Advertisement
ಕುವೆಂಪು – ಕನ್ನಡದ ಭಾವಸೆಲೆ ಹಾಗೂ ವೈಚಾರಿಕ ದಿಕ್ಸೂಚಿ: ಎಲ್.ಜಿ.ಮೀರಾ ಅಂಕಣ

ಕುವೆಂಪು – ಕನ್ನಡದ ಭಾವಸೆಲೆ ಹಾಗೂ ವೈಚಾರಿಕ ದಿಕ್ಸೂಚಿ: ಎಲ್.ಜಿ.ಮೀರಾ ಅಂಕಣ

ಕವಿಯಲ್ಲದವರ ಮಟ್ಟಿಗೆ ಸಾಧಾರಣ ಬೆಟ್ಟಗುಡ್ಡ ಅನ್ನಿಸಿಬಿಡಬಹುದಿದ್ದ ಕುಪ್ಪಳ್ಳಿಯ ಒಂದು ಸ್ಥಳವು ಈ ರಸಋಷಿಯ ಕಣ್ಣಲ್ಲಿ ಅತ್ಯಂತ ಪ್ರೀತಿಯ `ಕವಿಶೈಲ’ವಾದದ್ದು ಅವರಿಗಿದ್ದ ಅಮಿತ ಪ್ರಕೃತಿಪ್ರೇಮಕ್ಕೆ ಸಾಕ್ಷಿ. ಅವರೆಲ್ಲೇ ಇದ್ದರೂ ಅವರ ಮನಸ್ಸು ಸದಾ ಕಾಲ ತಮ್ಮ ಪ್ರೀತಿಯ ಮಲೆನಾಡನ್ನು ಧ್ಯಾನಿಸುತ್ತಿತ್ತು. “ನಾನು ಭೌತಿಕವಾಗಿ ಮೈಸೂರಿನಲ್ಲಿದ್ದರೂ ಮಾನಸಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಮಲೆನಾಡಿನಲ್ಲಿರುತ್ತೇನೆ. ಪ್ರತಿ ನಿತ್ಯ ಹಲವು ಸಾರಿ ನವಿಲುಕಲ್ಲಿಗೆ ಹೋಗಿ ಬರ್ತೀನಿ, ಕವಿಶೈಲದಲ್ಲಿ ಕುಳಿತು ಧ್ಯಾನ ಮಾಡ್ತೀನಿ. ತುಂಗಾತೀರದ ಮರಳು ಗುಡ್ಡೆಯ ಮೇಲೆ ಅಲೆದಾಡ್ತೀನಿ” ಎಂದವರು ಅವರು.
ಡಾ.
ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಮೂವತ್ಮೂರನೆಯ ಬರಹ

ಡಿಸೆಂಬರ್ 29 ಅಂದರೆ ಅದು ಕನ್ನಡಿಗರಿಗೆ ತುಂಬ ಸಂಭ್ರಮದ ದಿನ. ನಮ್ಮೆಲ್ಲರ ಪ್ರೀತಿಯ ಕವಿಯಾದ ಕುವೆಂಪು ಅವರ ಜನ್ಮದಿನವಲ್ಲವೆ ಅದು? ಈ ದಿನ ಹತ್ತಿರವಾಗುತ್ತಿದ್ದಂತೆ ಎಲ್ಲ ಸಾಹಿತ್ಯಾಸಕ್ತ ಕನ್ನಡಾಭಿಮಾಮನಿ ಮನಸ್ಸುಗಳೂ ಮತ್ತೆ ಮತ್ತೆ ಕುವೆಂಪುಧ್ಯಾನದಲ್ಲಿ ತೊಡಗುತ್ತದೆ. ಈ ಲೇಖಕಿಯೂ ಅದಕ್ಕೆ ಹೊರತಲ್ಲ.

ಕುವೆಂಪು ಎಂದರೆ ಕನ್ನಡಕ್ಕೆ ಏನು ಎಂದು ಯಾರಾದರೂ ಕೇಳಿದರೆ ಏನಲ್ಲ ಎಂದು ಮರುಪ್ರಶ್ನೆ ಕೇಳಬೇಕಾಗುತ್ತದೆ ನಾವು. ತಾವು ಬೆಳೆದ ದಟ್ಟವಾದ ಮಲೆನಾಡಿನ ಕಾಡಿನಂತಹ ಕುವೆಂಪು ಅವರ ಸಾಹಿತ್ಯರಾಶಿಯು ಮೊದಲು ಭೇದಿಸಲಾರದ ದುರ್ಗಮ ಕಾಡಾಗಿ ಕಾಣಿಸುತ್ತದೆ. ಆದರೂ ಛಲ ಬಿಡದೆ ಆ ಖಜಾನೆಯನ್ನು ಅಗೆಯುತ್ತ, ಬಗೆಯುತ್ತ ಹೋದರೆ ನಿಧಾನವಾಗಿ ಕೆಲವು ದಾರಿಗಳು ಕಾಣಿಸುತ್ತವೆ, ಆ ಸಾಹಿತ್ಯಕಾನನದಲ್ಲಿ. “ದೂರ ಬಹುದೂರ ಹೋಗುವ ಬಾರಾ, ಅಲ್ಲಿ ಇಹುದೆಮ್ಮ ಊರ ತೀರ ..” ಎಂದು ಹೇಳುತ್ತಾ ಈ ಮೇರು ಕವಿ ನಮ್ಮನ್ನು ಕೈ ಹಿಡಿದು ಕರೆದೊಯ್ಯುತ್ತಾರೆ.

