ಅಬ್ಬನ ಬ್ಯಾಟರಿ ಟಾರ್ಚು ತೆಗೆದು ಬಾಗಿಲ ಸಂದಿಗೆ ಬಿಟ್ಟೆ. ಬೆಳಕು ಬಿದ್ದೊಡನೆ ಕಂದು ಬಣ್ಣದ ಹಾವೊಂದು ಬೆಳಕಿನೆಡೆಗೆ ದುತ್ತನೆ ಹಾರಿ ಬಿತ್ತು. ಗಾಬರಿಯಿಂದ ಉಮ್ಮನನ್ನು ಕರೆದೆ. ಅಡುಗೆ ಮಾಡುತ್ತಿದ್ದ ಉಮ್ಮ ಓಡೋಡಿ ಬಂದವರೇ, ಹಾವನ್ನು ನೋಡುತ್ತಾ “ಓಹ್ ಬಾರಿ ಸಣ್ಣದು, ಕನ್ನಡಿ ಹಾವು. ನಿನ್ನ ಹಾಳಾಗಿ ಹೋದ ಕಪ್ಪೆಯ ಮೇಲಿನ ಕನಿಕರದಿಂದಲೇ ಅದು ಇಲ್ಲೇ ಬೇಟೆಗೆ ಬಂದು ಕುಳಿತಿದೆ, ಇನ್ನು ಈ ಕಪ್ಪೆಯ ಮೇಲೆ ವಕಾಲತ್ತು ವಹಿಸಿಕೊಂಡು ಬಾ….” ಎನ್ನುತ್ತಾ ಹಾವನ್ನು ಮನೆಯಿಂದ ಹೊರ ಹಾಕುವ ಪ್ರಯತ್ನಕ್ಕೆ ತೊಡಗಿಸಿಕೊಂಡರು. ನಾನು ಬೆಪ್ಪಾಗಿ ಕಪ್ಪೆಯೆಡೆಗೂ ಹಾವಿನೆಡೆಗೂ ಸುಮ್ಮನೆ ನೋಡುತ್ತಾ ನಿಂತೆ.
ಮುನವ್ವರ್ ಜೋಗಿಬೆಟ್ಟು ಬರೆಯುವ ಪರಿಸರ ಕಥನ

 

ಮಳೆಗಾಲದ ಆದ್ಯ ದಿನಗಳೆಂದರೆ ಪ್ರಕೃತಿ ಬೆರಗುಗಣ್ಣಿನ ಮಕ್ಕಳಿಗೆ ಇರಿಸಿದ ಹಬ್ಬ. ಆಗಷ್ಟೆ ಕೆರೆ ಹಳ್ಳಗಳು ತುಂಬಿಕೊಳ್ಳುತ್ತವೆಯಷ್ಟೆ, ರಸ್ತೆಯ ಇಕ್ಕೆಲಗಳಲ್ಲಿ ನೀರೇ ನೀರು. ಪರಿಸರದ ನೈಜ ಸೌಂದರ್ಯ ಸವಿಯಬೇಕಾದರೆ ಮಳೆಗಾಲವೇ ಬರಬೇಕು. ಒಮ್ಮೊಮ್ಮೆ ಕಾಮನಬಿಲ್ಲು, ಬಿಸಿಲು- ಮಳೆ, ನವಿಲಿನ ನಾಟ್ಯ ಎಲ್ಲವನ್ನೂ ಕಣ್ತುಂಬಿಕೊಳ್ಳಬೇಕಾದರೆ ಮಳೆ ಬಿಟ್ಟು ತಿಳಿಯಾದಾಗ ನಗು ನಗುತ್ತಾ ಹಲ್ಲು ಬಿಡುವ ಸೂರ್ಯನ ಸಮಯ ನೋಡಿಕೊಂಡು ತಿರುಗಾಡಬೇಕು. ಹರಿವ ನೀರಲ್ಲಿ ಮೀನು ಹಿಡಿಯಬೇಕು. ಸೊಳ್ಳೆ, ನುಸಿ, ಉಣುಗು, ಇಂಬಳಗಳ ಕಾಟ ಸಹ್ಯವೆನಿಸಿದರೆ ಇಂತಹ ಮಳೆಗಾಲ ಅಪರಂಜಿ. ಇಲ್ಲದಿದ್ದರೆ ಹೊದ್ದು ಮಲಗುವ ಸೋಮಾರಿಯಾಗುವುದೇ ಲೇಸು.

