ನಾಗರಿಕತೆಯ ಇತಿಹಾಸ ಬರ್ಬರತೆಯ ಇತಿಹಾಸವೂ ಹೌದು ಎಂದು ಕಾರ್ಲ್ ಮಾರ್ಕ್ಸ್ ಹೇಳುತ್ತಾನೆ. ವೈಚಾರಿಕತೆ, ವಿಜ್ಞಾನ, ತಂತ್ರಜ್ಞಾನಗಳು ಹೊರಗಿಂದ ಬಂದು ಎರಡು ದಿನವಿದ್ದು ಮರಳಿ ಹೋದ ನೆಂಟರಾಗಿರಲಿಲ್ಲ. ಬದಲಿಗೆ ನಮ್ಮ ದೃಷ್ಟಿಕೋನಗಳನ್ನೇ ಪಲ್ಲಟಿಸಿದ, ಅಸಹನೆ ಮತ್ತು ಕ್ರೌರ್ಯಗಳನ್ನು ಸಾಮಾನ್ಯವಾಗಿಸಿದ ಪ್ರಚಂಡ ಶಕ್ತಿಯವು. ಯಂತ್ರವೇ ಬೃಹತ್ತಾಗಿ ಬೆಳೆದು ಮನುಷ್ಯ ಕುಲವನ್ನು ಆತ್ಮಹೀನವಾಗಿಸುವ ನಾಗರಿಕತೆ ಎಂಬ ದಮನಶಕ್ತಿಯ ಬಗ್ಗೆ ಎಚ್ಚರಿಸಲು ಇಂಗ್ಲೀಷ್ ರೊಮ್ಯಾಂಟಿಕ್ಕರು ಪ್ರಕೃತಿಯ ದನಿಯಾದ ಕಾವ್ಯವನ್ನೇ ಬಳಸಿಕೊಂಡರು. ಚಾರ್ಲಿ ಚಾಪ್ಲಿನ್ ತನ್ನ ಆ ಸತ್ಯವನ್ನೇ ತನ್ನ ‘ಮಾಡರ್ನ್ ಟೈಮ್ಸ್’ ಎಂಬ ದೃಶ್ಯಕಾವ್ಯದಲ್ಲಿ ಸಾರಿದ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಏಳನೆಯ ಬರಹ
ಕಾವ್ಯ ಮಂತ್ರಸ್ವರೂಪವನ್ನು ಹೊಂದಿರುತ್ತದೆ. ಹಾಗಾಗಿ ಪ್ರಾರ್ಥನೆಗೆ ಅತ್ಯಂತ ಸೂಕ್ತವಾದ ಅಭಿವ್ಯಕ್ತಿ ಕಾವ್ಯವೇ. ಆಧುನಿಕ ಜಗತ್ತಿನ ನೆಲೆಯಿಂದ ಹೊಮ್ಮುವ ಕಾವ್ಯದಲ್ಲಿ ಪ್ರಾರ್ಥನೆ ಹೇಗಿರಬಲ್ಲದು ಎನ್ನುವುದನ್ನು ಇಲ್ಲಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಲಾಗಿದೆ.
ಪ್ರಾರ್ಥನೆ ನಾವು ದೇವರೊಂದಿಗೆ ನಡೆಸುವ ಆತ್ಮೀಯ ಸಂವಾದ. ಭಾರತೀಯ ಮನಸ್ಸಿಗೆ ದೇವರೊಂದಿಗೆ ವಾದಕ್ಕಿಳಿಯುವುದೂ ಪ್ರಾರ್ಥನೆಯೇ. ‘ನೀನಾ ಭಗವಂತಾ? ಜಗಕುಪಕರಿಸಿ ನನಗಪಕರಿಸುವ ಜಗದೋದ್ಧಾರಕ ನೀನೇನಾ?’ ಎಂದು ಕೇಳುವುದು ಅಹಂಕಾರ ಎಂದು ನಮಗನಿಸುವುದಿಲ್ಲ. ಬದಲಿಗೆ ಹತಾಶೆಯಲ್ಲಿ ಬೆಂಡಾದ ಮಗುವೊಂದು ಅಪ್ಪನನ್ನು ಘಟ್ಟಿಸಿ ಕೇಳುತ್ತಿರುವಂತೆ ನಮಗೆ ಕೇಳಿಸುತ್ತದೆ. ಅಲ್ಲಿ ಸ್ನೇಹವೊ, ಪ್ರೇಮವೊ, ಭಕ್ತಿಯೊ, ವಾತ್ಸಲ್ಯವೊ, ಏನೇ ಇರಲಿ, ಭಾವತೀವ್ರತೆ ಇದ್ದರೆ ಮಾತ್ರವೇ ಅದು ಪ್ರಾರ್ಥನೆಯಾಗುತ್ತದೆ.
ಯಾಂತ್ರಿಕವಾಗಿ ಪದಗಳನ್ನು ಉರುಳಿಸುವುದು ಪ್ರಾರ್ಥನೆ ಅಲ್ಲ. ಅಭ್ಯಾಸಬಲವೂ ಪ್ರಾರ್ಥನೆ ಅಲ್ಲ. ಜಾರ್ಜ್ ಹರ್ಬರ್ಟ್ ಎಂಬ ಇಂಗ್ಲೀಷ್ ಕವಿ ಪ್ರಾರ್ಥನೆ ದಿನವನ್ನು ತೆರೆಯುವ ಕೀಲಿಕೈಯಾಗಿ ಮಲಗುವ ಮುನ್ನ ಹಾಕುವ ಬೀಗವಾಗಿರಬೇಕು ಅಂತ ಹೇಳಿದ. ಪ್ರಾರ್ಥನೆ ಎದೆಯಾಳದ ಪಿಸುದನಿಯಾಗಿದ್ದರೆ ಮಾತ್ರ ತಲುಪುವಲ್ಲಿಗೆ ತಲುಪೀತು ಎಂದು ಏಕಾಗ್ರತೆಯ ಮತ್ತು ಆಪ್ತತೆಯ ಮಹತ್ವವನ್ನು ಒತ್ತಿ ಹೇಳಿದವರುಂಟು.
