ಒಂದು ತಾನ್ ನಿಂದ ಮತ್ತೊಂದಕ್ಕೆ ಸಂಚರಿಸುವಾಗ ಒಂದು ಸೆಕೆಂಡ್ ಮಾತ್ರದಲ್ಲಿ ನಿನ್ನ ಧ್ವನಿ ಹೊರಳುತ್ತದಲ್ಲ ಆ ನಾದ ಅದೆಷ್ಟು ಚಂದ… ಅದಕ್ಕೆ ಮುಲಾಮಿನ ಗುಣವಿದೆ. ಕ್ಷಣ ಮಾತ್ರದಲ್ಲಿ ಭಾರವಾದ ಎದೆಯನ್ನು ಹಾರಿ ನಲಿಯುವಂತೆ ಮಾಡಿಬಿಡಬಲ್ಲ ಶಕ್ತಿಯಿದೆ ಅಂತಲೇ ನನಗೆ ಬಲವಾಗಿ ಅನಿಸುತ್ತದೆ. ಆ ಕ್ಷಣ ನಾನು ಯಾರು ಎನ್ನುವುದು ನನಗೆ ಮರೆತು ಹೋಗುತ್ತದೆ. ಯಾವ ವಿಳಾಸ, ನಾಮಧೇಯವಿರದ ಶಕ್ತಿಯ ಸಣ್ಣದೊಂದು ಚೂರಿನಂತೆ ಹೊಳೆಯುತ್ತಿದ್ದೇನೆ ಎಂದು ಭಾಸವಾಗುತ್ತದೆ. ಭಕ್ತರ ಪೂಜೆಯಿಂದ, ಮನಸಿನ ಭಕ್ತಿಯಿಂದ, ಶುದ್ಧ ಆಸ್ತಿಕತೆಯಿಂದ ದೇವರಿಗೇ ಶಕ್ತಿ ಬರುತ್ತದಂತೆ… ಅದು ಆಸ್ತಿಕರ ವಾದ. ನನಗದರ ಅನುಭವವಿಲ್ಲ.
ಆಶಾ ಜಗದೀಶ್ ಬರೆಯುವ “ಆಶಾ ಲಹರಿ” ಅಂಕಣದ ಬರಹ ನಿಮ್ಮ ಓದಿಗೆ

ನೀ ಹಾಡುತ್ತಾ ಕೂತಿರು ಗಂಧರ್ವನೆ ನನ್ನ ಮುಂದೆ. ನೀನು ನಿನ್ನ ಸಂಗೀತದಲ್ಲಿ ನಾನು ನಿನ್ನ ಗಾಯನದಲ್ಲಿ ಮೈಮರೆಯಬೇಕು ಜಗದ ಪರಿವೆಯಿಲ್ಲದೆ… ನೋಡು ಈ ಕಣ್ಣುಗಳು ಸುರಿಯುತ್ತಿವೆ, ಯಾವುದೋ ಅಪಾಯದ ಮುನ್ಸೂಚನೆಯನ್ನು ನೀಡುತ್ತಿರುವ ಅಪಶಕುನದಂತೆ. ಮುರಿದು ತುಂಡಾಗುತ್ತಿರುವ ಉಗುರಿನ ಕಣ್ಣಿಂದ ರಕ್ತ ಕಣ್ಣೀರು… ಎಡವಿ ಬಿದ್ದ ನೋವಿಗೆ. ಯಾವ ನೋವೂ ಶಾಶ್ವತವಲ್ಲ. ಗೊತ್ತಿದ್ದೂ ಅಳುತ್ತೇವೆ. ಅಳುವಿನ ಹಾದಿಯಲ್ಲೇ ನಿರಾಳತೆಯೆಂಬ ನಿಧಿಯ ಉತ್ಖನನಕ್ಕೆ ಹೊರಟವರಂತೆ. ಅತ್ತು ಅತ್ತು ಅಳುವನ್ನು ಕಳಚಿಕೊಳ್ಳದೇ ಬೇರೆ ದಾರಿಯೂ ಇಲ್ಲ. ಗಂಧರ್ವನೇ ನಿನ್ನ ಕ್ರಿಯಾಶೀಲ ಬೆರಳುಗಳು ಕೀ ಬೋರ್ಡಿನ ಮೇಲೆ ಎಷ್ಟು ಲಾಲಿತ್ಯಪೂರ್ಣವಾಗಿ ಚಲಿಸುತ್ತಿವೆ…

