ಕವಿ ರಾಘವಾಂಕನು ಜನ್ನನ ನಿಕಟೋತ್ತರದಲ್ಲಿ ಬಂದವನು – ಹಳೆಗನ್ನಡದಿಂದ ನಡುಗನ್ನಡಕ್ಕೆ ಯುಗ ಬದಲಾದ ಕಾಲ ಅದು, ಅಂತೆಯೇ ಚಂಪೂವಿನಿಂದ ಷಟ್ಪದಿಗೆ. ನಡುಗನ್ನಡದಲ್ಲಿ ಷಟ್ಪದಿಯಲ್ಲಿ ಬರೆದ ಮೊದಲಿಗರಲ್ಲಿ ರಾಘವಾಂಕ ಪ್ರಮುಖನು. ಅವನು ಮೂರು ನಾಲ್ಕು ಕಾವ್ಯಗಳನ್ನು ಬರೆದಿದ್ದಾನೆ. ಅವುಗಳಲ್ಲಿ ಜನಪ್ರಿಯವಾದ್ದು ವಾರ್ಧಕ ಷಟ್ಪದಿಯಲ್ಲಿ ಬರೆದ “ಹರಿಶ್ಚಂದ್ರ ಕಾವ್ಯ”. ಅದರಲ್ಲಿ ಬರುವ ರೋಹಿತಾಶ್ವನ ಸಾವಿನ ಸಂದರ್ಭ ಮನಕರಗುವಂಥದು. ಎಂದಿನಂತೆ ಸೊಪ್ಪು ಸದೆಯನ್ನು ತರಲು ಕಾಡಿಗೆ ಹೋದ ಮಗನು ಬರುವ ವೇಳೆ ಕಳೆದರೂ ಮರಳಲಿಲ್ಲ, ಏನಾಯಿತೋ ಎಂದು ತಲ್ಲಣಿಸುವ ಚಂದ್ರಮತಿಯ ತಾಯಿ ಹೃದಯವನ್ನು ಕವಿ ಹಲವಾರು ಪದ್ಯಗಳಲ್ಲಿ ಚಿತ್ರಿಸಿದ್ದಾನೆ.
 ಕೆ. ವಿ. ತಿರುಮಲೇಶ್ ಬರೆದ ಲೇಖನ

 

‘ಪದ್ಯಂ ಸಮಸ್ತ ಜನತಾ ಹೃದ್ಯಂ’
– ಕವಿರಾಜಮಾರ್ಗ

ಒಳ್ಳೆಯ ಕವಿತೆಯ ರಹಸ್ಯವೇನೆಂದು ನನ್ನನ್ನು ಕೇಳಿದವರಿದ್ದಾರೆ; ನಾನೂ ಕೇಳಿದ್ದೇನೆ. ಒಮ್ಮೆ ಅನಂತಮೂರ್ತಿಯವರನ್ನು ನಾನು ಕೇಳಲಾಗಿ ಅವರು ‘ಹೋಗಯ್ಯ!’ ಎಂದು ನನ್ನನ್ನು ಗದರಿಸಿದರು. ಯಾಕೆಂದರೆ ಈ ಪ್ರಶ್ನೆಗೆ ಉತ್ತರವಿಲ್ಲ. ಕವಿತೆಯೆಂದರೆ ಅದೊಂದು ಆಲ್ಕೆಮಿಯಲ್ಲ, ಅದಕ್ಕೊಂದು ರೆಸಿಪಿಯಿಲ್ಲ. ಒಳ್ಳೆಯ ಕವಿತೆ ವಿಭಿನ್ನ ಕಾರಣಗಳಿಗೋಸ್ಕರ ಒಳ್ಳೇದಾಗಿರಬಹುದು. ಅಥವಾ ಕಾರಣಗಳು ತಾರ್ಕಿಕ ನಿರೂಪಣೆಗೆ ಸಿಗದೆ ಇರಬಹುದು. “ಒಂದು ಕಬ್ಬಕ್ಕಿಯನ್ನು ಕಾಣುವ ಹದಿಮೂರು ಬಗೆಗಳು”ಎಂಬ ಅಮೇರಿಕನ್ ಕವಿ ವಾಲೆಸ್ ಸ್ಟೀವನ್ಸ್ ನ ಕವಿತೆಯಿದೆ. ಇದರಲ್ಲಿ ಹದಿಮೂರು ಚಿಕ್ಕ ಚಿಕ್ಕ ವಿಭಾಗಗಳಿವೆ: ಒಂದೊಂದೂ ಒಂದೊಂದು ಇಮೇಜ್ (ಪ್ರತಿಮೆ) ನೀಡುತ್ತದೆ. ಅವು ನೇರವಾಗಿ ಹಕ್ಕಿ ಬಗ್ಗೆ ಇಲ್ಲ. ಏನು ಸಂಬಂಧ, ಕಬ್ಬಕ್ಕಿಯನ್ನು ಕಾಣುವುದಕ್ಕೆ ಹದಿಮೂರು ಬಗೆಗಳೇ ಯಾಕೆ ಎಂದು ಕೇಳುವುದು ಒಣ ತಾರ್ಕಿಕತೆಯಾಗುತ್ತದೆ. ಇಲ್ಲಿ ಒಂದು ಹಕ್ಕಿ ಹದಿಮೂರಾಗುತ್ತದೆ, ಹದಿಮೂರು ಒಂದಾಗುತ್ತದೆ. ಹಕ್ಕಿ ಎಂದರೇನು? ಕಾಣುವ ಬಗೆಯೇ ಹಕ್ಕಿ ಎಂಬಂತಿದೆ.

ಒಳ್ಳೆಯ ಕವಿತೆಗೆ ರಹಸ್ಯವನ್ನು ಹುಡುಕುವುದೆಂದರೆ ಐನ್ಸ್ಟೈನ್ ಜಗತ್ತಿನ ರಹಸ್ಯವನ್ನು ಒಂದು ಸೂತ್ರದಲ್ಲಿ ಹಿಡಿಯಲು ನಡೆಸಿದ ಮಹಾ ಪ್ರಯತ್ನದಂತೆ – ವಿಫಲ. ಒಳ್ಳೆಯ ಕವಿತೆ ಥಟ್ಟಂತ ಮನಸ್ಸಿಗೆ ತಟ್ಟುತ್ತದೆ, ಹೆಚ್ಚು ವಿಶ್ಲೇಷಿಸಿದಷ್ಟೂ ಮಾಯವಾಗುತ್ತದೆ. ಈ ನೆಪದಲ್ಲಿ ಪರಂಪರಾಗತ ಕನ್ನಡ ಸಾಹಿತ್ಯದಲ್ಲಿ ವಿಖ್ಯಾತವಾದ ಹಾಗೂ ನಾನು ಬಹಳವಾಗಿ ಮೆಚ್ಚಿಕೊಂಡಂಥ ಕೆಲವು ಉದಾಹರಣೆಗಳನ್ನು ಇಲ್ಲಿ ಕೊಡಬಯಸುತ್ತೇನೆ.

ಮೊದಲನೆಯದು ಕನ್ನಡದ ಮೊದಲ ಲಕ್ಷಣಗ್ರಂಥವಾದ, ನೃಪತುಂಗನ “ಕವಿರಾಜಮಾರ್ಗ”ದಿಂದ ಎತ್ತಿಕೊಂಡದ್ದು.

