ಇವನ ವಯಸ್ಸಿನ ಯಾರೊಬ್ಬರು ಸಧ್ಯ ಹಮಾಲಿ ಕೆಲಸಾ ಮಾಡುತ್ತಿರರಿಲ್ಲ. ಆದರೆ ಇವನು ಮಾಡೋದು ನೋಡಿ ಅನೇಕರು ಆಶ್ಚರ್ಯ ಪಡುತಿದ್ದರು. ಬಹಳ ವರ್ಷದಿಂದಲೂ ಒಂದೇ ಕಡೆ ಕೆಲಸಾ ಮಾಡ್ತಿದ್ದಾನೆ. ಇವನಿಗು ಮಾಲಿಕರಿಗು ತಾಳ ಮೇಳ ಸರಿಯಾಗಿದೆ ಅಂತ ಮಾತಾಡುತಿದ್ದರು. ಇವನ ಜೊತೆಗೆ ಕೆಲಸ ಮಾಡುವ ಅನೇಕರು ಆಗಲೇ ಪಗಾರ ಆಸೆಗೋ ಮತ್ತೊಂದಕ್ಕೋ ಕೆಲಸಾ ಬಿಟ್ಟು ಬೇರೆ ಬೇರೆ ಕಡೆ ಸೇರಿಕೊಂಡಿದ್ದರು. ಆದರೆ ಇವನು ಮಾತ್ರ ಎಲ್ಲೂ ಹೋಗಿರಲಿಲ್ಲ ಇವನಿಗೆ ದೀಪಾವಳಿಗೊಮ್ಮೆ ಮಾಲಿಕರು ಹೊಸ ಬಟ್ಟೆ ಕೊಡಿಸಿ ಪಗಾರ ಕೂಡ ಜಾಸ್ತಿ ಮಾಡುತಿದ್ದರು.
ಶರಣಗೌಡ ಬಿ ಪಾಟೀಲ ತಿಳಗೂಳ ಬರೆದ ಪ್ರಬಂಧ ನಿಮ್ಮ ಓದಿಗೆ

ಮುಂಜಾನೆ ಬೆಳಕು ಹರಿಯುವ ಮೊದಲೇ ಶಿವಪಾದ ಎದ್ದು ಜಳಕಾ ಮಾಡಿ ಹಸಿರು ಬಣ್ಣದ ಕಾಟನ್ ಶಲ್ಯ ಹೆಗಲಿಗಿ ಹಾಕೊಂಡು ಕೆಲಸಕ್ಕೆ ಹೊರಡಲು ತಯ್ಯಾರಾದಾಗ ಹೆಂಡತಿ ಸುಮ್ಮವ್ವ ಬಿಸಿ ಬಿಸಿ ರೊಟ್ಟಿ ಬಡಿದು ಪಲ್ಯ ಮೊಸರು ಕಾರೆಳ್ಳ ಹಿಂಡಿ ಹಾಕಿ ಬುತ್ತಿಕಟ್ಟಿ “ಲಗೂನೇ ಬಂದಬಿಡು, ಕಣ್ಬೆಳಕು ಇರುವಾಗಲೇ ಮನೆ ಸೇರಿಕೋ… ಅವರಿವರು ಸಿಕ್ಕರು ಅಂತ ಅಲ್ಲಿ ಇಲ್ಲಿ ನಿಂತು ಮಾತಾಡಬ್ಯಾಡ. ಮೊದಲಿನಂಗ ನಿನಗ ಶಕ್ತಿ ಉಳಿದಿಲ್ಲ. ಕತ್ತಲಾದರೆ ಕಣ್ಣು ಬೇರೆ ಸರಿಯಾಗಿ ಕಾಣೋದಿಲ್ಲ. ಏನಾದ್ರು ತೊಂದರೆ ಆದರೆ ನಿನಗ್ಯಾರು ದಿಕ್ಕು ಅಂತ ಖಡಕ್ಕಾಗೇ ತಾಕೀತು ಮಾಡಿದಳು.

“ನಾನ್ಯಾಕ ತಡಾ ಮಾಡಲಿ? ಕೆಲಸಾ ಮುಗಿದ ಮ್ಯಾಲ ಅಲ್ಲೇನು ಇರ್ತಾದೆ? ಸಂಜೆ ಬಸ್ಸಿಗಿ ಬಂದು, ಸೀದಾ ಮನೆ ಸೇರಿ ಬಿಡ್ತೀನಿ” ಅಂತ ಸಮಜಾಯಿಶಿ ನೀಡಿದ.