“ಅನಂತದಿಂದ ಗುಣಿಸಿಕೊ, ನೀ ಅನಂತವಾಗುವೆ” ಎನ್ನುತ್ತ ನಮ್ಮ ಬುದ್ಧಿಬಾನಿನ ಸೀಮೆಗಳನ್ನು ಹಿಗ್ಗಿಸುತ್ತಾರೆ. “ಕನ್ನಡಕೆ ಹೋರಾಡು ಕನ್ನಡದ ಕಂದ, ಕನ್ನಡವ ಕಾಪಾಡು ನನ್ನ ಆನಂದ, ಜೋಗುಳದ ಹರಕೆಯಿದು ಮರೆಯದಿರು ಚಿನ್ನ, ಮರೆತೆಯಾದರೆ ಅಯ್ಯೊ ಮರೆತಂತೆ ನನ್ನ” ಎಂದು ಕನ್ನಡಮ್ಮನಿಂದ ನುಡಿಸಿ ನಾಡ ಮಕ್ಕಳಿಗೆ ಕನ್ನಡತನದ ದೀಕ್ಷೆಯನ್ನು ಕೊಡುತ್ತಾರೆ. ಎಲ್ಲ ವಯಸ್ಸಿನವರಿಗೂ ಕುವೆಂಪುಸಾಹಿತ್ಯದಲ್ಲಿ ಏನಾದರೂ ಒಂದು ಆಸಕ್ತಿದಾಯಕವಾದದ್ದು ಇದ್ದೇ ಇರುತ್ತದೆ ಎಂಬುದನ್ನು ನೆನೆಯುವಾಗ, ಕುವೆಂಪು ಎಂಬ ಮಹಾಚೇತನವು ಕನ್ನಡದ ಮನಸ್ಸುಗಳಿಗೆ ಎಂತಹ ಎತ್ತರ-ಬಿತ್ತರಗಳನ್ನು ಕೊಡುಗೆಯಾಗಿ ಕೊಟ್ಟಿದೆಯಲ್ಲ ಅನ್ನಿಸಿ ಮನಸ್ಸು ತುಂಬಿ ಬರುತ್ತದೆ. `ಬೊಮ್ಮನ ಹಳ್ಳಿಯ ಕಿಂದರಿಜೋಗಿ’ಯಿಂದ `ಶ್ರೀರಾಮಾಯಣ ದರ್ಶನಂ’ ತನಕ ಸಾಗಿದ ಈ ಅಕ್ಷರಪಯಣ ಒಂದು ಅಮರನಿಧಿಯೇ ಸರಿ.

*****

ಕಾಡು, ಕನ್ನಡ, ಕಾಣ್ಕೆ ಹಾಗೂ ಕಾವ್ಯ – ಈ ನಾಲ್ಕು `ಕಕಾರ ಪದಗಳು’ ಕುವೆಂಪು ಎಂಬ ಖಜಾನೆಗೆ ಕೀಲಿಕೈಗಳಿದ್ದಂತೆ. ಈ ನಾಲ್ಕನ್ನು ಬಳಸಿ ಕುವೆಂಪು ಎಂಬ ಖಜಾನೆಯನ್ನು ತೆರೆದರೆ ಅವರು ನಮ್ಮ ಮಟ್ಟಿಗೆ ಎಂದೂ ಬತ್ತದ ಭಾವಸೆಲೆ ಹಾಗೂ ಸದಾ ನಮ್ಮನ್ನು ಎಚ್ಚರದಲ್ಲಿಡುವ ವೈಚಾರಿಕ ದಿಕ್ಸೂಚಿ ಎಂಬುದು ಆರ್ಥವಾಗುತ್ತದೆ.

ಕರ್ನಾಟಕಕ್ಕೆ ನಾಡಗೀತೆಯನ್ನು ಕೊಟ್ಟ ಕುವೆಂಪು ಈ ನಾಡಿಗೆ ಅಗತ್ಯವಾಗಿರುವ ನಿತ್ಯವಿವೇಕದ ದೀಪವನ್ನೂ ಹಚ್ಚಿರುವ ಧೀಮಂತ ಸಾಹಿತಿ. ಅವರ ಚಿಂತನೆಯನ್ನು ಸೋಸಿ ತೆಗೆದರೆ ಸಾರರೂಪಿಯಾಗಿ ಉಳಿಯುವಂಥವು ಮೂರು ವಿಚಾರಗಳು. ಅವು ಯಾವುವು ಅಂದರೆ ವಿಶ್ವಮಾನವ ಚಿಂತನೆ, ಪ್ರಕೃತಿಪ್ರೇಮ ಹಾಗೂ ಕನ್ನಡಾಭಿಮಾನ. ಕನ್ನಡ ನಾಡಿಗೆ ಎಲ್ಲ ಕಾಲಕ್ಕೂ ಪ್ರಸ್ತುತವಾದ ವಿಷಯಗಳಿವು.

