ಆಸ್ಟ್ರೇಲಿಯಾ ಪೀನಲ್ ಕಾಲೊನಿ ಆಗಿತ್ತು ಅನ್ನೋದು ಸಣ್ಣ ಮಗೂಗು ಗೊತ್ತಿರೋ ವಿಷ್ಯ. ಅದನ್ನ ಹೇಳಿಕೊಂಡು ಪಕಪಕ ಅಂತ ಜನ ನಗ್ತಾರೆ ಕಳ್ಳಕಾಕರ ನಾಡು ಅನ್ನೋ ತಿರಸ್ಕಾರದಿಂದ. ಆದರೆ ಆಸ್ಟ್ರೇಲಿಯಾದ ಕೆಲವು ಒಳಮರ್ಮ, ಒಳಸುಳಿ ಹಲವರಿಗೆ ಗೊತ್ತಿಲ್ಲ. ಇಂಗ್ಲೆಂಡಿನ ಜೈಲೆಲ್ಲಾ ತುಂಬಿ ಹೋಗಿದ್ವು. ಹೊಸದಾಗಿ ತಪ್ಪು ಮಾಡಿದವರನ್ನ ಜೈಲಿಗೆ ಹಾಕೋಕೆ ಜಾಗ ಇರಲಿಲ್ಲ. ಆಗ ತಾನೆ ಭೂಮೂಲೆಯ ಆಸ್ಟ್ರೇಲಿಯಾ ಅವರ ಕಣ್ಣಿಗೆ ಬಿದ್ದಿತ್ತು. ಬಂಧಿಗಳನ್ನ ಬೋಟಲ್ಲಿ ತುಂಬಿ ಇಲ್ಲಿಗೆ ಕಳಿಸೋಕೆ ಶುರುಮಾಡಿದರು. ಎಲ್ಲರಿಗೂ ಗೊತ್ತಿರೋ ಚರಿತ್ರೆ ಇಷ್ಟು.

ಈ ವಿಶಿಷ್ಟ ಚರಿತ್ರೆಯಿಂದ ಹುಟ್ಟೋ ಒಂದೆರಡು ವಿಷ್ಯ ಕುತೂಹಲವಾದ್ದು. ಆಸ್ಟ್ರೇಲಿಯಾದವರಿಗೆ ಇಂಗ್ಲೆಂಡ್ ಅಂದರೆ ಆಳದಲ್ಲಿ ಸಿಟ್ಟು. ಮತ್ತೊಂದು ಕಡೆ ತಾಯಿ ನಾಡು ಅನ್ನೋ ವ್ಯಾಮೋಹ. ಈ ಸಿಟ್ಟಿನ ಮೇಲೆ ಸವಾರಿ ಮಾಡೋ ವ್ಯಾಮೋಹ ಹೇಗೇಗೋ ಕಾಣಿಸಿಕೊಳ್ಳತ್ತೆ. ಇಂಗ್ಲೆಂಡಿನ ಸುದ್ದಿ ಅಂದರೆ ಇಲ್ಲಿ ಜನ ಬಾಯಿ ಬಿಡೋದು ವ್ಯಾಮೋಹದಿಂದ. ಸುದ್ದಿ ಕೇಳಿ ಮೂಗು ಮುರಿಯೋದು ಸಿಟ್ಟಿನಿಂದ! ಆಳದಲ್ಲಿ ತಮ್ಮವರೇ ಎಂಬ ವ್ಯಾಮೋಹ, ತಮ್ಮವರೇ ತಮ್ಮನ್ನ ಕೆಟ್ಟದಾಗಿ ನಡೆಸಿಕೊಂಡರು ಅನ್ನೋ ಸಿಟ್ಟು. ಇದೆಲ್ಲಾ ಇಲ್ಲಿಯ ಜನ ಸಮೂಹದ ಚಹರೆಗೆ ವಿಚಿತ್ರ ಕಳೆ ಕೊಡತ್ತೆ. ತಮ್ಮ ಹತಾಶೆ ತೀರಿಸಿಕೊಳ್ಳೋಕೆ ಒಂದು ಕಡೆ ಸಿಟ್ಟು ಮಾಡಿಕೊಂಡರೆ, ಚಪಲ ತೀರಿಸಿಕೊಳ್ಳೋಕೆ ಮತ್ತೊಂದು ಕಡೆ ವ್ಯಾಮೋಹಿಗಳಾಗ್ತಾರೆ.

