ಮಿಲಿಂದ ಹೆಚ್ಚುಹೊತ್ತು ಬೈಯಲು ಹೋಗಲಿಲ್ಲ. ಆತ ಸ್ಟಿವರ್ಟ್ ಪೆಟ್ರಿಕ್ ಸನ್ ಬಗ್ಗೆ ಹೆಚ್ಚಿನ ವಿಷಯ ಹಂಚಿಕೊಳ್ಳುವಲ್ಲಿ ಉತ್ಸುಕನಾಗಿದ್ದ. ಅವನ ರಿಸರ್ಚ್ ಗಳು, ಗ್ರಾಂಟ್ ಗಳು, ಹೊಸ ತಂತ್ರಜ್ಞಾನಗಳನ್ನು ಮಿಲಿಂದ ಉತ್ಸಾಹದಿಂದ ವಿವರಿಸುತ್ತಿದ್ದರೆ ನಾನು ವೇಗವಾಗಿ ಮಲ್ಲೇಶ್ವರಂ ಸಂಪಿಗೆ ರಸ್ತೆಯ ಮುಖಾಂತರ ಗಾಡಿ ಓಡಿಸುತ್ತಿದ್ದೆ. ಸ್ಯಾಂಕಿ ಕೆರೆಯ ಕಡೆಯಿಂದ ಬೀಸುವ ತಂಗಾಳಿಯಷ್ಟೇ ಚೆತೋಹಾರಿಯಾಗಿತ್ತು ಮಿಲಿಂದನ ವಿವರಣೆಗಳು. ಮಹಾರಾಣಿ ಅಮ್ಮಣ್ಣಿ ಕಾಲೇಜು ದಾಟಿಕೊಂಡು ಹರಹರಾ ಅನ್ನುವಷ್ಟರಲ್ಲಿ ಐ ಐ ಎಸ್ಸಿ ಯೊಳಗೆ ನನ್ನ ಗಾಡಿ ಪಾರ್ಕ್ ಆಗಿತ್ತು. ಆಗೆಲ್ಲ ಈಗಿನಂತೆ ಒಳಬರುವವರ ಬಳಿ ರಿಜಿಸ್ಟರ್ ಬರೆಸಿಕೊಳ್ಳುತ್ತಿರಲಿಲ್ಲ. ಭಯೋತ್ಪಾದಕ ದಾಳಿ ಆದಮೇಲೂ ಅಂತಹ ವಿಶೇಷ ಭದ್ರತೆಯೂ ಒದಗಲಿಲ್ಲ.
ಶ್ರೀಹರ್ಷ ಸಾಲಿಮಠ ಅಂಕಣ

 

ಹೆಚ್ಚೇನಲ್ಲ ಬರೀ ಹತ್ತು ವರ್ಷಗಳ ಹಿಂದೆ ದಾವಣಗೆರೆಯಲ್ಲಿ ಡಿಸೆಂಬರ್ ಜನವರಿ ಸಮಯದಲ್ಲಿ ನಲ್ಲಿಯಲ್ಲಿ ಬರುವ ನೀರು ತಣ್ಣಗೆ ಕೈಕೊರೆಯುತ್ತಿತ್ತು ಎಂದರೆ ಇಂದಿನ ಪೀಳಿಗೆ ನಂಬಲಿಕ್ಕಿಲ್ಲ. ಬೆಂಗಳೂರಲ್ಲಿ ರಾತ್ರಿ ಹೊತ್ತು ಗಾಡಿ ಓಡಿಸುವಾಗ ಹ್ಯಾಂಡಲ್ ಹಿಡಿದ ಕೈಗಳ ಮೇಲೆ ಮಂಜುಗಡ್ಡೆ ಸುರಿದಂತೆ ಭಾಸವಾಗುತ್ತಿತ್ತು. ಬೇಸಗೆಯಲ್ಲೂ ಮಧ್ಯಾಹ್ನದವರೆಗೆ ಸೆಖೆಗಾಗಿ ಕಾಯಬೇಕಿತ್ತು. ಆವಾಗ ಶ್ರೀನಿವಾಸ ನಗರದಿಂದ ಮೆಜೆಸ್ಟಿಕ್ ಮುಟ್ಟಲು ಕೇವಲ ಹದಿನೈದು ನಿಮಿಷ ಸಾಕಾಗುತ್ತಿತ್ತು. ಹಂಗೆ ನನ್ನ ಮೊಪೆಡ್ ನಲ್ಲಿ ಹನುಮಂತ ನಗರದ ಮೂಲಕ ಕೆ ಹೆಚ್ ಕಲಾಸೌಧ ದಾಟಿಕೊಂಡು ರಾಮಕೃಷ್ಣ ಮಠದೆದುರಿನಿಂದ ಗುಡ್ ಶೆಡ್ ರೋಡ್ ಮಾರ್ಗವಾಗಿ ಬಿ ಎಮ್ ಟಿ ಸಿ ಬಸ್ ಗಳು ನಿಲ್ತಾವಲ್ಲ ಆ ಕಡೆ ನನಗಾಗಿ ಮಿಲಿಂದ ಕಾಯುತ್ತಿದ್ದ. ನಾನು ಅವನನ್ನು ನೋಡಿ ಹತ್ತಿಸಿಕೊಳ್ಳಲು ಬ್ರೆಕ್ ಒತ್ತಿದ ಕೂಡಲೇ ಕೆಂಗಣ್ಣು ಬಿಡುತ್ತಾ
“ನಾ ಫೋನ್ ಮಾಡಿದ ಮ್ಯಾಲನ ಮನಿ ಬಿಟ್ಟಿ ಹೌದುಲ್ಲಲೆ?” ಅಂತ ಗದರಿದ.

