ಕವಿ, ನಾಟಕಕಾರ ಎಚ್.ಎಸ್.ಶಿವಪ್ರಕಾಶರು 15-06-1954ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಪ್ರಸಿದ್ಧ ಸಾಹಿತಿಗಳು ಮತ್ತು ಕನ್ನಡ ಪರಿಷತ್ತಿನ ಅಧ್ಯಕ್ಷರು ಆಗಿದ್ದ ಶಿವಮೂರ್ತಿ ಶಾಸ್ತ್ರಿಗಳು. ನವದೆಹಲಿಯ ಜೆ.ಎನ್.ಯು ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಈಸ್ತೆಟಿಕ್ಸ್‌ನಲ್ಲಿ ಪ್ರೋಫೆಸರ್ ಆಗಿ ಕಾರ್ಯ ನಿರ್ವಹಿಸಿ ಸಧ್ಯ ನಿವೃತ್ತರಾಗಿದ್ದಾರೆ. ಮಹಾಚೈತ್ರ, ಸುಲ್ತಾನ್ ಟಿಪ್ಪು, ಮಂಟೇಸ್ವಾಮಿ, ಮಾದರಿ ಮಾದಯ್ಯ, ಮದುವೆ ಹೆಣ್ಣು (ಪ್ರಮುಖ ನಾಟಕಗಳು). ಮಳೆ ಬಿದ್ದ ನೆಲದಲ್ಲ, ಮಿಲರೇಪ, ಅಣುಕ್ಷಣ ಚರಿತೆ, ಸೂರ್ಯಜಲ, ಮಳೆಯೇ ಮಂಟಪ (ಕವನ ಸಂಕಲನಗಳು) ಕಿಂಗ್ ಲಿಯರ್‌ (ಅನುವಾದಿತ ಕೃತಿ) ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ಕಾವ್ಯ ಮಾಲೆಯ ಕಾವ್ಯ ಕುಸುಮಗಳು ಸರಣಿಯಲ್ಲಿ ಅವರು ಬರೆದ ‘ಮರವಾಗದವರು’ ಕವಿತೆ ಇಲ್ಲಿದೆ

 

ಮರವಾಗದವರು

ನೀವು ಕುಂತಕುಂತ ಕಡೆಯಲ್ಲಿ
ಅರಳಿ ಆಲ ಮಾವು ಬೇವು
ಬೇರಿಳಿಸಿ ಕೊಂಬೆ ಚಿಮ್ಮುವುವು
ಬಿಸಿಲ ಹಾದಿಯ ದಣಿವಿಗಾಸರೆಯಾಗಿ
ಇನಿಗನಸುಗಳಿಗೆ ಆಗರವಾಗಿ
ನೀವು ನಿಂತನಿಂತ ಕಡೆಯಲ್ಲಿ
ಮೊಳೆಯುವುವು ದೇವಮೂರ್ತಿಗಳು ಶಿಲೆಯಲ್ಲಿ;
ಆ ಮೂರ್ತಿಗಳ ಪೀಠವೇ ಕೇಂದ್ರ ಎಲ್ಲಕ್ಕೂ;
ಆ ಬಳಿಕ ಸುತ್ತ ಹಬ್ಬಿಕೊಳ್ಳುವ
ಮಂದಿರದ ಬ್ರಹ್ಮಾಂಡ ಮಾದರಿಗಳು

ನೀವು ಅಂದ ಅಂದ ನುಡಿಯೆಲ್ಲ
ಕಾಳುಗಟ್ಟುವುದು ನಮ್ಮ ಉಡಿಯಲ್ಲಿ
ಮುಕ್ಕುವೆವು ಅಬಾಲವೃದ್ಧರಾದಿಯಾಗಿ
ಹಗಲಿರುಳ ಚಕ್ರ ತಿರುಗಿಸುವಾಗ

ಆದರೂ ನೀವು
ಮರವಾಗಲಿಲ್ಲ ಕುಂತ ಕಡೆಯಲ್ಲಿ
ಸಿಡಿಲಫಲ ಬೇಕೆಂದು
ಶಿಲೆಯಾಗಲಿಲ್ಲ ನಿಂತಕಡೆಯಲ್ಲಿ
ಬಯಲುಮನೆ ಬೇಕೆಂದು
ಸಿಗಿಹಾಕಿಕೊಂಡಿಲ್ಲ ಅಂದ ನುಡಿಯಲ್ಲಿ
ಬರಿ ತಿರುಳು ಬೇಕೆಂದು

ಎಲ್ಲವೂ ಆಗಬೇಕೆಂದು
ಏನೂ ಆಗದ ಹಾಗೆ
ಎದ್ದು ನಡೆದಿದ್ದೀರಿ
ಕಂತೆ ಒಗೆದಿದ್ದೀರಿ.
ಜೀವ ಜೀವಾಳವಾಗಿ