ನಾವು ದಿನವೂ ಮೀನು ಹಿಡಿಯುವ ಕಡೆಯೊಂದು ಗುಂಡಿ ಇದೆ. ಮಳೆ ನೀರು ರಭಸವಾಗಿ ಹರಿಯುವುದರಿಂದ ಸಾಗುವಾಣಿ ಮರದ ಬುಡವೊಂದರಲ್ಲಿ ಆ ಕೊರಕಲು ಬಹಳ ಹಿಂದೆಯೇ ಉಗಮವಾಗಿತ್ತು. ನಿತ್ಯವೂ ಅಲ್ಲಿ ಮೀನು ಇರುತ್ತಿದ್ದುದರಿಂದ ನಾವು ಮೀನು ಗುಂಡಿ ಕರೆಯುತ್ತಿದ್ದೆವು. ನಾವು ಮೀನು ಹಿಡಿಯಲು ಬಾರದ ಸಮಯದಲ್ಲಿ ನೀರು ಕಾಗೆಗಳಿಗೆ ಮೀನು ಗುಂಡಿ ಫೈ ಸ್ಟಾರ್ ಹೋಟೆಲ್. ಅದು ಕೊಬ್ಬಿದ ಉಬರ್ ಮೀನುಗಳನ್ನು ಸ್ವಾಹ ಮಾಡುತ್ತಿರುವುದು ನೋಡಿದರೆ ಗೆಳೆಯನ ಪಾರ್ಟಿಗಾಗಿ ಬೆಳಗ್ಗಿನಿಂದಲೇ ಹಸಿದು ಕುಳಿತು ಹೊಕ್ಕುಳ ಮಣ್ಣು ಬಿರಿಯುವಷ್ಟು ತಿನ್ನುವವರ ನೆನಪಾಗುವುದುಂಟು. ಅಲ್ಲಿ ಸುಮಾರು ಬಾರಿ ನಾನು ನೀರು ಹಾವಿರುವುದನ್ನು ನೋಡಿದ್ದೇನೆ. ಆ ದಿನ ನಾನು ಅದರ ಹರಿವಿನ ಜಾಡು ಹಿಡಿಯುತ್ತಾ ಹೊರಟಿದ್ದೆ. ನಾನಾ ಭಾಗಗಳಿಂದ ನೀರು ಸೇರುವುದರಿಂದ ಮಳೆಗಾಲದಲ್ಲಿ ಅದು ಶ್ರೀಮಂತ ಝರಿ. ಮಸೀದಿ ಬಳಿಯ ಸ್ನಾನದ ಕೆರೆಯು ಮಳೆಗಾಲದ ಮಧ್ಯದಲ್ಲಿ ತುಂಬಿ ಹರಿಯುವುದಿದೆ. ಆ ಕೆರೆ ಬಹಳ ಹಿಂದಿನದ್ದು. ನೀರಿಳಿದ ದಿನಗಳಲ್ಲಿ ನಾನು ಕೆರೆ ಮೆಟ್ಟಿಲುಗಳನ್ನು ನೀವೆಣಿಸಿದರೆ ೨೫ ಕ್ಕೂ ಹೆಚ್ಚಿದೆ. ಸಾಮಾನ್ಯವಾಗಿ ಅವುಗಳು ತುಂಬಿ ಹರಿವ ದಿನಗಳಲ್ಲಿ ಅದು ಕೊನೆಯ ಮೆಟ್ಟಿಲವರೆಗೂ ನೀರು ನಿಂತು, ಕೊನೆಯ ಮೆಟ್ಟಿಲಲ್ಲಿ ತೆರೆದಿಟ್ಟ ಕವಾಟದಲ್ಲಿ ನೀರು ಹರಿದು ಈ ಝರಿಯ ಕಡೆಗೆ ಹರಿಯುತ್ತದೆ.

ನಾನು ಆ ಕೆರೆಯನ್ನು ದಾಟುವಲ್ಲಿ ಸ್ವಲ್ಪ ಒಳದಾರಿ ಬಳಸಿಕೊಂಡು ನಡೆದು ಬರುತ್ತಿರಬೇಕಾದರೆ, ಭೂಮಿಯೊಳಗಿನಿಂದ ತಲೆಯೊಂದು ಹೊರಗಿಣುಕುತ್ತಿತ್ತು. ಒಂದೇ ನೋಟಕ್ಕೆ ಯಾವುದೋ ಸರೀಸೃಪವಿರಬೇಕೆಂದು ಗಾಬರಿಗೆ ಬಿದ್ದೆ. ಕುತೂಹಲ ತಾಳಲಾಗದೆ ಅಲ್ಲೇ ನಿಂತೆ. “ಮಣ್ಣಿನೊಳಗೆ ಕುಳಿತು ಕಣ್ಣುಗಳನ್ನು ಮಾತ್ರ ಹೊರಹಾಕಿಕೊಂಡು ಧ್ಯಾನ ಮಾಡುವ ಜೀವಿ ಯಾವುದಪ್ಪಾ?” ಎಂದು ಸುಮಾರು ಬಾರಿ ಯೋಚಿಸಿದೆ. ನನ್ನ ತಲೆಗೆ ಯಾವ ಪ್ರಾಣಿಯ ಬಗ್ಗೆಯೂ ನೆನಪೇ ಬಾರಲಿಲ್ಲ. ಯಾವುದೋ ಹಾವೇ ಇರಬೇಕೆಂದು ಅಂದಾಜು ಮಾಡಿ ಕೋಲೊಂದರ ಸಹಾಯದಿಂದ ಮಣ್ಣನ್ನು ಸಡಿಲಮಾಡಿದೆ. ಅಷ್ಟರಲ್ಲೇ ಚಂಗನೆ ನೆಗೆದ ಕಪ್ಪೆ “ಥತ್ ಹಾಳದವನೇ,ನಿನ್ನ ಕೂತೂಹಲಕ್ಕಿಷ್ಟು ಮಣ್ಣು ಹಾಕ. ನನ್ನನ್ನು ನಿಶ್ಚಿಂತೆಯಿಂದ ನಿದ್ದೆ ಮಾಡಲು ಬಿಡುವುದಿಲ್ಲವಲ್ಲಾ?” ಎಂದು ಕೋಪದಲ್ಲೇ ಬೈದಂತೆ ಜಿಗಿಯುತ್ತಾ ಪರಾರಿ ಕಿತ್ತಿತ್ತು.

