ಅವತ್ತು ಅಮ್ಮ, ಅಣ್ಣ ಮನೆಗೆ ಬಂದಾಗ, ತೇಜಸ್ವಿಯವರು ಮನೆಯ ಚಮಚೆ ಬಳಸಿ, ಸ್ಪಿನರ್ ತಯಾರಿಸಿದ ಬಗ್ಗೆ  ಸವಿವರವಾಗಿ ಹೇಳಿದೆ. ಅಮ್ಮ ಬೆಚ್ಚಿ ಬಿದ್ದರು. `ಅಲ್ಲೇ, ನೀನು ಕುವೆಂಪು ಎಂದು ಕೆತ್ತಿಸಿದ್ದ ಚಮಚ ಕೊಟ್ಟು ಬಿಟ್ಟೆಯಾ`?. ಈ ಚಮಚಗಳನ್ನು ಚಿತ್ರಕೂಟದ ಮನೆಗೆ ಒಕ್ಕಲು ಬರುವಾಗ ಕುವೆಂಪು ಹೆಸರು ಹಾಕಿಸಿ ಅಮ್ಮ ತಂದಿಟ್ಟವು. ಆಗ ನನ್ನ ಪಜೀತಿ ಏನೆಂದು ಹೇಳಲಿ. ಇವರು ಕೇಳಿದ ಮೇಲೆ ಕೊಡದೇ ಇರುವುದು ಹೇಗೆ ಸಾಧ್ಯ. ತಮಾಷೆಯಾಗಿದೆ ಅಲ್ವೆ. ಅಮ್ಮನಿಗೆ ಕುವೆಂಪು ಮುಖ್ಯ, ನನಗೆ ನನ್ನವರು ಮುಖ್ಯ.
ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಲ್ಲಿ ರಾಜೇಶ್ವರಿ ತೇಜಸ್ವಿ ಬರೆದ ಬರಹ. 

 

ತೇಜಸ್ವಿಗೆ, ಅಮ್ಮ ಅಣ್ಣ ನಮ್ಮ ತೋಟಕ್ಕೆ ಪದೇ ಪದೇ ಬರಲಿ ಎಂದು. ಕಾರಣಾಂತರದಿಂದ ಅಕಸ್ಮಾತ್ ಮೂರು ತಿಂಗಳು ಕಳೆದೂ ಬರಲಿಲ್ಲವಾದರೆ ಯಾರಿಗೇಂತ ನಾನು ಈ ತೋಟ ಮಾಡಬೇಕಿತ್ತು ಎಂದುಕೊಳ್ಳುತ್ತಿದ್ದರು. ಆಗೆಲ್ಲ ನಮ್ಮಲ್ಲಿ ಫೋನ್ ಇಲ್ಲದಿದ್ದ ಕಾಲ. ಹಾಗಾಗಿ ತಕ್ಷಣ ಕಾಗದ ಬರೆಯುತ್ತಿದ್ದರು.

ಅಮ್ಮ, ಅಣ್ಣ ಬರುತ್ತಾರೆಂದರೆ ನಮಗೆಲ್ಲಾ ಇನ್ನಿಲ್ಲದ ಸಂಭ್ರಮ. ಸುಸ್ಮಿತಾ ಈಶಾನ್ಯೆಯರಂತೂ ಅಜ್ಜಯ್ಯ ಅಜ್ಜಿ ಬರುವರೆಂಬ ಸುದ್ದಿ ಗೊತ್ತಾದ ಕೂಡಲೇ ಆಕಾಶಕ್ಕೇ ಹಾರಿ ಬೀಳುತ್ತಿದ್ದರು. ಅವರ ಮಮತೆ ಮಾತು ತುಂಬ ಸಿಹಿ. ಹೇರಳವಾಗಿ ಸಿಗುತ್ತಿತ್ತು ಮಕ್ಕಳಿಗೆ. ಜೊತೆಗೆ ಎಲ್ಲಿಗಾದರೂ ತಿರುಗಾಟಕ್ಕೆ ಹೋಗುವ ಸಂಭ್ರಮ. ಇನ್ನು ತಿಂಡಿ ತಿನಿಸು. ಅದುಬೇಕು. ಇದು ತಿನ್ನಿ. ಲೆಕ್ಕವಿಲ್ಲದಷ್ಟು. ಇವರಿಗೆ ಅಣ್ಣ ಬಂದಾಗ ಯಾವ್ಯಾವ ನದಿಗೆ ಮೀನು ಹಿಡಿಯಲು ಹೋಗಬೇಕು, ಎಲ್ಲೆಲ್ಲಿಯ ಗುಂಡಿಗೆ ಗಾಣ ಹಾಕಬೇಕು, ಏನು ಮೀನು ಸಿಗಬಹುದು ಲೆಕ್ಕಾಚಾರ ಹಾಕಿದ್ದೇ ಹಾಕಿದ್ದು. ಅಣ್ಣನವರಿಗೂ ಇವರಷ್ಟೇ ಉತ್ಸಾಹ. ವಯಸ್ಸಿದ್ದಿದ್ದರೆ ಇವರ ಜೊತೆಯಲ್ಲಿ ಹೊರಡುತ್ತಿದ್ದುದರಲ್ಲಿ ಅನುಮಾನವಿಲ್ಲ. ಎಲ್ಲವನ್ನೂ ವಿವರವಾಗಿ ಕೇಳಿಕೊಳ್ಳುತ್ತಿದ್ದರು. ಯಾವ ಗುಂಡಿಯಲ್ಲಿ ಹಿಡಿದೆ. ಏನು ಆಹಾರ ಹಾಕಿದ್ದೆ. ಎಷ್ಟೆಷ್ಟು ಸತಾಯಿಸ್ತು. ಯಾವ ಜಾತಿ ಮೀನು. ಎಷ್ಟು ತೂಕ ಹೀಗೆ, ಇತ್ಯಾದಿ.

