ಕಾಜುಗಾರ ಅವರು ಕಾಜುವಾಡಾದ ಮನೆಯನ್ನು ಶಿಕ್ಷಕರಿಗೆ ಬಿಟ್ಟುಕೊಟ್ಟಿದ್ದಾರೆ.  ಸದ್ಯಕ್ಕೆ ಅವರ ಮನೆ ಶಿಕ್ಷಕರಿಂದ ತುಂಬಿದೆ. ನಾಲ್ಕೈದು ಜನ ಶಿಕ್ಷಕ ,ಶಿಕ್ಷಕಿಯರು, ಒಂದೇ ಗ್ಯಾಸ್ ಒಲೆಯಲ್ಲಿ ತಯಾರಾಗುವ ಸಾಮೂಹಿಕ ಭೋಜನ. ಅದು ಬೇಕು ಇದು ಇರಲಿ ಎಂಬ ಯಾವುದೇ ತಗಾದೆ ಇಲ್ಲ.  ಇದ್ದ ಸಾಮಾನು ಗಮನಿಸಿ ಆಯಾ ದಿನದ ಮೆನು ರೆಡಿಯಾಗುತ್ತಿತ್ತು. ಏಕೆಂದರೆ ಒಮ್ಮೊಮ್ಮೆ ಅಡುಗೆಗೆ ಬೇಕಾದ ಪದಾರ್ಥಗಳು ಅಣಶಿಯಲ್ಲಿ ಸಿಗುತ್ತಿರಲಿಲ್ಲ. ಅದನ್ನು ದೂರದ ಕುಂಬಾರವಾಡಾ, ಜೋಯಿಡಾದಿಂದ ತರಿಸಬೇಕಿತ್ತು.  ಇದ್ದ ಸಾಮಾನಿನಲ್ಲಿಯೆ ‘ಅಗ್ದಿ’ ಬೆಸ್ಟ ಎನಿಸಿದ ‘ಉಂಚಾ ಕ್ವಾಲಿಟಿ’ಯ ಸಾಮಾನು ತೆಗೆದು ಆರಿಸಿ ಅಂಗಡಿಯ ದಿನಕರ ಮಾಮಾ ಅವರು  ಮಾಸ್ತರರಿಗೆ ಕೊಡುತ್ತಿದ್ದನಾದರೂ ಎಲ್ಲ ಸಾಮಾನುಗಳು ಸಿಗುವ ಆಶಯವಿರಲಿಲ್ಲ.
‘ಕಾಳಿಯಿಂದ ಕಡಲಿನವರೆಗೆ’ ಅಂಕಣದಲ್ಲಿ
ಅಕ್ಷತಾ ಕೃಷ್ಣಮೂರ್ತಿ ಬರಹ.

 

ಅಣಶಿ ಘಟ್ಟ ಕುಸಿದು ಬಿದ್ದಿದೆ. ಕಾರವಾರ ಮಾರ್ಗವಾಗಿ ಅಣಶಿಗೆ ಬರುವ ಎಲ್ಲ ವಾಹನಗಳು ಅಣಶಿ ದಾರಿಯ ನೆನಪು ಮಾಡಿಕೊಂಡು ಮೌನವಾಗಿದೆ. ಒಂದು ದಿನವೂ ತಪ್ಪದೆ ಬರುತ್ತಿದ್ದ ಪೂನಾ, ವಿಜಯಪುರ, ಪಿಂಪ್ರಿ, ಕೊಲ್ಲಾಪುರ, ಖಾನಾಪುರ,ಮಿರಜ ಬಸ್ಸುಗಳ ಸ್ಟಾರ್ಟರಿನ ಸದ್ದು ಅಡಗಿದೆ. ದಿನವೂ ಅಡ್ಡಾಡುವ ಶಾಲೆಯ ಹಾದಿ ಮುಚ್ಚಿದ ನಂತರ, ಈಗಾಗಲೇ ಇರುವ ಬಿಡಾರದ ಮನೆಯನ್ನು ಬಿಟ್ಟು ಮತ್ತೊಂದು ಬಿಡಾರದ ಮನೆಯನ್ನು ಮಾಡುವ ಪರಿಸ್ಥಿತಿ‌ ಎದ್ದು ಬಿಟ್ಟಿದೆ.

