ಹಿಂಸೆ, ಕ್ಷೋಭೆಗಳೆಂದರೆ ಮನುಷ್ಯನಿಗೆ ಸುಪ್ತ ಮನಸ್ಸಿನಲ್ಲಿ ಬಹಳ ಪ್ರಿಯವಾದ ವಿಷಯವೇನೋ ಎಂಬ ಸಂಶಯ ಕಾಡಲು ಶುರುವಾಗಿದೆ. ಉಣ್ಣಲು, ಆರೋಗ್ಯ ಕಾಪಾಡಿಕೊಳ್ಳಲು ಉಡಲು ಮಹಿಳೆಯರು ನಿರಂತರ ಹೋರಾಟಗಳನ್ನು ನಡೆಸುತ್ತಲೇ ಇರಬೇಕು ಎಂದಾದರೆ, ನಾಗರಿಕತೆಯ ಹೆಜ್ಜೆಗಳು ಮುಂದಡಿ ಇಡುತ್ತಿಲ್ಲವೇ ಎಂಬ ಪ್ರಶ್ನೆ ಕಾಡಲಾರಂಭಿಸಿದೆ.ಮನುಷ್ಯ ಹೃದಯದಲ್ಲಿ ಕಾರುಣ್ಯ ಎಂಬ ಆರ್ದ್ರತೆ ಇಲ್ಲದಿದ್ದರೆ ಬದುಕು ನೆಮ್ಮದಿಯನ್ನುಕಂಡುಕೊಳ್ಳುವುದು ಸಾಧ್ಯವಾಗುವುದಿಲ್ಲ. ಜೀವಸಂಕುಲವನ್ನು ಒಂದು ಮಾಡುವ ಅನುಕಂಪನವೊಂದು ಮಾಯವಾಗುತ್ತಿರುವ ಬಗ್ಗೆ ಬರೆದಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ.

‘‘ಕೆಲವು ಜನ ಒಂದು ಕೊಠಡಿಯಲ್ಲಿ ಕುಳಿತು ಟೆಲಿವಿಷನ್ ನೋಡುತ್ತಿದ್ದಾರೆ ಎಂದಿಟ್ಟುಕೊಳ್ಳೋಣ. ಇನ್ನೊಂದಿಷ್ಟು ಜನ ಇದರ ಅರಿವಿಲ್ಲದೆ ಇನ್ನೊಂದು ಪಕ್ಕದ ಕೊಠಡಿಯಲ್ಲಿ ಇಸ್ಪೀಟ್ ಆಡುತ್ತಲೋ, ಏನೋ ಮಾತುಕತೆಯಾಡುತ್ತಲೋ ತಮ್ಮಷ್ಟಕ್ಕೆ ತಾವಿರುವರು ಎಂದಿಟ್ಟುಕೊಳ್ಳೋಣ. ಆಗ ಟೆಲಿವಿಷನ್ ನಲ್ಲಿ ಯಾವುದಾದರೂ ಕೊಲೆ ದೃಶ್ಯ ಬಂದಾಗ, ಇಲ್ಲಿ ಇದನ್ನು ನೋಡುತ್ತಿದ್ದವರ ದುಃಖದ ಭಾವನೆಯು ಇದನ್ನು ನೋಡದೇ ಇರುವ ಪಕ್ಕದ ಕೊಠಡಿಯಲ್ಲಿ, ತಮ್ಮಷ್ಟಕ್ಕೆ ತಾವೇ ಇಸ್ಪೀಟು ಆಡುತ್ತಿರುವವರ ಮನಸ್ಸಿಗೂ ಮುಟ್ಟಿ ಅವರ ಮನಸ್ಸು ಸ್ವಲ್ಪ ಮಟ್ಟಿಗೆ ದುಗುಡಗೊಳ್ಳುತ್ತದಂತೆ. ಅದೇ ಟೆಲಿವಿಷನ್ ನಲ್ಲಿ ಯಾವುದಾದರೂ ನೃತ್ಯ ದೃಶ್ಯ ಬಂದಾಗ ಅದನ್ನು ನೋಡುತ್ತಿದ್ದವರ ಖುಷಿ ಭಾವನೆಯು ಪಕ್ಕದ ಕೊಠಡಿಯಲ್ಲಿ ಇದನ್ನು ನೋಡದ ತಮ್ಮಷ್ಟಕ್ಕೆ ತಾವೇ ಇಸ್ಪೀಟು ಆಡುವವರ ಮನಸ್ಸಿನ ಮೇಲೂ ಪರಿಣಾಮ ಮಾಡಿ ಸ್ವಲ್ಪ ಮಟ್ಟಿಗೆ ಸಂತೋಷದ ಭಾವನೆ ಉಂಟು ಮಾಡುವುದಂತೆ’’