ಕಾವೇರಿಯಿಂದಮಾ ಗೋ-
ದಾವರಿ ವರಮಿರ್ದ ನಾಡದಾ ಕನ್ನಡದೊಳ್
ಭಾವಿಸಿದ ಜನಪದಂ ವಸು-
ಧಾವಲಯ ವಿಲೀನ ವಿಶದ ವಿಷಯ ವಿಶೇಷಂ
(“ಕವಿರಾಜಮಾರ್ಗಂ” 1.36)

ಇದೊಂದು ಕಂದ ಪದ್ಯ. ಎಷ್ಟೊಂದು ಅಡಕ ಗುಣವನ್ನು ಹೊಂದಿದೆ ನೋಡಿ! ‘ಕಾವೇರಿಯಿಂದ ಆ ಗೋದಾವರಿ ವರೆಗೆ ಇದ್ದ ನಾಡು ಅದು (‘ಕನ್ನಡ ನಾಡು’). ಅದರಲ್ಲಿ ಪ್ರಸಿದ್ಧವಾದ ಜನಪದ (ಜನಸಮೂಹ) ಇಡೀ ಜಗದ್ವಲಯದ ಸಕಲ ಸಂಗತಿಗಳಲ್ಲಿಯೂವಿಶೇಷವೇ ಸರಿ’ ಎಂಬ ತಾತ್ಪರ್ಯ. ಈ ತಾತ್ಪರ್ಯಕ್ಕೂ ಪದ್ಯಕ್ಕೂ ಇರುವ ಬಂಧ ವ್ಯತ್ಯಾಸವನ್ನು ಗಮನಿಸಿದರೆ ನಮಗೆ ಕವಿತೆ ದೊರಕುತ್ತದೆ. ಅದನ್ನು ಇಲ್ಲಿ ವಿವರಿಸಿ ನಾನು ಹಾಳು ಮಾಡಲಾರೆ. ಆದರೆ ಒಂದೆರಡು ಸಂಗತಿಗಳು: ‘ಆ ಕನ್ನಡದೊಳ್ ಭಾವಿಸಿದ ಜನಪದಂ’ ಎಂಬಲ್ಲಿನ ‘ಭಾವಿಸಿದ’ ಪದಕ್ಕೆ ‘ಯೋಚಿಸಿದ’ ಎಂಬ ಆಧುನಿಕ ಎನ್ನಬಹುದಾದ ಅರ್ಥವನ್ನು (ಕನ್ನಡದಲ್ಲಿ ಯೋಚಿಸು / ಇಂಗ್ಲಿಷ್ನಲ್ಲಿ ಯೋಚಿಸು ಎಂದು ಮುಂತಾಗಿ) ಕೆಲವರು ಕೊಡುತ್ತಾರೆ. ಆದರೆ ಅದು ಸರಿಯಲ್ಲ. ‘ಭಾವಿಸು’ ಎನ್ನುವುದಕ್ಕೆ ‘ಕಾಣಿಸು’ ಎಂಬ ಅರ್ಥವೂ ಇದೆ. ಇನ್ನು ‘ಆ ಕನ್ನಡದೊಳ್’ ಎಂದರೆ ‘ಆ ಕನ್ನಡ ನಾಡಿನಲ್ಲಿ’ ಎಂದು ಅರ್ಥ.

(ಪಂಪ)

ಕವಿ ಉದ್ದೇಶಿಸುವುದು ಕಾವೇರಿ ಮತ್ತು ಗೋದಾವರಿ ನದಿಗಳ ಮಧ್ಯದ ಕನ್ನಡ ನಾಡನ್ನು. ‘ಕಾಣಿಸು’ ಎನ್ನುವುದು ಇದಕ್ಕೆ ಹೊಂದುತ್ತದೆ. (‘ಕನ್ನಡ’ ಎಂಬ ಪದವನ್ನು ‘ಕನ್ನಡ ನಾಡು’ ಎಂಬ ಅರ್ಥದಲ್ಲಿ ಅವನು ಪ್ರಯೋಗಿಸಿದ್ದಾನೆ. ಆದ್ದರಿಂದ ‘ಕನ್ನಡದೊಳ್ ಭಾವಿಸಿದ’ ಎಂದರೆ ಕನ್ನಡ ನಾಡಿನಲ್ಲಿ ‘ಜನಿಸಿದ’ ಎಂದಾಗುತ್ತದೆ. ‘ಇರ್ದ’ ಮತ್ತು ‘ಭಾವಿಸಿದ’ ಎಂದು ಎರಡು ಕಡೆ ಭೂತಕಾಲ ಪ್ರತ್ಯಯಗಳನ್ನು ಬಳಸಿದ್ದರಿಂದ ನೃಪತುಂಗ ಉದ್ದೇಶಿಸಿದ್ದು ತನಗಿಂತ ಹಿಂದಣ ಕಾಲವನ್ನು ಎನ್ನಬಹುದು.

ಇಲ್ಲಿ ಎಲ್ಲರನ್ನೂ ಆಕರ್ಷಿಸುವಂಥದು ‘ವಸುಧಾವಲಯ ವಿಲೀನ ವಿಶದ ವಿಷಯ ವಿಶೇಷಂ’ ಎನ್ನುವ ಪದಪುಂಜ. ಮೂರಕ್ಷರಗಳ ಆರು ಪದಗಳನ್ನು ಒಳಗೊಂಡುದು. ಎಲ್ಲವೂ ಸಂಸ್ಕೃತಮೂಲದವಾದರೂ ಕನ್ನಡಕ್ಕೆ ಅಪರಿಚಿತವಲ್ಲ. ಪ್ರತ್ಯೇಕ ಪ್ರತ್ಯೇಕವಾಗಿ ನಮಗೀ ಪದಗಳ ಅರ್ಥ ಗೊತ್ತಿದೆ, ಆದರೆ ಒಟ್ಟಾರೆಯಾಗಿ? ಕನ್ನಡ ಕಾವ್ಯದಲ್ಲೇ ಅತಿ ದೊಡ್ಡ ಸಮಾಸಪದ ಇದು. ‘ಇಡೀ ವಿಶ್ವದಲ್ಲೇ ವಿಶೇಷವಾದ ವಿಷಯ ಇದು’ ಎಂಬುದು ಇದರ ಅರ್ಥ. ಈ ಅರ್ಥ ಸುಮ್ಮಗೆ ಹೊಳೆದುಬಿಡಬೇಕು, ಹೊಳೆಯುತ್ತದೆ. ಎಂದರೆ ಕವಿತೆಗೆ ನಾವು ನಮ್ಮನ್ನು ಬಿಟ್ಟುಕೊಡಬೇಕು; ಅದರ ಮೇಲೆ ನಮ್ಮ ಅಧಿಕಾರ ಚಲಾಯಿಸಿದರೆ ನಮಗೆ ಏನೂ ದೊರಕುವುದಿಲ್ಲ. ಈ ಪದಗಳ ಒಕ್ಕಣೆ ಒಂದಾದರೆ, ಇವುಗಳ ಅನುಪ್ರಾಸವನ್ನು ಗಮನಿಸಿ: ಮೊದಲೆರಡು ಪದಗಳು ವ-ಕಾರದಿಂದ ಸುರುವಾದರೆ, ನಂತರದ ನಾಲ್ಕು ವಿ-ಕಾರದಿಂದ ಸುರುವಾಗುತ್ತವೆ. ಕೊನೆಯ ‘ವಿಶೇಷಂ’ ಪದಕ್ಕೆ ಬಂದಾಗ ಇಡೀ ಸಮಾಸ ಪದವೇ ಕವಿ ಹೇಳಹೊರಟ ‘ವಿಶೇಷ’ದ ಪ್ರತೀಕವಾಗಿಬಿಡುತ್ತದೆ.

