‘ಮುದುವೇರಿ’ ಅಥವಾ ಮುದೂರಿ ಎಂದೊಡನೆ ಪದೇ ಪದೇ ಪ್ರಸ್ತಾಪವಾಗುವ ಮಳೆ-ಬಿಸಿಲುಗಳೇ ಬಹಳ ನೆನಪಾಗುತ್ತದೆ. ಮೇ ತಿಂಗಳ ಕೊನೆ ಅಂದರೆ ಬ್ಯಾಸಿ ತಿಂಗಳಲ್ಲಿ ಶುರುವಾಗುವ ಚಟ್ ಚಟಾರ್ ಸಿಡಿಲು ಗುಡುಗು ಸಹಿತ ಜಡಿಮಳೆ ಆರಂಭ ಮಾತ್ರ. ಮುಂದೆ ‘ತಕ್ಕೋ ಬಿಡ್ಬೇಡ’ ಎನ್ನುವಂತೆ ಕಾರ್ ತಿಂಗಳಲ್ಲಿ ಕಿವಿ ಸೋಲುವಂಥಾ ಮಳೆ. ಬೆಳಗಿನ ಜಾವದಿಂದ ರಾತ್ರಿಯವರೆಗೆ ಮತ್ತೆ ಇರುಳುಕಪ್ಪಿನಿಂದ ಮರು ಬೆಳಗಿನವರೆಗೆ ಹನಿ ಕಡಿಯದೆ ಜೈಲುಗುಟ್ಟಿ ಸುರಿವ ಮಳೆ.
ಮುದೂರಿ ಎಂಬ ಊರಿನ ಕಷ್ಟಸುಖವನ್ನು ಹೇಳಿಕೊಂಡಿದ್ದಾರೆ ವಿಜಯಶ್ರೀ ಹಾಲಾಡಿ.

 

‘ಕುಸುಮದ ಸೊಪ್ಪು’ ಗಿಡದ ಸೊಗಡು ಮೂಗಿಗೆ ಬಡಿದೊಡನೆ ಹಲಸಿನ ಬೀಜಕ್ಕೆ ಮಣ್ಣುಹೂಡಿ ಮಿಶ್ರ ಮಾಡಿಡುತ್ತಿದ್ದ ಅದರ ಒಣಗಿದೆಲೆಗಳು ಹಳೆಯುಪ್ಪರಿಗೆಯ ಮಣ್ಣ ಬಾಣಿಯಿಂದ ಇಣುಕಿದಂತೆ, ಕೊಳಕ್ಕೆ ಕಲ್ಲು ಹಾಕಿದ ಹಾಗೆ ‘ಗುಕ್ಕ್ ಗುಕ್ಕ್’ ಇರುಳ ಹಕ್ಕಿಯ ನಾದ ಕೇಳಿದಾಗೆಲ್ಲ ಕತ್ತಲು ಹೊದ್ದುಕೊಂಡ ಬೋಗಿ, ಧೂಪದ ಮರದ ಹಾಡಿಗಳು ಜೀವ ತಳೆದಂತೆ, ನರಿಗಳ ‘ಕೂ ಕೂ’ ಸಂಗೀತದಲ್ಲಿ ಬಾಲ್ಯದ ಸಿಹಿ ಕಬ್ಬಿನ ಗದ್ದೆಗಳ-ಆಲೆಮನೆಯ ಲಯ ಒಳಗಿಳಿದಂತೆ… ಊರು ನನ್ನೊಳಗೆ ಜೀವ ತಾಳಿ ನಿಂತಿದೆ. ಬಿಟ್ಟು ಬಂದು ಇಪ್ಪತ್ತೆರಡು ವರ್ಷಗಳ ನಂತರವೂ ನನ್ನೂರು ಇದೀಗ ಮುಟ್ಟಿ ಬಂದಂತೆ ಹಸಿ ಹಸಿ. ಅಲ್ಲಿನ ಕಾಡಿನ ಒಂದೊಂದು ಮರ, ಗಿಡ, ಪೊದೆ, ಬಳ್ಳಿ, ತರಗೆಲೆ, ಹೂಗಳು ಜೀವಕೋಶದೊಳಗೆ ಸೇರಿಹೋಗಿವೆ. ಸುಖವಾದಾಗ, ನೋವಾದಾಗ, ಬಿಕ್ಕಳಿಸಲೂ ಆಸ್ಪದ ಇಲ್ಲದಾದಾಗೆಲ್ಲ ರೂಪ ರಸ ಗಂಧದೊಡನೆ ಆ ಕಾಡು, ಬಯಲು ನನ್ನೊಳಗೆ ಆಕಾರ ಪಡೆದುಕೊಳ್ಳುತ್ತ, ಬೆಳೆಯುತ್ತ ಸಾಗುತ್ತದೆ.

ನಮ್ಮೂರು ‘ಮುದೂರಿ’ ಕಾಡು, ಗುಡ್ಡಗಳಿಂದ ಆವೃತವಾದ ಊರು. ನಡುವಲ್ಲಿ ಉದ್ದಾನುದ್ದ ಗದ್ದೆಗಳು, ಬದಿಯಲ್ಲಿ ಅಡಕೆ-ತೆಂಗಿನ ತೋಟಗಳು; ಹಲಸು, ಮಾವಿನ ಮರಗಳು. ನಮ್ಮನೆ ಮೆಟ್ಟಿಲು ಕಲ್ಲೆಂದರೆ ಹಸಿರು ತುಂಬಿದ ಗದ್ದೆಗಳು! ಹಸಿರು ಬಲಿತು ಹಣ್ಣಾಗಿ, ಹಳದಿಯಾಗಿ ಬತ್ತದ ಸಸಿಗಳು ತೊನೆದಾಡುವಾಗ ನೋಡುವ ಕಣ್ಣು, ತಿನ್ನುವ ಬಾಯಿಗೆ ಸುಗ್ಗಿ. ಶ್ರಮಜೀವಿಗಳಿಗೋ ವರ್ಷಪೂರ್ತಿ ಮೈಮುರಿಯುವಷ್ಟು ಕೆಲಸ; ಕೆಲಸವೇ ಅವರ ಬದುಕು ಹಾಡು- ಪಾಡು ಎಂಬಷ್ಟು ಅವಿನಾಭಾವ.

