ಒಂದುದಿನ ಅಪ್ಪಯ್ಯ ‘ಚಂದಮಾಮ’ ಪುಸ್ತಕ ಓದುತ್ತಿದ್ದಾಗ ಬಂದ ಪರಿಚಿತರೊಬ್ಬರು …… ನೀವೂ ಚಂದಮಾಮ ಓದ್ತೀರಾ…?” ಎಂದು ಆಶ್ಚರ್ಯದಿಂದ ಕೇಳಿದ್ದರು. ಆಗ ಅಪ್ಪಯ್ಯ …. ಯಾರ ಮನೆ ಹಾಳುಮಾಡುವುದು… ಎಂದು ಯೋಚಿಸುವುದಕ್ಕಿಂತ ಚಂದಮಾಮ ಓದುವುದೇ ಒಳ್ಳೆದಲ್ವೋ…..!” ಅಂತ ಹೇಳಿದ್ದರು. ತನ್ನ ತಲೆ, ಬುದ್ಧಿ ಮನಸ್ಸು ಸದಾ ಕ್ರಿಯಾಶೀಲವಾಗಿರುವಂತೆ ನೋಡಿಕೊಂಡಿದ್ದರು. ಮನುಷ್ಯನ ತಲೆ ಸೈತಾನನ ಮನೆ ಆಗ್ಬಾರ್ದು… ಎನ್ನುವುದು ಅವರ ನಿಲುವು.
ಲೇಖಕ-ಪ್ರವಚನಕಾರ-ಯಕ್ಷಗಾನ ಕಲಾವಿದರೂ ಆಗಿದ್ದ ದೇರಾಜೆ ಸೀತಾರಾಮಯ್ಯನವರ ಮಗಳು ಇಂದಿರಾ ಜಾನಕಿ ಎಸ್. ಶರ್ಮ ತಮ್ಮ ತಂದೆಯ ಕುರಿತು ಹಂಚಿಕೊಂಡ ಕೆಲವು ನೆನಪುಗಳು…

ಊರಿಗೆಲ್ಲ ‘ದೊಡ್ಡ ಮನುಷ್ಯ’ರೆನಿಸಿಕೊಂಡದ್ದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದೇ ಇದ್ದ ಪ್ರಾಯದಲ್ಲೂ ಅಪ್ಪಯ್ಯ ನನ್ನ ಮಟ್ಟಿಗೆ ‘ದೊಡ್ಡ ಜನ’ವೇ. ಪ್ರಪಂಚದಲ್ಲಿ ಅವರಿಗೆ ತಿಳಿದಿರದ ವಿಷಯವೇ ಇಲ್ಲ ಎನ್ನುವ ವಿಶ್ವಾಸ ನನ್ನದು. ಕಾರ್ಯಕ್ರಮಗಳನ್ನು ಮುಗಿಸಿ ಅಪ್ಪಯ್ಯ ಮನೆಗೆ ಬಂದರೆ, ತಕ್ಷಣ ಅವರ ಮಡಿಲನ್ನೇರಿ ಕೂತು ತಲೆಬಾಚುವ ಆಟವಾಡುತ್ತಾ ಅವರಿಂದ ಕತೆ ಕೇಳಿಸಿಕೊಂಡವಳು ನಾನು.

ಅಣ್ಣಯ್ಯ ಸಣ್ಣಾಗಿದ್ದಾಗ ಅಪ್ಪಯ್ಯ ಕತೆ ಹೇಳ್ತಿದ್ರಂತೆ … ರಾಮ ಸೀತೆ ಮದುವೆ ಕತೆ…. “ಅಣ್ಣಯ್ಯನಿಗಾಗ್ವಾಗ ಕತೆ ಹೇಳಿದ್ರಂತೆ… ನನಗೂ ಕತೆ ಹೇಳ್ಬೇಕು” ಅಂತ ಹೇಳ್ತಿದ್ದೆ. ಹಾಗೆ ರಾಮ ಸೀತೆಯರ ಮದುವೆ ಕತೆ ಹೇಳುತ್ತಾ, ನಮ್ಮ ಬಂಧುಗಳ ಮದುವೆಗಳಂತೆ, ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತಿದ್ದರು. ಮದುವೆ ಊಟ ಎಂದರೆ ಒಳ್ಳೆಮೆಣಸು ಸಾರು, ಬಾಳೆದಿಂಡು ಉಪ್ಪಿನಕಾಯಿ, ಬದನೆಕಾಯಿ ಪಲ್ಯ, ಅಕ್ಕಿ ಹಾಲುಬಾಯಿ… ಹೀಗೆ ಮನೆಯಲ್ಲಿ ನಿತ್ಯ ಅಮ್ಮ ಮಾಡುತ್ತಿದ್ದ ಅಡುಗೆಯನ್ನೇ, ಬಾಯಲ್ಲಿ ನೀರೂರುವಂತೆ ವಿವರಿಸುತ್ತಿದ್ದರು. ಬಾಲ್ಯದಲ್ಲಿ ಅದನ್ನೆಲ್ಲ ಸಹಜವಾಗಿ ನಂಬಿದ್ದರೂ, ರಾಮಸೀತೆಯರ ಮದುವೆ, ಮದುವೆ ಊಟ ಎಲ್ಲವೂ …. ಅಪ್ಪಯ್ಯ ಅಂದು ವಿವರಿಸಿದ ಹಾಗೆಯೇ ಆಗಿತ್ತು ಎಂದೇ ಈಗಲೂ ನಂಬುತ್ತೇನೆ- ನಂಬಿ ಖುಷಿಪಡುತ್ತೇನೆ.

ಗೋಕುಲದಲ್ಲಿ ಕೃಷ್ಣನ ತುಂಟಾಟಗಳ ಕತೆ ಹೇಳಿದರೆ, ಆ ಕೃಷ್ಣ ನಮ್ಮೊಡನೆ ನಮ್ಮ ಮನೆಯಲ್ಲೇ ಇದ್ದಾನೆ ಅನಿಸುತ್ತಿತ್ತು. ರಾಮ, ಸೀತೆ, ಕೃಷ್ಣ ಮುಂತಾದವರು ನಮ್ಮ ನಡುವಿನಲ್ಲೇ ಇರುವಂಥವರು ಎಂದುಕೊಳ್ಳುವಷ್ಟು ಸಹಜವಾಗಿರುತ್ತಿತ್ತು ಅವರು ಹೇಳುತ್ತಿದ್ದ ಕತೆಗಳು.

