ಆ ಹಾಳು ಗುಡಿಯ ಮುಂದೆ ಹೋದೆವು. ಒಬ್ಬರೂ ಕಾಣಲಿಲ್ಲ. ಅಷ್ಟೊತ್ತಿಗೆ ಒಳಗಿನಿಂದ ಒಬ್ಬ ಯುವಕ ಬಂದ. ದೇವಾಲಯದೊಳಗೆ ಸಂಪೂರ್ಣ ಕತ್ತಲು ಕವಿದಿತ್ತು. ಇದೇನು ಹೀಗೆ ಎಂದಾಗ, ಆತ ‘ಇರುವುದೊಂದೇ ಮೋಂಬತ್ತಿ ನಿಮ್ಮ ಬರುವಿಗೆ ಕಾಯುತ್ತಿದ್ದೆವು’ ಎಂದ. ಒಳಗೆ ಕಾಲಿಟ್ಟಕೂಡಲೆ ಆತ ಮೋಂಬತ್ತಿ ಹಚ್ಚಿದ. ಅಲ್ಲಿ ಕುರ್ಚಿ ಟೇಬಲ್ ಏನೂ ಇರಲಿಲ್ಲ. ಆ ಮೋಂಬತ್ತಿಯ ಬೆಳಕಲ್ಲಿ ನೂರಾರು ಯುವಕರು ಕುಳಿತಿದ್ದು ಮಸುಕು ಮಸುಕಾಗಿ ಕಾಣುತ್ತಿತ್ತು. ಅವರ ಕಣ್ಣುಗಳು ಮಾತ್ರ ನಕ್ಷತ್ರಗಳ ಹಾಗೆ ಹೊಳೆಯುತ್ತಿದ್ದವು. ಕಷ್ಟಪಟ್ಟು ಇಲ್ಲಿಗೆ ಬಂದದ್ದು ಸಾರ್ಥಕವೆನಿಸಿತು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 64ನೇ ಕಂತು ನಿಮ್ಮ ಓದಿಗೆ

ಭಾಷಣ ಎನ್ನುವುದು ಮಾತಿನ ರಾಶಿಯಲ್ಲ. ನಾವು ಯಾವ ವಿಚಾರ ಮಾತನಾಡಬೇಕು? ಆ ವಿಚಾರಕ್ಕೆ ಪೂರಕವಾದ ದೃಷ್ಟಾಂತಗಳನ್ನು ಯಾವರೀತಿ ಹೊಂದಿಸಬೇಕು? ನಾವು ಹೇಳಬೇಕಾದ ವಿಚಾರದ ಕುರಿತು ಕೇಳುಗರ ಮನಸ್ಸನ್ನು ಹಂತಹಂತವಾಗಿ ಆಕರ್ಷಣೆಗೊಳಗಾಗುವಂತೆ ಯಾವರೀತಿ ವಿಚಾರ ಸರಣಿಯನ್ನು ತರ್ಕಬದ್ಧವಾಗಿ ಬೆಳೆಸಬೇಕು. ಅವೆಲ್ಲ ಕೇಳುಗರ ಬದುಕಿಗೆ ಮತ್ತು ಕಲ್ಪನೆಗೆ ಯಾವುದೋ ಒಂದು ರೀತಿಯಲ್ಲಿ ಸಂಬಂಧಿತವಾದವುಗಳೆಂಬುದನ್ನು ಅವರ ಚಿತ್ತದ ಮೇಲೆ ಅದು ಹೇಗೆ ಅಚ್ಚೊತ್ತಬೇಕು? ಕೊನೆಗೆ ಅವರು ಕೇಳುತ್ತ ಕೇಳುತ್ತ ತಲ್ಲೀನರಾಗಿ ಹೇಳುಗ ಮತ್ತು ಕೇಳುಗರ ಮಧ್ಯೆ ಅವಿನಾಭವ ಸಂಬಂಧ ಉಂಟಾದರೆ ಅದೊಂದು ಯಶಸ್ವೀ ಭಾಷಣ ಎನಿಸುವುದು. ಆಗ ಕೇಳುಗರ ಮನಸ್ಸು ಮೆಚ್ಚಿ ಅಹುದು ಅಹುದು ಎನ್ನುವ ಹಾಗೆ ಆಗುತ್ತದೆ. ಹೀಗೆ ಅವರ ಮನಸ್ಸು ತಲ್ಲೀನವಾದರೂ ಮುಂದಿನ ದಿನಗಳಲ್ಲಿ ಆ ಅರಿವು ಆಚರಣೆಯಲ್ಲಿ ಪರಿವರ್ತನೆಯಾಗುತ್ತದೆ ಎಂಬುದು ಹೇಳಲಿಕ್ಕಾಗದು.

ನಾನು ಪಿ.ಯು.ಸಿ.ಯಲ್ಲಿ ಓದುವಾಗಲೇ ಕಮ್ಯುನಿಸ್ಟ್ ಪಕ್ಷದ ಜೊತೆ ಸಂಬಂಧ ಬಂದಾಗ ಭಾಷಣದ ಪರಿಣಾಮಕಾರಿ ಕಲೆಯ ಬಗ್ಗೆ ಅರಿತುಕೊಂಡೆ. ಕಮ್ಯುನಿಸ್ಟ್ ಸಂಗಾತಿಗಳು ಮಾತನಾಡುವ ಕ್ರಮ ನನಗೆ ಬಹಳ ಹಿಡಿಸುತ್ತಿತ್ತು. ಅವರು ಮಾತನಾಡುವ ಪ್ರತಿಯೊಂದು ವಿಚಾರ ಆಳುವ ವರ್ಗದ ಮೇಲಿನ ಒಣ ಟೀಕೆ ಆಗಿರದೆ ದಾಖಲೆ ಮತ್ತು ಅಂಕಿ ಅಂಶಗಳಿಂದ ಕೂಡಿರುತ್ತಿತ್ತು. ಸತ್ಯವನ್ನು ಧೈರ್ಯದಿಂದ ಹೇಳುವ ಅವರ ಬದ್ಧತೆ ವೈರಿಗಳೂ ಮೆಚ್ಚುವಂಥದ್ದು.

ಹೀಗೆ ಮನಂಬುಗುವಂತೆ ಮಾತನಾಡುವ ಅವರ ಶೈಲಿ ನನಗೆ ಬಹಳ ಇಷ್ಟವಾಯಿತು. ನಾನು ವಿದ್ಯಾರ್ಥಿಗಳ ಗುಂಪಿನಲ್ಲಿ ಮಾತನಾಡಲು ಪ್ರಾರಂಭಿಸಿದೆ. ನಾಲ್ಕಾರು ಸಂಗಾತಿಗಳು ಸೇರಿದಾಗ ವಿವಿಧ ವಿಷಯಗಳ ಕುರಿತು ಚರ್ಚೆಯಾಗುತ್ತಿದ್ದವು. ಹಿರಿಯ ಸಂಗಾತಿಗಳ ಮಾತುಗಳನ್ನು ಕೇಳುವ ಹುಚ್ಚು ಎಷ್ಟಿತ್ತೆಂದರೆ ಸಾಯಂಕಾಲ ಗೋಳಗುಮ್ಮಟದ ಕಡೆಗೆ ಹೋಗುವಾಗ ಚರ್ಚೆ ಪ್ರಾರಂಭವಾದರೆ, ಅಲ್ಲಿ ಕುಳಿತು ವಾಪಸ್ ಬರುವವರೆಗೆ ಚರ್ಚೆ ಮುಂದುವರಿಯುತ್ತಿತ್ತು. ದೇಶ ವಿದೇಶ ಸಮಾಜ ಬಡತನ ಸಿರಿತನ ಕೋಮುವಾದ ಬಂಡವಾಳವಾದ ಮುಂತಾದವು ನಮ್ಮ ಚರ್ಚೆಯ ವಿಷಯವಾಗಿರುತ್ತಿದ್ದವು. ಅಂದಿನ ಸೋವಿಯತ್ ದೇಶದ ಸಾಧನೆಯ ಆಕರ್ಷಣೆಯ ಹಿನ್ನೆಲೆಯಲ್ಲಿ ಎಲ್ಲ ಚರ್ಚೆಗಳೂ ರೋಚಕವಾಗಿರುತ್ತಿದ್ದವು.

