ಎರಡು ಟ್ರಾಕ್ಟರ್ ಮೇಲೆ ಸ್ವಲ್ಪ ಹೆಚ್ಚು ಭತ್ತ ಸಿಕ್ಕಿತ್ತು. ಅದು ಹೆಚ್ಚು ಕಡಿಮೆ 25 ಚೀಲ ಆಗುತ್ತೆ ಎಂಬ ಅಂದಾಜು ಸಿಕ್ಕಿತು. ಒಂದು ಚೀಲ ಅರವತ್ತು ಕೆಜಿ ತೂಕ. ಹೀಗಾಗಿ ನಮಗೆ ಸಿಕ್ಕಿದ್ದು 1500 ಕೆಜಿ ಭತ್ತ. ಅದನ್ನು ಅಕ್ಕಿ ಮಾಡಿಸಿದರೆ ಹೆಚ್ಚು ಕಡಿಮೆ 1೦೦೦ ಕೆಜಿ ಅಕ್ಕಿ ಸಿಕ್ಕೀತು. ಅದು ಪ್ರಥಮ ಬಾರಿ ಬೆಳೆದ ನಮ್ಮ ಮಟ್ಟಿಗೆ ತುಂಬಾ ಹೆಮ್ಮೆಯ ಸಂಗತಿಯೇ ಆಗಿತ್ತು. ಆದರೆ ಅಲ್ಲಿಯವರೆಗೆ ಬರಲಿಕ್ಕೆ ಇನ್ನೂ ತುಂಬಾ ಸಮಯ ಇತ್ತು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ ನಿಮ್ಮ ಓದಿಗೆ
ನವೆಂಬರ್ ಅಷ್ಟೊತ್ತಿಗೆ ಭತ್ತದ ಹುಲ್ಲು ಕ್ರಮೇಣ ಒಣಗಲು ಶುರು ಆಯ್ತು. ಆಗಲೇ ಅದರ ಕಟಾವು ಮಾಡಲು ಸೂಕ್ತ ಸಮಯ. ದಾಸನಕೊಪ್ಪದ ಸುತ್ತಮುತ್ತ ಭತ್ತ ಕಟಾವಿಗೆ ಬರುವುದು ಆಗಲೇ. ಅಷ್ಟೊತ್ತಿಗೆ ಮಳೆಯೂ ನಿಂತಿರುತ್ತದೆ. ಹೀಗಾಗಿ ಭತ್ತ ಕತ್ತರಿಸಲು ಇದು ಸರಿಯಾದ ಸಮಯ. ಆದರೆ ಆಗ ಇನ್ನೂ ಮಳೆ ನಿಂತಿರಲಿಲ್ಲ. ಪ್ರಕೃತಿ ಮುನಿಸು ಅದಾಗಿತ್ತಾ ಅಥವಾ ತನ್ನ ಮೇಲೆ ಮಾನವನ ನಿರಂತರ ಶೋಷಣೆಗೆ ಸುರಿಸುತ್ತಿದ್ದ ಕಣ್ಣೀರು ಅದಾಗಿತ್ತಾ? ದೇವರೇ ಬಲ್ಲ!
ಕೈಯಿಂದ ಕತ್ತರಿಸಿ, ತೆನೆಯನ್ನು ಬಡಿದು ಅದರಿಂದ ಭತ್ತವನ್ನು ಉದುರಿಸಿ, ಸಂಗ್ರಹಿಸಿ ಚೀಲಕ್ಕೆ ತುಂಬುವುದು ಮೊದಲಿನಿಂದ ಮಾಡಿಕೊಂಡು ಬಂದ ವಿಧಾನ. ಭತ್ತದ ಬಿಳಿಯ ಹುಲ್ಲನ್ನು ಪೆಂಡಿ ಕಟ್ಟಿ ಬಣವಿ ಮಾಡಿ ಇಡುತ್ತಾರೆ. ಆದರೆ ಅದಕ್ಕೆ ಸುಮಾರು ಜನ ಆಳುಗಳು ಬೇಕು. ಈಗೆಲ್ಲಾ ತುಂಬಾ ಜನ ಬಳಸುವುದು ಭತ್ತವನ್ನು ಕತ್ತರಿಸುವ ಬೃಹತ್ ಯಂತ್ರಗಳನ್ನು. ಅದರಲ್ಲಿ ಕೆಲಸ ತುಂಬಾ ಸುಲಭ.