ವಿಶ್ವಮಾನವ ಚಿಂತನೆ: ಹೀಗೆ ಹೇಳುತ್ತಾರೆ ಕುವೆಂಪು – “ಪ್ರತಿಯೊಂದು ಮಗುವೂ ಹುಟ್ಟುತ್ತಲೆ ವಿಶ್ವಮಾನವ. ಬೆಳೆಯುತ್ತಾ ನಾವು ಅದನ್ನು ಅಲ್ಪ ಮಾನವನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ವಿಶ್ವಮಾನವನನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯವಾಗಬೇಕು”. ಎಷ್ಟು ಸಲ ಓದಿದರೂ ಹೊಸದಾಗಿ ಕಾಣುವ ಹಾಗೂ ಎಂದೆಂದಿಗೂ ಹೌದು ಅನ್ನಿಸುವ ಮಾತು ಇದು. `ನಮ್ಮನ್ನು ಸೀಮಿತಗೊಳಿಸುವ ಜಾತಿ, ಧರ್ಮ, ಪ್ರದೇಶಭೇದ, ವರ್ಣವ್ಯತ್ಯಾಸವೇ ಮುಂತಾದ ಮಾನವನಿರ್ಮಿತ ತಾರತಮ್ಯಗಳಾಚೆಗೆ ನಮ್ಮ ಮನಸ್ಸು ಹಿಗ್ಗಬೇಕು, ಎಲ್ಲ ಮನುಷ್ಯರೂ ತಮ್ಮ ಮೂಲ ಸತ್ವದಲ್ಲಿ ಒಂದೇ’ ಎಂಬ ವಿಷಯವನ್ನು ಮತ್ತೆ ಮತ್ತೆ ನಾವು ಮನಸ್ಸಿಗೆ ತಂದುಕೊಳ್ಳಬೇಕು, ಎಂದು ಪ್ರೇರೇಪಿಸುವ ವಿಚಾರವಿದು. ಮನೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸಮೂಹ ಪ್ರಜ್ಞೆಯಲ್ಲಿ ಈ ಮೌಲ್ಯವು ಗಟ್ಟಿಗೊಂಡರೆ ನಮ್ಮ ಬದುಕು ಎಷ್ಟೋ ಸಹನೀಯವಾಗುವುದರಲ್ಲಿ ಸಂಶಯವಿಲ್ಲ.