“ಇಲ್ಲಲೇಪ್ಪಾ.. ಲಗೂನ ಬಿಟ್ಟಿದ್ದೆ. ಟ್ರಾಫಿಕ್ ಭಾಳ ಇತ್ತು. ತಡಾ ಆತು” ಅಂದೆ.

“ಗೊತೈತಿ ನಡಿಲೇಪ್ಪಾ.. ಸುಳ್ಳಪಳ್ಳ ಹೇಳಿಕೆಂಡು ಲೇಟ್ ಮಾಡ್ತಿ” ಅಂತ ಬೈಯುತ್ತಾ ಹಿಂದುಗಡೆ ಸೀಟು ಹತ್ತಿದ. ಮಿಲಿಂದ ಕನಿಷ್ಟವೆಂದರೂ ಒಂದು ವಾರದಿಂದ ಫೋನ್ ಮಾಡಿ ಈ ಕಾರ್ಯಕ್ರಮಕ್ಕೆ ಹೋಗುವುದರ ಬಗ್ಗೆ ಖಾತ್ರಿ ಪಡಿಸಿಕೊಂಡಿದ್ದ.

“ಒಬ್ಬಾವಾ ಫಿನ್ ಲೆಂಡ್ ನೆವಾ.. ಸ್ಟಿವರ್ಟ್ ಪೆಟ್ರಿಕ್ ಸನ್ ಅಂತಾ.. ಭಾರೀ ಛೋಲೊ ರಿಸರ್ಚ್ ಮಾಡ್ಯಾನ.. ಪಿ ಎಚ್ ಡಿ ಸಲವಾಗಿ ಶಿಷ್ಯಂದರು ಬೇಕು ಅಂತ ಅಡ್ವರ್ಟೈಸ್ ಹಾಕಿದ್ದ. ನಾನು ಮೇಲ್ ಮಾಡಿ ‘ಹೆಂಗಪಾ… ಏನಪಾ ನಿನ್ ಕತಿ?’ ಅಂತ ಕೇಳಿದ್ದೆ, ‘ನಿನ್ ರಿಸರ್ಚ್ ಮುಕಳಾರೆ ಚಂದ ಅದಾವು, ನಮ್ ಚಾನ್ಸ್ ಹೆಂಗ?’ ಅಂತ ಕೇಳಿದೆ. ಅದಕ್ಕ ‘ಮುಂದಿನ ತಿಂಗಳಾ ಬೆಂಗಳೂರಿಗ ಐಐಎಸ್ಸಿ ಕಡೆ ಬರಾಕತಿನಿ, ಕುಂತು ಮಾತಾಡನಾ’ ಅಂತಾ ಮೇಲ್ ಮಾಡ್ಯಾನ. ನೀ ಬಂದರ ಛೊಲೊ.. ನೀನು ಕೇಳಿಕ್ಯಾವಂತಿ” ಅಂತ ಪದೇ ಪದೇ ಅಲಾರಂಗಳನ್ನು ಮೊಳಗಿಸಿದ್ದ.

ಅದಾಗಲೇ ನನಗೆ ಕ್ಯಾಂಪಸ್ ಇಂಟರ್ ವ್ಯೂನಲ್ಲಿ ಕೆಲಸ ಸಿಕ್ಕಿತ್ತಾದರೂ ಸೇರಿಕೊಳ್ಳಲು ಒಂದು ತಿಂಗಳು ಸಮಯವಿತ್ತು. ಕಾರ್ಯ ಕಟ್ಟಲೆ ಇಲ್ಲದೆ ನಾನೂ ಮಿಲಿಂದನ ಜೊತೆಗೂಡಲು ಒಪ್ಪಿಗೆ ಸೂಚಿಸಿದ್ದೆ.

