ದೇಶಭ್ರಷ್ಟತೆಯನ್ನು ಆಯ್ದುಕೊಂಡ ಲೇಖಕರು ದಕ್ಷಿಣ ಆಫ್ರಿಕದ ಕುರಿತು ವಿಫುಲವಾಗಿ ಬರೆಯತೊಡಗಿದರು. ಅದಕ್ಕಾಗಿ ವಿವಿಧ ಪ್ರಕಾರಗಳನ್ನುಆಯ್ದುಕೊಂಡರು. ಅವುಗಳಲ್ಲಿ ಆತ್ಮಚರಿತ್ರೆ ಅತ್ಯಂತ ಪ್ರಿಯವಾದ ಪ್ರಕಾರವಾಯಿತು. ಅನುಭವ ಕಥನವು ಆತ್ಮಚರಿತ್ರೆಯ ರೂಪದಲ್ಲಿ, ಹೊಸ ಪದವಿನ್ಯಾಸದಲ್ಲಿ ಗೋಚರಿಸತೊಡಗಿತು. ಪರದೇಸಿಗರಾದ ದಕ್ಷಿಣ ಆಫ್ರಿಕನ್ ಬುದ್ಧಿಜೀವಿಗಳಿಗೆ ಆತ್ಮಕಥೆ ಹೊಸ ಅಸ್ತಿತ್ವವನ್ನು ನೀಡಿದ ಪ್ರಕಾರವಾಯಿತು. ಇತ್ತ, ತಾಯ್ನೆಲದಲ್ಲಿ ಭಾವಗೀತೆ ಅರಳತೊಡಗಿತ್ತು. ಕಾವ್ಯಾಭಿವ್ಯಕ್ತಿಗೆ ಹೊಸಬರು ಸೇರಿಕೊಂಡಂತೆಲ್ಲ ಅಭಿವ್ಯಕ್ತಿ ರೂಕ್ಷವಾಗತೊಡಗಿತು.
ಕೇಶವ ಮಳಗಿ ಬರೆದ ‘ಗುಂಡಿಗೆಯ ಬಿಸಿರಕ್ತ: ಆಫ್ರಿಕನ್‌ ಸಂಕಥನ’ ಪುಸ್ತಕದ ಪ್ರವೇಶಿಕೆ ನಿಮ್ಮ ಓದಿಗೆ

 

ಆಫ್ರಿಕನ್ ಸಾಹಿತ್ಯದ ಒಂದು ವಿಶಾಲ ನೋಟ

ಈ ಕಪ್ಪು ವಿಶಾಲ ಭೌಗೋಳಿಕ ಪ್ರದೇಶವನ್ನು ಮಾನವನ ವಿಕಾಸದ ತೊಟ್ಟಿಲು ಎನ್ನುತ್ತಾರೆ. ಅಬ್ಜ ವರ್ಷಗಳ ಹಿಂದೆ ಈ ತಾವಿನಿಂದಲೇ ಮನುಷ್ಯ ಅಂಬೆಗಾಲಿಟ್ಟು, ತೊದಲು ನುಡಿ, ಒಂಟಿ ಹೆಜ್ಜೆಯ ನಡೆ ಕಲಿತು, ದಾಂಗುಡಿಯಿಡುತ್ತ ವಿಶ್ವದೆಲ್ಲೆಡೆ ಪಸರಿಸಿ, ವಿವಿಧ ಬಣ್ಣ, ರೂಪಗಳ ಧರಿಸಿ ಬದುಕುವುದನ್ನು ಕಲಿತನೆಂದು ಎಲ್ಲ ಬಗೆಯ ಶಾಸ್ತ್ರಗಳು ಹೇಳುತ್ತವೆ. ತೀರ ಇತ್ತೀಚಿನ ಡಿಎನ್‌ಎ ಅಧ್ಯಯನ ಸಂಶೋಧನಾ ಸತ್ಯಗಳೂ ಅದನ್ನೇ ಅರಹುವವು. ಹಾಗೆಂದೇ, ಮನುಷ್ಯನ ನಾಗರಿಕತೆಗೆ ಆಫ್ರಿಕ ಒಂದು ಬಹುಮೂಲ್ಯ ವಜ್ರ. ಈ ಖಂಡದ ಬದುಕು ಕಲ್ಲುಬಂಡೆ, ಮುಖವಾಡ, ಶಿಲ್ಪ, ಗುಹೆ, ಪಿರಮಿಡ್ಡು, ಹಸ್ತಪ್ರತಿ, ಉಲಿ ಹೀಗೆ ವಿವಿಧ ಪ್ರಕಾರಗಳಲ್ಲಿ, ವಿವಿಧ ಪ್ರತಿಮೆಗಳಲಿ ಒಡಮೂಡಿವೆ. ವಿಶ್ವದ ಪ್ರಾಗೈತಿಹಾಸ, ಇತಿಹಾಸ, ಆಧುನಿಕ ಚರಿತ್ರೆ, ಮಾನವಶಾಸ್ತ್ರ, ಸಮಾಜಶಾಸ್ತ್ರ, ಜಾನಪದಶಾಸ್ತ್ರಗಳ ಅಧ್ಯಯನಗಳು ಈ ಖಂಡಕ್ಕೆ ಮುಖ್ಯ ಪಾಲನ್ನು ನೀಡದೆ ಮುಂದಡಿ ಇಡವು. ವಿಶ್ವದ ಅತಿ ಹೆಚ್ಚು ಕಲ್ಲುಬಂಡೆ ಬಣ್ಣದ ಚಿತ್ರಗಳು ಸಿಗುವುದು ಇಲ್ಲಿಯೇ. ಬೇಟೆ-ಬೇಟ, ಆಟ-ನೋಟ-ಊಟ, ಅರ್ಚನೆ-ಆಚರಣೆ, ಹುಟ್ಟು-ಹಸೆ ಇತ್ಯಾದಿಗಳನು ತೆರೆದಿಡುವ ಪ್ರಾಗೈತಿಹಾಸ ಚಿತ್ರಗಳೇ ಲಿಪಿಯ ಹುಟ್ಟಿಗೆ ಮೂಲ ಎಂಬುದು ಸಂಜ್ಞಾವಿಜ್ಞಾನದ ನಂಬುಗೆ.

ಹಳೆಯ ಲಿಪಿಗಳಲ್ಲೊಂದೆಂದು ಗುರುತಿಸಲಾಗುವ ಗೀಸ್‌ (ಕ್ರಿ. ಪೂ. ಐದನೆಯ ಶತಮಾನ) ಮೈದಳೆದದ್ದು ಈ ಖಂಡದಲ್ಲಿಯೇ. ಗುಹೆಗಳ ರೇಖಾಚಿತ್ರಗಳಿಂದ ಸಂಜ್ಞೆ, ಶಬ್ದ, ಲಿಪಿ, ಭಾಷೆಗಳು ವಿಕಾಸ ಹೊಂದಿ, ಆಧುನಿಕ ಲೋಕವನ್ನು ಬಿಡದೆ ಕಾಡುವ ಮಾಯೆಯಾಗಿ ಕಾಣಿಸುವುದು ಈ ಖಂಡಕ್ಕೇ ಹೇಳಿ ಮಾಡಿಸಿದ್ದು.

ಬುಡಕಟ್ಟು ಜನಾಂಗ, ಜೀವನ ಪದ್ಧತಿ, ಸಂಸ್ಕೃತಿ, ಆಚರಣೆ ಮತ್ತು ನಂಬಿಕೆಗಳು ಈ ವಿಶಾಲ ಭೌಗೋಳಿಕ ಸಮುದಾಯಗಳ ದರ್ಶನವನ್ನು ರೂಪಿಸಿವೆ. ಇಲ್ಲಿನ ಸಾಂಸ್ಕೃತಿಕ ವಿಶಿಷ್ಟತೆ ವಿಶ್ವ ಸಂಶೋಧನೆಯ ಆಕರಗಳು. ಬುಡಕಟ್ಟು ನಾಗರಿಕತೆ ನಿರ್ಮಿಸಿದ ವಿವಿಧ ಬಗೆಯ ಜ್ಞಾನ ಶಿಸ್ತು ಮತ್ತು ಪರಂಪರೆಯನ್ನು ಅರ್ಥ ಮಾಡಿಕೊಳ್ಳಲು ಜೀವನವನ್ನೇ ಮುಡಿಪಿಟ್ಟ ದೇಸಿ-ವಿದೇಶಿ ವಿದ್ವಾಂಸರ ಸಂಖ್ಯೆ ಅಪಾರ. ಆಫ್ರಿಕನ್ ಖಂಡದ ಅಧ್ಯಯನಗಳಲ್ಲಿ ಸಾಮಾನ್ಯವಾಗಿ ಎರಡು ಬಗೆಯ ವಿಧಾನಗಳನ್ನು ಗುರುತಿಸಲಾಗುತ್ತದೆ. ಪಶ್ಚಿಮ ದೃಷ್ಟಿಕೋನದ ಆಫ್ರಿಕನ್ ಅಧ್ಯಯನಗಳು ಒಂದು ರೀತಿಯವಾದರೆ, ಸ್ಥಳೀಯ ವಿದ್ವಾಂಸರು ತಮ್ಮ ಸಂಸ್ಕೃತಿ-ಸಮಾಜವನ್ನು ವಸಾಹತು ಅರಿವಿನಿಂದ ಬಿಡಿಸಿಕೊಂಡು ಕೈಗೊಳ್ಳುವ ಸಂಶೋಧನೆಗಳು ಇನ್ನೊಂದು ವಿಧವಾಗಿವೆ. ಯುರೋ-ಕೇಂದ್ರಿತ ಅಧ್ಯಯನಗಳಲ್ಲೂ ಸಮಚಿತ್ತ, ಪಕ್ವತೆ, ಸ್ವಾನುಭೂತಿಯ ನಿಲುವು, ಗಹನವಾದ ಗ್ರಹಿಕೆಗಳು ಕಂಡು ಬರುತ್ತವೆ. ಅಂತೆಯೇ, ಸ್ಥಳೀಯ ಪರಿಕರ, ನೋಟಗಳಿಂದ ಕಟ್ಟಿದ ಅಧ್ಯಯನಗಳಲ್ಲಿ ನೇರ ಜೀವನಾನುಭವದಿಂದ ದತ್ತವಾಗಿ ಪ್ರಾಪ್ತವಾಗುವ ಸಂವೇದನಾಶೀಲತೆ, ಸೂಕ್ಷ್ಮತೆಗಳಿಂದ ಹುಟ್ಟುವ ಸಾಮುದಾಯಿಕ ವಿಶಿಷ್ಟ ಒಳನೋಟ ಮತ್ತು ಹೊಸ ದರ್ಶನದ ಪ್ರಸ್ತಾವಗಳು ಕಣ್ಣು ಕುಕ್ಕುತ್ತವೆ. ಜತೆಗೆ, ಸಂಸ್ಕೃತಿಯ ಕುರಿತು ವ್ಯಸನಿಗಳಾಗಿ ಎಲ್ಲವನ್ನೂ ತಿರಸ್ಕರಿಸುತ್ತ ಹಳೆಯದರ ಹಳಹಳಿಕೆಯಲ್ಲಿ ಶುದ್ಧತೆಯನ್ನು ಹುಡುಕುವ ಸಿಡುಕು ನುಡಿಗಳೂ ಕಿವಿಯನ್ನು ಅಪ್ಪಳಿಸುತ್ತವೆ.

