ನಾನು ನೀನಾಸಮ್ ವಿದ್ಯಾರ್ಥಿಯಾಗಿದ್ದೆ. ನಮಗೆ ಐದು ದಿನಗಳ ಕಾವ್ಯ ಕಮ್ಮಟ ಇರಿಸಿದ್ದರು. ಡಾ. ಚಂದ್ರಶೇಖರ ಕಂಬಾರ, ಡಾ. ಡಿ.ಆರ್.ನಾಗರಾಜ, ಪ್ರೊ. ಕಿ.ರಂ.ನಾಗರಾಜ, ಕಾ.ವೆಂ. ಬಂದಿದ್ದರು. ಇವರಿಗೆಲ್ಲ ಅಸಿಸ್ಟೆಂಟ್ ಆಗಿ ಕೆ.ಶರತ್ ಬಂದಿದ್ದರು.

ಪಂಪ ಭಾರತ, ಕುಮಾರವ್ಯಾಸ ಭಾರತ, ರನ್ನನ ಗದಾಯುದ್ಧ ಇವುಗಳೆಲ್ಲದರ ಜೊತೆಗೆ ಬೇಂದ್ರೆ, ಕುವೆಂಪು, ಲಂಕೇಶ್, ಗೋಪಾಲಕೃಷ್ಣ ಅಡಿಗ ಹೀಗೆ ಹತ್ತು ಹಲವಾರು ಜನರ ಕಾವ್ಯಗಳ ಪರಿಚಯ, ವಿಮರ್ಶೆಗಳ ಜೊತೆಗೆ ಕೊನೆಯಲ್ಲಿ ನಮಗೆ ಈ ಕಾವ್ಯಗಳನ್ನು ಓದುವ ರೀತಿಯನ್ನು ಕಲಿಸುತ್ತಿದ್ದರು. ಅದನ್ನು ನಾವು ವೇದಿಕೆಯ ಮೇಲೆ ಪ್ರಸ್ತುತ ಪಡಿಸಬೇಕಾಗುತ್ತಿತ್ತು.

ನಾನು ಆಗ ತಾನೆ ರಂಗಭೂಮಿಗೆ, ಸಾಹಿತ್ಯ- ಕಾವ್ಯ ಇವೆಲ್ಲಕ್ಕೆ ಕಣ್ಣು ಬಿಡುತ್ತಿದ್ದೆ. ಈ ಪಂಡಿತರನ್ನೆಲ್ಲ ನೋಡಿ ಗಾಬರಿಯೇ ಆಗಿದ್ದೆ. ಬೆಳಿಗ್ಗೆ 9.30ಕ್ಕೆ ಪ್ರಾರಂಭವಾದರೆ ರಾತ್ರಿ 9.30 ರ ವರೆಗೆ ನಡೆಯುತ್ತಿತ್ತು. ಮೊದಮೊದಲು ನಮಗ್ಯಾರಿಗೂ ಏನೂ ಅರ್ಥವಾಗುತ್ತಿರಲಿಲ್ಲ. ಕ್ರಮೇಣ ನಾವು ಕಾವ್ಯ ಲೋಕವನ್ನು ಪ್ರವೇಶಿಸಿದೆವು.