ದೇವನೂರು ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’ ಕೃತಿಯ ಅಧ್ಯಾಯವೊಂದರಲ್ಲಿ ಈ ಒಂದು ಘಟನೆಯನ್ನು ದೇವನೂರು ಉಲ್ಲೇಖಿಸುತ್ತಾರೆ. ಶಿವಮೊಗ್ಗದ ಡಾ. ಅಶೋಕ್ ಪೈ ಅವರು ತಮಗೆ ಹೇಳಿದ ಘಟನೆಯನ್ನು ವಿವರಿಸುತ್ತ ಅವರು ಈ ಕತೆಯನ್ನು ಉಲ್ಲೇಖಿಸಿದ್ದಾರೆ. ‘ಈ ನಿಜ ಏನನ್ನು ಹೇಳುತ್ತದೆ? ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ ಎಂದು ಹೇಳುತ್ತದೆ. ಯಾವುದೇ ಒಂದು ಜೀವಿಗೆ ಆಗುವ ದುಃಖ ದುಮ್ಮಾನ ಪರಿಸರದಲ್ಲಿ ಉಸಿರಾಡುತ್ತ ಎಲ್ಲ ಜೀವಿಗಳಲ್ಲೂ ಕಂಪನ ಉಂಟು ಮಾಡುತ್ತಿರುತ್ತದೇನೋ. ಈ ಅನುಕಂಪನ ನಿಜವು ಇಡೀ ಜೀವ ಸಂಕುಲವನ್ನೇ ಒಂದು ಎಂದು ಹೇಳುತ್ತದೆ’’ ಎಂದು ಅವರು ಬರೆಯುತ್ತಾರೆ.

ಈ ಉದಾಹರಣೆಯಲ್ಲಿ ‘ಪಕ್ಕದ ಕೊಠಡಿಯಲ್ಲಿ ಕುಳಿತವರು’ ಎಂಬುದು ಸಾಂಕೇತಿಕವಷ್ಟೇ. ರಾಗದ್ವೇಷವೆಂಬ ಭಾವಗಳು ಪರಸ್ಪರರ ಮೇಲೆ ಪ್ರಭಾವ ಬೀರುವುದು ಸಹಜವೇ. ಸಂವಹನವು ಕ್ಷಿಪ್ರವಾಗಿರುವ ಈ ಕಾಲದಲ್ಲಿ, ಅಲ್ಲೆಲ್ಲೋ ದೂರದ ದೇಶದಲ್ಲಿ ಜನರು ಪಡುತ್ತಿರುವ ಪಡಿಪಾಟಲುಗಳು ನಮ್ಮನ್ನು ತಟ್ಟದೇ ಉಳಿಯುತ್ತವೆಯೇ. ಜಾಗತೀಕರಣದ ಪರಿಣಾಮದಿಂದಾಗಿ ಈ ಜಗತ್ತು ಕಿರಿದಾಗಿದೆ ಎಂಬ ಕಾರಣಕ್ಕೇ ಆಗಿರಬಹುದು, ಪಕ್ಕದ ದೇಶವು ಈಗ ಪಕ್ಕದ ಕೊಠಡಿಯಂತೆ ಭಾಸವಾಗುತ್ತಿರುವಾಗ, ಈ ಅನುಕಂಪನದ ವ್ಯಾಪ್ತಿಯೂ ವಿಸ್ತಾರವಾಗಿ ಹೋಗಿದೆ.
ಇತ್ತೀಚೆಗಿನ ವಿದ್ಯಮಾನಗಳನ್ನು ಗಮನಿಸಿದರೆ, ಈ ಅನುಕಂಪನವು ಬೇಸರದ ಕರಿಛಾಯೆಯಿಂದ ಕೂಡಿದ್ದು, ನಾವುಯಾರೂ ಅದರಿಂದ ತಪ್ಪಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಇತ್ತೀಚೆಗೆ ಇನ್ ಸ್ಟಗ್ರಾಂನ ಪುಟ ತೆರೆದರೆ ಅಲ್ಲಿ ಆಕೆ ಮಾತನಾಡುತ್ತಿದ್ದಳು, ‘ಕಳೆದ ಇಪ್ಪತ್ತು ವರ್ಷಗಳಲ್ಲಿ ನಾನು ಗಳಿಸಿದ ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದೇನೆ. ತಾಲಿಬಾನ್ ಎಂಬುದು ನನ್ನ ಮನೆ, ಪದವಿ ಸರ್ಟಿಫಿಕೇಟುಗಳು, ಬದುಕು ಎಲ್ಲವನ್ನೂ ಅಳಿಸಿ ಹಾಕುತ್ತಿದೆ. ನಮ್ಮ ಹುಡುಗಿಯರು ಶಾಲೆಗೆ ಹೋಗುವ ಅವಕಾಶವನ್ನು ಪಡೆಯಬೇಕಾದರೆ ಸಾವಿರಾರು ಪುರುಷರು ಜೀವ ತ್ಯಾಗ ಮಾಡಿದರು. ಈಗ ನೋಡಿದರೆ ನನ್ನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಎಲ್ಲಿದ್ದಾರೆ ಎಂದು ಗೊತ್ತಿಲ್ಲ…’ – ಕಾಬೂಲ್ ನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಪಶ್ತಾನಾ ದುರಾನಿ ಮಾತನಾಡಿದ ವಿಡಿಯೋ ತುಣುಕಿನಲ್ಲಿ ಕೇಳಿದ ಕೆಲವು ಮಾತುಗಳಿವೆ.