ಇವರು ಮುಂಚೆಯೇ ಎಲ್ಲ ಸಲಕರಣೆ ಸಿದ್ಧ ಮಾಡಿಕೊಳ್ಳುತ್ತಿದ್ದರು. ತೋಟದಲ್ಲಿ ತಾವೇ ಅಗೆದು ಎರೆ ಹುಳು ತೆಗೆದಿಟ್ಟುಕೊಳ್ಳುತ್ತಿದ್ದರು. ಗಾಣ ಅಂದ್ರೆ ಉದ್ದನೆ ಫೈಬರ್ ಗ್ಲಾಸಿನ ಕೋಲುಗಳು ಫಿಷ್ಷಿಂಗ್ ರಾಡ್ ಇದಾವೆ ಎಂದು. ತುದಿಯಲ್ಲಿ ಟೇಪರಿಂಗ್ ಆಗಿರುತ್ತೆ ಸಣ್ಣಕ್ಕೆ. ಕೈ ಹಿಡಿಯುವಲ್ಲಿ ಸ್ವಲ್ಪ ದಪ್ಪಕ್ಕೆ ಇರುತ್ತೆ. ರಾಡ್ ತುದಿಗೆ ೪೦ ಎಂ.ಎಂ.ದು ನೈಲಾನ್ ದಾರ ಕಟ್ಟಿರುತ್ತಾರೆ. ಅವಕ್ಕೆ ಕೊಕ್ಕೆ ಅಂದರೆ ಗಾಣ ಕಟ್ಟಿರುತ್ತಾರೆ. ಇದಕ್ಕೆ ಕಟ್ಟುವ ಗಂಟುಗಳು ವಿಶಿಷ್ಟವಾದವು. ಸುಲಭಕ್ಕೆ ಬಿಚ್ಚಿಕೊಳ್ಳುವುದಿಲ್ಲ. ಎಷ್ಟು ತನ್ಮಯತೆಯಿಂದ ಈ ಗಂಟು ಹಾಕುತ್ತಿದ್ದರು ಇವರು! ನನಗೂ ಹೇಳಿಕೊಟ್ಟಿದ್ದರು. ಗಾಣಕ್ಕೆ ಎರೆಹುಳು ಅಥವಾ ಪುಡಿ ಮೀನು ಸುರಿದಿರುತ್ತಾರೆ. ಇದನ್ನು ಅನುಭವದಿಂದಲೂ ಅಂದಾಜಿನ ಮೇಲೂ ನದಿಯಲ್ಲಿ ಮೀನು ಸಿಗುವ ಗುಂಡಿ ಗೊತ್ತು ಮಾಡಿಕೊಂಡಿರುತ್ತಾರೆ. ಅಲ್ಲಿ ಗಾಣ ಹಾಕಿ ಕಾಯಬೇಕು.

ಇನ್ನೊಂದು ವಿಧಾನ. ಫೈಬರ್ ಗ್ಲಾಸ್ ಗಾಣದ ಕೋಲು ಇದೆ. ಇದಕ್ಕೆ ರಾಡ್ ಅಂಡ್ ರೀಲ್ ಎನ್ನುವರು. ಈ ರಾಡಿನ ಹಿಡಿಪಿನ ಹತ್ತಿರ ಒಂದು ರೀಲ್ ಫಿಕ್ಸ್ ಮಾಡಿರುತ್ತಾರೆ. ಇದಕ್ಕೆ ೪೦ಎಂ.ಎಂ. ನೈಲಾನ್ ದಾರ ಸುತ್ತಿರುತ್ತಾರೆ. ಈ ರಾಡ್ಗೆ ಅಲ್ಲಲ್ಲಿ ಸ್ಟೀಲ್ ಉಂಗುರ ಕೂರಿಸಿರುತ್ತಾರೆ. ಅದನ್ನು ಗೈಡ್ಸ್ ಅನ್ನುವರು ಇದರ ಮುಖಾಂತರ ದಾರ ತೂರಿಸುತ್ತಾರೆ. ದಾರದ ತುದಿಗೆ ೧೨ಸೆಂ.ನಷ್ಟು ಉದ್ದದ ೪೦ ಎಂ.ಎಂ.ಸ್ಟೀಲ್ ತಂತಿ ಕಟ್ಟಿರುತ್ತಾರೆ. ಈ ರೀತಿ ತುದಿ ಸುತ್ತಿ ಸಣ್ಣ ಗೋಲಿಯಷ್ಟು ದಪ್ಪದ ಸೀಸದ ತುಂಡು ತೂಕ್ಕಕ್ಕಾಗಿ ಕಟ್ಟಿರುತ್ತಾರೆ. ಸುತ್ತಿದ ತಂತಿಗೆ ಮತ್ತೊಂದು ೮ ಸೆಂ.ಉದ್ದದ ಸ್ಟೀಲ್ತಂತಿ ನೇತಾಡುವಂತೆ ಸುತ್ತಿರುತ್ತಾರೆ. ಈ ತಂತಿಗೆ ಆರೇಳು ಮುತ್ತಿನದೋ ಪ್ಲಾಸ್ಟಿಕ್‌ನದೋ ಮಣಿ ಪೋಣಿಸಿರುತ್ತಾರೆ. ಆಮೇಲೆ ಒಂದು ಚಮಚದಂತಿರುವ ಸ್ಟೀಲ್ ಸ್ಪಿನರ್ ಇದಕ್ಕೆ ಅಂಟಿಕೊಂಡಂತೆ ೨ ಸೆಂ.ಉದ್ದದ ಪ್ಲಾಸ್ಟಿಕ್ ಟ್ಯೂಬ್. ಅದರ ಮುಂದೆ ಮೂರು ಕೊಕ್ಕೆಯಿರುವ ಗಾಣ ಫಿಕ್ಸ್ ಆಗಿರುತ್ತದೆ.