ಕಾರವಾರಕ್ಕೆ ದಿನವೂ ಕಾಲೇಜಿಗೆ ಹೋಗುವ ಮಕ್ಕಳು, ಕಳಚಿ ಬಿದ್ದ ಬೆಟ್ಟವನ್ನು ದಿನವೂ ನೋಡಿ , ಯಾವಾಗ ರಸ್ತೆ ಸರಿಯಾಗುವುದೋ ಎಂದು ಯೋಚಿಸುತ್ತಿದ್ದಾರೆ. ಕೈಗಾ ಅಣುಶಕ್ತಿ ಕೇಂದ್ರದವರ ದಿನಗೂಲಿ ಕೆಲಸಕ್ಕೆ ಕೋಡುಗಾಳಿಯಿಂದ ದಿನವು ಬೈಕ್ ಮೇಲೆ ಹೋಗುವ ಶಾಬಲೋ ವೇಳಿಪ ‘ಗುಡ್ಡ ತೆರವು ಕಾರ್ಯಾಚರಣೆ ಇನ್ನೂ ಶುರುವಾಗಿಲ್ಲ’ ಎಂದು ಹಳಹಳಿಸುತ್ತಿದ್ದಾನೆ. ಕೊರೋನಾ ಕಾರಣದಿಂದ ಕೂಲಿ ಕೆಲಸ ಸಿಗುವುದೇ ಇಂದು ಕಷ್ಟವಾದಾಗ, ಸಿಕ್ಕ ಕೆಲಸ ಮಾಡಲು ಕೂಡ ಈ ಬೆಟ್ಟ ಬಿದ್ದು ತಡೆಯಾಯಿತಲ್ಲ! ಅಣಶಿ ಘಟ್ಟವು ಮುನಿಸಿಕೊಂಡಿದೆ ಎಂದು ಅಣಶಿಯ ಮಿರಾಶಿ ಅಜ್ಜ ಹೇಳುವಾಗ ಅವನ‌ ಕಣ್ಣು ತುಂಬುತ್ತದೆ.

ಅಣಶಿ , ಗುಂದ, ಉಳವಿ, ಕುಂಬಾರವಾಡಾ, ಬಾರಾಡಿ, ಬಾಡಪೋಲಿ ಇಲ್ಲಿನ ಹಲವು ಜನರು ಪ್ರತಿದಿನ ಅಣಶಿ ಘಟ್ಟದ ಮಾರ್ಗವಾಗಿ ಕದ್ರಾ ಮಲ್ಲಾಪುರ, ಕಾರವಾರ ತಲುಪಿ ಕೂಲಿ ಕೆಲಸ ಮಾಡುವವರು. ಅವರೆಲ್ಲರ ಒಂದು ಹೊತ್ತಿನ ಊಟವನ್ನು ಕಸಿದು ಕೊಂಡ ಆರೋಪ ಹೊತ್ತ ಅಣಶಿ ಘಟ್ಟದ ದಾರಿ ಮತ್ತೆ ಎದ್ದು ನಿಲ್ಲುವುದು ದೂರದ ಮಾತಾಗಿದೆ. ಇವೆಲ್ಲದರ ನಡುವೆ ಅಣಶಿ ಘಟ್ಟದ ಮೇಲಿನ ದಾರಿ ಬಹುಜನರು ಜಾಗರೂಕರಾಗಿ ಬರುವ ದಾರಿ. ಜಿಲ್ಲಾ ಕೇಂದ್ರದ ಸಂಪರ್ಕ ಕಲ್ಪಿಸುವ ಹಾದಿ. ಅಣಶಿ ಘಟ್ಟ ಬಿದ್ದು ಎಲ್ಲ ಸಂಪರ್ಕ ಕಡಿದುಕೊಂಡು ಜೋಯಿಡಾ ಎಂಬ ಇಡೀ ತಾಲೂಕು ಒಂದು ದ್ವೀಪವಾಗಿ ನಿಂತಿದೆ.