ಅದು ಕೊಡು ಇದು ಕೊಡು ಎನ್ನುವುದು ಬೇಡಿಕೆಯಾಗಬಹುದು, ನಿಜವಾದ ಅರ್ಥದಲ್ಲಿ ಪ್ರಾರ್ಥನೆಯಾಗುವುದಿಲ್ಲ. ಆತ್ಮ ಸಾಕ್ಷಾತ್ಕಾರದ ಆಸೆಯೊಂದೇ ನಿಜವಾದ ಪ್ರಾರ್ಥನೆ ಎಂದು ಹೇಳಿದ್ದು ಬಾಪೂವೇ. ರಾಜಕಾರಣವನ್ನು ಆಧ್ಯಾತ್ಮೀಕರಿಸಲು ಪ್ರಯತ್ನಪಟ್ಟ ಬಾಪೂ ಭಾರತೀಯರನ್ನು ಸಂಘಟಿಸುವಲ್ಲಿ ಪ್ರಾರ್ಥನಾಸಭೆಗಳ ಮಹತ್ವವನ್ನು ಅರಿತಿದ್ದರು. ‘ಈಶ್ವರ್ ಅಲ್ಲಾ ತೇರೇ ನಾಮ್, ಸಬಕೊ ಸನ್ಮತಿ ದೇ ಭಗವಾನ್’ ಎಂದು ಸಾವಿರಾರು ಮಂದಿ ಒಟ್ಟಿಗೇ ಪ್ರಾರ್ಥಿಸುವ ಆ ದಿವ್ಯ ಕಾಲದಲ್ಲಿ ನಾನು ಬದುಕಿದ್ದೆನಲ್ಲ, ಅದೇ ನನ್ನ ಸುದೈವ ಎಂದು ಹಿರಿಯರೊಬ್ಬರು ಗದ್ಗದಿತರಾಗಿ ಹೇಳುತ್ತಿದ್ದಾಗ ಇನ್ನೂ ಸರಿಯಾಗಿ ಅರ್ಥವಾಗದ ವಯಸ್ಸಿನ ನಾನು ವಿಸ್ಮಯದಿಂದ ಅವರನ್ನೇ ದಿಟ್ಟಿಸಿದ್ದೆ. ಗಾಂಧಿಯಿಂದ ಆಳವಾಗಿ ಸ್ಪೂರ್ತಿ ಹೊಂದಿದ ಮಾರ್ಟಿನ್ ಲೂಥರ್ ಕಿಂಗ್ ಅಮೆರಿಕನ್ ನೆಲದಲ್ಲಿ ಕರಿಯರ ನಾಗರಿಕ ಹಕ್ಕುಗಳ ಹೋರಾಟದಲ್ಲಿ ಪ್ರಾರ್ಥನೆಯನ್ನು ಸಮರ್ಥವಾಗಿ ಬಳಸಿದ್ದರು.
ನಾಗರಿಕತೆಯ ಇತಿಹಾಸ ಬರ್ಬರತೆಯ ಇತಿಹಾಸವೂ ಹೌದು ಎಂದು ಕಾರ್ಲ್ ಮಾರ್ಕ್ಸ್ ಹೇಳುತ್ತಾನೆ. ವೈಚಾರಿಕತೆ, ವಿಜ್ಞಾನ, ತಂತ್ರಜ್ಞಾನಗಳು ಹೊರಗಿಂದ ಬಂದು ಎರಡು ದಿನವಿದ್ದು ಮರಳಿ ಹೋದ ನೆಂಟರಾಗಿರಲಿಲ್ಲ. ಬದಲಿಗೆ ನಮ್ಮ ದೃಷ್ಟಿಕೋನಗಳನ್ನೇ ಪಲ್ಲಟಿಸಿದ, ಅಸಹನೆ ಮತ್ತು ಕ್ರೌರ್ಯಗಳನ್ನು ಸಾಮಾನ್ಯವಾಗಿಸಿದ ಪ್ರಚಂಡ ಶಕ್ತಿಯವು. ಯಂತ್ರವೇ ಬೃಹತ್ತಾಗಿ ಬೆಳೆದು ಮನುಷ್ಯ ಕುಲವನ್ನು ಆತ್ಮಹೀನವಾಗಿಸುವ ನಾಗರಿಕತೆ ಎಂಬ ದಮನಶಕ್ತಿಯ ಬಗ್ಗೆ ಎಚ್ಚರಿಸಲು ಇಂಗ್ಲೀಷ್ ರೊಮ್ಯಾಂಟಿಕ್ಕರು ಪ್ರಕೃತಿಯ ದನಿಯಾದ ಕಾವ್ಯವನ್ನೇ ಬಳಸಿಕೊಂಡರು. ಚಾರ್ಲಿ ಚಾಪ್ಲಿನ್ ತನ್ನ ಆ ಸತ್ಯವನ್ನೇ ತನ್ನ ‘ಮಾಡರ್ನ್ ಟೈಮ್ಸ್’ ಎಂಬ ದೃಶ್ಯಕಾವ್ಯದಲ್ಲಿ ಸಾರಿದ.
