ಈಗ ನಾನು ಇಂಗ್ಲಿಷ್ ಕವಿತೆಯನ್ನು ವಾಚಿಸುವಾಗ, ನನ್ನ ಅಮ್ಮ ಅನ್ನುತ್ತಾಳೆ ನನ್ನ ಧ್ವನಿ ತಂದೆಯ ಧ್ವನಿಯಂತೆಯೇ ಇರುತ್ತದೆ ಎಂದು. ತಂದೆಯೇ ನನಗೆ ನನ್ನ ಅರಿವಿಲ್ಲದೆಯೇ ತತ್ವಜ್ಞಾನದ ಮೊದಲ ಪಾಠಗಳನ್ನು ಕಲಿಸಿದುದು ಕೂಡ. ನಾನಿನ್ನೂ ಚಿಕ್ಕವನಿದ್ದಾಗ, ಝೀನೋನ ವಿರೋಧಾಭಾಸಗಳನ್ನು ಚದುರಂಗದ ಮಣೆಯ ಸಹಾಯದಿಂದ ತೋರಿಸಿಕೊಟ್ಟುದು – ಎಖಿಲಸ್ ಮತ್ತು ಆಮೆ, ಬಾಣದ ನಿಶ್ಚಲ ಹಾರಾಟ, ಚಲನೆಯ ಅಸಾಧ್ಯತೆ. ನಂತರ, ಬಕ್ರ್ಲಿಯ ಹೆಸರು ಹೇಳದೆ, ನನಗವರು ಆದರ್ಶವಾದದ ಮೂಲ ತತ್ವಗಳನ್ನು ಹೇಳಿಕೊಡಲು ಎಲ್ಲಾ ಪ್ರಯತ್ನವನ್ನೂ ಮಾಡಿದರು.
ಅರ್ಜೆಂಟೀನಾದ ಖ್ಯಾತ ಕಥೆಗಾರ ಜಾರ್ಜ್ ಲೂಯಿಸ್ ಬೋರ್ಹೆಸ್ ನ ಆತ್ಮಕಥಾ ರೂಪದ ಪ್ರಬಂಧವನ್ನು ಕೆ.ವಿ. ತಿರುಮಲೇಶರು ಕನ್ನಡಕ್ಕೆ ತಂದಿದ್ದಾರೆ. ಪ್ರತಿ ಶನಿವಾರ ಈ ಪ್ರಬಂಧದ ಭಾಗಗಳು ಕೆಂಡಸಂಪಿಗೆಯಲ್ಲಿ ಪ್ರಕಟವಾಗುತ್ತವೆ.

 

ಕುಟುಂಬ ಮತ್ತು ಬಾಲ್ಯ

ನನ್ನ ಮೊತ್ತ ಮೊದಲ ನೆನಪುಗಳು ಕೆಸರು ನೀರಿನ, ನಿಧಾನ ಗತಿಯ ರೊಯೋ ದ ಲ ಪ್ಲಾಟ್ಝಾದ ಪೂರ್ವ ಅಥವಾ ಪಶ್ಚಿಮ ದಂಡೆಯತ್ತ ಹಿಂದಕ್ಕೆ – ನಾವು ಸುದೀರ್ಘವೂ ಆಲಸಿಯೂ ಆದ ರಜಾದಿನಗಳನ್ನು ನನ್ನ ಮಾವ ಫ್ರಾನ್ಸಿಸ್ಕೋ ಹೇಡೋನ ವಿಲ್ಲಾದಲ್ಲಿ ಕಳೆದಿದ್ದ ಮೋಂಟಿವಿಡಿಯೋಕ್ಕೆ – ಹೋಗುತ್ತವೆಯೋ, ಅಥವಾ ಬ್ಯೂನೋಸ್ ಏರಿಸ್ ಗೆ ಹೋಗುತ್ತವೆಯೋ ನಾನು ಹೇಳಲಾರೆ. ನಾನಲ್ಲಿ (ಬ್ಯೂನೋಸ್ ಏರಿಸ್ನಲ್ಲಿ) ಹುಟ್ಟಿದೆ, ಆ ನಗರದ ಹೃದಯ ಭಾಗದಲ್ಲಿ, 1899ರಲ್ಲಿ, ಟುಕುಮನ್ ಬೀದಿಯಲ್ಲಿ, ಸುಯಿಪಾಚಾ ಮತ್ತು ಎಸ್ಮೆರಾಲ್ಡಾದ ನಡುವೆ, ನನ್ನ ತಾಯಿಯ ತವರಿಗೆ ಸೇರಿದ್ದ ಒಂದು ಚಿಕ್ಕ, ಸಾಧಾರಣ ಮನೆಯಲ್ಲಿ. ಆ ಕಾಲದ ಅನೇಕ ಮನೆಗಳ ಹಾಗೆ, ಅದಕ್ಕೊಂದು ಮಟ್ಟಸವಾದ ಮಾಡು ಇತ್ತು; ಝಗೂಡನ್ ಎಂದು ಕರೆಯುವ ಒಂದು ನೀಳವಾದ ಅರ್ಧವೃತ್ತಾಕಾರದ ಮುಂಬಾಗಿಲು; ನಾವು ನೀರು ತೆಗೆಯುತ್ತಿದ್ದ ಒಂದು ನೀರಿನ ತೊಟ್ಟಿ; ಮತ್ತು ಎರಡು ಒಳಾಂಗಣಗಳು. ಬೇಗನೆ ನಾವು ಪಲೇರ್ಮೋ ಹೊರವಲಯಕ್ಕೆ ಸ್ಥಳಾಂತರ ಮಾಡಿರಬೇಕು, ಯಾಕೆಂದರೆ ನನಗೆ ಇನ್ನೊಂದು ಮನೆಯ ಮೊದಲ ನೆನಪುಗಳಿವೆ. ಅದಕ್ಕೂ ಎರಡು ಒಳಾಂಗಣಗಳಿದ್ದುವು, ಮತ್ತು ಒಂದು ಉದ್ಯಾನ, ಅಲ್ಲೊಂದು ಎತ್ತರದ ಗಾಳಿಯಂತ್ರದ ಪಂಪು, ಉದ್ಯಾನದ ಆಚೆ ಬದಿಯಲ್ಲಿ ಒಂದಷ್ಟು ಖಾಲಿ ಜಾಗ. ಆ ಕಾಲದಲ್ಲಿ ಪಾಲೆರ್ಮೋ – ನಾವು ನೆಲಸಿದ್ದ ಪಾಲೆರ್ಮೋ, ಮತ್ತು ಸೆರ್ರಾನೋ ಹಾಗೂ ಗ್ವಾಟೆಮಾಲಾ – ಶಹರದ ಕೊಳಕಾದ ಉತ್ತರ ಸೆರಗಿನಲ್ಲಿತ್ತು. ಅಲ್ಲಿ ತಾವು ವಾಸಿಸುತ್ತಿದ್ದೇವೆ ಎಂದು ಹೇಳಲು ಹೇಸುತ್ತಿದ್ದ ಹಲವು ಜನ ತಾವು ಉತ್ತರ ವಾಡೆಯಲ್ಲಿ ವಾಸಿಸುತ್ತಿದ್ದೇವೆ ಎಂದು ಸ್ವಲ್ಪ ನಿರುತ್ಸಾಹದಿಂದಲೆ ಹೇಳುತ್ತಿದ್ದರು.

ನಮ್ಮ ಬೀದಿಯಲ್ಲಿದ್ದ ಕೆಲವೇ ಮಹಡಿ ಮನೆಗಳಲ್ಲಿ ಒಂದರಲ್ಲಿ ನಾವು ವಾಸಿಸುತ್ತಿದ್ದೆವು. ಉಳಿದ ನೆರೆಕರೆ ಎತ್ತರವಿಲ್ಲದ ಗುಡಿಸಲುಗಳಿಂದಲೂ ಖಾಲಿ ಸ್ಥಳಗಳಿಂದಲೂ ಮಾಡಲ್ಪಟ್ಟಿತ್ತು. ಈ ಜಾಗವನ್ನು ನಾನು ಹಲವು ಬಾರಿ ಕೊಳಚೆ ಪ್ರದೇಶವೆಂದು ಕರೆದಿದ್ದೇನೆ, ಆದರೆ ನಾನು ಆ ಪದವನ್ನು ನಿಖರವಾದ ಅಮೇರಿಕನ್ ಅರ್ಥದಲ್ಲಿ ಬಳಸಿದ್ದಲ್ಲ. ಪಾಲೆರ್ಮೋದಲ್ಲಿ ಹರಕು ಮುರುಕಾದ ಮರ್ಯಾದಸ್ಥರು ಹೇಗೋ ಹಾಗೆ ಅವರಿಗಿಂತ ಹೆಚ್ಚು ಅನಪೇಕ್ಷಿತರಾದವರೂ ವಾಸಿಸುತ್ತಿದ್ದರು. ಗೂಂಡಾಗಳದ್ದೂ ಒಂದು ಪಾಲೆರ್ಮೋ ಇತ್ತು, ಅದನ್ನು ಕಾಂಪಾದ್ರಿತೋಸ್ ಎಂದು ಕರೆಯುತ್ತಿದ್ದರು; ಅವರು ಚೂರಿ ಕಾಳಗಕ್ಕೆ ಪ್ರಸಿದ್ಧರು, ಆದರೆ ಈ ಪಾಲೆರ್ಮೋ ನನ್ನ ಕಲ್ಪನಾವಿಲಾಸವನ್ನು ಸೆರೆಹಿಡಿದುದು ತಡವಾಗಿ, ಯಾಕೆಂದರೆ ನಾವು ಹರಸಾಹಸ ಪಟ್ಟಿದ್ದೆವು – ನಮ್ಮ ಗೆಲುವಿನ ಹರಸಾಹಸ – ಅದನ್ನು ಕಡೆಗಣಿಸುವುದಕ್ಕೆ. ನಮ್ಮ ನೆರೆಯ ಎವರಿಸ್ಟೋ ಕರೀಗೋನಂತಾಗದೆ, ಯಾಕೆಂದರೆ ಅಲ್ಲಿ ಪಕ್ಕದಲ್ಲೇ ಮಲಗಿದ್ದ ಸಾಹಿತ್ಯಿಕ ಸಾಧ್ಯತೆಗಳನ್ನು ಶೋಧಿಸಿದ ಮೊದಲ ಅರ್ಜೆಂಟೀನಿಯನ್ ಕವಿ ಅವನು. ನನಗಾದರೆ, ಕಂಪಾದ್ರಿತೋಸ್ ಗಳ ಅಸ್ತಿತ್ವದ ಬಗ್ಗೆ ಗೊತ್ತೇ ಇರಲಿಲ್ಲ, ಕಾರಣ ನಾನಿರುತ್ತಿದ್ದುದು ಹೆಚ್ಚಾಗಿ ಮನೆಯೊಳಗಡೆಯೇ.

