ಕೆಲವು ವರ್ಷಗಳ ಹಿಂದೆ ಯಾರದೋ ಮನೆಯಲ್ಲಿ ರಾತ್ರಿ ಊಟಕ್ಕೆ ಹೋಗಿದ್ದೆವು. ಊಟದ ಮೊದಲು, ಊಟದ ವೇಳೆ ಹಾಗು ಊಟದ ಬಳಿಕ ನಮಗೆಲ್ಲಾ ಕಾಮನ್‌ ಆದ ಸಂಗತಿಗಳ ಬಗ್ಗೆ ಮಾತುಕತೆ ನಡೆಯುವುದು ಸಾಮಾನ್ಯ. ಹಲವು ಸಲ ಮಾತು ಇಂಡಿಯದ ಬಗ್ಗೆ, ಅಲ್ಲಿನ ತೊಂದರೆಗಳನ್ನು ನಿವಾರಿಸುವುದು ಹೇಗೆ, ಹೇಗಿದ್ದರೆ ನಮ್ಮ ದೇಶ “ಉದ್ಧಾರ”ವಾಗುತ್ತದೆ ಎಂಬುದಕ್ಕೆಲ್ಲಾ ತಿರುಗುತ್ತದೆ. ಇಂಡಿಯದ ಎಲ್ಲ ಕಷ್ಟಕೋಟಲೆಗಳಿಗೂ ಅಲ್ಲಿ ಪರ-ವಿರೋಧ ನಿಲುವುಗಳ ಆಧಾರದ ಮೇಲೆ “ಪರಿಹಾರ”ವೂ ಸಿಗುತ್ತದೆ. ನಡುರಾತ್ರಿ ದಾಟುವಾಗ ಸರಿಸರಿ ಎಂದು ಕೈಕುಲುಕಿ ನಕ್ಕು ಹೊರಡುತ್ತೇವೆ.

ಅಂತಹ ಒಂದು ಊಟದ ಕೂಟದಲ್ಲಿ ಗೊತ್ತಿದ್ದವರೊಬ್ಬರು ಹೇಳಿದ ಕತೆ ಯಾಕೋ ನನ್ನ ನೆನಪಲ್ಲಿ ಉಳಿದುಬಿಟ್ಟಿದೆ. ಅದು ಭ್ರಷ್ಟಾಚಾರದ ಬಗ್ಗೆ ಆದ್ದರಿಂದ ಮತ್ತು ಅವರು ಕತೆಯ ನಿರೂಪಣಾ ಬಗೆಯಿಂದಾಗಿ ಅನಿಸುತ್ತದೆ. ಏನೇ ಅದರೂ, ತಮ್ಮ ಕತೆಯನ್ನು ತುಂಬು ಉತ್ಸಾಹದಲ್ಲಿ, ಗೆದ್ದ ಹುರುಪಲ್ಲಿ ಹೇಳಿದ್ದು ಈಗಲೂ ಕಣ್ಣಿಗೆ ಕಟ್ಟಿದಂತೆ ಇದೆ. ಆವತ್ತು ಮಾತು ಇಂಡಿಯದ ಭ್ರಷ್ಟಾಚಾರದ ಬಗ್ಗೆ ತಿರುಗಿದಾಗ ಆತ “ಭ್ರಷ್ಟಾಚಾರ ಬರೇ ಇಂಡಿಯಾದಲ್ಲಿ ಮಾತ್ರ ಅಲ್ಲ ಕಣ್ರಿ. ಎಲ್ಲಾ ಕಡೆನೂ ಇದೆ. ಈ ದೇಶದಲ್ಲಿ ಕೂಡ ಇದೆ, ಕೇಳಿ ಒಂದು ಕತೆ ಹೇಳ್ತೀನಿ” ಎಂದು ಹರಿಕಥೆಯ ಧಾಟಿಯಲ್ಲಿ ಶುರು ಮಾಡಿದ.

