವಿಶ್ವಪ್ರಜ್ಞೆಯಲ್ಲಿ ಕರಗಿದ ಪ್ರಜ್ಞೆಯಬೆರಗನ್ನು ಅವರ ಕಾವ್ಯ ಕಟ್ಟಿಕೊಡುವ ಬಗೆಗೆ ಸಾಟಿಯೇ ಇಲ್ಲ.

ಹರಹರ ಮಹಾದೇವಾ
ಈಸಾಡತಾವ ಜೀವಾ
ಮಾನಸಸರೋವರ ಹೊಕ್ಕು (ಸಣ್ಣಸೋಮವಾರ)

ಇದು ಥಟ್ಟನೇ ಜೀವಮೂಲವನ್ನು ಮುಟ್ಟಿದ ಅನುಭವ. ಇದು ವಿಶ್ವಮೂಲವನ್ನು ಮುಟ್ಟಿದ ಅನುಭವವೂ ಹೌದು. ಇದೇ ಅನುಭಾವದ ಆತ್ಯಂತಿಕ ಕ್ಷಣ. ಮನುಷ್ಯನ ತರ್ಕದಾಚೆಗೆ ಸೃಷ್ಟಿಯ ಮಿಡಿತವಿರುತ್ತದೆ. ಅದನ್ನು ಹೊಂದಲು ತರ್ಕದ, ಅರ್ಥದ, ಸೀಮಿತ ವಲಯ ದಾಟಬೇಕಾಗುತ್ತದೆ. “ಅನುಭವವು ಜಗತ್ತಿನ ಕಾರಣಗಳನ್ನು ಹುಡುಕುತ್ತಿದೆ. ಅನುಭಾವವು ಜಗತ್ತಿನ ಕರ್ತೃವನ್ನೇ ಹುಡುಕುತ್ತಿದೆ. ಅನುಭವಕ್ಕೆ ತಿಳಿಯಾದ, ಹದವಾದ, ಸ್ಥಿರವಾದ ಎಚ್ಚರವೇ ಬೇಕು; ಅದಷ್ಟೇ ಸಾಕು. ಅನುಭಾವಕ್ಕೆ ಇದೇ ಜಾತಿಯ ಎಚ್ಚರವೇ ಬೇಕು. ಆದರೆ ಅದು ಕನಸಿನಾಚೆಯ ನಿದ್ದೆಯಲ್ಲ. ನಿದ್ದೆಯಾಚೆಗಿನೆಚ್ಚರ. ನಿದ್ದೆಯಾಚೆಗೊಂದು ಎಚ್ಚರದ ಹಿಮಾಲಯವಿದೆ. ಅದರ ಎತ್ತರದಿಂದ ಬಹಳ ವಿಸ್ತಾರವಾದ ದೃಶ್ಯವು ಗೋಚರವಾಗುವುದು. ಈ ಎತ್ತರದ ಮೇಲಿನ ಎಚ್ಚರಕ್ಕೆ ‘ಸಮಾಧಿ’ ಎಂದು ಹೇಳುವರು.

ಅನುಭವಕ್ಕೂ ಅನುಭಾವಕ್ಕೂ ಸಾದೃಶ್ಯವಿದೆ; ತಾದಾತ್ಮ್ಯವಿಲ್ಲ. ಅನುಭವವು ಅನುಭಾವಕ್ಕೆ ನಿಚ್ಚಣಿಕೆಯಾಗಬಲ್ಲದಲ್ಲದೇ ಅದೇ ನಿಲುಗಡೆಯಾಗಲಾರದು. (ಜಿ.ಎಸ್. ಆಮೂರ್. ಸಂ. ಬೇಂದ್ರೆಕಾವ್ಯ. ಪು.240) ಬೇಂದ್ರೆಕಾವ್ಯವು ಸದಾ ತನ್ನೊಳಗೆ ಹೊತ್ತಿರುವ ಚಡಪಡಿಕೆಯ ಹಿಂದೆ ಅವರ ನಿಗೂಢಾನುಭವಗಳ ಲೋಕವಿದೆ. ಆ ಎತ್ತರದ ಕಾಣ್ಕೆಯ ಹಸಿವಿದೆ. ಅದಕ್ಕಾಗೇ ಅವರು ಒಂದುಕಡೆ ಕಾವ್ಯವನ್ನು ‘ಶಾಬ್ದಿಕ ಸ್ವಪ್ನ ಸೃಷ್ಟಿ’ ಎನ್ನುತ್ತಾರೆ. ಈ ಅನುಭವಗಳ ದಾಹವೇ ಅವರ ಕವಿತೆಯನ್ನು ಐಂದ್ರಿಕಗೊಳಿಸಿದೆ.

