ಸಾಹಿತಿಗಳಿಗೆ, ಲೇಖಕರಿಗೆ ಭಯ ಇರಬಾರದು ಎಂದು ಹೇಳುತ್ತಾರೆ, ಆದರೆ ಲೇಖಕರಿಗೂ, ಪತ್ನಿ, ಮಕ್ಕಳು, ಕುಟುಂಬ, ಬದುಕಲು ಒಂದು ಕೆಲಸ ಇರುತ್ತದೆ. ತಮ್ಮ ಖಯಾಲಿಗೋ, ಸಾಮಾಜಿಕ ಜವಾಬ್ದಾರಿಯಿಂದಲೋ, ಸಮಾಜಕ್ಕೆ ತನ್ನದೊಂದು ಅಳಿಲ ಸೇವೆ ಎಂದೋ ಪ್ರಖ್ಯಾತಗೊಳ್ಳಲೋ ಬರೆಯುವರಿಗೆ ಸ್ವಲ್ಪ ಭಯ ಇದ್ದೇ ಇರುತ್ತದೆ. ಏಕೆಂದರೆ ಸಹಾಯ ಮಾಡಿಸಿಕೊಂಡವರೇ ಎದುರು ತಿರುಗುವುದು, ಹಿಂದೆ ಕೆಟ್ಟದಾಗಿ ಆಡಿಕೊಳ್ಳುವುದು, ಕಷ್ಟಕೊಡುವುದು ಹೀಗೆ ಅನೇಕ ರೀತಿಯಲ್ಲಿ ನೋವು ಕೊಡುವುದರಿಂದ, ನನಗ್ಯಾಕೆ ಇಲ್ಲದ ಉಸಾಬರಿ ಎಂದುಕೊಳ್ಳುವವರು ಸಂಖ್ಯೆ ಹೆಚ್ಚಾಗುತ್ತಿದೆ. ಗಲಾಟೆ ಶುರುವಾದಮೇಲೆ ಇರಲಾಗದೆ ಇರುವೆ ಬಿಟ್ಟುಕೊಂಡ ಎಂದು ಸಾಹಿತಿಗಳನ್ನು ಅಣಕಿಸುವ ಮಾತುಗಳು ಕೇಳಿಬರುತ್ತವೆ.
ಬರಹಗಾರರಿಗಿರುವ ಸವಾಲುಗಳ ಕುರಿತು ಎಂ.ವಿ. ಶಶಿಭೂಷಣ ರಾಜು ಬರಹ ನಿಮ್ಮ ಓದಿಗೆ

ಬರೆಯುವುದು ಒಂದು ಧ್ಯಾನ, ಒಂದು ಆತ್ಮ ತೃಪ್ತಿ, ಒಂದು ಸಂತಸ, ಒಂದು ಹೆಮ್ಮೆ, ಒಂದು ಸಾಮಾಜಿಕ ಜವಾಬ್ದಾರಿ. ಬರೆಯುವಾಗ ಲೋಕದ ಆಗುಹೋಗುಗಳನ್ನು ಮರೆತು, ನಮ್ಮದೇ ಲೋಕವನ್ನು ಸೃಷ್ಟಿಸಿಕೊಂಡು ಬರೆಯುವುದು. ಅದೊಂದು ಕಲೆಯೂ ಹೌದು. ಬರೆಯುವುದು ಒಂದು ಧ್ಯಾನವಾದರೂ ಅಷ್ಟೇ ಎಚ್ಚರ ಕೂಡ ಅಗತ್ಯ. ವಸ್ತುವಿನ ವಿಷಯಾಂತರವಾಗದೆ, ಭಾಷೆಯ ಆಶಯಕ್ಕೆ ಅನುಗುಣವಾಗಿ, ಚಿಂತಿಸಿ, ಭಿನ್ನವಾಗಿ, ಗಂಭೀರವಾಗಿ ಬರೆಯುವುದು ಒಂದು ಸಾಹಸ. ಓದುವವರ ಆಸಕ್ತಿ ವಿವಿಧ ವಿಷಯಗಳಲ್ಲಿ ಇರುವಂತೆ, ಬರೆಯುವವರ ಆಸಕ್ತಿಯೂ ಹಾಗೆ ಬೇರೆ ಬೇರೆ ವಿಷಯಗಳಲ್ಲಿ ಇರುತ್ತದೆ. ಹಾಗಿದ್ದರೂ ಬರೆಯುವ ವಸ್ತುವಿನ ಬಗ್ಗೆ ಒಂದು ಭಯದಿಂದ ಬರೆಯುವ ಸನ್ನಿವೇಶ ಎದುರಾಗಿದೆ. ಹಾಗಿದ್ದರೆ ಯಾವುದರ ಬಗ್ಗೆ ಬರೆಯಬೇಕು?

