‘ಸಿರಿಸಂಪಿಗೆ’ ನಾಟಕದಲ್ಲಿ ಬಹಳ ಹಾಡುಗಳಿವೆ. ಅಲ್ಲಿಯೇ ಹಾರ್ಮೋನಿಯಂ ಹಿಡಿದುಕೊಂಡು ರಾಗ ಹಾಕುತ್ತಿದ್ದರು ಬಸವಲಿಂಗಯ್ಯನವರು. ಅವರದು ಅದ್ಭುತ ಶಾರೀರ. ನಾಟಕದಲ್ಲಿ ಎಲ್ಲ ಹಾಡುಗಳನ್ನು ರಿಹರ್ಸಲ್ ಸಮಯದಲ್ಲೇ ನಮ್ಮ ಕಣ್ಣೆದುರೇ ರಾಗ ಹಾಕಿದರು, ಹಾಡಿಸಿದರು. ನಾವೆಲ್ಲ ಎಲ್ಲ ಹಾಡುಗಳನ್ನೂ ತಾಲೀಮು ಕೂಡ ಮಾಡಿದ್ದೆವು. ಒಂದು ಸಂಜೆ ಅದೇನೆನಿಸಿತೋ, ‘ಇದು ಯಾಕೋ ಸರಿ ಇಲ್ಲ. ನಾಟಕದ ಕಡೀ ಹಾಡು, ಭೈರವಿ ರಾಗದಾಗs ಇರಬೇಕು,’ ಎಂದು ಮತ್ತೆ ಪೇಟಿ ಹಿಡಕೊಂಡು ಭೈರವಿ ರಾಗದಲ್ಲಿ ನಾಟಕದ ಕೊನೆಯ ಹಾಡಿಗೆ ಇನ್ನೊಂದು ಧಾಟಿ ಹಚ್ಚಿದರು. ಹಾಗಿತ್ತು ಅವರ ಸಂಗೀತದ ಧ್ಯಾನ.
ಕೇಶವ ಕುಲಕರ್ಣಿ ಬರೆಯುವ ‘ಇಂಗ್ಲೆಂಡ್‌ ಪತ್ರ’

 

ಕನ್ನಡದ ಎರಡು ಮುಖ್ಯ ಕೊಂಡಿಗಳು ನಮ್ಮನ್ನು ತೊರೆದಿವೆ. ಕನ್ನಡ ಸಾಹಿತ್ಯ ಮತ್ತು ರಂಗಭೂಮಿಗೆ ಅವರು ಸಲ್ಲಿಸಿದ ಸೇವೆ ಮತ್ತು ಅವರು ಮಾಡಿದ ಸಾಧನೆ ಅನನ್ಯವಾದುದು. ಇಬ್ಬರೂ ಉತ್ತರಕರ್ನಾಟಕದ ಭಾಷೆಯನ್ನು ಉತ್ಕಟವಾಗಿ ಬಳಸಿದವರು. ಒಬ್ಬರು ಯಾವ ವಿವಾದಗಳಿಲ್ಲದೇ ಎಲೆಮರೆಯ ಕಾಯಿಯಂತೆ ಬದುಕಿದವರು, ಇನ್ನೊಬ್ಬರು ಸದಾ ಕಾಲ ವಿವಾದಗಳನ್ನು ಸೃಷ್ಟಿಸುತ್ತ ಕಾಲುಕೆದರಿ ಸಮಾಜದ ಜೊತೆ ಜಗಳ ಕಾದವರು. ಒಬ್ಬರನ್ನು ನನ್ನ ಗುರುವಾಗಿ ಇನ್ನೊಬ್ಬರನ್ನು ಒಬ್ಬ ಓದುಗನಾಗಿ ನೆನಪಿಸಿಕೊಳ್ಳುತ್ತಿದ್ದೇನೆ.

ಬಸವಲಿಂಗಯ್ಯ ಹಿರೇಮಠ:

1993-94ನ ಮಾತಿದು. ನಾನಾಗ ಅದೇ ಎಂ.ಬಿ.ಬಿ.ಎಸ್. ಮುಗಿಸಿ ಇಂಟರ್ನ್‌ಶಿಪ್ ಮಾಡುತ್ತಿದ್ದೆ. ಪಿ.ಜಿ. ಮಾಡಲು ಎಂಟ್ರೆನ್ಸ್ ಪರೀಕ್ಷೆಗಳಿಗೆ ಓದುವುದು ಇದ್ದರೂ, ಎಂ.ಬಿ.ಬಿ.ಎಸ್. ಓದಿನಷ್ಟು ಕಷ್ಟವಿರಲಿಲ್ಲ ಅಥವಾ ಅಂಥ ದರ್ದಿರಲಿಲ್ಲ. ಸಾಹಿತ್ಯದ ಓದು, ಬರೆಯುವುದು, ನಾಟಕ ಮತ್ತು ಸಿನಿಮಾ ನೋಡುವುದು ಅವ್ಯಾಹತವಾಗಿ ನಡೆದಿತ್ತು. ಮೆಡಿಕಲ್ ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕಿರುಪ್ರಹಸನಗಳನ್ನು ಮತ್ತು ಏಕಾಂಕ ನಾಟಕಗಳನ್ನು ಬರೆದು, ನಿರ್ದೇಶಿಸಿ, ನಟಿಸುವ ಅಭ್ಯಾಸವಾಗಿತ್ತು. ಅಲ್ಲದೆ ಜಿ.ಎಚ್. ರಾಘವೇಂದ್ರ ಅವರು ಬರೆದ ‘ಬಂಗಾರದ ಕೊಡ’ವನ್ನು ನಿರ್ದೇಶಿಸಿ, ನಟಿಸಿ ಧಾರವಾಡ ವಿಶ್ವವಿದ್ಯಾಲಯದಲ್ಲೂ ಪ್ರದರ್ಶಿಸಿ ಭೇಷ್ ಅನ್ನಿಸಿಕೊಂಡಿದ್ದೆ. ನಾನೇ ಬರೆದು ನಿರ್ದೇಶಿಸಿದ ‘ಆರು ಹಿತವರು ನಿನಗೆ ಈ ಆರರೊಳಗೆ’ ಎನ್ನುವ ಏಕಾಂಕಕ್ಕೆ ಹುಬ್ಬಳ್ಳಿಯ ಏಕಾಂಕದ ಸ್ಪರ್ಧೆಯಲ್ಲಿ ಬಹುಮಾನ ಬೇರೆ ಬಂದಿತ್ತು. ಹೀಗಾಗಿ ನಾನು ಡಾ.ಎಂ.ಜಿ. ಹಿರೇಮಠ (ನನ್ನ ಪ್ರಾಧ್ಯಾಪಕರು)ರ ಕಣ್ಣಿಗೆ ಬಿದ್ದೆ. ಸಿಕ್ಕಾಪಟ್ಟೆ ನಾಟಕದ ಹುಚ್ಚಿದ್ದ ಎಂ.ಜಿ. ಹಿರೇಮಠರಿಗೆ ಪೂರ್ಣಪ್ರಮಾಣದ ನಾಟಕ ಮಾಡಬೇಕು ಎನ್ನುವ ಆಸೆ ಗರಿಗೆದರಿತು. ನಾನು ಅದುವರೆಗೂ ಯಾವುದೇ ಪೂರ್ಣ ಪ್ರಮಾಣದ ನಾಟಕವನ್ನು ಮಾಡಿರಲಿಲ್ಲ.

ಒಂದು ದಿನ ಎಂ.ಜಿ. ಹೀರೇಮಠ ಸರ್ ನನ್ನನ್ನು ಕರೆದು ಪೂರ್ಣಪ್ರಮಾಣದ ನಾಟಕದ ವಿಷಯ ಪ್ರಸ್ತಾಪಿಸಿದರು. ಅಲ್ಲಿಯವರೆಗೆ ನೀನಾಸಂ ತಿರುಗಾಟದ ನಾಟಕಗಳನ್ನು ಪ್ರತಿವರ್ಷ ತಪ್ಪದೇ ನೋಡುತ್ತಿದ್ದೆ, ನಾನೇ ಯಾವತ್ತೋ ಒಂದು ದಿನ ಪೂರ್ಣಪ್ರಮಾಣದ ನಾಟಕವನ್ನು ಆಡುತ್ತೇನೆ ಎಂದುಕೊಂಡಿರಲಿಲ್ಲ. ನಾಟಕ ಚಂದ್ರಶೇಖರ ಕಂಬಾರರು ಬರೆದ ‘ಸಿರಿಸಂಪಿಗೆ’, ಅದನ್ನು ನಿರ್ದೇಶಿಸಲು ಬಸವಲಿಂಗಯ್ಯ ಹಿರೇಮಠರು ಬರುತ್ತಾರೆ ಎಂದು ಹೇಳಿ ‘ಆಡಿಶನ್’ಗೆ ಕರೆದುಕೊಂಡು ಹೋದರು. ಅಲ್ಲಿಯವರೆಗೆ ನನಗೆ ಬಸವಲಿಂಗಯ್ಯನವರ ಬಗೆಗೆ ಕೇಳಿ ಗೊತ್ತಿತ್ತೇ ಹೊರತು, ಯಾವತ್ತೂ ಭೇಟಿಯಾಗಿರಲಿಲ್ಲ. ಅವರ ’ಶ್ರೀಕೃಷ್ಣಪಾರಿಜಾತವನ್ನು’ ನೋಡಿ ಮೆಚ್ಚಿಕೊಂಡಿದ್ದೆ. ವೈದ್ಯಕೀಯ ವಿದ್ಯಾರ್ಥಿಯಾದ ನನಗೆ ಅವರನ್ನು ಭೇಟಿಯಾಗುವ ಪ್ರಸಂಗವೂ ಬಂದಿರಲಿಲ್ಲ. ನಾನು ‘ಸಿರಿಸಂಪಿಗೆ’ ನಾಟಕವನ್ನೂ ಓದಿರಲಿಲ್ಲ, ಬೇರೆ ಯಾರೂ ಆಡಿದ್ದನ್ನೂ ನೋಡಿರಲಿಲ್ಲ.