ಎಲ್ಲದಕ್ಕೂ ಮುಖ್ಯವಾಗಿ ಅಣಶಿ ಘಟ್ಟ ಬಿದ್ದಾಗ ತೊಂದರೆಯಾದದ್ದು ಬುಡಕಟ್ಟು ಜನರ ಆರೋಗ್ಯಕ್ಕೆ . ಜೋಯಿಡಾ ಸೇರಿದಂತೆ ಅಣಶಿಯ ಜನ ನಂಬಿಕೊಂಡದ್ದು ಕಾರವಾರದ ಜಿಲ್ಲಾ ಸರಕಾರಿ ಆಸ್ಪತ್ರೆಯನ್ನು. ಅವರ ರೋಗಗಳಿಗೆ , ಅವರ ಬಡತನಕ್ಕೆ ಸದಾ ಸ್ಪಂದಿಸಿದ್ದು ಜಿಲ್ಲಾಸ್ಪತ್ರೆ. ಇಂದು ಅವರ ಹಾಗೂ ಆಸ್ಪತ್ರೆಯ ನಡುವೆ ಘಟ್ಟ ಬಿದ್ದು ನಲವತ್ತು ಕಿ.ಮಿ ಕ್ರಮಿಸುವ ಹಾದಿ ಇಲ್ಲವಾಗಿ ಬೇರೆ ಮಾರ್ಗವಾಗಿ ಸುತ್ತು ಬಳಸಿ ಹೋಗಲು ಮೂರ್ನಾಲ್ಕು ತಾಲೂಕುಗಳನ್ನು ಹಾಯಬೇಕಾದ ದಯನೀಯ ಪರಿಸ್ಥಿತಿ. ಅಣಶಿ ಘಟ್ಟದ ಮೇಲಿನ ಹಾದಿ ಎಷ್ಟು ಮುಖ್ಯ ಎಂಬುದು ಅದು ಬಿದ್ದಾಗಲೆ ಅನುಭವಕ್ಕೆ ಬಂದದ್ದು. ಅದು ಬರಿಯ ಹೆದ್ದಾರಿ ಅಷ್ಟೇ ಅಲ್ಲ, ಒಂದು ಜೀವಂತಿಕೆಯ ಬದುಕನ್ನು ಕಟ್ಟಿಕೊಡುವ ದಾರಿ ಅದು. ಎಷ್ಟೋ ವರ್ಷಗಳಿಂದ ಇದ್ದ ತಿರುವಿನ ಘಟ್ಟದ ಹಾದಿ, ಅಂದಿನ‌ ಬುದ್ಧಿವಂತ ಇಂಜನಿಯರ್ ಗಳ ಕೊಡುಗೆ. ಇಂದು ಕೆಲವೇ ಕೆಲವು ಭಾಗ ರಸ್ತೆ ಕುಸಿದಿದೆ. ಆದರೆ ಅದನ್ನು ಸರಿ ಮಾಡಲು ಪರಿಶೀಲನೆ ತಂಡಗಳು, ವರದಿಗಳು ಎಂದು ಏನೇನೋ ಕಾರಣಗಳು ಎದ್ದು, ಬಿದ್ದ ಘಟ್ಟ ಕುಳಿತೇ ಬಿಟ್ಟಿದೆ.