ಈ ವಿಡಿಯೊವನ್ನು, ಆಕೆಯ ತುಂಬಿದ ಕಣ್ಣುಗಳನ್ನು ನೋಡುವಾಗ, ನಡುಗುವ ಧ್ವನಿಯನ್ನು ಕೇಳುವಾಗ ನಿರ್ಲಿಪ್ತವಾಗಿ ಇರುವುದಾದರೂ ಹೇಗೆ ಸಾಧ್ಯ. ‘ತುಂಬ ದುರ್ಬಲವೆನಿಸುತ್ತದೆ, ಅಳು ಬರುತ್ತಿದೆ. ನಾಳೆ ನನ್ನನ್ನು ಇಲ್ಲಿಂದ ತೆರವು ಮಾಡಬಹುದು ಅಥವಾ ನನ್ನನ್ನು ಅವರು ಕೊಂದು ಬಿಡಬಹುದು. ಕೆಲಸ ಮಾಡಲು ಅವಕಾಶ ದೊರೆಯದೇ ಇರಬಹುದು.. ನನಗೇನೂ ಗೊತ್ತಾಗುತ್ತಿಲ್ಲ..’ ಎಂದು ಆಕೆ ಹೇಳುತ್ತಿದ್ದಳು. ಆಕೆಗೆ ಎದುರಾಗಿರುವ ಆ ಅನಿಶ್ಚಿತತೆಯು ಕೊಡುವ ಮಾನಸಿಕ ಹಿಂಸೆ ಕಡಿಮೆಯೇನಲ್ಲ.

(ಡಾ.ಬಹಾರ್ ಜಲಾಲಿ)

ಕ್ರೌರ್ಯವನ್ನು, ಒರಟುತನವನ್ನು, ಸಹಜೀವಿಯ ಅಸ್ತಿತ್ವವನ್ನು ನಿರಾಕರಿಸುವ ತಾಲಿಬಾನ್ ಹಿಂಸಾಚಾರದ ವರದಿಗಳನ್ನು ಓದುತ್ತ ಮನಸ್ಸು ಮುದುಡುತ್ತಿರುವಾಗಲೇ, ಕತ್ತಲ ಜಗತ್ತಿನಲ್ಲಿ ಪುಟ್ಟ ಮಿಂಚುಹುಳದಂತೆ ಭರವಸೆಯನ್ನು ಮೂಡಿಸುವ ಸುದ್ದಿಗಳೂ ಕೇಳಿಬಂದಿವೆ. ಕಾಬೂಲ್ ನಲ್ಲಿ ತಾಲಿಬಾನ್ ಆಡಳಿತದ ವಸ್ತ್ರ ಸಂಹಿತೆ ವಿರುದ್ಧ ಅಫ್ಘಾನಿಸ್ತಾನದ ಮಹಿಳೆಯರು ಆನ್ ಲೈನ್ ನಲ್ಲಿಯೇ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. DoNotTouchMyclothes ಮತ್ತು AfghanistanCulture ಎಂಬ ಹ್ಯಾಷ್ ಟ್ಯಾಗ್ ನಲ್ಲಿ ಮಹಿಳೆಯರು ಅಫ್ಘಾನಿಸ್ತಾನದ ವಿವಿಧ ಶೈಲಿಯ ಫೋಟೊಗಳನ್ನು ಅಪ್ ಲೋಡ್ ಮಾಡಿದ್ದಾರೆ.