ಮುದೂರಿ, ಗ್ರಾಮಕೇಂದ್ರವಾದ ಹಾಲಾಡಿಯಿಂದ ಎರಡೂವರೆ ಮೈಲಿ ದೂರದಲ್ಲಿರುವ ಇಪ್ಪತ್ತೈದು, ಮೂವತ್ತು ಮನೆಗಳುಳ್ಳ ಸಣ್ಣ ಊರು. ಎಪ್ಪತ್ತು, ಎಂಬತ್ತರ ದಶಕದಲ್ಲಿ ರಸ್ತೆಯೇ ಇರಲಿಲ್ಲ! ಈಗ ರಸ್ತೆಯೊಂದು ಇದೆಯೆಂಬುದನ್ನು ಬಿಟ್ಟರೆ ಬಸ್ಸಿನ ಸೌಕರ್ಯವಿಲ್ಲ. ದುಡ್ಡು ಕೊಟ್ಟು ರಿಕ್ಷಾದಲ್ಲಿ ಪ್ರಯಾಣಿಸಬಹುದು ಎಂಬುದೊಂದು ಈಗಿನ ಅನುಕೂಲ. ಆ ಕಾಲದಲ್ಲಿ ನಡೆಯಲೂ ಆಗದಷ್ಟು ಸೀರಿಯಸ್ ಆದವರನ್ನು ಕಂಬಳಿ ಕಟ್ಟಿ ನಾಲ್ಕು ಜನ ಹೊತ್ತೇ ಹಾಲಾಡಿಯ ಬಸ್ಸಿನವರೆಗೆ ಸಾಗಿಸಬೇಕಿತ್ತು! ಹಾಲಾಡಿ ನಾಲ್ಕು ಮಾರ್ಗಗಳು ಕೂಡುವ ಜಾಗ. ಇದರಲ್ಲೊಂದು ರಸ್ತೆ ಇಪ್ಪತ್ತೈದು ಕಿಲೋಮೀಟರ್ ದೂರದ ತಾಲ್ಲೂಕು ಕೇಂದ್ರ ಕುಂದಾಪುರ ಮತ್ತು ಸ್ವಲ್ಪ ಆಚೆಯ ಉಡುಪಿ, ಅಲ್ಲಿನ ಸಮುದ್ರ ತೀರಕ್ಕೆ ಕರೆದೊಯ್ದರೆ ಮತ್ತೊಂದು ಸಿದ್ಧಾಪುರ-ಹೊಸಂಗಡಿ ಮಾರ್ಗವಾಗಿ ಬಾಳೆಬರೆ ಘಾಟಿ ಹತ್ತಿಸುತ್ತದೆ. ಇನ್ನೊಂದು ಹೆಬ್ರಿಯ ಮೂಲಕ ಆಗುಂಬೆ ಘಟ್ಟದ ಬುಡಕ್ಕೆ ಒಯ್ದರೆ, ಮಗದೊಂದು ರಸ್ತೆ ಅಮಾಸೆಬೈಲಿನ ಆಚೆಯ ದಟ್ಟ ಕಾಡಿನ ಪ್ರವೇಶವನ್ನು ತಲುಪುತ್ತದೆ!

ಇಂತಹ ಭೌಗೋಳಿಕತೆ ಹೊಂದಿರುವ, ಆಡುಭಾಷೆಯಲ್ಲಿ ‘ಮುದುವೇರಿ’ ಎಂದು ಕರೆಸಿಕೊಳ್ಳುವ ನಮ್ಮೂರು ಅತ್ತ ಕರಾವಳಿಯೂ ಅಲ್ಲದ, ಇತ್ತ ಮಲೆನಾಡೂ ಅಲ್ಲದ ಜಾಗ. ಜನರಾಡುವ ಭಾಷೆ ‘ಹೋಯ್ಕ್ ಬರ್ಕ್’ ಅಂದರೆ, ಕುಂದಾಪುರ ಕನ್ನಡ. ಬಯಲು ಸೀಮೆಯ ಹೊಂಗೆಯ ನೆರಳಿನಿಂದ ಘಟ್ಟವಿಳಿದು ಏಕಾಏಕಿ ನಮ್ಮೂರಿಗೆ ಪ್ರವೇಶಿಸಿದರೆ ಕ್ಷಣ ತಬ್ಬಿಬ್ಬಾಗುವುದು ಖಚಿತ. ಹ್ವಾಪ, ಬಪ್ಪ, ಅಂಬ್ರ್, ಬರ್ಕ್, ಕೂಕಣಿ, ಬೆಚ್ಚಿನಿ, ಆಗಾಳ್, ಈಗಾಳ್ ಎಂಬಂತಹ ಶಬ್ದ ಗುಚ್ಛವನ್ನು ಕೇಳಿ ಕರ್ನಾಟಕ ದಾಟಿ ಹೊರಗೆ ಬಂದುಬಿಟ್ಟೆವೇನೋ ಎಂಬ ಅನುಭೂತಿ ಉಂಟಾಗುವುದು ಸಹಜ. ಆದರೆ ಕಿವಿ ಹೊಂದಿಸಿಕೊಂಡರೆ ತಾನಾಗೇ ಒಂದೊಂದೇ ಪದದ ಅರ್ಥ ಬಿಚ್ಚಿಕೊಳ್ಳುತ್ತದೆ; ಅಭ್ಯಾಸವೂ ಆಗಿಬಿಡುತ್ತದೆ. ಮುದೂರಿಯ ಸುತ್ತಮುತ್ತ ಚೇರ್ಕಿ, ಚೋರಾಡಿ, ಗ್ವಾರಾಜಿ, ಉಪಾಯ್ದ್ರಬೆಟ್ಟು, ಕಲ್ಲಟ್ಟೆ, ಕೊಯ್ಕಾಡಿ, ಬಾಗಿಮನಿ, ಹಂದ್‍ಕೋಡ್ಲ್ ಮುಂತಾದ ಸಣ್ಣ ಊರುಗಳಿವೆ. ಮುಡಾರಿ, ಹಂಚಿನ್‍ಮನಿ, ಕಂಬ್ಳ್‍ಗ್ಯದ್ದಿ, ಗಾಣ್ದಡಿ, ಕಂಪ್ದ್‍ಮನಿ, ಕಟ್ಟಿನ್‍ಗುಂಡಿ ಹೀಗೆ ಹಲವು ಮನೆಗಳ ಜಾಗಕ್ಕೆ ಪ್ರತ್ಯೇಕ ಹೆಸರುಗಳೂ ಇವೆ! ಜನರ ಬದುಕು ಕೃಷಿಯೊಂದಿಗೆ ಮಿಳಿತವಾಗಿದೆ. ಸ್ವಂತ ಅಥವಾ ಯಾವುದೋ ಕಾಲದಿಂದಲೂ ಗೇಣಿಗೆ ಮಾಡುತ್ತಿರುವ ಗದ್ದೆಗಳು ಹೆಚ್ಚಿನ ಮನೆಗಳಿಗೆ ಇವೆ. ‘ಗೇಣಿ ಹಾಕೂದ್ ಗೋಣಿ ಕೊಡ್ಕುದ್’ ಎಂದು ಅಂತವರು ಗೊಣಗಿಕೊಳ್ಳುತ್ತಾ, ಹೊಸ ಹುರುಪಿನಿಂದ ಉತ್ತಿ ಬಿತ್ತಿ ಬೆಳೆಯುವುದು ಸಾಮಾನ್ಯವಾಗಿದೆ. ಸರ್ಕಾರಕ್ಕೆ ಸೇರಿದ ಹಾಡಿ, ಹಕ್ಕಲಿನಲ್ಲಿ, ಗುಡ್ಡದ ತುದಿಯಲ್ಲಿ ಬೇಲಿ ಹಾಕಿಕೊಂಡು ಸಣ್ಣ ಕೊಗ್ಳು ಕಟ್ಟಿ ದರ್ಖಾಸ್ ಮನೆಯಲ್ಲಿ ವಾಸಿಸುತ್ತ ಕೂಲಿ ಮಾಡುವವರೂ ಇದ್ದಾರೆ. ಮೇಲ್ಜಾತಿ, ವರ್ಗದವರು ಇದ್ದುದರಲ್ಲೇ ಅನುಕೂಲವಾಗಿದ್ದರೆ ಅಂತಹ ಸೌಲಭ್ಯ ಇಲ್ಲದ ಮಂದಿ ಬಿಸಿಲು ಬೆಂಕಿಯಲ್ಲಿ ಬೇಯುತ್ತಾ ಬೆವರಿನ ಕೂಳು ತಿನ್ನುತ್ತಿದ್ದಾರೆ.