ಅಣಶಿಯಲ್ಲಿ  ಈಗ ಬಿಡಾರವೇ ಇಲ್ಲ. ಇದ್ದ ಮೂರ್ನಾಲ್ಕು ಮನೆಗಳಲ್ಲಿ ಅರಣ್ಯ ಇಲಾಖೆಯವರು, ಪಂಚಾಯತಿ ಸಿಬ್ಬಂದಿ, ಮಾಸ್ತರ ಮಂದಿಗಳು ಬಿಡಾರ ಹೂಡಿ ಅದಾಗಲೆ ವರ್ಷಗಳು ಕಳೆದಿವೆ. ಅವು ಬಿಟ್ಟರೆ ಮತ್ಯಾವ ಖಾಲಿ ಖೋಲಿಗಳು ಅಲ್ಲಿಲ್ಲ. ಹೀಗಿರುವಾಗ ಬಾಡಿಗೆ ಮನೆಯಿಲ್ಲದೆ ಮಾಸ್ತರಿಕೆ ಮಾಡುವುದು ಕಷ್ಟಸಾಧ್ಯ ಎನಿಸಿದ್ದು ಉಂಟು. ಈ ಎಲ್ಲ ಸಂಗತಿಗಳ ನಡುವೆಯೂ ಐದು ಜನ ಶಿಕ್ಷಕ ಶಿಕ್ಷಕಿಯರು ಅಣಶಿಯಲ್ಲಿ ಉಳಿಯುವುದೆಂದು ತೀರ್ಮಾನ ಮಾಡಿ ಆಗಿದೆ. ಉಳಿಯಲು ಮನೆ ಹುಡುಕುವುದೆ ಕಷ್ಟ ಸಾಧ್ಯವಾದಾಗ, ಕೈಗೊಂಡ ತೀರ್ಮಾನ ಸಫಲವಾಗುವುದೇ ತಿಳಿಯದಾಗಿದೆ. ಹೀಗಿರುವಾಗ ನೆರವಿಗೆ ಬಂದವರು ಕಾಜುಗಾರ ಅವರು. ಕಾಜುವಾಡಾದ ಮನೆಯನ್ನು ಪೂರ್ತಿಯಾಗಿ ಪಾತ್ರೆ ಸಮೇತ ಶಿಕ್ಷಕರಿಗೆ ಬಿಟ್ಟುಕೊಟ್ಟು ತಾವು ಬೇರೆ ಊರಿನಲ್ಲಿ ತೊಂದರೆಯ ನಡುವೆಯೂ ಇದ್ದವರು.

ಕೊರೋನಾ ಕಾರಣದಿಂದ ಕೂಲಿ ಕೆಲಸ ಸಿಗುವುದೇ ಇಂದು ಕಷ್ಟವಾದಾಗ, ಸಿಕ್ಕ ಕೆಲಸ ಮಾಡಲು ಕೂಡ ಈ ಬೆಟ್ಟ ಬಿದ್ದು ತಡೆಯಾಯಿತಲ್ಲ! ಅಣಶಿ ಘಟ್ಟವು ಮುನಿಸಿಕೊಂಡಿದೆ ಎಂದು ಅಣಶಿಯ ಮಿರಾಶಿ ಅಜ್ಜ ಹೇಳುವಾಗ ಅವನ‌ ಕಣ್ಣು ತುಂಬುತ್ತದೆ.