ವಿಶ್ವದ ಎಲ್ಲ ನಾಗರಿಕತೆಗಳ ಮೂಲವಾದ ಮೌಖಿಕ ಪರಂಪರೆಯೇ ಆಫ್ರಿಕನ್ ಅಭಿವ್ಯಕ್ತಿಯ ಮುಖ್ಯ ಆಸರೆಯೂ ಆಗಿದೆ. ಇದ್ದರೂ ವಿವಿಧ ಕಾಲಘಟ್ಟಗಳಲ್ಲಿ ಸಮಾಜದ ವಿಕಾಸದ ಚಕ್ರಕ್ಕೆ ಸಿಲುಕಿ ಮೌಖಿಕ ಪರಂಪರೆಗಳು ರೂಪಾಂತರ ಹೊಂದಬಲ್ಲವು. ಇಂತಹ ಪರಂಪರೆಗಳು ತಮ್ಮ ಮೂಲಸ್ವರೂಪವನ್ನು ಉಳಿಸಿಕೊಂಡಾಗಲಷ್ಟೇ ನಾವು ಹಳೆಯದರಿಂದ ಏನನ್ನಾದರೂ ಕಲಿಯಲು ಸಾಧ್ಯ, ಎಂಬ ಚರ್ಚೆಯ ಸಾಧಕ-ಬಾಧಕಗಳೇನೆ ಇರಲಿ ಸಂಸ್ಕೃತಿ ತನ್ನ ಚಲನಶೀಲತೆಯನ್ನು ಕಳೆದುಕೊಂಡು ಸ್ಥಗಿತವಾದಾಗ ಅದೊಂದು ಅರ್ಥವಾಗದ ಭಾಷೆಯ ಪುರಾತನ ತಾಳೆಗರಿಯಂತಾಗುವುದು. ಚಲನಶೀಲತೆಯೇ ಅರಿವಿನ ಮೂಲ ಸ್ವಭಾವವಾಗಿದೆ. ಈ ಅಂಶವನ್ನು ಅನೇಕ ಸೂಕ್ಷ್ಮಮತಿ ಆಫ್ರಿಕನ್ ಲೋಕಹಿತ ಚಿಂತಕರು ಅರಿತುಕೊಂಡಿದ್ದಾರೆ. ಹಾಗಾಗಿಯೇ, `ವಸಾಹತು ಅರಿವಿನ ನಿವಾರಣೆ’ (ಡಿಕೊಲನೈಸೇಶನ್ ಆಫ್ ಮೈಂಡ್) ಎಂದು ಹೇಳುವಾಗ ಕೂಡ `ನಿರಾಕರಣೆ’ ಎಂಬರ್ಥದಲ್ಲಿ ಆ ಪದವನ್ನು ಬಳಸುತ್ತಿಲ್ಲ. ನಿವಾರಣೆ ಮತ್ತು ನಿರಾಕರಣೆಗಳ ನಡುವೆ ಬಹುದೊಡ್ಡ ವ್ಯತ್ಯಾಸವಿದೆ.

(ಕೇಶವ ಮಳಗಿ)

ಯಾವುದೇ ಜ್ಞಾನಪರಂಪರೆಯನ್ನು ನಿರ್ಮಿಸಿದ ವ್ಯವಸ್ಥೆಯ ವಿಶಿಷ್ಟ ಗುಣ, ವಿಧಾನವನ್ನು ಅರ್ಥೈಸಿಕೊಳ್ಳುವುದರಲ್ಲಿ, ಅವುಗಳ ಅನ್ವಯಿಕೆಯಲ್ಲಿ ಈ ವಿದ್ವಾಂಸರು ಮುಕ್ತವಾಗಿದ್ದಾರೆ. ವ್ಯಕ್ತಿ ಮತ್ತು ಸಾಮುದಾಯಿಕ ಪ್ರಜ್ಞೆಯ ಭಾಗವಾಗಿ ಅಭಿವ್ಯಕ್ತಿ ಪಡೆದ ಮೌಖಿಕ ಪರಂಪರೆಯ `ಹೊರಸುರಿ’ಗಳನ್ನು ಈ ವಿದ್ವಾಂಸರು ಜ್ಞಾನಮೀಮಾಂಸೆಯಾಗಿ ಸ್ವೀಕರಿಸುತ್ತಾರೆ. ಕಲೆ, ಪ್ರದರ್ಶನ, ಸಂಗೀತ, ಹಾಡು, ಕಥೆ, ದೈವಾರಾಧನೆ, ಸಂಸ್ಕಾರಗಳ ಆಚರಣೆ, ಜಾತ್ರೆ ಇತ್ಯಾದಿಗಳ ರೂಪದಲ್ಲಿ ಈ `ಹೊರಸುರಿ’ಗಳು ವ್ಯಕ್ತವಾಗಬಹುದು. ಕೆಲವು ವ್ಯಕ್ತಿಕೇಂದ್ರಿತವಾಗಿದ್ದರೆ, ಹಲವು ಸಾಮುದಾಯಿಕ ಕೇಂದ್ರವಾಗಿರಬಹುದು. ಇದ್ದರೂ, ಇಲ್ಲಿನ ಸಹಭಾಗಿತ್ವದ ಪರಿಕಲ್ಪನೆ ವ್ಯಕ್ತಿ ಸಮುದಾಯದ ಭಾಗವಾಗಿ ಮಾರ್ಪಡುವಂತೆ ಮಾಡುತ್ತದೆ. ಕ್ರಿಯೆ ಸಾಮುದಾಯಿಕವಾಗಿದ್ದರೂ ವ್ಯಕ್ತಿಗೆ ನೀಡಬೇಕಾದ ಮಹತ್ವಕ್ಕೆ ಗಮನ ನೀಡುವಂತೆ ವಿಧಿವಿಧಾನಗಳನ್ನು ಕಲ್ಪಿಸಲಾಗಿರುತ್ತದೆ. ಹೀಗೆ ಸಾಮುದಾಯಿಕವಾಗಿ ಕಟ್ಟಲಾದ ಅನುಭವವನ್ನು ಜ್ಞಾನಮೀಮಾಂಸೆಯಾಗಿ ಸ್ವೀಕರಿಸಿ, ಅದನ್ನು ಸಾಂಸ್ಕೃತಿಕ ಅಧ್ಯಯನದ ಚೌಕಟ್ಟಿಗೆ ತರುವಲ್ಲಿ ಇಲ್ಲಿನ ಸ್ಥಳೀಯ ವಿದ್ವಾಂಸರು ತೋರುತ್ತಿರುವ ಸ್ವೋಪಜ್ಞತೆ ಮಹತ್ವದ್ದಾಗಿದೆ.

ಸಾಮುದಾಯಿಕ ದರ್ಶನವನ್ನು ಆಧುನಿಕ ಸಿದ್ಧಾಂತಗಳೊಂದಿಗೆ ಸಮೀಕರಿಸಿ ಅದಕ್ಕೆ ಅನ್ವಯಿಕ ಸ್ವರೂಪ ನೀಡಿರುವುದು ಕೂಡ ವಿಶ್ವ ಜ್ಞಾನ ಪರಂಪರೆಗೆ ಆಫ್ರಿಕ ನೀಡಿರುವ ಕೊಡುಗೆಯೇ ಆಗಿದೆ. ಆ ಅರ್ಥದಲ್ಲಿ ವಿಶ್ವವು ಆಫ್ರಿಕನ್ ಹೊಸ ಜ್ಞಾನ ಪ್ರಸ್ತಾವನೆಯಿಂದ ಕಲಿಯುವುದು ಬಹಳಷ್ಟಿದೆ.