ಕಾವ್ಯ ಮೂಲತಃ ಕನಸು ಮತ್ತು ಪ್ರಾರ್ಥನೆ. ವೈಚಾರಿಕತೆ ನಾಗರಿಕತೆಯ ವಾಸ್ತವ ಜಗತ್ತಿನ ಪ್ರತಿರೂಪವಾದರೆ ಕಾವ್ಯ ಆ ಹಿಂಸಾತ್ಮಕ ಎಚ್ಚರದ ಸ್ಥಿತಿಯಿಂದ ದೂರ ಸಾಗಿ ಬದುಕುಳಿಯುವ ತಹತಹವಾಗುತ್ತದೆ. ಆಧುನಿಕ ಜಗತ್ತಿನಲ್ಲಿ ಮಹಾಕಾವ್ಯ ಹುಟ್ಟಲು ಸಾಧ್ಯವೇ ಇಲ್ಲ ಎಂಬ ವಾದವು ಭಾವ ಮತ್ತು ಸ್ವರೂಪಗಳ ನಡುವೆ ಇರುವ ಆತ್ಮೀಯ ತಳುಕನ್ನು ಹಿಡಿದಿಡುವ ಒಂದು ಸಂಕೀರ್ಣ ವಾದ.
ಆದರೆ ಅವ್ಯಕ್ತಕ್ಕೆ ಕೈ ಚಾಚುವ ಪ್ರಾರ್ಥನೆಯಂತೂ ಎಲ್ಲ ಸಾಹಿತ್ಯಗಳಲ್ಲಿ ಇದ್ದೇ ಇರುತ್ತದೆ.
ಇಪ್ಪತ್ತನೆಯ ಶತಮಾನದ ಮೊದಲ ಭಾಗವನ್ನು ಕನ್ನಡ ಸಾಹಿತ್ಯದಲ್ಲಿ ನವೋದಯ (೧೯೦೦-೧೯೫೦) ಎಂದು ಗುರುತಿಸಲಾಗುತ್ತದೆ. ವಿಜ್ಞಾನದ ಆಗಮನ ಅಲ್ಲಿ ಹತಾಶೆಯನ್ನು ಹುಟ್ಟಿಸಿಲ್ಲ, ಬದಲಾಗಿ ನವೋದಯವನ್ನು ಸೃಷ್ಟಿಸಿದೆ. ಅಂತೆಯೇ ಹಳತನ್ನು ಉಳಿಸಿಕೊಂಡು ಹೊಸದನ್ನು ಬೆಳೆಸುವ, ಜೊತೆಗೆ ಪ್ರಕೃತಿಯನ್ನು ಆರಾಧಿಸುವ ಹುಮ್ಮಸ್ಸೂ ಇದೆ.
ಕುವೆಂಪು ಅವರ
ಆನಂದಮಯ ಈ ಜಗ ಹೃದಯ,
ಏತಕೆ ಭಯ ಮಾಣೊ
ಹೊಮ್ಮಿಸುವುದು ಆ ನಿಲುವನ್ನೇ.
ಆದರೆ ಕಾಲದ ಜೊತೆಗೆ ಪ್ರಕೃತಿಯನ್ನು ದಮನಿಸುವ ನಾಗರಿಕತೆಯ ಹಿಂಸ್ರ ಮುಖ ಬಿಚ್ಚಿಕೊಂಡಾಗ ಆದ ದಿಗ್ಭ್ರಮೆಯನ್ನು ಬೇಂದ್ರೆಯವರ ಸಾಲುಗಳು ಹಿಡಿದಿಡುತ್ತವೆ:
ಜಗದೊಳು ತುಂಬಿಹರೊ ಜನರು
ಹುಲಿ ಮಂಗನ ಸಂತತಿಯವರು
ಬೆಕ್ಕಿನ ಜಾತಿಯ ತಿನಸಿಗರು
ಹಡೆದ ಬದುಕನ್ನೇ ತಿನುವವರು
ಕನ್ನಡ ನವೋದಯದಲ್ಲಿ ಹೊಸ ರಾಷ್ಟ್ರವನ್ನು ಕಟ್ಟುವ ಹುಮ್ಮಸ್ಸಿತ್ತು:
ಹೋಗುತಲಿದೆ ಹಳೆಕಾಲ,
ಹೊಸ ಕಾಲ ಬರುತಲಿದೆ…
- ಕುವೆಂಪು
ಹಳತು ಹೊಸದರ ಸಮನ್ವಯದ ಕನಸಿತ್ತು:
ಕವಿ ಹೃದಯದ ನವ ಸುಮಧುರ ಪೂರದಿ
ಯುಗಯುಗಗಳು ಮಿಂದೇಳುತಿವೆ …
- ಜಿಎಸ್ಎಸ್
ಶಕ್ತಿಯ ಆರಾಧನೆಯಿತ್ತು:
ನಿನ್ನ ತೇಜದ ಮುಂದೆ ರಾಜ ತೇಜವು ಕೂಸು
ಮೊದಲಗಿತ್ತಿಯು ನೀನು ಮೆರೆಯುತಿಹೆ …
- ಬೇಂದ್ರೆ
ಸಮಷ್ಟಿಯ ಸಲುವಾಗಿ ಅಂತರಾಳದ ಪ್ರಾರ್ಥನೆಯಿತ್ತು. ಕೆ ಎಸ್ ನರಸಿಂಹಸ್ವಾಮಿ ಅವರ ‘ಅನ್ನಪೂರ್ಣೆಗೆ’ ಪದ್ಯದ ಸಾಲುಗಳನ್ನು ಗಮನಿಸಬಹುದು:
ನೀನಿಲ್ಲದ ಮನೆ ಮನೆಯಲಿ
ಏನಿದ್ದೂ ವ್ಯರ್ಥ
ಹಸಿದೊಡಲಿನ ಕಗ್ಗವಿಯಲಿ
ಹಾಡೆಲ್ಲ ಅನರ್ಥ.
