ಅಲ್ಲಿ ರಿಹರ್ಸಲ್ ಮಾಡುತ್ತಿದ್ದ ಹುಡುಗನ ಕೈಕಾಲಿನ ಓಘಕ್ಕೆ ಹೆಜ್ಜೆ ಹಾಕುತ್ತಿದ್ದ ಮಗುವೊಂದು ಸಮುದ್ರದಂಚಲ್ಲಿ ನೀರ ತೆರೆಯ ಜೊತೆಗೆ ಕುಣಿಯುತ್ತಿತ್ತು. ನಾವು ಅದನ್ನು ಮುದ್ದು ಮಾಡಿದಾಗ ಅದು ಬಂದು ನನ್ನನ್ನು ತಬ್ಬಿಕೊಂಡಿತು. ಅದರ ತಾಯಿ ನಕ್ಕು ನನ್ನೊಡನೆ ಮಾತನಾಡಿದಾಗ ಅವಳಿಗೆ ಮೂರು ಮಕ್ಕಳೆಂದಳು. ಅವಳಿಗೆ ಫ್ರೆಂಚ್ ಬಿಟ್ಟು ಬೇರೆ ಭಾಷೆ ಗೊತ್ತಿರಲಿಲ್ಲ. ಕಾನ್ಸಿನ ಪ್ರಾದೇಶಿಕ ಭಾಷೆ ಗೊತ್ತೆಂದಳು. ಅದು ಮೀನುಗಾರರ ಊರೆಂದಳು. ಆದರೆ ಗಂಡ ಈಗ ಬೇರೆ ಕೆಲಸ ಮಾಡುತ್ತಾನೆಂದ ಅವಳಿಗೆ ನಾವು ಇಂಡಿಯಾದವರು ಎಂದು ಹೇಳಿದಾಗ “ಐ ಲೈಕ್ ಶಾರೂಖ್ ಖಾನ್” ಎಂದು ಪ್ರೀತಿಯಿಂದ ಹೇಳಿದಳು.
ಹೆಚ್ ಆರ್ ಸುಜಾತಾ ತಿರುಗಾಟ ಕಥನ

ಒಂದು ಸಿನಿಮಾ ನೋಡಿದ್ದು

ಕಾನ್ ಉತ್ಸವದಲ್ಲಿ ನೋಡಿದ ಒಂದು ಸಿನಿಮಾ ಅನುಭವ: ಅದರಲ್ಲಿ ನಿರ್ದೇಶಕನೇ ಒಂದು ಪಾತ್ರವಾಗಿರುತ್ತಾನೆ. ಆ ಪಾತ್ರ ಮಾಡಿಕೊಂಡು ಹೋಗುವ ಸಂದರ್ಶನದ ನಿರೂಪಣೆಯೇ ಒಂದು ಸಿನಿಮಾ. ಪ್ಯಾಲೇಸ್ಟೇನ್ ಇಸ್ರೇಲ್ ಹಾಗೂ ಇರಾಕಿನಲ್ಲಿ ಯುದ್ಧದಿಂದ ನೊಂದ ಜನರನ್ನು, ಯುದ್ಧ ಖೈದಿಗಳನ್ನು, ಸೈನಿಕರನ್ನು, ಯುದ್ಧ ನೋಡಿದವರನ್ನು, ರಾಜಕೀಯದವರನ್ನು ಹೀಗೆ… ಒಬ್ಬೊಬ್ಬರನ್ನೇ ಸಂದರ್ಶನ ಮಾಡತೊಡಗುತ್ತಾನೆ.

ಒಂದು ಪಾತ್ರ ಹಾಗೂ ಸಿನಿಮಾ ತಾಂತ್ರಿಕತೆ ಬೇರೆಬೇರೆಯಲ್ಲದೆ ಹೇಗೆ ಒಂದೇ ಆಗಿರುತ್ತದೆ. ಅಲ್ಲದೇ ವಸ್ತು ವಿಷಯಗಳನ್ನ ಎಷ್ಟು ನಿಷ್ಟುರವಾಗಿ ಈ ತನ್ಮಯತೆ ದುಡಿಸಿಕೊಳ್ಳಬಲ್ಲದು. ಅದಲ್ಲದೇ ಮೀಡಿಯಾದ ಹೊಣೆಗಾರಿಕೆ ಏನು? ಎಂಬುದನ್ನ ಆ ನಿರ್ದೇಶಕ ಯುದ್ಧದ ವಾಸ್ತವವನ್ನು ಎಲ್ಲೂ ರೋಚಕವಾಗಿ ತೋರಿಸದೆ ಪ್ರೇಕ್ಷಕರನ್ನು ಸಮಾಧಾನದಿಂದ ಯೋಚಿಸುವಂತೆ ಮಾಡುವುದು ಆಪ್ತವಾಗುತ್ತದೆ. ಅಕ್ಕಪಕ್ಕದ ಊರಿನ ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಜನರು ಸಿಕ್ಕಾಗ ಅವರ ನಡುವಿರುವ ಅವರ ಆತ್ಮೀಯತೆ, ಸಮಾರಂಭಗಳಲ್ಲಿ, ಸಾಮೂಹಿಕ ಕುಣಿತದಲ್ಲಿ ಅವರು ಒಳಗೊಳ್ಳುವ ರೀತಿ, ಯುದ್ಧದಲ್ಲಿ ನೊಂದ ಸಂತ್ರಸ್ಥ ಹೆಣ್ಣುಮಕ್ಕಳನ್ನು ಮಾತನಾಡಿಸಿದಾಗ ಅವರು ಹೇಳುವ ಮಾತುಗಳು ಸತ್ಯವನ್ನು ಬಿಚ್ಚಿಡುತ್ತವೆ.