ಶಿವಪಾದನಿಗೆ ಸಧ್ಯ ಅರವತ್ತು ವಯಸ್ಸು; ಸರಕಾರಿ ನೌಕರನಾಗಿದ್ದರೆ ಇಷ್ಟು ಹೊತ್ತಿಗೆ ನಿವೃತ್ತನಾಗುತಿದ್ದ. ಆದರೆ ಖಾಸಗಿ ಕೆಲಸ, ಯಾವ ನಿವೃತ್ತಿ ಗಿವೃತ್ತಿ ಇರೋದಿಲ್ಲ. ಕೆಲಸಾ ಸಾಕು ಅನಿಸಿದಾಗಲೇ ಬಿಟ್ಟು ಬಿಡಬಹುದು. ಆದರೆ ಇವನಿಗೆ ಕೆಲಸಾ ಸಾಕೆನಿಸುತ್ತಿರಲಿಲ್ಲ.

ಸದಾ ಚಟುವಟಿಕೆಯಿಂದ ಕೆಲಸಾ ಮಾಡುವವನು, ಇವನ ಹೆಂಡತಿಯೂ ಊರಲ್ಲೇ ಹೊಲದ ಕೆಲಸಾ ಮಾಡುತಿದ್ದಳು. ಗಂಡ ಹೋದ ಕೂಡಲೇ ಅವಳೂ ಹೊಲದ ಕಡೆ ಹೊರಟು ಹೋಗುತ್ತಿದ್ದಳು. ಇವರಿಬ್ಬರನ್ನು ಬಿಟ್ಟು ಮನೆಯಲ್ಲಿ ಯಾರೂ ಇರಲಿಲ್ಲ. ಇವರ ಕೆಲಸ ನೋಡಿ ನಿಮ್ಮಂಗ ಕೆಲಸಾ ಮಾಡೋರೇ ನಮ್ಮ ಓಣ್ಯಾಗ ಯಾರೂ ಇಲ್ಲ ಅಂತ ಅಕ್ಕ ಪಕ್ಕದ ಮನೆಯವರು ಆಗಾಗ ತಾರೀಫ ಮಾಡುತಿದ್ದರು.

ಶಿವಪಾದ ಮುಂಜಾನೆ ಎಂಟರ ಬಸ್ಸಿಗೆ ನಗರದ ಕಡೆ ಪ್ರಯಾಣ ಬೆಳೆಸಿದರೆ ಸಾಯಂಕಾಲವೇ ಮನೆಗೆ ಬರುತಿದ್ದ. ಕೆಲಸಕ್ಕೆ ಹೋಗುವಾಗ ಹೋಟೆಲ್‌, ಕಿರಾಣಾ ಅಂಗಡಿ, ಗುಡಿಗುಂಡಾರದ ಮುಂದೆ ಕುಳಿತವರಿಗೆ ಮಾತಾಡಿಸಿ, ಊಟ ತಿಂಡಿ ಕೆಲಸದ ಬಗ್ಗೆ ವಿಚಾರಿಸಿ ಬಸ್ ಹತ್ತುತಿದ್ದ. ಇವನು ಬಸ್ಸಿನ ಖಾಯಂ ಪ್ಯಾಸೆಂಜರ್‌. ಯಾರೇ ಹೋಗಲಿ ಬಿಡಲಿ ಇವನು ಮಾತ್ರ ಹೋಗೇ ಹೋಗ್ತಾನೆ. ಒಂದಿನಾನೂ ತಪ್ಪಿಸೋದಿಲ್ಲ ಅಂತ ಡ್ರೈವರ್ ಕಂಡಕ್ಟರ ಆದಿಯಾಗಿ ಎಲ್ಲರೂ ಇವನಿಗೆ ನಕರಾ ಮಾಡುತ್ತಿದ್ದರು.