ಚಾಲುಕ್ಯ ಅರಸ ಇಮ್ಮಡಿ ಅರಿಕೇಸರಿಯ ಆಸ್ಥಾನ ಕವಿಯೂ ದಂಡನಾಯಕನೂ ಆಗಿದ್ದ ಆದಿ ಕವಿ ಪಂಪನ “ವಿಕ್ರಮಾರ್ಜುನವಿಜಯ”ಕ್ಕೆ ಸಮನಾದ ಕಾವ್ಯ ಹಳೆಗನ್ನಡದಲ್ಲಿ ಇನ್ನೊಂದಿಲ್ಲ, ಅವನದೇ “ಆದಿಪುರಾಣ”ವೂ ಸೇರಿದಂತೆ. ಅದರಲ್ಲಿ ಬರುವ ಬನವಾಸಿ ದೇಶದ ವರ್ಣನೆ, ಎಂದರೆ ಅವನದೇ ದೇಶದ ವರ್ಣನೆ, ಸರ್ವವಿದಿತ. ಪಾಂಡವರು ವನವಾಸದಲ್ಲಿರುವ ಸಮಯ, ಯುಧಿಷ್ಠಿರನು ಅರ್ಜುನನಿಗೆ ಮುಂದಿರುವ ಯುದ್ಧಕ್ಕೆ ಬೇಕಾದ ಸನ್ನಾಹ ಮಾಡಿಕೊಳ್ಳಲು ಎಂಬಂತೆ ದೇಶ ಪರ್ಯಟನೆ ನಡೆಸಲು ಸೂಚಿಸುತ್ತಾನೆ. ಅದರಂತೆ ಅರ್ಜುನನು ಒಬ್ಬನೇ ಸಂಚರಿಸುತ್ತ ಅನೇಕ ಸಾಹಸಗಳನ್ನು ಎದುರಿಸುತ್ತ ಕನ್ನಡ ನಾಡಿನ ಬನವಾಸಿ ದೇಶಕ್ಕೂ ಬರುತ್ತಾನೆ. ಅರ್ಜುನನ ಈ ಬನವಾಸಿಯ ಸುತ್ತಾಟ ಪಂಪನದೇ ಕಲ್ಪನೆ. ತನ್ನ ಅರಸ ಅರಿಕೇಸರಿಯಲ್ಲಿ ಅರ್ಜುನನನ್ನು ಗುರುತಿಸಿದ ಕವಿಗೆ ಇದೊಂದು ದೊಡ್ಡ ಕಾರ್ಯವಲ್ಲ. ಬನವಾಸಿಯ ಇಡೀ ವರ್ಣನೆ, ಅದರಲ್ಲೂ ಈ ಕೆಳಗಿನ ವೃತ್ತ, ಕನ್ನಡ ಕಾವ್ಯಪ್ರಿಯರಿಗೆ ಅತ್ಯಂತ ಆಪ್ಯಾಯಮಾನ:

ಚಾಗದ ಭೋಗದಕ್ಕರದ ಗೇಯದ ಗೊಟ್ಟಯಲಂಪುಗ-
ಳ್ಗಾಗರಮಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇ-
ನಾಗಿಯುಮೇನೊ ತೀರ್ದಪುದೆ ತೀರದೊಡಂ ಮರಿದುಂಬಿಯಾಗಿ ಮೇಣ್
ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್
(“ವಿಕ್ರಮಾರ್ಜುನ ವಿಜಯಂ” 1.29)

ಮೊದಲ ಸಾಲಿನಲ್ಲೆ ಓತಪ್ರೋತವಾಗಿ ಬರುವ ‘ಚಾಗದ ಭೋಗದಕ್ಕರದ’ ಎಂದು ಮುಂತಾದ ಪದಸರಣಿಯ ಪ್ರವಾಹ ಎಷ್ಟು ಮೋಹಕವಾಗಿದೆಯಲ್ಲವೇ? (ಇಲ್ಲಿ ತದ್ಭವ ಮತ್ತು ಸಮಸಂಸ್ಕೃತವನ್ನು ಒಟ್ಟಿಗೇ ತರುವ ಕನ್ನಡ ಕವಿಗಳ ರೀತಿ ಗಮನಾರ್ಹ.) ಮನುಷ್ಯರೆಂದರೆ ಯಾರು? ಇವೆಲ್ಲವುಗಳಿಗೆ ಆಗರವಾದವರು. ‘ಅಕ್ಕರ’ ಎಂದರೆ ವಿದ್ಯೆ, ವಿದ್ವತ್ತು; ಅಕ್ಕರೆಯನ್ನೂ ಅದು ಧ್ವನಿಸುತ್ತದೆ. ‘ಗೊಟ್ಟಿ’ಯೆಂದರೆ ಬಹುಶಃ ಸಂಗೀತಕ್ಕೆ ಸಂಬಂಧಿಸಿ, ಅಥವಾ ಪಾನಗೋಷ್ಠಿಯನ್ನು ಒಳಗೊಂಡ ಚರ್ಚಾ ಸಭೆ – ಪ್ರಾಚೀನ ಗ್ರೀಕರ ಸಿಂಪೋಸಿಯಮ್ ತರದ್ದು. ‘ಅಲಂಪು’ ಸೊಗಸು.) ಪಂಪನ ‘ಮಾನಸರು’ ಎಂಬ ವಿಶಿಷ್ಟ ಪದಪ್ರಯೋಗ ಇಲ್ಲಿ ಸುಭಗವೂ ಔಚಿತ್ಯಪೂರ್ಣವೂ ಆಗಿ ಬಂದಿದೆ. ಅದರಲ್ಲೂ ‘ಮಾನಸರೆ ಮಾನಸರು’ ಎಂಬ ಒತ್ತು. ಮಾನಸರು ಎಂದರೆ ಮನುಷ್ಯರು. ಚಾಗ ಭೋಗ ಅಕ್ಕರ ಗೇಯ ಗೋಷ್ಠಿ ಎಲ್ಲಕ್ಕೂ ಆಗರವಾದವರು. ಹೀಗೆ ಮನುಷ್ಯರಾಗಿ ಹುಟ್ಟಿಯೂ ಇವು ಇನ್ನೂ ಮುಗಿಯದೆ ಮಿಕ್ಕಿದ್ದರೆ ಬನವಾಸಿಯ ಉದ್ಯಾನಗಳಲ್ಲಿ ಮರಿದುಂಬಿಯಾಗಿ ಅಥವಾ ಕೋಗಿಲೆಯಾಗಿ ಹುಟ್ಟಬೇಕು! ಈ ‘ಮರಿದುಂಬಿ’ ಮತ್ತು ‘ಕೋಗಿಲೆ’ ಎರಡೂ ಕನ್ನಡ ಕವಿಗಳಿಗೆ ಪ್ರಿಯವಾದ ಪುಟ್ಟ ಪ್ರಾಣಿಗಳು – ತುಂಬಿ ಝೇಂಕಾರಕ್ಕೆ, ಕೋಗಿಲೆ ಮಧುರವಾದ ಕೂಗಿಗೆ ಪ್ರಸಿದ್ಧ. ಇನ್ನು ‘ಮರಿದುಂಬಿ’ ಎಂಬ ಪದ ಎಬ್ಬಿಸುವ ಭಾವಗಳ ಚಂದ ಮತ್ತು ಮುದ್ದಿನ ಬಗ್ಗೆ ಹೇಳುವುದೇ ಬೇಡ.