ಅವು ಬರುವುದು ತಮಿಳುನಾಡಿನಿಂದ. ಪ್ರತಿಯೊಂದು ಗಾಡಿಗೂ ಒಬ್ಬ ಸ್ಥಳೀಯ ಏಜೆಂಟ್ ಇರುತ್ತಾನೆ. ಅವನು ರೈತರ ಜೊತೆಗೆ ವ್ಯವಹರಿಸುತ್ತಾರೆ. ಆದರೆ ಯಂತ್ರವನ್ನು ಚಲಾಯಿಸುವವನು ಮಾತ್ರ ತಮಿಳಿಗನೆ ಆಗಿರುತ್ತಾನೆ. ಅವನಿಗೆ ಒಂದಕ್ಷರವೂ ಕನ್ನಡ ಬರೋದಿಲ್ಲ. ಕೆಲವೊಬ್ಬರು ಹರಕ ಮುರುಕ ಕನ್ನಡ ಕಲಿತಿದ್ದಾರೆ ಆದರೂ ಬಹಳಷ್ಟು ಜನರಿಗೆ ಊಹೂಂ. ಅಂತೆಯೇ ದಾಸನಕೊಪ್ಪದಲ್ಲಿ ಯಾರಿಗೂ ತಮಿಳು ಬರೋದಿಲ್ಲ. ಹೀಗಾಗಿ ತಮಿಳು ಸಾರಥಿಗಳ ಜೊತೆ ವ್ಯವಹಾರ ಒಂದಿಷ್ಟು ಕಷ್ಟ. ಆದರೂ ಹೇಗೋ ನಡೆದು ಬಂದಿದೆ.
ನಾನು ಹಾಗೂ ನಾಗಣ್ಣ ಭತ್ತದ ಕಟಾವು ಮಾಡಲೇಬೇಕು ಅಂತ ನಿರ್ಧರಿಸಿದೆವು. ಭತ್ತದ ನಡುವೆ ಕಳೆಯೂ ಜೋರಾಗಿ ಬೆಳೆದಿತ್ತು. ಹೀಗಾಗಿ ಇನ್ನೂ ತಡ ಮಾಡುವುದರಲ್ಲಿ ಅರ್ಥ ಇರಲಿಲ್ಲ. ನಮ್ಮ ಗದ್ದೆ ಊರಿನಿಂದ ಸ್ವಲ್ಪ ಒಳಗಡೆ ಇದೆ. ಹೀಗಾಗಿ ನಮ್ಮಿಬ್ಬರ ಸಲುವಾಗಿ ಆ ಗಾಡಿ ಬರೋದಿಲ್ಲ ಅಂತ ಅಲ್ಲಿನ ಒಬ್ಬ ಏಜೆಂಟ್ ಹೇಳಿ ನಮ್ಮಲ್ಲಿ ಇನ್ನೂ ಆತಂಕವನ್ನು ಹೆಚ್ಚಿಸಿದ! ಹಾಗೆಯೇ ಬಿಟ್ಟರೆ ಪೂರ್ತಿ ಭತ್ತದ ಆಸೆಯನ್ನೇ ಬಿಡಬೇಕಿತ್ತು. ಕಣ್ಣಿಗೆ ಕಂಡ ಭತ್ತ ಕೈಗೆ ಬರಲಿಲ್ಲ ಎಂಬಂತೆ!
ಇನ್ನೇನು ಮಾಡೋದು ಅಂತ ಯೋಚಿಸುತ್ತಾ ಹಾಗೆಯೇ ನಮ್ಮ ಹೊಲದ ಕಡೆಗೆ ಹೊರಟಾಗ, ನಮ್ಮ ಹೊಲಕ್ಕಿಂತ ಸ್ವಲ್ಪ ಹಿಂದೆ ಒಂದು ಗದ್ದೆಯಲ್ಲಿ ಆ ಯಂತ್ರವನ್ನು ಕಂಡು ಹುರುಪು ಮೂಡಿತು. ಇಲ್ಲೇ ಸ್ವಲ್ಪ ಮುಂದೆಯೇ ನನ್ನ ಹೊಲ ಇದೆ ಅಲ್ಲಿಗೆ ಬಂದು ಭತ್ತ ಕತ್ತರಿಸು ತಂದೆ ಅಂತ ಕಷ್ಟಪಟ್ಟು ನಮಗೆ ತಿಳಿದ ಎಲ್ಲಾ ಭಾಷೆಗಳಲ್ಲಿ, ಸನ್ನೆಗಳನ್ನು ಬಳಸಿ ಆ ತಮಿಳು ಸಾರಥಿಗೆ ಬೇಡಿಕೊಂಡೆವು! ಅದರ ಜೊತೆಗೆ ನಾಗಣ್ಣ ಅವರು ತಮ್ಮ ಹರುಕು ಮುರುಕು ತಮಿಳಿನಲ್ಲಿ ಏನೋ ಹೇಳಿದ್ದು ಅವನ ಮುಖದಲ್ಲಿ ಬದಲಾವಣೆ ತಂದಿತು! ಒಂದಿಷ್ಟು ವರ್ಷ ಚೆನ್ನೈನಲ್ಲಿ ಇದ್ದ ಕಾರಣ ತಮಿಳನ್ನು ಕಲಿತಿದ್ದರಂತೆ. ಕನ್ನಡಿಗರಿಗೆ ಜೈ! ಒಟ್ಟಿನಲ್ಲಿ ಅವನು ತನ್ನ ಯಂತ್ರದ ಜೊತೆಗೆ ನಮ್ಮ ಹೊಲಕ್ಕೆ ಬಂದ.