ಮುಂಜಾನೆ ಬಸ್ಸಲ್ಲಿ ಚಿಲ್ಲರ ಕೊರತೆ ಆಗ್ತಾದೆ, ಕಂಡಕ್ಟರ್ ಚಿಲ್ಲರ ಕೊಡೋದು ಅನುಮಾನ ಅಂತ ಮೊದಲೇ ಪರಮಣ್ಣನ ಕಿರಾಣಿ ಅಂಗಡಿಯಲ್ಲಿ ಚಿಲ್ಲರ ಮಾಡಿಕೊಂಡು ಕಂಡಕ್ಟರ್ ಕೇಳುವ ಮೊದಲೇ ಚಿಲ್ಲರ ಕೊಟ್ಟು ಟಿಕೇಟ್ ಪಡೆಯುತ್ತಿದ್ದ. ಬಸ್ಸಿಂದ ಇಳಿದು ಕೂಡಲೇ ತಾನು ಕೆಲಸ ಮಾಡುವ ಸ್ಥಳಕ್ಕೆ ಹೋಗಲು ಯಾವುದೇ ಆಟೋಗಿಟೋ ಅಂತ ಕಾಯದೆ ಹಿಂಬಡಿ ಸವೆದ ಚಪ್ಪಲಿ ಚಟಕ್ ಪಟಕ್ ಅಂತ ಸದ್ದು ಮಾಡುತ್ತ ಬುತ್ತಿ ಗಂಟಿನ ಪ್ಲಾಸ್ಟಿಕ್ ಕ್ಯಾರೀ ಬ್ಯಾಗ್ ಕೈಯಲ್ಲಿ ಹಿಡಿದು ಕಾಲ್ನಡಿಗೆಯಿಂದ ಹೊರಡುತ್ತಿದ್ದ. ನೆಹರೂ ಗಂಜಿನಲ್ಲಿರು ಆ ರೈತ ಟ್ರೇಡಿಂಗ್ ಕಂಪನಿಗೆ ಹೋಗಿ ಮುಟ್ಟುವದರಲ್ಲಿ ಸಮಯ ಹತ್ತಾಗುತಿತ್ತು. ಬುತ್ತಿಗಂಟಿನ ಕ್ಯಾರೀ ಬ್ಯಾಗ ಒಂದು ಕಡೆ ಇಟ್ಟು ಹೆಗಲ ಮೇಲಿನ ಶಲ್ಯ ತೆಗೆದು ತಲೆಗೆ ಸುತ್ತಿ ಗಂಡುಗಚ್ಚಿ ಹಾಕಿ, ಹಮಾಲಿ ಕೆಲಸಾ ಶುರು ಮಾಡುತಿದ್ದ. “ನೀನು ಎಲ್ಲರಿಗಿಂತ ಮೊದಲೇ ಬರ್ತಿ, ನಿನಗೆ ನೋಡಿ ನಾವೂ ಕಲೀಬೇಕಾಗಿದೆ” ಅಂತ ಸಹ ಕೆಲಸಗಾರರು ಹೇಳುತಿದ್ದರು.

ಶಿವಪಾದ ಕೆಲಸ ಮಾಡುವ ಕಂಪನಿಯು ರೈತರು ಬೆಳೆದ ದವಸ ಧಾನ್ಯ ಮಾರಾಟ ಮಾಡಿಸುವ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸುತ್ತಿತ್ತು. ಕಂಪನಿಯಲ್ಲಿ ಎಲ್ಲರಿಗಿಂತ ಇವನೇ ಹಿರಿಯನಾಗಿದ್ದ. ದೊಡ್ಡ ಮಾಲಿಕ ಈರಣ್ಣ ತೀರಿಕೊಂಡ ನಂತರ ಆತನ ಮಗ ಪ್ರಕಾಶನೇ ಸಧ್ಯ ಮಾಲಿಕನಾಗಿ ಜವಾಬ್ದಾರಿ ನಿರ್ವಹಿಸುತಿದ್ದ. ಆತ ಅಪ್ಪನಂತೆ ಎಲ್ಲ ನೌಕರರು ರೈತರು ವ್ಯಾಪಾರಸ್ಥರ ಜೊತೆ ನಗುನಗುತ್ತ ಮಾತಾಡುತಿದ್ದ. ರೈತರ ದವಸ ಧಾನ್ಯಗಳಿಗೆ ಹೆಚ್ಚಿನ ಬೆಲೆ ಕೊಡಿಸುವಲ್ಲಿ ಮುತುವರ್ಜಿ ವಹಿಸುತಿದ್ದ. ಕೆಲಸಗಾರರೇ ನಮ್ಮ ಶಕ್ತಿ ಅವರಿಂದಲೇ ನಾವು ಅಂತ ಹೇಳಿ ಖುಷಿ ಪಡಿಸುತಿದ್ದ. ಎಲ್ಲರಿಗಿಂತ ಶಿವಪಾದನ ಮೇಲೆಯೇ ಹೆಚ್ಚಿನ ಪ್ರೀತಿ ವಿಶ್ವಾಸ ಬೆಳೆಸಿಕೊಂಡಿದ್ದ. ಇವನು ನಮ್ಮ ತಂದೆಯ ಕಾಲದಿಂದಲೂ ಕೆಲಸಾ ಮಾಡ್ತಿದ್ದಾನೆ ಬಹಳ ನಂಬಿಕಸ್ಥ ಅಂತ ಇತರರ ಮುಂದೆ ವರ್ಣನೆಯೂ ಮಾಡುತಿದ್ದ. ಇವನು ಕೆಲಸಕ್ಕೆ ಬರಲು ಸ್ವಲ್ಪ ತಡವಾದರೆ ಶಿವಪಾದ ಇನ್ನೂ ಯಾಕೆ ಬಂದಿಲ್ಲ ಅಂತ ಒಂದೇ ಸಮನೆ ಚಡಪಡಿಸುತಿದ್ದ. ಕೆಲಸದಲ್ಲಿ ಶಿವಪಾದನಿಗೆ ಬೆವರೊರಿಸಿಕೊಳ್ಳಲು ಕೂಡ ಪುರುಸೊತ್ತು ಸಿಗುತ್ತಿರಲಿಲ್ಲ ಆದರೂ ಬೇಸರ ಪಟ್ಟು ಒಂದಿನ ಕೂಡ ಮನೆಯಲ್ಲಿ ಕೂಡುತ್ತಿರಲಿಲ್ಲ.