ಆಗ ಪಿ.ಯು.ಸಿ. ಒಂದು ವರ್ಷದ್ದಾಗಿತ್ತು. ಮುಂದೆ ಪ್ರಥಮ ಬಿ.ಎ. ಹೊರಗಿನಿಂದ ಪಾಸು ಮಾಡಿದೆ. ಕಾಲೇಜು ಫೀ ಕಟ್ಟಲು ಸಾಧ್ಯವಾಗಿಲ್ಲದ ಕಾರಣ ಆಗ ಕರ್ನಾಟಕ ವಿಶ್ವವಿದ್ಯಾಲಯದಿಂದ ಇಂಥ ಅವಕಾಶ ಕಲ್ಪಿಸಲಾಗಿತ್ತು. ಗೃಹಿಣಿಯರಿಗೆ ಮತ್ತು ವಕೀಲರ ಬಳಿ ಸಹಾಯಕರಾಗಿ ಕೆಲಸ ಮಾಡುವವರು ಮುಂತಾದವರು ಹೀಗೆ ಕಲಿಯುತ್ತಿದ್ದರು. ನನ್ನ ಏಳನೆಯ ಇಯತ್ತೆ ಸಹಪಾಠಿಯ ತಂದೆ ಅಥಣಿ ವಕೀಲರಿಂದ ಪತ್ರ ಪಡೆದು ಪ್ರಥಮ ಬಿ.ಎ. ಸೇರಿ ಅಂತೂ ಇಂತೂ ಪಾಸಾದೆ.

ಆ ಸಂದರ್ಭದಲ್ಲಿ ಬಜಾರದಲ್ಲಿ ರಸ್ತೆ ಬದಿ ಬೆಲ್ಲದ ಅಂಗಡಿಯನ್ನು ನನ್ನ ತಮ್ಮ ನಡೆಸುತ್ತಿದ್ದ. ನಾನೂ ಅಂಗಡಿ ಮೇಲೆ ಕೂಡುತ್ತಿದ್ದೆ. ರಾತ್ರಿ ಎಂಟು ಗಂಟೆಗೆ ಅಂಗಡಿ ಬಂದ್ ಮಾಡಿ. ಉಳಿದ ಬೆಲ್ಲದ ಪೆಂಟಿಗಳನ್ನು ಪಕ್ಕದ ನೆಹರೂ ಮಾರ್ಕೆಟ್‌ನ ತಳಮನೆಯ ಪುಟ್ಟ ಗೂಡಿನಲ್ಲಿಟ್ಟು ಲಾಕ್ ಹಾಕಿದ ಮೇಲೆ ಅಂದಿನ ಕೆಲಸ ಮುಗಿಯುತ್ತಿತ್ತು. (ಆ ಗೂಡಿಗೆ ಬಗದಾ ಎಂದು ಕರೆಯುತ್ತಾರೆ. ಅದರ ಮುನ್ಸಿಪಾಲಿಟಿ ಬಾಡಿಗೆ ತಿಂಗಳಿಗೆ ನಾಲ್ಕು ರೂಪಾಯಿ ಇದ್ದ ನೆನಪು) ಮನೆಗೆ ಬಂದು ಸ್ನಾನ ಮಾಡಿ ಬೆಲ್ಲದ ಜಿಗುಟಿನಿಂದ ಮುಕ್ತವಾಗಿ, ಉಟಮಾಡಿದ ನಂತರ ಅಂಗಳದಲ್ಲಿ ಚಾಪೆ ಹಾಸಿಕೊಂಡು ಮಲಗುತ್ತಿದ್ದೆ. ಎಲ್ಲರೂ ಊಟ ಮಾಡಿ ಮಲಗಿದ ಮೇಲೆ ರಾತ್ರಿ 10 ಗಂಟೆಯ ನಂತರ ಬಜಾರದಲ್ಲಿ ಸಂಗಾತಿಗಳೆಲ್ಲ ಸೇರುತ್ತಿದ್ದೆವು. ಮತ್ತೆ ಅದು ಇದು ಮಾತನಾಡುತ್ತ. ಮಧ್ಯರಾತ್ರಿಯವರೆಗೆ ಚಾಲೂ ಇರುವ ಗ್ರೀನ್ ಹೊಟೇಲಲ್ಲಿ ಬೈಟು ಚಹಾ ಕುಡಿಯುತ್ತ ಚರ್ಚೆ ಮಾಡುತ್ತ ಸುತ್ತುತ್ತಿದ್ದೆವು. ಇಂದಿರಾ ಗಾಂಧಿಯವರು ಬ್ಯಾಂಕ್ ರಾಷ್ಟ್ರೀಕರಣ ಮತ್ತು ರಾಜಧನ ರದ್ಧತಿ ಮಾಡಿ ತಿಂಗಳುಗಳೇ ಕಳೆದಿದ್ದವು. ಇವೆಲ್ಲ ನಮ್ಮ ಚರ್ಚೆಯ ವಿಷಯಗಳಾಗಿರುತ್ತಿದ್ದವು. ಜ್ಞಾನದಾಹ ಎಷ್ಟಿತ್ತೆಂದರೆ ಇಂಥ ಭೇಟಿ ಮತ್ತು ಚರ್ಚೆಗೆ ಮನಸ್ಸು ಹಾತೊರೆಯುತ್ತಿತ್ತು.

ನಾನು ಹೀಗೆ ರಾತ್ರಿ ಮನೆಯಿಂದ ಹೋಗಿ ಮಧ್ಯರಾತ್ರಿ ಬರುವುದು ತಂದೆಗೆ ಗೊತ್ತಾಯಿತು. ಮನೆಯವರೆಲ್ಲ ಚಿಂತೆಗೊಳಗಾದರು. ಮಧ್ಯರಾತ್ರಿಯವರೆಗೆ ಎಲ್ಲಿ ಹೋಗುತ್ತಾನೆ. ಯಾರ ಭೇಟಿಗೆ ಹೋಗುತ್ತಾನೆ. ವಯಸ್ಸಿಗೆ ಬಂದ ಮಕ್ಕಳು ಹೀಗೆ ಹೋಗಿ ಹಾಳಾಗಿದ್ದ ಅನೇಕ ಉದಾಹರಣೆಗಳು ನಮ್ಮ ನಾವಿಗಲ್ಲಿಯಲ್ಲಿ ಇದ್ದವು. ಕೊನೆಗೊಂದು ದಿನ ತಂದೆ ಕೇಳಿಯೆಬಿಟ್ಟರು. ಕಮ್ಯುನಿಸ್ಟ್ ಗೆಳೆಯರ ಜೊತೆ ಹೋಗುವುದಾಗಿ ತಿಳಿಸಿದೆ. ಅವರ ಜೊತೆ ತಿರುಗಾಡುವುದು ತಂದೆಗೆ ಗೊತ್ತಿತ್ತು. ವಿಜಾಪುರದಲ್ಲಿ ಬಾಲಸಿಂಗ್ ಮಾಸ್ತರರೆಂಬ ಮುಸ್ಲಿಮರೊಬ್ಬರು ಇದ್ದರು. ಅವರು ಆರಂಭದಲ್ಲಿ ಕಮ್ಯುನಿಸ್ಟ್ ಪಕ್ಷ ಕಟ್ಟಿದವರು. ಅವರು ಸಾತ್ವಿಕರು ಆದರೆ ಅವರ ಚಿಂತನೆ ಮತ್ತು ಹೋರಾಟದಿಂದ ಅವರ ಮನೆಗೇನೂ ಲಾಭವಾಗಲಿಲ್ಲ ಎಂದು ಅವರ ವಿಚಾರವಾಗಿ ತಿಳಿಸಿದ ತಂದೆ, ‘ನಾವು ಬಡವರು, ನಮಗೆ ರಾಜಕೀಯ ವಿಚಾರ ಬೇಡ’ ಎಂದು ಹೇಳಿದರು. ಆದರೂ ಅವರು ನನ್ನನ್ನು ತಡೆಯುವ ಗೋಜಿಗೆ ಹೋಗಲಿಲ್ಲ.