ಅದೊಂದು ರಕ್ಕಸಗಾತ್ರದ ಯಂತ್ರ. ಮುಂದಿನಿಂದ ಭತ್ತದ ಹುಲ್ಲನ್ನು ಕತ್ತರಿಸುತ್ತ ಸಾಗುತ್ತದೆ. ಒಳಗೆ ಹೋದ ನಂತರ ಭತ್ತ ಮತ್ತು ಹುಲ್ಲನ್ನು ಯಾಂತ್ರಿಕವಾಗಿ ಬೇರ್ಪಡಿಸಿ ಹುಲ್ಲನ್ನು ಹಿಂದಿನಿಂದ ಎಸೆಯುತ್ತಾ ಸಾಗುತ್ತದೆ, ಭತ್ತವನ್ನು ಒಳಗೆ ಉಳಿಸುತ್ತದೆ. ಅದನ್ನು ನೋಡುವುದೇ ಒಂದು ಖುಷಿ. ಗಂಟೆಗೆ ಇಷ್ಟು ಅಂತ ಅದರ ದರ ಇರುತ್ತದೆ. ನಾವು ಮಾಡಿಸಿದಾಗ 1100 ಪ್ರತಿ ಗಂಟೆಗೆ ಇತ್ತು ಎಂಬ ನೆನಪು. ತುಂಬಾ ಸರಾಗವಾದ ಗದ್ದೆ ಇದ್ದರೆ ಸುಲಭವಾಗಿ ಕತ್ತರಿಸಿ ಬೇಗನೆ ಮುಗಿಸಿಬಿಡುತ್ತಾರೆ. ಸರಾಗ ಅಂದರೆ ಕಳೆ ಇಲ್ಲದ ಗದ್ದೆ. ಅದರಲ್ಲಿ ಬರಿ ಭತ್ತ ಮಾತ್ರ ಬೆಳೆದಿರುತ್ತದೆ. ನೀರು ನಿಲ್ಲಿಸಿಯೋ, ಕಳೆ ನಾಶಕ ಬಳಸಿಯೋ ಬೆಳೆಸಿದ ಗದ್ದೆ. ಆದರೆ ನೈಸರ್ಗಿಕವಾಗಿ ಬೆಳೆದ ನಮ್ಮ ಗದ್ದೆಯಲ್ಲಿ ಭತ್ತಕ್ಕಿಂತ ಹುಲ್ಲು ಮತ್ತು ಕಳೆ ಹೆಚ್ಚಿತ್ತು. ಹೀಗಾಗಿ ಸಂಪೂರ್ಣವಾಗಿ ಕತ್ತರಿಸಲು ಸಾಧ್ಯವಿರಲಿಲ್ಲ. ತುಂಬಾ ವ್ಯರ್ಥವಾಗುವ ಸಾಧ್ಯತೆ ಇತ್ತು. ಎಷ್ಟು ಭತ್ತ ಬಂದರೂ ಅಷ್ಟು ಸಾಕು ಎಂಬ ನಿರ್ಲಿಪ್ತ ಭಾವದಲ್ಲಿ ನಾನಿದ್ದೆ.