ಈ ಪದ್ಯದ ಹಿಂದಿನ ಪದ್ಯದಲ್ಲೂ ‘ಕುಕಿಲ್ವ’ ಕೋಗಿಲೆಗಳು ಮತ್ತು ‘ಪಾಡುವ’ ತುಂಬಿಗಳು ಬರುತ್ತವೆ. ಬನವಾಸಿಯ ನಂದನವನಗಳನ್ನು ಅರ್ಜುನನ ಕಣ್ಣುಗಳ ಮೂಲಕ ಪಂಪ ಕಾಣಿಸುವ ಬಗೆ ಇದು. ಆದರೆ ‘ಚಾಗದ ಭೋಗದ’ ನಂತರ ಬರುವ ಪದ್ಯ ಅರ್ಜುನನ ಪಾತ್ರವನ್ನು ಹಿಂದೆ ಸರಿಸಿ ನೇರವಾಗಿ ಪಂಪನ ಹೃದಯದಿಂದ ಮೂಡಿ ಬಂದುದು ಎನ್ನಬಹುದು. ‘ತೆಂಕಣ ಗಾಳಿ’ ಎಂದು ಮೊದಲಾಗಿ, ‘ಆರಂಕುಸಮಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ’ ಎಂದು ಅಂತ್ಯವಾಗುವ ಉತ್ಕೃಷ್ಟ ಕವಿತೆ ಇದು. ಹುಟ್ಟೂರಿನ ಹಂಬಲಕ್ಕೆ ನಮ್ಮ ಆದಿಕವಿಯೂ ಹೊರತಾಗಿಲ್ಲ. ತನ್ನ ಮಹಾಕಾವ್ಯದಲ್ಲಿ ಅದನ್ನು ಹೇಳಿಕೊಳ್ಳುವುದು ಅವನಿಗೊಂದು ಕೊರತೆಯಾಗದೆ ಅವಕಾಶವಾಯಿತು.

ಇನ್ನೇನು ಹಳೆಗನ್ನಡದ ಕಾಲ ಮುಗಿಯಿತು ಎಂಬ ಹದಿಮೂರನೆ ಶತಮಾನದಲ್ಲಿ ಬಂದವನು ಕವಿಚಕ್ರವರ್ತಿ ಜನ್ನ. (ಕನ್ನಡದಲ್ಲಿ ಇನ್ನಿಬ್ಬರು ಕವಿಚಕ್ರವರ್ತಿ ಬಿರುದಾಂಕಿತರಿದ್ದಾರೆ: ಪೊನ್ನ ಮತ್ತು ರನ್ನ.) ಹೊಯ್ಸಳರ ಆಸ್ಥಾನದಲ್ಲಿದ್ದವನು. ಎರಡು ಶ್ರೇಷ್ಠ ಕಾವ್ಯಗಳನ್ನು ಬರೆದಿದ್ದಾನೆ: “ಯಶೋಧರ ಚರಿತೆ” ಮತ್ತು “ಅನಂತನಾಥ ಪುರಾಣ.” ಅನಂತನಾಥ ಪುರಾಣ”ವು ಕನ್ನಡದ ಚಂಪೂ ಪರಂಪರೆಗೆ ಸೇರಿದ್ದು, ಸಾಕಷ್ಟು ದೀರ್ಘವಾಗಿದೆ. “ಯಶೋಧರ ಚರಿತೆ”ಯು ಅವತಾರಾಂತ್ಯದ ಕೆಲವು ಅಪವಾದಗಳನ್ನು ಬಿಟ್ಟರೆ ಇಡಿಯಾಗಿ ಕಂದ ಪದ್ಯಗಳಿಂದ ರಚಿತವಾದ್ದು. ಗದ್ಯದ ತುಣುಕು ಕೂಡ ಇಲ್ಲ. ಸುಮಾರು 311 ಪದ್ಯಗಳಿಂದ ಕೂಡಿದ ಈ ಕಾವ್ಯ ಅತ್ಯಂತ ಮನೋಜ್ಞವಾದುದು. ‘ಬಹಳ ಸುಂದರವಾದ ಪುಟ್ಟ ಕಾವ್ಯ ಇದು’ ಎಂದು ಜನ್ನನ ಸರಳತೆಯಲ್ಲೇ ಎಂ. ಮರಿಯಪ್ಪ ಭಟ್ಟರು ಇದನ್ನು ಕರೆದಿದ್ದಾರೆ. ಅವರ ಪ್ರಕಾರ ಜನ್ನನ ಶೈಲಿಯ ವಿಶಿಷ್ಟತೆ ‘ನಯ’ – ಲಾಲಿತ್ಯ ಎಂದು ನಾವು ಕರೆಯಬಹುದು. ಈ ಪದ್ಯವನ್ನು ನೋಡಿ:

ಅಮೃತಮತಿಯೆಂಬ ಪಾ-
ತಕಿಯ ಮಾಯೆ ಬನಮಾಯ್ತು ಚಂದ್ರಮತಿ ಮಾತೆಯ ಮಾ-
ತೆಮಗೆ ಬಲೆಯಾಯ್ತು ಹಿಂಸನ-
ಮಮೋಘ ಶರಮಾಯ್ತು ಕಡೆದುದಾತ್ಮ ಕುರಂಗಂ
(“ಯಶೋಧರ ಚರಿತೆ” 3.28)

ಹೀಗೆ ಮನುಷ್ಯರಾಗಿ ಹುಟ್ಟಿಯೂ ಇವು ಇನ್ನೂ ಮುಗಿಯದೆ ಮಿಕ್ಕಿದ್ದರೆ ಬನವಾಸಿಯ ಉದ್ಯಾನಗಳಲ್ಲಿ ಮರಿದುಂಬಿಯಾಗಿ ಅಥವಾ ಕೋಗಿಲೆಯಾಗಿ ಹುಟ್ಟಬೇಕು! ಈ ‘ಮರಿದುಂಬಿ’ ಮತ್ತು ‘ಕೋಗಿಲೆ’ ಎರಡೂ ಕನ್ನಡ ಕವಿಗಳಿಗೆ ಪ್ರಿಯವಾದ ಪುಟ್ಟ ಪ್ರಾಣಿಗಳು – ತುಂಬಿ ಝೇಂಕಾರಕ್ಕೆ, ಕೋಗಿಲೆ ಮಧುರವಾದ ಕೂಗಿಗೆ ಪ್ರಸಿದ್ಧ.