“ಹೆಣ್ಣುಮಕ್ಕಳು ಸುರಿಸುವ ಕಣ್ಣೀರಿನಲ್ಲಿ ಯಾವ ಭಿನ್ನ ಭೇಧವೂ ಇರುವುದಿಲ್ಲ. ಒಡೆದ ಮನೆ ಮನಸ್ಸಿನ ಕುರುಹುಗಳಿರುತ್ತವೆ. ಎಲ್ಲೂ…. ಯಾವತ್ತೂ…. ಯಾವ ಹೆಂಗಸರು ಸಹ ಯುದ್ಧ ಮಾಡಿ ಎಂದು ಹೇಳಿಲ್ಲ. ಹೆಂಗಸರು ಪಡೆದುಕೊಳ್ಳುವಾಗ ಬೀಗುವಂತೆ ಕಳೆದುಕೊಳ್ಳುವುದರಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಾರರು”

ಬೊಂಬೆ ಮಾಡುವ ಕಾಯಕದಲ್ಲಿ ನಿರತರಾಗಿದ್ದ ಆ ನಿರಾಶ್ರಿತ ಹೆಂಗಸರು ಕಣ್ಣಿರು ತುಂಬಿ ಆಡುವ ಮಾತು ಮರೆಯದೆ ಇಂದಿಗೂ ಹಾಗೆ ಉಳಿದಿದೆ. ಸಿನಿಮಾ ಹೆಸರು ಮಾತ್ರ ಮರೆತು ಹೋಗಿದೆ. ಸಿನಿಮಾ ಮುಗಿದ ಮೇಲೆ ಫ್ರಾನ್ಸಿನ ಆ ನಿರ್ದೇಶಕನ ಸಂದರ್ಶನವನ್ನು ನಾವು ಕೇಳಿದ್ದು ಉತ್ಕೃಷ್ಟ ಮಟ್ಟದ್ದು.

ಫೆಸ್ಟಿವಲ್ ಸಿನಿಮಾಗಳಿಗೆ ಭಾರಿ ರಷ್ ಇರುತ್ತಿದ್ದರೂ ಎಲ್ಲೂ ನೂಕುನುಗ್ಗಲಿರದೆ ಕ್ಯೂನಲ್ಲಿ ಶಿಸ್ತಿರುತಿತ್ತು. ಅಲ್ಲಿನ ಥಿಯೇಟರ್ ಗಳು ಕೂಡ ಆಡಂಬರವಿಲ್ಲದ ಸುಸಜ್ಜಿತ ಸರಳ ವೇದಿಕೆಗಳು.

ಇಂಡಿಯನ್ ಪೆವಿಲಿಯನ್ನಿನ ಬೆಡಗಿಯರು

ನಮ್ಮ ಇಂಡಿಯಾದ ನಿರ್ಮಾಪಕ ಹಾಗೂ ನಿರ್ದೇಶಕರ ಒಟ್ಟಿಗೆ ಹತ್ತಾರು ನಿರ್ದೇಶಕಿಯರು ಚಂದವಾಗಿ ಸೀರೆ ಹಾಗೂ ಸೆಲ್ವಾರಿನಲ್ಲಿ ಕಾಣಿಸುತ್ತಿದ್ದರು. ಬಾಬ್ಬಿ ಶರ್ಮಾ ಬರುವಾ… ಡಾಲಿ…. ನಂದಿತಾ ದಾಸ್… ಅಪರ್ಣ ಸೇನ್, ಹೀಗೆ ಹತ್ತಾರು ಜನ ನಿತ್ಯವೂ ನಮ್ಮಂತೆ ಅಲ್ಲಿ ಓಡಾಡುತ್ತಿದ್ದರು. ಅವಾರ್ಡ್ ತೆಗೆದುಕೊಂಡ ಮರಾಠಿ ಯುವ ನಿರ್ದೇಶಕನ ಜೊತೆ ಎರಡು ಗಂಟೆಯ ಮಾತುಕತೆ ಸ್ಟಾರ್ ಹೋಟೆಲ್ಲಿನಲ್ಲಿ ಇತ್ತು. ನಮ್ಮ ಇಂಡಿಯನ ಫುಡ್ ದೆಸೆಯಿಂದ ಅದು ಮರೆತು ಹೋಗಲಾರದು. ಹಾಗೆ ತಿಥಿ ಸಿನಿಮಾದ ಬಗ್ಗೆ ಚರ್ಚೆಗಳಲ್ಲಿ ಆಗಾಗ ಬರುತಿದ್ದ ಮಾತು ಹಾಗೂ ಮಾರ್ಕೆಟಿಂಗ್ ವಿಭಾಗದಲ್ಲಿ ಅದರ ಪೋಸ್ಟರ್ ತಿರುಗುತ್ತಿದ್ದುದು ವಿಶೇಷವಾಗಿತ್ತು.

ಪೆವಿಲಿಯನ್ ದಾರಿಯಲ್ಲಿ ಏಳು ಅಡಿ ಎತ್ತರದ ಆಸುಪಾಸಿನ ಆರೇಳು ಜನ ಲಲನೆಯರು ಬೆಡಗಿನಿಂದ ತಮ್ಮ ಉದ್ದ ಕಾಲನ್ನು ತೋರುತ್ತ ರೋಡ್ ಶೋ ಕೊಡುತ್ತಿದ್ದುದು, ಕುದುರೆ ಸವಾರರ ಪೋಲೀಸ್ ಪೆರೇಡ್, ಚಿತ್ರಕಾರರ ಆರ್ಟ್ ಶೋಗಳು ದಾರಿಯುದ್ದಕ್ಕೂ ತೆರಕೊಂಡಿದ್ದವು.