ಯಂತ್ರ ಭತ್ತವನ್ನು ಬೇರ್ಪಡಿಸಿ ಅದರ ಸಂಗ್ರಹ ತುಂಬಿದ ತಕ್ಷಣ ಒಂದು ಟ್ರಾಕ್ಟರ್‌ಗೆ ಅದನ್ನು ಖಾಲಿ ಮಾಡುತ್ತದೆ. ಅದಕ್ಕೇ ಅಂತ ಒಂದು ಟ್ರಾಕ್ಟರ್‌ಗೆ ಕೂಡ ವ್ಯವಸ್ಥೆ ಮಾಡಿದ್ದೆ. ಅವರೆ ಒಬ್ಬ ಆಳನ್ನು ಕೂಡ ಕರೆದುತಂದಿದ್ದರು. ನಡುವೆ ಬೆಳೆದಿದ್ದ ಕೆಲವು ದೊಡ್ಡ ಗಾತ್ರದ ಗಿಡಗಳನ್ನು ಕತ್ತರಿಸಿ ಯಂತ್ರಕ್ಕೆ ಸಿಕ್ಕಿಕೊಳ್ಳದಂತೆ ಮಾಡುವುದು ಅವನ ಕೆಲಸವಾಗಿತ್ತು. ಹಲವು ಕಡೆಗಳಲ್ಲಿ ಆ ಕಳೆ ಇದ್ದ ಕಾರಣ ಅವನು ತುಂಬಾ ಚುರುಕಾಗಿ ಕೆಲಸ ಮಾಡಬೇಕಿತ್ತು. ಆದರೆ ಅವನು ಕೆಲಸಕ್ಕಿಂತ ಜಾಸ್ತಿ ವಿಶ್ರಾಂತಿಯಲ್ಲೆ ಇರುತ್ತಿದ್ದ! ಎಲೆ ಅಡಿಕೆ ಹಾಕುವುದು, ನೀರು ಕುಡಿಯುವುದು ಅಂತ ಕೂತರೆ ಕೂತೆ ಬಿಡುತ್ತಿದ್ದ. ಅವನನ್ನು ಎಬ್ಬಿಸುವುದೆ ನಮ್ಮ ಕೆಲಸವಾಗಿತ್ತು. ನಮಗೆ ಆದಷ್ಟು ಬೇಗನೆ ಕೆಲಸ ಮುಗಿಸಬೇಕಿತ್ತು, ಹೀಗಾಗಿ ನಾನು ನಾಗಣ್ಣ ಕೂಡ ಕತ್ತಿ ಹಿಡಿದು ವೀರ ಯೋಧರಂತೆ ಹೊಲದ ತುಂಬ ಅಡ್ಡಾಡಿ ಕಳೆಯನ್ನು ಕತ್ತರಿಸಿ ಕತ್ತರಿಸಿ ಎಸೆಯುತ್ತಿದ್ದೆವು. ಬೆವರು ಸುರಿಸಿ ನಿಜವಾಗಿಯೂ ರೈತರಾದ ಧನ್ಯತಾಭಾವ ಅವತ್ತು ನಮ್ಮಿಬ್ಬರಿಗೂ!
ಇಲ್ಲೇ ಸ್ವಲ್ಪ ಮುಂದೆಯೇ ನನ್ನ ಹೊಲ ಇದೆ ಅಲ್ಲಿಗೆ ಬಂದು ಭತ್ತ ಕತ್ತರಿಸು ತಂದೆ ಅಂತ ಕಷ್ಟಪಟ್ಟು ನಮಗೆ ತಿಳಿದ ಎಲ್ಲಾ ಭಾಷೆಗಳಲ್ಲಿ, ಸನ್ನೆಗಳನ್ನು ಬಳಸಿ ಆ ತಮಿಳು ಸಾರಥಿಗೆ ಬೇಡಿಕೊಂಡೆವು! ಅದರ ಜೊತೆಗೆ ನಾಗಣ್ಣ ಅವರು ತಮ್ಮ ಹರುಕು ಮುರುಕು ತಮಿಳಿನಲ್ಲಿ ಏನೋ ಹೇಳಿದ್ದು ಅವನ ಮುಖದಲ್ಲಿ ಬದಲಾವಣೆ ತಂದಿತು!
ಅಂತೂ ಇಂತೂ ಒಂದು ಟ್ರಾಕ್ಟರ್ ಭರ್ತಿ ಆಗುವಷ್ಟು ಭತ್ತ ತಯಾರಾಗಿ ಟ್ರಾಕ್ಟರ್‌ಗೆ ಸುರಿಯುತ್ತಿದ್ದರೆ ಅದನ್ನು ನೋಡಿ ಇಬ್ಬರೂ ಆನಂದಪಟ್ಟೆವು. ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದೆವು. ಆಶಾ, ಪರಿಧಿಗೂ ವಿಡಿಯೋ call ಮಾಡಿ ತೋರಿಸಿದೆ. ಹೊಲ ತೆಗೆದುಕೊಂಡ ಎಷ್ಟೋ ವರ್ಷಗಳ ನಂತರ ನಮಗೆ ದಕ್ಕಿದ್ದ ಫಲ ಅದಾಗಿತ್ತು. ಆ ಭತ್ತವನ್ನು ತೆಗೆದುಕೊಂಡು ಹೋಗಿ ರಾಮಚಂದ್ರ ಮಾವನ ಮನೆಯ ಅಂಗಳದಲ್ಲಿ ಒಂದು ದೊಡ್ಡ ಪ್ಲಾಸ್ಟಿಕ್ ತಾಡಪಾಲನ್ನು ಹರಡಿ ಸುರಿಸಿದೆವು. ನಮಗಿದ್ದ ದೊಡ್ಡ ಸಮಸ್ಯೆಯೆಂದರೆ ಮಳೆ. ನವೆಂಬರಲ್ಲಿ ಕೂಡ ಮಳೆ ಬೀಳುತ್ತಿದ್ದ ಕಾರಣ ಭತ್ತವನ್ನು ರಕ್ಷಿಸುವುದೇ ದೊಡ್ಡ ಸವಾಲಾಗಿತ್ತು. ಅದು ಹಸಿಯಾಗಿಬಿಟ್ಟರೆ ಮೊಳಕೆ ಬರುತ್ತದೆ. ಪ್ರಕೃತಿ ವೈಚಿತ್ರ್ಯವೆ ಅದು. ಭತ್ತದ ಬೀಜ ಗಿಡದಲ್ಲಿ ಎಷ್ಟು ಮಳೆಗೆ ತೊಯ್ದರೂ ಏನೂ ಆಗುವುದಿಲ್ಲ. ಅದನ್ನೇ ಗಿಡದಿಂದ ಬೇರ್ಪಡಿಸಿ ನೀರಿಗೆ ಒಡ್ಡಿದರೆ ಮೊಳಕೆ ಬಂದು ಬಿಡುತ್ತದೆ! ಒಂದೆರಡು ಒಳ್ಳೆಯ ಬಿಸಿಲು ಬಿದ್ದರೆ ಸಾಕಾಗಿತ್ತು ನಮಗೆ. ಆದರೆ ಪ್ರಕೃತಿಯ ಮುನಿಸು ಮುಂದುವರೆದಿತ್ತು!