ಈ ಸ್ಪಿನರ್ ಗಾಣಕ್ಕೆ ಯಾವ ಆಹಾರವನ್ನೂ ಸುರಿಯುವಂತಿಲ್ಲ. ಹರಿವ ನೀರಿಗೆ ಹಾಕುವ ಗಾಣ. ರೀಲ್ನಲ್ಲಿ ದಾರ ಸುತ್ತಿಕೊಂಡಿರುವುದರಿಂದ ಕೆರೆ ದಂಡೆಯಲ್ಲಿಯೋ ಹೊಳೆ ದಂಡೆಯಲ್ಲಿಯೋ ನಿಂತು ಎಷ್ಟು ದೂರಕೆ ಬೇಕಾದರೂ ಗಾಣವನ್ನು ಎಸೆಯಬಹುದು

ಅನಂತರ ರೀಲ್ಗೆ ದಾರ ವಾಪಾಸು ಸುತ್ತಿಕೊಂಡು ಬರುವಾಗ ಚಮಚದಂತಿರುವ ಸ್ಪಿನರ್ ಫಳ ಫಳ ಹೊಳೆಯುತ್ತ ಫ್ಯಾನ್ ಥರ ತಿರುತಿರು ತಿರುಗುತ್ತೆ. ಇದನ್ನು ಮೀನನ್ನು ಆಕರ್ಷಿಸುವ ಮಾಯೆ. ಮೀನು ಗಾಣ ಕಚ್ಚಲು ತಂತ್ರ.

ಈ ಸ್ಪಿನರ್ ಯುನಿಟನ್ನು ಮೂವತ್ತು ವರ್ಷಗಳ ಹಿಂದೆ ನೂರಿಪ್ಪತ್ತು ರೂ.ಗೆ ಕೊಂಡು ತಂದಿದ್ದರು ತೇಜಸ್ವಿ. ಇಷ್ಟೊಂದು ದುಬಾರಿ ದುಡ್ಡು ತೆರಬೇಕೆಂಬುದೇ ಆಗಿನ ಯೋಚನೆ. ಅದನ್ನು ಸುಲಭಕ್ಕೆ ತಯಾರಿಸಬಹುದೆನ್ನುವ ತರ್ಕ. ಒಂದಿಡೀ ದಿನ ಅಕ್ಕಸಾಲಿಗನ ಪಕ್ಕದಲ್ಲಿ ಕೂತು ಒಂದು ಬೆಳ್ಳಿ ಸ್ಪಿನರ್ ಮಾಡಿಸಿದ್ರು. ಚೆನ್ನಾಗೇನೋ ಇತ್ತು. ಆದರೆ ಬೆಳ್ಳಿಯಾದ್ದರಿಂದ ದುಬಾರಿಯೇ ಆಯ್ತು. ಒಂದು ಉಪಾಯ ಮಾಡಿದ್ರು. ಮನೆ ಸ್ಟೀಲ್ ಚಮಚದಲ್ಲೇ ಯಾಕೆ ಮಾಡಬಾರದೆಂದು ಯೋಚನೆ ಹಾಕಿದರು. ಅಡುಗೆ ಮನೆಯಲ್ಲಿ ನಾನು ಬಳಸುತ್ತಿದ್ದ ಚಮಚ ಒಂದನ್ನು ತಗೊಂಡರು. ಹಿಡಿಪಿನ ಭಾಗ ಅಂದರೆ ಕಡ್ಡಿಭಾಗ ಕತ್ತರಿಸಿ ತೆಗೆದು ಹಾಕಿದರು. ಮುಂದಿನ ಭಾಗವನ್ನು ತಟ್ಟಿ ತಟ್ಟಿ ಚಪ್ಪಟೆ ಮಾಡಿದರು. ತುದಿಯಲ್ಲಿ ಒಂದು ತೂತನ್ನು ಮಾಡಿದರು. ಸ್ಟೀಲ್ ಆದ್ದರಿಂದ ತುಂಬ ಗಟ್ಟಿಯಾಗಿರುತ್ತೆ. ಹೆಚ್ಚಿನ ಶ್ರಮ ಬೇಕು. ಇದೊಂದು ಪಕ್ಕಾ ಸ್ಪಿನರ್ ಆಯ್ತು. ಕೇವಲ ಐದು ರೂಪಾಯಿ ಖರ್ಚಾಗಿದ್ದು ತಾವೇ ತಯಾರಿಸಿದ್ದು. ಅಷ್ಟು ಸುಲಭ ಬೆಲೆಯಲ್ಲಿ. ಅಂಗಡಿಯಲ್ಲಿ ಸಿಗುವ ಸ್ಪಿನರ್ ತಯಾರಕರಿಗೇ ಪಾಠ ಕಲಿಸಿದಂತಾಯಿತು. ಆದರೆ ಈ ಮಾತನ್ನು ಕೇಳಿರಿ.

