ಧ್ಯಾನ

ಕೂಸಿನಂತೆ
ಚಿಟ್ಟನೆ ಚೀರಿತು
ಹೃದಯ

ಹಣ್ಣಿನ ಗಾಯಗಳು
ಮುಕ್ಕಳಿಸತೊಡಗಿದವು
ನದಿಗಳು

ಹೃದಯವನ್ನೆ ಗುರಿಯಾಗಿಸಿಕೊಂಡ
ಕದನಗಳು
ಕದನ ವಿರಾಮಗಳು
ಛಿದ್ರ ಛಿದ್ರ ಹೂವುಗಳು

ಪಾದಗಳ ಕವುಚಿ
ರಕ್ತ ಸಿಕ್ತ ಬೆಳದಿಂಗಳ
ಹೆಗಲಿಗೇರಿಸಿ
ಮತ್ತದೇ ಬಾಂಬು, ಬಂದೂಕುಗಳು
ಬೊಬ್ಬಿಡುವಾಗ
ಕೂಸಿನಂತೆ
ಚಿಟ್ಟನೆ ಚೀರಿತು
ಹೃದಯ

ಇನ್ನೇನು ಧ್ಯಾನಿಸಲಿ
ನೆತ್ತರ ಕಡಲಲಿ
ಈಜಿ
ಹೊತ್ತು ಕಳೆದೀತು ಹೇಗೆ?
ಕನಸಿದ ಕನಸ ಮುರುಟಿ
ನಿರಿಗೆಗಳು ಚೂರು ಚೂರಾಗುವಾಗ
ಕೂಸಿನಂತೆ
ಚಿಟ್ಟನೆ ಚೀರಿತು
ಹೃದಯ

ಮುಖದ ಚೂರು

ಭಿಕ್ಷೆಗಿಳಿದಿದ್ದೇನೆ
ಬಿಂಬದ ಹೂರಣವ
ಅಲ್ಲಗಳೆಯುವಾಗಲೇ

ಭಿಕ್ಷೆಗಿಳಿದಿದ್ದೇನೆ
ಸವೆದ ಮುಖವ ನೇವರಿಸಿ
ಎದೆಯ ಬಿರುಕುಗಳ
ಹೊಲೆಯುವಾಗಲೇ

ಭಿಕ್ಷೆಗಿಳಿದಿದ್ದೇನೆ
ಮುಸ್ಸಂಜೆಯ ನಿಟ್ಟುಸಿರಲಿ
ನೀಳ ಇರುಳ ಬಿಕ್ಕಳಿಕೆಯಲಿ

ಭಿಕ್ಷೆಗಿಳಿದಿದ್ದೇನೆ
ಬೊಗಸೆಯ
ನದಿಯು
ಕಲ್ಲುಬಂಡೆಯ
ಧರಿಸುವಾಗಲೇ

ಭಿಕ್ಷೆಗಿಳಿದಿದ್ದೇನೆ
ಮಣ್ಣ ಮಿದ್ದು
ಕಣ್ಣೀರ
ತುಳುಕಿಸುವಾಗಲೇ

ಭಿಕ್ಷೆಗಿಳಿದಿದ್ದೇನೆ
ಬಾಲ್ಯದ ಕರಂಡಿಕೆಯಲಿ
ತೊಗಲು ತೊಗಲ ಹಿಂಡುವಾಗಲೇ
ಮೃಗವಾದಾಗಲೇ

ಅಶೋಕ ಹೊಸಮನಿ ಅವರು ಗದಗ ಜಿಲ್ಲೆಯ ರೋಣ ತಾಲೂಕು ಗಜೇಂದ್ರಗಡದವರು.
ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್‌ ಭಾಷೆಯ ಬೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸೂಫಿ ಸಾಹಿತ್ಯ ಇವರಿಗೆ ಅಚ್ಚುಮೆಚ್ಚು.
‘ಒಂಟಿ ಹೊಸ್ತಿಲು’, ‘ಅನಾಮಧೇಯ ಹೂ’, “ಹರವಿದಷ್ಟು ರೆಕ್ಕೆಗಳು” ಪ್ರಕಟಿತ ಕವನ ಸಂಕಲನಗಳು