ರೂಮಿನ ವರಾಂಡದಲ್ಲಿ ಕೆಲವು ವಿದ್ಯಾರ್ಥಿ ಮಿತ್ರರು ನನ್ನ ಪರವಾಗಿ ಬಂದು ಬಾಗಿಲು ಬಡಿದು ಕೂಗಿದ್ದರು. ಒಳಗಿದ್ದವರು ಹೆದರಿದ್ದರು. ಗುಂಡ್ಲುಪೇಟೆಯ ಶಿವಬುದ್ಧಿ ಎಂಬ ಮಿತ್ರ ಇದ್ದ. ದ.ಸಂ.ಸದ ಅರೆಕಾಲಿಕ ಕಾರ್ಯಕರ್ತನಾಗಿ ರಾಜ್ಯಶಾಸ್ತ್ರದಲ್ಲಿ ಎಂ.ಎ.ಮುಗಿಸುತ್ತಿದ್ದ. ಅವಾಜ್ ಹಾಕಿದ್ದ. ‘ಬಾಗ್ಲು ತಗೀಲಿಲ್ಲಾ ಅಂದ್ರೆ ಯೀಚ್ವಾರಿಂದ ಬೀಗಾ ಹಾಕಂದು ಪೋಲಿಸ್ಗೆ ಕಂಪ್ಲೇಂಟ್ ಕೊಡ್ತೀನಿ’ ಎಂದು ಅಬ್ಬರಿಸಿದ್ದ. ಅವರು ನನ್ನನ್ನು ಹೊರಗೆ ಬಿಡಲೇ ಬೇಕಿತ್ತು. ಅವನೊಮ್ಮೆ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಆಗಿದ್ದಾಗ ಅವರ ಕಾರಿಗೆ ಅಡ್ಡ ನಿಂತು ಧಮಕಿ ಹಾಕಿ ನಮ್ಮ ಹಳ್ಳಿಗೆ ಇಂತಿಂತಹ ಕೆಲಸಗಳನ್ನು ಮಾಡಿಕೊಡಬೇಕೆಂದು ಆಗ್ರಹಿಸಿ ಯಶಸ್ವಿ ಆಗಿದ್ದ.
ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿ.

ನಿನ್ನನ್ನು ಕೇಳಿಕೊಂಡು ಯಾರೊ ಬಂದಿದ್ದರು ಎಂದ ವಾಚ್‌ಮನ್. ನನ್ನನ್ನು ಇಲ್ಲಿ ತನಕ ಹುಡುಕಿಕೊಂಡು ಯಾರು ಬರುತ್ತಾರೆ ಎಂದು ದಿಗಿಲಾಯಿತು.

‘ಯಾರು? ಹೇಗಿದ್ದ… ಎಲ್ಲಿಂದ ಬಂದೆ ಎಂದು ವಿಚಾರಿಸಿದೆಯಾ…’

‘ಇಲ್ಲಾ… ಎಲ್ರುನೂ ಎಂಗಪ್ಪ ವಿಚಾರ್ಸುದು? ದಿನಾಲು ನೂರಾರು ಜನ ಬತ್ತರೆ’

‘ನೋಡೋಕೆ ಎಂಗಿದ್ದಾ… ವಯಸ್ಸಾಗಿತ್ತೇ’

‘ಪ್ರಾಯ್ದೋನೆ ಕನಪ್ಪಾ. ಸಣ್ಣುಕೆ ಉದ್ದುಕೆ ಕೆಂಪ್ಗೆ ಇದ್ದ’

ಸಾಕೇತ್ ಹಾಗೆ ವಿಚಾರಿಸಿ ಬರುವುದಿಲ್ಲಾ… ಯಾರಿರಬಹುದೂ… ಕಲ್ಪಿಸಿದೆ. ಹೊಳೆಯಲಿಲ್ಲ. ಬಂದವನು ವಿಚಾರಿಸಿ ಹೊರಟು ಹೋಗಿದ್ದ. ಯಾರೊ ಏನೊ ಬಿಡೂ ನನಗ್ಯಾಕೆ ಆ ಚಿಂತೆ ಎಂದು ಕ್ಯಾಂಟೀನಿನ ಕಡೆ ಬಂದೆ. ಜೆ.ಸಿ.ಕಡೆಯಿಂದ ಹುಡುಗಿಯರು ತಂಡ ತಂಡವಾಗಿ ಒನಪು ವಯ್ಯಾರದಲ್ಲಿ ಲೇಡೀಸ್ ಹಾಸ್ಟೆಲಿನತ್ತ ನಡೆಯುತ್ತಿದ್ದರು. ಆ ರಸ್ತೆಗೆ ನಾನು ನವಿಲು ದಾರಿ ಎಂದು ಹೆಸರಿಟ್ಟಿದ್ದೆ. ಹುಡುಗಿಯರ ಚೆಲುವೇ ಕಾರಣವಾಗಿತ್ತು. ಮನಸ್ಸಿನಲ್ಲಿ ತುಂಬ ಆಸೆ; ಆದರ ಅಯೋಗ್ಯ ಎಂಬ ಸ್ವಯಂ ಘೋಷಣೆ.

ಎಂಜಿನಿಯರಿಂಗ್ ವಿದ್ಯಾರ್ಥಿಗಳು ಜೆ.ಎಸ್.ಎಸ್. ವಿದ್ಯಾಸಂಸ್ಥೆಯಲ್ಲಿ ಕಲಿಯುತ್ತಿದ್ದರು. ಅದು ಮೈಸೂರು ವಿ.ವಿ.ಯ ಭಾಗವೇ ಆಗಿತ್ತು. ಬೇರೆ ಬೇರೆ ರಾಜ್ಯಗಳಿಂದ ಬಂದವರೆ ಅಲ್ಲಿ ಹೆಚ್ಚಿದ್ದರು. ಅವರ ಅಖಾಡದತ್ತ ನಮ್ಮಂತವರು ಸುಳಿಯುತ್ತಲೇ ಇರಲಿಲ್ಲ. ಕೀಳರಿಮೆ ಹುಟ್ಟುತ್ತಿತ್ತು. ಯುನಿವರ್ಸಿಟಿಯ ಆ ಕ್ಯಾಂಟೀನಿಗೆ ನನ್ನ ಬಡತನ ಮೊದಲ ದಿನವೆ ಗೊತ್ತಾಗಿತ್ತು. ಒಳಗೆ ಹೋಗಿ ಚಹಾ ಕುಡಿವ ಬದಲು ಹೊರಗೆ ಕೂತು ಗೆಳೆಯರ ಜೊತೆ ಬಿಟ್ಟಿ ಹರಟೆ ಹೊಡೆಯುತ್ತಿದ್ದೆ. ಚುಡಾಯಿಸುವವರು ಅದೇ ತಮ್ಮ ವಿದ್ಯಾಭ್ಯಾಸ ಎಂದು ಮೈ ಮರೆಯುತ್ತಿದ್ದರು. ಹುಡುಗಿಯರು ಯಾವ ಕಾರಣಕ್ಕೂ ಪ್ರತಿಭಟಿಸುತ್ತಿರಲಿಲ್ಲ. ಕೆಲವರು ಹುಸಿನಗೆ ಬೀರಿ ಸ್ವಲ್ಪ ಒವರ್ರಾಗಿಯೆ ನುಲಿದುಕೊಂಡು ಹೋಗುತ್ತಿದ್ದರು. ಇದಕ್ಕೆ ಏನೆಂದು ಹೇಳುವುದು? ಸಭ್ಯ ರಮ್ಯವಾಗಿ ಪ್ರೇಮ ಪತ್ರ ಬರೆದರೆ ಅದಕ್ಕೆ ಒಬ್ಬಳಾದರೂ ಸ್ಪಂದಿಸುವುದಿಲ್ಲ. ಗ್ರೀನ್ ಸಿಗ್ನಲ್ ತೋರುವುದಿಲ್ಲ. ಈ ಪುಂಡು ಪೋಕರಿಗಳು ಚುಡಾಯಿಸಿದಾಗ ಯಾಕೆ ಹುಸಿಕೋಪ ತೋರುವರು? ನಾನೇನು ಸದರವಾದವನೇ… ಹತ್ತಾರು ಹುಡುಗಿಯರಿಗೆ ಪ್ರೇಮ ಪತ್ರಗಳನ್ನು ಅನಾಮಿಕವಾಗಿ ಬರೆಯುತ್ತಿದ್ದೆ. ನೀವು ಇಂತ ಬಣ್ಣದ ಬಟ್ಟೆ ಧರಿಸಿ ಹೂ ಮುಡಿದು ಕೈಯಲ್ಲಿ ಒಂದು ಚೆಂದದ ನೋಟ್‌ಬುಕ್ ಹಿಡಿದು ಕ್ಯಾಂಟೀನಿನ ಬಳಿಯೊ ಲೈಬ್ರರಿಯ ರೆಫರೆನ್ಸ್ ಸೆಕ್ಷನ್‌ ಬಳಿಯೊ ಬಂದರೆ ನಾನು ನಿಮ್ಮ ಮುಂದೆ ಬಂದು ನಿಲ್ಲುವೆ ಎಂದು ಗುರುತು ಹೇಳದೆ ಜಾಣ್ಮೆಯ ಲವ್‌ಲೆಟರ್ ಬರೆಯುತ್ತಿದ್ದೆ. ಅದೆಲ್ಲ ಒಂದು ರಾಮಾಯಣ ಹೇಳದಿದ್ದರೂ ನಡೆಯುತ್ತದೆ.

ಸಂಜೆ ವೇಳೆ ಗಿಜಿಗುಟ್ಟುವ ಕ್ಯಾಂಟೀನು. ಆ ಸಯ್ಯಾಜಿರಾವ್ ರಸ್ತೆ ಬದಿಯ ಮರಗಳ ತುಂಬ ಗಿಳಿಗಳ ಹಿಂಡು ಯಾವುದನ್ನೂ ಲೆಕ್ಕಿಸದೆ ಗೂಡು ಸೇರುವ ತವಕದಲ್ಲಿ ಹಿಂಡು ಹಿಂಡಾಗಿ ಹಾರಿ ಬಂದು ಕೂತು ಮೊಳಗುತ್ತಿರುತ್ತವಲ್ಲಾ… ಹಾಗೇ ಈ ಕ್ಯಾಂಟೀನಿನ ಹುಡುಗ ಹುಡುಗಿಯರ ಕಲರವ ಎನಿಸಿತು. ಎದುರಿನ ಆಚೆಗೆ ಕುಕ್ಕರಹಳ್ಳಿ ಕೆರೆಯ ನೀರ ಮುಟ್ಟಿಸಿಕೊಂಡು ಬೀಸಿ ಬರುವ ತಂಗಾಳಿ… ಬೆಳ್ಳಕ್ಕಿ ಸಾಲು… ಆಗ ತಾನೆ ಮೋಹದ ಕಡಲ ದಂಡೆಯ ಅಲೆಗಳಲ್ಲಿ ಅಡ್ಡಾಡುವಂತೆ ಜೋಡಿಯಾದ ಪ್ರೇಮಿಗಳು ಲೇಡೀಸು ಹಾಸ್ಟಲಿನ ದುಂಡು ಪಾರ್ಕಿನಲ್ಲಿ ಅಡ್ಡಾತ್ತಿದ್ದಾರೆ. ಪೊರೆ ಮರೆಯಲ್ಲಿ ಕೂತವರು ಕತ್ತಲಿಗಾಗಿ ತವಕಿಸುತ್ತಿದ್ದಾರೆ. ಸುಮ್ಮನೆ ಒಬ್ಬನೆ ಅಲ್ಲೆಲ್ಲ ಘನ ಗಂಭೀರ ಚಹರೆಯಲ್ಲಿ ಅದೇ ಹಳೆಯ ಪ್ಯಾಂಟಿನ ಎರಡೂ ಜೇಬುಗಳಿಗೆ ಕೈ ತೂರಿ ನಿಶ್ಪಾಪಿಯಂತೆ ಸುತ್ತಾಡುತ್ತಿದ್ದೆ. ಹಾಕಿಕೊಂಡಿದ್ದ ಆ ಪ್ಯಾಂಟ್ ನನ್ನದಾಗಿರಲಿಲ್ಲ. ಗೆಳೆಯನೊಬ್ಬ ಕೊಟ್ಟಿದ್ದು ಅದು. ಸೊಂಟದ ಎರಡೂ ಮೂಲೆಗಳ ಬಿಗಿ ಮಾಡಿ ಹೊಲೆದುಕೊಂಡಿದ್ದೆ. ನಾನು ಹೊಸದಾಗಿ ಬಟ್ಟೆ ಖರೀದಿಸುತ್ತಿರಲಿಲ್ಲ.