ಅತ್ತ ನೋಡಿದರೆ, ರಾಜಕೀಯದಲ್ಲಿ ತಮಗೆ ಪ್ರಾತಿನಿಧ್ಯ ಬೇಕು ಎಂದು ಆಗ್ರಹಿಸಿ ಮಹಿಳೆಯರು ಪ್ರತಿಭಟನೆಯಲ್ಲಿ ಹೆಜ್ಜೆ ಹಾಕಿದ್ದಾರೆ. ಕಾಬೂಲ್ ನಲ್ಲಿಯೇ 30 ಮಂದಿ ಮಹಿಳೆಯರು ಬೀದಿಗಿಳಿದು ಹೋರಾಟದಲ್ಲಿ ಭಾಗವಹಿಸಿದ್ದರು. ಹೆರಾತ್ ನಲ್ಲಿಯೂ ಇಂತಹ ಪ್ರತಿಭಟನೆಯನ್ನು ಮಹಿಳೆಯರು ನಡೆಸಿದ್ದಾರೆ. ರಸ್ತೆಗಳಲ್ಲಿ ಕಣ್ಣಿಗೆ ರಾಚುವ ಭಾರೀ ದೊಡ್ಡ ಬಂದೂಕುಗಳು, ಟಿಕ್ ಟಿಕ್ ಎಂದು ಸದ್ದು ಮಾಡುತ್ತಿರುವಂತೆ ಭಾಸವಾಗುವ ಬಾಂಬ್ ಗಳ ನಡುವೆ ಇರುವ ಕಿಂಚಿತ್ ಅವಕಾಶಗಳಲ್ಲಿ ಹೀಗೆ ಪ್ರತಿಭಟನೆ ಮಾಡುತ್ತಿರುವ, ತಮ್ಮ ಧ್ವನಿಯನ್ನು ಆಲಿಸುವಂತೆ ಆಗ್ರಹಿಸುತ್ತಿರುವ ಈ ಮಹಿಳೆಯರಷ್ಟು ಧೈರ್ಯಸ್ಥೆಯರು ಸದ್ಯಕ್ಕೆ ಜಗತ್ತಿನಲ್ಲಿ ಮತ್ಯಾರಿದ್ದಾರೆ ಎಂದು ವಿಸ್ಮಯವಾಗುತ್ತದೆ. ಅವರ ಬಗ್ಗೆ ಮೆಚ್ಚುಗೆಯೆನಿಸುತ್ತದೆ. ಈ ಜಗತ್ತಿನಲ್ಲಿ ಕೆಡುಕು ಎಷ್ಟೇ ವಿಜೃಂಭಿಸಲು ಪ್ರಯತ್ನಿಸಿದರೂ ಇಂತಹ ಸುದ್ದಿಗಳು ನಮ್ಮ ಬದುಕಿನಲ್ಲಿಯೂ ತುಸು ಭರವಸೆಯನ್ನು ಮೂಡಿಸುತ್ತವೆ.

ಹಾಗೆಂದು ಪ್ರತಿಭಟನೆಗಳೆಲ್ಲ ಸುರಳೀತ ನಡೆಯುತ್ತಿವೆ ಎಂದೇನೂ ಅಲ್ಲ. ಹೋರಾಟದಲ್ಲಿ ಭಾಗವಹಿಸಿದ್ದ ನರ್ಗೀಸ್ ಸಾದತ್ ಮೇಲೆ ಹಲ್ಲೆಗಳು ನಡೆದಿದೆ ಎಂದು ಪತ್ರಿಕೆಗಳು ವರದಿ ಮಾಡಿವೆ. ವಿಡಿಯೊಗಳು ಕಾಣಿಸಿವೆ. ಇಂತಹ ಹಲ್ಲೆಯ, ಹಿಂಸೆಯ ಸುದ್ದಿಗಳು ಪ್ರತಿಭಟನೆಯನ್ನು ಕ್ಷೀಣಗೊಳಿಸಲು ಪ್ರಯತ್ನಿಸುತ್ತವೆ. ಬಹುಶಃ ಈ ಒಂದು ತಿಂಗಳಲ್ಲಿ ಅಫ್ಘಾನಿಸ್ತಾನದಲ್ಲಿ ರಾಜಕೀಯ ಪ್ರಾತಿನಿಧ್ಯಕ್ಕೆ ಆಗ್ರಹಿಸಿ ಮಹಿಳೆಯರ ಕಡೆಯಿಂದ ನಾಲ್ಕೈದು ಪ್ರತಿಭಟನೆಗಳು ನಡೆದಿವೆ.