ಮುಂಜಾನೆಯೇ ದವಸ ಧಾನ್ಯ ವಾಹನಗಳು ಕಂಪನಿಗೆ ಬರಲು ಆರಂಭಿಸುತಿದ್ದವು. ಅವುಗಳಿಂದ ಮೂಟೆಗಳನ್ನು ಇಳಿಸಿ ಒಂದುಕಡೆ ತ್ಯಾಪಿ ಜೋಡಿಸುತಿದ್ದ. ಅಂದಿನ ದವಸ ಧಾನ್ಯದ ಒಟ್ಟು ಲೆಕ್ಕ ಸಾಯಂಕಾಲ ಮಾಲಿಕರಿಗೆ ಒಪ್ಪಿಸಿದಾಗಲೇ ಸಮಾಧಾನವಾಗುತಿತ್ತು. ಇಡೀ ಕೆಲಸಾ ಮಾಡಿ ಮನೆಗೆ ಬಂದಾಗ ಸಹಜವಾಗಿ ಸುಸ್ತಾಗುತಿತ್ತು. ಚಹಾ ಕುಡಿದು ಹೊರಸಿನ ಮೇಲೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ.

“ನಿನಗ ಮೊದಲಿನಂಗ ಕೆಲಸಾ ಮಾಡೋದು ಆಗೋದಿಲ್ಲ. ಕೆಲಸಾ ಬಿಟ್ಟು ಬಿಡು ಅಂದರೂ ನೀನು ನನ್ನ ಮಾತು ಕೇಳೋದಿಲ್ಲ” ಅಂತ ಹೆಂಡತಿ ಸಿಡುಕುತಿದ್ದಳು.

“ಕೆಲಸಾ ಬಿಟ್ಟು ಏನು ಮಾಡಲಿ? ಸುಮ್ಮನೆ ಕುಂತರ ಹೊತ್ತು ಹೋಗೋದಿಲ್ಲ. ಎಲ್ಲಿತನಕ ಆಗ್ತಾದೊ ಅಲ್ಲಿತನಕ ಹಂಗೇ ಮಾಡ್ತೀನಿ. ಶಕ್ತಿ ಪೂರ್ತಿ ನಿಂತ ಮ್ಯಾಲ ಸುಮ್ಮನ ಕೂಡೋದು ಇದ್ದೇ ಇರ್ತಾದೆ, ನಾನಿಲ್ಲದೆ ಮಾಲಿಕರಿಗೂ ನಡೆಯೋದಿಲ್ಲ” ಅಂತ ಸಮಜಾಯಿಶಿ ನೀಡುತ್ತಿದ್ದ.

ಇವನ ವಯಸ್ಸಿನ ಯಾರೊಬ್ಬರು ಸಧ್ಯ ಹಮಾಲಿ ಕೆಲಸಾ ಮಾಡುತ್ತಿರರಿಲ್ಲ. ಆದರೆ ಇವನು ಮಾಡೋದು ನೋಡಿ ಅನೇಕರು ಆಶ್ಚರ್ಯ ಪಡುತಿದ್ದರು. ಬಹಳ ವರ್ಷದಿಂದಲೂ ಒಂದೇ ಕಡೆ ಕೆಲಸಾ ಮಾಡ್ತಿದ್ದಾನೆ. ಇವನಿಗು ಮಾಲಿಕರಿಗು ತಾಳ ಮೇಳ ಸರಿಯಾಗಿದೆ ಅಂತ ಮಾತಾಡುತಿದ್ದರು. ಇವನ ಜೊತೆಗೆ ಕೆಲಸ ಮಾಡುವ ಅನೇಕರು ಆಗಲೇ ಪಗಾರ ಆಸೆಗೋ ಮತ್ತೊಂದಕ್ಕೋ ಕೆಲಸಾ ಬಿಟ್ಟು ಬೇರೆ ಬೇರೆ ಕಡೆ ಸೇರಿಕೊಂಡಿದ್ದರು. ಆದರೆ ಇವನು ಮಾತ್ರ ಎಲ್ಲೂ ಹೋಗಿರಲಿಲ್ಲ ಇವನಿಗೆ ದೀಪಾವಳಿಗೊಮ್ಮೆ ಮಾಲಿಕರು ಹೊಸ ಬಟ್ಟೆ ಕೊಡಿಸಿ ಪಗಾರ ಕೂಡ ಜಾಸ್ತಿ ಮಾಡುತಿದ್ದರು.