ಬಡವರ ಕಷ್ಟಗಳ ಬಗ್ಗೆ ಗಂಭೀರವಾಗಿ ಮಾತನಾಡುವವರನ್ನು ಮೊದಲ ಬಾರಿಗೆ ಕಂಡ ಉತ್ಸಾಹ ನನ್ನಲ್ಲಿ ಮನೆ ಮಾಡಿತ್ತು. ನಾನು ಯಾರ ಮಾತೂ ಕೇಳದ ಸ್ಥಿತಿಯಲ್ಲಿದ್ದೆ. ಬಡತನ, ಶೋಷಣೆ, ಬಂಡವಾಳಶಾಹಿ ಕ್ರೌರ್ಯ ಮುಂತಾದವುಗಳ ಬಗ್ಗೆ ವಾಗ್ವಾದ ಮಾಡುತ್ತಲೇ ಬೆಳೆದೆ.

ಮುಂದಿನ ದಿನಗಳಲ್ಲಿ ಈ ಕಮ್ಯುನಿಸ್ಟ್ ವಿಚಾರಕ್ಕೆ ಪೂರಕವಾಗಿ ಬುದ್ಧ, ಬಸವ, ಅಂಬೇಡ್ಕರ್, ಶರಣರು, ಸೂಫಿಗಳು ಮುಂತಾದವರ ಚಿಂತನೆಗಳು ಸಹಾಯಕ್ಕೆ ಬಂದವು. ಭಾರತದಲ್ಲಿ ಶೋಷಣೆಗೆ ಮುಖ್ಯ ಕಾರಣ ಬಂಡವಾಳಶಾಹಿಗೆ ಪೂರಕವಾದ ವೈದಿಕಶಾಹಿ ಎಂಬುದು ಗೋತ್ತಾದದ್ದೇ ಈ ಪೂರಕ ಚಿಂತನೆಗಳಿಂದ. ಕಮ್ಯೂನಿಸ್ಟ್ ಫಿಲಾಸಫಿ ಗೊತ್ತಾಗದೆ ಇದ್ದಿದ್ದರೆ ಇವೆಲ್ಲ ಗೊತ್ತಾಗುತ್ತಿದ್ದಿಲ್ಲವೇನೋ. ಅದೇನೇ ಇದ್ದರೂ ಜಗತ್ತಿನ ಚಿಂತನೆಗಳು ಮೂಲತಃ ಎರಡೇ ವಿಧವಾಗಿರುತ್ತವೆ. ಅವು ಯಾವುವು ಎಂದರೆ ಶೋಷಕರ ಪರವಾದ ಚಿಂತನೆಗಳು ಮತ್ತು ಶೋಷಣೆಗೆ ಒಳಗಾದವರ ಪರವಾದ ಚಿಂತನೆಗಳು! ಈ ಸೂತ್ರ ನನ್ನ ಜೀವನವನ್ನೇ ಬದಲಾಯಿಸಿತು. ಯಾವುದೇ ಧರ್ಮ, ವ್ಯಕ್ತಿ ಅಥವಾ ಸಿದ್ಧಾಂತವಿರಲಿ: ಅವು ಶೋಷಕರ ಪರವೋ ವಿರೋಧವೋ ಎಂದು ಕಂಡುಹಿಡಿಯುವುದು ಬಹಳ ಮುಖ್ಯವಾಗಿರುತ್ತದೆ. ದೇವರನ್ನು ನಂಬಲಿ, ಬಿಡಲಿ ಮನುಷ್ಯರನ್ನು ನಂಬುವುದು ಮತ್ತು ಅವರ ಹಿತಚಿಂತಕರಾಗಿರುವುದು ಬಹಳ ಮುಖ್ಯ ಎಂಬ ವಿಚಾರ ನನಗೆ ಬಹಳ ಬೇಗ ಹೊಳೆಯಿತು. ಇಂಥ ಮನೋಭಾವದಿಂದಾಗಿಯೆ ನನಗೆ ವಿವಿಧ ಧರ್ಮ ಮತ್ತು ಸಂಪ್ರದಾಯಗಳ ದಾರ್ಶನಿಕರು, ಭಕ್ತಿಪಂಥದವರು, ಅವಧೂತರು ಮತ್ತು ತತ್ತ್ವಪದಕಾರರು ಆಕರ್ಷಿತರಾದರು.

ಕಮ್ಯುನಿಸ್ಟ್ ಸಭೆಗಳಿಗಿಂತಲೂ ಹೆಚ್ಚಿನ ಸಭೆಗಳಲ್ಲಿ ಭಾಗವಹಿಸಿದ್ದೆಂದರೆ ಬಸವಾದಿ ಶರಣರ ಸಭೆಗಳಲ್ಲಿ, ದಲಿತರ ಸಭೆಗಳಲ್ಲಿ, ಬಂಡಾಯ ಸಭೆಗಳಲ್ಲಿ, ಶಾಂತಿ ಮತ್ತು ಕೋಮುಸೌಹಾರ್ದದ ಸಭೆಗಳಲ್ಲಿ. ನನಗೆ ಪ್ರತಿ ಸಭೆಯೂ ಒಂದು ಪರೀಕ್ಷೆಯಂತೆ. ಸಭೆ ಹಳ್ಳಿಯಲ್ಲಿರಲಿ, ನಗರದಲ್ಲಿರಲಿ, ಹೊರ ರಾಜ್ಯ, ಹೊರ ದೇಶಗಳಲ್ಲಿರಲಿ ಭಾಷಣ ಶ್ರದ್ಧೆಯಲ್ಲಿ ಹೆಚ್ಚು ಕಡಿಮೆ ಎಂಬ ಪ್ರಶ್ನೆ ಇಲ್ಲವೇ ಇಲ್ಲ. ಭಾಷಣೋತ್ಸಾಹದಲ್ಲೂ ವ್ಯತ್ಯಾಸವಿಲ್ಲ. ಕಳೆದ 50 ವರ್ಷಗಳ ಅವಧಿಯಲ್ಲಿ ಸಹಸ್ರಾರು ಕಡೆಗಳಲ್ಲಿ ಭಾಷಣ ಮಾಡಿದ್ದೇನೆ. ಪ್ರಜಾವಾಣಿಯಲ್ಲಿದ್ದಾಗ ವಾರದ ರಜೆಗಳು ಮತ್ತು ಕಿರುಕುಳ ರಜೆಗಳು ಭಾಷಣಕ್ಕೇ ಮೀಸಲಾಗಿರುತ್ತಿದ್ದವು.