ಅಯ್ಯೋ, ಕಪ್ಪೆಗಳಿಗೂ ಮಣ್ಣಿನೊಳಗೆ ಅಂತರ್ಧಾನವಾಗಿ ಜೀವಿಸುವ ಕಲೆ ತಿಳಿದಿದೆಯೇ ಎಂದು ಒಂದು ಕ್ಷಣ ಬೆರಗಾದೆ. ಮಳೆಗಾಲದಲ್ಲಿ ಕೊನೆಯ ಬೆಂಚಿನ ಹುಡುಗರಂತೆ ಬೊಬ್ಬೆ ಹಾಕುತ್ತಿರುವ ಕಪ್ಪೆಗಳು ಮಳೆ ನಿಂತೊಡನೆ ಎಲ್ಲಿಗೋ ಗುಳೆ ಹೊರಟು ಬಿಡುತ್ತವೆ. ಅವುಗಳೂ ಕ್ಯಾಟ್ ಫಿಶ್ ಗಳಂತೆ ಮಣ್ಣಿನೊಳಗೆ ಮಳೆ ಬರುವ ದಿನಗಳವರೆಗೂ ಕಾಯುತ್ತಾ ಕುಳಿತಿರುತ್ತವೆಯೇನೋ ಎಂದು ಲೆಕ್ಕ ಹಾಕಿದೆ. ಅಮೇಝಾನ್ ಕಾಡಿನಲ್ಲಿ ಮನುಷ್ಯಗಾತ್ರದಷ್ಟು ದೊಡ್ಡ ಕಪ್ಪೆಗಳಿರುವ ಬಗ್ಗೆ ವರದಿಯಿದೆ. ಕೆಲವೊಂದು ವಿಷಪೂರಿತ ಕಪ್ಪೆಗಳ ಪ್ರಬೇಧಗಳನ್ನು ಆದಿವಾಸಿಗಳು ತಮ್ಮ ಬಾಣಕ್ಕೆ ಪೂಸಿ ಬೇಟೆಯಾಡುತ್ತಾರೆಂಬುವ ಉಲ್ಲೇಖಗಳನ್ನು ಕಾಣಬಹುದು. ಅಷ್ಟಕ್ಕೂ ಕಪ್ಪೆ ಎಂಬುವುದು ಒಂದು ವಿಚಿತ್ರ ಜಗತ್ತು. ಕುಪ್ಪಳಿಸುತ್ತಲೇ ಸಾಗುವ ಇವುಗಳು ಉಭಯವಾಸಿಗಳು. ಇವುಗಳನ್ನು ಆಹಾರಕ್ಕಾಗಿ ಕೆಲವೊಂದು ರಾಷ್ಟ್ರಗಳಲ್ಲಿ ಬಳಸುತ್ತಾರೆ.

ಕಪ್ಪೆ ಹಾರಿ ಹೋದ ಗುಂಗಿನಲ್ಲಿ ಕೆರೆಯ ಬಳಿ ಬರಬೇಕಾದರೆ ನೀರು ಪ್ರಶಾಂತವಾಗಿತ್ತು. ಯಾವ ಅಲೆಯೂ ಎಬ್ಬಿಸದೆ ಯಥಾ ಸ್ಥಿತಿಯಲ್ಲಿ ಕೆರೆಯು ಪರಿಸರದ ಮೌನಕ್ಕೆ ತಲೆದೂಗಿದಂತೆ ಭಾಸವಾಗುತ್ತಿತ್ತು. ನಾನು ಕೆರೆಯ ಸೌಂದರ್ಯವನ್ನು ನೋಡುತ್ತಾ ನಿಂತೆ. ಅಷ್ಟರಲ್ಲಿ ನೀರಿನ ಪೈಪ್ ಬಳಿ ಸರ್ಕಾರದ ಬೊಕ್ಕಸ ತಿಂದು ಹೊಟ್ಟೆ ಬೆಳೆಸಿಕೊಂಡ ಟೊಣಪ ರಾಜಕಾರಣಿಯಂತೆ ಗೋಕುರು ಕಪ್ಪೆ ಪ್ರತ್ಯಕ್ಷಗೊಂಡಿತು. ನಮಗೆಲ್ಲರಿಗೂ ಆ ಕಪ್ಪೆಯ ಮೇಲೆ ಅಸಾಧ್ಯ ಸಿಟ್ಟು. ‘ನಾವು ತೊರೆಯಲ್ಲಿ ಹಿಡಿದ ಸಣ್ಣ ಮೀನುಗಳೆಲ್ಲಾ ಕೆರೆಗೆ ಹಾಕಿದರೆ ಇದೇ ಕಪ್ಪೆ ತಿಂದು ಹಾಕುತ್ತದೆ’ ಯೆನ್ನುತ್ತದೆಂದು ಯಾರೋ ಚಾಡಿ ಹೇಳಿದ್ದರಿಂದ ನಾವೂ ಅದನ್ನೇ ನಂಬಿದ್ದೆವು. ಅಷ್ಟರಲ್ಲೇ ಅಲ್ಲೇ ಹಾರುತ್ತಿದ್ದ ಏರೋಪ್ಲೇನ್ ಚಿಟ್ಟೆಯೊಂದು ಅದರ ಹತ್ತಿರ ಬಂತು. ಮಿಂಚಿನ ವೇಗದ ಕ್ಷೇತ್ರ ರಕ್ಷಕ ಚೆಂಡನ್ನು ಕ್ಯಾಚ್ ತೆಗೆದುಕೊಳ್ಳುವಂತೆ ಕಪ್ಪೆ ಗಬಕ್ಕನೇ ಹಿಡಿದೇ ಬಿಟ್ಟಿತು.