ಶಾಲೆಯಲ್ಲಿ ಸ್ಪರ್ಧಾಕಾರ್ಯಕ್ರಮಕ್ಕೆ ಪ್ರಬಂಧ ಹೇಳಿಕೊಡಲು ಅಪ್ಪಯ್ಯನ ಹತ್ತಿರ ದುಂಬಾಲು ಬೀಳುತ್ತಿದ್ದೆ. ಹಾಗೆ ಹಲವಾರು ಪ್ರಬಂಧಗಳನ್ನು ಹೇಳಿಕೊಟ್ಟಿದ್ದರು; ಆಮೂಲಕ ನಾನೂ ಬಹುಮಾನ ಪಡಕೊಂಡಿದ್ದೆ.

ವಾಲ್ಮೀಕಿಯವರು ನಾರದ ಮಹರ್ಷಿಗಳ ಬಳಿ ಹದಿನಾರು ಗಣಗಳಿಂದ ಕೂಡಿದ ‘ಪುರುಷೋತ್ತಮ’ನ ಬಗ್ಗೆ ವಿಚಾರಿಸುತ್ತಾ ಸಿಟ್ಟುಗೊಂಡಾಗ ದೇವತೆಗಳೂ ಹೆದರುವ…. ಕರುಣಾಳು ಯಾರು ಎಂದು ಕೇಳಿದ್ದರಂತೆ. ಹಾಗೆ ಕರುಣಾಳು ಶ್ರೀರಾಮ ಸಿಟ್ಟುಗೊಂಡರೆ ದೇವತೆಗಳೂ ಹೆದರುತ್ತಿದ್ದರಂತೆ- ಸಾತ್ತ್ವಿಕ ಸಿಟ್ಟಿನ ಪ್ರಭಾವ ಹಾಗಿದೆ. ಹಾಗೆಯೇ ಅಪ್ಪಯ್ಯನಿಗೂ ಸಿಟ್ಟು ಬರುವುದು ಅಪರೂಪ- ಬಂದರೆ ಮಾತ್ರ ಯಾರಾದರೂ ಹೆದರಲೇಬೇಕು.

ಒಂದುಸಾರಿ ಮನೆಯಲ್ಲಿ ಸತ್ಯನಾರಾಯಣ ಪೂಜೆ ಇತ್ತು. ಅದರ ಪ್ರಸಾದ ‘ಸಪಾದಭಕ್ಷ್ಯ’ವನ್ನು ಪುರೋಹಿತರ ಸಹಕಾರಿಯಾಗಿ ಬಂದಿದ್ದವನೊಬ್ಬ ಪರಿಕರ್ಮಿ ಮಾಡಲು ಗೊತ್ತಿದೆಯೆಂದು ಮಾಡಹೊರಟ. ಸರಿಯಾದ ರೀತಿಯಲ್ಲಿ ಮಾಡಿರದೇ ಇದ್ದುದರಿಂದ ಅದರ ‘ಪಾಕ’ ಬಂದಿರಲಿಲ್ಲ. ಹಸಿಹಸಿಯಾಗಿ ಏನೋ ಮಾಡಿಟ್ಟಿದ್ದ. ಅಪ್ಪಯ್ಯ ಆಗ ಏನೂ ಮಾತಾಡಿರಲಿಲ್ಲ. ಎಲ್ಲಾ ಆಗಿ ಹೊರಡುವ ಹೊತ್ತಿಗೆ ಆತ ತಾನು ಪ್ರಸಾದ ಮಾಡಿದ್ದಕ್ಕೆ ಕೊಟ್ಟ ದುಡ್ಡು ಕಡಿಮೆಯಾಯ್ತೆಂದು ಗೊಣಗಿದ. ಅಷ್ಟೊತ್ತಿಗೆ ಅಪ್ಪಯ್ಯನ ಸಿಟ್ಟು ನೆತ್ತಿಗೇರಿತ್ತು- ನೀನು ಮಾಡಿದ ಸಪಾದಭಕ್ಷ್ಯವನ್ನು ತಿಂದರೆ ದೇವರಿಗೂ ಅಜೀರ್ಣವಾದೀತಲ್ಲ…. ಅದರ ದಂಡ ಯಾರು ಕೊಡ್ತಾರೆ ಎಂದು ಅವನನ್ನು ಸಿಕ್ಕಾಬಟ್ಟೆ ಬೈದದ್ದರಲ್ಲಿ, ಅವನು, ಕೊಟ್ಟ ದುಡ್ಡನ್ನು ಬಾಯ್ಮುಚ್ಚಿ ತೆಕ್ಕೊಂಡು ಹಾಗೆಯೇ ಓಡಿಹೋಗಿಬಿಟ್ಟಿದ್ದ. ಅಪ್ಪಯ್ಯನ ಸಿಟ್ಟಿಗೆ ಅಂಥಾ ಶಕ್ತಿಯಿತ್ತು. ಸಾತ್ತ್ವಿಕ ಸಿಟ್ಟು ಎಂದರೆ ಹಾಗೆಯೋ ಏನೋ …!

ದುಡ್ಡುಸಂಪಾದನೆಯೇ ಮುಖ್ಯ ಎಂದು ನಂಬಿದ ಜಾಯಮಾನದವರಲ್ಲ ಅಪ್ಪಯ್ಯ. ಖರ್ಚು ಮಾಡುವಷ್ಟು ಸಿಕ್ಕಿದರೆ ಸಾಕು ಎನ್ನುವ ಧೋರಣೆ. ಅವರು ಯಾವಾಗಲೂ ಹೇಳುತ್ತಿದ್ದ ಮಾತು “ದುಡ್ಡು ನಮ್ಮ ಕೈಯಲ್ಲಿರಬೇಕು, ಹೊರತು ನಾವು ದುಡ್ಡಿನ ಕೈಯಲ್ಲಿರಬಾರದು…” ಇದು ಎಲ್ಲರೂ ನೆನಪಿಟ್ಟುಕೊಳ್ಳಬೇಕಾದ ಸಾಲುಗಳು ಎಂಬುದು ನನ್ನ ನಂಬಿಕೆ.