ಗುಡಿಗೆ ನಾನು ಹೊರಟಾಗ ಕರೀತದ ಕುಹೂಕ್ಕುಹೂ ಎಂದು
ಮನದ ಜಪದ ನಡುವೆ ನಡೀತದ ಓಂ ಕುಹೂ ಎಂದು
ಕನಸಿನೊಳಗೆ ನಾ ಸ್ವರಾ ಕೇಳಿ ಮಾಮರಾ ಆಗತೇನೋ
ಅಂತ ಭ್ರಮಾ ಆಗ್ಯೇದ ಮನಕ ನೀ ಬಂದೆ ಜೋಗಿ ಏನೋ! (ಜೋಗಿ)

ಬಂದೇ ಜೋಗಿ ಬಾ, ಬಾರೋ ಜೋಗಿ ಬಾ ಏನುಹೊತ್ತು ಬಂದಿ
ನೀನೆ ಹೇಳಿದಾ ನಾಮ ಜಪಿಸುವಾಗ ಬಂತೋ ಸುಗ್ಗಿ ಸಂಧಿ
ತಲೆಯ ಯಾವುದೋ ನಾಡಿಯೊಳಗೆ ಸುರುವಾತು ಸುಗ್ಗಿ ಸೊಲ್ಲು
ಮುಂದೆ ಕೇಳಿದರೆ ಅದೇ ತುಂಬಿತೋ ಮೂಲೆಮೂಲೆಯಲ್ಲೂ (ಜೋಗಿ)

ವಿಶ್ವಮೈತ್ರಿಯನ್ನು ಧ್ಯಾನಿಸುವ ಕವಿ ತನ್ನೊಳಗೆ ವಿಶ್ವವನ್ನೂ, ವಿಶ್ವದ ಹೆಣಿಗೆಯೊಳಗೆ ತನ್ನನ್ನೂ ಕಾಣುತ್ತಾ ಆ ಅಭೇದದಲ್ಲಿ ಬೆರಗಾಗಿ ನಿಲ್ಲುತ್ತಾರೆ. ಹೀಗೆ ‘ಕಾಣುವ’ ಕಣ್ಣು ಅವರಿಗೆ ಹಲವು ಮೂಲಗಳಿಂದ ಒದಗಿದೆ. ವಿಶ್ವದ ಎಲ್ಲ ಅನುಭಾವಿ ಪಂಥಗಳನ್ನು ಅವರು ಮಾನಸಿಕವಾಗಿ ಒಡನಾಡಿದ್ದಾರೆ.

ಸಾಧಕನ ಜೀವದ ಚಡಪಡಿಕೆ, ಭಯ, ಶಂಕೆಗಳ ಕಾಳರಾತ್ರಿಯನ್ನು ಕಳೆದು ಬೆಳಕಿಗೆ ತೆರೆವ ಈ ಪಯಣ ನಿಸರ್ಗದ್ದೂ ಹೌದು. ದೇಹದ್ದೂ ಹೌದು. ದೇಹಸ್ಥನಾಡಿಗಳಲ್ಲಿ ಸುರುವಾಗುವ ಸುಗ್ಗಿಸೊಲ್ಲು ಯೌಗಿಕಾನುಭೂತಿಯ ಸೂಚಕ. ಅನುಭಾವದ ಉನ್ಮನಿಯನ್ನು ಬೇಂದ್ರೆಕಾವ್ಯ ತುಂಬಿಕೊಂಡ ರೀತಿ ಅದರೆಡೆಗಿನ ಸೆಳೆತಕ್ಕೆ ಮುಖ್ಯ ಕಾರಣ ಎನಿಸುತ್ತದೆ.