ಅರಮನೆ ಮುಂದಿನ ಗಾಂಧಿ ಚೌಕದ ರಸ್ತೆ ಬದಿಯ ಕೊನೆಯಲ್ಲಿ ಬಳಸಿಬಿಟ್ಟ ಬಟ್ಟೆಗಳನ್ನು ಮಾರುವ ಒಬ್ಬ ಇದ್ದ. ಅವನ ಪರಿಚಯ ಚೆನ್ನಾಗಿ ಆಗಿತ್ತು. ಸಾಬಿ ಅವನು. ಸಾಲ ಹೇಳಿ ಬಟ್ಟೆ ಖರೀದಿಸಬಹುದಿತ್ತು. ಅದರಲ್ಲಿ ಬಹುಪಾಲು ಕಳ್ಳತನದಿಂದ ಬಂದ ಬಟ್ಟೆಗಳಿದ್ದವು. ಅವನೇ ಹೇಳಿದ್ದ. ‘ಶೋರೂಂ ಬಟ್ಟೆ ಜನ ನನ್ನತ್ರ ಯಾಕ್ಬತ್ತರೆ? ನಿನ್ನಂತವರೆ ನನ್ನ ಗಿರಾಕಿಗಳು. ಆ ಬಟ್ಟೆ ಕಳ್ಳರಿಗೆ ಅದೇ ಜೀವನ; ಹೊಟ್ಟೆ ಪಾಡು! ನಿಮ್ಮಂತವುರ್ಗೂ ಏನೊ ಒಂದು ಬಟ್ಟೆ. ಮೈಯ್ಯ ಮುಚ್ಚೊಕೆ ಇಂತಾದ್ದೇ ಬೇಕು ಅಂತೆನಿಲ್ವಲ್ಲಾ… ಸ್ಟೂಡೆಂಟು ನೀನೂ… ಮುಂದಿನ್ವಾರ ಬಾ; ಚೆನ್ನಾಗಿರುವ ಕವರ್ಗೆ ಹಾಕಿ ಎತ್ತಿಟ್ಟಿರ್ತೀನಿ’ ಎಂದು ಹೇಳುತ್ತಿದ್ದ. ಆ ಮೂಲೆ ಬಳಿ ಹಗಲಿನಲ್ಲಿ ಗಿರಾಕಿಗಳು ಕಾಣುತ್ತಿರಲಿಲ್ಲ. ರಾತ್ರಿ ಆದಾಗಲೇ ಅರೆಬರೆ ರಸ್ತೆ ಬದಿಯ ಬೆಳಕಲ್ಲಿ ಅವನ ಬಳಿ ವ್ಯಾಪಾರ ನಡೆಯುತ್ತಿದ್ದುದು. ಯಾರಾದರೂ ನೋಡಿಬಿಡುತ್ತಾರೆಂದು ಎಲ್ಲ ಗಮನಿಸಿ ಮೆಲ್ಲಗೆ ಹೋಗಿ ತಕ್ಷಣ ವ್ಯವಹಾರ ಮುಗಿಸಿಕೊಂಡು ಏನೊ ಕಳ್ಳತನದಲ್ಲಿ ಪಾಲುಗೊಂಡಂತೆ ಬೆವರುತ್ತ ಬಂದು ಬಿಡುತ್ತಿದ್ದೆ. ಬಹಳ ಕಡಿಮೆ ಕಾಸಿಗೆ ಬಟ್ಟೆ ಸಿಗುತ್ತಿದ್ದವು. ಹಾಗೆ ತಂದ ಬಟ್ಟೆಗಳ ಧರಿಸಿ ಕ್ಯಾಂಪಸ್ಸಿನಲ್ಲಿ ಸುತ್ತಾಡುವಾಗ ಏನೊ ಕಸಿವಿಸಿ. ಅಕಸ್ಮಾತ್ ಈ ಕ್ಯಾಂಪಸ್ಸಿನಲ್ಲಿ ಯಾರಾದರೂ ಈ ಬಟ್ಟೆ ಎಲ್ಲಿಂದ ತಂದೆ ಎಂದು ಕೇಳಿಬಿಟ್ಟರೆ ಎಂಬ ಭಯ.

ಹಾಸ್ಟೆಲುಗಳಲ್ಲಿ ಬಟ್ಟೆಗಳ ಕಳುವು ಮಾಮೂಲು. ತೊಳೆದು ಹೊರಗೆ ಬಯಲಲ್ಲಿ ರಾತ್ರಿಯೆಲ್ಲ ಆರಲಿ ಎಂದು ಒಣ ಹಾಕುತ್ತಿದ್ದರು. ಆ ಕಳ್ಳರೇನಾದೂ ಇಲ್ಲಿಂದೇನಾದರೂ ಕದ್ದು ಅಲ್ಲಿ ಮಾರಿದ್ದರೆ… ನಾನು ಸಿಕ್ಕಿಬಿದ್ದರೆ… ಥೂ… ಇಂತಹ ಬಾಳಲ್ಲಿ ಯಾವ ಕ್ರಾಂತಿ ಯಾವ ಪ್ರೇಮ ಪತ್ರ ಎಂದು ನನಗೆ ನಾನೇ ಅಸಹ್ಯ ಪಟ್ಟುಕೊಳ್ಳುತ್ತಿದ್ದೆ. ಈ ಹೋರಾಟಗಾರರಿಗೆ ನಾನೊಂದು ಬಾಡಿಗೆಗೆ ಸಿಕ್ಕಿರುವ ಆಳಿರಬೇಕು ಎನಿಸುತಿತ್ತು. ಅಂತಹ ಸ್ವಮರುಕವ ಕಿತ್ತು ಬಿಸಾಡು ಎಂದು ಸಾಕೇತ್ ಸಂತೈಸಿದ್ದ.

ಒಂದು ದಿನ ವಿಭಾಗದ ಪ್ರೊ. ಬಸವರಾಜ್ ರೂಮಿಗೆ ಕರೆದರು. ಕೂರಿಸಿಕೊಂಡು ರೈತ ವಿದ್ಯಾರ್ಥಿ ಒಕ್ಕೂಟದ ಬಗ್ಗೆ ಪರಿಚಯಿಸಿದರು. ಅದಾಗಲೆ ರೈತ ಚಳುವಳಿಯ ನೇತಾರರ ಪರಿಚಯ ಆಗಿತ್ತು. ನನ್ನನ್ನು ಸಂಚಾಲಕನನ್ನಾಗಿ ನೇಮಿಸಿದ್ದರು. ನನಗಿಂತ ಬಂಜಗೆರೆ ಸಮರ್ಥನಿದ್ದ. ಬಸವರಾಜ್ ಹೀಗೆ ಮಾಡುತ್ತಾರೆ ಎಂಬ ಅಂದಾಜೇ ಇರಲಿಲ್ಲ. ಒಂದು ಗುರುತಾದರೂ ಸಿಗುತ್ತದೆ. ನಾಳೆ ಬದುಕನ್ನೊ ಅನ್ನದ ದಾರಿಯನ್ನೊ ಅದರಲ್ಲೇ ಕಂಡುಕೊಳ್ಳಬಹುದಲ್ಲಾ ಎನಿಸಿತ್ತು. ಗಂಗೋತ್ರಿಯ ಒಳಗಿನ ಪ್ರಾಧ್ಯಾಪಕರ ಜಾತಿಗಳ ಮುಸುಕಿನ ಗುದ್ದಾಟ ಗೊತ್ತಿರಲಿಲ್ಲ. ಅನೇಕ ಶೂದ್ರರು ಆಗ ರೈತ ಸಂಘದಲ್ಲಿ ಗುರುತಿಸಿಕೊಂಡಿದ್ದರು. ನಾಯಕತ್ವದಲ್ಲಿ ಲಿಂಗಾಯಿತರಿಗೂ ಹಳೆ ಮೈಸೂರಿನ ಒಕ್ಕಲಿಗರಿಗೂ ವೈಷಮ್ಯ ಇತ್ತು. ನೇರ ತೋರುವಂತಿರಲಿಲ್ಲ. ನನ್ನನ್ನು ಕರೆದು ರೈತ ವಿದ್ಯಾರ್ಥಿ ಒಕ್ಕೂಟದ ಸಂಚಾಲಕತ್ವಕ್ಕೆ ಕೂರಿಸಿದ್ದು ಭಾಗಶಃ ಯಾರಿಗೂ ಇಷ್ಟ ಇರಲಿಲ್ಲ. ಹಾಗೆ ಮಾಡಿದ್ದು ಸಮಾಜವಾದಿ ನ್ಯಾಯವಾಗಿತ್ತು. ನಾನು ಯಾವತ್ತೂ ಒಂದು ನಿರ್ಧಿಷ್ಟ ಜಾತಿಗೆ ಅಂಟಿಕೊಂಡಿರಲಿಲ್ಲ. ಆಗ ತಾನೆ ಲೋಹಿಯಾ ವಿಚಾರಗಳು ಕಿವಿ ಮೇಲೆ ಬಿದ್ದಿದ್ದವು. ಆಗ ವಿಚಾರವಾದಿ ವೇಷ ಧರಿಸಿ ಒಳಗೆ ಜಾತಿವಾದಿ ಆಗಿದ್ದ ಪ್ರೊಫೇಸರ್ ಒಬ್ಬರು ಬಾರೀ ಜೋರಿದ್ದರು. ಅವರದು ಪಾಳೆಗಾರಿಕೆಯ ನಡತೆ. ಸಂಚಾಲಕನಾಗಿ ಹೋರಾಟಗಳ ಸಲುವಾಗಿ ಹಲವಾರು ಬಾರಿ ಪೂರ್ವ ಸಭೆ ಕರೆದರೂ ಯಾರೂ ಬರುತ್ತಿರಲಿಲ್ಲ. ಒಕ್ಕಲಿಗ ವಿದ್ಯಾರ್ಥಿಗಳಲ್ಲಿ ಕೆಲವರು ನೇರವಾಗಿಯೆ ಕೇಳಿದ್ದರು… ‘ನೀನ್ಯಾವಾಗ್ಲ ರೈತ್ರ ಮಗಾ ಆಗಿದ್ದೇ… ನಮುಗೆ ಜೀತ ಮಾಡ್ಕಂದಿದ್ದೋರ ಮಗ್ನಾಗಿದ್ದೋನು ನೀನು… ಈಗ ನಮ್ಗೇ ಲೀಡ್ರೇನ್ಲಾ’ ಎಂದು ಹಂಗಿಸಿ ಕೇಳಿದ್ದರು. ನಿಜವಿತ್ತು ಅವರ ಪ್ರಶ್ನೆ. ಉತ್ತರಿಸಲು ಆಗಲಿಲ್ಲ. ಏನು ಮಾಡುವುದೂ… ಗೊಂದಲಗೊಂಡೆ. ಅಷ್ಟರಲ್ಲಿ ಪ್ರೊ. ನಂಜುಂಡಸ್ವಾಮಿಯವರನ್ನು ಕರೆಸಿದ್ದೆವು. ರಾಮದಾಸರು ಬೆನ್ನ ಹಿಂದೆ ಇದ್ದರು. ಅಂದು ಗಾಂಧಿ ಭವನದಲ್ಲಿ ಪ್ರೊ. ನಂಜುಂಡಸ್ವಾಮಿಯವರು ಆಳವಾಗಿ ಮಾತಾಡಿದ್ದರು. ಧರ್ಮ ಮತ್ತು ರಾಜಕಾರಣದ ಆಳ ಅಗಲಗಳ ವ್ಯಾಪಕವಾಗಿ ಗ್ರಹಿಸಿ ವಿಶ್ಲೇಷಿಸಿದ್ದರು. ‘ನೆನ್ನೆಯ ರಾಜಕಾರಣ ಇವತ್ತಿನ ಧರ್ಮ; ಇವತ್ತಿನ ಧರ್ಮ ನಾಳೆಯ ರಾಜಕಾರಣ’ ಎಂದು ಲೋಹಿಯಾರ ವಿಚಾರಗಳ ಮಂಡಿಸಿದ್ದರು. ಆ ಪಾಳೇಗಾರ ಪ್ರಾಧ್ಯಾಪಕನು ಬಂದು ಕೂತಿದ್ದ. ಪ್ರೊ. ಅವರನ್ನು ಕಂಡರೆ ಅವನಿಗೆ ಆಗುತ್ತಿರಲಿಲ್ಲ. ಅಂತಹ ಪುಡಿ ಪ್ರಾಧ್ಯಾಪಕರನ್ನು ನಂಜುಂಡಸ್ವಾಮಿಯವರು ಲೆಕ್ಕಕ್ಕೇ ತೆಗೆದುಕೊಂಡಿರಲಿಲ್ಲ. ಮಹಾನ್ ಜಾತಿವಾದಿ ಆಗಿದ್ದ ಅವನ ಮೈ ತುಂಬ ಅದೇ ರಕ್ತ ಹರಿದಾಡುತ್ತಿತ್ತು. ತಾನು ತಾಜ್ಯಾತೀತ ವಿಚಾರವಾದಿ ಎಂದು ಎದೆ ತಟ್ಟಿಕೊಂಡು ಹೇಳುತ್ತಿದ್ದ. ಇವನೊಬ್ಬ ಕೇಡಿ ಎಂದು ಅವನಿಂದ ದೂರವಿದ್ದೆ.

ಛೇ; ಇದೂ ಕೂಡ ನನಗೆ ತಕ್ಕುದಲ್ಲ ಎಂದು ಹೊರಗೆ ಬಂದಿದ್ದೆ. ನಾನು ಬಾಲ್ಯದಲ್ಲಿ ಜಾತಿಯ ಹಿಂಸೆಯನ್ನೆ ಕಂಡಿರಲಿಲ್ಲ; ಅದೂ ಅಂತಹ ಜಾತಿ ಕೂಪಗಳ ಹಳ್ಳಿಯಲ್ಲಿ. ಕ್ಯಾಂಪಸ್ಸಿನಲ್ಲಿ ಅವರವರ ಜಾತಿಗಳ ಹೊಂಡಗಳು ಹೆಜ್ಜೆ ಹೆಜ್ಜೆಗಳಿಗೂ ಅಡ್ಡಿಪಡಿಸುತ್ತಿದ್ದವು. ಯಾವ ಘನ ಉದ್ದೇಶಕ್ಕಾಗಿ ಈ ಜಾತಿ ತಿಪ್ಪೆಗಳು ಇಷ್ಟೊಂದು ಹೊಲಸಾಗಿ ಇಲ್ಲಿ ತುಂಬಿವೆ ಎಂದು ವಿಚಾರ ಮಾಡುತಿದ್ದೆ. ಜಾತಿ ವ್ಯವಸ್ಥೆಯ ಮೃಗೀಯ ಪ್ರಭುತ್ವ ಅರಿವಿಗೆ ಬಂದಿತ್ತು. ಜಾತಿ ವ್ಯವಸ್ಥೆ ಕಲ್ಪಿತ ಪಾಲನ್ನು ಎಲ್ಲ ಜಾತಿಗಳಿಗೂ ಹಂಚಿಬಿಟ್ಟಿದೆ. ಶ್ರೇಣಿಯ ಈ ಹುಚ್ಚು ಅಧಿಕಾರ ಯಾರನ್ನಾದರೂ ಬಲಿಹಾಕಬಲ್ಲದು ಎನಿಸಿ ಭಯವಾಯಿತು. ಸಾಕೇತ್‌ಗಿಂತಲೂ ಮೊದಲು ಆ ಬ್ಲೇಡೇಟಿನ ಚಿಕ್ಕಣ್ಣ ಯಾವತ್ತೂ ಹೇಳುತ್ತಿದ್ದನಲ್ಲಾ… ಅವನ ವಿಚಾರ ಸರಿ… ಯಾವಾಗಲೂ ನಮ್ಮ ರಕ್ಷಣೆಗಾಗಿ ಒಂದು ವೆಪನ್ ಇರಬೇಕು… ಯಾವ ಜಾತಿಯ ಪಾತಾಳದಲ್ಲಿದ್ದೀಯೊ ಅಲ್ಲಿಂದಲೇ ಮೇಲೆದ್ದು ಬರಬೇಕೂ… ಅವನ ತರ್ಕ ಸರಿ ಇತ್ತು. ಆದರೂ ವಾಸ್ತವ ಬೇರೆ ಇದೆಯಲ್ಲಾ… ವ್ಯಕ್ತಿಯ ಯತ್ನಕ್ಕಿಂತಲೂ ಸಮುದಾಯದ ಪ್ರಯತ್ನವೇ ಮದ್ದು ಎನಿಸಿತ್ತು.