ಕಾನ್ ಫೆಸ್ಟಿವಲ್ ನ ಶೋಗಳು

ಆದರೆ ಸ್ಟಾರ್ ಹೋಟೆಲ್ಲಿಂದ ಈಚೆ ಬರುವಾಗ ಆ ನಡು ಹಗಲಲ್ಲಿ… ನಿತ್ಯವೂ ಸಿನಿಮಾ ಪ್ರತಿನಿಧಿಯಂತೆ, ಸಿನಿಮಾ ನಾಯಕಿಯ ವರಸೆಯಲ್ಲೇ… ನಲವತ್ತು ವರ್ಷದ ಚಿಂದಿ ಬಟ್ಟೆ ತೊಟ್ಟ ಅರೆಹುಚ್ಚಿಯೊಬ್ಬಳು, ಒಂದು ಕೈಗಾಡಿಯಲ್ಲಿ ತನ್ನ ಚಿಂದಿ ಗಂಟನ್ನಿಟ್ಟು ತಳ್ಳಿಕೊಂಡು ಧೃಢವಾಗಿ ಹೈ ಹೀಲ್ಸ್ ಶೂ ಕುಟ್ಟುತ್ತ ಅಂಡು ತಿರುವುತ್ತ ಹೋಗುತ್ತಿದ್ದ ನೋಟ ಅಲ್ಲಿದ್ದ ಒಂದು ವಾರ ಪೂರ್ತಿ ನಮಗೆ ದಿನದಿನವೂ ಸಿಕ್ಕುತ್ತಿತ್ತು.

ಸಮುದ್ರದಂಚಿನ ಆ ದೊಡ್ಡ ರಸ್ತೆಯಲ್ಲಿ ಅವಳು ಒಬ್ಬ ಸೆಲೆಬ್ರಿಟಿಯಂತೆ ಹೆಜ್ಜೆ ಹಾಕುತ್ತ ಹೋಗುತ್ತಿದ್ದಳು. ಅದೇನು ಭ್ರಮೆಯೋ?… ಸಿನಿಮಾ ಜಗತ್ತೇ ಒಂದು ಭ್ರಮೆಯೋ? ಬದುಕೇ ಒಂದೋ ಭ್ರಮೆಯೋ…? ಎಂಬಂತೆ ಅವಳು ಲಗುಬಗೆಯಲ್ಲಿ ತನ್ನ ಗಾಡಿಯೊಡನೆ ಅವಳ ಪಾಡಿಗೆ ಅವಳು ಸಾಗುತ್ತಿದ್ದಳು.

ಈ ಜಗತ್ತನ್ನು ಪ್ರತಿನಿಧಿಸುವಂತೆ…

ಎಲ್ಲೂ ಆಡಂಬರವಿಲ್ಲದಂಥ ಸಜ್ಜಿಕೆಗಳು ಇರುತ್ತಿದ್ದುದು, ಎಲ್ಲೂ ನೂಕುನುಗ್ಗಲಿಲ್ಲದೆ ತಣ್ಣಗಿನ ಜನರು, ಅಲ್ಲಿನ ನಾಗರೀಕರೂ ಕೂಡ ಬಂದು ಆರಾಮಾಗಿ ಕುಳಿತು ಒಂದು ವಾರ ನಡೆಯುವ ಈ ಉತ್ಸವವನ್ನು ನೋಡುತ್ತಿದ್ದುದು ಅಲ್ಲಿನ ವಿಶೇಷವೆಂದೇ ಹೇಳಬಹುದು.

ಅಲ್ಲಿಗೆ ಆಗಮಿಸುವ ಸೆಲೆಬ್ರಿಟಿ ನಟರು ಆದಷ್ಟೂ ಕಪ್ಪು ಸೂಟ್ ನಲ್ಲಿ ಮಿಂಚಿದರೆ ಹೆಣ್ಣು ಮಕ್ಕಳೆಲ್ಲರೂ ಆದಷ್ಟೂ ಗೌನ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ದೊಡ್ಡ ಹೆಸರು ಮಾಡಿದ ಹಾಲಿವುಡ್ ತಾರೆಯರು, ಹೆಚ್ಚು ಹೊತ್ತು ಕ್ಯಾಮೆರಾಗೆ ಪೋಸ್ ಕೊಟ್ಟು, ಸುತ್ತಿನವರಿಗೆ ಕೈ ಕುಲುಕಿ, ಎಲ್ಲರೊಂದಿಗೆ ಹಲವು ನಿಮಿಷ ನಿಂತು ಪೋಸ್ ಕೊಟ್ಟರೆ, ಉಳಿದವರು ಒಂದೆರಡು ನಿಮಿಷ ಮಾತ್ರ ನಿಲ್ಲುತ್ತಿದ್ದರು.

ಹೆಣ್ಣುಗಳು ತಮ್ಮ ಬಣ್ಣದ ಗೌನಿನ ಬಾಲವನ್ನು ನವಿಲಿನಂತೆ ಎಳೆದುಕೊಂಡು ಬಂದು ಆ ರೆಡ್ ಕಾರ್ಪೆಟ್ ಮೇಲೆ ನಿಂತಾಗ ಅವರ ವಸ್ತ್ರ ವಿನ್ಯಾಸಕರು ಅದನ್ನು ನವಿಲಿನ ಜಾಗರದಂತೆ ಹರಡಿ ಅವರ ಕಲೆಯನ್ನು ತೋರಿಸುವ ಕಾಯಕ ನೋಡಿದಾಗ… ನನ್ನೊಳಗೆ ಒಂದು ಖೇದವನ್ನೂ, ಒಟ್ಟೊಟ್ಟಿಗೆ ನನ್ನಜ್ಜಿಯ ಒಂದು ಗಾದೆಯನ್ನು ತಂದು ಹಾಕುತಿತ್ತು. “ನವಿಲು ಆಡ್ತು ಅಂತ ಕೆಂಬದ್ದು ಪುಕ್ಕ ತೆರಿತಂತೆ…” ಅನ್ನೋ ಗಾದೆ.