ರಂಜಿಶ್ ಹೀ ಸಹಿ
ದಿಲ್ ಹಿ ದುಖಾನೆ ಕೆ ಲಿಯೆ ಆ…

ನಿನ್ನ ಆಲಾಪ ದೇಹದ ನರನಾಡಿಗಳನ್ನು ಮೀಟುತ್ತಿದೆ. ರಕ್ತದ ತುಂಬೆಲ್ಲ ಜಲತರಂಗ ಅಲೆಗಳನ್ನೆಬ್ಬಿಸುತ್ತಿದೆ. ‘ಮುನಿಸಾದರೂ ಸರಿ ಕನಿಷ್ಟ ಹೃದಯವನ್ನು ನೋಯಿಸಲಿಕ್ಕಾದರೂ ಬರಲಿ’ ಎನ್ನುವ ಈ ಸಾಲು ನಿನ್ನ ದನಿಗೆ ಅದೆಷ್ಟು ಚಂದ ಒಪ್ಪುತ್ತಿದೆ! ಹೃದಯವೆನ್ನುವ ಮಿಡಿಯುವ ಯಂತ್ರವೊಂದು ನಿರಂತರವಾಗಿ ನಿಷ್ಠೆಯಿಂದ ಕೆಲಸ ಮಾಡುತ್ತಿದೆ ಎನ್ನುವುದಾದರೂ ಈ ನೆಪದಲ್ಲಿ ತಿಳಿಯಲಿ. ನಿನ್ನ ಮೋಹಕ ದನಿಯ ಕರಾರುವಾಕ್ ಏರಿಳಿತಗಳು ನನ್ನ ಕಿವಿ ತಮಟೆಯನ್ನು ತಲುಪದಂತೆ ನಿರ್ವಾತವನ್ನು ಉಂಟುಮಾಡಲು ಹುನ್ನಾರ ರಚಿಸುತ್ತಿರುವ ದುಷ್ಟತೆಯ ಉದ್ದೇಶವಾದರೂ ಸ್ಪಷ್ಟವಾಗುತ್ತಿಲ್ಲ. ಸ್ಮಶಾನದಲ್ಲಿ ಕೂಸುಗಳನ್ನು ಎಸೆದುಹೋಗುವ ನಿರ್ದಯಿ ತಾಯಿಯಂತೆ ಜಗತ್ತು ದುಷ್ಟತೆಯನ್ನು ಊಡಿಕೊಳ್ಳುತ್ತಿದೆ. ಮಡಿಲಲ್ಲಿ ಮಲಗಿಸಿಕೊಂಡು ಹಾಲುಣಿಸುವ ಬದಲು ಹಸುಳೆಯ ಬಾಯಿಗೆ ಹಾಲಾಹಲವನ್ನೀಯುತ್ತಿದೆ… ಮಾತು ತಲುಪಲು ಮಾಧ್ಯಮ ಬೇಕು. ಆದರೆ ಮೌನಕ್ಕೆ ನಿರ್ವಾತವೂ ಆದೀತು… ಮೌನವೇ ಮಾಧ್ಯಮವಾದಾಗ ಅರ್ಥಗಳು ನೂರಾರು, ಅಲ್ಲವೇ…