ಅಪ್ಪಯ್ಯನಿಗೆ ಶಾಲಾದಿನಗಳಲ್ಲಿ ಗುರುಗಳಾದ ಉಗ್ರಾಣ ಮಂಗೇಶರಾಯರು ಒಂದೇ ವಾಕ್ಯದಲ್ಲಿ ವಸಂತಕಾಲದ ವರ್ಣನೆ ಮಾಡಲು ಹೇಳಿದ್ದರಂತೆ. ಅದಕ್ಕವರು ಮಾವಿನ ಹೂವಿನ ಪರಿಮಳದಿಂದ…… ಎಂದು ಹೇಳಿದ್ದನ್ನು ನಮ್ಮೆದುರು ಹೇಳುತ್ತಿದ್ದರು. ಅದಕ್ಕೆ ಒಂದು ದಿನ ವರ್ಷ ಋತು ಹೇಂಗಿದ್ದೀತು ಅಪ್ಪಯ್ಯ ಅಂತ ಅಣ್ಣಯ್ಯ ಕೇಳಿದ. ಒಂದು ಕ್ಷಣ ಯೋಚನೆ ಮಾಡಿ ತಕ್ಷಣವೆ ಹೇಳ್ತಾ ಹೋದ್ರು. ಅಷ್ಟರಲ್ಲಿ ನಾನು, ಅಪ್ಪಯ್ಯ ನಿಲ್ಲಿ ನಾನು ಬರ್ಕೊಳ್ತೇನೆ. ….. ಬೇರೆ ಋತುಗಳ ಬಗ್ಗೆಯೂ ಹೇಳಿ, ನಾನು ನಮ್ಮ ಶಾಲಾಪತ್ರಿಕೆಗೆ ಕೊಡ್ತೇನೆ ಅಂತ ಹೇಳಿದೆ. ಹಾಗೆ ಒಂದೊಂದನ್ನೇ ಹೇಳುತ್ತಾಹೋದರು; ಅದನ್ನು ಸಂಗ್ರಹಿಸಿಕೊಂಡ ನಾನು ಅಪ್ಪಯ್ಯನ ಡೈರಿಯಿಂದ ಅಂತಲೇ ಶಾಲಾಪತ್ರಿಕೆಗೆ ಕೊಟ್ಟಿದ್ದೆ. ಅದು ಹೀಗಿತ್ತು –

ಅಪ್ಪಯ್ಯನ ಡೈರಿಯಿಂದ ……..
ಮಾವಿನ ಹೂವಿನ ಪರಿಮಳದಿಂದ ಪರಿಪೂತನಾದ ಮಲಯ ಮಂದ ಮಾರುತನು
ಮಾನವ ಶರೀರವನು ಚುಂಬಿಸಿದೆಂತೆನೆ – ವಸಂತಾಗಮಂ
ಒಸರೆಲ್ಲ ಆರಿತ್ತು, ಹಸುರೆಲ್ಲ ಒಣಗಿತ್ತು, ನೆಲವೆಲ್ಲ ಉರಿದಿತ್ತು, ಬಿಸಿಗಾಳಿ ಬೀಸಿತ್ತು, ಮೈಯೆಲ್ಲ ಬೆವತಿತ್ತು,
ಎಲ್ಲೆಲ್ಲೂ ಒಣಒಣ ಬಣಬಣ …. – ಗ್ರೀಷ್ಮಕಾಲಂ
ಕುರಿಹಿಂಡು, ಕರಿಬಂಡೆ, ಕಾಡಾನೆ ಸಂದೋಹದೊಲ್, ಗಗನಾಂಗಣದಿ ಮುಗಿಲೇರಿ ಏರಿ, ಬಿರುಗಾಳಿ ಬೀಸೆ,
ತಾಗಿ ತಾಡನಗೊಂಡು, ಗುಡುಗಿ ಮುಗಿಲೊಡೆದು, ಮಿಂಚಿ ಸಿಡಿದೆದ್ದು, ಸೋ~ ಎಂದು ಸುರಿವ ಸೋನೆಯ ಭರಕೆ ಮಂದಿ ಮೈಮುದುಡೆ ….. – ವರ್ಷಋತು ರಾರಾಜಿಸಿತು.
ಏರಿ ನಿಂತಿತು ಗಗನ ನೀರಾರಿದ ಬಿಳಿಯಮೋಡದ ಜತೆಗೆ ಹೊಂಗಿರಣ,
ಶೀತಕಿರಣಗಳು ನೇರಾಗಿ ಕೆಲಬಲಕೆ ಇಳಿದು ಬರೆ ಕಾಡ ಸೇರಿತು ಕತ್ತಲೆಯೂ … – ಶರತ್ ಕಾಲದಲ್ಲಿ
ಚಳಿಯಾಗ್ತೆ ಚಳಿಯಾಗ್ತೆ ಪಂಡರಿನಾಥ ಕಂಬಳಿ ತೆಕ್ಕೊಂಡು ಬಾರೋ ರಘುನಾಥ – ಇಂತೆಂದರು ಹೇಮಂತದಲ್ಲಿ
ಚಳಿಯಿಲ್ಲ ಸೆಖೆಯಿಲ್ಲ ಚಿಗುರೊಡೆದು ಸಸ್ಯ ಶ್ಯಾಮಲೆಯಾಗಿ,
ಸೊಂಪಾಗಿ, ತಂಪಾಗಿ ಸೂರೆಗೊಳ್ಳುವುದು ಮನವ …. – ಶಿಶಿರದಲ್ಲಿ.

ಋತುಚಕ್ರ ತಿರು ತಿರುಗಿ, ಸರಿವ ಕಾಲಕೆ ಕಾಣ್ಕೆಯನಿತ್ತು ತಿರುಗುತಿರ್ಪುದು ನಿರಂತರ.

ದುಡ್ಡುಸಂಪಾದನೆಯೇ ಮುಖ್ಯ ಎಂದು ನಂಬಿದ ಜಾಯಮಾನದವರಲ್ಲ ಅಪ್ಪಯ್ಯ. ಖರ್ಚು ಮಾಡುವಷ್ಟು ಸಿಕ್ಕಿದರೆ ಸಾಕು ಎನ್ನುವ ಧೋರಣೆ. ಅವರು ಯಾವಾಗಲೂ ಹೇಳುತ್ತಿದ್ದ ಮಾತು “ದುಡ್ಡು ನಮ್ಮ ಕೈಯಲ್ಲಿರಬೇಕು, ಹೊರತು ನಾವು ದುಡ್ಡಿನ ಕೈಯಲ್ಲಿರಬಾರದು…” ಇದು ಎಲ್ಲರೂ ನೆನಪಿಟ್ಟುಕೊಳ್ಳಬೇಕಾದ ಸಾಲುಗಳು ಎಂಬುದು ನನ್ನ ನಂಬಿಕೆ.