ಸಿಡ್ನಿಯ ಒಂದು ಹೊಸ ಬಡಾವಣೆಯಲ್ಲಿ ಜಾಗ ಕೊಂಡು ಮನೆ ಕಟ್ಟಿಸಿದ್ದರು. ವಿಶಾಲವಾದ ಎರಡಂತಸ್ತಿನ ಮನೆ. ಸ್ಟಾಂಡರ್ಡ್ ಪ್ಯಾಕೇಜಿನ ಮನೆಯಾದರೂ ಚೆನ್ನಾಗಿ ಕಟ್ಟಿಸಿದ್ದರು. ಮನೆಯ ಸುತ್ತ ಹಲವು ಹಳೆಯ ಮರಗಳಿದ್ದವು. ಆ ಮರಗಳು ಮನೆಯ ಸುತ್ತಲೂ ಚೆನ್ನಾಗಿ ತಂಪು ನೀಡುವಂತಿದ್ದವು. ಆದರೆ, ಇವರಿಗೆ ಬೇಕಾದತ್ತ, ಬೇಕಾದ ಎಡೆಗೆ ಅದರ ನೆರಳು ಚಾಚಿರಲಿಲ್ಲ. ಅಷ್ಟೇ ಅಲ್ಲ ಆ ಮರದ ಎಲೆ ಹಾಗು ತೊಗಟೆಗಳು ಉದುರಿ ಮನೆಯ ಸುತ್ತ ಚೊಕ್ಕವಾಗಿಡುವುದು ತುಸು ಕಷ್ಟದ ಕೆಲಸವಾಗಿತ್ತು.

ಸರಿ, ನಮ್ಮ ಗೆಳೆಯ ಅದನ್ನು ಕಡಿಸಿಬಿಡಬೇಕೆಂದು ಯೋಚಿಸಿದ. ಕಡಿಸುವುದಕ್ಕೆ ತಮ್ಮ ಮನೆಯಿರುವ ಲೋಕಲ್ ಗೌರ್ಮೆಂಟಿನ (ಕೌನ್ಸಿಲ್) ಬಳಿ ಪರವಾನಗಿ ಪಡೆಯಬೇಕು. ಆದರೆ, ಆ ಪರವಾನಗಿ ಅಷ್ಟು ಸುಲಭವಲ್ಲ. ಮರ ಹಳೆಯದಾಗಿದ್ದು ಬೀಳುವ ಅಪಾಯ ಇದ್ದರೆ ಅಥವಾ ಮನೆ ಕಟ್ಟಲು ಅಡ್ಡ ಬಂದರೆ ಕಡಿಸಲು ಪರವಾನಗಿ ಸಿಕ್ಕರೂ ಸಿಗಬಹುದು. ಇಲ್ಲದಿದ್ದರೆ ಬಲು ಕಷ್ಟವೇ. ಪರವಾನಗಿಯಿಲ್ಲದೆ ಕಡಿದು ಹಾಕಿ, ಸಿಕ್ಕಿಬಿದ್ದರೆ ಸಿಕ್ಕಾಪಟ್ಟೆ ಜುಲ್ಮಾನೆ ತೆರಬೇಕಾಗುತ್ತದೆ.