ಹಳೆಗನ್ನಡ ಕಾವ್ಯವನ್ನು ಓದುವಾಗ ವಿಭಕ್ತಿ ಪ್ರತ್ಯಯ, ಒತ್ತು, ದೀರ್ಘ, ಕೊಂಬುಗಳನ್ನೆಲ್ಲ ತಿದ್ದಿ-ತೀಡಿ ಕಿ.ರಂ. ಮೇಷ್ಟ್ರು ಹೇಳಿಕೊಡುತ್ತಿದ್ದರು. ಅಲ್ಲದೆ ನಾವು ನಾಟಕದ ವಿದ್ಯಾರ್ಥಿಗಳಾದ್ದರಿಂದ ಅದರಲ್ಲಿ ನಾಟಕೀಯತೆ ಕೂಡ ಬರಬೇಕೆಂದು ನಮ್ಮ ಪ್ರಿನ್ಸಿಪಾಲರಾದ ಚಿದಂಬರರಾವ್ ಜಂಬೆ ಮತ್ತೆ ಮತ್ತೆ ಹೇಳುತ್ತಿದ್ದರು. ಪಾಠ-ಪಠ್ಯ, ಓದು, ಚರ್ಚೆ-ವಿಮರ್ಶೆಗಳು ಈ ಮೇಷ್ಟ್ರಗಳ ಮಧ್ಯದಲ್ಲೇ ಹಲವಾರು ಬಾರಿ ನಡೆಯುತ್ತಿತ್ತು. ಕಾ.ವೆಂ. ಸಾಕಷ್ಟು ಸಮಯ ಕೋಪಿಸಿಕೊಂಡು ಕೂತಿರುತ್ತಿದ್ದರೆ, ಡಿ.ಆರ್ ಅವರನ್ನು ಕೀಟಲೆ ಮಾಡಿ ಗೋಳು ಹೊಯ್ದುಕೊಳ್ಳುತ್ತಿದ್ದರು. ಕಂಬಾರರ ಕಾವ್ಯ ವಾಚನವೆಂದರೆ ಅದು ಹಾಡುವುದೇ ಇರುತ್ತಿತ್ತು. ನಾವೆಲ್ಲ ಅದಕ್ಕೆ ಬೇರೆ ಬೇರೆ ವಾದ್ಯಗಳನ್ನು ಹಿಡಿದು ಬಾರಿಸುತ್ತಿದ್ದೆವು. ಸ್ವಲ್ಪ ಲಯ ತಪ್ಪಿದರೆ `ಏ ಕತ್ತೀ..’ ಎಂದು ಬಯ್ಯುತ್ತಿದ್ದರು. ಅವರ ಬೈಗಳ ನಂತರ ನಾವು ತಾಳ ವಾದ್ಯಗಳನ್ನೆಲ್ಲ ಪಕ್ಕದಲ್ಲಿರಿಸಿ ಬಿಟ್ಟೆವು.

ಇವ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಸಿಗರೇಟು ಸೇದುತ್ತಾ, ಮೊಣಕಾಲ ಕೆಳಗೂ ಇಳಿದ ಜುಬ್ಬ, ಬಿಳಿಯ ಪೈಜಾಮ ಧರಿಸಿ, ಹೆಗಲವರೆಗಿನ ಗುಂಗುರು ಕೂದಲನ್ನು ಎಣ್ಣೆ ಹಾಕಿ ಬಾಚಿ, ನುಣ್ಣಗೆ ಶೇವ್ ಮಾಡಿ, ಕಡ್ಡಿ ಮೀಸೆಯ ಕಿರಂ ನಮಗೆಲ್ಲ ಪ್ರೀತಿಯ ಮೇಷ್ಟ್ರಾಗಿದ್ದರು. ಪ್ರತಿ ಬಾರಿಯೂ ಹೊಸ ಅರ್ಥದಲ್ಲಿ ಕಾವ್ಯವನ್ನು ಹೇಳಿಕೊಡುತ್ತಿದ್ದರು.