ಸೊಂಟದ ಮೇಲೆ ಕೈಯಿಟ್ಟು, ತಮ್ಮ ಮೂಳೆ ಮೈ ತೋರಿಸುತ್ತ ಅಕ್ಷಯವಾಗಿ ಹರಿಯುತ್ತಿದ್ದ ಬಟ್ಟೆಯ ಬಾಲವನ್ನು ಎಳೆದುಕೊಂಡು ಹೋಗುವಾಗ ಭಾರವಾದ ಬಾಲ ಎಳೆದುಕೊಂಡು ಓಡಾಡುವ ನವಿಲು ನೆನಪಿಗೆ ಬಂತು.

ವಸ್ತ್ರ ವಿನ್ಯಾಸಕರು ನಟಿಯರ ಹಿಂದೆ ತಾವು ಮಾಡಿದ ಕಲಾಕುಸುರಿಯ ಬಟ್ಟೆಯನ್ನು ಹಿಡಿದೆತ್ತಿ ಮೋಹದಿಂದ ಹಿಂಬಾಲಿಸುವಾಗ ಕೀಚಕನ ದ್ರೌಪತಿ ವಸ್ತ್ರಾಹಪರಣವೂ, ಬಟ್ಟೆಯನ್ನೇ ಅಕ್ಷಯವಾಗಿಸಿದ ಶ್ರೀ ಕೃಷ್ಣ ಪರಮಾತ್ಮನೂ… ಗೋಪಿಕೆಯರ ವಸ್ತ್ರಾಪಹರಣವೂ… ಬಟ್ಟೆಯ ಮೇಲಿರುವ ಜಗತ್ತಿನ ಮೋಹವೂ, ಅಂತೇ…. ಬಟ್ಟೆಯ ಮೋಹ ತೊರೆದ ಅಕ್ಕಳೂ, ಅವಳ ಬಿಚ್ಚಿದ ಮೈ ಮುಚ್ಚುವ ಕೇಶ ವಸ್ತ್ರವೂ… ಬಿಚ್ಚುಗೂದಲನ್ನು ದುರ್ಯೋದನನ ರಕ್ತದಲ್ಲಿ ಅದ್ದಿ ಎತ್ತಿ ಕೊನೆಯಲ್ಲಿ ಕಟ್ಟಿಕೊಂಡು ಯುದ್ಧ ಮುಗಿಸಿದ ದ್ರೌಪದಿಯೂ… ಸೀತೆಯ ನಾರುಮುಡಿಯೂ… ನನ್ನವ್ವ ಇಡೀ ವರ್ಷ ಉಟ್ಟು ಹಳೆಯದಾದ ಸೀರೆಯನ್ನು ಕೊಟ್ಟಾಗ… ನಮ್ಮ ಆಳುಮಗಳು ಲಕ್ಕಿ ಬೇಸರವಿಲ್ಲದೆ ತೇಪೆ ಹಾಕಿ ಮತ್ತಾರು ತಿಂಗಳು ಉಡುತ್ತಿದ್ದ ಆ ಸೀರೆಯೂ…

ಆಗ ತಾನೇ ಹುಟ್ಟಿದ ಮಗುವನ್ನು ಸುತ್ತುತ್ತಿದ್ದ ಮೆತ್ತನೆಯ ಸವೆದ ಹತ್ತಿ ಸೀರೆಯೂ…. ಉಟ್ಟ ಕಾಯಕವನ್ನು ಮುಗಿಸಿದ ಸೀರೆಬಟ್ಟೆಗಳ ಚೂರನ್ನು ನೇದು ಸಿಂಗರಿಸಿದ ಬಣ್ಣಬಣ್ಣದ ಅಮೂಲ್ಯವಾದ ಕೌದಿಯೂ…. ಹಬ್ಬದಲ್ಲಿ ದುಡ್ಡಿಲ್ಲದೆ ಉದ್ರಿ ತಂದ ಕಡಿಮೆ ರೇಟಿನ ಸೀರೆಯನ್ನು, ಉಡದೆ ಮುನಿಸಿಕೊಂಡು ಹಠ ಹಿಡಿದು ಕೂತಿದ್ದ ನಮ್ಮ ಆಚೆ ಮನೆಯ ಅಕ್ಕಳೊಬ್ಬಳು, ಆ ರಂಪ ನೋಡಿ ನೋಯುತ್ತಿದ್ದ ಅವರಪ್ಪ ಅವ್ವರ ಅಸಹಾಯಕತೆಯೂ… ಹೀಗೆ ಏನೇನೋ ಬಟ್ಟೆಗಳು ಅಳಿಯುವ ಅಂದಚಂದದಲ್ಲಿ ನೆನಪಿನ ರೀಲಿನಂತೆ ಸುತ್ತುತ್ತಾ…. ಕಾನ್ಸಿನ ನೆಲದಲ್ಲಿ ನಮ್ಮ ನೆಲದ ಬಟ್ಟೆ ನನ್ನೊಳಗೆ ಅಳಿದುಕೊಂಡಿತ್ತು.

ಬೊಂಬೆ ಮಾಡುವ ಕಾಯಕದಲ್ಲಿ ನಿರತರಾಗಿದ್ದ ಆ ನಿರಾಶ್ರಿತ ಹೆಂಗಸರು ಕಣ್ಣಿರು ತುಂಬಿ ಆಡುವ ಮಾತು ಮರೆಯದೆ ಇಂದಿಗೂ ಹಾಗೆ ಉಳಿದಿದೆ. ಸಿನಿಮಾ ಹೆಸರು ಮಾತ್ರ ಮರೆತು ಹೋಗಿದೆ. ಸಿನಿಮಾ ಮುಗಿದ ಮೇಲೆ ಫ್ರಾನ್ಸಿನ ಆ ನಿರ್ದೇಶಕನ ಸಂದರ್ಶನವನ್ನು ನಾವು ಕೇಳಿದ್ದು ಉತ್ಕೃಷ್ಟ ಮಟ್ಟದ್ದು.