ಹೀಗೆ ಹೇಳುವಾಗ ಕೆಲವು ಅಂಶಗಳು ನಮ್ಮ ಗಮನಕ್ಕೆ ಬರುತ್ತವೆ. ಆಫ್ರಿಕನ್ ಸಮಾಜಗಳು ಬುಡಕಟ್ಟು ಮೂಲದ್ದವಾಗಿ, ನಂಬಿಕೆಯ ಸ್ವರೂಪ ಬೇರೆಯದೇ ಆದರೂ ವಿಕಾಸದ ಗತಿಯಲ್ಲಿ ಬೇರೆ ವಿಚಾರಗಳಿಗೆ ಅವು ಮುಕ್ತವಾಗಿ ತೆರೆದುಕೊಂಡಿವೆ. ಆರಂಭಿಕವಾಗಿ ಕ್ರಿಶ್ಚಿಯಾನಿಟಿಯೊಂದಿಗೆ, ಆನಂತರ ಇಸ್ಲಾಂ ಧರ್ಮದೊಂದಿಗೆ, ಬಳಿಕ ವಸಾಹತುಶಾಹಿ ಆಡಳಿತದೊಂದಿಗೆ ಅವು ಬಾಳ್ವೆ ನಡೆಸಿವೆ. ಇಲ್ಲಿ, ನಿರಾಕರಣೆ, ಸಂಘರ್ಷ, ವಾಗ್ವಾದ, ಸಂವಾದ, ಸ್ವೀಕಾರ, ಸಹಬಾಳ್ವೆ ಇತ್ಯಾದಿ ಪರಿಕಲ್ಪನೆಗಳೆಲ್ಲವೂ ನಿರಂತರವಾಗಿ ಕೆಲಸ ಮಾಡಿವೆ. ಹೀಗಾಗಿಯೇ, ಈ ಬಗೆಯ ಅನುಭವಕ್ಕೆ ಪಕ್ಕಾದ ದೇಶಗಳು, ಆಫ್ರಿಕನ್ ಸಮಾಜವನ್ನು ಹೃದಯದಿಂದ ಅರ್ಥ ಮಾಡಿಕೊಳ್ಳುವುದು ಸುಲಭ, ಎಂದು ವಿದ್ವತ್ ವಲಯದ ಮಾತಿದೆ. ಅಂದರೆ, ನಮ್ಮ ಅಂತರಂಗದ ದರ್ಶನದ ನಂಬಿಕೆ ಏನೇ ಇದ್ದರೂ ಹೊರಾವರಣದಲ್ಲಿ ನಮ್ಮನ್ನು ಆವರಿಸಿರುವ ಹೊಸ ವಿಚಾರಗಳೊಂದಿಗೆ ಬದುಕುವುದು ಅನಿವಾರ್ಯವೆಂಬ ತಿಳುವಳಿಕೆಯನ್ನು ಪಡೆಯುವುದು. ನಾವು ಪರಾಧೀನರಾಗಿದ್ದಾಗಲೂ ನಮ್ಮ ಅಸ್ತಿತ್ವವನ್ನು ಹೇಗೆ ಮರಳಿ ಗಳಿಸಬೇಕೆಂದು ಚಿಂತಿಸಿ, ಉಪಕ್ರಮ ರೂಪಿಸಿ, ಸದ್ಯದ ವಾಸ್ತವದಲ್ಲಿ ಬದುಕನ್ನು ಕಟ್ಟಿಕೊಳ್ಳುವುದು.

ಕ್ರಿಶ್ಚಿಯಾನಿಟಿ, ಇಸ್ಲಾಂಧರ್ಮ ಮತ್ತು ವಸಾಹತುಶಾಹಿ ಆಳ್ವಿಕೆ ಈ ಮೂರೂ ಬಗೆಗಳಿಗೆ ಆಫ್ರಿಕಾದಂತೆಯೇ ಏಶಿಯ ಮತ್ತು ಲ್ಯಾಟಿನ್ ಅಮೆರಿಕದ ದೇಶಗಳು ಒಳಗಾದುದು ಐತಿಹಾಸಿಕ ಸತ್ಯ. ಪಾಶ್ಚಾತ್ಯರಲ್ಲದವರು ಮತ್ತು ವಸಾಹತುಶಾಹಿ ಆಳ್ವಿಕೆಗೆ ಒಳಗಾದವರು ಹೊಸ ಚಿಂತನಾಕ್ರಮವನ್ನು ರೂಪಿಸಬೇಕು, ಈಗಾಗಲೇ ಇರುವ ಪ್ರಸ್ತಾವನೆಯನ್ನು ತಮ್ಮ ಅನುಭವದ ಮೂಸೆಯಲ್ಲಿ ಕರಗಿಸಿ, ಹೊಸ ಆಕಾರ ನೀಡುತ್ತ ಹೊಸ ಚಿಂತನಾ ಸಂಸ್ಕೃತಿ ಹುಟ್ಟು ಹಾಕಬೇಕೆಂಬುದು ಅನೇಕ ಆಫ್ರಿಕನ್ ವಿದ್ವಾಂಸರ ಅಭಿಮತ. ಆಗ `ಜಾಗತಿಕ ದಕ್ಷಿಣ’ವು (ಗ್ಲೋಬಲ್ ಸೌತ್: ಮೂರನೆಯ ಅಥವ ಅಭಿವೃದ್ಧಿ ಹೊಂದಿಲ್ಲದ ರಾಷ್ಟ್ರಗಳು ಎಂಬ ಸವಕಲು ಪರಿಕಲ್ಪನೆಗೆ ಸಂವಾದಿ ನುಡಿಗಟ್ಟು) ವಿಶ್ವದ ಅತ್ಯಂತ ಸಂಕೀರ್ಣ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ಸರಾಗವಾಗಬಹುದು, ಎಂಬ ಆಶಯ ಈ ನಂಬಿಕೆಯ ಹಿಂದಿದೆ. ಇಂತಹ ನಂಬಿಕೆಗೆ `ಜನಪದ ಮೌಖಿಕತೆ ಹುಟ್ಟು ಹಾಕಿದ ಅನ್ವೇಷಣೆ’ಗಳು ಬುನಾದಿಯನ್ನು ಒದಗಿಸಬೇಕು. ಮನುಷ್ಯನ ಬುದ್ಧಿ ರೂಪಿಸುವ ಮುತ್ಸದ್ದಿತನ ಮತ್ತು ಸಿದ್ಧಾಂತಗಳಿಗಿಂತ ಇಂದ್ರಿಯಾನುಭವ ಮತ್ತು ಸಾಮುದಾಯಿಕ ಒಳಗಣ್ಣಿನ ಮೂಲಕ ಪಡೆದ ದರ್ಶನವು ಹೆಚ್ಚು ಮಾನವೀಯವೂ, ಸಾವಯವವೂ ಆಗಿರುತ್ತದೆ, ಎಂಬುದೇ ಇದರ ಹಿಂದಿನ ಸರಳ ಕಾರಣವಾಗಿದೆ.

ಬಿಡುಗಡೆ ಪಡೆದ ಮೇಲಿನ ನರಕ, ಸಾಹಿತಿಯ ಪಾತ್ರ

1960ರ ಸುಮಾರಿಗೆ ಪಶ್ಚಿಮ ಆಫ್ರಿಕಾದ ಬಹುತೇಕ ರಾಷ್ಟ್ರಗಳು ಯುರೋಪ್ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಪಡೆದವು. ಯುರೋಪಿನ ನಿರ್ಗಮನ ಈ ಭಾಗದ ದೇಶಗಳಲ್ಲಿ ರಾಜಕೀಯ ಮೇಲಾಟಕ್ಕೆ ಅವಕಾಶ ಮಾಡಿಕೊಟ್ಟಿತು. ಮೊದಲಿಗೆ ಏಕಪಕ್ಷದ ಪ್ರಜಾಸತ್ತೆ, ಬಳಿಕ ಬುಡಕಟ್ಟುಗಳ ಸೇನಾ ನಾಯಕರ ಆಡಳಿತ. ಸ್ವಾತಂತ್ರ್ಯ ಚಳವಳಿಯಲ್ಲಿ ತಮ್ಮ ರಾಷ್ಟ್ರೀಯ ನಾಯಕರನ್ನು ಹಿಂಬಾಲಿಸಿದ್ದ ಸಮುದಾಯಗಳಲ್ಲಿ ಬಹುಬೇಗ ಭ್ರಮನಿರಸನ ಆವರಿಸಿಕೊಳ್ಳತೊಡಗಿತು. ಅಂಥ ನಾಯಕರು ಅಧಿಕಾರದಿಂದ ಕೆಳಗಿಳಿಯಬೇಕೆಂಬ ಆಂದೋಲನ ಹುಟ್ಟಿದವು. ಏಕರಾಜಕೀಯ ಪಕ್ಷದ ಆಳ್ವಿಕೆಗಳು ಸರ್ವಾಧಿಕಾರಕ್ಕೆ ಬಹು ಸನಿಹದಲ್ಲಿದ್ದವು. ಮತಪತ್ರಗಳನ್ನು ಕಾಡತೂಸುಗಳು ಪಲ್ಲಟಗೊಳಿಸಿದವು. ಕೆಲವೆಡೆ ನಾಗರಿಕ ಸಂಘರ್ಷಗಳು ಭುಗಿಲೆದ್ದವು. ಈ ಸಮಯದಲ್ಲಿ ತಮ್ಮ ಕಣ್ಣೆದುರು ಕಾಣುವುದನ್ನು ಲೇಖಕರು ಕಡೆಗಣಿಸುವಂತಿರಲಿಲ್ಲ. ಅತ್ಯಂತ ಜನಾನುರಾಗಿಯಾಗಿದ್ದ ಕಾದಂಬರಿ ಪ್ರಕಾರವನ್ನೀಗ ರಾಜಕೀಯ ವಿಡಂಬನೆಗೆ ಬಳಸಿಕೊಳ್ಳತೊಡಗಿದರು. ಆಫ್ರಿಕದ ಭವ್ಯ ಗತವನ್ನು ಆಚೆಗಿರಿಸಿ ಸಮಕಾಲೀನ ಸಮಾಜದ ಕುರೂಪವನ್ನು ಬಯಲಿಗೆ ತರತೊಡಗಿದರು. ಇದೀಗ, ವಿಮರ್ಶೆ ಯುರೋಪಿಯನ್ನರ ಮೇಲಲ್ಲದೆ ತಮ್ಮ ಸಮುದಾಯಗಳ ಮೇಲಿತ್ತು. ಅದಾಗ ನಾಟಕ ರಚನೆಯಿಂದ ಗದ್ಯ ಬರಹಕ್ಕೆ ತಿರುಗಿದ್ದ ವೊಲೆ ಷೊಯಿಂಕ, `ಆಫ್ರಿಕನ್ ಲೇಖಕ ಗತಕಾಲದ ಹಳಹಳಿಕೆಯಿಂದ ತುರ್ತಾಗಿ ಮುಕ್ತನಾಗಬೇಕಿದೆ. ಆತ ಲೇಖಕನಾಗಿಯೇ ಉಳಿಯಬೇಕೆಂದರೆ ತನ್ನ ಸಮಾಜದ, ತನ್ನ ಕಾಲದ ದನಿ, ದರ್ಶನ ಪ್ರತಿನಿಧಿಸಬೇಕು’ ಎಂದು ಬರೆದರು.