ಸದ್ಯಕ್ಕೆ ಅವರ ಮನೆ ಶಿಕ್ಷಕರಿಂದ ತುಂಬಿದೆ. ನಾಲ್ಕೈದು ಜನ ಶಿಕ್ಷಕ ಶಿಕ್ಷಕಿಯರು, ಒಂದೇ ಗ್ಯಾಸ್ ಒಲೆಯಲ್ಲಿ ತಯಾರಾಗುವ ಎಲ್ಲರ ಭೋಜನ. ಅದು ಬೇಕು ಇದು ಇರಲಿ ಎಂಬ ಯಾವುದೇ ಚಾಯ್ಸ ಇಲ್ಲದ ಆಹಾರ, ಆ ದಿನ ತಯಾರಾದ ಪದಾರ್ಥವನ್ನೆ ಸರ್ವ ಶ್ರೇಷ್ಠವೆಂದು ಆ ದಿನ ಖುಷಿಯಿಂದ ತಿನ್ನುವುದು. ಇದ್ದ ಸಾಮಾನು ಗಮನಿಸಿ ಆಯಾ ದಿನದ ಮೆನು ರೆಡಿಯಾಗುತ್ತಿತ್ತು. ಏಕೆಂದರೆ ಒಮ್ಮೊಮ್ಮೆ ಅಡುಗೆಗೆ ಬೇಕಾದ ಪದಾರ್ಥಗಳು ಅಣಶಿಯಲ್ಲಿ ಸಿಗುತ್ತಿರಲಿಲ್ಲ. ಅದನ್ನು ದೂರದ ಕುಂಬಾರವಾಡಾ, ಜೋಯಿಡಾದಿಂದ ತರಿಸಬೇಕಿತ್ತು. ಇದ್ದ ಸಾಮಾನಿನಲ್ಲಿಯೆ ‘ಅಗ್ದಿ’ ಬೆಸ್ಟ ಎನಿಸಿದ ‘ಉಂಚಾ ಕ್ವಾಲಿಟಿ’ಯ ಸಾಮಾನು ತೆಗೆದು ಆರಿಸಿ ಅಂಗಡಿಯ ದಿನಕರ ಮಾಮಾ ಅವರು  ಮಾಸ್ತರರಿಗೆ ಕೊಡುತ್ತಿದ್ದನಾದರೂ ಎಲ್ಲ ಸಾಮಾನುಗಳು ಸಿಗುವ ಆಶಯವಿರಲಿಲ್ಲ. ಮೊಟ್ಟೆ ಬೇಕಾದರೆ ಮೂವತ್ತು ಕಿ.ಮಿ ದೂರ, ಹಾಲು ಬೇಕಾದರೆ ನಲವತ್ತು ಕಿ.ಮಿ ದೂರ ಹೀಗೆ ಕಿ.ಮಿ ಗಳ ಅಂತರ ಲೆಕ್ಕ ಹಾಕಿಯೆ ಯಾವ ಸಾಮಾನು ಬೇಡ, ಇದ್ದುದರಲ್ಲಿ ಮಾಡೋಣ ಎಂದು ಅನಿಸುವಂಥ ಭಾವ ಆಗಾಗ ಹುಟ್ಟುವ ಕಾರಣ ಕತ್ತಲು ಬೇಗ ಕಳೆದು ಬೆಳಕು ಹುಟ್ಟುವುದು ಕಷ್ಟವಾಗುತ್ತಿತ್ತು.

ಕಾಜುವಾಡಾದ ಕಟ್ಟ ಕಡೆಯ ಕಾಡಿನ ಮನೆ ಅದು. ಮನೆಯಿಂದ ಹೊರ ನೋಡಿದರೆ ಒಂದು ಬದಿಗೆ ಸುಮಾರು ಇಪ್ಪತ್ತು ಮನೆಗಳಿರುವ ಕಾಜುವಾಡಾ ಕೇರಿ,ಇನ್ನೊಂದು ಬದಿಗೆ ಸದಾ ಕತ್ತಲೆಯ ಪತ್ತಲ ಉಟ್ಟ ಕಾಡು. ನಡುವೆ ಮುಖ್ಯ ರಸ್ತೆಗೆ ಹೊಂದಿಕೊಂಡ ಕಲ್ಲು ಮಣ್ಣಿನ ಏರು ದಾರಿ. ಹತ್ತುವಾಗ ಉಬ್ಬಸ ಬಂದ ಹಾಗೆ ಉಚ್ಛ್ವಾಸ ನಿಶ್ವಾಸಗಳೆಲ್ಲ ಯುದ್ಧ ಮಾಡಿ ಬೆಟ್ಟವೇರಿ ಮನೆ ಸೇರುವ ಸಂಭ್ರಮ. ಮನೆಯ ಮೇಲ್ಛಾವಣಿಗೆ ಹೊದಿಸಿದ ತಗಡಿನ ಶೀಟು ರಾತ್ರಿಯಾಗುತ್ತಿದ್ದಂತೆ ಚಳಿಯನ್ನು ದಟ್ಟಣಿಸುವ ತಾಕತ್ತು ಹೊಂದಿದೆ. ಪ್ರತಿ ಮನೆಯು ಸಂಜೆ ಏಳರ ಹೊತ್ತಿಗೆ ಊಟದ ತಟ್ಟೆಯ ಎದುರು ಇರುತ್ತದೆ. ರಾತ್ರಿ ಎಂಟಾಗುತ್ತಿದ್ದಂತೆ ಜನರ ಒಂದೂ ಮಾತು ಕೇಳದೆ ಮೌನ ಕವಿದು, ದೀಪಗಳು ಆರಿಹೋಗಿ ಮಲಗಿ ಬಿಡುತ್ತವೆ.