ಮುದೂರಿ ಎಂಬ ಮುದೂರಿಗೆ ಕಳೆಬಂದಿರುವುದೇ ಇಲ್ಲಿ ವಾಸವಿರುವ ಕುಡುಬಿ ಜನಾಂಗದವರಿಂದಾಗಿ. ಕೌಶಲ ಬೇಡುವ ಕೆಲಸಗಳಿರಲಿ, ಮೈಬಗ್ಗಿಸುವ ಕಷ್ಟದ ದುಡಿಮೆಯಿರಲಿ ಯಾವುದಕ್ಕೂ ಅಂಜದ ಮಂದಿ ಇವರು. ಜಡಿಮಳೆ ಬಿರುಬಿಸಿಲು ಎಂದೆಲ್ಲ ನೋಡದೆ; ತನ್ನ ಕೆಲಸ-ಅವರಿವರ ಕೆಲಸವೆಂಬ ಭೇದವೆಣಿಸದೆ ನಿರ್ವಂಚನೆಯಿಂದ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಾರೆ. ‘ಗೋವೆ ಕುಡುಬಿಯವರು’ ಎಂದು ಹೆಸರಾದ ಇವರ ಆಚರಣೆಗಳು, ಜೀವನ ವಿಧಾನ ಇಲ್ಲಿಯ ನೆಲಕ್ಕೆ ಪೂರಾ ಭಿನ್ನವಾಗಿದ್ದರೂ ಇದ್ದುದರಲ್ಲೇ ಹೊಂದಿಕೊಂಡು, ಬಾಳಿ ಬಂದವರು. ತೆಂಗು, ಅಡಿಕೆಗಳ ಉದ್ದಾನುದ್ದ ಶರೀರವೇರಿ ಗೊನೆ ಇಳಿಸುವುದು, ಔಷಧ ಹೊಡೆಯುವುದು, ಹುಲ್ಲಿನಲ್ಲಿ ಮಡೆಬಳ್ಳಿಯ ಪಿಂಡಿಗಳನ್ನು ಹೆಣೆದು ಅಕ್ಕಿ ಮುಡಿ ಕಟ್ಟುವುದು, ಬತ್ತ ಸಂಗ್ರಹಿಸುವ ತಿರಿ ನಿರ್ಮಿಸುವುದು, ಕಾಡಿನಲ್ಲಿ ತಿರುಗಿ ಎಂತೆಂತದೋ ಬೀಳುಗಳನ್ನು ಒಟ್ಟುಮಾಡಿಕೊಂಡು ಕಣ್ಹೆಡಗೆ, ಹೆಡಗೆ, ಬುಟ್ಟಿಗಳನ್ನು ಹೆಣೆಯುವುದು, ಈಚಲು ಹರದಿಂದ ಗರಿಗಳನ್ನು ಹೊತ್ತು ತಂದು ಹದಹಾಕಿ ಚಾಪೆ ನೇಯುವುದು, ನೊಗ, ನೇಗಿಲು, ಹಾರೆ, ಪಿಕಾಸೆಗಳ ಬಹುಭಾಗವನ್ನು ತಯಾರಿಸುವುದು, ತರಕಾರಿ ಗಿಡಗಳನ್ನು ಬೆಳೆಸುವುದು, ನಾಟಿವೈದ್ಯ… ಹೀಗೆ ಇವರ ಕುಶಲಕಲೆಗಳು ಒಂದೆರಡಲ್ಲ. ಇಂತಹ ಜಾಣ್ಮೆಯ ಕೆಲಸಗಳ ಉಪಯೋಗವನ್ನು ಮುದೂರಿ, ಅಕ್ಕಪಕ್ಕದ ಊರುಗಳ ಜನರು ಧಾರಾಳವಾಗಿ ಬಳಸಿಕೊಂಡಿದ್ದಾರೆ.

ಸೇಸಿಬಾಯಿ, ರುಕ್ಮಿಣಿಬಾಯಿ, ಅಕ್ಕುಬಾಯಿ, ಅಕ್ಕಣಿಬಾಯಿ, ಬೆಳ್ಳಿಬಾಯಿ, ಪೈಕನಾಯ್ಕ, ಸುಬ್ಬನಾಯ್ಕ, ಗಿಡ್ಡನಾಯ್ಕ, ಹೆರಿಯ ನಾಯ್ಕ, ಬುತ್ಯನಾಯ್ಕ, ಬಾಗ್ಡುನಾಯ್ಕ… ಪ್ರತಿಯೊಬ್ಬರ ವ್ಯಕ್ತಿತ್ವವೂ ಬದುಕಿನ ವಿವಿಧ ರೂಪಕಗಳಲ್ಲದೆ ಬೇರೆಯಲ್ಲ. ಬೇಸಾಯದ ಕೆಲಸಗಳಂತೂ… ಗದ್ದೆಗೆ ಬೀಜ ಬಿತ್ತನೆ, ಹಿಂಡಿ ಹಾಕುವುದು, ನಟ್ಟಿ ನೆಡುವುದರಿಂದ ಹಿಡಿದು ಕಳೆ ಕೀಳುವುದು, ಕೊಯ್ಲು, ಕೆಯ್ ಹೊರೆಯನ್ನು ಹೊತ್ತು ತಂದು ಅಂಗಳದ ಹಡಿಮಂಚದಲ್ಲಿ ಜಪ್ಪುವುದು, ಹುಲ್ಲುಕುತ್ರೆ ಮಾಡುವುದು, ಬತ್ತ ಗಾಳಿಗೆ ಹಿಡಿಯುವುದು, ಹಟ್ಟಿಯ ಅಟ್ಟದಲ್ಲಿ ಹುಲ್ಲಿನ ಸೂಡಿಗಳನ್ನು ಕೂಡಿಡುವುದು, ಎಲ್ಲದರಲ್ಲೂ ಕುಡುಬಿಯರು ನಿಪುಣಾತಿ ನಿಪುಣರು. ಮಳೆ, ಬಿಸಿಲು, ಧೂಳಿನಲ್ಲಿ ಸಾಕ್ಷಾತ್ ಮಳೆಯೇ, ಬಿಸಿಲೇ, ಧೂಳೇ ಆಗಿ ಬೆರೆತು ದುಡಿಯುವ ಕಲೆ ಅವರಿಗೆ ಮಾತ್ರ ಕರಗತ.