ಧರ್ಮ, ಜಾತಿಯ ಬಗ್ಗೆ ಬರೆಯುವ ಸ್ವಾತಂತ್ರ್ಯ ನಾವು ಕಳೆದುಕೊಂಡಾಗಿದೆ. ಹೇಗೆ ಬರೆದರೂ ಯಾವುದೋ ಒಂದು ಧರ್ಮದವರಿಗೆ ಅಥವಾ ಜಾತಿಯವರಿಗೆ ನೋವಾಗುತ್ತದೆ. ಇಲ್ಲಾ ಯಾರೋ ಒಬ್ಬರು ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಗುಲ್ಲೆಬ್ಬಿಸುತ್ತಾರೆ. ಈಗ ಕೋರ್ಟು ಕಚೇರಿ ಎಂದು ಇರುವುದರಿಂದ, ಬರೆದ ತಪ್ಪಿಗೆ ಕೋರ್ಟು ಅಲೆಯಬೇಕಾಗುತ್ತದೆ. ಎಲ್ಲಾ ಧರ್ಮಗಳಲ್ಲೂ ಹುಳುಕಿದ್ದರೂ ಅದನ್ನು ಒಪ್ಪಿಕೊಳ್ಳುವ ಮನಸುಗಳು ಈಗಿರುವುದು ಕಮ್ಮಿ. ಶ್ರೇಷ್ಠತೆಯ ವ್ಯಸನ ಮನ ಹೊಕ್ಕಿ ಕುಳಿತು ಅಗುಣಿ ಹಾಕಿಕೊಂಡಿರುವುದರಿಂದ, ಹೊಸಗಾಳಿ ಬೀಸಿದರೂ ಮನಕಡರುವುದಿಲ್ಲ. ತಮನ್ನು ತಾವು ಪರಿಷ್ಕರಿಸಿಕೊಳ್ಳುವ ಪ್ರಕ್ರಿಯೆಗೆ ಧರ್ಮಗಳು ತೆರೆದುಕೊಳ್ಳುವುದೂ ಇಲ್ಲ. ಅದರಲ್ಲೂ ಕೆಲವು ಧರ್ಮಗಳು ಯಾವುದೋ ಕಾಲದ, ಯಾವುದೋ ಪರಿಸ್ಥಿತಿಗೆ, ಯಾರೋ ಒಬ್ಬರು ಬರೆದ ಬರಹಗಳನ್ನು ಇಂದಿಗೂ ಅನ್ವಹಿಸಿಕೊಂಡು, ಕತ್ತಲಲ್ಲಿ ಕುಳಿತು ಬಿಟ್ಟಿವೆ. ಅವಕ್ಕೆ ಬೆಳಕ ಕಂಡರೂ ಕಣ್ಣು ಮಂಜಾಗುತ್ತದೆ. ತಮ್ಮ ಧರ್ಮಗ್ರಂಥಗಳ ಭಾರದಿಂದ ಬಳಲುತ್ತಿವೆ. ಇನ್ನು ಕೆಲವು ಧರ್ಮಗಳು ಹೊಸತನಕ್ಕೆ ತೆರೆದುಕೊಳ್ಳುವ ಪ್ರಯತ್ನ ಮಾಡಿದರೂ ಇತ್ತೀಚಿಗೆ ಸಂಕುಚಿತ ಮನೋಭಾವಕ್ಕೆ ನೀರೆರೆಯುತ್ತಿವೆ. ಆದ್ದರಿಂದ ಧರ್ಮಗಳ ಬಗ್ಗೆ ಬರೆಯಬೇಕಾದರೆ ವಿಮರ್ಶೆ ಮಾಡದೆ ಅವುಗಳ ವರ್ಣನೆ ಮಾಡುತ್ತಾ, ಎಲ್ಲವು ಸುಖಮಯವಾಗಿದೆ ಎಂದು ಆತ್ಮವಂಚನೆ ಮಾಡಿಕೊಳ್ಳಬೇಕಾಗುತ್ತದೆ.