ಹೀಗೆ ಅರಿವು ಮೂಡಿಸುವ, ಹೋರಾಟಗಳಲ್ಲಿ ಭಾಗವಹಿಸುವಂತೆ ಹುರಿದುಂಬಿಸುವ ಕಾಯಕಗಳಲ್ಲಿ ತೊಡಗಿಕೊಂಡಿದ್ದ ಸಾಮಾಜಿಕ ಹೋರಾಟಗಾರ್ತಿ ಫಾಹಿಮಾ ರಹಮತಿಯ ಮನೆಗೆ ನುಗ್ಗಿ, ಆಕೆಯ ಮೇಲೆ ಹಲ್ಲೆ ನಡೆಸಿರುವ ವರದಿಗಳು ಪ್ರಕಟವಾಗಿವೆ. ಆಕೆಯ ಸೋದರರು, ಅಳಿಯ ಮತ್ತು ನೆರೆಮನೆಯವರನ್ನೂ ಅಪಹರಣ ಮಾಡಿರುವುದಾಗಿ ಆಕೆ ಹೇಳಿಕೊಂಡಿದ್ದಾರೆ.

ಯಾವುದೇ ಒಂದು ಜೀವಿಗೆ ಆಗುವ ದುಃಖ ದುಮ್ಮಾನ ಪರಿಸರದಲ್ಲಿ ಉಸಿರಾಡುತ್ತ ಎಲ್ಲ ಜೀವಿಗಳಲ್ಲೂ ಕಂಪನ ಉಂಟು ಮಾಡುತ್ತಿರುತ್ತದೇನೋ. ಈ ಅನುಕಂಪನ ನಿಜವು ಇಡೀ ಜೀವ ಸಂಕುಲವನ್ನೇ ಒಂದು ಎಂದು ಹೇಳುತ್ತದೆ.

ಅಭಿವ್ಯಕ್ತಿಗೆ, ಭದ್ರತೆಗೆ, ಬೆಚ್ಚನೆಯ ನಿದ್ದೆಗೆಂದು ಮಹಿಳೆಯರು ನಡೆಸುತ್ತಿರುವ ಹೋರಾಟ ನಿರಂತರವಾಗಿದೆ. ಒಂದೊಂದು ದೇಶದಲ್ಲಿ ಒಂದಲ್ಲ ಒಂದು ಕಾರಣಗಳು ಹುಟ್ಟಿಕೊಂಡು, ಇಂತಹ ಹೋರಾಟವನ್ನು ಜೀವಂತ ಇರಿಸುತ್ತಲೇ ಇವೆ. ಎರಡನೇ ಮಹಾಯುದ್ಧದ ಬಳಿಕ ಶಾಂತಿಯ ಕುರಿತು ಬಹಳ ಮಾತುಗಳು ಕೇಳಿ ಬಂದರೂ, ಮಹಿಳೆಯರ ಪಾಲಿಗೆ ಹೆಚ್ಚೇನೂ ನೆಮ್ಮದಿಯ ದಿನಗಳು ಗೋಚರಿಸಿದ್ದಿಲ್ಲ. ಹಾಗೆಂದ ತಕ್ಷಣ, “ನೋಡಿ ಎಷ್ಟೊಂದು ಸ್ವಾತಂತ್ರ್ಯವಿದೆ ಮಹಿಳೆಯರಿಗೆ?” ಎಂದು ಕೆಲವು ಘಟನೆಗಳನ್ನು ಹೆಕ್ಕಿ ತೋರಿಸುವುದುಂಟು. ಆದರೆ, ಆರೋಗ್ಯಕ್ಕಾಗಿ, ತುತ್ತಿಗಾಗಿ, ಬಟ್ಟೆಗಾಗಿ, ಮಾತಿಗಾಗಿ, ಪ್ರಾತಿನಿಧ್ಯಕ್ಕಾಗಿ ಲಿಂಗತ್ವದ ಕಾರಣಕ್ಕಾಗಿ, ಹೋರಾಟಗಳನ್ನು ಈಗಲೂ ಮಾಡುತ್ತಲೇ ಬರಬೇಕಾಗಿದೆ ಎಂಬುದು ವಿಪರ್ಯಾಸ ಅಲ್ಲವೇ.