ಗಂಧರ್ವನೇ ನಿನ್ನ ಗಾಯನ ನನ್ನನ್ನು ಆರ್ದ್ರಗೊಳಿಸುತ್ತಿದೆ. ಅವನನ್ನು ನೆನೆಯುವಂತೆ ಮಾಡುತ್ತಿದೆ. ನೋಡು ಅಲ್ಲಿ ನನ್ನೆದುರಿನ ಕನ್ನಡಿಯ ಬಗಲಲ್ಲಿ ಅವ ಕೂತಿದ್ದಾನೆ. ಅವನ ಬದಿಯಲ್ಲಿ ನನ್ನ ಪ್ರತಿಬಿಂಬ. ಹ್ಹ ಹ್ಹ ಹ್ಹ… ಹಾಸ್ಯವೆನಿಸುತ್ತಿಲ್ಲ, ಹಾಸ್ಯಾಸ್ಪದವಂತೂ ಅಲ್ಲವೇ ಅಲ್ಲ. ಇದು ನಗುವಿನ ಮುಖದ ಅಳು. ಕಣ್ಣೀರು ಒತ್ತರಿಸಿಕೊಂಡು ಬರುತ್ತಿದೆ. ತಡೆಯುವ ವ್ಯರ್ಥ ಪ್ರಯತ್ನ ಮಾಡುತ್ತಿರುವೆ ಒಡ್ಡು ಕಟ್ಟಿ… ಆದರೆ…

ನಮ್ಮ ನಡುವೆ ಭಿನ್ನತೆಗಳು ಇರುವ ಹಾಗೇ ಭಿನ್ನಾಭಿಪ್ರಾಯಗಳೂ ಇವೆ. ಯಾವುದಕ್ಕೆ ಬೆಲೆ ಕೊಡುತ್ತೇವೆ ಎನ್ನುವುದು ಮುಖ್ಯ ತಾನೆ… ಅವ ನನ್ನನ್ನೇ ನೋಡುತ್ತಿದ್ದಾನೆ, ಸತ್ತು ಹೋಗಿರುವ ಸಂಬಂಧವೊಂದನ್ನು ಮರೆತವನಂತೆ. ನೆನಪು ಮಾಡಿ ಕೊಡಲೇ…?! ಬೇಡ… ಸತ್ತ ಸಂಬಂಧಗಳಿಗೆ ನೆನಪುಗಳ ಹಂಗಿರುವುದಿಲ್ಲ. ಎರೆಡು ಜೀವಿಗಳ ಸಹಜೀವನವಷ್ಟೇ ಸಾಕಾಗುವುದಿಲ್ಲ ಸಮಾಜದ ನಡುವೆ ಬದುಕಲಿಕ್ಕೆ. ಹೆಗಲ ಜಗ್ಗುವ ಸಂಬಂಧಗಳ ಗೋಜಲೊಳಗೆ ಸಿಕ್ಕಿ ಕಿತ್ತಿಡಲಾಗದ ಪಾದಗಳು ಚಲಿಸಲಾಗದೆ ಸೋತಾಗ, ಸಂಬಂಧವೊಂದು ಉಸಿರ ಚೆಲ್ಲುತ್ತಾ ಸಾಯುವುದನ್ನು ಕಣ್ಣಾರೆ ಕಂಡವರು ನಾವು. ಈಗ ಅವನ ಎಲ್ಲ ಜ್ಞಾನೇಂದ್ರಿಯಗಳೂ ಕೆಲಸ ನಿಲ್ಲಿಸಿವೆ. ಯಾವೊಂದು ನಿರ್ದೇಶನ ತಲುಪದೇ ಅವ ನಿಷ್ಕ್ರಿಯನಾಗಿ ಹೋಗಿದ್ದಾನೆ. ನಿಷ್ಕ್ರಿಯತೆ ಸ್ಥಾಯಿಯಾಗಿ ಹೋದರೆ ಅದು ಸಾವಿಗೆ ಸಮ. ನಾವು ಭಾವನೆಗಳ ಎಲೆಗಳನ್ನ ಕಳೆದುಕೊಂಡು ಬೋಳಾಗುತ್ತಿದ್ದೇವೆ. ನೆನಪಿರಲಿ ಸಸ್ಯವೊಂದು ಬದುಕಿರಲು ಬೇರುಗಳು ಎಷ್ಟು ಅಗತ್ಯವೋ ಅಷ್ಟೇ ಎಲೆಗಳೂ ಅಗತ್ಯ…