ನಾನೂ ನಮ್ಮ ಮನೆಯ ಹಿಂದೆ ಇದ್ದ ಒಂದು ಮರವನ್ನು ಕಡಿಸಲು ಒಂದು ಕೆಟ್ಟಗಳಿಗೆಯಲ್ಲಿ ಮನಸ್ಸು ಮಾಡಿದ್ದೆ. ಅದನ್ನು ಕಡಿಯಲು ಕರಿಸಿದ್ದ ಗುಂಪನ್ನು ನೋಡಿ ಕಡೆ ಗಳಿಗೆಯಲ್ಲಿ ಬೇಡ ಎಂದು ವಾಪಸು ಕಳಿಸಿಬಿಟ್ಟಿದ್ದೆ. ಈತನೂ ಅಂತಹ ಒಂದು ಗುಂಪನ್ನು ಕರೆಸಿ ಎಂಟು ಮರಗಳನ್ನು ಕಡಿಸಿಬಿಟ್ಟನಂತೆ. ಸದ್ಯ ತೊಲಗಿತು ಪೀಡೆ ಎಂದು ನಿಟ್ಟುಸಿರುಬಿಟ್ಟನಂತೆ. ಆದರೆ ಸುತ್ತಲಿನವರಾರೋ ಇವ ಮರ ಕಡಿಸಿದ್ದು ನೋಡಿ “ಸಹಿಸದೇ” ಕೌನ್ಸಿಲ್ಲಿಗೆ ದೂರು ಕೊಟ್ಟುಬಿಟ್ಟರಂತೆ. ಕೌನ್ಸಿಲ್ ಮರದ ಬಗ್ಗೆ ನಮ್ಮ ಗೆಳೆಯನ ಬಳಿ ವಿವರಣೆ ಕೇಳಿತಂತೆ. ಪರವಾನಗಿ ಇಲ್ಲದೆ ಮರ ಕಡಿದದ್ದನ್ನು ಗಂಭೀರವಾಗಿಯೇ ಪರಿಗಣಿಸುವ ಕೌನ್ಸಿಲ್ ಈತನ ಯಾವ ವಿವರಣೆಯೂ ಒಪ್ಪಲಿಲ್ಲವಂತೆ. ಎಷ್ಟೇ ಜಗ್ಗಾಡಿದರೂ ಕೇಳದೆ ಮರಕ್ಕೆರಡು ಸಾವಿರ ಡಾಲರಿನಂತೆ ಹದಿನಾರು ಸಾವಿರ ಡಾಲರ್ ಜುಲ್ಮಾನೆ ಹಾಕಿಯೇ ಬಿಟ್ಟರಂತೆ!

ಏನು ಮಾಡುವುದೆಂದು ತಲೆಯ ಮೇಲೆ ಕೈಹೊತ್ತು ಕೂತ ನಮ್ಮ ಗೆಳೆಯ. ಮಾಡಬಾರದ್ದು ಮಾಡಿದರೆ, ಆಗಬಾರದ್ದು ಆಗುತ್ತದೆ ಎಂಬುದು ತಿಳಿದಂತಿತ್ತು. ಆದರೂ ಜುಲ್ಮಾನೆ ಕಟ್ಟಲು ಮನಸ್ಸು ಒಪ್ಪಲಿಲ್ಲ. ಹೇಗಾದರೂ ಮಾಡಿ ತಪ್ಪಿಸಿಕೊಳ್ಳುವ ದಾರಿ ಹುಡುಕಿದನಂತೆ. ನಮ್ಮ ಗೆಳೆಯನಿಗೆ ಸದ್ಯದಲ್ಲೇ ಲೋಕಲ್ ಗೌರ್ಮೆಂಟ್ ಚುನಾವಣೆ ಎಂದು ಗೊತ್ತಾಯಿತು. ಥಟ್ಟನೆ ಒಂದು ಉಪಾಯ ಹೊಳೆಯಿತು. ಚುನಾವಣೆಯಲ್ಲಿ ಗೆಲ್ಲಬಹುದಾದ ಅಭ್ಯರ್ಥಿಯ ಬಳಿ ಹೋದ. ಆ ಅಭ್ಯರ್ಥಿ ಚುನಾವಣೆಯಲ್ಲಿ ಗೆಲುವುದು ಯಾಕೆ ತಮ್ಮ ಊರಿಗೆ ಒಳ್ಳೆಯದು ಎಂದು ಭಾಷಣ ಬಿಗಿದು “ನಿಮ್ಮ ಗೆಲುವಿಗಾಗಿ ಚುನಾವಣಾ ಪ್ರಚಾರದಲ್ಲಿ ವಾಲಂಟರಿ ಕೆಲಸ ಮಾಡುತ್ತೇನೆ” ಎಂದು ಹೇಳಿದನಂತೆ. ನಮ್ಮ ಗೆಳೆಯನ ರಾಜಕೀಯ ನಿಲುವಿನ ಉತ್ಸಾಹ ನೋಡಿ ಅಭ್ಯರ್ಥಿಗೆ ಖುಷಿಯೋ ಖುಷಿ. ನಮ್ಮ ಗೆಳೆಯ ವಾರಕ್ಕೆ ನಾಕಾರು ಗಂಟೆ ಕೆಲಸ ಮಾಡಿ ಅಭ್ಯರ್ಥಿಯ ಜತೆ ಒಡನಾಡಿ ಚೆನ್ನಾಗಿ ಪರಿಚಯ ಮಾಡಿಕೊಂಡನಂತೆ.