ನನ್ನ ತಂದೆ, ಜಾರ್ಜ್ ಗಿಲೆರ್ಮೋ ಬೋರ್ಹೆಸ್ ವಕೀಲರಾಗಿ ಕೆಲಸ ಮಾಡುತ್ತಿದ್ದರು. ಅವರೊಬ್ಬ ತಾತ್ವಿಕ ಅರಾಜಕ ವಾದಿಯಿದ್ದರು – ಸ್ಪೆನ್ಸರ್ನ ಶಿಷ್ಯ – ಮತ್ತು ನಾರ್ಮಲ್ ಸ್ಕೂಲ್ ಫಾರ್ ಮಾಡರ್ನ್ ಲ್ಯಾಂಗ್ವೇಜಸ್ ನಲ್ಲಿ ಮನೋವಿಜ್ಞಾನದ ಅಧ್ಯಾಪಕರೂ ಆಗಿದ್ದರು. ಪಾಠ ಪಟ್ಟಿಯಲ್ಲಿ ಅವರು ವಿಲಿಯಂ ಜೇಮ್ಸ್ ನ ಸಂಕ್ಷಿಪ್ತ ಮನೋವಿಜ್ಞಾನ ಪುಸ್ತಕವನ್ನು ಸೇರಿಸಿಕೊಂಡಿದ್ದರು. ನನ್ನ ತಂದೆಯ ಇಂಗ್ಲಿಷ್ ಗೆ ಕಾರಣ, ಅವರ ತಾಯಿ ಫ್ರಾನ್ಸೆಸ್ ಹಸ್ಲಾಮ್ ಳ ಅಕ್ಕ ಜಾರ್ಜ್ ಸುವರೆಝ್ ಎಂಬ ಹೆಸರಿನ ಒಬ್ಬ ಇಟಾಲಿಯನ್ ಯೆಹೂದಿ ಎಂಜಿನಿಯರನ್ನ ಮದುವೆಯಾಗಿದ್ದಳು; ಕುದುರೆ ಹೂಡಿದ ಟ್ರಾಮ್ ಗಾಡಿಗಳನ್ನು ಮೊದಲು ಅರ್ಜೆಂಟೀನಾಕ್ಕೆ ತಂದುದು ಈತನೇ; ಅವರು ಅರ್ಜೆಂಟೀನಾದಲ್ಲಿ ನೆಲಸಿದರಲ್ಲದೆ, ಫ್ಯಾನಿಯನ್ನು ಅಲ್ಲಿಗೆ ಕರೆಸಿಕೊಂಡರು. ಈ ಸಾಹಸದ ಕುರಿತಾದ ಒಂದು ಕತೆ ನನಗೆ ನೆನಪಿಗೆ ಬರುತ್ತದೆ. ಸುವರೆಝ್ ಆಂತ್ರೆ ರಿಯೋಸ್ ನಲ್ಲಿ ಜನರಲ್ ಉಖ್ರ್ವಿಝನ ‘ಅರಮನೆ’ ಅತಿಥಿಯಾಗಿದ್ದರು, ಮತ್ತು ದುರದೃಷ್ಟವಶಾತ್ ಮೊದಲ ಇಸ್ಪೀಟ್ ಆಟದಲ್ಲಿ ಈ ಜನರಲರ ವಿರುದ್ಧ ಗೆದ್ದುಬಿಟ್ಟರು; ಜನರಲ್ ಆ ಪ್ರಾಂತದ ನಿಷ್ಠುರ ಸರ್ವಾಧಿಕಾರಿಯಾಗಿದ್ದ ಹಾಗೂ ಕೊರಳು ಕೊಯ್ಯವುದಕ್ಕೂ ಹೇಸುವವನಿರಲಿಲ್ಲ. ಆಟ ಮುಗಿದ ಮೇಲೆ ಅಲ್ಲುಳಿದಿದ್ದ ಗಾಬರಿಗೊಂಡ ಇತರ ಅತಿಥಿಗಳು ಸುವರೆಝ್ ಗೆ ಅಂದುದು, ಆ ಪ್ರಾಂತದಲ್ಲಿ ನಿನ್ನ ಟ್ರಾಮ್ ಉದ್ಯಮಕ್ಕೆ ಅನುಮತಿ ಪತ್ರ ಬೇಕೆಂದಿದ್ದರೆ, ಪ್ರತಿಯೊಂದು ರಾತ್ರೆಯೂ ಒಂದಷ್ಟು ಚಿನ್ನದ ನಾಣ್ಯಗಳನ್ನು ಕಳೆದುಕೊಳ್ಳುವುದು ನಿರೀಕ್ಷಿತವಾಗುತ್ತದೆ ಎಂದು. ಉಖ್ರ್ವಿಝಾ ಎಷ್ಟೊಂದು ಪಾಪ್ರಿ ಆಟಗಾರನಾಗಿದ್ದ ಎಂದರೆ ನಿಶ್ಚಿತ ಚಿನ್ನದ ಮೊತ್ತಕ್ಕೆ ಅವನಿಂದ ಸೋಲುವುದು ಸುವರೆಝ್ ಗೆ ಒಂದು ದೊಡ್ಡ ಸಮಸ್ಯೆಯಾಯಿತು.

ಆಂತ್ರೆ ರಿಯೋಸ್ ನ ರಾಜಧಾನಿ ಪರಂದ್ ನಲ್ಲಾಗಿತ್ತು ಫ್ಯಾನಿ ಹಸ್ಲಾಮ್ ಕರ್ನಲ್ ಫ್ರಾನ್ಸಿಸ್ಕೋ ಬೋರ್ಹೆಸ್ ನ ಭೇಟಿಯಾದ್ದು. 1870ರಲ್ಲಿ ಅಥವಾ 71ರಲ್ಲಿ. ಮೋಂಟೋನಿರೋಸ್ ಗಳು ಅಥವಾ ರಿಕಾರ್ಡೋ ಲೋಪೆಝ್ ಜೋರ್ಡಾನ್ ನ ಗೌಚೋ (ರಾವುತ) ಪಡೆ ಶಹರಕ್ಕೆ ಲಗ್ಗೆಯಿಟ್ಟ ಕಾಲ ಅದು. ತನ್ನ ತುಕಡಿಯ ಮುಂಭಾಗದಲ್ಲಿ ಅಶ್ವಾರೋಹಿಯಾಗಿ ಶಹರವನ್ನು ರಕ್ಷಿಸುವ ಸೈನಿಕರಿಗೆ ಬೋರ್ಹೆಸ್ ನಾಯಕನಾಗಿದ್ದ. ಫ್ಯಾನಿ ಹಸ್ಲಾಮ್ ತನ್ನ ಮನೆಯ ಮಟ್ಟಸ ಮಾಡಿನಿಂದ ಅವನನ್ನು ನೋಡಿದಳು. ಅದೇ ರಾತ್ರಿ ನರ್ತನ ಕೂಟವೊಂದು ಏರ್ಪಟ್ಟಿತ್ತು, ಸರಕಾರಿ ಬೆಂಬಲ ರಕ್ಷಣಾ ಪಡೆಯ ಆಗಮನವನ್ನು ಆಘೋಷಿಸುವುದಕ್ಕೆ. ಫ್ಯಾನಿ ಮತ್ತು ಕರ್ನಲ್ ಪರಸ್ಪರ ಭೇಟಿಯಾದರು, ನರ್ತಿಸಿದರು, ಪ್ರೀತಿಸಿದರು, ಕಾಲಕ್ರಮದಲ್ಲಿ ಮದುವೆಯಾದರು.

ಇಬ್ಬರು ಹುಡುಗರಲ್ಲಿ ನನ್ನ ತಂದೆ ಕಿರಿಯವರು. ಅವರು ಆಂತ್ರೆ ರಿಯೋದಲ್ಲಿ ಹುಟ್ಟಿದವರು, ಮತ್ತು ಒಬ್ಬ ಗೌರವಾನ್ವಿತ ಇಂಗ್ಲಿಷ್ ಮಹಿಳೆಯಾದ ನನ್ನ ಅಜ್ಜಿಗೆ ವಿವರಿಸುತ್ತಿದ್ದರು, ತಾನು ನಿಜವಾಗ್ಲೂ ಒಬ್ಬ ಆಂತ್ರೇರಿಯಾನೋ ಅಲ್ಲ ಎಂಬುದಾಗಿ ಯಾಕೆಂದರೆ. ‘ನಾನು ಭ್ರೂಣಕ್ಕೆ ಬಂದದ್ದು ಪಂಪಾದಲ್ಲಿ (ಬಯಲಲ್ಲಿ).’ ಅಜ್ಜಿ ಹೇಳುತ್ತಿದ್ದಳು, ‘ನೀನೇನು ಹೇಳುತ್ತಿದ್ದೀಯೋ ನನಗೆ ಖಂಡಿತಾ ಗೊತ್ತಿಲ್ಲ.’ ನನ್ನ ತಂದೆಯ ಮಾತು ನಿಜಕ್ಕೂ ಸತ್ಯವಾಗಿತ್ತು, ಯಾಕೆಂದರೆ ನನ್ನ ಅಜ್ಜ, 1870ರ ಆರಂಭದಲ್ಲಿ ಬ್ಯೂನೋ ಏರಿಸ್ ಪ್ರಾಂತದ ಉತ್ತರ ಮತ್ತು ಪಶ್ಚಿಮ ಸರಹದ್ದುಗಳಲ್ಲಿ ಸೇನಾ ದಂಡನಾಯಕರಾಗಿ ಕೆಲಸಮಾಡುತ್ತಿದ್ದರು. ನಾನು ಮಗುವಾಗಿದ್ದಾಗ ಫ್ಯಾನಿಯ ಬಾಯಿಂದ ಅ ಕಾಲದ ಗಡಿನಾಡು ಜೀವನದ ಬಗ್ಗೆ ಹಲವಾರು ಕತೆಗಳನ್ನು ಕೇಳಿದ್ದೆ. ಅವುಗಳಲ್ಲಿ ಒಂದು ನನ್ನ ‘ಯೋಧ ಮತ್ತು ಬಂದಿಯ ಕತೆ’ಯಲ್ಲಿ ಬರುತ್ತದೆ. ನನ್ನ ಅಜ್ಜಿ ಹಲವಾರು ರೆಡ್ ಇಂಡಿಯನ್ ಪ್ರಮುಖರ ಜೊತೆ ಮಾತಾಡಿದ್ದಳು; ಅವರಿಗೆ ವಿಚಿತ್ರವಾದ ಹೆಸರುಗಳಿದ್ದುವು: ಸೈಮನ್ ಕೋಲಿಕೋ, ಸಕ್ಯಾಟ್ರಿಯೆಲ್, ಪಿನ್ಸೆನ್, ನಮುಂಕರ ಎಂದು ಮುಂತಾಗಿ ಎನಿಸುತ್ತದೆ. 1874ರಲ್ಲಿ, ನಮ್ಮ ಒಂದಾನೊಂದು ಅಂತರ್ಯುದ್ಧದ ಸಂದರ್ಭ, ನನ್ನ ಅಜ್ಜ, ಕರ್ನಲ್ ಬೋರ್ಹೆಸ್, ಸಾವಿಗೀಡಾದರು. ಸಾವಿನ ಕಾಲಕ್ಕೆ ಅವರಿಗೆ ನಲುವತ್ತೊಂದು ವರ್ಷ ವಯಸ್ಸು. ಲ ವರ್ದ್ ಕಾಳಗದಲ್ಲಿ ಅವರಿಗಾದ ಸೋಲಿನ ಸುತ್ತಣ ಜಟಿಲ ಸನ್ನಿವೇಶದಲ್ಲಿ, ಅವರು ಬಿಳಿ ಪೋಂಚೋ (ಒಂದು ತರದ ಉಣ್ಣೆ ನಿಲುವಂಗಿ) ಧರಿಸಿ, ತಮ್ಮ ಹತ್ತೋ ಹನ್ನೆರಡೋ ಹಿಂಬಾಲಕರೊಂದಿಗೆ, ಕುದುರೆಯೇರಿ ನಿಧಾನವಾಗಿ ವೈರಿ ಸಾಲುಗಳ ಕಡೆಗಾಗಿ ಬರುತ್ತಿರುವಾಗ, ಅವರಿಗೆ ಎರಡು ರೆಮಿಂಗ್ಟನ್ ಗುಂಡುಗಳನ್ನು ಹೊಡೆಯಲಾಯಿತು. ಅರ್ಜೆಂಟೀನಾದಲ್ಲಿ ರೆಮಿಂಗ್ಟನ್ ರೈಫಲುಗಳನ್ನು ಉಪಯೋಗಿಸಿದ್ದು ಇದು ಪ್ರಪ್ರಥಮ ಬಾರಿಯಾಗಿತ್ತು. ಹಾಗೂ ನನ್ನ ಗಡ್ಡವನ್ನು ದಿನವೂ ಹೆರೆದು ನುಣುಪಾಗಿಸುವ ಸಾಧನವನ್ನು ಉತ್ಪಾದಿಸುವ ಕಂಪೆನಿ ನನ್ನ ಅಜ್ಜನನ್ನು ಕೊಂದ ಕಂಪೆನಿಯ ಹೆಸರನ್ನೇ ಹೊತ್ತಿದೆ ಎನ್ನುವುದು ನನ್ನ ಭಾವನೆಯನ್ನು ಜುಮುಗುಟ್ಟಿಸುತ್ತಿದೆ.