ನನಗೆ ಅವನನ್ನು ಹಚ್ಚಿಕೊಳ್ಳುವುದೆಂದರೆ ಬಹುಶಃ ನನ್ನ ಆತ್ಮವನ್ನು ನಾನೇ ಪ್ರೀತಿಸಿದಂತೆ ಇರಬೇಕೇನೋ… ನನಗೆ ಹಾಗೇ ಅನಿಸುತ್ತದೆ. ಅವನನ್ನು ಎದೆಗವಚಿಕೊಳ್ಳುವ ಪ್ರತಿ ಕ್ಷಣವೂ ನಾನು ತಾಯಿಯಾಗಿದ್ದೇನೆ. ಮಡಿಲಲ್ಲಿ ಮಗುವಾಗಿಸಿಕೊಂಡು ಹಾಲೂಡಿದ್ದೇನೆ. ಆದರೆ ಅವನಿಗೆ ನನ್ನೊಳಗಿನ ತಾಯಿಯ ಅನುಭವವೇ ಆಗಲಿಲ್ಲ ಎಂಬುದು ಮಾತ್ರ ದುರಂತ. ಅವನ ಸ್ಪರ್ಶ ಮಾತ್ರದಲ್ಲೇ ಅವನ ಇಂಗಿತವನ್ನು ಅರಿಯುವಷ್ಟು ಹತ್ತಿರವಾಗಿದ್ದ ನನ್ನೊಳಗೆ ಅವ ಬಯಸುವ ಗೆಳೆತಿಯೂ ಇರಲಿಲ್ಲವಾ?! ನಾವು ಅದು ಹೇಗೆ ಜೊತೆಗಿದ್ದೂ ಒಬ್ಬರಿಗೊಬ್ಬರು ಅರ್ಥವಾಗದೇ ಹೋಗಿಬಿಡುತ್ತೇವೆ…

ಸ್ಮಶಾನದಲ್ಲಿ ಕೂಸುಗಳನ್ನು ಎಸೆದುಹೋಗುವ ನಿರ್ದಯಿ ತಾಯಿಯಂತೆ ಜಗತ್ತು ದುಷ್ಟತೆಯನ್ನು ಊಡಿಕೊಳ್ಳುತ್ತಿದೆ. ಮಡಿಲಲ್ಲಿ ಮಲಗಿಸಿಕೊಂಡು ಹಾಲುಣಿಸುವ ಬದಲು ಹಸುಳೆಯ ಬಾಯಿಗೆ ಹಾಲಾಹಲವನ್ನೀಯುತ್ತಿದೆ… ಮಾತು ತಲುಪಲು ಮಾಧ್ಯಮ ಬೇಕು. ಆದರೆ ಮೌನಕ್ಕೆ ನಿರ್ವಾತವೂ ಆದೀತು… ಮೌನವೇ ಮಾಧ್ಯಮವಾದಾಗ ಅರ್ಥಗಳು ನೂರಾರು, ಅಲ್ಲವೇ…

ನಾ ಕನವರಿಸುತ್ತಾ ನಕ್ಕಾಗ ‘ಯಾವನ ಬಗ್ಗೆ ಕನಸು ಕಾಣುತ್ತಿದ್ದೆ’ ಎಂದ ಅವ. ಅವನ ಬಳಲಿಕೆಯಲ್ಲಿ ಮತ್ಯಾರದೋ ಮಲ್ಲಿಯ ವಾಸನೆ ನನಗೆ… ನಾವು ನಂಬಲಿಕ್ಕೇ ಜೊತೆಯಾದವರು, ಆದರೆ ಅನುಮಾನಕ್ಕೆ ಬಲಿಯಾದವರು. ಇದು ಗೊತ್ತಿದೆ ನಮಗೆ. ಆದರೆ ಗೊತ್ತಿಲ್ಲದಂತೆ ನಟಿಸುತ್ತೇವೆ. ಅನುಮಾನದ ಕಳೆಗೆ ಮದ್ದರೆಯುವ ಬದಲು ಅಸಹಾಯಕರಂತೆ ನಾಟಕವಾಡುತ್ತಿದ್ದೇವೆ.

“ಶಂಕೆಯೆಂಬ ಬೆಂಕಿ ಸೋಕಿ
ಬೇಯುವಾ ಮನ
ಮೌನವಾಗಿ ನರಳುತಿದೆ
ಉರಿದು ಹೂ ಬನಾ..”