ನನ್ನ ಪತ್ರಿಕಾ ಕಚೇರಿಯಲ್ಲಿ ಕೆಲವರಿಗೆ ನನ್ನ ಭಾಷಣದ ಮೇಲೇ ಕಣ್ಣು. ಒಂದು ದಿನ ಸಂಪಾದಕರ ಜೊತೆಗಿನ ಸಾಯಂಕಾಲದ ಸಭೆಯಲ್ಲಿ ಮುಖ್ಯ ಉಪ ಸಂಪಾದಕರೊಬ್ಬರು ನಾನು ಸರಿಯಾಗಿ ಕಚೇರಿಗೆ ಬರುವುದಿಲ್ಲವೆಂದೋ ಬರಿ ಭಾಷಣದೇ ಗುಂಗು ಎಂದೋ ತಿಳಿಸಿದರೆಂದು ಕಾಣುತ್ತದೆ. ಸಂಪಾದಕರು ನನ್ನನ್ನು ಕರೆಸಿದರು. ಅವರು ಮೂರು ದಿನಗಳ ನಂತರ ಕಚೇರಿಗೆ ಬಂದಿದ್ದರು. ನಾನು ಅವರ ಚೇಂಬರ್‌ಗೆ ಹೋದೆ. ಅವರು ಸಿಟ್ಟಿನಿಂದ ‘ಏನ್ರೀ ಬರೀ ಕಚೇರಿಗೆ ಚಕ್ಕರ್ ಹೊಡೆಯುತ್ತೀರಂತಲ್ಲ’ ಎಂದು ಪ್ರಶ್ನಿಸಿದರು. ‘ನೀವು ಮೂರು ದಿನ ಆಫೀಸ್‌ಗೆ ಬರಲಿಲ್ಲ. ಅದಕ್ಕೆ ಚಕ್ಕರ್ ಹೊಡೆದದ್ದು ಎಂದು ಹೇಳುತ್ತೀರಾ’ ಎಂದು ಕೇಳಿದೆ. ಅದಕ್ಕೆ ಅವರು, ‘ನಾನು ರಜೆ ಹಾಕಿ ಹೋಗಿದ್ದೆ’ ಎಂದರು. ಎಲ್ಲಿಗೆ ಎಂದು ಕೇಳಿದ್ದಕ್ಕೆ ‘ತಿರುಪತಿಗೆ’ ಎಂದರು. ‘ಭಾಷಣದ ವೇದಿಕೆ ನನ್ನ ತಿರುಪತಿ. ನಾನು ಕೂಡ ರಜೆ ಹಾಕಿ ನನ್ನ ತಿರುಪತಿಗೆ ಹೋಗುತ್ತಿರುತ್ತೇನೆ. ನಿಮ್ಮ ರಜೆಗೆ ಚಕ್ಕರ್ ಎನ್ನುವುದಾದರೆ ನನ್ನ ರಜೆಯೂ ಚಕ್ಕರ್’ ಅಂದೆ. ಅವರು ಕೂಡಲೆ ಪ್ಯೂನ್ ಕರೆಸಿ ಹಾಜರಿ ಪುಸ್ತಕ ತರಿಸಿದರು. ವಾರದ ರಜೆ, ಕಿರುಕುಳ ರಜೆ ಮುಂತಾದವು ಕೆಂಪು ಅಕ್ಷರಗಳಲ್ಲಿದ್ದವು. ಚಕ್ಕರ್ ಹಾಕಿ ಗೈರು ಹಾಜರಿಯಾಗಿದ್ದ ಒಂದು ಕುರುಹೂ ಇರಲಿಲ್ಲ. ಸಂಪಾದಕರು ಸಟಕ್ಕನೆ ಖುರ್ಚಿಯಿಂದ ಎದ್ದು ಕೈಮುಗಿದು ಕ್ಷಮೆ ಕೇಳಿದರು. ಆಗ ಮೀಟಿಂಗ್‌ನಲ್ಲಿ ಇದ್ದ ಎಲ್ಲ ಸೀನಿಯರ್‌ಗಳು ಮೌನವಾಗಿದ್ದರು. ನಾನು ನಮಸ್ಕರಿಸಿ ಹೊರ ಬಂದೆ.

ಕೆಲವೊಂದು ಸಲ ದಿನಕ್ಕೆ ಮೂರರಿಂದ ಐದು ಕಡೆ ಭಾಷಣ ಮಾಡಿದ ಉದಾಹರಣೆಗಳಿವೆ. ವಾರದ ರಜೆಯ ಹಿಂದಿನ ದಿನ, ಮುಂಜಾನೆಯ ಡ್ಯೂಟಿ ಮುಗಿಸಿಕೊಂಡು ಸಾಯಂಕಾಲ 5 ಗಂಟೆಗೆ ವಾಯಾ ಹೈದರಾಬಾದ್ ಬಸ್ ಹತ್ತಿ ಬೀದರಗೆ ಹೋಗಿ, ಅಲ್ಲಿ ಬೆಳಿಗ್ಗೆ ತಲುಪಿದ ನಂತರ ಸಭೆಯಲ್ಲಿ ಭಾಗವಹಿಸಿ ಮತ್ತೆ ಸಾಯಂಕಾಲದ ಬಸ್ ಹತ್ತಿ ಬೆಳಿಗ್ಗೆ ಬೆಂಗಳೂರಿಗೆ ಬಂದು ಕರ್ತವ್ಯಕ್ಕೆ ಹಾಜರಾದ ಉದಾಹರಣೆಗಳೂ ಇವೆ.

ಒಂದು ಸಲ ಮಾಲೂರಿನ ದ.ಸಂ.ಸ. ಗೆಳೆಯರು ಅಂಬೇಡ್ಕರ್ ಜಯಂತಿಗೆ ಕರೆದರು. ಒಪ್ಪಿಕೊಂಡೆ. ನಂತರ ಹರಿಹರದ ಗೆಳೆಯರು ಅಂದೇ ಅಂಬೇಡ್ಕರ್ ಜಯಂತಿಗೆ ಕರೆದರು. ನನ್ನ ಹುಚ್ಚುತನಕ್ಕೆ ಮತ್ತು ಒತ್ತಾಯಕ್ಕೆ ಮಣಿದು ಒಪ್ಪಿಕೊಂಡೆ. ಅಂಬೇಡ್ಕರ್ ಜಯಂತಿಯಂದು ಬೆಳಿಗ್ಗೆ ಬೆಂಗಳೂರಿನಿಂದ ಮಾಲೂರಿಗೆ ಹೋದೆ. ಹರಿಹರ ಸಭೆಯ ಬಗ್ಗೆ ತಿಳಿಸಿ, ಸರಿಯಾದ ಸಮಯಕ್ಕೆ ಸಭೆ ಪ್ರಾರಂಭಿಸಲು ಸೂಚಿಸಿದೆ. ಉದ್ಘಾಟನಾ ಭಾಷಣ ಮಾಡಿದೆ. ಮೊದಲೆ ತಿಳಿಸಿದಂತೆ ಭಾಷಣ ಮುಗಿದ ಕೂಡಲೆ ನನ್ನನ್ನು ಬಸ್ ಸ್ಟ್ಯಾಂಡ್‌ಗೆ ಬಿಟ್ಟುಹೋದರು. ಮತ್ತೆ ರೆಡ್‌ಬೋರ್ಡ್ ಬಸ್ ಹತ್ತಿ ಬೆಂಗಳೂರಿಗೆ ಬಂದೆ. ಬಸ್ ಸ್ಟ್ಯಾಂಡಲ್ಲಿ ಇಳಿಯುವುದರೊಳಗಾಗಿ ಹರಿಹರ ಬಸ್ ಹೊರಟಿತ್ತು. ಓಡುತ್ತ ಹೋಗಿ ಬಸ್ ಹತ್ತಿದೆ. ಆ ಕೆಂಪುಬಸ್ ತನ್ನದೇ ಗತಿಯಲ್ಲಿ ಅಲ್ಲಲ್ಲಿ ನಿಲ್ಲುತ್ತ ಸಾಗಿತು. ನನಗೋ ಭಾಷಣದ ಟೆನ್ಷನ್. ಮಧ್ಯಾಹ್ನ ಊಟ ಬೇರೆ ಇಲ್ಲ. ಆದರೆ ಯಾರಿಗೆ ಹೇಳೋದು? ಅಂತೂ ಹರಿಹರ ಬಂದಿತು. ಬಸ್ ಇಳಿದವನೇ ಆಟೋ ಹತ್ತಿ ಸಭೆಯ ವಿಳಾಸ ತಿಳಿಸಿದೆ. ಅಲ್ಲಿಗೆ ಹೋಗಿ ವೇದಿಕೆ ಬಳಿ ಬರುವ ಹೊತ್ತಿಗೆ ಸಭೆ ಮುಗಿಯುವ ಹಂತದಲ್ಲಿತ್ತು. ವಂದನಾರ್ಪಣೆ ಮಾಡುವವರು ಮೈಕ್ ಹತ್ತಿರ ಹೊರಟಿದ್ದರು. ನನ್ನ ನೋಡಿ ಈಗ ಮುಖ್ಯ ಅತಿಥಿಗಳು ಬಂದರು ಎಂದು ಸ್ವಾಗತ ಕೋರಿ ಮಾತನಾಡಲು ಕರೆದರು. ಎದ್ದು ನಿಂತಿದ್ದ ಜನ ಕುಳಿತರು. ನಾನು ಸ್ವಲ್ಪದರಲ್ಲೇ ನನ್ನ ಎಲ್ಲ ಗೋಳು ಹೇಳಿಕೊಂಡು ಭಾಷಣ ಪ್ರಾರಂಭಿಸಿದೆ. ಇಂಥ ಅನೇಕ ಸನ್ನಿವೇಶಗಳಿವೆ.