ರುಕ್ಮಿಣಿಬಾಯಿ ಅಂಗಳಕ್ಕೆ ಸೆಗಣಿ ಒಡಿದರೆ ಅದರ ಚಂದವೇ ಬೇರೆ; ಹುಲ್ಲು ಜಪ್ಪುತ್ತಾ ಬುಡದಲ್ಲಿ ಉಳಿದ ತಳುಹುಲ್ಲನ್ನು ಕಾಲಿನಿಂದ ಜಾರಿಸಿ ಸೂಡಿಕಟ್ಟಿ ರಾಶಿಗೆ ಎಸೆಯುವ ಜಾಪೇ ಬೇರೆ! ಭರ್ತಿ ಹದಿನೈದು ದಿನಗಳ ಹಬ್ಬವಾದ ‘ಹೋಳಿ’ಯಂತೂ ಮುದೂರಿಯನ್ನು ಸಂಭ್ರಮದಲ್ಲಿ, ಬಣ್ಣದಲ್ಲಿ ಅದ್ದಿಡುವ ಇವರ ಪ್ರಮುಖ ಹಬ್ಬ. ಹಳೆಕಾಲದಲ್ಲಿ ಮನರಂಜನೆಗಳೇ ಇಲ್ಲವಾದ ಹೊತ್ತಿನಲ್ಲಿ ಹೋಳಿ ಕುಣಿತ, ಕೋಲಾಟಗಳು ಜನರಿಗೆ ವರ್ಷದ ಉಲ್ಲಾಸವಾಗಿತ್ತು. ತಮ್ಮೊಳಗೇ ಮೂರು-ನಾಲ್ಕು ಮೇಳಗಳನ್ನು ಮಾಡಿಕೊಂಡು, ಬಣ್ಣದ ಉಡುಪು, ಹಕ್ಕಿ ಗರಿ ಧರಿಸಿ ಗುಮ್ಟೆ ಹೆಗಲಿಗೇರಿಸಿ ಮನೆಮನೆಗೆ ಹೊರಡುತ್ತಾರೆ. ಪ್ರತಿಮನೆಯಲ್ಲೂ ಕುಣಿದು ಅವರು ಕೊಟ್ಟ ಸಂಭಾವನೆ ಪಡೆದು ಮುಂದಿನ ಮನೆಗೆ ಪ್ರಯಾಣಿಸುವುದು. ಇದು ಅವರ ಧಾರ್ಮಿಕ ಕ್ರಿಯೆಯ ಒಂದು ಪ್ರಮುಖ ಅಂಗವೂ ಹೌದು.

‘ಮುದುವೇರಿ’ ಎಂದೊಡನೆ ಪದೇ ಪದೇ ಪ್ರಸ್ತಾಪವಾಗುವ ಮಳೆ-ಬಿಸಿಲುಗಳನ್ನು ವಿವರಿಸದಿದ್ದರೆ ಹದ ತಪ್ಪಿದ ಹಾಗೇ. ಮೇ ತಿಂಗಳ ಕೊನೆ ಅಂದರೆ ಬ್ಯಾಸಿ ತಿಂಗಳಲ್ಲಿ ಶುರುವಾಗುವ ಚಟ್ ಚಟಾರ್ ಸಿಡಿಲು ಗುಡುಗು ಸಹಿತ ಜಡಿಮಳೆ ಆರಂಭ ಮಾತ್ರ. ಮುಂದೆ ‘ತಕ್ಕೋ ಬಿಡ್ಬೇಡ’ ಎನ್ನುವಂತೆ ಕಾರ್ ತಿಂಗಳಲ್ಲಿ ಕಿವಿ ಸೋಲುವಂಥಾ ಮಳೆ. ಬೆಳಗಿನ ಜಾವದಿಂದ ರಾತ್ರಿಯವರೆಗೆ ಮತ್ತೆ ಇರುಳುಕಪ್ಪಿನಿಂದ ಮರು ಬೆಳಗಿನವರೆಗೆ ಹನಿ ಕಡಿಯದೆ ಜೈಲುಗುಟ್ಟಿ ಸುರಿವ ಮಳೆ. ವೈಶಾಖದ ಸುಡುಬಿಸಿಲಿಗೆ ಕಾದು ಬಾಯಾರಿದ ಭೂಮಿಗೋ ಕಾತುರ, ಸಂಭ್ರಮ. ಗಿಡಮರಗಳಿಗೆ ನಳನಳಿಸುವ ಉದ್ವೇಗ. ಇಂಥಾ ಕಾರ್ ತಿಂಗಳ ಮಳೆ ಶುರುವಾಗುವ ಮೊದಲೇ ಜಾಗ್ರತೆ ಮಾಡಿ ಸೌದಿ, ಮಡ್ಲ್, ಚಪ್ಪ್, ಕಾಯ್ಕತ್ತ ಎಲ್ಲ ಸೌದೆ ಕೊಟ್ಟಿಗೆಯಲ್ಲಿ ತುಂಬಿಟ್ಟರೂ ತಂಗ್ಸ್ ಹಿಡಿದು ಹೊಗೆ ಎಬ್ಬಿಸುತ್ತವೆ. ಕಷ್ಟಪಟ್ಟು ಕೊಳವೆ ಊದಿ ಊದಿ ಒಲೆ ಹೊತ್ತಿಸಿದರೆ ಮನೆಯೆಲ್ಲ ಬೆಚ್ಚಬೆಚ್ಚಗೆ. ಹೊರಗೆ ಸುರಿವ ಥಂಡಿ ಮಳೆಗೆ ಒಲೆ ಬೆಂಕಿಯ ಶಾಖವೇ ಅಗ್ಗಿಷ್ಟಿಕೆ. ‘ಸೌದಿ ಹಿಡೀತಿಲ್ಲೆ, ಬಟ್ಟಿ ಒಣ್ಗುದಿಲ್ಲೆ… ಇದೆಂತಾ ಮಳಿಗಾಲ್ವಪಾ’ ಎಂಬ ಗೊಣಗುವಿಕೆಯಲ್ಲೂ ಹಣಕಿ ಹಾಕುವ ಸಡಗರ.

ಹ್ವಾಪ, ಬಪ್ಪ, ಅಂಬ್ರ್, ಬರ್ಕ್, ಕೂಕಣಿ, ಬೆಚ್ಚಿನಿ, ಆಗಾಳ್, ಈಗಾಳ್ ಎಂಬಂತಹ ಶಬ್ದ ಗುಚ್ಛವನ್ನು ಕೇಳಿ ಕರ್ನಾಟಕ ದಾಟಿ ಹೊರಗೆ ಬಂದುಬಿಟ್ಟೆವೇನೋ ಎಂಬ ಅನುಭೂತಿ ಉಂಟಾಗುವುದು ಸಹಜ.