ಫ್ಯಾನಿ ಹಸ್ಲಮ್ ಒಬ್ಬ ಮಹಾ ಓದುಗಳಾಗಿದ್ದಳು. ಅವಳಿಗೆ ಎಂಬತ್ತು ಆಗಿದ್ದಾಗ ಅವಳನ್ನು ಮೆಚ್ಚಿಸುವುದಕ್ಕೆಂದು ಜನ ಹೇಳುವುದಿತ್ತು, ಡಿಕೆನ್ಸ್ ಮತ್ತು ಥ್ಯಾಕರೇ ಜತೆ ಸ್ಪರ್ಧಿಸಬಲ್ಲ ಲೇಖಕರೇ ಈಗ ಇಲ್ಲ ಎಂದು; ನನ್ನ ಅಜ್ಜಿ ಅನ್ನುತ್ತಿದ್ದಳು, ‘ಒಟ್ಟಾಗಿ ಹೇಳುವುದಿದ್ದರೆ, ನನಗೆ ಅರ್ನಾಲ್ಡ್ ಬೆನೆಟ್, ಗಾಲ್ಸ್ವರ್ದಿ ಮತ್ತು ವೆಲ್ಸ್ ಹೆಚ್ಚು ಇಷ್ಟ.’ ತೊಂಬತ್ತರ ಪ್ರಾಯದಲ್ಲಿ, 1935ರಲ್ಲಿ, ಸಾಯುವ ಸಮಯ ಅವಳು ನಮ್ಮನ್ನು ತನ್ನ ಹಾಸಿಗೆಯ ಬಳಿಗೆ ಕರೆದು, ಇಂಗ್ಲಿಷ್ ನಲ್ಲಿ (ಅವಳ ಸ್ಪ್ಯಾನಿಶ್ ಅಸ್ಖಲಿತವಾಗಿತ್ತು, ಆದರೆ ಬಡವಾಗಿತ್ತು) ತನ್ನ ಸಪೂರ ಸ್ವರದಲ್ಲಿ ನುಡಿದಳು, ‘ನಾನು ಬರೇ ಒಬ್ಬ ಮುದುಕಿ, ನಿಧನಿಧಾನ ಸಾಯುವವಳು. ಗಣ್ಯವಾದ್ದಾಗಲಿ, ಸ್ವಾರಸ್ಯಕರವಾದ್ದಾಗಲಿ, ನನ್ನಲ್ಲಿ ಏನೂ ಇಲ್ಲ.’ ಇಡೀ ಮನೆಯೇ ಚಿಂತೆಗೊಳಗಾಗಬೇಕಾದ ವ್ಯಕ್ತಿಯಲ್ಲ ತಾನು, ಮತ್ತು ಸಾಯಲು ಅಷ್ಟೊಂದು ಸಮಯ ತೆಗೆದುಕೊಂಡುದಕ್ಕೆ ಅವಳು ಕ್ಷಮೆಯನ್ನೂ ಕೇಳಿದಳು.

ನನ್ನ ತಂದೆ ಬಹಳ ಬುದ್ಧಿವಂತರಾಗಿದ್ದರು, ಹಾಗೂ ಎಲ್ಲಾ ಬುದ್ಧಿವಂತ ವ್ಯಕ್ತಿಗಳ ಹಾಗೆ, ಬಹಳ ದಯಾಳುವೂ ಆಗಿದ್ದರು. ಒಮ್ಮೆ ಅವರು ನನಗಂದರು, ನಾನು ಸೈನಿಕರತ್ತ ಸರಿಯಾಗಿ ಗಮನ ಹರಿಸಬೇಕು, ಅಂತೆಯೇ ಸಮವಸ್ತ್ರಗಳತ್ತ, ಬ್ಯಾರಕುಗಳತ್ತ, ಪತಾಕೆಗಳತ್ತ, ಇಗರ್ಜಿಗಳತ್ತ, ಪಾದ್ರಿಗಳತ್ತ, ಮತ್ತು ಕಸಾಯಿ ಅಂಗಡಿಗಳತ್ತ, ಯಾಕೆಂದರೆ ಇವೆಲ್ಲವೂ ಇನ್ನು ಬೇಗನೆ ಇಲ್ಲದಾಗುವಂಥವು, ಹಾಗೂ ನಾನು ನನ್ನ ಮಕ್ಕಳಿಗೆ ಹೇಳಬಹುದು, ಇವುಗಳನ್ನೆಲ್ಲ ನಾನು ನಿಜಕ್ಕೂ ನೋಡಿದ್ದೆ ಎಂದು. ಆದರೆ ದುರದೃಷ್ಟವಶಾತ್ ಅಂಥ ಭವಿಷ್ಯ ಇನ್ನೂ ನಿಜವಾಗಿಲ್ಲ. ನನ್ನ ಅಪ್ಪ ಎಷ್ಟೊಂದು ನಿಗರ್ವಿಯಾಗಿದ್ದರು ಎಂದರೆ, ಅವರು ಸಾಧ್ಯವಿದ್ದರೆ ಅದೃಶ್ಯರಾಗಿರಲು ಬಯಸುತ್ತಿದ್ದರು. ತನ್ನ ಇಂಗ್ಲಿಷ್ ವಂಶದ ಬಗ್ಗೆ ಅವರಿಗೆ ತುಂಬಾ ಹೆಮ್ಮೆಯಿದ್ದರೂ, ಅದರ ಬಗ್ಗೆ ಅವರು ತಮಾಷೆ ಮಾಡುವುದಿತ್ತು. ಗೊಂದಲವನ್ನು ನಟಿಸಿ ಅವರನ್ನುತ್ತಿದ್ದರು, ‘ಹೇಗಿದ್ದರೂ ಇಂಗ್ಲಿಷರು ಯಾರು? ಜರ್ಮನ್ ಕಾರ್ಷಿಕ ಜನರ ಒಂದು ಗುಂಪು.’ ಶೆಲ್ಲಿ, ಕೀಟ್ಸ್, ಮತ್ತು ಸ್ವಿನ್ ಬರ್ನ್ ಅವರ ಆದರ್ಶ ಮೂರ್ತಿಗಳಾಗಿದ್ದರು. ಒಬ್ಬ ಓದುಗನಾಗಿ ಅವರಿಗೆ ಎರಡು ಆಸಕ್ತಿಗಳಿದ್ದುವು. ಮೊದಲನೆಯದು ಅತಿಭೌತಿಕತೆ ಮತ್ತು ಮನೋವಿಜ್ಞಾನ (ಬಕ್ರ್ಲಿ, ಹ್ಯೂಮ್, ರೋಯ್ಸ್, ಮತ್ತು ವಿಲಿಯಂ ಜೇಮ್ಸ್). ಎರಡನೆಯದು ಸಾಹಿತ್ಯ ಹಾಗೂ ಪೌರಾತ್ಯದ ಕುರಿತಾದ ಪುಸ್ತಕಗಳು (ಲೇನ್, ಬರ್ಟನ್, ಮತ್ತು ಪೇಯ್ನ್). ಕವಿತೆಯ ಶಕ್ತಿಯನ್ನು ನನಗೆ ತೋರಿಸಿಕೊಟ್ಟುದು ನನ್ನ ತಂದೆಯೇ – ಶಬ್ದಗಳು ಸಂವಹನ ಮಾಧ್ಯಮವಷ್ಟೇ ಅಲ್ಲ, ಯಕ್ಷಿಣೀ ಸಂಕೇತಗಳು ಮತ್ತು ಸಂಗೀತವೂ ಹೌದು ಎಂಬ ಸತ್ಯವನ್ನು.

ಈಗ ನಾನು ಇಂಗ್ಲಿಷ್ ಕವಿತೆಯನ್ನು ವಾಚಿಸುವಾಗ, ನನ್ನ ಅಮ್ಮ ಅನ್ನುತ್ತಾಳೆ ನನ್ನ ಧ್ವನಿ ತಂದೆಯ ಧ್ವನಿಯಂತೆಯೇ ಇರುತ್ತದೆ ಎಂದು. ತಂದೆಯೇ ನನಗೆ ನನ್ನ ಅರಿವಿಲ್ಲದೆಯೇ ತತ್ವಜ್ಞಾನದ ಮೊದಲ ಪಾಠಗಳನ್ನು ಕಲಿಸಿದುದು ಕೂಡ. ನಾನಿನ್ನೂ ಚಿಕ್ಕವನಿದ್ದಾಗ, ಝೀನೋನ ವಿರೋಧಾಭಾಸಗಳನ್ನು ಚದುರಂಗದ ಮಣೆಯ ಸಹಾಯದಿಂದ ತೋರಿಸಿಕೊಟ್ಟುದು – ಎಖಿಲಸ್ ಮತ್ತು ಆಮೆ, ಬಾಣದ ನಿಶ್ಚಲ ಹಾರಾಟ, ಚಲನೆಯ ಅಸಾಧ್ಯತೆ. ನಂತರ, ಬಕ್ರ್ಲಿಯ ಹೆಸರು ಹೇಳದೆ, ನನಗವರು ಆದರ್ಶವಾದದ ಮೂಲ ತತ್ವಗಳನ್ನು ಹೇಳಿಕೊಡಲು ಎಲ್ಲಾ ಪ್ರಯತ್ನವನ್ನೂ ಮಾಡಿದರು.

