ಅದು ಸುಮಾರು ಮಧ್ಯಾಹ್ನ ಮೂರರ ಹೊತ್ತು. ಮೋಡ ಕವಿದಿತ್ತು. ನನ್ನ ಕೈಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಕಾಸರಗೋಡು, ಗಡಿ ನಾಡ ಘಟಕದವರು ಕತೆಗೆ ಪ್ರಥಮ ಬಹುಮಾನವಿತ್ತ ಪ್ರಶಸ್ತಿ ಪತ್ರವಿತ್ತು. ಆ ದಿನ ನನ್ನ ನೆಚ್ಚಿನ ಕತೆಗಾರ ಎಂ.ವ್ಯಾಸ ಬರುವರೆಂದು ಕಾತುರದಲ್ಲಿ ಕಾದಿದ್ದೆ. ಹೊತ್ತು ಕಳೆದರೂ ಮಧ್ಯಾಹ್ನ ದಾಟಿದರೂ ಅವರು ಬರದಿದ್ದುದರಿಂದ ಅವರ ಮನೆಗೆ ಹೋಗಬೇಕೆಂದು ಹೊರಟು ನಿಂತೆ. ಹೇಗೋ ಅವರ ಮನೆಯ ನಂಬರ್ ಪಡೆದುಕೊಂಡು ಫೋನಿಸಿದೆ. ಭೇಟಿಯಾಗುವ ಬಯಕೆ ನಿವೇದಿಸಿದೆ. ಆಹ್ವಾನವಿತ್ತರು.

ಸಾಹಿತ್ಯವನ್ನು ಓದುವುದಕ್ಕೆ ಮೊದಲು ಶುರು ಹಚ್ಚಿದ್ದು ಕುವೆಂಪು ಮತ್ತು ವ್ಯಾಸರನ್ನು ಓದುತ್ತಾ. ಅದರಲ್ಲೂ ವ್ಯಾಸರು ನನ್ನನ್ನು ಯಾವ ಪರಿ ಆವರಿಸಿಕೊಂಡಿದ್ದರೆಂದರೆ ಈ ಮನುಷ್ಯ ಮನುಷ್ಯನ ಅಂತರಂಗವನ್ನು ಹೇಗೆ ಇಷ್ಟು ಗಾಢವಾಗಿ ಬಗೆದು ಬರೆಯುತ್ತಾರೆಯೆಂದು ಅಚ್ಚರಿ ಪಡುತ್ತಲೇ, ಬಿಡಿಬಿಡಿಯಾಗಿ ತುಷಾರ, ಉದಯವಾಣಿ, ಮಯೂರದಲ್ಲಿ ಬರುತ್ತಿದ್ದ ಅವರ ಬರಹಗಳನ್ನು ಓದುತ್ತಲೇ ಬೆಳೆದೆ.