ಕೋಪ ಎಲ್ಲಿತ್ತೋ ಗೊತ್ತಿಲ್ಲ, ಕಲ್ಲೆತ್ತಿ ಕಪ್ಪೆಯ ಮೇಲೆ ಬೀಳುವಂತೆ ಗುರಿಯಿಟ್ಟು ಎಸೆದೆ. ಕಲ್ಲು ಗುರಿ ತಪ್ಪಿ ಪ್ಲಾಸ್ಟಿಕ್ ಪೈಪ್ ಮೇಲೆ ಬಿದ್ದು ಟಪ್ಪೆಂದು ಸದ್ದು ಹೊರಡಿಸಿತು. ಪುಟಿದ ಕಲ್ಲು ನೇರ ನೀರಿಗೆ ಬಿದ್ದ ಮರುಕ್ಷಣವೇ ಕೆರೆಯ ಮೌನ ಧ್ಯಾನಕ್ಕೆ ಭಂಗವಾಗಿರಬೇಕು. ನೀರಲ್ಲಿ ಅಲೆಯೆದ್ದಿತು, ಏನೂ ಆಗಲೇ ಇಲ್ಲವೆಂಬಂತೆ ತೀರ್ಥ ಸ್ನಾನಕ್ಕಿಳಿವ ಸ್ವಾಮಿಗಳಂತೆ ‘ಇನ್ನೊಮ್ಮೆ ನಿನ್ನ ಕಣ್ಣಿಗೆ ಬೀಳಲಾರೆ’ ಎಂದು ಅಣಕಿಸಿದಂತೆ ನನ್ನೆಡೆಗೆ ನೋಡಿ ಕಪ್ಪೆಯೂ ಮುಳುಗಿತು. ಅಷ್ಟರಲ್ಲೇ ನೀರು ಹಾವು ಎಲ್ಲಿತ್ತೋ ಗೊತ್ತಿಲ್ಲ, ಹುಲ್ಲಿನ ಮರೆಯಿಂದ ವಕ್ಕರಿಸಿತು. ಅಲ್ಲೇ ಮೂಲೆಯಲ್ಲಿದ್ದ ನೀರಿನ ಅಲೆಗೆ ಕಾರಣ ಹುಡುಕುತ್ತಾ ನಿಂತಿದ್ದ ಸಣ್ಣ ಕಪ್ಪೆಯೊಂದನ್ನು ರಪಕ್ಕನೆ ಹಿಡಿಯಿತು. ಕಪ್ಪೆ ಮೆಲ್ಲಗೆ ಪ್ರಾಣೋತ್ಕರಣದಿಂದ ಚೀರಿದ್ದು ಕೇಳಿಸಿತಷ್ಟೇ, ನೀರು ಹಾವು ಸ್ವಲ್ಪವೂ ಕನಿಕರಿಸದೆ ಪ್ಲಾಸ್ಟಿಕ್ ಲಕೋಟೆಗೆ ತುಂಬಿಸಿದಂತೆ ಆ ಕಪ್ಪೆಯನ್ನು ಗಬಕ್ಕನೆ ನುಂಗಿ ಹಾಕಿತು. ಎಷ್ಟೊಂದು ಸಣ್ಣ ಬದುಕು. ‘ಮುಗಿದೇ ಹೋಯಿತಲ್ವಾ’ ಎಂದು ಕಪ್ಪೆಯ ಮೇಲೂ ಕನಿಕರ ಬಂತು. ಹಾವಿನ ಮೇಲೂ ಗೋಕುರು ಕಪ್ಪೆಯ ಮೇಲಿದ್ದಷ್ಟೇ ದ್ವೇಷ ಇತ್ತು. ಇನ್ನೊಂದು ಕಲ್ಲೆತ್ತಿ ಎಸೆಯಲು ಮನಸ್ಸಾಯಿತಾದರೂ ಕೈ ಕಟ್ಟಿತು. ಹಿಂದೆ ಯಾರೋ ಮಕ್ಕಳು ಹೀಗೆ ಕಲ್ಲೆಸೆದು ಪೈಪು ಒಡೆದು ಹಾಕಿದ್ದಕ್ಕಾಗಿ ಲಾಕಪ್ಪಿನಲ್ಲಿ ಸಿಗಬೇಕಾಗಿದ್ದ ಎಲ್ಲಾ ಶಿಕ್ಷೆಗಳೂ ಮಸೀದಿಯ ಗುರುಗಳಿಂದ ಸಿಕ್ಕಿದ್ದು ನೆನಪಾಗಿದ್ದೇ ಇದಕ್ಕೆ ಕಾರಣ!

ಕಪ್ಪೆ ಹಾರಿ ಹೋದ ಗುಂಗಿನಲ್ಲಿ ಕೆರೆಯ ಬಳಿ ಬರಬೇಕಾದರೆ ನೀರು ಪ್ರಶಾಂತವಾಗಿತ್ತು. ಯಾವ ಅಲೆಯೂ ಎಬ್ಬಿಸದೆ ಯಥಾ ಸ್ಥಿತಿಯಲ್ಲಿ ಕೆರೆಯು ಪರಿಸರದ ಮೌನಕ್ಕೆ ತಲೆದೂಗಿದಂತೆ ಭಾಸವಾಗುತ್ತಿತ್ತು. ನಾನು ಕೆರೆಯ ಸೌಂದರ್ಯವನ್ನು ನೋಡುತ್ತಾ ನಿಂತೆ. ಅಷ್ಟರಲ್ಲಿ ನೀರಿನ ಪೈಪ್ ಬಳಿ ಸರ್ಕಾರದ ಬೊಕ್ಕಸ ತಿಂದು ಹೊಟ್ಟೆ ಬೆಳೆಸಿಕೊಂಡ ಟೊಣಪ ರಾಜಕಾರಣಿಯಂತೆ ಗೋಕುರು ಕಪ್ಪೆ ಪ್ರತ್ಯಕ್ಷಗೊಂಡಿತು.