ಅದಕ್ಕೇ ಏನೊ, ಆಧುನಿಕ ಕನ್ನಡ ಸಾಹಿತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾರ್ಥನಾರೂಪ ಪದ್ಯಗಳು ಕಾಣಸಿಗುವುದು ನವೋದಯದ ಕಾಲದಲ್ಲಿಯೇ.
ಆಧುನಿಕ ಕನ್ನಡ ಕಾವ್ಯದ ನೆಲೆಗಟ್ಟಿಗೆ ಸ್ಪೂರ್ತಿ ಬಿ. ಎಂ. ಶ್ರೀ ಅವರ ‘ಇಂಗ್ಲೀಷ್ ಗೀತಗಳು’. ಪ್ರಾರ್ಥನಾರೂಪ ಕಾವ್ಯಕ್ಕೆ ಜಾನ್ ಹೆನ್ರಿ ನ್ಯೂಮನ್ ಬರೆದ Lead Kindly Light ಕನ್ನಡದಲ್ಲಿ,
ಕರುಣಾಳು ಬಾ ಬೆಳಕೆ
ಮುಸುಕಿದೀ ಮಬ್ಬಿನಲಿ
ಕೈ ಹಿಡಿದು ನಡೆಸೆನ್ನನು …
ಎಂಬ ಸಮರ್ಥ ಅನುವಾದದಲ್ಲಿ ಒದಗಿ ಬಂದು ನಂತರ ಬಂದ ಪ್ರಾರ್ಥನೆಗಳೆಲ್ಲವು ಅದರ ವಿವಿಧ ರೂಪಗಳೇ ಆದವು.
ಕುವೆಂಪು
ಕುವೆಂಪು ಬೌದ್ಧಿಕವಾಗಿ ರಾಮಕೃಷ್ಣಾಶ್ರಮದ ಕೂಸು. ಅದ್ವೈತ ಸ್ಥಿತಿಯ ಅನುಭವ ಅವರ ಕಾವ್ಯದುದ್ದಕ್ಕೂ ಹರಿದಿರುವುದನ್ನು ಈ ಪದಗಳಲ್ಲಿ ಕಾಣಬಹುದು.
ಇನ್ನೇನು ಬೇಕೆನೆಗೆ ದೇವ
ಎನ್ನೆದೆಯೊಳಿರೆ ನೀನೆ
ಎನ್ನ ಜೀವದ ಜೀವ?
ರಾಮಕೃಷ್ಣ ಮತ್ತು ಅರವಿಂದರು ಅವರ ಆಧ್ಯಾತ್ಮಿಕ ಶಿಲ್ಪವನ್ನು ಕಡೆದರೆ ವಿವೇಕಾನಂದ ಮತ್ತು ಗಾಂಧಿ ಅವರ ವೈಚಾರಿಕತೆಯನ್ನು ಸಾಮಾಜಿಕ ಬದ್ಧತೆಯನ್ನು ರೂಪಿಸಿದ ಶಕ್ತಿಗಳು. ಹಾಗಾಗಿಯೇ ಎಲ್ಲರನ್ನೂ ಒಳಗೊಳ್ಳಬಲ್ಲ ‘ನೇಗಿಲಯೋಗಿ’ ‘ಶ್ರೀಸಾಮಾನ್ಯ’ ಎಂಬ ಪರಿಕಲ್ಪನೆಗಳು ಅವರಿಂದ ಹೊಮ್ಮಲು ಸಾಧ್ಯವಾಯಿತು.
ಕವಿಯ ಪ್ರಾರ್ಥನೆ ಸರಳ, ನೇರ:
ನಿನ್ನ ಬಾಂದಳದಂತೆ
ನನ್ನ ಮನವಿರಲಿ;
ನಿನ್ನ ಸಾಗರದಂತೆ
ನನ್ನ ಎದೆಯಿರಲಿ.
ಸೋಮನಾಥಪುರದ ದೇವಾಲಯವ ಕಂಡು ರಸಋಷಿ ತನ್ಮಯರಾಗಿ ಹಾಡುತ್ತಾರೆ:
ಬಾಗಿಲೊಳು ಕೈ ಮುಗಿದು
ಒಳಗೆ ಬಾ ಯಾತ್ರಿಕನೆ,
ಶಿಲೆಯಲ್ಲವೀ ಗುಡಿಯು
ಕಲೆಯ ಬಲೆಯು!
ರಸಋಷಿ ಜಪಮಣಿಗೆ ಸಿಕ್ಕಿಬಿದ್ದವರಲ್ಲ. ಕೆಳಗಿನ ಸಾಲುಗಳು ಶಂಕರಾಚಾರ್ಯರ ‘ಚಿದಾನಂದ ರೂಪಃ ಶಿವೋಹಂ ಶಿವೋಹಂ’ ನೆನಪಿಸಬಹುದು.
ಜೀವನವೆನಿತುಂ ಜಪವೆನಗಾಗಿರೆ
ಜಪಮಣಿ ಗಿಪಮಣಿ ಮಾಲೆಯದೇಕೆ?
ಸುಂದರ ಜಗ ಶಿವ ಮಂದಿರವಾಗಿರೆ
ಅಂಧತೆ ಕವಿದಿಹ ದೇಗುಲವೇಕೆ?