ನನ್ನ ತಾಯಿ, ಲಿಯೊನೋರ್ ಅಸವೆಡೋ ದ ಬೋರ್ಹೆಸ್ ಹಳೆ ಅರ್ಜೆಂಟೈನ್ ಮತ್ತು ಉರುಗ್ವೆಯನ್ ಮೂಲದಿಂದ ಬಂದವಳು ಮತ್ತು ತೊಂಬತ್ತನಾಲ್ಕರ ವಯಸ್ಸಿನಲ್ಲಿ ಈಗಲೂ ಆರೋಗ್ಯವಂತಳಾಗಿ, ಮತ್ತು ಒಳ್ಳೇ ಕ್ಯಾಥಲಿಕಳಾಗಿ ಇದ್ದಾಳೆ. ನಾನು ಬೆಳೆಯುವ ಕಾಲದಲ್ಲಿ ಧರ್ಮವೆನ್ನುವುದು ಹೆಂಗಸರ ಮತ್ತು ಮಕ್ಕಳ ಕ್ಷೇತ್ರವಾಗಿತ್ತು; ಬ್ಯೂನೋಸ್ ಏರಿಸ್ ನ ಹೆಚ್ಚಿನ ಗಂಡಸರೂ ಮುಕ್ತಚಿಂತಕರಾಗಿದ್ದರು – ಕೇಳಿದರೆ ತಾವು ಕ್ಯಾಥಲಿಕರೆಂದು ಅವರು ತಮ್ಮನ್ನು ಕರೆಯುತ್ತಿದ್ದರೂ ಕೂಡ. ಜನರ ಅತ್ಯುತ್ತಮ ಸ್ವಭಾವವನ್ನು ಯೋಚಿಸುವ ನನ್ನ ತಾಯಿಯ ಗುಣವನ್ನು ನಾನು ಅವಳಿಂದ ಅನುವಂಶಿಕವಾಗಿ ಪಡೆದುಕೊಂಡೆನೆಂದು, ಅದೇ ರೀತಿ ಅವಳ ಗಟ್ಟಿಯಾದ ಸ್ನೇಹಪರತೆಯನ್ನು ಸಹಾ. ನನ್ನ ತಾಯಿಗೆ ಯಾವತ್ತೂ ಸ್ವೀಕಾರ ಗುಣವಿತ್ತು. ನನ್ನ ತಂದೆಯಿಂದ ಇಂಗ್ಲಿಷ್ ಕಲಿತ ಲಾಗಾಯ್ತಿನಿಂದಲೂ ಅವಳ ಹೆಚ್ಚಿನ ಓದೂ ಇಂಗ್ಲಿಷ್ ಭಾಷೆಯಲ್ಲೇ ಸಾಗಿದೆ. ನನ್ನ ತಂದೆಯ ಮರಣಾನಂತರ, ಮುದ್ರಿತ ಪುಟದ ಮೇಲೆ ಗಮನ ಕೇಂದ್ರೀಕರಿಸುವುದು ತನಗೆ ಕಷ್ಟವಾಗುತ್ತಿದೆ ಎಂದು ಗೊತ್ತಾಗಿ, ವಿಲಿಯಂ ಸರೋಯನ್ನ The Human Comedy ಯನ್ನು ಭಾಷಾಂತರಿಸಲು ಪ್ರಯತ್ನ ಪಟ್ಟಳು, ಲಕ್ಷ್ಯ ಕೇಂದ್ರೀಕರಿಸಲು ತನಗೆ ತಾನೇ ಒತ್ತಾಯಿಸುವ ನಿಟ್ಟಿನಲ್ಲಿ. ಭಾಷಾಂತರ ಮುದ್ರಣ ಕಂಡಿತಲ್ಲದೆ ಬ್ಯೂನೋ ಏರಿಸ್ ನ ಆರ್ಮೇನಿಯನ್ ಸಮಾಜ ಅವಳನ್ನು ಗೌರವಿಸಿತು ಕೂಡ. ಆಮೇಲೆ ಅವಳು ಹಾಥೋರ್ನ್ ನ ಕೆಲವು ಕತೆಗಳನ್ನು, ಕಲೆಯ ಕುರಿತಾದ ಹರ್ಬರ್ಟ್ ರೀಡ್ ನ ಪುಸ್ತಕಗಳಲ್ಲಿ ಒಂದನ್ನು ಭಾಷಾಂತರಿಸಿದಳು; ಅಲ್ಲದೆ ನನ್ನವೆಂದು ಪರಿಗಣಿಸಲ್ಪಡುವ ಮೆಲ್ವಿಲ್, ವರ್ಜೀನಿಯಾ ವೂಲ್ಫ್, ಮತ್ತು ಫಾಕ್ನರ್ ನ ಕೆಲವು ಭಾಷಾಂತರಗಳನ್ನು ಕೂಡ. ಅವಳು ಸದಾ ನನ್ನ ಸಂಗಾತಿಯಾಗಿದ್ದಳು. – ಪ್ರತ್ಯೇಕವಾಗಿಯೂ ನಂತರದ ವರ್ಷಗಳಲ್ಲಿ, ನಾನು ಅಂಧನಾದಾಗ, ಅವಳೊಬ್ಬ ಮನಸ್ಸರಿತ ಮತ್ತು ಕ್ಷಮಾಶೀಲ ಸ್ನೇಹಿತೆ. ವರ್ಷಗಟ್ಟಲೆ ಕಾಲ, ತೀರಾ ಇತ್ತೀಚಿನವರೆಗೆ, ಅವಳು ನನ್ನೆಲ್ಲಾ ಕಾರ್ಯದರ್ಶಿತ್ವ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದುದು – ಪತ್ರಗಳಿಗೆ ಉತ್ತರಿಸುವುದು, ಓದಿ ಹೇಳುವುದು, ಉಕ್ತಲೇಖನ ಬರೆದುಕೊಳ್ಳುವುದು, ಹಾಗೂ ಹಲವು ಸಂದರ್ಭಗಳಲ್ಲಿ ಊರಲ್ಲಿ ಮತ್ತು ವಿದೇಶಗಳಲ್ಲಿ ನನ್ನ ಜೊತೆ ಪ್ರಯಾಣಿಸುವುದನ್ನು ಸಹಾ ಮಾಡುತ್ತಿದ್ದಳು. ನನ್ನ ಸಾಹಿತ್ಯಿಕ ಬದುಕನ್ನು ಸದ್ದಿಲ್ಲದೆಯೂ ಪರಿಣಾಮಕಾರಿಯಾಗಿಯೂ ಬೆಳೆಸಿದವಳು ಆಕೆಯೇ, ಆ ಕಾಲದಲ್ಲಿ ನಾನದನ್ನು ಅರಿಯದೆ ಇದ್ದರೂ.

ಆಕೆಯ ಅಜ್ಜ ಕರ್ನಲ್ ಇಸಿಡೋರ್ ಸುವರೆಝ್, 1824ರಲ್ಲಿ, ಇಪ್ಪತ್ತನಾಲ್ಕನೆಯ ವಯಸ್ಸಿನಲ್ಲಿ ಪೆರುವಿಯನ್ ಮತ್ತು ಕೊಲಂಬಿಯನ್ ಅಶ್ವದಳದ ಪ್ರಖ್ಯಾತ ಆಕ್ರಮಣದ ನೇತೃತ್ವ ವಹಿಸಿದವರು. ಇದು ಪೆರುವಿನಲ್ಲಿ ಜೂನಿನ್ ನ ಕಾಳಗದ ಭವಿಷ್ಯವನ್ನು ಬದಲಿಸಿತು; ದಕ್ಷಿಣ ಅಮೇರಿಕದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಇದು ಕೊನೆಯ ಕಾಳಗದ ನಿಕಟಪೂರ್ವದ್ದಾಗಿತ್ತು. ಸುವರೆಝ್ 1835ರಿಂದ 1852ರ ವರೆಗೆ ಅರ್ಜೆಂಟೀನಾವನ್ನು ಸರ್ವಾಧಿಕಾರಿಯಾಗಿ ಆಳಿದ ಜುವಾನ್ ಮೆನುವೆಲ್ ರೋಸಾಸ್ನ ಹತ್ತಿರದ ರಕ್ತಸಂಬಂಧಿಯಾಗಿದ್ದರೂ, ಅವರು (ಸುವರೆಝ್) ಬ್ಯೂನೋಸ್ ಏರಿಸ್ ನಲ್ಲಿ ಒಬ್ಬ ಸರ್ವಾಧಿಕಾರಿಯ ಕೈಕೆಳಗೆ ಬದುಕುವುದಕಿಂತ ಮೋಂಟಿವಿಡಿಯೋದಲ್ಲಿ ಬಡತನದಲ್ಲಿ ಒಬ್ಬ ದೇಶಭ್ರಷ್ಟನಾಗಿ ಬದುಕುವುದನ್ನು ಆರಿಸಿಕೊಂಡರು. ಅವರ ಜಮೀನುಗಳನ್ನು ಸರಕಾರ ವಶಪಡಿಸಿಕೊಂಡಿತು ನಿಜ, ಹಾಗೂ ಅವರ ಒಬ್ಬ ಸೋದರನನ್ನು ಮರಣದಂಡನೆಗೆ ಗುರಿಪಡಿಸಲಾಯಿತು. ನನ್ನ ಅಮ್ಮನ ಕುಟುಂಬದ ಇನ್ನೊಬ್ಬ ಸದಸ್ಯ ಫ್ರಾನ್ಸಿಸ್ಕೋ ದ ಲಪ್ರಿಡಾ. 1816ರಲ್ಲಿ ಟುಕುಮನ್ ನಲ್ಲಿ ಅವರು ಮಹಾಸಭೆಯೊಂದರ ಅಧ್ಯಕ್ಷತೆ ವಹಿಸಿದ್ದು, ಅದರಲ್ಲಿ ಅರ್ಜೆಂಟೀನಾ ಒಕ್ಕೂಟದ ಸ್ವಾತಂತ್ರ್ಯದ ಘೋಷಣೆ ಮಾಡಿದರು. 1829ರಲ್ಲಿ ಅಂತರ್ಯುದ್ಧವೊಂದರಲ್ಲಿ ಅವರು ಕೊಲ್ಲಲ್ಪಟ್ಟರು. ನನ್ನ ತಾಯಿಯ ತಂದೆ, ಇಸಿಡೋರೋ ಅಸೆವೆಡೋ, ಕೇವಲ ನಾಗರಿಕನಾಗಿದ್ದರೂ, ಇತರ ಅಂತರ್ಯುದ್ಧಗಳಲ್ಲಿ ಭಾಗವಹಿಸಿದರು, 1860 ಮತ್ತು 1880ರಲ್ಲಿ. ಹೀಗೆ ನನ್ನ ಕುಟುಂಬದ ಎರಡೂ ಕಡೆಗಳಲ್ಲಿ ನನಗೆ ಮಿಲಿಟರಿ ಪೂರ್ವಜರಿದ್ದಾರೆ. ಇದು ವಿವರಿಸುತ್ತದೆ ಆ ಮಹಾನ್ ವಿಧಿಯ ಕುರಿತಾದ ನನ್ನ ಹಂಬಲವನ್ನು; ನನ್ನ ದೇವರುಗಳು ನನಗದನ್ನು ನಿರಾಕರಿಸಿದರು, ವಿವೇಕದಿಂದಲೇ ಎನ್ನುವುದರಲ್ಲಿ ಸಂಶಯವಿಲ್ಲ.