ನೆಹರೂ ಗಂಜಿನಲ್ಲಿ ಇವನು ಎಲ್ಲರಿಗೂ ಪರಿಚಿತನಾಗಿದ್ದರಿಂದ, ಅನೇಕರು ಇವನಿಗೆ ಚಹಾ ಕುಡಿಯಲು ಕರೆಯುತಿದ್ದರು. ಬಿಡುವಿದ್ದರೆ ಅವರ ಜೊತೆ ಹೋಗಿ ಚಹಾ ಕುಡಿದು ಸ್ವಲ್ಪ ಹೊತ್ತು ಮಾತುಕತೆ ನಡೆಸಿ ವಾಪಸ್ಸಾಗುತಿದ್ದ.

“ಶಿವಪಾದ ನಂಬಿಕಸ್ಥ ಮನುಷ್ಯ. ಈಗಿನ ಜಮಾನಾದಾಗ ಇಂಥಹವರು ಸಿಗೋದೇ ಅಪರೂಪ ಮುಂದಿನ ವರ್ಷ ಇವನಿಗೆ ನಮ್ಮಲ್ಲೇ ಕೆಲಸಕ್ಕಿಟ್ಟುಕೊಬೇಕು” ಅಂತ ಅನೇಕ ಮಾಲೀಕರು ಯೋಚಿಸಿದರು.

“ನಿನಗ ಹೆಚ್ಚಿನ ಪಗಾರ ಕೊಡ್ತೀವಿ ಮುಂಗಡ ಹಣಾನೂ ಕೊಡ್ತೀವಿ ಊಟ ತಿಂಡಿ ನಾವೇ ನೋಡ್ಕೋತೀವಿ ನಮ್ಮಲ್ಲೇ ಕೆಲಸಕ್ಕೆ ಬಂದು ಬಿಡು” ಅಂತ ಕೆಲವರು ಮುದ್ದಾಮ ಕರೆಯಿಸಿ ಹೇಳಿದರು.

ಮುಂಜಾನೆ ಬಸ್ಸಲ್ಲಿ ಚಿಲ್ಲರ ಕೊರತೆ ಆಗ್ತಾದೆ, ಕಂಡಕ್ಟರ್ ಚಿಲ್ಲರ ಕೊಡೋದು ಅನುಮಾನ ಅಂತ ಮೊದಲೇ ಪರಮಣ್ಣನ ಕಿರಾಣಿ ಅಂಗಡಿಯಲ್ಲಿ ಚಿಲ್ಲರ ಮಾಡಿಕೊಂಡು ಕಂಡಕ್ಟರ್ ಕೇಳುವ ಮೊದಲೇ ಚಿಲ್ಲರ ಕೊಟ್ಟು ಟಿಕೇಟ್ ಪಡೆಯುತ್ತಿದ್ದ. ಬಸ್ಸಿಂದ ಇಳಿದು ಕೂಡಲೇ ತಾನು ಕೆಲಸ ಮಾಡುವ ಸ್ಥಳಕ್ಕೆ ಹೋಗಲು ಯಾವುದೇ ಆಟೋಗಿಟೋ ಅಂತ ಕಾಯದೆ ಹಿಂಬಡಿ ಸವೆದ ಚಪ್ಪಲಿ ಚಟಕ್ ಪಟಕ್ ಅಂತ ಸದ್ದು ಮಾಡುತ್ತ ಬುತ್ತಿ ಗಂಟಿನ ಪ್ಲಾಸ್ಟಿಕ್ ಕ್ಯಾರೀ ಬ್ಯಾಗ್ ಕೈಯಲ್ಲಿ ಹಿಡಿದು ಕಾಲ್ನಡಿಗೆಯಿಂದ ಹೊರಡುತ್ತಿದ್ದ.

“ಇಲ್ರಿ ಮಾಲಿಕರೆ, ನಾನು ಅಲ್ಲಿಂದ ಕೆಲಸ ಬಿಟ್ಟು ಎಲ್ಲೂ ಬರೋದಿಲ್ಲ, ನನಗ ಕರಕೊಂಡ ಬಂದು ಮೊದಲು ಕೆಲಸಾ ಕೊಟ್ಟೋರೇ ದೊಡ್ಡ ಮಾಲಿಕರು, ಅವರು ನಮ್ಮ ಪಕ್ಕದೂರವರು. ನನ್ನ ಮ್ಯಾಲ ಬಹಳ ವಿಶ್ವಾಸಿಟ್ಟಿದ್ದರು. ಸಧ್ಯ ಅವರು ತೀರಿ ಹೋದರೂ ಅವರ ಮಗ ಪ್ರಕಾಶ ಅಪ್ಪನಂಗೇ ಕಾಳಜೀ ಮಾಡ್ತಾನೆ. ಕೈ ಅಡಚಣ ಆದಾಗ ಆರಾಮ ತಪ್ಪದಾಗ ಏನೇ ಕಷ್ಟ ನಷ್ಟ ಆದರೂ ಸಹಾಯ ಮಾಡ್ತಾನೆ. ಅವರ ಸಹಾಯ ಮರೆಯಲು ಸಾಧ್ಯವಿಲ್ಲ. ನನಗೇನು ಮಕ್ಕಳಾ ಮರೀನಾ? ಹೊಟ್ಟೆತುಂಬ ಊಟ, ಮೈತುಂಬ ಬಟ್ಟೆ, ಕಣ್ತುಂಬ ನಿದ್ದೆ ಇದ್ದರೆ ಅಷ್ಟೇ ಸಾಕು. ಹೆಚ್ಚಿನ ಆಸೆ ಯಾಕೆ ಮಾಡಲಿ” ಅಂತ ನಯವಾಗಿ ನಿರಾಕರಿಸಿ ನಿರಾಸೆ ಮೂಡಿಸಿದ್ದ.