ಇನ್ನು ದೇವರ ಬಗ್ಗೆ ಬರೆಯಲು ಸಾಧ್ಯವೇ ಇಲ್ಲ. ದೇವರ ಇರುವಿಕೆ ಯಾವಾಗಲೂ ಪ್ರಶ್ನೆ ಆಗಿದ್ದರೂ, ಆ ಪ್ರಶ್ನೆ ಕೇಳಿದವರನ್ನು ಗೌರವಿಸಿ, ಅವರ ಜ್ಞಾನ ದಾಹಕ್ಕೆ ಒಂದು ಬೊಗಸೆ ನೀರು ತುಂಬಿದವರು ಅಲ್ಲಲ್ಲಿ ಇರುತ್ತಿದ್ದರು. ಇತ್ತೀಚಿಗೆ ದೇವರು ಧರ್ಮದ ಜೊತೆ ತಳುಕು ಹಾಕಿಕೊಂಡಿರುವುದರಿಂದ, ನಮ್ಮ ದೇವರು, ನಿಮ್ಮ ದೇವರು ಎಂದು ವಿಂಗಡಣೆ ಹೆಚ್ಚಾಗಿರುವುದರಿಂದ, ದೇವರ ಬಗ್ಗೆ ಒಂದು ಸಮೂಹ ಸನ್ನಿ ಶುರುವಾಗಿರುವುದರಿಂದ, ಒಬ್ಬ ಕವಿ, ಕಥೆಗಾರ, ಲೇಖಕ ದೇವರ ಬಗ್ಗೆ ತನ್ನ ಪ್ರಶ್ನೆಗಳನ್ನು ತನ್ನಲ್ಲೇ ಅಡಗಿಸಿಕೊಂಡು ಬೆಣ್ಣೆ ಸವರಿದಂತೆ ಬರೆಯಬೇಕಾಗುತ್ತದೆ. ದೇವರ ಜೊತೆ ದೇವಸ್ಥಾನ, ಮಸೀದಿ, ಚರ್ಚುಗಳು ಇರುವುದರಿಂದ, ಯಾವ ಬರಹಗಾರನೂ ಭಯವಿಲ್ಲದೆ, ತನ್ನ ಅಭಿಪ್ರಾಯಗಳನ್ನು ಮುಕ್ತವಾಗಿ ಬರೆಯಲು ಆಗದ ಸನ್ನಿವೇಶ ಸೃಷ್ಟಿಯಾಗಿದೆ. ಎಲ್ಲಿ ತನ್ನ ಮೇಲೆ ಕೇಸು ಬೀಳುವುದೋ ಎಂದೋ ತಾನು ಸಮಾಜದ ಮುಖ್ಯವಾಹಿನಿಯಿಂದ ದೂರ ತಳ್ಳಲ್ಪಡುತ್ತೇನೇ ಎಂದೋ ಸೇಫ್ ಜೋನಿನಲ್ಲಿ ಇದ್ದುಕೊಂಡು ಎಲ್ಲರಿಗೂ ಖುಷಿಯಾಗಿರುವುದನ್ನು ಬರೆಯಬೇಕಾಗುತ್ತದೆ. ದೇವರ ನಿಂದಾಸ್ತುತಿಯೂ ಮಾಡದ ಪರಿಸ್ಥಿತಿ. ಬರಹಗಾರರೆಲ್ಲಾ ನಾಸ್ತಿಕರಲ್ಲ, ಅವರದು ಸಮಾಜದ ಓರೆ ಕೋರೆಗಳನ್ನು ಎತ್ತಿ ತೋರಿಸುವ ಒಂದು ಪ್ರಯತ್ನ ಅಷ್ಟೇ ಎಂದು ಸಮಾಜ ತಿಳಿದುಕೊಳ್ಳಬೇಕಾಗುತ್ತದೆ.

