ಸೌದಿ ಅರೇಬಿಯಾದ ಕಿಂಗ್ ಸೌದ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿರುವ ಕನಕರಾಜು  ಮೂಲತಃ ಚಿತ್ರದುರ್ಗ ಜಿಲ್ಲೆಯ ಆರನಕಟ್ಟೆಯವರು.ಅರಬಿ ನಾಡಿನ ಕುರಿತ ಅವರ ಕಥಾ ಪ್ರಸಂಗಗಳು ಇನ್ನು ಮುಂದೆ ಕೆಂದಸಂಪಿಗೆಯಲ್ಲಿ ನಿಯಮತವಾಗಿ ಕಾಣಿಸಿಕೊಳ್ಳಲಿವೆ.

ಲಿಬಿಯಾದಲ್ಲಿ ಒಂದು ವರ್ಷ ದುಡಿದ ನಾನು ಸೌದಿ ಅರೇಬಿಯಾಕ್ಕೆ ಹೊರಟಾಗ ಕೆಲವು ಗೆಳೆಯರು ಹುಬ್ಬೇರಿಸಿದರು. ಅವರ ಪ್ರಕಾರ ನಾನು ಹೋಗುತ್ತಿದ್ದುದು ಕಟ್ಟರ್ ಸಂಪ್ರದಾಯವಾದಿ ಕಠಿಣ ಕಾನೂನುಗಳ ದೇಶವೊಂದಕ್ಕೆ. ಅವರ ಅಭಿಪ್ರಾಯಗಳನ್ನು ಕೇಳಿ ನಕ್ಕು ಸುಮ್ಮನಾಗಿದ್ದೆ. ಈಜಿಪ್ಟಿನ ಬರಹಗಾರ್ತಿಯಾದ ನವ್ವಲ್ ಅಲ್ ಸಾದವಿಯ ಒಂದು ಬರಹ ನಾ ಲಿಬಿಯಾದಲ್ಲಿದ್ದಾಗ ಸಿಕ್ಕಿತ್ತು. ಆಕೆಯ ಒಂದು ಮಾತನ್ನು ನಾ ನನ್ನ ಡೈರಿಯಲ್ಲಿ ಬರೆದಿಟ್ಟುಕೊಂಡಿದ್ದೆ. ಅದು ಹೀಗಿದೆ: “ನನಗೆ ಏನೊಂದು ಬೇಕಾಗಿಲ್ಲ. ನನಗೆ ಯಾವುದರಲ್ಲೂ ನಂಬಿಕೆಯಿಲ್ಲ. ನನಗೆ ಯಾವುದರ ಮೇಲೂ ಭಯವಿಲ್ಲ. ಆದ್ದರಿಂದಲೆ ನಾ ಸ್ವತಂತ್ರಳಾಗಿದ್ದೇನೆ. ಏಕೆಂದರೆ, ಬದುಕಿನಲ್ಲಿ ನಮ್ಮ ಆಸೆಗಳು, ನಂಬಿಕೆಗಳು, ಭಯಗಳು ನಮ್ಮನ್ನು ಗುಲಾಮರನ್ನಾಗಿಸುತ್ತವೆ”. ಆಕೆ ದಿಟ್ಟ ಬರಹಗಾತಿ. ಆಕೆಯ ಬರಹಗಳನ್ನು ಓದಲು ಹುಡುಕಿ ಸುಸ್ತಾಗಿ ಆಕೆಯನ್ನು ಮರತೇ ಹೋದನೇನೋ ಎನ್ನುವಷ್ಟರಲ್ಲಿ ಮೊನ್ನೆ ಚೆನ್ನೈನಿಂದ ತರಿಸಿಕೊಂಡ ತಮಿಳಿನ ನವ್ಯೋತ್ತರ ಬರಹಗಾರರಾದ ಚಾರು ನಿವೇದಿತರ ಪುಸ್ತಕಗಳಲ್ಲಿ “ಊರಿನ್ ಮಿಗ ಅಳಗಾನ ಪೆಣ್” ( ಊರಿನ ಅತಿ ಸುಂದರ ಹೆಣ್ಣು) ಎಂಬ ಅನುವಾದಿತ ಕಥಾ ಸಂಕಲನದಲ್ಲಿ ಸಾದವಿಯನ್ನು ಕಂಡು ಹಿರಿಹಿರಿ ಹಿಗ್ಗಿದೆ.

ಸಾದವಿಯ ಆ ಸಾಲುಗಳಲ್ಲಿ ಎಷ್ಟೋ ಬಾರಿ ಕಳೆದು ಹೋಗಿದ್ದೇನೆ. Zen ಕವಿಯೊಬ್ಬ ಮಾತನಾಡುತ್ತಿರುವಂತೆ ಕಾಣಿಸುವ ಆ ಪದಗಳನ್ನು ಮನದೊಳಗೆ ಇಳಿಸಿಕೊಳ್ಳುತ್ತ ವಿಮಾನ ಹತ್ತಿದಾಗ ಅರಬಿಕ್ ಭಾಷೆ ಈ ಪರಿ ನನ್ನನ್ನು ಸಮ್ಮೋಹನಗೊಳಿಸುತ್ತದೆ ಎಂದುಕೊಂಡಿರಲಿಲ್ಲ. ಲಿಬಿಯಾದಲ್ಲಿ ಪರಿಚಯವಾಗಿದ್ದ ಅರಬ್ಬಿ ಸೌದಿಯ ನನ್ನ ಆರಂಭದ ದಿನಗಳಿಗೆ ಶಕ್ತಿ ನೀಡಿದ್ದು ಸುಳ್ಳಲ್ಲ.

“ಸಲಾಮ ಲೇಕುಂ…” ಎಂದು ಶುರುವಾಗುವ ಮಾತುಕತೆ ಅರಬಿಕ್ ಸಂಸ್ಕೃತಿಗಳಲ್ಲಿ ಕಡ್ಡಾಯವೇನೊ ಎಂಬಂತೆ “ಕೀಫ್ ಹಲ್ ಹಾಲ್”, “ಷಕ್ ತಯೀಬ್”, “ವೂಷ್ ಮೋರಕ್”, “ಹುಷ್ ಹಾಲಕ್”, “ವುಷ್ ಹಾಲ್ ದ್ ದೌದ್” ಇನ್ನೂ ಏನೇನೋ ಹತ್ತಾರು ಸೌಖ್ಯವ ವಿಚಾರಿಸೊ ಪದಗಳ ವಿನಿಮಯವಾಗುತ್ತದೆ (ಕನಿಷ್ಠವೆಂದರೂ ಐದು ನಿಮಿಷ) ನಂತರ ಮಾತನಾಡಬೇಕಾದ ಮುಖ್ಯ ವಿಷಯಕ್ಕೆ ಬರುತ್ತಾರೆ.

ಸ್ನೇಹಿತರೊ ನೆಂಟರಿಷ್ಟರೊ ಸಿಕ್ಕರೆ ನಾವು ಕೇಳೊ “ಹೇಗಿದ್ದೀರಿ?”, “ಮನೇಲಿ ಎಲ್ಲರು ಚೆನ್ನಾಗಿದ್ದಾರಾ?” ಅಥವ “ಮನೆ ಕಡೆ ಮಕ್ಕಳು ಮರಿ ಹೆಂಗಿದಾರೆ?” ಎಂಬ ಔಪಚಾರಿಕ ಮಾತುಗಳು ಇಲ್ಲಿ ವಿಸ್ತಾರಗೊಂಡು ವ್ಯಕ್ತಿಯೊಬ್ಬನ ಬಗ್ಗೆ ಮಾತ್ರವಲ್ಲದೆ ಆತನ ತಂದೆ, ತಾತ, ಬಂಧುಬಳಗ, ಮಕ್ಕಳು, ಒಂಟೆ,ಕುರಿ, ಬದುಕು….ಹೀಗೆ ಎಲ್ಲದರ ಕ್ಷೇಮವನ್ನು ಕೇಳಿದ ನಂತರವೇ ತಮ್ಮ ಮಾತುಗಳಿಗೆ ಬರುತ್ತಾರೆ. ಇದು ಕಡ್ಡಾಯವೆಂಬಂತೆ ಚಾಲ್ತಿಯಲ್ಲಿದೆ.ಎಷ್ಟರಮಟ್ಟಿಗೆ ಎಂದರೆ ಸಿಗ್ನಲ್ ನಲ್ಲಿ ಕಾರನ್ನು ನಿಲ್ಲಿಸಿರುವಾಗ ಪರಿಚಯವಿರುವವರ ಕಾರ್ ಪಕ್ಕದಲ್ಲಿ ಬಂದು ನಿಂತಾಗ ಈತ “ಕೀಫ್ ಹಲ್ ಹಾಲ್” ಎಂದು ಶುರು ಮಾಡಿಕೊಂಡು ವಾಡಿಕೆಯ ಈ ಮಾತುಗಳನ್ನು ಮುಗಿಸುವುದರೊಳಗೆ ಸಿಗ್ನಲ್ ಬಿದ್ದಿರುತ್ತದೆ. ಮಾತನಾಡಬೇಕಾದ ಮಾತುಗಳು ಹಾಗೆ ಉಳಿದು ಮೊಬೈಲ್ ನಲ್ಲಿ ಮಾತನಾಡಿಕೊಳ್ಳುತ್ತಾರೆ.

ಆ “ಕೀಫ್ ಹಲ್ ಹಾಲ್” ಸಂವಾದವನ್ನು ಕೇಳಿಸಿಕೊಳ್ಳುವುದೆ ಒಂದು ಚೆಂದ. ಹಾಗೆ ನೋಡಿದರೆ ಅರೆಬಿಕ್ ಭಾಷೆಯೆ ಚೆಂದ. ಅರೆಬಿಕ್ ನ ಕೆಲವೊಂದು ಪದಗಳು ನಮ್ಮ ಹಿಂದಿ, ಉರ್ದು ಪದಗಳಂತೆ ಕಂಡರೂ ಉಚ್ಛರಣೆಯಲ್ಲಿ ಬಹಳಷ್ಟು ವ್ಯತ್ಯಾಸಗಳಿವೆ. ಕೆಲವೊಂದು ಶಬ್ದಗಳಂತು ಕಿಬ್ಬೊಟ್ಟೆಯಿಂದ, ಒಳಗಂಟಲಿನಿಂದ, ಕಿರುನಾಲಗೆಯ ತುದಿಯಿಂದ, ಎದೆಯ ಮಧ್ಯಭಾಗದಿಂದ ಹೊರಡುತ್ತವೆ. ಈ “ಸೌದಿ” ಎಂಬ ಪದ ಅರಬ್ಬಿ ಮಾತೃಭಾಷೆಯ ಜನರ ಬಾಯಲ್ಲಿ ಉಚ್ಛರಣೆಗೊಳ್ಳುವುದಕ್ಕೂ ಹಿಂದಿ(ಭಾರತೀಯರ), ಪಾಕಿಸ್ತಾನಿ, ಬಂಗಾಳಿಗಳ( ಬಾಂಗ್ಲಾ ದೇಶಿಗರ) ಬಾಯಲ್ಲಿ ಉದುರುವುದಕ್ಕೂ ಅಜಗಜಾಂತರ ವ್ಯತ್ಯಾಸಗಳಿವೆ. ಅನೇಕ ಭಾಷೆಗಳಂತೆ ಅರಬ್ಬಿಯೂ ಏಕಮುಖವಾಗಿರದೆ ಪ್ರತಿ ಪ್ರದೇಶಗಳಲ್ಲೂ ವಿಭಿನ್ನವಾಗಿರುತ್ತದೆ.

“ಸಂಸೃತ ಅರೇಬಿಕನ್ನು ಮೀರಿಸುತ್ತದೆ, ಕನಕರಾಜ” ಎಂದು ಇದನ್ನು ಓದುತ್ತಿರುವ ಗಣ್ಯ ಓದುಗರಲ್ಲಿ ಕೆಲವರು ಕಾಮೆಂಟ್ ಮಾಡಬಹುದು. ಸಂಸ್ಕೃತದ ಬಗ್ಗೆ ಅಷ್ಟಾಗಿ ಗೊತ್ತಿರದ ನನ್ನಂತಹವನು ಅರೆಬಿಕ್ ನಂತಹ ಜನರಾಡುವ ಭಾಷೆಯನ್ನು ಕಂಡಾಗ ದಂಗಾಗುವುದು ಸಾಮಾನ್ಯವೆ. ಅರೆಬಿಕ್ ವಾದ್ಯಗಳಲ್ಲಿ ಒಂದಾದ “ಯೂದ್”(ಈ ಪದಕ್ಕೂ ಉಚ್ಛರಣೆಗೂ ವ್ಯತ್ಯಾಸವಿದೆ)ನ್ನು ನಿಮ್ಮಲ್ಲಿ ಕೆಲವರು ಇರಾನಿ ಚಿತ್ರಗಳಲ್ಲೊ ಅಥವ ಈಜಿಪ್ಷಿಯನ್, ಲೆಬನಾನ್ ಜನಪ್ರಿಯ ಹಾಡುಗಳಲ್ಲಿ ಕೇಳಿರಬಹುದು. ವಯಲಿನ್ ನಂತೆ, ತಂಬೂರಿಯಂತೆ ಕಾಣುವ ಈ ಯೂದ್ ನ ತಂತಿಗಳಿಂದ ಹೊರಡುವ ಸದ್ದು ನನಗೆ ಅರೆಬಿಕ್ ಭಾಷೆಯ ರೂಪಕದಂತೆ ಕಾಣುತ್ತದೆ.

ನನಗೆ ಅರ್ಥವಾಗದಿದ್ದರೂ ಈಜಿಪ್ಟ್ ನ, ಅಷ್ಟೇ ಏಕೆ ಇಡಿ ಅರೆಬಿಕ್ ಜಗತ್ತಿನ, ಶ್ರೇಷ್ಠ ಹಾಡುಗಾರ್ತಿಯಾದ ಒಮ್ ಖೊಲ್ತೂಮ್ (Om Kolthoum)ಳ ಕ್ಯಾಸೆಟ್ಟನ್ನು ಹಾಕಿ ಒಂದರ್ಧ ಗಂಟೆಯಾದರು ಮೈಮರೆಯುವುದು ನನ್ನ ದಿನದ ಕೆಲಸಗಳಲ್ಲೊಂದು. ಪಶ್ಚಿಮದವರು ಆಕೆಯನ್ನು “ಈಸ್ಟರ್ನ್ ಸ್ಟಾರ್” ಎನ್ನುತ್ತಾರೆಂದು ಲಿಬಿಯಾದಲ್ಲಿದ್ದಾಗ ಗೆಳತಿ ಲೈಲ ಹೇಳಿದ್ದಳು. ಲಿಬಿಯಾದ ಅಧ್ಯಕ್ಷ ಮೌಮೂರ್ ಗದ್ದಾಫಿ ಹುಟ್ಟಿ ಬೆಳೆದ ಸಿರ್ಥ್ ನ ವಿಶ್ವವಿದ್ಯಾಲಯವೊಂದರಲ್ಲಿ ಕೆಲಸ ಮಾಡುತ್ತಿದ್ದ ನನಗೆ ಲಿಬಿಯಾದ ಕ್ರಾಂತಿ, ಅರೆಬಿಕ್ ಮತ್ತು ಆಫ್ರಿಕಾದ ನಂಟು ಇನ್ನಿತರ ವಿಷಯಗಳ ಜೊತೆ ಈ ಖೊಲ್ತೂಮ್ ಳ ಬಗ್ಗೆಯೂ ಹೇಳಿ ಹುಚ್ಚು ಹಿಡಿಸಿದ್ದಳು. ಗದ್ದಾಫಿಯ ಸಂಬಂಧಿಕರವಳಂತೆ ಅವಳು. ಒಮ್ ಖೊಲ್ತೂಮ್ ಳ ಬಗ್ಗೆ ಹೇಳುತ್ತ ಆಕೆ ಒಂದು ವಿಷಯವನ್ನು ತಿಳಿಸಿದಳು. ಅದ ಕೇಳಿ ಅಚ್ಚರಿಪಡುತ್ತ ಅರೆಬಿಕ್ ಎಂಬ ಭಾಷೆ ಖೊಲ್ತೂಮಳ ಗಂಟಲಲ್ಲಿ ಇಡಿ ಜಗತ್ತನ್ನೇ ಸೆಳೆಯುವ ಮಾಂತ್ರಿಕತೆಯಾಗಿ ಪರಿವರ್ತನೆಗೊಂಡ ಪರಿಯ ನೆನೆದು ನಿಬ್ಬೆರಗಾದೆ.

ಲಿಬಿಯಾದಲ್ಲಿದ್ದ ರಾಜ (ಅಥವ ಕುಟುಂಬ) ಯಜಮಾನ್ಯವನ್ನು, ಪಶ್ಚಿಮ ಪರ ಧೋರಣೆಯ ಆಡಳಿತವನ್ನು ಕೆಡವಿ ಜನಪರ ಸರ್ಕಾರವೊಂದನ್ನು ತರಲು ಯೋಚಿಸುತ್ತಿದ್ದ ಗದ್ದಾಫಿ ಅಂದು ತನ್ನ ಮಿಲಿಟರಿ ಪಡೆಯೊಂದಿಗೆ  ಕ್ಷಿಪ್ರ ಕಾರ್ಯಾಚರಣೆ ನಡೆಸಿ ಅರಮನೆಯನ್ನು ವಶಪಡಿಸಿಕೊಂಡ ದಿನ ಪಕ್ಕದ ಈಜಿಪ್ಟ್ ನಲ್ಲಿ ಖೊಲ್ತೂಮ್ ಹಾಡುತ್ತಿದ್ದಳಂತೆ. ಆ ಕನ್ಸರ್ಟ್ ಮುಗಿದ ನಂತರವೆ ಗದ್ದಾಫಿ ಮುತ್ತಿಗೆಯಿಟ್ಟಿದ್ದಂತೆ. ಖೊಲ್ತೂಮಳ ಮಾಧುರ್ಯದ ಮಳೆಯಲ್ಲಿ ನೆಂದು ತೊಪ್ಪೆಯಾಗುತ್ತಿದ್ದ ಜನರಿಗೆ ತೊಂದರೆ ಮಾಡುವುದು ಬೇಡವೆಂದೊ ಅಥವ ರೇಡಿಯೊ ತರಂಗಗಳಲ್ಲಿ ಮೂಡಿಬರುತ್ತಿದ್ದ ಖೊಲ್ತೂಮ್ ಧ್ವನಿಯ ಕೇಳಿ ಹುರುಪ ಪಡೆದುಕೊಳ್ಳಲೊ ಏನೊ ಒಟ್ಟಲ್ಲಿ ಗದ್ದಾಫಿ ಕಲ್ತೂಮಳ ಕನ್ಸರ್ಟ್ ಮುಗಿದ ನಂತರವೆ ಅಧಿಕಾರವನ್ನು ವಶಪಡಿಸಿಕೊಂಡಿದ್ದು.

ಇಂತಹ ಖೊಲ್ತೂಮ್ ಮರಣ ಹೊಂದಿದ ನಂತರ ಆಕೆಯ ಗಂಟಲನ್ನು ಅಧ್ಯಯನ ಮಾಡಲು ಯುರೋಪಿಯನ್ನರು ತೆಗೆದುಕೊಂಡು ಹೋದರಂತೆ. ನಮ್ಮ ಜ್ಯೋತಿ ಬಸುರವರ ಮಿದುಳನ್ನು ತೆಗೆದುಕೊಂಡಂತೆ! ಈ ಅರೆಬಿಕ್ ಮಾಟಗಾತಿಯ ದನಿಯೊಂದೆ ಸಾಕು ಅರೆಬಿಕ್ ನ ಮೋಹಕತೆಯನ್ನು ಬಿಡಿಸಿಡಲು. ಪ್ರಪಂಚದ ಬಹುಸಂಖ್ಯಾತರು ಮಾತನಾಡುವ ಭಾಷೆಯಾಗಿರುವ ಈ ಅರೆಬಿಕ್ ನಮ್ಮಲ್ಲಿ ಅನುಮಾನಕ್ಕೆ, ಕೆಲವೊಂದು ನಿರ್ದಿಷ್ಟ ಆರೋಪಗಳಿಗೆ ಗುರಿಯಾಗಿರುವುದು ನೋವಿನ ಸಂಗತಿ. ಭಾರತವನ್ನು, ಭಾರತೀಯರನ್ನು ಪ್ರೀತಿಗೌರವಗಳಿಂದ ಕಾಣುವ ಸೌದಿಗಳೆದುರು ನಾ ಸಣ್ಣವನಾದೆ.ಇಲ್ಲಿಯ “ಕಾನೂನ್”, “ತಿಜೊರಿ”, “ಸೀದಾ”, “ತಾರೀಖ್”, “ತರ್ಜುಮ”, “ತಾಕೀತ್” ಇನ್ನು ಎಷ್ಟೊ ಪದಗಳು ನಮ್ಮಲ್ಲಿ ಅದೇ ಅರ್ಥಗಳಲ್ಲಿ ಬಳಕೆಯಾಗುತ್ತಿವೆ. ಅರೆಬಿಕ್ ನಿಂದ ನಮಗೆ ಬಂದವೊ ಅಥವ ನಮ್ಮಿಂದ ಇಲ್ಲಿಗೆ ತೇಲಿ ಬಂದವೊ ಭಾಷಾ ಪರಿಣತರೆ ಹೇಳಬೇಕು. ಯಾವುದೆ ಪೂರ್ವಗ್ರಹಗಳಿಲ್ಲದೆ ಅರೆಬಿಕ್ ಅನ್ನು, ಅರೆಬಿಯನ್ನರ ಬದುಕನ್ನು ನೋಡುತ್ತಿದ್ದೇನೆ. ಏಕೆಂದರೆ ನನಗೆ ಯಾವುದರಲ್ಲೂ ನಂಬಿಕೆಗಳಿಲ್ಲ, ಆಸೆಗಳಿಲ್ಲ (ದುಡ್ಡಲ್ಲ ಸ್ವಾಮಿ), ಭಯವಿಲ್ಲ.

ಸಾದವಿ,ಖೊಲ್ತೂಮ್ ನನ್ನೊಳಗಿಳಿದು ಅರೆಬಿಕ್ ಅನ್ನು ಅರ್ಥಮಾಡಿಸುತ್ತಿದ್ದಾರೆ. ಅಮೆರಿಕಾ ಮುಂತಾದ ದೇಶಗಳ ಯಜಮಾನ್ಯದೆದುರು ದಿಟ್ಟವಾಗಿ ನಿಂತಿರುವ ಅರಬ್ಬಿ ವಾತಾವರಣದಲ್ಲಿ (ಸುಗಂಧ ದ್ರವ್ಯವ ಹೀರುತ್ತ) ನಿಂತು ಜಗತ್ತನ್ನು ನೋಡುತ್ತಿದ್ದೇನೆ. ತಮ್ಮತಮ್ಮ ಊರುಗಳಲ್ಲಿ ಉಸಿರಾಡಲೂ ಕಷ್ಟಪಟ್ಟು ಬದುಕನ್ನರಸಿ ಈ ಗಲ್ಫ್ ರಾಷ್ಟ್ರಗಳಿಗೆ ಬಂದ ಸಾವಿರಾರು ಭಾರತೀಯರನ್ನು ಅಗಲಗಣ್ಣುಗಳಿಂದ ನೋಡುತ್ತಿದ್ದೇನೆ. ಅವರ ಕನಸು, ಆಸೆ, ನಿಟ್ಟುಸಿರು, ಬಿಕ್ಕಳಿಕೆ, ಬೆವರು, ತೃಷೆ, ಹಸಿವು, ದಾಹ, ನೋವು, ನಲಿವು-  ಎಲ್ಲದಕ್ಕೆ ಸಾಕ್ಷಿಯಾಗಿ ಮೂಖನಾಗಿದ್ದೇನೆ. ನಮ್ಮವರ ಹಾಗೆ ಪಾಕಿಸ್ತಾನಿಗಳು, ಬಂಗಾಳಿಗಳು, ಮಸ್ರಿಗಳು (ಈಜಿಪ್ಷಿಯನ್ಸ್), ಸುಡಾನಿಗಳು, ಸಿರಿಯನ್ನರು, ಒರ್ದೊನಿಗಳು (ಜೋರ್ಡಾನಿಯನ್ನರು), ಸಿರಿಲಂಕ ( ಶ್ರೀಲಂಕಾನ್ನರು) ತಮ್ಮತಮ್ಮ ಊರುಗಳಲ್ಲಿ ನೆಮ್ಮದಿಯ ನಿಟ್ಟುಸಿರನ್ನೊ ಅಥವ ತೀರದ ನೋವುಹಸಿವುಗಳನ್ನೊ ಬಿಕರಿಗಿಡುವುದ ಸುಮ್ಮನೆ ನೋಡುತ್ತಿದ್ದೇನೆ. ಕಾಯಿಲೆ ಬಿದ್ದು, ಕಾಮದ ತುಡಿತದಿಂದ ಒಂಟಿಯಾಗಿ ಹೊರಳಾಡುವುದನ್ನೂ ಕಂಡಿದ್ದೇನೆ.

ನಾನು ಹುಟ್ಟಿದ “ತೇವರ್” ಜಾತಿ ತಮಿಳುನಾಡಿನಲ್ಲಿ ನಡೆಸುತ್ತಿರುವ ಜಾತೀಯ ದಬ್ಬಾಳಿಕೆಯಲ್ಲಿ ನಲುಗಿದ ದಲಿತನೊಬ್ಬ ಮಧುರೈಯ ಹಳ್ಳಿಯೊಂದರಲ್ಲಿ ದೊಡ್ಡದೊಡ್ಡ ಗಿರಿಜಾ ಮೀಸೆಗಳ ಸಾಹುಕಾರ ತೇವರ್ ಗಳೆದುರು ಸರಿಸಮನಾಗಿ ನಿಲ್ಲುವಂತೆ ಮಾಡಿರುವುದೂ ಈ ಗಲ್ಫ್ ರಾಷ್ಟ್ರಗಳೆ!  ಕೇರಳದಂತಹ ರಾಜ್ಯದಲ್ಲಿ ಮಾಡಿರಬಹುದಾದ ಬದಲಾವಣೆಗಳ ನೋಡಿದರೆ ಗಲ್ಫ್ ಪ್ರಭಾವ ಗೊತ್ತಾಗುತ್ತದೆ. ಇಲ್ಲಿಯ ಎಕ್ಸ್ಟ್ರೀಮ್ ಬಿಸಿಲು, ಚಳಿಗಳಿಗೆ ಅಂಜದೆ ಕನಸ ಬಿಡದೆ ತಮ್ಮೆಲ್ಲ ಆಸೆ ಕಾಮಗಳನ್ನು ಅದುಮಿಟ್ಟು ನಾಳೆಗಾಗಿ ದುಡಿಯುತ್ತಿರುವ ನಮ್ಮವರ ಒಳತೋಟಿಗಳೆದುರು ನನ್ನ ಬದುಕು,ನಾ ಬರೆದ ಕೆಲವೇ ಕೆಲವು ಬರಹಗಳೆಲ್ಲವು ಸೊನ್ನೆ ಅನಿಸುತ್ತಿದೆ. ಇರಾಕ್- ಕುವೈತ್ ಯುದ್ಧದ ಸಂದರ್ಭದಲ್ಲಿ ಹತ್ತಿ ಉರಿದ ಎಣ್ಣೆ ಬಾವಿಗಳಿಂದ ಹೊರಟ ಕಪ್ಪು”ಧೂಮ” ಆಕಾಶವನ್ನು ಮುಚ್ಚಿಕೊಂಡಿರುವುದ ಕಾಣುತ್ತ, ಸೌದಿ ಅರೇಬಿಯಾದ ನೀರಿನ ತಾಣಗಳಲ್ಲೊಂದಾದ ವಾದಿ ಅಲ್ ದವಾಸಿರ್ ಎಂಬ ಸಣ್ಣ ಪಟ್ಟಣದಲ್ಲಿ ಆಗಾಗ ಸುರಿವ ಅರೆಕ್ಷಣ ಮಳೆಯಲ್ಲಿ ನೆನೆಯುತ್ತ ನನ್ನ ಹಿರಿಯೂರನ್ನು ಕಣ್ಣ ಮುಂದೆ ತಂದುಕೊಳ್ಳುತ್ತೇನೆ. ಸಿರಿಯಾ ದೇಶದ ಮಹಮದ್ ಅಲ್ ಮಾಗೌಥ್ ಎಂಬ ಬರಹಗಾರನ ಮಾತೊಂದನ್ನು ಹೇಳಿ ಮುಗಿಸುತ್ತೇನೆ:

“ಸಿಗರೇಟ್ ಹಚ್ಚಲು ನಿಮಗೆ ಬೆಂಕಿಕಡ್ಡಿ ಸಿಗಲಿಲ್ಲವೆಂದರೆ

ಯೋಚಿಸಬೇಡಿ,

ಒಂದು ದೇಶವನ್ನೇ ಉರಿಸಿಬಿಡಿ”.