ಆ ಪೈಲ್ವಾನ ತನ್ನ ಕುಸ್ತಿಗಳಲ್ಲಿ ಮೇಲು ಜಾತಿಗಳ ಅಹಂ ಅನ್ನು ಮುರಿದು ಹಾಕುತ್ತಿದ್ದ… ನಾನೇನು ಮಾಡಲಿ… ಇಲ್ಲಿನ್ನು ಕೆಲವೇ ತಿಂಗಳುಗಳು ಉಳಿದುಕೊಳ್ಳಲು ಇರುವ ಅವಕಾಶ… ಅನಂತರದ ದಾರಿ ಯಾವುದು? ಬದುಕಿ ಉಳಿಯುವುದೇ ಮಹಾ ಸಾಹಸ ಅನಿಸುತ್ತಿತ್ತು. ಮೊದಲ ವರ್ಷದ ಎಂ.ಎ.ಯಲ್ಲಿ ಮೂರನೆ ದರ್ಜೆಯಲ್ಲಿ ಪಾಸಾಗಿದ್ದೆ. ಕುಡುಮಿಯಾಗಿದ್ದರೆ ಕೊನೆ ಪಕ್ಷ ಎರಡನೇ ದರ್ಜೆಯಲ್ಲಾದರೂ ಪಾಸಾಗುತಿದ್ದೆನೇನೊ… ನನಗಿಂತ ದಡ್ಡರು ಉನ್ನತ ಅಂಕಗಳಲ್ಲಿ ತೇರ್ಗಡೆ ಹೊಂದಿದ್ದರು. ನನ್ನ ಯೋಗ್ಯತೆ ಇಷ್ಟೆಯೇ ಎಂದು ಆ ಮಾರ್ಕ್ಸ್‌ ಕಾರ್ಡನ್ನು ಬಚ್ಚಿಟ್ಟುಬಿಟ್ಟಿದ್ದೆ. ಜಾತಿ ಕೆಲಸ ಮಾಡಿತ್ತು. ನೀವು ಥರ್ಡ್‌ಕ್ಲಾಸ್‌ನಲ್ಲಿ ಪಾಸಾದರೂ ಕೆಲಸ ಸಿಗುತ್ತಲ್ಲಾ; ಚಿಂತೆಯಾಕೆ ಮಾಡುವೆ ಎಂದು ಸಹಪಾಠಿಗಳು ಏನೂ ಯೋಚಿಸದೆ ಹೇಳುತ್ತಿದ್ದರು. ಅವರು ಮುಗ್ಧರೊ ಧೂರ್ತರೊ ಎಂಬುದೆ ತಿಳಿಯುತ್ತಿರಲಿಲ್ಲ. ಮೀಸಲಾತಿಯ ಬಗ್ಗೆ ಅವತ್ತಿಗೂ ಆಕ್ರೋಶವಿತ್ತು. ಜೆ.ಪಿ. ಬೇವಿನಕಟ್ಟೆ ಇತ್ಯಾದಿ ನನ್ನ ದಮನಿತ ಜಾತಿಗಳ ಸ್ನೇಹಿತರ ಬಗ್ಗೆ ಮೃದು ಧೋರಣೆ ತೋರುತ್ತಿದ್ದರು. ನಾನು ನಡತೆಯಲ್ಲಿ ಒರಟಾಗಲೇ ಬೇಕಿತ್ತು. ಅಂತಹ ಒತ್ತಡ ಉಂಟಾಗುತ್ತಿತ್ತು. ಅತ್ತ ನನ್ನ ಮೂಲ ಜಾತಿಯವರೂ ಬೆಂಬಲಕ್ಕೆ ಬರುತ್ತಿರಲಿಲ್ಲ. ಜಾತಿಯನ್ನು ಬಚ್ಚಿಡುವ ಸ್ವಭಾವ ಹೆಚ್ಚಿತ್ತು. ಒಂದು ದಿನ ತರಗತಿ ಮುಗಿಸಿ ಹಾಸ್ಟಲಿಗೆ ಬಂದೆ. ಎಂಟ್ರೆನ್ಸಲ್ಲೆ ಕೆಲ ಮಂಡ್ಯದ ಪುಂಡು ಹುಡುಗರು ಕಾಲು ಕೆರೆದು ಜಗಳಕ್ಕೆ ನಿಂತರು. ಮುಂಗೋಪಿ ಆಗಿದ್ದೆ. ದಾಂಡಿಗರಾಗಿದ್ದರು ಅವರೆಲ್ಲ. ತಲೆ ತಗ್ಗಿಸಿ ಎಷ್ಟಂತ ಸಹಿಸುವುದು ಎಂದು ತಿರುಗಿಬಿದ್ದಿದ್ದೆ.

‘ಲೇಯ್ ನಿನ್ನತ್ರ ಮಾತಾಡಬೇಕು ಬಾರೊ ನನ್ನ ರೂಮಿಗೆ ಧಮ್ಮಿದ್ರೆ’ ಎಂದು ಸವಾಲು ಎಸೆದ. ‘ಬರ್ತಿನಿ ನಡೆಯೊ’ ಎಂದು ಅವನ ರೂಮಿಗೆ ಹೋದೆ. ಅವನ ಜೊತೆ ಮೂವರಿದ್ದರು. ರೂಮೊಳಗೆ ಇಸ್ಪೇಟಾಡುತ್ತಿದ್ದ ನಾಲ್ಕು ಮಂದಿ ಕೆಕ್ಕರಿಸಿ ನೋಡಿದರು. ಎದೆ ಮೇಲೆ ಕೈ ಇಟ್ಟು ಬಲವಾಗಿ ತಳ್ಳಿದ. ಮಂಚದ ಮೇಲೆ ಬಿದ್ದೆ. ಮುಳ್ಳು ಮುಸುಡಿಯ ವಿಕಾರಿ ಒಬ್ಬ ನನ್ನ ಎದೆ ಮೇಲೆ ಕಾಲಿಟ್ಟು ತುಳಿದ. ‘ಲೇಯ್ ಸೂಳೆ ಮಗನೇ… ಪ್ರೊ. ನಂಜುಂಡಸ್ವಾಮಿಗೆ ಹುಟ್ಟಿದ್ದಿಲಾ ನೀನೂ… ಇಲ್ಯಾರೂ ನಮ್ಮ ಗೌಡ್ರು ಇಲ್ಲುಲಾ… ತಿನ್ನುಕೆ ಗತಿ ಇಲ್ಲಾ… ದಿಕ್ಕೆಟ್ಟು ಬಂದ್ಬುಟ್ಟು ನಮ್ಮುಂದೆ ಅಮ್ಮಾಡಿಲಾ… ಯಾವೂರಿಂದ ಬಂದಿದ್ದಿಲಾ… ಬೆರ್ಕೆ ನನ್ಮಗನೇ; ತಿಕಾ ಬಾಯಿ ಮುಚ್ಕಂದು ಸುಮ್ನೆ ಇದ್ದಾ ಸರೀ; ಇಲ್ಲಾ ಅಂದ್ರೆ ಮಗ್ನೇ ಕಳಿಸ್ಬುಟ್ದಿವಿ ಯಮುನ್ ಪಟ್ಣುಕೇ’ ಎಂದು ಕತ್ತು ಹಿಚುಕಿ ಹಿಂಸಿಸಿದ. ‘ಲೇಯ್ ಗಲಾಟೆ ಮಾಡ್ಬೇಡಾ… ಸೈಲೆಂಟಾಗಿ ಟ್ರೀಟ್‌ಮೆಂಟ್ ಕೊಡೂ’ ಎಂದು ಅವರಲ್ಲೆ ಒಬ್ಬ ಸೂಚಿಸಿದ.

ರೂಮಿನ ವರಾಂಡದಲ್ಲಿ ಕೆಲವು ವಿದ್ಯಾರ್ಥಿ ಮಿತ್ರರು ನನ್ನ ಪರವಾಗಿ ಬಂದು ಬಾಗಿಲು ಬಡಿದು ಕೂಗಿದ್ದರು. ಒಳಗಿದ್ದವರು ಹೆದರಿದ್ದರು. ಗುಂಡ್ಲುಪೇಟೆಯ ಶಿವಬುದ್ಧಿ ಎಂಬ ಮಿತ್ರ ಇದ್ದ. ದ.ಸಂ.ಸದ ಅರೆಕಾಲಿಕ ಕಾರ್ಯಕರ್ತನಾಗಿ ರಾಜ್ಯಶಾಸ್ತ್ರದಲ್ಲಿ ಎಂ.ಎ.ಮುಗಿಸುತ್ತಿದ್ದ. ಅವಾಜ್ ಹಾಕಿದ್ದ. ‘ಬಾಗ್ಲು ತಗೀಲಿಲ್ಲಾ ಅಂದ್ರೆ ಯೀಚ್ವಾರಿಂದ ಬೀಗಾ ಹಾಕಂದು ಪೋಲಿಸ್ಗೆ ಕಂಪ್ಲೇಂಟ್ ಕೊಡ್ತೀನಿ’ ಎಂದು ಅಬ್ಬರಿಸಿದ್ದ. ಅವರು ನನ್ನನ್ನು ಹೊರಗೆ ಬಿಡಲೇ ಬೇಕಿತ್ತು. ಅವನೊಮ್ಮೆ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಆಗಿದ್ದಾಗ ಅವರ ಕಾರಿಗೆ ಅಡ್ಡ ನಿಂತು ಧಮಕಿ ಹಾಕಿ ನಮ್ಮ ಹಳ್ಳಿಗೆ ಇಂತಿಂತಹ ಕೆಲಸಗಳನ್ನು ಮಾಡಿಕೊಡಬೇಕೆಂದು ಆಗ್ರಹಿಸಿ ಯಶಸ್ವಿ ಆಗಿದ್ದ. ತನ್ನ ರೂಮಿಗೆ ಕರೆದುಕೊಂಡು ಹೋಗಿ ರಕ್ಷಿಸಿದ್ದ. ಗುಂಡ್ಲು ಪೇಟೆಯ ಹಳ್ಳಿ ಒಂದರಿಂದ ಬಂದಿದ್ದ ಮಿತ್ರನಾಗಿದ್ದ. ಜೆ.ಪಿ.ಗೆ ಇದು ತಡವಾಗಿ ಗೊತ್ತಾಗಿ ತುಂಬ ವಿಷಾದಪಟ್ಟಿದ್ದ. ಒಬ್ಬನೆ ಓಡಾಡಬೇಡ ಎಂದು ಎಚ್ಚರಿಸಿದ್ದ. ನಾನೆಲ್ಲಿ ಕೇಳಬೇಕೂ… ನನಗೆ ತಿಳಿದದ್ದನ್ನೇ ಮಾಡಬೇಕು… ನನ್ನ ದಾರಿಯಲ್ಲಿ ನಾನೊಬ್ಬನೆ ಏಕಾಂಗಿಯಾದರೂ ಚಿಂತೆ ಇಲ್ಲಾ; ನನ್ನ ದಿಕ್ಕಿನಲ್ಲೆ ನಾನು ಸಾಗಬೇಕು ಎಂಬ ವ್ಯಕ್ತಿತ್ವ ಅದಾಗಲೇ ಬೇರುಬಿಟ್ಟಿತ್ತು. ಅದನ್ನು ಸ್ವತಃ ನಾನೇ ಕಿತ್ತುಕೊಳ್ಳಲಾರದಾಗಿದ್ದೆ. ಎಲ್ಲಿಂದ, ಯಾಕೆ ಈ ಬೇರುಗಳು ಬಂದವು? ಹಿಂಸೆ ಅಪಮಾನ ಕಿಚ್ಚಿನ ಪಾತಾಳದಿಂದ ಬಂದವೇನೊ… ಆಧುನಿಕ ಸಮಾಜ ಶಿಕ್ಷಣ ನನಗೆ ಏನನ್ನು ಇಲ್ಲಿ ಕಲಿಸುತ್ತಿವೆ? ಅಲ್ಲಿ ಹಳ್ಳಿಯಲ್ಲಿ ಪ್ರಪಾತ ಮುನಿಯಂತೆ ಎಲ್ಲವನ್ನು ಸಹಿಸಿಕೊಳ್ಳುವುದನ್ನು ಮನವರಿಕೆ ಮಾಡಿಸಿತ್ತು. ಆದರೆ ಇಲ್ಲಿ ಜಾಗೃತ ಆಗುತ್ತಿದ್ದಂತೆಯೇ ತಲೆ ಚಚ್ಚಿಕೊ ಇಲ್ಲವೇ ಹಲ್ಲುಗಿಂಜಿ ಬಕೀಟು ಹಿಡಿದು ಹೊಸ ಬಗೆಯ ಗುಲಾಮಗಿರಿಗೆ ಬಲಿಯಾಗು… ಎರಡೂ ಹೆಚ್ಚು ಕಡಿಮೆ ಅಣ್ಣ ತಮ್ಮ ಇದ್ದಂತಿವೆ! ಇವೆರಡರಲ್ಲಿ ತಲೆ ಚಚ್ಚಿಕೊಳ್ಳುವುದೇ ಯೋಗ್ಯ ಏಕೈಕ ಆಯ್ಕೆ. ಆಧುನಿಕತೆಯ ಹೆಬ್ಬಾಗಿಲ ಕಂಬಕ್ಕೆ ಬಲಿಪಶುವಾಗುವುದು ಎಂತಹಸ ಚೋದ್ಯ! ಅಹಾ ಅಂಬೇಡ್ಕರ್ ಜೀ; ನಿಮಗೂ ಇದೇ ಆಯ್ಕೆ ಇತ್ತಲ್ಲವೇ. ಸರಿಯಾಗಿ ಗೊತ್ತಿಲ್ಲ. ದೊಡ್ಡ ಮಾತಾಡಲಾರೆ. ನಾಯಿ ಮರಿ ಬಲಿಯೋಕು ಮುಂಚೆ ಬೊಗಳಬಾರದಂತೆ. ಅಂದರೆ ಯಾವಾಗ ಬೊಗಳಲು ಕಲಿಯಬೇಕೊ ಆಗಲೇ ಕಲಿತುಬಿಡಬೇಕು. ಇಲ್ಲದಿದ್ದರೆ ಅದು ಕಳ್ಳರ ವಿರುದ್ಧದ ಬೊಗಳಾಗುವುದಿಲ್ಲ! ಬಾಲ ಅಲ್ಲಾಡಿಸಿಕೊಂಡು ಕುಯ್‍ಕುಯ್ ಅನ್ನುತ್ತಲೇ ಅವರು ಹಾಕಿದ್ದನ್ನು ನೆಕ್ಕಿಕೊಂಡು ಅವರನ್ನು ಕಾಯುತ್ತ ವ್ಯರ್ಥವಾಗಿ ಒಂದು ದಿನ ಸತ್ತು ಹೋಗಬೇಕಾಗುತ್ತದೆ. ಕುರೊ ಕುರೊ ಎಂದಾಗಲೆಲ್ಲ ಅವರ ಮುಂದೆ ಹೋಗಿ ನಿಲ್ಲಬೇಕಾಗುತ್ತದೆ. ಅದು ಒಂದು ಬದುಕೇ ಎಂದು ಯೋಚಿಸಿ ಹೈರಾಣಾಗಿದ್ದೆ.