ಮಹಾಭಾರತದ ನಂತರದ ಅಪ್ಪಯ್ಯನ ಕೃತಿಗಳನ್ನು ಅಕ್ಷರಕ್ಕಿಳಿಸುವ ಯೋಗ ನನ್ನ ಪಾಲಿಗೆ ಬಂತು. ಅವರು ಯೋಚನೆಮಾಡಿ ಹೇಳ್ತಾ ಹೋಗುತ್ತಿದ್ದರೆ, ನಾನು ಅದನ್ನು ಬರಕ್ಕೊಳ್ಳುತ್ತಿದ್ದೆ. ಬರೇ ಯಾಂತ್ರಿಕವಾಗಿ ಬರೆದೆನೇ ಹೊರತು, ಅದರ ಆಳವಾದ ವಿವರಣೆಯನ್ನು ಕೇಳಿ ತಿಳ್ಕೊಳ್ಳಬೇಕೆಂಬ ತುಡಿತ ಆಗ ಇರ್ಲಿಲ್ಲ. ಹಾಗೆಯೇ ಮನೆಗೆ ಬರುತ್ತಿದ್ದ ಎಷ್ಟೋ ಸ್ನೇಹಿತರೊಡನೆ ಕೂತು, ಲಲಿತವಾದದ್ದು, ಪ್ರೌಢವಾದದ್ದು ಎಲ್ಲಾ ವಿಷಯಗಳನ್ನೂ ಅವರು ಹಂಚಿಕೊಳ್ಳುತ್ತಿದ್ದರು. ಅದನ್ನೆಲ್ಲಾ ಕೇಳುವ ಆಸೆಯಿಂದ ನಾನು ಅವರ ಎದುರಿಗೇ ಕೂತಿರುತ್ತಿದ್ದೆ. ಆದರೂ ಅವುಗಳ ಬಗ್ಗೆ ಇನ್ನಷ್ಟು ವಿವರಗಳನ್ನು ಕೇಳಿ ತಿಳಿದುಕೊಳ್ಳಬೇಕೆಂಬ ಬುದ್ಧಿ ಯಾಕೋ…. ಆಗ ಬರಲೇ ಇಲ್ಲ- ಈಗ ಆ ಕುರಿತು ಪಶ್ಚಾತ್ತಾಪ ಪಟ್ಟುಕೊಳ್ಳುತ್ತಿದ್ದೇನೆ.

ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿಗಳಾಗಿ ನಿವೃತ್ತರಾದ ಮೇಲೆ ಒಮ್ಮೆ ಅಪ್ಪಯ್ಯ ಅವರನ್ನು ಭೇಟಿಯಾಗಿ ತನ್ನ ರಾಮಾಯಣ ಪುಸ್ತಕವನ್ನು ಅವರಿಗೆ ಕೊಟ್ಟರಂತೆ. ಆಗ ಅವರು …. ಸೀತೆಗೂ ವಾಲಿಗೂ ರಾಮನಿಂದ ಅನ್ಯಾಯ ಆಯ್ತು ಅಲ್ವಾ…. ಎಂದು ಪ್ರಶ್ನಿಸಿದರಂತೆ. ವಾಲಿಯ ಈ ಪ್ರಶ್ನೆಗೆ ರಾಮನಿಂದ ಪಡೆದ ಉತ್ತರದಿಂದ ವಾಲಿಯೇ ತೃಪ್ತನಾಗಿದ್ದಾನೆ. ಮತ್ತು ಸೀತೆಯೇ ರಾಘವನದು ತಪ್ಪಿಲ್ಲ ಎಂದು ಹೇಳಿದ್ದಾಳೆ….. ಮತ್ತೂ ಅವಳಿಗೆ ಅನ್ಯಾಯವಾಗಿದೆ ಎಂದು ನಾವು ತಿಳಿದುಕೊಳ್ಳುವುದು ಬರೇ ಅನುಕಂಪದಿಂದ ಮಾತ್ರವಾಗುತ್ತದಲ್ಲ….. ನಮ್ಮಂಥವರ ಅನುಕಂಪಕ್ಕೆ ಪಾತ್ರಳಾಗುವಷ್ಟು ಸಣ್ಣ ಪಾತ್ರವೇ ಸೀತೆಯದು…? ಎಂದರಂತೆ ಅಪ್ಪಯ್ಯ. ಇದು ಸೀತೆಯ ಬಗ್ಗೆ, ಆ ಮೂಲಕ ಸ್ತ್ರೀಕುಲದ ಬಗ್ಗೆ ಅವರಿಗಿದ್ದ ಉದಾತ್ತವಾದ ಭಾವನೆ ಎಂದೇ ತಿಳಿದಿದ್ದೇನೆ.

ಅಣ್ಣಯ್ಯನ ಮಗ ಭಾರವಿ ಶಾಲೆಗೆ ಸೇರಿದ ಹೊಸದರಲ್ಲಿ ಅವನಿಗೆ ಶಾಲೆಯಲ್ಲಿ ಸ್ಲೇಟಿನಲ್ಲಿ ಒಂದೊಂದು ದಿನ ಒಂದೊಂದು ಅಕ್ಷರದಿಂದ ಶುರುವಾಗುವ ಶಬ್ದಗಳನ್ನು ಬರಕೊಂಡುಬರಲು ಹೇಳುತ್ತಿದ್ದರು. ಅವನು ಬಂದು ತಾತನಿಗೆ ‘ಹೇಳಿಕೊಡಿ ತಾತ’ ಎಂದು ಅಂಟಿಕೊಳ್ಳುತ್ತಿದ್ದ- ಹಾಗೆ ಅವರೂ ಹೇಳುತ್ತಿದ್ದರು. ಎರಡುಮೂರು ದಿನ ಕಳೆಯುವಷ್ಟರಲ್ಲಿ ಭಾರವಿ ಶಾಲೆಯಿಂದ ಬರುವುದನ್ನೇ ಕಾದುಕುಳಿತಿದ್ದು, ‘ಇವತ್ತು ಯಾವ ಅಕ್ಷರಕ್ಕೆ ಹೇಳ್ಬೇಕು’ ಅಂತ ಅವರೇ ಕೇಳುತ್ತಿದ್ದರು. ಆ ರೀತಿ ಅಪ್ಪಯ್ಯ ಮನೆಯಲ್ಲಿ ಸದಾ ಏನನ್ನಾದರೂ ಓದುತ್ತಲೇ ಇರುತ್ತಿದ್ದರು. ಇಲ್ಲವಾದರೆ ನನ್ನಲ್ಲಿ ಹೇಳಿ ಏನನ್ನಾದರೂ ಬರೆಸುತ್ತಿದ್ದರು.