ಆಗೆಲ್ಲಾ ನಮಗೆ ಕಪ್ಪೆ ಕೊಲ್ಲಬಾರದೆಂದು ಹಿರಿಯರು ಹೇಳುತ್ತಿದ್ದರು. ಹಾಗೇನಾದರೂ ಕೊಂದರೆ ಅದರ ಪ್ರೇತವು ಉಣ್ಣಿಯಾಗಿ( ಸಿಡುಬು) ಬಂದು ನಮ್ಮನ್ನು ಕಾಡುವುದು ಎಂಬ ನಂಬಿಕೆ ಬೇರೆ. ಜೊತೆಗೆ ಅವುಗಳ ಮೂತ್ರ ತಾಗಿದ್ದಲ್ಲಿ ಅಂತಹ ಬೊಕ್ಕೆಯೇಳುವುದೆಂದು ತೀವ್ರವಾಗಿ ನಂಬಿಬಿಟ್ಟಿದ್ದೆವು. ಅದರೆ ಇವೆರಡರಲ್ಲೂ ಯಾವುದು ಸರಿ, ಯಾವುದೂ ತಪ್ಪೂ ಎಂದು ಇದೂವರೆಗೂ ಗೊತ್ತಿಲ್ಲ. ಆದರೂ ನಾವು ಪಟ್ಟು ಬಿಡದೆ ಕಪ್ಪೆ ಕೊಲ್ಲುವುದು ನಿಲ್ಲಿಸಲೂ ಇಲ್ಲ. ಆ ದಿನಗಳಲ್ಲಿ ನಿಂತ ನೀರಿನಲ್ಲಿ ಹೇರಳವಾಗಿರುತ್ತಿದ್ದ ಕಪ್ಪೆಯ ಲಾರ್ವಾಗಳನ್ನು ಮೀನೆಂದೇ ಸುಮಾರು ಕಾಲ ನಂಬಿದ್ದೆವು. ಹಿಡಿದು ತಂದು ಗಾಜಿನ ಬಾಟಲಿನಲ್ಲಿ ಸಾಕುವ ಮೂರ್ಖತನವನ್ನೂ ಮಾಡಿದ್ದೆವು.

ವರ್ಷಗಳ ಹಿಂದೆ ಸಮಾನ ಮನಸ್ಕ ಗೆಳೆಯರೆಲ್ಲಾ ಒಂದು ದಿನ ಯಾರದಾದರೂ ಮನೆಯಲ್ಲಿ ಒಂದುಗೂಡಬೇಕೆಂದು ತೀರ್ಮಾನ ಮಾಡಿದ್ದೆವು. ಹಾಗೆಯೇ ಸ್ಥಳ ಗೊತ್ತುಪಡಿಸಿ ಆತ್ಮೀಯ ಗೆಳೆಯ ಕವಿಯೊಬ್ಬನ ಮನೆಯಲ್ಲಿ ರಾತ್ರಿ ತಂಗಿದೆವು. ಅದೊಂದು ಅವಿಸ್ಮರಣೀಯ ದಿನ. ಹುಣ್ಣಿಮೆಯ ರಾತ್ರಿಯದು, ಮನೆಯವರೆಲ್ಲಾ ನಮ್ಮ ಹೊಟ್ಟೆಗೆ ಸಾಕಾಗುವಷ್ಟು ಜರಿದು ಹಾಕಿ, ಇವರ ಮಾತು ಕೇಳಿದರೆ ನಮ್ಮ ದಿನಚರಿ ಸಾಗದೆಂದೆನಿಸಿ, ಹೊರಗೆ ಮಾತಾನಾಡಿಕೊಂಡೇ ಬಿದ್ದಿರಲೆಂದು ಚಾವಡಿಯಲ್ಲಿ ಐದು ಜನರಿಗೆ ಬೇಕಾಗುವಷ್ಟು ಚಾಪೆ ಹಾಸಿ ಒಳಗೆ ಮಲಗಿದ್ದರು. ಆ ರಾತ್ರಿಯಲ್ಲಿ ಮಾತು ಕತೆ ಶುರುವಾಯಿತು. ವಿಷಯ ತೇಜಸ್ವಿಯಿಂದ ಪರಿಸರದ ಕೌತುಕ ಜಗತ್ತಿನೆಡೆಗೆ ತಿರುಗಿತು. ಹಾಗೇಯೇ ಬೈಕಾಲ್ ಸರೋವರಕ್ಕೂ ಮುಟ್ಟಿತು.

