20ನೇ ಶತಮಾನ ಕಂಡ ಮಹಾನ್‍ ಪ್ರತಿಭೆ ರಾಷ್ಟ್ರಕವಿ ಕವಿ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ  ರಸಋಷಿ ಎಂಬ ಅಗ್ಗಳಿಕೆಗೆ ಪಾತ್ರರಾದವರು. ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ  ಅವರು ಕುವೆಂಪು ಎಂದೇ ಪರಿಚಿತರು.  ಮೈಸೂರಿನ ಮಹಾರಾಜ ಕಾಲೇಜಿನ ಪ್ರಾಂಶುಪಾಲರಾಗಿದ್ದರು. ಮಾನಸ ಗಂಗೋತ್ರಿಯನ್ನು ಕಟ್ಟಿ ಬೆಳೆಸಿದವರು. ಮಹಾಕಾವ್ಯವಾಗಿರುವ ಶ್ರೀ ರಾಮಾಯಣ ದರ್ಶನಂ ಅವರ ಮೇರು ಕೃತಿ. ಮಲೆಗಳಲ್ಲಿ ಮದುಮಗಳು ಮತ್ತು ಕಾನೂರು ಸುಬ್ಬಮ್ಮ ಹೆಗ್ಗಡ್ತಿ ಅವರು ಬರೆದ ಕಾದಂಬರಿಗಳು. ಕಾವ್ಯ ಅವರ ಇಷ್ಟದ ಪ್ರಕಾರವಾಗಿದ್ದು, 23ಕ್ಕೂ ಹೆಚ್ಚು ಕವನಸಂಕಲನಗಳು ಪ್ರಕಟವಾಗಿವೆ.  ಕಥಾ ಸಂಕಲನ, ನಾಟಕ, ವಿಮರ್ಶೆ ಮುಂತಾಗಿ ಅಪಾರ ಸಾಹಿತ್ಯ ಸೃಷ್ಟಿ ಮಾಡಿದವರು. ಕನ್ನಡ ಕಾವ್ಯ ಮಾಲೆಯ ಕುಸುಮಗಳು ಸರಣಿಯಲ್ಲಿ, ಕುವೆಂಪು ಅವರ ಹೀರೆಯ ಹೂವು ಕವನ ನಿಮ್ಮ  ಓದಿಗಾಗಿ.

ಹೀರೆಯ ಹೂವು

ಮಾಡಲು ಏನೂ ಕೆಲಸವೆ ಇಲ್ಲ;
ಓದಲು ಮನಸ್ಸಿಲ್ಲ.
ಆಡುವೆನೆಂದರೆ ವಾಸುವು ಇಲ್ಲ;
ಹಾಡಲು ರಮೆಯಿಲ್ಲ
ಕವಿತೆಯ ರಚಿಸಲು ಭಾವನೆ ಇಲ್ಲ
ಸುಮ್ಮನೆ ಇರಲೂ ಆಗುವುದಿಲ್ಲ

ಅಂಗಳದಲ್ಲಿಹ ಹೀರೆಯ ಹೂವೆ,
ನಿನ್ನನೆ ನೋಡುವೆನು ;
ಹಳದಿಯನುಟ್ಟಿಹ ನಿನ್ನನು ಕುರಿತೇ
ಗೀತೆಯ ಹಾಡುವೆನು !
ಏನೆಂದುಲಿಯಲಿ, ಹೂವೇ,  ಹೇಳು ?
ಬಾಯಿಗೆ ಬಂದುದ ಹಾಡುವೆ ಕೇಳು!

ಯಾರೊಲಿದಂದದಕೆ, ಯಾರ ವಿಲಾಸಕೆ
ನಿನ್ನನು ಹೋಲಿಸಲಿ ?
ಯಾವಾನಂದದ ಹರಿಯುವ ಹೊಳೆಯೊಳು
ನಿನ್ನನು ತೇಲಿಸಲಿ ?
ಒಲುವಿನ ಹೂವೇ! ? ಗೆಲುವಿನ ಹೂವೇ !
ಚೆಲುವಿನ ಹೂವೇ ! ಹೀರೆ ಹೂವೆ !