ಅಮ್ಮ, ಅಣ್ಣ ಮನೆಗೆ ಬಂದಾಗ ಈ ಸ್ಪಿನರ್ ಬಗ್ಗೆ ಸವಿವರವಾಗಿ ಹೇಳಿದೆ. ಅಮ್ಮ ಬೆಚ್ಚಿ ಬಿದ್ದರು. `ಅಲ್ಲೇ, ನೀನು ಕುವೆಂಪು ಎಂದು ಕೆತ್ತಿಸಿದ್ದ ಚಮಚ ಕೊಟ್ಟು ಬಿಟ್ಟೆಯಾ`?. ಈ ಚಮಚಗಳನ್ನು ಚಿತ್ರಕೂಟದ ಮನೆಗೆ ಒಕ್ಕಲು ಬರುವಾಗ ಕುವೆಂಪು ಹೆಸರು ಹಾಕಿಸಿ ಅಮ್ಮ ತಂದಿಟ್ಟವು. ಆಗ ನನ್ನ ಪಜೀತಿ ಏನೆಂದು ಹೇಳಲಿ. ಇವರು ಕೇಳಿದ ಮೇಲೆ ಕೊಡದೇ ಇರುವುದು ಹೇಗೆ ಸಾಧ್ಯ. ತಮಾಷೆಯಾಗಿದೆ ಅಲ್ವೆ. ಅಮ್ಮನಿಗೆ ಕುವೆಂಪು ಮುಖ್ಯ ನನಗೆ ನನ್ನವರು ಮುಖ್ಯ.

ನಮ್ಮಲ್ಲಿ ಫಿಷ್ಷಿಂಗ್ ಅನ್ನೂ  ಹವ್ಯಾಸವಾಗಿ ಸ್ವೀಕರಿಸಿರುವರನ್ನು ಒಂದು ರೀತಿಯ ಅವಜ್ಞೆಯಿಂದಲೇ ಕಾಣುತ್ತಾರೆ. ನಾವು ಪ್ರಯಾಣಿಸುತ್ತಿರುವಾಗ ಕೆರೆ ಪಕ್ಕದಲ್ಲೊ, ನದಿ ಪಕ್ಕದಲ್ಲೋ ಗಾಣ ಹಾಕಿಕೊಂಡು ಕೂತವರವನ್ನು ನೋಡಿದಾಗ ಹೊಟ್ಟೆಪಾಡಿಗಾಗಿ ಎಂದುಕೊಳ್ಳುತ್ತೇವೆ. ಕೆಲವು ದೇಶಗಳಲ್ಲಿ ಇದನ್ನೊಂದು ಸ್ಪೊರ್ಟ್ಸ್ ಎಂದು ಪರಿಗಣಿಸಿರುವರು. ಸ್ಪರ್ಧೆಯನ್ನೂ ಏರ್ಪಡಿಸುವರಂತೆ. ಮಗಳು ಈಶಾನ್ಯೆ ವೃತ್ತಿ ನಿಮಿತ್ತ ಕ್ಯಾಲಿಫೋರ್ನಿಯಾಕ್ಕೆ ಒಂದು ನಾಲ್ಕು ದಿನಕ್ಕಾಗಿ ಹೋಗಿದ್ದಳು. ಅಲ್ಲಿ ಬೀಚಿನಲ್ಲಿ ತಿರುಗಾಡುತ್ತಿರುವಾಗ ತೇಜಸ್ವಿ ವಯಸ್ಸಿನವರೊಬ್ಬರು ಗಾಣ ಹಾಕಿಕೊಂಡು ಕೂತಿದ್ದರಂತೆ. ಇವರಂತೆಯೇ ಬಿಳಿಗಡ್ಡ, ಮಾಸಲು ಬಣ್ಣದ ಡೆಸ್ರು, ಅತ್ತಿತ್ತ ನೋಡುತ್ತಿಲ್ಲ. ಗಾಣ, ದಾರ, ನೀರು ಅವರು ಒಂದಾದಂತೆ. ಎಷ್ಟೋ ಹೊತ್ತು ಅವರನ್ನೇ ಗಮನಿಸುತ್ತಾ ಕೂತಳಂತೆ. ಗಾಣಕ್ಕೆ ಮೀನೂ ಸಿಕ್ಕಿಲ್ಲ. ಆದರೆ ದಾರನ ತೆಗೆ ತೆಗೆದು ಎಸೆಯೋದು ನಿಲ್ಲಲಿಲ್ಲ. ಹತ್ತಿರ ಹೋದರೆ ಅವರಿಗೆಲ್ಲಿ ತೊಂದರೆನೋ ಏನೋ. ಕೊನೆಗೆ ಕುತೂಹಲ ತಾಳಲಾರದೆ ಹೋಗಿ ಮಾತಾಡಿಸಿಯೇ ಬಿಟ್ಟಳಂತೆ. ಎಲ್ಲ ಅಣ್ಣನ ಅಪರಾವತಾರನೇ ಆಗಿದ್ದರು ಅವರು ಎಂದಳು. ಡಿಟ್ಟೋ ಅಣ್ಣನಂತೆ.