‘ಅಮೃತಮತಿ’ ಎಂಬ ಹೆಸರು ಎಷ್ಟು ಚಂದ! ಅದನ್ನು ಧರಿಸಿದವಳು ಅಷ್ಟೇ ಚಂದವಿರಬೇಕೆಂದೂ, ಸೌಮ್ಯಳಿರಬೇಕೆಂದೂ ಗುಣವಂತಳಿರಬೇಕೆಂದೂ ನಾವು ಬಯಸುತ್ತೇವೆ; ಹಲವು ನಿರೀಕ್ಷೆಗಳನ್ನದು ಮೂಡಿಸುತ್ತದೆ. ನಿಜದಲ್ಲಿ ಅಮೃತಮತಿ ಸುಂದರಿಯೇನೋ ಆಗಿದ್ದಳು. ಆದರೆ ಹೆಸರಿಗೆ ತಕ್ಕ ಇನ್ನು ಯಾವ ಒಳ್ಳೆಯ ಗುಣಗಳೂ ಅವಳಲ್ಲಿ ಇರಲಿಲ್ಲ. ಬದಲು ಕಾಮಾಂಧಳೂ, ವಿಶ್ವಾಸವಂಚಕಳೂ ಕ್ರೂರಿಯೂ ಆಗಿದ್ದಳು. ತನ್ನನ್ನು ಪ್ರೀತಿಸುತ್ತಿದ್ದ ಪತಿ ಅರಸ ಯಶೋಧರನನ್ನು ವಂಚಿಸಿ ಅಷ್ಟಾವಂಕನಾದ ಅರಮನೆ ನೌಕರಿಯಲ್ಲಿದ್ದ ಬದಗನ ಜತೆ ಮಲಗುತ್ತಿದ್ದಳು. ಇದಕ್ಕೆ ಕಾಮದ ಹೊರತಾಗಿ ಬೇರೇನು ಕಾರಣವೂ ಇರಲಿಲ್ಲ. ಇದಕ್ಕೆ ಇಂದು ಸ್ತ್ರೀವಾದಿ ನಿರೂಪಣೆಯನ್ನು ನೀಡುವವರಿದ್ದಾರೆ. ಅದರೆ ಇದು ಸರಿಬರುವುದಿಲ್ಲ. ಇಡೀ ಕಾವ್ಯ ಜೈನಧರ್ಮದ ಪರಮ ಮೌಲ್ಯವಾದ ಅಹಿಂಸೆಯ ಕುರಿತು. ಹಿಂಸೆಯಷ್ಟೇ ತಪ್ಪಲ್ಲ, ಹಿಂಸೆಯ ಸಂಕಲ್ಪ ಕೂಡ ಪಾಪ ಎನ್ನುತ್ತದೆ ಕಾವ್ಯ. ಕಾಮಾಂಧತೆಯನ್ನು ಸಹಾ ಅದು ಖಂಡಿಸುತ್ತದೆ.

(ರಾಘವಾಂಕ)

ತನ್ನ ಪತ್ನಿಯನ್ನೂ ಅವಳ ವಿಟನನ್ನೂ ಒಂದೇ ಏಟಿಗೆ ಕೊಲ್ಲಲೆಂದು ಖಡ್ಗ ಹಿರಿದ ಯಶೋಧರ ಹಾಗೆ ಮಾಡದೆ ತಾನು ಕಂಡ ಕನಸಿನ ರೂಪದಲ್ಲಿ ಒಂದು ರೂಪಕವಾಗಿ ತಾಯಿ ಚಂದ್ರಮತಿಗೆ ತಿಳಿಸಲು ಆಕೆ ಪರಶಾಂತಿಗಾಗಿ ಹಿಟ್ಟಿನ ಹುಂಜವೊಂದನ್ನು ಮಾರಿದೇವತೆಗೆ ಬಲಿಕೊಡಲು ಒತ್ತಾಯಿಸುತ್ತಾಳೆ. (ಇಬ್ಬರೂ ಜೈನರಾಗಿದ್ದೂ ಮಾರಿದೇವತೆಯನ್ನು ಪೂಜಿಸುವುದೆಂದರೆ ಅವರಿನ್ನೂ ತಮ್ಮ ಬುಡಕಟ್ಟು ವಿಶ್ವಾಸಗಳಿಂದ ಪೂರ್ತಿಯಾಗಿ ಹೊರಬಂದಿರಲಿಲ್ಲ ಎಂದು ಲೆಕ್ಕ.) ಯಶೋಧರ ಮನಸ್ಸಿಲ್ಲದ ಮನಸ್ಸಿನಿಂದ ಹಾಗೆ ಮಾಡುತ್ತಾನೆ. ಆಮೇಲೆ ಪಶ್ಚಾತಪಿಸುತ್ತಾನೆ. ತನಗಿನ್ನು ಮುಕ್ತಿಯಿಲ್ಲ, ಭವಾವಳಿಯಲ್ಲಿ ಬಿದ್ದೆ ಎನ್ನುವುದು ಅವನಿಗೆ ಅರಿವಾಗುತ್ತದೆ. ಮಾನಸಿಕ ಕ್ಷೋಭೆಯಲ್ಲಿ ಅವನು ನರಳುತ್ತಾನೆ. ಈ ಕೇಂದ್ರಬಿಂದುವಿಗೆ ಸೇರಿದ್ದು ಮೇಲಿನ ಕವಿತೆ. ತನ್ನ ಅವಸ್ಥೆಯನ್ನು ಒಂದು ಕಂದ ಪದ್ಯದಲ್ಲಿ ಯಶೋಧರ ಪ್ರಕಟಪಡಿಸಿದ್ದಾನೆ. ಇದರ ಹಂದರವನ್ನು ಬಿಡಿಸಿ ನೋಡಿ:

ಅಮೃತಮತಿಯೆಂಬ ಪಾತಕಿಯ ಮಾಯೆ ಬನಮಾಯ್ತು
ಚಂದ್ರಮತಿ ಮಾತೆಯ ಮಾತೆಮಗೆ ಬಲೆಯಾಯ್ತು
ಹಿಂಸನಮಮೋಘ ಶರಮಾಯ್ತು
ಕಡೆದುದಾತ್ಮ ಕುರಂಗಂ