ಬೇರೆ ದೇಶದ ಜನಗಳ ಹಾಗೆ ತಮ್ಮ ವಂಶವೃಕ್ಷ ಹುಡುಕ್ಕೊಳ್ಳೋ ಹುಚ್ಚು ಇವರಿಗೂ ಇದೆ. ಆ ಹುಡುಕಾಟ ಕಡೆಗೆ ಒಬ್ಬ ಕಳ್ಳ, ಕೊಲೆಗಡುಕ ಅಥವಾ ಸೂಳೆಯ ಕಾಲುಬುಡಕ್ಕೆ ಬಂದು ನಿಲ್ಲಬಹುದು. ಆದರೆ ಅವರಿಗೆ ಅದರ ಬಗ್ಗೆ ಕಳವಳ ಇಲ್ಲ. ಯಾಕೆಂದರೆ ಆ ಮೂಲ ವ್ಯಕ್ತಿಗೆ ಆಗಿರಬಹುದಾದ ಅನ್ಯಾಯದ ಸೂಕ್ಷ್ಮ ಅರಿವು ಇವರಿಗೆ ಇದೆ. ಇಂಗ್ಲೆಂಡಿನವರು ಐರಿಶರನ್ನ ಕೆಟ್ಟದಾಗಿ ನಡೆಸಿಕೊಂಡಿರುವುದು ಈಗ ಚರಿತ್ರೆ. ಅದೇ ಚರಿತ್ರೆಯ ನೆರಳು ಆಸ್ಟ್ರೇಲಿಯಾದ ಬಿಳಿಯರ ಸಂಖ್ಯೆಯಲ್ಲಿ ಐರಿಶರು ಹೆಚ್ಚಾಗಿರುವಂತೆ ನೋಡಿಕೊಂಡಿದೆ! ಹಸಿವಿಗೆ ಬ್ರೆಡ್ ಕದ್ದಂಥ ಅತಿ ಸಣ್ಣ ತಪ್ಪಿಗೆ ಜೈಲಾಗಿದೆ. ತಿಂಗಳಾನುಗಟ್ಟಲೆ ಬೋಟಿನ ತಳದ ಕಿಂಡಿಯಿಂದ ನೀರೊಂದನ್ನೇ ನೋಡಿ ದಿಕ್ಕುದೆಸೆ ಕಾಣದೆ ಕಂಗೆಟ್ಟಿದ್ದಾರೆ. ಅಳಿದುಳಿದು ಇಲ್ಲಿಗೆ ಬಂದಿಳಿದು ಆಸ್ಟ್ರೇಲಿಯ ಕಟ್ಟಿದ್ದಾರೆ.

ಅಧಿಕಾರದ ಬಗ್ಗೆ ಅನುಮಾನ, ಅಪನಂಬಿಕೆ. ಜೀವನದಲ್ಲಿ ಗೆದ್ದೋರ ಬಗ್ಗೆ ಅಸಡ್ಡೆ. ಧರ್ಮ-ಕರ್ಮದ ವಿಷಯದಲ್ಲಿ ನಿರ್ಲಕ್ಷ್ಯ. ಸಮಾನತೆಯ ಬಗ್ಗೆ ವಿಶಿಷ್ಟವಾದ ಆಶಯ… ಇವೆಲ್ಲಾ ಈ ನಾಡಿನ ಚರಿತ್ರೆಯ ಅಮೂಲ್ಯವಾದ ಕೊಡುಗೆ.

ಆಸ್ಟ್ರೇಲಿಯನ್ನರ ಅದಮ್ಯ ಹುಚ್ಚುತನಕ್ಕೆ ಐರಿಶರ ಬಳುವಳಿಯಿದೆ. ಅಬಾರಜಿನಿಗಳ ಮೇಲಿನ ಕ್ರೌರ್ಯದಲ್ಲಿ ಬ್ರಿಟೀಷ್ ಆಫೀಸರುಗಳ ದರ್ಪವಿದೆ. ಈಗ ವಲಸೆ ಬರುತ್ತಿರುವವರ ಮೇಲಿನ ಪ್ರೀತಿಯಲ್ಲಿ ಮುಂಚೆ ಬಂದ ವಲಸಿಗರ ತುಂಬು ಹೃದಯವಿದೆ. ಈಗೀಗ ಆ ಹುಚ್ಚು, ದರ್ಪ ಮತ್ತು ಪ್ರೀತಿಯ ನಡುವೆ ಒಂದು ಚೂರು ವ್ಯಂಗ್ಯಾನೂ ಸೇರಿಕೊಂಡು ಆತಂಕ ಹೆಚ್ಚಿಸ್ತಿದೆ. ಆದರೆ ಅದನ್ನೆಲ್ಲಾ ಇನ್ನು ಯಾವಾಗಲಾದರೂ ಹೇಳ್ತೀನಿ.