ಇವತ್ತು ಹನ್ನೊಂದು ಗಂಟೆಗೆ ಸ್ಟಿವರ್ಟ್ ಪೆಟ್ರಿಕ್ ಸನ್ ನ ಜೊತೆ ಅಪಾಯಿಂಟ್ ಮೆಂಟ್ ಇತ್ತು. ಮುಂಜಾನೆ ಏಳಕ್ಕಾಗಲೇ ಮಿಲಿಂದ ಫೋನ್ ಮಾಡಿ ಎಬ್ಬಿಸಿದ್ದ. ನಾನು ತಿಂಡಿ ತಿಂದು ಹೊರಡುವಷ್ಟರಲ್ಲಿ ಮತ್ತೆರಡು ಫೋನ್ ಗಳು ಬಂದಿದ್ದವು. ಅವನು ಇದಾಗಲೇ ತಾನು ಮೆಜೆಸ್ಟಿಕ್ ನಲ್ಲಿ ನಿಂತಿದ್ದೇನೆ ಅಂತ ಫೋನ್ ಮಾಡಿದಾಗ ನಾನು ಮನೆ ಬಿಟ್ಟಿರಲಿಲ್ಲ. ಹಾಗಾಗಿ ಅವನ “ಸುಳ್ಳೇಪಳ್ಳ ಹೇಳಿಕೊಂಡು” ಎಂಬ ಆರೋಪದಲ್ಲಿ ಎಳ್ಳಷ್ಟೂ ಉತ್ಪ್ರೇಕ್ಷೆ ಇರಲಿಲ್ಲ.

ಮಿಲಿಂದನದು ದೊಡ್ಡ ದನಿ. ಆತ ಹಿಂದಿನ ಸೀಟಲ್ಲಿ ಕೂತು ನನಗೆ ಬೈಯುತ್ತಿದ್ದರೆ ಹೆಲ್ಮೆಟ್ ಒಳಗಿನಿಂದಲೂ ಸುತ್ತಿಗೆ ತೆಗೆದುಕೊಂಡು ಮೆದುಳಿಗೆ ಬಡಿದಂತೆ ಭಾಸವಾಗುತ್ತಿತ್ತು. ಯಾವುದಕ್ಕೂ ನನ್ನ ಹೆಲ್ಮೆಟ್ ನ ರೆಸೊನೆನ್ಸ್ ಮತ್ತು ಮಿಲಿಂದನ ದನಿಯ ಫ್ರಿಕ್ವೆನ್ಸಿ ಮ್ಯಾಚ್ ಆಗಿ ನನಗೆ ಅತಿಯೆಂಬಂತಹ ದೊಡ್ಡ ಸಪ್ಪಳ ಒಳಗಡೆ ಕೇಳುತ್ತಿತ್ತೇನೋ ಇದರ ಬಗ್ಗೆ ಸಮಯ ಸಿಕ್ಕಾಗ ಯೋಚಿಸುವುದು ಎಂದುಕೊಂಡೆ.

ಮಿಲಿಂದ ಹೆಚ್ಚುಹೊತ್ತು ಬೈಯಲು ಹೋಗಲಿಲ್ಲ. ಆತ ಸ್ಟಿವರ್ಟ್ ಪೆಟ್ರಿಕ್ ಸನ್ ಬಗ್ಗೆ ಹೆಚ್ಚಿನ ವಿಷಯ ಹಂಚಿಕೊಳ್ಳುವಲ್ಲಿ ಉತ್ಸುಕನಾಗಿದ್ದ. ಅವನ ರಿಸರ್ಚ್ ಗಳು, ಗ್ರಾಂಟ್ ಗಳು, ಹೊಸ ತಂತ್ರಜ್ಞಾನಗಳನ್ನು ಮಿಲಿಂದ ಉತ್ಸಾಹದಿಂದ ವಿವರಿಸುತ್ತಿದ್ದರೆ ನಾನು ವೇಗವಾಗಿ ಮಲ್ಲೇಶ್ವರಂ ಸಂಪಿಗೆ ರಸ್ತೆಯ ಮುಖಾಂತರ ಗಾಡಿ ಓಡಿಸುತ್ತಿದ್ದೆ. ಸ್ಯಾಂಕಿ ಕೆರೆಯ ಕಡೆಯಿಂದ ಬೀಸುವ ತಂಗಾಳಿಯಷ್ಟೇ ಚೆತೋಹಾರಿಯಾಗಿತ್ತು ಮಿಲಿಂದನ ವಿವರಣೆಗಳು. ಮಹಾರಾಣಿ ಅಮ್ಮಣ್ಣಿ ಕಾಲೇಜು ದಾಟಿಕೊಂಡು ಹರಹರಾ ಅನ್ನುವಷ್ಟರಲ್ಲಿ ಐ ಐ ಎಸ್ಸಿ ಯೊಳಗೆ ನನ್ನ ಗಾಡಿ ಪಾರ್ಕ್ ಆಗಿತ್ತು. ಆಗೆಲ್ಲ ಈಗಿನಂತೆ ಒಳಬರುವವರ ಬಳಿ ರಿಜಿಸ್ಟರ್ ಬರೆಸಿಕೊಳ್ಳುತ್ತಿರಲಿಲ್ಲ. ಭಯೋತ್ಪಾದಕ ದಾಳಿ ಆದಮೇಲೂ ಅಂತಹ ವಿಶೇಷ ಭದ್ರತೆಯೂ ಒದಗಲಿಲ್ಲ. ನಮ್ಮ ಭದ್ರತೆಯ ಮಹದುಪಕಾರವೆಂಬಂತೆ ರಿಜಿಸ್ಟರ್ ನಲ್ಲಿ ಹೆಸರು ಬರೆಸಿಕೊಳ್ಳುತ್ತಿದ್ದರು ಅಷ್ಟೇ. ಹೋಗುವಾಗ “ಒಸಾಮಾ ಬಿನ್ ಲಾಡೆನ್ ” ಅಂತ ಬರೆದು ಒಳಗೆ ಹೋಗಿದ್ದರೂ ಅವರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.