ಇವನ ಪರಿಚಯದ ಮೇಲೆ ಊರಿನ ಸುಮಾರು ಜನ ರೈತರು ತಾವು ಬೆಳೆದ ದವಸ ಧಾನ್ಯವನ್ನು ಇದೇ ಕಂಪೆನಿಯಿಂದ ಮಾರಿಸಿಕೊಂಡು ಹೋಗುತ್ತಿದ್ದರು. ಅವರಿಗೆಲ್ಲ ಇವನೇ ಒಯ್ದು ಹಣ ಮುಟ್ಟಿಸುತ್ತಿದ್ದ.

“ನಿನ್ನಿಂದ ನಮಗ ಬಹಳ ಅನುಕೂಲಾಗಿದೆ. ನೀನಿಲ್ಲದಿದ್ದರೆ ಕೈಖರ್ಚು ಮಾಡಿಕೊಂಡು ನಾವೇ ಹೋಗಿ ಹಣ ತರಬೇಕಾಗಿತ್ತು. ನೀನು ಓದು ಬರಹ ಗೊತ್ತಿಲ್ಲದಿದ್ದರು ಲೆಕ್ಕಕ್ಕೆ ಲೆಕ್ಕ ತಂದು ಕೊಡ್ತಿ” ಅಂತ ಹೇಳಿದಾಗ ಅವನಿಗೂ ಖುಷಿಯಾಗುತಿತ್ತು.

ಅವತ್ತು ಕೆಲಸಕ್ಕೆ ಬರುವಾಗ ದಾರಿಯಲ್ಲಿ ಧರ್ಮಣ್ಣ ಸಿಕ್ಕಿದ. “ನನ್ನ ತೊಗರಿ ಮಾರಾಟ ಮಾಡಿ ಎರಡ್ಮೂರು ದಿನಗಳಾದವು. ಮಾಲಿಕರ ಕಡೆಯಿಂದ ನೀನೇ ನನ್ನ ಹಣ ತಂದುಕೊಡು. ಖರ್ಚು ಮಾಡಿಕೊಂಡು ನಾನೆಲ್ಲಿ ಬರಲಿ? ನನಗೂ ಕೆಲಸಾ ಇದೆ” ಎಂದಾಗ ಆತನ ಮಾತಿಗೆ ತಲೆಯಾಡಿಸಿ ಬಂದಿದ್ದ.

ಸಾಯಂಕಾಲ ಮನೆಗೆ ಬರುವಾಗ ಮಾಲಿಕರ ಕಡೆಯಿಂದ ಧರ್ಮಣ್ಣನ ಹಣ ಪಡೆದು ಅದಕ್ಕೊಂದು ರಬ್ಬರ್ ಬ್ಯಾಂಡ್‌ ಹಾಕಿ ಲೆಕ್ಕದ ರಷೀದಿಯನ್ನು ಅದರ ಮೇಲೆ ಭದ್ರವಾಗಿ ಸುತ್ತಿ ಜೇಬಿಗಿಳಿಸಿದ. ಮನೆಗೆ ಬಂದು ನೋಡಿದಾಗ ಆತನ ಹಣ ಕಾಣಲಿಲ್ಲ. ಅರೇ ಹಣ ಎಲ್ಲಿ ಹೋಯಿತು? ನನ್ನ ಜೀವನದಲ್ಲಿ ಹೀಗೆಂದೂ ಆಗಿರಲಿಲ್ಲ. ಎಷ್ಟೋ ಜನರಿಗೆ ತಂದು ಕೊಡ್ತಿದ್ದೆ. ಈಗೇನು ಮಾಡೋದು? ಆತನಿಗೆ ಹಣ ಎಲ್ಲಿಂದ ಕೊಡೋದು ಅಂತ ಚಿಂತಿಸತೊಡಗಿದ. ವಿಷಯ ಹೆಂಡತಿಗೆ ಗೊತ್ತಾಗಿ