ಕತ್ತಲು ಬಂದಂತೆಲ್ಲ ಎಲ್ಲಿಂದಲೋ ಎದ್ದ ಜೀರುಂಡೆಗಳು ತಮ್ಮಲ್ಲೆ ಪೈಪೋಟಿ ಎಬ್ಬಿಸಿ ಬಿಡುತ್ತವೆ. ಅಸಂಖ್ಯಾತ ಬಗೆಯ ಜೀರುಂಡೆಗಳ‌ ಸದ್ದು. ಬ್ಯಾಟರಿ ಹೊಡೆದು ನೋಡಲು ಪ್ರಯತ್ನಪಟ್ಟಷ್ಟು ಅಡಗುವವು. ಅವುಗಳನ್ನು ಕಾಣುವುದೇ ಅಪರೂಪ. ಮರದ ಎಲೆಗಳ ನಡುವೆ ಎಲೆಯಾಗಿ, ಟೊಂಗೆಗಳ ನಡುವೆ ಅದೇ ಬಣ್ಣದ ಕೀಟವಾಗಿ ಅಂಟಿಕೊಂಡಿರುತ್ತವೆ. ಕಾಣಲು ಕಡ್ಡಿ ಗಾತ್ರದಲ್ಲಿದ್ದರೂ ಅವುಗಳ ದನಿ ಮಾತ್ರ ತಾರಕ ಸ್ವರ. ಅಣಶಿಯಲ್ಲಿ ಒಂದುವರೆ ತಿಂಗಳು ಇಂತಹ ಜೀರುಂಡೆಗಳ ಹುಡುಕಾಟದಲ್ಲಿ ಹಗಲು ರಾತ್ರಿ ಕಳೆದದ್ದು ಇದೆ. ಕಣ್ಣಿಗೆ ಕಂಡರೂ ಅದು ಮರದ ಬಣ್ಣಕ್ಕೆ ಹೊಂದಿಕೊಂಡಂತೆ ಅಂಟಿಕೊಂಡ ಕಾರಣ ಮರದ ಕಾಂಡವೋ ಅಥವಾ ಉಸಿರಾಡುವ ಕೀಟವೋ ಎಂದು ಗೊತ್ತಾಗದೇ ತಬ್ಬಿಬ್ಬಾಗಬೇಕಾಗುತ್ತದೆ. ಅದ್ಯಾವುದೋ ಹೆಸರು ಕೇಳದ ಅನೇಕ ಜಾತಿಯ ಹಾವುಗಳ ನೆರಳು. ಆಗಾಗ ಕಾಲಿಗೆ ಗೊತ್ತಿಲ್ಲದೆ ಹತ್ತಿಕೊಂಡು ಬಿಡುವ ಕಾಂಟಿ, ದಿನವಿಡೀ ಸುರಿವ ಮಳೆ ಕತ್ತಲ ದಾರಿಯನ್ನು ಬಳಸಿ ಮರೆಸುವುದು, ಹನಿಗಳೊಂದಿಗೆ ಗಾಳಿಯೂ ಸೇರಿ ಲಾಸ್ಯವಾಡುತ್ತ ಸ್ತಬ್ಧ ಕೋಣೆಗಳ‌ ಚಲನೆ ಹೆಚ್ಚಿಸುವುದು.