ನನ್ನ ಬಾಲ್ಯಕಾಲದ ಬಹುಭಾಗವನ್ನು ನಾನು ಮನೆಯೊಳಗೆಯೇ ಕಳೆದೆನೆನ್ನುವುದನ್ನು ಈಗಾಗಲೇ ಹೇಳಿದ್ದೇನೆ. ಬಾಲ್ಯದ ಗೆಳೆಯರಿಲ್ಲದೆ ನನ್ನ ತಂಗಿ ಮತ್ತು ನಾನು ಎರಡು ಪಾತ್ರಗಳನ್ನು ಸೃಷ್ಟಿಸಿದೆವು; ಯಾವುದೋ ಕಾರಣಕ್ಕೆ ಒಂದನ್ನು ಕ್ವಿಲೋ ಎಂದೂ ಇನ್ನೊಂದನ್ನು ಗಾಳಿಯಂತ್ರವೆಂದೂ ಕರೆದೆವು. (ಅವು ಕೊನೆಗೂ ನಮಗೆ ಬೋರಾದಾಗ, ಅವು ಸತ್ತು ಹೋದುವು ಎಂದು ಅಮ್ಮನಿಗೆ ತಿಳಿಸಿದೆವು.) ನನಗೆ ಯಾವಾಗಲೂ ಸಮೀಪದೃಷ್ಟಿ, ಕನ್ನಡಕ ತೊಟ್ಟುಕೊಳ್ಳುತ್ತಿದ್ದೆ, ಅಲ್ಲದೆ ನಾನು ಸಣಕಲನೂ ಆಗಿದ್ದೆ. ನನ್ನ ಬಳಗದವರು ಹೆಚ್ಚಿನವರೂ ಸೈನಿಕರಾದ್ದರಿಂದ – ನನ್ನ ತಂದೆಯ ಸೋದರ ಕೂಡಾ ನೌಕಾದಳದ ಆಫೀಸರ್ ಆಗಿದ್ದರು – ನನಗೆ ಗೊತ್ತಿತ್ತು ನಾನೆಂದೂ ಹಾಗೆ ಆಗಲಾರೆ, ನಾನು ನಾಚಿಕೆಗೆ ಒಳಗಾದೆ, ಆರಂಭದಲ್ಲೇ, ಕ್ರಿಯಾಶೀಲನಾಗದೆ ಒಬ್ಬ ಪುಸ್ತಕದ ಮನುಷ್ಯನಾದುದಕ್ಕೆ. ಬಾಲ್ಯದ ಉದ್ದಕ್ಕೂ ನನಗನಿಸಿದ್ದು ಪ್ರೀತಿಸಲ್ಪಡುವುದು ಒಂದು ಅನ್ಯಾಯವಾಗುತ್ತದೆ ಎಂಬುದಾಗಿ. ಯಾವುದೇ ಪ್ರತ್ಯೇಕ ಪ್ರೀತಿಗೆ ನಾನು ಅರ್ಹನೆಂದು ನನಗನಿಸಲಿಲ್ಲ. ನನಗೆ ನೆನಪಿದೆ, ನನ್ನ ಹುಟ್ಟು ಹಬ್ಬಗಳು ನನ್ನಲ್ಲಿ ಅವಮಾನವನ್ನು ತುಂಬುತ್ತಿದ್ದುವು, ಯಾಕೆಂದರೆ ಪ್ರತಿಯೊಬ್ಬರೂ ನನ್ನ ಮೇಲೆ ಉಡುಗೊರೆಯ ಮಳೆಗರೆಯುತ್ತಿದ್ದರು – ಆದರೆ ನನಗೆ ಗೊತ್ತಿತ್ತು ಅವುಗಳಿಗೆ ಅರ್ಹನಾಗಲು ನಾನೇನೂ ಮಾಡಿಲ್ಲ ಎನ್ನುವುದು – ನಾನೊಬ್ಬ ಕಪಟಿ ಎನ್ನುವುದು. ಸುಮಾರು ಮೂವತ್ತು ವರ್ಷಗಳ ನಂತರ ನಾನು ಆ ಭಾವನೆಯಿಂದ ಹೊರಬಂದೆ.

ನಾನು ಮಗುವಾಗಿದ್ದಾಗ ಫ್ಯಾನಿಯ ಬಾಯಿಂದ ಅ ಕಾಲದ ಗಡಿನಾಡು ಜೀವನದ ಬಗ್ಗೆ ಹಲವಾರು ಕತೆಗಳನ್ನು ಕೇಳಿದ್ದೆ. ಅವುಗಳಲ್ಲಿ ಒಂದು ನನ್ನ ‘ಯೋಧ ಮತ್ತು ಬಂದಿಯ ಕತೆ’ಯಲ್ಲಿ ಬರುತ್ತದೆ. ನನ್ನ ಅಜ್ಜಿ ಹಲವಾರು ರೆಡ್ ಇಂಡಿಯನ್ ಪ್ರಮುಖರ ಜೊತೆ ಮಾತಾಡಿದ್ದಳು; ಅವರಿಗೆ ವಿಚಿತ್ರವಾದ ಹೆಸರುಗಳಿದ್ದುವು: ಸೈಮನ್ ಕೋಲಿಕೋ, ಸಕ್ಯಾಟ್ರಿಯೆಲ್, ಪಿನ್ಸೆನ್, ನಮುಂಕರ ಎಂದು ಮುಂತಾಗಿ ಎನಿಸುತ್ತದೆ.

ಮನೆಯಲ್ಲಿ ಇಂಗ್ಲಿಷ್ ಮತ್ತು ಸ್ಪ್ಯಾನಿಶ್ ಎರಡನ್ನೂ ಬಳಸಲಾಗುತ್ತಿತ್ತು. ನನ್ನ ಜೀವನದ ಮುಖ್ಯ ಘಟನೆಯನ್ನು ಹೆಸರಿಸಲು ಕೇಳಿದರೆ, ನನ್ನ ತಂದೆಯ ಗ್ರಂಥಾಲಯ ಎನ್ನುತ್ತೇನೆ. ವಾಸ್ತವದಲ್ಲಿ ಕೆಲವು ಸಲ ನನಗನಿಸುತ್ತದೆ, ನಾನೆಂದೂ ಆ ಗ್ರಂಥಾಲಯದಿಂದ ಹೊರಬಂದಿಲ್ಲ ಎಂಬುದಾಗಿ. ನಾನಿನ್ನೂ ಅದನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಬಲ್ಲೆ. ಅದಕ್ಕೆ ಅದರದೇ ಆದ ಕೋಣೆಯಿತ್ತು. ಎದುರು ಭಾಗದಲ್ಲಿ ಗಾಚಿನ ಮುಚ್ಚಳವಿರುವ ಶೆಲ್ಫುಗಳು. ಅವುಗಳಲ್ಲಿ ಹಲವು ಸಾವಿರ ಪುಸ್ತಕಗಳಿದ್ದಿರಬೇಕು. ಸಮೀಪದೃಷ್ಟಿಯವನಾಗಿ ನಾನು ಆ ಕಾಲದ ಹೆಚ್ಚಿನ ಮುಖಗಳನ್ನೂ ಮರೆತಿದ್ದೇನೆ (ಬಹುಶಃ ನನ್ನ ಅಜ್ಜ ಅಸೆವೆಡೋ ಕುರಿತು ಯೋಚಿಸಿದಾಗ ನಾನು ಯೋಚಿಸುವುದು ಆತನ ಫೋಟೋವನ್ನು), ಆದರೂ ಛೇಂಬರ್ಸ್ ಎನ್ಸೈಕ್ಲೋಪೇಡಿಯದಲ್ಲಿ ಮತ್ತು ಬ್ರಿಟಾನಿಕಾದಲ್ಲಿನ ಹಲವಾರು ಸ್ಟೀಲಿನ ಕೆತ್ತನೆ ಚಿತ್ರಗಳನ್ನು ವಿರಳವಾಗಿ ನೆನಪಿನಲ್ಲಿ ಇಟ್ಟುಕೊಂಡಿದ್ದೇನೆ. ನಾನು ಪೂರ್ತಿಯಾಗಿ ಓದಿದ ಮೊದಲ ಕಾದಂಬರಿ ‘ಹಕ್ಲ್ಬರಿ ಫಿನ್ನ್.’ ನಂತರದವು ‘ರಫ್ಫಿಂಗ್ ಇಟ್’ ಮತ್ತು ‘ಫ್ಲಶ್ ಡೇಸ್ ಇನ್ ಕ್ಯಾಲಿಫೋರ್ನಿಯಾ.’ ಕ್ಯಾಪ್ಟನ್ ಮರ್ಯಾಟ್ ನ ಕೃತಿಗಳನ್ನೂ, ವೆಲ್ಸ್ ನ ‘ಫಸ್ಟ್ ಮೆನ್ ಇನ್ ದ ಮೂನ್,’ ಪೋ, ಒಂದೇ ಸಂಪುಟದ ಲಾಂಗ್ ಫೆಲೋ, ‘ಟ್ರೆಶರ್ ಐಲೆಂಡ್,’ ಡಿಕೆನ್ಸ್, ‘ಡಾನ್ ಕ್ವಿಕ್ಸಾಟ್,’ ‘ಟಾಮ್ ಬ್ರೌನ್ಸ್ ಸ್ಕೂಲ್ ಡೇಸ್,’ ಗ್ರಿಇಮ್ಮ್ನ ‘ಫೇರಿ ಟೇಲ್ಸ್,’ ಲೆವಿಸ್ ಕ್ಯಾರೆಲ್, ’ದಿ ಅಡ್ವೆಂಚರ್ಸ್ ಆಫ್ ಮಿಸ್ಟರ್ ವರ್ಡೆಂಟ್ ಗ್ರೀನ್ (ಈಗ ಮರೆತುಹೋದ ಪುಸ್ತಕ). ಬರ್ಟನ್ ನ ‘ಎ ಥೌಸಂಡ್ ನೈಟ್ಸ್ ಏಂಡ್ ಒನ್ ನೈಟ್.’ ಈ ಬರ್ಟನ್ ಆ ಕಾಲದಲಿ ಅಶ್ಲೀಲತೆಯಿಂದ ತುಂಬಿದುದೆಂದು ಪರಿಗಣಿಸಲ್ಪಟ್ಟಿದ್ದುದರಿಂದ ನಿಷಿದ್ಧವಾಗಿತ್ತು, ಮತ್ತು ನಾನದನ್ನು ಕದ್ದು ಮುಚ್ಚಿ ಅಟ್ಟದಲ್ಲಿ ಓದಬೇಕಾಗಿತ್ತು. ಆದರೆ ಆ ವೇಳೆ ನಾನು ಕತೆಯ ಮಾಂತ್ರಿಕತೆಯಿಂದ ಎಷ್ಟೊಂದು ಆಕರ್ಷಿತನಾಗಿದ್ದೆನೆಂದರೆ ಅದರಲ್ಲಿನ ಹಾಗೆ ವಿರೋಧಿಸುವ ಭಾಗಗಳು ನನ್ನ ಗಮನ ಸೆಳೆಯಲಿಲ್ಲ, ಕತೆಗಳನ್ನು ಬೇರೆ ಯಾವ ಕಾರಣಕ್ಕೂ ಆಗಿರದೆ ಕತೆಗಾಗಿಯೆ ಓದುತ್ತ. ಈಗ ಹೇಳಿದ ಎಲ್ಲಾ ಪುಸ್ತಕಗಳನ್ನೂ ನಾನು ಇಂಗ್ಲಿಷ್ ನಲ್ಲೇ ಓದಿದೆ. ನಂತರ ‘ಡಾನ್ ಕ್ವಿಕ್ಸಾಟ್’ನ್ನು ಮೂಲದಲ್ಲಿ ಓದಿದಾಗ, ಅದೊಂದು ಕೆಟ್ಟ ಭಾಷಾಂತರದಂತೆ ನನಗನಿಸಿತು.