ಅಲ್ಲಿರುವ ವಿಚಿತ್ರ ಮೀನಿನ ಬಗ್ಗೆಯೂ ಚರ್ಚೆಯಾಯಿತು. ಕುತೂಹಲದ ಏರಿಳಿತದ ಮಧ್ಯೆ ಮನೆಯವರ ನಿದ್ದೆಗೆ ಭಂಗ ಬಾರದೆಂದು ಹೊರಾಂಗಣದಲ್ಲಿ ಬಂದು ಕುಳಿತು ಮಾತು ಮುಂದುವರಿಸಿದೆವು. ನಮ್ಮ ಜೊತೆಗಿದ್ದ ವೈದ್ಯ ಗೆಳೆಯರೊಬ್ಬ ಕಡಂಬಳ ಮತ್ತು ತೋಳ ಹಾವಿನ ಬಗ್ಗೆ ಚರ್ಚೆ ಮಾಡಲಾರಂಭಿಸಿದರು. ಕಡಂಬಳ ಮತ್ತು ತೋಳ ಹಾವುಗಳು ಸಾಮಾನ್ಯವಾಗಿ ಒಂದೇ ತೆರನಾದ ಹಾವುಗಳು. ಕಪ್ಪು ಬಿಳುಪು ಪಟ್ಟೆಗಳನ್ನು ಎರಡೂ ಹಾವುಗಳಲ್ಲಿರುವುದರಿಂದ ಎರಡನ್ನೂ ಪ್ರತ್ಯೇಕಿಸಿ ಗುರ್ತಿಸುವುದು ಅಷ್ಟೊಂದು ಸುಲಭವಲ್ಲ. ಕಡಂಬಳ ವಿಷಕಾರಿ, ಆದರೆ ತೋಳ ಹಾವು ನಿರುಪದ್ರವಿ. ಜನರು ಈ ಜ್ಞಾನವಿಲ್ಲದೆ ತೋಳ ಹಾವನ್ನು ಕಡಂಬಳವೆಂದು ಭಾವಿಸಿ ಕೊಲ್ಲುತ್ತಾರೆ. ಈ ಎರಡೂ ಹಾವುಗಳ ಲಕ್ಷಣದ ಬಗ್ಗೆ ಚರ್ಚಿಸುತ್ತಿರಬೇಕಾದರೆ ಗಡಿಯಾರದ ಮುಳ್ಳು ಹನ್ನೆರಡರ ಮೇಲೆ ಬಿದ್ದು ಬಣ-ಬಣ ಸದ್ದು ಹೊರಡಿಸಿ ತನ್ನ ಸ್ವಾಸ್ಥತೆಯನ್ನು ತೋರಿಸಿಕೊಂಡಿತು. ಹೊರಗೆ ಜೀರುಂಡೆಯ ಸದ್ದು, ಅದರೊಂದಿಗೆ ಜೊತೆಗೆ ಕಪ್ಪೆಯೊಂದು ಜೋರಾಗಿ ಒದರಿಕೊಳ್ಳುತ್ತಿತ್ತು. ಗೆಳೆಯನೊಬ್ಬ ಒಳ್ಳೆಯ ಯಕ್ಷಗಾನ, ಭಾಗವತ ಮತ್ತು ತಾಳಮದ್ದಲೆ ಚೆನ್ನಾಗಿದೆ ಅಂದು ಬಿಟ್ಟ. ಅಷ್ಟರಲ್ಲೇ ಚರ್ಚೆ ವಿಷಯಾಂತರಗೊಂಡು ನಮ್ಮ ಮಾತು ಕಪ್ಪೆಯೆಡೆಗೆ ತಿರುಗಿತು.

ಸಾಮಾನ್ಯವಾಗಿ ಈ ಅರಚುವ ಕಪ್ಪೆಗಳ ಕುತ್ತಿಗೆಯ ಭಾಗದಲ್ಲಿ ಗುಳ್ಳೆಯಂತ ರಚನೆ ಇರುತ್ತವೆ. ಅವುಗಳು ಗಾಳಿ ಎಳೆದುಕೊಂಡು ಉಬ್ಬಿಸುತ್ತಾ, ಸಂಕುಚಿಸುತ್ತಾ ಶಬ್ಧ ಹೊರಡಿಸಿದರೆ ಅದು ಕರ್ಕಶವಾಗಿ ಕೇಳಿಸುವುದುಂಟು.

ಮಾತಿನ ಮಧ್ಯೆ ಪುಕ್ಕಲ ಗೆಳೆಯನೊಬ್ಬ ಅಂಗಳದಲ್ಲೇನೋ ಹರಿದಂತಾಗಿ “ಹಾವು ಹಾವು” ಎಂದು ಜೋರಾಗಿ ಬೊಬ್ಬಿಟ್ಟ. ಅವನ ಅನಿರೀಕ್ಷಿತ ಪ್ರತಿಕ್ರಿಯೆಗೆ ನಾವು ಭಯ ಭೀತರಾದೆವು. ಅಷ್ಟರಲ್ಲೇ ಹಾವಿನ ಬಗ್ಗೆ ಮಾಹಿತಿ ಕೊಡುತ್ತಿದ್ದ ವೈದ್ಯರು ಅಂಗಳಕ್ಕಿಳಿದರು. ಕೂಲಂಕುಶವಾಗಿ ಪರೀಕ್ಷಿಸಿದ ಬಳಿಕ ಅದನ್ನು “ಕಡಂಬಳ” ಎಂಬ ತೀರ್ಮಾನಕ್ಕೆ ಬಂದರು. ಅಷ್ಟರಲ್ಲಿ ನಮಗುಂಟಾದ ಖುಷಿ ಅಷ್ಟಿಷ್ಟಲ್ಲ. ನಾವು ಅದೇ ಹಾವಿನ ಬಗ್ಗೆ ಹೇಳಿಕೊಳ್ಳುತ್ತಿದ್ದರೆ ಅದೇ ಹಾವು ಅತಿಥಿಯಾಗಿ ನಾವಿದ್ದ ಸ್ಥಳಕ್ಕೆ ಭೇಟಿ ಕೊಡುವುದೆಂದರೆ ಸುಲಭದ ಮಾತೇ? ಹಾವು ಹುಣ್ಣಿಮೆ ರಾತ್ರಿಯಲ್ಲಿ ಬೇಟೆಯಾಡುತ್ತಾ ಸಮ ಗಾತ್ರದ ಕಪ್ಪೆಯೊಂದನ್ನು ನುಂಗಿದ್ದಿರಬೇಕು. ಹೊಟ್ಟೆ ಉಬ್ಬಿಸಿಕೊಂಡು ಗರ್ಭಿಣಿಯಂತೆ ಕಷ್ಟಪಟ್ಟು ಹರಿದಾಡಿಕೊಂಡು ಹೊರಟು ದೂರ ಹೋಯಿತು. ಅದು ಹೋಗುವಷ್ಟೂ ಹೊತ್ತು ನಾವು ಅದರತ್ತ ನೋಡುತ್ತಲೇ ನಿಂತೆವು.