ನಟ್ಟಿರುಳಾಗಿತ್ತು. ಅವನ್ಯಾರೊ ಕೇಳಿಕೊಂಡು ಬಂದಿದ್ದನಂತಲ್ಲಾ. ಇಂಟಲಿಜೆನ್ಸ್‌ನವನೇ… ಅದಾಗಲೆ ನಮ್ಮ ಹೆಸರು ಪೋಲಿಸ್ ಇಲಾಖೆಯಲ್ಲಿ ದಾಖಲಾಗಿತ್ತು. ನಮ್ಮ ಚಟುವಟಿಕೆಗಳ ಮೇಲೆ ಗುಪ್ತಚರರ ಕಣ್ಣು ಬಿದ್ದಿತ್ತು. ಅದು ಕಾಮನ್. ಎಲ್ಲ ವ್ಯವಸ್ಥೆಗಳಲ್ಲಿ ಇದ್ದದ್ದೇ. ಅತಿರೇಖ ನಡತೆಯವರ ಪಟ್ಟಿಯಲ್ಲಿ ನಮ್ಮ ಹೆಸರು ದಾಖಲಾಗಿದ್ದಕ್ಕೆ ಭಯವಾಗಿರಲಿಲ್ಲ. ಯಾಕೆಂದರೆ ಕ್ರಾಂತಿ ಕನ್ನೆಯ ಮುಗ್ಧ ಮೋಹದಲ್ಲಿ ಅವರ ಕರಿನೆರಳು ಹೇಗೆ ಹೊಂಚು ಹಾಕುತ್ತದೆ ಎಂಬ ಎಚ್ಚರವೇ ಇರಲಿಲ್ಲ. ಕ್ರಾಂತಿ ಕನ್ನೆಯ ಮೋಹಿಸು. ಅವಳಿಂದ ನೊಂದವರಿಗೆ ಬೆಳಕಾಗುತ್ತದೆ ಎಂದು ಗಾರ್ಕಿಯ ಮದರ್ ಕಾದಂಬರಿಯ ನಾಯಕಿ ವ್ಲಾಸೋವಳ ಕ್ರಾಂತಿಯ ದಾರಿಯ ಸಾಕೇತ್ ಮಾರ್ಮಿಕವಾಗಿ ವಿವರಿಸುತ್ತಿದ್ದ. ಅವಳ ಮಗ ಪಾವೆಲ್‌ನ ಪಾತ್ರದಲ್ಲಿ ನಾನು ಕರಗಿ ಹೋಗಿದ್ದೆ. ತರಗತಿಗಳ ಯಾವ ಪಾಠಗಳೂ ನನಗೆ ನೆನಪಿಲ್ಲ. ನಾನೇ ಹುಡುಕಿ ಓದಿದ್ದು ಗೆಳೆಯರಿಂದ ಆಲಿಸಿದ್ದು ಗಾಢವಾಗಿ ಸ್ಮೃತಿಯಲ್ಲಿ ಬೆರೆತಿವೆ. ಅವರ ಶುಷ್ಕ ಒಣ ಪಾಂಡಿತ್ಯಕ್ಕೆ ರೋಸಿ ಹೋಗಿ ತರಗತಿಯಿಂದಲೆ ಎದ್ದು ಲೈಬ್ರರಿಗೆ ಬಂದು ರಾಶಿ ಪುಸ್ತಕಗಳ ನಡುವೆ ಒಂದು ಹುಳುವಾಗುತ್ತಿದ್ದೆ. ಆ ಹೆಬ್ಬೊತ್ತಿಗೆಗಳ ಒಂದೊಂದೇ ಪುಟಗಳ ಸಣ್ಣ ಇಂಗ್ಲೀಷ್ ಅಕ್ಷರಗಳ ಹಿಂದೆ ಮುಂದೆ ಮತ್ತೆ ಮತ್ತೆ ಓದಿ ಪಕ್ಕದಲ್ಲೇ ಇಟ್ಟುಕೊಂಡಿರುತ್ತಿದ್ದ ಡಿಕ್ಷ್‌ನರಿಯಿಂದ ಕಠಿಣ ಪದಗಳ ಅರ್ಥಹುಡುಕಿ ಆ ಇಡೀ ವಾಕ್ಯ, ಪ್ಯಾರ ನುಡಿಗಟ್ಟು ಪರಿಕಲ್ಪನೆ, ಅಡಿಟಿಪ್ಪಣಿ ಇತ್ಯಾದಿಗಳ ದಾಟಿ ಬರುವಷ್ಟರಲ್ಲಿ ಒಂದೇ ಒಂದು ಪುಟಕ್ಕೆ ಸಾಕಷ್ಟು ಸಮಯ ಜಾರಿ ಹೋಗುತ್ತಿತ್ತು. ಸಣ್ಣದೊಂದು ನಿಶ್ಪಾಪಿ ಹುಳದಂತೆ ಹರಿದಾಡಿ ಕೊನೆ ಪುಟ ತಲುಪುವಷ್ಟರಲ್ಲಿ ಏನೂ ತಿಳಿಯಲಿಲ್ಲ ಎನಿಸುತ್ತಿತ್ತು. ಹೆಚ್ಚು ಕಡಿಮೆ ಅವೆಲ್ಲ ಹತ್ತೊಂಬತ್ತನೆ ಶತಮಾನದ ಚಿಂತನಾ ಬರಹಗಳು. ಕೆಲವೊಂದು ಯುರೋಪಿನ ಪುನರುಜ್ಜೀವನ ಕಾಲದ ತತ್ವ ಮೀಮಾಂಸೆಯ ಕಠಿಣ ಗದ್ಯ ಶೈಲಿಗಳು. ಹದಿನೈದನೆ ಶತಮಾನಕ್ಕಾಗಲೇ ಯುರೋಪಿನಲ್ಲಿ ಘನವಾದ ಚಿಂತನೆಗಳು ಗದ್ಯದಲ್ಲಿ ಸಾಗಿದ್ದವು. ವೈಜ್ಞಾನಿಕ ತಳಹದಿಯ ಮೇಲೆ ಆಲೋಚನೆಯನ್ನು ಬೆಳೆಸಿದ್ದವು. ಧರ್ಮತತ್ವಗಳ ಎಲ್ಲೆಗಳನ್ನು ಮೀರಲು ಸಿದ್ಧತೆಗಳಾಗುತ್ತಿದ್ದವು. ಅದಾಗಲೆ ಗೆಲಿಲಿಯೊ ಸೂರ್ಯ ಕೇಂದ್ರ ಸಿದ್ಧಾಂತವನ್ನು ಮಂಡಿಸಿದ್ದ. ಅದೇ ಕಾಲದಲ್ಲಿ ನಮ್ಮಲ್ಲಿ ಏನಾಗುತ್ತಿತ್ತು ಎಂದು ಹುಡುಕಿದರೆ ಆಗಿಲ್ಲಿ ಸಮಾಜ ಶಾಸ್ತ್ರಗಳೇ ಹುಟ್ಟಿರಲಿಲ್ಲ. ಕಂತೆಬೊಂತೆ ಜಾತಿಗಳ ತಿಪ್ಪೆಗುಂಡಿಗಳು ಯಥೇಚ್ಛವಾಗಿ ವ್ಯಾಪಿಸಿದ್ದವು. ಅವನ್ನು ತಡೆಯಲು ಬಸವಣ್ಣ ಯತ್ನಿಸಿದ್ದ. ಚಾರ್ವಾಕರಿಂದ ಆರಂಭಿಸಿ ಜೈನ, ಬೌದ್ಧ ಮಾರ್ಗಗಳು ಜ್ಞಾನವನ್ನು ಹೇಗೆ ಒಂದು ವಿಮೋಚನಾ ತತ್ವವಾಗಿ ರೂಪಿಸಿವೆ ಎಂದು ವಿಪರೀತ ತಲೆಕೆಡಿಸಿಕೊಳ್ಳುತ್ತಿದ್ದೆ. ನಿನ್ನ ತಲೆ ಕೂದಲು ಇದಕ್ಕೆ ಉದುರಿ ಹೋಗಿರುವುದು ಎಂದು ಶ್ರೀಧರ ಅಪರೂಪಕ್ಕೆ ಸಿಕ್ಕಾಗ ತಮಾಷೆ ಮಾಡುತ್ತಿದ್ದ. ‘ಅದೆಲ್ಲ ಜಿನೆಟಿಕ್ ಡಿಸಾರ್ಡರ್ ಕಣೊ… ತಲೆಮಾರುಗಳಿಂದ ಕ್ಯಾರಿ ಆಗ್ತಿರ್ತವೆ’ ಎನ್ನುತ್ತಿದ್ದೆ. ಯಾರೂ ನಂಬಲಾರರು… ಆಗ ಶಿವರಾಮ ಕಾರಂತರು ಬಹಳ ಹಿಂದೆಯೇ ಸಂಪುಟಗಟ್ಟಲೆ ಬರೆದು ಪ್ರಕಟಿಸಿದ್ದ ‘ವಿಜ್ಞಾನ ಜಗತ್ತು’ ಕೃತಿಗಳನ್ನು ಓದಿದ್ದೆ. ಅವರು ಕನ್ನಡದಲ್ಲಿ ಅಪರೂಪದವರು. ಈ ಬಗೆಯ ವಿಚಾರಗಳಲ್ಲಿ ತುಂಬ ಇಷ್ಟವಾಗಿದ್ದರು. ಅವರ ಕಾದಂಬರಿಗಳನ್ನು ಓದುವ ಉತ್ಸಾಹ ಇರಲಿಲ್ಲ. ಸ್ವತಃ ಕುವೆಂಪು ಅವರನ್ನೆ ಬಹಳ ತಡವಾಗಿ ಓದಿದ್ದೆ. ಸಾಂಸ್ಕೃತಿಕ ರಾಜಕಾರಣದ ಸಲುವಾಗಿ ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದೆ. ಕುವೆಂಪು ವಿರೋಧಿ ಅಲೆ ಮಗುಮ್ಮಾಗಿ ತಳದಲ್ಲಿತ್ತು. ನಿಮ್ಮ ಕುವೆಂಪು ಹೇಗೆ ವಿಶ್ವ ಕನ್ನಡ ಸಮ್ಮೇಳನದ ಅಧ್ಯಕ್ಷರಾದರು ನೋಡಿದೆಯಾ… ಇಂತಹ ದಟ್ಟ ಬರಗಾಲದಲ್ಲಿ ಅವರು ನೇಗಿಲ ಯೋಗಿಯ ಪ್ರತಿನಿಧಿಸಿ ಕವಿತೆ ಬರೆದವರು ಪ್ರತಿಭಟಿಸಬೇಕಿತ್ತಲ್ಲವೇ ಎಂದು ಕೇಳಿದ್ದರು. ನೀವು ಹೇಳೋದು ಸರಿ ಎನ್ನದೆ ವಿಧಿಯೇ ಇರಲಿಲ್ಲ.