ಅವರ ಸ್ನೇಹಿತರು ಯಾರಾದರೂ ಮನೆಗೆ ಬಂದರೆ ವಿಷಯದ ಹಂಗಿಲ್ಲದೆ ಎಡೆಬಿಡದ ಮಾತುಕತೆ. ವೇದ ಇತಿಹಾಸ ಪುರಾಣಗಳಿಂದ ಹಿಡಿದು ರಾಜಕಾರಣ, ಕೃಷಿ, ಅಡುಗೆಯವರೆಗೆ ಯಾವುದೇ ವಿಷಯವಾದರೂ ಅಡ್ಡಿ ಇಲ್ಲ. ತನಗಿಂತ ಹಿರಿಯರೋ, ಸಮವಯಸ್ಕರೋ ಮಾತ್ರ ಅಲ್ಲ; ತನಗಿಂತ ಕಿರಿಯರಾದರೂ ಅವರಲ್ಲಿ ಜಿಜ್ಞಾಸೆ.

ಮನೆಗೆ ಅಪ್ಪಯ್ಯನ ಸ್ನೇಹಿತರು ಯಾರಾದರೂ ಬರ್ತಾ ಇರ್ಲಿ ಅಂತಲೇ ನಮಗೆಲ್ಲಾ ಕಾಣ್ತಾ ಇತ್ತು. ತಲೆಗೆ ಯಾವಾಗಲೂ ಕೆಲಸವನ್ನುಕೊಟ್ಟು ಚುರುಕಾಗಿ ಇಟ್ಟುಕೊಳ್ಳುತ್ತಿದ್ದರು, ಮನಸ್ಸನ್ನು ಖಾಲಿಬಿಡಲು ಸುತರಾಂ ಒಪ್ಪುತ್ತಿರಲಿಲ್ಲ. ಯಾಕೆಂದರೆ ಅವರೇ ಹೇಳುತ್ತಿದ್ದುದನ್ನು ಕೇಳಿದ ನೆನಪು- ಒಂದುದಿನ ಅಪ್ಪಯ್ಯ ‘ಚಂದಮಾಮ’ ಪುಸ್ತಕ ಓದುತ್ತಿದ್ದಾಗ ಬಂದ ಪರಿಚಿತರೊಬ್ಬರು …… ನೀವೂ ಚಂದಮಾಮ ಓದ್ತೀರಾ…?” ಎಂದು ಆಶ್ಚರ್ಯದಿಂದ ಕೇಳಿದ್ದರು. ಆಗ ಅಪ್ಪಯ್ಯ …. ಯಾರ ಮನೆ ಹಾಳುಮಾಡುವುದು… ಎಂದು ಯೋಚಿಸುವುದಕ್ಕಿಂತ ಚಂದಮಾಮ ಓದುವುದೇ ಒಳ್ಳೆದಲ್ವೋ…..!” ಅಂತ ಹೇಳಿದ್ದರು. ತನ್ನ ತಲೆ, ಬುದ್ಧಿ ಮನಸ್ಸು ಸದಾ ಕ್ರಿಯಾಶೀಲವಾಗಿರುವಂತೆ ನೋಡಿಕೊಂಡಿದ್ದರು. ಮನುಷ್ಯನ ತಲೆ ಸೈತಾನನ ಮನೆ ಆಗ್ಬಾರ್ದು… ಎನ್ನುವುದು ಅವರ ನಿಲುವು.

ಅಪ್ಪಯ್ಯ ಕೇಸರಿಭಾತಿಗೆ ಸಕ್ಕರೆ ಹಾಕ್ಕೊಂಡು ತಿನ್ನುತ್ತಿದ್ದರು ಎಂದೇ ಪ್ರಸಿದ್ಧಿ. ಹಾಗೇ ಜೇನಿಗೂ ಸಕ್ಕರೆ ಸೇರಿಸಿ ಸವಿಯುತ್ತಿದ್ದರು. ಸಿಹಿ ಕಮ್ಮಿ ಎಂದಲ್ಲ, ಅದಕ್ಕೊಂದು ಬೇರೆ ರುಚಿ ಬರ್ತದೆ ಅಂತ. ಎಷ್ಟು ಸಿಹಿಯನ್ನು ಇಷ್ಟಪಡುತ್ತಿದ್ದರೋ ಅಷ್ಟೇ ಖಾರವನ್ನೂ ಹುಳಿಯನ್ನೂ ಕೂಡಾ ಚಪ್ಪರಿಸಿಕೊಳ್ಳುತ್ತಿದ್ದರು. ಆದರೆ …. ಖಾರವಾಗಿರಬೇಕಾದ್ದು ಖಾರ, ಹುಳಿಯಾಗಿರಬೇಕಾದ್ದು ಹುಳಿಯಾಗಿಯೇ ಇರಬೇಕು. ಅಲ್ಲದೆ, ಅದೂ ಕೂಡಾ ಸಿಹಿಯಾಗಿದ್ದರೆ ಅದರ ರುಚಿ ಕೆಟ್ಟುಹೋದೀತಷ್ಟೆ ಎನ್ನುತ್ತಿದ್ದರು. ಹಿತಮಿತವಾದ ಷಡ್ರಸಗಳನ್ನೂ ಸವಿಯುತ್ತಿದ್ದರು. ಎಷ್ಟೇ ರುಚಿಯಾಗಿದ್ದರೂ ತಿನ್ನುವುದು ಮಾತ್ರ ಬಹಳ ಸ್ವಲ್ಪ.

ನಾನು ಅಡುಗೆ ಮಾಡಲು ಅಮ್ಮನಿಗಿಂತ ಅಪ್ಪಯ್ಯನ ಹತ್ತಿರ ಕಲಿತದ್ದೇ ಹೆಚ್ಚು. ಅಪ್ಪಯ್ಯ ಕೆಲವೊಮ್ಮೆ ಅಮ್ಮನಿಗೂ ಹೇಳಿಕೊಡುತ್ತಿದ್ದರು. ಅಪ್ಪಯ್ಯನ ಹೆಸರಿನಲ್ಲೇ ನಾವು ಅಡುಗೆ ಮಾಡಿದರೂ, ಊಟದ ಹೊತ್ತಿನಲ್ಲಿ ಅಣ್ಣಯ್ಯನಿಗೆ ಗೊತ್ತಾಗ್ತಿತ್ತು. ಅಂಥಾ ವಿಶೇಷತೆ ಇರುತ್ತಿತ್ತು ಅದರಲ್ಲಿ. ನಮ್ಮ ಅಡುಗೆ ಚೆನ್ನಾಗಿರದಿದ್ದ ದಿನ ಅಪ್ಪಯ್ಯನ ಹತ್ತಿರ ಹುರಿದು ಕೊಡಲು ಹೇಳಬಹುದಿತ್ತು …. ಅಂತ ನನಗೂ ಅತ್ತಿಗೆಗೂ ಅಣ್ಣಯ್ಯ ಹೇಳುತ್ತಿದ್ದುದೂ ಇತ್ತು.