“ಹಂಚೆಲ್ಲ ಒಡ್ತ್ ಹೋಯಿತ್, ಮಾಡ್ ಹತ್ತಿನಿ ಮರ್ರೇ ಅಂದ್ರೆ ನಮ್ಮನಿ ಗಂಡ್ಸ್ ಕೇಂಡ್ತಾ; ಈಗ ಕಾಣಿ, ಮನಿ ಪೂರಾ ಸೋರ್ಕಟಿ” ಎಂದು ಮಳೆಯ ನೆವದಲ್ಲಿ ಗಂಡನನ್ನು ಹುಸಿದೂರುವ ಹೆಂಗಸರಿಗೂ ಮಳೆಯ ಮೇಲೆ ಸಿಟ್ಟಿದ್ದಂತೆ ಕಾಣುವುದಿಲ್ಲ. ಈ ನಡುವೆ ಜಡಿಮಳೆಯಲ್ಲೇ ಕಾತಿ ಬೇಸಾಯದ ಕೆಲಸ. ಹೆಣ್ಣಾಳುಗಳು ತಲೆಗೆ ಗೊರಬು ಸೂಡಿಕೊಂಡರೆ, ಗಂಡಸರು ಕಂಬಳಿಕುಪ್ಪೆ ಹಾಕಿಕೊಳ್ಳುತ್ತಾರೆ. ಆದರೆ ಇವುಗಳು ನೆಪಕ್ಕೆ ಮಾತ್ರ; ಗಾಳಿಮಳೆಯ ಎರಚಲಿಗೆ ಮೈಯ್ಯೆಲ್ಲಾ ಚಂಡಿ. ಆದರೂ ಕೆಸರು ಗದ್ದೆಯಲ್ಲಿ ಬೆನ್ನು ಬಗ್ಗಿ ನಟ್ಟಿ ನಡುವುದು, ಹೂಡುವುದು, ಕಳೆ ತೆಗೆಯುವುದು ಅನಿವಾರ್ಯ. ಇನ್ನು ಆಸಾಡಿ ಬಂದರೆ ಕತೆಯೇ ಮುಗಿದ ಹಾಗೆ. ‘ಆಸಾಡಿ ಒಡ್ರ್’ ಎಂದು ಹಿಂದಿನವರು ಸುಮ್ಮನೇ ವರ್ಣಿಸಿದ್ದಲ್ಲ. ಎಂಥಾ ಗಾಳಿ, ಮಳೆ, ಚಳಿ! ಡಬ್ಬದೊಳಗಿರುವ ಮೆಣಸು, ಕುತ್ತುಂಬ್ರಿ, ಜೀರಿಗೆಗೂ ಬುಗುಟು. ಹಪ್ಪಳದ ಕಟ್ಟಂತೂ ಕೇಳುವುದೇ ಬೇಡ; ದನದ ಬಾಯಾರಿಗೆ ಹಾಕುವುದೇ! ಇಷ್ಟೆಲ್ಲ ಆದರೂ ಮುದೂರಿಯವರೇನು, ಇಡೀ ದಕ್ಷಿಣ ಕನ್ನಡದ ಜನ ಸ್ವೆಟರಿನ ಮುಖ ಕಂಡವರಲ್ಲ. ‘ಇವರ್ಯಾಕೆ ಹೀಗೆ’ ಎಂದು ಹೊಸಬರು ಅಚ್ಚರಿ ಪಡಬಹುದು. ಇಲ್ಲಿನ ವಾತಾವರಣವೇ ಹಾಗೆ. ಆಸಾಡಿ ತಿಂಗಳಲ್ಲಿ ಶೀತಗಾಳಿ ಬೀಸುವುದು ಹೌದಾದರೂ ಉಣ್ಣೆಯಿಂದ ನೂತ ಬೆಚ್ಚಗಿನ ಸ್ವೆಟರು ಧರಿಸಿದೊಡನೆ ದೇಹಕ್ಕೆ ಏನೋ ಸಂಕಟ, ಸೆಕೆ. ಹಾಗಾಗಿಯೋ ಅಥವಾ ಮೊದಲಿನಿಂದಲೂ ಈ ಭಾಗದಲ್ಲಿ ಕುರಿಗಳನ್ನು ಸಾಕದ ಕಾರಣಕ್ಕೋ ಉಣ್ಣೆಯ ಸ್ವೆಟರು, ಶಾಲು, ಮಫ್ಲರ್‍ಗಳ ಉಪಯೋಗ ಇಲ್ಲವೆಂಬಷ್ಟು ಕಮ್ಮಿ.

ಆಸಾಡಿ ಕಳೆದು ಸೋಣೆ ತಿಂಗಳು ಬಂತೆಂದರೆ ಮಳೆಗೆ ಸ್ವಲ್ಪ ಬಿಡುವು. ವಿಚಿತ್ರವೆಂದರೆ ಮುಂದೆ ಬರುವ ಕನ್ನೆ ತಿಂಗಳ ಬಿಸಿಲು ಆನೆ ಚರ್ಮವನ್ನೂ ಸುಡಬಲ್ಲದಂತೆ! ಮತ್ತೆ ದಿವಾಳಿ ತಿಂಗಳಲ್ಲಿ ಚಳಿ ಆರಂಭವಾದಾಗ ನಾಲ್ಕು ಕಂಬಳಿ, ರಗ್ಗುಗಳು ಹೊರಬರುತ್ತವೆ. ಚಾವಡಿ, ಜಗಲಿಯಲ್ಲಿ ಉರುಳಿಕೊಳ್ಳುತ್ತಿದ್ದವರು ಅಡುಗೆಮನೆಯಲ್ಲಿ, ಅಕ್ಕಿಮುಡಿ ಇಡುವ ಕೋಣೆಯಲ್ಲಿ ಮುದುರಿಕೊಂಡು ಮಲಗುವಂತಾಗುತ್ತದೆ. ಹನಿ ಬೀಳುವ ಹೊತ್ತಿನಲ್ಲಿ ಕೆಲಸ ಮಾಡಿ ಶೀತ, ಜ್ವರ ಬರುವುದೂ ಇದೆ. ಮೆಣಸಿನಕಾಳಿನ ಕಷಾಯ ಖಾರ ಕಟ್ಟಗೆ ಮಾಡಿ ಕುಡಿದರೆ ಎಂಥಾ ಜ್ವರವೂ ಘಟ್ಟ ಹತ್ತುತ್ತದೆ ಎಂಬುದು ನಂಬಿಕೆ! ಮತ್ತೆ ಕೊಡಿ ತಿಂಗಳ ಕಬ್ಬಿನಾಲೆ ಮುಗಿಸಿ ಶಿವರಾತ್ರಿ ದಾಟಿದರೆ ಬಿಸಿಲೋ ಬಿಸಿಲು, ಸೆಕೆಯೋ ಸೆಕೆ, ಬೆವರಧಾರೆ! ಈ ಬಿಸಿಲಲ್ಲೇ ಸುಗ್ಗಿ ಕೊಯ್ಲಿನ ಕೆಲಸ, ಧಾನ್ಯ ಒಕ್ಕುವ ಕಡು ಕಷ್ಟದ ಭಂಗ.

ಇಷ್ಟು ಹೊತ್ತು ಹೇಳುತ್ತಾ ಬಂದದ್ದು ನನ್ನ ಬಾಲ್ಯ, ಹರೆಯದ ದಿನಗಳ ಮುದೂರಿ ಅಂದರೆ ಎಂಬತ್ತು-ತೊಂಭತ್ತರ ದಶಕದ ಮುದೂರಿಯ ಕುರಿತು. ಹಾಗೆಂದು ಈಗೇನೂ ದೊಡ್ಡ ಬದಲಾವಣೆಗಳು ಘಟಿಸಿಲ್ಲವಾದರೂ ಕೆಲ ಬೆಳವಣಿಗೆಗಳನ್ನು ತೆಗೆದುಹಾಕುವ ಹಾಗಿಲ್ಲ.