ಅರೇಬಿಯಾ ಕಾಲಂ: ಮರಳುಗಾಡಿನ ಮನುಷ್ಯಜೀವಿತಗಳು

ಕಳೆದ ವಾರದಿಂದ ಬರೆಯಲು ಶುರುಮಾಡಿದ ಈ ಲೇಖನವನ್ನು ಮುಂದುವರೆಸುವ ತವಕ, ಭಯಗಳಿಲ್ಲದೆ ಬರೆಯುತ್ತಿದ್ದೇನೆ. ಬಿಸಿಲು ಏರುತ್ತಿರುವ ಈ ಸಮಯದಲ್ಲಿ ಇಲ್ಲಿ ಆಗಾಗ ಮರಳುಗಾಡಿನಿಂದ ಏಳುವ “ಓಬಾರ್” ನಮ್ಮ ಸುತ್ತ ವ್ಯಾಪಿಸಿಕೊಳ್ಳುತ್ತದೆ. ಚಳಿಗಾಲದಲ್ಲಿ ಯಾವಾಗಲಾದರೊಮ್ಮೆ ಇಣುಕುವ ಈ ಮರಳುಧೂಳಿನ ಗಾಳಿ ನಮ್ಮ ಇಂಡಿಯಾದಲ್ಲಿನ ಮಂಜಿನಂತೆ ಸುತ್ತಲೂ ಸುತ್ತಿಕೊಂಡು ಕಣ್ಣನ್ನು ಮಬ್ಬುಗೊಳಿಸಿಬಿಡುತ್ತದೆ. ಮೂಗಿನೊಳಗೆ ಹೊಕ್ಕು ಹಿಂಸಿಸುತ್ತದೆ, ಮೈಕೈ ಬಟ್ಟೆಗಳನ್ನೆಲ್ಲ ಮೆತ್ತಿಕೊಂಡು ಸಿಟ್ಟು ತರಿಸುತ್ತದೆ. ಮರುಭೂಮಿಯ ಬದುಕು ಒಂದು ಥರ ಚಾಲೆಂಜಿಂಗ್! ಎರಡು ವರ್ಷ ಮಾಲ್ಡೀವ್ಸ್ ನ ದ್ವೀಪವೊಂದರಲ್ಲಿ ಬದುಕುತ್ತಿರುವಾಗ ನಾನು ದ್ವೀಪದ ಬದುಕು ಚಾಲೆಂಜಿಂಗ್ ಎಂದುಕೊಂಡಿದ್ದೆ. ಈಗ ಅರ್ಥವಾಗುತ್ತಿದೆ, ಈ ವಿಶಾಲ ಜಗತ್ತಿನ ಪ್ರತಿ ಪ್ರದೇಶದ ಬದುಕೂ ಸಾಹಸಮಯವೇ!

ಈ ಮರುಭೂಮಿಗೆ ಇರುವುದು ಎರಡು ಕಾಲ. ಒಂದು ಬೇಸಿಗೆ ಮತ್ತೊಂದು ಚಳಿ, ಎರಡೂ ಎಕ್ಸ್ಟ್ರೀಮ್! ನಡುನಡುವೆ sandstorm ಅಥವ duststormನ ಓಬಾರ್ ದಿನಗಳು. ಈ ದಿನಗಳ ನೋಡುತ್ತ ಹಾಗೆ ಸುಮ್ಮನೆ ಅರಬ್ಬರ ಡ್ರೆಸ್ ಬಗ್ಗೆ ಯೋಚಿಸಿದೆ. ಚಳಿ, ಬಿಸಿಲು, ಓಬಾರ್ ಎಲ್ಲದಕ್ಕೂ ಸರಿಹೊಂದುವ ಡ್ರೆಸ್ ಅಲ್ಲವೆ ಇದು ಎನ್ನಿಸಿತು! ನಿಮ್ಮಲ್ಲನೇಕರು ಅರಬ್ಬರು ಧರಿಸುವ ಡ್ರೆಸ್ ನ್ನು ನೋಡಿರಬಹುದು. ಉದ್ದನೆಯ ಬಿಳಿ ನಿಲುವಂಗಿ (ಅದನ್ನು ತೋಬ್ ಎನ್ನುತ್ತಾರೆ), ತಲೆಯ ಮೇಲೆ ಒಂದು ಬಿಳಿ ಅಥವ ಕೆಂಪು ಬಟ್ಟೆ, ಸ್ಕಾರ್ಫ್ (ಇದನ್ನು “ಗೋತ್ರ” ಎನ್ನುತ್ತಾರೆ!), ಅದರ ಮೇಲೆ ಕಪ್ಪು ಬಣ್ಣದ ಪೈಪ್ ತರಹದ, ವೃತ್ತಾಕಾರದ ಟ್ವೈನ್ (ಅಘಲ್). ಈ ಡ್ರೆಸ್ ನಮಗೆ ವಿಚಿತ್ರವಾಗಿ ಕಂಡರೂ ಅದು ಅವರ ಸಂಸ್ಕೃತಿ. ನಮ್ಮ ಭಾರತೀಯ ಸಿನಿಮಾಗಳಲ್ಲಿ ಈ ಡ್ರೆಸ್ ಕೆಲವೊಮ್ಮೆ ಕಾಣಿಸಿಕೊಂಡಿದೆ. ನಮ್ಮ ಗ್ರೇಟ್ ಡೈರಕ್ಟರ್ಸ್ ಹೆಚ್ಚಾಗಿ ಇದನ್ನು ಕಾಮೆಡಿ ಸೀನ್ ಗಳಿಗೆ ಅಥವ ನೆಗೆಟಿವ್ ರೋಲ್ ಗಳಿಗೆ ಬಳಸಿಕೊಂಡಿದ್ದಾರೆ. ಇತರರ ಸಂಸ್ಕೃತಿಯನ್ನು ಲೇವಡಿ ಮಾಡುವುದು ಮನುಜನ ಬದುಕಿನಲ್ಲಿ ಸಹಜವೇನೋ ಅಲ್ಲವೆ!? ಅರಬ್ಬರ ಈ ಡ್ರೆಸ್ ಎಲ್ಲಾ ಗಲ್ಫ್ ರಾಷ್ಟ್ರಗಳಲ್ಲಿ  ಬಳಸಲ್ಪಡುವುದಿಲ್ಲ. ಈ ತೋಬ್ ಮತ್ತು ಗೋತ್ರಗಳ ಟಿಪಿಕಲ್ ಅರಬ್ಬಿ ವಸ್ತ್ರವನ್ನು ಸೌದಿ ಅರೇಬಿಯಾ, ಯು.ಎ.ಇ, ಇರಾಖ್ಹ್, ಕತರ್ ಮತ್ತು ಬೆಹ್ರೇನ್ ಗಳಲ್ಲಿ ಬಳಸುತ್ತಾರೆ. ಇವರೆಲ್ಲರ ಈ ಡ್ರೆಸ್ ನೋಡಲು  ಒಂದೇ ತೆರನಾಗಿ ಕಂಡರೂ ಕೆಲವೊಂದು ವಿನ್ಯಾಸಗಳಲ್ಲಿ ಡಿಫರೆಂಟ್ ಆಗಿರುತ್ತದೆ. ನಾನಿರುವ ಜಾಗದಲ್ಲಿ ಸೌದಿಗಳೆಲ್ಲರೂ, ಮಕ್ಕಳು ಯುವಕರನ್ನು ಸೇರಿ ಎಲ್ಲರೂ, ಕಡ್ಡಾಯವಾಗಿ ಧರಿಸಲೇಬೇಕು.

ಮರಳುಗಾಡಿನ ಅಲೆಮಾರಿ ಅಥವ ಬುಡಕಟ್ಟು (?) ಜನಾಂಗವನ್ನು ಅರಬ್ಬಿಯಲ್ಲಿ ಬದೂ(ನ್) ಎನ್ನುತ್ತಾರೆ. ನಾನಿರುವ ಜಾಗದಲ್ಲಿರುವ ಸೌದಿಗಳನ್ನು ಇಲ್ಲಿ ಹಾಗೇ ಕರೆಯುವುದು. ಮರುಭೂಮಿಯಲ್ಲಿ ಅಲೆಯುತ್ತಿದ್ದ ಜನಾಂಗವೊಂದು ಇಲ್ಲಿ ನೀರು ಸಾಕಷ್ಟು ಸಿಗುವ ಕಾರಣ ತಂಗಿ ತಮರ್ (ಖರ್ಜೂರ) ವ್ಯವಸಾಯವನ್ನು ಶುರುಮಾಡಿತಂತೆ. ಖರ್ಜೂರದ ಕೃಷಿ ಮೆಲ್ಲಮೆಲ್ಲನೆ ಗೋಧಿ, ತರಕಾರಿ, ಈರುಳ್ಳಿ ಮತ್ತು ಇನ್ನಿತರ ಕೃಷಿಗಳ ಕಡೆ ಹೊರಳಿತಂತೆ. ಮರುಭೂಮಿಯ ಅತಿಶಯಗಳಲ್ಲಿ ಒಂದಾದ ಇಂತಹ ಮಣ್ಣನ್ನು ಹಸನುಗೊಳಿಸಿ ನೀರು ಹಾಯಿಸಿ ಹದಕ್ಕೆ ತಂದು ಬೆಳೆ ಬೆಳೆಯುತ್ತ ಬೆವರು ಸುರಿಸುವವರು “ಅಜ್ನಬಿ”ಗಳು! ಅಂದರೆ ವಿದೇಶಿಯರು. ಇಲ್ಲಿ ಬಹುತೇಖ ಕೆಲಸಗಳನ್ನು ಮಾಡುವುದು ಅಜ್ನಬಿಗಳೆ. “ನಾನ್ ಸೌದಿಗಳು” ಇಲ್ಲಿಂದ ಹೊರಟು ಹೋದರೆ ಇಲ್ಲಿಯವರ ಬದುಕು ನರಕ ಎನ್ನುತ್ತಾರೆ ನಮ್ಮವರು.

ಇಲ್ಲಿಯವರಿಗೆ ಕಬ್ಸಾ ತಿನ್ನುವುದು, ಕಾರನ್ನು ವೇಗವಾಗಿ ಓಡಿಸುವುದು, ನಿದ್ದೆ ಮಾಡುವುದು ಬಿಟ್ಟರೆ ಮತ್ತೇನು ಕೆಲಸವಿಲ್ಲ ಎನ್ನುತ್ತಾನೆ ಗೆಳೆಯ ಕೇರಳದ ವಯನಾಡಿನ ರೆಹಮಾನ್. ಸೌದಿಗಳನ್ನು ಇವನು ದಿನಕ್ಕೆ ಎಷ್ಟು ಬಾರಿ ಬೈದುಕೊಳ್ಳುತ್ತಾನೆ ಎಂದು ಲೆಕ್ಕ ಹಾಕಿಕೊಳ್ಳಲು ಸೋತಿದ್ದೇನೆ. ಅವನ ಪ್ರಕಾರ ಸೌದಿ ಅರೇಬಿಯಾದ ಬೇರೆ ಊರುಗಳ ಜನಕ್ಕಿಂತ  ಇಲ್ಲಿಯವರಿಗೆ ಧಿಮಾಕು, “ಕೊಬ್ಬು” (ಕೊಬ್ಬು, I mean fat, ಸೌದಿಗಳ ಬದುಕಿನಲ್ಲಿ ಎಷ್ಟು ಪ್ರಾಮುಖ್ಯ ಅಂತ ಮುಂದಿನ ವಾರ ಹೇಳುತ್ತೇನೆ), “ಹೆಡ್ವೈಟ್” ಜಾಸ್ತಿಯಂತೆ. ಈ “ವಾದಿ” ಜನ ನಮ್ಮಲ್ಲಿನ ಆದಿವಾಸಿಗಳಿದ್ದಂತೆ ಅಂತೆ, ಜನರನ್ನು ಹೇಗೆ ಮಾತನಾಡಿಸಬೇಕೆಂಬ ಕನಿಷ್ಠ ತಿಳುವಳಿಕೆ ಇಲ್ಲದವರಂತೆ, ಒಟ್ಟಿನಲ್ಲಿ ಅವನ ಪ್ರಕಾರ ಇವರುಗಳು ಸೈತಾನ್ ಗಳು! ರೆಹಮಾನ್ ಬಕಾಲ(ಚಿಲ್ಲರೆ ಅಂಗಡಿ)ದಲ್ಲಿ ಕೆಲಸ ಮಾಡುವವನು. ಇವನ ರೂಮ್ ಮೇಟ್ಟೂ ಗೆಳಯನೂ ಒಂದೇ ರಾಜ್ಯದವನೂ ಆದ ಮೊಹಮದ್ ರೆಹಮಾನಿನ ಬಕಾಲದ ಪಕ್ಕದಲ್ಲಿ ಬೂಫಿಯ ಇಟ್ಟಿರುವವನು. ಅವನ ಪ್ರಕಾರ ರೆಹಮಾನ್  “ಒರು ಬ್ರಾಂದನ್, ಅವನ ವಿಶ್ವಾಸಿಕ್ಕಾಂಬಟ್ಟಿಲ್ಯ” ; ಅವನಿಗೆ ಧಿಮಾಕು, ಮಾತಿಗೆ ಎದುರು ಮಾತನಾಡುತ್ತಾನೆ, ಸೌದಿಗಳು ಅವನನ್ನು ಎಷ್ಟೋ ಬಾರಿ ಹೊಡೆದಿದ್ದಾರೆ…., ನಾಲ್ಕು ಕಾಸು ಮಾಡಿಕೊಳ್ಳುವುದಕ್ಕೆ ಬಂದಾಗ ತಗ್ಗಿಬಗ್ಗಿ ನಡೆಯಬೇಕು…. ಹೀಗೆ ಏನೇನೋ ಹೇಳುತ್ತಾನೆ.

ಈ ರೆಹಮಾನ್ ಮೊಹಮ್ಮದ್ ರ ಮಾತುಗಳ ಕೇಳಿ ನಗುತ್ತ ಮನೆಗೆ ವಾಪಸ್ಸಾಗುವಾಗ ತಟ್ಟನೆ ನೆನಪಿಗೆ ಬಂದದ್ದು ಇಲ್ಲಿಯವರ ವಿಷ್ ಮಾಡೊ ಪರಿ. ನಮ್ಮಲ್ಲಿನ ಮುಸಲ್ಮಾನ ಬಂಧುಗಳು ಭುಜವನ್ನು ಬಲದಿಂದ ಎಡಕ್ಕೆ, ಎಡದಿಂದ ಬಲಕ್ಕೆ ಆನಿಸಿ ಪರಸ್ಪರರನ್ನು ವಿಷ್ ಮಾಡಿಕೊಳ್ಳುವ ಪರಿಯ ಹಾಗೆ ಇಲ್ಲಿ ಕೆನ್ನೆಕೆನ್ನೆಯನ್ನು, ಗಲ್ಲಗಲ್ಲಗಳನ್ನು, ಮೂಗುಮೂಗನ್ನು ಸ್ಪರ್ಶಿಸುವ ಮೂಲಕ ಬಂಧುತ್ವವನ್ನು ವ್ಯಕ್ತಪಡಿಸಿಕೊಳ್ಳುತ್ತಾರೆ. ಅರಬ್ ಸಂಸ್ಕೃತಿಯಲ್ಲೇ ವಿಶಿಷ್ಟವಾದ ಈ ಸೌದಿ ಸಂಸ್ಕೃತಿಯಲ್ಲಿ ಅದರಲ್ಲೂ ನನ್ನ ವಾದಿಯ ಬದೂ(ನ್) ಸಂಸ್ಕೃತಿಯಲ್ಲಿ ಈ ವಿಧಾನ ತುಂಬ ಪ್ರಸಿದ್ಧ ಮತ್ತು ತುಂಬ ಪ್ರಾಮುಖ್ಯ ಪಡೆದಿರುವಂತದ್ದು. ಚಿಕ್ಕ ಮಗುವಿನಿಂದ ಹಿರಿಯರವರೆಗೆ, ಬಡವ ಬಲ್ಲಿದ ಎಂಬ ಮತ್ತು ಮೈಬಣ್ಣದ ಗೊಡವೆಗಳಿಲ್ಲದೆ ಎಲ್ಲರೂ ಇದನ್ನು ಮಾಡುತ್ತಾರೆ. ಇದು ಇಲ್ಲಿಯವರ ಕೂಡು ಬಾಳುವೆಯನ್ನು, Unityಯನ್ನು ಸೂಚಿಸುತ್ತದೆ ಎಂದು ನಾ ಅರ್ಥ ಮಾಡಿಕೊಂಡಿದ್ದೇನೆ.

ಇಲ್ಲಿ ಇನ್ನೊಂದು ಸ್ವಾರಸ್ಯವೇನೆಂದರೆ  ಮೂಗನ್ನು ಮುಟ್ಟಿಕೊಳ್ಳುತ್ತ ತುಟಿಯಿಂದ ಪ್ಚುಪ್ಚು ಎಂದು ಮುಟ್ಟದೆ ಮುತ್ತಿಡುವುದು. ಹೀಗೆ ಪರಸ್ಪರ ಮೂಗನ್ನು ಮುಟ್ಟಿಕೊಂಡು, ಮುಟ್ಟದೆ ಮುತ್ತಿಟ್ಟು ತಮ್ಮ ಪ್ರೀತಿ, ಕಾಳಜಿಗಳನ್ನು ವ್ಯಕ್ತಪಡಿಸುವ ಇಲ್ಲಿಯವರ ಪರಿ ನನಗೆ ಅಪ್ಯಾಯಮಾನವಾಗಿ ಕಂಡಿದೆ. ಮುಟ್ಟಿಸಿಕೊಂಡರೆ “ತೀಟ್ಟು” (ಮೈಲಿಗೆ) ಆಗುವೆನೆಲ್ಲ ಎಂದು ಎರಡು ಕೈಗಳ ಜೋಡಿಸಿ ನಮಸ್ಕಾರ ಮಾಡುವ ಸಂಸ್ಕೃತಿಯಲ್ಲಿ ಬೆಳೆದ ನನ್ನಂತಹವನು ಇಲ್ಲಿಯವರ ಈ ಮೂಗುಸ್ಪರ್ಶದ, ಮುಟ್ಟದೆ ಹೃದಯಕ್ಕೆ ಮುತ್ತಿಡುವ ವಿಧಾನವ ಕಂಡು  ಬೆರಗಾಗುವುದು ಸಹಜವೆ! ಮಜ್ರಾಗಳಲ್ಲಿ ಕೆಲಸ ಮಾಡುತ್ತಿರುವ ನಮ್ಮ ಜನ ನೆನಪಾಗಿ ನಮ್ಮಲ್ಲೇಕೆ ಈ ಮುಟ್ಟಿಕೊಳ್ಳುವ ವಿಧಾನ ಇಲ್ಲ ಎಂದು ನೋವಾಗುತ್ತದೆ. ಊರಿನ ನಮ್ಮ ತಾತನ ತೋಟವನ್ನು ಕಟ್ಟಿದ ಕಂಬಜ್ಜ ನೆನಪಿಗೆ ಬರುತ್ತಾನೆ. ಅವನ ಮುಟ್ಟಿದ್ದಕ್ಕೆ ಮನೆಯಲ್ಲಿ ಬೈಸಿಕೊಂಡಿದ್ದು ನೆನಪಿಗೆ ಬರುತ್ತದೆ. ಎದೆಗೆ ಇರಿದಂತಾಗುತ್ತದೆ. ಜನರನ್ನು ಮುಟ್ಟದಿರುವುದು ಪಾಪವಲ್ಲವೆ, ಮುಟ್ಟದಿರುವ ನನ್ನಂತಹವರು ಪಾಪಿಗಳಲ್ಲವೆ ಅನಿಸುವುದು. ಊರಿಗೆ ಹೋದಾಗ ಆತನ ಮಗ ಹೇಮಂತಪ್ಪನ ಕಷ್ಟಗಳ ಮುಟ್ಟಬೇಕೆನಿಸುವುದು. ಕಳೆದ ಬಾರಿ ಹೋಗಿದ್ದಾಗ ಹೇಮಂತಪ್ಪ ಹೇಳುತ್ತಿದ್ದ ಮಾತುಗಳು ತಲೆಯೊಳಗೆ ಅಲೆಗಳೆಬ್ಬಿಸುತ್ತಿರುವಾಗ ನನ್ನ ಮುಂದಿರುವ ಸೌದಿ ವಿದ್ಯಾರ್ಥಿಗಳ ನೋಡುತ್ತೇನೆ. ಒಬ್ಬರಿಗೊಬ್ಬರು ಮೂಗ ಮುಟ್ಟಿಸಿಕೊಳ್ಳುವುದು, ಕೆಲವರು ಗಲ್ಲಗಳ ತಾಕಿಸುತ್ತ ಮುಟ್ಟದೆ ಮುತ್ತಿಡುವುದು ಎಲ್ಲವು ಸೋಜಿಗವಾಗಿ ಕಾಣುತ್ತದೆ. ಇವರ ನೋಡಿ ಹೊಸ ಉತ್ಸಾಹ ಮೂಡುವುದು. ಮನದೊಳಗೆ ವಿಚಿತ್ರ ಕಂಪನವಾಗುವುದು. ನಿಮ್ಮ ಮುಂದೆ ಎರಡು ಚಿತ್ರಗಳನ್ನಿಟ್ಟು ಈ ವಾರ ಮುಗಿಸುತ್ತೇನೆ. ಈ ಚಿತ್ರಗಳು ನನ್ನವಲ್ಲ, ನನ್ನ ಸುತ್ತ ನಡೆದ ಘಟಿಸಿದ ಕ್ಷಣಗಳು.

ಚಿತ್ರ ೧:

ಮದ್ರಾಸಿನಿಂದ ಬಂದ ವೈದ್ಯರೊಬ್ಬರು ಇಲ್ಲಿ ಸಖತ್ ಫೇಮಸ್. ಡ್ಯೂಟಿ ಮುಗಿಸಿ ಸೌದಿಗಳ ಮನೆಗೆ ಹೋಗಿ ಚಿಕಿತ್ಸೆ ಮಾಡಿ ದುಡ್ಡು ಬಾಚುತ್ತಿದ್ದಾರೆಂಬುದು ಸುಮಾರು ದಿನಗಳಿಂದ ಇಲ್ಲಿಯ ಭಾರತೀಯರ ನಡುವೆ ಕೇಳಿಬರುತ್ತಿರುವ ಮಾತು. ಅಜ್ನಬಿಗಳಲ್ಲೇ ಭಾರತೀಯರನ್ನು ಗೌರವದಿಂದ, ಪ್ರೀತಿಯಿಂದ ಕಾಣುವ ಸೌದಿಗಳು ನಮ್ಮೀ ಘನ ವೈದ್ಯರನ್ನು ತಮ್ಮ ಕೋಣೆಯವರೆಗೂ ಬಿಟ್ಟುಕೊಳ್ಳುತ್ತಾರಂತೆ. ಇಂತಹ ಪ್ರಸಿದ್ಧ ವೈದ್ಯರೊಮ್ಮೆ ತಮ್ಮ ಹೆಂಡತಿಗೆ ಬಂಗಾರ ಕೊಡಿಸಲು ಬಯಸಿ ತನ್ನ ಕಸ್ಟಮರ್ರೂ ಒಳ್ಳೆಯ ಮನುಷ್ಯನೂ ಆದ ಆ ಸೌದಿಯ ಬಂಗಾರದಂಗಡಿಗೆ ಹೋಗಿದ್ದಾರೆ. ಆ ಸೌದಿ ನಮ್ಮ ವೈದ್ಯರ ಫೇವರಿಟ್ ಆಗಲು ಹಲವು ಕಾರಣಗಳಿವೆ; ಅವುಗಳಲ್ಲೊಂದು ಫೀಸ್ ಎಷ್ಟು ಕೇಳಿದರೂ ನಗುತ್ತ ಆತ ಕೊಡುತ್ತಿದ್ದುದು, ಆತನ ಮನೆಗೋದಾಗ ತನ್ನ ಜೀವಿತದಲ್ಲೇ ನೋಡಿರದ ಆತಿಥ್ಯವನ್ನು ನೀಡುವುದು. ಒಮ್ಮೊಮ್ಮೆ ಡಾಕ್ಟರ್ ಯೋಚಿಸುತ್ತಾರೆ, ಇಲ್ಲಿಯ ಕೆಲವರು ತುಂಬಾ ಒಳ್ಳೆಯವರು, ಅವರಂತಹವರನ್ನು ತನ್ನ ಜೀವಿತದಲ್ಲೇ ನೋಡಿಲ್ಲ ಎಂದು. ಆದರೆ ಅವರು ನಂಬಿರುವುದು “ಈ ಸೌದಿಗಳಿಗೆ ತಲೇಲಿ ಬುದ್ಧೀನೆ ಇಲ್ಲ, ಮೂಢರು”. ಇಂತಹ ಮೂಢನೂ ಒಳ್ಳೆಯವನೂ ಆದ ಆ ಸೌದಿಯ ಅಂಗಡಿಗೆ ವಿಜಯಿಸಿದರು ನಮ್ಮ ವೈದ್ಯರು. ಆತ ತನ್ನ ಸ್ವಭಾವದ ಅದೇ ಚಾಳಿಯನ್ನು ಮುಂದುವರೆಸಿ ಪ್ರೀತಿಯ ಮಳೆಗೆರೆದು ಬಿಸಿನೆಸ್ ಬ್ಯುಸಿಯಾಗಿರುವ ಹೊತ್ತಲ್ಲಿ ಬಂದ ಡಾಕ್ಟರ್ ಗೆ ಆದಷ್ಟು ಕಡಿಮೆ ಬೆಲೆಯಲ್ಲಿ ಚಿನ್ನ ನೀಡಿ ಕಳಿಸಿಕೊಟ್ಟ.

ಸಿಡಿದು ಹೋಗುವಷ್ಟು ಉಬ್ಬಿದ್ದ ನಮ್ಮ ಡಾಕ್ಟರ್ ದಂಪತಿಗಳು ಮನೆಗೆ ಬಂದು ಮಾರ್ಕೆಟ್ ರೇಟ್ ಗಿಂತ ತುಂಬ ಚೀಪ್ ಆಗಿ ಸಿಕ್ಕ ಬಂಗಾರದ ಬಿಸ್ಕತ್ತುಗಳನ್ನು ತಿರುತಿರುಗಿಸಿ ನೋಡಿದ್ದೇ ನೋಡಿದ್ದು. ಮೈಮನಸ್ಸುಗಳನ್ನೆಲ್ಲ ಆ ಬಿಸ್ಕಟ್ ಗಳ ಮೇಲೆ ಏಕೀಕರಿಸಿಕೊಂಡಿದ್ದಾಗ ಎಲ್ಲೊ ಮೂಲೆಯಲ್ಲಿ ಬಿದ್ದಿದ್ದ ಮೊಬೈಲ್ ಸದ್ದು ಮಾಡಿ ಕೂಗಿಕೊಳ್ಳಲಾರಂಭಿಸಿತು. ಬಂಗಾರದ ಮೈಯನ್ನು ತಪಾಸನೆ ಮಾಡುವ ಈ ಹೊತ್ತಲ್ಲಿ ಬಂದ ಕರೆಯನ್ನು ಶಪಿಸಿಕೊಳ್ಳುತ್ತ ವೈದ್ಯರು ಮೊಬೈಲನ್ನು ತೆಗೆದು ಕಾಲ್ ಮಾಡಿದ್ದ್ಯಾರೆಂದು ನೋಡಿದರು. ಅರೆ! ಬಂಗಾರದಂಗಡಿಯ ಆ ಸೌದಿ! ತಾವು ಎರಡು ಬಿಸ್ಕಟ್ ಬಿಟ್ಟು ಹೋಗಿದ್ದೀರಿ, ಬಂದು ತೆಗೆದುಕೊಂಡು ಹೋಗಿ ಎಂಬ ಆ ಸೌದಿಯ ಮಾತ ಕೇಳಿ ಇಬ್ಬರೂ ಸಿಡಿದು ಹೋದರು. ಬಿಟ್ಟಿಯಾಗಿ ಸಿಕ್ಕ ಆ ಎರಡು ಬಿಸ್ಕತ್ತುಗಳನ್ನು ತಂದು ನಮ್ಮೀ ಫೇಮಸ್ ಡಾಕ್ಟರ್ ತನಗೆ ಪರಿಚಯವಿರುವ ಇಂಡಿಯನ್ಸ್ ಗಳ ನಡುವೆ ಸೇಲ್ ಗಿಟ್ಟರು. ಬಿಟ್ಟಿ ಬಿಸ್ಕಟ್ ಗಳಿಗೆ ಇಷ್ಟು ರೇಟಾ ಎಂದು ನಮ್ಮವರು ಚೌಕಾಸಿ ಮಾಡುತ್ತಿದ್ದರು.

