ಈಶ್ವರ ಸಣಕಲ್ಲ ಅವರು ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಯಾದವಾಡದಲ್ಲಿ ಹುಟ್ಟಿದರು. ಅದು ಅವರ ತಾಯಿಯ ತವರೂರು. ಹುಟ್ಟಿದ್ದು 1906ರ ಡಿಸೆಂಬರ್ 20ರಂದು. ಅವರ ತಂದೆಯ ಊರು ಈಗಿನ ಬಾಗಲಕೋಟೆಯ ರಬಕವಿ.
ಜಗವೆಲ್ಲ ನಗುತಿರಲಿ / ಜಗದಳುವು ನನಗಿರಲಿ / ನಾನಳಲು ಜಗವೆನ್ನನೆತ್ತಿಕೊಳದೇ? / ನಾ ನಕ್ಕು, ಜಗವಳಲು ನೋಡಬಹುದೇ? ಎಂಬ ಪ್ರಸಿದ್ಧ ಸಾಲುಗಳನ್ನು ಬರೆದವರು ಈಶ್ವರ ಸಣಕಲ್ಲ. ನಿಷ್ಠುರವಾದಿ, ಪ್ರಾಮಾಣಿಕತೆಗೆ ಒತ್ತು ಕೊಟ್ಟವರು. ವೃತ್ತಿಯಲ್ಲಿ ಅಧ್ಯಾಪಕರಾಗಿ, ಸಂಶೋಧನಾ ಸಹಾಯಕರಾಗಿ ಸೇವೆ ಸಲ್ಲಿಸಿದ್ದಾರೆ. 20ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ಮುಂಬಯಿಯಿಂದ ಹೊರಡುತ್ತಿದ್ದ “ಸಹಕಾರ” ಪತ್ರಿಕೆಯ ಸಂಪಾದಕರಾಗಿದ್ದರು.
ಕೋರಿಕೆ (ಕವನ ಸಂಕಲನ), ಹುಲ್ಕಲ್ಗೆ ಕಿಡಿ(ಕವನ ಸಂಕಲನ), ಬಟ್ಟೆ (ಕಥಾ ಸಂಕಲನ), ಸಂಸಾರ ಸಮರ (ಕಾದಂಬರಿ), ಗ್ರಾಮೋದ್ಧಾರ (ಅನುವಾದಿತ ಕೃತಿ). ಬಟ್ಟೆ ಕಥಾಸಂಕಲನಕ್ಕೆ ಸಾಹಿತ್ಯ ಅಕಾಡೆಮಿ ಪುರಸ್ಕಾರವೂ ಸಂದಿದೆ. ಚರಿತ್ರೆ, ಕಾದಂಬರಿ, ಸಂಪಾದನೆ, ಸಂಗ್ರಹ ಮತ್ತು ಅನುವಾದ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಇಂದಿನ ‘ಕಾವ್ಯಮಾಲೆಯ ಕಾಣದ ಕುಸುಮ ಸರಣಿ’ಯಲ್ಲಿ ಅವರು ಬರೆದ ತುಂಬಿಗೆ ಕವನ.
ತುಂಬಿಗೆ
ಸುಮನೋ-ವಿಹಾರಿಯೇ,
ಸುರಸ-ಝೇಂಕಾರಿಯೇ
ನಿನ್ನ ಸ್ವಾಗತಕೆ ಬನ ನಳನಳಿಸಿವೆ !
ಅಲರಲರ ಎಸಳುಗಳು
ನರುಗಂಪ ಪಸುಳೆಗಳು
ನಿನ್ನ ದರ್ಶನಕಹಾ ! ಕಳಕಳಿಸಿವೆ.
ಆನಂದ-ಮಧು-ಪಾನ
ತೃಪ್ತಿ-ಸಂಭ್ರಮ-ಗಾನ
ಮೈಗೊಂಡು ಗಂಧವಹನನು ಏರಿಹೆ !
ಅಮೃತ-ರಸ-ಸಂಚಯಕೆ
ಹೊರಹೊಮ್ಮಲೊಳಬಯಕೆ
ಸುಮ-ಸುಧಾ-ಸುರಲೋಕವನು ಸಾರಿಹೆ !
ಓ ಪರಾಗಿತ-ಪದವೆ
ಪರಿಮಳಿತ-ಶ್ರೀಯೊದವೆ
ಅರಳಿ ನಿಂತಿದೆಪುಷ್ಪ-ಲೋಕ! ಗೆಳೆಯಾ!
ಅಲ್ಲಿ ಪದವಿಡು ತುಂಬಿ
ಮುತ್ತನಿಡು ಎದೆದುಂಬಿ
ತುಂಬದರ ಗರ್ಭಕವಿನಾಶಿ-ಕಳೆಯ
ತುಂತು ತುಂಬೆಲೆ ತುಂಬಿ
ದಿಗ್ದೇಶಗಳ ತುಂಬಿ
ತುಂಬಿ ಮೀರೆಲೆ ನೀನು ನಾಕ –ಲೋಕ
ಒಂದೊಂದೇ ಪದಸ್ಪರ್ಶ
ಒಂದೆ ಚುಂಬನ-ಹರ್ಷ
ಬಗೆಯಿಸಲಿ ನವ-ಸರಸ ಸೃಷ್ಟಿ ಪಾಕ.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