ಅವರು ಮಾಡುತ್ತಿದ್ದ ಉಪ್ಪಿಟ್ಟು, ಚಾ, ತೊಗರಿಬೇಳೆ ಸಾರು, ಬದನೆಕಾಯಿ ಸಾಂಬಾರು, ಅಮ್ಟಿ….. ಎಲ್ಲವೂ ರುಚಿಯಲ್ಲಿ ಉತ್ಕೃಷ್ಟವಾಗಿರುತ್ತಿತ್ತು. ಅಪ್ಪಯ್ಯ ಮಾಡಿದ ಸಾಂಬಾರಿಗೆ ಮಾರುಹೋದವರಲ್ಲಿ ನನ್ನ ಗೆಳತಿ ವಿಜಯಾ ಕೂಡ ಒಬ್ಬಳು. ಶಾಲೆಯಲ್ಲಿ ಮಧ್ಯಾಹ್ನ ಪಾಠದ ಮಧ್ಯೆ ಬುತ್ತಿಗೆ ಅಪ್ಪಯ್ಯ ಮಾಡಿದ ಸಾಂಬಾರು ತಂದಿದ್ಯಾ? ಅಂತ ಆಸೆಯಿಂದ ಕೇಳ್ತಿದ್ಳು.

ನಾನೂ, ಮಾವನ ಮಗಳು ಅದಿತಿಯೂ ಒಟ್ಟಿಗೆ ಶಾಲೆಗೆ ಹೋಗುತ್ತಿದ್ದಾಗ ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಓದುತ್ತೇವೆ, ನಮ್ಮನ್ನು ಎಬ್ಬಿಸಿ ಎಂದು ಅಪ್ಪಯ್ಯನ ಹತ್ತಿರ ರಾತ್ರಿಯೇ ಹೇಳಿರುತ್ತಿದ್ದೆವು. ಅಲಾರಾಂ ಇಲ್ಲದೇ ….. ಅವರು ಸರಿಯಾಗಿ ನಾಲ್ಕಕ್ಕೇ ನಮ್ಮನ್ನು ಏಳಿಸುತ್ತಿದ್ದರು. ನಿಜವಾಗಿಯೂ ಓದುವ ಶ್ರದ್ಧೆಯಿಂದಲ್ಲ ನಾಲ್ಕುಗಂಟೆಗೆ ಏಳುತ್ತಿದ್ದದ್ದು; ಓದುವಾಗ ನಿದ್ದೆ ಬಾರದಂತೆ ಅಪ್ಪಯ್ಯ ನಮಗೆ ಮಾಡಿಕೊಡುತ್ತಿದ್ದ ಚಾ ಸವಿಯುವುದು ನಮ್ಮ ಮೂಲ ಉದ್ದೇಶವಾಗಿರುತ್ತಿತ್ತು. ಚಾ ಕುಡಿದು ಒಮ್ಮೊಮ್ಮೆ ಪುನಃ ನಿದ್ದೆ ಮಾಡುತ್ತಿದ್ದುದೂ ಇತ್ತು. ಬೆಳಗಿನ ಜಾವದ ನಿದ್ದೆಗೆ ‘ಸಕ್ಕರೆನಿದ್ದೆ’ ಎಂದೇ ಹೇಳುತ್ತಾರೆ. ಅಂಥಾ ಸವಿಯಾದ ನಿದ್ದೆಯನ್ನೂ ಬಿಟ್ಟು ಈ ಚಾ ಕುಡಿವ ಆಸೆಯಿಂದ ಏಳುತ್ತಿದ್ದೆವು. ಒಮ್ಮೊಮ್ಮೆ ಆ ಸ್ವಾದ ಇನ್ನೂ ಈಗಲೂ ನನ್ನ ನಾಲಿಗೆಯಲ್ಲೇ ಇದೆಯೇನೋ…! ಎನ್ನುವ ಭ್ರಮೆಗೆ ಒಳಗಾಗುತ್ತೇನೆ.

ಅಮ್ಮ ಯಾವುದೋ ಚಿನ್ನದ ಆಭರಣ ಮಾಡಿಸುವುದಕ್ಕಾಗಿ ಪುತ್ತೂರಿನ ಕೇಶವಣ್ಣನ ಬಂಗಾರದ ಕಟ್ಟೆಗೆ (ಚಿನ್ನದ ಅಂಗಡಿ) ಆಗಾಗ ಹೋಗಿಬರುತ್ತಿದ್ದರು. ಹೇಳಿದ ಸಮಯಕ್ಕೆ ಅವರೂ ಕೊಟ್ಟಿರಲಿಲ್ಲ. ಅದಕ್ಕಾಗಿ ಅಮ್ಮ ಎಷ್ಟು ಸಾರಿ ಹೋಗಿದ್ದರೋ ಲೆಕ್ಕವೇ ಇಲ್ಲ. ಅದಕ್ಕೆ ಅಪ್ಪಯ್ಯನ ಸ್ಟೇಟ್‌ಮೆಂಟ್ – ಒಂದು ದಿನ ನಾನು ಶಾಲೆಬಿಟ್ಟುಬರುವಾಗ ಅಮ್ಮ ಕಾಣಲಿಲ್ಲ- ಅಪ್ಪಯ್ಯನನ್ನು ವಿಚಾರಿಸಿದೆ- ಅಮ್ಮ ಕೇಶವನ ಕಟ್ಟೆಗೆ ಪ್ರದಕ್ಷಿಣೆ ಹಾಕುಕೆ ಹೋಗ್ಯದೆ… ಅಂತ ಹೇಳಿ ನನ್ನನ್ನೂ ನಗಿಸಿದರು. ಇದು ಅಪ್ಪಯ್ಯ ದಿನನಿತ್ಯದಲ್ಲೂ ಮಾತನ್ನು ಹಾಸ್ಯರಸದಲ್ಲಿ ಅದ್ದಿತೆಗೆಯುತ್ತಿದ್ದ ರೀತಿ.

