ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕೆಂಡಸಂಪಿಗೆ ಪರದೆಯ ಎಡ ತುದಿಯಲ್ಲಿ ದಿನದ ಕವಿತೆ ವಿಭಾಗದಲ್ಲಿ ನೀವು ಈ ಕವಿತೆಗಳನ್ನು ಓದಬಹುದು. ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದು ಡಾ.ಅಶೋಕ್ ಕುಮಾರ್ ಅನುವಾದಿಸಿದ ಕಮಲಾ ದಾಸ್ ಬರೆದ ಕವಿತೆ.

 

ಬೆಳವಣಿಗೆ

ಕಾಲಹೆಬ್ಬೆರಳ ತುದಿಯಲ್ಲಿ ನಿಂತು
ಕೈಗಳನು ನಾ ಮೇಲಕ್ಕೆತ್ತಿದರೆ
ಆಗಸದ ಮೋಡಗಳ ತುಣುಕುಗಳು
ನನ್ನ ಕೈಬೆರಳುಗಳನು ಮರಗಟ್ಟಿಸುತ್ತವೆ

ನಿಂತಲ್ಲೆ ನಾನಿಂತು ರಿಂಗಣ ಸುತ್ತುವಾಗ
ಮರದಕೊಂಬೆಗಳು ತಾಗಿ ನನ್ನ
ಕೈಗಳು ಘಾಸಿಗೊಳ್ಳುತ್ತವೆ

ಸ್ಪರ್ಶವನು ವೇದನೆಯಾಗಿ ಮಾರ್ಪಡಿಸುವ
ಸೆರೆಮನೆಯಲ್ಲಿರುವೆ ನಾನು
ಸೊರಗುತ್ತ ಬರುತಿರುವ
ಬ್ರಹ್ಮಾಂಡ ವೀಥಿಗಳಲ್ಲಿ
ಭ್ರಮಣ ನಡೆಸಿ ದಣಿದಂಥ,
ಹಳಿತಪ್ಪಲು ಹಂಬಲಿಸುವ
ರೈಲುಗಾಡಿಯಂತೆ
ಅಲ್ಪ ಸ್ವಾತಂತ್ರ್ಯಕ್ಕಾಗಿ ಹಾತೊರೆಯುವಂಥ,
ಒಂದು ಕಡು ನೀಲಿ ಗ್ರಹ ನಾನು

ನನಗಿನ್ನು ಬೆಳೆಯಲು ಜಾಗವಿಲ್ಲ
ಉಸಿರಾಡಲು ವಾಯುವಿಲ್ಲ
ಈ ಹಳೆಯ ಲೋಕದಲಿ
ಐದೂವರೆ ಅಡಿಯುದ್ದದ ಒಂದು ಶವಪೆಟ್ಟಿಗೆಗಷ್ಟೇ
ಇನ್ನು ನನ್ನನು ಮಣಿಸುವುದು ಸಾಧ್ಯ.