ತಾರೆಗೆ ನಿನ್ನನು ಹೋಲಿಸಲಾರೆ,
ನಿನಗದು ಅಪಮಾನ
ಹೂವಾಗಿಹ ಮಿಂಚಿನ ಹುಳುವೆಂದರೆ
ನಿನಗದು ದುಮ್ಮಾನ;
ಮೈದೋರಿಹ ಸೌಂದರವೆನಲೊಲ್ಲೆ
ನಿನ್ನೀ ಬೆಡಗಿಗೆ ಇರುವುದೆ ಎಲ್ಲೆ ?

ನೀನಪ್ಸರ ಕನ್ನಿಕೆಯೆನಲಾರೆ,
ನಗುವನು ವಿಜ್ಞಾನಿ ;
ಚೇತನವಿಲ್ಲದ ಜಡ ಹೂವೆನೆ ನಾನ್‍
ಆಗುವೆನಜ್ಞಾನಿ !
ದೇವತೆಯನೆ ನಾನತ್ಯಭಿಮಾನಿ !
ಹೀರೆಯ ಹೂವೆನೆ ಕವಿತೆಗೆ ಹಾನಿ !

ಕಾಮನ ಬಿಲ್ಲಿನ ಮಗಳೆನಲೇನು ,
ಹೇಳೈ, ಎಲೆ ಹೂವೇ ?
ಪ್ರೇಮದ ಬಳ್ಳಿಯ ಮುಗುಳೆನಲೇನು ,
ನಲಿದೊಲಿಯುವ ಹೂವೆ ?
ಹೋಲಿಸಲೆಳಸುವುದೇತಕೆ ನಾನು ?
ಅನುಪಮವಾಗಿಹೆ ಕುಸುಮವೆ ನೀನು !

ತಿರೆಗಿಳಿದರುಳುವ ಮಿಂಚಿನ ಹನಿಯನೆ
ಅದು ನಿನಗತಿಮಾನ !
ಕವಿತಾವೇಶದ ಜೋತಿಯ ಕಿಡಿಯೆನೆ
ನಿನಗದು ಬಹುಮಾನ !
ಹೋಲಿಸಲೇನೂ ತೋರುವುದಿಲ್ಲ!
ಹೀರೆಯ ಹೂವದು ಬೇರೆಯದಲ್ಲ!

ದೇವರ ಪೂಜೆಗೆ ಕೊಯ್ಯರು ನಿನ್ನ,
ಲಾಭದಪೇಕ್ಷೆಯಲಿ;
ನಿನಗಿಹ ಮಹಿಮೆಯನರಿಯರು ಹೂವೇ,
ಲೋಭದುಪೇಕ್ಷೆಯಲಿ !
ಬೆಡಗನು ಬಿಸುಡುವೆ ಗರ್ವವ ನೀಗಿ,
ಕಾಯಾಗುವೆ ಧರ್ಮಕೆ ಶರಣಾಗಿ !

ಹೀರೆಯ ಹೂವೆಂದೊಲಿಯರು ನಿನ್ನ ,
ಮುಡಿಯರು ರಮಣಿಯರು ;
ರಸಭಾವಗಳೊಂದಿಲ್ಲದ ಗಣಗಳ
ಹೊಸೆಯುವ ಕವಿಗಣವು
ನೇಯದು ಪದವೊಂದನು ನಿನಗಾಗಿ,
ಕುವಲಯ ಕಮಲಗಳಾಳಿಯ ನೀಗಿ !

ಸವೆಯಲು ಸೌಂದರ ಮೈಮೆಗಳೆಲ್ಲಾ
ಲೋಭಿಗಳೊಲಿಯುವರು ;
ಹೃದಯದ ಸಂತಸವಿಳಿಯಲು ಉದರಕೆ,
ಹೂವೇ, ನಲಿಯುವರು !
ಅವರಾದರ್ಶವು ಬರಿಯುಪಯೋಗ !
ಹೊಟ್ಟೆಯ ಭೋಗವೆ ಅವರಿಗೆ ಭೋಗ !

ಮಾಡಲು ಕೆಲಸವು ದೊರಕುವವರೆಗೂ
ನಿನ್ನನೆ ನೋಡುವೆನು !
ಆಡಲು ವಾಸುವು ಬರವಾವರೆಗೂ
ನಿನ್ನೊಡನಾಡುವೆನು !
ಭಾವವು ನೀನೆಂದುಲಿಯುವೆ, ಹೂವೆ ,
ನೀನೇ ರಮೆಯೆಂದೊಲಿಯುವ, ಹೂವೆ.