ಈ ಕತೆಗಳು ನನ್ನನ್ನು ಎಷ್ಟರ ಮಟ್ಟಿಗೆ ತಟ್ಟಿ  ಬಿಟ್ಟಿದ್ದವೆಂದರೆ ಅವರ ‘ಬಿಂಬ’ ಎಂಬ ಕತೆಯಲ್ಲಿ ‘ಮಹೀ’ ಯೆಂಬ ಕಥಾನಾಯಕ ಹೇಳುವ ಸಂಭಾಷಣೆ ಹೀಗಿದೆ: “ಹೀಗೆ ಹೇಳಿದರೆ ಅಪರಾಧವಾಗುತ್ತೋ ಗೊತ್ತಿಲ್ಲ. ಆದರೂ ಹೇಳದಿರಲಾರೆ. ಜನದಟ್ಟಣೆಯ ಬೀದಿಗಳಲ್ಲಿ ಅಲೆದಾಗ, ಬಸ್ಸುಗಳಲ್ಲಿ, ರೈಲುಗಳಲ್ಲಿ, ಹೆಣ್ಣು ಮೈಗಳಿಗೆ ಒತ್ತಿ ನಿಂತಾಗ, ಅಂಗೈಗಳಲ್ಲಿ, ಮುಂಗೈಗಳಲ್ಲಿ ಮತ್ತು ದೇಹದ ಎಲ್ಲಾ ಭಾಗಗಳಿಂದಲೂ ಆಕಾರವನ್ನು, ಮೃದುವನ್ನು, ಬಿಸಿಯನ್ನು ಮುಟ್ಟಿದಾಗ ಕಾಮವೊಂದೇ ಜಾಗೃತವಾಗುತ್ತಿರಲಿಲ್ಲ ಪದ್ದೀ… ಒಂದು ರೀತಿಯ ಭದ್ರತೆ ನೆಮ್ಮದಿ, ಶಾಂತಿ ಮನಸ್ಸನ್ನು ಆಹ್ಲಾದಕರವಾಗಿ ಆವರಿಸಿಬಿಡುತ್ತಿತ್ತು. ಇದರ ಮೆಲುಕಾಟದಲ್ಲಿ ಮಂಗಳೂರಿನ ಜನದಟ್ಟಣೆಯ ಸರ್ವೀಸ್ ಬಸ್ಸು, ಸಿಟಿ ಬಸ್ಸುಗಳಲ್ಲಿ ಹೆಂಗಳೆಯರ ಮೈಯನ್ನು ಸ್ಪರ್ಶಿಸಲು ಹಾತೊರೆಯುತ್ತಿರುವ, ಮಗಳನ್ನು ಪಕ್ಕದಲ್ಲಿಟ್ಟುಕೊಂಡು ಹೆಂಗಸೊಬ್ಬಳ ಹಿಂಡಿ ಹಿಪ್ಪೆ ಮಾಡಲು ಕೈ ಚಾಚಿದ ಜೀವಗಳಲ್ಲಿ ಇಂತಹದ್ದೆ ಭಾವವಿತ್ತೇ???!!!” ಎಂದು ಪ್ರಶ್ನಿಸಿಕೊಳ್ಳುತ್ತಾ ವ್ಯಾಸರ ಬರಹ ಮನುಷ್ಯನ ಬದುಕಿನ ವಿಕ್ಷಿಪ್ತತೆಗಳಿಗೆ ಎಷ್ಟು ಸನಿಹ ಎಂದುಕೊಂಡಿದ್ದೇನೆ.

ಇಂದಿಗೂ ನನ್ನನ್ನು ವ್ಯಾಸರಷ್ಟು ಗಾಢವಾಗಿ ತಟ್ಟಿದ ಬರಹಗಾರನಿಲ್ಲ. ಈ ಬಗ್ಗೆ ಸುಳ್ಳು ಹೇಳಬೇಕೆಂದಿಲ್ಲ. ಬೇರೆ ಬರಹಗಾರರು ನಾನಾ ಕಾರಣಕ್ಕೆ ಇಷ್ಟವಾಗುತ್ತಾರೆ. ಆದರೆ, ವ್ಯಾಸರು ನನ್ನನ್ನು ಆವರಿಸುತ್ತ ಬರೆಯುವ ಹಸಿವನ್ನು ಹುಟ್ಟಿಸಿದರು. ಅಂತಹ ಕತೆಗಾರನನ್ನು ಜೀವನದಲ್ಲಿ ಓಮ್ಮೆಯಾದರೂ ಕಾಣುವ ಆಸೆ ನನ್ನದಾಗಿತ್ತು. ಅದು ಈ ದಿನ ಸಫಲಗೊಳ್ಳುವುದರಲ್ಲಿತ್ತು.

ಕಾಸರಗೋಡು ಹಳೇ ಬಸ್ಸು ನಿಲ್ದಾಣದಿಂದ ಸಿಟಿ ಬಸ್ಸು ಹಿಡಿಯಬೇಕಿತ್ತು. ಹಿಡಿದೆ. ನಾನು ಕಾಸರಗೋಡಿಗೆ ಕಾಲಿತ್ತಿದ್ದೇ ಮೊದಲು. ಅವರಿವರಲ್ಲಿ ಕೇಳುತ್ತಾ ಮಧೂರು ಹೋಗುವ ಬಸ್ಸಿನಲ್ಲಿ ಹತ್ತಿ ರಾಮದಾಸ ನಗರ ಸಮೀಪ (ಮನೆಯ ವಿಳಾಸ ಈಗ ಸರಿ ನೆನಪಿಲ್ಲ) ಬಸ್ಸು ನಿಲ್ದಾಣದಲ್ಲಿ ಇಳಿದೆ. ಆಗ ಜೋರು ಮಳೆ ಹುಯ್ಯುತ್ತಿತ್ತು. ರಸ್ತೆಯಲ್ಲಿ ನೀರು ಹರಿಯುತ್ತಿತ್ತು. ಸಮೀಪ ನಿಲ್ದಾಣದಲ್ಲಿ ನಿಂತು ಅವರ ಹೆಸರು ಹೇಳಿದೆ ಒಂದೆರಡು ಅಪರಿಚಿತರಿಗೆ. ಯಾರಿಗೂ ಗೊತ್ತಾಗಲಿಲ್ಲ. ಕೆಲ ಮಲೆಯಾಳಿಗಳಲ್ಲಿ ಕೇಳಲು ಭಾಷೆಯ ತೊಡಕಿತ್ತು. ಆಗ ಬಂದ ಹೆಂಗಸೊಬ್ಬಳು ಆ ಡಾಕ್ಟ್ರ ಮನೆಯಲ್ವಾ? ಇದೆಯೆಂದು ನಿಲ್ದಾಣ ಹಿಂದಿನ ಮನೆ ತೋರಿಸಿದರು. ಕೃಪಾನಿಧಿ ಮನೆಯ ಹೆಸರು.