ನನಗಿನ್ನೂ ನೆನಪಿದೆ, ಗಾರ್ನಿಯರ್ ಆವೃತ್ತಿಯಲ್ಲಿನ ಚಿನ್ನದ ಅಕ್ಷರದ ಕೆಂಪು ಸಂಪುಟಗಳು. ಯಾವುದೋ ಒಂದು ಘಟ್ಟದಲ್ಲಿ ನನ್ನ ತಂದೆಯ ಗ್ರಂಥಾಲಯ ವಿಭಜನೆಗೊಂಡಿತು; ನಂತರ ನಾನು ‘ಡಾನ್ ಕ್ವಿಕ್ಸಾಟ್’ನ ಬೇರೊಂದು ಆವೃತ್ತಿಯನ್ನು ಓದಿದಾಗ, ಅದು ನಿಜವಾದ ‘ಕ್ವಿಕ್ಸಾಟ್’ ಅಲ್ಲ ಎನ್ನುವ ಭಾವನೆ ಬಂತು. ಆಮೇಲೆ ನಾನು ಒಬ್ಬ ಮಿತ್ರನ ಮೂಲಕ ಗಾರ್ನಿಯರ್ ಆವೃತ್ತಿಯನ್ನು ತರಿಸಿಕೊಂಡೆ, ಅದೇ ಉಕ್ಕಿನ ಕೆತ್ತನೆ ಚಿತ್ರಗಳೊಂದಿಗೆ, ಅದೇ ಅಡಿ ಟಿಪ್ಪಣಿಗಳೊಂದಿಗೆ, ಅದೇ ತಪ್ಪು-ಸರಿ ಪಟ್ಟಿಯೊಂದಿಗೆ. ನನ್ನ ಮಟ್ಟಿಗೆ ಇವೆಲ್ಲವೂ ಪುಸ್ತಕದ ಭಾಗವೇ; ಇದನ್ನು ನಾನು ನಿಜವಾದ ‘ಕ್ವಿಕ್ಸಾಟ್’ ಎಂದು ತಿಳಿಯುತ್ತೇನೆ.

ಸ್ಪ್ಯಾನಿಶ್ ನಲ್ಲೂ ನಾನು ಹಲವಾರು ಪುಸ್ತಕಗಳನ್ನು ಓದಿದೆ, ಎಡ್ವರ್ಡೋ ಗುಟಿಯೆರೆಝ್ ನದು, ಅರ್ಜೆಂಟೈನ್ ಗಡೀಪಾರಿನವರು ಮತ್ತು ದುಸ್ಸಾಹಸಿಗಳ ಕುರಿತಾಗಿ – ಜುವಾನ್ ಮೊರೈರಾ ಅವರಲ್ಲಿ ಮುಖ್ಯನು – ಅದೇ ರೀತಿ ಅವನ ‘ಸಿಲುವೆರಾಸ್ ಮಿಲಿಟರೆಸ್.’ ಅದು ಕರ್ನಲ್ ಬೋರ್ಹೆಸ್ ನ ಸಾವಿನ ಪ್ರಬಲ ನಿರೂಪಣೆಯನ್ನು ಒಳಗೊಂಡಿದೆ. ನನ್ನ ತಾಯಿ ‘ಮಾರ್ಟಿನ್ ಫಿಯರೋ’ ವನ್ನು ನಾನು ಓದಬಾರದೆಂದು ಪ್ರತಿಬಂಧಿಸಿದಳು, ಯಾಕೆಂದರೆ ಅದು ಗೂಂಡಗಳಿಗೂ ಶಾಲಾ ಬಾಲಕರಿಗೂ ಯೋಗ್ಯವಾದುದು, ಅಲ್ಲದೆ ಅದು ನಿಜವಾದ ಗೌಚೋಗಳ (ರಾವುತರ) ಕುರಿತಾಗಿ ಆಗಿರಲೇ ಇಲ್ಲ. ಇದನ್ನೂ ನಾನು ಕದ್ದು ಓದಿದೆ. ಅವಳ ಭಾವನೆಗಳು ಹರ್ನಾಂಡಿಸ್ ರೋಸಾಸ್ ನ ಬೆಂಬಲಿಗನಾಗಿದ್ದ, ಆದುದರಿಂದ ನಮ್ಮ ಯುನಿಟೇರಿಯನ್ ಪೂರ್ವಜರ ವೈರಿ ಎಂಬ ನಂಬಿಕೆಯ ಮೇಲೆ ಆಧರಿಸಿದ್ದುವು. ನಾನು ಸರ್ಮಿಯೆಂಟೋನ ‘ಫೆಕುಂಡೋ’ ಕೂಡ ಓದಿದೆ, ಹಾಗೂ ಗ್ರೀಕ್ ಪುರಾಣ ಕಥೆಗಳ ಕುರಿತಾದ ಹಲವಾರು ಪುಸ್ತಕಗಳನ್ನು, ಆಮೇಲೆ ನೋರ್ಸ್ ಪುರಾಣ ಕಥೆಗಳ ಕುರಿತಾಗಿ ಕೂಡ. ಕವಿತೆ ನನಗೆ ಬಂದುದು ಇಂಗ್ಲಿಷ್ ಮೂಲಕ – ಶೆಲ್ಲಿ, ಕೀಟ್ಸ್, ಫಿಟ್ಝೆರಾಲ್ಡ್, ಮತ್ತು ಸ್ವಿನ್ಬರ್ನ್, ನನ್ನ ತಂದೆಯ ಆ ಮಹಾ ಪ್ರಿಯ ಕವಿಗಳು, ಅವರ ಕೃತಿಗಳಿಂದ ತಂದೆ ಪುಂಖಾನು ಪುಂಖವಾಗಿ ಉದ್ಧರಿಸಲು ಶಕ್ತರಾಗಿದ್ದರು, ಹಲವು ಸಲ ಉದ್ಧರಿಸುತ್ತಿದ್ದರು ಕೂಡಾ.

ಸಾಹಿತ್ಯದ ಒಂದು ಪರಂಪರೆ ನನ್ನ ತಂದೆಯ ಕುಟುಂಬದಲ್ಲಿ ಹರಿದು ಬಂದಿತ್ತು. ಅವರ ಮಾವ, ಜುವಾನ್ ಕ್ರಿಸೋಸ್ಟೋಮೋ ಲಫಿನೂರ್, ಅರ್ಜೆಂಟೀನದ ಮೊದಲ ಕವಿಗಳಲ್ಲಿ ಒಬ್ಬರಾಗಿದ್ದರು. ಅವರು ತನ್ನ ಗೆಳೆಯ ಜನರಲ್ ಮನುವೆಲ್ ಬೆಲ್ ಗ್ರೆಮೋನ ಮರಣದ ಬಗ್ಗೆ 1820ರಲ್ಲಿ ಪ್ರಗಾಥವೊಂದನ್ನು ಬರೆದಿದ್ದರು. ನನ್ನ ತಂದೆಯ ಬಂಧುವೊಬ್ಬರು, ಅಲ್ವರೋ ಮೆಲಿಯಾನ್ ಲಫಿನುರ್ ಎಂಬವರು – ನನಗವರನ್ನು ನನ್ನ ಚಿಕ್ಕಂದಿನಿಂದಲೂ ಗೊತ್ತಿತ್ತು – ಒಬ್ಬ ಪ್ರಮುಖ ಮೈನರ್ ಕವಿಯಾಗಿದ್ದು ನಂತರ ಅರ್ಜೆಂಟೈನ್ ಅಕಾಡೆಮಿ ಆಫ್ ಲೆಟರ್ಸ್ ನಲ್ಲಿ ಸ್ಥಾನ ಪಡೆದರು. ನನ್ನ ತಂದೆಯ ಮಾತಾ ಪಿತಾಮಹ, ಎಡ್ವರ್ಡ್ ಯಂಗ್ ಹಸ್ಲಾಮ್, ಅರ್ಜೆಂಟೀನಾದ ಮೊದಲ ಇಂಗ್ಲಿಷ್ ಪತ್ರಿಕೆಯೊಂದರ ಸಂಪಾದಕರಾಗಿ ಕೆಲಸ ಮಾಡಿದರು, ‘ಸದರ್ನ್ ಕ್ರಾಸ್,’ ಹಾಗೂ ಅವರು ಡಾಕ್ಟರ್ ಆಫ್ ಫಿಲಾಸಫಿ ಅಥವಾ ಲೆಟರ್ಸ್ ಆಗಿದ್ದರು, ಹೈಡೆಲ್ಬರ್ಗ್ ನ ಯಾವ ಯುನಿವರ್ಸಿಟಿಯಿಂದ ಎನ್ನುವುದು ನನಗೆ ನನಪಿಲ್ಲ. ಹಸ್ಲಾಮ್ ಗೆ ಆಕ್ಸ್ಫರ್ಡ್ ಅಥವಾ ಕೇಂಬ್ರಿಜ್ ಗೆ ಹೋಗುವುದು ಸಾಧ್ಯವಿರಲಿಲ್ಲ, ಅದ್ದರಿಂದ ಅವರು ಜರ್ಮನಿಯ ದಾರಿ ಹಿಡಿದರು. ಅಲ್ಲಿ ಲ್ಯಾಟಿನ್ ನ ಇಡೀ ಕೋರ್ಸು ಮೊದಲಿಂದ ಕೊನೆವರೆಗೆ ಮುಗಿಸಿ ಡಿಗ್ರಿ ಪಡೆದರು. ಕೊನೆಯಲ್ಲಿ ಪರಾನಾದಲ್ಲಿ ಅವರ ದೇಹಾಂತವಾಯಿತು.