ಚುನಾವಣೆ ಎಲ್ಲ ಮುಗಿದು ಇವರು ಕೆಲಸ ಮಾಡಿದ ಅಭ್ಯರ್ಥಿ ಗೆದ್ದು ಬಂದಾಗ ನಮ್ಮ ಗೆಳೆಯನೂ ಖುಷಿಯೋ ಖುಷಿ. ತಾನು ಜುಲ್ಮಾನೆಯಿಂದ ಪಾರಾದೆ ಎಂದೇ ಅಂದುಕೊಂಡುಬಿಟ್ಟ. ಗೆದ್ದ ಅಭ್ಯರ್ಥಿಯ ಆಫೀಸಿಗೆ ಹೋಗಿ ಕೂತು ತಮ್ಮ ಜುಲ್ಮಾನೆಯ ಬಗ್ಗೆ ಹೇಳಿದ. ಏನೋ ತಪ್ಪು ಆಗಿಹೋಯಿತು. ತಪ್ಪಿನ ಗಂಭೀರತೆಯ ಅರಿವೂ ಆಗಿದೆ. ಆದರೆ ಜುಲ್ಮಾನೆ ಕಟ್ಟಲು ನನ್ನ ಕೈಯಲ್ಲಿ ಆಗುವುದಿಲ್ಲ. ಹೇಗಾದರೂ ಮಾಫಿ ಮಾಡಿಸಬೇಕು ಎಂದು ಕೇಳಿದನಂತೆ. ಈತನ ಕತೆಯನ್ನೆಲ್ಲಾ ಕೇಳಿದ ಆ ಅಭ್ಯರ್ಥಿ ಜುಲ್ಮಾನೆಯ ಅಧಿಕಾರಿಯನ್ನು ಕರೆದು ವಿಚಾರಿಸಿದರಂತೆ.

ಬಳಿಕ ನಮ್ಮ ಗೆಳೆಯನಿಗೆ, “ನಿಮಗೆ ತಪ್ಪಿನ ಅರಿವಾಗಿದೆ, ಆದರೆ ಕಷ್ಟವಿದೆ ಎಂದು ಹೇಳಿ ಒಂದು ಪತ್ರ ಬರೆದುಕೊಡಿ. ನಾನು ನಿಮಗೆ ಕಷ್ಟವಿರುವುದು ಹೌದು ಎಂದು ಅನುಮೋದಿಸಿ ಅಧಿಕಾರಿಗೆ ಹೇಳುತ್ತೇನೆ. ಜುಲ್ಮಾನೆ ಕಡಿಮೆ ಮಾಡಬಹುದು ನೋಡೋಣ” ಅಂದರಂತೆ. ಅವರು ಹೇಳಿದಂತೆ ನಮ್ಮ ಗೆಳೆಯನೂ ಬರೆದು ಕಳಿಸಿ ಏನಾಗುತ್ತದೋ ನೋಡೋಣ ಎಂದು ಕಾತರದಲ್ಲಿ ಉಸಿರು ಬಿಗಿಹಿಡಿದು ಕೂತನಂತೆ.