ಮಸೀದಿಯ ಗುರುಗಳು ನಾವು ಹೇಳದ ಕೆಲಸ ಮಾಡದಿದ್ದರೆ “ಸಿಡಿಲು ಕಪ್ಪೆ”ಎಂದು ಬಯ್ಯುತ್ತಿದ್ದುದು ರೂಢಿ. ಬಹುಶಃ ಕಪ್ಪೆಯ ಹೆಡ್ಡತನ, ತಾನಿರುವ ಬಾವಿ ಮಾತ್ರ ಪ್ರಪಂಚವೆಂದು ಉದ್ದೇಶಿಸಿ ಬಯ್ಯುತ್ತಿದ್ದಿರಬೇಕು. ಇತ್ತೀಚೆಗೆ ಕೃಪಾಕರ ಸೇನಾನಿಯವರ ಪುಸ್ತಕ ಓದುತ್ತಿರಬೇಕಾದರೆ ಮರ ಕಪ್ಪೆಯ ಪ್ರಸ್ತಾಪವೊಂದನ್ನು ಓದಿದೆ. ದಿನಾಲೂ ಮನೆಗೆ ಬರುತ್ತಿದ್ದ ಕಪ್ಪೆಯೊಂದರ ಚಲವಲನದ ಬಗ್ಗೆ ಅವರಿಟ್ಟ ಕೂಲಂಕುಶವಾದ ವರದಿಯದು. ಅನುದಿನವೂ ಮನೆಯವರ ಆಗು ಹೋಗಿಗೆ ಸ್ಪಂದಿಸುತ್ತಾ ಕಪ್ಪೆಯೊಂದು ಮನೆಯಲ್ಲಿಯೇ ರಾತ್ರಿ ತಂಗುತ್ತಿತ್ತಂತೆ. ಆದರೆ ಅಚಾನಕ್ಕಾಗಿ ಮನೆಗೆ ಬಂದ ಅತಿಥಿಯೋರ್ವರ ಫಲದಿಂದ ಅವರ ಮನೆಯಲ್ಲಿನ ಚಟುವಟಿಕೆ ಹೆಚ್ಚಾದಂತೆ ಬರುವುದನ್ನೇ ನಿಲ್ಲಿಸಿ ಬಿಟ್ಟದ್ದನ್ನು ಅವರು ನೆನಪಿಸಿಕೊಳ್ಳುತ್ತಾರೆ. ಈ ಕಥೆಯನ್ನು ಓದುತ್ತಿದ್ದಾಗಲೇ ನಮ್ಮ ಮನೆಗೂ ಬರುತ್ತಿದ್ದ ಕಪ್ಪೆಯೊಂದರ ನೆನಪಾಯಿತು. ಕಂದು ಬಣ್ಣದ ಆ ಸಣ್ಣ ಕಪ್ಪೆ ಸಂಜೆ ಹೊತ್ತು ದಿನವೂ ನಮ್ಮ ಮನೆಗೆ ಬರುತ್ತಿತ್ತು. ಬಾಗಿಲ ಸಂದಿನಲ್ಲಿದ್ದ ನೆರಳಲ್ಲಿ ಧ್ಯಾನಕ್ಕೆ ಕೂರುತ್ತಿತ್ತು. ಸುಮಾರು ಬಾರಿ ಅದನ್ನು ಕಂಡ ಉಮ್ಮ ಹೊಡೆದೋಡಿಸುದ್ದುಂಟು. ಆದರೆ ನಾನು “ಪಾಪ ಅಲ್ವಾ, ಅದಕ್ಕೆ ನಮ್ಮಂತೆ ಮನೆಯಿದ್ದರೆ ನಮ್ಮಲ್ಲಿಗೆ ಬರುತ್ತಿತ್ತೇ” ಎಂದು ಅದರ ಪರ ವಕಾಲತ್ತನ್ನು ವಹಿಸಿದ್ದೆ. ಉಮ್ಮ, ನಾನು ಹಾಗೆ ಹೇಳಿದಾಗಲೆಲ್ಲಾ ಅಪ್ರತಿಭರಾಗಿ ಏನೂ ಹೇಳದೆ ಹೊರಟು ಹೋಗುತ್ತಿದ್ದರು.