ಅಣಶಿಯ ಮಳೆಗಾಲದ ವೈಭವ ಹಿಂದೆಲ್ಲ ಕಂಡುಂಡಿದ್ದು ಇದೆ. ಆದರೆ ಈ ಸಲ ಎಲ್ಲ ದೊಡ್ಡ ಮಳೆಗಳೆ. ಬಿದ್ದ ಒಂದೊಂದು ಹನಿಗೂ ಹೊಳೆಯಾಗುವ ತಾಕತ್ತು. ಜೊತೆಗೆ ವಿಪರೀತ ಚಳಿ. ಮಾಸ್ತರ ಮಂದಿ ತಂದ ದೊಡ್ಡ ದೊಡ್ಡ ರಜಾಯಿಗಳ ಒಳಗೆ ಚಳಿ ಆರಾಮವಾಗಿ ಹೊಕ್ಕಿ ಬಿಡುವ ಗಮ್ಮತ್ತು. ಹೀಗಾಗಿ ನಿದ್ದೆ ಇರದ ರಾತ್ರಿಗಳಲ್ಲಿ ಅಣಶಿಯ ಕುಸಿದ ಘಟ್ಟವೆ ಕಂಡು, ತಾವು ಅದಾಗಲೆ ಬಿಟ್ಟು ಬಂದ ಬಿಡಾರದ ಖೋಲಿ, ಅಲ್ಲಿನ‌ ಕಪಾಟಿನಲ್ಲಿ ಹಾಕಿಟ್ಟ ಮತ್ತಷ್ಟು ದೊಡ್ಡ ದೊಡ್ಡ ಚಾದರಗಳು, ಅವುಗಳಿಗೆ ಅಂಟಿದ ಡಾಂಬರು ಗುಳಿಗೆ ವಾಸನೆ, ಬೆಚ್ಚನೆಯ ಅನುಭೂತಿ ಕೊಡುವ ಸ್ವೇಟರು ಎಲ್ಲ ಕನಸಿನಂತೆ ತೋರಿ ಘಟ್ಟದ ಮೇಲಿನ ಹಾದಿ ಎಂದು ತೆರೆಯುವುದೊ ಎಂಬ ಯೋಚನೆ ರಾತ್ರಿಯೂ ಕಾಡಿ, ಬೆಳಿಗ್ಗೆದ್ದಾಗ ಆಟಕ್ಕೆ ಹೋದವರಂತೆ ಮುಖ ಸಣ್ಣಗೆ ಮಾಡಿಕೊಂಡು ಮತ್ತೆ ಅಡುಗೆ ಕೋಣೆಗೆ ಹೋದರೆ ಅಲ್ಲಿ ತಯಾರಾಗುವ ಹೊಸದೊಂದು ಉಪಹಾರ, ಬೇಗನೆ ಬೇಯಿಸಿಕೊಳ್ಳುವ ಮಧ್ಯಾಹ್ನದ  ಆಹಾರ, ಅದನ್ನು ತುಂಬಿಸಿಕೊಳ್ಳಲು ಬಾಯಿ ತೆರೆದು ಕುಳಿತ ಊಟದ ಡಬ್ಬಿ , ಕಾಯುತ್ತಿರುವ ಮಕ್ಕಳ ನೆನಪು , ಅವರ ಅಕ್ಷರಾಭ್ಯಾಸದ ಹಸಿವು, ಶಾಲೆ ಎಂಬ ನೆಮ್ಮದಿಯ ಗೂಡಿನ ಬದ್ಧತೆ ಹೊಸ ನಸುಕಿನಂತೆ ಎದ್ದು ಹೊಸ ಹುರುಪು ಮೂಡಿಸುತ್ತಿತ್ತು.