ಡಿವಿಜಿ ಮತ್ತು ಮಂಕುತಿಮ್ಮನ ಕಗ್ಗ
ಕನ್ನಡದ ಭಗವದ್ಗೀತೆ ಎಂದು ಅಪಾರ ಜನಪ್ರಿಯತೆಯನ್ನು ಪಡೆದ ಡಿವಿಜಿ ಅವರ ‘ಮಂಕುತಿಮ್ಮನ ಕಗ್ಗ’ ಮೊದಲ ಮುದ್ರಣ ಕಂಡಿದ್ದು 1943 ರಲ್ಲಿ. ‘ಕನ್ನಡದ ಅತ್ಯುತ್ತಮ ಕವಿ ಯಾರು?’ ಎಂದು ಯಾರೋ ಶಿವರಾಮ ಕಾರಂತ ಅವರನ್ನು ಕೇಳಿದಾಗ ಅವರು ರೆಪ್ಪೆ ಬಡಿಯದೆ ‘ಡಿವಿಜಿ’ ಎಂದರಂತೆ. ಕಗ್ಗದಲ್ಲಿ ಹಳೆಗನ್ನಡ ಮತ್ತು ನಡುಗನ್ನಡದ ನಡುವಿನ ಕನ್ನಡವಾಗಿರುವುದರಿಂದ ಅದು ‘ಆಧುನಿಕ’ ಅಲ್ಲ ಎಂಬ ವಾದವೂ ಇದೆ. ಆದರೆ ಅದರೊಳಗೇ ಸುಲಭವಾದ ಪದ್ಯಗಳೂ ಇವೆ. ಉದಾಹರಣೆಗೆ ‘ನಗುವು ಸಹಜದ ಧರ್ಮ…, ‘ಹುಲ್ಲಾಗು ಬೆಟ್ಟದಡಿ…, ‘ಹೊಸ ಚಿಗುರು ಹಳೆ ಬೇರು…’ , ಬದುಕು ಜಟಕಾಬಂಡಿ … ಇತ್ಯಾದಿ. ಅಪಾರ ಜನಪ್ರಿಯತೆಯನ್ನು ಪಡೆದಿರುವ ಪದ್ಯಗಳು ಅಂತವೇ.
ಮಂಕುತಿಮ್ಮನ ಕಗ್ಗ ಸಾಂಪ್ರದಾಯಿಕ ಅರ್ಥದಲ್ಲಿ ಪ್ರಾರ್ಥನೆಗಳ ಸಂಕಲನವಲ್ಲ. ಬದಲಿಗೆ ಗಾಢವಾದ ಜೀವನಾನುಭವದಿಂದ ಡಿವಿಜಿಯವರಿಗೆ ದಕ್ಕಿರುವ ಸ್ವೋಪಜ್ಞ ಚಿಂತನೆಗಳು ಎನ್ನುವುದು ಕೇವಲ ವಾದವಾದೀತು. ಪ್ರಾರ್ಥನೆ ಹೊಮ್ಮುವುದು ಜೀವನದ ಅನುಭವದಿಂದಲೇ ತಾನೆ? ಕುವೆಂಪು ಅವರ ಪ್ರತಿಕ್ರಿಯೆ ಹೀಗಿತ್ತು:
ಹಸ್ತಕ್ಕೆ ಬರೆ ನಕ್ಕೆ ಓದುತ್ತ ಓದುತ್ತ
ಮಸ್ತಕಕ್ಕಿಟ್ಟು ಗಂಭೀರನಾದೆ ।
ವಿಸ್ತರದ ದರುಶನಕೆ ತುತ್ತತುದಿಯಲಿ ನಿನ್ನ
ಪುಸ್ತಕಕೆ ಕೈಮುಗಿದೆ ಮಂಕುತಿಮ್ಮ ।।

ಜಿ ಎಸ್ ಶಿವರುದ್ರಪ್ಪ
ನವೋದಯದ ಕವಿಗಳಲ್ಲಿ ಗಾಢವಾದ ಇತಿಹಾಸ ಮತ್ತು ಸಾಂಸ್ಕೃತಿಕ ಪ್ರಜ್ಞೆ ಇರುವುದನ್ನು ಕಾಣುತ್ತೇವೆ. ಕುವೆಂಪು, ಶಿವರುದ್ರಪ್ಪ ಅವರ ಕಾವ್ಯದಲ್ಲಿ ಬುದ್ಧ, ಬಸವ, ಜೀಸಸ್, ಗೊಮ್ಮಟ, ವಿನೋಬ, ರಾಮಕೃಷ್ಣ, ಶಾರದಾದೇವಿ, ಕಬೀರ, ವಿವೇಕಾನಂದ ಮುಂತಾದವರು ಒಮ್ಮೆಗಿಂತ ಹೆಚ್ಚು ಬಾರಿಯೇ ಕಾಣಿಸಿಕೊಳ್ಳುತ್ತಾರೆ. ಜಿಎಸ್ಎಸ್ ಅವರ ‘ಶ್ರೀವಿವೇಕಾನಂದರಿಗೆ’ ಎನ್ನುವ ಪದ್ಯ ಪ್ರಾರಂಭವಾಗುವುದೇ ‘ರಾಮಕೃಷ್ಣರು ದಿವ್ಯ ಯೋಗ ಧನುವಿಗೆ ತೊಟ್ಟ ಬ್ರಹ್ಮಾಸ್ತ್ರ ನೀನು ‘ ಎಂಬ ಸಾಲಿನಿಂದ. ಇನ್ನೊಂದು ಪದ್ಯದಲ್ಲಿ (‘ವಿವೇಕಾನಂದ’) ಈ ‘ದಕ್ಷಿಣೇಶ್ವರದ ವಿದ್ಯುತ್ ಕೇಂದ್ರದ ಕೋಶಾಗಾರ’
ಕವಿ ಋಷಿ ಯೋಗೀ ಸಂತ
ಲೋಕಾದ್ಯಂತ ನಡೆವ ವಸಂತ!
‘ಕೃಷ್ಣ ಶಕ್ತಿ’ ಯಲ್ಲಿ,
ರಣರಂಗದ ತುಮುಲದಲ್ಲು
ಕೇಳು ದಿವ್ಯಗೀತೆಯ:
‘ಸಂಭವಾಮಿ ಯುಗೇ ಯುಗೇ’
ಎನುವ ಪರಮ ಸತ್ಯವ …
ಎಂದು ಹೇಳುತ್ತಲೇ,
ಮತ್ತೆ ಮತ್ತೆ ಅಂಧಕಾರ
ಮಳೆ ಹನಿಗಳ ಪಂಜರ,
ಸೊಂಡಿಲಾಡಿಸುತ್ತ ಬರುವು
ದದೊ ದೇವ ಕುಂಜರ!