ಬೇಂದ್ರೆ ಕಾವ್ಯದ ಇನ್ನೊಂದು ಮುಖ ಅವರ ಬದುಕಿನಿಂದಲೇ ಪಾಕಗೊಂಡ ಅನುಭವದ್ದು. ಪಟ್ಟಪಾಡೆಲ್ಲವನೂ ಹುಟ್ಟು ಹಾಡಾಗಿಸುವ ಹದಗೊಂಡ ಭಾವದಲ್ಲಿ ಬೇಂದ್ರೆ ಬರೆಯುತ್ತಾರೆ. ಒಲವು, ಸ್ನೇಹ, ಪ್ರೇಮ, ಸಖ್ಯ, ವಾತ್ಸಲ್ಯ ಗಳಲ್ಲಿ ನಮ್ಮನ್ನು ತೋಯಿಸುತ್ತಾರೆ. ಭಾವಪರಿಪಾಕಕ್ಕೆ ಬದುಕೇ ಅಡುಗೆಮನೆ. ಬೆಂದು ಮಾಗುವ ಬದುಕು ಅನುಭವ ಶಾಲೆ. ಯಾತನೆಗಳ ಒಡಲಲ್ಲೂ ಮೂಡುವ ಜೀವಸ್ಪಂದನ ನಮ್ಮೆಲ್ಲರನ್ನೂ ಹಿಡಿದು ನಿಲ್ಲಿಸುತ್ತದೆ. ಮನಸ್ಸನ್ನು ಹಸಿಗೊಳಿಸುವ ಈ ಕಾವ್ಯ ನಮ್ಮದು ಎನಿಸುವುದೇ ಇಲ್ಲಿ. ಸಂಬಂಧಗಳಲ್ಲಿನ ಸಾಮರಸ್ಯಕ್ಕೆ ಹಂಬಲಿಸಿದ ಮನದ ಮಹಾಗಾಥೆಯೊಂದು ಈ ಕಾವ್ಯದಲ್ಲಿ ಬಿಚ್ಚಿಕೊಳ್ಳುತ್ತಹೋಗುತ್ತದೆ. ಅದು ಸಖೀಗೀತದಲ್ಲೂ, ಕುಣಿಯೋಣು ಬಾರಾ ಕವಿತೆಯಲ್ಲೂ, ನಾನು, ಅಂಬಿಕಾತನಯ ಕವಿತೆಗಳಲ್ಲೂ ಕಾಣಿಸುತ್ತದೆ.

