ಉಸಿರುಣಿಸಿ ಕೊಲ್ಲುವ
ವಿದ್ಯೆ…

ನೀನು
ಮುಟ್ಟದಿದ್ದರೂ
ನಿನ್ನನ್ನು ಕಂಡಾಕ್ಷಣ
ಸ್ಪರ್ಶದ ನವಿರು
ಜೊತೆಗೆ ಬೆರಳ ಗುರುತು
ಮೈಮನಸ ಮೇಲೆ..
ಅಳಿಸಲಾಗುತ್ತಿಲ್ಲ!

ನನ್ನ
ಸುತ್ತಲೂ ಆವರಿಸಿದ
ಕಂಡೀಷನ್ನುಗಳೆಲ್ಲಾ
ಕರಗಿ
ನಿನಗೆ ದಾರಿ ಮಾಡಿಬಿಡುತ್ತವೆ
ನನ್ನಪ್ಪಣೆಯಿಲ್ಲದೇ!

ಉಸಿರು ಸೋಕಿ
ಆದ ಗಾಯಗಳು
ಉಸಿರು ಬೆರೆತಾಗ
ಮುಕ್ತಿ ಕಾಣುತ್ತವಲ್ಲ
ಉಸಿರುಣಿಸಿ ಕೊಲ್ಲುವ
ವಿದ್ಯೆಯನ್ನೆಲ್ಲಿ ಕಲಿತೆ ಹೇಳು?!

ಅಲೆದಲೆದು
ಬೆಂದು ಬಾಯಾರಿ
ಉಸಿರ ತಲಾಶಿನಲ್ಲಿರುವಾಗ
ಮುಟ್ಟಿ ಮರೆಯಾದೆ
ಎಲ್ಲಿ
ಉಸಿರ ಗುರುತುಳಿಸಿ?!

ನಿಜಕ್ಕೂ
ನನ್ನ ನಾನು
ಹುಡುಕಲು ಶುವಿಟ್ಟಿದ್ದೀನಿ
ಎದೆಯ ಬೀದಿಯಲಿ
ನನ್ನದೇ ಹೆಜ್ಜೆ ಗುರುತು
ನಿನ್ನ ಬೆರಳ ಬೆಸೆಯಲು ಹೊರಟಿವೆ!

ಅಂತರಾತ್ಮದ ತುಂಬೆಲ್ಲ
ನಿನ್ನದೇ
ದನಿಯಿರುವಾಗ
ನನ್ನ ಸುಳಿವಾದರೂ
ಸಿಗೋದು ಎಲ್ಲಿ? ಹೇಗೆ? ಯಾವಾಗ?!

ಬೆರೆತ ಉಸಿರು
ನಡೆದು ಮೂಡಿಸಿದ
ಬಿಂಬವದು ನಿನ್ನದೂ ಅಲ್ಲ!
ನನ್ನದೂ ಅಲ್ಲ!
ಇದೇ ಏನು
ಒಂದು ಒಂದು ಸೇರಿ
ಆಗುವ ಆ ಒಂದು?!

ನೀ
ದೂರವಿದ್ದರೆ ಧ್ಯಾನ
ಸೇರಿದರೆ ಸಮಾಧಿ!
ಕೊನೆಗೆ
ಪ್ರೀತಿ ಲೋಕಕೆ ಬಡ್ತಿ
ಇಬ್ಬರಿಗೂ ಮುಕ್ತಿ!

ಸೌಮ್ಯ ದಯಾನಂದ ಮೂಲತಃ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಹೂವಿನ ಹೊಳೆ ಗ್ರಾಮದವರಾಗಿದ್ದು ಸಧ್ಯ ದಾವಣಗೆರೆ ನಗರದಲ್ಲಿ ವಾಸವಾಗಿದ್ದಾರೆ.
ಜಗಳೂರು ತಾಲ್ಲೂಕಿನ ದಿದ್ದಿಗೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕಿಯಾಗಿ ಕರ್ತವ್ಯದಲ್ಲಿದ್ದಾರೆ.
ಅನೇಕ ಪತ್ರಿಕೆಗಳಲ್ಲಿ ಇವರ ಕವಿತೆಗಳು ಪ್ರಕಟವಾಗಿವೆ.
ಇವರ ಹಲವು ಕಥೆಗಳು, ಮಕ್ಕಳ ಕವಿತೆಗಳು, ಮಕ್ಕಳ ಕಥೆಗಳು ಪ್ರಕಟವಾಗಿದ್ದು ‘ಸಂಜೆ ಐದರ ಸಂತೆ’ ಇವರ ಪ್ರಕಟಿತ ಕವನ ಸಂಕಲನ.