ಎಂದು ಸ್ವಾಗತಿಸಲು ಸಿದ್ಧವಾಗುವ ಮನೊಭೂಮಿಕೆಯೂ ಇದೆ. ಹಾಗೆಯೇ ‘ಮೊಹರಂ’ ಪದ್ಯ ಆ ಕಾಲದ ಸಮುದಾಯದ ಸೆಕ್ಯುಲರ್ ಪ್ರಜ್ಞೆಯತ್ತ ಗಮನ ಸೆಳೆಯುತ್ತದೆ:
ಹುಲಿ ವೇಷಗಳ ಸಂತೆ – ಬಣ್ಣಗಳ ಮೆರೆತ
ಮನವ ಬೆರಗಾಗಿಸಿದೆ ಈ ಕುಣಿತ ಮಣಿತ
…
ನಿಂತು ಸುಮ್ಮನೆ ನೋಡು ಬರಿಯ ಮೆರವಣಿಗೆ,
ವೇಷಗಳ ತೊಟ್ಟವರು ನಮ್ಮ ನಮ್ಮವರೆ!
ಕವಿ ತಾನು ‘ರಾಮಕೃಷ್ಣ ತಪೋವನದ ಪರ್ಣಕುಟಿಯ ದೀಪವೆ’ ಎಂದು ಕರೆದ ಶಾರದಾಮಾತೆಗೆ ‘ದಕ್ಷಿಣೇಶ್ವರದಲ್ಲಿ’ ನಮಿಸುತ್ತಾ ಹಾಡುತ್ತಾರೆ:
ನಿಂದುದಿಲ್ಲಿ, ಬಂದುದಿಲ್ಲಿ, ನಡೆದುದಿಲ್ಲಿ ಈ ಕಡೆ,
ನುಡಿದುದಿಲ್ಲಿ, ಕಂಡುದಿಲ್ಲಿ, ಪಡೆದುದಿಲ್ಲಿ ಬಿಡುಗಡೆ.
ಮುಟ್ಟಿದೆಲ್ಲ ತೀರ್ಥವಾಯ್ತು, ಮೆಟ್ಟಿದಲ್ಲೆ ದೇಗುಲ
ಇಂದು ಬಂದು ಕಂಡ ನಮಗೆ ಪುಲಕ ಬಾಷ್ಪ ವ್ಯಾಕುಲ.
‘ಶಕ್ತಿಯ ಕೊಡು’ ಪದ್ಯದಲ್ಲಿ ಕವಿ ಆರ್ತರಾಗಿ ಬೇಡಿಕೊಳ್ಳುತ್ತಾರೆ,
ಎಡರ ಕಡಲ ತೆರೆ ಹೆಡೆಗಳು
ಭೋರ್ಗರೆಯುತ ಬಂದರೂ
ತಡೆದು ನಿಲುವ ಮಳಲ ತಡಿಯ
ಬಲವ ನೀಡು ಶ್ರೀಗುರೂ…
‘ವಚನ ವಾಙ್ಮಯ ಗುಡಿಗೆ ನೀನೆ ಜಂಗಮ ಮೂರ್ತಿ’ ಎಂದು ಕರೆಸಿಕೊಂಡ ಬಸವಣ್ಣ ಇನ್ನೊಂದು ಕಡೆ
ಇಲ್ಲಿ ಸಂದದ್ದು ಅಲ್ಲಿಯೂ ಸಲುವಂತೆ
ಬದುಕಿದವ ನೀನು
ಸಂಗನ ಮುಂದೆ ಕರ್ಪೂರ ಉರಿದಂತೆ
ಎಂಬ ನುಡಿ ನಮನಕ್ಕೆ ಅರ್ಹನಾಗುತ್ತಾನೆ.
‘ಸಿದ್ಧಗಂಗೆಯ ಶ್ರೀ ಚರಣಕ್ಕೆ’ ಪದ್ಯದಲ್ಲಿ,
ಸದ್ದುಗದ್ದಲವಿರದ ಸಾಧನೆ ಇಲ್ಲಿ ಗದ್ದುಗೆಯೇರಿದೆ
ಕಾಯಕವೆ ಕೈಲಾಸವೆನ್ನುವ ಮಾತು ಕೃತಿಯೊಳು ಮೂಡಿದೆ
ಕಾವಿಯುಡುಗೆಯನುಟ್ಟು ನಭವೇ ಕಿರಣ ಹಸ್ತವ ಚಾಚಿದೆ
ಎಲ್ಲ ನನ್ನವರೆನ್ನುವ ಭಾವದ ಕರುಣೆಯೇ ಕಣ್ತೆರೆದಿದೆ.
ಮೊದಲೇ ಹೇಳಿದಂತೆ ನವೋದಯದ ಮನಸ್ಸು ವಿಜ್ಞಾನ ತಂತ್ರಜ್ಞಾನದ ಹಿಂಸೆಯ ಶಕ್ತಿಗೆ ಬೆಚ್ಚಿ ಬಿದ್ದಿರಲಿಲ್ಲ:
ಸದಾ ಪ್ರಶ್ನೆಗಳ ಬಾಗಿಲ ಬಡಿವ
ಹೊಸ ವಿಸ್ಮಯಗಳ ಕಿರಣವ ತೆರೆವ
ಸಾಕ್ಷಾತ್ಕಾರಕೆ ಜೀವವನೆರೆವ
ಶ್ರೀ ವಿಜ್ಞಾನಿಗೆ ನಮೋ ನಮೋ.