ವಿಶ್ವಮಾನವ ಸಂದೇಶದ ಭಾಗವಾಗಿ ಕುವೆಂಪು “ಯಾವ ಒಂದು ಗ್ರಂಥವೂ `ಏಕೈಕ ಪರಮಪೂಜ್ಯ’ ಧರ್ಮಗ್ರಂಥವಾಗಬಾರದು. ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಸಾಧ್ಯವಾದವುಗಳನ್ನೆಲ್ಲ ಓದಿ ತಿಳಿದು ತನ್ನ ದರ್ಶನವನ್ನು ತಾನೆ ನಿರ್ಣಯಿಸಿ ಕಟ್ಟಿಕೊಳ್ಳಬೇಕು” ಎಂದು ಹೇಳಿದ್ದಾರೆ. ಇದು ವೈಚಾರಿಕತೆ ಹಾಗೂ ವ್ಯಕ್ತಿಸ್ವಾತಂತ್ರ್ಯವನ್ನು ಅಡಿಪಾಯವಾಗಿ ಹೊಂದಿರುವ ಚಿಂತನೆಯಾಗಿದೆ. `ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ಎಂದು ಯುವಕರಿಗೆ ಅವರು ನೀಡಿದಂತಹ ಸಂದೇಶ. ಮತ್ತು, ತಮ್ಮ ವಿಶ್ವಮಾನವಗೀತೆಯಲ್ಲಿ “ಎಲ್ಲಿಯೂ ನಿಲ್ಲದಿರು, ಮನೆಯನೆಂದು ಕಟ್ಟದಿರು, ಕೊನೆಯನೆಂದೂ ಮುಟ್ಟದಿರು, ಓ ಅನಂತವಾಗಿರು” ಎಂದಿರುವ ಅವರ ಮಾತುಗಳು ಸೀಮಿತತೆಯ ಆಚೆಗೆ ಆಲೋಚಿಸುವಂತೆ ನಮ್ಮನ್ನು ಪ್ರೇರೇಪಿಸುತ್ತವೆ. “ಐ ಆಮ್ ನಾಟ್ ಎನ್ ಎಥೀನಿಯನ್ ಆರ್ ಅ ಗ್ರೀಕ್, ಬಟ್ ಎ ಸಿಟಿಝನ್ ಆಫ್‌ದ ವರ್ಲ್ಡ್”(‘ನಾನು ಅಥೀನಿಯನ್ನನೂ ಅಲ್ಲ, ಗ್ರೀಕನೂ ಅಲ್ಲ, ನಾನೊಬ್ಬ ವಿಶ್ವಪ್ರಜೆ’) ಎಂದು ಹೇಳಿದ ಪುರಾತನತತ್ವಜ್ಞಾನಿ ಸಾಕ್ರೆಟೀಸ್‌ರ ಮಾತನ್ನು ಅನುಮೋದಿಸುವ ಚಿಂತನೆ ಇದು. ನಿಜವಾದ ಅರ್ಥದಲ್ಲಿ ವಿದ್ಯಾವಂತರಾದವರು ವಿಶ್ವಮಾನವರಾಗಿಯೇ ಇರುತ್ತಾರೆ. `ಶ್ರೇಷ್ಠ ಮನಸ್ಸುಗಳು ಒಂದೇ ರೀತಿ ಆಲೋಚಿಸುತ್ತವೆ’ ಎಂಬ ಲೋಕೋಕ್ತಿ ಇಲ್ಲಿ ನೆನಪಾಗುತ್ತದಲ್ಲವೆ? `ಮಾನವಜಾತಿ ತಾನೊಂದೆ ವಲಂ’ ಎಂಬ ಪಂಪನ ನುಡಿ ಸಹ ಇದನ್ನೇ ಹೇಳುತ್ತದೆ. ಕವಿರಾಜಮಾರ್ಗಕಾರನು ಹೇಳಿದ `ಕಸವರಮೆಂಬುದು ನೆರೆ ಸೈರಿಸಲಾರ್ಪೊಡೆ ಪರ ವಿಚಾರಮುಮಂ, ಪರಧರ್ಮಮುಮಂ’ ಎಂಬ ಮಾತಿನಲ್ಲಿ ವ್ಯಕ್ತವಾಗುವ ಸಹಿಷ್ಣುತೆಯನ್ನು ಸಹ ಈ ಚಿಂತನೆಯು ನಮಗೆ ಕಲಿಸುತ್ತದೆ.


ಕುವೆಂಪು ಅವರ ಈ ವಿಶ್ವಾತ್ಮಕ ಪ್ರಜ್ಞೆಗೆ ಅವರು ಬಹಳವಾಗಿ ಗೌರವಿಸುತ್ತಿದ್ದ ರಾಮಕೃಷ್ಣ ಪರಮಹಂಸ ಮತ್ತು ವಿವೇಕಾನಂದರು ತೋರಿದ ಅದ್ವೈತ ಆಧ್ಯಾತ್ಮಿಕ ಮಾರ್ಗವು ಎಷ್ಟು ಕಾರಣವೋ, ತಾವು ಅನುಸರಿಸುತ್ತಿದ್ದ ವೈಜ್ಞಾನಿಕ ವಸ್ತುನಿಷ್ಠ ಮಾರ್ಗವೂ ಅಷ್ಟೇ ಕಾರಣ. ಮೌಢ್ಯ, ಕಂದಾಚಾರ, ಜಾತಿಭೇದಗಳ ವಿರುದ್ಧ ತಮ್ಮದೇ ಆದ ರೀತಿಯಲ್ಲಿ ಸಮರ ಸಾರಿದ ಈ ಮಲೆನಾಡ ಚಿಂತಕರು “ನಾನು ಪೂಜೆಯ ಸಲುವಾಗಿ ದೇವಸ್ಥಾನಗಳಿಗೆ ಕೂಡ ಹೋಗದೆ ಕಾಲು ಶತಮಾನಕ್ಕಿಂತಲೂ ಹೆಚ್ಚಾಯಿತೆಂದು ತೋರುತ್ತದೆ. ನಾನು ಜಾತಕ ಪಂಚಾಂಗ ಇತ್ಯಾದಿಗಳ ಕಡೆ ಎಂದೂ ಮುಖ ಹಾಕಿದವನಲ್ಲ. ನನಗೆ ರಾಹುಕಾಲ, ಗುಳಿಕಕಾಲಗಳ ಅರ್ಥವೂ ಗೊತ್ತಿಲ್ಲ. ಪಿತೃಗಳಿಗೆ ಶ್ರಾದ್ಧ ಮಾಡುವುದು, ಪಿಂಡ ಅರ್ಪಿಸುವುದು ಇತ್ಯಾದಿಗಳನ್ನು ಕೇಳಿ ಬಲ್ಲೆನೆ ಹೊರತು ಮಾಡುವ ಗೋಜಿಗೆ ಹೋದವನಲ್ಲ” ಎಂದು ನಿರ್ಬಿಢೆಯಿಂದ ಹೇಳಿದ್ದರು. “ನನಗೆ ಯಾವ ಮತದ ಗೋಜೂ ಇಲ್ಲ, ನನ್ನದು ಮನುಜಮತ. ವಿಶ್ವಪಥ” ಎಂದು ಸಾರಿದರು. ಇಂದಿಗೂ ಕೂಡ ಇದನ್ನು ಓದಿದ ಯಾರೇ ಆದರೂ ತಾವೂ ಒಮ್ಮೆ ಈ ಕುರಿತು ವಿಚಾರ ಮಾಡುವಂತೆ ಪ್ರೇರೇಪಿಸುವ ಮಾತುಗಳಿವು. ಕುವೆಂಪು ಅವರು ಯುವಜನತೆಗಾಗಿ ಶೋಧಿಸಿದ `ಮಂತ್ರಮಾಂಗಲ್ಯ’ ವಿವಾಹವಿಧಾನವೂ ಸಹ ಈ ವಿಶ್ವಮಾನವ ಚಿಂತನೆಯ ಕೊಡುಗೆಯೇ ಆಗಿದೆ.