ಇನ್ನೂ ಅರ್ಧಕ್ಕೂ ಹೆಚ್ಚು ಕಟಾವು ಮಾಡುವುದು ಬಾಕಿ ಇತ್ತು. ಆದರೆ ಕಳೆಯ ಕಾರಣ ಕೆಲವು ಕಡೆ ಅವನು ಕಟಾವು ಮಾಡಲೇ ಇಲ್ಲ. ಅದೊಂದು ಕಾರಣದ ಜೊತೆಗೆ ಈಗಾಗಲೇ ಹಲವಾರು ಸಲ ಕಳ್ಳರು ಭತ್ತದ ಹುಲ್ಲು ಕತ್ತರಿಸಿಕೊಂಡು ಹೋಗಿದ್ದರಿಂದ ಇನ್ನೊಂದು ಟ್ರಾಕ್ಟರ್ ಮಾತ್ರ ಭತ್ತ ಸಿಕ್ಕಿತು. ಭತ್ತ ಪೂರ್ತಿ ಸಿಗಲಿಲ್ಲ ಅಂತ ನಾಗಣ್ಣ ಬೇಜಾರಾದರು. ಇಷ್ಟಾದರೂ ಸಿಕ್ಕಿತಲ್ಲ ಖುಷಿ ಪಡಿ ಅಂತ ಜಬರಿಸಿದೆ! ಪಾಪ ನನ್ನ ಕಡೆಗೆ ಬೈಸಿಕೊಂಡು ಸುಮ್ಮನಾದರು.
ಸಿಕ್ಕಿದ್ದ ಭತ್ತವನ್ನು ಸರಿಯಾಗಿ ಒಣಗಿಸಿ ಸಂರಕ್ಷಣೆ ಮಾಡಿ ಇಡುವುದು ದೊಡ್ಡ ಸವಾಲಾಗಿತ್ತು. ಬಿಟ್ಟು ಬಿಟ್ಟು ಬರುತ್ತಿದ್ದ ಮಳೆ ಅದಕ್ಕೆ ಅಡ್ಡಿ ಮಾಡುತ್ತಿತ್ತು. ಅದರ ಎದುರಲ್ಲೇ ಇಬ್ಬರೂ ಕೂತು ಮಳೆ ಬಂದಾಗ ಮುಚ್ಚುತ್ತಿದ್ದೆವು, ಮತ್ತೆ ತೆರೆದು ಇಡುತ್ತಿದ್ದೆವು. ನಾವಿಲ್ಲದಾಗ ಪಾಪ ಅತ್ತೆ ನೋಡಿಕೊಳ್ಳುತ್ತಿದ್ದರು. ಅವತ್ತು ರಾತ್ರಿ ಹಾಗೆಯೇ ಮುಚ್ಚಿ ಮನೆಗೆ ಮಲಗಲು ತೆರಳಿದೆವು. ಆದರೂ ತೆರೆದ ಅಂಗಳ ಆಗಿದ್ದರಿಂದ ಯಾರಾದರೂ ಕದ್ದುಬಿಟ್ಟರೆ ಎಂಬ ಭಯ ಇತ್ತು. ದೇವರ ಮೇಲೆ ಭಾರ ಹಾಕಿ ಮಲಗಿದೆವು.