ಇನ್ನು ಮಹಿಳೆಯರು ನಡೆಸುವ ಹೋರಾಟಗಳನ್ನು ಹೇಗೆ ಪರಿಗಣಿಸಲಾಗುತ್ತದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ‘ ಒಳ್ಳೆ ಹುಡುಗಿಯರು ಪ್ರತಿಭಟನೆ ಮಾಡುವುದಿಲ್ಲ, ಬೀದಿಗಿಳಿದು ಕಿರುಚುವುದಿಲ್ಲ’ ಎನ್ನುವ ಮಾತನ್ನು ವಿವಿಧ ಪದಗಳೊಂದಿಗೆ ಜಗತ್ತಿನ ಎಲ್ಲ ಸಂಪ್ರದಾಯವಾದಿಗಳೂ ಬಳಸುತ್ತಾರೆ. ‘ಏನಿದು ಅರಚಾಟ, ಕಿರುಚಾಟ.. ಇರೋದ್ರಲ್ಲಿ ಚೆಂದಾಗಿ ಬಾಳುವೆ ಮಾಡಬೇಕಪ್ಪಾ’ ಎಂಬ ಮಾತುಗಳನ್ನು ಎಲ್ಲ ಮಹಿಳೆಯರೂ ಒಂದಲ್ಲ ಒಂದು ಸಂದರ್ಭದಲ್ಲಿ ಕೇಳಿಸಿಕೊಂಡಿರುತ್ತಾರೆ.

(ನಾದಿಯಾ ಮುರದ್ ಯಾಜಿದಿ)

ಕೆಲವೇ ವರ್ಷಗಳ ಹಿಂದೆ, ಇರಾಕ್ ಮತ್ತು ಸಿರಿಯಾದ ಯಾಜಿದಿ ಸಮುದಾಯದ ಸಾವಿರಾರು ಮಹಿಳೆಯರು ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರ ಕರಾಳ ಹಿಂಸೆಗೆ ಬಲಿಯಾಗಿದ್ದರು. ತಮ್ಮನ್ನು ಕಾಪಾಡುವಂತೆ ಜಗತ್ತಿನ ಮುಂದೆ ಕೈಜೋಡಿಸಿ ಕೇಳಿಕೊಂಡಿದ್ದರು. 2014ರಲ್ಲಿ ಐಎಸ್ ಉಗ್ರರಿಂದ ಅಪಹರಣಕ್ಕೊಳಗಾದ ನಾದಿಯಾ ಮುರದ್ ಯಾಜಿದಿ ಸಮುದಾಯದವರು. ಮಾನವ ಹಕ್ಕುಗಳ ಕಾರ್ಯಕರ್ತೆ. ಅವರು ವಿದ್ಯಾರ್ಥಿನಿಯಾಗಿದ್ದಾಗ, ಅವರ 19ನೇ ವಯಸ್ಸಿನಲ್ಲಿ ಅವರನ್ನು ಐಎಸ್ ಉಗ್ರರು ಅಪಹರಿಸಿದ್ದರು. ಇರಾಕ್ ನ ಇಸ್ಲಾಮಿಕ್ ರಾಜ್ಯದಿಂದ ಸೆರೆಹಿಡಿದ 6,700 ಯಾಜಿದಿ ಮಹಿಳೆಯರಲ್ಲಿ ಮುರಾದ್ ಕೂಡ ಒಬ್ಬರು. ಅತ್ಯಾಚಾರ, ದೌರ್ಜನ್ಯಗಳ ಕೆಟ್ಟ ದಿನಗಳನ್ನು ಕಂಡ, ಅವರು ಅಲ್ಲಿಂದ ಪಾರಾಗಿ ಬರುವುದು ಸಾಧ್ಯವಾಯಿತು. ಮಾತ್ರವಲ್ಲ, ದೌರ್ಜನ್ಯದ ಕರಾಳ ಮುಖವನ್ನು ಅವರು ಜಗತ್ತಿನ ಮುಂದೆ ವಿವರಿಸುವುದು ಸಾಧ್ಯವಾಯಿತು. ಅವರನ್ನು ವಿಶ್ವಸಂಸ್ಥೆಯು ಮಾನವ ಕಳ್ಳಸಾಗಣೆ ಸೌಹಾರ್ದ ರಾಯಭಾರಿಯನ್ನಾಗಿ ನೇಮಕ ಮಾಡಿತು. 2018ರಲ್ಲಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿಯು ದೊರೆತಿದೆ. ಸ್ತ್ರೀರೋಗ ತಜ್ಞೆ ಡೆನಿಸ್ ಮುಕ್ವೇಜ್ ಜೊತೆ ಅವರು ಈ ಪ್ರಶಸ್ತಿಯನ್ನು ಹಂಚಿಕೊಂಡಿದ್ದರು. ನೊಬೆಲ್ ಪ್ರಶಸ್ತಿ ಪಡೆದ ಇರಾಕ್ ಪ್ರಥಮ ಮಹಿಳಾ ಪ್ರಜೆಯಾಗಿದ್ದರು. ಸಶಸ್ತ್ರ ಸಂಘರ್ಷಗಳು ಮತ್ತು ಯುದ್ಧಗಳಲ್ಲಿ ಲೈಂಗಿಕ ಹಿಂಸೆಯನ್ನು ಅಸ್ತ್ರವನ್ನಾಗಿ ಬಳಸಬಾರದು ಎಂಬ ನಿಟ್ಟಿನಲ್ಲಿ ಆಕೆ ಜಾಗೃತಿ,ಹೋರಾಟ, ಅಭಿಯಾನಗಳನ್ನುನಡೆಸಿದ್ದರು.