ಸಣ್ಣಂದಿನಲ್ಲಿ ಚಪ್ಪಲಿಯೇ ಇಲ್ಲದ ಕಾಲಿನಲ್ಲಿ ತೋಟ, ಗದ್ದೆ, ಹಾಡಿ, ಹಕ್ಕಲು, ಬೆಟ್ಟ, ಗುಡ್ಡಗಳನ್ನು ಹತ್ತಿ ಇಳಿಯುತ್ತ ಬೆಳೆದವರು ನಾನು ಮತ್ತು ನನ್ನ ಸಹಪಾಠಿಗಳು. ಎಲ್ಲರಂತೆ ನನಗೂ ಅದೊಂದು ಕನಸೋ ಭ್ರಮೆಯೋ ಅನ್ನಿಸುತ್ತದೆ. ಅದಲ್ಲದೆ, ನಮ್ಮೂರಿನ ನಿಸರ್ಗದ ಸಾಂಗತ್ಯ ಈ ಕನಸು, ಭ್ರಮೆಗಳಿಗೆ ರೆಕ್ಕೆ ಮೂಡಿಸಿದೆ. ಆಗಿನ ನಮ್ಮ ಆಟವೆಂದರೆ ಕಾಡು-ಮೇಡುಗಳ ಸುತ್ತಾಟ! ಗಂಟಿ ಮೇಯಿಸುತ್ತಾ, ಕಾಡಿನ ಹಣ್ಣುಗಳನ್ನು ಕೊಯ್ಯುತ್ತಾ ಬಹುದೂರ ಹೋಗುತ್ತಿದ್ದೆವು. ಯಾವ ಮುಳ್ಳು, ಪೊದೆ, ಕಣಿ, ಗುಡ್ಡಕ್ಕೂ ಅಂಜುತ್ತಿರಲಿಲ್ಲ. ಸಣ್ಣ ಪುಟ್ಟ ಕಾಡುಪ್ರಾಣಿಗಳು ಇವೆಯೆಂದು ತಿಳಿದಿದ್ದರೂ ಅವುಗಳ ಬಗ್ಗೆ ಹೆದರಿಕೆ ಇರಲಿಲ್ಲ. ಇನ್ನು ಚಿರತೆ, ಹುಲಿ ಇದ್ದರೆ ಅದು ದೂರದ ಹರಿನ್‍ಗುಡ್ಡೆಯಲ್ಲಿ; ಇಲ್ಲಿಗ್ಯಾಕೆ ಬರುತ್ತದೆ ಎಂಬ ಧೋರಣೆ. ಕುರ್ಕ-ಬರ್ಕುಗಳಿಗೆ ಹೆದರಿ ಹಗಲಿನ ಕಾಡಿನ ತಿರುಗಾಟವನ್ನು ಯಾರೂ ರದ್ದು ಮಾಡುತ್ತಿರಲಿಲ್ಲ.

ನಾಲ್ಕನೇ ಕ್ಲಾಸಿನ ತನಕ ನಮ್ಮ ಮುದೂರಿಯಲ್ಲೇ ಒಂದು ಏಕೋಪಾಧ್ಯಾಯ ಶಾಲೆ. ಅದರ ಒಂದೇ ಒಂದು ಸಣ್ಣ ಕೊಠಡಿಯಲ್ಲಿ ನಾಲ್ಕೂ ತರಗತಿಗಳ ವಿದ್ಯಾರ್ಥಿಗಳು, ನಮ್ಮ ಮಾಷ್ಟ್ರು ಮತ್ತು ಶಾಲೆಯ ಕುರ್ಚಿ, ಮೇಜು, ದೊಡ್ಡದೊಂದು ಪೆಟ್ಟಿಗೆ… ಸಮಸ್ತ ವಸ್ತುಗಳು! ಇದ್ದದ್ದು ಅಂದಾಜು ನಲವತ್ತು ಮಕ್ಕಳು. ಮಾಷ್ಟ್ರಿಗೆ ರಜೆಯೆಂಬುದೇ ಇರಲಿಲ್ಲ. ನನ್ನ ನಾಲ್ಕು ವರ್ಷಗಳ ನೆನಪಿನಲ್ಲಿ ಅವರು ಎರಡೋ,ಮೂರೋ ಸಲ ಮಾತ್ರ ರಜೆ ಮಾಡಿದ್ದು! ಹಾಲಾಡಿ ಹಿರಿಯ ಪ್ರಾಥಮಿಕ ಶಾಲೆಗೆ ಹೋಗುವಾಗ ಬೆಳಿಗ್ಗೆ ಮತ್ತು ಸಾಯಂಕಾಲ ಎರಡೂವರೆ ಮೈಲಿ ಅಂದರೆ ದಿನಕ್ಕೆ ಐದು ಮೈಲು ನಡಿಗೆ; ಕಾಡು, ಹಕ್ಕಲು, ಬಯಲು, ಸಂಕ, ತೋಡುಗಳ ದಾರಿ. ಮಳೆಗಾಲದಲ್ಲಿ ಕೊಯ್ಕಾಡಿಯ ದೊಡ್ಡ ಸಂಕ ದಾಟುವಾಗ ಬಳಿದುಕೊಂಡು ಹೋಗದ್ದು ಆಯುಷ್ಯದ ಮಹಿಮೆಯಿಂದ! ಗಲ ಗಲ ಅಲುಗುವ ಆ ಉದ್ದ ಸಂಕದ ಮೇಲೆಯೇ ಕೆನ್ನೀರಿನ ಪ್ರವಾಹ ಹರಿದುಹೋಗುವಾಗ ಜೀವ ಕೈಯ್ಯಲ್ಲಿ ಹಿಡಿದು ದಾಟಿ ಶಾಲೆ ತಲುಪುತ್ತಿದ್ದೆವು. ಶಂಕರನಾರಾಯಣದ ಪ್ರೌಢಶಾಲೆಗೆ ಹಾಲಾಡಿಯವರೆಗೆ ನಡೆದು, ಬಸ್ಸಿನಲ್ಲಿ ಆರು ಕಿಲೋಮೀಟರ್ ಪ್ರಯಾಣ. ಬಸ್ಸಿನ ನೂಕುನುಗ್ಗಲು, ಇಪ್ಪತ್ತು ಪೈಸೆ ಕೊಡುವ ಪಾಸಿನ ಮಕ್ಕಳೆಂಬ ಸಸಾರ, ಶಕ್ತಿಯೇ ಇಲ್ಲದ ನನ್ನ ‘ಟ್ಯಾಂಟ್ರಕ್ಕಿ’ ಕೈಕಾಲುಗಳು; ಅಬ್ಬಾ! ಈಗ ನೆನಪಿಸಿಕೊಂಡರೆ ಪಿಯುಸಿವರೆಗಿನ ವಿದ್ಯಾಭ್ಯಾಸ ಒಂದು ಪವಾಡ ಅನಿಸುತ್ತದೆ! ಯಾವ ಕ್ಷಣದಲ್ಲೂ ನಾನು ಶಾಲೆ ಬಿಡಬಹುದಿತ್ತು… ಅಷ್ಟೊಂದು ಕಾರಣಗಳಿದ್ದವು!

ಮತ್ತೆ ಬಸ್ರೂರಿನ ಡಿಗ್ರಿ ಕಾಲೇಜಿಗೆ ಹೋಗುವಾಗಲಾದರೂ ಒಂದಷ್ಟು ಗಟ್ಟಿ ಧೈರ್ಯ ಬೆಳೆದಿತ್ತು; ಮೈಯ್ಯಲ್ಲಿ ತುಸು ಶಕ್ತಿಯೂ ಕೂಡಿತ್ತು. ಎಳೆಹರೆಯದ ಮಗು ಮನಸ್ಸಿಗೆ ‘ಮುಟ್ಟು’ ಮತ್ತು ಅದರಿಂದಾದ ತಲ್ಲಣ, ಅಪಮಾನ, ನೋವು, ಹಿಂಸೆಗಳಿಂದ ಸ್ವಲ್ಪವಾದರೂ ಹೊರಬರಲು ನಾಲ್ಕೈದು ವರ್ಷಗಳೇ ಬೇಕಾಗಿದ್ದವು!