ಮೂರು ಹೇಳಿಕೆಗಳು. ಕೊನೆಯಲ್ಲೊಂದು ಉಪಸಂಹಾರ – ಅದೂ ಎಷ್ಟು ಅನಿವಾರ್ಯವಾಗಿ ಬರುತ್ತದೆ! ‘ಅಮೃತಮತಿಯೆಂಬ ಪಾತಕಿಯ ಮಾಯೆ’ ಅರಣ್ಯವಾಯಿತು. ‘ಮಾಯೆ’ ಎಂಬ ಪದದ ಮೂಲಕ ಕವಿ ಉದ್ದೇಶಿಸುವುದು ಏನನ್ನು? ‘ಮಾಯೆ’ ಭಾರತೀಯ ತತ್ವಜ್ಞಾನದಲ್ಲಿ ಬಹು ಚರ್ಚಿತ ಪದ. ಕೇವಲ ಇಂದ್ರಿಯ ಗೋಚರವಾದ್ದು ಮಾಯೆ, ಅದೇ ಸತ್ಯವಲ್ಲ. ಅಮೃತಮತಿ ಅಂಥಾ ಮಾಯೆ. ಐಂದ್ರಿಕ ಆಕರ್ಷಣೆ ಅವಳದು. ಆದರೆ ಇಲ್ಲಿ ನಾವು ಅಷ್ಟು ಆಳಕ್ಕೆ ಹೋಗಬೇಕಾಗಿಯೂ ಇಲ್ಲ; ಅಮೃತಮತಿಯ ಕಪಟ, ಮೋಡಿ, ಜಾಲ, ಅಥವಾ ಯಶೋಧರನಿಗೆ ಅವಳ ಕುರಿತಾಗಿ ಇದ್ದ ಮೋಹ ಎಂಬ ಅರ್ಥಗಳೂ ಸಲ್ಲುತ್ತವೆ. ಅಂತೂ ಈ ಬೇಟೆಯ ರೂಪಕದಲ್ಲಿ ಅವಳ ಮಾಯೆ ವನವಾಗುತ್ತದೆ. ತಾಯಿಯ ಮಾತು ಬಲೆಯಾಗುತ್ತದೆ. ಅದರಿಂದ ಯಶೋಧರ ಹೊರಬರಲಾರ. ಹಿಂಸನವೆನ್ನುವುದು ಬಾಣವಾಗುತ್ತದೆ. ಆತ್ಮವೆಂಬ ಹುಲ್ಲೆ ಸತ್ತು ಬಿದ್ದುಬಿಡುತ್ತದೆ. ಎಷ್ಟೊಂದು ಸ್ಪಷ್ಟವಾದ ರೂಪಕ ಇದು! ಯಶೋಧರ ತನ್ನ ಅಸಹಾಯಕ ಪರಿಸ್ಥಿತಿಯನ್ನು ಹೀಗೆ ಮನಸ್ಸಿಗೆ ತಂದುಕೊಳ್ಳುತ್ತಾನೆ. ಆದರೆ ಇಲ್ಲಿ ಎದ್ದು ನಿಲ್ಲುವುದು ಹಿಂಸನದ ಪಾತ್ರ – ಅದು ಕೇವಲ ಸಂಕಲ್ಪ ಹಿಂಸೆಯಾದರೂ ಹಿಂಸೆ ಹಿಂಸೆಯೇ. ಅದನ್ನು ತೊರೆದಾಗಲೇ ಅವನಿಗೆ ಭವಾವಳಿಯಿಂದ ಮುಕ್ತಿ. ಇನ್ನು ಇಲ್ಲಿನ ‘ಆಯ್ತು’ ಪದದ ಮರುಕಳಿಕೆ, ‘ಅಮೋಘ’ (ಸೋಲದ್ದು) ಎಂಬ ಪದದ ಬಳಕೆ, ‘ಮಾತೆಯ ಮಾತೆಮಗೆ’ ಎಂಬಲ್ಲಿನ ಕನ್ನಡದ ಕವಿಗಳಿಗೆ ಪ್ರಿಯವಾದ ಒಂದು ಶಬ್ದಾಲಂಕಾರ ಕವಿತೆಯ ಸೊಬಗನ್ನು ಹೆಚ್ಚಿಸಿವೆ.

ಕವಿ ರಾಘವಾಂಕನು ಜನ್ನನ ನಿಕಟೋತ್ತರದಲ್ಲಿ ಬಂದವನು – ಹಳೆಗನ್ನಡದಿಂದ ನಡುಗನ್ನಡಕ್ಕೆ ಯುಗ ಬದಲಾದ ಕಾಲ ಅದು, ಅಂತೆಯೇ ಚಂಪೂವಿನಿಂದ ಷಟ್ಪದಿಗೆ. ನಡುಗನ್ನಡದಲ್ಲಿ ಷಟ್ಪದಿಯಲ್ಲಿ ಬರೆದ ಮೊದಲಿಗರಲ್ಲಿ ರಾಘವಾಂಕ ಪ್ರಮುಖನು. ಅವನು ಮೂರು ನಾಲ್ಕು ಕಾವ್ಯಗಳನ್ನು ಬರೆದಿದ್ದಾನೆ. ಅವುಗಳಲ್ಲಿ ಜನಪ್ರಿಯವಾದ್ದು ವಾರ್ಧಕ ಷಟ್ಪದಿಯಲ್ಲಿ ಬರೆದ “ಹರಿಶ್ಚಂದ್ರ ಕಾವ್ಯ”. ಅದರಲ್ಲಿ ಬರುವ ರೋಹಿತಾಶ್ವನ ಸಾವಿನ ಸಂದರ್ಭ ಮನಕರಗುವಂಥದು. ಎಂದಿನಂತೆ ಸೊಪ್ಪು ಸದೆಯನ್ನು ತರಲು ಕಾಡಿಗೆ ಹೋದ ಮಗನು ಬರುವ ವೇಳೆ ಕಳೆದರೂ ಮರಳಲಿಲ್ಲ, ಏನಾಯಿತೋ ಎಂದು ತಲ್ಲಣಿಸುವ ಚಂದ್ರಮತಿಯ ತಾಯಿ ಹೃದಯವನ್ನು ಕವಿ ಹಲವಾರು ಪದ್ಯಗಳಲ್ಲಿ ಚಿತ್ರಿಸಿದ್ದಾನೆ. ಅವುಗಳಲ್ಲಿ ಈ ಒಂದನ್ನು ನೋಡಿ:

ಬಂದರಂ ರೋಹಿತಾಶ್ವಾ ಎಂದು ಬಟ್ಟೆಯೊಳು
ನಿಂದರಂ ರೋಹಿತಾಶ್ವಾ ಎಂದು ಗಾಳಿಗಿರಿ-
ಕೆಂದಡಂ ರೋಹಿತಾಶ್ವಾ ಎಂದು ಕರೆಕರೆದು ಬಿಡೆ ಬೀದಿಗರುವಿನಂತೆ
ಮಂದಮತಿಯಾಗಿದ್ದ ಚಂದ್ರಮತಿಗೊಬ್ಬನೈ-
ತಂದಿಂದು ಕೂಡೆ ಹೋಗಿರ್ದು ಕಂಡೆಂ ನಿನ್ನ
ಕಂದನೊಂದುಗ್ರ ಫಣಿ ತಿಂದು ಜೀವಂಗಳೆದನೆಂದು ಪೇಳಿದನಾಗಲು
(“ಹರಿಶ್ಚಂದ್ರ ಕಾವ್ಯ” 12.16)

ಇಂಥ ತಲ್ಲಣವನ್ನು ಇದಕ್ಕಿಂತ ಚೆನ್ನಾಗಿ ವಿವರಿಸುವುದು ಸಾಧ್ಯವೇ? ಯಾರಾದರೂ ಬಂದರೆ ರೋಹಿತಾಶ್ವಾ ಎನ್ನುತ್ತಾಳೆ, ಯಾರನ್ನಾದರೂ ಕಂಡರೆ ರೋಹಿತಾಶ್ವಾ ಎನ್ನುತ್ತಾಳೆ, ಗಾಳಿಯ ಶಬ್ದವಾದರೂ ರೋಹಿತಾಶ್ವಾ ಎನ್ನುತ್ತಾಳೆ. ಅವಳ ಮತಿಯೇ ಕೆಟ್ಟಿದೆ, ತಾಯಿ ತಪ್ಪಿದ ಕರುವಿನಂತಾಗಿದೆ ಅವಳ ಸ್ಥಿತಿ. ಅಂಥವಳಿಗೆ ಆಘಾತವಾಗುವ ರೀತಿಯಲ್ಲಿ ಒಬ್ಬ ಬಂದು ಹೇಳುತ್ತಾನೆ, ನಿನ್ನ ಮಗನನ್ನು ಹಾವು ಕಡಿದು ಕೊಂದಿತು ಎಂದು. ಆಮೇಲೆ ಅವಳ ಗೋಳಾಟ ಹೇಳುವುದು ಬೇಡ. ಮುಂದಿನ ಪದ್ಯಗಳಲ್ಲಿ ರಾಘವಾಂಕ ಇದನ್ನೆಲ್ಲ ಸಮರ್ಥವಾಗಿ ನಿಭಾಯಿಸುತ್ತಾನೆ. ಈ ಮೇಲಿನ ಪದ್ಯದಲ್ಲಿ ನಮ್ಮ ಮನಸ್ಸಿಗೆ ತಟ್ಟುವುದು ಅದರ ಚಿತ್ರಕ ಶಕ್ತಿ.