ಮೇ ದಿನಾಚರಣೆಯ ಭಾಷಣಗಳು ಮತ್ತು ಕಮ್ಯುನಿಸ್ಟ್ ಚಳವಳಿಗಳಿಗೆ ಸಂಬಂಧಿಸಿದ ಭಾಷಣಗಳ ಹೋರಾಟದ ಧ್ವನಿಯೇ ಬೇರೆ. ದಲಿತ ಸಂಘರ್ಷ ಸಮಿತಿ ಮುಂತಾದವುಗಳ ಭಾಷಣಗಳಲ್ಲಿನ ಕಾಳಜಿಗಳು ನನ್ನನ್ನು ಆರ್ದ್ರಗೊಳಿಸುತ್ತಿದ್ದವು. ಅವರ ಕಷ್ಟಗಳು, ಒತ್ತಿಟ್ಟುಕೊಂಡ ನೋವುಗಳು ರೂಪಕಗಳಾಗಿ ಬಂದು ಕಣ್ಣಮುಂದೆ ನಿಲ್ಲುತ್ತಿದ್ದವು. ಕೆಲವೊಂದು ಸಲ ಭಾಷಣ ಮಾಡುವ ಸಂದರ್ಭದಲ್ಲಿ ಬಿಕ್ಕುತ್ತಿದ್ದುದೂ ಉಂಟು. ಕೋಮುಸೌಹಾರ್ದದ ಮತ್ತು ಕಲ್ಯಾಣದಲ್ಲಿ ನಡೆದ ಶರಣರ ಹತ್ಯಾಕಾಂಡದ ಸಂದರ್ಭಗಳ ಭಾಷಣಗಳಲ್ಲಿ ಕೂಡ ಇದೇ ಪರಿಸ್ಥಿತಿಯಾಗುತ್ತಿತ್ತು.

ವಿಜಾಪುರದಲ್ಲಿ ಬಾಲಸಿಂಗ್ ಮಾಸ್ತರರೆಂಬ ಮುಸ್ಲಿಮರೊಬ್ಬರು ಇದ್ದರು. ಅವರು ಆರಂಭದಲ್ಲಿ ಕಮ್ಯುನಿಸ್ಟ್ ಪಕ್ಷ ಕಟ್ಟಿದವರು. ಅವರು ಸಾತ್ವಿಕರು ಆದರೆ ಅವರ ಚಿಂತನೆ ಮತ್ತು ಹೋರಾಟದಿಂದ ಅವರ ಮನೆಗೇನೂ ಲಾಭವಾಗಲಿಲ್ಲ ಎಂದು ಅವರ ವಿಚಾರವಾಗಿ ತಿಳಿಸಿದ ತಂದೆ, ‘ನಾವು ಬಡವರು, ನಮಗೆ ರಾಜಕೀಯ ವಿಚಾರ ಬೇಡ’ ಎಂದು ಹೇಳಿದರು. ಆದರೂ ಅವರು ನನ್ನನ್ನು ತಡೆಯುವ ಗೋಜಿಗೆ ಹೋಗಲಿಲ್ಲ.

1984ರಿಂದ ದಕ್ಷಿಣ ಆಫ್ರಿಕಾ ಕುರಿತು ಓದಲು ಮತ್ತು ಬರೆಯಲು ಪ್ರಾರಂಭಿಸಿದೆ. ಕಪ್ಪುಜನರ ಮಧ್ಯೆ ಮೂಡಿ ಬಂದ ಅಂತರ್ರಾಷ್ಟ್ರೀಯ ನಾಯಕ ನೆಲ್ಸನ್ ಮಂಡೇಲಾ ಅವರನ್ನು ದಲಿತ ಯುವಕರಿಗೆ ಪರಿಚಯಿಸುವ ಮೂಲಕ, ‘ತಮಗೂ ಒಬ್ಬ ಅಂತರ್ರಾಷ್ಟ್ರೀಯ ನಾಯಕ ಇದ್ದಾನೆ’ ಎಂಬ ಭಾವನೆ ಅವರಲ್ಲಿ ಉಂಟಾಗುವ ಉದ್ದೇಶ ಕೂಡ ಇದರಲ್ಲಿ ಅಡಕವಾಗಿತ್ತು. ಪ್ರಜಾವಾಣಿ ಸಾಪ್ತಾಹಿಕ ಪುರವಣಿಯ ಮುಖಪುಟದಲ್ಲಿ ಮತ್ತು ಸುಧಾ ವಾರಪತ್ರಿಕೆಯ ಕವರ್ ಸ್ಟೋರಿಯಾಗಿ ದಕ್ಷಿಣ ಆಫ್ರಿಕಾದ ಹೋರಾಟ ಮತ್ತು ನೆಲ್ಸನ್ ಮಂಡೇಲಾರ ಧೀರೋದಾತ್ತ ವ್ಯಕ್ತಿತ್ವದ ಕುರಿತ ನನ್ನ ಲೇಖನಗಳು ಪ್ರಕಟವಾದವು. ಆಗ ಎಡ, ಪ್ರಜಾಸತ್ತಾತ್ಮಕ ಮತ್ತು ದಲಿತ ಹೋರಾಟಗಾರರು ಸ್ಪಂದಿಸಿದ ರೀತಿ ಅಗಾಧವಾಗಿತ್ತು. ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ (ಎ.ಎನ್.ಸಿ.) ಪ್ರಕಟಿಸಿದ ಫ್ರೀಡಂ ಚಾರ್ಟರನ್ನು ಕನ್ನಡಕ್ಕೆ ‘ಸ್ವಾತಂತ್ರ್ಯ ಘೋಷಣೆ’ ಮಾಡಿ ಅನುವಾದಿಸಿದೆ. ಕಲಾವಿದ ಜಾನ್ ದೇವರಾಜ ಅದನ್ನು ಕಲಾತ್ಮಕವಾಗಿ ಕನ್ನಡದಲ್ಲಿ ಬರೆದರು. ಅವುಗಳ ಸಾವಿರಾರು ಜೆರಾಕ್ಸ್ ಪ್ರತಿಗಳನ್ನು ಮಾಡಿ ಹಂಚಲಾಯಿತು. ವಿವಿಧ ಕಡೆಗಳಲ್ಲಿ ಯುವಕರೇ ಪ್ರತಿ ಮಾಡಿ ಹಂಚಿದರು.