ನನ್ನ ಮನ ಲೋಕದಲ್ಲಿ ಶಂಕರಿ ನದಿಯ ತಟಗಳು, ದುರ್ಗಾಪುರಗಳು ತುಂಬಿದ್ದವು. ಕಬ್ಬಿಣದ ಗೇಟಿನ ಬಾಗಿಲಿದ್ದ ಮನೆ. ಅದರ ಪಕ್ಕದಲ್ಲಿ ಇನ್ನೊಂದು ಮನೆ. ಸುತ್ತಾ ತೋಟ. ಜೋರು ಮಳೆಯಲ್ಲಿ ಸಂಪೂರ್ಣ ಒದ್ದೆಯಾಗಿದ್ದೆವು ನಾನು ಮತ್ತು ನನ್ನ ಗೆಳತಿ. ಬಾಗಿಲಲ್ಲಿ ನಿಂತಿದ್ದ ಉದ್ದನೆಯ ಜೀವ ನಮ್ಮನ್ನು ಒಳ ಕರೆಯಿತು. ಅವರ ಕಥಾ ಪಾತ್ರಗಳಲ್ಲಿ ಬರುವ ಪಾತ್ರವೇ ಎದುರು ನಿಂತಂತೆ ಗೋಚರಿಸಿತ್ತು ಕಪ್ಪು ಕಣ್ಣುಗಳ ಸುತ್ತಾ ಕಪ್ಪಾಗಿದ್ದವು.

ಒದ್ದೆ ಮೈಯನ್ನು ಒರೆಸಲು ಕೊಟ್ಟ ಟವೆಲಿನಲ್ಲಿ ಮೈವರೆಸುತ್ತಾ ನನ್ನ ಪರಿಚಯ ಹೇಳಿಕೊಂಡೆ. ಆಗಲೇ ಗೊತ್ತಾಗಿದ್ದು ನನ್ನ ಕತೆಯನ್ನು ಆರಿಸಿದವರಲ್ಲಿ ಅವರು ಒಬ್ಬರಾಗಿದ್ದರಂತೆ. ಮಾತುಗಳು ಮುಂದುವರೆಯಿತು. ನನ್ನ ಗೆಳತಿಗೋ ಸಾಹಿತ್ಯವೆಂದರೆ ಸುಡು ತಿಂದರೂ ತಿಳಿಯದು. ಇಂಗ್ಲೀಷ್ ಸಾಹಿತ್ಯ ಬರೀ ಪರೀಕ್ಷೆಗಾಗಿ ಓದಿಕೊಂಡವಳು ಅವರ ಪತ್ನಿಯೊಡನೆ ಮಾತಿಗೆ ನಿಂತಳು ಮನೆಯೊಳಗೆ ಆ ದಿನ ನಾವು ಸಾಹಿತ್ಯದ ಬಗ್ಗೆಗೆನೂ ಹೆಚ್ಚಾಗಿ ಚರ್ಚಿಸಲಿಲ್ಲ. ಮಾತು ನನ್ನ ಕುಟುಂಬ ಅವರ ಕುಟುಂಬದತ್ತ ಹೊರಳಿತು.