ಎರಡು ಟ್ರಾಕ್ಟರ್ ಮೇಲೆ ಸ್ವಲ್ಪ ಹೆಚ್ಚು ಭತ್ತ ಸಿಕ್ಕಿತ್ತು. ಅದು ಹೆಚ್ಚು ಕಡಿಮೆ 25 ಚೀಲ ಆಗುತ್ತೆ ಎಂಬ ಅಂದಾಜು ಸಿಕ್ಕಿತು. ಒಂದು ಚೀಲ ಅರವತ್ತು ಕೆಜಿ ತೂಕ. ಹೀಗಾಗಿ ನಮಗೆ ಸಿಕ್ಕಿದ್ದು 1500 ಕೆಜಿ ಭತ್ತ. ಅದನ್ನು ಅಕ್ಕಿ ಮಾಡಿಸಿದರೆ ಹೆಚ್ಚು ಕಡಿಮೆ 1೦೦೦ ಕೆಜಿ ಅಕ್ಕಿ ಸಿಕ್ಕೀತು. ಅದು ಪ್ರಥಮ ಬಾರಿ ಬೆಳೆದ ನಮ್ಮ ಮಟ್ಟಿಗೆ ತುಂಬಾ ಹೆಮ್ಮೆಯ ಸಂಗತಿಯೇ ಆಗಿತ್ತು. ಆದರೆ ಅಲ್ಲಿಯವರೆಗೆ ಬರಲಿಕ್ಕೆ ಇನ್ನೂ ತುಂಬಾ ಸಮಯ ಇತ್ತು. ಯಂತ್ರದಲ್ಲಿ ಭತ್ತ ತೆಗೆದು ಸುರಿದು ಚೀಲದಲ್ಲಿ ತುಂಬಿ ಇಟ್ಟರೆ ಕೆಲಸ ಮುಗೀತು ಅಂತ ನಾನು ಅಂದುಕೊಂಡಿದ್ದು ತಪ್ಪು ಕಲ್ಪನೆ ಅಂತ ತಿಳೀತು! ಇನ್ನೂ ಒಣಗಿಸಿ, ಸ್ವಚ್ಛ ಮಾಡಿ ಚೀಲಕ್ಕೆ ತುಂಬಿ ಇಡಬೇಕಿತ್ತು. ಎರಡು ಮೂರು ದಿನಗಳಲ್ಲಿ ಹೇಗೋ ಒಣಗಿಸಿದೇವೇನೋ ಸರಿ ಆಮೇಲೆ ಭತ್ತವನ್ನು ಎಲ್ಲಿ ಸಂಗ್ರಹಿಸಿ ಇಡೋದು ಎಂಬುದು ಮುಂದಿನ ಪ್ರಶ್ನೆ ಆಗಿತ್ತು. ಅಲ್ಲಿ ಗೋಡೌನ್‌ಗಳಿವೆ. ಅಲ್ಲಿ ಇಟ್ಟರೆ ನಮ್ಮ ಚೀಲಗಳು ಎಲ್ಲೋ ಒಂದು ಕಡೆ ಇಡುತ್ತಾರಂತೆ, ಮುಂದೊಮ್ಮೆ ನಮಗೆ ಭತ್ತ ಬೇಕಾದರೆ ನಮ್ಮ ಚೀಲದ ಬದಲು ಬೇರೆ ಯಾರದೋ ಚೀಲವನ್ನು ಕೊಡುವರಂತೆ! ಅರೆ ನಾವು ವಿಷಮುಕ್ತವಾಗಿ ಆಹಾರ ಬೆಳೆದು ಬೇರೊಬ್ಬ ವಿಷ ಹಾಕಿ ಬೆಳೆಸಿದ ಭತ್ತವನ್ನು ತಿನ್ನುವುದೆ? ಅದು ಸಾಧ್ಯವಿಲ್ಲದ ಮಾತಾಗಿತ್ತು. ಹಾಗಂತ ನಮ್ಮ ಬಾಡಿಗೆ ಮನೆಯಲ್ಲಿ ಇಟ್ಟರೆ ಹೇಗೆ ಅಂತ ಯೋಚಿಸಿದೆ. ನಾವಿಲ್ಲದ ಸಮಯದಲ್ಲಿ ಇಲಿಗಳು ತಿಂದು ಬಿಟ್ಟರೆ ಏನು ಮಾಡೋದು ಎಂಬ ಯೋಚನೆ ಬಂತು. ಮಲೆನಾಡಿನಲ್ಲಿ ಹಳೆಯ ಮನೆಗಳಲ್ಲಿ ಬಣತ/ ಪಣತ ಅಂತ ಇರುತ್ತದೆ. ಅದರಲ್ಲಿ ಇಡಬಹುದು ಅಂತೊಬ್ಬರು ನಮ್ಮ ಸಂಬಂಧಿ ಹೇಳಿದರು. ತಮ್ಮದೇ ಮನೆಯಲ್ಲಿ ಇಟ್ಟುಕೊಳ್ಳುವೆ ಅಂತಲೂ ತಿಳಿಸಿದರು. ಆದರೆ ಅವರ ಮನೆ ತುಂಬಾ ದೂರ ಇತ್ತು. ಅಷ್ಟೆಲ್ಲ ದೂರ ಅಡ್ಡಾಡಿ ಮುಂದೆ ಅಕ್ಕಿ ಮಾಡಿಸುವುದು ಕಷ್ಟದ ಕೆಲಸ ಅನಿಸಿತು.
