ಪಿ.ವಿ. ವಜ್ರಮಟ್ಟಿ ಅವರ ಪೂರ್ತಿ ಹೆಸರು ವಜ್ರಮಟ್ಟಿ ಪಾಂಡಪ್ಪ ವೆಂಕಟಪ್ಪ ಅವರು 1936ರಲ್ಲಿ ಜನಿಸಿದರು. ಸಾಹಿತ್ಯ ರತ್ನ ಪದವೀಧರರಾಗಿದ್ದ ಅವರಿಗೆ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಪಾಂಡಿತ್ಯವಿತ್ತು. ಜಮಖಂಡಿಯ ಕಲೆ ಮತ್ತು ವಿಜ್ಞಾನ ಕಾಲೇಜಿನಲ್ಲಿ ರೀಡರ್ ಆಗಿ ಕೆಲಸ ನಿರ್ವಹಸಿದ ಅವರಿಗೆ ಭಾಷಾ ಸಾಹಿತ್ಯದಲ್ಲಿ ಹೆಚ್ಚು ಆಸಕ್ತಿ. ಅನುಭವ ಮಂಟಪ ಮತ್ತು ಸಹಕಾರ ಸಂಜೀವಿನಿ ಎಂಬ ಪತ್ರಿಕೆಗಳ ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ.ಅಗ್ನಿ ತುಷಾರ, ಮಣ್ಣು ಮಲ್ಲಿಗೆ, ಹಕ್ಕಿನೊಡೆಯರ ಹಾಡು ಮುಂತಾದವು ಅವರ ಪ್ರಮುಖ ಕೃತಿಗಳು. ಪಿ.ವಿ. ವಜ್ರಮಟ್ಟಿ ಬರೆದ ಬುದ್ಧನ ಶ್ರಾದ್ಧೋತ್ಸವ ಎಂಬ ಕವನವು ಸುವರ್ಣ ಸಂಪುಟದಲ್ಲಿ ಪ್ರಕಟವಾಗಿದ್ದು, ಇಂದಿನ ಕನ್ನಡ ಕಾವ್ಯಮಾಲೆಯ ಕುಸುಮ ಸರಣಿಯಲ್ಲಿ ನಿಮ್ಮ ಓದಿಗಾಗಿ ಇಲ್ಲಿದೆ.
ಬುದ್ಧನ ಶ್ರಾದ್ಧೋತ್ಸವ
ಎರಡು ಸಾವಿರ ಐದುನೂರನೆಯ ಉತ್ಸವ!
ಬುದ್ಧನದು ಮೆರವಣಿಗೆ ನಡೆಯಿತಿಂದು !
ಮೇನು ರೋಡಿನಗುಂಟ ವೈಭವದ ಮೇಳ !
ಮಂತ್ರಿ ಹಿರಿತನದಲ್ಲಿ ಎಲ್ಲ ನೇತಾರುಗಳು
ಆಜಿಗಳು ಮಾಜಿಗಳು ಕಾಜಿ ಪೂಜಾರಿಗಳು!
ಬುದ್ಧಮೂರ್ತಿಗೆ ಶ್ರದ್ಧೆ ಅರ್ಪಿಸುತ್ತ
ಗಂಭೀರ ಭಕ್ತಿಯಲಿ ನಡೆದ ಸಂತೆ!
ಜಾತಿ ಇಲ್ಲದ ಒಂದು ಸರಕಾರದಾಜ್ಞೆ !
ಧರ್ಮ ಮತ ತತ್ವಗಳು ಬೇರೆಯೇ ಇರಲಿ!
ಎಲ್ಲ ಧರ್ಮಕು ಕೈಯ ಮುಗಿಯಬೇಕು!
ಎನುವ ಜಾತ್ಯಾತೀತ ಘಟನೆ ಪಾಲಿಸಲಿಕ್ಕೆ
ಎಲ್ಲ ಜಾತಿಗಳವರು ನಡೆದರುತ್ಸವದಲ್ಲಿ!