ಇವರು ಸ್ಪಿನರ್ ತಯಾರಿಸಲು ಒಂದು ಪಿಂಡಿ ೪೦ ಎಂ.ಎಂ.ದು ತಂತಿ, ರಾಶಿ ಮಣಿಗಳು ಬಣ್ಣ ಬಣ್ಣದವು, ಸೀಸದ ಫುಲ್ ಶೀಟ್ ತಂದಿಟ್ಟುಕೊಂಡಿದ್ದರು. ಇವರ ಸ್ವಭಾವೇ ಹಾಗೆ ಎಲ್ಲವೂ ರಾಶಿ ರಾಶಿ ಇರಬೇಕು. ತಿಂಡಿನೂ ಅಷ್ಟೆ. ಅಡುಗೆನೂ ಅಷ್ಟೆ. ಈಗ ಮೂರುವರ್ಷದ ಮೊಮ್ಮಗಳು ವಿಹಾ ಅವಳೇ ತಂತಿಯಲ್ಲಿ ಮಣಿ ಪೋಣಿಸಿದಳು. ತಂತಿ ಸುತ್ತಿ ಬ್ರೆಸ್‌ಲೆಟ್ ಮಾಡಿಕೊಟ್ಟೆ. ಎರಡೂ ಕೈಗೆ ಏರಿಸಿಕೊಂಡು ನೋಡಿಕೊಂಡಳು. ಆಗ ಇವರು ನೋಡಿದಂತಾಯಿತು ನನಗೆ.

ಕಾಲವೆಂಬ ಮಾಯೆಯೋ…. ಎಂಥಹ ಕ್ರೂರಿಯೋ…. ಏತಕ್ಕೋ?

ಉದಯರವಿಯಲ್ಲಿ ಬ್ರೇಕ್‌ಫಾಸ್ಟ್

ನಮ್ಮದು ಅಂತರ್ಜಾತಿ ಸಂಬಂಧ. ನಮ್ಮ ಮದುವೆಗೆ ಯಾರ ವಿರೋಧವಿಲ್ಲ. ಯಾರ ಅಡ್ಡಿಯಿಲ್ಲ. ಮೊದಲಾಗಿ ನಾವು ಸಮಾಜದ ರೀತಿನೀತಿಯನ್ನು ಲೆಕ್ಕಿಸಿದರೆ ತಾನೆ ಅದೆಲ್ಲ. ಎಲ್ಲೋ ಒಂದು ಕಡೆ ಇದೆಲ್ಲದರ ಆಚೆಗೆ ಎನ್ನುವ ಮನೋಧರ್ಮ ನಮ್ಮದು, ತತ್ವ. ಕುವೆಂಪುರವರ ಆದರ್ಶ ಎಲ್ಲರಿಗೂ ಗೊತ್ತಿದ್ದೇ! ಅಂತೆಯೆ ಇವರದ್ದೂ.

ನಮ್ಮ ಹತ್ತಿರ ಆಗ ಇದ್ದಿದ್ದು ಸ್ಕೂಟರ್ ವಾಹನವೊಂದೇ. ನಾವು ಸ್ಕೂಟರ್‌ನಲ್ಲೇ ಮೈಸೂರಿಗೆ ಹೋಗಿ ಬರುತ್ತಿದ್ದೆವು. ಶಿವಮೊಗ್ಗೆಗೂ ಅದರಲ್ಲೇ ಹೋಗಿ ಬರುತ್ತಿದ್ದೆವು. ಇದೇನು ಮಹಾ. ಸ್ನೇಹಿತರೊಂದಿಗೆ ಗೋವಾಕ್ಕೂ ಹೋಗಿ ಬಂದಿರುವರು. ನಾವು ಶಿವಮೊಗ್ಗೆಗೆ ಹೋಗುವಾಗ ಬಯಲು ಸೀಮೆ ಟಾರು ರಸ್ತೆಯಲ್ಲಿ ಹೋಗುತ್ತಲೇ ಇರಲಿಲ್ಲ. ಕಗ್ಗಾಡಿನ ದಾರಿ ಶಾಂತವೇರಿ, ಬಾಬಾಬುಡನ್‌ಗಿರಿ, ಕೆಮ್ಮಣ್ಣು ಗುಂಡಿ ದಾರಿಯಲ್ಲೇ ಹೋಗುತ್ತಿದ್ದುದು. ಚಂದ್ರದ್ರೋಣ ಪರ್ವತ ನಮ್ಮನ್ನು ಧ್ಯಾನದಲ್ಲಿ ಮುಳುಗಿಸುತ್ತಿತ್ತು. ಆಕಾಶದಾಚೆಗೆ ಕೊಂಡೊಯ್ಯುತ್ತಿತ್ತು. ಈಗ ಆ ಕಡೆ ಸುಳಿಯಲೂ ಮನಸ್ಸಾಗುವುದಿಲ್ಲ. ಕಾವಿ ಬಣ್ಣ ರಾಚಿದೆ. ನೆನೆಸಿಕೊಂಡರೆ ವ್ಯಥೆಯಾಗುತ್ತದೆ.