ಕಾಮ ಎನ್ನುವುದು, ಎಲ್ಲಾ ಕಾಲಗಳಲ್ಲೂ ಮನುಷ್ಯನಿಗೆ ಒಂದು ಕೂತೂಹಲ. ಕಾಮದ ಬಗ್ಗೆ ಬರೆಯುವುದೇ ಒಂದು ಆಧುನಿಕತೆ, ತೆರೆದ ಮನಸು, ಧೈರ್ಯ ಎನ್ನುವ ಕಾಲಘಟ್ಟ ಇತ್ತು. ಕ್ರಮೇಣ ಅದು ಮರೆಯಾಗಿ, ಕಾಮದ ಬಗ್ಗೆ ಬರೆಯುವುದರ ಬಗ್ಗೆ ಒಂದು ಅಳುಕು ಉಂಟಾಗಲು ಶುರುವಾಯಿತು. ಹೆಣ್ಣಾದರೆ ಕಾಮದ ಬಗ್ಗೆ ಓದಬಾರದು, ಬರೆಯಬಾರದು ಎನ್ನುವ ಕಟ್ಟಳೆ ಕಂಡೂ ಕಾಣದಂತೆ ಇಂದೂ ಇದೆ. ಕಾಮದ ಬಗ್ಗೆ ಬರೆದರೆ, ಮನೆಯವರು, ಬಂಧುಗಳು, ಸ್ನೇಹಿತರು ಏನೆಂದುಕೊಳ್ಳುವರೋ, ಸಮಾಜ ಏನೆಂದುಕೊಳ್ಳುವುದೋ ಎಂದು ಭಯಪಟ್ಟುಕೊಳ್ಳುವುದು ಶುರುವಾಯಿತು. ಹೀಗೆ ಕಾಮದ ಬಗ್ಗೆ ಅಚ್ಚರಿ, ಆಶ್ಚರ್ಯ ಹುದುಗಿಟ್ಟುಕೊಂಡು, ಪ್ರೇಮ, ಪ್ರೀತಿಗಳನ್ನು ತಟ್ಟುವುದು (ದೃಶ್ಯ ಮಾಧ್ಯಮದಲ್ಲಿ ಇದು ಧೈರ್ಯವಾಗಿ ಪ್ರದರ್ಶಿಸಲ್ಪಡುತ್ತದೆ).

ಇನ್ನು, ಹೂವು, ಹಣ್ಣು, ಕಾಯಿ, ಎಲೆ, ಸೂರ್ಯ, ಚಂದ್ರರ ಬಗ್ಗೆ ಇಂದಿಗೂ ಬರೆಯುವವರ ಸಂಖ್ಯೆ ಬಲು ದೊಡ್ಡದಿದೆ. ಆದರೆ ಇಂತಹವರು ಗಂಭೀರವಾಗಿ ಬರೆಯುವ ಲೇಖಕರ ತಿರಸ್ಕಾರಕ್ಕೆ ಒಳಗಾಗುತ್ತಾರೆ. ಸಾಮಾಜಿಕ ಜವಾಬ್ದಾರಿ ಇಲ್ಲದೆ ಬರೆಯುವ ಕವನ, ಕಥೆ, ಕಾದಂಬರಿಗಳು, ಲೇಖನಗಳು ಮುಖ್ಯವೇ ಅಲ್ಲ ಎಂದು ಟೀಕೆಗೆ ಒಳಗಾಗಬೇಕಾಗುತ್ತದೆ. ಹೂವು, ಹಣ್ಣುಗಳ ಬಗ್ಗೆ ತುಂಬಾ ಜನ ಈಗಾಗಲೇ ಬರೆದಿರುವುದರಿಂದ, ಮತ್ತೆ ಮತ್ತೆ ಅದರ ಬಗ್ಗೆ ಬರೆಯುವುದು ಕ್ಲೀಷೆ ಎನಿಸುತ್ತದೆ.