ಅರವಿಂದರನ್ನು ‘ಭಾರತೀಯ ಸ್ವಾತಂತ್ರ್ಯದ ಪ್ರಥಮ ಸ್ಫೋಟ ಸ್ಪೂರ್ತಿಯೆ’ ಎಂದು ಸಂಬೋಧಿಸುತ್ತಾ ಕವಿ ನಮಿಸುತ್ತಾರೆ:
ನವ ಮಾನವ ನಿರ್ಮಾಣದ
ಸಂಕಲ್ಪದ ಕಿರಣಕೆ
ಶರಣೆಂಬೆವು, ಮಹಾಯೋಗಿ
ನಿನ್ನ ದಿವ್ಯ ಚರಣಕೆ.
ಹಾಗಂತ ಕವಿ ಪುರಾಣದಲ್ಲಿ, ಕಣ್ಣೆದುರಲ್ಲಿ ಇರುವ ಹೆಣ್ಣನ್ನು ಮರೆತಿಲ್ಲ.
ದಾರಿಯುದ್ದಕ್ಕೂ ವನವಾಸ, ಅಗ್ನಿಪರೀಕ್ಷೆ,
ಹೇಗೆ ದಾಟುತ್ತೀಯ ನನ್ನ ಮಗಳೆ?
‘ನಸ್ತ್ರೀ ಸ್ವಾತಂತ್ರ್ಯಮರ್ಹತಿ’ ಎಂದು ವಟಗುಟ್ಟು-
ತ್ತಲೇ ಇದೆ ಮನುಧರ್ಮಶಾಸ್ತ್ರದ ರಗಳೆ…’
ಅದೇ ಪದ್ಯದ ಕೊನೆಯ ಚರಣದಲ್ಲಿ ಅಕ್ಕ ಪರಿಹಾರವಾಗಿ ಕಾಣಿಸಿಕೊಳ್ಳುತ್ತಾಳೆ:
ಹೊಸ ತಿಳಿವಿನೆಚ್ಚರದಲ್ಲಿ ಲೋಕ ಸಾಗಿದೆ
ಮಗಳೆ. ದಾಟಿ ಬಾ ಮಹಾದೇವಿಯಕ್ಕನ ಹಾಗೆ
ನಿರ್ಭಯದ ನಿಲುವಿಗೆ. ಆತ್ಮಗೌರವದ ಗಿರಿಶಿಖರ-
ದೆತ್ತರದಲ್ಲಿ ಅರಳಿಕೊಳ್ಳಲಿ ಬದುಕು ಹೊಸ ಬೆಳಕಿಗೆ.
ಕಾಲಾನುಕ್ರಮಣಿಕೆಯಲ್ಲಿ ಜಿಎಸ್ಎಸ್ ನವೋದಯ ಮತ್ತು ನಂತರ ಬಂದ ನವ್ಯದ ನಡುವಲ್ಲಿ ನಿಂತು ಬರೆದವರು. ಹಾಗಾಗಿಯೇ ಅವರನ್ನು ಸಮನ್ವಯ ಕವಿ ಎಂದು ಗುರುತಿಸಲಾಗಿದೆ. ಆದರೆ ಅವರ ಕಾವ್ಯ ಹೆಚ್ಚು ನವೋದಯದತ್ತಲೇ ಒಲಿದಿರುವುದನ್ನು ಕಾಣಬಹುದು. ಇಷ್ಟಕ್ಕೂ ಅವರು ಸಾಹಿತ್ಯ ಚರಿತ್ರಕಾರರ ವರ್ಗೀಕರಣವನ್ನು ಒಪ್ಪಿಕೊಳ್ಳಬೇಕೆಂದಿಲ್ಲವಲ್ಲ?
ದ ರಾ ಬೇಂದ್ರೆ
ನವೋದಯದ ಆಶಯಗಳನ್ನು ಸಾರಾಂಶೀಕರಿಸುವ ಪದ್ಯ ವರಕವಿ ದ ರಾ ಬೇಂದ್ರೆಯವರ ‘ಇಳಿದು ಬಾ… ತಾಯಿ ಇಳಿದು ಬಾ… ನವೋದಯದ ಯುಗದ ಆಶಯಗಳಿಗೆ ರೂಪಕವಾಗುವಷ್ಟು ಸಮರ್ಥವಾಗಿದೆ. ಸಕಲ ಪಾಪವನ್ನು ತೊಳೆಯುವ ಗಂಗೆಯನ್ನು ಭಗೀರಥನಾಗಿ ಭೂಮಿಗೆ ಆಹ್ವಾನಿಸುವಾಗ ಬೇಂದ್ರೆಯವರ ನಾದಯೋಗದ ಹೊಳಹು ದೊರೆಯುತ್ತದೆ. ಸಿಕ್ಕಿಬಿದ್ದ ಪ್ರೇತಗಳಿಗೆ ಬಿಡುಗಡೆಯಾಗಿ, ಹಳತೆಲ್ಲವೂ ತೊಳೆದು ಹೊಸದಾಗಿ ಹಸನಾಗಿ ಬೆಳಗಬೇಕು:
ನಿನಗೆ ಪೊಡಮಡುವೆ
ನಿನ್ನನುಡುತೊಡುವೆ
ಏಕೆ ಎಡೆತಡೆವೆ
ಸುರಿದು ಬಾ…
ಎನ್ನುವ ಕವಿಯ ದನಿ ಆರ್ತತೆಯನ್ನು ಹೊಮ್ಮಿಸುತ್ತದೆ.