ಅದೇ ಸಂದರ್ಭದಲ್ಲಿ ಕಾರಂತರು ಸಮ್ಮೇಳನ ವಿರೋಧಿಗಳಿಗೆ ಚಾಟಿ ಏಟು ನೀಡಿ; ‘ಬರಗಾಲ ಎಂದು ಜನ ಸುಮ್ಮನೆ ಕೂರುತ್ತಾರೆಯೇ; ಅವರು ಮಸಾಲೆ ದೋಸೆ ತಿನ್ನೋದಿಲ್ಲವೇ’ ಎಂದುಬಿಟ್ಟಿದ್ದರು. ಛೇ ಈ ಸಾಹಿತಿಗಳ ಬಂಡವಾಳವೇ ಹೀಗೆ… ದ್ವಂದ್ವ ನೀತಿಯವರು, ಅವಕಾಶವಾದಿಗಳು ಎಂದು ಸಿಟ್ಟಾಗಿದ್ದೆ. ಆಗ ಜೆ.ಪಿ. ನಾನು ಒಂದು ದಿನ ನಾವ್ಯಾಕೆ ಈ ವಿಶ್ವ ಕನ್ನಡ ಸಮ್ಮೇಳನವನ್ನು ವಿರೋಧಿಸಬಾರದು ಎಂದು ಮಾತಾಡಿಕೊಂಡೆವು. ಲೈಬ್ರರಿಯಿಂದ ಕ್ಯಾಂಟೀನಿಗೆ ಬಂದು ಚಹಾ ಸವಿಯುತ್ತ ಹೇಗೆ ವಿರೋಧಿಸುವುದು ಎಂದು ನಕಾಶೆ ತಯಾರು ಮಾಡಿದೆವು. ಆದಾಗಲೆ ಗುಪ್ತವಾಗಿ ವೇದಿಕೆ ಸಿದ್ಧವಾಗಿತ್ತು. ಅವತ್ತಿನ ಮೈಸೂರಿನ ಎಲ್ಲಾ ಪ್ರಗತಿಪರ ಚಿಂತಕರೂ ಸಭೆಗೆ ಬಂದಿದ್ದರು. ರಾಮದಾಸ್, ರಾಮಲಿಂಗಂ ನೇತೃತ್ವವಹಿಸಿದ್ದರು. ಇಡೀ ಕ್ಯಾಂಪಸ್ಸಿನ ಹುಡುಗ ಹುಡುಗಿಯರು ವಿಶ್ವ ಕನ್ನಡ ಸಮ್ಮೇಳನವನ್ನು ವಿರೋಧಿಸಿದೆವು. ಜನ ಸಾಗರವೆ ಬಂತು. ಬಡ ಹಳ್ಳಿಗಾಡಿನ ಜನ ಹಸಿದು ತಮ್ಮ ದನಕರುಗಳಿಗೂ ಮೇವಿಲ್ಲದೆ ಪ್ರಾಣ ಬಿಡುತ್ತಿರುವಾಗ ಈ ಸಾಹಿತಿಗಳಿಗೆ ನೈತಿಕ ಹೊಣೆ ಇಲ್ಲ ಎಂದು ಹಾಡಿ ಧಿಕ್ಕಾರ ಕೂಗಿದೆವು. ಪ್ರೊ.ರಾಮಲಿಂಗಂ ಪ್ರಖ್ಯಾತ ಸಸ್ಯವಿಜ್ಞಾನಿಯ ನಿಜವಾದ ಹೋರಾಟದ ನೀತಿಯ ಕಂಡು ದಂಗಾಗಿದ್ದೆ. ಕುಕ್ಕರಹಳ್ಳಿಯಲ್ಲಿ ಒಂದಷ್ಟು ಮಂದಿ ರಾಮಲಿಂಗಂ ಅವರ ಅಭಿಮಾನಿಗಳಿದ್ದರು. ಅವರೂ ನಮ್ಮ ಜೊತೆ ಸೇರಿ ಕೊಂಡಿದ್ದರು. ತಮಟೆ ಬಾರಿಸುತ್ತ ಕುಣಿಯುತ್ತ ಪ್ರೊ.ರಾಮಲಿಂಗಂ ಧಿಕ್ಕಾರದ ಜೊತೆ ಹಾಡಿಗೂ ದನಿಕೊಡುತ್ತ ಮೈಸೂರು ನಗರದ ಪ್ರಮುಖ ಬೀದಿಗಳಲ್ಲಿ ಹುಲಿಯಂತೆ ಘರ್ಜಿಸುವುದ ಕಂಡು ಉನ್ಮಾದದಿಂದ ದುಃಖವಾಗುತ್ತಿತ್ತು. ದೇಹವೆಲ್ಲ ಕಿತ್ತು ಹೋಗುವಂತೆ ಧಿಕ್ಕಾರ ಕೂಗುತ್ತಿದ್ದೆ. ಅಷ್ಟು ಬಿಟ್ಟರೆ ಮತ್ತೇನೂ ನನಗೆ ಬರುತ್ತಿರಲಿಲ್ಲ. ಖಚಿತವಾದ ಪ್ರತಿರೋಧ ಆಗಿರಲಿಲ್ಲ ಅದು. ಅದು ನನ್ನದೇ ಕಿಚ್ಚನ್ನು ಅಂತಹ ಸಮೂಹ ಆಕ್ರೋಶದಲ್ಲಿ ಲೀನವಾಗಿಸಿಕೊಳ್ಳುವ ಒಂದು ಅಸಹಾಯಕ ಉಪಾಯವಾಗಿತ್ತು. ಆ ಕ್ಷಣದಲ್ಲಿ ಓದಿದ್ದ ಯಾವ ಅರಿವೂ ಜೊತೆಗೆ ಬರುತ್ತಿರಲಿಲ್ಲ. ಮಾತಾಡಲು ಬಾಯೇ ಬೀಗದಂತಾಗುತಿತ್ತು.

ಆ ಮೂಲೆ ಬಳಿ ಹಗಲಿನಲ್ಲಿ ಗಿರಾಕಿಗಳು ಕಾಣುತ್ತಿರಲಿಲ್ಲ. ರಾತ್ರಿ ಆದಾಗಲೇ ಅರೆಬರೆ ರಸ್ತೆ ಬದಿಯ ಬೆಳಕಲ್ಲಿ ಅವನ ಬಳಿ ವ್ಯಾಪಾರ ನಡೆಯುತ್ತಿದ್ದುದು. ಯಾರಾದರೂ ನೋಡಿಬಿಡುತ್ತಾರೆಂದು ಎಲ್ಲ ಗಮನಿಸಿ ಮೆಲ್ಲಗೆ ಹೋಗಿ ತಕ್ಷಣ ವ್ಯವಹಾರ ಮುಗಿಸಿಕೊಂಡು ಏನೊ ಕಳ್ಳತನದಲ್ಲಿ ಪಾಲುಗೊಂಡಂತೆ ಬೆವರುತ್ತ ಬಂದು ಬಿಡುತ್ತಿದ್ದೆ.

ರಾಮಲಿಂಗಂ ಸ್ವತಃ ಒಂದು ಹಾಡು ಬರೆದು ತಾವೇ ರಾಗ ಸಂಯೋಜಿಸಿ ಹಾಡುತ್ತಿದ್ದುದು ಈಗಲೂ ನೆನಪಿದೆ. ಅವರ ಧೈರ್ಯವೇ ಧೈರ್ಯ. ‘ಚಿನ್ನದ ರನ್ನದ ನಾಡು ಅಲ್ಲ ಇದು ಬರಗಾಲದ ಬೀಡೂ; ಗೂಳೆದ್ದು ಹೋಗುವ ಬಡ ಜನಗಳ ಬೀಡೂ… ಹೇ ಜನಗಳೆ ಕೇಳಿ ನಿಜವನು ಹೇಳುವೆ ಬರಗಾಲದ ನಾಡೂ’ ಎಂದು ಲಂಬಿಸುತ್ತ ಮಧ್ಯೆ ಮಧ್ಯೆ ಘೋಷ ವಾಕ್ಯಗಳ ಬಾಂಬಿನಂತೆ ಸಿಡಿಸುತ್ತಿದ್ದರು. ಸರ್ಕಾರವನ್ನೇ ತರಾಟೆಗೆ ತೆಗೆದುಕೊಂಡು ಅಬ್ಬರಿಸುತ್ತಿದ್ದರು. ನೋಡಿದರೆ ಅವರು ಹವಾಯಿ ಚಪ್ಪಲಿ ಧರಿಸಿದ್ದರು. ಸಾಧಾರಣ ಬೆಲೆಯ ಪ್ಯಾಂಟು ಅಂಗಿ ತೊಟ್ಟಿರುತ್ತಿದ್ದರು. ಮುಲಾಜೇ ಇಲ್ಲಾ. ಬನ್ನಿ ತೆರೆದಿರುವೆ ನನ್ನೆದೆಯಾ; ‘ಹೊಡೀತಿರಾ ಗುಂಡೂ, ಚಲಾಯ್ಸೀ ನೋಡ್ತಿನಿ’ ಎಂದು ಸವಾಲು ಹಾಕುತಿದ್ದರು. ಅವತ್ತು ಅಂತಹ ಒಳ್ಳೆಯ ಕಾಲವಿತ್ತು. ಹೋರಾಟಗಾರರು ಲಂಪಟರಾಗಿರಲಿಲ್ಲ. ಗೌರವ ಭಯವಿತ್ತು. ಆಲಿಸುವ ತಾಳ್ಮೆ ಇತ್ತು. ಪ್ರತಿಭಟನೆಯನ್ನು ಮಾನ್ಯ ಮಾಡುತ್ತಿದ್ದರು. ಪ್ರಶ್ನಿಸುವವರೇ ನೆಟ್ಟಗಿಲ್ಲದಿದ್ದರೆ ಯಾರು ತಾನೆ ಹೆದರುತ್ತಾರೆ? ಮಾರಿಕೊಳ್ಳಲು ಬಂದಿದ್ದಾನೆಂದು ತಿಳಿದು ಅವನ ರೇಟೆಸ್ಟು ಕೇಳು ಎಂದು ವ್ಯವಹಾರ ಮಾಡಿ ಕಾಲಬಳಿ ಕೂರಿಸಿಕೊಳ್ಳುತ್ತಾರೆ. ರಾಮಲಿಂಗಂ ನಿಷ್ಠೆಗೆ ಬೆಲೆ ಕಟ್ಟಲಾಗದು. ಅಪ್ರತಿಮ ಪ್ರತಿಭಟನಾಕಾರ. ನಾನಾಗ ಎಲ್ಲ ಸಂಘಟನೆಗಳಲ್ಲೂ ಕಸಗುಡಿಸುವ ಒಬ್ಬ ಜೀತಗಾರನಂತಿದ್ದೆ. ಕಂಡಿದ್ದೆ ಯಾವ ಯಾವ ನಾಯಕರು ಎಂತೆಂತವರು ಎಂದು. ಯಾಕೊ ಕಸಗುಡಿಸುವ ಸ್ಥಾನವೇ ದೊಡ್ಡದು ಎನಿಸುತ್ತಿತ್ತು. ನನ್ನ ಸ್ವಭಾವವೂ ಹಾಗೇ ಇತ್ತು. ಮೊದಲ ವಿಶ್ವ ಕನ್ನಡ ಸಮ್ಮೇಳನ, ನಾನೊಬ್ಬ ದಲಿತ, ಮಹಾಕವಿ ಕುವೆಂಪು ಅವರ ಅಧ್ಯಕ್ಷತೆಯಲ್ಲಿ ನಡೆವ ಕವಿಗೋಷ್ಠಿಯಲ್ಲಿ ಜನರ ಪ್ರತಿನಿಧಿಯಾಗಿ ಕವಿತೆ ವಾಚಿಸುವೆ ಎಂದು ದಲಿತ ಕವಿ ಸಿದ್ಧಲಿಂಗಯ್ಯ ಅವರು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದರು. ಕೊನೆಗೆ ತಾನು ಕೇವಲ ದಲಿತ ಕವಿ ಅಲ್ಲ ಎಂದೂ ಘೋಷಿಸಿಕೊಂಡರು. ಚಂಪಾ ಅವರು ಧಾರವಾಡದಿಂದ ಬಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ನಗರದ ಜನಸಂದಣಿಯಲ್ಲಿ ಕರಪತ್ರ ಹಂಚುವ ಕೆಲಸವೆ ನನಗೆ ಇಷ್ಟವಾಗಿತ್ತು. ಗುಂಡ್ಲು ಪೇಟೆ ಗೆಳೆಯ ಶಿವಬುದ್ಧಿಯ ಕರೆದುಕೊಂಡು ಅರಮನೆ ಆವರಣದ ಸುತ್ತ ಜನರ ಕೈಗೆ ಇಟ್ಟು ಕೇಳಿದವರಿಗೆ ವಿವರಿಸುತ್ತಿದ್ದೆ. ಪ್ರತಿಭಟನೆಯ ಮುಖ್ಯ ವೇದಿಕೆ ಇದ್ದದ್ದು ಕಲಾಮಂದಿರದ ಬಳಿ. ಪ್ರತಿಭಟನಕಾರರೆಲ್ಲ ಹೆಚ್ಚಾಗಿ ಇದ್ದದ್ದು ಅಲ್ಲೇ. ಆಗೀಗ ಅಲ್ಲಿ ಸುಳಿದು ಹೊರಗೆ ಬರುತ್ತಿದ್ದೆ. ಸ್ವಲ್ಪದರಲ್ಲಿ ತಪ್ಪಿಸಿಕೊಂಡಿದ್ದೆ.