ದಕ್ಷಿಣ ಆಫ್ರಿಕಾ ಹೋರಾಟದ ಬಗ್ಗೆ ರಾಜ್ಯದ ಮೂಲೆ ಮೂಲೆಗಳಲ್ಲಿ ಭಾಷಣ ಮಾಡಿದ್ದೊಂದು ವಿಶೇಷ. ಒಂದು ಸಲ ಕೋಲಾರದ ಹಳ್ಳಿಯೊಂದರಲ್ಲಿ ಅಲ್ಲಿನ ದಲಿತ ಸಂಘರ್ಷ ಸಮಿತಿ ಗೆಳೆಯರು ಆಫ್ರಿಕಾ ಹೋರಾಟದ ಬಗ್ಗೆ ಸಭೆ ಏರ್ಪಡಿಸಿದ್ದರು. ಬೆಂಗಳೂರಿನಿಂದ ಕೋಲಾರಕ್ಕೆ ಹೋದೆ. ಕೋಲಾರ ಬಸ್ ಸ್ಟ್ಯಾಂಡಲ್ಲಿ ಸೈಕಲ್ ಹಿಡಿದುಕೊಂಡು ದ.ಸಂ.ಸ. ಮಿತ್ರರೊಬ್ಬರು ಕಾಯುತ್ತಿದ್ದರು. ಸೈಕಲ್ ಕ್ಯಾರಿಯರ್ ಮೇಲೆ ಹತ್ತಿಸಿಕೊಂಡು ಆ ಹಳ್ಳಿಗೆ ಹೋದರು. ಹಳ್ಳಿಯಲ್ಲಿ ಒಂದು ಕಡೆ ಸೈಕಲ್ ಇಟ್ಟು ನಡೆದುಕೊಂಡು ಹೋಗಬೇಕಾಯಿತು. ಅವರ ಬೆನ್ನು ಹತ್ತಿದೆ. ಹೋಗುವಾಗ ಹಳ್ಳವೊಂದನ್ನು ದಾಟಬೇಕಾಯಿತು. ಚಪ್ಪಲಿ ಮತ್ತು ಒಂದಿಷ್ಟು ಪ್ಯಾಂಟ್ ನೆನೆದವು. ಮುಂದೆ ಕಲ್ಲು ಮುಳ್ಳು ದಾಟುತ್ತ ಮುಂದೆ ಹೋದೆವು. ಅದಾಗಲೇ ಸಾಯಂಕಾಲ ಐದು ಗಂಟೆಯಾಗಿತ್ತು. ಜಿಟಿ ಜಿಟಿ ಮಳೆ ಶುರುವಾಯಿತು. ‘ಇನ್ನೂ ಎಲ್ಲಿಗೆ ಹೋಗೋದು’ ಎಂದು ಕೇಳಿದೆ. ಆತ ಎದುರಿಗೆ ದೂರದಲ್ಲಿ ಕಾಣುತ್ತಿದ್ದ ವಿಶಾಲವಾದ ಹಳೆ ದೇವಾಲಯವೊಂದನ್ನು ತೋರಿಸಿ ಅಗೋ ಅಲ್ಲಿಗೆ ಎಂದು ಹೇಳಿದ. ದ.ಸಂ.ಸ. ಕಾರ್ಯಕರ್ತರು ಆ ಹಾಳು ಗುಡಿಯಲ್ಲಿ ಸಭೆಯನ್ನು ಏರ್ಪಡಿಸಿದ್ದರು. ಪಟ್ಟಣದಲ್ಲಿನ ಸಭಾಭವನಗಳಿಗೆ ಹಣ ಕೊಡಲಿಕ್ಕಾಗದೆ ಇಲ್ಲಿ ಸಭೆ ಏರ್ಪಡಿಸಿದ್ದಾರೆ ಎಂಬುದು ಸ್ಪಷ್ಟವಾಗಿತ್ತು. ಆ ಹಾಳು ಗುಡಿಯ ಮುಂದೆ ಹೋದೆವು. ಒಬ್ಬರೂ ಕಾಣಲಿಲ್ಲ. ಅಷ್ಟೊತ್ತಿಗೆ ಒಳಗಿನಿಂದ ಒಬ್ಬ ಯುವಕ ಬಂದ. ದೇವಾಲಯದೊಳಗೆ ಸಂಪೂರ್ಣ ಕತ್ತಲು ಕವಿದಿತ್ತು. ಇದೇನು ಹೀಗೆ ಎಂದಾಗ, ಆತ ‘ಇರುವುದೊಂದೇ ಮೋಂಬತ್ತಿ ನಿಮ್ಮ ಬರುವಿಗೆ ಕಾಯುತ್ತಿದ್ದೆವು’ ಎಂದ. ಒಳಗೆ ಕಾಲಿಟ್ಟಕೂಡಲೆ ಆತ ಮೋಂಬತ್ತಿ ಹಚ್ಚಿದ. ಅಲ್ಲಿ ಕುರ್ಚಿ ಟೇಬಲ್ ಏನೂ ಇರಲಿಲ್ಲ. ಆ ಮೋಂಬತ್ತಿಯ ಬೆಳಕಲ್ಲಿ ನೂರಾರು ಯುವಕರು ಕುಳಿತಿದ್ದು ಮಸುಕು ಮಸುಕಾಗಿ ಕಾಣುತ್ತಿತ್ತು. ಅವರ ಕಣ್ಣುಗಳು ಮಾತ್ರ ನಕ್ಷತ್ರಗಳ ಹಾಗೆ ಹೊಳೆಯುತ್ತಿದ್ದವು. ಕಷ್ಟಪಟ್ಟು ಇಲ್ಲಿಗೆ ಬಂದದ್ದು ಸಾರ್ಥಕವೆನಿಸಿತು. ಆ ಸಭೆಯಲ್ಲಿ ಸ್ವಾಗತ ವಂದನೆಗಳ ಉಸಾಬರಿ ಇರಲಿಲ್ಲ. ಅವರೆಲ್ಲ ತದೇಕ ಚಿತ್ತದಿಂದ ಕರಿಯರ ಹೋರಾಟಗಳ ಯಾತನಾಮಯ ಬದುಕಿನ ಘಟನೆಗಳನ್ನು ಕೇಳುತ್ತ ಮಂತ್ರಮುಗ್ಧರಾಗಿದ್ದರು.

ಭಾಷಣ ಮುಗಿಸಿ ಬರುವಾಗ ಕತ್ತಲಾಗಿತ್ತು. ನಾನು ಯಾವುದೋ ಬಸ್ ಹಿಡಿದುಕೊಂಡು ಬೆಂಗಳೂರು ತಲುಪಿದೆ. ದ.ಸಂ.ಸ. ಗೆಳೆಯರೊಂದಿಗೆ ನೂರಾರು ಸಭಾ ಪ್ರಸಂಗಗಳಿವೆ. ಅವುಗಳಲ್ಲಿ ಈಸೂರು, ಹುಣಸೂರು ತಾಲ್ಲೂಕು ಬಲ್ಲೇನಹಳ್ಳಿ, ದೇವರಾಯನದುರ್ಗದ ಶಿಬಿರ, ನಾಗವಾರ ಮುಂತಾದ ಕಡೆಗಳ ಸಭೆಗಳು ಪದೆ ಪದೆ ನೆನಪಾಗುತ್ತಿವೆ.