ಶಿವಶುಭ್ರ ಕರುಣೆ
ಅತಿಕಿಂಚಿದರುಣೆ
ವಾತ್ಸಲ್ಯವರಣೆ
ಇಳಿ ಇಳಿದು ಬಾ
ಎಂದು ಆಹ್ವಾನಿಸುವ ರೀತಿಗೆ ಗಂಗೆ ಧುಮುಕದೆ ಇರಲು ಸಾಧ್ಯವೆ? ಕವಿಯ ಆಹ್ವಾನ ಬರೀ ತನಗೆಂದು ಅಲ್ಲ, ಸ್ವಂತದಾಚೆಯ ಸಮಷ್ಟಿಯಲಿ ನಿಂತಾಗ ಮಾತ್ರ ಆಧ್ಯಾತ್ಮ ಸಾಕಾರವಾಗುತ್ತದೆ ಎಂದು ಕವಿ ಬಲ್ಲ. ಅದಕ್ಕೇ,
ನಾಡಿ ನಾಡಿಯನು ತುತ್ತ ಬಾ
ನಮ್ಮ ನಾಡನ್ನೆ ಸುತ್ತ ಬಾ
ಸತ್ತ ಜನರನ್ನು ಎತ್ತ ಬಾ…
ಎಂದು ಹಾಡುತ್ತಾ ಧುಮುಕುತ್ತಿರುವ ಗಂಗೆಯನ್ನು ಕವಿ ಭಕ್ತಿಯಿಂದ ವಂದಿಸುತ್ತಾರೆ:
ವೃಂದಾರವಂದ್ಯೆ ಮಂದಾರಗಂಧೆ
ನೀನೆ ತಾಯಿ ತಂದೆ
ರಸಪೂರಜನ್ಯೆ ನೀನಲ್ಲ ಅನ್ಯೆ
ಸಚ್ಚಿದಾನಂದ ಕನ್ಯೆ…
ಬಂದಾರ ಬಾರೆ, ಒಂದಾರೆ ಸಾರೆ
ಕಣ್ಧಾರೆ ತಡೆವರೇನೇ?
ಅವತಾರವೆಂದೆ
ಎಂದಾರೆ ತಾಯಿ,
ಈ ಅಧಃಪಾತವನ್ನೇ.
ಅದು ಪತನವಲ್ಲ, ಗಂಗಾವತರಣ. ಗಂಗೆ ಬೇರೊಂದು ಅವತಾರವೆತ್ತಿ ಬರುತ್ತಿಲ್ಲ. ಮೂಲ ಸ್ವರೂಪದಲ್ಲೇ ಧುಮುಕುತ್ತಿದ್ದಾಳೆ. ಕವಿ ಕೈಮುಗಿದು ನಿಂತು ಬೇಡುತ್ತಿದ್ದಾರೆ:
ಹರಣ ಹೊಸದಾಗೆ ಹೊಳೆದು ಬಾ
ಬಾಳು ಬೆಳಕಾಗೆ ಬೆಳೆದು ಬಾ…
ಓದಿ/ಕೇಳಿ ಮುಗಿಸುವ ಹೊತ್ತಿಗೆ ಧುಮುಕಿ ಹರಿದ ಗಂಗೆಯಲಿ ಮಿಂದು ಪಾಪವನು ಕಳೆದುಕೊಂಡು ಪಾವನವಾದ ಭಾವ ಹೊಮ್ಮುವಷ್ಟು ನಾದದ ಸಾಂದ್ರತೆಯಿದೆ.

ಕನ್ನಡ ಸಾಹಿತ್ಯದ ಮುಂದಿನ ಹಂತಗಳು ಬದಲಾದ ಸಾಮಾಜಿಕ ಕಾಳಜಿಗಳಿಂದ ಬೇರೆಯ ರೂಪವನ್ನೇ ತಳೆದವು. ನವ್ಯದ ಪ್ರವರ್ತಕ ಗೋಪಾಲಕೃಷ್ಣ ಅಡಿಗರ ಕವನ ‘ಪ್ರಾರ್ಥನೆ’ ಎಂಬ ಶೀರ್ಷಿಕೆ ಹೊಂದಿದ್ದು, ‘ಪ್ರಭೂ…’ ಎಂದು ಪ್ರಾರಂಭವಾದರೂ ಸಹ ಅದು ಸಾಂಪ್ರದಾಯಿಕ ಅರ್ಥದಲ್ಲಿ ಪ್ರಾರ್ಥನೆ ಅಲ್ಲ. ಆದರೂ ಅವರ ‘ರಾಮನವಮಿಯ ದಿವಸ’ ಪದ್ಯದ ಕೊನೆಯ ಎರಡು ಸಾಲುಗಳು ಆಧ್ಯಾತ್ಮದ ಆಳವನ್ನು ಬಿಚ್ಚಿಡುತ್ತದೆ ಎನ್ನುವುದು ನನ್ನ ಅನಿಸಿಕೆ ಅಷ್ಟೆ:
ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತಿತೇನು?
ಪುರುಷೋತ್ತಮನ ಆ ಅಂಥ ರೂಪ-ರೇಖೆ?

ಲೇಖಕಿ, ಅನುವಾದಕಿ ಮತ್ತು ಇಂಗ್ಲೀಷ್ ಪ್ರಾಧ್ಯಾಪಕಿ. ‘ಹೇಳುತೇನೆ ಕೇಳು: ಹೆಣ್ಣಿನ ಆತ್ಮಕಥನಗಳು’ ಇವರ ಮುಖ್ಯ ಕೃತಿ. ‘An Afternoon with Shakuntala’ ವೈದೇಹಿ ಅವರ ಕಥೆಗಳ ಇಂಗ್ಲೀಷ್ ಅನುವಾದ. ಕೊಡಗು ಜಿಲ್ಲೆಯ ಕನಾರಳ್ಳಿಯವರು. ನ್ಯೂಜಿಲ್ಯಾಂಡಿನಲ್ಲಿ ವಾಸವಾಗಿದ್ದಾರೆ.