ಚಿತ್ರ ೨:

ಮೊನ್ನೆ ಒಂದು ಸಂಜೆ ನಾನು ಬಕಾಲದೊಳಗೆ ಕಾಲಿಡುವಾಗ ರೆಹಮಾನ್ ಜೋರಾಗಿ ನಗುತ್ತಿದ್ದ. ಅವನ ಜೊತೆ ಇನ್ನಿಬ್ಬರು ಸೇರಿಕೊಂಡು ಬಕಾಲದ ತುಂಬೆಲ್ಲ ನಗು. “ಎಂದಡ ಇತ್ತರ ಸಂದೋಷಮ್!?” ಕೇಳಿದ್ದಕ್ಕೆ ಅವನು ನನ್ನನ್ನೇ ವಾಪಸ್ ಪ್ರಶ್ನಿಸಿದ “ಮೊಹಮ್ಮದಿಂಡೆ ವಿವರಂ ಅರಿನ್ಜ್ಯೋ?!” ಪಕ್ಕದ ಬೂಫಿಯಾದ ಮಹಮ್ಮದ್ ಇವರ ನಗುವಿಗೆ ಕಾರಣವಾಗಿದ್ದಾನೆ ಎಂಬುದು ಮಾತ್ರ ಗೊತ್ತಾಯಿತು. ನಲವತ್ತು ನಲವತ್ತೈದರ ಪ್ರಾಯದ ಮಹಮ್ಮದ್ ಮತ್ತವನ ಆ ಧೃಢಕಾಯದ ಮೈಕಟ್ಟು, ಕಪ್ಪಗೆ ಮಿರಮಿರ ಮಿಂಚುತ್ತಿದ್ದ ಅವನ ಮುಂಗುರುಳು ಕಣ್ಣ ಮುಂದೆ ಬಂದು  “ಎನಕ್ಕ್ ಅರಿಯಿಲ್ಲ, ಎಂದ ಆಯಿ ಆ ಪುಳ್ಳಿಕ್ಕ್?” ಎಂದು ಕೇಳಿದ್ದಕ್ಕೆ ಆತ ಹೇಳಲು ಶುರು ಮಾಡಿದ: ರೆಹಮಾನ್ ನೆನ್ನೆ ರಾತ್ರಿ ಮಲಗಿದ್ದು ಒಂದೂವರೆಗಂತೆ, ನಾಳೆ ಬೆಳಿಗ್ಗಿನ ವ್ಯಾಪಾರಕ್ಕೆ ಪರೋಟ ಹಾಕುತ್ತಿದ್ದ ಮಹಮ್ಮದ್ ಎಷ್ಟು ಹೊತ್ತಿಗೆ ಮಲಗಿದನೆಂಬುದು ಇವನಿಗೆ ಗೊತ್ತಿಲ್ಲ. ಬೆಳಿಗ್ಗೆ ಆರು ಗಂಟೆ ಸುಮಾರಿಗೆ ಯಾರೊ ಜೋರಾಗಿ ಕೂಗಿಕೊಂಡ ಸದ್ದಾಗಿ ಎದ್ದರೆ ಮಹಮ್ಮದನ ತುಟಿ ಸೀಳಿ, ಮೂಗಿನ ತುದಿ ಕಿತ್ತುಕೊಂಡು ರಕ್ತ ಸುರಿಯುತ್ತಿತ್ತಂತೆ. ಎ.ಸಿ ಹಾಕಿದರೆ ಸಿಡಿದುಬೀಳುತ್ತಿದ್ದ ಮಹಮ್ಮದ್ ಬೆಳಗ್ಗಿನ ಜಾವ ಶೆಖೆ ಆದಂತಾಗಿ ಫ್ಯಾನ್ ಹಾಕಿದ್ದಾನೆ. ಸ್ವಿಚ್ ಹಾಕುವುದನ್ನೇ ಕಾಯುತ್ತಿದ್ದ ಆ ಫ್ಯಾನ್, ಹಾಕಿದ್ದೇ ತಡ ಪಟ್ ಎಂದು ಕಿತ್ತುಕೊಂಡು ತನ್ನ ಮೊರದಗಲದ ರೆಕ್ಕೆಗಳಲ್ಲೊಂದರಲ್ಲಿ ಮೊಹಮ್ಮದನ ಮುಷ್ಟಿಗೆ ಗುದ್ದಿ ತಿರುಗುತ್ತ ನೆಲಕ್ಕೆ ಬಿದ್ದಿದೆ. ಆ ಎ.ಸಿ ಮತ್ತು ಫ್ಯಾನ್ ಗಳೆರಡು ಸೆಕೆಂಡ್ ಹ್ಯಾಂಡಿನಲ್ಲಿ ಲಿಯೋಮ್ ಖಮೀಸ್ ನ (ಗುರುವಾರದ) ಸಂತೆಯಲ್ಲಿ ಕೊಂಡವು. ಸೌದಿಗಳೊ ಅಥವ ಅಜ್ನಬಿಗಳೊ ಸಾಕಾಗವಷ್ಟು ಉಜ್ಜಿ ಗುಜರಿ ಅಂಗಡಿಯಲ್ಲಿ ಮಾರಿ, ಆ ಗುಜರಿಯವರು ಗುರುವಾರದ ಸಂತೆಯಲ್ಲಿ ಮಾರಾಟಕ್ಕಿಟ್ಟು, ಇವರುಗಳು ಚೌಕಾಸಿ ಮಾಡಿ ತಂದಂತಹ ವಸ್ತುಗಳವು.  ರೂಮಿನಲ್ಲಿರುವ ಮೂವರೂ ಅವನ ಈ ಸ್ಥಿತಿಗೆ ಕೇಕೆ ಹಾಕಿ ನಗುತ್ತ ಶುಶ್ರೂಷೆ ಮಾಡಿ ನಖ್ಹಲ್ ಜಮಾಯ್ (ಬಸ್ಟಾಂಡ್) ಹತ್ತಿರವಿರುವ ಬೆಂಗಳೂರಿನವನ ಫಾರ್ಮಸಿಗೆ ಕರೆದುಕೊಂಡು ಹೋಗಿ ಔಷಧಿ, ಬ್ಯಾಂಡೇಜ್ ಹಾಕಿಸಿಕೊಂಡು ಬಂದಾಗ ಗಂಟೆ ಏಳೂವರೆ.

ದಿನವೂ ಆರು ಗಂಟೆಗೆ ಬೂಫಿಯಾದ ಬಾಗಿಲನ್ನು ತೆಗೆಯುವ ಮಹಮ್ಮದ್ ಇಂದು ಎಂಟಕ್ಕೆ ತೆಗೆದಿದ್ದಾನೆ. ದಿನವೂ ಹತ್ತು ಗಂಟೆಗೆ ಖಾಲಿ ಆಗಿಬಿಡುವ ಪರೋಟ ಇವತ್ತು ಹನ್ನೊಂದಾದರೂ ಹಾಗೆ ಉಳಿದಿತ್ತು. ಆಗ ಪೋಲಿಸ್ ಜೀಪ್ ಬೂಫಿಯದ ಮುಂದೆ ಬಂದು ನಿಂತಿದೆ. ಸಿಗರೇಟ್ ಗಾಗಿ ರೆಹಮಾನನ ಬಕಾಲಕ್ಕೆ ಬಂದಿರಬೇಕೆಂದು  ಮಹಮದ್ ಸುಮ್ಮನೆ ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಿದ್ದಿದ್ದಾನೆ. ಆ ಷೋರ್ತ (ಪೋಲಿಸ್) “ಯೇ,ಬೂಫಿಯ…ತಾಲ್ ಹಿನ” ಎಂದ. ಅವರುಗಳಿಗೆ ಫಥೂರ್(ತಿಂಡಿ) ಏನಾದರೂ ಬೇಕೇನೊ ಎಂದು ಮೆಟ್ಟಿಲಿಂದ ಕೆಳಗಿಳಿದ. ಇಳಿದ ರಭಸಕ್ಕೆ ತುಟಿ ಮೂಗುಗಳಲ್ಲಿ ನೋವು ಚುಯ್ಯೆಂದಿತು. ಅವರು ಅವನನ್ನು ಪೋಲಿಸ್ ಸ್ಟೇಷನ್ ಗೆ ಎಳೆದುಕೊಂಡು ಹೋಗಿದ್ದಾರೆ. ಕಾರಣವ ಕೇಳಿದ್ದಕ್ಕೆ ಏಟು ಬಿದ್ದಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೌದಿಯೊಬ್ಬನ ಮುಂದೆ ಇವನನ್ನು ನಿಲ್ಲಿಸಿದಾಗಲೆ ಇವನಿಗೆ ಎಲ್ಲವೂ ಸ್ಪಷ್ಟವಾದದ್ದು. ವಾರ್ಡ್ ಒಳಗೆ ಹೋಗುತ್ತಿರುವಾಗ ಸೌದಿಯೊಬ್ಬ ಇವನ ಕೆನ್ನೆಗೆ ಜೋರಾಗಿ ಬಾರಿಸಿದ್ದಾನೆ. ಡ್ರಿಪ್ ಹಾಕಿಸಿಕೊಂಡು ಮಲಗಿದ್ದ ಆ ಸೌದಿ ಇವನನ್ನು ನೋಡಿ “ಲಾ” ಎಂದ, ಮಹಮ್ಮದನಿಗೆ ಹೋದ ಜೀವ ಬಂದಂತಾಯ್ತು. ವಾಂತಿಭೇದಿಗಳಿಂದ ನರಳಿ ಹೋದ ಆ ಸೌದಿ ಷರ ಷೋರ್ತ(ಪೋಲಿಸ್ ಸ್ಟೇಷನ್ ರೋಡ್)ದಲ್ಲಿರುವ ಯಾವುದೊ ಬೂಫಿಯಾವೊಂದರಲ್ಲಿ ಫಥೂರ್ ತಿಂದ ನಂತರವೇ ಹೀಗೆ ಆಯ್ತಂತೆ. ಮುಸ್ಥಷ್ಫ(ಆಸ್ಪತ್ರೆ)ಕ್ಕೆ ಅಡ್ಮಿಟ್ ಆಗಿ ಪೋಲಿಸ್ ಗೆ ಕಂಪ್ಲೇಟ್ ಕೊಟ್ಟಿದ್ದಾನೆ. ಪೋಲಿಸ್ ಆ ರಸ್ತೆಯಲ್ಲಿರೊ ಬೂಫಿಯಾಗಳೆಲ್ಲದರ ಒಡೆಯರನ್ನು ಎಳೆದುಕೊಂಡು ಬಂದಿದ್ದಾರೆ. ಅದೃಷ್ಟವಶಾತ್, ಆ ಸೌದಿ ತಿಂದದ್ದು ಮಹಮ್ಮದನ ಬೂಫಿಯದಲ್ಲಲ್ಲ. ಆ ಹಾಳಾದ ಫ್ಯಾನ್ ಬಿದ್ದ ನೋವಲ್ಲಿ ಬೇಯುತ್ತಿರುವಾಗ ಇಂತಹ ಘಟನೆ ನಡೆದು ಮನಸ್ಸು ಕೊತಕೊತ ಕುದಿಯುತ್ತಿತ್ತು.

ಇಷ್ಟು ಸಾಲದೆಂಬಂತೆ ಮಧ್ಯಾಹ್ನದ  ಸಲ(ನಮಾಜು) ಮುಗಿದ ನಂತರ ಬಲಿದಿಯಾ (ಮುನಿಸಿಪಾಲಿಟಿ) ಜನ ಬಂದು ಕಟಿಂಗ್ ಮಾಡಿಲ್ಲ, ಕೂದಲು ಬಿಟ್ಟುಕೊಂಡು ನಿಯಮವನ್ನು ಉಲ್ಲಂಘಿಸಿದ್ದಾನೆಂದೂ ಬೂಫಿಯ ಸ್ವಚ್ಛವಾಗಿಲ್ಲವೆಂದು ಅವನಿಗೆ ಎರಡು ಸಾವಿರ ರಿಯಾಲ್ ದಂಡ ವಿಧಿಸಿ ಹೋದರಂತೆ!…. ಹೇಳಿ ರೆಹಮಾನ್ ನಗುತ್ತಿದ್ದ. ಆ ನಗುವಿನ ಹಿಂದೆ ನೋವಿದ್ದಂತಿತ್ತು.

ಅರೇಬಿಯಾ ಕಾಲಂ: ಮರುಭೂಮಿಯೆಂಬ ಸ್ವರ್ಗ ಮತ್ತು ನರಕ

ಹೋದ ತಿಂಗಳು ನನಗೆ ಕೆಲವೊಂದು ಪುಸ್ತಕಗಳು ಬೇಕಾಗಿದ್ದವು. ಕವಿಮಿತ್ರ ಆಲೂರು ದೊಡ್ಡನಿಂಗಪ್ಪ ತನ್ನ ಹೊಸ ಸಂಕಲನದ ಜೊತೆ ನನಗೆ ಬೇಕಿದ್ದ ಪುಸ್ತಕಗಳನ್ನು “ಕೊರಿಯರ್” ಮಾಡಿದ. ಪುಸ್ತಕಗಳು ಅಥವ ಪತ್ರಗಳು ಮಾಮೂಲಿ ಅಂಚೆಯಲ್ಲಿ ಇಲ್ಲಿಗೆ ತಲುಪಲು ಕನಿಷ್ಠವೆಂದರು ಇಪ್ಪತ್ತು ದಿನಗಳು ಬೇಕಾಗುತ್ತವೆ. ಆದ್ದರಿಂದ ಆಲೂರು ಕೊರಿಯರ್ ಮಾಡಿದ. ಈ ಕೊರಿಯರ್ಸ್ ಎಂಬ ಫಾಸ್ಟ್ ಎಕ್ಸ್ ಪ್ರೆಸ್ ವ್ಯವಸ್ಥೆ ಇಂದಿನ “ಒನ್ ಮಿನಿಟ್” ಸತ್ಯವಾಗಿ  ನಮ್ಮ ಬದುಕನ್ನು ಆವರಿಸಿರುವುದು ಸದ್ಯದ ವೇಗದ ಜಗತ್ತಿನ ಇನ್ ಸ್ಟೆಂಟ್  ಉದಾಹರಣೆ.

ನಮ್ಮ ಬಾಲ್ಯದ ದಿನಗಳಲ್ಲಿ ವಿಷಯ ಬೇಗ ತಿಳಿಯಲು ಇದ್ದ ವ್ಯವಸ್ಥೆ “ಟೆಲಿಗ್ರಾಮ್”. ನನ್ನ ಮನಸ್ಸಲ್ಲಿ ಆ ಹೊತ್ತಿನ ಪತ್ರ ಮತ್ತು ಟೆಲಿಗ್ರಾಮ್ ಗಳು ಇಂದಿಗೂ ಅಚ್ಚಳಿಯದೆ ನಿಂತುಬಿಟ್ಟಿವೆ. ನನ್ನ ತಾಯಿ ಹೆಚ್.ಡಿ.ಕೋಟೆಯಿಂದ ಬರೆಯುತ್ತಿದ್ದ ಇನ್ ಲ್ಯಾಂಡ್ ಲೆಟರ್ ನಮಗೆ ತಲುಪುವಾಗ ಆ ಕಾಗದ ಬರೆದು ಇಪ್ಪತ್ತು ದಿನಗಳಿಗೂ ಜಾಸ್ತಿಯಾಗಿರುತ್ತಿದ್ದವು. ಆದರೆ ನಮ್ಮಪ್ಪ ಒಮ್ಮೆ ಕಳುಹಿಸಿದ ಟೆಲಿಗ್ರಾಮ್ ತಕ್ಷಣ ನನ್ನ ತಾತನ ಕೈಗೆ ಸಿಕ್ಕು ನಾವೆಲ್ಲರು ಅಳುವಂತಾಗಿತ್ತು. ನನ್ನನ್ನು ಆ ದಿನ ಶಾಲೆಯಿಂದ ಬೇಗನೆ ಕರೆದುಕೊಂಡು ಹೋದರು. ಮನೆಯಲ್ಲಿ ಅಜ್ಜಿ, ಚಿಕ್ಕಮ್ಮ ಮತ್ತ್ಯಾರ್ಯಾರೊ “ವೊಪ್ಪಾರಿ”ಯಿಟ್ಟು ಅಳುತ್ತಿದ್ದರು. ನನ್ನ ಪ್ರೀತಿಯ ತಮ್ಮ ಎತ್ತಿನಗಾಡಿಯಿಂದ ಬಿದ್ದು ಸತ್ತು ಹೋಗಿದ್ದ. ಬೆಳಿಗ್ಗೆ ೧೧ ಘಂಟೆಗೆ ಬಂದ ಟೆಲಿಗ್ರಾಮ್ ಎಲ್ಲರನ್ನು ಕಲಕಿಸಿದ್ದ ಹೊತ್ತದು. ಮೈಸೂರಿಗೆ ಹೊರಡಲು ಎಲ್ಲರು ಬೇಗಬೇಗನೆ ಹೊರಡುತ್ತಿದ್ದರು, ನನಗೆ ನನ್ನ ತಮ್ಮ ಯಾಕೆ ಗಾಡಿಯಿಂದ ಬಿದ್ದು ಸತ್ತು ಹೋದ ಎಂಬುದು ಅರ್ಥವಾಗದೆ ಅಳುತ್ತ ಕಾರಲ್ಲಿ ಹೋಗುವ ಖುಷಿಯಲ್ಲಿದ್ದೆ. ಅಗ ಟೆಲಿಗ್ರಾಮ್ ಬಂದ ಅದೇ ಪೋಸ್ಟ್ ಆಫೀಸ್ ನಿಂದ ಪೋಸ್ಟ್ ಮೇನ್ ಬಸವರಾಜಪ್ಪ ಬಂದು ನಮ್ಮ ತಾತನ ಹೆಸರಿಗೆ ಬಂದಿದ್ದ ಪತ್ರವನ್ನು ನೀಡಿ ಹೋದರು. ಆ ಕಾಗದವ ಓದಿ ಎಲ್ಲರ ಅಳು ಇನ್ನೆರಡು ಪಟ್ಟು ಜಾಸ್ತಿಯಾಯ್ತು. ಕಾಂಪೌಂಡಿನ ತುಂಬ ಅಳು, ಸಿಂಬಳಗಳು ತುಂಬಿ ಹೋಗುತ್ತಿದ್ದವು. ಅದು ನನ್ನಮ್ಮ ತಿಂಗಳ ಹಿಂದೆ ಬರೆದು ಪೋಸ್ಟ್ ಮಾಡಿದ್ದ ಪತ್ರ. ಅದರಲ್ಲಿ ನನ್ನ ತಮ್ಮನ ಕೀಟಲೆ, ಆಟ, ಹಠ; ಕಬ್ಬಿನ ಗದ್ದೆಗೆ ನುಗ್ಗುತ್ತಿದ್ದ ಆನೆಗಳ ಓಡಿಸಲು ಸಮರಾತ್ರಿಯಲ್ಲೂ ನನ್ನ ಚಿಕ್ಕಪ್ಪಗಳ ಜೊತೆ ಹೋಗುತ್ತಿದ್ದುದು, ಹತ್ತು ಹೆಚ್.ಪಿ ಮೋಟಾರಿನ ನೀರನ್ನು ಒಬ್ಬನೆ ಹಾಯಿಸುತ್ತಿದ್ದುದು; ಅವನ ಅಣ್ಣನ ( ನನ್ನ) ಬರುವಿಕೆಗಾಗಿ ಕಾಯುತ್ತಿರುವುದು ಎಲ್ಲವ ಬರೆದಿದ್ದಳು. ನನ್ನ ತಮ್ಮ ಮುರಳಿ ಎಂದರೆ ಎಲ್ಲರಿಗೂ ಇಷ್ಟ, ಪಟಪಟ ಎಂದು ಸದಾ ಮಾತನಾಡುತ್ತಲೆ ಇದ್ದ ಅವನು ಎಲ್ಲರನ್ನು ಸೆಳೆದುಬಿಡುತ್ತಿದ್ದ. ನನ್ನ ಅಮ್ಮನಿಗೆ ಅವನೆಂದರೆ ಪಂಚಪ್ರಾಣ, ಅವನ ಲೀಲೆಗಳ ಬಗ್ಗೆ ಪ್ರತಿ ಕಾಗದದಲ್ಲೂ ಬರೆಯುತ್ತಿದ್ದಳು. ಹಾಗೆ ಬರೆದ ಒಂದು ಕಾಗದ ನಮ್ಮನ್ನು ತಲುಪುವುದರೊಳಗೆ “MURALI DIED. START IMMIDIETLY” ಎಂಬ ಟೆಲಿಗ್ರಾಮ್ ಬಂದಿತ್ತು.

ಮುರಳಿಯ ಸಾವಿನ ಆ ದಿನಗಳನ್ನು ಯೋಚಿಸುತ್ತಲೆ ನಾನೂ ಅವನು ಸೇರಿದಾಗ ಇಬ್ಬರೂ ಓದುತ್ತಿದ್ದ ಚಂದಮಾಮ ನೆನಪಾಯ್ತು. ನನ್ನ ಮಗನಿಗೆ ಓದಿ ಹೇಳಲು ಚಂದಮಾಮ ಇಲ್ಲಿ ಸಿಗಬಹುದಾ ಅಂತ ನಮ್ಮ ಇಂಡಿಯನ್ ಅಂಗಡಿಗಳಲ್ಲಿ ಹೋಗಿ ಹುಡುಕಿದೆ, ಇರಲಿಲ್ಲ. ನಾನಿರುವ ಈ ಊರಲ್ಲಿ ನಮ್ಮ ಕನ್ನಡಿಗರು ಕಡಿಮೆ, ಆ ಕಾರಣಕ್ಕೆ ಇಲ್ಲಿ ಯಾವ ಕನ್ನಡ ಮಾಸಿಕಗಳೂ ಸಿಗುವುದಿಲ್ಲ. ಜೆದ್ದಾದಲ್ಲೊಮ್ಮೆ ನನಗೆ ತರಂಗ ಸಿಕ್ಕಿತ್ತು. ಇಲ್ಲಿ ಮಲೆಯಾಳಂ, ತಮಿಳು ಪತ್ರಿಕೆಗಳು-ಮಾಸಿಕಗಳು ಸಿಗುತ್ತವೆ. ಮಲೆಯಾಳಂ ಪತ್ರಿಕೆಗಳು ಕೆಲವು ಇಲ್ಲೇ ಗಲ್ಫ್ ನಲ್ಲಿ ಪ್ರಕಟಗೊಳ್ಳುತ್ತವೆ. ಇನ್ನು ತಮಿಳು ಮ್ಯಾಗ್ ಜಿನ್ ಗಳು ಇಂಡಿಯಾದಿಂದ ಬಂದು ಒಂದು ತಿಂಗಳ ನಂತರ ವಾದಿಗೆ ಬರುತ್ತವೆ. ಇಲ್ಲಿ ಮಜಾ ಏನೆಂದರೆ, ಆ ಮ್ಯಾಗ್ ಜಿನ್ ಗಳ ಒಳಗಿರೊ ಅರೆಬರೆ ಹೆಣ್ಣಿನ ಚಿತ್ರಗಳಿಗೆ ಕಪ್ಪು ಬಣ್ಣವ ಬಳಿದಿರುತ್ತಾರೆ; ನಮ್ಮ ಕನ್ನಡ ಮತ್ತು ತಮಿಳು ಓರಾಟಗಾರರು ಇಂಗ್ಲೀಷ್ ಮತ್ತು ಹಿಂದಿ ಬೋರ್ಡ್ ಗಳಿಗೆ ಟಾರ್ ಬಳಿದಂತೆ. ಹೆಣ್ಣಿನ ಅಂಗಾಂಗ ಪ್ರದರ್ಶನ ಪತ್ರಿಕೆಗಳಲ್ಲೂ ನಿಶಿದ್ಧ ಇಲ್ಲಿ. ಧಾರ್ಮಿಕ ಪೋಲಿಸರ ಕೈಗೆ ಇಂತಹ ಚಿತ್ರಗಳು ಸಿಕ್ಕರೆ ಶಿಕ್ಷೆ ಗ್ಯಾರಂಟಿ. ಪಾಪ ಆ ಸೌಂದರ್ಯದ ಅಧಿರಾಣಿಯರು ತಮ್ಮ ಬಿಳಿ ತೊಗಲಿಗೆ ಬಂದಿರುವ ಗತಿಯ ಕಂಡು ಮಮ್ಮುಲ ಮರುಗುತ್ತ ತಮ್ಮ ಒಡೆಯರ ಉದ್ದೇಶಗಳಿಗೆ ಇಲ್ಲಿ ಕಪ್ಪು ಪೂಸಲ್ಪಟ್ಟಿರುವುದ ಕಂಡು ನೋವಿನಲ್ಲೂ ನಗುತ್ತಿರುತ್ತಾರೆ. ಈ ಕಪ್ಪು ಬಣ್ಣದ ಬಿಳಿ ನಟಿಯರುಗಳಿಂದ ತುಂಬಿರುವ ಮ್ಯಾಗ್ ಜಿನ್ ಗಳನ್ನು ಮಾರುವ ಮಂದಿ ಕಣ್ತಪ್ಪಿ, ಏಮಾರಿ ಯಾವುದಾದರೂ ಅಶ್ಲೀಲ ಚಿತ್ರಗಳು ಉಳಿದುಬಿಟ್ಟಿವೆಯೇನೋ ಅಂತ ಮೂರ್ನಾಲ್ಕು ಬಾರಿ ತಿರುಗಿಸಿ ಮಾರಾಟಕ್ಕಿಡುತ್ತಾರೆ. ಇಲ್ಲಿ ಸೆಕ್ಸ್ ಗೆ ಸಂಬಂಧಿಸಿದ ಎಲ್ಲವೂ ನಿಷಿದ್ಧ. ಪುಸ್ತಕಗಳಿಗೇ ಈ ಗತಿಯೆಂದರೆ ಇನ್ನು ಕ್ಯಾಸೆಟ್ ಗಳ ಬಗ್ಗೆ ಮಾತನಾಡುವಂತಿಲ್ಲ. ಇಲ್ಲಿಯ ಇಂಡಿಯನ್ ಅಂಗಡಿಗಳಲ್ಲಿ ಪತ್ರಿಕೆಗಳು ಮಾತ್ರ ಸಿಗುವುದಿಲ್ಲ, ಮಲೆಯಾಳಂ, ತಮಿಳು, ಹಿಂದಿ ಚಲನಚಿತ್ರಗಳ ಸಿ.ಡಿಗಳೂ ಸಿಗುತ್ತವೆ. ಇವು ಅನ್ ಅಫಿಶಿಯಲ್ ವ್ಯಾಪಾರ. ಏನಾದರೂ ಹೆಚ್ಚುಕಡಿಮೆಯಾದರೆ ಅಂಗಡಿಯ ಲೈಸೆನ್ಸ್ ಕಿತ್ತುಕೊಳ್ಳಲ್ಪಡುವ ಭಯದಲ್ಲಿ ಅವರುಗಳು ಜಾಗರೂಕತೆಯಿಂದ ವ್ಯಾಪಾರ ಮಾಡುತ್ತಿರುತ್ತಾರೆ. ಮೊನ್ನೆ ಹೀಗೆ ಇಲ್ಲಿಯ ಒಂದು ಅಂಗಡಿಯಲ್ಲಿ ಕರಿಬೇವಿನ ಸೊಪ್ಪು ಮಾರುತ್ತಿದ್ದರು, ಅನ್ ಅಫಿಷಿಯಲ್ ಆಗಿ (ಇಲ್ಲಿಯವರು ಅದನ್ನು ಬಳಸುವುದಿಲ್ಲ). ಒಂದು ದಿನ ಷೋರ್ತ (ಪೋಲಿಸ್) ಬಂದು ಅಂಗಡಿಯೊಳಗಿದ್ದ ತರಕಾರಿಗಳ ಜೊತೆ ಮಲಗಿದ್ದ ಕರಿಬೇವನ್ನು ಏನೆಂದು ಕೇಳಿ ತೆಗೆದುಕೊಂಡು ಹೋಗಿದ್ದಾರೆ. ಎರಡು ದಿನ ಕಳೆದು ಆ ಸೊಪ್ಪಲ್ಲಿ ಮತ್ತು ತರಿಸುವ ಗುಣವಿದೆ ಎಂದು ಹೇಳಿ ಅಂಗಡಿಗೆ ತಾತ್ಕಾಲಿಕ ಸೀಲ್ ಹಾಕಿದರು. ಮಾದಕ ವಸ್ತು ಸೇವನೆ ಅಥವ ಮಾರಾಟಕ್ಕೆ ಇಲ್ಲಿ ಕಠಿಣ ದಂಡನೆ. ಸೌದಿಯೊಳಗೆ ಪ್ರವೇಶಿಸುತ್ತಿದ್ದಂತೆ ಏರ್ ಪೋರ್ಟಿನ ಬಾಗಿಲಲ್ಲಿ ನೇತಾಡುವ “carrying DRUGS leads to DEATH penalty” ಎನ್ನುವ ಅಕ್ಷರಗಳು ಮೊದಲ ಬಾರಿಗೆ ಸೌದಿಗೆ ಬರುತ್ತಿರುವವರಿಗೆ ಭಯವ ಮೂಡಿಸುತ್ತದೆ.

ಭಾರತದಲ್ಲಿ ಸರ್ವೇ ಸಾಮಾನ್ಯವಾಗಿ ಮಾಡುತ್ತಿದ್ದ ಕೆಲಸಗಳು ನಮ್ಮವರಿಗಿಲ್ಲಿ ಬಹು ದೂರದ ಕನಸು. ಹುಟ್ಟಿದ ಊರನ್ನು, ಅಲ್ಲಿಯ ತನ್ನವರನ್ನು ಬಿಟ್ಟು ಪರನಾಡಿಗೆ ಬಂದು ಬಿಸಿಲಲ್ಲಿ ಮೈಯ ಒಡ್ಡಿ ದುಡಿಯುವ ಜನ ಸ್ವಲ್ಪವಾದರೂ ಉಳಿಸುವಂತಾಗಿರುವುದು ಇಲ್ಲಿಯ ಕಠಿಣ ಕಾನೂನುಗಳಿಂದಲೇನೋ! ಸಿನಿಮಾ, ಬಾರ್ ಗಳು ಇಲ್ಲಿಲ್ಲದೆ ಕೆಲವರಿಗೆ ಶ್ಯಾನೆ ಬೇಜಾರು ತರಿಸುವುದು ಸುಳ್ಳಲ್ಲ, ಇವರುಗಳ ನಡುವೆ ಒಂದು ರಿಯಾಲ್ ಖರ್ಚು ಮಾಡಿದರೆ ಊರಿನ ದುಡ್ಡಲ್ಲಿ ಹನ್ನೆರೆಡು ರೂಪಾಯಿಯಾಗುತ್ತದೆಯೆಂದು ಕೈಯ ಬಿಗಿ ಹಿಡಿಯುವ ಎಷ್ಟೋ ಜನರಿದ್ದಾರೆ ಇಲ್ಲಿ. ಹತ್ತು ಹನ್ನೆರಡು ವರ್ಷಗಳಿಂದ ತಮ್ಮ ತಮ್ಮ ಕುಟುಂಬಗಳಿಗಾಗಿ ದುಡಿಯುತ್ತಿರುವ ಮಂದಿ ತಾವು ಹುಟ್ಟಿದ ಊರನ್ನು ಕಂಡಿರುವುದು ನಾಲ್ಕು ಬಾರಿಯೇನೋ ಅಷ್ಟೆ. ವೆಕೆಷನ್ ಗೆ ಹೋದಾಗ ತಮ್ಮ ಮಕ್ಕಳೆ ತಮ್ಮ ಬಳಿ ಬರಲು ಹಿಂಜರಿಯುವುದು, ಬರುವುದಿಲ್ಲವೆಂದು ರಚ್ಚೆ ಹಿಡಿಯುವುದ ನೋವಿನಿಂದ ಹೇಳುತ್ತ ಖುಷಿಪಡುತ್ತಾರೆ. ಇನ್ನು ಕೆಲವರು ಇಲ್ಲಿಂದ ಹೋದ ತಕ್ಷಣ ರತಿಸುಖವ ಕೆರಳಿಸೊ ಮಾತ್ರೆ, ಲೇಹ್ಯಗಳನ್ನು ಕೊಂಡು ಜೇಬಿನಲ್ಲಿಟ್ಟುಕೊಳ್ಳುವುದ ಯಾವುದೇ ನಾಚಿಕೆಯಿಲ್ಲದೆ ಹೇಳುತ್ತಾರೆ.