ಬಸವಲಿಂಗಯ್ಯನವರನ್ನು ಮೊದಲಸಲ ಭೇಟಿಯಾದಾಗ ನನ್ನ ಕೈಗಳು ನಡುಗುತ್ತಿದ್ದವು. ಬಸವಲಿಂಗಯ್ಯನವರ ಜೊತೆ ಅವರ ಪತ್ನಿ ವಿಶ್ವೇಶ್ವರಿಯವರೂ ಇದ್ದರು. ಆದರೆ ಅವರ ಜೊತೆ ಎರಡೇ ಮಾತು, ಎಲ್ಲ ನಿರಾಳ. ಅವರಿಗೆ ವೈದ್ಯರನ್ನು ಕಂಡರೆ ತುಂಬಾ ಗೌರವ. ಅದರಲ್ಲೂ ಸಾಹಿತ್ಯ ನಾಟಕಗಳಲ್ಲಿ ಆಸಕ್ತಿ ಇರುವ ವೈದ್ಯರನ್ನು ಕಂಡರೆ ಇನ್ನೂ ಗೌರವ ಅನಿಸುತ್ತದೆ. ನಾನು ಅವರಿಗೆ ಕೊಡುವ ಗೌರವಕ್ಕಿಂತ ಅವರೇ ನನಗೆ ಹೆಚ್ಚು ಗೌರವ ಕೊಡುತ್ತಿದ್ದರು.!

ಬಸವಲಿಂಗಯ್ಯನವರ ಜೊತೆಯಲ್ಲಿ ವಿಶ್ವೇಶ್ವರಿ ಹಿರೇಮಠರು ನಮ್ಮ ನಾಟಕದ ನಿರ್ದೇಶಕರು. ಅವರಂಥ ಅನನ್ಯ ಜೋಡಿಯನ್ನು ನಾನು ಇದುವರೆಗೂ ನೋಡಿಲ್ಲ. ನನ್ನನ್ನು ‘ಕಾಳಿಂಗ’ನ ಪಾತ್ರಕ್ಕೆ ಆಯ್ಕೆ ಮಾಡಿದರು. ನನ್ನದು ನಾಟಕದಲ್ಲಿ ಪ್ರಮುಖಪಾತ್ರ. ನಾಯಕನೆಂದರೂ ನಡೆಯುತ್ತೆ, ಖಳನಾಯಕನೆಂದರೂ ನಡೆಯುತ್ತದೆ. ದಿನಾ ಸಂಜೆಯಿಂದ ರಾತ್ರಿಯವರೆಗೆ ಕರ್ನಾಟಕ ಮೆಡಿಕಲ್ ಕಾಲೇಜಿನ ಸಭಾಂಗಣದಲ್ಲಿ ಅಭ್ಯಾಸ ನಡೆಯುತ್ತಿತ್ತು. ಆ ಎರಡು ತಿಂಗಳಲ್ಲಿ ನಾನು ನಾಟಕದ ಬಗ್ಗೆ, ಸಾಹಿತ್ಯದ ಬಗ್ಗೆ ಕಲಿತದ್ದು ನನ್ನನ್ನು ಇಲ್ಲಿಯವರೆಗೂ ನಡೆಸಿಕೊಂಡು ಬಂದಿದೆ.

ಬಸವಲಿಂಗಯ್ಯನವರು ‘ಸಿರಿಸಂಪಿಗೆ’ ಹಾಗೂ ಕಾರ್ನಾಡರ ‘ನಾಗಮಂಡಲ’ ವನ್ನು ತುಲನೆ ಮಾಡಿ ಮಾತನಾಡುತ್ತಿದ್ದರು. ನಾಟಕವನ್ನು ನಿರ್ದೇಶಿಸುವಾಗ ನನ್ನಂತ ಹವ್ಯಾಸಿ ಕಲಾವಿದನಿಗೂ ನಟಿಸುವ ಸ್ವಾತಂತ್ರ್ಯವನ್ನು ಕೊಡುತ್ತಿದ್ದರು. ‘ಸಿರಿಸಂಪಿಗೆ’ ನಾಟಕದಲ್ಲಿ ಬಹಳ ಹಾಡುಗಳಿವೆ. ಅಲ್ಲಿಯೇ ಹಾರ್ಮೋನಿಯಂ ಹಿಡಿದುಕೊಂಡು ರಾಗ ಹಾಕುತ್ತಿದ್ದರು ಬಸವಲಿಂಗಯ್ಯನವರು. ಅವರದು ಅದ್ಭುತ ಶಾರೀರ. ನಾಟಕದಲ್ಲಿ ಎಲ್ಲ ಹಾಡುಗಳನ್ನು ರಿಹರ್ಸಲ್ ಸಮಯದಲ್ಲೇ ನಮ್ಮ ಕಣ್ಣೆದುರೇ ರಾಗ ಹಾಕಿದರು, ಹಾಡಿಸಿದರು. ನಾವೆಲ್ಲ ಎಲ್ಲ ಹಾಡುಗಳನ್ನೂ ತಾಲೀಮು ಕೂಡ ಮಾಡಿದ್ದೆವು. ಒಂದು ಸಂಜೆ ಅದೇನೆನಿಸಿತೋ, ‘ಇದು ಯಾಕೋ ಸರಿ ಇಲ್ಲ. ನಾಟಕದ ಕಡೀ ಹಾಡು, ಭೈರವಿ ರಾಗದಾಗs ಇರಬೇಕು,’ ಎಂದು ಮತ್ತೆ ಪೇಟಿ ಹಿಡಕೊಂಡು ಭೈರವಿ ರಾಗದಲ್ಲಿ ನಾಟಕದ ಕೊನೆಯ ಹಾಡಿಗೆ ಇನ್ನೊಂದು ಧಾಟಿ ಹಚ್ಚಿದರು. ಹಾಗಿತ್ತು ಅವರ ಸಂಗೀತದ ಧ್ಯಾನ. ಅವರು ಹಾಡುತ್ತ ಕುಳಿತರೆ ನನಗೆ ನನ್ನ ನಾಟಕದ ಮಾತುಗಳೂ ಮರೆತು ಹೋಗುತ್ತಿದ್ದವು. ಅವರ ಧ್ವನಿಯಲ್ಲಿ ಮಾಂತ್ರಿಕತೆಯಿತ್ತು.