ಮಿಲಿಂದ ಗಾಡಿಯಿಂದ ಕೆಳಗಿಳಿದು “ಎಲೆಕ್ಟ್ರಿಕ್ ಡಿಪಾರ್ಟ್ ಮೆಂಟ್ ಹೆಂಗ ಗೊತೈತೆನಲೇ?” ಅಂದ.

“ಮೊದಲ ಹೇಳಾಕ ಬರಲಿಲ್ಲಲೇ ಹುಚ್ ಮಂಗ್ಯಾ.. ಹತ್ತು ಮ್ಯಾಲ” ಅಂತ ಹೇಳಿ ಮತ್ತೆ ಆತನನ್ನು ಕೂರಿಸಿಕೊಂಡು ಎಲೆಕ್ಟ್ರಿಕ್ ಡಿಪಾರ್ಟ್ ಮೆಂಟ್ ಕಡೆಗೆ ಗಾಡಿ ಓಡಿಸಿದೆ. ಸ್ಟಿವರ್ಟ್ ಪೆಟ್ರಿಕ್ ಸನ್ ಒಂದು ಮೀಟಿಂಗ್ ರೂಮಲ್ಲಿ ಕೂತಿರುತ್ತಾನೆ ಮತ್ತು ಆ ಕೋಣೆಯ ಹೆಸರು ಏನು ಎಂಬ ವಿವರಗಳು ಆತನ ಕಡೆಯಿಂದ ಹಿಂದಿನ ದಿನ ಬಂದ ಮೇಲ್ ನಿಂದ ಮಿಲಿಂದ ವಿವರಗಳನ್ನು ತಿಳಿದುಕೊಂಡಿದ್ದ. ಆ ಕೋಣೆಯನ್ನು ಹುಡುಕಿ ಬಾಗಿಲು ತಟ್ಟಿದೆವು.

ಕೆಂಪಾನುಕೆಂಪಗಿನ ಮುಖದ ಅಷ್ಟೇ ಕೆಂಪಾನುಕೆಂಪಗಿನ ರೇಷಿಮೆ ಜುಬ್ಬಾ ಧರಿಸಿದ ವ್ಯಕ್ತಿಯೊಬ್ಬ ಬಾಗಿಲು ತೆರೆದ. ಆತ ಬೇರೆ ದೇಶದವನೆಂದು ಚರ್ಮದಿಂದ ಗೊತ್ತಾಯಿತಾದರೂ ಇಲ್ಲಿನ ಸಂಸ್ಕೃತಿಗೆ ಗೌರವ ತೋರಲೆಂದೋ ಅಥವಾ ಇಲ್ಲಿನ ಪರಂಪರೆಯನ್ನು ಅನುಭವಿಸುವ ಹಂಬಲದಿಂದಲೋ ಹಬ್ಬಕ್ಕೆ ತಯಾರಾದವನಂತೆ ಕೆಂಬಣ್ಣದ ಜುಬ್ಬಾ ಧರಿಸಿದ್ದ.

ಮಿಲಿಂದ “ಹೆಲೋ.. ಡಾ. ಸ್ಟಿವರ್ಟ್ ಪೆಟ್ರಿಕ್ ಸನ್ ?” ಅಂತ ಮಿಲಿಂದ ಗೌರವದಿಂದ ಪ್ರಶ್ನಿಸಿದ.

“ಯ್ಯೇ.. ಅಂಡ್ ಯೂ?” ಅಂತ ಆ ವ್ಯಕ್ತಿ ಕೇಳಿದರು.

“ಐ ಯಾಮ್ ಮಿಲಿಂದ್ ಸರ್.. ಮೇಲ್ಡ್ ಯು” ಅಂದ ಮಿಲಿಂದ.

“ಓಹ್… ಯುವರ್ ಅಪಾಯಿಂಟ್ ಮೆಂಟ್ ಅಟ್ ಎಲೆವೆನ್ ಒ ಕ್ಲಾಕ್.. ನೌ ಇಟ್ಸ್ ಎಲೆವೆನ್ ತ್ರೀ.. ಯು ಆರ್ ತ್ರೀ ಮಿನಿಟ್ ಲೇಟ್.. ಐ ಕಾಂಟ್ ಎಂಟರ್ ಟೇನ್ ಯು!” ಅಂದ.