ಅಣ್ಣ ಅಂದರೆ ಕುವೆಂಪುರವರು ಎಂದೂ ನನ್ನ ತಂದೆಯವರ ಉದ್ಯೋಗವನ್ನಾಗಲಿ, ನನ್ನ ಜಾತಿಯನ್ನಾಗಲಿ ಕೇಳಲಿಲ್ಲ. ಆದರೆ ಒಂದು ಸಂದರ್ಭದಲ್ಲಿ ನನ್ನ ತಂದೆಯವರು ಇದ್ದ ಉದ್ಯೋಗವನ್ನು ಹೇಳಬೇಕಾಯಿತು.

ಹೀಗೆ ಒಂದು ಸಲ ಸ್ಕೂಟರ್‌ನಲ್ಲಿ ಮೈಸೂರಿಗೆ ಹೋದೆವು. ನನಗೆ ನೆನಪಿದ್ದಂತೆ ಉದಯರವಿ ಮನೆಯಲ್ಲಿ ಬೆಳಗ್ಗಿನ ತಿಂಡಿಗೆ ಬ್ರೆಡ್ಡು ಮತ್ತು ಮೊಟ್ಟೆ. ಎಷ್ಟೋ ವರ್ಷಗಳು ಇದೇ ತಿಂಡಿ. ನಾನು ಅಲ್ಲಿಗೆ ಹೋಗುವುದಕ್ಕೆ ಮುಂಚೆ ಎಷ್ಟೋ ವರ್ಷಗಳಿಂದಲೂ ಇದೇ ಅಭ್ಯಾಸವಂತೆ. ಕೆಲವರು ಇದನ್ನು ತಿಂಡಿಯಂತಲೇ ತಿಳಿಯುವುದಿಲ್ಲವಂತೆ. ನನಗೊ, ಇದು ಇಷ್ಟವಾದ ತಿಂಡಿನೇ. ಆದರೆ ಇದನ್ನು ತಿಂದ ಸ್ವಲ್ಪ ಹೊತ್ತಿಗೇ ಹೊಟ್ಟೆ ಚುರುಚುರು ಅನ್ನುತ್ತಿತ್ತು. ಅಷ್ಟೊಂದು ಹಸಿವು. ಬಹುಶಃ ಚಿಕ್ಕಂದಿನಿಂದ ನಮ್ಮಮ್ಮ ಹೆಚ್ಚಾಗಿ ತಿನ್ನಿಸಿ ದೊಡ್ಡ ಹೊಟ್ಟೆ ಮಾಡಿದ್ದಿರಲೂಬಹುದು ಕಾರಣ. ಇದನ್ನು ಗುಟ್ಟಾಗಿ ಇವರಿಗೆ ಹೇಳಿದ್ದೆ. ಬೇರೆ ಯಾರಿಗೂ ಹೇಳಿರಲಿಲ್ಲ .ಇಲ್ಲಿ ಮನೆಯಂಗಳದಲ್ಲಿ ನಾಲ್ಕಾರು ಸಪೋಟ ಮರಗಳಿದಾವೆ. ಬಲಿತವುಗಳನ್ನು ಅಮ್ಮ ಕೀಳಿಸಿ, ತಿಕ್ಕಿಸಿ, ತೊಳೆಸಿ ಸ್ಟೋರು ರೂಂನಲ್ಲಿ ಇಟ್ಟಿರುತ್ತಿದ್ದರು. ನನಗೆ ತಡೆಯಲಾರದಷ್ಟು ಹಸಿವಾದಾಗ ಸ್ಟೋರು ರೂಂನಲ್ಲಿ ಹಣ್ಣಾದ ಏಳೆಂಟು ಸಪೋಟ ಹಣ್ಣು ಸಿಪ್ಪೆಸಮೇತ ತಿಂದುಕೊಂಡು ಬಿಡುತ್ತಿದ್ದೆ. ಸಂಕೋಚ, ಇದನ್ನೂ ಯಾರಿಗೂ ಹೇಳಲಿಲ್ಲ. ತಾರಿಣಿಗೆ ಮದುವೆಯಾಗಿ ಅವರ ಚಿದಾನಂದ ಗೌಡರು ಬರುವವರೆಗೂ ಇದೇ ರೀತಿ. ಅವರು ಇಲ್ಲಿರಲು ಬಂದ ಮೇಲೆ ದಿನಾ ತಿಂಡಿ ಶುರುವಾಯಿತು. ಉಪ್ಪಿಟ್ಟು, ದೋಸೆ, ಆಪದೋಸೆ, ಅಪ್ಪೆ, ಇಡ್ಲಿ, ರೊಟ್ಟಿ ಇತ್ಯಾದಿ. ದಿನಕ್ಕೊಂದು ಬಗೆಯದು.

