ಇದು ಭಾರತದ ಯಾವುದೇ ಊರಿನಲ್ಲೂ ನಡೆಯಬಹುದಾದ ಕಥೆಯೇ ಆದರೂ ಕೇರಳದ ಸಣ್ಣ ಊರಿನ ಪರಿಸರ ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ. ನದಿ, ಮುರಿದ ದೋಣಿಗಳು, ಪಾಳು ಬಿದ್ದ ಮನೆಗಳು, ಅಂಗಡಿ ಮುಂದಿನ ಕಟ್ಟೆಗಳು, ಮಳೆ, ಕಥಕಳಿ ನೃತ್ಯ, ಜನಪದ, ಕಮ್ಯುನಿಸ್ಟ್ ಪಾರ್ಟಿ, ನಕ್ಸಲ್ ಭಯ ಇಂಥ ನೂರಾರು ಸಂಗತಿಗಳ ಜೊತೆಗೆ ಕಾದಂಬರಿ ಕುಸುರಿಗೊಂಡಿದೆ. ಎಲ್ಲಿಯೂ, ಒಂದೂ ಶಬ್ದವನ್ನು ವಾಚ್ಯವಾಗಿಸದೇ, ಮೇಲು ಮೇಲಿನ ಒಂದೂ ಸಂಗತಿಯನ್ನು ಹೇಳದೇ ಓದುಗರಿಗೇ ಕಲ್ಪಿಸಿಕೊಳ್ಳಲು ಬಿಟ್ಟು, ಪದಗಳಲ್ಲಿ ನಮೂದಾಗಿರುವುದೆಲ್ಲ ಮುಂದೆ ಇನ್ನ್ಯಾವುದಕ್ಕೋ ಸೇರುವ ಹಾಗೆ ಕಥನವನ್ನು ಹೆಣೆಯಲಾಗಿದೆ. 
ಅರುಂಧತಿ ರಾಯ್‌ ಬರೆದ ಪ್ರಸಿದ್ಧ ಕಾದಂಬರಿ ‘ದ ಗಾಡ್ ಆಫ್ ಸ್ಮಾಲ್ ಥಿಂಗ್ಸ್ʼ ಕುರಿತು ಕಾವ್ಯಾ ಕಡಮೆ ವಿಶ್ಲೇಷಣೆ

 

ಒಂದು ಪುಸ್ತಕ ಓದಿ ಮುಚ್ಚಿಟ್ಟ ಮೇಲೆ ವಾರಗಟ್ಟಲೇ ಅದು ಒಡ್ಡಿದ ಬಲೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದರೆ ಏನು ಮಾಡುವುದು? ಹೋಗಲಿ, ಅದೇ ಜಗತ್ತಿನಲ್ಲಾದರೂ ಕಳೆದು ಹೋಗಿಬಿಡೋಣ ಎಂದು ಮತ್ತೆ ಅದೇ ಕಾದಂಬರಿಯನ್ನು ಓದಲು ಎತ್ತಿಕೊಂಡರೆ ಅಲ್ಲೂ ನೆಮ್ಮದಿಯಿಲ್ಲ. ಎರಡನೆಯ ಓದಿಗೆ ಹೆಜ್ಜೆಹೆಜ್ಜೆಗೂ ಕಥೆ ನಮ್ಮನ್ನು ಕಡೆಗೆ ಎಲ್ಲಿ, ಎಂಥ ಆಳವಾದ ಕಂದಕಕ್ಕೆ ಕೊಂಡೊಯ್ಯುತ್ತದೆ ಎಂಬ ಅರಿವಿರುತ್ತದೆ. ಒಂದು ಬಲೆಯಿಂದ ತಪ್ಪಿಸಿಕೊಳ್ಳಲು ಹೋಗಿ ಎರಡೆರಡು ಬಲೆಯ ಹೊಯ್ದಾಟದಲ್ಲಿ ಮನಸ್ಸನ್ನು ತೊಯ್ಯಿಸುವುದೆಷ್ಟು ಸರಿ ಎಂದು ಪುಸ್ತಕವನ್ನು ಒಂದು ಕ್ಷಣ ಮುಚ್ಚಿಡಬೇಕಾಗುತ್ತದೆ. ಬೇರೆ ಕೃತಿಗಳನ್ನು ಸ್ವಲ್ಪ ಕಾಲವಾದರೂ ಓದದಷ್ಟು ಕೆಲವು ಹೊತ್ತಿಗೆಗಳ ಭಾವ ಪ್ರಪಂಚ ಸಶಕ್ತವಾಗಿ ನಮ್ಮ ಒಳಗನ್ನು ಆವರಿಸಿಕೊಂಡುಬಿಡುತ್ತವೆ.