ಇನ್ನು ಕುಮಾರವ್ಯಾಸ ಭಾರತದಿಂದ ಯಾವ ಉದಾಹರಣೆಯನ್ನು ಎತ್ತಿಕೊಳ್ಳಲಿ? ಅದೊಂದು ಕವಿತೆಗಳ ಆರ್ಣವ, ಮಹಾಸಾಗರ. ಅದರಲ್ಲಿ ಇಲ್ಲದ ಸಂಗತಿಗಳಿಲ್ಲ. ಎಲ್ಲವೂ ಉತ್ತಮ ರಚನೆಗಳು. ನನ್ನ ಮನಮುಟ್ಟಿದ ಕವಿತೆಗಳಲ್ಲಿ ಒಂದು:

ಹಿರಿಯರಿಲ್ಲದ ಸಭೆ ಮನುಷ್ಯರ
ನೆರವಿಯದು ಸಭೆಯಲ್ಲ ಮೂರ್ಖರು
ಹಿರಿಯರಲ್ಲ ಯಥಾರ್ಥ ಭಾಷಣ ಭೀತ ಚೇತನರು
ಹಿರಿಯರಿದೆ ಸಾಮಾಜಿಕರು ಸ-
ಚ್ಚರಿತರಿದೆಲಾ ಸ್ತ್ರೀಮತವನು-
ತ್ತರಿಸಲಾಗದೆ ಧರ್ಮಶಾಸ್ತ್ರದೊಳೆಂದಳಿಂದುಮುಖಿ
(“ಕರ್ಣಾಟ ಭಾರತ” ಸಭಾಪರ್ವ 12.81)

(ವಾಲೆಸ್ ಸ್ಟೀವನ್ಸ್)

ಸಂದರ್ಭ: ಶಕುನಿಯು ಕೌರವನಿಗೋಸ್ಕರ ಪಾಂಡವರನ್ನು ಸೋಲಿಸಲು ಹೊಸೆದ ಕಪಟ ದ್ಯೂತದಲ್ಲಿ ಯುಧಿಷ್ಠಿರನು ಎಲ್ಲವನ್ನೂ, ಸಂಪತ್ತನ್ನು, ತಮ್ಮಂದಿರನ್ನು, ತನ್ನನ್ನೂ, ಕೊನೆಗೆ ಪತ್ನಿ ದ್ರೌಪದಿಯನ್ನೂ ಪಣವಿಟ್ಟು ಸೋತಿರಲು, ಅದಕ್ಕಾಗಿಯೇ ಕಾಯುತ್ತಿದ್ದ ದುರ್ಯೋಧನ ಅವಳನ್ನು ರಾಜಸಭೆಗೆ ಎಳೆತರಿಸಿ ತನ್ನ ಅರಮನೆಯಲ್ಲಿ ದಾಸಿಯಾಗು ಎಂದು ಒತ್ತಾಯಿಸುವ ಪ್ರಸಂಗ. ತನ್ನ ನಿಸ್ಸಹಾಯಕ ಸ್ಥಿತಿಯಲ್ಲಿ ದ್ರೌಪದಿ ಕೇಳುವ ಪ್ರಶ್ನೆ: ತಾನು ತನ್ನನ್ನು ಕಳಕೊಂಡ ಮೇಲೆ ಪತಿಗೆ ಪತ್ನಿಯನ್ನು ಪಣಕ್ಕಿಡುವ ಅಧಿಕಾರ ಇದೆಯೇ? ಇಲ್ಲ ಎನ್ನುವುದು ಅವಳ ಮತ. ಇದನ್ನವಳು ಬೀಷ್ಮ, ದ್ರೋಣ ಮುಂತಾದ ಹಿರಿಯರಿರುವ ಸಭೆಯ ಮುಂದೆ ಕೇಳಿದರೆ ಅವರು ಸರಿಯಾದ ಉತ್ತರವನ್ನೇ ಕೊಡುವುದಿಲ್ಲ. ಆಗ ಅವಳು ಹೇಳುವ ಮಾತು ಮೇಲಿನ ಪದ್ಯದಲ್ಲಿರುವುದು. ಸತ್ಯವನ್ನು ಹೇಳಲು ಹೆದರುವ ಹಿರಿಯರು ಹಿರಿಯರೇ ಅಲ್ಲ ಎನ್ನುತ್ತಾಳೆ.

ನಮಗಿಲ್ಲಿ ಅಚ್ಚರಿ ಮೂಡಿಸುವುದು ಅವಳು ಬಳಸುವ ‘ಸ್ತ್ರೀಮತ’ ಎಂಬ ಪದ. ಸಮಸ್ತ ಸ್ತ್ರೀಕುಲದ ಸ್ವಾತಂತ್ರ್ಯವನ್ನು ಸಾರುವ ಪದ ಇದು. ಈ ಸ್ತ್ರೀಮತದ ಪ್ರಶ್ನೆಯನ್ನು ನಿಮ್ಮ ಧರ್ಮಶಾಸ್ತ್ರದೊಳಗೆ ಉತ್ತರಿಸಲಾಗದೇ ಎಂದು ಕೇಳುತ್ತಾಳೆ. ಇದೊಂದು ದೊಡ್ಡ ಸವಾಲು, ಈ ಹಿರಿಯರಿಗೆ ಎಂತೋ ಅಂತೆಯೇ ಧರ್ಮಶಾಸ್ತ್ರಗಳಿಗೆ, ಕವಿ ನಾರಣಪ್ಪ ದ್ರೌಪದಿಯ ಬಾಯಿಯಿಂದ ಕೇಳಿಸುವುದು. ಇದೊಂದು ಬಹಳ ಘನವಾದ ಪದ್ಯವೆಂದು ನನ್ನ ಅನಿಸಿಕೆ.