ಅವರ ಮೊಮ್ಮಗನ ಕಲಾಕೃತಿಯನ್ನು ತೋರಿಸಿದರು. ಹೀಗೆ ಮಾತನಾಡುತ್ತಾ ಅವರ ಕತೆಗಳ ಬಗ್ಗೆ ಹೊರಳಿಕೊಂಡೆ. ನಾ ಓದಿದ ಅವರ ಕತೆಗಳ ಬಗ್ಗೆ ಹೇಳಿದೆ. ಸ್ವಲ್ಪ ಉತ್ಸುಕರಾದಂತೆ ಕಂಡರು. ಕಿರಿ ವಯಸ್ಸಿನಲ್ಲಿ ಬರೆಯಲು ಶುರು ಹಚ್ಚಿಕೊಂಡಿದ್ದನ್ನು ನುಡಿದರು. ನಿಧಾನವಾಗಿ ಬರವಣಿಗೆ, ಆ ಬಾಲ್ಯದಲ್ಲಿ ನಡೆದ ದುರಂತದ ಬಗ್ಗೆ ಹೇಳಿಕೊಂಡರು.

ಅವರ ಕತೆಗಳ ಬಗ್ಗೆ ಸಾಹಿತ್ಯ ಲೋಕ ಹೆಚ್ಚು ಗಮನ ಹರಿಸದಿದ್ದುದರ ಬಗ್ಗೆ ನಿರ್ಲಿಪ್ತತೆ ತೋರಿಸಿದರು. ಒಂದು ಸಲ ಯಾವುದೋ ಸನ್ಮಾನಕ್ಕೆ ಕರೆದಿದ್ದರಂತೆ. ಸನ್ಮಾನಕ್ಕೆ ಹೋದರೆ ನಮ್ಮನ್ನು ಮಾತನಾಡಿಸುವವರಿಲ್ಲ ಕನಿಷ್ಠ ಸನ್ಮಾನಿಸುವಾಗ ನಮ್ಮ ಮುಖ ಕೂಡಾ ನೋಡುವುದಿಲ್ಲ ಬರೇ ಪತ್ರಿಕೆಗಳಿಗೆ ಪೋಸ್ ಕೊಡುತ್ತಾರೆ. ಅದೇ ಕೊನೆ ಮತ್ತೆ ಯಾವುದೇ ಸನ್ಮಾನಕ್ಕೆ ಹೋಗುವುದಿಲ್ಲ ಎಂದರು. ಹೌದು ವ್ಯಾಸರೆಂದರೆ ಸಭೆ ಸನ್ಮಾನಗಳಿಂದ ಬಹು ದೂರ.

ವ್ಯಾಸರ ಬರಹದ ಬಗ್ಗೆ ಸಾಹಿತ್ಯ ಲೋಕದಲ್ಲಿ ಸರಿಯಾದ ಚರ್ಚೆ ನಡೆಯಲಿಲ್ಲ. ಅವರು ಪ್ರಚಾರದಿಂದ ದೂರವಿದ್ದರು. ಒಂದು ರೀತಿ ಅಸ್ಪೃಶ್ಯನಂತೆ. ಒಂದಿಬ್ಬರೂ ಅವರ ಬರಹದ ಬಗ್ಗೆ ಪಿ.ಹೆಚ್.ಡಿ ಮಾಡಲು ಬಂದಿದ್ದರೂ ಮತ್ತೆ ಬರಲಿಲ್ಲವಂತೆ. ಅಥವಾ ಇನ್ನೇನೋ ಕಾರಣಗಳಿಂದ ಸಾಧ್ಯವಾಗಲಿಲ್ಲವಂತೆ.

ಮತ್ತೆ ನನ್ನ ಬರವಣಿಗೆಯ ವಿಷಯಕ್ಕೆ ಬಂದಾಗ ‘ವಿಮರ್ಶಕರಿಗೆ ಜಾಸ್ತಿ ಮಣೆ ಕೊಡಬೇಡ, ನೀನೆ ಕತೆಯ ಪಾತ್ರವಾಗಿ ಬರೆ, ಪಾತ್ರಕ್ಕೆ ತಕ್ಕುದಾದ ಸಂಭಾಷಣೆ ಇರಲಿ. ಸಾಮಾನ್ಯನ ಬಾಯಿಯಿಂದ ದೊಡ್ಡ ಮಾತುಗಳನ್ನು ಹೇಳಿಸಬೇಡ, ಮಾತು ಪಾತ್ರದ ಬೌದ್ಧಿಕ ಮಟ್ಟದಲ್ಲಿರಲಿ’ಯೆಂದರು. ಎಂ.ವ್ಯಾಸರು ಕನ್ನಡದ ವಿಶಿಷ್ಟ ರೀತಿಯ ಬರಹಗಾರರು. ಕನ್ನಡದ ಮಾತ್ರವಲ್ಲ. ಭಾರತದ್ದು ಕೂಡಾವೆಂದು ಯಾರೋ ಬರೆದುದನ್ನು ಹೇಳಿದರು.