ಈ ಮಾತಿಗೆ ಒಪ್ಪಿಗೆ ಸೂಚಿಸುವಂತೆ ಚಿನುವ ಅಚೆಬೆ, `ಇಂದಿನ ಬಹುಪಾಲು ಆಫ್ರಿಕನ್ ಭೂಭಾಗ ರಾಜಕೀಯ ಸ್ವಾತಂತ್ರ್ಯ ಪಡೆದಿದೆ. ಸುಮಾರು ಮೂವತ್ತಾರು ದೇಶಗಳು ನಮ್ಮ ಜನರ ಆಳ್ವಿಕೆಯಲ್ಲಿಯೇ ಇವೆ. ಕೆಲವೊಮ್ಮೆ ರಾಜ್ಯಾಡಳಿತ ಕುರೂಪವಾಗಿದೆ. ಇದರಿಂದಾಗಿ ಹೊಸ ಸನ್ನಿವೇಶವೊಂದು ಕಾಣಿಸಿಕೊಂಡಿದೆ. ಅನ್ಯಾಯನ್ನು ಬಯಲಿಗೆಳೆಯುವುದೇ ಲೇಖಕನ ಮುಖ್ಯ ಕೆಲಸವಾಗಬೇಕಿದೆ. ನಮ್ಮೆದುರು ಹೊಸ ಕರಾಳ ನ್ಯಾಯವ್ಯವಸ್ಥೆ ನಗ್ನನೃತ್ಯದಲ್ಲಿರುವಾಗ ಇನ್ನೂ ವಸಾಹತುಶಾಹಿಗಳ ಶೋಷಣೆಯ ಬಗ್ಗೆ ಹಳಹಳಿಸುವುದು ಎಷ್ಟು ಸರಿ? ನನಗನ್ನಿಸುವಂತೆ ಅದು ಸರಿಯಲ್ಲ. ನಮ್ಮ ಮೇಲಿರುವ ಹೊರೆಯೆಂದರೆ ನಮ್ಮ ವಿರುದ್ಧವೇ ನಾವು ಬರೆದುಕೊಳ್ಳಬೇಕಾಗಿರುವುದು. ನಾವು ಹೇಳುವ ಮಾತು ನಮ್ಮ ಜನಾಂಗದ ವಿರುದ್ಧ ಸಾಕ್ಷಿಯಾಗಿ ತೆಗೆದುಕೊಳ್ಳಲಾಗುವುದು ಎಂಬ ಆತಂಕವಿಲ್ಲದೆ ಆ ಕೆಲಸ ಮಾಡಬೇಕಿದೆ.” ಎಂದು ಬರೆದರು.

ಮುಂದಿನ ದಶಕಗಳಲ್ಲಿಯೂ ಇದೇ ಪ್ರವೃತ್ತಿ ಮುಂದುವರೆಯಿತು. ಕಾದಂಬರಿಗಳು ಜೀವನದ ಕಠೋರ ಸತ್ಯ ಮತ್ತು ನಿಷ್ಠುರ ವ್ಯಂಗ್ಯ ಮುನ್ನೆಲೆಯಲ್ಲಿದ್ದವು. ಸ್ವಾತಂತ್ರ್ಯದ ಬಳಿಕ ಉಂಟಾದ ಆಘಾತಕಾರಿ ರಾಜಕೀಯ ಮತ್ತು ಸಾಂಸ್ಕೃತಿಕ ತಲ್ಲಣಗಳು ಕೃತಿಗಳಲ್ಲಿ ಚಿತ್ರಿತಗೊಂಡವು. ಪಶ್ಚಿಮ ಆಫ್ರಿಕದ ಉಳಿದೆಲ್ಲ ದೇಶಗಳಿಗಿಂತ ನೈಜಿರಿಯದಲ್ಲಿ ಕಾದಂಬರಿಗಳು ಗಣನೀಯ ಪ್ರಮಾಣದಲ್ಲಿ ಪ್ರಕಟವಾಗತೊಡಗಿದವು.

ವಿನೋದ, ಮೃದುತ್ವದ ಅಭಿವ್ಯಕ್ತಿಯ ಪೂರ್ವ

ಪಶ್ಚಿಮ ಆಫ್ರಿಕಕ್ಕಿಂತ ಪೂರ್ವ ಆಫ್ರಿಕದಲ್ಲಿ ಆಧುನಿಕ ಬರವಣಿಗೆ ವಿಕಾಸ ಮಂದವಾಗಿತ್ತು. ಆದಾಗ್ಯೂ, 196070ರ ದಶಕಗಳಲ್ಲಿ ವೇಗ ಪಡೆಯಿತು. ಸಹಜವಾಗಿಯೇ ಉಳಿದೆಡೆಯಂತೆ ಇಲ್ಲಿಯೂ ಕಾದಂಬರಿಯೇ ಮೆಚ್ಚಿನ ಪ್ರಕಾರವಾಯಿತು. ಅದನ್ನು ಎತ್ತರಕ್ಕೆ ಏರಿಸಿದ ಯಶಸ್ಸು ಇಂದು ವಿಶ್ವಮಾನ್ಯರಾಗಿರುವ ಎನ್‌ಗೂಗಿ ವ ಥಿಯಾಂ’ಗೋ ಅವರಿಗೆ ಸಲ್ಲುತ್ತದೆ. ಷೊಯಿಂಕ, ಅಚೆಬೆಯವರಂತೆಯೇ ಚಿಂತಿಸಿದ ಎನ್‌ಗೂಗಿ ವ ಥಿಯಾಂ’ಗೋ ಆ ಚಿಂತನೆಗೆ ಆರ್ಥಿಕತೆ-ಸಂಸ್ಕೃತಿಯ ಸ್ಪರ್ಶ ನೀಡಿದರು.

“ಆಫ್ರಿಕನ್ ಲೇಖಕ, ಇಂದು ಏನಾಗುತ್ತಿದೆ ಎಂಬುದನ್ನು ಮರೆತು ತನ್ನ ಜನರ ನಿನ್ನೆಯ ಬಗೆಗೆ ಚಿಂತಿತನಾಗಿದ್ದಾನೆ. ಗತದ ಕುರೂಪವನ್ನು ಸುರೂಪಗೊಳಿಸುವುದರಲ್ಲಿ ತಲ್ಲೀನನಾಗಿದ್ದಾನೆ. ಆತ ತಾನೀಗ ಕೇವಲ ರೈತನಲ್ಲ, ಉತ್ಪಾದನೆಯ ಒಡೆಯ, ತನ್ನ ಸಮುದಾಯದೊಂದಿಗೆ ಸುಖ-ದುಃಖಗಳನ್ನು ಹಂಚಿಕೊಳ್ಳುತ್ತ ವಿಜಯವನ್ನು ಆಚರಿಸುತ್ತಿರುವವನು ಎಂಬುದನ್ನು ಮರೆತಿದ್ದಾನೆ. ಆತನ ಸಮಾಜವೀಗ ಉನ್ನತ ಮಾನವೀಯ ಮೌಲ್ಯಗಳ ಮೇಲೆ ಕಟ್ಟಿದ್ದಲ್ಲ ಎಂಬುದನ್ನೂ ಅರಿಯದವನಾಗಿದ್ದಾನೆ. ಪ್ರವರ್ಧಮಾನಕ್ಕೆ ಬರುತ್ತಿರುವ ಗಣ್ಯ ಮಧ್ಯಮವರ್ಗ ಮತ್ತು ಜನಸಾಮಾನ್ಯರ ನಡುವೆ ಸಂಘರ್ಷಗಳ ಬಿಸಿ ಏರುತ್ತಿದೆ. ಈ ವೈರುಧ್ಯದ ಬೀಜಗಳು ವಸಾಹತುಶಾಹಿ ಹಾಕಿಕೊಟ್ಟ ಸಾಮಾಜಿಕ-ಆರ್ಥಿಕ ಸ್ವರೂಪದಲ್ಲಿ ಅಡಗಿವೆ.”

ಎನ್‌ಗೂಗಿ ಅವರ ವೈಚಾರಿಕತೆಗೆ ಒಪ್ಪಿದ ಅನೇಕರು ಅವರ ಸಾಹಿತ್ಯ ಮಾರ್ಗವನ್ನು ತುಳಿದರು. ಪೂರ್ವ ಆಫ್ರಿಕಾದಲ್ಲಿ ಕಾದಂಬರಿಯಂತೆ ವಿಡಂಬನಾ ಕಾವ್ಯ ಕೂಡ ಜನಾನುರಾಗಿ ಪ್ರಕಾರವಾಗಿ ಹೊಮ್ಮಿತು. ಪೂರ್ವ ಮತ್ತು ಪಶ್ಚಿಮ ಆಫ್ರಿಕಗಳ ಸಾಹಿತ್ಯಕ್ಕಿರುವ ಸೂಕ್ಷ್ಮ ವ್ಯತ್ಯಾಸವನ್ನು ಹೇಳುವುದಾದರೆ, ಪೂರ್ವದ ಲೇಖಕರು, ತುಳುಕಿದ ಕಣ್ಣೀರಿಗೆ ವಿಷಾದವೇ ಕಾರಣವಾಗಿದ್ದರೂ ಅದಕ್ಕೆ ವ್ಯಂಗ್ಯ ಮತ್ತು ನಗೆಯ ಲೇಪವನ್ನು ಅಂಟಿಸಿದವರು. ಕಠೋರ ವಿಷಯಗಳು ಇವರ ಲೇಖನಿಯಲ್ಲಿ, `ಮೃದುತ್ವ ಮತ್ತು ಸೌಮ್ಯತೆಯನ್ನು ಪಡೆಯುತ್ತವೆ’.