ಕಾಜುಗಾರರ ಮನೆಯೀಗ ನಮ್ಮ ಮನೆ. ಐದಾರು ಶಿಕ್ಷಕರ ನಡುವೆ ಒಂದು ಆತ್ಮೀಯತೆಯನ್ನು ಸೃಷ್ಟಿಸಿದ ಮನೆ. ಅದೊಂದು ಮಮತೆಯ ಮಡುವು. ಅಲ್ಲಿ ನಾಡಿನ ಮಾತುಗಳು ಹೊರಗೆ. ಕೇರಿಯ ಜಗಳಗಳು ಹೊರಗೆ. ಗೌಜಿ ಗದ್ದಲಗಳು, ವಾಹನಗಳ ಓಡಾಟ, ಗಡಿಬಿಡಿಗಳೆಲ್ಲ ಹೊರಗೆ. ಅಗ್ದಿ ಶಾಂತವಾದ ತಪಸ್ಸಿನ ಜೀವನ. ಸಂಜೆಯಾಯಿತೆಂದರೆ ಜೀರುಂಡೆಗಳು ಮಾತಾಡುವ ಕತ್ತಲು. ಬೆಳಗಾಯಿತೆಂದರೆ ಮುಗ್ಧ ಮಕ್ಕಳ ಹಾಲ್ಗೆನ್ನೆಯ ನಗು. ಇಲ್ಲಿ ಬದುಕು ಸಾರ್ವತ್ರಿಕ. ಒಬ್ಬರಿಗೊಬ್ಬರು ಸ್ಪಂದಿಸುತ್ತ ದಿನ ಜಾರುವ ಹೊತ್ತು. ಕಾಡಿನ ಅಂಚಿನ ಮನೆಯಲ್ಲಿಗ ಮನುಷ್ಯರ ವಾಸನೆಯ ಘಮ. ರಾತ್ರಿ ಅಂಗಳ ದಾಟಲು ಒಂದು ನಮೂನಿ ಭಯ. ಇರುಳಲ್ಲಿ ಹೊಳೆವ ಆ ಜೋಡಿ ಕಣ್ಣುಗಳು ಯಾವ ಪ್ರಾಣಿಯದು?

ಹುಲಿ ಸಂರಕ್ಷಿತ ಪ್ರದೇಶ ಎಂದು ನಕಾಶೆಯಲ್ಲಿ ಓದಿದ್ದು, ಅರಣ್ಯ ಇಲಾಖೆಯವರ ದೊಡ್ಡ ದೊಡ್ಡ ಪೋಸ್ಟರ್ ಗಳಲ್ಲಿ ಕಂಡದ್ದು ಇಲ್ಲಿಯೂ ಕಂಡಿತೆ.. ಜಾಗರದ ರಾತ್ರಿಗಳು ಹಗಲುಗಳನ್ನು ಒದ್ದೆಯಾಗಿಸುತ್ತಿವೆ. ಕಾಡಿನಂಚಿನ ಮನೆಯ ಮೂರು ಕಾಲದ ಉಸಿರಾಟ ತಿಳಿದವರು ಶರ್ವಾ ತಾಲೂಕಾದಾರ್ ಸರ್ ಮಾತ್ರ. ಕಷ್ಟಕಾಲದಲ್ಲಿ ಮುಂದಾಗಿ ನಿಂತು ಒಂದು ಬೆಳಕಿನ ಕಿರುದಾರಿ ಕಾಣಿಸಿದವರು. ಮನೆ ಮಠ ಬಿಟ್ಟು ಬಂದ ಮಾಸ್ತರ ಮಂದಿಗೆ ತಮ್ಮ ಶಕ್ತಿಮೀರಿ ಇದ್ದುದ್ದರಲ್ಲಿಯೆ ಚಲೊ ಎನಿಸುವಷ್ಟು ತಯಾರಿ ನಡೆಸಿ ಅಣಶಿಗೆ ಸಂಭ್ರಮದಿಂದ ಸ್ವಾಗತಿಸಿದವರು.