ಕುವೆಂಪು ಅವರ ಪ್ರಕೃತಿಪ್ರೇಮ: ಕುವೆಂಪು ಅವರ ವ್ಯಕ್ತಿತ್ವವು ರೂಪುಗೊಳ್ಳುವಲ್ಲಿ ಅವರು ಹುಟ್ಟಿ ಬೆಳೆದ ಮಲೆನಾಡಿನ ದಟ್ಟಕಾಡು, ಬೆಟ್ಟಗಳ ಪರಿಸರದ ಪ್ರಭಾವವು ಗರಿಷ್ಠ ಮಟ್ಟದ್ದು. “ಸೂರ್ಯೋದಯ, ಚಂದ್ರೋದಯ ದೇವರದಯೆ” ಈ ಮಾತಿನಲ್ಲಿ ಸ್ವಲ್ಪವೂ ಉತ್ಪ್ರೇಕ್ಷೆಯಿಲ್ಲ. ನನಗೆ ನಿಸರ್ಗ ಬೇರೆಯಲ್ಲ, ದೇವರು ಬೇರೆಯಲ್ಲ” ಎಂದವರು ಅವರು. ಕುವೆಂಪು ಅವರ ಮಟ್ಟಿಗೆ `ಪ್ರಕೃತಿಯ ಆರಾಧನೆಯೇ ಪರಮನ ಆರಾಧನೆ’. ಕವಿಯಲ್ಲದವರ ಮಟ್ಟಿಗೆ ಸಾಧಾರಣ ಬೆಟ್ಟಗುಡ್ಡ ಅನ್ನಿಸಿಬಿಡಬಹುದಿದ್ದ ಕುಪ್ಪಳ್ಳಿಯ ಒಂದು ಸ್ಥಳವು ಈ ರಸಋಷಿಯ ಕಣ್ಣಲ್ಲಿ ಅತ್ಯಂತ ಪ್ರೀತಿಯ `ಕವಿಶೈಲ’ವಾದದ್ದು ಅವರಿಗಿದ್ದ ಅಮಿತ ಪ್ರಕೃತಿಪ್ರೇಮಕ್ಕೆ ಸಾಕ್ಷಿ. ಅವರೆಲ್ಲೇ ಇದ್ದರೂ ಅವರ ಮನಸ್ಸು ಸದಾ ಕಾಲ ತಮ್ಮ ಪ್ರೀತಿಯ ಮಲೆನಾಡನ್ನು ಧ್ಯಾನಿಸುತ್ತಿತ್ತು. “ನಾನು ಭೌತಿಕವಾಗಿ ಮೈಸೂರಿನಲ್ಲಿದ್ದರೂ ಮಾನಸಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಮಲೆನಾಡಿನಲ್ಲಿರುತ್ತೇನೆ. ಪ್ರತಿ ನಿತ್ಯ ಹಲವು ಸಾರಿ ನವಿಲುಕಲ್ಲಿಗೆ ಹೋಗಿ ಬರ್ತೀನಿ, ಕವಿಶೈಲದಲ್ಲಿ ಕುಳಿತು ಧ್ಯಾನ ಮಾಡ್ತೀನಿ. ತುಂಗಾತೀರದ ಮರಳು ಗುಡ್ಡೆಯ ಮೇಲೆ ಅಲೆದಾಡ್ತೀನಿ” ಎಂದವರು ಅವರು. ಹಸಿರನ್ನು ಎಷ್ಟು ಆಳವಾಗಿ ಪ್ರೀತಿಸುತ್ತಿದ್ದರೆಂದರೆ “ಹಸುರತ್ತಲ್! ಹಸುರಿತ್ತಲ್! ಹಸುರೆತ್ತಲ್ ಕಡಲಿನಲಿ, ಹಸುರ್ಗಟ್ಟಿತೊ ಕವಿಯಾತ್ಮಂ, ಹಸುರ್ನೆತ್ತರ್ ಒಡಲಿನಲಿ” ಎಂದು ಉದ್ಗರಿಸುವಷ್ಟರ ಮಟ್ಟಿಗೆ! “ಮಲೆಯ ನಾಡೆನಗೆ ತಾಯಿಮನೆ, ಕಾಡುದೇವರ ಬೀಡು, ಗಿರಿಯ ಮುಡಿ ಶಿವನ ಗುಡಿ, ಬನವೆಣ್ಣೆ ಮೊದಲಿನಾ ಮನದನ್ನೆ” ಎಂದು ತಮ್ಮ ಪ್ರಕೃತಿಪ್ರೇಮವನ್ನು ಲೋಕದ ಮುಂದೆ ಹೇಳಿಕೊಂಡ ಕವಿ ಅವರು. ಹೂವು, ಹಕ್ಕಿಗಳನ್ನು ಅವರು ಪ್ರೀತಿಸುತ್ತಿದ್ದ ಪರಿ ಅನನ್ಯ, ಅವರ್ಣನೀಯ. ಇದನ್ನು ಅವರ ಸಾಹಿತ್ಯ ಓದಿಯೇ ಅನುಭವಿಸಬೇಕು.