ಬೆಳೆಯುವುದು ಕಷ್ಟ, ಬೆಳೆದಿದ್ದನ್ನು ಹುಷಾರಾಗಿ ನೋಡಿಕೊಳ್ಳುವುದು ಇನ್ನೂ ಕಷ್ಟ ಅಂತ ಅವತ್ತು ಅರಿವಾಯ್ತು! ನನಗೆ ಆಗ ರೈತರ ಕಷ್ಟ ಅರ್ಥವಾಗಿತ್ತು. ಮಳೆ ಕಳೆಗಳಿಂದ ರಕ್ಷಿಸಿಕೊಂಡು ತುಂಬಾ ಶ್ರಮವಹಿಸಿ ಆಹಾರವನ್ನು ನಮ್ಮ ಹೊಟ್ಟೆಗೆ ತಲುಪಿಸುವುದು ಸುಲಭದ ಕೆಲಸವಲ್ಲ. ಎಷ್ಟೋ ಯಂತ್ರಗಳು ಬಂದಿದೆಯಾದರೂ ಇನ್ನೂ ಮನುಷ್ಯನ ಶ್ರಮ ಬೇಕೇಬೇಕು.
ಭತ್ತದ ಕಟಾವಿನ ನಂತರ ಉಳಿಯುವ ಹುಲ್ಲಿಗೆ ತುಂಬಾ ಬೆಲೆ ಇದೆ. ಅದನ್ನು ಜಾನುವಾರಿಗೆ ಮೇವಾಗಿ ಬಳಸುತ್ತಾರೆ. ಅದನ್ನು ಇನ್ನೊಂದು ಯಂತ್ರದ ಮೂಲಕ ಪೆಂಡಿ ಕಟ್ಟಿ ಕೊಡುತ್ತಾರೆ. ಅವರೂ ತಮಿಳಿಗರೆ. ಒಂದು ಪೆಂಡಿಯನ್ನು 400 ರಿಂದ 500 ರೂಪಾಯಿವರೆಗೆ ಮಾರಬಹುದು. ಇದಕ್ಕಿಂತಲೂ ಒಳ್ಳೆಯ ಉಪಯೋಗ ಹೊಲದಲ್ಲಿಯೆ ಅದನ್ನು ಮುಚ್ಚಿಗೆಯಾಗಿ ಬಳಸುವುದು. ಅದು ನೀರನ್ನು ಹಿಡಿದಿಡಲು ಹಾಗೂ ಸೂಕ್ಷ್ಮಜೀವಿಗಳ ಬೆಳವಣಿಗೆಗೆ ತುಂಬಾ ಸಹಾಯ ಮಾಡುತ್ತದೆ. ಹೊಲದಲ್ಲಿ ಬೆಳೆದ ಒಂದು ಕಡ್ಡಿಯನ್ನೂ ಕೂಡ ಹೊರಗೆ ಎಸೆಯಬಾರದು ಎಂಬುದು ನನ್ನ ಯೋಜನೆಯಾಗಿತ್ತು. ಆದರೂ ಬೇಲಿಯಿಲ್ಲದ ಹೊಲದಲ್ಲಿ ಹುಲ್ಲನ್ನು ಹಾಗೆಯೇ ಉಳಿಸಿದರೆ ಜನರೇ ಅದನ್ನು ಮೇಯ್ದು ತೇಗಿಬಿಡುವ ಸಾಧ್ಯತೆ ಇತ್ತು! ಹೀಗಾಗಿ ನಾನೂ ಕೂಡ ಪೆಂಡಿ ಕಟ್ಟಿಸಿ ಸಧ್ಯಕ್ಕೆ ಹೊಲದಲ್ಲಿಯೇ ಇಟ್ಟೆ.
ಅಷ್ಟೊತ್ತಿಗೆ ಭತ್ತ ಸ್ವಲ್ಪ ಒಣಗಿತ್ತಾದರೂ ವಾತಾವರಣದ ತೇವಾಂಶದ ಕಾರಣ ಅದರ ವೇಗ ಕಡಿಮೆ ಆಗಿತ್ತು. ಹೀಗೆಯೆ ಇದ್ದರೆ ಮೊಳಕೆ ಬಂದು ಬಿಡುತ್ತದೆ ಅಂತನಿಸಿತು. ಅವತ್ತು ನಮ್ಮ ಭತ್ತ ನೋಡಲು ಶಂಭುಲಿಂಗ ಮಾವ ಬಂದಿದ್ದರು.