“ನಾನು ಮೊದಲೇ ಹೇಳಿದ್ದೆ ನಿನಗೆ ಕಣ್ಣು ಸರಿಯಾಗಿ ಕಾಣೋದಿಲ್ಲ. ಈ ಹಣಕಾಸಿನ ಉಸಾಬರಿ ಬೇರೆ ಮಾಡ್ತಿ ಕೆಲಸ ಬಿಟ್ಟು ಮನೆಯಲ್ಲಿರು ಅಂದರು ನನ್ನ ಮಾತು ಕೇಳಲಿಲ್ಲ. ಈಗ ನೋಡು ಎಂಥಹ ಅನಾಹುತ ನಡೆದು ಹೋಯಿತು? ಆತನಿಗೆ ಹಣ ಎಲ್ಲಿಂದ ಕೊಡ್ತಿ, ಕಳೆದು ಹೋಗಿವೆ ಅಂದರೆ ಆತ ನಂಬತಾನಾ? ಕಿರಿಕಿರಿ ಮಾಡಿ ಮಾನ ಮರ್ಯಾದೆ ಹರಾಜ ಹಾಕ್ತಾನೆ” ಅಂತ ಖಾರವಾಗೇ ಪ್ರಶ್ನಿಸಿದಳು.

ಹೆಂಡತಿಯ ಮಾತು ಮತ್ತಷ್ಟು ಚಿಂತೆಗೀಡು ಮಾಡಿತು. “ಏನು ಮಾಡೋದು? ಆಸ್ತಿ ಮಾರಿ ಕೊಡಬೇಕೆಂದರು ನನ್ನಲ್ಲಿ ಯಾವುದೇ ಆಸ್ತಿಪಾಸ್ತಿ ಇಲ್ಲ ಅಂತ ಯೋಚಿಸಿದ. ಊಟವೂ ಸೇರಲಿಲ್ಲ ನಿದ್ದೆಯೂ ಬರಲಿಲ್ಲ. ಇಡೀರಾತ್ರಿ ಹಾಸಿಗೆ ಮೇಲೆ ಹಾಗೇ ಮಗ್ಗುಲ ಬದಲಿಸಿ ಹೊರಳಾಡಿದ. ಬೆಳಕು ಹರಿದರು ಯಾವುದೇ ಪರಿಹಾರ ಕಾಣಲಿಲ್ಲ. ಮುಂಜಾನೆ ಕೆಲಸಕ್ಕೆ ಹೋಗಲು ಮನಸ್ಸಾಗದೆ ಮಾಲಿಕರಿಗೆ ಹೇಗೆ ಮುಖ ತೋರಿಸಲಿ. ಧರ್ಮಣ್ಣನಿಗೆ ಏನು ಹೇಳಲಿ ಅಂತ ಮನೆಯಲ್ಲೇ ಉಳಿದ.

ಶಿವಪಾದ ಇವತ್ತು ಯಾಕೆ ಬಂದಿಲ್ಲ? ಒಂದಿನ ಕೂಡ ಕೆಲಸಾ ಬಿಟ್ಟು ಮನೆಯಲ್ಲಿ ಕೂಡುವವನಲ್ಲ. ಹೇಳದೇ ಕೇಳದೇ ಎಲ್ಲಿಗೆ ಹೋದ? ಹೋಗೋದಿದ್ದರೆ ಹೇಳಿ ಹೋಗಬೇಕು. ಅಂಥಾದ್ದೇನಾಗಿದೆ. ಇವನಿಲ್ಲದೆ ನಮ್ಮ ಯಾವ ಕೆಲಸಾನೂ ನಡೆಯೋದಿಲ್ಲ.” ಅಂತ ಮಾಲಿಕ ಒಂದೇ ಸವನೆ ಚಡಪಡಿಸಿದ.