ಇನ್ನು ಸರ್ಕಾರದ ಬಗ್ಗೆ, ಆಡಳಿತದ ಬಗ್ಗೆ ಏನೂ ಹೇಳದ ಸನ್ನಿವೇಶದಲ್ಲಿ ಇದ್ದೇವೆ. ಯಾವುದೋ ಒಂದು ಸರ್ಕಾರದ ಕೆಟ್ಟ ನಡೆ ಬಗ್ಗೆ ಬರೆದರೆ, ಒಂದು ದೊಡ್ಡ ಗುಂಪು ಮುಗಿಬೀಳುತ್ತದೆ. ಬರಹಗಾರರನ್ನು ಇನ್ನೊಂದು ಪಕ್ಷದೊಂದಿಗೆ ಗುರುತಿಸಿ, ಟೀಕೆಗಳ ಸುರಿಮಳೆ ಸುರಿಸುತ್ತದೆ. ಧರ್ಮದ್ರೋಹಿ, ರಾಷ್ಟ್ರದ್ರೋಹಿ, ಬಲ ಅಥವಾ ಎಡಪಂತೀಯ ಹೀಗೆ ಹಣೆ ಪಟ್ಟಿ ಹಾಕಲಾಗುತ್ತದೆ. ಸಾಹಿತಿಗಳು ಪೋಲೀಸ್ ಠಾಣೆ ಮೆಟ್ಟಿಲನ್ನು ಏರಬೇಕಾಗುತ್ತದೆ. ಯಾವ ಪುಸ್ತಕವನ್ನು ಓದಿರದ, ಒಬ್ಬ ಅಧಿಕಾರಿಯ, ರಾಜಕಾರಣಿಯ, ವಕೀಲನ ದರ್ಪಕ್ಕೆ ಒಳಪಡಬೇಕಾಗುತ್ತದೆ. ಕೊನೆಗೆ ಬರೆಯುವ ಸಾಹಸಕ್ಕೆ ಕೈಹಾಕದೆ ಇರಬೇಕಾಗುತ್ತದೆ. ಯುದ್ಧ ಮಾಡುವ ಎರಡು ರಾಷ್ಟ್ರಗಳಲ್ಲಿ ಎಲ್ಲರೂ ಬೆಂಬಲಿಸುವ ರಾಷ್ಟ್ರವನ್ನೇ ಬೆಂಬಲಿಸಬೇಕಾಗುತ್ತದೆ.

ಇನ್ನು, ಸರಳವಾಗಿ, ಸರಳ ಭಾಷೆಯಲ್ಲಿ, ಕವನ ಕಥೆ, ಲೇಖನ ಬರೆಯುವವರಿಗೆ ತಿರಸ್ಕಾರ ಸ್ವತಃ ಇನ್ನೊಬ್ಬ ಲೇಖಕರಿಂದ ಬರುತ್ತದೆ. ಕ್ಲಿಷ್ಟಭಾಷೆಯಲ್ಲಿ, ಒಂದಕ್ಕೊಂದು ಸಂಬಂಧವಿಲ್ಲದೆ ಬರೆಯುವುದು, ಓದುಗನನ್ನು ಅರ್ಥಮಾಡಿಕೊಳ್ಳಲು ಕಷ್ಟ ಪಡಿಸುವುದೇ ಮುಖ್ಯವಾಗಿದೆ.

ಬಂಡಾಯ ಸಾಹಿತ್ಯ ಜಾತಿಗಳಿಗೆ ಸೀಮಿತವಾಗುತ್ತಿದೆ. ಇದೆಲ್ಲದರ ಪರಿಣಾಮವಾಗಿ ಕವಿ, ಕಥೆಗಾರ, ಲೇಖಕ ಈಗ ಸುರಕ್ಷಿತ ನೆಲೆಯಲ್ಲಿದ್ದುಕೊಂಡು ಬರೆಯಬೇಕಾಗುತ್ತದೆ. ನಿರುಪದ್ರವಿಗಳಾಗಿ, ಅನುಕೂಲ ಸಿಂದು ಸಾಹಿತಿಗಳಾಗಿ, ಯಾವುದರ ಬಗ್ಗೆಯೂ ಟೀಕೆ ಮಾಡದೆ, ಜನಪ್ರಿಯ ವಿಷಯಗಳಿಗೆ ಒತ್ತುಕೊಡುತ್ತಾ, ಹೆಚ್ಚು ಜನರ ವಿಷಯಗಳಿಗೆ ಒತ್ತು ಕೊಡುತ್ತಾ, ಅಂದರಿಕಿ ಮಂಚುವಾಡು ಅನಂತಯ್ಯ (ಎಲ್ಲರಿಗೂ ಒಳ್ಳೆಯವನು ಅನಂತಯ್ಯ) ಅನಿಸಿಕೊಂಡು ಸ್ವಲ್ಪ ಬಾಳಿನ, ಮನಸಿನ ತಹ ತಹಗಳ, ತತ್ವಶಾಸ್ತ್ರೀಯವಾಗಿ, ರಾಜಕೀಯವಾಗಿ ಬರೆದರೂ ಕಾಂಟ್ರವರ್ಸಿ ಆಗದ, ಕವನ ಕಥೆಗಳನ್ನು ಬರೆಯುತ್ತಿದ್ದಾರೆ.