ಕುವೆಂಪು ಅವರ ಪ್ರಕೃತಿ ಪ್ರೇಮವು ತುಂಬ ಆಳವಾದದ್ದು ಹಾಗೂ ಉಸಿರಿನಂತೆ ಅವರೊಳಗೆ ಇರುವಂಥದ್ದು ಎಂಬುದನ್ನು ಹೆಚ್ಚು ವಿವರಿಸುವ ಅಗತ್ಯವಿಲ್ಲ. ಮಲೆನಾಡು ಅವರ ಮನಸ್ಸನ್ನು ಎಷ್ಟು ಆವರಿಸಿತ್ತು ಅಂದರೆ ಮೈಸೂರಿನ ತಮ್ಮ ಮನೆ `ಉದಯರವಿ’ಯನ್ನು ಕಟ್ಟುವಾಗ ಹಸುರಿಗಾಗಿ ಮನೆ ಮುಂದೆ ಜಾಗ ಇಟ್ಟುಕೊಂಡು, ತಮ್ಮ ಪತ್ನಿಯ ಸಹಾಯದಿಂದ, ಅನೇಕ ವರ್ಷ ತುಂಬ ಕಷ್ಟ ಪಟ್ಟು ದುಡಿದು, ಸುಂದರವಾದ ತೋಟ ಮಾಡಿದರು. ಅಲ್ಲಿ ಬೆಳೆಯುವ ಹೂಗಳ ಬಗ್ಗೆ, ಗೂಡುಕಟ್ಟುವ ಹಕ್ಕಿಗಳ ಬಗ್ಗೆ ಸದಾ ಗಮನ ಕೊಡುತ್ತಿದ್ದರು. ಹಣ್ಣಿನ ಮರಗಳನ್ನು ಬೆಳೆಸಿ ಎಲ್ಲರಿಗೂ ಹಣ್ಣುಕೊಟ್ಟು ಸಂತೋಷ ಪಡುತ್ತಿದ್ದರು. ಹಸುರನ್ನು ಕುರಿತ ಇವರ ಪ್ರೀತಿಯು ತಮ್ಮ ಮಕ್ಕಳಲ್ಲೂ ಮುಂದುವರಿಯಲು ಇದು ಕಾರಣವಾಯಿತು. ಕುವೆಂಪು ಅವರ `ಶ್ರೀರಾಮಾಯಣ ದರ್ಶನಂ’ಕೃತಿಗೆ ಜ್ಞಾನಪೀಠ ಪ್ರಶಸ್ತಿ ಬಂದು ಐವತ್ತು ವರ್ಷವಾದ ಸವಿನೆನಪಿನ ಸಂದರ್ಭದಲ್ಲಿ(2017), ಬೆಂಗಳೂರಿನ ಲಾಲ್‌ಬಾಗ್ ಉದ್ಯಾನವನದಲ್ಲಿ ಕರ್ನಾಟಕ ಸರ್ಕಾರದ ತೋಟಗಾರಿಕಾ ಇಲಾಖೆಯು `ಕುವೆಂಪು ಸಾಹಿತ್ಯ ಫಲಪುಷ್ಪ ಪ್ರದರ್ಶನ’ವನ್ನು ಏರ್ಪಡಿಸಿ, ಕವಿಮನೆ ಮತ್ತು ಕವಿಶೈಲದ ಮಾದರಿಗಳನ್ನು ನಿರ್ಮಿಸಿ ನೋಡುಗರಿಗೆ ಸಂತೋಷಕೊಟ್ಟದ್ದನ್ನು ನಾವಿಲ್ಲಿ ನೆನೆಯಬಹುದು. `ಕೈಮುಗಿದು ಒಳಗೆ ಬಾ ಇದು ಪಕ್ಷಿಕಾಶಿ’ ಎಂಬ ಕುವೆಂಪು ಅವರ ಸಾಲನ್ನೇ ತುಸು ಮಾರ್ಪಡಿಸಿ, ಲಾಲ್‌ಬಾಗ್ ತೋಟದ ಪ್ರವೇಶದ್ವಾರದಲ್ಲಿ `ಕೈಮಗಿದು ಒಳಗೆ ಬಾ ಇದು ಸಸ್ಯಕಾಶಿ’ ಎಂದು ಬರೆಸಲಾಗಿದೆ. ಈ ಗಿರಿವನಪ್ರಿಯ ಕವಿಯನ್ನು ನಾಡು ಪ್ರೀತಿಯಿಂದ ಗೌರವಿಸಿದ ರೀತಿ ಇದು. ಇಂದು, ಪರಿಸರ ಚಿಂತನೆಯು ಅತ್ಯಂತ ಪ್ರಸ್ತುತವಾಗಿರುವ ಹೊತ್ತಿನಲ್ಲಿ ಪ್ರಕೃತಿಯನ್ನೇ ದೇವರಾಗಿಸಿಕೊಂಡ ಕುವೆಂಪು ನಮಗೆ ಪ್ರಾತಃಸ್ಮರಣೀಯರಾಗುತ್ತಾರೆ.