ಆ ದಿನ ಕಾಫಿ , ತಿಂಡಿಗಳ ನಂತರ, ಕೊನೆಗೆ ಹಿಂತಿರುಗುವ ಮುನ್ನಾ ಇದು ಇತ್ತೀಚೆಗಿನ ಹೊಸ ಪ್ರಯೋಗ ಓದಿ ಎನ್ನುತ್ತಾ “ದಡ” ಎಂಬ ಕತೆಯನ್ನು ಕೈಗಿಟ್ಟು ಮನೆಯ ಸಮೀಪದ ಬಸ್ಸು ನಿಲ್ದಾಣದವರೆಗೆ ಬಂದು ಬೀಳ್ಕೊಟ್ಟಿದ್ದರು. ಮತ್ತೆ ನಮ್ಮ ಮಾತುಕತೆ ಪೋನಿನಲ್ಲಿ ನಡೆಯುತ್ತಿತ್ತು. ಒಂದು ಸಲ ‘ಅಷ್ಟು ಸಣ್ಣದಾಗಿ ಯಾಕೆ ಕವನ ಬರೆಯುತ್ತೀ?’ ಆಕ್ಷೇಪವೆತ್ತಿದ್ದರು. ಮತ್ತೊಂದು ಬಾರಿ ಸುಮಾರು ದಿನದನಂತರ ಪೋನಿಸಿ ” ಕೆಲವು ಹಿರಿ ಜೀವಗಳು ತೀರಿಕೊಂಡಿದ್ದುದರಿಂದ ಮನಸ್ಸಿಗೆ ಬೇಸರವಾದುದ್ದರಿಂದ ಕರೆ ಮಾಡಲಾಗಲಿಲ್ಲ” ಎನ್ನುತ್ತಾ ಬೇಸರಿಸಿದರು.

ಅವರಿಗೆ ಸಾಹಿತ್ಯ ಲೋಕ ತನ್ನನ್ನು ಗುರುತಿಸಿಲ್ಲವೆಂಬುದು ಬೇಸರ ತರಿಸಿರಬಹುದು ಹೊರಗೆ ಹೇಳಿಕೊಳ್ಳಲು ಆಗದಿದ್ದರೂ. ಆ ದಿನ ಮುರಳೀಧರ ಉಪಾಧ್ಯಾಯರು ಅವರ ಬಗ್ಗೆ ಎರಡು ಮಾತು ಉದಯವಾಣಿಯಲ್ಲಿ ಬರೆದಾಗ ಕರೆ ಮಾಡಿ ‘ಉಪಾಧ್ಯಾಯರು ನನ್ನ ಬಗ್ಗೆ ಬರೆದಿದ್ದಾರೆ ಓದಿದ್ದಿರಾ’ ಎಂದು ಕೇಳಿದರು. ಹೌದೆಂದೆ. ಅದರನಂತರ ಕೊನೆಯ ಹೊತ್ತಿನಲ್ಲಿ ತಂಗಾಳಿಯಾಗಿ ಬೀಸಿದಿರಿ ಎನ್ನುವ ಅರ್ಥದ ಮರು ಉತ್ತರ ಕಳುಹಿಸಿದ್ದನ್ನು ಉದಯವಾಣಿಯಲ್ಲಿ ಪ್ರಕಟಿಸಿದ್ದು ನೆನಪಿದೆ. ಇದಾದ ಮೇಲೆ ವ್ಯಾಸರು ಜಾಸ್ತಿ ದಿನ ಬದುಕಿರಲಿಲ್ಲ.

ಅದು ನಾನು ಕಾಸರಗೋಡಿನಲ್ಲಿ ಚೈಲ್ಡ್ ಲೈನ್ ಎಂಬ ಸಂಸ್ಥೆಯಲ್ಲಿ ಪ್ಲೆಸ್ ಮೆಂಟ್ ಮಾಡುತ್ತಿದ್ದ ಸಮಯ ” ಒಂದು ಸಲ ಮನೆ ಕಡೆ ಬಂದು ಹೋಗಿಯೆಂದು” ಒಂದೆರಡು ಬಾರಿ ಕರೆ ಮಾಡಿದ್ದರು. ಕೆಲಸದ ಒತ್ತಡದಿಂದ ಹೋಗಲಾಗಲಿಲ್ಲ. ಇನ್ನೆರಡು ದಿನ ಬಿಟ್ಟು ಹೋಗೊಣವೆಂದು ಸುಮ್ಮನಾದೆ. ಮತ್ತೆ ಹೋಗುವುದಕ್ಕೆ ಆಗಲಿಲ್ಲ. ಇದಾಗಿ ಜಾಸ್ತಿ ದಿನವಾಗಿರಲಿಲ್ಲ. ಜುಲೈ ೨೩ಕ್ಕೆ ಅವರು ಇಹ ಲೋಕ ತ್ಯಜಿಸಿದನ್ನು ಹಾಯ್ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಸುಲೋಚನಾ ಕರೆ ಮಾಡಿ ಹೇಳುವಾಗಲೆ ಗೊತ್ತಾಗಿದ್ದು.