ನಾಟಕದ ರಿಹರ್ಸಲ್ ನಡುವೆ ನಡೆಯುವ ‘ಚಹಾ-ಚೂಡಾ’ ಸಮಯದಲ್ಲಿ ನಾಟಕ-ಜನಪದ ಪ್ರಪಂಚದ ಸ್ವಾರಸ್ಯಕರ ಪ್ರಸಂಗಗಳನ್ನು ಹೇಳುತ್ತಿದ್ದರು. ಸಾಕಷ್ಟು ಹಾಡುಗಳನ್ನು ಹಾಡುತ್ತಿದ್ದರು. ಹೃದಯತುಂಬಿ ನಗುತ್ತಿದ್ದರು. ಒಂದು ದಿನ ಹಾರ್ಮೋನಿಯಂ ಹಿಡಿದು ‘ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು’ ಹಾಡಿನ ಇಂಗ್ಲೀಷ್ ರೂಪಾಂತರವನ್ನು ‘ವಾಟರ್ ಬಿಟ್ಟು ಅರ್ತ್ ಮೇಲೆ ಬೋಟು ಓಂಟು ಗೊ…’ ಎಂದು ಸುಶ್ರಾವ್ಯವಾಗಿ ಹಾಡಿ ನಮ್ಮನ್ನೆಲ್ಲ ನಗಿಸಿದರು!

ವಿಶ್ವೇಶ್ವರಿ ಮತ್ತು ಬಸವಲಿಂಗಯ್ಯನವರು ‘ಸಿರಿಸಂಪಗೆ’ ಯನ್ನು ತುಂಬ ಹಚ್ಚಿಕೊಂಡು ನಿರ್ದೇಶಿಸಿದರು. ಆದರೆ ನಾಟಕ ನಾವಂದುಕೊಂಡಷ್ಟು ಜನರನ್ನು ತಲುಪಲಿಲ್ಲ. ಎರಡೋ ಮೂರೋ ಪ್ರದರ್ಶನಗಳನ್ನು ಹುಬ್ಬಳ್ಳಿಯಲ್ಲಿ ಮಾಡಿದೆವು. ಬಹುಷಃ ಆ ನಾಟಕದ ಪಾತ್ರದಾರಿಗಳೆಲ್ಲ ನನ್ನಂತ ಹವ್ಯಾಸಿಗಳೇ ಆದ್ದರಿಂದ ಆಗಿರಬಹುದು.

ಈ ಕೋವಿಡ್ ಬರುವ ಮೊದಲು ಹಿರೇಮಠ ದಂಪತಿಗಳು ಇಂಗ್ಲೆಂಡಿಗೂ ಬಂದಿದ್ದರು. ‘ಕನ್ನಡ ಬಳಗ ಯು.ಕೆ’ ಅವರು ಕರೆಸಿದ್ದರು. ಬಸವಲಿಂಗಯ್ಯನವರು ಒಂದು ಗಂಟೆ ಜನಪದ ಗೀತೆಗಳನ್ನು ಹಾಡಿ ನಮ್ಮನ್ನೆಲ್ಲ ರಂಜಿಸಿದರು. ಕಾರ್ಯಕ್ರಮದ ಸಮಯದಲ್ಲಿ ನಾನು ಭೇಟಿಯಾಗಿ ಅವರಿಗೆ ನಮಸ್ಕರಿಸಿದೆ. ನನ್ನ ಗುರುತು ಸಿಗಲಿಲ್ವ ‘ನಾನು ನಿಮ್ಮ ನಾಟಕದ ಕಾಳಿಂಗ’ ಎಂದು ಗುರುತು ಹೇಳಿಕೊಂಡೆ. ನನ್ನ ಕಷ್ಟಸುಖ ವಿಚಾರಿಸಿ ಆಪ್ತವಾಗಿ ಮಾತನಾಡಿಸಿದ್ದರು..

ಬಸವಲಿಂಗಯ್ಯನವರು ನಿಧನರಾದ ಸುದ್ಧಿ ಕೇಳಿ ಇದೆಲ್ಲ ನೆನಪಾಯಿತು. ಕನ್ನಡ ನಾಡಿನ ಜನತೆಗೆ ಜನಪದದ ಸೊಗಡನ್ನು ತಲುಪಿಸಿ, ಕಿರುತೆರೆಯಲ್ಲಿ ನಟಿಸಿ, ನೂರಾರು ನಾಟಕಗಳಲ್ಲಿ ನಟಿಸಿ, ನಿರ್ದೇಶಿಸಿ ನಮ್ಮನ್ನೆಲ್ಲ ಅಗಲಿದ್ದಾರೆ. ‘ಸಿರಿಸಂಪಿಗೆ’ಯ ‘ಕಾಳಿಂಗ’ನ ಪಾತ್ರಧಾರಿಯಾಗಿ ಅವರಿಗೊಂದು ಶ್ರದ್ಧಾಂಜಲಿ, ನಮನ.