“ಸಾಕು ಇಲ್ಲಿಯ ಪರದೇಶದ ಪರದೇಶಿ ಬದುಕು” ಎಂದು ಅಂದುಕೊಂಡು ಹೋದಾಗ ಅವರವರ ಊರುಗಳಲ್ಲಿ ಅವರನ್ನು ವಾಪಸ್ ವಿಮಾನ ಹತ್ತಿಸಲು ಹೊಸ ಸಮಸ್ಯೆಗಳು ಕಾಯುತ್ತಿರುತ್ತವೆ. ಮಕ್ಕಳ ವಿದ್ಯಾಭ್ಯಾಸವೊ, ಮನೆಯ ಕಷ್ಟವೊ, ತಂಗಿತಮ್ಮರ ಮದುವೆಯೊ ಅವರನ್ನು ಹಿಮ್ಮೆಟ್ಟಿಸುತ್ತವೆ. ಇಲ್ಲಿದ್ದರೆ ತಿಂಗಳಿಗೆ ಎರಡು ಸಾವಿರವೂ ದುಡಿಯಲಾಗುವುದಿಲ್ಲವೆಂದು ಮತ್ತೆ ಪಾಸ್ ಪೋರ್ಟ್ ಹಿಡಿದು ಏರ್ ಪೋರ್ಟೊಳಗೆ ಎಮಿಗ್ರೇಷನ್ ಗಾಗಿ ಸಾಲಲ್ಲಿ ನಿಲ್ಲುತ್ತಾರೆ. ಹೀಗೆ ಹಿಂತಿರುಗುವ ಜನ ಇಂಡಿಯಾದಿಂದ ಫೋನ್ ಕಾಲ್ ಬಂದರೆ ಗಲಿಬಿಲಿಗೊಳ್ಳುತ್ತಾರೆ. ಊರಲ್ಲಿನ ಸುದ್ದಿ ಇವರುಗಳನ್ನು ಕಲಕಲು ಕಿಲಕಿಲ ನಗುತ್ತಿರುತ್ತದೆ. ಇನ್ನು ಸಾವಿನ ಸುದ್ದಿಯೆಂದರೆ ಮುಗಿಯಿತು, ಅದು ಬಣ್ಣ ಬಳಿದುಕೊಂಡು ಕುಣಿಯುತ್ತಿರುತ್ತದೆ. ಊರಲ್ಲಿನ ಸಾವು ಇವರುಗಳ ಕಣ್ಣುಗಳನ್ನು ಕಲಕಿ ಮನಸ್ಸನ್ನು ಹಿಂಡುವುದು ಅಲ್ಲಿಯವರಿಗೆ ಕಾಣುವುದಿಲ್ಲ. ಸಾವಿಗೆ ಹೋಗಲಾಗದ “ವಿಧಿ”ಯ ಶಪಿಸುತ್ತ ನೆನಪುಗಳಲ್ಲಿ ಸತ್ತವರನ್ನು ಬದುಕಿಸಿಕೊಂಡು ರೂಮಿನಲ್ಲಿ ಅಳುತ್ತಿರುತ್ತಾರೆ. ಮಾರನೇ ದಿನ ಎಂದಿನಂತೆ ಕೆಲಸಕ್ಕೆ ಹೋಗಲು ಅಣಿಯಾಗುತ್ತಾರೆ. ಸಾವು ಮೂಡಿಸಿದ “ನಿಶ್ಚಲತೆ”ಯಿಂದ ಕೆಲಸದ “ವೇಗ”ದತ್ತ ರೂಪಾಂತರಗೊಳ್ಳುತ್ತಾರೆ. ಬಂಡಿ ಓಡಲಾರಂಭಿಸುತ್ತದೆ. ಇದನ್ನು ನೋಡುತ್ತಲೆ ಕೊರಿಯರ್ ವ್ಯಾನ್ ಬಂಡಿಗಳು ಹೊತ್ತು ತಂದ ಪುಸ್ತಕವ ನೋಡಿದೆ. ಈ ಪುಸ್ತಕವನ್ನು ಯಾರ್ಯಾರು ಹೊತ್ತು ತಂದಿರಬಹುದೆಂದು ಯೋಚಿಸಿದೆ. ಮೈಸೂರಿನ ಕೊರಿಯರ್ ಆಫೀಸ್ ನಿಂದ ಶುರುವಾದ ಈ ಯಾನ ಇಲ್ಲಿಯ ಮಲೆಯಾಳಿಯೊಬ್ಬನ ಕೈಯಿಂದ ನನ್ನ ತಲುಪುವುದರೊಳಗೆ ಇದು ಯಾರ್ಯಾರನ್ನು ಮುಟ್ಟಿರಬಹುದು!? ಸೆಕ್ಯುರಿಟಿ ಚೆಕ್ ಅಪ್ ಗಳ ಮುಗಿಸಿ ನನ್ನ ಕೈಯಲ್ಲಿದ್ದ ಈ ಪುಸ್ತಕ ಅಕಸ್ಮಾತ್ ಕಲೆಯ ನೋಟದಲ್ಲಿ ಹೆಣ್ಣಿನ ಅಂಗಾಂಗಗಳ ಚಿತ್ರವನ್ನು ಮುಖಪುಟವನ್ನಾಗಿ ಹೊಂದಿದ್ದರೆ? ಈ ಪುಸ್ತಕ ಹಾಗಿರಲು ಸಾಧ್ಯವಿಲ್ಲ. ಆತನನ್ನು ಕೇಳಿದೆ: ಈ ಪುಸ್ತಕ ಸೌದಿಗೆ ಎಂದು ತಲುಪಿತೆಂದು? ಅದಕ್ಕಾತ ನಿನ್ನೆ ರಾತ್ರಿ ಎಂದ. ನನಗಾಶ್ಚರ್ಯವಾಯ್ತು. ನಿನ್ನೆ ರಾತ್ರಿ ರಿಯಾದ್ ಗೆ ಬಂದು ತಕ್ಷಣವೆ ಇಲ್ಲಿಗೆ ಹೊರಟುನಿಂತಿದೆ ಈ ಪುಸ್ತಕ!

ಮಧ್ಯರಾತ್ರಿಯಲ್ಲಿ ರಿಯಾದ್ ನಿಂದ ವಾದಿಗೆ ವಿಮಾನಗಳಿಲ್ಲ. ರಸ್ತೆಯಲ್ಲೇ ಬರಬೇಕು. ಹೇಗೆ ಇಷ್ಟು ಬೇಗ? ಎಂದು ಕೇಳಿದ್ದಕ್ಕೆ ಆತ “ನಮ್ಮ ಕೊರಿಯರ್ ವ್ಯಾನ್ ಗಳು ರಿಯಾದ್ ನಿಂದ ಇಲ್ಲಿಗೆ ನಾಲ್ಕು ಗಂಟೆಗಳೊಳಗೆ ತಲುಪಬೇಕು ಮತ್ತು ಇಲ್ಲಿಂದ ಅಷ್ಟೆ ಸಮಯದೊಳಗೆ ರಿಯಾದ್ ವಾಪಸ್ಸಾಗಬೇಕು. ಇದು ನಮ್ಮ ಕಂಪೆನಿಗಳ ರೂಲ್ಸ್” ಎಂದ. ಈ ರೋಡಿನ ಗುಣವೆ ಅಂತದ್ದು, ಮೆಲ್ಲಗೆ ೬೦-೮೦ ಕಿ.ಮೀ ವೇಗದಲ್ಲಿ ತೆವಳುವ ಕಾರ್ ಗಳಿಗೆ ಇಲ್ಲಿ ಬೆಲೆಯಿಲ್ಲ, ನಿಮ್ಮ ಕಾರು  ೧೨೦-೧೪೦ ಸ್ಪೀಡ್ ನಲ್ಲಿ ಹೋಗಲಿಲ್ಲವೆಂದರೆ ರಸ್ತೆಯ ಇನ್ನೊಂದು ಬದಿಗೆ ಬಿದ್ದಿರಬೇಕಾಗುತ್ತದೆ. ಅಷ್ಟು ವೇಗ ಇಲ್ಲಿ. ಈ ಕಾರಣದಿಂದಲೆ ಇಲ್ಲಿ ಅಪಘಾತಗಳು ಅಧಿಕ. ಎಷ್ಟೋ ಸೌದಿ ಕುಟುಂಬಗಳು ಅಪಘಾತಗಳಲ್ಲಿ ಸಂಪೂರ್ಣವಾಗಿ ಕಣ್ಮರೆಯಾಗಿವೆ. ಇತ್ತೀಚಿಗೆ ನಾ ಕಂಡ ಅಪಘಾತದಲ್ಲಿ ಕಾರೊಂದು ಎರಡು ಭಾಗವಾಗಿ ಸೀಳಿ ಹೋಗಿತ್ತು. ಅದರಲ್ಲಿದ್ದ ಎರಡು ಸೌದಿಗಳು ಸತ್ತು ಹೋದರೆಂದು ಇಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಇಲ್ಲಿಯ ಆಸ್ಪತ್ರೆಯಲ್ಲಿ ನಾ ಈಚೆಗೆ ಕಂಡಿದ್ದು ನಾಲ್ಕು ಹೆಣಗಳ ನಡುವೆ ಅಳುತ್ತ ಅಂಬುಲೆನ್ಸ್ ನಿಂದ ಇಳಿದ ಮುದ್ದು ಮುಖದ ಆರೇಳು ವರ್ಷದ ಬಾಲೆಯನ್ನು. ಅವಳ ಸಂಬಂಧಿಕರು ಅವಳನ್ನು ಸಮಾಧಾನಿಸುತ್ತ ಇಳಿಸುತ್ತಿದ್ದರು. ಆಕೆ ತನ್ನ ಹೆತ್ತವರನ್ನು, ಒಡಹುಟ್ಟಿದವರನ್ನು ಕಳೆದುಕೊಂಡ ದು:ಖದ ಜೊತೆ ಅವಳ ಮೈಯಲ್ಲಿ ಆಗಿದ್ದ ಗಾಯಗಳ ನೋವಿಗೆ ಅಳುತ್ತಿದ್ದಳು. ಇವಳ ವಯಸ್ಸಿನ ಹುಡುಗರು ಇಲ್ಲಿ ಕಾರುಗಳನ್ನು ಓಡಿಸುತ್ತಾರೆ; ನಮ್ಮಲ್ಲಿನ ಟಾಟಾ ಸುಮೊದಂತಹ ವಾಹನಗಳನ್ನು ಸಲೀಸಾಗಿ ಓಡಿಸುತ್ತ ಪಾದಚಾರಿಗಳಿಗೆ ಭಯವ ಮುಟ್ಟಿಸುತ್ತಾರೆ. ಆ ವಾಹನಗಳೊಳಗೆ ಕಪ್ಪು ಹಿಜಾಬ ಹಾಕಿಕೊಂಡ ಹೆಂಗಸರು ಕೂತಿರುತ್ತಾರೆ. ಇವರುಗಳ ನೋಡಿ ಹದಿನೆಂಟು ವಯಸ್ಸಿನ ಮಕ್ಕಳ ಜೊತೆ ಬೈಕಲ್ಲಿ ಕೂರಲು ಹೆದರುವ ನಮ್ಮೂರ ಹೆಂಗಸರು ನನಗೆ ನೆನಪಾದರು. ಇನ್ನು ಇಲ್ಲಿಯ ವಯಸ್ಸಿಗೆ ಬಂದ ಹುಡುಗರು ರಸ್ತೆಗಳಲ್ಲಿ ಕಿರ್ರೋ ಎಂದು ಸದ್ದೆಬ್ಬಿಸಿ ಜನರ ತಮಟೆಗೆ ಚುಚ್ಚಿ, ಬೆಚ್ಚಿ ಬೀಳಿಸುತ್ತಾರೆ. ಇಲ್ಲಿ ಕಾರೆಂದರೆ ನಮ್ಮೂರ ಸೈಕಲ್ ಗಳಿದ್ದಂತೆ. ಯಾವ ಕಡೆ ತಿರುಗಿದರೂ ಕಾರೆ!!! ಟು ವೀಲರ್ ಗಳನ್ನು ದುರ್ಬೀನು ಹಾಕಿ ಹುಡುಕಬೇಕು. ಇವರುಗಳ ಜೀವನದಲ್ಲಿ ಕಾರ್ ಮೂಡಿಸಿರುವ ಚಲನೆ ವಿಶಿಷ್ಟವಾದುದು. ತೈಲ ಮತ್ತು ಕಾರು ಈ ಗಲ್ಫ್ ರಾಷ್ಟ್ರಗಳ ಜೀವನಗತಿಯನ್ನೇ ಬದಲಾಯಿಸಿರುವುದ ಕಾಣಬಹುದು. ಇಡಿ ವಿಶ್ವದ ಕಾರು-ಬೈಕು-ಲಾರಿ-ವಿಮಾನ ಮುಂತಾದ ಎಲ್ಲಾ ಓಡುವ-ಹಾರುವ ವಾಹನಗಳಿಗೆ “ಆಹಾರ ಸರಬರಾಜು” ಮಾಡುತ್ತಿರುವ ಈ ದೇಶಗಳಿಗೆ, ಮುಖ್ಯವಾಗಿ ಸೌದಿಗೆ, ಕಾರ್ ಎಂಬ ವೇಗ ಪ್ರವೇಶಿಸಿ ದಶಕಗಳೆ ಕಳೆದಿವೆ.

ಈ ಕಾರ್ ಗಳ ಜೊತೆ ಇಲ್ಲಿಗೆ ಬಂದ ಮುಗಿಲೆತ್ತರ ಕಟ್ಟಡಗಳ ಕಟ್ಟುವ, ನಿಸರ್ಗಕ್ಕು ಸೆಡ್ಡು ಹೊಡೆದು ಕೃತಕವಾದ ದ್ವೀಪ ನಿರ್ಮಿಸುವ ವೇಗದ ಉಮೇದು ಇಲ್ಲಿಯವರ ಬದುಕುಗಳೊಳಗು ಪ್ರವೇಶಿಸಿಬಿಟ್ಟಿದೆ. ನಿಸರ್ಗದ ತೀರದ ಆಟಕ್ಕೆ ಎದೆಗುಂದದೆ ಮರುಭೂಮಿಯಲ್ಲಿ ಬದುಕುತ್ತಿರುವ ಈ ಜನ ತೈಲ ಸಂಪತ್ತು ಸಿಗುವುದಕ್ಕಿಂತ ಮುಂಚೆ ಹೇಗೇಗೆ ಬದುಕಿರಬಹುದು!? ತಣ್ಣಗೆ ಕುದಿಯುವ ಮರುಭೂಮಿ ದಿಢೀರ್ ಎಂದು ಮರಳಗಾಳಿಯ ಎಬ್ಬಿಸಿ ನಿಶ್ಯಬ್ದಕ್ಕೆ ಸವಾಲೊಡ್ಡಿ ಮರುಕ್ಷಣವೆ ಮೌನದಿಂದ ಚಲಿಸುತ್ತಿರುತ್ತದೆ. ಕುದಿಯುವ ಸೂರ್ಯ, ಸುಡುವ ಮರಳು, ವರ್ಷಕ್ಕೆ ಎರಡು ತಿಂಗಳು ಕೊರೆವ ಚಳಿ, ಕತ್ತಲಿಂದ ರಕ್ಷಿಸಿದ ಕರೆಂಟ್ ಎಂಬ ಗೆಳಯ ಸಿಗುವ ಮುಂಚೆ ಖೇಮಾದೊಳಗೆ, ಮಣ್ಣಿನ ಮನೆಗಳೊಳಗೆ ಚಿಮಣಿ ದೀಪಗಳಲ್ಲಿ ಬದುಕ ನೂಕುತ್ತ ಬೆಳಿಗ್ಗೆಯೆದ್ದು ಒಂಟೆಗಳ ಓಡಿಸುತ್ತ ಹಲವರು, ನಾಡ ದೋಣಿಗಳ ಹತ್ತಿ ಸಾಗರದಾಚಿನ ನಾಡುಗಳಲ್ಲಿ ವ್ಯಾಪಾರಕ್ಕೆಂದು ಹೋಗುವ ಕೆಲವರು, ಇವರೆಲ್ಲರು ಸಾಗಿ ಬಂದ ಜೀವನದ ಹಾದಿ ಕಷ್ಟಕರವಾದುದು ಅಂತ ಅನ್ಯನಾಗಿ ನಿಂತು ನಾ ಹೇಳಿಬಿಡಬಹುದು. ಅದರೊಳಗಿನ ತಲ್ಲಣಗಳು ಅವರಿಗೇ ಗೊತ್ತು.

ಇಸ್ಲಾಂ ಮೂಡಿಸಿರುವ ಬದುಕಿನ ಕ್ರಮದ ಜೊತೆಜೊತೆಗೆ ಇವರುಗಳು ತಮ್ಮದೇ ಆದ ಬದೂ(ನ್) ಬದುಕನ್ನೂ ಕಾಪಾಡಿಕೊಂಡು ಬಂದಿದ್ದಾರೆ. ಮನೆತನಗಳ ನಡುವೆ ಕೊಡುಕೊಳ್ಳುವ ಪ್ರೀತಿ, ಆತಿಥ್ಯಗಳ ಸಂಬಂಧ ಇರುವಂತೆಯೂ ಜಗಳ, ಸೇಡುಗಳು ಇವೆ. ಇವೆಲ್ಲವುಕ್ಕೂ ಈ ಮರುಭೂಮಿ ಇವರ ಜೊತೆಯೇ ನಿಂತಿದೆ.  ಉದ್ದನೆಯ ತುಪಾಕಿಗಳಿಂದ ಶೂಟ್ ಮಾಡಿ ಸಾಯಿಸುವುದು, ಶೂಟ್ ಮಾಡಿದ ನಂತರ ಪೋಲಿಸರ ಕಣ್ತಪ್ಪಿಸಿ ಮರುಭೂಮಿಯಲ್ಲಿ ಅಡಗಿ ಕೂರುವುದು, ಅಲ್ಲಿಂದ ಒಂದು ದಿನ ಯೆಮೆನ್ ಗೋ, ಬೆಹ್ರೇನ್ ಗೋ ತಪ್ಪಿಸಿಕೊಂಡು ಓಡಿಹೋಗಿಬಿಡುವುದು ಹೀಗೆ ಈ ಬರ್( ಸೌದಿ ಬದೂ(ನ್)ಗಳ ಭಾಷೆಯಲ್ಲಿ ಸಹರ, ಮರುಭೂಮಿ) ಇವರ ಪ್ರೀತಿ, ಕೋಪ, ನೆಂಟಸ್ತಿಕೆ ಎಲ್ಲವಕ್ಕೂ ಜೊತೆ ನಿಂತು ಇವರನ್ನು ಬೆಳೆಸಿದೆ. ಸಾವು ಕ್ಷಣಾರ್ಧದಲ್ಲಿ ಸಂಭವಿಸಿಬಿಡಬಹುದಾದಂತಹ ವಾತಾವರಣ ಇಲ್ಲಿಯ ಕಠಿಣ ಕಾನೂನುಗಳಿಂದ ಸ್ವಲ್ಪ ಕಡಿಮೆಯಾಗಿದೆ ಎನ್ನುತ್ತಾರೆ ಕೆಲವರು. ಸೌದಿ ಅರೇಬಿಯಾದ ಇತರೆ ಊರುಗಳ ಜನಕ್ಕೂ ಇಲ್ಲಿಯವರಿಗೂ ಅಜಗಜಾಂತರ ವ್ಯತ್ಯಾಸವಂತೆ. ಇಲ್ಲಿಯ ಬದೂ(ನ್) ಗಳು ಮನೆ ಮನೆಗಳ ನಡುವಿನ ತಲೆತಲಾಂತರ ದ್ಷೇಷವನ್ನು ಕಾಪಾಡಿಕೊಳ್ಳುತ್ತ ಬಂದು ಒಂದು ದಿನ ತಮ್ಮ ವಿರೋಧಿಗಳನ್ನು ಗುಬ್ಬಚ್ಚಿಗಳ ಸುಡುವಂತೆ ಸುಟ್ಟುಬಿಡುತ್ತಾರಂತೆ. “ತಮ್ಮ” ಬದೂ (ನ್) ಮನೆತನಗಳೇ ಶ್ರೇಷ್ಠ ಎಂಬ ಹಮ್ಮು ಮತ್ತು ತಾವೇ “ಅಸಲಿ” ಬದೂ(ನ್)  ಎಂಬ ಗರ್ವ, ಯಜಮಾನಿಕೆಗಳ ಸುತ್ತ ಗಿರಕಿ ಹೊಡೆಯುವ ಬದುಕು ಮರುಭೂಮಿಯ ಮರಳಂತೆ ಸುಡುತ್ತದೆ ಮತ್ತು ತಣ್ಣಗಿನ ಓಯಸಿಸ್ ನೀರನ್ನೂ ಕೊಡುತ್ತದೆ. ನಾನು ಹುಟ್ಟಿದ ತೇವರ್ ಜಾತಿಯ ಜನಗಳೂ ಹೀಗೆಯೆ. ಮಧುರೈನ ಹಳ್ಳಿಯಲ್ಲಿನ ನಮ್ಮ ತೇವರ್ ಕುಟುಂಬಗಳಿಗೂ ಇವರುಗಳಿಗೂ ವ್ಯತ್ಯಾಸ ಕೇವಲ ಭಾಷೆ; ಇಲ್ಲಿ ಪಿಸ್ತೂಲು, ಅಲ್ಲಿ ವೀಚ್ಚರುವ (ಲಾಂಗು)ಗಳಷ್ಟೆ. ಹತ್ತಾರು ವರ್ಷದ ಸೇಡನ್ನು ನಂಜಾಗಿ ಕಾಪಾಡಿಕೊಂಡು ಬಂದು ಒಂದು ದಿನ ಅದಕ್ಕೆ ಸಮಾಪ್ತಿ ಆಡಿಬಿಡುತ್ತಾರೆ. ಆದರೆ ಸಮಾಪ್ತಿ ಆಡಿಸಿಕೊಂಡ ಮನೆಯವರು ಸೇಡ ಬೆಳೆಸುತ್ತಾರೆ. ಹತ್ತಾರು ಎಕೆರೆ ತೋಟಗಳು, ಮನೆಮಠಗಳು ಈ ಸೇಡಲ್ಲಿ ಕರಗಿ ಬೀದಿಗೆ ಬಂದರೂ ನಮ್ಮ ತೇವರ್ ಗಳು ಒಣ ಜಂಭವನ್ನು ಬಿಡುವುದಿಲ್ಲ. ವಿರೋಧಿಯ ಮನೆ ನಾಶವಾದರೆ ನೆಮ್ಮದಿಯ ನಿಟ್ಟುಸಿರಿಡುತ್ತಾರೆ. ಈ ನಾಶ ಮೊದಮೊದಲು ಇಲ್ಲಿಯ ಬದೂ(ನ್) ಗಳ ನಡುವಿರುವ ಹಾಗೆ ನಮ್ಮನಮ್ಮೊಳಗೆ ಇತ್ತು. ಆದರೆ ಅದು ಈಗ ವಿಸ್ತಾರ ಪಡೆದು, ಸನಾತನ ಧರ್ಮದ ರಕ್ಷಕ ಜಾತಿಯಾಗಿ ಮಾರ್ಪಟ್ಟು, ತಮ್ಮ ಹಿಂದಿನ ರಾಜ ವೈಭವದ ದಿನಗಳನ್ನು ಕಿತ್ತು ಕೊಂಡಿರುವ ದಲಿತರತ್ತ ಮುಖಮಾಡಿದೆ. ದಾಯಾದಿ ಕಲಹಗಳಿಂದ ನಜ್ಜುಗುಜ್ಜಾತ್ತಲೂ, ಹಾಡು, ಕುಲದೈವದ ಆಚರಣೆ, ಹಬ್ಬ, ಸಂಬಂಧ, ಅಕ್ಕರೆ, ಧೈರ್ಯಗಳಿಂದ ತುಂಬಿ ತುಳುಕುತ್ತಿದ್ದ ತೇವರ್ ಜನಾಂಗ ಇಂದು ಕಾಮನ್ ವಿರೋಧಿಯೆಂದು ದಲಿತರನ್ನು ಗುರುತಿಸಿ ತನ್ನ ಹಿಂಸಾಕೃತ್ಯದ ಇತಿಹಾಸವನ್ನು ತಮಿಳುನಾಡಲ್ಲಿ ಮುಂದುವರಿಸುತ್ತಿದೆ. ಈ ಅಪಾಯ ಇಲ್ಲಿ ಇರದೆ ಇದ್ದರೂ ಅಸಲಿ ಬದೂ(ನ್)ಗಳಲ್ಲದ ಅನೇಕ ಅಸ್ವಥ್( ಕಪ್ಪು) ಸೌದಿಗಳ ಮತ್ತು  ಕೆಲಸಗಾರರಾಗಿದ್ದ ಬಿಳಿ ಸೌದಿಗಳ ಮೇಲೆ ಮಾನಸಿಕವಾಗಿ ಅಸಲಿಗಳು ಯಜಮಾನ್ಯ ನಡೆಸುತ್ತಿದ್ದಾರೆ. ಇವೆಲ್ಲ ಇದ್ದರೂ ಈ ಬದೂ(ನ್)ಗಳದು ನನ್ನ ಕಾಡೈ ತೇವರ್ ಗಳಂತೆ ನೇರ ಬದುಕು, ಸುಳ್ಳು-ವಂಚನೆಗಳಿಲ್ಲದ “ಮನಸ್ಸಿನ” ಬದುಕು.