ಅವರಿಲ್ಲದ ಶೂನ್ಯವೊಂದು ಮನಸ್ಸಿನಲ್ಲಿದೆ. ಅವರಿಂದ ನನ್ನ ಕಥಾಸಂಕಲನಕ್ಕೆ ಎರಡು ಮಾತು ಬರೆಯಿಸಿಕೊಳ್ಳಬೇಕೆಂಬ ಕನಸು ಕಳಚಿದೆ. ಅವರ ನಂಬರ್ ನನ್ನ ಸೆಲ್‍ನಲ್ಲಿ ಇನ್ನೂ ಹಾಗೆ ಇದೆ. ಮತ್ತೆ ಕಾಸರಗೋಡಿಗೆ ಹೋಗುವ ಅವಕಾಶ ಸಿಕ್ಕಿದೆ. ಆದರೆ ನನ್ನ ತಿದ್ದಿದ ವ್ಯಾಸರಿಲ್ಲ.

ವ್ಯಾಸರಂತೆ ಬರೆಯಲು ಕನ್ನಡದ ಯಾವ ಬರಹಗಾರನಿಗೂ ಸಾಧ್ಯವಿಲ್ಲವೆಂದೆನಿಸುತ್ತಿದೆ. ಅವರ ಬರಹ ನೋಡುವಾಗ ಹಾಗನಿಸುತ್ತದೆ. ಅದೆಲ್ಲಿಂದ ವಾಕ್ಯಗಳನ್ನು ಸೃಜಿಸುತ್ತಿದ್ದರೋ ನೋಡಿ:

ಹೊರೆಯಾಗುತ್ತಿರುವ ಬಸಿರು ಭಾವ
ಕೋಶ ಬಿರಿದು ಕೋಶ ಸುರಿದು
ಸ್ತಬ್ದ ಸರೋವರದಲ್ಲಿ ಅಲೆಗಳಾದ ವಿಲಿವಿಲಿ
ಶಬ್ದಗಳು
ನಿತ್ಯೋತ್ಸವ
-ದತ್ತ ಯಾತ್ರೆಗಾಗಿ ಇಕ್ಕಿದ; ಎಳೆದೆಳೆದು ಇಕ್ಕಿದ ತೇಕು ಹೆಜ್ಜೆ
-ಗೀರು ಹೆಜ್ಜೆಗಳಲ್ಲಿ ಸ್ಥಗಿತ ಚಲನ
ಅಮೂರ್ತ ಚಿತ್ರಗಳಂತಹಾ ಚಿತ್ತ ಭ್ರಮೆಗಳು
ಬಾನಂಗಳದ ನಕ್ಷತ್ರಗಳು ವಿಲಿವಿಲಿ ಒದ್ದೆ
ಸ್ನಾನ ಸುಖ ಸ್ನಾನ ಘಟ್ಟಗಳಲ್ಲಿ ಪ್ರತಿಬಿಂಬ ಬಿಂಬ
(ಕವನ: ಭುವನದ ಭಾಗ್ಯ. ಪ್ರಕಟಣೆ: ಶಬ್ದಗುಣ ಪಾಕ್ಷಿಕ ಪತ್ರಿಕೆ)

ಕನ್ನಡದ ಈ ವಿಶಿಷ್ಟ ಬರಹಗಾರ ನಮ್ಮನ್ನು ಅಗಲಿ ಇಂದಿಗೆ (ಜುಲೈ ೨೩) ಒಂದು ವರುಷವಾಗುತ್ತಿರುವ ಹೊತ್ತಿನಲ್ಲಿ ಅವರೊಂದಿಗಿನ ಕೆಲದಿನದ ಒಡನಾಟದ ನೆನಪಿನಲ್ಲಿ ಅಶ್ರುತರ್ಪಣ.