‘ಗ್ರಹಗೋಲ ಸಿಂಫನಿ’ ಎಂಬ ರೂಪಕದಲ್ಲ್ಲಿ ವಿಶ್ವ ಸಾಮರಸ್ಯವು ಕಾಣಿಸಿದರೆ, ‘ಸಮರಸವೇ ಜೀವನ’ ಎಂಬ ಸೂತ್ರಸ್ವರದಲ್ಲಿ ಭಾವಸಾಮರಸ್ಯವು ತೋರುತ್ತದೆ. ನಾಕುತಂತಿ ಕವಿತೆಯಂತೂ ಸಮಗ್ರ ಸೃಷ್ಟಿಜಾಲದ ಸಾಮರಸ್ಯವನ್ನು ಹೇಳುತ್ತಾ ಜೀವ-ದೇವ ಸಾಮರಸ್ಯ, ಜೀವ-ಜೀವ ಸಾಮರಸ್ಯಗಳ ತಂತುವನ್ನು ಬೆಸೆಯುತ್ತದೆ. ಸಮಾಜದ ಒಡಕುಗಳನ್ನೂ, ಸಂಬಂಧದ ಬಿರುಕುಗಳನ್ನೂ ಮುಚ್ಚುವ ಅಖಂಡಾನುಭೂತಿಗಾಗಿ ತಪಿಸುತ್ತದೆ. ಸಮಾಜ, ಧರ್ಮ, ರಾಜಕಾರಣ ಇತ್ಯಾದಿಗಳ ಕುರಿತು ಬೇಂದ್ರೆ ವಾಚ್ಯವಾಗಿಯೂ ಬರೆದಿದ್ದಾರೆ. ಆದರೂ ಅವರ ಎಲ್ಲ ಕವಿತೆಗಳಲ್ಲಿ ನುಡಿಯುವ ಸಾಮರಸ್ಯದ ಏಕತಾರಿಯ ನಾದ ಕೇಳಲು ನಾವೂ ಶೃತಿಗೊಳ್ಳಬೇಕು. ಸೂಕ್ಷ್ಮಗೊಳ್ಳಬೇಕು. ಜಗತ್ತಿನ ಎಲ್ಲ ಶ್ರೇಷ್ಠ ಕಾವ್ಯಗಳ ಉದ್ದೇಶವೂ ಇದೇ ಅಲ್ಲವೇ?. ಅದಕ್ಕಾಗೇ ನಮಗೆ ಬೇಯುವುದು ಬೇಕು. ಬೇಂದ್ರೆ ಬೇಕು.

(ರಾಜಕುಮಾರ ಮಡಿವಾಳರ)

ಈಗ ವಿಷಯಕ್ಕೆ ಬರುತ್ತೇನೆ. ಹೀಗೆ ದಿಕ್ಕುತಪ್ಪಿ ಕಕ್ಕಾವಿಕ್ಕಿಯಾಗಿದ್ದು ಅದೆಷ್ಟು ಸಲವೋ!. ಬೇಂದ್ರೆ ಜಾಲವೇ ಅಂಥದ್ದು. ಈ ಕಾಲಾತೀತವಾಗಿ ಕಾಡುವ ಮನುಷ್ಯ ಇಪ್ಪತ್ತೊಂದನೇ ಶತಮಾನವನ್ನೂ ಪ್ರವೇಶಿಸಿಬಿಟ್ಟಿದ್ದಾನೆ. ಹೌದು