“ಮಾಲಿಕರೆ ನೀವೇ ಹೋಗಿ ವಿಚಾರಿಸಿಕೊಂಡು ಬನ್ನಿ” ಅಂತ ಹಿರಿಯ ಮುನೀಮ ಬಸಲಿಂಗಪ್ಪ ಸಲಹೆ ನೀಡಿದಾಗ ಆತನ ಮಾತಿಗೆ ತಲೆಯಾಡಿಸಿ ಮಾಲಿಕ ನೇರವಾಗಿ ಶಿವಪಾದನ ಮನೆಗೆ ಬಂದ. ಇವನು ಮುಖ ಸಪ್ಪಗೆ ಮಾಡಿಕೊಂಡು ಹೊರಸಿನ ಮೇಲೆ ಮಲಗಿದ್ದು ಕಂಡು ಬಂದಿತು. ” ಏನಾಗಿದೆ ನಿನಗೆ ಯಾಕೆ ಬಂದಿಲ್ಲ? ಒಂದು ಮಾತು ಹೇಳಬಾರದಾ? ಹೇಳದೆ ಕೇಳದೆ ಕೆಲಸಾ ಬಿಟ್ಟರೆ ಹೇಗೆ?” ಅಂತ ಪ್ರಶ್ನಿಸಿದ. ಶಿವಪಾದನಿಂದ ಯಾವ ಉತ್ತರವೂ ಬರಲಿಲ್ಲ. ಮುಖ ಕೆಳಗೆ ಹಾಕಿ ಕಣ್ಣೀರು ಸುರಿಸತೊಡಗಿದ. ಅದೇ ಸಮಯ ಸುಮ್ಮವ್ವ ಹೊರ ಬಂದು ನಡೆದ ಹಕೀಕತ ಬಿಚ್ಚಿಟ್ಟಳು. ಮಾಲಿಕ ಸ್ವಲ್ಪ ಹೊತ್ತು ಯೋಚಿಸಿ,
“ಇವನು ಹಣ ಎಲ್ಲೂ ಕಳೆದುಕೊಂಡಿಲ್ಲ, ನಿನ್ನೆ ಬರುವಾಗ ಅವಸರದಲ್ಲಿ ನನ್ನ ಹತ್ರಾನೇ ಬಿಟ್ಟು ಬಂದಿದ್ದಾನೆ. ಆಮೇಲೆ ಗೊತ್ತಾಯಿತು. ಇದೇ ವಿಷಯ ಹೇಳುವ ಸಲುವಾಗಿ ನಾನು ಬಂದೆ…” ಅಂತ ಜೇಬಿನಿಂದ ಹಣ ತೆಗೆದು ಶಿವಪಾದನ ಮುಂದಿಟ್ಟ. ಸುಮ್ಮವ್ವಳಿಗೆ ತುಂಬಾನೇ ಖುಷಿಯಾಯಿತು.

“ನೋಡ್ದಿಯಲ್ಲ ನಿನ್ನೆಯಿಂದಲೂ ಹಣ ಕಳೆದುಕೊಂಡೆ, ಹಣ ಕಳೆದುಕೊಂಡೆ ಅಂತ ಒಂದೇ ಸವನೇ ಚಿಂತೆ ಮಾಡಿ ಊಟ ನಿದ್ದೆ ಎಲ್ಲವೂ ಬಿಟ್ಟೆ ಈಗಲಾದರು ಖುಷಿಯಾಯಿತೇ?” ಅಂತ ಪ್ರಶ್ನಿಸಿದಳು. ಅವಳ ಮಾತಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಇವನಿಗೆ ಖುಷಿಯೂ ಆಗಲಿಲ್ಲ.

“ಮಾಲಿಕರು ಹೇಳೋದು ನಿಜವಲ್ಲ, ನನಗೆ ಸಮಾಧಾನ ಮಾಡುವ ಸಲುವಾಗಿ ಹೀಗೆಲ್ಲ ಹೇಳ್ತಿದ್ದಾರೆ. ನಾನೇ ಖುದ್ದಾಗಿ ಅವರಿಂದ ಹಣ ಪಡೆದುಕೊಂಡು ಬಂದಿದ್ದೆ. ದಾರಿಯಲ್ಲೇ ಹೀಗಾಗಿ ಹೋಯಿತು. ಈಗ ಪುನಃ ಅವರು ಹಣ ನೀಡಿದರೆ ಇದು ಅವರಿಗೇ ನಷ್ಟ. ಈ ಹಣ ಪಡೆಯಲು ನನ್ನ ಮನಸ್ಸು ಒಪ್ಪುವದಿಲ್ಲ ಅಂತ ತನ್ನೊಳಗೆ ತಾನೇ ಯೋಚಿಸಿದ.

“ಮತ್ತೇನು ಚಿಂತೆ ಮಾಡ್ತಿ? ನಡೀ ನನ್ನ ಜೊತೆ ಹಂಗೇ ಆ ಧರ್ಮಣ್ಣನಿಗೆ ಹಣ ಕೊಟ್ಟು ಹೋಗೋಣ ಅಂತ” ಮಾಲಿಕರು ಪುನಃ ಒತ್ತಾಯಪಡಿಸಿದಾಗ ಬೇರೆ ದಾರಿ ಇಲ್ಲದೆ ಅವರ ಜೊತೆ ಹೆಜ್ಜೆಹಾಕಿದ. “ನಂಬಿಗೆ ಸಧ್ಯ ನನ್ನ ಕಂಬನಿಯೇನೋ ಒರೆಸಿತು, ಆದರೆ ಮುಂದಿನ ದಿನಗಳಲ್ಲಿ ಮಾಲಿಕರ ಹಣ ಹೇಗಾದರು ಮಾಡಿ ನಾನು ಮುಟ್ಟಿಸಬೇಕು. ಇಲ್ಲದಿದ್ದರೆ ಜೀವನ ಪೂರ್ತಿ ಅದು ಕಾಡದೇ ಬಿಡೋದಿಲ್ಲ ಅಂತ ದಾರಿಯುದ್ದಕ್ಕೂ ಯೋಚಿಸಿದ.