ಇವರುಗಳು ಬಲಶಾಲಿಗಳು. ನಿಸರ್ಗ ತನ್ನೆಲ್ಲ ಕ್ರೂರತನವನ್ನು ಪ್ರದರ್ಶಿಸುತ್ತಿದ್ದರೂ ಹುಟ್ಟು ಸಾವುಗಳ ನಡುವನ್ನು ಪಳಗಿಸುತ್ತಲೆ ಬಂದಿದ್ದಾರೆ. ಸಾವಿಗೆ ಅಳುಕದೆ ಮೌನವನ್ನು, ಬಿರುಸನ್ನು ಒಟ್ಟಿಗೆ ಧರಿಸಿಕೊಳ್ಳುತ್ತ ಸಾಗಿಬಂದಿದ್ದಾರೆ. ಕೊನೆಗೂ ಭೂಮಿ ಇವರೊಂದಿಗಿನ ನೂರಾರು ವರ್ಷಗಳ ಸಿಟ್ಟನ್ನು ಕೊನೆಗೊಳಿಸಿಕೊಂಡು ತೈಲ ಬಾವಿಗಳ ನೀಡಿತು. ಇಲ್ಲಿಂದ ಇವರುಗಳು ತಮ್ಮ ಬದುಕಿಗೆ ಚಕ್ರಗಳ ಜೋಡಿಸಿಕೊಂಡರು. ಜೋರಾಗಿ ಚಕ್ರಗಳು ಓಡಲಾರಂಭಿಸಿದವು. ಕಾರ್ ಗಳು ಇವರುಗಳ ಬದುಕಿನ ಒಂದು ಅಂಗವಾಗಿ ಹೋಯಿತು. ಮಳೆ ಬಿದ್ದ ಕಡೆ ಒಂಟೆಗಳ ಓಡಿಸುತ್ತ ಹೋಗುತ್ತಿದ್ದ ಜನ ಈಗಲೂ ಹಾಗೆ ಹೋಗುತ್ತಾರೆ. ಆದರೆ ವ್ಯತ್ಯಾಸವೆಂದರೆ, ಒಂಟೆಗಳ ಹಿಂದೆ ಪಿಕ್ ಅಪ್ ಗಾಡಿಯನ್ನು ಡ್ರೈವ್ ಮಾಡುತ್ತಿರುತ್ತಾರೆ. ಪಿಕ್ ಅಪ್ ನಲ್ಲಿ ಕುಡಿಯಲು ನೀರು, ಕಾಸು ಕೊಟ್ಟು ಕೊಂಡುಕೊಂಡ ಹುಲ್ಲು, ತಿನ್ನಲು “ಕುಬುಸ್”ಗಳನ್ನಿಟ್ಟುಕೊಂಡು ಕೆಲವರು ಮರುಭೂಮಿಯ ಉತ್ತರ, ದಕ್ಷಿಣಗಳ ಮೂಲೆಗಳತ್ತ ಚಲಿಸುತ್ತಿರುತ್ತಾರೆ. ಹಿಂದೆಲ್ಲ ನಡೆಯುತ್ತ ಹೋಗುತ್ತಿರುವಾಗ “ಷಯರಿ” ( ಕವಿತೆ) ಗಳನ್ನು ಹಾಡಿಕೊಂಡು ಹೋಗುತ್ತಿದ್ದರು. ಗಸೀದ (ಸಂಗೀತ ಸಲಕರಣೆಗಳಿಲ್ಲದೆ ಒಬ್ಬಾತ ಹೇಳುವುದು), ನಷೀದ (ಗುಂಪಲ್ಲಿ ಸಂಗೀತ ಸಲಕರಣೆಗಳ ಜೊತೆ ಹಾಡುವುದು)ಗಳನ್ನು ಹೇಳುತ್ತ ನಡೆಯುತ್ತಿದ್ದರಂತೆ. ಇಂದಿಗೂ ಕೂಡ ಜನ ಕಾರಲ್ಲಿ ಕೂತು ಹೇಳಿಕೊಳ್ಳುತ್ತ ಹೋಗುತ್ತಿರುತ್ತಾರೆ. ನನ್ನ ಎಷ್ಟೋ ವಿಧ್ಯಾರ್ಥಿಗಳು ರಜೆಗಳಲ್ಲಿ ಒಂಟೆಗಳ ಜೊತೆ ಮರುಭೂಮಿಯೊಳಗೆ ಹೋಗಿಬಿಡುತ್ತಾರೆ. ಅವರೇಳುವಂತೆ “ಬರ್ (ಸಹರ – ಮರುಭೂಮಿ)  ಎನ್ನುವುದು ಎಂದಿಗೂ ಮುಗಿಯದ ಸಂಪತ್ತು”. ಇವರುಗಳ ಮನಸ್ಸೊಳಗೆ ಮರುಭೂಮಿ ಒಂದು ಜನ್ನತ್ (ಸ್ವರ್ಗ).  ನಿಸರ್ಗದ ಮಗದೊಂದು ಬಿಂಬ ಇವರ ಬದುಕನ್ನು, ಮನಸ್ಸನ್ನು ರೂಪಿಸುತ್ತ ಮರುಭೂಮಿಯಲ್ಲಿ ನಗ್ನವಾಗಿ ಮಲಗಿಕೊಂಡಿದೆ. ಈ ನಗ್ನತೆ ಇವರುಗಳ ಹಾಡುಗಳನ್ನು, ಕತೆಗಳನ್ನು, ಗಣಿತ- ವಿಜ್ಞಾನಗಳನ್ನು, ಬದುಕಿನ ಕ್ರಮಗಳನ್ನು ರೂಪಿಸಿದೆ. ನಿಧಾನ ಮತ್ತು ಬಿರುಸು ಎರಡು ಇವರುಗಳೊಳಗೆ ಮನೆ ಮಾಡಿವೆ. ಗಾಹ್ವ ಎಂಬ ಅರೆಬಿಯನ್ ಕಾಫಿಯನ್ನು ಅತಿಥಿಗಳಿಗೆ ನೀಡಿ ಸ್ವಾಗತಿಸುವ ಪರಿ ನೋಡಲು ಎಷ್ಟು ಸುಂದರವಾಗಿರುತ್ತದೆಯೆಂದರೆ…. ಅದೊಂದು ವಿಶಿಷ್ಟ ಅನುಭವ. ಪಿಂಗಾಣಿ ಅಥವ ಗಾಜಿನ ಗ್ಲಾಸನ್ನು ಬಲಗೈಯಲ್ಲಿಡಿದು ಎಡಗೈಯಲ್ಲಿನ ದಲ್ಲಾ (ಹ್) ಇಂದ ಗಾಹ್ವವನ್ನು ಗ್ಲಾಸಿಗೆ ಬಗ್ಗಿಸಿ ನೀಡುವ ಪರಿ ಅಚ್ಚುಕಟ್ಟಾಗಿಯೂ ಸುಂದರವಾಗಿಯೂ ಇರುತ್ತದೆ. ಕೂತಿರುವ ಎಲ್ಲರಿಗೂ ನಿಧಾನದಲ್ಲಿ ಗಾಹ್ವ ಕೊಡುತ್ತ ಖರ್ಜೂರಗಳನ್ನು ತಟ್ಟೆಯಲ್ಲಿಟ್ಟು ನೀಡುವಾಗಿನ ಆತನ  ಮೌನ ಮತ್ತು ನಡೆ ಎಲ್ಲರನ್ನು ಸೆಳೆಯುವುದು ಸುಳ್ಳಲ್ಲ. ಆತಿಥ್ಯ ಇಲ್ಲಿಯವರ ಬಹುಮುಖ್ಯ ಘಟನೆ. ಇವರುಗಳ ಔತಣಗಳ ಬಗ್ಗೆ ನಾ ಈ ಮುಂಚೆ ಹೇಳಿದಂತೆ ಮುಂದೊಂದು ದಿನ ವಿವರವಾಗಿ ಬರೆಯುತ್ತೇನೆ. ಇಲ್ಲಿಯವರು ಮಾತ ಮುಗಿಸುವ ಮುಂಚೆ

“ಅಲ್ ಖದ್ಮಾ” ಎನ್ನುತ್ತಾರೆ, ಅಂದರೆ “ಏನಾದರೂ ಸೇವೆ ಬೇಕಾಗಿತ್ತಾ?” “Any service?” ಎನ್ನುವ ಅರ್ಥದಲ್ಲಿ. ಒಬ್ಬರಿಗೊಬ್ಬರು ಸಹಕರಿಸಿಕೊಳ್ಳುತ್ತ ಇಸ್ಲಾಂ ಎಂಬ ಜನರನ್ನು ಒಟ್ಟುಗೂಡಿಸುವ ಧರ್ಮದೊಳಗೆ ಬೆಳೆಯುತ್ತ ಬಂದ ಇಲ್ಲಿಯ ಜನ ಈಗ “ಆಧುನಿಕತೆ”ಗೆ  ತೆರದುಕೊಳ್ಳುತ್ತ ತಮಗೆ ಮೋಸ ಮಾಡಿದ ಭೂಮಿಗೆ ಇಂದು ಸವಾಲೊಡ್ಡುವ ಮಟ್ಟಕ್ಕೆ ನಿಂತಿದ್ದಾರೆ. ೫೦೦-೬೦೦ ಕಿ.ಮೀ ದೂರದಲ್ಲಿನ ನೀರಿನ ಬುಗ್ಗೆಯನ್ನು ಪೈಪ್ ಲೈನ್ ಹಾಕಿ ತಾವಿರುವ ಜಾಗಕ್ಕೆ ಹರಿಯುವಂತೆ ಮಾಡಿದ್ದಾರೆ. ಲಿಬಿಯಾದಲ್ಲಿ ಗದ್ಧಾಫಿ ಕೃತಕ ನದಿಯನ್ನೇ ಸೃಷ್ಟಿಸಿದ್ದಾರೆ. ದುಬಾಯಿಯಲ್ಲಿ ಈ ತೆರನಾದ ಹಲವಾರು ಉದಾಹರಣೆಗಳನ್ನು ಕಾಣಬಹುದು. ಇಂತಹ ಹುಚ್ಚು ಮನಸ್ಸಿನ ನೂರು ಮುಖಗಳು ಜಗತ್ತನ್ನು ತಮ್ಮ ಕಡೆ ತಿರುಗಿಸಿವೆ.  ಅಮೆರಿಕಾದ ಮಿಲಿಟಿರಿ ಪಡೆಗಳು ಮರುಭೂಮಿಗಳೂಳಗೆ ಬಂದು ಕಾದಾಡುವ ಮಟ್ಟಕ್ಕೆ ಇಂದು ಎಲ್ಲರನ್ನು ಇವರುಗಳು ಸೆಳೆದಿದ್ದಾರೆ. ಮರುಭೂಮಿಯಲ್ಲಿ ಪಡೆದ ವಿಶ್ವಾಸ, ಪ್ರೀತಿ, ಬೆಳಕುಗಳು ಮತ್ತು ಉಂಡ ನೋವು, ಕಠಿಣತೆಗಳು ಇಂದು ಇವರುಗಳಿಗೆ ಕನಸಲ್ಲೂ ಎಣಿಸಲಾರದ್ದನ್ನು ನೀಡುತ್ತಿವೆ. ಪಶ್ಚಿಮವೂ ಇವರ ಮುಂದೆ ಮಂಡಿಯೂರುವಂತೆ ಭೂಮಿ ತಾನು ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತವನ್ನು ಅನುಭವಿಸುತ್ತ ತನ್ನ ಒಡಲನ್ನೇ ಇವರಿಗೆ ನೀಡಿ ಸುಮ್ಮನಾಗಿದೆ.  ಹೀಗೆ ಎಲ್ಲವನ್ನು ಪಡೆದಿದ್ದರೂ ಇಲ್ಲಿಯ ಅನೇಕರಿಗೆ  ಇಂದಿಗೂ ಮರುಭೂಮಿ ಮುಗಿಯದ ಸಂಪತ್ತು, ಬದುಕಿನ ಅವಿಭಾಜ್ಯ ಅಂಗ.

ಐವತ್ತು ಅರವತ್ತು ವರ್ಷಗಳ ಹಿಂದೆ ಇಲ್ಲಿಯ ಹುಡುಗರು ಒಂಟೆಗಳ ಓಡಿಸುತ್ತ ಹಾಡು ಕಟ್ಟುತ್ತ ಹೋಗುತ್ತಿದ್ದುದು ಬದಲಾಗಿ ಇಂದು ಕುಡಿ ಮೀಸೆಯ ಹುಡುಗರು ಮರಳುದಿನ್ನೆಗಳ ಮೇಲೆ ಪಿಕ್ ಅಪ್ ಕಾರ್ ಗಳ ಓಡಿಸಿ ಅಡ್ವೆಂಚರ್ ಮಾಡುತ್ತಿದ್ದಾರೆ.  ಹುಡುಗರ ಈ ಅಡ್ವೆಂಚೇರಿಯಸ್ ಡ್ರೈವಿಂಗನ್ನು ಕೆಲವೊಮ್ಮೆ ಆ ಮರಳುದಿನ್ನೆಗಳು ಸೋಲಿಸಿ ತನ್ನ ವಿರೋಧಿಗಳ ಕಾಲು ಕೈಗಳನ್ನು ಮುರಿದ ಉದಾಹರಣೆಗಳೂ ಇವೆ. ಕಾರಿನ ಸದ್ದು ಮರುಭೂಮಿಯ ಮೌನವನ್ನು ಸೀಳಿದಂತೆ ಇಲ್ಲಿಯವರ ಮನಸ್ಸುಗಳನ್ನು ಸೀಳಿ ಎಷ್ಟೋ ಜನರನ್ನು ಸಾವಿನತ್ತ ತಳ್ಳಿವೆ. ಯೌವ್ವನಿಗರ ತಲ್ಲಣಕ್ಕೆ ಮರ್ಸಿಡೆಸ್, ಕ್ರೆಸಿಡಾಗಳು ಎಣ್ಣೆ ಸುರಿದಿವೆ. ಹುಡುಗರ ಎಷ್ಟೋ ದೇಹಗಳು ಆ ಎಣ್ಣೆಯಲ್ಲಿ ಬೆಂದುಹೋಗಿವೆ. ಮರುಭೂಮಿಯೊಳಗಿನ ಒಂಟೆಯ ತಣ್ಣನೆಯ ಬಿರುಸು ನಡಿಗೆ ಮಾಯವಾಗಿ GMC ಚಕ್ರಗಳ ಹೈಸ್ಪೀಡ್ ಮನಸ್ಥಿತಿ ಇವರನ್ನು ಹೊಕ್ಕುಬಿಟ್ಟಿದೆ. ಆ ಮನಸ್ಥಿತಿಯಿಂದ ರೂಪಿತವಾಗಿರೊ ಕೊರಿಯರ್ “ಸೇವೆ” ಕ್ಷಣಾರ್ಧದಲ್ಲಿ ನಮ್ಮ ಭಾವನೆಗಳನ್ನು, ಬೇಕುಗಳನ್ನು, ಅತ್ತ ತಲುಪಿಸಿ ನಮ್ಮ ಮನಸ್ಸುಗಳನ್ನು ಸ್ಪೀಡ್ ಗೊಳಿಸುತ್ತಿದೆ. ಈ ವೇಗ ಎಂಬ ಬಂಡವಾಳಶಾಹಿ ಯೋಚನಾಕ್ರಮದಲ್ಲಿ ನಲುಗಿದ ನಾನು ಅದರಿಂದ ಹೊರಬರಬೇಕೆಂದು ಯೋಚಿಸುತ್ತಲೆ ಕೊರಿಯರ್ ಸರ್ವೀಸ್ ನಲ್ಲಿ “ಸೇವೆ” ಪಡೆದುಕೊಂಡೆ. ಆ ವ್ಯಾನ್ ಡ್ರೈವರ್ ನ ಓಟದಂತೆ ಇಷ್ಟು ದಿನ ಓಡುತ್ತಿದ್ದ ನಾನು ಅಕ್ಕಪಕ್ಕ ಗಮನಿಸದೆ ಬಂದುಬಿಟ್ಟೆ. ಆ ವ್ಯಾನ್ ಡ್ರೈವರ್ ನನ್ನು ಒಂದು ದಿನ ಮಾತನಾಡಿಸಬೇಕೆಂದುಕೊಂಡ ದಿನವೆ ಆಘಾತಕಾರಿ ಸುದ್ದಿ ನನ್ನನ್ನು ಕಾದಿತ್ತು. ಆತ ಆಕ್ಸಿಡೆಂಟಿನಲ್ಲಿ ಸತ್ತು ಹೋದ. ನಮ್ಮ ಇಂಡಿಯದವನಾದ ಆತ ಇನ್ನೂ ಮದುವೆಯಾಗದ ಮೂವತ್ತರ ಪ್ರಾಯದ ಮಲೆಯಾಳಿ. ಅವನ ಸಾವಿನ ಸುದ್ದಿ ಕೇಳಿ ಆಸ್ಪತ್ರೆಯ ಬಳಿ ಆ ಸಂಜೆ ಹೋದೆ. ನಾಲ್ಕೈದು ಮಂದಿ ಮಾತ್ರ ಇದ್ದರು ಅಲ್ಲಿ. ಈ ಸಾವಿನ ಸುದ್ದಿ ಅವನ ಊರಲ್ಲಿ ಅದೆಷ್ಟು ಅಳುವ ತಂದಿರಬಹುದು…. ಮೊನ್ನೆ ಹೀಗೆ ಆಂಧ್ರದ ವ್ಯಕ್ತಿಯೊಬ್ಬ ನಾಲ್ಕು ವರ್ಷದ ಬಳಿಕ ರಜೆ ತಗೆದುಕೊಂಡು ಇಂಡಿಯಾಕ್ಕೆ ಹೊರಡುವ ಖುಷಿಯಲ್ಲಿದ್ದ. ಮಕ್ಕಳಿಗೆ, ನೆಂಟರಿಗೆ, ಸ್ನೇಹಿತರಿಗೆಂದು ಸುಮಾರು ಸಾಮಾನುಗಳನ್ನು ಖರೀದಿಸಿ, ಸೂಟ್ ಕೇಸ್ ನೊಳಗೆ ತುಂಬಿ ಪ್ಯಾಕಿಂಗ್ ಮುಗಿಸಿ ನಾಳಿನ ವಿಮಾನ ಪ್ರಯಾಣವ ನೆನೆಸಿ ಪುಳಕಗೊಳ್ಳುತ್ತಿದ್ದ. ನಾಳೆ ನಾಡಿಗೆ ಹೋಗುತ್ತಿದ್ದೇನೆ ಎಂದು ಅವನು ನಗುತ್ತ  ಹೇಳುತ್ತಿದ್ದುದ ನಾ ಕೇಳಿಸಿಕೊಂಡಿದ್ದೆ. ಇಲ್ಲಿ ನಮ್ಮವರು ಹೀಗೆಯೇ, ವೆಕೆಷನ್ ನಲ್ಲಿ ಇಂಡಿಯಾಕ್ಕೆ ಹೋಗುತ್ತಿದ್ದೇವೆ ಅಂದರೆ ಒಂದು ವಾರದಿಂದಲೆ ಸರಿಯಾಗಿ ಊಟ ಮಾಡುವುದಿಲ್ಲ, ನಿದ್ದೆ ಮಾಡುವುದಿಲ್ಲ. ಮೈಮನಗಳನ್ನೆಲ್ಲ ಊರು ತುಂಬಿಕೊಂಡಿರುತ್ತದೆ. ಎರಡು ಅಥವ ನಾಲ್ಕು ಅಥವ ಐದು ವರ್ಷಗಳ ನಂತರ ಹೋಗುತ್ತಿರುವ ಖುಷಿ ನಮ್ಮವರ ಒಳಗಿಳಿದು ಚಾಪೆ ಹಾಸಿ ಮಲಗಿಬಿಟ್ಟಿರುತ್ತದೆ. ಹೀಗೆ ಈ “ಅಭೂತಪೂರ್ವ” ಗಳಿಗೆಯಲ್ಲಿ ಮೀಯುತ್ತಿದ್ದ ಆ ಆಂಧ್ರದ ವ್ಯಕ್ತಿ ಹೊರಡುವ ಹಿಂದಿನ ರಾತ್ರಿ ಹಾರ್ಟ್ ಅಟ್ಯಾಕ್ ನಿಂದ ಸತ್ತು ಹೋದ! ಸಾವಿಗೆ ಹೃದಯಾಘಾತವೆ ಕಾರಣ ಎಂದು ದೃಢಪಡುವವರೆಗೂ ಆತನ ರೂಂ ಮೇಟ್ ಗಳು ನರಕದಲ್ಲಿ ಜೀವಿಸುತ್ತಿರುವಂತೆ ಚಡಪಡಿಸುತ್ತಿದ್ದರು. ಸತ್ತ ಆ ವ್ಯಕ್ತಿಯ ದೇಹವನ್ನು ಇಂಡಿಯಾಕ್ಕೆ ತರಿಸಿಕೊಳ್ಳಲಾಗದ ಅವನ ಮನೆಯವರು ಇಲ್ಲೇ ಧಫನ್ ಮಾಡಲು ಹೇಳಿಬಿಟ್ಟರಂತೆ. ಆಸ್ಪತ್ರೆಯ ಬಿಲ್ ಕಟ್ಟಲು ಆತನ ಸ್ಪಾನ್ಸರ್ ಸಿಗದೆ ಅವರಿವರ ಬಳಿ ಕಲೆಕ್ಟ್ ಮಾಡಿ ಸ್ವಲ್ಪ ಕಟ್ಟಿದ್ದಾರೆ. ಇದೇ ರೀತಿಯಲ್ಲಿಯೆ ಆ ಕೊರಿಯರ್ ಹುಡುಗನ ಹೆಣವೂ ಇಲ್ಲಿನ ಖಬರ್ ಸ್ಥಾನದಲ್ಲೇ ಮಣ್ಣಾಯ್ತು. ಏನೇ “ವೇಗ”ದ ಬದುಕಿದ್ದರೂ ಇವರುಗಳ ಸಾವನ್ನು ಮುಂದೂಡಲು ಆಗಲಿಲ್ಲವಲ್ಲ? ಇದಕ್ಕೆ ಜವರಾಯನ ಶಕ್ತಿ ಕಾರಣವೆ? ಬದುಕಿನ ತೀರದ ಗುಟ್ಟೆ? ಅಥವ ದೇಹದೊಳಗಿನ ಬದಲಾವಣೆಗಳೆ?

ಈ ಸಾವು ನಾಡನ್ನು, ತನ್ನವರನ್ನು ಬಿಟ್ಟು ಬಂದ ನನ್ನಂತಹವರಲ್ಲಿ ಅಲೆಗಳ ಎಬ್ಬಿಸಿ ಹೃದಯದೊಳಗೆ ತೂತು ಕೊರೆದು ಬಿಡುತ್ತದೆ. ಮತ್ತು ನಮ್ಮ ಜೊತೆಯೇ ಅದು ಮಲಗುತ್ತಿದೆ, ಏಳುತ್ತಿದೆ, ತಿನ್ನುತ್ತಿದೆ ಅನ್ನಿಸುತ್ತದೆ; ಯಾವ ಗಳಿಗೆಯಲ್ಲಾದರೂ ಅದು ನಮ್ಮನ್ನು ನೆಕ್ಕಿಬಿಡಬಹುದೆಂಬ ಭಯ, ಅಳುಕು ಇರುವುದು ಸುಳ್ಳಲ್ಲ. ಹಾಗೆ ನೆಕ್ಕಿದರೆ ಮುಂದಿನ ಗತಿ…..?! ಈ ಆತಂಕ ಸಿಡಿಲಿನಂತೆ ಆಗಾಗ ಸಿಡಿಯುತ್ತಿರುತ್ತದೆ.  ವರ್ಷಗಳ ಕಾಲ ತಮ್ಮ ತಮ್ಮ ಮಕ್ಕಳ ಕೆನ್ನೆ ಸವರದೆ, ಹೆಂಡತಿಯರ ಎದೆ ಮೇಲೆ ತಲೆಯಿಟ್ಟು ಮೌನವಾಗಿ ಮಲಗದೆ ಉಸಿರಾಡುವ ಇಲ್ಲಿಯ ನೂರಾರು ಜನರನ್ನು ಸಾವು ಏಕಾಏಕಿ ಕೊಂಡೊಯ್ದುಬಿಡುತ್ತದೆ; ಕನಿಷ್ಠ ಕನಿಕರವನ್ನೂ ತೋರುವುದಿಲ್ಲ…… ಮರಳುಗಾಡಲ್ಲೇ ಬದುಕಿಬದುಕಿ ಬಿಸಿಲಲ್ಲಿ ಬೆಂಡಾಗಿರುವ ಸಂತತಿಗೂ ಸಾವು ರಿಯಾಯಿತಿ ತೋರುವುದಿಲ್ಲ. ವೇಗದ ಮನುಷ್ಯರು- ನಿಧಾನ ಮನುಷ್ಯರು ಎಂಬ ಬೈನರಿ ಅಪೋಷಿಸನ್ ಗಳೂ ಕೂಡ ಸಾವಿನೆದುರು ಬಟ್ಟೆ ಕಳಚಿಕೊಂಡು ಬೆತ್ತಲಾಗುತ್ತವೆ. ಬದುಕಿದ್ದಾಗ ಮಾತ್ರ ಸದ್ದ ನೀಡಿ ಅಥವ ಹೊರಡಿಸಿ ಆಟ ಮುಗಿದ ನಂತರ ನಿರ್ವಾತವ ಸೃಷ್ಟಿಸಿ ಎಲ್ಲವೂ ಐಡೆಂಟಿಟಿ ಕಳೆದುಕೊಳ್ಳುತ್ತವೆ. ಆದರೆ ವೇಗ- ನಿಧಾನ ನಡೆಗಳ ನಡುವೆ ಕಟ್ಟಿದ ಗಸೀದ- ನಿಷೀದ ಉಳಿಯುತ್ತವೆ. ಖೇಮಾದಂತಹ ಮನೆಗಳು ಬೇಕಾದರೆ  ಅಳಿಯಬಹುದು ಆದರೆ ಹೆಖ್ ಮಾದಂತಹ ಪೂರ್ವಜರು ಕಟ್ಟಿದ ಪದಗಳು ಅಳಿಯುವುದಿಲ್ಲ. ಯಾರು ಬರೆದಿದ್ದೆಂದು ಗೊತ್ತಿಲ್ಲದ ಹೆಖ್ ಮಾದ ಸಾಲುಗಳನ್ನು  ಇಲ್ಲಿಯ ಜನ ತಲೆಮಾರುಗಳಿಂದ ಹೊತ್ತುಕೊಂಡು ಬಂದಿದ್ದಾರೆ. ಪ್ರೀತಿ, ಗೆಳತನ, ಮದುವೆ, ಪ್ರೇಯಸಿ, ಸೇಡು-ಕೋಪ, ಸಾವು, ಜೀವನ, ಮರುಭೂಮಿ, ಮರಳು-ನೀರು, ಹುಲ್ಲು, ಅಳು-ನಗು, ಒಂಟೆ-ಖೇಮಾ, ಮನೆ ಎಲ್ಲವೂ ಷಯರಿಗಳಲ್ಲಿ, ಹೆಖ್ ಮಾಗಳಲ್ಲಿ ರೂಪು ಪಡೆದು ಹತ್ತಾರು ವರ್ಷಗಳ ನಂತರವೂ ಆ ಹೊತ್ತಿನ ಖುಷಿ, ನೋವುಗಳ ತಿಳಿಸುತ್ತ ಅವು ನಮ್ಮದೇ ಅನ್ನಿಸಿಬಿಡುತ್ತವೆ. ಅರಬ್ಬಿ ಎಂಬ ಮೋಹಕ ಭಾಷೆಯಲ್ಲಿ ಕವಿತೆಯ ಕೇಳುವುದೆ ಒಂದು ಚೆಂದ… ಸಾವನ್ನೂ ಮರೆಸಿ ಬಿಡುವಂತಹ ಕಾಂತೀಯ ಗುಣ ಅವಕ್ಕಿವೆ. ಅವುಗಳ ತರ್ಜುಮೆ ಮಾಡಿದರೆ ಪೇಲವವಾಗುತ್ತವೆ. ಕೆಲವು ಪದಗಳಿಗೆ ಅರಬ್ಬಿಯಲ್ಲೂ ಸಮನಾದ ಪದಗಳು ಇಲ್ಲ. ಯಾಕೆಂದರೆ ಅದು “ಅಸಲಿ” ಬದೂ(ನ್) ಅರಬ್ಬಿ.

ಅರೇಬಿಯಾ ಕಾಲಂ: ಸೌದಿಯಲ್ಲಿ ಸೂರಿಲ್ಲದವರ ಸಮಾಚಾರ

ಕಳೆದ ವಾರದಿಂದ ಆರಂಭಿಸಿದ ನನ್ನ ಬಾಡಿಗೆ ಮನೆ ಹುಡುಕುವ ಸುಸ್ತು ಇನ್ನು ಮುಗಿಯುವಂತೆ ಕಾಣುತ್ತಿಲ್ಲ. ನಮ್ಮ ಇಂಡಿಯಾದ ನಗರಗಳಲ್ಲೇ ಬಾಡಿಗೆ ಮನೆ ಹುಡುಕುವುದು ತ್ರಾಸದಾಯಕ ಕೆಲಸ, ಇನ್ನು ಪರದೇಶದಲ್ಲಿ ಅಂದರೆ ಕೇಳಬೇಕೆ! ಸಾಕು ಸಾಕಾಗುತ್ತಿದೆ. ಮನುಷ್ಯ ಈ ಮನೆಯೆಂಬ ಜಾಗವನ್ನು ಯಾಕಾದರೂ ಮಾಡಿಕೊಂಡನೋ… ನನ್ನಂತಹ ಶುದ್ಧ ಸೋಮಾರಿಯನ್ನು ಹಿಂಸಿಸಲು. ಅಲೆದಾಡುತ್ತ ಮರದ ಕೆಳಗೆ ಮಲಗಿ ಬಿಡುವುದು ನನಗೆ ಇಷ್ಟದ ಕೆಲಸ. ಒಳಗಿನ ಈ ಆಸೆಯ ಅದುಮಿಡಿದು ಊರಲ್ಲಿ ಮನೆ ಕಟ್ಟಿಸುತ್ತಿರುವ ನನ್ನ ಬದುಕಿನ ಈ ಎಡಬಿಡಂಗಿತನಕ್ಕೆ ಬೇಸರ ಪಡುತ್ತಲೆ ಇಲ್ಲಿ ಬಾಡಿಗೆಗೆ ಮನೆಯ ಹುಡುಕುತ್ತಿದ್ದೇನೆ.

ಇಲ್ಲಿನ ಮನೆಗಳು ಯಾವುದೆ ವಾಸ್ತು ಶಾಸ್ತ್ರಗಳ ಹಂಗಿಲ್ಲದೆ ಕಟ್ಟಲ್ಪಟ್ಟಿರುವವು. ಕಿಟಕಿಗಳಿಗಿಂತ ಏ.ಸಿಗಳೇ ಇಲ್ಲಿ ಅಧಿಕ. ಏಣಿಗಳ ಹಾಕಿ ಹತ್ತಿದರೂ ಹತ್ತಲಾಗದ ಕಾಂಪೌಂಡ್ ಗೋಡೆಗಳೊಳಗಿನ ಮನೆಗಳಿರುವಂತೆಯೆ ರಸ್ತೆಗಂಟಿಕೊಂಡಿರುವ ಮನೆಗಳಿವೆ. ಬ್ಯಾಚುಲರ್ಸ್ ಗಳಿಗೆ ಮತ್ತು ಫ್ಯಾಮಿಲಿಗಳಿಗೆ ಇಲ್ಲಿ ಪ್ರತ್ಯೇಕವಾದ ಮನೆಗಳು. ತಿಂಗಳಿಗೆ ಐನೂರು ರಿಯಾಲ್ ನಿಂದ(ಆರು ಸಾವಿರ) ಎರಡು ಸಾವಿರ ರಿಯಾಲ್ ಗಳ ವರೆಗೆ ಬ್ಯಾಚುಲರ್ಸ್ ಗಳಿಗೆ ರೂಂ ಬಾಡಿಗೆಗೆ ಸಿಗುತ್ತವೆ. ಫ್ಯಾಮಿಲಿ ಅಪಾರ್ಟ್ ಮೆಂಟ್ ಗಳು ಅದೇ ಆಜುಬಾಜಲ್ಲಿ ಸಿಕ್ಕರೂ ನಲವತ್ತು ಸಾವಿರ ರಿಯಾಲ್ ಗಳ ವರೆವಿಗೂ ಫ್ಯಾಮಿಲಿಗಳಿಗೆ ಮನೆಗಳು ಸಿಗುತ್ತವೆ. ಅಂದರೆ ನಮ್ಮ ದುಡ್ಡಿಗೆ ನಾಲ್ಕು ಲಕ್ಷದ ಎಂಬತ್ತು ಸಾವಿರ ರೂ, ತಿಂಗಳಿಗೆ. ಈ ಮನೆಗಳಿಗೆ ಸೌದಿಗಳು ಮಾತ್ರ ಹೋಗುತ್ತಾರೆ ಎನ್ನುವುದು ನಿಜವಾದರೂ ಹೆಚ್ಚಿನ ಮನೆಯ ಯಜಮಾನರು ಸೌದಿಯೇತರರಿಗೆ ತಮ್ಮ ಮನೆಗಳನ್ನು ಕೊಡಲು ಬಯಸುತ್ತಾರೆ. ಇಲ್ಲಿನ ಪತ್ರಿಕೆಯೊಂದರಲ್ಲಿ ಈಚೆಗೆ ಪ್ರಕಟವಾದ ಸುದ್ದಿ ” ಸೌದಿಗಳಿಗೆ ಸೌದಿಗಳೇ ಮನೆ ಬಾಡಿಗೆ ಕೊಡುತ್ತಿಲ್ಲ”. ಕಾರಣ: ಸರಿಯಾಗಿ ಬಾಡಿಗೆ ಕೊಡುವುದಿಲ್ಲ; ಕರಾರಿನ ಪ್ರಕಾರ ಮನೆ ಖಾಲಿ ಮಾಡುವುದಿಲ್ಲ… ಇನ್ನು ಏನೇನೋ. ಜೆದ್ದಾದಲ್ಲಿನ ಅಪಾರ್ಟ್ ಮೆಂಟಿನ ಜಾಹಿರಾತೊಂದು ಹೀಗೆ ಹೇಳುತ್ತದೆ : “Only for expatriates”.