ಬೇಂದ್ರೆಗೀಗ 125!. ಅವರಿನ್ನೂ ಇದ್ದಾರೆ. ಸತ್ತರೆಂದವರಾರು?. ‘ಸಾವಿರದ ಮನಿಯೊಳಗ ಬೆಳಕು ಹತ್ಯಾವʼ!. ಖರೇನೂ ಅದೇ ಬೆಳಕಿಲೇ ಬರೆಯಾಕಹತ್ತೀನಿ ನಾನೂ. ಇಂಥದೊಂದು ಪುಸ್ತಕ ಮಾಡಬೇಕೆಂಬುದು ‘ಬೇಂದ್ರೆ ಬದುಕು ಬರಹ’ ಎಂಬ ಬಳಗ ಕಟ್ಟಿಕೊಂಡ ಹುಡುಗರ ಹುರುಪು. ಬೇಂದ್ರೆಯ ಪದಪದಗಳನ್ನೂ ಮೋಹಿಸುವ ಆ ಹುಡುಗರ ಮಧ್ಯೆ ಈ ಬೇಂದ್ರೆ ಆರಾಧಕ ರಾಜಕುಮಾರ!. ಇವರೆಲ್ಲ ತಮ್ಮ ಕನಸನ್ನು ನನ್ನ ಕಣ್ಣಿಗೂ ಇಳಿಸಿಬಿಟ್ಟರು. ಇನ್ನೆಲ್ಲಿಯ ನಿದ್ದೆ?. ಮನದಜಪದ ನಡುವೆ ಕುಹೂ ಕೂಗುವ ಈ ಬೇಂದ್ರೆ ಎಂಬ ಕೋಗಿಲೆಯಿಂದ ಸದಾ ಎಚ್ಚರ. ಓಗೊಟ್ಟಾಯಿತು ಕಂಪಿನ ಕರೆಗೆ. ಮುಂದೆ ಇದಕ್ಕೊಂದು ಆಕಾರ ಕೊಟ್ಟೆವೋ ಅದೇ ಪಡೆಯಿತೋ ಎಂಬಷ್ಟು ವೇಗವಾಗಿ ಕೆಲಸ ನಡೆಯಿತು. ಈ ಕರೆಗೆ ನೀವೆಲ್ಲ ಓಗುಟ್ಟಿರಿ. ಕಂಡವರಿಗಷ್ಟೇ.. ಕಾಣುವ ಬೇಂದ್ರೆ ಕಣ್ಣ ಮುಂದೆ ಮೂಡತೊಡಗಿದರು. ನಾಡಿನ ಬಹುಮುಖ್ಯ ಬರಹಗಾರರು, ವಿದ್ವಾಂಸರಿಂದ ಹಿಡಿದು ಬಿ.ಎಸ್ಸಿ. ಓದುತ್ತಿರುವ ನನ್ನ ವಿದ್ಯಾರ್ಥಿನಿಯವರೆಗೆ ಎಲ್ಲರೂ ಪ್ರೀತಿಯಿಂದ ಬರೆದಿದ್ದಾರೆ. ಸಕಾಲದಲ್ಲಿ ತಲುಪಿಸಿದ್ದಾರೆ. ನಿಮ್ಮ ಒಲವಿಲ್ಲದೇ ಇದು ಸಾಧ್ಯವಾಗುತ್ತಿರಲಿಲ್ಲ.