ಅಂಥ ಒಂದು ಕಾದಂಬರಿ ಅರುಂಧತಿ ರಾಯ್ 1997ರಲ್ಲಿ ಪ್ರಕಟಿಸಿದ ‘ದ ಗಾಡ್ ಆಫ್ ಸ್ಮಾಲ್ ಥಿಂಗ್ಸ್.’ ಎಳವೆಯಿಂದಲೇ ಈ ಕಾದಂಬರಿಯ ಬಗ್ಗೆ ಒಳ್ಳೆಯ ಮಾತುಗಳನ್ನು ಕೇಳುತ್ತ ಬಂದಿದ್ದರೂ ಓದಲು ಬಹಳ ತಡಮಾಡಿದೆ. ವಿದ್ಯಾರ್ಥಿ ದೆಸೆಯಲ್ಲಿ ಒಮ್ಮೆ ಗ್ರಂಥಾಲಯದಿಂದ ತಂದಿದ್ದರೂ ಐವತ್ತು ಪುಟ ಓದುವುದರ ಒಳಗೆ ಒಂದಕ್ಷರವೂ ತಲೆಯೊಳಗೆ ಹೋಗುವುದಿಲ್ಲ ಎಂದು ವಾಪಸ್ ಮಾಡಿದ್ದು ನೆನಪಿದೆ. ಆಗೆಲ್ಲ ಇಂಥ ಬರಹಗಳ ಒಳಗೆ ಹೊಕ್ಕಲೂ ಒಂದು ತಯಾರಿ ಬೇಕೇನೋ ಅನ್ನಿಸಿದ್ದು ಸುಳ್ಳಲ್ಲ.

(ಅರುಂಧತಿ ರಾಯ್‌)

1997ನೆ ಸಾಲಿನ ಮ್ಯಾನ್ ಬೂಕರ್ ಪ್ರಶಸ್ತಿಗೆ ಈ ಕೃತಿ ಭಾಜನವಾದಾಗ ಜಗತ್ತಿನ ಪತ್ರಿಕೆಗಳು ಡಿಕೆನ್ಸ್, ಫಾಕ್ನರ್‌ರ ಬರಹಗಳಿಗೆ ಈ ಕಾದಂಬರಿಯನ್ನು ಹೋಲಿಸಿದ್ದವು. ಅರುಂಧತಿಯವರ ಪ್ರತಿಭೆ ಕಾಣುವುದು ಕೇವಲ ಅವರ ಭಾಷಾ ಜ್ಞಾನದಲ್ಲಲ್ಲ, ಅದರೊಟ್ಟಿಗೆ ಸಂವೇದನೆಗಳಿಗಿರುವ ಸಾಂದ್ರತೆಯಲ್ಲಿ. ಮೊದಲ ಪುಟದಿಂದಲೇ ಕಥನದ ಕೊನೆಯನ್ನೂ ಕಾಣಿಸುತ್ತಲೇ ಸಾಗಿದ್ದರೂ ಎಲ್ಲೂ ತೆಳುವಾಗಲು ಬಿಡದ ನಿರೂಪಣೆಯಲ್ಲಿ. ನಾಲ್ಕು ವರ್ಷಗಳ ಹಿಂದೆ 2017ರಲ್ಲಿ ಬಿಡುಗಡೆಯಾದ ಅವರ ಎರಡನೆಯ ಕಾದಂಬರಿ ‘ಮಿನಿಸ್ಟ್ರಿ ಆಫ್ ಅಟ್‌ಮೋಸ್ಟ್ ಹ್ಯಾಪಿನೆಸ್’ನಲ್ಲೂ ಆ ಮ್ಯಾಜಿಕ್ ಮೊದಲಿನ ಕಾದಂಬರಿಯಷ್ಟು ತೀವ್ರವಾಗಲ್ಲದಿದ್ದರೂ, ಕೆಲಸ ಮಾಡಿದೆ.