ಚಂಪಾ:

ನಾನು ಚಿಕ್ಕವನಾಗಿದ್ದಾಗ ಬೇಸಿಗೆಯ ರಜೆಗೆ ಅಜ್ಜಿಯ ಮನೆಗೆ (ತಾಯಿಯ ತಾಯಿಯ ಮನೆ) ಹುಬ್ಬಳ್ಳಿಗೆ ಹೋಗುತ್ತಿದ್ದೆ. ಅಲ್ಲಿ ನನ್ನ ಮಾಂಶಿ ಮತ್ತು ಮಾಮಂದಿರ ನನ್ನ ವಾರಿಗೆಯ ಮಕ್ಕಳು ಜೊತೆಯಾಗುತ್ತಾರೆ ಎನ್ನುವುದು ಒಂದು ಕಾರಣವಾದರೆ, ನನ್ನ ಸೋದರಮಾವಂದಿರ ಒಡನಾಟ ಇನ್ನೊಂದು ಮುಖ್ಯ ಕಾರಣ. ಅವೆರಲ್ಲರೂ ನಾಟಕ, ಸಂಗೀತ ಮತ್ತು ಸಿನಿಮಾ ಪ್ರಿಯರು. ಆ ನನ್ನ ಚಿಕ್ಕ ವಯಸ್ಸಿನಲ್ಲಿ ನನ್ನ ಇಬ್ಬರು ಮಾಮಂದಿರು ‘ಕೊಡೆಗಳು’ ಎನ್ನುವ ಎರಡೇ ಪಾತ್ರಗಳಿರುವ ನಾಟಕದ ತಾಲೀಮು ಮಾಡುತ್ತಿದ್ದರು. ಆ ನಾಟಕದ ಮಾತುಗಳು ಸಿಕ್ಕಾಪಟ್ಟೆ ನಗೆ ಉಕ್ಕಿಸುತ್ತಿದ್ದವು. ನಾಟಕದ ಅಸಂಗತತೆ ಮತ್ತು ಆ ಅಸಂಗತತೆಯ ಅರ್ಥವಾಗಲು ಇನ್ನೂ ಹಲವಾರು ವರ್ಷಗಳು ಬೇಕಾದವು ಎನ್ನುವುದು ಬೇರೆ ಮಾತು. ಆದರೆ ‘ಕೊಡೆಗಳು’ ಮಾತ್ರ ನನ್ನ ತಲೆಯಲ್ಲಿ ಶಾಶ್ವತವಾಗಿ ಹೂತುಬಿಟ್ಟಿತ್ತು.

ನಾನು ಎಂ.ಬಿ.ಬಿ.ಎಸ್. ಓದುವಾಗ ನಮ್ಮ ಹಾಸ್ಟೇಲಿನ ವಾರ್ಷಿಕೋತ್ಸವಕ್ಕೆ ಏಕಾಂಕವೊಂದನ್ನು ಮಾಡಬೇಕು ಎನ್ನುವ ಹುಳ ಹೊಕ್ಕಿತು. ಮೊಟ್ಟಮೊದಲು ನೆನಪಾದದ್ದೇ ‘ಕೊಡೆಗಳು’. ನನ್ನ ಮಾಮಂದಿರ ಹತ್ತಿರ ಆ ನಾಟಕದ ಪ್ರತಿ ಇರಲಿಲ್ಲ (ಆದರೆ ಸಂಭಾಷಣೆ ಇನ್ನೂ ನೆನಪಿನಲ್ಲಿತ್ತು!). ಹುಬ್ಬಳ್ಳಿಯ ಕೊಪ್ಪಿಕರ್ ರಸ್ತೆಯಲ್ಲಿರುವ ‘ಸಮಾಜ ಪುಸ್ತಕಾಲಯ’ಕ್ಕೆ ಹೋಗಿ, “ಕೊಡೆಗಳು ಅದ ಏನ್ರೀ?” ಅಂದೆ. ಎರಡೇ ನಿಮಿಷದಲ್ಲಿ ಒಂದು ಪುಟ್ಟ ಪುಸ್ತಕವನ್ನು ಕೈಗಿತ್ತರು (ಸಮಾಜ ಪುಸ್ತಕಾಲಯ ನನ್ನ ಪಾಲಿಗೆ ಪುಸ್ತಕದ ಗಣಿ ಆಗಿತ್ತು, ಇಂಥ ಕನ್ನಡ ಪುಸ್ತಕ ಇಲ್ಲ ಎನ್ನುತ್ತಿರಲಿಲ್ಲ). ಆಗಲೇ ‘ಕೊಡೆಗಳು’ ನಾಟಕವನ್ನು ಬರೆದವರು ಚಂದ್ರಶೇಖರ ಪಾಟೀಲರು ಎಂದು ಗೊತ್ತಾದದ್ದು. ‘ಕೊಡೆಗಳು’ ಏಕಾಂಕವನ್ನು ಎರಡು ತಿಂಗಳು ತಾಲೀಮು ಮಾಡಿ ಪ್ರದರ್ಶಿಸಿದ್ದೆವು.