ಹುಣಸೂರು ತಾಲ್ಲೂಕಿನ ಬಲ್ಲೇನಹಳ್ಳಿಯಲ್ಲಿ ಜೇನುಕುರುಬರೇ ಹೆಚ್ಚಾಗಿರೋದು. ತಮಿಳುನಾಡು ಕಡೆಯ ಮೋಹಿನುದ್ದೀನ ಎಂಬ ಲಬ್ಬೆ ಮುಸ್ಲಿಂ ಶ್ರೀಮಂತ ಕುಳ ಆ ಪ್ರದೇಶದಲ್ಲಿನ ಕಾಡು ಕಡಿದು ಇದ್ದಿಲು ತಯಾರಿಸುವ ಭಟ್ಟಿ ಸ್ಥಾಪಿಸಿದ್ದ. ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಆತ ಆಪ್ತನಾಗಿದ್ದರಿಂದ ಅರಣ್ಯಾಧಿಕಾರಿಗಳು ಆತನನ್ನು ಇದಿರು ಹಾಕಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಆತ ಕಾಡನ್ನು ಇದ್ದಿಲು ಮಾಡುವುದರಲ್ಲಿ ತಲ್ಲೀನನಾದ. ಇದರಿಂದ ಕಾಡುಕುರುಬರಿಗೆ ಬಹಳ ಸಂಕಟವಾಗಿತ್ತು. ಕಾಡಲ್ಲಿ ಜೇನುತುಪ್ಪ ಸಂಗ್ರಹಿಸಿ ತಂದು ಮಾರುವುದು ಅವರ ಮೂಲೋದ್ಯೋಗವಾಗಿತ್ತು. ಅವರು ಕಡುಬಡವರಾಗಿದ್ದರು. ಇದು 40 ವರ್ಷಗಳಿಗೂ ಹಿಂದಿನ ಘಟನೆ.

ಹುಣಸೂರಿನಿಂದ 15 ಕಿ.ಮೀ. ದೂರದಲ್ಲಿರುವ ಅದೇ ಬಲ್ಲೇನಹಳ್ಳಿಯ ಹಳ್ಳಿಯ ಮುಸ್ಲಿಂ ಯುವಕ ಬಾಬು (ರಫೀಕ್ ಅಹ್ಮದ್) ಈ ಜೇನುಕುರುಬರ ಬಗ್ಗೆ ಕಾಳಜಿ ಹೊಂದಿದ್ದ. ಆತ ಹುಣಸೂರಿನಿಂದ 10 ಕಿ.ಮೀ. ದೂರದ ಹಳ್ಳಿ ರತ್ನಪುರಿಯ ದಲಿತ ಸಂಘರ್ಷ ಸಮಿತಿ ನಾಯಕ ಹರಿಹರ ಆನಂದ ಅವರ ಆತ್ಮೀಯ ಮಿತ್ರನೂ ಸಹಪಾಠಿಯೂ ಆಗಿದ್ದ. ಹೀಗಾಗಿ ದಲಿತ ಸಂಘರ್ಷ ಸಮಿತಿಯ ಜೊತೆ ನಿಕಟ ಸಂಪರ್ಕ ಹೊಂದಿದ್ದ. ಜೇನುಕುರುಬರಿಗೆ ಆತ್ಮಸ್ಥೈರ್ಯ ತುಂಬುವ ದೃಷ್ಟಿಯಿಂದ ಹರಿಹರ ಆನಂದ ಅವರು ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಬಿ. ಕೃಷ್ಣಪ್ಪ ಅವರಿಗೆ ಈ ವಿಚಾರ ತಿಳಿಸಿದರು. ಬಿ. ಕೃಷ್ಣಪ್ಪ ಅವರು ಮೈಸೂರಿಗೆ ಬಂದರು. ಆಗ ನಾನು ಮೈಸೂರಲ್ಲಿ ಇದ್ದೆ. ನಾನು ಮತ್ತು ದೇವಯ್ಯ ಹರವೆ ಅವರು ಕೃಷ್ಣಪ್ಪ ಅವರ ಜೊತೆ ರತ್ನಪುರಿಗೆ ಹೋಗಿ ಹರಿಹರ ಆನಂದ ಅವರನ್ನು ಭೇಟಿ ಮಾಡಿದ ನಂತರ ಬಲ್ಲೇನಹಳ್ಳಿಗೆ ಹೋದೆವು. ಅಲ್ಲಿ ಜೇನುಕುರುಬರ ಸಭೆ ಸೇರಿಸಿದೆವು.

ಅದು ನನ್ನ ಜೀವನದಲ್ಲಿ ಎಂದೂ ಮರೆಯದ ಸಭೆಯಾಗಿ ಉಳಿಯಿತು. ನಾನು ಹೆಚ್ಚು ದುಃಖಿಯಾದ ದಿನವದು. ಆ ಬಡ ಹಾಗೂ ಮುಗ್ಧ ಜೇನುಕುರುಬರು ಹೆಂಡಿರು ಮಕ್ಕಳೊಂದಿಗೆ ಸಭೆ ಸೇರಿದರು. ಒಡೆಯ (ಬಲ್ಲೇನಹಳ್ಳಿ ಜೇನುಕುರುಬರ ನಾಯಕ) ಬಂದು ಮಧ್ಯೆ ಕುಳಿತ. ಆತನ ಅಂಗಿ ತೇಪೆ ಹಚ್ಚಲು ಸಾಧ್ಯವಾಗದಷ್ಟು ಹರಿದಿತ್ತು. ನಿರಕ್ಷರಿಯಾಗಿದ್ದ ಆತ ಮುಗ್ಧನೂ ಗಂಭೀರನೂ ಆಗಿದ್ದ. ತನ್ನ ಜನರ ನೋವಿನ ಬಗ್ಗೆ ದುಃಖ ವ್ಯಕ್ತಪಡಿಸಿದ.

ಆ ಜೇನು ಕುರುಬರು ಎಷ್ಟು ಬಡವರೆಂದರೆ, ರಾತ್ರಿ ಗುಡಿಸಲಿನ ಅಂಗಳದಲ್ಲಿ ಕಟ್ಟಿಗೆ ಗುಂಪು ಮಾಡಿ ಕೆಂಡ ತಯಾರಿಸಿದ ನಂತರ ಅದರ ಮಗ್ಗಲು ಮಲಗುತ್ತಿದ್ದರು. ಹೆಂಡತಿಯಾದವಳು ಕೆಂಡದ ಪಕ್ಕ ಬೆತ್ತಲೆ ಮಲಗಿ ಸೀರೆ ಎಳದುಕೊಂಡು ಗಂಡ ಮತ್ತು ಮಕ್ಕಳಿಗೂ ಹೊಚ್ಚುತ್ತಿದ್ದಳು. ಹೀಗೆ ಅವರು ಚಳಿಯಲ್ಲಿ ಕೆಂಡದ ಮಗ್ಗಲು ಮಲಗಿ ರಾತ್ರಿ ಕಳೆಯುತ್ತಿದ್ದರು. ಹಾಗೆ ಮಲಗಿದಾಗ ಕೆಂಡದಲ್ಲಿ ಕೈ ಬಿದ್ದು ಸುಟ್ಟುಕೊಂಡ ಅನೇಕ ಮಹಿಳೆಯರು ಆ ಸಭೆಯಲ್ಲಿದ್ದರು!