ದಿಗ್ಬಂಧನ, ದೇಶಭ್ರಷ್ಟತೆ, ಹೊಸ ಪದವಿನ್ಯಾಸದಲ್ಲಿ ಆತ್ಮಚರಿತ್ರೆ

ದಕ್ಷಿಣ ಆಫ್ರಿಕದ ಲೇಖಕರು ವಿಭಿನ್ನ ಬಗೆಯ ರಾಜಕೀಯ ತಲ್ಲಣವನ್ನು ಅನುಭವಿಸಿದವರು. ಹೀಗಾಗಿಯೇ ಪೂರ್ವ ಮತ್ತು ಪಶ್ಚಿಮ ಆಫ್ರಿಕದ ಸಾಹಿತ್ಯಕ್ಕಿಂತ ಇಲ್ಲಿನ ಸಾಹಿತ್ಯ ಸೃಷ್ಟಿ ಭಿನ್ನ. ಇಂಗ್ಲಿಶ್ ಭಾಷೆಯಲ್ಲಿ ಬರೆಯಲಾರಂಭಿಸಿದ ಇಲ್ಲಿನ ಲೇಖಕರು ಮೊದಲಿಗೆ ಒಲಿದದ್ದು ಕಥಾಪ್ರಕಾರಕ್ಕೆ. ಆದರೆ, 1960ರ ದಶಕದಲ್ಲಿ ಹೇರಿದ ಕಠಿಣ ಸೆನ್ಸಾರ್‍ಶಿಪ್‍ ನಿಂದ ಮಂಕು ಕವಿಯಿತು. ಕಠೋರ ವರ್ಣನೀತಿಯ ಶಾಸನಗಳಿಂದಾಗಿ ಪ್ರಕಟಣೆಗೆ ಅವಕಾಶ ಇಲ್ಲವೇ ಇಲ್ಲವೆನ್ನುವಂತಿತ್ತು. ಆದಾಗ್ಯೂ, ಕಥಾಪ್ರಕಾರದಲ್ಲಿ `ಬಿಳಿಯರಲ್ಲದ’ ಲೇಖಕರು ತೊಡಗಿಕೊಂಡರು. 1950ರ ದಶಕದ ಲೇಖಕರು ಮನೆವಾರ್ತೆಯ ಜನಪ್ರಿಯ ಪತ್ರಿಕೆಗಳಿಗೆ ರಮ್ಯತೆಯ ಕಾಲಹರಣದ ಸಾಹಿತ್ಯವನ್ನೋ, ಇಲ್ಲವೇ, ಕಮ್ಯೂನಿಸ್ಟರು, ಉದಾರವಾದಿಗಳು ಪ್ರಕಟಿಸುತ್ತಿದ್ದ ಪತ್ರಿಕೆಗಳಲ್ಲಿ ಲಘು ಬರಹಗಳನ್ನೋ ಬರೆದರು. ಕಾಲಹರಣದ ಕಥಾಸಾಹಿತ್ಯ ಮತ್ತು ಗಂಭೀರ ಲಘುಬರಹಗಳೆರಡಕ್ಕೂ 1963ರ ಕಾಯ್ದೆ ಬರೆ ಹಾಕಿತು. ಅನೈತಿಕವಾದುದು, ಆಕ್ಷೇಪಾರ್ಹವಾದುದು ಯಾವುದೇ ಇದ್ದರೂ ನಿಷೇಧಿಸುವ ಅಧಿಕಾರವನ್ನು ಈ ಕಾಯ್ದೆ ನೀಡುತ್ತಿತ್ತು. ಮುಚ್ಚುಮರೆಯಿಲ್ಲದೆ ಮಾತನಾಡುವ ಲೇಖಕರನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತಿತ್ತು. ಅಥವ ಗೃಹಬಂಧನದಲ್ಲಿರಿಸುತ್ತಿತ್ತು. ಕೊನೆಗೆ, ದಕ್ಷಿಣ ಆಫ್ರಿಕ ಬಿಟ್ಟು ಹೋಗುವಂತೆ ಒತ್ತಡ ಹಾಕಲಾಗುತ್ತಿತ್ತು. ರಾಜಕೀಯ ಬದ್ಧತೆಯ ಲೇಖಕರು ಮೌನವೃತ ಆಚರಿಸಬೇಕಿತ್ತು. ಇಲ್ಲವೆ, ಗಡಿಪಾರು ಅನುಭವಿಸಬೇಕಿತ್ತು.

ದೇಶಭ್ರಷ್ಟತೆಯನ್ನು ಆಯ್ದುಕೊಂಡ ಲೇಖಕರು ದಕ್ಷಿಣ ಆಫ್ರಿಕದ ಕುರಿತು ವಿಫುಲವಾಗಿ ಬರೆಯತೊಡಗಿದರು. ಅದಕ್ಕಾಗಿ ವಿವಿಧ ಪ್ರಕಾರಗಳನ್ನುಆಯ್ದುಕೊಂಡರು. ಅವುಗಳಲ್ಲಿ ಆತ್ಮಚರಿತ್ರೆ ಅತ್ಯಂತ ಪ್ರಿಯವಾದ ಪ್ರಕಾರವಾಯಿತು. ಅನುಭವ ಕಥನವು ಆತ್ಮಚರಿತ್ರೆಯ ರೂಪದಲ್ಲಿ, ಹೊಸ ಪದವಿನ್ಯಾಸದಲ್ಲಿ ಗೋಚರಿಸತೊಡಗಿತು. ಪರದೇಸಿಗರಾದ ದಕ್ಷಿಣ ಆಫ್ರಿಕನ್ ಬುದ್ಧಿಜೀವಿಗಳಿಗೆ ಆತ್ಮಕಥೆ ಹೊಸ ಅಸ್ತಿತ್ವವನ್ನು ನೀಡಿದ ಪ್ರಕಾರವಾಯಿತು. ಇತ್ತ, ತಾಯ್ನೆಲದಲ್ಲಿ ಭಾವಗೀತೆ ಅರಳತೊಡಗಿತ್ತು. ಕಾವ್ಯಾಭಿವ್ಯಕ್ತಿಗೆ ಹೊಸಬರು ಸೇರಿಕೊಂಡಂತೆಲ್ಲ ಅಭಿವ್ಯಕ್ತಿ ರೂಕ್ಷವಾಗತೊಡಗಿತು. ದೇಶಭ್ರಷ್ಟರಾಗಲು ಒಪ್ಪದ ಕೆಲವು ಕವಿಗಳು ಪ್ರಭುತ್ವದ ಪ್ರತಿರೋಧವನ್ನು ಜಾಣತನದಿಂದ ಎದುರಿಸಲೆಂಬಂತೆ ಮೌಖಿಕ ಪರಂಪರೆಗೆ ಮರಳಿದರು.

ಇಂತಹ ಪರಂಪರೆಗಳು ತಮ್ಮ ಮೂಲಸ್ವರೂಪವನ್ನು ಉಳಿಸಿಕೊಂಡಾಗಲಷ್ಟೇ ನಾವು ಹಳೆಯದರಿಂದ ಏನನ್ನಾದರೂ ಕಲಿಯಲು ಸಾಧ್ಯ, ಎಂಬ ಚರ್ಚೆಯ ಸಾಧಕ-ಬಾಧಕಗಳೇನೆ ಇರಲಿ ಸಂಸ್ಕೃತಿ ತನ್ನ ಚಲನಶೀಲತೆಯನ್ನು ಕಳೆದುಕೊಂಡು ಸ್ಥಗಿತವಾದಾಗ ಅದೊಂದು ಅರ್ಥವಾಗದ ಭಾಷೆಯ ಪುರಾತನ ತಾಳೆಗರಿಯಂತಾಗುವುದು.

ಲೇಖಕರು ಯಾರಿಗಾಗಿ ಬರೆಯುತ್ತಾರೆ? ಎಂಬ ಮಹತ್ವದ ಅಂಶವೇ ಆಫ್ರಿಕನ್ ಸ್ಥಳೀಯ ಭಾಷೆಯಲ್ಲಿ ರಚಿತವಾದ ಸಾಹಿತ್ಯವನ್ನು ನಿಯಂತ್ರಿಸಿದೆ. ವಸಾಹತುಶಾಹಿ ಪೂರ್ವ ಹಾಗೂ ಪಶ್ಚಿಮ ಆಫ್ರಿಕಗಳಲ್ಲಿ ಲೇಖಕರು ಮೊದಲಿಗೆ ಯುರೋಪಿಯನ್ ಓದುಗರನ್ನು ಗುರಿಯಾಗಿಸಿಕೊಂಡಿದ್ದರು. ಬಳಿಕ ಸ್ಥಳೀಯ ಓದುಗರಿಗೆ ಆದ್ಯತೆ. ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟ ಚುರುಕುಗೊಂಡ ಮೇಲಷ್ಟೇ ಮೊದಲು ನಮ್ಮವರು, ಆಮೇಲೆ ಹೊರಗಿನವರು ಎಂಬ ಸ್ಥಿತಿಯನ್ನು ನಗುತ್ತ ಒಪ್ಪಿಕೊಂಡಂತೆ ಕಾಣುತ್ತದೆ. ಇದ್ದರೂ, ವಸಾಹತೋತ್ತರ ದಿಗ್ಭ್ರಮೆಯು ಸಾಹಿತ್ಯದಲ್ಲಿ ವಿನೋದಕ್ಕಿದ್ದ ಸ್ಥಾನವನ್ನು ಸ್ವಯಂವಿಮರ್ಶೆ, ಕಟುವ್ಯಂಗ್ಯಗಳಿಗೆ ಪಲ್ಲಟಗೊಂಡಿತು. ಲೇಖಕರು ಇಲ್ಲಿ ತಮ್ಮ ಜನಗಳೊಂದಿಗೇ ನೇರವಾಗಿ ಮಾತನಾಡುತ್ತಿದ್ದರು. ಹೊರಗಿನವರು ಓದುವುದರಿಂದ ಆಫ್ರಿಕದ ಕುರಿತು ನಕಾರಾತ್ಮಕವಾಗಿ ಬರೆಯಬಾರದು ಎಂಬ ನಂಬಿಕೆ ನಗಣ್ಯವಾಯಿತು. ಹೀಗೆ, ಪೂರ್ವ-ಪಶ್ಚಿಮದ ಸಾಹಿತ್ಯವು ಆಫ್ರಿಕನ್ ಸಮುದಾಯ ಕೇಂದ್ರಿತ ಸಾಹಿತ್ಯವಾಗಿ ರೂಪಾಂತರಗೊಂಡಿತು.