ಕತೆ ಸರಳವಾದದ್ದೇ. ರಾಯ್ ಅವರೇ ಒಂದೆಡೆ ಹೇಳಿರುವಂತೆ ಕಥನದ ಶಕ್ತಿ ನಿಂತಿರುವುದು ಕತೆಯ ಕುರಿತಾದ ಕುತೂಹಲದಲ್ಲಲ್ಲ, ಬದಲಿಗೆ ಗೊತ್ತಿರುವ ಕತೆಯನ್ನೇ ಹೇಗೆ ಹೇಳುತ್ತೇವೆ ಎನ್ನುವುದರ ಮೇಲೆ. ಕೇರಳದ ಐಮನಮ್ ಎಂಬ ಪುಟ್ಟ ಊರಿನಲ್ಲಿ ಪ್ಯಾರಡೈಸ್ ಪಿಕಲ್ಸ್ ಎಂಬ ಉಪ್ಪಿನಕಾಯಿ ಫ್ಯಾಕ್ಟರಿ ನಡೆಸುವ ತಕ್ಕಮಟ್ಟಿನ ಸಿರಿವಂತ ಸೀರಿಯನ್ ಕ್ರಿಶ್ಚಿಯನ್ ಕುಟುಂಬದಲ್ಲಿ ನಡೆಯುವ ಕತೆಯಿದು. ಫ್ಯಾಕ್ಟರಿ ನಡೆಸುವುದು ಹೆಸರಿಗೆ ಮನೆಯ ಮಗ ಚಾಕೋ ಆದರೂ, ಅಲ್ಲಿನ ಉಸ್ತುವಾರಿ ನೋಡಿಕೊಳ್ಳುವವರು ಅವನ ತಾಯಿ ಮಮ್ಮಾಚಿ ಮತ್ತು ಡಿವೋರ್ಸಿ ತಂಗಿ ಅಮ್ಮು. ಕಥೆಯ ಮುಖ್ಯ ಕಣ್ಣುಗಳಾದ ರಾಹೇಲ್ ಮತ್ತು ಎಸ್ತಾ, ಅಮ್ಮುವಿನ ಅವಳಿ ಮಕ್ಕಳು.

ಈ ಕಾದಂಬರಿಯಲ್ಲಿ ಬರುವ ವೆಳತ್ತ, ಪುಟ್ಟ ಜಗತ್ತಿನ ದೇವರು. ಪ್ಯಾರಡೈಸ್ ಪಿಕಲ್ಸ್‌ನಲ್ಲೇ ಕೆಲಸಗಾರ ಅವನು. ಅವನಿಗೆ ದೊಡ್ಡವರ ಜಗತ್ತಿನ ದೇವರುಗಳು, ಅವರ ಆಡಂಬರ ಬೇಕಿಲ್ಲ. ಯಾರನ್ನು ಪ್ರೀತಿಸಬೇಕು, ಹೇಗೆ, ಎಷ್ಟು ಪ್ರೀತಿಸಬೇಕು ಎಂದು ಜಗತ್ತು ಮಾಡಿಕೊಂಡ ಪ್ರೇಮದ ನಿಯಮಗಳೆಲ್ಲ ಅವನಿಗೆ ಗೊತ್ತಿಲ್ಲ. ಕಪಟವರಿಯದ ಅವನು ಮುಗ್ಧವಾಗಿ ರಾಹೇಲ್ ಮತ್ತು ಎಸ್ತಾರ ಜೊತೆಗೆ ನದಿ, ತೋಟ ಅಲೆಯಬಲ್ಲ, ರಾತ್ರಿ ಆ ಮಕ್ಕಳ ತಾಯಿಯಾದ ಅಮ್ಮುವನ್ನು ಗುಟ್ಟಾಗಿ ಪ್ರೇಮಿಸಬಲ್ಲ. ಕಮ್ಯುನಿಸ್ಟ್ ಪಾರ್ಟಿ ಎಂಬ ದೊಡ್ಡ ಯಂತ್ರದ ಪುಟ್ಟ ಚಕ್ರವಾಗಬಲ್ಲ. ಸದೃಢ ದೇಹಿ, ಕಲಾವಂತ, ಯಾರನ್ನಾದರೂ ಶಕ್ತಿಯಿಂದಲೇ ಮಣಿಸಬಲ್ಲಂಥ ವೆಳತ್ತ ಕಾಲದ ಕ್ರೌರ್ಯಕ್ಕೆ ದುರಂತಮಯವಾಗಿ ಬಲಿಯಾಗುತ್ತಾನೆ. ಅವನುಳಿಸಿಹೋಗುವ ಕಂಪನಗಳಿಂದ ಅಷ್ಟು ಸುಲಭವಾಗಿ ಬಿಡಿಸಿಕೊಳ್ಳಲಾಗುವುದಿಲ್ಲ.