ಗಂಧರ್ವನೇ ಎಲ್ಲಿರುವೆ ಯಾವ ಲೋಕದ ಸಂಗೀತವನ್ನರಸಿ ಹೊರಟೆ… ಇರು ಇಲ್ಲೇ… ಮನುಷ್ಯನ ಮನೋ ವಿಕಾರಗಳನ್ನು ಹೋಗಲಾಡಿಸುವ ಗಾಯನವೊಂದನ್ನು ಪ್ರಸ್ತುತಪಡಿಸು. “ರಾಗವಿಲ್ಲದ ತಾಳವಿಲ್ಲದ ಗಾಯನವನ್ನು ಹರಿ ಕೇಳನೋ ತಾಳನೋ” ಎಂದು ರಾಗ ತಾಳದ ಪ್ರಾಮುಖ್ಯತೆಯನ್ನು ಸಾರಿದ ಪುರಂದರ ದಾಸರು ನಿನ್ನ ಗಾಯನವನ್ನೊಮ್ಮೆ ಕೇಳಬೇಕಿತ್ತು. ರಾಗ ಮತ್ತು ತಾಳದ ಜೊತೆಗೊಂದು ಅನುಭೂತಿಯೂ ಗಾಯನಕ್ಕೆ ಬೇಕು ಎಂಬುದನ್ನು ಸೇರಿಸುತ್ತಿದ್ದರು ಬಹುಶಃ…

ಒಂದು ತಾನ್ ನಿಂದ ಮತ್ತೊಂದಕ್ಕೆ ಸಂಚರಿಸುವಾಗ ಒಂದು ಸೆಕೆಂಡ್ ಮಾತ್ರದಲ್ಲಿ ನಿನ್ನ ಧ್ವನಿ ಹೊರಳುತ್ತದಲ್ಲ ಆ ನಾದ ಅದೆಷ್ಟು ಚಂದ… ಅದಕ್ಕೆ ಮುಲಾಮಿನ ಗುಣವಿದೆ. ಕ್ಷಣ ಮಾತ್ರದಲ್ಲಿ ಭಾರವಾದ ಎದೆಯನ್ನು ಹಾರಿ ನಲಿಯುವಂತೆ ಮಾಡಿಬಿಡಬಲ್ಲ ಶಕ್ತಿಯಿದೆ ಅಂತಲೇ ನನಗೆ ಬಲವಾಗಿ ಅನಿಸುತ್ತದೆ. ಆ ಕ್ಷಣ ನಾನು ಯಾರು ಎನ್ನುವುದು ನನಗೆ ಮರೆತು ಹೋಗುತ್ತದೆ. ಯಾವ ವಿಳಾಸ, ನಾಮಧೇಯವಿರದ ಶಕ್ತಿಯ ಸಣ್ಣದೊಂದು ಚೂರಿನಂತೆ ಹೊಳೆಯುತ್ತಿದ್ದೇನೆ ಎಂದು ಭಾಸವಾಗುತ್ತದೆ. ಭಕ್ತರ ಪೂಜೆಯಿಂದ, ಮನಸಿನ ಭಕ್ತಿಯಿಂದ, ಶುದ್ಧ ಆಸ್ತಿಕತೆಯಿಂದ ದೇವರಿಗೇ ಶಕ್ತಿ ಬರುತ್ತದಂತೆ… ಅದು ಆಸ್ತಿಕರ ವಾದ. ನನಗದರ ಅನುಭವವಿಲ್ಲ. ಆದರೆ ನಿನ್ನ ಗಾಯನವನ್ನು ಕೇಳುವಾಗ ನನ್ನೊಳಗಿನ ಶಕ್ತಿ ಜಾಗೃತವಾದ ಅನುಭವವಾಗುತ್ತದೆ. ಮನಸಿನಾಳದಿಂದ ಪ್ರಭೆಯೊಂದು ಹೊಮ್ಮಿ ನನ್ನ ಸುತ್ತಲೂ ಪ್ರಭಾವಲಯವೊಂದನ್ನು ಸೃಷ್ಟಿಸಿದಂತೆ ಅನಿಸುತ್ತದೆ. ಕಣ್ಮುಚ್ಚಿ ಅದನ್ನು ತಪಸ್ಸು ಎಂದುಕೊಳ್ಳುತ್ತೇನೆ. ಬಹುಶಃ ಇದೇ ಇರಬಹುದು ತಪಸ್ಸು ಎಂದರೆ… ಗೊತ್ತಿಲ್ಲ. ಜಿಜ್ಞಾಸೆ ನನಗಿಲ್ಲ. ಹುಡುಕುವ ಪಡೆಯುವ ಹಪಾಹಪಿಯೂ ನನಗಿಲ್ಲ. ಎಲ್ಲ ಮತ್ತು ಎಲ್ಲರ ದಾರಿಗಳೂ ಬೇರೆ ಬೇರೆಯೇ ತಾನೇ… ನನಗೆ ಇದೊಂದು ದಿವ್ಯ ಅನುಭೂತಿಯಷ್ಟೇ ಸಾಕು. ಕ್ಷಣ ಮಾತ್ರದ ನಾದದ ಅನುಭೂತಿ. ಮಹತ್ವಾಕಾಂಕ್ಷೆ ನನಗಿಲ್ಲ. ಎಲ್ಲ ಮಹತ್ವಾಕಾಂಕ್ಷೆಗಳೂ ನಿರಾಸೆಯಿಂದಲೇ ಮುಕ್ತಾಯಗೊಳ್ಳುತ್ತವೆ. ಆದರೆ ಅನುಭೂತಿ ಮಾತ್ರ ಒಂದಲ್ಲದಿದ್ದರೆ ಮತ್ತೊಂದು ರೂಪದಲ್ಲಿ ಉಳಿಯುತ್ತದೆ ಅನಂತ ಶಕ್ತಿಯಂತೆ… ನಾವು ಆ ಶಕ್ತಿಯ ಸಂತಾನ. ಅದರ ಅನನ್ಯತೆಯ ಬೀಜವನ್ನು ಹೊತ್ತವರು. ಅಷ್ಟನ್ನು ಪ್ರತಿನಿಧಿಸಿಬಿಟ್ಟರೆ ಸಾಕು ನನಗೆ…