ಕಿ.ರಂ. ನನಗೆ ಅಡಿಗರ ವರ್ಧಮಾನ ಕವಿತೆ ಹೇಳಿಕೊಡುತ್ತಿದ್ದರು. ನನ್ನ ಪಕ್ಕದಲ್ಲೇ ಕುಳಿತು ಸಿಗರೇಟು ಸೇದುತ್ತಾ ಓದಿಸುತ್ತಿದ್ದರು. ಎದುರಿನಲ್ಲಿ ಡಿ.ಆರ್. ಕನ್ನಡಕದ ಹಿಂದೆ ದೊಡ್ಡ ದೊಡ್ಡ ಕಣ್ಣುಗಳನ್ನು ಹೊರಳಿಸಿ ನೋಡುತ್ತ ಮತ್ತೆ ಮತ್ತೆ ತಿದ್ದುತ್ತಿದ್ದರು. ಪಕ್ಕದಲ್ಲಿ ಕುರ್ಚಿಯಲ್ಲಿ ಕುಳಿತ ಜಂಬೆ ಜೋರಾಗಿ ಓದು ಎಂದು ಗದರುತ್ತಿದ್ದರು. ಕಿಲಾಡಿ ರಸ್ತೆಯ ಕೊನೆಯ ತಿರುವಿನಲ್ಲಿ ಅಪಘಾತ, ನ ಪ್ರಮದಿತವ್ಯ ಬೋರ್ಡಿನ ಕೆಳಗೆ ಎಂದಾಗ ನನಗೆ ನಗು ತಡೆಯಲಾಗಲಿಲ್ಲ. ಕಿ.ರಂ. ನನ್ನ ಭುಜ ತಟ್ಟಿ ಪರವಾಗಿಲ್ಲ ಕಣಮ್ಮಾ, ಇಷ್ಟು ಎಂಜಾಯ್ ಮಾಡ್ತೀಯಾ ಅಂದ್ರೆ ಕಾವ್ಯದೊಳಗೆ ಇಳಿದಿದ್ದೀಯಾ ಅಂತರ್ಥ ಎಂದರು. ಅಷ್ಟರಲ್ಲಿ ಜಂಬೆ ಧ್ವನಿ ಜೋರಾಗಿಲ್ಲ, ಅವಳಿಗೆ ಸ್ಟೇಜ್ ವೈಸ್ ಬೇಕು ಎಂದು ಹಿರಿ ಹಿರಿ ಹಿಗ್ಗಿದ್ದ ನನ್ನ ತಲೆಯ ಮೇಲೆ ತಟ್ಟಿದರು. ಡಿ.ಆರ್, ಕಲೀತಾಳಿ ಬಿಡಿ, ಇನ್ನು ಚಿಕ್ಕೋಳು ಎಂದು ಸಮಾಧಾನಿಸಿದರು.

ಇವೆಲ್ಲದರ ಮದ್ಯೆಯೂ ಕಮ್ಮಟದಿಂದ ನಾವು ಕಾವ್ಯವನ್ನು ಓದಲು- ಅರ್ಥೈಸಿಕೊಳ್ಳಲು ಸಾಧ್ಯವಾಯಿತು. ಅವರೆಲ್ಲರ ಆತ್ಮೀಯ ಸಹವಾಸ ಆಪ್ಯಾಯಮಾನವಾಗಿತ್ತು. ರಂಗದ ಮೇಲೆ ದೀರ್ಥವಾದ ಸಂಭಾಷಣೆಯನ್ನು ಹೇಳಲು, ಕಾವ್ಯವನ್ನು ನಾಟಕದಲ್ಲಿ ಬಳಸಲು ಅಲ್ಲದೆ ನಾಟಕದ ಧ್ವನಿ ಗ್ರಹಿಸಲು ನಮಗೆ ಸಹಕಾರಿಯಾಯಿತು. ನಾವು ನಾಟಕ ಮಾಡಿದರೆ ಕಿ.ರಂ. ನೋಡಬೇಕೆಂದು ಆಸೆ ಪಡುತ್ತಿದ್ದೆವು.

ಮುಂದೆ ಹಲವು ಬಾರಿ ನೀನಾಸಮ್ ಸಂಸ್ಕೃತಿ ಶಿಬಿರದಲ್ಲಿ ಅವರನ್ನು ಭೇಟಿಯಾಗಿದ್ದೇನೆ. ಪಂಪ, ಕುಮಾರವ್ಯಾಸ, ಹತ್ತು ಹಲವು ಕಾವ್ಯಗಳ ಕುರಿತಲ್ಲದೆ ಅಲ್ಲಿ ನಡೆದ ನಾಟಕ ಪ್ರಯೋಗ-ಪಠ್ಯಗಳ ಬಗೆಗೆ ಮಾತಾಡುತ್ತಿದ್ದರು. ಅವರ ಮಾತೆಂದರೆ ಅದೊಂದು ಸ್ವಗತವೆ! ಪ್ರತಿ ಬಾರಿಯು ಹೊಸದೊಂದು ವಿಚಾರ ನಮ್ಮ ಮುಂದಿಡುತ್ತ ಕೊನೆಯಲ್ಲಿ ತುಂಟ ನಗೆಯೊಂದನ್ನು ಹಾಯಿಸುವ ರೀತಿ ನನಗೆ ಖುಷಿ ಕೊಡುತ್ತಿತ್ತು.