ಐಎಸ್ ಉಗ್ರರಿಂದ ಪಾರಾಗಿ ಬಂದ ಇತರ ನಿರಾಶ್ರಿತ ಮಹಿಳೆಯರೊಂದಿಗೆ ನಾದಿಯಾ ಅವರು ಅಂದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದಾಗ, ‘ನಿನಗೆ ನೊಬೆಲ್ ಪ್ರಶಸ್ತಿ ಬಂದಿದೆಯಲ್ಲ, ಅಂದಹಾಗೆ ನಿನಗೇಕೆ ನೊಬೆಲ್ ಪ್ರಶಸ್ತಿ ಕೊಟ್ಟರು ?’ ಎಂದು ಟ್ರಂಪ್ ಪ್ರಶ್ನಿಸಿದ್ದರು.

ನರಮೇಧ, ದೌರ್ಜನ್ಯಗಳಿಗೆ ಈಡಾದ ಯಾಜಿದಿ ಸಮುದಾಯದ ಪರ, ಯಾಜಿದಿ ಮಹಿಳೆಯರ ಪರ ಬದುಕನ್ನೇ ಸಮರ್ಪಿಸಿ ಹೋರಾಡುತ್ತಿರುವ, ಸ್ವತಃ ಸಂತ್ರಸ್ತೆಯೂ ಆಗಿದ್ದ ನಾದಿಯಾ ಮುರದ್ ಇಂತಹ ಪ್ರಶ್ನೆಯನ್ನು ಎದುರಿಸಬೇಕಾಗಿ ಬಂತು. ಟ್ರಂಪ್ ಮಾತಿಗೆ ಜಾಗತಿಕವಾಗಿ ವ್ಯಾಪಕ ಟೀಕೆಗಳು ವ್ಯಕ್ತವಾದವು. ಪತ್ರಿಕೆಗಳು ನಾದಿಯಾ ಮಾಡಿದ ಮಹಿಳಾಪರವಾದ, ಅಲ್ಪಸಂಖ್ಯಾತರ ಪರವಾದ ಕೆಲಸಗಳನ್ನು ವಿವರಿಸಿ ಬರೆದವು. ಆದರೆ ಇಲ್ಲಿ ಟ್ರಂಪ್ ಮಾತುಗಳು ಸಾಂಕೇತಿಕವಷ್ಟೇ. ಎಷ್ಟೋ ಸಂದರ್ಭಗಳಲ್ಲಿ ‘ಮಹಿಳೆಯರು ಏನೋ, ಒಂದಲ್ಲ ಒಂದು ಹೋರಾಟ ಮಾಡುತ್ತಲೇ ಇರುತ್ತಾರಪ್ಪಾ…’ ಎಂಬ ಉಡಾಫೆ ಧೋರಣೆ ನಮ್ಮ ನಡುವಿನ ಅನೇಕರ ಮನಸ್ಸಿನಲ್ಲಿರುತ್ತದೆ.