ಸೆಲೆಬ್ರಿಟಿಗಳು ಒಳ ಹೋಗಿ, ಒಂದು ಸುತ್ತು ಹಾಕಿ, ಹಿಂಬಾಗದ ಎಕ್ಸಿಟ್ ನಲ್ಲಿ ತಿರುಗಿ ಬಂದು, ನಾವು ಕುಳಿತ ಜಾಗದ ಮುಂದೆಯೆ ಹಾದು ಹೋಗುವಾಗ, ಅವರವರ ಕಾರು ಪಾರ್ಕಿಂಗ್ ನೆಡೆಗೆ ಅವಸರವಸರವಾಗಿ ದುಡುದುಡನೆ ಹೆಜ್ಜೆ ಹಾಕುವಾಗ ಬಾಲ ಹಿಡಿದವರೂ ಓಡುತ್ತಿದ್ದರು. ಆ ನೋಟ ಮೋಜು ತರಿಸುತ್ತಿತ್ತು. ಒಂದೇ ಒಂದು ಗಳಿಗೆ ರೆಡ್ ಕಾರ್ಪೆಟ್ ಮೇಲೆ ತಂಗಿ ಇದೇ ರೀತಿಯಲ್ಲಿ ಹೊರಬಂದ ನಮ್ಮ ಬಾಲಿವುಡ್ ನಟಿ ಮಲ್ಲಿಕಾ ಶೆರಾವತಳ ಸಣ್ಣ ಪೀಚಲು ದೇಹ, ಮೊಳದುದ್ದ ಹೈ ಹೀಲ್ ಚಪ್ಪಲಿ, ಸ್ಕರ್ಟಿನಂತೆ ಎತ್ತಿ ಹಿಡಿದಿದ್ದ ಅವಳ ಗೌನ್, ಹತ್ತಿರದಿಂದ ನೋಡಿದಾಗ ಆಕರ್ಷಕವಿಲ್ಲದ ಕಡ್ಡಿ ಕಾಲುಗಳ ಕಾರಿನೆಡೆಗಿನ ಓಟ ನಮ್ಮೊಳಗೆ ವಿಚಿತ್ರ ದೃಷ್ಯಾವಳಿಯಂತೆ ತೆರೆದು ಹಾಗೆ ಉಳಿದುಕೊಂಡಿತು.

ಕೊರಿಯನ್ ನಟಿ ಒಬ್ಬಳು ಅತ್ಯಂತ ಜಗದೇಕ ಸುಂದರಿಯ ಹಾಗೆ ನಿಂತು ಅಲ್ಲಿ ಕಂಗೊಳಿಸಿದರೆ, ಒಬ್ಬಳು ನಡು ವಯಸ್ಸಿನ ಹಾಲಿವುಡ್ ನಟಿ ಅವಳ ಸರಿ ಸಮಕ್ಕೆ ಜಗತ್ತಿನ ಸೌಂದರ್ಯವನ್ನು ಬಾಚಿ ನಿಂತವಳಂತೆ ಕಾಣಿಸುತ್ತಿದ್ದಳು. ಹಾಲಿವುಡ್ ಸಿನಿಮಾದ ನಟನಟಿಯರಿಗೆ ಬರುತ್ತಿದ್ದ ಉದ್ಘಾರವೊಂದನ್ನು ಬಿಟ್ಟರೆ ಬೇರೆನೂ ಗೊಂದಲವಿಲ್ಲದ ಸಮಾರಂಭ ತೊಂಬತ್ತು ನಿಮಿಷದಲ್ಲಿ ತಣ್ಣಗೆ ಮುಗಿದಿತ್ತು. ದಿನ ನಿತ್ಯವೂ ಸಂಜೆಯಲ್ಲಿ, ಒಂದು ವಾರ ಹೀಗೇ ಪ್ರದರ್ಶನವಿದೆ ಎಂದು ಅಲ್ಲಿಯವರು ಹೇಳುತ್ತಿದ್ದರು. ಓಡಾಡುವಾಗ ಪ್ರಪಂಚದ ಸಿನಿಮಾ ಮುಖಗಳು ಅಲ್ಲಿ ಆಗಾಗ ರಸ್ತೆಯಲ್ಲಿ ಅಡ್ಡ ಸಿಗುತ್ತಿದ್ದವು.

ಸಮುದ್ರ ತೀರದ ಮಗು ಹಾಗೂ ನೃತ್ಯ

ದಿನದಿನವೂ ಸಂಜೆ ಕಾನ್ಸ್ ಜಾತ್ರೆಯಂಗಳದ ಸಮುದ್ರ ತೀರದಲ್ಲಿ ಮ್ಯೂಸಿಕ್ ನಡೆವ ವೇದಿಕೆಯೊಂದಿತ್ತು. ಅಲ್ಲಿ ದೇಶ ದೇಶದ ವಾದ್ಯ ಹಾಗೂ ಸಂಗೀತ ರಸಸಂಜೆ ಪ್ರತಿ ದಿನವೂ ಇರುತ್ತಿದ್ದರೂ ಮಧ್ಯಾಹ್ನದ ವೇಳೆಯಿಂದಲೇ ರಿಹರ್ಸಲ್ ಶುರುವಾಗುತಿತ್ತು. ಜಾಜ್ ಸಂಗೀತ ಹಾಡುವ ಕರಿಯ ಹೆಣ್ಣು ಮಕ್ಕಳ ಆ ಕಂಠ ಹಾಗೂ ಅವರ ನಿರಾಳತೆ ಅನಾದಿ ಕಾಲದಿಂದಲೇ ಅವರ ಜೀವದಲ್ಲೇ ರಾಗ ಮೈಗೂಡಿಕೊಂಡಿರುವಷ್ಟರ ಮಟ್ಟಿಗಿರುತಿತ್ತು.