ನನ್ನ ತಲೆಮಾರಿನವರ ಬಾಲ್ಯ ಓದು, ಬರೆ ಎಂಬ ಗದರುವಿಕೆ, ಕಟುಶಿಸ್ತಿನಲ್ಲಿ ಕಳೆದುಹೋಗಲಿಲ್ಲ. ಹಾಗೆಲ್ಲ ರಾತ್ರಿಯನ್ನು ಹಗಲು ಮಾಡಿ ಓದಲು ನಮ್ಮೂರಲ್ಲಿ ವಿದ್ಯುತ್ತು ಇರಲಿಲ್ಲವಲ್ಲ! ನಾನು ಪಿಯುಸಿ ಮುಗಿಸಿದ ಮೇಲೆಯೇ ಕರೆಂಟೆಂಬ ಮಾಯಕಾರ ನಮ್ಮ ಮುದುವೇರಿಗೆ ಪ್ರವೇಶಿಸಿದ್ದು! ಅಲ್ಲಿಯ ತನಕ ಕತ್ತಲ ಸಾಮ್ರಾಜ್ಯ. ಬೆಳಕಿಗೆ ಬಿದ್ದು ಒದ್ದಾಟ, ಅವಮಾನಗಳಿಗೆ ಒಳಗಾಗುವ ಭಾವಗಳಿಗೆ ಆಶ್ರಯ ಕೊಡುವ ಕತ್ತಲು ನಮ್ಮ ಹಳ್ಳಿಯನ್ನು ಗಾಢವಾಗಿ ಅಪ್ಪಿಕೊಂಡಿತ್ತು. ದುಡಿದು ದಣಿದ ಜೀವಗಳಿಗೆ ನೆಮ್ಮದಿ ಕೊಡುವ ಕತ್ತಲು ಯಕ್ಷಗಾನ, ಚಿಟ್ಟ್‍ಮೇಳ ಮುಂತಾದ ಕಲಾಪ್ರಕಾರಗಳನ್ನು ತನ್ನೊಡಲೊಳಗೆ ಬೆಳೆಸಿತು. ಭೂತದ ಕೋಲ, ದೈವದ ನೇಮ, ಗೆಂಡದ ಹಬ್ಬ, ಜಕ್ಕಣಿಗೆ ಎಡೆ ಇಡುವುದು ಮುಂತಾದ ಧಾರ್ಮಿಕ ಆಚರಣೆಗಳೂ ಕತ್ತಲ ಗರ್ಭದಲ್ಲೇ ನಡೆಯುವಂತವು. ಆದರೆ ಓದುವ ಮಕ್ಕಳ ಕಣ್ಣುಗಳು ಹೊಗೆ ಕುಡಿದು ಕೆಂಪಾದವು. ರೈತರ, ಗೃಹಿಣಿಯರ ಕೆಲಸ ಕಾರ್ಯಗಳು ಹಲವು ಪಟ್ಟು ಹೆಚ್ಚಾದವು. ಸೆಕೆಯಾದರೆ ಅಂಗಳದ ಬೆಳದಿಂಗಳಲ್ಲಿ ಮೈಚಾಚಿ ಮಲಗುವುದೇ ಹೊರತು ಬೇರೆ ಮಾರ್ಗವಿಲ್ಲ. ಆದರೆ ನನ್ನ ಶಾಲೆಯ ದಿನಗಳು ಬರೀ ಒಳ್ಳೆಯದನ್ನೇ ತುಂಬಿಕೊಂಡಿತ್ತೆಂದು ಹೇಳಲಾರೆ.

ಅಂದಿನ ಶಿಕ್ಷಕ ಕೇಂದ್ರಿತ ತರಗತಿಗಳು ಅನೇಕ ಮಕ್ಕಳ ಭವಿಷ್ಯವನ್ನು ದಿಕ್ಕಾಪಾಲು ಮಾಡುವಲ್ಲಿ ಸಮರ್ಥವಾದವು. ಶೋಷಿತ, ಅಸಹಾಯಕ ಸಮುದಾಯದ ಮಕ್ಕಳು ಶಾಲೆಯ ಮೆಟ್ಟಿಲುಕಲ್ಲೂ ತುಳಿಯಲಾಗಲಿಲ್ಲ. ತುಳಿದರೂ ಹಲವು ಮಾನಸಿಕ ಕ್ಲೇಶಗಳಿಗೆ ಒಳಗಾಗಬೇಕಾಯಿತು. ಇದರೊಂದಿಗೆ ಅಳ್ಳೆದೆಯ, ಸೂಕ್ಷ್ಮ ಮನಸ್ಸಿನ ಅನೇಕ ಮಕ್ಕಳು ನರಳಿದವು; ಆತ್ಮವಿಶ್ವಾಸ ಕಳೆದುಕೊಂಡು ಕಲಿಕೆಗೆ ವಿದಾಯ ಹೇಳಿದವು; ಸ್ವಲ್ಪ ಆಚೀಚೆಯಾಗಿದ್ದರೂ ನಾನೂ ಈ ಸಾಲಿಗೆ ಸೇರುತ್ತಿದ್ದೆ ಎಂಬುದು ನಿಜ. ಹಳ್ಳಿಯಿಂದ ಬಂದ ನನ್ನಂಥಹ ಮಕ್ಕಳ ತಳಮಳ, ತಬ್ಬಲಿತನವನ್ನು ಶಿಕ್ಷಕರು ಮತ್ತು ಅಂದಿನ ಶಿಕ್ಷಣ ವ್ಯವಸ್ಥೆ ಎಂದೂ ಗುರುತಿಸಿ ಹೋಗಲಾಡಿಸಲಿಲ್ಲ.

ವರ್ತಮಾನದಲ್ಲಿ ನಮ್ಮ ಮುದೂರಿಯೂ ಜಾಗತಿಕ ವಿದ್ಯಮಾನಗಳಿಗೆ ತೆರೆದುಕೊಳ್ಳುತ್ತಿದೆ. ಸೇವೆ, ಸರಕುಗಳ ರೂಪದಲ್ಲಿ; ಮೊಬೈಲ್- ಟಿ.ವಿ.ಗಳ, ಅದರ ವಿವಿಧ ಆಗುಹೋಗುಗಳ ನೆಪದಲ್ಲಿ ಪೇಟೆ ಹಳ್ಳಿಗೆ ಕಾಲಿಟ್ಟಿದೆ. ಮಳೆಗಾಲದ ಜಡಿಮಳೆ ವರ್ಷದ ಎಂಟು ತಿಂಗಳಿಗೆ ಹಂಚಿಹೋಗಿದೆ! ಚಳಿ ಹುಡುಕಿದರೂ ಸಿಗದಾಗಿ ಬಿರುಬಿಸಿಲು ರಾಚುತ್ತಿದೆ. ಅಂದರೆ ಜಾಗತಿಕ ತಾಪಮಾನದ ಬಿಸಿ, ಪರಿಸರ ವೈರುಧ್ಯದ ಪರಿ ತಾಕಿದೆ. ಕಾಡುಗಳು ಬೋಳಾಗಿ ಊರು ‘ಬೇಳೇರಾ’ಗಿದೆ,’ ಬದಲಾಗಿದೆ! ಆದರೆ ಆವತ್ತು ಹನ್ನೊಂದು ವರ್ಷಗಳ ನಂತರ ಮನೆಯಲ್ಲಿ ಕೊನೆಯವಳಾಗಿ ಹುಟ್ಟಿ, ಒಂಟಿಯಾದ ನನ್ನ ಬಾಲ್ಯವನ್ನು ಪೊರೆದ ಪೂರ್ತಿ ಹೊಣೆಗಾರಿಕೆ ಮುದೂರಿಯ ಸಮೃದ್ಧ ನಿಸರ್ಗದ ಮೇಲಿದೆ.