ಅರುಂಧತಿಯವರ ಪ್ರತಿಭೆ ಕಾಣುವುದು ಕೇವಲ ಅವರ ಭಾಷಾ ಜ್ಞಾನದಲ್ಲಲ್ಲ, ಅದರೊಟ್ಟಿಗೆ ಸಂವೇದನೆಗಳಿಗಿರುವ ಸಾಂದ್ರತೆಯಲ್ಲಿ. ಮೊದಲ ಪುಟದಿಂದಲೇ ಕಥನದ ಕೊನೆಯನ್ನೂ ಕಾಣಿಸುತ್ತಲೇ ಸಾಗಿದ್ದರೂ ಎಲ್ಲೂ ತೆಳುವಾಗಲು ಬಿಡದ ನಿರೂಪಣೆಯಲ್ಲಿ.

ಚಾಕೋ ಕೂಡ ವಿಚ್ಛೇದಿತ. ಇಂಗ್ಲಂಡಿನಲ್ಲಿ ಓದುತ್ತಿದ್ದಾಗ ಮಾರ್ಗರೆಟ್ ಎಂಬುವವಳೊಡನೆ ಮದುವೆಯಾಗಿ, ಸೋಫಿ ಎಂಬ ಮಗಳು ಹುಟ್ಟಿದ ನಂತರ ಹೊಂದಾಣಿಕೆಯಾಗದೇ ಮಾರ್ಗರೆಟ್ ಚಾಕೋನನ್ನು ದೂರ ಮಾಡಿರುತ್ತಾಳೆ. ಅವರ ಎರಡನೆಯ ಗಂಡ ಜೋ ಆಕ್ಸಿಡೆಂಟ್ ಒಂದರಲ್ಲಿ ತೀರಿಕೊಂಡಾಗ ದುಃಖ ಮರೆಯಲು ಚಾಕೋ ಮಾರ್ಗರೆಟ್ ಮತ್ತು ಸೋಫಿಯನ್ನು ಐಮನಮ್‌ಗೆ ಸ್ವಲ್ಪ ದಿನ ಆಹ್ವಾನಿಸುತ್ತಾನೆ. ಒಂಬತ್ತು ವರ್ಷದ ಸೋಫಿ, ಏಳು ವರ್ಷದ ಅವಳಿಗಳಾದ ರಾಹೇಲ್ ಮತ್ತು ಎಸ್ತಾರ ಸ್ನೇಹಿತೆಯಾಗುತ್ತಾಳೆ. ಸೋಫಿಯ ಚರ್ಮದ ಬಿಳಿಯೂ ಅವಳನ್ನು ಮನೆಯವರೆಲ್ಲರ ಕಣ್ಗಳಲ್ಲಿ ಎತ್ತರಕ್ಕೆ ಒಯ್ದಿದೆ. ಮನೆ ಮಕ್ಕಳಾದ, ಅದರಲ್ಲೂ ವಿಚ್ಛೇದಿತ ತಾಯಿ ಅಮ್ಮುವಿನ ಮಕ್ಕಳಾದ ರಾಹೇಲ್ ಮತ್ತು ಎಸ್ತಾ, ಮನೆಯವರ ಈ ಕಡೆಗಣನೆಯನ್ನು ಕಾಣದಷ್ಟೇನು ದಡ್ಡರಲ್ಲ.

ಚಾಕೋ ಮತ್ತು ಅಮ್ಮುವಿನ ಅವಿವಾಹಿತ ಚಿಕ್ಕಮ್ಮನಾದ ಬೇಬಿ ಕೊಚ್ಚಮ್ಮ ಕತೆಯಲ್ಲಿ ಖಳ ನಾಯಕಿಯ ಪಾತ್ರ ವಹಿಸುತ್ತಾಳೆ. ಹರೆಯದಲ್ಲಿ ಕೈತಪ್ಪಿಹೋದ ಅತೃಪ್ತ ಪ್ರೇಮ, ಬೆಳೆದ ಸಂಪ್ರದಾಯಬದ್ಧ ಪರಿಸರ ಆಕೆಯಲ್ಲಿ ವಿಷ ತುಂಬಿದೆ. ಅದನ್ನು ಆಕೆ ಕಾರುವುದು ಅಮ್ಮು, ರಾಹೇಲ್ ಮತ್ತು ಎಸ್ತಾರ ಮೇಲೆ. ಮತ್ತು ಕೊನೆಯಲ್ಲಿ ಈ ಮೂವರೂ ಪ್ರೇಮಿಸುತ್ತಿದ್ದ ‘ಪರವನ್’ (ಅಸ್ಪೃಶ್ಯ) ವೆಳತ್ತನ ಮೇಲೆ.