ಹಿಂಸೆ, ದೌರ್ಜನ್ಯಗಳನ್ನು ನಿಲ್ಲಿಸಿ ಎಂದು ಜಗತ್ತಿನಲ್ಲಿ ಧ್ವನಿಯೊಂದು ನಿರಂತರವಾಗಿ ಕೇಳಿಸುತ್ತಲೇ ಇದೆ. ಆದರೆ ಆಲಿಸುವವರ ಹೃದಯದಲ್ಲಿ ಕರುಣೆಯೆಂಬ ಆರ್ದ್ರತೆಯೊಂದು ಇಲ್ಲದೇ ಇದ್ದರೆ,ಈ ಧ್ವನಿಯು ಕೇಳಿಸುವುದಾದರೂ ಹೇಗೆ.. ಜಗತ್ತಿನ ಮತ-ಧರ್ಮಗಳೆಲ್ಲ ದಯೆಯೇ ಧರ್ಮದ ಮೂಲ ಎಂದು ಪ್ರಶಾಂತವಾದ ಧ್ವನಿಯಲ್ಲಿ ಎಷ್ಟೇ ಹೇಳುತ್ತ ಬಂದಿದ್ದರೂ, ಕೊನೆಗೂ ಹೀಗೆ ನಿರಂತರ ಹಿಂಸೆಯನ್ನು ನೋಡುವ, ಹಿಂಸೆಯ ವಾರ್ತೆಗಳನ್ನುಕೇಳುವ ಪರಿಸ್ಥಿತಿಯಿಂದ ನಾವು ತಪ್ಪಿಸಿಕೊಳ್ಳುವುದು ಸಾಧ್ಯವಾಗಲಿಲ್ಲವಲ್ಲಾ ಎಂದೆನಿಸುತ್ತದೆ. ಸುಂದರವಾದ ಸಿದ್ಧಾಂತಗಳು, ನಂಬಿಕೆಗಳು ನಮ್ಮ ನಡುವೆ ಎಷ್ಟು ದೊಡ್ಡ ಸಂಖ್ಯೆಯಲ್ಲಿದ್ದರೇನು, ನೋವಿನ ಧ್ವನಿಗೆ ಪ್ರತಿಕ್ರಿಯಿಸುವ ಸಾಮರ್ಥ್ಯವೊಂದನ್ನು ಮನುಷ್ಯನಲ್ಲಿ ಬೆಳೆಸುವ ಬಗೆಯೊಂದು ಕಾಣದಾಗಿದೆ.

ಟೆಲಿವಿಶನ್ ನೋಡುವ ಘಟನೆಯನ್ನು ವಿವರಿಸುವ ಬರಹವು, ದೇವನೂರು ಅವರ ‘ಮೂರ್ಛಾವಸ್ಥೆಯಲ್ಲಿ ಕಾರುಣ್ಯ’ ಎಂಬ ಬರಹದಲ್ಲಿ ಉಲ್ಲೇಖವಾಗುತ್ತದೆ. ಬರಹದ ಅಂತ್ಯದಲ್ಲಿ ಹೀಗೊಂದು ಪ್ಯಾರಾ ಇದೆ: ‘ಕೊಲೆ ಸುಲಿಗೆ ದ್ವೇಷ ಅಸೂಯೆಗಳಿಂದ ಕ್ಷೋಭೆಗೊಂಡು ನರಳುತ್ತಿರುವ ಜಗತ್ತು-ಅದು ಘಾಸಿಗೊಳ್ಳುವುದು – ತನ್ನ ಆಳದ ಒಳ ಸಮಷ್ಟಿ ಮನಸ್ಸನ್ನೆ. ಈ ಸಮಷ್ಟಿ ಮನಸ್ಸಲ್ಲಿ ಎಲ್ಲರೂ ಇರುತ್ತಾರೆ. ನಾವು ಮನುಷ್ಯರು ಗುಣವಾಗಬೇಕಾಗಿದೆ.

ನಮ್ಮೊಳಗೆ ಮೂರ್ಛಾವಸ್ಥೆಯಲ್ಲಿರುವ ಕಾರುಣ್ಯವನ್ನು ಎಚ್ಚರಗೊಳಿಸಬೇಕಾಗಿದೆ.’