ಆ ದಿನ ಚಿಮಿಣಿ ಬೆಳಕಲ್ಲಿ ಕುಳಿತು ನಾನು ಪರೀಕ್ಷೆಗೆ ಓದುತ್ತಿದ್ದೆ. ಅಷ್ಟರಲ್ಲೇ ತಥಾಕಥಿತ ಕಪ್ಪೆ ವಿಚಿತ್ರವಾಗಿ ನಡೆದುಕೊಳ್ಳಲಾರಂಭಿಸಿತು. ಮೌನವಾಗಿಯೇ ಕೂತು ಬಾಗಿಲ ಸಂದಿಗೆ ಬರುವ ಕೀಟಗಳನ್ನು ಹಿಡಿಯುತ್ತಿದ್ದ ಕಪ್ಪೆ ಅತ್ತಿಂದಿತ್ತ ಓಡಾಡುವುದನ್ನು ಗಮನಿಸಿದೆ. ನನಗೇನೂ ಅಪಾಯದ ವಾಸನೆ ಬಡಿಯಿತು. ಅಬ್ಬನ ಬ್ಯಾಟರಿ ಟಾರ್ಚು ತೆಗೆದು ಬಾಗಿಲ ಸಂದಿಗೆ ಬಿಟ್ಟೆ. ಬೆಳಕು ಬಿದ್ದೊಡನೆ ಕಂದು ಬಣ್ಣದ ಹಾವೊಂದು ಬೆಳಕಿನೆಡೆಗೆ ದುತ್ತನೆ ಹಾರಿ ಬಿತ್ತು. ಗಾಬರಿಯಿಂದ ಉಮ್ಮನನ್ನು ಕರೆದೆ. ಅಡುಗೆ ಮಾಡುತ್ತಿದ್ದ ಉಮ್ಮ ಓಡೋಡಿ ಬಂದವರೇ, ಹಾವನ್ನು ನೋಡುತ್ತಾ “ಓಹ್ ಬಾರಿ ಸಣ್ಣದು, ಕನ್ನಡಿ ಹಾವು. ನಿನ್ನ ಹಾಳಾಗಿ ಹೋದ ಕಪ್ಪೆಯ ಮೇಲಿನ ಕನಿಕರದಿಂದಲೇ ಅದು ಇಲ್ಲೇ ಬೇಟೆಗೆ ಬಂದು ಕುಳಿತಿದೆ, ಇನ್ನು ಈ ಕಪ್ಪೆಯ ಮೇಲೆ ವಕಾಲತ್ತು ವಹಿಸಿಕೊಂಡು ಬಾ….” ಎನ್ನುತ್ತಾ ಹಾವನ್ನು ಮನೆಯಿಂದ ಹೊರ ಹಾಕುವ ಪ್ರಯತ್ನಕ್ಕೆ ತೊಡಗಿಸಿಕೊಂಡರು. ನಾನು ಬೆಪ್ಪಾಗಿ ಕಪ್ಪೆಯೆಡೆಗೂ ಹಾವಿನೆಡೆಗೂ ಸುಮ್ಮನೆ ನೋಡುತ್ತಾ ನಿಂತೆ.

ಈಗೀಗ ಗೆಳೆಯರಿದ್ದ ಕಡೆ, ನಾನೂ ಪರಿಸರ ಕಥೆ ಹೇಳುತ್ತಿರಬೇಕಾದರೆ, “ನೀನು ಯಾವ ಕಥೆ ಹೇಳಿದರೂ, ಹಾವಿಗೆ ಹೋಗಿ ತಲುಪುತ್ತೀಯಾ. ನೀನು ಕಳೆದ ಜನ್ಮದಲ್ಲಿ ಹಾವಾಗಿ ಹುಟ್ಡಿದ್ದಿರಬೇಕು” ಎಂದು ಕಾಲೆಳೆಯುತ್ತಿರುತ್ತಾರೆ. ಹೇಗೆಂದು ಹೇಳಿ ಅವರನ್ನೆಲ್ಲಾ ಮನದಟ್ಟು ಮಾಡುವುದು. ನಮ್ಮ ಪರಿಸರದಲ್ಲಿ ಹಾವೇ ಅಧಿಕವಿದ್ದಿದ್ದರಿಂದಲಿರಬೇಕು. ಅಥವಾ ನನಗೆ ಹಾವೆಂದರೆ ವಿಶೇಷ ಕುತೂಹಲವಿರುವುದಿಂದಲೂ ಆಗಿರಬಹುದು. ನಾನು ಬೇಡ ಬೇಡ ಅಂದರೂ ನನ್ನ ಕಥೆಗಳೆಲ್ಲಾ ಹಾವಿನ ಸುತ್ತಲೇ ಗಿರಕಿ ಹೊಡೆಯುತ್ತಿರುತ್ತದೆ. ಆಗಲೂ ನಾನು ಅಂದುಕೊಳ್ಳುವುದು, ನನ್ನ ಕಥೆಯ ಹಾವಿಗಾಗಿ ಮಾತ್ರ ಪ್ರಶ್ನಿಸುವರೆಲ್ಲಾ ಗರುಡ ಜನ್ಮದವರಾಗಿರಬೇಕೆಂದು ಮನಸ್ಸಲ್ಲೇ ಬೈಯುತ್ತಾ ಹೊಸ ಕಥೆಗೆ ತಯ್ಯಾರಾಗುತ್ತೇನೆ.

(ಮುಖ್ಯಚಿತ್ರ: ವಿಪಿನ್ ಬಾಳಿಗ)