ನಾಲ್ಕು ಕಾಸು ಮಾಡಿಕೊಳ್ಳಲು ಬಂದಿರುವ ನನ್ನಂತಹ ಭಾರತೀಯನನ್ನು ಸೇರಿಸಿ ಎಲ್ಲಾ  “Expatriates”ಗಳು ಕಡಿಮೆ ಬಾಡಿಗೆಯ ಮನೆಗಳ ಹುಡುಕುತ್ತಾರೆ. ಕೆಲವರಂತು ತೀರ ಕಳಪೆ ಮನೆಯಲ್ಲಿ ಇಲ್ಲಿ ಬದುಕುತ್ತ ತಮ್ಮ ತಮ್ಮ ಊರುಗಳಲ್ಲಿ ಬೃಹತ್ ಮನೆಗಳನ್ನು ಕಟ್ಟಿಕೊಳ್ಳುತ್ತಾರಂತೆ. ಸೌದಿಗಳು ಇವರುಗಳನ್ನು ನೋಡುತ್ತ “ಹಿಂದಿಗಳು ಕೊಳಕರು” ಎಂದು ಜರಿದರೂ ನಗುತ್ತ ಸುಮ್ಮನಾಗಿಬಿಡುತ್ತಾರೆ. ಸೌದಿಗಳ ದೃಷ್ಟಿಯಲ್ಲಿ ಹಿಂದಿ, ಪಾಕಿಸ್ತಾನಿ, ಬಂಗಾಳಿ ಮೂವರು ಕೊಳಕರೆ. ಏಕೆಂದರೆ ಮೂವರು ಈ ಹಿಂದೆ ಒಂದೇ ಮನೆಯಲ್ಲಿ ಇದ್ದವರು. ಆ ಮನೆ ಕೊಳಕರ ಕಾರಸ್ತಾನ. ಹೀಗಿದ್ದರೂ ಅವರುಗಳು ನಂಬುವುದು ತಮ್ಮದೆ ಭಾಷೆಯಾಡುವ ಮಸ್ರಿ (ಈಜಿಪ್ಷಿಯನ್ಸ್), ಜೋರ್ಡಾನಿ, ಯೆಮೆನಿ, ಸುಡಾನಿಗಳಿಗಿಂತ ಅಗಾಧ ಸಂಪತ್ತಿನ ದೇಶದಿಂದ ಬಂದ ಹಿಂದಿಗಳನ್ನು! ಇಲ್ಲಿ ವ್ಯಕ್ತಿಯೊಬ್ಬನಿಗೆ ಐಡೆಂಟಿಟಿ ಸಿಗುವುದು ಆತ ಬಂದ ದೇಶದ ಮೇಲೆಯೆ ಹೊರತು ಆತ ಹುಟ್ಟಿದ ಧರ್ಮದ ಮೇಲಲ್ಲ. ಹಾಗೆಯೇ ಆತನಿಗೆ ಸಿಗುವ ಮರ್ಯಾದೆಯೂ ದೇಶದ ಮೇಲೆಯೇ ಅವಲಂಬಿತವಾಗಿರುತ್ತದೆ. ಹೀಗಿದ್ದರೂ ಬಂದ ಎಲ್ಲರಿಗೂ ಕೆಲಸ ಸಿಗುತ್ತದೆ, ತಂಗಲು ಮನೆ ಸಿಗುತ್ತದೆ.

ದುಡಿಯುವ ವರ್ಗದ ಜನರ ಸಂಬಳ ತಿಂಗಳಿಗೆ ಸಾವಿರ ರಿಯಾಲ್ ಗಳು ಮಾತ್ರ ಆಗಿರುವುದರಿಂದ ಅವರುಗಳು ಐದಾರು ಜನ ಸೇರಿ ಕಡಿಮೆ ಬಾಡಿಗೆಯ ರೂಂಗಳಲ್ಲಿ ಒಟ್ಟಿಗೆ ಬದುಕುತ್ತಾರೆ. ಮಜ್ರಾ(ತೋಟ)ಗಳಲ್ಲಿ ಕೆಲಸ ಮಾಡಲು ಬಂದಿರುವವರಿಗೆ ಮನೆ ಬಾಡಿಗೆಯ ತಲೆ ಬಿಸಿ ಇರುವುದಿಲ್ಲ. ಏಕೆಂದರೆ ಸಿಮೆಂಟ್ ಶೀಟಿನ ಮನೆಗಳನ್ನು ಅವರ ಕಫೀಲ್ ಗಳು (ಸ್ಪಾನ್ಸರ್ಸ್) ಅವರುಗಳಿಗೆ  ದಯಪಾಲಿಸಿರುತ್ತಾರೆ. ಕೆಲವರಿಗೆ ಸಂಬಳ ಸಿಕ್ಕು ತಿಂಗಳುಗಳೇ ಕಳೆದಿರುತ್ತವೆ. ಕೇವಲ ಇರಲು ಗೂಡು, ತಿನ್ನಲು ಕುಬ್ಸಾ, ಕುಡಿಯಲು ನೀರು ಮಾತ್ರ ಸಿಗುತ್ತಿರುತ್ತದೆ. ಊರಲ್ಲಿನ ತಮ್ಮ ಮನೆಯವರ ನರಳಾಟ ಗಾಳಿಯಲ್ಲಿ ಕೇಳಿಸುತ್ತಿರುತ್ತದೆ. ಇವರುಗಳ ತಳಮಳ ಕೆಲವು ಸೌದಿಗಳಿಗೆ ತಲುಪುವುದೇ ಇಲ್ಲ.  ಇನ್ನು ಇಲ್ಲಿಯ ಊರೊಳಗೆ ಮನೆ ಕಟ್ಟುವ ನಮ್ಮ ದೇಶದ ಜನರ ಸ್ಥಿತಿ ಇವರುಗಳಿಗಿಂತ ಭಿನ್ನವಾಗಿಲ್ಲ. ನಮ್ಮವರಂತೆ ಮಸ್ರಿ, ಪಾಕಿಸ್ತಾನಿ, ಬಂಗಾಳಿಗಳು ಹೇಗೋ ಮಲಗಿ ಎದ್ದು ಬೆಳಿಗ್ಗೆ ಬೆವರ ಸುರಿಸುತ್ತ ಸೂರ್ಯನೆದುರು ಅರಳುತ್ತಾರೆ. ಕಠಿಣ ಮತ್ತು ಅತೀವ ಶಕ್ತಿಯನ್ನು ಬಯಸುವ ಕೆಲಸಗಳನ್ನೆಲ್ಲ ಇಲ್ಲಿ ಪಾಕಿಸ್ತಾನಿಯರೆ ಹೆಚ್ಚಾಗಿ ಮಾಡುವುದು. ಹಳೆಯ ಮನೆಗಳನ್ನು ಕೆಡಹುವ ಕೆಲಸಕ್ಕೆ ಇವರುಗಳೆ ಇಲ್ಲಿ ಫೇಮಸ್. ಮನೆಯ ಸಾಮಾನುಗಳನ್ನು ಎತ್ತಿ ಮತ್ತೊಂದು ಕಡೆಗೆ ವರ್ಗಾಯಿಸುವವರು ಪಾಕಿಸ್ತಾನಿಗಳು ಮತ್ತು ಮಸ್ರಿಗಳು. ಇವರುಗಳ ಜೊತೆ ಮನೆಗೆ ಸಂಬಂಧಿಸಿದ ಎಲ್ಲಾ ಕೆಲಸಗಾರರು ಪ್ರಮುಖ ಬೀದಿಯೊಂದರಲ್ಲಿ ಕೂತಿರುತ್ತಾರೆ. ಮನೆ ಕೆಡಹುವವರು, ಕಟ್ಟುವವರು, ಗೋಡೆಗಳಿಗೆ ಬಣ್ಣ ಬಳಿಯುವವರು, ನೀರ ಪೈಪುಗಳ ಜೋಡಿಸುವವರು, ಬಲ್ಬುಗಳಿಗೆ ಕರೆಂಟ್ ಹಾಯಿಸಿ ಬೆಳಕ ಮೂಡಿಸುವವರು, ಹೀಗೆ ಎಲ್ಲಾ ವಿಭಾಗದ ಜನ ಕೆಲಸಕ್ಕಾಗಿ ಕಾಯುತ್ತ ಕೂತಿರುತ್ತಾರೆ. ಕಾರ್ ಬಂದು ನಿಂತ ತಕ್ಷಣ ಮಾಂಸದಂಗಡಿಯಲ್ಲಿ ಮುತ್ತಿಕೊಳ್ಳೊ ನೊಣಗಳಂತೆ ಕಾರ್ ನೊಳಗೆ ತಲೆಗಳ ತೂರಿಸಿ “ಸಲಾಮ ಲೇಕುಂ” ಎನ್ನುತ್ತ ಆತನ ತುಟಿಗಳಿಂದ ಉದುರುವ ಶಬ್ದಗಳಿಗಾಗಿ ಕಣ್ಣುಗಳ ಇಷ್ಟಗಲ ಅಗಲಿಸಿ ತಮ್ಮ ಕರೆ ಹಿಡಿದ ಹಲ್ಲುಗಳ ಪ್ರದರ್ಶನಕ್ಕಿಡುತ್ತಾರೆ.

ಕೆಲಸಗಳಿಗಾಗಿ ಕೂತು ಕಾಯುವ ಇಂತಹ ಜನರನ್ನು ನಾನು ಬೆಂಗಳೂರಿನ ಮೂಡಲಪಾಳ್ಯದ ಸರ್ಕಲ್ ನಲ್ಲಿ ನೋಡಿದ್ದೇನೆ. ಜಗತ್ತಿನ ಪ್ರತಿಯೊಂದು ಮೂಲೆಗಳಲ್ಲು ಹೀಗೆ ಜನ ಬೆವರ ಸುರಿಸಿ ದುಡ್ಡು ದುಡಿಯಲು “ಅದೃಷ್ಟ”ಕ್ಕಾಗಿ ಕಾಯುತ್ತ ಕೂತಿರುತ್ತಾರೆ ಅನಿಸುತ್ತೆ. ಇವರುಗಳೆಲ್ಲ ತಮ್ಮ ಕೈ ಕಾಲುಗಳನ್ನು ಬಂಡವಾಳ ಮಾಡಿಕೊಂಡು ವ್ಯಾಪಾರಕ್ಕೆ ನಿಂತಿರುತ್ತಾರೆ. ಗ್ರಾಹಕರು ಒಡೆಯರನ್ನೆ ಮೋಸ ಮಾಡಿ ಗ್ರಾಹಕ ಹಕ್ಕುಗಳನ್ನು ಎತ್ತಿ ಹಿಡಿಯುತ್ತಾರೆ. ಬಂಡವಾಳ ಹಾಕಿದವರು ಕಣ್ಣ ಕಿರುದಾಗಿಸಿಕೊಂಡು ತಮ್ಮ ಮಾಲುಗಳನ್ನು ಮಾರಿಕೊಂಡುಬಿಡುತ್ತಾರೆ. ಕಾರ್ ಬಂದು ನಿಂತ ತಕ್ಷಣ ತಮ್ಮ ಮಾಲುಗಳನ್ನು ಮಾರಲು ಓಡುತ್ತಾರೆ. ಹೀಗೆ ಓಡುವ ಜನ ಅವರವರ ಊರುಗಳಲ್ಲಿ ಹೇಗೆ ಜೀವಿಸುತ್ತಿದ್ದಿರಬಹುದು?

ತಮ್ಮ ಕೈಕಾಲುಗಳ ಮೇಲೆ ವಿಶ್ವಾಸವಿರಿಸಿಕೊಂಡು ಬದುಕನ್ನು ಗೆಲ್ಲುವ ಛಲದಲ್ಲಿ ಹುಟ್ಟಿದ ಊರುಗಳನ್ನು ಬಿಟ್ಟು ಹೊರಟು ನಿಲ್ಲುವ ಇವರುಗಳ ಕನಸು ಕನಸಾಗಿಯೇ ಉಳಿದಿರುವುದೆ ಹೆಚ್ಚು. ಇವರಲ್ಲಿ ಎಷ್ಟೋ ಜನ ಹೊಲಗದ್ದೆಗಳನ್ನು, ಮನೆಗಳನ್ನು ಅಡ ಇಟ್ಟು ಏಜೆಂಟಿಗೆ ಒಂದು ಲಕ್ಷ ಕೊಟ್ಟು ವಿಮಾನವತ್ತುತ್ತಾರೆ. ಆ ಸಾಲವನ್ನು ತೀರಿಸಲೆ ಒಂದು ವೆಕೆಷನ್ ಸರಿಯಾಗುತ್ತದೆ. ಅಂದರೆ ಮೂರು ವರ್ಷ. ನಂತರ ದುಡಿದದ್ದು ಮನೆ ಖರ್ಚಿಗೆಂದು, ಮದುವೆಮುಂಜಿಗೆಂದು ಕರಗಿಹೋಗಿ ಬಿಡುತ್ತದೆ. ಕೊನೆಗೆ ಬದುಕನ್ನು ತಕ್ಕಮಟ್ಟಿಗೆ ತರುವುದರೊಳಗೆ ಮುಕ್ಕಾಲು ವಯಸ್ಸು ಮುಗಿದಿರುತ್ತದೆ. ಕಳೆದ ವೆಕೆಷನ್ ನಲ್ಲಿ ನೋಡಿ ಬಂದಿದ್ದ ಐದು ಲಕ್ಷದ ಜಾಗ ಈ ವೆಕೆಷನ್ ನಲ್ಲಿ ಹೋಗಿ ಕೇಳಿದರೆ ಮೂವತ್ತು ಲಕ್ಷವಾಗಿರುತ್ತದೆ. ಮನೆ ಕಟ್ಟಿಕೊಳ್ಳುವ ಕನಸು ಎಷ್ಟೋ ಜನಕ್ಕೆ ಕನಸಾಗಿಯೇ ಉಳಿಯುತ್ತದೆ. ನೂರರಲ್ಲಿ ಇಪ್ಪತ್ತು ಜನ ಮಾತ್ರ ವಿದೇಶದ ದುಡ್ಡಲ್ಲಿ ನೆಮ್ಮದಿಯಾಗಿರುತ್ತಾರೆ. ಉಳಿದವರದು ಆ ಹೊತ್ತಿನ ಬದುಕನ್ನು ನೂಕುವುದರಲ್ಲೇ ಸವೆದು ಹೋಗುತ್ತಾರೆ. ಸೌದಿಗಳ ಬೃಹತ್ ಮನೆಗಳ, ಅವುಗಳೊಳಗಿನ ಪ್ರಖರತೆಯ ಕಣ್ಣಗಲಿಸಿ ನೋಡುತ್ತ ಸಾಮಾನುಗಳ ಎತ್ತುತ್ತಿರುತ್ತಾರೆ.

ಖೇಮಾಗಳಿಂದ ಮಣ್ಣಿನ ಮನೆಗೆ, ಅಲ್ಲಿಂದ ಮೋಲ್ಡ್ ಮನೆಗಳಿಗೆ ಬದಲಾದ ಸೌದಿಗಳ ವಾಸದ ನಡೆ ಹಲವಾರು ವೈಶಿಷ್ಟ್ಯಗಳಿಂದ ಕೂಡಿದ್ದು. ಇಂದಿನ ಮನೆಗಳು ಬಹುತೇಖ ಆಡಂಭರವನ್ನು ಹೊತ್ತು ನಿಂತಿರುವಂತಹವುಗಳೆ. ಕನಿಷ್ಟವೆಂದರೂ ಹತ್ತು ಕೋಣೆಗಳ ಮನೆಗಳು ಇಲ್ಲಿ ಸಾಮಾನ್ಯ. ಕಪ್ಪು ಹಿಜಾಬ ಧರಿಸಿರುವ ಹೆಂಗಸರಿಗೊಂದು ಬಾಗಿಲು, ಗಂಡಸರಿಗೊಂದು ಪ್ರತ್ಯೇಕ ಬಾಗಿಲು. ಗಂಡಸರು ಕೂರಲು ಮಜ್ಲಿಸ್ ಎನ್ನುವ ದೊಡ್ಡ ಹಾಲ್. ಮನೆಯ ತುಂಬ ಕಾರ್ಪೆಟ್, ಫ್ಲೋರ್ ಮೊಸಾಕ್ ಅಥವ ಸೆರಮಿಕ್ ಟೈಲ್ಸ್ ಆಗಿದ್ದರೂ ಸರಿ ಅಥವ ಗ್ರಾನೈಟ್ಸ್ ಆಗಿದ್ದರೂ ಸರಿ ಇವರುಗಳಿಗೆ ಕಾರ್ಪೆಟ್ ಬೇಕೆ ಬೇಕು; ಅತ್ಯಾಧುನಿಕ ಸಾಮಾನುಗಳೆಲ್ಲವು ಮನೆಯೊಳಗೆ ಇರಬೇಕು ಎನ್ನುವುದು ಅಲಿಖಿತ ನಿಯಮ.

ಕಿಟಕಿಗಳಿಗೆ ಸುಂದರವಾದ ಕರ್ಟನ್ ಗಳು, ನೇತಾಡುತ್ತಿರುವ ದ್ರಾಕ್ಷಿ ಗೊಂಚಲಿನಂತೆ ಕಾಣುವ, ಕಣ್ಣ ಕೋರೈಸುವ ತರಾವರಿ ಬಲ್ಬುಗಳು, ಗೋಡೆಯಲ್ಲಿ ಅರಬ್ಬರ ಚಿತ್ರಕಲೆ, ಗಮ್ಮೆನ್ನುವ ಸುಗಂಧ ದ್ರವ್ಯಗಳ ವಾಸನೆ, ಹೀಗೆ  ಸ್ವಚ್ಛತೆ, ಆಡಂಭರ, ಪರಂಪರೆಯ ಮುಂದುವರಿಕೆ ಎಲ್ಲವೂ ಸೇರಿ ಸೌದಿಗಳ ಮನೆಯನ್ನು ಅರಮನೆಯಾಗಿಸಿವೆ. ಇದು ಸಾಹುಕಾರ ಸೌದಿಗಳ ಮನೆಯ ಚಿತ್ರ ಮಾತ್ರವಲ್ಲ, ಕೆಳ ಮಧ್ಯಮ ವರ್ಗದ ಸೌದಿಗಳ ಮನೆಗಳೂ ಹೀಗೆಯೆ.

ಇನ್ನು ಈ ಮನೆಗಳಿಗಿಂತ ದೂರದಲ್ಲಿ ಕೆಲವು ಸೌದಿಗಳು ಇಂದಿಗೂ ಮಣ್ಣಿನ ಮನೆಗಳಲ್ಲಿ, ಖೇಮಾಗಳಲ್ಲಿ ಬದುಕುತ್ತಿದ್ದಾರೆ. ಖೇಮಾ ಅಂದರೆ ಗಟ್ಟಿ ಬಟ್ಟೆಯಲ್ಲಿ ಕಟ್ಟದ ಟೆಂಟ್. ಅದರೊಳಗೆ ಹೆಂಗಸರು ಬಿಡಿಸಿದ ಚಿತ್ರಗಳು ಮರುಭೂಮಿಯನ್ನು ಮರೆಸುವಷ್ಟು ಶಕ್ತವಾಗಿರುತ್ತವೆ. ಮರುಭೂಮಿ ಬದುಕು ಎನ್ನುವುದು ಬಟ್ಟಂ ಬಯಲಿನಷ್ಟೆ ರಹಸ್ಯವಾದುದು. ಕ್ಷಣಾರ್ಧದಲ್ಲೇ ಎಲ್ಲವನ್ನು ಅಳಿಸಿಬಿಡುವ ತಾಕತ್ತು ಅದಕ್ಕಿದೆ. ಉರಿವ ಸೂರ್ಯನಿಗೆ ಭಯಪಡುವಷ್ಟೆ ಮನುಷ್ಯ ಆಕೃತಿಗಳಿಗೂ ಭಯ ಪಡುವಂತಹ ಬದುಕು. ಹಾಗಾಗಿಯೇ ಬಂದೂಕು ಇಕ್ಕೆಲದಲ್ಲಿಯೆ ಇರಬೇಕಾಗುತ್ತದೆ. ವಿಸ್ತಾರವಾಗಿ ಹರಡಿಕೊಂಡು ಬಿದ್ದಿರುವ ಮರಳುಗಾಡನ್ನು ಸೃಷ್ಟಿಸಿದ ನಿಸರ್ಗ ಒಯೆಸಿಸ್ ಅನ್ನು ಸೃಷ್ಟಿಸಿ ಜನರನ್ನು ಬದುಕಿಸಿತು. ನೀರಿನ ತಾಣಗಳನ್ನು ಕೊಟ್ಟು ಕೆಲವರಿಗೆ ಬದುಕುವ ವಿಶ್ವಾಸವ ನೀಡಿತು. ಇನ್ನು ದೇವರೆಂಬ ಶಕ್ತಿ ಹಲವರಿಗೆ ಮರಳುಗಾಡಲ್ಲಿ ಜೀವನದ ಹಾದಿಯನ್ನು ರೂಪಿಸಿತು. ಸೂರ್ಯ ಹುಟ್ಟುವ ಮುಂಚಿನಿಂದ ಶುರುವಾಗುವ ದೇವರ ಪ್ರಾರ್ಥನೆ ಕತ್ತಲಾಗುವವರೆಗೆ ಐದು ಬಾರಿ ನಡೆದು ಬದುಕಲ್ಲಿ ನಂಬಿಕೆ ಮೂಡಿಸಲು ಇವರುಗಳಿಗೆ ಸನ್ನೆಗೋಲಾಗಿದ್ದು ಮೆಲ್ಲಗೆ ಇವರ ಬದುಕುಗಳನ್ನೇ ಆವರಿಸಿತು. ಈಗ ಇಲ್ಲಿಯವರ ಪ್ರತಿ ಮಾತಿನಲ್ಲೂ, ನಡೆಯಲ್ಲೂ ದೇವರೆ ತುಂಬಿಕೊಂಡಿರುವುದು. ಹಾಗಂತ ಮನೆಯನ್ನು ಕಟ್ಟುವಾಗ ಪೂಜಿಸುವುದಾಗಲಿ, ಮನೆಯನ್ನು ಆರಾಧಿಸುವುದಾಗಲಿ ಇಲ್ಲ.

ಖೇಮಾದೊಳಗಿನ ಬಿಸಿಲ ಬದುಕು ಬದಿಗೆ ಸರಿದು ನಿಸರ್ಗಕ್ಕೆ ಸೆಡ್ಡು ಹೊಡೆದು ಎ.ಸಿ.ಯ ತಂಪುಗಾಳಿಯಲ್ಲಿ  ಬೃಹತ್ ಮನೆಗಳೊಳಗೆ ಬದುಕು ಧಗಧಗಿಸುತ್ತಿರುವುದು ಕಾಲ ನಿರ್ಣಯಿಸಿದ ಸತ್ಯ. ಇಪ್ಪತ್ತು, ಮೂವತ್ತು ಕೋಣೆಗಳ ಮನೆಗಳಲ್ಲಿನ ಕೂಡು ಕುಟುಂಬದ ಸಂಸಾರಗಳು ಮೆಲ್ಲಗೆ ಎಂಟು, ಹತ್ತು ಕೋಣೆಗಳಾಗಿ ಬದಲಾಗುತ್ತಿವೆ. ನನಗೆ ಪರಿಚಯವಿರುವ ಸೌದಿಯೊಬ್ಬ ಹೇಳುವಂತೆ ಹೊಸ ಸಂಬಂಧದಿಂದ ತಂದುಕೊಳ್ಳುವ ಹೆಣ್ಣುಗಳು ಪ್ರತ್ಯೇಕ ಮನೆಗಳನ್ನು ಬಯಸುತ್ತಾರಂತೆ. ಕೂಡು ಕುಟುಂಬದಲ್ಲಿದ್ದರೆ ಸದಾ ಹಿಜಾಬದಲ್ಲೇ ಇರಬೇಕೆಂಬ ಮತ್ತು ಸ್ವಾತಂತ್ರ್ಯ ಇರುವುದಿಲ್ಲ ಎಂದು ಈಗಿನ ಹೆಣ್ಣುಗಳು ಬಯಸುತ್ತಾರಂತೆ. ಹುಡುಗನೊಬ್ಬ ಇಲ್ಲಿ ಮದುವೆಯಾಗಬೇಕೆಂದರೆ ಪ್ರತ್ಯೇಕ ಮನೆ, ಕಾರು, ಕೆಲಸಗಾರರು ಇರಲೇಬೇಕು. ಹುಡುಗಿ ಮನೆಗೆ ಕೊಡಬೇಕಾದ ಮಹರ್(ವಧು ದಕ್ಷಿಣೆ)ಯ ಜೊತೆ ಮೇಲಿನವನ್ನೆಲ್ಲ ಸೇರಿಸಿ ಹುಡುಗನ ಮನೆಯವರಿಗೆ ಲಕ್ಷಗಟ್ಟಲೆ ಬೇಕು ಮದುವೆ ಮಾಡಿಸಬೇಕೆಂದರೆ. ತಮ್ಮ ಹೆಣ್ಣುಗಳ ಮದುವೆಯಾಗುವುದೆಂದರೆ ದುಬಾರಿ ಖರ್ಚು ಎನ್ನುವ ಕಾರಣಕ್ಕೆ ಕೆಲವು ಸೌದಿ ಗಂಡಸರು ಈಜಿಪ್ಟ್ ಗೋ, ಪಕ್ಕದ ಯೆಮೆನ್ ಗೋ, ಕತಾರ್ ಗೋ ಹೋಗಿ ಕಡಿಮೆ ಖರ್ಚಲ್ಲಿ ಮದುವೆಯಾಗಿ ಹೆಂಡತಿಯರನ್ನು ಕರೆದುಕೊಂಡು ಬಂದುಬಿಡುತ್ತಾರೆ.