ನನ್ನ ತಂದೆ ಒಂದು ಕಾದಂಬರಿ ಬರೆದಿದ್ದರು. ಅದರ ಹೆಸರು ‘ದಿ ಕಾಡಿಲ್ಲೋ.’ ಅವರೊಂದು ಪ್ರಬಂಧ ಸಂಕಲನವನ್ನೂ ಬರೆದಿದ್ದರು (ಮತ್ತು ಹರಿದು ಹಾಕಿದ್ದರು), ಮತ್ತು ಫಿಟ್ಝೆರಾಲ್ಡನ ಒಮರ್ ಖಯ್ಯಾಮನನ್ನು ಅನುವಾದಿಸಿ ಪ್ರಕಟಿಸಿದ್ದರು, ಮೂಲ ಛಂದಸ್ಸಿನಲ್ಲಿ. ಪೌರಾತ್ಯ ಕತೆಗಳ ಪುಸ್ತಕವೊಂದನ್ನು ಅವರು ನಾಶಪಡಿಸಿದರು – ಅರೇಬಿಯನ್ ನೈಟ್ಸ್ ತರದಲ್ಲಿ ಇತ್ತು ಅದು – ಮತ್ತು ‘ಹಸಿಯಾ ಲ ನಾಡಾ’ (‘ಶೂನ್ಯದ ಕಡೆಗೆ’) ಎಂಬ ಒಂದು ನಾಟಕವನ್ನು ಸಹಾ, ಅದು ತನ್ನ ಮಗನ ಕುರಿತಾದ ಒಬ್ಬ ಮನುಷ್ಯನ ನಿರಾಸೆಯ ಬಗ್ಗೆ ಇತ್ತು. ಅರ್ಜೆಂಟೈನ್ ಕವಿ ಎನ್ರಿಕ್ ಬಂಕ್ಸ್ ನ ಮಾದರಿಯಲ್ಲಿ ಕೆಲವೊಂದು ಉತ್ತಮ ಸುನೀತಗಳನ್ನೂ ಅವರು ಪ್ರಕಟಿಸಿದರು. ಅವರಿಗೆ ಅಂಧತ್ವ ಬಂದಾಗ ನಾನಿನ್ನೂ ಸಣ್ಣವನಿದ್ದೆ. ಸನ್ನಿವೇಶಗಳ ಕಾರಣ ನನ್ನ ತಂದೆಗೆ ವಂಚಿತವಾದ ಸಾಹಿತ್ಯಿಕ ವಿಧಿಯನ್ನು ನಾನು ಪೂರ್ಣಗೊಳಿಸಬೇಕೆನ್ನುವುದು ನಮ್ಮ ನಡುವೆ ಅಘೋಷಿತವಾಗಿ ಆದ ಒಪ್ಪಂದ. ಇದು ಅದರಷ್ಟಕ್ಕೇ ಸ್ವೀಕೃತವಾದ ಸಂಗತಿಯಾಗಿತ್ತು (ಅಂತಹ ಸಂಗತಿಗಳು ಬರೇ ಮಾತನಾಡಿದ ಸಂಗತಿಗಳಿಗಿಂತ ಅದೆಷ್ಟೋ ಹೆಚ್ಚು ಮಹತ್ವದ್ದಾಗಿರುತ್ತವೆ). ಹೀಗೆ ನಾನೊಬ್ಬ ಲೇಖಕನಾಗುವುದು ನಿರೀಕ್ಷಿಸಲ್ಪಟ್ಟ ವಿಷಯವಾಯಿತು.

ನನ್ನ ಆರೋ ಏಳೋ ವಯಸ್ಸಿನಲ್ಲಿ ನಾನು ಮೊದಲು ಬರೆಯಲು ಸುರುಮಾಡಿದ್ದು. ನಾನು ಸ್ಪ್ಯಾನಿಶ್ ನ ಅಭಿಜಾತ ಲೇಖಕರನ್ನು ಅನುಕರಿಸಿ ಬರೆಯಲು ಹೊರಟೆ – ಉದಾಹರಣೆಗೆ, ಮಿಗುವೆಲ್ ದ ಸರ್ವಾಂಟಿಸ್. ಕೆಟ್ಟ ಇಂಗ್ಲಿಷ್ ನಲ್ಲಿ ನಾನೊಂದು ಕೈಹೊತ್ತಗೆ ಇಟ್ಟುಕೊಂಡಿದ್ದೆ, ಅದರಲ್ಲಿ ಗ್ರೀಕ್ ಪುರಾಣ ಕತೆಗಳನ್ನು ಟಿಪ್ಪಣಿ ಮಾಡಿಕೊಂಡಿದ್ದೆ, ಅದು ಲೆಂಪ್ರಿಯೆರ್ ನಿಂದ ಎತ್ತಿಕೊಂಡದ್ದು ಎಂಬುದರಲ್ಲಿ ಸಂಶಯ ಬೇಡ. ಇದು ನನ್ನ ಮೊದಲ ಸಾಹಿತ್ಯಿಕ ಸಾಹಸ ಆಗಿರಬಹುದು. ಹಾಗೆಯೇ ನನ್ನ ಆರಂಭದ ಕತೆ ಸರ್ವಾಂಟಿಸ್ ನ ರೀತಿಯನ್ನು ಅನುಸರಿಸಿದ ಒಂದು ಅಸಂಬದ್ಧ ಬರಹ, ಹಳೆ ಮಾದರಿಯ ಒಂದು ರೊಮಾನ್ಸ್, ‘ಲ ವಿಸೆರಾ ಫೆಟಾಲ್’ (‘ಮಾರಣಾಂತಿಕ ಶಿರಸ್ತ್ರಾಣ’) ಎಂಬ ಹೆಸರಿನದು. ನಾನಿವುಗಳನ್ನು ಚಂದವಾಗಿ ಕಾಪಿ ಪುಸ್ತಕಗಳಲ್ಲಿ ಪ್ರತಿ ಮಾಡಿ ಇರಿಸಿದೆ. ನನ್ನ ತಂದೆ ಎಂದೂ ಹಸ್ತಕ್ಷೇಪ ಮಾಡಲಿಲ್ಲ. ಅವರಿಗೆ ನಾನು ಯಾವತ್ತೂ ನನ್ನದೇ ತಪ್ಪುಗಳನ್ನು ಮಾಡುವುದು ಬೇಕಿತ್ತು. ಒಮ್ಮೆ ಅವರು ಹೇಳಿದರು, ‘ಮಕ್ಕಳು ಅವರ ತಂದೆತಾಯಿಗಳಿಗೆ ಕಲಿಸುತ್ತಾರೆ, ತಂದೆತಾಯಿಯರು ಮಕ್ಕಳಿಗೆ ಅಲ್ಲ.’ ನನ್ನ ಒಂಬತ್ತರ ಸುಮಾರಿಗೆ ನಾನು ಆಸ್ಕರ್ ವೈಲ್ಡ್ ನ ‘ದ ಹ್ಯಾಪಿ ಪ್ರಿನ್ಸ್’ನ್ನು ಸ್ಪ್ಯಾನಿಶ್ ಗೆ ಅನುವಾದಿಸಿದೆ. ಅದು ಬ್ಯೂನೋಸ್ ಏರಿಸ್ ನ ಒಂದು ದಿನ ಪತ್ರಿಕೆ ‘ಎಲ್ ಪೈಸ್’ನಲ್ಲಿ ಪ್ರಕಟವಾಯಿತು. ಅದರಲ್ಲಿ ಕೊಟ್ಟ ನನ್ನ ಹೆಸರು ಜಾರ್ಜ್ ಬೋರ್ಹೆಸ್ ಎಂದು ಮಾತ್ರವಾದ ಕಾರಣ ಅದು ನನ್ನ ತಂದೆಯದು ಎಂದು ಜನ ಸಹಜವಾಗಿ ತಿಳಿದುಕೊಂಡರು.

ನನ್ನ ಆರಂಭದ ಶಾಲಾದಿನಗಳನ್ನು ನೆನಪು ಮಾಡಿಕೊಳ್ಳುವುದರಲ್ಲಿ ನನಗೆ ಏನೇನೂ ಸಂತೋಷವಿಲ್ಲ. ಒಂಬತ್ತನೆಯ ವಯಸ್ಸಿನ ತನಕ ನಾನು ಶಾಲೆ ಆರಂಭಿಸಿರಲಿಲ್ಲ. ಇದು ಯಾಕೆಂದರೆ, ನನ್ನ ತಂದೆ, ಒಬ್ಬ ಅರಾಜಕ ವಾದಿಯಾಗಿದ್ದು (ಅನಾರ್ಕಿಸ್ಟ್) ಸರಕಾರೀ ಸಂಸ್ಥೆಗಳೆಲ್ಲವನ್ನೂ ಸಂಶಯದಿಂದಲೆ ನೋಡುತ್ತಿದ್ದರು. ನಾನು ಕನ್ನಡಕ ಹಾಕಿದ್ದು, ಈಟನ್ ಕಾಲರ್ ಮತ್ತು ಟೈ ತೊಟ್ಟುಕೊಂಡಿದ್ದುದರಿಂದ, ಹವ್ಯಾಸಿ ಪುಡಾರಿಗಳಾಗಿದ್ದ ನನ್ನ ಹೆಚ್ಚಿನ ಶಾಲಾ ಸಹಪಾಠಿಗಳೂ ನನ್ನನ್ನು ಪೀಡನೆ ಮಾಡುತ್ತಿದ್ದರು. ಶಾಲೆಯ ಹೆಸರೀಗ ನನಗೆ ನೆನಪಿಗೆ ಬರುತ್ತಿಲ್ಲ, ಆದರೆ ಅದು ಥೆಮ್ಸ್ ರಸ್ತೆಯಲ್ಲಿತ್ತು ಎನ್ನುವುದು ನೆನಪಿನಲ್ಲಿದೆ. ನನ್ನ ತಂದೆ ಅನ್ನುತ್ತಿದ್ದರು, ಅರ್ಜೆಂಟೈನ್ ಚರಿತ್ರೆ ಧಾರ್ಮಿಕ ಪ್ರಶ್ನೋತ್ತರ ಮಾಲೆಯ (ಕೆಟಕಿಸಂ) ಜಾಗ ಪಡೆದುಕೊಂಡಿದೆ, ಆದ್ದರಿಂದ ಅರ್ಜೆಂಟೈನ್ ಆದ ಎಲ್ಲ ವಸ್ತುಗಳನ್ನೂ ನಾವು ಆರಾಧಿಸಬೇಕು ಎಂದು ನಿರೀಕ್ಷಿಸಲಾಗುತ್ತಿದೆ. ಉದಾಹರಣೆಗೆ, ನಮಗೆ ಅರ್ಜೆಂಟೈನ್ ಚರಿತ್ರೆಯನ್ನು ಕಲಿಸಲಾಗುತ್ತಿತ್ತು, ಅದಕ್ಕೆ ಕಾರಣೀಭೂತವಾದ ಹಲವು ನಾಡುಗಳ ಮತ್ತು ಶತಮಾನಗಳ ಪರಿಜ್ಞಾನ ನಮಗೆ ಆಗುವ ಮೊದಲೇ. ಸ್ಪ್ಯಾನಿಶ್ ಪ್ರಬಂಧಕ್ಕೆ ಬಂದರೆ, ಆಲಂಕಾರಿಕ ಶೈಲಿಯಲ್ಲಿ ಬರೆಯುವಂತೆ ನನಗೆ ಕಲಿಸಲಾಯಿತು: ‘ಎಕ್ವಿಲೋಸ್ ಕೆ ಲುಖರೋನ್ ಪೋರ್ ಉನಾ ಪಾಟ್ರಿಯಾ ಲಿಬ್ರೆ, ಇಂಡಿಪೆಂಡಿಯೆಂಟೆ, ಗ್ಲೋರಿಯೋಸಾ….’ (‘ಒಂದು ಮುಕ್ತ, ಸ್ವತಂತ್ರ, ಮತ್ತು ಕೀರ್ತಿಶಾಲಿ ರಾಷ್ಟ್ರಕ್ಕಾಗಿ ಹೋರಾಡಿದವರು….’). ಆಮೇಲೆ ಜಿನೇವಾದಲ್ಲಿ ನನಗೆ ಹೇಳಲಾಯಿತು, ಅಂಥ ಬರಹಕ್ಕೆ ಅರ್ಥವಿಲ್ಲ, ನಾನು ವಸ್ತುಗಳನ್ನು ನನ್ನ ಕಣ್ಣುಗಳಿಂದಲೇ ನೋಡಬೇಕು, ಎಂಬುದಾಗಿ. ನನ್ನ ತಂಗಿ ನೋರಾ, 1901ರಲ್ಲಿ ಜನಿಸಿದವಳು, ಹುಡುಗಿಯರ ಶಾಲೆಗೆ ಹೋಗುತ್ತಿದ್ದಳು.