ಅವ ನನ್ನನ್ನು ಈಗಲೂ ಹಾಗೇ ದೃಷ್ಟಿಸುತ್ತಾ ಕೂತಿದ್ದಾನೆ.. ಮೌನವಾಗಿ… ಈ ಮೌನಕ್ಕೆ ಎಷ್ಟು ಅರ್ಥಗಳು! ನನಗೀಗ ಅವನ ನಿಶ್ಚಲ ದೇಹದಲ್ಲಿ ಸಣ್ಣದೊಂದು ಗುಪ್ತಗಾಮಿನಿಯಂತಹ ಚಲನೆ ಇರುವುದು ಅನುಭವಕ್ಕೆ ಬರುತ್ತಿದೆ. ಅವನ ಕಣ್ಣೀರು ಕಪೋಲದ ಹಾದಿಗುಂಟ ಕತ್ತಿಗಿಳಿದು ಎದೆ ತಲುಪಿ ಇಂಗುತ್ತಿದೆ… ಕೊರಳು ಸಣ್ಣಗೆ ಉಬ್ಬಿದೆ. ಜೋರಾಗಿ ಬಾರಿಸುತ್ತಿರುವ ನಗಾರಿಯ ಶಬ್ದ… ಅವನ ಎದೆಗೂಡಿನಿಂದ ಹೊಮ್ಮಿ ಕೋಣೆಯ ತುಂಬ ಅನುರಣಿಸುತ್ತಿದೆ… ಅವ ಈಗಲೂ ನಿಶ್ಚಲನೆಂದು ತೋರಿಸಿಕೊಳ್ಳುವ ಪ್ರಯತ್ನವನ್ನು ಮುಂದುವರಿಸಿದ್ದಾನೆ. ನನ್ನದೊಂದು ಅಪ್ಪುಗೆಯಲ್ಲಿ ಸಂಪೂರ್ಣವಾಗಿ ಕರಗಿಹೋಗಿಬಿಡುವ ತುತ್ತತುದಿಯಲ್ಲಿ ನಿಂತಿರುವಂತೆ ಕಾಣುತ್ತಿದ್ದಾನೆ ಈಗ ನನಗೆ. ಎಷ್ಟೇ ಆದರೂ ಅವ ಏನಂತ ನನಗೆ ಗೊತ್ತು…
ಹೋಗಿ ಅಪ್ಪಿಕೊಳ್ಳಲೇ…