ಕೆಲವರ ಕಿವಿಯಿಂದ ರಕ್ತ ಸುರಿಯುತ್ತಿತ್ತು. ಊಟಕ್ಕೆ ಗತಿ ಇಲ್ಲದ ಸಂದರ್ಭದಲ್ಲಿ ತಾವರೆ ಗೆಡ್ಡೆಗಳನ್ನು ಕುದಿಸಿ ತಿಂದ ಪರಿಣಾಮವಾಗಿ ಹೀಗಾಗುತ್ತದೆ ಎಂದು ಅವರನ್ನು ವಿಚಾರಿಸಿದಾಗ ತಿಳಿದುಬಂದಿತು. ಕೆಲ ಜೀತದಾಳುಗಳೂ ಅವರೊಳಗೆ ಇದ್ದರು. ಅವರ ತಂದೆಯಂದಿರು ತಮ್ಮ ಮದುವೆಯ ಸಂದರ್ಭದಲ್ಲಿ ಮಾಡಿದ ಸಾಲವನ್ನು ನಂತರ ಅವರ ಮಕ್ಕಳು ಜೀತ ಮಾಡುತ್ತ ತೀರಿಸುತ್ತಿದ್ದರು! ಉಪ್ಪಿಟಮ್ಮ (ಶಾಲೆಯಲ್ಲಿ ಮಕ್ಕಳಿಗೆ ಉಪ್ಪಿಟ್ಟು ಮಾಡಿಕೊಡುವ ಮಹಿಳೆ) ಕೂಡ ಅವರ ಕರುಣಾಜನಕ ಬದುಕಿನ ಕುರಿತು ವಿವರಿಸಿದರು. ಅಂದು ಆ ಸಭೆಯಲ್ಲಿ ಧೈರ್ಯ ತುಂಬುವ ಮಾತುಗಳನ್ನಾಡಿದ್ದು ಅವರಿಗೆ ಹಿಡಿಸಿತು. ಇವರನ್ನೆಲ್ಲ ಸಂಘಟಿಸಿದ್ದ ರಫೀಕ್ ಅಹ್ಮದ್ ಕೂಡ ಖುಷಿಪಟ್ಟ.

ಪಿ.ಯು.ಸಿ. ವರೆಗೆ ಓದಿದ್ದ ಆ ಸುಂದರ ಯುವಕ ರಫೀಕ್ ತಂಬಾಕು ಬೆಳೆಗಾರನಾಗಿದ್ದ. ಆತ ಇನ್ನೂ ಮದುವೆಯಾಗಿದ್ದಿಲ್ಲ. ಆತನಿಗೆ ಮದುವೆಯಾಗದ ಇಬ್ಬರು ಸಹೋದರಿಯರಿದ್ದರು. ತಂದೆ ತೀರಿಕೊಂಡಿದ್ದರಿಂದ ತಾನೇ ಮುಂದೆ ನಿಂತು ಅವರ ಮದುವೆ ಮಾಡಿದ ನಂತರ ಮದುವೆಯಾಗುವ ಯೋಚನೆ ಇದ್ದಿರಬಹುದು. ರಾಜಕೀಯ ಹಿಡಿತವಿದ್ದ ಆ ಶ್ರೀಮಂತ ಮುಸ್ಲಿಮನನ್ನು ಎದುರು ಹಾಕಿಕೊಂಡು ಈ ಕಷ್ಟಜೀವಿಗಳ ಪರವಾಗಿ ನಿಂತ ಆತನ ಧೈರ್ಯ ಮೆಚ್ಚುವಂಥದ್ದಾಗಿತ್ತು. ಜೇನುಕುರುಬರನ್ನು ಹೋರಾಟಕ್ಕೆ ಅಣಿ ಮಾಡಲು ಯತ್ನಿಸುತ್ತಿದ್ದ. ಅವರಿಗೆ ನ್ಯಾಯ ಒದಗಿಸುವುದು ಆತನ ಉದ್ದೇಶವಾಗಿತ್ತು. ಹೀಗಾಗಿ ಆ ಕಾಡು ಸುಡುವ ಶ್ರೀಮಂತ ಮುಸ್ಲಿಮನ ಕೆಂಗಣ್ಣಿಗೆ ಗುರಿಯಾಗಿದ್ದ. ನಾವು ಮೂವರೂ ಆ ಜೇನುಕುರುಬರಿಗೆ ಧೈರ್ಯ ತುಂಬಿ ಮೈಸೂರಿಗೆ ವಾಪಸಾದೆವು. ನಂತರ ಕೃಷ್ಣಪ್ಪ ಅವರು ಹೋರಾಟವನ್ನು ಹೇಗೆ ರೂಪಿಸುತ್ತಾರೆಂಬ ಯೋಚನೆಯಲ್ಲಿದ್ದೆ.

ಮುಂದೆ ಕೆಲವೇ ದಿನಗಳ ನಂತರ ಹರಿಹರ ಆನಂದ ಅವರಿಂದ ಆಘಾತಕರವಾದ ಸುದ್ದಿ ಬಂದಿತು. ದುಷ್ಕರ್ಮಿಗಳು ರಫೀಕ್ ಅಹ್ಮದನ ಕೊಲೆ ಮಾಡಿದ್ದರು. ಅದೊಂದು ವ್ಯವಸ್ಥಿತವಾದ ಕೊಲೆಯಾಗಿತ್ತು. ಆತ ರಾತ್ರಿ ಬೈಕಲ್ಲಿ ಬಲ್ಲೇನಹಳ್ಳಿಗೆ ಬರುವಾಗ ಮಧ್ಯದಲ್ಲಿ ದುಷ್ಕರ್ಮಿಗಳು ರಸ್ತೆಗೆ ಅಡ್ಡಲಾಗಿ ಉದ್ದನೆಯ ಚೈನ್ ಕಟ್ಟಿದ್ದರು. ವೇಗದಲ್ಲಿ ಬರುತ್ತಿದ್ದ ರಫೀಕ್ ಆ ಜಾಗದಲ್ಲಿ ಅಪಘಾತಕ್ಕೀಡಾಗಿ ಸ್ಥಳದಲ್ಲೇ ಮೃತಪಟ್ಟ!

ಸುದ್ದಿ ತಿಳಿದ ನಂತರ ಕೃಷ್ಣಪ್ಪ ಅವರು ಭದ್ರಾವತಿಯಿಂದ ಬಂದರು. ಮತ್ತೆ ನಾವು ಬಲ್ಲೇನಹಳ್ಳಿಗೆ ಹೋಗಿ ರಫೀಕ್ ತಾಯಿ ಮತ್ತು ಸಹೋದರಿಯರಿಗೆ ಭೇಟಿಯಾದೆವು. ಅವರ ಸ್ಥಿತಿ ನೋಡಲಸಾಧ್ಯವಾಗಿತ್ತು. ರಫೀಕ್ ಸೋದರಮಾವ ಹುಣಸೂರಲ್ಲಿದ್ದದ್ದು ರಫೀಕ್ ತಾಯಿಯಿಂದ ಗೊತ್ತಾಯಿತು. ಅವರಿಂದಲಾದರೂ ಪೊಲೀಸ್ ಕಂಪ್ಲೇಂಟ್ ಕೊಡಿಸುವ ಉದ್ದೇಶದಿಂದ ಹುಣಸೂರಿಗೆ ಹೋಗಿ ಅವರ ಮನೆ ಹುಡುಕಿ ಭೇಟಿಯಾದೆವು. ಅವರು ನಮಗೆ ಮನೆಯ ಒಳಗೂ ಕರೆಯಲಿಲ್ಲ. ‘ಆಗಿದ್ದಾಯಿತು. ಏನೂ ಮಾಡಲಿಕ್ಕಾಗುವುದಿಲ್ಲ. ಕಂಪ್ಲೇಂಟ್ ಕೊಟ್ಟು ನಾವು ಬದುಕಿ ಉಳಿಯಲೂ ಸಾಧ್ಯವಿಲ್ಲ’ ಎಂದು ಹತಾಶೆಯಿಂದ ಹೇಳಿದರು. ನಾವು ವಾಪಸಾದೆವು. ಹೀಗೆ ಒಬ್ಬ ನ್ಯಾಯಪಕ್ಷಪಾತಿ ಯುವಕನ ಕೊಲೆ ಹೇಳ ಹೆಸರಿಲ್ಲದೆ ನಡೆದು ಹೋಯಿತು!

(ಮುಂದುವರೆಯುವುದು…)