ಕುವೆಂಪು ಅವರ ಕನ್ನಡಾಭಿಮಾನ: `ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು, ಕನ್ನಡವೇ ಸತ್ಯ, ಕನ್ನಡವೇ ನಿತ್ಯ’ ಎಂದು, ಮೂರ್ತ ಆಯಾಮಗಳಾಚೆಯ ಸತ್ವಪೂರ್ಣ ಅಮೂರ್ತ ನೆಲೆಯ ಕನ್ನಡತನವನ್ನು ಮೆರೆದವರು ನಮ್ಮ ಎರಡನೆಯ ರಾಷ್ಟ್ರಕವಿ. `ಕನ್ನಡವೆನೆ ಕುಣಿದಾಡುವುದೆನ್ನೆದೆ ಕನ್ನಡವೆನೆ ಕಿವಿ ನಿಮಿರುವುದು!’ ಎಂದು ಸಂಭ್ರಮಿಸಿದವರಿವರು. ಶ್ರೀಸಾಮಾನ್ಯ, ರೂಪಸಿ, ಲತಾನಟಿ, ಸುಗ್ರೀವಾಜ್ಞೆ ಮುಂತಾದ ಹೊಸ ಪದಗಳನ್ನು ಕನ್ನಡಕ್ಕೆ ಕೊಟ್ಟ ಸೃಷ್ಟಿಶೀಲರು. ತಮ್ಮ ಎರಡು ಕಾದಂಬರಿಗಳಲ್ಲಿ ಮಲೆನಾಡಿನ ದಟ್ಟಚಿತ್ರವನ್ನು ಅನನ್ಯವಾಗಿ, ವಿಸ್ತೃತವಾಗಿ ಕಟ್ಟಿಕೊಟ್ಟವರು. ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟವರು. ಕನ್ನಡಮ್ಮನನ್ನು `ಭಾರತ ಮಾತೆಯ ತನುಜಾತೆ’ ಎಂದು ಮುದ್ದಾಗಿ ಕರೆದವರು. ಇಂಗ್ಲಿಷ್ ಬಗ್ಗೆ ನಾವು ಇರಿಸಿಕೊಳ್ಳಬೇಕಾದ ಆರೋಗ್ಯಕರ ಮನೋಭಾವವನ್ನು ತಿಳಿಸಿಕೊಟ್ಟವರು. “ಇಂಗ್ಲಿಷ್ ಬೇಡವೆಂದಲ್ಲ; ಯಾರಿಗೆ ಬೇಕು ಎಷ್ಟು ಬೇಕು ಎಂಬುದು ಮುಖ್ಯವಾದ ಪ್ರಶ್ನೆ” ಎಂದು ನಮ್ಮನ್ನು ಚಿಂತನೆಗೆ ಹಚ್ಚಿದವರು. “ಆಡು ಮುಟ್ಟದ ಸೊಪ್ಪಿಲ್ಲ” ಎಂಬಂತೆ “ಕುವೆಂಪು ರಚಿಸದ ಕನ್ನಡ ಸಾಹಿತ್ಯ ಪ್ರಕಾರವಿಲ್ಲ” ಎಂಬ ಜೋಡುನುಡಿಯಂತೂ ಕನ್ನಡದ ಗಾದೆಮಾತಾಗಿಬಿಟ್ಟಿದೆ!