ಚೊಲೋ ಬಂತಲ್ಲೋ ಭತ್ತ.. ಅನ್ನುತ್ತಾ,
“ಇದು ಇನ್ನೂ ಒಣಗೋವು ಮಾರಾಯ. ಒಂದು ಕೆಲಸ ಮಾಡು. ನಮ್ಮ ಮನಿಗೆ ತಂದುಬಿಡು. ನನ್ನ ಅಂಗಳದಲ್ಲಿ ಒಣಗಿಸಿ ಕೊಡ್ತೆ.” ಅಂದು ನನಗೆ ಮತ್ತೆ ಜೀವ ಬರಿಸಿದರು!
ಅವರ ಅಂಗಳ ದೊಡ್ಡದು. ಅದೂ ಅಲ್ಲದೆ ಸುತ್ತಲೂ ಕಾಂಪೌಂಡ್ ಇದ್ದಿದ್ದರಿಂದ ಅಲ್ಲಿ ಒಳಗೆ ಯಾರೂ ಬರುವ ಸಾಧ್ಯತೆ ಇರಲಿಲ್ಲ. ಅಲ್ಲಿ ನಮ್ಮ ಭತ್ತ ಸುರಕ್ಷಿತ ಆಗಿರುತ್ತದೆ ಎಂಬ ಸಮಾಧಾನ ಇತ್ತು. ಆದರೆ ಇಲ್ಲಿಂದ ಬಿಸಿಲುಕೊಪ್ಪಕ್ಕೆ ಇದನ್ನು ತೆಗೆದುಕೊಂಡು ಹೋಗಬೇಕಿತ್ತು. ಅದಕ್ಕಾಗಿ ಇಲ್ಲಿದ್ದ ಭತ್ತವನ್ನೆಲ್ಲ ಚೀಲಗಳಲ್ಲಿ ತುಂಬಬೇಕಿತ್ತು. ಅದರ ಜೊತೆಗೆ ಹುಲ್ಲಿನ ಪೆಂಡಿಗಳನ್ನೂ ಮಾವನಿಗೆ ಕೊಡುತ್ತೇನೆ ಅಂತ ಹೇಳಿದೆ. ಅವರ ದನಗಳಿಗೆ ಮೇವಾಯ್ತು ಹಾಗೂ ತೋಟಕ್ಕೆ ಮುಚ್ಚಿಗೆ ಮಾಡುವ ವಿಚಾರವು ಅವರಿಗಿತ್ತು. ಅವರು ನಮಗೆ ಅಷ್ಟೆಲ್ಲ ಸಹಾಯ ಮಾಡಿದ್ದರು. ಅವರ ಋಣ ಹೀಗಾದರೂ ತೀರಿಸಬೇಕು ಅಂತ ಅನಿಸಿತು. ಹರಡಿಕೊಂಡಿದ್ದ ಭತ್ತವನ್ನು ಚೀಲಗಳಿಗೆ ತುಂಬಬೇಕಿತ್ತು.
“ನಾವೇ ತುಂಬೋಣ ಸರ್” ಅಂತ ನಾಗಣ್ಣ ಮತ್ತೆ ಉಮೆದಿ ತೋರಿಸಿದರು. ನನ್ನ ಹತ್ತಿರ ಮತ್ತೆ ಪ್ರೀತಿಯಿಂದ ಬೈಸಿಕೊಂಡರು! ಅದನ್ನು ತುಂಬಲು ಸಹಾಯ ಮಾಡಲು ಹತ್ತಿರದಲ್ಲೇ ಯಾರಾದರೂ ಇದ್ದಾರಾ ಅಂತ ವಿಚಾರಿಸಿದಾಗ ಸಿಕ್ಕವನೆ ಚಂದ್ರಪ್ಪ…
(ಮುಂದುವರಿಯುವುದು…)
ಗುರುಪ್ರಸಾದ್ ಕುರ್ತಕೋಟಿ ಇಪ್ಪತ್ತು ವರ್ಷಗಳ ಕಾಲ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿ ಕೃಷಿಗಿಳಿದ ಉತ್ಸಾಹಿರೈತರು. “ಬೆಳೆಸಿರಿ” ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. “ಕೇಶಕ್ಷಾಮ” (ಹಾಸ್ಯ ಬರಹಗಳ ಸಂಕಲನ) ಸೇರಿ ಇವರ ಮೂರು ಕೃತಿಗಳು ಪ್ರಕಟಗೊಂಡಿವೆ.