ಇನ್ನೊಂದೆಡೆ, ದಕ್ಷಿಣ ಆಫ್ರಿಕದಲ್ಲಿ, ಸ್ಥಳೀಯ ಓದುಗರನ್ನು ತಲುಪಲು ವೃತ್ತಪತ್ರಿಕೆ ಮತ್ತು ನಿಯತಕಾಲಿಕಗಳಿಗೆ ಬರೆಯತೊಡಗಿದರು. ದೇಶಭ್ರಷ್ಟರಾದ ಲೇಖಕರು ಸಹಜವಾಗಿಯೇ ವಿದೇಶಿ ಓದುಗರನ್ನು ಗುರಿಯಾಗಿಸಿಕೊಂಡರು. ಅವರ ಕೃತಿಗಳು ಹೇಗೂ ತಾಯ್ನೆಲದ ಓದುಗರನ್ನು ತಲುಪುತ್ತಿರಲಿಲ್ಲ.

ಕಪ್ಪು ಆಫ್ರಿಕದಲ್ಲಿ ಎರಡನೆಯ ಮಹಾಯುದ್ಧದ ಬಳಿಕ ಯುರೋಪಿಯನ್ ಭಾಷೆಗಳಲ್ಲಿ ಬರೆದ ಸಾಹಿತ್ಯದಲ್ಲಿ ಎರಡು ಬಗೆಯ ವಿನ್ಯಾಸವನ್ನು ಕಾಣಬಹುದು: ಪೂರ್ವ-ಪಶ್ಚಿಮ ಆಫ್ರಿಕಗಳಲ್ಲಿ ರಾಜಕೀಯ ಅಭಿವ್ಯಕ್ತಿಗೆ ಅವಕಾಶ ಒದಗಿದ್ದರಿಂದ ಅಲ್ಲಿನ ಸಾಹಿತ್ಯವು ಕ್ರಮೇಣ ಆಫ್ರಿಕನ್ ಕೇಂದ್ರಿತವಾಗುತ್ತ ಹೋಯಿತು. ದಕ್ಷಿಣ ಆಫ್ರಿಕದಿಂದ ದೇಶಭ್ರಷ್ಟರಾದ ಲೇಖಕರು ಪರಿಣಾಮಕಾರಿ ಪ್ರತಿಭಟನಾ ಸಾಹಿತ್ಯವನ್ನು ರಚಿಸುತ್ತ ಹೊಸ ಪ್ರಕಾರಗಳನ್ನು ಆವಿಷ್ಕರಿಸತೊಡಗಿದರು. ಪ್ರತಿ ಭಾಗದ ಲೇಖಕರು ತಮ್ಮ ರಾಜಕೀಯ ನಿಲುವನ್ನು ಪ್ರಕಟಿಸಲು, ನಿರ್ದಿಷ್ಟ ಓದುಗ ವಲಯವನ್ನು ತಲುಪಲು ಸಮರ್ಪಕವಾದ ಪ್ರಕಾರಗಳನ್ನು ಆಯ್ದುಕೊಂಡರು. ಸನ್ನಿವೇಶದ ಬೇಡಿಕೆಗೆ ತಕ್ಕಂತೆ ಹೊಸ ಸ್ವರೂಪಗಳನ್ನು ಬದಲಿಸಿಕೊಂಡರು. ವಸಾಹತುಶಾಹಿ ಆಳ್ವಿಕೆಗೆ ಪ್ರತಿರೋಧವಾಗಿ ಆರಂಭವಾದ ಈ ಪ್ರಕ್ರಿಯೆ ಪರಂಪರೆಯಾಗಿ ಈಗಲೂ ಮುಂದುವರೆದಿದೆ. ಬೌದ್ಧಿಕ ರಂಗದಲ್ಲಿನ ತಿಕ್ಕಾಟ, ಹೊಸ ಪ್ರಸ್ತಾವನೆ ಮತ್ತು ರೂಪಾಂತರಗಳು ಆಯಾ ಕಾಲದ ಸಾಹಿತ್ಯ ಪ್ರಕಾರಗಳಲ್ಲಿ ಅಭಿವ್ಯಕ್ತಿಗೊಳ್ಳುತ್ತಲೇ ಇವೆ. ಖಂಡದ ನವೋದಯದ ಮುಂಬೆಳಗಿನಲ್ಲಿ ಏಮೆ ಸೀಸರ್, ಸೆಂಘಾರ್, ಕಬ್ರಾಲ್, ನೆರೆರೆ, ಕೆನ್ಯಾಟ್ಟ, ಎನ್‌ಕ್ರೂಮರಂಥವರು ಕಟ್ಟಿದ ಕಪ್ಪುಋಜುತ್ವ, ರಾಷ್ಟ್ರೀಯ ವಿಮೋಚನೆ-ಸಮಾಜವಾದಿ ಕಲ್ಪನೆಗಳು ಮುಂದಿನ ತಲೆಮಾರಿಗೆ ಜನಾಂಗ ಅಸ್ಮಿತೆ ಮತ್ತು ವಸಾಹತು ಅರಿವಿನ ನಿವಾರಣೆಯಾಗಿ ಬದಲಾದವು.

ನವಸಮಾಜವಾದಿ ಆಶಯದ ಹೊಸ ವಿಚಾರಗಳು ಸಂಸ್ಕೃತಿ ಅಧ್ಯಯನದೊಂದಿಗೆ ಮೇಳವಿಸಿಕೊಂಡು ಸ್ತ್ರೀವಾದ, ಪರಿಸರ ಮತ್ತು ಜೀವಸಂಕುಲಗಳ ಉಳಿವು ಎಂದು ರೂಪಾಂತರಗೊಂಡವು. ಸಮಾಜದ ವೈಫಲ್ಯಗಳಿಗೆ ವಸಾಹತುಶಾಹಿಗಳು ಹೇಗೊ, ಸ್ಥಳೀಯ ಬುಡಕಟ್ಟು ನಾಯಕರೂ ಕಾರಣವೆಂಬ ಹೊಸ ಎಚ್ಚರದ ರಾಜಕಾರಣ ಮುನ್ನೆಲೆಗೆ ಬರತೊಡಗಿತು. ಜತೆಗೆ, ಇದೊಂದು ಆಧುನಿಕ ಸಾಮ್ಯಾಜ್ಯಶಾಹಿಯ ಜಾಗತಿಕ ರೂಪವೆಂದು ಗುರುತಿಸಲಾಯಿತು. ಈ ಎಲ್ಲ ಅಂಶಗಳೂ ಸಾಹಿತ್ಯದಲ್ಲಿ ಬಿಂಬಿಸಲು ಹೊಸ ಪ್ರಕಾರಗಳ ಶೋಧದಲ್ಲಿ ಆಫ್ರಿಕನ್ ಲೇಖಕ ತೊಡಗಿಕೊಳ್ಳುತ್ತಿರುವುದು ನಮ್ಮ ಕಣ್ಣ ಮುಂದೆಯೇ ಇದೆ.

ಸಹಾರಾ ಉಪ-ವಿಭಾಗ
ರಾಜಕಾರಣ, ಧರ್ಮಗಳ ಮೇಲಾಟ, ಪ್ರಾದೇಶಕ ದನಿಗಳು

ಇಸ್ಲಾಮಿಕರಣಕ್ಕೆ ಒಳಗಾದ ಪ್ರದೇಶಗಳಲ್ಲಿ ಆಫ್ರಿಕನ್ ಸಹಾರಾ ಉಪಖಂಡವೂ ಒಂದು. ಇಲ್ಲಿನ ಸಮುದಾಯಗಳು ಇಂದಿಗೂ ತಮ್ಮ ಸ್ಥಳೀಯ ಭಾಷೆಗಳಲ್ಲಿ ಮೌಖಿಕ ಪರಂಪರೆಯ ಸಾಹಿತ್ಯ ಸೃಷ್ಟಿಸುತ್ತಲೇ ಇವೆ. ಇದರೊಂದಿಗೆ ಅರೆಬಿಕ್ ಲಿಪಿಯನ್ನು ಬಳಸಿ ಸಾಹಿತ್ಯವನ್ನು ರಚಿಸುವ ಪರಂಪರೆಯೂ ಇಲ್ಲುಂಟು. ಅದೇ ಲಿಪಿಯನ್ನು ಬಳಸಿ, ಸ್ಥಳೀಯ ಭಾಷೆಗಳಲ್ಲಿನ ಸಾಹಿತ್ಯವನ್ನು ಅರೆಬಿಕ್ ಭಾಷೆಗೆ ಅನುವಾದಿಸುತ್ತಿದ್ದಾರೆ. ಕ್ರಿಸ್ತಶಕ ಆರಂಭದಲ್ಲಿಯೇ ಇಥಿಯೋಪಿಯದಲ್ಲಿ `ಚಿತ್ರಲಿಪಿ’ ಅಭಿವ್ಯಕ್ತಿ ಮಾಧ್ಯಮವಾಗಿತ್ತು. ಮೊದಲೊಮ್ಮೆ ಹೇಳಿದಂತೆ ಆರಂಭಿಕ ಕ್ರಿಸ್ತ ಶತಮಾನಗಳಲ್ಲಿ ಗೀಸ್ ಭಾಷೆಯಲ್ಲಿ, ನಂತರ ಅಮ್‍ಹಾರಿಕ್ ಭಾಷೆಯಲ್ಲಿ ಈ ಭಾಗದಲ್ಲಿ ಸಾಹಿತ್ಯ ರಚನೆಯಾಯಿತು. ಏಳನೆಯ ಶತಮಾನದ ನಂತರ ಇಸ್ಲಾಂ ಧರ್ಮದ ವಿಸ್ತರಣೆಯಿಂದಾಗಿ ಅರೆಬಿಕ್ ನುಡಿ ತಳವೂರಲಾರಂಭಿಸಿತು. ಈ ಕಾಲದಲ್ಲಿ ಎರಡು ವಿಶಿಷ್ಟ ಬೆಳವಣಿಗೆಯನ್ನು ಕಾಣಬಹುದು. ಆಫ್ರಿಕಾದ ಪೂರ್ವ ಕರಾವಳಿ, ಜಂಜಿಬರ್, ಮಡಗಾಸ್ಕರ್ ಮತ್ತು ಹಿಂದೂ ಮಹಾಸಾಗರಗಳ ನಡುವೆ ವಾಣಿಜ್ಯ ವಹಿವಾಟು ಗರಿಗೆದರಿದ್ದವು. ಅಂದರೆ, ಆಫ್ರಿಕನ್ ಮತ್ತು ಅರಬ್ ಸಂಸ್ಕೃತಿಗಳ ನಡುವೆ ಕೊಡುಕೊಳೆ ಆರಂಭವಾಗಿತ್ತು.