ಅವರೊಡನೆ ನೀನಾಸಮ್ ನ ಗುಡ್ಡದಲ್ಲೆಲ್ಲೋ ಕೂತು ಎಲೆ ಅಡಿಕೆ ಹಾಕುತ್ತ ಹರಟೆ ಹೊಡೆಯುವುದು ಮಜವಾಗಿರುತ್ತಿತ್ತು. ಹೊಸತೇನು ಓದಿದ್ದೀಯಾ ಹೇಳು ಎಂಬಲ್ಲಿಂದ ಮಾತು ಪ್ರಾರಂಭವಾಗಿ ನಾನು ಆ ಪಠ್ಯವನ್ನು ಗ್ರಹಿಸಿದ್ದರ ಬಗೆಗೆ ಕೇಳುತ್ತಿದ್ದರು. ಮುಂದೆ ತಮ್ಮ ವಿಮರ್ಶೆ ಶುರು ಮಾಡುತ್ತಿದ್ದರು. ಹೀಗೆ ಒಮ್ಮೆ ಮಾತಾಡುತ್ತಾ ಶ್ರಾದ್ಧದ ಸುದ್ದಿ ಬಂತು. ತಾವು ಹೊಯ್ಸಳ ಕರ್ನಾಟಕದವರು ಶ್ರಾದ್ಧದ ಊಟಕ್ಕೆ ಏನೇನು ಮಾಡುತ್ತೇವೆ, ಹೇಗೆ ಬಡಿಸುತ್ತೇವೆ ಎಂದೆಲ್ಲ ಹೇಳಿ ನೀವು ಹವ್ಯಕರು ಏನೇನು ಮಾಡುತ್ತೀರಿ ಎಂದು ಕೇಳಿದರು. ನಾನು ಹವ್ಯಕರ ಶ್ರಾದ್ಧದ ಊಟದ ಬಗೆಗೆ ರಸವತ್ತಾಗಿ ವರ್ಣಿಸಿದಾಗ ಇನ್ನೊಮ್ಮೆ ನಿಮ್ಮಜ್ಜನ ಶ್ರಾದ್ಧಕ್ಕೆ ನನ್ನ ಕರಿ ಬರುತ್ತೇನೆ ಎಂದು ಮತ್ತೆ ತುಂಟ ನಗೆ ನಕ್ಕರು.

ನಾನವರ ಜೊತೆ ನಾಟಕ ಮತ್ತು ನಮ್ಮ ಪ್ರಯೋಗದ ಕುರಿತೇ ಮಾತಾಡಿದ್ದೇನೆಯೆ ಹೊರತು ಕಾವ್ಯದ ಬಗೆಗೆ ಮಾತಾಡಿಲ್ಲ. ಅದಕ್ಕಿಂತ ಹೆಚ್ಚೆಂದರೆ ಕಾಡು ಹರಟೆ ಹೊಡೆದಿದ್ದೇನೆ. ಇತ್ತೀಚೆಗಿನ 5-6 ವರ್ಷಗಳಿಂದ ಅವರ ಜೊತೆಗೆ ಮಾತಾಡುವ ಸಂದರ್ಭ ಬಂದಾಗೆಲ್ಲ ಬೇಕೆಂತಲೇ ತಪ್ಪಿಸಿಕೊಂಡಿದ್ದೇನೆ. ನೀನಾಸಮ್ ನಲ್ಲಿ ಮತ್ತು ಹಲವಾರು ಬಾರಿ ಧಾರವಾಡಕ್ಕೆ ಅವರು ಬಂದಾಗ ಕೂಡ ದೂರದಿಂದಲೇ ನಕ್ಕು ಕೈಬೀಸಿ ಜಾರಿಕೊಂಡು ಬಿಡುತ್ತಿದ್ದೆ.