ವಿರೋಧಿಸುತ್ತಿದ್ದವರನ್ನೆಲ್ಲ ಬಂಧಿಸಿ ಮೈಸೂರಿನ ಜೈಲಿಗೆ ಹಾಕಿದ್ದರು. ಚಂಪಾ ಅವರು ಜೈಲಲ್ಲೆ ಪ್ರತಿಭಟಿಸಿ ಜೈಲು ಕವಿಗೋಷ್ಠಿ ಮಾಡಿದ್ದರು. ಇತ್ತ ವಿಶ್ವ ಕನ್ನಡ ಸಮ್ಮೇಳನದ ಕವಿಗೋಷ್ಠಿ ನಡೆಯುತ್ತಿತ್ತು. ಸಿದ್ಧಲಿಂಗಯ್ಯ ಅವರ ಕವಿತೆಯ ವಾಚನವನ್ನು ಹೊರಗೆ ನಿಂತೇ ಆಲಿಸಿದ್ದೆ. ಮೆಚ್ಚಿದ್ದೆ. ಆದರೇನು ಮಾಡುವುದೂ… ಅದರಿಂದ ಏನೂ ಪ್ರಯೋಜನ ಇಲ್ಲ ಎನಿಸಿತ್ತು. ಆ ಸಮ್ಮೇಳನವನ್ನು ತಿರಸ್ಕರಿಸಿ ವಾಪಸ್ಸು ಹಾಸ್ಟಲಿಗೆ ಬಂದಿದ್ದೆ. ಒಂದು ದಿನ ಇಡೀ ಈ ಎಲ್ಲಾ ಹೋರಾಟಗಳ ಬೆಂಕಿಯ ಕಾರುವ ಈ ಹಕ್ಕಿಗಳೆಲ್ಲ ನನ್ನನ್ನು ಬಿಟ್ಟು ದೂರ ಹೊರಟು ಹೋದರೆ ನಾನೇನು ಮಾಡಲಿ ಎಂದು ನೆನೆನೆನೆದು ಸಂಕಟಗೊಂಡೆ. ಕ್ರಾಂತಿಯ ಕನ್ನೆಯರೆಲ್ಲ ಇದ್ದಕ್ಕಿದ್ದಂತೆ ಹಂಸ ಪಕ್ಷಿಗಳಾಗಿ ಸರೋವರದಲ್ಲಿ ಮೀಯುತ್ತಿರುವಂತೆ ಭಾಸವಾಯಿತು. ಏನಿದೀ ವಿಚಿತ್ರ ಕಲ್ಪನೆಗಳು… ಈ ಲೋಕವೆಲ್ಲ ಒಂದು ದಿನ ಒಣ ಚಂದ್ರನಂತೆ ಬರಿದಾದ ಮೇಲೆ ಇಲ್ಲಿನ ಹಗಲು ರಾತ್ರಿಗಳಿಗೆ ಯಾವ ಬೆಲೆ? ಅವು ಕಾಲಚಕ್ರದಲ್ಲಿ ಉರುಳಿ ಬಂದರೆಷ್ಟು ಬಿಟ್ಟರೆಷ್ಟು… ಬೆಳದಿಂಗಳಿಗೆ ಯಾವ ಸ್ವತಂತ್ರ ಅಸ್ತಿತ್ವವೂ ಇಲ್ಲ! ಕ್ರಾಂತಿ ಕನ್ನೆಯೂ ಒಂದು ಮೋಹದ ಬೆಳದಿಂಗಳ ಕನಸೇ ಎಂದು ಲಹರಿಯಲ್ಲಿ ಒಬ್ಬನೆ ಮಲಗಿದ್ದೆ. ಒಂಟಿತನ, ತಬ್ಬಲಿತನ, ಏನೊ ಕಳೆದುಕೊಂಡಂತೆ ವಿಲವಿಲಿಸಿದೆ. ಮಲಗಿದೆ. ಯಾವುದೊ ಮರುಭೂಮಿಯಲ್ಲಿ ಏಕಾಂಗಿಯಾಗಿ ಸಾಗುತ್ತಿರುವಂತೆ ಭ್ರಮೆ. ಅಲ್ಲೊಂದು ಚಿಲುಮೆ… ಖರ್ಜೂರಗಳ ಮರ. ಓಡೋಡಿ ಮರದ ತಳ ನಿಂತು ಕಲ್ಲುಬೀರಿದೆನೊ ಏನೊ ಎಸೆದೆ. ಮೈ ತುಂಬ ಉದುರಿದವು ಹಣ್ಣು. ಒಂದೊಂದನ್ನು ಎತ್ತಿ ಅಂಗಿಯ ಮುಂತುದಿಯ ಹಿಡಿದು ಆಯ್ದುಕೊಂಡೆ. ಮತ್ತೆ ಮತ್ತೆ ಆಸೆ. ಮತ್ತೆ ಏನೊ ಒಂದು ಒಂಟೆಯ ಕಾಲಿನ ಎಲುಬಿರಬೇಕೂ… ಬಲವಾಗಿ ಬೀಸಿದೆ. ಆಹಾ! ಎಷ್ಟೊಂದು ಖರ್ಜೂರಗಳ ರಾಶಿ… ಮುಗಿಯದ ದಾಹದಂತೆ ತುಂಬಿಕೊಂಡೆ. ಎಷ್ಟಾಯಿತು ಎಂದು ನೋಡಿದರೆ ಒಂದೇ ಒಂದು ಒಣ ಖರ್ಜೂರವೂ ಇಲ್ಲಾ… ಅರೇ ಇದೇನಾಯಿತು? ತಾನೀಗ ಪಡೆದಿದ್ದೆಲ್ಲ ಎಲ್ಲಿ ಹೋಯಿತೂ… ಆಹಾ! ಆ ಮರು ಭೂಮಿಯ ಚಿಲುಮೆಯಿಂದ ನೀರು ತುಂಬಿಕೊಂಡು ಹೋಗುತ್ತಿರುವ ಆ ಕನ್ನೆಯರ ಮಾಟವೇ ಇದಿರಬೇಕೂ… ಮಾಡ್ತೀನಿ ತಾಳಿ ನಿಮಗೆ ಎಂದೂ ಕೂಗಿಕೊಂಡು ಅವರ ಬೆನ್ನತ್ತಿದೆ. ಇಲ್ಲೇ ಈಗಲೇ ಕೈಗೆ ಎಟುಕಿಬಿಟ್ಟರು ಎನ್ನುವಷ್ಟರಲ್ಲಿ ಆ ದಿಗಂತದ ಮೇಲೆ ಕಾಣುವ ಮರಳ ರಾಶಿಯಲ್ಲಿ ನಡೆದು ಹೋಗುತ್ತಿರುವಂತೆ ಕಾಣುತ್ತಿತ್ತು. ಈ ಮಾಯದ ಕನ್ನೆಯರು ಖರ್ಜೂರ ತಿನ್ನುತ್ತ ಬೀಜ ಬಿಸಾಡಿ ಹೋಗುತ್ತಿದ್ದಾರೆಯೇ… ಅವೇ ಅಲ್ಲಲ್ಲಿ ಮೊಳೆತು ಮರವಾದವೇ… ಹೇ ಚೆಲುವೆಯರಾ… ನಿಲ್ಲಿ ನಿಲ್ಲೀ ಬರುವೆ ನಿಮ್ಮ ಜೊತೆ. ಕುಡಿವೆ ನಿಮ್ಮ ಕೊಡದ ನೀರ ಬೊಗಸೆ ಒಡ್ಡಿ ಬೇಡಿ… ಬಹಳ ದೂರದಿಂದ ಬಂದಿರುವೆ. ಒಬ್ಬನೇ ಒಂಟಿ. ಯಾರಿಲ್ಲ ನನಗೆ; ನೀವೇ ಗತಿ ಮತಿ ದಾರಿ… ಹಿಂತಿರುಗಿ ತೋರಿ ನಿಮ್ಮ ಮುಖವನ್ನಾದರೂ ಮಾಯಾಂಗನೆಯರೇ… ನಿಮ್ಮ ಮರುಭೂಮಿಯ ಒಂದೊಂದೆ ಹೆಜ್ಜೆ ಗುರುತಿಗೂ ಮುತ್ತಿಕ್ಕಿ ಹಿಂಬಾಲಿಸುತ್ತಿರುವೆ; ಹೋಗು ಬರಬೇಡ ಎನ್ನದಿರಿ. ಬಹುದೂರ ನನ್ನೂರು. ನಾನೊಂದು ಕಿಚ್ಚಿನ ಹಕ್ಕಿ… ಮಿಂಚುಗಳು ನನ್ನ ರೆಕ್ಕೆ… ಬಿಡಲಾರೆ ನಿಮ್ಮನ್ನು. ನಿಮ್ಮ ಪಾದಗಳ ಗುರುತಿಗೇ ಇಷ್ಟೋಂದು ಅತ್ತರಿನ ಗಮಲು ಇದೆಯೆಲ್ಲಾ… ಜಗತ್ತಿನ ಯಾವ ದೈವದ ಕೃಪೆಯ ಸುಖಂಧವಿದೂ; ಆವರಿಸಿದೆಯಲ್ಲಾ ಇಡೀ ನಿರ್ಜನ ಮರುಭೂಮಿಯನ್ನೇ ಅಮಲಾಗಿ ತುಂಬಿ. ಬರುವೆ ನಿಮ್ಮೊಡನೆ ಸೇರಿ ಬಾಳುವೆ ಇರುವಷ್ಟು ಕಾಲ ಮರುಭೂಮಿ ಇರುಳ ಏಕಾಂತದ ಗಾಳಿಯ ಸದ್ದಿನಂತೆ ಬೆರೆತು ಹೋಗುವೆ ನಿಮ್ಮ ಮುಸುಕಿನ ಧಿರಿಸಿನಲ್ಲಿ ಇದ್ದು ಬಿಡುವೆ ನಿಮ್ಮೆದೆ ಗೂಡ ಹಕ್ಕಿಯಾಗಿ… ಹೇ ಮರುಭೂಮಿಯ ಚಂದವತಿಯರೇ… ನಿಮ್ಮ ನಡೆಯೇ ಒಂದು ಕ್ರಾಂತಿ. ನಗೆಯೊ ಇನ್ನೊಂದು ಭೃಂಗದ ಅಲೆ. ನನ್ನ ಪಾಡಿಗೆ ನಾನು ಎಲ್ಲೊ ಒಂದು ಎಲೆಮರೆಯ ಹುಳುವಾಗಿದ್ದವನು ಚಿಟ್ಟೆಯಾಗಿ ಬಂದಿರುವೆ.

ಗೊತ್ತೇ ಇರಲಿಲ್ಲ ಲೋಕ ಹೀಗೆಲ್ಲ ಮೋಡಿ ಬೆಡಗಿನ ಹುಡುಗಿಯರ ಕೊಡವೆಂದು. ತಪ್ಪಿಸಿಕೊಂಡು ಬಂದಿರುವೆ ಮಸೆದ ಕತ್ತಿಗಳ ಬೀಸಿನ ಹೊಡೆತಗಳಿಂದ, ನರಭಕ್ಷಕರ ಜಾತ್ರೆಯಿಂದ ಈಗ ತಾನೆ ಹೇಗೊ ಮಾಯದಲ್ಲಿ ಬಂದೆ ನಿಮ್ಮ ಮುಂದೆ. ಇದೂ ಕೂಡ ಗೊತ್ತಿರಲಿಲ್ಲ. ಹೀಗೆ ನೀವು ಈ ಮರುಭೂಮಿಯಲ್ಲಿ ಚಿಲುಮೆಯಾಗಿ ಬರುತ್ತೀರಿ ಎಂದು. ಎಷ್ಟು ಕಾಲದ ದಾಹ! ಕ್ರಾಂತಿ ಕನ್ನೆಯರೇ ನೀವೇ ಚಿಲುಮೆ ಆದ ಮೇಲೆ ಸೊಂಟಗಳಲ್ಲಿ ತುಂಬಿದ ಕೊಡಗಳ ಹೊರೆ ಯಾಕೆ? ನಾನೇ ಹೊತ್ತು ನಡೆವೆ ಈ ದೂರ ದೂರ ಮರೀಚಿಕೆಗಳ ದಾಟಿ ದಾಟಿ ನಿಮ್ಮ ಪಾದ ಕಮಲಗಳಿಗೆ ಉರಿ ಮರಳ ಬೇಗೆ ತಾಕದಂತೆ.

ಕತ್ತಲಾಯಿತಲ್ಲ ಮರುಭೂಮಿಯ ಬೆಡಗಿಯರೇ; ನಿಮ್ಮದೇ ತಾನೆ ಈ ಇರುಳಲ್ಲಿ ತೇಲಿ ಬರುತ್ತಿರುವ ಗಾನದ ಸದ್ದು… ಅದಾವುದು ದಪ್ಪ ಸ್ವರದ ಚರ್ಮವಾದ್ಯದ ಮಂದ್ರ ಸ್ಥಾಯಿ… ಯಾವ ದೇವಗಾನವಿದು ಅಪರಿಚಿತ ಚೆಲುವೆಯರೇ… ಯಾವ ಮಾರುತಗಳ ಬಳಸಿ ತೇಲಿ ಬರುತ್ತಿದೆ ಮದರಂಗಿಲೀಲೆಯ ದನಿ… ಕಿವಿ ಮುಟ್ಟಿದರೆ ಸಾಕೆ ನಾದ ಝೆರೀ! ಎಲ್ಲಿಂದ ಬರುತ್ತಿದೆಯೊ… ದಿಕ್ಕೇ ತೋಚದಲ್ಲಾ… ಎಲ್ಲಿದ್ದೀರಿ ದನಿಯಲ್ಲಾದರೂ ದನಿಗೂಡಿಸಿ ಎಂದು ಎಷ್ಟೊಂದು ಸಲ ಪ್ರಾರ್ಥಿಸುತ್ತಿದ್ದೇನಲ್ಲಾ. ಯಾಕೆ ಒಂದು ಪಿಸು ಮಾತೂ ಇಲ್ಲ? ಮರುಭೂಮಿಯಲ್ಲಿ ದಿಕ್ಕುಗಳಿಗೆ ಅರ್ಥವೇ ಇಲ್ಲ. ಎತ್ತ ನೋಡಿದರೂ ಮರಳ ರಾಶಿ. ಅಹಾ ಎಂತಹ ಸುಂದರ ಕನ್ನೆಯರೇ ಈ ಮರುಭೂಮಿಯ ಇರುಳ ಆಗಸಾ… ಎಣಿಸಬಹುದೇನೊ ಒಂದೊಂದು ತಾರೆ ನಿಹಾರಿಕೆ ನಕ್ಷತ್ರಗಳಾ… ನೀವು ಈ ತಾರಾಬನದ ಹೂವುಗಳನ್ನೇ ಮುಡಿಯುವಿರಾ! ಮಲ್ಲಿಗೆ ಹೂವಂತೆ ಮುಂಜಾವಿನ ಇಬ್ಬನಿಯಲ್ಲಿ ಉದುರಿಸುತ್ತವೆಯೇ ನಕ್ಷತ್ರಗಳು? ಎಂತಹ ಅದೃಷ್ಟವಂತೆಯರು ನೀವು… ನಾನಿರುವ ಊರಲ್ಲಿ ಕಲ್ಲುಗಳ ಸುರಿಮಳೆ… ಸದ್ದಿಲ್ಲದೆ ಇರಿದು ಹೋಗುವ ನಿಗೂಢ ಮಂದಿಯ ಜಾಲ. ಹೇಳಬಾರದು ಅಂತಹ ವಿಕಾರ ಹಿಂಸೆಯನ್ನೆಲ್ಲ ಈ ನಿಮ್ಮೂರಲ್ಲಿ. ಸುಮ್ಮನೆ ಬನ್ನಿ. ನೀವು ಬಂದೇ ಬರುವಿರೆಂದು ಕಾಯುತ್ತ ಬೆಂಕಿ ಒಡ್ಡಿ ಕೂತಿರುವ ಬಹು ಹೊತ್ತಿನಿಂದ. ಬೇಕೆನಗೆ ನಿಮ್ಮ ಖರ್ಜೂರ… ಒಂಟೆಯ ಹಾಲು… ಸೊಂಟವ ಸುತ್ತಿಸಿ ಕುಣಿವ ನರ್ತನ…