ಭಿನ್ನವಾಗಿ ಬರೆಯುವವರು ಅಲ್ಲೋ ಇಲ್ಲೋ ಇದ್ದರೂ, ಅವರೂ ಸಹ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ, ಎಲ್ಲಿಯೂ ಗುರುತಿಸಿಕೊಳ್ಳದೆ, ಇದೂ ಸರಿ, ಅದೂ ಸರಿ ಎಂಬಂತೆ ಬರೆಯುತ್ತಿದ್ದಾರೆ.

ಸಾಹಿತಿಗಳಿಗೆ, ಲೇಖಕರಿಗೆ ಭಯ ಇರಬಾರದು ಎಂದು ಹೇಳುತ್ತಾರೆ, ಆದರೆ ಲೇಖಕರಿಗೂ, ಪತ್ನಿ, ಮಕ್ಕಳು, ಕುಟುಂಬ, ಬದುಕಲು ಒಂದು ಕೆಲಸ ಇರುತ್ತದೆ. ತಮ್ಮ ಖಯಾಲಿಗೋ, ಸಾಮಾಜಿಕ ಜವಾಬ್ದಾರಿಯಿಂದಲೋ, ಸಮಾಜಕ್ಕೆ ತನ್ನದೊಂದು ಅಳಿಲ ಸೇವೆ ಎಂದೋ ಪ್ರಖ್ಯಾತಗೊಳ್ಳಲೋ ಬರೆಯುವರಿಗೆ ಸ್ವಲ್ಪ ಭಯ ಇದ್ದೇ ಇರುತ್ತದೆ. ಏಕೆಂದರೆ ಸಹಾಯ ಮಾಡಿಸಿಕೊಂಡವರೇ ಎದುರು ತಿರುಗುವುದು, ಹಿಂದೆ ಕೆಟ್ಟದಾಗಿ ಆಡಿಕೊಳ್ಳುವುದು, ಕಷ್ಟಕೊಡುವುದು ಹೀಗೆ ಅನೇಕ ರೀತಿಯಲ್ಲಿ ನೋವು ಕೊಡುವುದರಿಂದ, ನನಗ್ಯಾಕೆ ಇಲ್ಲದ ಉಸಾಬರಿ ಎಂದುಕೊಳ್ಳುವವರು ಸಂಖ್ಯೆ ಹೆಚ್ಚಾಗುತ್ತಿದೆ. ಗಲಾಟೆ ಶುರುವಾದಮೇಲೆ ಇರಲಾಗದೆ ಇರುವೆ ಬಿಟ್ಟುಕೊಂಡ ಎಂದು ಸಾಹಿತಿಗಳನ್ನು ಅಣಕಿಸುವ ಮಾತುಗಳು ಕೇಳಿಬರುತ್ತವೆ.

ಏನು ಮಾಡುವುದು? ಬರೆಯುವುದು ಮನಸಿಗೆ ಅನಿವಾರ್ಯವಾಗಿರುವುದರಿಂದ ಬರೆಯಬೇಕಾಗುತ್ತದೆ. ಸರಿ ಅನಿಸಿದ್ದನ್ನು ಬರೆಯುವುದು, ಇಷ್ಟಪಡುವವರನ್ನು, ಇಷ್ಟಪಡದವರನ್ನೂ ಸಮಾನವಾಗಿ ಪ್ರೀತಿಸುವುದೊಂದೇ ಮಾರ್ಗ. ಬರಹ ಪ್ರಕಟಗೊಂಡ ಮೇಲೆ ಅದು ಬರಹಗಾರನ ಬರಹವಲ್ಲ, ಅದು ಓದುಗನದು.