ಮಿಲಿಂದನದು ದೊಡ್ಡ ದನಿ. ಆತ ಹಿಂದಿನ ಸೀಟಲ್ಲಿ ಕೂತು ನನಗೆ ಬೈಯುತ್ತಿದ್ದರೆ ಹೆಲ್ಮೆಟ್ ಒಳಗಿನಿಂದಲೂ ಸುತ್ತಿಗೆ ತೆಗೆದುಕೊಂಡು ಮೆದುಳಿಗೆ ಬಡಿದಂತೆ ಭಾಸವಾಗುತ್ತಿತ್ತು. ಯಾವುದಕ್ಕೂ ನನ್ನ ಹೆಲ್ಮೆಟ್ ನ ರೆಸೊನೆನ್ಸ್ ಮತ್ತು ಮಿಲಿಂದನ ದನಿಯ ಫ್ರಿಕ್ವೆನ್ಸಿ ಮ್ಯಾಚ್ ಆಗಿ ನನಗೆ ಅತಿಯೆಂಬಂತಹ ದೊಡ್ಡ ಸಪ್ಪಳ ಒಳಗಡೆ ಕೇಳುತ್ತಿತ್ತೇನೋ ಇದರ ಬಗ್ಗೆ ಸಮಯ ಸಿಕ್ಕಾಗ ಯೋಚಿಸುವುದು ಎಂದುಕೊಂಡೆ.

ನಮಗೆ ನಿರಾಶೆಯಾಯಿತು. “ಪ್ಲೀಸ್ ರಿಕನ್ಸಿಡರ್ .. ವಿ ಹ್ಯಾವ್ ಕಮ್ ಲಾಂಗ್ ವೇ” ಅಂತ ನಾನು ವಿನಂತಿಸಿದೆ. ನನ್ನಿಂದ ತಡವಾಗಿ ಮಿಲಿಂದ ಇದನ್ನು ಎದುರು ನೋಡಬೇಕಾಯಿತು ಎಂಬ ಪಾಪಪ್ರಜ್ಞೆಯೂ ನನ್ನಲ್ಲಿತ್ತು. ಆತ ಒಮ್ಮೆ ತಮ್ಮ ಕೈಗಡಿಯಾರ ನೋಡಿಕೊಂಡು “ನಾನು ಡಾ.ಶರ್ಮಾ ರನ್ನು ಹನ್ನೊಂದು ಹತ್ತಕ್ಕೆ ನೋಡಬೇಕಿದೆ. ಹನ್ನೊಂದು ಮೂವತ್ತಕ್ಕೆ ಮೀಟಿಂಗ್ ಮುಗಿಯುತ್ತದೆ. ಅದರ ನಂತರ ಐದು ನಿಮಿಷ ಬಿಡುವಿರುತ್ತೇನೆ. ಹನ್ನೊಂದು ಮೂವತೈದಕ್ಕೆ (restructure)ಹೊರಡಬೇಕು, ಆಗಲಾದರೂ ತಡ ಮಾಡದೇ ಬನ್ನಿ” ಅಂತ ಕೃಪೆ ತೋರಿಸಿದ.

ನಾವು ಧನ್ಯವಾದಗಳನ್ನು ಕಕ್ಕಿಕೊಂಡು ಆಚೆ ಹೊರಟೆವು. ನಾನು ಎಲೆಕ್ಟ್ರಿಕ್ ಡಿಪಾರ್ಟ್ ಮೆಂಟ್ ನ ಕಟ್ಟಡವನ್ನು ದಾಟುವವರೆಗೂ ಮಿಲಿಂದ ಏನೆಂದರೆ ಏನೂ ಮಾತನಾಡಲಿಲ್ಲ. ಆತನ ಮೌನ ಭೀಕರ ಬಿರುಗಾಳಿಯ ಮುಂಚಿನ ಶಾಂತಿಯನ್ನು ಪ್ರತಿಮೆಯಾಗಿಸಿದಂತಿತ್ತು. ಬಹುಷಃ ಹೊರಗೆ ಹೋಗುತ್ತಿದ್ದಂತೆ ತಡಮಾಡಿದ್ದಕ್ಕಾಗಿ ನನ್ನ ಮೇಲೆ ಹರಿಹಾಯುವ ಎಲ್ಲಾ ಸಾಧ್ಯತೆಗಳನ್ನು ಕಲ್ಪಿಸಿಕೊಳ್ಳತೊಡಗಿದೆ.

ಕಟ್ಟಡದಿಂದ ಹೊರಬಂದು ನಾಕು ಹೆಜ್ಜೆ ಇಡುತ್ತಿದ್ದಂತೆ,
“ಹಡಶೀ ಮಗಾನಪಾ ಅವನವ್ನ.. ಬರೇ ಮೂರು ನಿಮಿಷ ತಡ ಆತೂ ಅಂದರ ಮುಕಳಾಗ ಗಳಾ ಹೆಟ್ಟಿದಂಗ ಮಾಡ್ತಾನ ಭೋಸಡಿ ಮಗಾ…. ಮೂರು ನಿಮಿಷ ತಡಾ ಅಂತ ಹೆಂಗ ಹೇಳಿದ್ನಪಾ ಅಂವಾ? ಅಟಾಮಿಕ್ ವಾಚ್ ಕಟಿಗೆಂಡ ತಿರಗ್ಯಾಡ್ತಾನಾ ಡ್ಯಾಶ್ ಮಗಾ? ನನ್ನ ವಾಚ್ ನೆಗ ಹನ್ನೊಂದಕ್ಕ ಇನ್ನು ಐದು ನಿಮಿಷ ಐತೆಪಾ.. ಯಾವ ದೇಶಕ್ಕ ಬಂದಿನಿ ಹೆಂಗ ನಡಕಾಬಕು ಅನ್ನ ಕಾಮನ್ ಸೆನ್ಸ್ ಇಲ್ಲ ಮಿಂಡ್ರಿ ಮಕ್ಳಿಗೆ” ಅಂತ ಬೈಯತೊಡಗಿದ.