ಅಹಾ ಮೋಹಕ ಚಿಲುಮೆಯ ಕನ್ನೆಯರೇ ಮಿಲನ ಕ್ರಾಂತಿಯ ನಂತರ ಉಳಿಯುವುದು ಮರುಭೂಮಿಯ ನೆನಪೇ… ಆವಿಯಾಗಿ ಬಿಡುವ ಮಿಥುನ ಬೆವರಿನ ಕಂಪಿಸುವ ನಿಮ್ಮ ಕೋಮಲ ಬೆರಳುಗಳ ಸ್ಪರ್ಶವೇ… ಬಿಟ್ಟು ಹೋಗುವುದೇ ಪಯಣವೇ… ಮರುಭೂಮಿಯ ಬಿಸಿಗಾಳಿಗೆ ಒಣಗಿವೆಯಲ್ಲ ನಿಮ್ಮ ತುಟಿ… ಪಿಸುರುಗಟ್ಟಿವೆ. ಬೆಳದಿಂಗಳ ಬಟ್ಟಲ ಕಂಗಳು ಧೂಳು ಮಣ್ಣಿನ ಕಣಗಳಲ್ಲಿ ರೆಪ್ಪೆಯಾಡಿಸಿ… ಯಾವುದು ನಿಜವಾದ ಚೆಲುವು ಚಿಲುಮೆಯ ಎದೆಗಾತಿಯರೇ… ಎಷ್ಟು ದಣಿದಿವೆಯೊ ನಿಮ್ಮ ಮರುಭೂಮಿಯ ಹಿಮ್ಮಡಿ ನರಗಳು… ಸಾಕೇ ಇಷ್ಟು ಬೊಗಸೆಯ ನೀರು ಐದಾರು ಖರ್ಜೂರದ ಹಣ್ಣು ಬಾಳ ಪಯಣದ ದೂರ ತೀರಕೆ? ಹೀಗೆ ಕಂಡರೆ ಸಾಕೇ ಇಷ್ಟೆಯೇ ನನ್ನ ಅಳತೆ? ತೆರೆದು ನೋಡಲೇ ಇಲ್ಲ ಒಳಗೆ ಏನಿದೆ ಎಂದು ಪತ್ತೆ ಮಾಡಲೇ ಇಲ್ಲ.. ನಿಮಗೂ ಮುಪ್ಪಾಗುವುದಿಲ್ಲವೇ… ಮುಪ್ಪಿನ ಚೆಲುವು ಯಾವ ಮರುಭೂಮಿಯ ಚಿಪ್ಪು… ಬರಿದೇ ಕ್ರಾಂತಿಯ ಸೆರಗಲ್ಲಿ ಬಿಕ್ಕಿ ಬಿಕ್ಕಿ ಅತ್ತುಬಿಟ್ಟರಾಯಿತೇ ಮುಕ್ತಿ? ಎಲ್ಲಿ ಮಾಯವಾದಿರಿ ಚೆಲುವೆಯರೇ ಈ ಮರುಭೂಮಿಯ ಸೂರ್ಯೋದಯದಲ್ಲೂ ಕಾಣುವುದಿಲ್ಲ ಯಾಕೆ? ಮುಗಿದಿಲ್ಲವೇನು ಮರುಳುಗಾಡಿನ ನಿದ್ದೆ… ಹಗಲೇ ತಾನೆ ಇಲ್ಲೆಲ್ಲ ಮರುಭೂಮಿ ಪೊಟರೆಯಲ್ಲಿ ಪ್ರಶಾಂತ ನಿದ್ದೆ… ಇರುಳೇ ಬದುಕು; ತಂಪಾದ ಹೊತ್ತು. ಎಷ್ಟೊಂದು ಅಂತರ; ಮರುಭೂಮಿಯ ಮೈಯ ಮರಳ ಸವರಿಕೊಂಡಂತೆ ಬಂದ ನಿಮ್ಮ ನಗೆಯ ಸದ್ದಿಗೆ ನಕ್ಷತ್ರಗಳು ಕಣ್ಣು ಬಿಟ್ಟವು ತಾನೇ? ಎಲ್ಲಿಂದ ಎಷ್ಟು ದೂರಕ್ಕೆ ನಿಮ್ಮ ನಗು ಮುಟ್ಟುವುದೂ ಆಚೆ ಆಚೆಯ ಗಗನದ ತುದಿಗೆ. ಅದಕ್ಕೇ ಇರಬೇಕು ಇಷ್ಟೊಂದು ಸೌಂದರ್ಯ ಮರುಭೂಮಿಗೆ. ಮರುಭೂಮಿಯ ಮದುವಣಗಿತ್ತಿಯರೇ ಯಾವ ಲೋಕದಿಂದ ಬಂದಿಳಿದಿರಿ ಈ ನಾಕದ ಈಚೆ ಮೂಲೆಗೆ… ನನ್ನನ್ನು ನೋಡಲೇ ಇಲ್ಲ ನೀವು. ನೋಡುತ್ತಲೇ ಕಾಲ ಕಳೆದುಬಿಟ್ಟೆ ಮರುಭೂಮಿಯ ಮುದುಕನಾದೆ ನಾನು! ಆದರೂ ಬಿಟ್ಟಿಲ್ಲ ನೋಡಿ ಅತೀಂದ್ರಿಯ ಸೆಳೆತ ನಿಮ್ಮದು. ಸೆಳೆವ ಈ ಅನಂತ ಶಕ್ತಿಯನ್ನು ಯಾವ ದೈವ ಕರುಣಿಸಿತೊ ನಿಮಗೆ… ನಮಗೂ ನೀವಿಲ್ಲ ಎಂದರೆ ಈ ಲೋಕದ ಯಾವುದಕ್ಕೂ ಅರ್ಥವಿಲ್ಲ. ಒಂದು ವೇಳೆ ಗಂಡಸು ಒಬ್ಬನೇ ಇದ್ದಿದ್ದರೆ ಅವನಿಗೆ ಯಾವ ಕುರುಹೂ ಇರುತ್ತಿರಲಿಲ್ಲ. ಗಂಡಸರು ಬರಿದೇ ಕಡಿದಾಡಿ ಯುದ್ಧ ಮಾಡಿಕೊಂಡು ಸರ್ವನಾಶವಾಗುತ್ತಿದ್ದರು ಅಷ್ಟೇ… ಮೋಹ ಕನ್ನೆಯರಿಲ್ಲದ ಯಾವ ಗಂಡಸಿಗೂ ಮುಕ್ತಿ ಇಲ್ಲ. ಸಾಮ್ರಾಜ್ಯ ಕಟ್ಟಿಕೊಂಡು ಏನು ತಾನೆ ಮಾಡಲು ಸಾಧ್ಯ. ರಾಣಿಯರಿಲ್ಲದ ಅರಮನೆ ಎಷ್ಟು ಚೆಂದವಿದ್ದರೆ ಏನು ತಾನೆ ಮಹಾ! ಅದು ರಾಜನೊಬ್ಬನ ಸೆರಮನೆ ಅಷ್ಟೇ… ಅವನ ಕೊನೆ ಮನೆಯೂ ಅದೇ ಆಗಿರುತ್ತದೆ. ಹೆಣ್ಣಿಗಾಗಿ ಎಷ್ಟೋಂದು ಕ್ರಾಂತಿಗಳೇ ನಡೆದಿಲ್ಲ ಚರಿತ್ರೆಯ ಹೆದ್ದಾರಿಗಳಲ್ಲಿ… ಚೆಲುವೆಯರೇ; ನೀವು ನನ್ನನ್ನು ದುರುಳ ಎಂದರೂ ನೋವಿಲ್ಲ… ವಂಚಕನ ಮಾಂತ್ರಿಕ ಮಾತೇ ಎಂದು ನಿರಾಕರಿಸಿದರೂ ಸಂಕಟವಿಲ್ಲಾ… ಸುಮ್ಮನೆ ಒಮ್ಮೆ ನನ್ನನ್ನು ಕೇಳಿ… ಯಾರು ನೀನೂ; ಎಲ್ಲಿಂದ ಬಂದೆ ಏನು ನಿನ್ನ ಕುಲ ಮೂಲ… ದಣಿದಿರುವೆಯಾ ನೀರ ಕೊಡಲೇ ಎಂದು ಒಮ್ಮೆ ಮಾತನಾಡಿಸಿ… ಅಷ್ಟು ಸಾಕು; ಬಹು ಕಾಲದ ದಾಹವೆಲ್ಲ ಕರಗಿ ಹೋಗುತ್ತದೆ…

ಎಚ್ಚರವಾಗಿತ್ತು… ಬಾಯಿ ಒಣಗಿತ್ತು ನೀರು ಕುಡಿದೆ. ವಿದ್ಯುತ್ ಹೋಗಿತ್ತು. ಗಾಢಾಂಧ ಕತ್ತಲು, ಮಳೆ ಬರುವಂತೆ ಗಾಳಿ ಹೆಪ್ಪುಗಟ್ಟಿತ್ತು. ಸಣ್ಣ ಹುಲ್ಲು ಕಡ್ಡಿಗಳೂ ಅಲುಗಾಡುತ್ತಿರಲಿಲ್ಲ. ಕಿಟಕಿ ಬಳಿ ನಿಂತು ಹೊರಗನ್ನು ದಿಟ್ಟಿಸುತ್ತಿದ್ದೆ. ಮರುಭೂಮಿಗೆ ಹೊರಟು ಹೋಗಿದ್ದರೆ ಎಷ್ಟು ಚೆಂದ ಇತ್ತಲ್ಲವೇ ಎನಿಸಿತು. ಸಣ್ಣದಾಗಿ ಮಿಂಚು ಮಿನುಗುತಿತ್ತು. ಕಲ್ಪನೆ ಕನಸು ವಾಸ್ತವ… ಮನುಷ್ಯನಿಗೆ ಯಾವುದು ಪರಮ ಆಪ್ತಸ್ಥಿತಿ? ವಾಸ್ತವ ಕಠಿಣ. ಪ್ರತಿ ಹೆಜ್ಜೆಯನ್ನು ಲೆಕ್ಕಿಸಿ ಇಡಬೇಕು. ಕಲ್ಪನೆಯ ಸುಖ, ಸ್ವಾತಂತ್ರ್ಯ ಅಪರಿಮಿತವಾದದ್ದು. ವಾಸ್ತವ ಜಗತ್ತು ಪ್ರತಿಹಂತದಲ್ಲೂ ನಮ್ಮನ್ನು ನಿಯಂತ್ರಿಸಿ ತಡೆಯುತ್ತಲೇ ಇರುತ್ತದೆ. ವಾಸ್ತವ ಕೂಡ ಎಲ್ಲೋ ಒಂದು ಬಗೆಯಲ್ಲಿ ಶಿಸ್ತಿನ ಸರ್ವಾಧಿಕಾರಿ. ಅದನ್ನು ಮೀರಿದರೆ ಮನುಷ್ಯನ ಅಸ್ತಿತ್ವವೇ ವಿನಾಶಕಾರಿ ಅಲ್ಲವೇ… ಎಲ್ಲೊ ದೂರದಲ್ಲಿ ಗುಡುಗಿನ ಸದ್ದು. ಮಳೆ ಗಾಳಿಯ ರಭಸ. ನೀರಿನ ಅಲೆಗಳ ಹೊತ್ತು ತಂದಂತೆ ಚಳಿಗಾಳಿಯ ತಂಪು. ಅದೆಲ್ಲಿಂದಲೊ ಧೋ ಎಂದು ಮಳೆ ಬಂತು. ಸದ್ದುಗದ್ದಲ ಗುಡುಗು ಮಿಂಚಿಲ್ಲ. ಎಲ್ಲಿತ್ತು ಈ ಮಳೆ. ಯಾವ ಗಗನದ ಅಂಚಲ್ಲಿ ಮಲಗಿತ್ತು? ಬಂತೆ ಆ ಮರುಭೂಮಿಯ ಸಹವಾಸ ಬೇಡ ಎಂದು ಹೀಗೆ ಇಲ್ಲಿಗೇ. ಯಾವ ಊರ ನೆತ್ತಿಯ ಮೇಲೆ ತೂಗಾಡಿತ್ತೊ ಯಾವ ಗಾಳಿ ಅಲೆ ಹೊತ್ತು ತಂದು ಸುರಿಸುತ್ತಿದೆಯೊ ಹೀಗೆ… ಭೂಮಿಯ ಮೇಲೆ ಕ್ರಾಂತಿ ಕನ್ನೆಯರು ಹೀಗೆ ಮಳೆಯಾಗಿ ಸುರಿಯಬಲ್ಲರು. ಗೊತ್ತಿಲ್ಲ ದೇವಲೋಕದ ಅಪ್ಸರೆಯರು. ಇಲ್ಲ ಅಲ್ಲಿ ಯಾವ ಮಳೆ ಕನ್ನೆಯರು. ಹೋಗಿ ಆ ಮಳೆ ಕನ್ನೆಯ ಜೊತೆ ಕುಣಿಯಬೇಕು ಎನಿಸಿತು. ಅಹಾ! ಏನಿದೀ ರಭಸದ ಧಾರಾಕಾರ ಮಳೆ. ಹೆಣ್ಣೇ ಹೀಗೆಯೇ? ಅವಳಿಂದಲೇ ಮಣ್ಣಿಗೆ ಮೊಳಕೆಯೇ… ಮಣ್ಣು, ಮಳೆ, ಹೆಣ್ಣು ಮಿಲನದ ಕ್ರಾಂತಿಯ ಬನದಲ್ಲಿ ಎಷ್ಟೊಂದು ಸುಖ ಸಮೃದ್ಧಿ… ಹೊರಗೆ ಬಂದೆ. ಚಳಿಯ ಲೆಕ್ಕಿಸಲಿಲ್ಲ. ಮಳೆಯಲ್ಲಿ ನೆನೆವುದೇ ಆಕಾಶದ ಸುಖ. ದಾರಿಯೇ ಕಾಣುತ್ತಿಲ್ಲ.
ರೂಢಿಯಾದ ಕಾಲುಗಳಿಗೆ ಕಣ್ಣುಗಳಿವೆ ತಾನೇ… ಮಿಂಚಿದಂತೆಲ್ಲ ಕ್ಷಣ ಕಂಡು ಎಲ್ಲ ಮಾಯ. ಇಡೀ ಗಂಗೋತ್ರಿಯೇ ಕನ್ನೆ ಒಬ್ಬಳು ನೆಟ್ಟಿರುಳಲ್ಲಿ ಬೆತ್ತಲಾಗಿ ಜಲಧಾರೆಯಲ್ಲಿ ಮೀಯುತ್ತಿರುವಂತೆ ಭಾಸವಾಯಿತು. ಕನ್ನೆಯ ಬೆನ್ನ ತೊಳೆದೆನೇ… ಅತಿಯಾಯಿತು ನನ್ನ ಕಲ್ಪನೆ ಎಂದು ತುಂಬಿ ಹರಿಯುತ್ತಿದ್ದ ನವಿಲು ರಸ್ತೆಯ ಇಳಿಜಾರಿನಲ್ಲಿ ಎಚ್ಚರ ವಹಿಸಿ ನಡೆದೆ. ಆ ಪುಟ್ಟ ಹಳ್ಳ ತುಂಬಿ ಹರಿಯುತಿತ್ತು. ಹಲ್ಲುಗಳು ಕಟಕಟನೆ ನಡುಗಿದವು. ಹಿಂತಿರುಗಿ ಬಂದಿದ್ದೆ. ಬಟ್ಟೆ ಬದಲಿಸಿ ಕಂಬಳಿ ಹೊದ್ದು ಬೆಚ್ಚಗೆ ಮಲಗಿದೆ. ನಿದ್ದೆ ಬರಲಿಲ್ಲ. ಬೇಕಾಗಿಯೂ ಇರಲಿಲ್ಲ. ಆಲೋಚಿಸಲು, ಕಲ್ಪಿಸಲು ಎಷ್ಟೊಂದು ಸಮಯ, ಸ್ವಾತಂತ್ರ್ಯ ಇದೆಯಲ್ಲಾ ಎಂದು ಸುಮ್ಮನೆ ಕಣ್ಣು ಮುಚ್ಚಿ ಮುದುರಿ ಮಲಗಿದ್ದೆ. ಮಾಯದ ನಿದ್ದೆ ಬಂದು ಬಿಟ್ಟಿತ್ತು. ಅದು ಹೇಳಿ ಕೇಳಿ ಬರುವುದಿಲ್ಲ. ನನ್ನ ದೇಹದ ಮೇಲೆ ಅದಕ್ಕೆ ಎಂತಹ ಸರ್ವಾಧಿಕಾರ? ಹೀಗೆಯೇ ನಮ್ಮನ್ನು ನಿಯಂತ್ರಿಸುವ ಅಗೋಚರ ಶಕ್ತಿಗಳು ನಮ್ಮ ದಾರಿಯಲ್ಲಿ ಬಂದು ಹೋಗುತ್ತಲೆ ಇರುತ್ತವೆ. ಗಮನಕ್ಕೆ ಬಂದೇ ಇರುವುದಿಲ್ಲ.