ಇಂದು ಇಪ್ಪತ್ತೊಂದನೆಯ ಶತಮಾನದಲ್ಲಿ, ಈ ಮಾಹಿತಿತಂತ್ರಜ್ಞಾನದ ಯುಗದಲ್ಲಿ ಕನ್ನಡಕ್ಕೆ `ಡಿಜಿಟಲ್ ನವೋದಯ’ ಆಗಿದೆ ಎಂಬ ಮಾತು ಕೇಳಿಬರುತ್ತಿದೆ. ನವೋದಯದ ಪ್ರಮುಖಕವಿಯಾದ ಕುವೆಂಪು ಅವರಿಂದ ನಾವು ಈ ವಿಷಯದಲ್ಲಿ ಸಾಕಷ್ಟು ಕಲಿಯುವುದಿದೆ. ಪದ್ಯ, ಗದ್ಯ, ಪ್ರಬಂಧ, ನಾಟಕ, ಕಾದಂಬರಿ, ಮಹಾಕಾವ್ಯ. ಮಕ್ಕಳ ಸಾಹಿತ್ಯ, ವಿಮರ್ಶೆ ಎಂಬ ಪ್ರಕಾರಭೇದವಿಲ್ಲದೆ, ವಿಪುಲವಾಗಿ ಪ್ರಯೋಗಶೀಲರಾಗಿ ಕುವೆಂಪು ಬರೆದು, ಕನ್ನಡವನ್ನು ಬೆಳೆಸಲು ಮಹತ್ವದ ಕೊಡುಗೆ ಕೊಟ್ಟರೋ ಅದೇ ರೀತಿಯಲ್ಲಿ, ತಂತ್ರಜ್ಞಾನವನ್ನು ಬಳಸಿಕೊಂಡು ಕನ್ನಡವನ್ನು ಸರ್ವತೋಮುಖವಾಗಿ ನಾವು ಬೆಳೆಸಬೇಕಾಗಿದೆ. “ಕನ್ನಡ ನಾಡಿನಲ್ಲಿ ಕನ್ನಡ ಪ್ರಥಮ ಭಾಷೆಯಾಗಬೇಕು. ಆಡಳಿತ ಭಾಷೆಯಾಗಬೇಕು. ಎಲ್ಲ ಹಂತಗಳಲ್ಲೂ ಶಿಕ್ಷಣ ಮಾಧ್ಯಮವಾಗಬೇಕು, ಸಕಲ ಶಾಸ್ತ್ರಗಳೂ ಕನ್ನಡದಲ್ಲೇ ಬೋಧಿಸಲ್ಪಡಬೇಕು. ನಾವು ಈ ಗುರಿಯನ್ನು ಸಾಧಿಸಬೇಕಿದೆ” ಎಂಬ ಸಂದೇಶ ನೀಡಿದವರು ಕುವೆಂಪು. ಕ್ವಾಂಟಮ್ ಮೆಕಾನಿಕ್ಸ್, ಖಗೋಳ ಶಾಸ್ತ್ರವೇ ಮುಂತಾದ ವೈಜ್ಞಾನಿಕ ವಿಷಯಗಳನ್ನು ಕನ್ನಡ ತರಗತಿಯಲ್ಲಿ ಕನ್ನಡದಲ್ಲಿ ವಿವರಿಸಿ, ಜೆ.ಆರ್.ಲಕ್ಷ್ಮಣರಾವ್ ಅವರಂತಹ ಕನ್ನಡ ವಿಜ್ಞಾನ ಬರಹಗಾರರು ರೂಪುಗೊಳ್ಳುವುದಕ್ಕೆ ಇವರು ಕಾರಣವಾದದ್ದನ್ನು ನಾವಿಲ್ಲಿ ನೆನೆಯಬಹುದು. ಕನ್ನಡವನ್ನು ಬಹುಮುಖವಾಗಿ, ಶಕ್ತವಾಗಿ, ಇಂದೀಕರಿಸುವ(ಅಪ್ಡೇಟ್) ಕೆಲಸದಲ್ಲಿ ಕುವೆಂಪು ಅವರ ದಣಿವರಿಯದ ಕನ್ನಡಸೇವೆ ಮತ್ತು ಅಮಿತ ಅಭಿಮಾನಗಳು ನಮಗೆ ದಾರಿದೀಪವಾಗಬಲ್ಲವು.

ಹೀಗೆ ಕುವೆಂಪು ಅವರು ಕನ್ನಡದ ಭಾವಸೆಲೆಯಾಗಿ ಮತ್ತು ವೈಚಾರಿಕ ದಿಕ್ಸೂಚಿಯಾಗಿ ನಮ್ಮೊಂದಿಗೆ ನಿರಂತರವಾಗಿ ಇರುತ್ತಾರೆ. ಅವರ ಜನ್ಮದಿನದ ಸಂದರ್ಭದಲ್ಲಿ ಅವರ ಚೇತನಕ್ಕೊಮ್ಮೆ ನಮಿಸೋಣ.

About The Author

ಡಾ. ಎಲ್.ಜಿ. ಮೀರಾ

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ  ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.

Leave a comment

Your email address will not be published. Required fields are marked *

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