ಯಾರಿಗೂ ಬುದ್ಧನದು ಸಂಬಂಧ ಇರಬೇಕೆ?
ಅವನ ತತ್ವದ ಗೊಡವೆ ಇವರಿಗೂ ಬೇಕೆ?
ಆಜ್ಞೆಪಾಲಿಸಲಿಕ್ಕೆ ಆಟ ಮಾಡುವದಿತ್ತು
ಹೊರಟ ಮೆರವಣಿಗೆ ಇದು ಭವ್ಯವಿತ್ತು !
ಫುಟ್‌ಪಾಥ ಮೇಲೆಯೇ ಬಿದ್ದಿರುವ ಭಿಕ್ಷುಕರು
ದೂರ-ನೂಕಲು ಬಂತು ಲಾಠಿಗಳ ಚಾರ್ಜು
ಪಿಡುಗು ಇಲ್ಲದ ರಸ್ತೆಯಲ್ಲಿ ಸಾಗಿತು ದಂಡು
ಬಯಲು ಮೈದಾನದಲ್ಲಿ ಸಾಗಿರುವ ಕುರಿಹಿಂಡು
ಒಬ್ಬ ಮುಪ್ಪಿನ ಮುದುಕ ದೀನ ಭಿಕ್ಷುಕ ಕಂಡು
ಅಂದು ಬುದ್ಧ ನ ಕಣ್ಣು ನೀರು ಹರಿದವು ಕೋಡಿ
ಮನುಜಜಾತಿಯ ದುಃಖ ದೂರಗೊಳಿಸುವೆನೆಂದು
ರಾಜ್ಯ-ಸಿರಿ ಸಂಪತ್ತು ಸಿಂಗಾರಗಳ ತೊರೆದು;
ಬೋಧಿವೃಕ್ಷದ ಬುದ್ಧ ನಾಗಿ ಜಗದೋದ್ದಾರ-
ಗೈದ: ನಿರ್ವಾಣದಲಿ; ಇಂದಿಗೂ ಸಾಕಾರ!
ನೂರು ಸಾಸಿರ ಅಸ್ಥಿ ಪಂಜರಗಳುಸಿರಾಟ !
ಕಾಲ ಕೆಳಗೆಯೇ ಬಿದ್ದು ಗೋಳಾಡುವೀ ಆಟ
ಇವರ ಕಣ್ಣುಗಳೇನು ಕಾಜಿನವು ಗುಂಡುಗಳೆ?
ಎದೆಯ ಗೂಡುಗಳೇನು ಭೂತ ಬಂಗಲೆಗಳೆ?
ದಿನವು ನೈಟ್ ಕ್ಲಬ್ಬಿನಲಿ ರತಿಕ್ರೀಡೆಯಾಟ !
ಅಧಿಕಾರದಲಿ ತುಂಬ ಎಂಥ ರಕ್ಕಸನಾಟ !
ಇವರ ದುರ್ವಾಸಕ್ಕೆ ಸಾತಿಲ್ಲ ಕಾವಾಟ !
ಆದರೂ ಈ ಜನಕೆ ಯಾರದು ಕಾಡಾಟ !?
ಅಂತೆಯೇ ಬುದ್ಧ ನಿಗೆ ಉತ್ತರಧಿಕಾರಿಗಳು
ನಿತ್ಯವೂ ಧರ್ಮಗಳ ಮೆರವಣಿಗೆ ಮಾಡಿದರು !
ನೂರಾರು ಅಧಿಕಾರ ಕೈಯಲ್ಲಿ ಧರಿಸಿದರು
ಪಡೆದ ಭಸ್ಮಾಸುರನ ಹಾಗೆ ಕುಣಿದಾಡಿದರು!
ಬೆಳೆದ ಬುದ್ಧನ ಮಧ್ಯೆ ಅಳಿದ ಇವರದು ಶ್ರದ್ಧೆ!
ನಡೆವ ಹೆಣಗಳ ನಡುವೆ ಬುದ ಗಾಯಿತು ಶ್ರಾದ್ಧ
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