ಅದೇ ಕಾಲಕ್ಕೆ ನಾನು ಕನ್ನಡದ ಕವಿಗಳನ್ನು ಓದುತ್ತಿದ್ದೆ, ವಾರವಾರವೂ ಹುಬ್ಬಳ್ಳಿಯ ಗ್ರಂಥಾಲಯ (ಇಂದಿರಾ ಗಾಜಿನ ಮನೆ)ಕ್ಕೆ ಹೋಗಿ ಕಥಾ ಸಂಕಲನ, ಕವನ ಸಂಕಲನ, ಕಾದಂಬರಿ ಮತ್ತು ವಿಮರ್ಶಾ ಕೃತಿಗಳನ್ನು ತಂದು ಓದುತ್ತಿದ್ದೆ, ಆದರೂ ಒಮ್ಮೆಯೂ ಚಂಪಾ ಕಣ್ಣಿಗೆ ಬಿದ್ದಿರಲಿಲ್ಲ. ಒಂದು ಸಲ ಲಂಕೇಶರು ಸಂಪಾದಿಸಿದ ‘ಅಕ್ಷರ ಹೊಸ ಕಾವ್ಯ‘ ಪುಸ್ತಕ ಸಿಕ್ಕಿತು; ನನಗಂತೂ ಅಕ್ಷಯಪಾತ್ರೆ ಸಿಕ್ಕಷ್ಟು ಸಂತೋಷವಾಯಿತು. ನಾನು ಹೆಸರೇ ಕೇಳಿರದ ಎಷ್ಟೊಂದು ಕವಿಗಳು! ಆಗ ನನ್ನನ್ನು ಆಕರ್ಷಿಸಿದ ಕವಿಗಳಲ್ಲಿ ಒಬ್ಬರು ಚಂಪಾ. ಆ ಪುಸ್ತಕದಲ್ಲಿ ಚಂಪಾ ಅವರ ‘ಗಾಂಧಿ ಸ್ಮರಣೆ’ ಎನ್ನುವ ಕವನ ತನ್ನ ಅತಿ ಸರಳ ಭಾಷೆಯಲ್ಲಿ, ದಿನನಿತ್ಯ ಎಲ್ಲರ ಕಣ್ಣಿಗೆ ಕಾಣುವ, ಎಲ್ಲರೂ ಮಾತನಾಡುವ ರೂಪಕಗಳನ್ನೇ ಹಿಡಿದು ಬರೆದದ್ದು, ನನ್ನನ್ನು ಆಳವಾಗಿ ಕಲಕಿತ್ತು. ಮೊದಲನೇ ಓದಿಗೆ ಬಿಟ್ಟುಕೊಡದ ಬೇಂದ್ರೆ ಮತ್ತು ಅಡಿಗರ ಕವನಗಳಿಗಿಂತ, ಸಂಸ್ಕೃತಭಾಷೆಯಿಂದ ಸಮೃದ್ಧವಾದ ರಮ್ಯತೆಯಿದ್ದ ಕುವೆಂಪು ಅವರಿಗಿಂತ, ಮಲ್ಲಿಗೆ ಕಂಪಿನ ಸಂಸಾರದ ಪ್ರೇಮದ ಕೆಎಸ್‌ಎನ್‌ ಅವರಿಗಿಂತ, ರೂಪಕಗಳಿಂದಲೇ ರೂಪಗೊಂಡ ಮಹತ್ವಾಕಾಂಕ್ಷೆಯ ಅಡಿಗರಿಗಿಂತ, ತುಂಬ ವಿಭಿನ್ನವಾದ ಚಂಪಾ ಅವರ ಕವನಗಳು ಸುಲಭವಾಗಿ ಒಂದೇ ಓದಿಗೇ ಅರ್ಥವಾಗುತ್ತಿದ್ದವು. ವ್ಯಂಗ್ಯ ಮತ್ತು ಹಾಸ್ಯದಿಂದ ಕೂಡಿರುತ್ತಿದ್ದವು. ಅವರ ಕವನಗಳಲ್ಲಿ ಶಬ್ಧಾಡಂಬರವಿರಲಿಲ್ಲ. ಏನೋ ಮಹತ್ತರವಾದುದನ್ನು ಹೇಳುತ್ತಿದ್ದೇನೆ ಎನ್ನುವ ಅಹಂಕಾರವಿರಲಿಲ್ಲ. ಅರ್ಥವಾಗದಂತೆ ಬರೆದರೇ ನವ್ಯಕಾವ್ಯ ಎನ್ನುವ ಸೋಗಿರಲಿಲ್ಲ.