ನೀನಾಸಮ್ ತಿರುಗಾಟದ ನಾಟಕ ನಟ ನಾರಾಯಣಿಯ ಕುರಿತು ಮತ್ತು ಅದರ ಲೇಖಕ ಡಾ. ಶಂಕರ ಮೊಕಾಶಿಯವರ ಬಗೆಗೆ ಬಹಳ ಮಾತು-ಕತೆಗಳು ಸಂಸ್ಕೃತಿ ಶಿಬಿರದಲ್ಲಾಯಿತು. ಎಕ್ಸಿಸ್ಟೆಂಶಿಯಲಿಸಮ್, ನವ್ಯೋತ್ತರದ ಬಗೆಗೆ, ಸಲಿಂಗ ಕಾಮದ ಬಗೆಗೆ ಬಿಸಿ ಬಿಸಿ ಚರ್ಚೆ ಆಯಿತು. ಕಿ.ರಂ ಕೂಡ ಮೊಕಾಶಿ ಬಗೆಗಿನ ತಮ್ಮ ಅನುಭವವನ್ನು ಹಂಚಿಕೊಡರು. ನಂತರ ಹೊರಗೆ ಬಂದಾಗ ನಾನು ಮೊಕಾಶಿಯವರ ಕುರಿತು ಏನೋ ಕೇಳಿದಾಗ ನವ್ಯೋತ್ತರ, ಎಕ್ಸಿಸ್ಟೆಂಶಿಯಲಿಸಮ್ ಎಲ್ಲ ಮೊಕಾಶಿ ಬರೆದದ್ದನ್ನು ನಂಬಬೇಡ. ಕೆಲವೊಮ್ಮೆ ಕುಚೇಷ್ಟೆಗೂ ಹಾಗೆ ಬರೆಯುತ್ತಾರೆ ಎಂದು ಕಣ್ಣು ಮಿಟುಕಿಸಿ ನಕ್ಕರು.

ಮಾರನೆ ದಿನ ಕೆ.ವಿ.ಅಕ್ಷರ ಅವರ ಕಿಂಗ್ ಲಿಯರ್ ನಾಟಕವಿತ್ತು. ಅದರಲ್ಲಿ ಜಿ.ಕೆ.ಗೋವಿಂದ ರಾವ್ ಲಿಯರ್ ಮಾಡಿದ್ದರು ಮತ್ತು ಕಾರ್ಡಿಲಿಯಾಳಿಗೆ ಮಾತೇ ಇರಲಿಲ್ಲ. ಹಿಂದುಸ್ತಾನಿ ಸಂಗೀತದ ಆಲಾಪ, ಚೀಸ್ ಗಳನ್ನು ಅವಳ ಮಾತಿನ ಬದಲಿಗೆ ಹಾಕಲಾಗಿತ್ತು. ಅದೊಂದು ಹೊಸ ಪ್ರಯೋಗ. ಶೋ ಮುಗಿದ ನಂತರ ಒಬ್ಬರೆ ನಿಂತ ಕಿ.ರಂ ಬಳಿ ಹೋದೆ. ‘ಹೇಗನಿಸ್ತು ಸಾರ್’ ಎಂದೆ, ‘ಶೇಕ್ಸ್ ಪಿಯರ್ ಒಂದು ಮಹಾಸಾಗರ…’ ಎಂದು ಮುಂದೇನೋ ಅನ್ನುವವರಿದ್ದರು. ಅಷ್ಟರಲ್ಲಿ ನನ್ನ ಗೆಳತಿಯರು ಕರೆದರು, ಹೋದೆ.

ಹಾಗೆಯೇ ಕಳೆದ ವರ್ಷ ಸಂಸ್ಕೃತಿ ಶಿಬಿರದಲ್ಲಿ… ಕಿರಂ ನನ್ನ ನೋಡಿ ನಕ್ಕು ಇತ್ತೀಚೆಗೆ ಏನು ಓದಿದ್ದೀಯಾ? ಹೇಳಲೇ ಇಲ್ಲಾ ನೀನು… ಎಂದು ಮಾತಿಗೆ ಪ್ರಾರಂಭಿಸಿದರು. ಏನಿಲ್ಲಾ ಸಾರ್…. ಎನ್ನುತ್ತಾ ಅವರನ್ನು ದಾಟಿ ಮುಂದೆ ಹೋಗಿ ಬಿಟ್ಟೆ. ಅವರನ್ನು ಮಾತನಾಡಿಸದೆ ಹೋಗಿದ್ದಕ್ಕೆ ಈಗ ಪರಿತಪಿಸುವಂತಾಗಿದೆ.