ಪಿತ್ರಾರ್ಜಿತವಾಗಿ ನನಗೂ ಈ ಕೌಶಲ್ಯ ಬಂದರೆ ಎಷ್ಟು ಒಳ್ಳೆಯದಿತ್ತು ಅಂತ ಕಾಣ್ತಾ ಇದೆ. ಅಣ್ಣಯ್ಯನ ಮಗ ಭಾರವಿ ಹುಟ್ಟಿದ ಮೇಲೆ ಅಪ್ಪಯ್ಯ ನನಗೆ ‘ಸುಬ್ಬಿ’ ಎಂದು ಹೊಸನಾಮಕರಣ ಮಾಡಿದ್ದರು. (ನನ್ನ ಅಜ್ಜಿ ಸುಬ್ಬಮ್ಮ) ಮೊಮ್ಮಕ್ಕಳೊಡನೆ ಯಾವಾಗಲೂ ನನ್ನನ್ನು ಸುಬ್ಬಿ ಎಂದೇ ಹೇಳುತ್ತಿದ್ದರು.

ಹಲ್ಲೆಲ್ಲಾ ಹೋಗಿ ಹಣ್ಣನ್ನು ಹಾಗೇ ತಿನ್ನಲು ಅವರಿಗೆ ಕಷ್ಟವಾಗುತ್ತಿದ್ದುದರಿಂದ ಹಣ್ಣಿನ ರಸ ತೆಗೆದುಕೊಡ್ತಾ ಇದ್ದೆ. ಅಣ್ಣಯ್ಯನ ಎರಡನೇ ಮಗ, ಮೂರು ವರ್ಷದ ಪಾಣಿನಿ, ನಾನು ಜ್ಯೂಸ್ ಮಾಡಹೊರಟ ತಕ್ಷಣ ಒಂದು ಗ್ಲಾಸ್ ಹಿಡ್ಕೊಂಡು ಎದುರಿಗೇ ಹಾಜರಾಗುತ್ತಿದ್ದ. ಅವನಿಗೂ ಕೊಟ್ಟು ಅಪ್ಪಯ್ಯನಿಗೆ ಕೊಡಲು ಹೊರಡುವಾಗ ಅವನ ಗ್ಲಾಸನ್ನು ತಕ್ಷಣ ಖಾಲಿಮಾಡಿ ಓಡಿಬರುತ್ತಿದ್ದ; ಬರುವಾಗಲೇ ತಾತ… ಸ್ವಲ್ಪ ‘ತುಂಬ’ ಇಡಿ ಆಯ್ತಾ… ಎಂದು ಹೇಳಿಕೊಂಡೇ ಬರುತ್ತಿದ್ದ. ಈ ತಾತ ಮೊಮ್ಮಗನಿಗಾಗಿ ಗ್ಲಾಸಿನಲ್ಲಿ ಉಳಿಸಿರುತ್ತಾರೆ ಎಂಬುದು ಅವನಿಗೂ ಗೊತ್ತಿತ್ತು, ಅದನ್ನೂ ಸ್ವಲ್ಪ ಹೆಚ್ಚೇ ಇಡುವಂತೆ ಅವನ ಆಗ್ರಹ- ಅವರಿಗೂ ಅದು ಖುಶಿಯೇ…. ಆ ‘ಸ್ವಲ್ಪ ತುಂಬ’ ಎನ್ನುವ ಪದ ಪ್ರಯೋಗ ಅವರಿಗೆ ಇಷ್ಟ ಆಗಿತ್ತು.

ಅಪ್ಪಯ್ಯ, ದೋಸೆಯ ಜೊತೆಗೆ ತಿನ್ನಲು, ಯಾವತ್ತೂ ಬೆಣ್ಣೆ ಮತ್ತು ಬೆಲ್ಲವನ್ನು ಸರಿಯಾಗಿ ಬೆರೆಸಿ ಪಾಕಮಾಡಿಕೊಳ್ಳುತ್ತಿದ್ದರು. ಪಾಣಿನಿ ತುಂಬಾ ಚಿಕ್ಕವನಿದ್ದಾಗ, ಅವನಿಗೆ ಬೆಣ್ಣೆ ನೋಡಿದರೆ ವಾಕರಿಕೆ ಬರುತ್ತಿದ್ದರೂ, ಈ ಪಾಕ ಮಾಡುವುದನ್ನು ನೋಡುವುದೇ ಒಂದು ಖುಷಿ ಅವನಿಗೆ. ಒಂದುದಿನ ಅಪ್ಪಯ್ಯ ಬೆಣ್ಣೆಬೆಲ್ಲ ಬೆರೆಸಿದ ಬೆರಳನ್ನು ಅವನ ಬಾಯೊಳಗಿಟ್ಟರು. ಅವನಿಗೆ ರುಚಿ ಹಿಡಿಯಿತು. ಹಾಗೆ ಅವನಿಗೆ ಬೆಣ್ಣೆ ತಿನ್ನುವ ಅಭ್ಯಾಸವೂ ಆಯ್ತು. ಅಂದು ತಾತನಿಂದ ಕಲಿತ ಈ ಪಾಕ ಮಾಡುವ ಕಲೆಯನ್ನು ಪಾಣಿನಿ ಈಗಲೂ ಬಿಟ್ಟಿಲ್ಲ.

ಪಾಣಿನಿಯನ್ನು ಅಪ್ಪಯ್ಯ ‘ಪಟ್ಟಾಭಿ’ ಎಂದೇ ಕರೆಯುತ್ತಿದ್ದರು. ಕೋಲಿನಲ್ಲಿ ನನ್ನಮ್ಮ ಮಾಡಿಕೊಡುತ್ತಿದ್ದ ಬಿಲ್ಲುಬಾಣಗಳನ್ನು ಹಿಡ್ಕೊಂಡು ಯಾವಾಗಲೂ ಕುಣಿಯುತ್ತಾ ಇರುತ್ತಿದ್ದ. ಒಂದುದಿನ ಪ್ಯಾಂಟು ಹಾಕ್ಕೊಂಡು ತಾತಾ …ಬನ್ನಿ ಉದ್ದಕ್ಕೆ … ಎಂದು ಕಿರುಚುತ್ತಾ ಅಪ್ಪಯ್ಯನೆದುರಿಗೆ ಬಂದ. ಅವನನ್ನು ನೋಡಿದ ಅಪ್ಪಯ್ಯ, ಪೇಂಟಾಬಿ ಬಂದ… ಬಿಲ್ಲುಬಾಣ ತಂದ… ಹಪ್ಳ ಮುರ್ದು ತಿಂದ… ಅಂತ ಪದ್ಯ ಹೇಳಿ ಅವನನ್ನೂ ಖುಷಿಪಡಿಸಿ ತಾನೂ ಖುಷಿಪಟ್ಟರು.