ಅಲ್ಲಿ ರಿಹರ್ಸಲ್ ಮಾಡುತ್ತಿದ್ದ ಹುಡುಗನ ಕೈಕಾಲಿನ ಓಘಕ್ಕೆ ಹೆಜ್ಜೆ ಹಾಕುತ್ತಿದ್ದ ಮಗುವೊಂದು ಸಮುದ್ರದಂಚಲ್ಲಿ ನೀರ ತೆರೆಯ ಜೊತೆಗೆ ಕುಣಿಯುತ್ತಿತ್ತು. ನಾವು ಅದನ್ನು ಮುದ್ದು ಮಾಡಿದಾಗ ಅದು ಬಂದು ನನ್ನನ್ನು ತಬ್ಬಿಕೊಂಡಿತು. ಅದರ ತಾಯಿ ನಕ್ಕು ನನ್ನೊಡನೆ ಮಾತನಾಡಿದಾಗ ಅವಳಿಗೆ ಮೂರು ಮಕ್ಕಳೆಂದಳು. ಅವಳಿಗೆ ಫ್ರೆಂಚ್ ಬಿಟ್ಟು ಬೇರೆ ಭಾಷೆ ಗೊತ್ತಿರಲಿಲ್ಲ. ಕಾನ್ಸಿನ ಪ್ರಾದೇಶಿಕ ಭಾಷೆ ಗೊತ್ತೆಂದಳು. ಅದು ಮೀನುಗಾರರ ಊರೆಂದಳು. ಆದರೆ ಗಂಡ ಈಗ ಬೇರೆ ಕೆಲಸ ಮಾಡುತ್ತಾನೆಂದ ಅವಳಿಗೆ ನಾವು ಇಂಡಿಯಾದವರು ಎಂದು ಹೇಳಿದಾಗ “ಐ ಲೈಕ್ ಶಾರೂಖ್ ಖಾನ್” ಎಂದು ಪ್ರೀತಿಯಿಂದ ಹೇಳಿದಳು.

ಕರಿಯ ನಾಗರೀಕರ ಸಿಟ್ಟು

ಅಲ್ಲಿನ ರೆಸ್ಟ್ ರೂಮುಗಳ ಶುಚಿಯನ್ನು ಕಪ್ಪು ಜನರೇ ಮಾಡುತ್ತಿದ್ದರು. ಎಲ್ಲ ದೇಶದ ಪೆವಿಲಿಯನ್ನುದ್ದಕ್ಕೂ ದಾರಿಬದಿಯಲ್ಲಿ ವಸ್ತುಗಳನ್ನು ಮಾರುತ್ತಿದ್ದವರು ಕೂಡಾ ಕಪ್ಪು ಜನಗಳೇ…. ನಾನು ಆ ಫೋಟೋ ತೆಗೆದುಕೊಳ್ಳುವಾಗ ಟ್ರಾಲಿಯಲ್ಲಿ ನೀರು ತಂದು ಹಾಕುತ್ತಿದ್ದ ಎತ್ತರದ ಕರಿಯನೊಬ್ಬ ವಿಪರೀತ ಸಿಟ್ಟು ಮಾಡಿದ. ತಕ್ಷಣ ನಾನು ಮೊಬೈಲ್ ಆಫ್ ಮಾಡಿದೆ. ಅಲ್ಲಿನ ಬಿಳಿಯರು ಇರಲಿಲ್ಲವೆಂದಲ್ಲ. ಕಾನ್ಸಿನ ಜನರು ಕೂಡ ನಮ್ಮೂರಿನ ಜನರಂತೆ ಅಲ್ಲಿ ಕ್ಯಾಂಟಿನು ನಡೆಸುತ್ತ ಅತಿಥಿಗಳ ಜೊತೆ ಸಣ್ಣ ಪುಟ್ಟ ವ್ಯಾಪಾರ ನಡೆಸುತ್ತಿರುವಂಥವರೇ ಆಗಿದ್ದರು. ಕಾನ್ಸಿನ ಕೆಲವು ಸ್ಥಳದಲ್ಲಿ ಆ್ಯಂಟಿಕ್ ವಸ್ತುಗಳ ಮಾರಾಟವೂ ಅನೇಕ ಕ್ಯಾಸಿನೋ…ಗಳೂ… ರೆಸಾರ್ಟ್ ಗಳೂ ಕಂಡವು.

ಒಂದು ದಿನ ಬೇಗ ರೂಮು ಸೇರುವಂತಾಯಿತು. ಮೆಟ್ರೋ ಇಳಿದು ನಡೆಯುತ್ತ ಬರುವಾಗ ಕೊಳದಲ್ಲಿ ಈಜುವ ಬಾತುಗಳು, ಅದನ್ನು ತರಿಯುತ್ತಿದ್ದ ಹುಡುಗನೂ ಕಾಣಿಸಿದ. ನೋಡುತ್ತ ರೂಮು ಸೇರುವ ಬದಲು ಸಂಜೆಗಡಲಿನ ಅಂಚಿಗೆ ಬಂದು ಕೂತೆವು. ಮೀನು ಗಾಳ ಹಾಕಿ ಕೂತ ಇಬ್ಬರು ಹವ್ಯಾಸಿಗಳು ಕಂಡರು. ಎಲ್ಲೆಲ್ಲೂ ಒಂದಿನಿತೂ ಕೊಳಕಿಲ್ಲದ ಮರಳು, ನುಣುಪು ಕಲ್ಲು, ಚಿಪ್ಪುಗಳು ಹರಡಿದ ತೀರದಲ್ಲಿ ಕೂತಾಗ ಅಲ್ಲೇ ಅನತಿ ದೂರದಲ್ಲಿದ್ದ ಕ್ಯಾಸಿನೋಗೆ ಜನ ಬಂದು ಸೇರುತ್ತಿದ್ದುದು ಕಾಣುತಿತ್ತು.