ನನ್ನೊಬ್ಬಳನ್ನು ಬಿಟ್ಟು ಇವರೆಲ್ಲರೂ ಮೊಟ್ಟೆಗೆ ಈರುಳ್ಳಿ, ಹಸಿರು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಪುದೀನ ಇದ್ದರೆ ಹಾಕಿಕೊಂಡು ಪುಡಿಪುಡಿಯಂತೆ ಹುರುಕಲು ಮಾಡಿಕೊಂಡು ಬ್ರೆಡ್ಡಿನ ಜೊತೆ ತಿನ್ನುತ್ತಿದ್ದರು. ಅದೂ ಎರಡೇ ಕೆಂತೆ(ಸ್ಲೆ ಸ್). ಎಷ್ಟು ಬೇಕಾದರೂ ತಿನ್ನಬಹುದಿತ್ತು. ಆದರೆ ನಾನೊಬ್ಬಳೆ ಹೆಚ್ಚಾಗಿ ತಿಂದು ಹೊಟ್ಟೆಬಾಕಿ ಅಂತಾದರೆ ನನ್ನ ಮರ್ಯಾದೆ ಎಲ್ಲಿಗೆ ಹೋಗುತ್ತೆ ಹೇಳಿ. ಕಾಫಿ ಇರುತ್ತಿತ್ತು. ಅಣ್ಣನವರಂತೂ ಎರಡು ಲೋಟ ತುಂಬಾ ಬಿಸಿ ಕಾಫಿ ಕುಡಿಯುತ್ತಿದ್ದರು. ಒಂದೊಂದು ಗುಟುಕಿಗೂ ಬಾಯಿ ಚಪ್ಪರಿಸುತ್ತ ರುಚಿಯನ್ನು ಆಸ್ವಾದಿಸುತ್ತ ಕುಡಿಯುತ್ತಿದ್ದರು. ಅಮ್ಮ ಏನಾದರೂ ಮಾತು ಹೇಳುತ್ತಿದ್ದರು. ನಾನು ಉದಯರವಿಗೆ ಹೋದ ಶುರುವಿನಲ್ಲಿ ಅಮ್ಮ ಯಾವಾಗಲೂ ಶಿವಮೊಗ್ಗ ಮತ್ತು ಅವರ ತಮ್ಮಂದಿರು ಮಾಡಿದ ಶಿಕಾರಿ ಬಗ್ಗೆಯೇ ಮಾತಾಡಿದಂತಾಗುತ್ತಿತ್ತು. ಅಲ್ಲಿ ತೀರ ಹೊಸದಾಗಿದ್ದುದರಿಂದ ನನಗೆ ಹಾಗನ್ನಿಸುತ್ತಿತ್ತೇನೋ.

ಇವರೂ ಶಿವಮೊಗ್ಗೆಯಲ್ಲಿ ಇವರ ಮಾವಂದಿರ ಜೊತೆಯಲ್ಲೋ ಗೆಳೆಯರ ಜೊತೆಯಲ್ಲೋ ಶಿಕಾರಿಗೆ ಹೋದಾಗ ಹಂದಿ ಕೈಗೆ ಸಿಕ್ಕಿ ಸಾವಿನ ಬಳಿ ಹೋಗಿ ಬಂದದ್ದು, ಹೀಗೆ ಮಾತುಗಳು ನಡೆಯುತ್ತಿದ್ದವು. ಊಟದ ಮನೆ ಪಕ್ಕಕ್ಕೆ ಅಡುಗೆ ಮನೆ. ಗ್ಯಾಸ್ ಒಲೆ ಮೇಲೆ ಹಾಲಿಟ್ಟು ತಿಂಡಿಗೆ ಬರುತ್ತಿದ್ದೆವು. ಹೇಗೂ ಉಕ್ಕುವುದು ಗೊತ್ತಾಗುತ್ತೆ. ಹೋಗಿ ಆಫ್ ಮಾಡಿದರಾಯ್ತುಂತ. ಆದರೆ ಹಾಲು ಉಕ್ಕಿ ಚುಸ್‌ಸ್ ಎಂದು ಸದ್ದಾದಾಗ ನಾನು ತಾರಿಣಿ ಅಯ್ಯಯ್ಯೋ ಹಾಲು ಉಕ್ಕಿತು ಎಂದು ಓಡುತ್ತಿದ್ದೆವು. ಹಲವಾರು ಬಾರಿ ಹೀಗಾದಾಗ ಅಣ್ಣ ಹೇಳಿದರು, ಸಾಕು ಈ ನಿಮ್ಮ ನಾಟಕ ಎಲ್ಲ ಅಂತ. ಇದ್ದಕ್ಕಿದ್ದಂತೆ ಸೀರಿಯಸ್ಸಾಗಿ ಅವತ್ತಿನ ಸೆನ್‌ಸಿಟೀವ್ ಇಸ್ಯೂ ಬಗ್ಗೆ ಮಾತು ಹೊರಳುತ್ತಿತ್ತು. ಎಪ್ಪತ್ತರ ದಶಕದಲ್ಲಿ ಇವರು ಬರೆದ ಬ್ರಾಹ್ಮಣ ಯುವಕರಿಗೆ ಕವನದ ಬಗ್ಗೆ ಮಾತಾಡಿದ್ದೂ ನೆನಪಿದೆ. ಒಟ್ಟಿನಲ್ಲಿ ತಿಂಡಿ ಸೆಷನ್ ಚೆನ್ನಾಗಿರುತ್ತಿತ್ತು. ಎಲ್ಲವೂ ಸ್ಟ್ರೇಂಜ್ ಆಗಿರುತ್ತಿತ್ತು ನನಗೆ.