ಕೊನೆಕೊನೆಗೆ ಅಪ್ಪಯ್ಯನಿಗೆ ಆಯಾಸ ತುಂಬಾ ಇರುತ್ತಿತ್ತು. ಸ್ವಲ್ಪ ನಡೆದರೂ ಏದುಸಿರು ಬಿಡುವ ಹಾಗಾಗುತ್ತಿತ್ತು. ಸ್ನಾನಮಾಡಿ ಬರುವಾಗ ಸುಸ್ತಾಗುತ್ತಿದ್ದ ಅವರ ಬೆನ್ನನ್ನು ಒಂದು ಬಟ್ಟೆಯಿಂದ ನೇವರಿಸಬೇಕಾಗುತ್ತಿತ್ತು. ಅಣ್ಣಯ್ಯನ ಮಗಳು ಮೈಥಿಲಿ ಆಗ ಒಂದು ವರ್ಷದ ಮಗು. ನಮ್ಮನ್ನು ಯಾರನ್ನೂ ಬೆನ್ನುಜ್ಜಲು ಬಿಡದೆ ತಾನೇ ತಾತನ ಬೆನ್ನು ಉಜ್ಜುತ್ತೇನೆ ಎಂಬ ಹಟ ಆಕೆದು. ಅಪ್ಪಯ್ಯನಿಗೂ ಅದೇ ಬೇಕಾಗುತ್ತಿತ್ತು. ಅಮ್ಮಣ್ಣಿಯೇ ಉಜ್ಜಲಿ… ಅಂತ ಅಪ್ಪಯ್ಯ. ಅವಳ ಪುಟ್ಟ ಕೈ ಬೆನ್ನು ಉಜ್ಜುತ್ತಿದ್ದರೆ, ಅಪ್ಪಯ್ಯ ಕಣ್ಣುಮುಚ್ಚಿ ಆನಂದ ಅನುಭವಿಸುತ್ತಿದ್ದರು. ಊಟ ತಿಂಡಿಗೆ ಒಳಗೆ ಬರಬೇಕಾದರೆ, ತಾತನ ಕೈಯನ್ನು ತಾನೇ ಹಿಡಿದು ಕರಕ್ಕೊಂಡುಬರಬೇಕು. ತನ್ನ ಕಿರುಬೆರಳನ್ನು ತಾತನಿಗೆ ಕೊಟ್ಟು ಹಿಡ್ಕೊಳ್ಳಿ ತಾತ… ಎಂದು ಹೇಳಿ ಕರಕ್ಕೊಂಡು ಹೋಗುತ್ತಿದ್ದಳು. ಅವಳ ಬೆರಳನ್ನು ಹಿಡಿಯದೇ ಊಟಕ್ಕೆ ಬರಲು ಅವರಿಗೂ ಮನಸ್ಸಿರುತ್ತಿರಲಿಲ್ಲ.

ಅಪ್ಪಯ್ಯ ಯಾವುದಾದರೂ ಕಾರ್ಯಕ್ರಮಕ್ಕೆ ಹೋಗಿಬಂದ ಮೇಲೆ, ಅಮ್ಮ ಮಾಡಿಕೊಡುವ ಚಾ ಕುಡಿಯುತ್ತಾ ಒಲೆಕಟ್ಟೆಯ ಬಳಿ ಸ್ಟೂಲಿನಲ್ಲಿ ಕೂತು ಹೋಗಿಬಂದ ವಿಷಯಗಳನ್ನೆಲ್ಲಾ ವಿವರವಾಗಿ ಹೇಳುತ್ತಿದ್ದರು. ಅವರು ಹೀಗೆ ‘ಸುದ್ದಿ ಹೇಳುವುದನ್ನು’ ಕೇಳುವ ಸಂದರ್ಭಗಳನ್ನು ನಾವು ಯಾರೂ ಕಳೆದುಕೊಳ್ಳುತ್ತಿರಲಿಲ್ಲ. ಅಷ್ಟೂ ಹಿತವಾಗಿರುತ್ತಿತ್ತು ಅದು.

ನಾನೂ ಮಗಳೂ ಮನೆಲಿರುತ್ತೇವೆ … ನೀವೆಲ್ಲಾ ಹೋಗಿಬನ್ನಿ….. ಎಲ್ಲಿಗೇ ಆದರೂ ಮನೆಮಂದಿಯನ್ನೆಲ್ಲಾ ಕಳುಹಿಸುವಾಗ ಅಪ್ಪಯ್ಯ ಹೇಳುತ್ತಿದ್ದ ಮಾತು. ಆದರೆ ಮನೆಯಲಿ ಯಾವತ್ತೂ ಅಪ್ಪಯ್ಯನೊಟ್ಟಿಗೆ ಇರುತ್ತಿದ್ದ ನನಗೂ ಹೇಳದೆ ಅಪ್ಪಯ್ಯ ಹೋಗಿಬಿಟ್ಟದ್ದು ನನ್ನ ದುರದೃಷ್ಟ.

ಇನ್ನಷ್ಟು ದಿನ ಅಪ್ಪಯ್ಯ ಇರಬೇಕಿತ್ತು- ಯಾವಯಾವುದೋ ಸಂದೇಹಗಳನ್ನು ಅವರಲ್ಲಿ ಕೇಳಿ ನಿವಾರಿಸಿಕೊಳ್ಳಬಹುದಿತ್ತು. ಅವರಿದ್ದಾಗ ಯಾವುದನ್ನೂ ಕೇಳಲೇ ಇಲ್ಲ….. ಎನ್ನುವ ಕೊರಗು ಈಗಲೂ ಕಾಡುತ್ತಾ ಇದೆ. ಅವರನ್ನು ಕಳಕ್ಕೊಂಡ ನೋವು ತುಂಬಲಸಾಧ್ಯವಾದದ್ದು ಇಂದಿಗೂ ಇದೆ. ಆದರೂ ಈ ಅನಿವಾರ್ಯವಾದ ಸತ್ಯವನ್ನು ಒಪ್ಪಿಕೊಂಡ ಸುಪ್ತಮನಸ್ಸು ಕನಸಿನಲ್ಲೇ ಅವರ ಒಡನಾಟವನ್ನು ಕಲ್ಪಿಸಿಕೊಟ್ಟಿದೆ. ಆಗಾಗ ನೆನಪು ಮಾಡಿಕೊಡುತ್ತಾ ಇರ್ತದೆ. ಆದ್ದರಿಂದಲೇ…… ಅಪ್ಪಯ್ಯ ಎಂದರೇ… ಏನೋ ಪುಳಕ…