ಒಂದು ಕುಟುಂಬ ಬಂದಿದ್ದೇ ಮೀನು ಹುರಿಯುತ್ತಿದ್ದ ಅಂಗಡಿ ಬಿಚ್ಚಿತು. ಫ್ರೆಷ್ ಮೀನು ಹಿಡಿದು ಉಣ ಬಡಿಸುವ ಚಿತ್ರಗಳು ಅಂಗಡಿಯ ಸುತ್ತ ಕಾಣುತಿತ್ತು. ನಗುತ್ತಲೇ ಅವರವರೇ ಹಾಸ್ಯ ಮಾಡಿಕೊಳ್ಳುತ್ತ ಮಾರ್ಕೆಟ್ಟಿನಿಂದ ತಂದ ದೊಡ್ಡ ಮೀನೊಂದನ್ನು ಗಾಳಕ್ಕೆ ಸಿಗಿಸಿ ಮರಳಲ್ಲಿ ಕೋಲು ನೆಟ್ಟರು. ಗ್ರಾಹಕರ ಕಣ್ಸೆಳೆತಕ್ಕಾಗಿ….

ಆ ಎರಡು ಕುಟುಂಬದ ಹರಯದ ಮಕ್ಕಳು ಒಂದು ಗಂಟೆ ದೂರದ ಒಂದು ನಡುಗಡ್ಡೆಯ ನೀರಿನಲ್ಲಿ ಈಜುತ್ತ ಏಳುತ್ತಾ ಗಂಡು ಹೆಣ್ಣೆಂಬುದನ್ನು ಮರೆತು ಎದ್ದೂಬಿದ್ದು ಹಸಿ ಹರಯದ ಆಟಗಳನ್ನೆಲ್ಲ ಆಡುತ್ತಿದ್ದರು. ಕತ್ತಲಾಗುತಿತ್ತು. ಹಿರಿಯನೊಬ್ಬ ಬಂದು ಅದನ್ನು ನಿಲ್ಲಿಸಿ ಮಕ್ಕಳನ್ನು ಗದರಿ ಕರೆದುಕೊಂಡು ಹೋದ. ಆ ಹುಡುಗಿಯರು ಹುಡುಗರು ಬಂದವರೊಡನೆ ವ್ಯಾಪಾರ ಮಾಡುತ್ತಲೇ ಜಂಬೆಯನ್ನು ನುಡಿಸುತ್ತ… ಮೈ ಮರೆತು ಕುಣಿಯುತ್ತ…. ಬಂದ ಜನರನ್ನು ರಂಜಿಸುತ್ತ …. ಒಂದೆರಡು ಗಂಟೆ ವ್ಯಾಪಾರ ಮುಗಿಸಿ, ಅಂಗಡಿ ಮುಚ್ಚಿ ಅದೇ ವ್ಯಾನಿನಲ್ಲಿ ಹೊರಟರು. ಜೊತೆಗವರ ನಾಯಿಯೂ…. ಸಮುದ್ರ ತೀರದಲ್ಲಿ ಹೆಚ್ಚು ಜನರೇನೂ ಇರಲಿಲ್ಲ. ನಾವು ಹೋಟೆಲ್ಲಿನ ಕಡೆ ಹೊರಟೆವು.

ಇಲ್ಲಿನ ಪಾಕೆಟ್ ನಾಯಿಗಳದ್ದೇ ಇಲ್ಲಿ ವಿಶೇಷ. ಅಂಗೈ ಮೇಲೆ ನಿಲ್ಲಿಸುವಂಥ ನಾಯಿ ಸಂಕುಲ ಅವರ ಎದೆಯೊಳಗೆ, ಜೇಬಿನಲ್ಲಿ, ಕಾರಿನಲ್ಲಿ, ರಸ್ತೆಯಲ್ಲಿ ಫ್ರಾನ್ಸ್ ದಾರಿಯಲ್ಲೆಲ್ಲ ಸಿಗುತ್ತವೆ. ಕಾನಿನಲ್ಲಂತು ಇಂಥ ಸಣ್ಣ ನಾಯಿಗಳು ರಸ್ತೆಯುದ್ದಕ್ಕೂ ಎಲ್ಲೆಲ್ಲೂ ಕಾಣಸಿಗುತ್ತವೆ. ನಾಯಿಗಳನ್ನು ಬಹಳ ಹಚ್ಚಿಕೊಳ್ಳುವ ಜನ ಇವರು.

ರೂಮು ಸೇರುವ ಮೊದಲು ರೆಸ್ಟೋರೆಂಟಿನಲ್ಲಿ ಒಂದು ಜ್ಯೂಸ್ ಕುಡಿದು ಹೋಗೋಣ ಎಂದು ಹೋದರೆ ನಮ್ಮನ್ನು ನೋಡಿದ್ದೆ ಆ ಹುಡುಗಿ ಓಡಿ ಬಂದಳು. ದಿನವೂ ನಮ್ಮನ್ನು ನೋಡಿದ್ದೆ ಓಡಿಬರುತ್ತಿದ್ದ ಆ ಹುಡುಗಿ ನಮ್ಮೂರಿನ ಪಕ್ಕದ ಮನೆಯ ಚಂದದ ಹುಡುಗಿಯಂತೆ ಇತ್ತು. 18, 20 ರ ಹೂ ಹುಡುಗಿ ಎಲ್ಲದಕ್ಕೂ ಹೀ… ಎಂದು ಅಚ್ಚರಿಯ ಉದ್ಘಾರವೆತ್ತುತ್ತ ಶ್ರದ್ಧೆಯಿಂದ ಹೋಟೇಲ್ ಪರಿಚಾರಿಕೆ ಮಾಡುತಿತ್ತು. ಇಂಗ್ಲೀಷ್ ನಲ್ಲಿ ನಾವು ಮಾತಾಡಿದೊಡನೆ ಅರ್ಥ ಮಾಡಿಸಲು ಮತ್ತೊಬ್ಬ ಹುಡುಗನನ್ನು ಎಳೆದು ತರುತ್ತಿದ್ದಳು. ಅವನೂ ತುಂಡುತುಂಡು ಭಾಷಾಂತರದಲ್ಲಿ ನಮ್ಮನ್ನು ಉಪಚರಿಸುತ್ತಿದ್ದ.