ನಮಗೆ ಬಳುವಳಿಯಾಗಿ ಬಂದ ಕನ್ನಡ ಕಾವ್ಯ ಅಗಾಧವೂ ಅಮೂಲ್ಯವೂ ಆದುದು. ಅದು ಮೊಗೆದಷ್ಟು ಮುಗಿಯದು. ಹಾಗೂ ನಮ್ಮ ಕೈಯಲ್ಲಿರುವ ಬಿಂದಿಗೆಯಷ್ಟೇ ನಮಗೆ ಸಿಗುವಂಥದು. ಕವಿತೆಯೆಂದರೇನು ಎಂಬ ನೆಪದಲ್ಲಿ ನಾನಿಲ್ಲಿ ಕೆಲವು ‘ಜನತಾಸಮ್ಮತ’ ಉದಾಹರಣೆಗಳನ್ನು ಪೂರ್ವಸೂರಿಗಳ ಕಾವ್ಯಗಳಿಂದ ಕೊಟ್ಟಿದ್ದೇನೆ. ಆಧುನಿಕ ಕವಿತೆಗಳ ಪ್ರಸ್ತಾಪವನ್ನೇ ನಾನು ಮಾಡಿಲ್ಲ. ‘ಕವಿತೆ’ ಅಥವಾ ‘ಕವನ’ ಎಂಬ ನಮ್ಮ ಕಲ್ಪನೆಯೇ ನವೋದಯ – ನವ್ಯದ್ದು; ಹಿಂದಿನದನ್ನು ಹೆಚ್ಚಾಗಿ ‘ಪದ್ಯ’ ಎನ್ನುತ್ತೇವೆ. (ಆದರೆ ಅನಂತಮೂರ್ತಿಯವರ ಮೊದಲ ಕವನ ಸಂಕಲನದ ಹೆಸರು “15 ಪದ್ಯಗಳು”!) ಇಲ್ಲಿ ನಾನು ಕವಿತೆ ಮತ್ತು ಪದ್ಯ ಎಂಬ ಪದಗಳನ್ನು ಮಿಶ್ರಧಾಟಿಯಲ್ಲಿ ಬಳಸಿದ್ದೇನೆ. ಆಧುನಿಕ ಕವಿತೆ ಹಿಂದಣ ‘ಕವಿತೆ/ ಪದ್ಯ’ಗಳಿಗಿಂತ ತೀರಾ ಭಿನ್ನವಾಗಿದೆ. ಎಲ್ಲವೂ ಬದಲಾಗಿದೆ – ಜನಜೀವನ, ಭಾಷೆ, ಮತ್ತು ಸಾಹಿತ್ಯದ ಕುರಿತಾದ ನಮ್ಮ ಕಲ್ಪನೆ. ಮುಕ್ತ ಛಂದಸ್ಸು ದಿಡ್ಡಿ ಬಾಗಿಲನ್ನು ತೆರೆದುಬಿಟ್ಟಂತಾಗಿದೆ. ಕಿಟಕಿ ಬಾಗಿಲುಗಳನ್ನು ವಿಸ್ತರಿಸುತ್ತ ವಿಸ್ತರಿಸುತ್ತ ಗೋಡೆಗಳೇ ಇಲ್ಲದ ಮನೆಗಳಲ್ಲಿ ನಾವು ವಾಸಿಸುವ ಹಾಗೆ ಅನಿಸುತ್ತಿದೆ. ಆಧುನಿಕ ಕವಿತೆಯ ಕುರಿತು ವಾಲೆಸ್ ಸ್ಟೀವನ್ಸ್ ನದು ಒಂದು ಕವಿತೆಯಿದೆ. ಈ ಕೆಳಗಿನದು ಅದರ ಕನ್ನಡಾನುವಾದ (ನನ್ನದೇ ಪ್ರಯತ್ನದಲ್ಲಿ):

ಮನಸ್ಸಿನ ಕವಿತೆ ಎಷ್ಟು ಸಾಕೋ ಅಷ್ಟನ್ನು
ಕಾಣುವ ಕ್ರಿಯೆಯಲ್ಲಿ. ಯಾವಾಗಲೂ ಅದು
ಕಾಣಬೇಕಿರಲಿಲ್ಲ: ದೃಶ್ಯ ಸಿದ್ಧವಾಗಿತ್ತು; ಬರಹದಲ್ಲೇನಿತ್ತೊ
ಅದನ್ನ ಅದು ಪುನರುಚ್ಚರಿಸಿತು.
ಆಮೇಲೆ ಬದಲಾಯ್ತು ನಾಟಕರಂಗ

ಬೇರೇನೊ ಆಗಿ. ಅದರ ಅತೀತವೊಂದು ಸ್ಮರಣಿಕೆಯಾಯ್ತು.
ಅದು ಜೀವಿಸಬೇಕು, ಸ್ಥಳೀಯ ಮಾತನ್ನು ಕಲಿಯುವುದಕ್ಕೆ.
ತನ್ನ ಕಾಲದ ಪುರುಷರನ್ನು ಎದುರಾಗಬೇಕು ಮತ್ತು ತನ್ನ ಕಾಲದ
ಸ್ತ್ರೀಯರನ್ನು. ಅದು ಯುದ್ಧದ ಬಗ್ಗೆ ಯೋಚಿಸಬೇಕು ಹಾಗೂ
ಯಾವುದು ಸಾಕೆನ್ನುವುದನ್ನು. ಅದೊಂದು ಹೊಸ ರಂಗವನ್ನು
ನಿರ್ಮಿಸಬೇಕು, ಅದು ಆ ರಂಗದ ಮೇಲಿರಬೇಕು
ಹಾಗೂ ತಣಿಯದ ನಟನಂತೆ ಅದು ನಿಧಾನವಾಗಿ ಮತ್ತು
ಧ್ಯಾನಸ್ಥವಾಗಿ ನುಡಿಯಬೇಕು ಮಾತುಗಳನ್ನು ಕಿವಿಯಲ್ಲಿ,
ಮನದ ಅತಿಸೂಕ್ಷ್ಮ ಕಿವಿಯಲ್ಲಿ, ಪುನರುಚ್ಚರಿಸಬೇಕು, ಆ
ಕಿವಿಯೇನು ಕೇಳಬಯಸುವುದೊ ಅದನ್ನು ನಿರ್ದಿಷ್ಟ, ಆ ಧ್ವನಿಗೆ
ಅದೃಶ್ಯ ಪ್ರೇಕ್ಷಕ ವೃಂದವೊಂದು ಆಲಿಸುತ್ತದೆ, ನಾಟಕವನ್ನಲ್ಲ,
ತನ್ನನ್ನು ತಾನು, ಇಬ್ಬರ ಭಾವಗಳಲ್ಲಿ ಎಂಬಂತೆ, ಎರಡು ಭಾವಗಳು
ಒಂದಾದಂತೆ. ನಟನೊಬ್ಬ ಕತ್ತಲಲ್ಲಿರುವ ಮಾಂತ್ರಿಕ, ಒಂದು ವಾದ್ಯವ
ಮೀಟುತ್ತ, ಒಂದು ತಂತಿವಾದ್ಯದ ಸರಿಗೆಯ ಮೀಟುತ್ತ, ಅದು ಧ್ವನಿಗಳ
ಹೊರಡಿಸುತ್ತ, ಆ ಧ್ವನಿಗಳು ಅಚಾನಕ ನಿಜತ್ವಗಳ ದಾಟುತ್ತ, ಮನಸ್ಸನ್ನು
ಇಡಿಯಾಗಿ ಕವಿದು, ಯಾವುದಕ್ಕಿಂತ ಕೆಳಗೆ ಅದು ಇಳಿಯದೊ,
ಯಾವುದಕ್ಕಿಂತ ಆಚೆಗೇರಲು ಅದಕ್ಕೆ ಮನಸ್ಸಿರದೊ

ಅದೊಂದು
ತೃಪ್ತಿಯ ಕಂಡುಕೊಳ್ಳುವುದಿರಬೇಕು, ಮತ್ತು ಒಬ್ಬ ಮನುಷ್ಯ
ಸ್ಕೇಟಿಂಗ್ ಮಾಡುವುದನ್ನು, ಒಬ್ಬಳು ಹೆಣ್ಣು ನರ್ತಿಸುವುದನ್ನು,
ಒಬ್ಬಳು ಹೆಣ್ಣು ತಲೆಬಾಚುವುದನ್ನು. ಮನಸ್ಸಿನ ಕ್ರಿಯೆಯ ಕವಿತೆ.
(ವಾಲೆಸ್ ಸ್ಟೀವನ್ಸ್, `ಆಧುನಿಕ ಕವಿತೆಯ ಕುರಿತು’)