ಆಡಲು ಯಾರೂ ಇಲ್ಲದೆ, ಪದೇ ಪದೇ ಜ್ವರ ದಾಳಿಯಿಡುವ ನಿಶ್ಯಕ್ತ ದೇಹವನ್ನು ಹೊತ್ತು ‘ಜಂಬಿಕೊಳ್ಳಿ’ ಎಂದು ಕುಣಿದು ಕೂಗುವ ಹಠಮಾರಿಯಾಗಿದ್ದ ನನ್ನನ್ನು ತಿದ್ದಿದ್ದು ನಿಸರ್ಗದ ಕೈಗಳಲ್ಲದೇ ಇನ್ಯಾರು! ಅಂದಿನ ಕಾಡಿನ ಸುತ್ತಾಟದಲ್ಲಿ ಎದೆಗಿಳಿದದ್ದು, ಸಂಗಾತಿಯಾದದ್ದು ಮರಗಿಡಗಳು. ಕಣ್ಮುಚ್ಚಿದರೂ ತೆರೆದರೂ ಗಾಢ ನಿದ್ದೆಯಲ್ಲೇ ಇದ್ದರೂ, ನಮ್ಮ ಮನೆಯ ಸುತ್ತಮುತ್ತಲಿನ ಕಾಡಿನ ಮರಗಳನ್ನು, ಅವುಗಳ ನಿರ್ದಿಷ್ಟ ಜಾಗ, ಸ್ವರೂಪವನ್ನು ಈಗಲೂ ಗುರುತಿಸಿ ವಿವರಿಸಬಲ್ಲೆ. ಹಕ್ಕಲಿನ ಮುರಿನ್‍ಮರ, ಸುರಗಿ, ಧೂಪದ ಮರಗಳು, ಆಚೆ ಹಾಡಿಯ ದೊಡ್ಡ ಹಾಲೆ ಮರ, ಬಿಳಿ ನೇರಳೆಮರ ಮೊದಲಾದವು ಹಾಳ್ಮನೆಯ ಕಾಟು ಮಾವಿನಮರ, ಶಾಲೆ ದಾರಿಯ ಆರ್ಕಿಡ್ ಗುಬ್ಬಿಹೂವನ್ನು ಹೊತ್ತು ನಿಂತಿದ್ದ ಮರಗಳು, ದುಕ್ರ್ಲ ಮರ, ದರೆಮನೆಯ ಅಮ್ಟೆ, ಹುಣಸೆ, ಬಾಗಾಳ್‍ಮರ, ಮೂರ್ಮುಡಿ ಗದ್ದೆಯಂಚಿನ ಸೀಗೆಬಲ್ಲೆ, ಅತ್ತಿಮರ, ಗ್ವಾಯ್‍ಮರಗಳು… ಗರ್ಚ, ಜಡ್ಡ್‍ಮುಳ್ಳು, ಸೂರಿ, ಕಿಸ್ಕಾರ, ಚಾಂಪಿ, ಜುಳ್ಕ ಮುಂತಾದ ಹಣ್ಣಿನ ಗಿಡಗಳು, ಚದ್ರಾಳ, ಕುಸುಮ, ನೆಕ್ಕಿ, ವಾಟೆ ಮುಂತಾದ ಪೊದೆಗಳು, ಹುತ್ತಗಳು, ಬೀಳುಗಳು… ಹೀಗೆ ನೂರಾರು ಮರ, ಗಿಡ, ಪೊದೆಗಳು, ಹೂವುಗಳ ಘಮ ನನ್ನ ಮನದ ನಕ್ಷೆಯಲ್ಲಿದೆ. ಆದರೆ ದುರಂತವೆಂದರೆ ಈ ಮರಗಳಲ್ಲಿ ಹೆಚ್ಚಿನವು ಈಗ ಉಳಿದಿಲ್ಲ! ಹಾಡಿ ಕಡಿದು ಮಾರುವಾಗ ಎಲ್ಲವೂ ಹೋಗಿವೆ! ಆ ಜಾಗದಲ್ಲಿ ಬೇರೆ ಗಿಡ, ಪೊದೆಗಳು ಬೆಳೆದಿವೆಯಾದರೂ ಮೊದಲಿನ ಸ್ವಾರಸ್ಯ ಇಲ್ಲ. ನನ್ನ ನೆನಪಿನ ಕಾಡನ್ನು ಮುಟ್ಟಿ ನೇವರಿಸಬೇಕು ಎನ್ನಿಸಿದರೆ ಅದು ಕಲ್ಪನೆಯಲ್ಲಿ ಮಾತ್ರ ಸಾಧ್ಯ….

ಈಗ ನಾನಿರುವ ಊರಲ್ಲೂ ಹೆಚ್ಚು ಕಮ್ಮಿ ಮುದೂರಿಯ ಕಾಡನ್ನೇ ಹೋಲುವ ಕಾಡಿದೆ. ಆದರೆ ಊರಿಗೆ ಅಪರಿಚಿತಳಾಗಿರುವ ನನಗೆ ಕಾಡನ್ನು ಪ್ರವೇಶಿಸುವ ಧೈರ್ಯವಿಲ್ಲ. ನಮ್ಮೂರಲ್ಲಾದರೆ ಹಾಡಿ ಮನೆಯಂಗಳದಂತೆಯೇ ಸಲೀಸಾಗಿತ್ತು. ಮಕ್ಕಳು ಮನೆಯಲ್ಲಿಲ್ಲವೆಂದಾದರೆ ಹಾಡಿಯಲ್ಲಿದ್ದಾರೆಂಬುದೇ ಉತ್ತರವಾಗಿತ್ತು! ಈಗ ಸಂಜೆಯ ಉದ್ದಾನುದ್ದ ನಡಿಗೆಯಲ್ಲಿ ರಸ್ತೆಯ ಆಚೀಚೆ ಇರುವ ಮರಗಿಡಗಳನ್ನು ಆಸೆಯಿಂದ ನೋಡುತ್ತೇನೆ. ಕೈ ಚಾಚಿ ಮುಟ್ಟುತ್ತೇನೆ. ಬಾಗಾಳು ಮರದಡಿ ಎರಡು ಕ್ಷಣ ನಿಂತು ಹೂವಿನ ಗಂಧ ಕುಡಿಯುತ್ತೇನೆ. ಏಕಾಏಕಿ ಕಾಡಿನ ದಾರಿಯಲ್ಲಿ ನಡೆದು ಹೋಗಲಾಗಲಿ, ವಿವರವಾಗಿ ಕಾಣುತ್ತ ಕಣ್ತುಂಬಿಕೊಳ್ಳಲಾಗಲಿ ಸಾಧ್ಯವಾಗುವುದಿಲ್ಲ. ‘ಯಾವ ಮನುಷ್ಯನಾದರೂ ಅಚಾನಕ್ ಎದುರಾದರೆ’ ಎಂಬ ವಿಚಿತ್ರ ಭೀತಿ ಅಥವಾ ‘ಇಲ್ಲೇ ಆಸುಪಾಸಲ್ಲಿ ಚಿರತೆ ತಿರುಗಾಡುತ್ತಿದೆ’ ಎಂಬ ಸುದ್ದಿಯ ಕನವರಿಕೆ….

ಆದರೆ ನನ್ನ ಕಣಗಳಲ್ಲಿ ಸೇರಿ ಹೋಗಿರುವ ಕಾಡನ್ನು ಹಾಗೇ ನಮ್ಮೂರ ಜನ, ಮನ, ಮನೆಗಳನ್ನು ಎಂದೂ ಯಾರೂ ಅಳಿಸಲಾಗುವುದಿಲ್ಲ!