ಹೀಗಾಗಿ, ಅತಿಹೆಚ್ಚು ಮತಾಂತರಕ್ಕೆ ಒಳಗಾದುದು ಇಂದಿನ ಕೆನ್ಯಾ ಮತ್ತು ತಾಂಜಾನಿಯಾ ರಾಷ್ಟ್ರಗಳೆಂದು ಗುರುತಿಸಲಾಗುವ ಪೂರ್ವ ಆಫ್ರಿಕಾದ ಕರಾವಳಿ ಪ್ರದೇಶಗಳು. ಕಾಲಾಂತರದಲ್ಲಿ ಅರೇಬಿಯ ಹಾಗೂ ಪರ್ಶಿಯನ್ ಕೊಲ್ಲಿಗಳಿಂದ ಬಂದ ಅರಬ್ಬರು ಹಾಗೂ ಬುಡಕಟ್ಟುಗಳ ಮಧ್ಯೆ ಸಾಂಸ್ಕೃತಿಕ ವಿನಿಮಯ ಪಕ್ವಗೊಂಡವು. ಈ ಪರಿಣಾಮವಾಗಿ ಕಪ್ಪು ಜನಾಂಗವು ಉಭಯ ಸಂಸ್ಕೃತಿಗಳ ಸಂಗಮದಂತೆ ಸಂಕರ ಭಾಷೆಯನ್ನು ಸೃಷ್ಟಿಸಿಕೊಂಡಿತು. ಬಂಟು ಕುಟುಂಬದ `ಸ್ವಾಹಿಲಿ’ ಅರೆಬಿಕ್ ಭಾಷೆಯ ಗಾಢ ಪ್ರಭಾವವನ್ನು ಹೊಂದಿದೆ. ಹದಿನಾಲ್ಕನೆಯ ಶತಮಾನದ ಮೊರೊಕ್ಕೊ ಪ್ರವಾಸಿ ಇಬ್ನೆ ಬತೂತ ತಾನು ಭೇಟಿ ನೀಡಿದ ಸ್ಥಳಗಳಲ್ಲಿ ಅರೆಬಿಕ್ ಭಾಷೆಗಳಲ್ಲಿ ಬರೆಯುತ್ತಿದ್ದ ಮುಸ್ಲೀಂ ಸಾಹಿತಿಗಳಿದ್ದರು, ಎಂಬುದಾಗಿ ದಾಖಲಿಸಿದ್ದಾನೆ. ಆದರೆ, ಈ ಮಾತನ್ನು ಪುಷ್ಟೀಕರಿಸುವ ಲಿಖಿತ ದಾಖಲೆ ಲಭ್ಯವಿಲ್ಲ. 16-17ನೆಯ ಶತಮಾನದಲ್ಲಿ ಹಿಂದೂ ಮಹಾಸಾಗರವನ್ನು ನಿಯಂತ್ರಿಸುತ್ತಿದ್ದ ಪೋರ್ತುಗೀಸರು ಅವನ್ನು ನಾಶ ಮಾಡಿರಬಹುದೆಂದು ಊಹಿಸಲಾಗಿದೆ. ಅದೇನೇ ಇದ್ದರೂ, ಅರೆಬಿಕ್ ಮತ್ತು ರೋಮನ್ ಲಿಪಿ ಬಳಸಿ ಅರೆಬಿಕ್, ಸೊಮಾಲಿ, ಬರ್ಬರ್, ಅಮ್‍ಹಾರಿಕ್, ಒರೊಮೊ, ಇಗ್ಬೂ, ಸ್ವಾಹಿಲಿ, ಹೌಸಾ, ಫಲೂನಿ ಮತ್ತು ಯೊರುಬ ಭಾಷೆಗಳಲ್ಲಿ ಸಾಹಿತ್ಯ ಸೃಷ್ಟಿಸಲಾಗುತ್ತಿತ್ತು, ಸೃಷ್ಟಿಸಲಾಗುತ್ತಿದೆ. ಮಧ್ಯಯುಗದ ಮೌಖಿಕ ಮತ್ತು ಬರಹ ಹೀಗೆ ಎರಡೂ ಪ್ರಕಾರಗಳ ಸಾಹಿತ್ಯದಲ್ಲಿ ಮೂರು ಸಂಸ್ಕೃತಿಗಳ ಸಂಗಮವನ್ನು ಕಾಣಬಹುದು. ಈ ತ್ರಿಕೂಟದಲ್ಲಿ ಬುಡಕಟ್ಟು-ಇಸ್ಲಾಮಿಕ್-ಕ್ರಿಶ್ಚಿಯನ್ ಸಂಸ್ಕೃತಿಯ ಅನುಭವಗಳು ಪ್ರತಿಫಲಿಸುತ್ತವೆ.

ಪ್ರಾದೇಶಿಕ ಪಾರಮ್ಯಕ್ಕೆ ನಡೆಯುತ್ತಿದ್ದ ರಾಜಕೀಯ ಮೇಲಾಟ ಸಹಜವಾಗಿಯೇ ಜನಜೀವನದ ಮೇಲೂ ಪರಿಣಾಮ ಬೀರುತ್ತಿತ್ತು. ಸೊಮಾಲಿ ಮಾತನಾಡುವ ಪ್ರದೇಶವನ್ನು 19ನೆಯ ಶತಮಾನದ ಕೊನೆಗೆ ವಿಭಜಿಸಿದ್ದು ಕೂಡ ಅದರಲ್ಲೊಂದು. ಸೊಮಾಲಿ ಭಾಷಿಕ ಸಮುದಾಯವನ್ನು ಕ್ರಮವಾಗಿ ಇಟಲಿ, ಬ್ರಿಟನ್, ಫ್ರಾನ್ಸ್, ಇಥಿಯೋಪಿಯ ಹೀಗೆ ನಾಲ್ಕು ಭಾಗಗಳಲ್ಲಿ ಹಂಚಲಾಗಿತ್ತು. ಹೀಗಾಗಿ, ಶೈಕ್ಷಣಿಕವಾಗಿ ಸೊಮಾಲಿಯಾದ ಸಮುದಾಯ ಇಟಾಲಿಯನ್, ಇಂಗ್ಲಿಶ್, ಫ್ರೆಂಚ್ ಭಾಷೆಗಳನ್ನು ಕಲಿತರು! ಇನ್ನೂ ಚೋದ್ಯವೆಂದರೆ, ಎಲ್ಲ ಸೊಮಾಲಿಗಳು ತಮ್ಮ ಸ್ಥಳೀಯ ಬುಡಕಟ್ಟು ನುಡಿಗಳಲ್ಲಿಯೇ ಮಾತಾಡಿಕೊಂಡರೂ ಗಡಿ ದಾಟಿದ್ದೇ ಆಯಾ ವಸಾಹತುಶಾಹಿ ಆಡಳಿತಗಾರರ ಭಾಷೆಯಲ್ಲಿ ವ್ಯವಹರಿಸಬೇಕಾಗುತ್ತಿತ್ತು. ಅಂದರೆ, ಜನ ಒಂದಕ್ಕಿಂತ ಹೆಚ್ಚು ವಸಾಹತುಶಾಹಿ ಭಾಷೆಯನ್ನು ಕಲಿಯಬೇಕಾಗಿತ್ತು.