ಇದು ಭಾರತದ ಯಾವುದೇ ಊರಿನಲ್ಲೂ ನಡೆಯಬಹುದಾದ ಕಥೆಯೇ ಆದರೂ ಕೇರಳದ ಸಣ್ಣ ಊರಿನ ಪರಿಸರ ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ. ನದಿ, ಮುರಿದ ದೋಣಿಗಳು, ಪಾಳು ಬಿದ್ದ ಮನೆಗಳು, ಅಂಗಡಿ ಮುಂದಿನ ಕಟ್ಟೆಗಳು, ಮಳೆ, ಕಥಕಳಿ ನೃತ್ಯ, ಜನಪದ, ಕಮ್ಯುನಿಸ್ಟ್ ಪಾರ್ಟಿ, ನಕ್ಸಲ್ ಭಯ ಇಂಥ ನೂರಾರು ಸಂಗತಿಗಳ ಜೊತೆಗೆ ಕಾದಂಬರಿ ಕುಸುರಿಗೊಂಡಿದೆ. ಎಲ್ಲಿಯೂ, ಒಂದೂ ಶಬ್ದವನ್ನು ವಾಚ್ಯವಾಗಿಸದೇ, ಮೇಲು ಮೇಲಿನ ಒಂದೂ ಸಂಗತಿಯನ್ನು ಹೇಳದೇ ಓದುಗರಿಗೇ ಕಲ್ಪಿಸಿಕೊಳ್ಳಲು ಬಿಟ್ಟು, ಪದಗಳಲ್ಲಿ ನಮೂದಾಗಿರುವುದೆಲ್ಲ ಮುಂದೆ ಇನ್ನ್ಯಾವುದಕ್ಕೋ ಸೇರುವ ಹಾಗೆ ಕಥನವನ್ನು ಹೆಣೆಯಲಾಗಿದೆ. ಬಹುಶಃ ಇದೇ ಕಾರಣಕ್ಕಾಗಿ ಮೊದಲ ಓದಿನಲ್ಲಿ ಇದನ್ನು ಪ್ರವೇಶಿಸಲೇ ಅಸಾಧ್ಯ ಎನ್ನುವಂಥ ಭಾವ ಮೂಡುವುದೋ ಏನೋ.

ಉದಾಹರಣೆಗೆ ಪಪ್ಪಾಚಿ (ಅಂದರೆ ಚಾಕೋ ಮತ್ತು ಅಮ್ಮುವಿನ ತಂದೆ, ರಾಹೇಲ್-ಎಸ್ತಾ-ಸೋಫಿರ ಅಜ್ಜ) ಒಮ್ಮೆ ವಿರಾಮದಲ್ಲಿ ಕುಳಿತಾಗ ಅವರ ಗ್ಲಾಸಿನಲ್ಲಿ ಹಿಂದೆಂದೂ ಕಂಡು ಗೊತ್ತಿಲ್ಲದ ಕೀಟವೊಂದು ಬಂದು ಬೀಳುತ್ತದೆ. ಕೀಟಶಾಸ್ತ್ರಜ್ಞರಾದ ಪಪ್ಪಾಚಿ, ಆ ಕೀಟವನ್ನು ಒಣಗಿಸಿ, ಇದು ಹಿಂದೆಂದೂ ಯಾವ ವಿಜ್ಞಾನಿಯೂ ಕಂಡು ಹಿಡಿಯದ ಕೀಟವೆಂದು ಪ್ರಕಟಿಸಲು ದೆಹಲಿಗೆ ಪ್ರಯಾಣ ಬೆಳೆಸುತ್ತಾರೆ. ದೆಹಲಿಯಲ್ಲಿ ಆ ಕೀಟ ಅಂಥ ವಿಶೇಷವಾದುದೇನೂ ಅಲ್ಲವೆಂದೂ ತೀರ್ಮಾನವಾಗುತ್ತದೆ. ಆದರೆ ಹನ್ನೆರಡು ವರ್ಷಗಳ ಬಳಿಕ ಅದೊಂದು ಅಸಾಮಾನ್ಯ ಸಂಶೋಧನೆಯೆಂದು ವಿಜ್ಞಾನಿಗಳ ಸಮೂಹ ನಿರ್ಣಯಿಸಿ ಅದರ ಎಲ್ಲ ಕೀರ್ತಿಯನ್ನು ಪಪ್ಪಾಚಿಯ ಜ್ಯೂನಿಯರ್‌ಆದ ಇನ್ನೊಬ್ಬನಿಗೆ ಅರ್ಪಿಸಿಬಿಡುತ್ತದೆ. ಪಪ್ಪಾಚಿ ಸಾಯುವ ತನಕವೂ ಈ ನೋವಿನಿಂದ ಹೊರಬರುವುದಿಲ್ಲ. ಆ ಕೀಟ ಪಪ್ಪಾಚಿಯ ಮಕ್ಕಳನ್ನೂ, ಮೊಮ್ಮಕ್ಕಳನ್ನೂ ಹೇಗೆಲ್ಲ ಕಾಡಿತು ಅಂತ ಮತ್ತೆ ಮತ್ತೆ ಬರುತ್ತದೆ ಈ ದೀರ್ಘ ಬರಹದಲ್ಲಿ. ಆ ಕೀಟದ ಭೂತವನ್ನು ಕಾದಂಬರಿಗಾರ್ತಿ ಒಂದು ಪ್ರತಿಮೆಯಾಗಿ ಕಾದಂಬರಿಯುದ್ದಕ್ಕೂ ಬಳಸುತ್ತ ಸಾಗುತ್ತಾರೆ.