ನಾನು ಇಷ್ಟು ಧೈರ್ಯವಾಗಿ ಇವೆಲ್ಲ ಬೈಗುಳಗಳನ್ನು ಬರೆದಿರುವುದಕ್ಕೆ ಪ್ರಾಣೇಶ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸಬೇಕು. ತಮ್ಮ ರಿಗ್ರೆಸಿವ್ ಸ್ಟಾಂಡ್ ಅಪ್ ಕಾಮೆಡಿಯಿಂದ ಜನರಿಗೆಲ್ಲ ಉತ್ತರ ಕರ್ನಾಟಕ ಅಂದರೆ ಬೈಗುಳ, ಬೈಗುಳ ಅಂದರೆ ಉತ್ತರ ಕರ್ನಾಟಕ ಎಂಬ ಮಾನಸಿಕ ಪೂರ್ವಸಿದ್ಧತೆಗೆ ಜನರನ್ನು ಪಕ್ವ ಮಾಡಿಬಿಟ್ಟಿದ್ದಾರೆ. ಹೀಗಾಗಿ ಇವೆಲ್ಲ ಬೈಗುಳಗಳು ಮಾತುಗಳು ಜನಸಾಮಾನ್ಯರ ನಡುವೆ ನಾರ್ಮಲೈಸ್ ಆಗಿ ಹೋಗಿವೆ. ‘ನುಡಿದರೆ ಮುತ್ತಿನ ಹಾರದಂತಿರಬೇಕು’ ಎಂದು ಹೇಳಿದ ಬಸವಣ್ಣ ಹುಟ್ಟಿದ್ದೂ ಉತ್ತರ ಕರ್ನಾಟಕದಲ್ಲೇ. ವೇಶ್ಯೆಯರನ್ನು ಶರಣೆಯರೆಂದು ಕರೆದು ಆ ವೃತ್ತಿಗೂ ಘನತೆಯನ್ನು ತಂದ ಕೊಟ್ಟ ಶರಣ ಚಳುವಳಿ ನಡೆದದ್ದು ಉತ್ತರ ಕರ್ನಾಟಕದಲ್ಲೇ. ತಮ್ಮ ಗೆಳೆಯರ ಒಳ್ಳೆಯತನಕ್ಕೂ ಕೆಟ್ಟತನಕ್ಕೂ ಅವರ ತಾಯಿಯ ಚಾರಿತ್ರ್ಯವಧೆಯನ್ನೇ ಗುರಿಯಾಗಿಸಿಕೊಂಡ ಬೈಗುಳಗಳು ಎಲ್ಲಾ ಜಾತಿವರ್ಗಗಳಲ್ಲೂ ಸಹ ಹೇಗೆ ಮತ್ತು ಯಾವ ಸಮಯದಲ್ಲಿ ಹಾಸುಹೊಕ್ಕವು ಎಂಬುದರ ಬಗ್ಗೆ ಒಂದು ವಿಷದವಾದ ಸಂಶೋಧನೆ ನಡೆಯಬೇಕಿದೆ.

ನಾವು ಮೈಸೂರಲ್ಲಿ ಓದುವಾಗಲೂ ಮೊದಮೊದಲು ನಮ್ಮ ಭಾಷೆಯನ್ನು ಕೇಳಿ ಜೊತೆಗೆ ಓದುತ್ತಿದ್ದವರೆಲ್ಲ ಹೌಹಾರಿ ಬೀಳುತ್ತಿದ್ದರು. ಕೆಲವೇ ದಿನಗಳಲ್ಲಿ ಅದು ಅವರಿಗೆ ಅಭ್ಯಾಸವಾಗಿ ಹೋಯಿತು. ಅದೆಷ್ಟರ ಮಟ್ಟಿಗೆಂದರೆ ನಾವು ಉತ್ತರ ಕರ್ನಾಟಕದ ಗೆಳೆಯರು ಒಬ್ಬರನ್ನೊಬ್ಬರು ಗೌರವದಿಂದ ಮಾತನಾಡಿಸಿದರೆ ನಾವು ಪರಸ್ಪರ ಜಗಳವಾಡಿಕೊಂಡಿದ್ದೇವೆ ಅಂತಲೇ ತಿಳಿಯುತ್ತಿದ್ದರು. ನಮ್ಮಲ್ಲಿ ಅತ್ಯಂತ ಪಾಪದ ಶರತ್ ಎಂಬ ಹುಡುಗನಿದ್ದ. ಆತ ಕ್ಲಾಸ್ ಒಳಗೆ ಬರುವಾಗ “ಲೇ ಶರತ್ತಾ ಕದಾ ಎಳಕಂಡು ಬಾರಲೇ” ಅಂದ್ವಿ. ಆತ “ಕದಾ..? ಏನಮ್ಮಾ ಹಂಗಂದರೆ? ಏನು ಎಳೀಬೇಕು ಗೊತ್ತಾಗಲಿಲ್ಲ ಕಣಮ್ಮಾ” ಅಂದ.