ಈ ಎಲ್ಲಾ ವರ್ಷಗಳ ಕಾಲಾವಧಿಯಲ್ಲೂ ನಾವು ಬೇಸಿಗೆಯನ್ನು ಬ್ಯೂನೋಸ್ ಏರಿಸ್ ನ ದಕ್ಷಿಣಕ್ಕೆ ಹತ್ತು ಹದಿನೈದು ಮೈಲು ದೂರದಲ್ಲಿದ್ದ ಅದ್ರೋಗೆಯಲ್ಲಿ ಕಳೆಯುತ್ತಿದ್ದೆವು. ಅಲ್ಲಿ ನಮಗೆ ನಮ್ಮದೇ ಜಾಗವಿತ್ತು – ಮಾಳಿಗೆ ಇರದ ಒಂದು ದೊಡ್ಡ ಮನೆ, ಸುತ್ತಲ ನೆಲ, ಎರಡು ಬೇಸಿಗೆ ಕುಟೀರಗಳು, ಒಂದು ಗಾಳಿಗಿರಣಿ, ಮತ್ತು ಒಂದು ಒರಟುಗೂದಲಿನ ಕುರಿಗಾಹಿ ನಾಯಿ. ಅದ್ರೋಗೆ ಆಗ ಕಳೆದು ಹೋದ, ಯಾರಿಂದಲೂ ಉಪದ್ರವವಿರದ, ಒಳದಾರಿ ಸುಳಿದಾರಿಗಳಿದ್ದ ಬೇಸಿಗೆ ಮನೆಗಳ ಒಂದು ಸಮುಚ್ಚಯವಾಗಿತ್ತು, ಕಬ್ಬಿಣದ ಬೇಲಿಗಳಿಂದ ಸುತ್ತುವರಿದಂಥ ಆವರಣ, ಪ್ರತಿ ಮನೆಯ ಗೇಟಿಗೂ ಗಾರೆಗೆಲಸದ ಸಸ್ಯ ಕುಂಡಗಳು, ಪಾರ್ಕುಗಳು, ಹಲವಾರು ವರ್ತುಲಗಳಿಂದ ಸುತ್ತಲೂ ಹೊರಡುವ ಬೀದಿಗಳು, ನೀಲಗಿರಿ ಮರಗಳ ಸರ್ವತ್ರ ಪರಿಮಳ. ನಾವು ಹಲವು ದಶಕಗಳ ಕಾಲ ಅದ್ರೋಗೆಯ ಭೇಟಿಯನ್ನು ಮುಂದುವರಿಸಿದೆವು.

ಪಂಪಾದ (ಮರಗಳಿಲ್ಲದ ವಿಶಾಲ ಬಯಲು) ನನ್ನ ಮೊದಲ ಅನುಭವ ಆದುದು 1909ರಲ್ಲಿ, ಬ್ಯೂನೋಸ್ ಏರಿಸ್ ನ ವಾಯವ್ಯ ದಿಕ್ಕಿನಲ್ಲಿದ್ದ ಸಾನ್ ನಿಕೊಲಾಸ್ ನ ನಮ್ಮ ಬಂಧುಗಳಿಗೆ ಸೇರಿದ ಸ್ಥಳಕ್ಕೆ ಪ್ರವಾಸ ಹೋದಾಗ. ಕ್ಷಿತಿಜದಲ್ಲಿ ಕಾಣಿಸುತ್ತಿದ್ದ ಅತಿ ಸಮೀಪದ ಮನೆಯೊಂದು ಕಲೆಯಂತೆ ಇತ್ತು ಎನ್ನುವುದು ನನ್ನ ನೆನಪಿಗೆ ಬರುತ್ತದೆ. ಈ ಕೊನೆಯಿಲ್ಲದ ದೂರವೇ ಪಂಪಾ ಎನ್ನುವುದನ್ನು ನಾನು ಕಂಡುಕೊಂಡೆ. ಅಲ್ಲಿನ ಕೃಷಿ ಕಾರ್ಮಿಕರೇ ಗೌಚೋಗಳು, ಎಡುವರ್ಡೋ ಗುಟಿಯೆರೆಝ್ ನಲ್ಲಿ ಬರುವಂಥ ಪಾತ್ರಗಳು ಎನ್ನುವುದನ್ನು ಅರಿತಾಗ, ನನ್ನ ದೃಷ್ಟಿಯಲ್ಲಿ ಅವರಿಗೊಂದು ಆಕರ್ಷಣೆ ಬಂತು. ನಾನು ಯಾವತ್ತೂ ವಸ್ತುಗಳಿಗೆ ಬಂದುದು ಪುಸ್ತಕಗಳಲ್ಲಿ ಅವುಗಳನ್ನು ಕಂಡಮೇಲೆಯೇ. ಒಮ್ಮೆ ನನಗೆ ಅವರ ಜೊತೆ ಕುದುರೆ ಮೇಲೆ ಹೋಗುವುದಕ್ಕೆ ಅನುಮತಿ ಸಿಕ್ಕಿತು, ಜಾನುವಾರುಗಳನ್ನು ಒಂದು ಮುಂಜಾನೆ ಹೊಳೆಗೆ ಒಯ್ಯುತ್ತ ಇರುವಾಗ. ಆ ಜನರು ಹೆಚ್ಚು ಎತ್ತರ ಇರಲಿಲ್ಲ, ಕುಳ್ಳಗೆ, ಕಪ್ಪೊತ್ತಿದವರಾಗಿ ಇದ್ದರು, ಮತ್ತು ಬೊಂಬಾಚಾಸ್ ಎಂದು ಕರೆಯುವ ಅಗಲದ ಒಂದು ತರದ ದೊಗಲೆ ಪ್ಯಾಂಟು ತೊಟ್ಟಿದ್ದರು. ನಿಮಗೆ ಈಜಲು ಬರುತ್ತದೆಯೇ ಎಂದು ನಾನವರನ್ನು ಕೇಳಿದಾಗ, ಅವರಂದುದು, ‘ನೀರಿರುವುದು ಜಾನುವಾರುಗಳಿಗೆ,’ ಎಂದು. ಅವರ ಮುಂದಾಳಿನ ಮಗಳಿಗೆ ನನ್ನ ಅಮ್ಮ ಒಂದು ದೊಡ್ಡ ರಟ್ಟಿನ ಪೆಟ್ಟಿಗೆಯಲ್ಲಿ ಬೊಂಬೆಯೊಂದನ್ನು ಉಡುಗೊರೆಯಿತ್ತಳು.

ಮುಂದಿನ ವರ್ಷ ನಾವು ಅಲ್ಲಿ ಮರಳಿದಾಗ ಹುಡುಗಿ ಬಗ್ಗೆ ವಿಚಾರಿಸಿದೆವು. ‘ಎಷ್ಟೊಂದು ಖುಷಿ ಕೊಟ್ಟಿದೆ ಬೊಂಬೆ ಅವಳಿಗೆ!’ ಎಂದರು ಅವರು ನಮಗೆ. ನಮಗದನ್ನು ತೋರಿಸಿದರು ಕೂಡ, ಅದಿನ್ನೂ ಪೆಟ್ಟಿಗೆಯೊಳಗೇ ಇತ್ತು, ಮೊಳೆ ಬಡಿದು ಗೋಡೆ ಮೇಲೆ, ಒಂದು ಪ್ರತಿಮೆಯ ಹಾಗೆ ಇಟ್ಟಿದ್ದರು. ನಿಜ, ಹುಡುಗಿಗೆ ಅದನ್ನು ನೋಡಲು ಮಾತ್ರ ಅನುಮತಿಯಿತ್ತಷ್ಟೆ, ಮುಟ್ಟುವುದಕ್ಕಲ್ಲ, ಯಾಕೆಂದರೆ ಮುಟ್ಟಿದರೆ ಅದು ಕೊಳಕಾಗಬಹುದಿತ್ತು, ಇಲ್ಲವೇ ಹಾಳಾಗಬಹುದಿತ್ತು. ಗೋಡೆ ಮೇಲೆ ಎತ್ತರದಲ್ಲಿ ಇತ್ತು ಅದು, ಹಾಳುಗೀಳು ಆಗದ ಹಾಗೆ, ದೂರದಿಂದ ಆರಾಧಿಸಲ್ಪಡುತ್ತ. ಲುಗೋನೆಸ್ ಬರೆಯುತ್ತಾನೆ, ಕೋರ್ದೋಬಾದಲ್ಲಿ, ಪತ್ರಿಕೆಗಳು ಪರಿಚಯವಾಗುವ ಮೊದಲು, ಗೌಚೋಗಳ ಗುಡಿಸಲುಗಳಲ್ಲಿ ಇಸ್ಪೀಟೆಲೆಯನ್ನು ಚಿತ್ರವೆಂದು ಪರಿಗಣಿಸಿ, ಗೋಡೆಗೆ ಬಡಿದಿರುವುದನ್ನು ತಾನು ನೋಡಿರುವುದಾಗಿ. ನಾಲ್ಕರ ಹಾಟ್ರ್ಸ್ (ಆಟೀನು) ಇಷ್ಟದ ಎಲೆಯಾಗಿತ್ತು, ಅದರ ಪುಟ್ಟ ಸಿಂಹ, ಮತ್ತು ಎರಡು ಮಿನಾರಗಳನ್ನು ಎಲ್ಲರೂ ವಿಶೇಷವಾಗಿ ಆಸೆಪಡುತ್ತಿದ್ದರು. ನನಗನಿಸುತ್ತದೆ, ನಾನು ಜಿನೇವಾಕ್ಕೆ ಹೋಗುವ ಮೊದಲು, ಬಹುಶಃ ಅಸ್ಕಾಸುಬಿಯ ಪ್ರಭಾವದಲ್ಲಿ, ಗೌಚೋಗಳ ಕುರಿತು ಕವಿತೆಯೊಂದನ್ನು ಬರೆಯಲು ಸುರುಮಾಡಿದೆನೆಂದು. ಎಷ್ಟು ಗೌಚೋ ಪದಗಳು ಸಾಧ್ಯವೋ ಅಷ್ಟನ್ನೂ ಒಳಗೊಳ್ಳಲು ನಾನು ಪ್ರಯತ್ನಿಸಿದೆ, ಆದರೆ ತಾಂತ್ರಿಕ ಸಮಸ್ಯೆಗಳು ನನ್ನ ಕೈಮೀರಿದ್ದುವು. ಕೆಲವು ಚರಣಗಳ (ಸ್ಟಾಂಜಾಗಳ) ಅಚೆ ಹೋಗಲು ನನಗೆ ಸಾಧ್ಯವಾಗಲಿಲ್ಲ.

 

ಮುಂದುವರೆಯುವುದು…