ನನಗೆ ಚಂಪಾ ಅವರು ಬರೆದ ‘ಗೋಕರ್ಣದ ಗೌಡಸಾನಿ’ ನಾಟಕದಲ್ಲಿ ಭಾಗವಹಿಸುವ ಅವಕಾಶ ದೊರೆಯಿತು. ನಮ್ಮ ಹುಬ್ಬಳ್ಳಿ ಮೆಡಿಕಲ್ ಕಾಲೇಜಿನಲ್ಲಿ ಪ್ರದರ್ಶನ. ಹಾಸ್ಯ ಮತ್ತು ವ್ಯಂಗ್ಯಭರಿತ ನಾಟಕವದು. ಕೆಲವರು ಅಶ್ಲೀಲವೆಂದು ಕೆಂಡಕಾರಿದರು. ನನ್ನದು ಆ ನಾಟಕದಲ್ಲಿ ತೆರೆಯ ಹಿಂದಿನ ಕೆಲಸ: ಲೈಟಿಂಗ್ ವಿಭಾಗ. ಈ ನಾಟಕದಲ್ಲಿ ರಂಗದ ಮೇಲಿನ ದೀಪಕ್ಕೆ ವಿಶೇಷ ಮಹತ್ವವಿದೆ. ಅದರಲ್ಲೂ, ‘ಲಿಂಗ ಪ್ರತಿಷ್ಟಾಪನೆ’ಯ ಕೊನೆಯ ಅಂಕಣದಲ್ಲಿ. ನನ್ನ ಮಿತ್ರರೆಲ್ಲರೂ ರಂಗದ ಮೇಲೆ ತಾಲೀಮು ಮಾಡುತ್ತಿದ್ದರೆ, ನಾನು ನಾಟಕವನ್ನು ನೋಡುತ್ತಾ ಲೈಟಿಂಗ್ ಅಭ್ಯಾಸ ಮಾಡುತ್ತಿದ್ದೆ.

ನಾಟಕದ ಪ್ರದರ್ಶನದ ದಿನ ಖುದ್ದು ಚಂಪಾ ಅವರೇ ನಾಟಕ ನೋಡಲು ಬಂದಿದ್ದರು. ಚಂಪಾ ಅವರಿಗೆ ನಮ್ಮೆಲ್ಲರ ಪರಿಚಯ ಮಾಡಿಸಿದ್ದರು. ಅವರ ಬಳಿ ಮಾತಾಡಿದ್ದು ಒಂದೆರೆಡು ನಿಮಿಷ ಅಷ್ಟೆ. ಮುಖ್ಯ ಅತಿಥಿಗಳಾಗಿ ಬಂದಿದ್ದ ಅವರು ವೈಚಾರಿಕವಾಗಿ ಮಾತಾಡಿದ್ದರು, ಮಾತಿನಲ್ಲಿ ವ್ಯಂಗ್ಯ ಮತ್ತು ಹಾಸ್ಯ ತುಂಬಿ ತುಳುಕುತ್ತಿದ್ದವು. ಅಂದು ಅವರು ಹೇಳಿದ ಚುಟುಕು ಇಂದಿಗೂ ನಗು ತರಿಸುತ್ತದೆ. ಅದರ ಸಾರಾಂಶ ಇಷ್ಟು: ಒಬ್ಬ ಮಗ ಕನ್ನಡ ಶಾಲೆಗೆ ಹೋಗುತ್ತಿದ್ದಾನೆ, ಇನ್ನೊಬ್ಬ ಇಂಗ್ಲೀಷ್ ಮಾಧ್ಯಮದ ಶಾಲೆಗೆ. ಶಾಲೆಯಲ್ಲಿ ಪಂಪ ಮತ್ತು ರನ್ನರ ಬಗ್ಗೆ ಬರೆದುಕೊಂಡು ಬರಲು ಹೇಳುತ್ತಾರೆ. ಕನ್ನಡದ ಹುಡುಗ ಬರೆದಿರುತ್ತಾನೆ; ಪಂಪ ಮತ್ತು ರನ್ನ. ಇಂಗ್ಲೀಷ್ ಹುಡುಗ ಬರೆದಿರುತ್ತಾನೆ; Pump and Run!

ಹುಬ್ಬಳ್ಳಿಯನ್ನು ಬಿಟ್ಟು ನಾನು ಮೈಸೂರಿಗೆ ಬಂದ ಮೇಲೆ ಚಂಪಾ ಅವರ ಗೊತ್ತಾಗುತ್ತಿದ್ದುದುದು ‘ಲಂಕೇಶ್ ಪತ್ರಿಕೆ’ಯಿಂದ, ತಿಂಗಳಿಗೊಮ್ಮೆಯಾದರೂ ಚಂಪಾ ಅವರ ಬಗೆಗೆ ಏನಾದರೂ ಬರೆಯದಿದ್ದರೆ ಲಂಕೇಶರಿಗೆ ಊಟ ರುಚಿಸುತ್ತಿರಲಿಲ್ಲವೇನೊ? ನಾನು ಯಾವತ್ತೂ ಚಂಪಾ ಅವರು ಸಂಪಾದಿಸಿದ ‘ಸಂಕ್ರಮಣ’ವನ್ನು ಓದಲೇ ಇಲ್ಲ, ಏಕೆಂದರೆ ಅದು ಸಾಹಿತ್ಯದ ವಿದ್ಯಾರ್ಥಿಗಳಲ್ಲದ ನಮಗೆ ಗೊತ್ತೇ ಇರಲಿಲ್ಲ.