ಅವ ಒಪ್ಪಿಕೊಳ್ಳುವ ಮೊದಲು ಕೊಸರಾಡುತ್ತಾನೆ, ತಕರಾರು ತೆಗೆಯುತ್ತಾನೆ, ಆರೋಪಗಳ ಸುರಿಮಳೆಯನ್ನೇ ಸುರಿಸುತ್ತಾನೆ. ನಂತರ ಮುಂಗಾರಿನ ಮೊದಲ ಮಳೆಯಂತೆ ಆಲಿಕಲ್ಲುಗಳ ಸಮೇತ ಜೋ….ರು ಅಳುತ್ತಾನೆ. ಮಳೆಯ ಮರುದಿನದ ಶುಭ್ರ ಸುನೀಲ ಆಕಾಶವಾಗಿಬಿಡುತ್ತಾನೆ. ಮತ್ತೆ ಅವನೀಗ ಮಗು ನಾನವನ ಅಮ್ಮ. ನಮ್ಮ ನಡುವೆ ಮತ್ತಷ್ಟು ಪಾತ್ರಗಳಿವೆ ಆಟ ಮುಂದುವರಿಸಲು. ಇದೊಂದು ಆಟವೇ. ಹೀಗೇ ಮುಂದುವರಿಯುತ್ತಿರುತ್ತದೆ ಮುಗಿಯುವುದಿಲ್ಲ. ನಮ್ಮ ಮುನಿಸು, ಅದರ ಹಿಂದಿನ ಒಲವು, ಬೇವು-ಬೆಲ್ಲದಂತೆ ಆರೋಗ್ಯಕರ. ಆದರೆ ಏನೇ ಆಗಲಿ ದಣಪೆ ದಾಟಿ ಹೋಗಬಾರದು… ಸಿಹಿಯೇ ಆಗಲಿ ಅತಿಯಾಗಬಾರದಲ್ಲವಾ… ಅನುಮಾನದ ಹಿಂದಿನ ದಟ್ಟ ಪ್ರೀತಿ ಅವಕಾಶಕ್ಕೆ ಕಾಯದೆ ತನ್ನ ಸಮಯವನ್ನು ತಾನೇ ಪಡೆದುಕೊಳ್ಳುತ್ತದೆ. ನಮ್ಮ ಇಚ್ಚೆಯ ಅಗತ್ಯವಿಲ್ಲ ಅದಕ್ಕೆ. ನನ್ನ ಅನುಮತಿಯೇ ಇಲ್ಲದೆ ಅವನನ್ನು ಪ್ರೀತಿಸಿಬಿಟ್ಟಿದೆ… ಪ್ರೀತಿ ದೀಪವಾದಾಗ, ಅನುಮಾನದ ಪತಂಗಗಳ ಬಗ್ಗೆ ಚಿಂತೆ ಏಕೆ…

ಬಾ ಹುಡುಗನೇ ನಮ್ಮ ಬೊಗಸೆಯಲ್ಲಿ ಬೆಳಕ ತುಂಬಿಕೊಂಡು ಇಡೀ ರಾತ್ರಿ ಅವನೊಬ್ಬ ಗಂಧರ್ವನಿದ್ದಾನಲ್ಲ, ಸುಮ್ಮನೇ ಮನಸನ್ನು ಹಗುರವಾಗಿಸುವವನು, ಅವನ ಗಾಯನದಲ್ಲಿ ಲೀನವಾಗೋಣ… ನಾಳೆ ಅನುಮಾನದ ಪತಂಗಗಳ ಸುಟ್ಟು ಬೆಳಕಿನ ಬೀಜಗಳ ಬಿತ್ತೋಣ…