ಎಲ್ಲೋ ಹೋದೆ. ಎಲ್ಲಿಗೋ ಬಂದೆ. ಮೊಟ್ಟೆ ಪ್ರಕರಣಕ್ಕೆ ಬರ್ತೀನಿ. ನಾನು ಒಬ್ಬಳು ಮಾತ್ರ ಮೊಟ್ಟೆಯನ್ನು ಬಲ್ಸ್ ಐನಂತೆಯೇ ಅಂದರೆ ಎಗ್ ಫ್ರೈ ಮಾಡಿಕೊಂಡು ತಿನ್ನುತ್ತಿದ್ದೆ. ಇದು ನನಗೆ ಬಹು ಪ್ರಿಯವಾದದ್ದು. ಹೀಗೆ ತಿನ್ನುವಾಗ ಒಂದು ದಿನ ನಾದಿನಿ ತಾರಿಣಿ ಹೇಳಿದ್ರು. ನನಗೆ ಮಾತ್ರ ಈ ರೀತಿ ಹಸಿ ಬಿಸಿ ಬೇಯಿಸಿಕೊಂಡು ತಿನ್ನಕ್ಕಾಗೊಲ್ಲ ಅಂತ. ಸುತ್ತ ಬಿಳಿ ಮಧ್ಯೆ ಹಳದಿ ಸೂರ್ಯನಂತಿದ್ದ ಬಣ್ಣಕ್ಕೆ ಬೆರಗಾಗಿ ತಾರಿಣಿ ಮಗಳು ಪ್ರಾರ್ಥನೆ ಪುಟ್ಟವಳಿದ್ದಾಗ ಅತ್ತೆಮ್ಮ ತಿನ್ನುವಂತೆಯೇ ಬೇಕೆಂದು ಹಠ ಮಾಡಿ ಮಾಡಿಸಿಕೊಂಡು ತಿನ್ನುತ್ತಿದ್ದಳು. ತಾರಿಣಿಗೆ ಹೇಳಿದೆ ಬಹುಶಃ ಚಿಕ್ಕಂದಿನಿಂದಲೂ ಆ ರೀತಿ ತಿಂದು ನನಗೆ ಅಭ್ಯಾಸ. ನನಗೆ ಅದೇ ಇಷ್ಟವೆಂದೆ.

ಆಗ ತೇಜಸ್ವಿ, ‘ಹೂಂ, ಆ ಕಾಲದಲ್ಲಿ (ಅಂದರೆ ಆರು ದಶಕದ ಹಿಂದೆ) ಇವಳು ಚಿಕ್ಕಂದಿನಿಂದ ಮೊಟ್ಟೆ ತಿಂತಿದ್ಲು’ ಎಂದರು. ನನ್ನ ಸ್ವಾಭಿಮಾನಕ್ಕೆ ಸಿಟ್ಟೇರಿತು. ‘ಹೌದು. ನನ್ನ ತಂದೆಯವರು ನಾನು ಚಿಕ್ಕವಳಿದ್ದಾಗ ಅನಿಮಲ್ ಹಸ್‌ಬೆಂಡ್ರಿ ಡಿಪಾರ್ಟ್‌ಮೆಂಟಿನಲ್ಲಿ ಹೆಡ್ ಅಕೌಂಟೆಂಟ್ ಆಗಿದ್ರು. ಅದಕ್ಕೂ ಬಹಳ ಹಿಂದೆಯೇ ನಮ್ಮ ರಾಜ್ಯದಲ್ಲಿ ಇಲಾಖೆಯವರು ರೋಡ್ ಐಲೆಂಡ್ ರೆಡ್ ಮತ್ತು ವೈಟ್ ಲೆಗ್ ಹಾರನ್ ತಳಿಯ ಕೋಳಿಗಳನ್ನು ಪರಿಚಯಿಸಿದ್ದರು. ಆಗಲೆ ಈ ತಳಿ ಕೋಳಿಗಳನ್ನು ಸಾಕಲು ಅಭಿವೃದ್ಧಿಪಡಿಸಲು ವ್ಯವಸ್ಥೆಯನ್ನೂ ಮಾಡಿದ್ದರು. ಸರ್ಕಾರದ ಪ್ರಾಜೆಕ್ಟ್ ಇತ್ತು. ಹಾಗಾಗಿ ಆ ಇಲಾಖೆಯಲ್ಲಿ ಉತ್ಪತ್ತಿಯಾದ ಮೊಟ್ಟೆಯನ್ನು ಅಲ್ಲಿನ ನೌಕರರಿಗೆ ಮಾರುತ್ತಿದ್ದರು. ನಮ್ಮ ತಂದೆಯವರು ಕೊಂಡು ತರುತ್ತಿದ್ದರು. ಅಷ್ಟೇ ಅಲ್ಲದೆ ನಮ್ಮ ಮನೆಯಲ್ಲಿಯೂ ಇದ್ದ ಚಿಕ್ಕ ಅಂಗಳದಲ್ಲಿ ಅಲ್ಪಸ್ವಲ್ಪ ಜಾಗದಲ್ಲೇ ಮೆಶ್ ಹಾಕಿ ಆ ತಳಿಯ ಕೋಳಿಗಳನ್ನು ಸಾಕಿದ್ದೆವು. ಹಾಗಾಗಿ ಪ್ರತಿ ಶನಿವಾರ ಮೊಟ್ಟೆಯು ನಮ್ಮ ತಿಂಡಿಯೊಟ್ಟಿಗೆ ಇರುತ್ತಿತ್ತು’ ಎಂದೆ. ಜಂಬಕೊಚ್ಚಿದೆ. ಹ್ಞೂಂ. ಎಂದು ತುದಿಗಣ್ಣಿನಲ್ಲೇ ನನ್ನನ್ನು ನೋಡಿದರು. ಇವರು.