ಹಣವಂತ ಸೌದಿಗಳು ಎರಡನೆ, ಮೂರನೆ ಮದುವೆಗಳಿಗೆ ಅಲ್ಲಿ ಹೋಗುತ್ತಾರೆ. ಇನ್ನು ಕೆಲವರು ನಮ್ಮ ಇಂಡಿಯಾಕ್ಕೂ ಬರುತ್ತಾರೆ. ವ್ಯಕ್ತಿಯೊಬ್ಬನಿಗೆ ಇಲ್ಲಿ ಬಹುಮದುವೆಯಾಗುವ ಅವಕಾಶವಿರುವುದರಿಂದ ಒಂದಕ್ಕಿಂತ ಹೆಚ್ಚಿನ ಮನೆಗಳ ಕಟ್ಟಿಸುವ ಅನಿವಾರ್ಯತೆ ಕೆಲವರಿಗೆ ಎದುರಾಗಿದೆ. ಮನೆಯ ತುಂಬ ಮಕ್ಕಳು ಆಗುವುದರಿಂದ ಸುಮಾರು ರೂಮುಗಳ ಅವಶ್ಯಕತೆಯೂ ಇದೆ. ನಾ ಕಂಡಂತೆ ಮಕ್ಕಳನ್ನು ಅತಿಯಾಗಿ ಪ್ರೀತಿಸುವವರು ಅರಬ್ಬರೆ. ಮಕ್ಕಳೆಂದರೆ ಇವರುಗಳಿಗೆ ಪಂಚಪ್ರಾಣ. ಮನೆಗಳು ಮಕ್ಕಳ ಕಲರವ, ಗಲಾಟೆಗಳಿಂದ ತುಂಬಿ ತುಳುಕುತ್ತಿರುತ್ತವೆ. ಚಾಕ್ ಲೇಟ್, ಸಿಹಿ ತಿಂಡಿ ತಿನಿಸುಗಳ, ಆಟದ ಸಾಮಾನುಗಳ, ಬಣ್ಣಬಣ್ಣದ ಗೊಂಬೆಗಳ ಕೊಡಿಸಿ ಮಕ್ಕಳ ಮನಸ್ಸುಗಳನ್ನು ಖುಷಿ ಪಡಿಸುವುದೂ ತಮ್ಮ ಬದುಕಿನ ಮುಖ್ಯ ಕ್ಷಣಗಳು ಎಂದು ಭಾವಿಸುತ್ತಾರೆ. ಖೇಮಾಗಳೊಳಗಿನ ಸೌದಿಗಳೂ ಇವರಿಗಿಂತ ಕಡಿಮೆಯೇನಿಲ್ಲ. ಮಕ್ಕಳ  ಮೇಲಿನ ಪ್ರೀತಿ, ಆರೈಕೆಗಳನ್ನು ತಾವೇ ನೋಡಿಕೊಳ್ಳುತ್ತ ಮನೆಯನ್ನು ಓರಣಗೊಳಿಸುತ್ತಿರುತ್ತಾರೆ. ಹಣವಂತ ಸೌದಿಗಳ ಮನೆಯಲ್ಲಿ ಅವುಗಳ ಮಾಡಲು ಫಿಲಿಪೈನಿ ಹುಡುಗಿಯರು ಇರುತ್ತಾರೆ. ಕೆಲವು ಕಡೆ ಶ್ರೀಲಂಕಾದ ಕಪ್ಪು ಸುಂದರಿಯರು ಮನೆಯ ತುಂಬ ಓಡಾಡಿಕೊಂಡು ನೆಮ್ಮದಿಯಾಗಿರುತ್ತಾರೆ. ಹೀಗೆ ಬೆಚ್ಚನೆಯ ಪ್ರೀತಿ, ಆರೈಕೆಗಳಲ್ಲಿ ಬೆಳೆಯುವ ಸೌದಿಯ ಮಕ್ಕಳು ಕೇಳಿದ್ದೆಲ್ಲವನ್ನು ಪಡೆಯುತ್ತ ತುಂಟರಾಗುತ್ತಾರೆ. ಯಾರ ಹಂಗಿಲ್ಲದೆ ಅಂಗಡಿಗೆ ಹೋಗಿ ಸಾಮಾನುಗಳ ತರುತ್ತಾರೆ; ಆ ವಯಸ್ಸಲ್ಲೇ ತಮ್ಮ ತಾಯಿ ಮತ್ತು ಮನೆಯ ಹೆಂಗಸರನ್ನು ಕಾರಲ್ಲಿ ಕೂರಿಸಿಕೊಂಡು ಸೂಖ್ ಗೆ ಹೋಗುತ್ತಾರೆ. ಇದು ವಾದಿ ಯಂತಹ ಸೌದಿಯ ಸಣ್ಣ ಪಟ್ಟಣಗಳಲ್ಲಿ ಸಾಮಾನ್ಯ. ರಿಯಾದ್, ಜೆದ್ದಾದಂತಹ ನಗರಗಳಲ್ಲಿ ಈ ತರ ಹತ್ತನ್ನೆರಡು ವರ್ಷದ ಹುಡುಗರು ಜಿ.ಎಂ.ಸಿ ಗಳನ್ನು ಓಡಿಸುತ್ತಾರೇನೋ ಗೊತ್ತಿಲ್ಲ. ಆದರೆ ಇಲ್ಲಿ ಅದು ಸಾಮಾನ್ಯ.

ಈ ಹುಡುಗರು ಏನು ಮಾಡಿದರೂ ದೊಡ್ಡವರು ಅದನ್ನು ದೊಡ್ಡದಾಗಿ ತೆಗೆದುಕೊಳ್ಳುವುದಿಲ್ಲ. “ಅಜ್ನಬಿ”ಗಳ ಕಂಡರೆ ಕಲ್ಲು, ಮೊಟ್ಟೆಗಳ ಎಸೆದು ಸಂತೋಷಪಡುವ ತಮ್ಮ ಹುಡುಗರ ಕಂಡು ನಗುತ್ತ ದೂರು ನೀಡುವ ಅಜ್ನಬಿಗಳಿಗೆ “ಅವನು ಹುಡುಗ ಕಣಯ್ಯ” ಎನ್ನುತ್ತಾರೆ ಆ ಮಕ್ಕಳ ಹೆತ್ತವರು. ನಮ್ಮವರು “ಇಲ್ಲಿ ಎಲ್ಲರೂ ಸೈತಾನ್ ಗಳೆ” ಎಂದು ಗೊಣಗಿಕೊಳ್ಳುತ್ತಿರುತ್ತಾರೆ. ಮಕ್ಕಳಾದಿಯಿಂದ ಮುದುಕರವರೆಗೆ ಸೌದಿಗಳು ಅನೇಕರು ಇಂದು ಎ.ಸಿ.ಗಳಿಲ್ಲದೆ ಬದುಕಲಾರರು. ಚಳಿಗಾಲದಲ್ಲಿ ಬೆಂಕಿ ಕಾಯಿಸಲೆಂದೆ ಪ್ರತ್ಯೇಕ ಕೋಣೆಗಳು. ಮರುಭೂಮಿ ನಡುವಿನ ಬದುಕು ಒಡ್ಡಿದ ಸವಾಲುಗಳನ್ನೆಲ್ಲ ಎದುರಿಸಿ ಇಂದು ಹೆಚ್ಚಿನವರು ರಾಜವೈಭವದಲ್ಲಿ ಬದುಕುತ್ತಿದ್ದಾರೆ, ಅಷ್ಟೆ ಪ್ರಮಾಣದಲ್ಲಿ ಆಧುನಿಕತೆಯೆದುರು ಸೋತು ಆರಕ್ಕೇರಲಾಗದೆ ಓಡಾಡುವ ಜನ ಇದ್ದಾರೆ. ಮರುಭೂಮಿ ಬದುಕು ಬಯಸುವ ಒರಟುತನ, ಜಿಪುಣತನ ಎಲ್ಲವನ್ನು ಇಂತಹವರಲ್ಲಿ ಕಾಣಬಹುದು. ನಾ ಹುಟ್ಟಿದ ಬಯಲು ಸೀಮೆಯಲ್ಲೂ ಕೆಲವು ಊರುಗಳ ಜನ ಹೀಗೆಯೆ. ಮಾರಿಕಣಿವೆ ಡ್ಯಾಂ ನೀರು ಹಾಯದ ನಮ್ಮ ತಾಲ್ಲೂಕಿನ ಬೆದ್ಲು ನೆಲದ ಜನ ಇವರ ತರವೆ. ಮರುಭೂಮಿ ಕಲಿಸಿದ ಒರಟುತನ ಆಧುನೀಕತೆಯ ಸ್ಪರ್ಶದಿಂದಾಗಿ ಭಿನ್ನ ಸ್ವರೂಪ ಪಡೆದು ದುಡಿಯಲು ಬಂದ ಅಜ್ನಬಿಗಳ ಮೇಲೆ ಎರಗುವಂತಾಗಿದೆ. ತಾವೇ ಶ್ರೇಷ್ಠ ಎಂಬ ಹಮ್ಮು ಕೇವಲ ಅಜ್ನಬಿಗಳ ಮೇಲೆ ಮಾತ್ರವಲ್ಲ, ತಮ್ಮ ತಮ್ಮೊಳಗೂ ಉಂಟು. ಈ ಶ್ರೇಷ್ಠ ಎಂಬ ಇವರ ಮನಸ್ಥಿತಿಯೇ ಬೃಹತ್ ಮನೆಗಳ ನಿರ್ಮಾಣಕ್ಕೆ ಮತ್ತು ಆಡಂಭರ ಬದುಕಿಗೆ ಕಾರಣವಾಗಿರಬಹುದು. ಇದರ ಜೊತೆ ಆಧುನೀಕತೆಯ ಸೆಳೆತವೂ  ಇಲ್ಲಿಯವರ ಬದುಕಿನ ಕ್ರಮಗಳನ್ನು ಇಡಿಯಾಗಿ ಬದಲಿಸಿರಲೂಬಹುದು. ಹೀಗೆ ಕಾಲದ ಗತಿಯಲ್ಲಿ ಸಾಗಿ ಬಂದ ಸೌದಿ ಗಂಡಸು ಬದಲಾವಣೆಗೊಳ್ಳುತ್ತ ಮನೆಯನ್ನು ಪೋಷಿಸುತ್ತ ಬಂದಿರುವುದು ಸುಳ್ಳಲ್ಲ.

ನಾ ಇದುವರೆಗೆ ಕೇಳಿ ತಿಳಿದಂತೆ ಸೌದಿ ಗಂಡಸರು ತಮ್ಮ ಹೆಂಡತಿಯರು ಕೇಳುವುದೆಲ್ಲವನ್ನು ಕೊಡಿಸಲೇಬೇಕಂತೆ. ಸೌದಿ ಗೆಳಯ ಮುಂದುವರಿದು ಹೇಳುತ್ತಾನೆ: “ನಮ್ಮ ಮನೆಗಳಲ್ಲಿ ಹೆಂಗಸರು ರಾಣಿಯರಂತೆ ಬದುಕುತ್ತಾರೆ. ಪಶ್ಚಿಮದಲ್ಲಿ ಮತ್ತು ನಿಮ್ಮಲ್ಲಿ  ಹೆಣ್ಣು ಎಷ್ಟೇ ಸ್ವತಂತ್ರವಾಗಿ ಹೊರಗೆ ಅಡ್ಡಾಡಿದರೂ ಮನೆಯೊಳಗೆ ಎರಡನೆ ಪ್ರಜೆ. ನಮ್ಮಲ್ಲದು ವೈಸ್ ವರ್ಸ…” ಈ ಗೆಳಯನ ಮಾತಿಗಿಂತ ಇಲ್ಲಿಯ ಹೆಣ್ಣೊಬ್ಬಳು ಮಾತನಾಡಿದ್ದರೆ ನಮಗೆ ಚಿತ್ರ ಸಿಗುತ್ತಿತ್ತೇನೋ. ನನ್ನಂತಹ ಅಜ್ನಬಿ, ಅದರಲ್ಲೂ ಗಂಡಸು ಇಲ್ಲಿಯ ಹೆಣ್ಣು ಲೋಕದ ಬಗ್ಗೆ ಮಾತನಾಡಿದರೆ ನೈಜ ಚಿತ್ರಣ ಸಿಗುವುದಿಲ್ಲ. ಕಪ್ಪು ಹಿಜಾಬ (ಬುರ್ಖಾ)ವನ್ನು ನೋಡುತ್ತ ಸರಳೀಕರಿಸಿ ಹೇಳಿಬಿಟ್ಟರೆ ಕುದಿಯುವ ಎಣ್ಣೆಗೆ ಒಗ್ಗರಣೆ ಹಾಕಿದಂತಾಗುತ್ತದೆ.  ತಮ್ಮ ಬದುಕಿನ ಹೆಚ್ಚು ಕಾಲವನ್ನು  ಮನೆಯೊಳಗೇ ಕಳೆಯುವ ಇಲ್ಲಿಯ ಹೆಣ್ಣುಗಳು ರಚಿಸಿದ ಎರಡು ಪುಸ್ತಕಗಳು ನನ್ನನ್ನು ಸುಮಾರು ದಿನಗಳಿಂದ ಸೆಳೆಯುತ್ತಿವೆ. ಒಂದು: ಅಮೆರಿಕಾದಲ್ಲಿ ಓದಿ, ಪಶ್ಚಿಮ ಸ್ತ್ರೀವಾದದ ಕಂಗಳಲ್ಲಿ ತನ್ನ ಸಮಾಜವನ್ನು ಕಂಡ ಹಣವಂತ ಸೌದಿ ಕುಟುಂಬದ ಹೆಣ್ಣೊಬ್ಬಳ “ರಿಯಾದ್ ಗರ್ಲ್ಸ್” ಎಂಬ ಕಾದಂಬರಿ; ಮತ್ತೊಂದು ಮರುಭೂಮಿ ಬಿಸಿಲು, ಚಳಿಗಳಿಗೆ ಅಂಜದೆ ಅಳುಕದೆ ಖೇಮಾಗಳೊಳಗೆ ಬದುಕುತ್ತ ಕಟ್ಟಿದ ಬದೂ(ನ್) ಹೆಂಗಸರು ರಚಿಸಿದ ಅಥವ ಹಾಡಿಕೊಂಡು ಬಂದ ಗೀತೆಗಳ ಸಂಕಲನದ ಪುಸ್ತಕ. ಈ ಹೊತ್ತಿನ ನಿಕಷೆಗೆ ಒಡ್ಡಿ ಈ ಎರಡು ಪುಸ್ತಕಗಳನ್ನು ಹೇಗೆ ಬೇಕಾದರೂ ಅರ್ಥೈಸಿಕೊಳ್ಳಬಹುದು. ತೆಗಳುವವರಿಗೆ, ಕೂಗಾಡುವವರಿಗೆ, ಗಂಟಲು ಹರಿದುಕೊಳ್ಳುವವರಿಗೆ ಹೀಗೆ ಎಲ್ಲರಿಗೂ ಸಮಸ್ತ ಅವಕಾಶಗಳನ್ನು ಇವು ನೀಡುತ್ತವೆ. ಇಷ್ಟಕ್ಕೆ ನಿಲ್ಲದೆ ಬರೆಯುವ ಚಟದ ಮನುಷ್ಯರಿಗೂ space ನೀಡುತ್ತವೆ.

ಇದೇ ತರದ ಇನ್ನೊಂದು ಪುಸ್ತಕವನ್ನು ಓದಬೇಕೆಂದು ಅಂದುಕೊಂಡೆ. ಅದು “ಸುಂದರ” ಬದುಕಿಗಾಗಿ ಎಲ್ಲರನ್ನು, ಎಲ್ಲವನ್ನು ಬಿಟ್ಟು ಗಲ್ಫ್ ರಾಷ್ಟ್ರಗಳಿಗೆ ಬಂದ  ದುಡಿಯುವ ಜನರಿಗೆ ಸಂಬಂಧಿಸಿದ ಪುಸ್ತಕ. ಮದುವೆಯಾದ ತಿಂಗಳಿಗೆ ತನ್ನ ಬಿಟ್ಟು ವಿಮಾನವತ್ತಿದ ಗಂಡನ ನೆನಪಲ್ಲೇ ಜೀವನವ ಸವೆಸುವ ಹೆಣ್ಣು ಬರೆದ ಪುಸ್ತಕ ಅದು. ಬಿಸಿಲಲ್ಲಿ ದುಡಿದು ನಾಡಿಗೆ ಹಣ ಕಳುಹಿಸುತ್ತ ನಿಟ್ಟುಸಿರಿಡುವ ಜನರಷ್ಟೆ ಆ ಹೆಣ್ಣುಗಳು ಕಷ್ಟ ಪಡುತ್ತಿರಬೇಕು ಅನ್ನಿಸುತ್ತದೆ. ಮದುವೆಯಾಗಿ ಹದಿನೈದು ವರ್ಷ ಕಳೆದರೂ ಮಕ್ಕಳಾಗಲಿಲ್ಲವೆಂದು ನನಗೆ ಗೊತ್ತಿರುವ ವ್ಯಕ್ತಿಯೊಬ್ಬ ಇಲ್ಲಿ ಮೊನ್ನೆ ಫೈನಲ್ ಎಕ್ಸಿಟ್ ನಲ್ಲಿ ಇಂಡಿಯಾಕ್ಕೆ ಹೋಗಿಬಿಟ್ಟ. ಮೂರು ವರ್ಷಕ್ಕೊಮ್ಮೆ ಊರಿಗೆ ಹೋಗಿ ಐದಾರು ತಿಂಗಳಿದ್ದು ಬಂದರೂ ಕೆಲವರಿಗೆ ಮಕ್ಕಳಾಗಿಲ್ಲ. ಈ ನೋವಲ್ಲೆ ನಮ್ಮವರಿಲ್ಲಿ ಕೆಲವರು ದಿನವೂ ಕೊರಗುತ್ತಿದ್ದಾರೆ. ಇನ್ನು ಆ ಹೆಂಗಸರು ಹೇಗೆ ಕೊರಗುತ್ತಿರಬೇಡ!?

ನಮ್ಮ ಹೆಂಗಸರುಗಳಿಗೆ ಮಕ್ಕಳ ನೋವಿನಷ್ಟೆ ಕೊರಗಲು ನೂರಾರು ವಿಷಯಗಳಿವೆ. ಅವುಗಳನ್ನು ಹಂಚಿಕೊಳ್ಳಲು ಜೊತೆಯಲ್ಲಿ ಕಟ್ಟಿಕೊಂಡ ಗಂಡನಿಲ್ಲ, ಆತ ಕಳುಹಿಸಿದ ಹಣ ಮಾತ್ರ ಇದೆ…. ಅಥವ ಆ ಹಣವೂ ದಿನನಿತ್ಯದ ಜಂಜಾಟಕ್ಕೆ ಸಾಕಾಗುವುದಿಲ್ಲ… ಹೀಗೆ ಈ ಎಲ್ಲವನ್ನು ಕೇರಳದ ಹೆಣ್ಣೊಬ್ಬಳು ಬರೆದಿದ್ದಾಳೆ ಎಂದು ಈಚೆಗೆ ಗೊತ್ತಾಯಿತು. ಆ ಪುಸ್ತಕದ ಬಗ್ಗೆ ಮಲೆಯಾಳಿ ಗೆಳಯನೊಬ್ಬನನ್ನು ಕೇಳಿದೆ. ಜೀವಕಳೆ ತುಂಬಿಕೊಂಡು ಮಾತನಾಡುತ್ತಿದ್ದ ಆತ ನನ್ನ ಈ ಮಾತಿಗೆ ವಿಚಲಿತಗೊಂಡು ಕುಗ್ಗಿ ಹೋದ. ಆ ಪ್ರಶ್ನೆ ಕೇಳಿದ ನನ್ನನ್ನು ನಾನೇ ಬೈದುಕೊಳ್ಳುತ್ತ “ಸಾರಿ …” ಅಂದೆ. ಆತನ ಕಪ್ಪಿಟ್ಟ ಮುಖದ ತುಂಬಾ ನೋವಿನ ಗೆರೆಗಳು ಹರಡಿಕೊಳ್ಳುತ್ತಿದ್ದುದ ಕಂಡು ನನಗೆ ತೀವ್ರ ನೋವಾಯ್ತು. ಕೆಲವು ದಿವಸಗಳಿಂದ ಬೆಳಿಗ್ಗೆ ನಿದ್ದೆಯಿಂದ ಎದ್ದ ತಕ್ಷಣ ಆ ವಿಚಾರ ನೆನಪಾಗಿ ಹೊಟ್ಟೆ ತೊಳೆಸಿಬರುತ್ತದೆ. ಮನುಷ್ಯರ ನೋವುಗಳು ಹೀಗೆ ನನ್ನಂತಹವನಿಗೆ ಬರೆಯುವ ಸರಕಾಯ್ತಲ್ಲ ಅಂತ ಬೇಸರವಾಗಿ ಬರೆಯಲೇ ಬಾರದು ಎಂದುಕೊಳ್ಳುತ್ತೇನೆ. ನೋವೆ ಎಲ್ಲಾ ಅನ್ವೇಷಣೆಗಳಿಗೂ ಮೂಲ ಅನ್ನೋ ಕಾರಣವ ನೆನಪಿಸಿಕೊಂಡು ಸುಮ್ಮನಾಗುತ್ತೇನೆ. ಬಿಸಿಲು, ಮಳೆ, ಚಳಿಗಳು ಒಡ್ಡಿದ ನೋವಿನಿಂದ ಕಾಪಾಡಿಕೊಳ್ಳಲು ಮನುಷ್ಯರು ಮನೆ ಕಟ್ಟಿಕೊಂಡಂತೆ ನನ್ನಂತಹವರು ಬದುಕಿನ ಹೊಡೆತಗಳನ್ನು ಎದುರಿಸಲು ಬಹುಶ: ಕತೆ, ಕಾವ್ಯಗಳನ್ನು ಕಟ್ಟಿಕೊಂಡರು ಅನಿಸುತ್ತೆ.

ಅರೇಬಿಯಾ ಕಾಲಂ:ಮರುಭೂಮಿಯೆಂದರೆ ಬರಿಯ ಮರಳಲ್ಲ

“ಮಳೆ ಆರಂಭವಾಗುತ್ತಿದೆ” ಎಂದು ನಮ್ಮ ಕನ್ನಡದ ಚಾನೆಲ್ ಗಳಲ್ಲಿ ಸುದ್ದಿ ಬಿತ್ತರವಾಗಿ, ಮುಂಗಾರಿನ ಕ್ಲಿಪ್ ಗಳನ್ನು ನೋಡಿದಾಗ ನಾನೂ ನನ್ನ ಸಂಗಾತಿ ಒಬ್ಬರನ್ನೊಬ್ಬರು ನೋಡಿ ತುಂಬಾ ದಿನಗಳ ನಂತರ ಪರಸ್ಪರ ಮುಗುಳ್ನಕ್ಕೆವು. ಟಿ.ವಿ ಕಾರ್ಯಕ್ರಮಗಳಿಗಾಗಿಯೂ ಆಗಾಗ ಕಿತ್ತಾಡುವ ನಾವು ಈ ವಿಷಯದಲ್ಲಿ ಒಂದಾಗಿದ್ದೆವು. ಧೋ ಎಂದು ಸುರಿಯುತ್ತ ಮಳೆ ನಮ್ಮ ಊರುಗಳನ್ನು ನೀರಲ್ಲಿ ಮುಳುಗಿಸಿದ ಹೋದ ವರ್ಷದ ಚಿತ್ರಗಳು ನೆನಪಾಗಿ ಹಿಂಸೆಯಾಯ್ತು. ನಿರಾಶ್ರಿತರಿಗೆ ಬದುಕ ಮತ್ತೆ ಕಟ್ಟಿಕೊಡುವ ಭರವಸೆಗಳು ಈ ಬಾರಿಯ ಮುಂಗಾರಿನ ಗಾಳಿಯಲ್ಲಿ ತೇಲುತ್ತಿರಬಹುದೇನೊ! ನಮ್ಮಲ್ಲಂತೆ ಇಲ್ಲಿ ಜಲಪ್ರವಾಹ ಆಗಲು ಸಾಧ್ಯವಿಲ್ಲ ಮತ್ತು ಇಲ್ಲಿಯ ಪ್ರಭುತ್ವಕ್ಕೆ ನಿರಾಶ್ರಿತರ ಕಾಟವಿಲ್ಲ ಎಂದುಕೊಂಡಿದ್ದೆವು. ಆದರೆ ಕಳೆದ ಎರಡು ವರ್ಷದ ಇಲ್ಲಿಯ ಘಟನೆಗಳು ನಮ್ಮ ಅಭಿಪ್ರಾಯವನ್ನು ತಲೆಕೆಳಗೆ ಮಾಡಿತು. ಇಲ್ಲಿಯೂ ಮಳೆ ಸುರಿದೇ ಸುರಿದು ಹಲವರನ್ನು ಇಕ್ಕಟ್ಟಿಗೆ ಸಿಲುಕಿಸಿತು. ರಿಯಾದ್, ಜೆದ್ದಾ ಮುಂತಾದ ನಗರಗಳಲ್ಲಿ ಬದುಕು ಅಸ್ತವ್ಯಸ್ತಗೊಂಡಿತು ಎಂದು ಪತ್ರಿಕೆಗಳಲ್ಲಿ, ಟಿ.ವಿಗಳಲ್ಲಿ ಸುದ್ದಿ ಪ್ರಕಟವಾಗುತ್ತಿತ್ತು. ವಾದಿಯಂತಹ ಸಣ್ಣ ಪಟ್ಟಣಗಳಲ್ಲಿ ಮನೆಗಳು ಸಂಪೂರ್ಣ ನೀರುಮಯಗೊಂಡವು. ಇಂತಹ ಮಳೆಯಿಂದ ತೊಂದರೆಗೊಳಪಟ್ಟ ಜನಕ್ಕೆ ಪರಿಹಾರ ನೀಡುವಲ್ಲಿ ವಿಳಂಬವಾಗುತ್ತಿದೆ ಎಂದು ಇತ್ತೀಚಗೆ ಇಲ್ಲಿಯ ಪತ್ರಿಕೆಯೊಂದು ಸುದ್ದಿ ಪ್ರಕಟಿಸಿತ್ತು.

ನಮ್ಮಲ್ಲಿ ಅನೇಕರು ಮರುಭೂಮಿಯೆಂದರೆ ಕೇವಲ ಮರಳು-ಬಿಸಿಲು ಎಂದುಕೊಂಡಿರುತ್ತೇವೆ. ಈ ಮರುಭೂಮಿಯಲ್ಲೂ ಚಳಿ ಎನ್ನುವ ಮಹಾಪ್ರಳಯಾಂತಕ ಕಾಲವೊಂದಿದೆ ಎಂಬುದು ಇಲ್ಲಿಗೆ ಬರುವ ಮುಂಚೆ ನನಗೆ ಗೊತ್ತಿರಲೇ ಇಲ್ಲ. ಇಲ್ಲಿ ಮರುಭೂಮಿಯೆಂದರೆ ಕೇವಲ ಕಣ್ಣಿಗೆಟುಕುವಷ್ಟು ದೂರ ಹಾಸಿಕೊಂಡಿರುವ ಮರಳು ಮಾತ್ರವಲ್ಲ. ಇಲ್ಲಿ ಇನ್ನು ಏನೋನೊ ಇವೆ. ಮರಳುದಿನ್ನೆಗಳು; ಗಟ್ಟಿಕಲ್ಲಿನ ಗುಡ್ಡಗಳು; ಎತ್ತರದ ಬೆಟ್ಟಗಳು; ಫಲವತ್ತಾದ ನೆಲ-ಅದರೊಳಗೆ ಜಿನುಗುವ, ಚಿಮ್ಮುವ ನೀರು, ಚಿಕ್ಕ ಜಲಪಾತಗಳು, ಬಿಸಿ ನೀರ ಬುಗ್ಗೆಗಳು; ಸಮುದ್ರ ಮಟ್ಟಕ್ಕಿಂತ ಸಾವಿರ ಅಡಿ ಮೇಲಿರುವ ತಣ್ಣಗಿನ ಬೆಟ್ಟ, ಅಲ್ಲಿಯ ಮರಗಿಡಗಳು, ಅದರೊಳಗಿನ ಊರುಗಳು, ಪ್ರವಾಸಿಗರು, ಕೇಬಲ್ ಕಾರುಗಳು, ಕೆಂಪು ಮೂತಿಯ ಕೋತಿಗಳು; …ಹೀಗೆ  ನಮ್ಮ ಭಾರತ ಉಪಖಂಡದ ಭೂ ವೈವಿಧ್ಯತೆಯನ್ನು ಇಲ್ಲೂ ಕಾಣಬಹುದು. ನಮ್ಮಷ್ಟು ಶ್ರೀಮಂತವಾಗಿಲ್ಲದಿದ್ದರೂ ಇಲ್ಲಿಯ ಭೂ ಪ್ರದೇಶ ವಿಶಿಷ್ಟವಾದುದಂತೂ ನಿಜ. ಮರುಭೂಮಿಯಲ್ಲಿ ನೀರೆಂದರೆ ಕೇವಲ ಓಯೆಸಿಸ್ ಎಂದುಕೊಂಡಿರುವ ಜನರಿಗೆ ಇಲ್ಲೂ ಕೆಲವಡೆ ನೀರು ನೆಲದೊಳಗೆ ಚಲಿಸುತ್ತಿರುತ್ತದೆ ಎಂಬುದು ಗೊತ್ತಿರುವುದಿಲ್ಲ. ಮರಳಿನ ಬೆಟ್ಟದಲ್ಲಿ ಮತ್ತೆ ಬೆಟ್ಟಗಳು ಹುಟ್ಟಿ ಮಳೆ ನೀರ ಹರಿಸಿ, ಮಣ್ಣ ಹದಗೊಳಿಸಿ ಜನರಿಗೆ ಬೇಸಾಯಕ್ಕೆ ಅವಕಾಶವ ನೀಡಿದೆ. ನೀರ ಅರಸುತ್ತ ತಿರುಗಾಡುತ್ತಿದ್ದ ಅಲೆಮಾರಿ ಜನಾಂಗವೊಂದು ತನ್ನ ಒಂಟೆ, ಆಡು ಕುರಿಗಳೊಂದಿಗೆ ಇಂತಹ ಜಾಗದಲ್ಲಿ ನೆಲೆಯೂರಿ ನಿಂತು ಬದುಕಲಾರಂಭಿಸಿದವು. ಎಲ್ಲಾ ಸಂಸ್ಕೃತಿಗಳಿಗೂ ನೀರು ಮೂಲವೆನ್ನುವಂತೆ ಮರುಭೂಮಿಯ ಬದೂ(ನ್) ಸಂಸ್ಕೃತಿಗಳಿಗೂ ನೀರು ಮೂಲ. ಮೆಕ್ಕಾದಲ್ಲಿ “ಜಮ್ ಜಮ್” ಎನ್ನುವ ಎಂದೂ ಬತ್ತದ, ಇಸ್ಲಾಂ ಧರ್ಮದಲ್ಲಿ ಪವಿತ್ರ ಸ್ಥಾನ ಪಡೆದಿರುವ ನೀರಿನ ಒರತೆಯಿದೆ. ಅದರ ಹಿಂದೆ ಒಂದು ಕಥೆಯೇ ಇದೆ. ಹೀಗೆ ಪುರಾಣ ಪುಣ್ಯಕಥೆಗಳಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲೂ ಇಲ್ಲಿ ನೀರಿಗೆ ಬಹುಮುಖ್ಯ ಪಾತ್ರ.