ನಾವು “ಕದಾಲೇ ಕದಾ.. ಬಾಗಲಾ.. ಬಾಗಲಾ ಮುಚ್ಕೆಂಡು ಬಾ ಅಂತಾ ಲೇ” ಅಂದೆವು.

“ಓಹ್… ಹಾಗಾ? ಡೋರ್ ಕ್ಲೋಸ್ ಮಾಡು ಅಂತ ನೀಟಾಗಿ ಕನ್ನಡದಲ್ಲಿ ಹೇಳ್ರಮ್ಮಾ” ಅಂದ.

ಆತನ ಮಾತನ್ನು ಕೇಳಿ ಇದ್ದಕ್ಕಿದ್ದಂತೆ ಅಪ್ಪಟ ಕನ್ನಡ ಸಂಸ್ಕೃತಿಯ ಏಕೈಕ ವಾರಸುದಾರರು ನಾವೇ ಎಂಬಂತಹ ಭಾವನೆ ನಮ್ಮಲ್ಲಿ ಬಲವಾಗಿ ಒಡಮೂಡಿತು. ಸಿಡ್ನಿ ತಲುಪಿದ ಮೇಲೂ ನನ್ನ ಉತ್ತರಕರ್ನಾಟಕ ನುಡಿನಂಟು ಉಳಿದುಕೊಂಡಿದೆಯೆಂದರೆ ನಮ್ಮಲ್ಲಿ ಶರತ್ತನಂತಹ ಸಭ್ಯರು ಮೂಡಿಸಿದ ಈ ಭಾವನೆಯೂ ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ.

ಮಿಲಿಂದ ಹಿಂಗೆ ಬೆಂಕಿ ಬೆಂಕಿ ಉಗುಳುತ್ತಿದ್ದಾಗ ಅವನನ್ನು ಸಮಾಧಾನ ಪಡಿಸಲೆಂದು ನಾನು “ಆ ದೇಶದೊಳಾಗೆಲ್ಲ ಟೈಮಿಗೆ ಭಾಳ ಮಹತ್ವ ಕೊಡ್ತಾರಲೇ ಅದಕ್ಕ ಅವರೆಲ್ಲಾ ಅಷ್ಟ ಮುಂದ ಹೋಗ್ಯಾರ.” ಅಂತ ಹೇಳಲು ಪ್ರಯತ್ನಿಸಿದೆ.
ಮಿಲಿಂದನ ದನಿ ಮತ್ತೆ ಮೇಲೇರಿತು.

“ಸುಮ್ಮನ ಕುಂಡರಲೇ ಯಾವನವಾ..ಟಾಯಮ್ಮಂತ ಟಾಯಮ್ಮು.. ಮೂರು ನಿಮಿಷಕ್ಕ ಏನು ಮುಳುಗಿ ಹೊಕೆತಲೇ? ಇವಾ ಹುಟ್ಟಬೇಕಾರ ಮೂರು ನಿಮಿಷ ತಡಾ ಆತು, ನಿಮ್ಮವ್ವನ ಹೊಟ್ಟಿ ಒಳಗ ವಾಪಸು ಹೋಗು ಅಂತ ಕಳಸಿದರೇನು? ಟಾಯ್ಲೆಟ್ಟಿಗೆ ಕುಂತಾಗ ತಡಾ ಆತು ಅಂತ ಹೇಳಿ ವಾಪಸು ದೊಡ್ಡ ಕರುಳೊಳಗ ಇಟಗಂಡ ಅಡ್ಡಾಡತನೇನು? ಇಂತಾ ದೇಶಕ್ಕ ಬಂದಾಗೆಲ್ಲ ಇವೆಲ್ಲ ಗಾಂಚಾಲಿ ಬಿಡಬೇಕಪಾ.. ಸಲ್ಪ ಹೆಚ್ಚು ಕಡಿಮಿ ಆಕ್ಕತಿ.. ಅವನವ್ನ”
ಅಂದ.