ಒಲವೆಂಬ ಹೊತ್ತಿಗೆಯನೋದಬಯಸುತ ನೀನು
ಬೆಲೆಯೆಷ್ಟು ಎಂದು ಕೇಳುತಿಹೆ ಹುಚ್ಚ!
ಹಗಲಿರುಳು ದುಡಿದರೂ, ಹಲಜನುಮ ಕಳೆದರೂ
ನೀ ತೆತ್ತಲಾರೆ ಬರಿ ಅಂಚೆವೆಚ್ಚ (ಒಲವೆಂಬ ಹೊತ್ತಗೆ)

ಇದು ಬೇಂದ್ರೆ ಹೇಳಿದ್ದು. ನಿಮ್ಮ ಪ್ರೀತಿಗೆ ಬೆಲೆಕಟ್ಟಲಾಗದು. ಬೇಂದ್ರೆ ಎಂಬ ಸಮುದ್ರವನ್ನು ತಮ್ಮ ಬೊಗಸೆಗಳಲ್ಲಿ ಎಲ್ಲರೂ ಶಕ್ತ್ಯಾನುಸಾರ ಹಿಡಿದಿದ್ದಾರೆ. ಇಲ್ಲಿ ಯಾರೂ ಅಮುಖ್ಯರಲ್ಲ. ಬೇರೆ ಬೇರೆ ವಯೋಮಾನದ, ಭಿನ್ನ ಹಿನ್ನೆಲೆಯ ವ್ಯಕ್ತಿಗಳು ಬರೆಯಬೇಕೆಂಬುದೇ ನಮ್ಮ ಉದ್ದೇಶವೂ ಆಗಿತ್ತು. ಆದ್ದರಿಂದಲೇ ಇದೊಂದು ಮೇಳಸ್ವರ. ಬೇಂದ್ರೆ ಬಯಸಿದ್ದೂ ಇದನ್ನೇ. ನಾವು ಕನಸುವುದೂ ಇದನ್ನೇ. ಅನೇಕರು ಇದನ್ನು ಭಾವಲಹರಿಯಾಗಿಸಿದರೆ, ಅನೇಕರು ಶಿಸ್ತಿನ ಅಧ್ಯಯನದಿಂದ ಬರಹಗಳನ್ನು ಕಟ್ಟಿದ್ದಾರೆ. ಹೊಸ ಹೊಳಹುಗಳನ್ನು ಕಾಣಿಸಿದ್ದಾರೆ. ಇದನ್ನು ಗಮನದಲ್ಲಿರಿಸಿಕೊಂಡು, ಬೇಂದ್ರೆ; ಎದೆಯ ದನಿ, ಬೇಂದ್ರೆ; ಪರಂಪರೆಯ ಬನಿ ಎಂದು ಎರಡು ಬಾಗಗಳಲ್ಲಿ ಇದನ್ನು ಸಂಯೋಜಿಸಿದ್ದೇವೆ. ಹಾಗೆ ನೋಡಿದರೆ ಇವು ಒಂದರೊಳಗೊಂದು ಬೆರೆತಿವೆ. ಕಡಿಮೆ ಸಮಯದಲ್ಲಿ ಇದನ್ನೆಲ್ಲ ಯೋಚಿಸಿ ಕಾರ್ಯರೂಪಕ್ಕೆ ತಂದಿರುವುದರಿಂದ ಹಲವರ ಬರಹವನ್ನು ಒಳಗೊಳ್ಳಲಾಗದ ಬೇಸರವೂ ಇದೆ. ಬೇಂದ್ರೆ ಜನ್ಮದಿದಂದು ಪುಸ್ತಕ ಬಿಡುಗಡೆಗೊಳ್ಳಲೇಬೇಕೆಂಬ ಕನಸು ನನಸಾಗುತ್ತಿದೆ. ಮತ್ತೆ ಹಲವು ಕನಸುಗಳಿಗೆ ದಾರಿ ತೆರೆಯುತ್ತಿದೆ.

ಬೇಂದ್ರೆ ಭಾವವಲಯದಲ್ಲಿ ತೊಡಗುವುದು ನನ್ನ ಜೀವಕ್ಕೆ ಹತ್ತಿರವಾದ ಕೆಲಸ. ನನ್ನನ್ನು ಸಂಪಾದಕಳಾಗಲು ವಿನಂತಿಸಿ ಈ ಕೆಲಸಕ್ಕೆ ಹಚ್ಚಿದ ಬೇಂದ್ರೆ ಬದುಕು ಬರಹ ಬಳಗದ ವಿವೇಕ ಹಾಗೂ ಮೌನೇಶರಿಗೆ, ಬೇಂದ್ರೆ ಮರುಳನ್ನು ತಲೆಗೇರಿಸಿಕೊಂಡು ಹಗಲು, ರಾತ್ರಿ ಶ್ರಮಿಸಿದ ರಾಜಕುಮಾರ ಮಡಿವಾಳರ್‍ಗೆ, ವಿಶ್ವಾಸದಿಂದ ಬರೆದ ಎಲ್ಲ ಹಿರಿ ಕಿರಿಯ ಲೇಖಕರಿಗೆ ಶರಣು. ಇದನ್ನೆಲ್ಲ ಮಾಡಿಸಿದ ಬೇಂದ್ರೆ ಎಂಬ ಚೇತನವನ್ನು ನೆನೆಯುತ್ತಾ ವಿರಮಿಸುತ್ತೇನೆ.

ವಿರಹ ತಾಪವ ನೀಡು, ನಿದ್ದೆಯೀಯದೆ ಕಾಡು,
ಕನಸು ಮನಸುಗಳಲ್ಲಿ ನೀನೆಯಾಡು.

 

(ಕೃತಿ: ಕಂಡವರಿಗಷ್ಟೇ, ಸಂಪಾದಕರು: ಡಾ. ಗೀತಾ ವಸಂತ ಮತ್ತು ರಾಜಕುಮಾರ ಮಡಿವಾಳರ, ಪ್ರಕಾಶನ: ಬೇಂದ್ರೆ ಬದುಕು ಬರಹ, ಪುಟಗಳು: 400 ಬೆಲೆ: 275/-)