ನಾನು ಇಂಗ್ಲೆಂಡಿಗೆ ಬಂದಮೇಲೆ ಚಂಪಾ ಅವರು ಬರೆದ ‘ಇಂಗ್ಲೆಂಡಿನಲ್ಲಿ ಇಂಡಿಯನ್’ ಎನ್ನುವ ಕವನ ತುಂಬ ಆಪ್ತವಾಯಿತು. ಇಲ್ಲಿನ ಚಳಿಗಾಲದಲ್ಲಿ ಹಾಕಿಕೊಳ್ಳುವ ಒಂದರಮೇಲೊಂದು ಬಟ್ಟೆಗಳನ್ನು ‘ಉಳ್ಳಾಗಡ್ಡಿ’ಗೆ ಹೋಲಿಸಿ ಬರೆದುದನ್ನು ನೋಡಿ; ಇಂಥ ರೂಪಕ ಚಂಪಾ ಬಿಟ್ಟರೆ ಇನ್ನೊಬ್ಬರಿಗೆ ಹೊಳೆಯುವುದು ಅಸಾಧ್ಯ ಅನಿಸುತ್ತದೆ. ಇಂಗ್ಲೆಂಡಿನ ಸದಾ ಮುಚ್ಚಿರುವ ಬಾಗಿಲು, ಮೌನ (ಅದನ್ನವರು ಅಸಹ್ಯ ಮೌನ ಎನ್ನುತ್ತಾರೆ), ಬೊಗಳದ ನಾಯಿಗಳು, ಹಾರ್ನ್ ಮಾಡದ ಕಾರುಗಳು, ಗಟಾರಗಳಿಲ್ಲದ ರಸ್ತೆಗಳು… ಇಂಗ್ಲೆಂಡನ್ನು ಲೇವಡಿ ಮಾಡುತ್ತಾ ಹೋಗುತ್ತಾರೆ. ಕೊನೆಗೆ ದೇಶಭಕ್ತ ಭಾರತೀಯನನ್ನೂ ಗೇಲಿ ಮಾಡುತ್ತಾರೆ. ಚಂಪಾ ಅವರು ಇಂಗ್ಲೆಂಡಿನ ಲೀಡ್ಸ್ ನಗರದಲ್ಲಿ ಸ್ನಾತಕೋತ್ತರ ತರಬೇತಿಯನ್ನು ಪಡೆದಿದ್ದರು ಎಂದು ಇತ್ತೀಚಿಗೆ ಗೊತ್ತಾಯಿತು.

ಚಂಪಾ ತೀರಿಕೊಂಡ ಸುದ್ಧಿ ಬಂದಾಗ ನನ್ನ ಬಳಿ ಇರುವ ಪುಸ್ತಕಗಳಿಂದ ಚಂಪಾ ಅವರ ಕವನಗಳನ್ನು ಮತ್ತೆ ಓದಿದೆ. ಅವರ ‘ಬೇಡ’ ಎನ್ನುವ ಕವನದಲ್ಲಿ ಬರೆದ ಸಾಲುಗಳು ಅವರ ನಿಧನದ ಸಂದರ್ಭದಲ್ಲಿ (ಅದರಲ್ಲೂ ಅವರನ್ನು ಕಂಡರಾಗದವರಿಗೆ) ಹೇಳಿ ಮಾಡಿಸಿದಂತಿದೆ:

“ಬಾಳ ಕಾಳಗದಲ್ಲಿ ಸತ್ತು ಹೋದೇನು
ಹಲಗೆಯನು ನೀ ಹಿಡಿದು ಹೊಯ್ಕಳ್ಳಬೇಡ
ನಾಯಿ ನರಿಗಳು ನನ್ನ ಹೆಣತಿಂದು ನಲಿದಾವು
ಗೋರಿ ತೋಡಲು ನೀನು ಹೆಣಗಬೇಡ”

ಬೇಂದ್ರೆ ಮತ್ತು ಅಡಿಗರನ್ನೂ ವ್ಯಂಗ್ಯಮಾಡಬಲ್ಲ ತಾಕತ್ತಿದ್ದವರು ಚಂಪಾ ಒಬ್ಬರೇ ಇರಬೇಕು. “ಎಲ್ಲೋ ಹುಟ್ಟಿ ಎಲ್ಲೋ ಬೆಳದು…” ಎಂದು ಶಾಲ್ಮಲಾ ಎಂದು ನದಿಯ ರೂಪಕವನ್ನಿಟ್ಟುಕೊಂಡ ಅದ್ಬುತ ಕವನ, ಅದನ್ನು ಅಜರಾಮರವಾಗಿಸಿದ ಸಿ.ಅಶ್ವಥ್ ಅವರ ಸ್ವರ ಸಂಯೋಜನೆಯಲ್ಲಿ ಸಿ.ಅಶ್ವಥ್ ಅವರೇ ಹಾಡಿದ ಹಾಡನ್ನು ‘ಲೂಪ್’ ನಲ್ಲಿ ಹಾಕಿಕೊಂಡು ಕೇಳುತ್ತಾ, ಓದುಗನಾಗಿ ಚಂಪಾ ಅವರಿಗೊಂದು ಶ್ರದ್ಧಾಂಜಲಿ ಅರ್ಪಿಸುತ್ತೇನೆ.