*****

ಪಶ್ಚಿಮ ಆಫ್ರಿಕದಲ್ಲಿ ಇಸ್ಲಾಂ ವಿಸ್ತರಣೆ ಮತ್ತು ಸಾಹಿತ್ಯ ಸೃಷ್ಟಿ ಕೊಂಚ ಬೇರೆ ರೀತಿ ಇದೆ. ಮಘ್ರೆಬ್ (ಪಶ್ಚಿಮ) ದಿಕ್ಕಿನಿಂದ ದಿಗ್ವಿಜಯಕ್ಕಾಗಿ ಬಂದ ಮುಸ್ಲೀಮರನ್ನು ಪಾತಿಯೇ’ರ್ ಬಳಿ ಷಾಲಮನ್‍ನ ಪೂರ್ವಿಕನೊಬ್ಬ ತಡೆದನಂತೆ (ಕ್ರಿಸ್ತೋತ್ತರ 732). ಆಗ ಮುಸ್ಲೀಮರ ದೃಷ್ಟಿ ಆಫ್ರಿಕದ ದಕ್ಷಿಣದತ್ತ ಹೋಯಿತು. ಸೆನೆಗಲ್ ನದಿ ಬಳಿಯ ರಾಜ್ಯ ತೆಕ್ರೂರ್‍ರನ್ನು ಅರಬ್ಬರು ಆಕ್ರಮಿಸಿದರು. ಈ ಭಾಗದ ಆಫ್ರಿಕನ್ ನಿವಾಸಿಗಳೇ ಇಸ್ಲಾಂಗೆ ಮತಾಂತರಗೊಂಡ ಮೊದಲಿಗರು. ಇದು ಮುಂದೆ ಘಾನಾ ಸಾಮ್ರಾಜ್ಯವನ್ನು ಆಕ್ರಮಿಸಲು ನೆಲಹಾಸಾಯಿತು. ಹನ್ನೊಂದನೆಯ ಶತಮಾನದ ವೇಳೆಗೆ ಪಶ್ಚಿಮ ಆಫ್ರಿಕಾದ ಬಹುಭಾಗ ಇಸ್ಲಾಂ ಧರ್ಮಕ್ಕೆ ಪರಿವರ್ತಿತವಾಗಿತ್ತು. ಸೇನಾ ಆಕ್ರಮಣವು ಕ್ರಮೇಣ ಸಾಂಸ್ಕೃತಿಕ ಸಮೀಕರಣಕ್ಕೆ ಅವಕಾಶ ಮಾಡಿಕೊಡುವುದನ್ನು ನಾವು ಇತಿಹಾಸದುದ್ದಕ್ಕೂ ಕಾಣುತ್ತೇವೆ. ಸಂಸ್ಕೃತಿಯ ಭಾಗವೇ ಆದ ಭಾಷೆ ಮತ್ತು ಸಾಹಿತ್ಯಗಳು ಕೂಡ ಇದರ ನೇರ ಪರಿಣಾಮವನ್ನು ಎದುರಿಸುತ್ತವೆ. ರೋಮನ್ ಸೇನೆಯ ಪಶ್ಚಿಮ ಯುರೋಪ್‍ನ ಆಕ್ರಮಣವೇ ಇರಲಿ, ಸ್ಪೇನ್ ಮತ್ತು ಪೋರ್ತುಗಾಲ್‍ ಗಳು ಲ್ಯಾಟಿನ್ ಅಮೆರಿಕದ ಆಕ್ರಮಣವೇ ಇರಲಿ ಇದೇ ಕಥನವನ್ನೇ ಹೇಳುವವು. ಈ ಆಕ್ರಮಣಗಳು ಶತಮಾನಗಳ ಕಾಲ ಸ್ಥಳೀಯ ಭಾಷೆಗಳನ್ನು ತುಳಿದಿಟ್ಟವು. ಪ್ರವಾದಿ ಮೊಹಮ್ಮದರ ಬಳಿಕ ಅರಬ್ಬರು ಕೈಗೊಂಡ ವಿಸ್ತರಣೆಯಲ್ಲಿ ಮಧ್ಯಪ್ರಾಚ್ಯ ಪ್ರದೇಶ ಮತ್ತು ಪಶ್ಚಿಮ ಆಫ್ರಿಕನ್ ಪ್ರದೇಶಗಳೂ ಇದನ್ನೇ ಅನುಭವಿಸಿದವು.

ಪಶ್ಚಿಮ ಆಫ್ರಿಕಾದ ಸಾಹಿತ್ಯ ವಿಕಾಸದಲ್ಲಿ ಎರಡು ಘಟ್ಟಗಳನ್ನು ಗುರುತಿಸಬಹುದು. 18ನೆಯ ಶತಮಾನದವರೆಗೆ ಈ ಪ್ರದೇಶದಲ್ಲಿ ಅರೆಬಿಕ್ ಭಾಷೆ ಅಭಿವ್ಯಕ್ತಿಯ ಮುಖ್ಯ ವಿಧಾನವಾಗಿತ್ತು. ಟಿಂಬಕ್ಟುವಿನಲ್ಲಿ ದೊರೆತ ನಡುಯುಗದ ಹಸ್ತಪ್ರತಿಯೊಂದು ಬಹುಜನಾಂಗ ಲೇಖಕರನ್ನು ಹೊಂದಿರುವುದು ಕುತೂಹಲಕರ. ಈ ಪ್ರದೇಶದ ಲೇಖಕರ ಮೂಲವೂ ಸ್ವಾರಸ್ಯಕರ. ಕೆಲವರು ಈಜಿಪ್ಟ್, ಮೊರಕ್ಕೊದವರಾಗಿದ್ದರೆ, ಮಾಲಿ, ಬೊರ್ನು, ಕನೇಮ್ ಇತ್ಯಾದಿ ಸ್ಥಳಗಳಿಗೆ ಸೇರಿದವರು ಹಲವರು. ಬರ್ಬರ್, ಅರಬ್ಬಿ, ನಿಗ್ರೋ ಸಂಕರದವರೂ ಹೇರಳ. ಹದಿನಾರನೆಯ ಶತಮಾನದ ನಂತರದ ಆಳರಸರು ಅರೆಬಿಕ್ ಭಾಷೆಯ ಏಕಾಧಿಪತ್ಯವನ್ನು ಸ್ಥಳೀಯ ಭಾಷೆಗಳಿಗೆ ಬಿಟ್ಟುಕೊಡಲಾರಂಭಿಸಿದರು. ಇದಾದದ್ದು, ಇಸ್ಲಾಮಿಕ್ ಶಾಸ್ತ್ರಗ್ರಂಥಗಳನ್ನು ಜನರಾಡುವ ಸ್ಥಳೀಯ ಭಾಷೆಗಳಲ್ಲಿ ಕಲಿಸಲು ಆರಂಭಿಸಿದಾಗ. ಇದೇ ಮುಂದೆ ಸಾಹಿತ್ಯಾಭಿವ್ಯಕ್ತಿಯಲ್ಲಿಯೂ ಕಾಣಿಸಿಕೊಂಡು ಸ್ಥಳೀಯ ಭಾಷೆಗಳು ಮುನ್ನೆಲೆಗೆ ಬಂದವು. ಸಮಕಾಲೀನ ನೈಜಿರಿಯನ್ ಲೇಖಕರು `ಹೌಸಾ’ ಭಾಷೆಯಲ್ಲಿ ಬರೆಯತೊಡಗಿದ್ದಾರೆ. ಆದಾಗ್ಯೂ, ಹಿಂದೊಮ್ಮೆ ಹೇಳಿದಂತೆ ಭಾಷೆ ಸ್ಥಳೀಯದ್ದೇ ಆದರೂ ಲಿಪಿ ಮಾತ್ರ ಅರೆಬಿಕ್ (ಅಜಾಮಿ=ಪರಭಾಷೆ) ಅಥವ ರೋಮನ್ (ಬೋಕೊ=ಅನಧಿಕೃತ, ಪರಕೀಯ). ಅನೇಕರು ಅರೆಬಿಕ್‍ನಲ್ಲಿಯೂ ಕಾವ್ಯವನ್ನು ಬರೆಯುತ್ತಾರೆ. ಕೆಲವರಷ್ಟೇ ವಸಾಹತುಶಾಹಿ ಇಂಗ್ಲಿಶ್‍ನ ಮೊರೆ ಹೋಗುವರು. ಹೌಸಾ ಭಾಷೆಯಂತೆಯೇ ಒಲಾಫ್, ಸ್ವಾಹಿಲಿ ಕೂಡ ಮುಂಚೂಣಿಯಲ್ಲಿವೆ.

ಈ ಭಾಗದ ಆಫ್ರಿಕನ್ ಮುಸ್ಲೀಂ ಸಮುದಾಯಗಳು ಯುರೋಪಿಯನ್ ಪ್ರಭಾವಕ್ಕೆ ಅಸಾಧಾರಣ ರೀತಿಯ ತಟಸ್ಥ ಧೋರಣೆಯನ್ನು ತೋರಿಸಿರುವುದು ಗಮನಾರ್ಹವಾಗಿದೆ. ಬಹುಶಃ ಧರ್ಮದಲ್ಲಿನ ಆಳವಾದ ಶ್ರದ್ಧೆಯೇ ಇದಕ್ಕೆ ಕಾರಣವಿರಬಹುದು. ರೋಮನ್ ಲಿಪಿಯನ್ನು ಬಳಸುವ ಪೂರ್ವದ ಸ್ವಾಹಿಲಿ ಭಾಷೆ ಮತ್ತು ಪಶ್ಚಿಮದ ಹೌಸಾಗಳು ಭಾಷೆಯ ಆಧುನಿಕರಣಕ್ಕೂ ತಮ್ಮನ್ನು ತೆರೆದುಕೊಂಡಿವೆ. ಬ್ರಿಟಿಶ್ ಆಳ್ವಿಕೆ ಇದ್ದಲ್ಲೆಲ್ಲ ಸ್ಥಳೀಯ ಭಾಷೆಗಳಿಗೆ ಪ್ರೋತ್ಸಾಹ, ಆಧುನಿಕ ಶಿಕ್ಷಣದ ಲಭ್ಯತೆ ಕೂಡ ಇದಕ್ಕೆ ಕಾರಣವಾಗಿರಬಹುದು. ಸಾಮ್ರಾಜ್ಯಶಾಹಿಯ ದೆಸೆಯಿಂದ 19 ಮತ್ತು 20ನೆಯ ಶತಮಾನದಲ್ಲಿ ಸಾಕ್ಷರತೆಯ ಮೂರನೆಯ ಅಲೆ ಕಾಣಿಸಿಕೊಂಡಿತು. ಸ್ಥಳೀಯ ಮತ್ತು ಯುರೋಪಿಯನ್ ಭಾಷೆಗಳ ನಿಲುವು, ಅಭಿವ್ಯಕ್ತಿ ಮತ್ತು ಸಾಹಿತ್ಯದ ಉದ್ದೇಶಗಳು ಕೂಡ ಎದ್ದು ಕಾಣುವಂತೆ ಬದಲಾದವು.

(ಕೃತಿ: ಗುಂಡಿಗೆಯ ಬಿಸಿರಕ್ತ: ಆಫ್ರಿಕನ್‌ ಸಂಕಥನ, ಲೇಖಕರು: ಕೇಶವ ಮಳಗಿ, ಪ್ರಕಾಶಕರು: ದೀಪಂಕರ ಪುಸ್ತಕ, ಪ್ರಕಾಶನ, ಬೆಲೆ: 280/-)