ಮಳೆ ಸುರಿದು ಫಲವತ್ತಲ್ಲದ ಮರುಭೂಮಿ ನೆಲದಲ್ಲೂ ಹುಲ್ಲು ಬೆಳೆದು, ಆ ಹುಲ್ಲ ಹುಡುಕುತ್ತ ತಮ್ಮ ಒಂಟೆಗಳ ಜೊತೆ ಮಂದಿ ಅಲೆದಾಡುತ್ತಾರೆ. ಅಂತಹ ಜನ ವಾದಿಯಂತಹ ಫಲವತ್ತಾದ ಭೂಮಿಯ ಕಂಡು ಉಬ್ಬಿಹೋದರೇನೊ. ಮಣ್ಣ ತೋಡಿದಂತೆಲ್ಲ ಚಿಮ್ಮುವ ನೀರ ಕಂಡು ದಂಗಾಗಿರಬೇಕು. ಅಂತಹ ಜನ ಇಲ್ಲಿ ನೆಲೆಗೊಂಡು ಬೇಸಾಯ ಶುರು ಮಾಡಿದರು. ಇಲ್ಲಿಯ ಅಂತರ್ಜಲ ಮಟ್ಟ ಇನ್ನು ಕುಸಿದಿಲ್ಲ. ಸಮುದ್ರ ಮಟ್ಟಕ್ಕಿಂತ ಆರು ನೂರು ಅಡಿ ಎತ್ತರಕ್ಕಿರುವ ಈ ಪ್ರದೇಶದ ತನ್ನೊಳಗೆ ಅಪಾರ ನೀರನ್ನಿಟ್ಟುಕೊಂಡಿದೆ. ಶತಮಾನಗಳ ಹಿಂದೆ ಮಳೆ ನೀರು ಇಲ್ಲಿಯ ಬೆಟ್ಟಗಳಿಂದ ಇಳಿದು ಹಳ್ಳವಾಗಿ ಹರಿಯುತ್ತ ಈ ಮಣ್ಣನ್ನು ಫಲವತ್ತುಗೊಳಿಸಿದೆ ಎನ್ನುತ್ತಾರೆ ತಿಳಿದವರು. ನೆಲದೊಳಗೆ ನೀರೋಟವಿರುವ ಇಲ್ಲಿಯ ಕೆಲವೇ ಕೆಲವು ಜಾಗಗಳಲ್ಲಿ ವಾದಿಯೂ ಒಂದು. ಆದುದರಿಂದ ಇಲ್ಲಿ ವ್ಯವಸಾಯ ಶುರುವಾಗಿ ದಶಕಗಳೆ ಕಳೆದಿವೆ. ಜೋಳ, ತರಕಾರಿ ಬೆಳೆಗಳ ಬೆಳೆಯುವ ಇಲ್ಲಿಯ ಬೇಸಾಯದಲ್ಲಿ ಶೇಕಡ ಐವತ್ತರಷ್ಟನ್ನು ಇಂದು ಹುಲ್ಲು ಕಬಳಿಸಿದೆ. ಹುಲ್ಲು ಬೆಳೆ ಲಾಭದಾಯಕವೂ ಕಡಿಮೆ ಶ್ರಮವೂ ಆದುದರಿಂದ ಜನ ಇದನ್ನು ಹೆಚ್ಚಾಗಿ ಬಯಸುತ್ತಾರೆ ಎನ್ನುತ್ತಾರೆ ಇಲ್ಲಿಯ ಕೆಲವರು. ಸೌದಿಯ ಬಹುತೇಕ ಭಾಗಗಳ ಒಂಟೆ, ಆಡುಕುರಿ ಹಸುಗಳಿಗೆ ಹುಲ್ಲು ಇಲ್ಲಿಂದಲೆ ಸಪ್ಲೈ ಆಗುವುದು. ಇತರೆ ಜಿಸಿಸಿ ರಾಷ್ಟ್ರಗಳಿಗೆ ಇಲ್ಲಿಂದಲೆ ಹಾಲು, ಮಜ್ಜಿಗೆ ರವಾನೆಯಾಗುವುದರಿಂದ ಇಲ್ಲಿಯ ಫಾರ್ಮ್ ಗಳಿಗೆ ಹುಲ್ಲಿನ ಅವಶ್ಯಕತೆ ಹೆಚ್ಚಿಗಿದೆ. ಹುಲ್ಲಿನ ಮಾರುಕಟ್ಟೆ ಷೇರು ಮಾರುಕಟ್ಟೆಯಂತೆ ಕ್ಷಣಕ್ಷಣಕ್ಕೆ ಏರುಪೇರಾಗುತ್ತಲೆ ಇರುತ್ತದೆ.

ನಮ್ಮಲ್ಲಿಯಂತೆಯೇ ಇಲ್ಲೂ ಸಾಮಾಜಿಕವಾಗಿ ಬಲಾಢ್ಯವಾಗಿರುವವರು ಭೂಮಿಯನ್ನು ವಶಪಡಿಸಿಕೊಂಡು ಅಥವ ಅತಿ ಕಡಿಮೆ ಬೆಲೆಗೆ ಖರೀದಿಸಿ ಕಾಲಾಂತರದಲ್ಲಿ ಅದನ್ನು ಕಾನೂನಿನ ಪ್ರಕಾರ ತಮ್ಮದಾಗಿಸಿಕೊಂಡಿದ್ದಾರೆ. ಉನ್ನತ ಜಾತಿಯ ಜನ ಎನ್ನುವ ಕಾರಣಕ್ಕೆ ಭೂಮಿಯನ್ನು ಹೊಂದಿದ ನಮ್ಮ ಜನರಂತೆಯೇ ಇಲ್ಲೂ ಕೆಲವು ಕುಟುಂಬಗಳು ನೆಲವನ್ನು ಆರಂಭದಲ್ಲಿ ಹಿಡಿದಿಟ್ಟುಕೊಂಡ ಉದಾಹರಣೆಗಳಿವೆ. ವರ್ಷಗಳು ಕಳೆದಂತೆ ನೆಲ ಮಜ್ರಾ (ತೋಟ) ಗಳಾಗಿ ಬದಲಾದವು. ತಮರ್ (ಖರ್ಜೂರ) ಬೆಳೆಯ ಜೊತೆ ತರಕಾರಿ, ಜೋಳ, ಬಾಳೆಗಳು ಇಲ್ಲಿ ಬೆಳೆಯಲ್ಪಟ್ಟವು. ಮಸ್ರಿ ( ಈಜಿಪ್ಷಿಯನ್ಸ್), ಸುಡಾನಿ, ಹಿಂದಿ, ಪಾಕಿಸ್ತಾನಿ, ಬಂಗಾಳಿ ಕೆಲಸಗಾರರು ನೆಲವ ಹಸನುಗೊಳಿಸುತ್ತ ಬಿಸಿಲು ಚಳಿಗಳಿಗೆ ಬೆವರುತ್ತಿರುತ್ತಾರೆ. ಹೀಗೆ ಬೆಳೆಯಲ್ಪಡುವ ಬೆಳೆಗಳಿಗೆ ಸೌದಿಯ ತುಂಬಾ ಬೇಡಿಕೆಯಿದೆ. ನೀರು ಅಷ್ಟಾಗಿ ಇಲ್ಲದ ಇತರೆ ಭಾಗದ ಜನ ತಮ್ಮ ಒಂಟೆ, ಆಡು ಕುರಿಗಳಿಗೆ ಇಲ್ಲಿಂದಲೆ ಹುಲ್ಲು ತರಿಸಿಕೊಳ್ಳುವುದು. ಮೂವತ್ತು ಐವತ್ತು ಅಡಿಗೆಲ್ಲ ನೀರು ಸಿಕ್ಕಿ ಬಿಡುವ ಇಲ್ಲಿ ಹುಲ್ಲು ಒಂದು ಉದ್ಯಮವಾಗಿ ಬೆಳೆದಿದೆ.

ಹತ್ತಾರು ಎಕೆರೆ ವಿಸ್ತ್ರೀರ್ಣದ ಮಜ್ರಾಗಳಲ್ಲಿ ಮುಖ್ಯ ಬೆಳೆ ಬರ್ಸೀಮ್ ( ಹುಲ್ಲು). ಹುಲ್ಲಿನ ಬೀಜಗಳಲ್ಲಿ ಸೌದಿ ಮತ್ತು ಅಮೇರಿಕಾ, ಆಸ್ಟ್ರೇಲಿಯಾ ಮುಂತಾದ ವಿದೇಶಿ ಬೀಜಗಳು ಲಭ್ಯ. ಸೌದಿ ಬೀಜವನ್ನು ಒಮ್ಮೆಗೆ ಬಿತ್ತಿದರೆ ಮೂರು ವರ್ಷಗಳವರೆಗೆ ಮತ್ತೆ ಬಿತ್ತುವ ಸಮಸ್ಯೆಯಿಲ್ಲ ಆದರೆ ವಿದೇಶಿ ಬೀಜಗಳನ್ನು ವರ್ಷಕ್ಕೊಮ್ಮೆ ಬಿತ್ತಬೇಕು. ಸೌದಿ ಹುಲ್ಲು ತನ್ನ ಬೇರನ್ನು ಆಳಕ್ಕೆ ಇಳಿಸುತ್ತದೆ ಆದರೆ ವಿದೇಶಿ ಹುಲ್ಲು ಭೂಮಿಯ ಮೇಲ್ಪದರಕ್ಕೆ ಮಾತ್ರ ಸೀಮಿತಗೊಂಡಿರುತ್ತದೆ. ಸೌದಿ ಹುಲ್ಲಿಗೆ ಪಾತಿಗಳ ಮೂಲಕವೂ ನೀರು ಹಾಯಿಸಬಹುದು ಮತ್ತು ಕೈಯಲ್ಲೇ ಕೊಯ್ಲು ಮಾಡಬಹುದು. ವಿದೇಶಿ ಹುಲ್ಲಿಗೆ ನೀರನ್ನು “ರಷಸ್” ಎನ್ನುವ ಬೃಹದಾಕಾರದ ಸ್ಪ್ರಿಂಕ್ಲರ್ ನಲ್ಲೇ ಸಿಂಪಡಿಸಬೇಕು ಮತ್ತು ಮೆಷಿನ್ ಗಳ ಮೂಲಕವೇ ಕೊಯ್ಲು ಮಾಡಬೇಕು. ಈ ರಷಸ್ ಎನ್ನುವುದು ಉದ್ದನೆಯ ಮತ್ತು ನೀರು ಸಿಂಪಡಿಸಲು ತೂತು ಮಾಡಲ್ಪಟ್ಟಿರುವ ಪೈಪು. ಎರಡು ಮೂರು ಎಕೆರೆಗೆಲ್ಲ ಒಂದೇ ರಷಸ್! ಸಬ್ ಮರ್ಸಿಬಲ್ ಬೋರ್ ಚಾಲೂ ಆದ ತಕ್ಷಣ ನೀರನ್ನು ಭೂಮಿಯಿಂದ ಎಳೆದುಕೊಂಡು ರಷಸ್ ಗೆ ಕಳುಹಿಸುತ್ತದೆ. ರಷಸ್ ತಿರುಗಲಾರಂಭಿಸಿ ಹುಲ್ಲಿನ ಮೇಲೆ ನೀರನ್ನು ಚೆಲ್ಲುತ್ತ ಸದ್ದು ಮಾಡುತ್ತಿರುತ್ತದೆ. ತಂಪು ಮೂಡಿಸುತ್ತಿರುತ್ತದೆ.

ಈ ಬರ್ಸೀಮ್ ಕೃಷಿಯನ್ನು ಇವರುಗಳು ಶುರು ಮಾಡಿ ಕೇವಲ ದಶಕಗಳು ಕಳೆದಿವೆ ಅಷ್ಟೆ. ಈ ಬೆಳೆಯಿಂದ ದಿಢೀರ್ ಸಾಹುಕಾರರಾದವರು ಇದ್ದಾರೆ. ಮಳೆಯಿಲ್ಲದ ದಿನಗಳಲ್ಲಿ ಹುಲ್ಲು ಕಟ್ಟಿನ ಬೆಲೆ ಗಗನಕ್ಕೇರುತ್ತದೆ. ಒಂದು ಕಟ್ಟಿಗೆ ಹತ್ತು ರಿಯಾಲ್ ಇರುವ ಬೆಲೆ ದಿಢೀರ್ ಎಂದು ಇಪ್ಪತ್ತೈದು ರಿಯಾಲ್ ಗೆ ಏರಿರುತ್ತದೆ. ಮಳೆ ಸುರಿದು ಮರುಭೂಮಿಗಳಲ್ಲಿ ಹುಲ್ಲು ಮೊಳಕೆಯೊಡದಂತೆ ಈ ಮಜ್ರಾ ಹುಲ್ಲಿನ ಬೆಲೆ ಕುಸಿಯುತ್ತದೆ. ಸೌದಿ ಮತ್ತಿತರ ಗಲ್ಫ್ ರಾಷ್ಟ್ರಗಳ ಸಾಂಪ್ರದಾಯಕ ಬೆಳೆಯಾದ ತಮರ್ (ಖರ್ಜೂರ) ಈ ಹುಲ್ಲಿನಷ್ಟು ಹಣವನ್ನು ತರುವುದಿಲ್ಲವಾದ್ದರಿಂದ ಇಲ್ಲಿಯ ಹಲವರು ಬರ್ಸೀಮ್ ಗೆ ಶಿಫ್ಟ್ ಆದರು. ಅಮೆರಿಕಾ, ಆಸ್ಟ್ರೇಲಿಯಾದ ಕೃಷಿ ಉಪಕರಣಗಳು ಆಮದಾಗತೊಡಗಿದವು. ತನ್ನ ಪ್ರಜೆಗಳ ಸೌಕರ್ಯಕ್ಕಾಗಿ ಸರ್ಕಾರ ಮಿಲಿಯನ್ ಗಟ್ಟಲೆ ಸಾಲ ಕೊಡಲಾರಂಭಿಸಿತು. ಹೊಸ ಬಗೆಯ ಈ ಕೃಷಿಗೆ ಮಾರು ಹೋದ ಎಷ್ಟೋ ಜನ ಖರ್ಜೂರವನ್ನು ಮರೆತುಹೋದರೇನೊ ಎಂಬಂತೆ ಬದಲಾದರು. ಗುಂಡಿ ತೋಡಿ ನೀರನ್ನು ಹೊತ್ತುಕೊಂಡು ಖರ್ಜೂರದ ಗಿಡಗಳಿಗೆ ಹಾಕುತ್ತಿದ್ದ ದಿನಗಳೆಲ್ಲವೂ ಮಾಯವಾಗಿ ಬೀರ್ (ಬೋರ್) ಕೊರೆದು ನೀರನ್ನು ಡೀಸಲ್ ಮಖ್ಹೀನ (ಮೆಷಿನ್)ದಿಂದ ಎಳೆದು ಹಾಯಿಸತೊಡಗಿದರು. ಎಣ್ಣೆ ಸ್ಥಾವರಗಳಿಗೆ ಆದ್ಯತೆ ನೀಡುವಂತೆಯೆ ಇಲ್ಲಿನ ಹುಖುಮಾ (ಸರ್ಕಾರ) ಕೃಷಿಗೂ ಆದ್ಯತೆ ನೀಡಿತು. ಆಫ್ರಿಕಾ ರಾಷ್ಟ್ರಗಳಲ್ಲಿ ಭೂಮಿಯನ್ನು ಲೀಸ್ ಗೆ ಪಡೆದು ಕೃಷಿಗೆ ಬಂಡವಾಳ ಹೂಡಿದಂತೆಯೆ ದೇಶದೊಳಗಿನ ಅಂತರ್ಜಲದ ಪ್ರಮಾಣ ಹೆಚ್ಚಿರುವ ಪ್ರದೇಶಗಳಲ್ಲಿ ಜನರಿಗೆ ಕೃಷಿ ಮಾಡಲು ಉತ್ತೇಜನ ನೀಡಿತು. ಕೇಳಿದಷ್ಟು ದುಡ್ಡು ಕೊಡುವ ಬ್ಯಾಂಕ್ ಮತ್ತು ಕೃಷಿ ಇಲಾಖೆಗಳಿಂದ ಸಹಾಯ ಪಡೆದುಕೊಂಡು ಜನ ತಮ್ಮ ತಮ್ಮ ಮಜ್ರಾಗಳಲ್ಲಿ ರಷಸ್, ಬೋರ್, ಬರ್ಸೀಮ್ ಎಂದು ತುಂಬಿಸಿಕೊಂಡು ಫುಲುಸ್ ( ಹಣ)ನ್ನೂ ಕೂಡ ತುಂಬಿಸಿಕೊಳ್ಳತೊಡಗಿದರು.

ನಾನಿರುವ ವಾದಿಯಂತಹ ಬೆಟ್ಟದ ತಪ್ಪಲಿನ ಪ್ರದೇಶದಲ್ಲಿ ಮಳೆ ನೀರು ಇಂಗಿ ಅಂತರ್ಜಲದ ಮಟ್ಟ ಅಧಿಕವಾಗಿರುವುದರಿಂದ ಕೃಷಿ ಎಗ್ಗಿಲ್ಲದೆ ನಡೆಯಲಾರಂಭಿಸಿತು. ಈ ಕೆಲವು ವರ್ಷಗಳ ಹಿಂದೆ ಸರ್ಕಾರ ಹೊಸ ಆಗ್ನೆಯನ್ನು ತಂದು ಇಲ್ಲಿಯವರ ಕೃಷಿಯ ಓಟಕ್ಕೆ ಬ್ರೇಕ್ ನೀಡಿದೆ. ಸೌದಿಯ ಮಣ್ಣಿನಲ್ಲಿನ ಅಂತರ್ಜಲದ ಮಟ್ಟ ಕುಸಿಯುತ್ತಿರುವುದರಿಂದ ಸರ್ಕಾರ ಹೊಸ ಮಜ್ರಾಗಳಿಗೆ ಅವಕಾಶ ನೀಡುತ್ತಿಲ್ಲ ಮತ್ತು ಆ ಹೊಸ ಮಜ್ರಾಗಳಿಗಾಗಿ ಆರ್ಥಿಕ ಸಹಾಯವನ್ನು ಅಷ್ಟಾಗಿ ನೀಡುತ್ತಿಲ್ಲ. ಐವತ್ತು ಅರವತ್ತು ಅಡಿಗೆಲ್ಲ ನೀರು ಸಿಗುತ್ತಿದ್ದ ಕಾಲ ಮರೆಯಾಗಿ ಇನ್ನೂರು ಅಡಿಗೆ ನೀರು ಸಿಗುತ್ತಿದೆ. ಸೌದಿಯಲ್ಲಿ ವಾದಿಯಂತಹ ಕೆಲವು ಪ್ರದೇಶಗಳ ಅಂತರ್ಜಲ ಮಟ್ಟ ಕುಸಿಯಲಾರಂಭಿಸಿದೆ. ಇಲ್ಲಿನ ಹಿರಿಯರೊಬ್ಬರು ಹೇಳುವಂತೆ ಅವರ ಮಜ್ರಾ ಈ ಐವತ್ತು ಅರವತ್ತು ವರ್ಷಗಳ ಹಿಂದೆ ಬೆಟ್ಟಗಳಿಂದ ಹರಿದು ಬರುತ್ತಿದ್ದ ನೀರು ನಿಲ್ಲುವ ತಾಣವಾಗಿತ್ತಂತೆ. ಕಣ್ಣಿಗೆ ಕಾಣುವಷ್ಟು ದೂರ ನೀರೇ ತುಂಬಿರುತ್ತಿತ್ತಂತೆ. ಮಳೆ ನಿಂತು ಎರಡು ಮೂರು ದಿನಗಳಲ್ಲಿ ಆ ನೀರು ಹಿಂಗಿ ಮತ್ತೆ ನೆಲ ಸುಡುತ್ತಿತ್ತಂತೆ. ಇಂದು ಅವರ ಮಜ್ರಾದಲ್ಲಿ ನೀರು ಬುಗ್ಗನೆ ಚಿಮ್ಮುತ್ತದೆ. ತಿರುಗುತ್ತ ರಷಸ್ ಹುಲ್ಲಿಗೆ ಜೀವ ನೀಡುವಂತೆಯೇ ಈತನ ಬದುಕಿನ ಮಟ್ಟ ಏರಿಸಿರುವುದರಲ್ಲಿ ಸುಳ್ಳಿಲ್ಲ ಅನಿಸುತ್ತದೆ. ಆತ ಹೇಳುವಂತೆ ಐವತ್ತು ಅರವತ್ತು ಅಡಿಯ ಆತನ ಮಣ್ಣಿನ ಮನೆಯ ಜಾಗದಲ್ಲಿ ಈಗ ಅರ್ಧ ಏಕರೆಯಷ್ಟು ಬಂಗಲೆ ಎದ್ದು ನಿಂತಿದೆ. ಮನೆಯಲ್ಲಿ ಮೂರು ಕಾರು, ಆಳು ಕಾಳು… ಹೀಗೆ ಚಿತ್ರಣವೆ ಬದಲಾಗಿದೆ. ಈ ಬದಲಾವಣೆಗೆ ಮಜ್ರಾವೂ ಕಾರಣ.

ಮಜ್ರಾದೊಳಗಿನ ಬರ್ಸೀಮ್ ಇಂತಹ ಸಾಮಾನ್ಯರ ಬದುಕನ್ನು ಆರ್ಥಿಕವಾಗಿ ಏರಿಸಿದಷ್ಟೆ ಮಧ್ಯವರ್ತಿಗಳನ್ನು ರೈತರಿಗಿಂತ ಹತ್ತು ಪಟ್ಟು ಮೇಲೆಕ್ಕೇರಿಸಿದೆ. ರೈತರಿಂದ ಹತ್ತು ರಿಯಾಲ್ ಗೆ ಪಡೆಯುವ ಹುಲ್ಲು ಕಟ್ಟೊಂದನ್ನು ಸೌದಿಯ ಇತರೆ ಭಾಗಗಳಲ್ಲಿ ಇಪ್ಪತ್ತು ರಿಯಾಲ್ ಗೆ ಮಾರುತ್ತಾರೆ. ಇಷ್ಟು ಮಾತ್ರವಲ್ಲ, ಎಮಿರೇಟ್ಸ್, ಖತಾರ್ ಮುಂತಾದ ಗಲ್ಫ್ ರಾಷ್ಟ್ರಗಳಿಗೆ ರಫ್ತು ಮಾಡಿ ಹಾಕಿದ ಬಂಡವಾಳದ ಐದರಷ್ಟನ್ನು ಬಾಚುತ್ತಾರೆ. ಇವರುಗಳು ಸರ್ಕಾರದ ಒಳಹೊರಗನ್ನು ಅರಿತವರು ಎಂದು ಜನ ಇಲ್ಲಿ ಮಾತನಾಡಿಕೊಳ್ಳುತ್ತಾರೆ. ಒಟ್ಟಿನಲ್ಲಿ ಪೆಟ್ರೋಲ್ ಮತ್ತಿತರ ಆಯಿಲ್ ಸಂಪತ್ತು ದೇಶವನ್ನು ಸುಸ್ಥಿತಿಯಲ್ಲಿಟ್ಟಂತೆ ಮಜ್ರಾ ಅನೇಕರ ಬಾಳಿಗೆ ನೆಮ್ಮದಿಯನ್ನು ನೀಡಿರುವುದಂತೂ ನಿಜ.

ಇಲ್ಲಿಂದ ನಾಲ್ಕು ನೂರು ಕಿ.ಮೀಟರ್ ದೂರದಲ್ಲಿ ಅಭಾ ಎನ್ನುವ ಸಾಗರ ಮಟ್ಟಕ್ಕಿಂತ ಐದು ಸಾವಿರ ಎತ್ತರದಲ್ಲಿ ಒಂದು ಜಾಗವಿದೆ. ಸೌದಿಯಲ್ಲಿನ ಫೇಮಸ್ ಟೂರಿಸ್ಟ್ ಪ್ಲೇಸ್. ಬೇಸಿಗೆಯಲ್ಲೂ ತಣ್ಣಗೆ ಇರುವ ಈ ಅಭಾದಲ್ಲಿ ಗರಿಷ್ಟ ತಾಪಮಾನವೆ ೨೮ ಡಿಗ್ರಿ ಸೆಲ್ಸಿಯಸ್. ಮೋಡಗಳು ಇಲ್ಲಿ ಜನರನ್ನು ಮುಟ್ಟುತ್ತ ಆಗಾಗ ಮಳೆಯನ್ನು ಸುರಿಸುತ್ತಲೆ ಇರುತ್ತದೆ. ಆದರೆ ನಮ್ಮ ವಾದಿಯಂತೆ ಇಲ್ಲಿ ಅಂತರ್ಜಲ ಇಲ್ಲ. ಅಲ್ಲಿ ಸುರಿಯುವ ಮಳೆ ಬೆಟ್ಟದ ಕೆಳಗೆ ಇಳಿದು ಹಿಂಗುತ್ತ ವಾದಿಗೆ ನೀರಿನ ಒರತೆಯನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ಇಲ್ಲಿ ಕೆಲವರು. ಈ ಕಾರಣದಿಂದಾಗಿಯೇ ಅಭಾದ ಸೌದಿಗಳಿಗೆ ನಮ್ಮನ್ನು ಕಂಡರೆ ಹೊಟ್ಟೆಹುರಿ ಎನ್ನುತ್ತಾನೆ ನನ್ನ ಸೌದಿ ಗೆಳಯನೊಬ್ಬ.

ಈ ಕಾರಣವೇ ಯಾಕೆ ನಿಮಗೆ ಅಗಾಧ ಜಂಭವನ್ನು ತಂದಿರಬಾರದು? ಎಂದೆ, ಆತ ನಕ್ಕ. ಹೌದು, ವಾದಿಯೇತರ ಸೌದಿಗಳು ವಾದಿಯ ಅಲ್ ದೊಸರಿಗಳನ್ನು ಬದೂ(ನ್)ಗಳು, ಏನು ತಿಳಿಯದ ಗೊಡ್ಡುಗಳು ಎಂದು ಬೈದುಕೊಳ್ಳುತ್ತ ಇವರುಗಳಿಗೆ ಜಂಭ ಅಧಿಕ ಎನ್ನುತ್ತಿರುತ್ತಾರೆ. ಏನೇ ಪೋಲಿಸರಾದರೂ ಸರಿ ಇಲ್ಲಿಯವರ ಎದುರು ತೆಪ್ಪಗಿರುತ್ತಾನೆ. ಇಲ್ಲಿಗೆ ವರ್ಗವಾಗಿ ಬರುವ ಇತರೆ ಊರುಗಳ ಸೌದಿಗಳನ್ನು ಇಲ್ಲಿಯವರು ಕೀಳಾಗಿಯೆ ನೋಡುವುದು. ನಾ ಈ ಮುಂಚಿನ ಬರಹಗಳಲ್ಲಿ ಹೇಳಿದಂತೆ ಇಲ್ಲಿಯ -ವಾದಿ- ಜನರು ತಾವೇ ಶ್ರೇಷ್ಠ ಎಂಬ ಹಮ್ಮಿನಲ್ಲಿರುತ್ತಾರೆ. ಈ ಭಾವನೆಗೆ ನೀರು ಒಂದು ಕಾರಣವಾಗಿರಬಹುದೆ ಎನ್ನುವುದು ನನ್ನ ಅನುಮಾನ. ಸೌದಿಯ ಇತರೆ ಭಾಗಗಳಿಗಿಂತ ಇಲ್ಲಿ ನೀರಿನ ಓಟ ಅಧಿಕವಾಗಿದ್ದರಿಂದ ಜನ ಆ ಭಾವನೆಯನ್ನು ಬೆಳೆಸಿಕೊಂಡಿರಬಹುದೆ? ಆ ಭಾವನೆಯನ್ನು ಬದೂ(ನ್) ಗಳ ದಡ್ದತನ ಎಂದು ಮೂದಲಿಸುತ್ತ ನಾಗರಿಕ ಸಮಾಜ ತನ್ನ “ಮತ್ಸರ”ವನ್ನು ಹೊರಗಾಕುತ್ತಿರಬಹುದೆ? ಹೀಗೆಯೆ ನಮ್ಮಲ್ಲೂ ನಗರ ಪ್ರದೇಶದ ಜನ ಹಳ್ಳಿಗರನ್ನು ಮೂದಲಿಸುವಂತೆ, ಬುಡಕಟ್ಟು ಜನರನ್ನು ಹೀಯಾಳಿಸುವಂತೆ ನಾಗರಿಕ ಎಂದುಕೊಂಡ ಸಮಾಜವೊಂದು ತನಗೆ ದಕ್ಕಿಲ್ಲದ ಅಥವ ತನ್ನಿಂದಾಗದ ವಸ್ತು, ಕೆಲಸವನ್ನು ಕೀಳು ಎಂದು ಪರಿಗಣಿಸಲಾರಂಭಿಸಿರಬಹುದೆ? ಹಾಗೆಯೆ ತಮ್ಮ ಮಾನವ ಸಹಜ ಗುಣವನ್ನು ಸರಿತಪ್ಪುಗಳಾಚೆ ನಿಂತು ಮನಸ್ಸು ಹೇಳಿದಂತೆ, ಹಿರೀಕರು ಹೇಳಿದಂತೆ ನಡೆವ ಜನರು ಹಮ್ಮುಬಿಮ್ಮುಗಳನ್ನು ರೂಢಿಸಿಕೊಂಡಿರಬಹುದೆ? ಏನೇ ಆಗಲಿ ಇಲ್ಲಿಯವರ ಕೃಷಿ ನನ್ನ ತಂದೆಯನ್ನು ನೆನೆಪಿಸಿತು. ಇಲ್ಲಿಯವರ ಹಮ್ಮು ನನ್ನ ತಾತನನ್ನು ನೆನಪಿಸಿತು. ಇಲ್ಲಿಯ ಸಾಂಪ್ರದಾಯಕ ಕೃಷಿಯಾದ ಖರ್ಜೂರದ ಬಗ್ಗೆ ಮುಂದೆ ಬರೆಯುತ್ತೇನೆ.