ಅಷ್ಟರಲ್ಲಿ ಹನ್ನೊಂದುವರೆ ಆಗುತ್ತಿತ್ತು. ಸ್ಟಿವರ್ಟ್ ಪೆಟ್ರಿಕ್ಸನ್ ಮತ್ತೆ ತಡವಾದರೆ ಬೈದು ವಾಪಸು ಕಳಿಸಿಯಾನೆಂದು ಬೇಗನೆ ಹೋಗಿ ಐದು ನಿಮಿಷ ಮುಂಚೆಯೇ ಬಾಗಿಲ ಮುಂದೆ ನಿಂತೆವು. ಸರಿಯಾಗಿ ಹನ್ನೊಂದು ಮೂವತ್ತಕ್ಕೆ ಬಾಗಿಲು ಬಡಿದೆವು. ಸ್ಟಿವರ್ಟ್ ಪೆಟ್ರಿಕ್ ಸನ್ ಬಾಗಿಲು ತೆರೆದು ನಗುಮೊಗದಿಂದ ಬರಮಾಡಿಕೊಂಡ. ಒಳಗೆ ಹೋದಾಗ ಜೊತೆಗೆ ಯಾರೂ ಇರಲಿಲ್ಲ. ಒಬ್ಬನೇ ಇದದ್ದು ನೋಡಿ ಅದಾಗಲೇ ಹನ್ನೊಂದು ಹತ್ತಕ್ಕೆ ಮೀಟಿಂಗ್ ಇದ್ದವರ ಮೀಟಿಂಗ್ ಮುಗಿಸಿಕೊಂಡು ವಾಪಸು ಹೋಗಿರಬೆಕೆಂದುಕೊಂಡೆವು. ಸ್ಟಿವರ್ಟ್ ಪೆಟ್ರಿಕ್ ಸನ್ ನಮ್ಮೊಡನೆ ಹರಟತೊಡಗಿದ. ಸಾಕಷ್ಟು ಸಂಶೋಧನೆಯ ವಿಚಾರಗಳನ್ನೂ, ಬರಲಿರುವ ಪ್ರಾಜೆಕ್ಟ್ ಗಳ ವಿವರಗಳನ್ನೂ ಮಾತಾಡಿದ. ಐದು ನಿಮಿಷಗಳಲ್ಲಿ ಮುಗಿಯಬೇಕೆಂದುಕೊಂಡಿದ್ದು ಹದಿನೈದಿಪ್ಪತ್ತು ನಿಮಿಷಗಳವರೆಗೆ ಎಳೆಯಿತು. ಹನ್ನೊಂದು ಮೂವತೈದಕ್ಕೆ ಹೊರಡಬೇಕು ಅಂತ ಹೇಳಿದವನು ಹನ್ನೆರಡಾಗುತ್ತಾ ಬಂದರೂ ನಮ್ಮೊಡನೆ ಮಾತಾಡುತ್ತಾ ಕೂತಿದ್ದನ್ನು ನೋಡಿ ನಮಗೆ ಅಚ್ಚರಿಯಾಯಿತು. ಇನ್ನೇನು ನಾವೂ ಮಾತು ಮುಗಿಸಿ ಹೊರಡಬೇಕೆನ್ನುವಷ್ಟರಲ್ಲಿ ಸೂಟ್ ಧಾರಿಯಾದ ಹಿರಿಯ ವ್ಯಕ್ತಿಯೊಬ್ಬರು ಒಳಬಂದು ಸ್ಟಿವರ್ಟ್ ಪೆಟ್ರಿಕ್ ಸನ್ ನ ಕೈ ಕುಲುಕಿ
“ನಾನು ಡಾ.ಶರ್ಮಾ. ನಿಮ್ಮನ್ನು ನಾನು ಹನ್ನೊಂದು ಹತ್ತಕ್ಕೆ ಭೇಟಿಯಾಗಬೇಕಿತ್ತು. ತಡವಾದದ್ದಕ್ಕೆ ಕ್ಷಮಿಸಿ” ಅಂತ ಅಂದರು.

ಸ್ಟಿವರ್ಟ್ ಪೆಟ್ರಿಕ್ ಸನ್ ನಮ್ಮ ಕಡೆ ಪೆಚ್ಚು ಮೊರೆಯಿಂದ ನೋಡಿ ನಮ್ಮ ಕೈಕುಲುಕಿ ಹೆಚ್ಚಿನ ಮಾಹಿತಿಗಾಗಿ ಮೇಲ್ ಮಾಡಿ ಅಂತ ಹೇಳಿ ಬೀಳ್ಕೊಟ್ಟರು. ನಂತರ ಸೂಟುದಾರಿಯೊಂದಿಗೆ ಮಾತುಕತೆಗೆ ಕುಳಿತರು.

ಡಿಪಾರ್ಟ್ ಮೆಂಟ್ ನಿಂದ ಹೊರಬರುತ್ತಿದ್ದಂತೆ ಮಿಲಿಂದ ಮುಗುಳ್ನಗುತ್ತಾ
“ನೋಡಲೇ ಹರ್ಷ್ಯಾ.. ನಾ ಹೇಳಿಲ್ಲ ಆಗಲೇ.. ಬರೇ ಇಂತಾ ಹಲಕಟಗಿರಿ ಈ ಸೂಳೆಮಕ್ಳದು.. ನಾವು ಇಲ್ಲಿ ಅವನ ಸಲವಾಗಿ ಕಾಯಕೆಂತ ನಾಯಿ ತಿರುಗಾಡ್ದಂಗ ಹೊರಗ ತಿರುಗಾಡತಿದ್ರ ಒಳಗ ಕಾಯ್ಕೆಂತ ಗೂಗಿ ಕುಂತಂಗ ಒಬ್ಬನಾ ಕುಂತಿದ್ದ ಅಂವಾ… ಸುಮ್ಮನ ಬಿಟಗಂಡಿದ್ರ ಇಬ್ಬರ ಟಾಯಮ್ಮೂ ಸಮಾ ಬಳಕೀಗೆ ಬರತಿತ್ತು..” ಅಂದ.