ಏನೋ ನೆನಪಾಗಿ ಆ ದಿನ ನಾನು ಕಣ್ಣೀರು ತುಂಬಿಕೊಂಡಾಗ ಅಲ್ಲಿನ ಆ ಹರಯದ ಮಕ್ಕಳು ಎಂಥ ಪರದಾಡಿದರೆಂದರೆ ನನ್ನನ್ನು ಬಂದು ತಬ್ಬಿಕೊಂಡು ಆ ಹುಡುಗಿ ನಿಂತಿತು. ಮಾತಿಲ್ಲದೆ ಮುತ್ತು ಕೊಟ್ಟು ಸಮಾಧಾನವಾಗುವಂತೆ ಮಾಡಿದ್ದು ಎಂದಿಗೂ ಮರೆಯಲಾರದಂತೆ ಹಾಗೆ ನನ್ನೊಳಗೆ ಉಳಿದು ಹೋಯಿತು.

ನನ್ನ ನಗು ನೋಡಿ ಅವರೆಲ್ಲ ಸಮಾಧಾನವಾದರು. ಭಾಷೆಗೆ ಮೀರಿದ ಸಂವಹನವೊಂದು ಎಲ್ಲ ಜೀವಗಳನ್ನು ಬೆಸೆಯುವುದು, ಒಂದುಗೂಡಿಸುವುದು ಹೀಗೆಯೇ ಏನು? ಮನಸನ್ನೊಡೆಯುವ ಸಿಟ್ಟು ಕೂಡ….

ಪಾಕಿಸ್ತಾನಿ ಹೋಟೆಲ್

ಕಾನ್ಸ್ ಮುಖ್ಯ ಬೀದಿಯ ದಿಕ್ಕಿಂದ ಮೆಟ್ರೋ ಸ್ಟೇಷನ್ನಿಗೆ ತಿರುಗುವಲ್ಲೇ ಇಂಡಿಯನ್ ಫುಡ್ ಸಿಗುವ ಜಾಗವೊಂದನ್ನು ಹುಡುಕ್ಕಿಟ್ಟುಕೊಂಡಿದ್ದೆವು. ದಿನಾ ರೂಮಿಗೆ ಹಿಂತಿರುಗುವಾಗ ಅಲ್ಲೇ ಸಿಗುವ ತಾಜಾ ಹಣ್ಣು ಕೊಂಡು, ಊಟ ಮುಗಿಸಿ ಬರುತ್ತಿದ್ದೆವು. ಥಾಯ್ ಹೋಟೆಲ್ಲಿನ ಹಸಿ ತೆಂಗಿನ ರಸದ ಕೋಳಿ ಸೂಪ್ ಇಷ್ಟವಾದ ಹಾಗೆ ಪಾಕಿಸ್ತಾನಿ ಹೋಟೆಲ್ಲಿನ ಊಟವೂ ಚೆನ್ನಾಗಿರುತಿತ್ತು.

ಪಂಜಾಬಿ ಒಡೆಯನೊಬ್ಬ ಪಾಕಿಸ್ತಾನಿ ಹೆಣ್ಣನ್ನು ಮದುವೆಯಾಗಿ ಗ್ರಾಹಕರಿಗಾಗಿ ಇಲ್ಲಿ ರೆಸ್ಟೋರೆಂಟ್ ತೆಗೆದು ಪಾಕಿಸ್ತಾನಿ ಶೈಲಿಯ ರುಚಿ ಉಣಿಸುತ್ತಿದ್ದ. ಅಲ್ಲಿ ಇಂಡಿಯಾದಲ್ಲಿ ಪಂಜಾಬಿ ಹುಡುಗಿಯನ್ನ ಮದುವೆಯಾಗಿ ಡಾಬಾ ಒಂದನ್ನು ನಡೆಸುತ್ತಿದ್ದ. ಇಲ್ಲಿಯ ಪಾಕಿಸ್ತಾನಿ ಹುಡುಗಿಯ ಜೊತೆ ಇವನೂ ಓಡಾಡಿ ನಮ್ಮನ್ನು ಚೆನ್ನಾಗಿಯೇ ಉಪಚರಿಸುತ್ತಿದ್ದ. ಇವನಿಗೆ ಮಂಡಿ ನೋವು ಎನ್ನುವುದು ನಡೆವಾಗ ಗೊತ್ತಾಗುತ್ತಿತ್ತು. ಆದರೆ ಈ ಪಾಕಿಸ್ತಾನಿ ಹೆಂಡತಿ ಚಿಕ್ಕವಳು! ಕ್ಯಾಷ್ ಕೌಂಟರಿನ ವಹಿವಾಟು ಮಾತ್ರ ಅವಳದ್ದೇ ಆಗಿತ್ತು. ಪಾಕಿಸ್ತಾನಿ ಹಾಗೂ ಪಂಜಾಬಿ ಹಾಡುಗಳ ಆಲಾಪವನ್ನು ಕೇಳುತ್ತ ಫ್ರೆಂಚ್ ವಿದ್ಯಾರ್ಥಿಗಳ ದಂಡು ಬಂದು ಇಲ್ಲಿ ಊಟ ಮಾಡುವುದು ಕಾಣಿಸುತಿತ್ತು.

ಹೇಗಿದೆ? ನೋಡಿ… ಸಂಕೋಚವಿಲ್ಲದೆ ತನ್ನ ಹೋಟೇಲ್ ಉದ್ಯಮ ನೋಡಿಕೊಳ್ಳುವ ತನ್ನ ಇಬ್ಬರು ಹೆಂಡತಿಯರ ಬಗ್ಗೆ ಅವನು ಹೆಮ್ಮೆಯಿಂದ ಹೇಳಿಕೊಂಡ. ಸ್ತ್ರೀ ವಾದದ ಅರಿವಿಲ್ಲದ ಅವರ ಪರಿವಾರವನ್ನು ನೋಡಿ ಮುಗುಳ್ನಕ್ಕೆವು.