ಆಗಸ್ಟ್ 8 ರಂದು ಕೀರ್ತಿನಾಥ ಕುರ್ತಕೋಟಿಯವರ ಏಳನೆಯ ಪುಣ್ಯಸ್ಮರಣೆಗೆ ಕೀರ್ತಿಯವರ ಎರಡು ಪುಸ್ತಕ ಬಿಡುಗಡೆಯಾಗುವುದಿತ್ತು. ‘ಪ್ರತ್ಯಭಿಜ್ಞಾನ’ ಮತ್ತು ‘ಕುಮಾರವ್ಯಾಸ ಭಾರತ ಕಥೆ ಮತ್ತು ಕಾವ್ಯ’ ಇವೆರಡೂ ಪುಸ್ತಕಗಳನ್ನು ಕಿ.ರಂ ಬಿಡುಗಡೆ ಮಾಡಿ ಕುಮಾರವ್ಯಾಸ ಭಾರತದ ಮೇಲೆ ಮಾತಾಡುವವರಿದ್ದರು. ಅವರೂ ಕೂಡ ಸಂಭ್ರಮದಿಂದ ಬರಲು ಒಪ್ಪಿದ್ದರು. ನಂತರ ನೀನಾಸಂನ ಶ್ರೀ ವೆಂಕಟ್ರಮಣ ಐತಾಳರು ಮಾಡಿಸಿದ ಕಾಳಿದಾಸನ ಆರು ಕೃತಿಗಳಿಂದ ಆಯ್ದ ಭಾಗಗಳ ಅಗಲಿಕೆಯ ಅಲಕೆ ನಾಟಕ ಪ್ರದರ್ಶನವಿತ್ತು. ಅವರಿಗೂ ಅದನ್ನು ನೋಡಲು ಆಸಕ್ತಿ ಇತ್ತು. ನಾವು ಅವರಿಗೆ ಹೋಟೆಲ್ ಬುಕ್ ಮಾಡಿ ತಿರುಗಿ ಬೆಂಗಳೂರಿಗೆ ಹೋಗುವ ಟ್ರೈನ್ ಟಿಕೆಟ್ ಗಳನ್ನು ಬುಕ್ ಮಾಡಿಯಾಗಿತ್ತು. ಕಿ.ರಂ. ಜೊತೆಗೆ ಕಳೆಯಲು ನಾನು ನನ್ನ ಗಂಡ ಮಾನಸಿಕವಾಗಿ ವಿಶೇಷ ಸಿದ್ಧತೆ ಮಾಡಿಕೊಂಡಿದ್ದೆವು.

7ನೆಯ ತಾರೀಖಿನ ರಾತ್ರಿ ಬಂದ ಸುದ್ದಿಗೆ ನಾವು ಕನಲಿದೆವು. ಮಾರನೆಯ ದಿನ ಕಿ.ರಂ. ಕುಮಾರವ್ಯಾಸ ಭಾರತದ ಮೇಲೆ ಮಾತಾಡಬೇಕಿದ್ದ ಸಭೆ ಅವರ ಸಂತಾಪ ಸೂಚಕ ಸಭೆಯಾಯಿತು. ಕಿ.ರಂ. ನಾಟಕ ನೋಡುತ್ತಾರೆ ಎಂದು ಐತಾಳರು ಮತ್ತು ನಿನಾಸಂ ಬಳಗದವರು ಸಂಭ್ರಮ ಪಟ್ಟು ಬಂದಿದ್ದರು. ಆದರೆ….. ನನಗೆ ಮಾತ್ರ ಪಾಪ ಪ್ರಜ್ಞೆ ಕಾಡುತ್ತಿದೆ. ಸ್ಸಾರೀ… ಕಿ.ರಂ. ಸಾರ್.