ಅಮೆರಿಕದಲ್ಲಿ ಕ್ಲಾಸಿಕ್ ಎಂದು ಕರೆಸಿಕೊಳ್ಳುವ ಹಾರ್ಪರ್ ಲೀ ಬರೆದ ‘ಟು ಕಿಲ್ ಅ ಮಾಕಿಂಗ್ ಬರ್ಡ್’ ಕೃತಿಯ ಜೊತೆಗೆ ಈ ಕಾದಂಬರಿಯನ್ನು ಇಟ್ಟು ನೋಡಬಹುದೇನೋ. ಈ ಎರಡೂ ಕಾದಂಬರಿಗಳು ಎರಡು ಜೊತೆ ಮುಗ್ಧ ಕಣ್ಣುಗಳಿಂದ ಕಂಡ ದುರಂತವನ್ನು ವಿವರಿಸುವಂಥವು. ಆದರೆ ಗಾಡ್ ಆಫ್ ಸ್ಮಾಲ್ ಥಿಂಗ್ಸ್ ಕಾದಂಬರಿಯಲ್ಲಿ ಎಲ್ಲಿಯೋ ಆದ ಅನ್ಯಾಯದ, ಯಾರದೋ ಕಥೆಯನ್ನು ಹೇಳಿದಂತಿರದೇ ಅಮ್ಮು- ರಾಹೇಲ್- ಎಸ್ತಾರ ಮೂಲಕ ಅನ್ಯಾಯವಾಗಿ ಕೊನೆಯಾಗುವ ವೆಳತ್ತ ವೈಯಕ್ತಿಕ ನೆಲೆಗೆ ಬಂದಿದ್ದಾನೆ. ಹೀಗಾಗಿ ಇನ್ನೂ ಓದುಗರಿಗೆ ಹತ್ತಿರವಾಗಿದ್ದಾನೆ.


ಮೊದಲೇ ಹೇಳಿದ ಹಾಗೆ, ಒಮ್ಮೆ ಓದಿ ಇಟ್ಟು ಬಿಡುವಂಥ ಪುಸ್ತಕ ಅಲ್ಲವೇ ಅಲ್ಲ ಇದು. ಏಕೆಂದರೆ ಮೊದಲನೆಯ ಬಾರಿ ಓದುವ ಓದು, ಈ ಕಥನದಲ್ಲಿ ಧುಮುಕಲು ನಾವು ಮಾಡಿಕೊಳ್ಳಬಹುದಾದ ತಯಾರಿಯಷ್ಟೇ. ಮುಂದುವರೆದಂತೆ ಎಲ್ಲೆಲ್ಲಿಂದಲೋ ಸೇತುವೆಗಳು ಸೇರಿಕೊಳ್ಳುತ್ತವೆ, ಗೋಜಲುಗಳೆಲ್ಲ ತಿಳಿಯಾಗುತ್ತವೆ. ಆ ನಂತರವೂ ಈಜುವುದು, ತೇಲುವುದು, ಕರಗಿ ಹೋಗುವುದು, ಕಳೆದು ಹೋಗುವುದೆಲ್ಲ ಇದ್ದೇ ಇರುತ್ತವೆ.