ಅಲ್ಲಿಗೆ ಮಾತು ನಿಲ್ಲಿಸಿ ಎಲ್ಲರತ್ತ ಒಮ್ಮೆ ನೋಡಿ ನನ್ನ ಗೆಳೆಯ ಸುಮ್ಮನಾದ. “ಆಮೇಲೆ ಏನಾಯಿತು ಗೊತ್ತ?” ಎಂದು ಗೆದ್ದ ನಗುವಿನಲ್ಲಿ “ನಿಮ್ಮ ಕಷ್ಟವನ್ನು ಪರಿಗಣಿಸಿದ್ದೇವೆ, ಜುಲ್ಮಾನೆಯನ್ನು ಒಂದು ಮರಕ್ಕೆ ಎರಡು ಸಾವಿರದ ಬದಲು, ಇನ್ನೂರು ಡಾಲರ್ ಕೊಡಬೇಕು” ಎಂದು ಪತ್ರ ಬಂತಂತೆ. ಹದಿನಾರು ಸಾವಿರ ಡಾಲರಿನ ಜುಲ್ಮಾನೆಯನ್ನು ಸಾವಿರದ ಆರನೂರು ಡಾಲರಿಗೆ ಇಳಿಸಿಕೊಂಡದ್ದನ್ನು ಹೇಳಿ ಬೀಗಿ ಕೂತರು. “ನೋಡಿ ಭ್ರಷ್ಟಾಚಾರ ಇಲ್ಲಿ ಇಲ್ಲ ಅಂದುಕೊಂಡಿರ?” ಎಂದು ಜೋರಾಗಿ ನಕ್ಕರು.

ಒಂದು ತಪ್ಪು ಮಾಡಿ, ಅದರ ಶಿಕ್ಷೆಯಿಂದ ಪಾರಾಗಲು ಇನ್ನೊಂದು ತಪ್ಪು ಮಾಡಿಯೂ ಗೆದ್ದವರಂತಿದ್ದ ಅವರ ಪರಿಗೆ ಏನು ಹೇಳಬೇಕೋ ತಿಳಿಯಲಿಲ್ಲ. ಕತೆ ಎಷ್ಟು ನಿಜವೋ ಗೊತ್ತಿಲ್ಲ. ಇಲ್ಲಿಯೂ ಭ್ರಷ್ಟಾಚಾರ ಇದೆ ಎಂದು ಸಾಬೀತು ಮಾಡಲು ಹೇಳಿದ್ದಿರಬಹುದು. ಯಾಕೆಂದರೆ, ತಾನು ಮಾಡಿದ್ದು ಹೇಯ ಕೆಲಸ ಎಂಬುದಕ್ಕಿಂತ ಈ ದೇಶದಲ್ಲೂ ಭ್ರಷ್ಟರಾಗಬಹುದು ಎಂಬುದೇ ಅವರಿಗೆ ಮುಖ್ಯವಾದಂತಿತ್ತು. ಅವರ ಕತೆಯನ್ನು ಅನುಮಾನಿಸೋಣವೆಂದರೆ ಇದನ್ನು ಬರೆಯುವಾಗಲೇ ಹೊಸ ಸುದ್ದಿಯೊಂದು ಬಂದಿದೆ. ಅದೇ ಅಭ್ಯರ್ಥಿ ತನ್ನ ಚುನಾವಣಾ ಪ್ರಚಾರಕ್ಕೆ ಹಣ ಪಡೆದವರನ್ನು ಯಾವುದೋ ಕಮಿಟಿಗೆ ನೇಮಿಸಿರುವುದು ಗೊತ್ತಾಗಿದೆ. ಭ್ರಷ್ಟಾಚಾರ ನಡೆದಿರಬಹುದೇ ಎಂದು ಆ ಅಭ್ಯರ್ಥಿ ಬಗ್ಗೆ ವಿಚಾರಣೆ ಶುರುವಾಗಿದೆ!