ಬೆಳಿಗ್ಗೆ ಎದ್ದಾಗ ತಡವಾಗಿತ್ತು. ಮನಸ್ಸಿಗೆ ಹಾಗೆ ಎಚ್ಚರಿಸಲು ಯಾರು ಬಂದಿದ್ದರು? ಎಚ್ಚರವೇ ಇಲ್ಲದಿದವರನ್ನು ಎಚ್ಚರಿಸಿದ್ದಕ್ಕೆ ಏನೆಂದು ಹೆಸರು? ಮನುಷ್ಯರ ಪ್ರಜ್ಞೆಯ ಪದರುಗಳಲ್ಲಿ ಎಷ್ಟು ಕಾಲದ ಮನುಷ್ಯರು ನಮ್ಮ ದೇಹದ ಭಾಗವಾಗಿಯೇ ಬಂದಿರುತ್ತಾರೆ? ಆ ಲೆಕ್ಕಗಳೆಲ್ಲ ಗೊತ್ತಿರುವುದಿಲ್ಲ. ಅದರಿಂದ ಆ ಕ್ಷಣಕ್ಕೆ ಬಿಡಿಗಾಸಿನ ಬೆಲೆಯೂ ಇಲ್ಲ. ಆದರೆ ಮನುಷ್ಯರ ಸುಪ್ತ ಪ್ರಜ್ಞೆಯ ಜೈವಿಕತೆಯಲ್ಲಿ ಅವೆಲ್ಲ ಅಡಗಿ ಕೂತಿರುತ್ತವೆ. ಅದರಿಂದಾಗಿಯೇ ನಮಗೆ ಚಲನೆ ಸಾಧ್ಯವಾಗಿರುವುದು… ಜಡ ಮತ್ತು ಚೇತನ ಎಂಬ ತತ್ವಗಳ ಎಲ್ಲೊ ಓದಿದ್ದೆನಲ್ಲಾ… ಯಾವುದೂ ಜಡ ಅಲ್ಲ ಎಂತಲೂ ಜ್ಞಾನ ಹೇಳುತ್ತದೆ. ಮೃತವಾದ ಮೂಳೆಗೂ ಒಂದು ಚಲನೆ ಇದೆ; ಆದರೆ ಅದು ನಮ್ಮ ಚಲನೆ ಅಲ್ಲ. ಲೋಕದ ವಿಕಾಸದ ಚಲನೆ. ಯಾವುದೂ ಸ್ಥಿರವಲ್ಲ. ಸ್ಥಿರ ಕೂಡ ಚಲನೆಗೆ ಒಳಗಾಗಲೇ ಬೇಕು; ಅದು ವಿಶ್ವದ ಅನಂತತೆಯ ಒಂದು ಗುಣ! ನನಗೆ ನಾನೇ ಉದಾಹರಣೆ… ಎಲ್ಲಿದ್ದೆ ನಾನು? ಯಾವ ಸ್ಥಿತಿಯಿಂದ ಯಾವ ಗತಿಗೆ ಬಂದು ಎಲ್ಲಿಗೊ ಸಾಗುತ್ತಿರುವೆನಲ್ಲಾ? ಮನುಷ್ಯ ಸೂರ್ಯನನ್ನು ಎಷ್ಟೊಂದು ಸಲ ಸುತ್ತುತ್ತಿದ್ದೇವೆಂದು ಎಣಿಸಿದ್ದೀರಾ… ಹೊಟ್ಟೆ ಹಸಿಯುತ್ತಿತ್ತು. ಹಾಸ್ಟಲಿನ ಹಿಂಬಾಗಿಲ ತೆಂಗಿನ ತೋಟದಿಂದ ಕಲ್ಪವಲ್ಲಿಗೆ ಬಂದೆ. ಆಗದು ಸುಂದರ ಚಾಟಿಂಗ್ ಸೆಂಟರ್. ಪ್ರೇಮಿಗಳು ಕಾಲ ಕಳೆಯಲು ಸೂಕ್ತ ತಾಣವಾಗಿತ್ತು. ಹೊಂಗೆ ಮರಗಳ ಕೆಳಗೆ ಕೂತು ಹರಟುವುದರಲ್ಲಿ ದಿನ ಕಳೆದು ಹೋಗುತಿತ್ತು. ಕ್ಯಾಂಟೀನ್ ಮಾಲೀಕ ಮಂಗಳೂರಿನವ. ಆತ ನನ್ನಿಂದ ಕಾಸು ನಿರೀಕ್ಷಿಸುತ್ತಿರಲಿಲ್ಲ. ಬಡ ಹುಡುಗ; ಬುದ್ಧಿವಂತ ಎಂದು ಕೇಳಿದ್ದನ್ನೆಲ್ಲ ಫ್ರೀಯಾಗಿ ಕೊಡುತ್ತಿದ್ದ.

ಲೌಕಿಕದ ತುರ್ತು ದಾಹಗಳಲ್ಲೆ ಸೂರ್ಯನ ಸುತ್ತುವ ಈ ದೇಹ ದಣಿದು ಬಿಡುತ್ತದೆ. ನಿಯಂತ್ರಣಗಳ ಆಚೆಗಿನ ನಿಯಂತ್ರಣ ಎಂದರೆ ಏನು? ಐನ್‍ಸ್ಟೈನ್ ಆ ಬಗ್ಗೆ ಏನು ಹೇಳುತ್ತಾನೆ… ಖಗೋಳ ವಿಜ್ಞಾನಿಗಳು ಬೇರೆ ಬೇರೆ ಕ್ರಾಂತಿಗಳನ್ನು ಮಾಡಿ ಬಿಟ್ಟಿದ್ದಾರಲ್ಲಾ; ಅವರ ಕ್ರಾಂತಿಯ ಮಾನದಂಡಗಳೇನೂ ನನಗೆ ಗೊತ್ತಿಲ್ಲವಲ್ಲಾ… ಇವನ್ನೆಲ್ಲ ಎಲ್ಲಿ ಹೋಗಿ ಕಲಿಯಲಿ ಎಂದು ವ್ಯಥೆ ಪಡುತ್ತಿದ್ದೆ. ಆಗ ಕ್ರಾಂತಿಕಾರಿಗಳ ಸಹವಾಸದಿಂದ ಸಿಗರೇಟನ್ನು ವಿಪರೀತ ಸೇದುತಿದ್ದೆ. ಕಲ್ಪವಲ್ಲಿಯಲ್ಲಿ ಮರದ ಕೆಳಗೆ ಒಬ್ಬನೆ ಕೂತು ಸಿಗರೇಟು ಹೊಗೆಯ ತೇಲಿಸುತ್ತಾ ಕಾಲನ್ನು ಇನ್ನೊಂದು ಚೇರಿನ ಮೇಲಿಟ್ಟು ಚಹಾ ಗುಟುಕರಿಸುತ್ತ ಯಾವುದಾವುದೊ ಓದಿನ ಮನನದಲ್ಲಿ ಮುಳುಗಿ ಹೋಗುತ್ತಿದ್ದೆ. ರಾತ್ರಿ ರೂಮಲ್ಲಿ ಬೀಡಿ ಸೇದುತ್ತಿದ್ದೆ. ಹಾಗೆ ಹೊರಗೆ ಸೇದಿದರೆ ಹುಡುಗಿಯರು ತೀರಾ ನಿರ್ಲಕ್ಷ್ಯ ಮಾಡುತ್ತಾರೆಂದು ಹೆದರುತ್ತಿದ್ದೆ. ಮೊದಲೇ ಅದೊಂದು ದುರಭ್ಯಾಸ; ಅಂತದರಲ್ಲಿ ಹಳ್ಳಿ ಗಮಾರನಂತೆ ಈ ಲೆವಲ್ಲಿಗೆ ಬಂದು ಬೀಡಿ ಸೇದ್ತಾನೆಂದರೆ ಇವನು ಪೂರಾ ಯಕ್ಕುಟ್ಟಿ ಹೋಗವನೆ ಎಂದೇ ಭಾವಿಸುತ್ತಿದ್ದರು. ರಾತ್ರಿ ಮಳೆ ಬಂದಿದ್ದಕ್ಕೊ ಏನೊ ವಿಪರೀತ ಬಿಸಿಲು ಏರುತ್ತಿತ್ತು. ಚುರುಗರೆಯುತ್ತಿತ್ತು. ಅದೇ ಚೆಂದವತಿಯರು ಅಡ್ಡಾಡುತಿದ್ದರು. ಅದೇ ರಾತ್ರಿಯ ಮರುಭೂಮಿಯ ಕನಸಿನ ಇನ್ನೊಂದು ರೂಪದಂತೆ ಚೆಲುವೆಯರು ಇಲ್ಲಿಗೂ ಬಂದರೇ ಎಂದುಕೊಂಡೆ. ಒಬ್ಬಳಾದರೂ ಈ ಹಗಲಿನಲ್ಲಾದರೂ ಬರಬಾರದೇ… ವಸ್ತುಸ್ಥಿತಿ ಹಾಗೆ ಇರಲಿಲ್ಲ. ಎಲ್ಲವನ್ನೂ ನಮ್ಮ ನಮ್ಮ ಬಯಕೆಯ ಕಣ್ಣುಗಳಿಂದಲೆ ಅಳೆಯುತ್ತೇವೆ. ಉಮುರು ಏರುತ್ತಿತ್ತು. ಮತ್ತೆ ರಾತ್ರಿಗೆ ಮಳೆ ಬರುತ್ತದೆ ಎಂದು ಲೈಬ್ರರಿಗೆ ಹೋದೆ. ಓದಲು ಎತ್ತಿಟ್ಟುಕೊಂಡಿದ್ದ ಆ ಪುಸ್ತಕಗಳೆಲ್ಲ ಹಾಗೇ ಅಲ್ಲೇ ಕಾಯುತ್ತ ಕೂತಿದ್ದವು. ಆಗಾಗ ಎದ್ದು ಲೈಬ್ರರಿಯ ಮೂಲೆ ಮೂಲೆಗಳಲ್ಲೂ ಸುತ್ತಿ ಹುಡುಕಾಡಿ ಬುಕ್‌ರ್ಯಾಕ್‌ಗಳ ನಡುವೆಯೇ ನಿಂತು ಬೇಕೆನಿಸಿದ ಕೃತಿಗಳ ಕಂಟೆಂಟ್ ಗಮನಿಸಿ ಕಾಡಿನಲ್ಲಿ ಮರದಿಂದ ಮರಕ್ಕೆ ಹಾರಿ ಹೋಗುವ ಹಕ್ಕಿಯಂತೆ ತೇಲಾಡುತಿದ್ದೆ.

‘ಎಲ್ಲಿ ಹೋಗಿದ್ಯೊ; ಹುಡ್ಕಾಡಿದ್ರೂ ಕಾಣ್ಣಿಲ್ಲಾ’ ಎಂದು ಗೆಳೆಯರು ರೇಗುತ್ತಿದ್ದರು. ಜೊತೆಗಿದ್ದರೆ ಏನಾದರೊಂದು ತಮಾಷೆ ಮಾಡಿ ನಗಿಸುತ್ತಿದ್ದೆ. ಒಂಟಿ ಆದ ಕೂಡಲೆ ಕಲ್ಪನೆಯಲ್ಲಿ ಲಹರಿಯ ಚಕ್ರವರ್ತಿ ಆಗಿಬಿಡುತ್ತಿದ್ದೆ. ಅದೇ ಕ್ಯಾಂಪಸ್ಸಿನ ಕ್ಯಾಂಟೀನು. ವಿಶ್ವ ಕನ್ನಡ ಸಮ್ಮೇಳನ ಮುಗಿದಿತ್ತು. ಆ ವೇಳೆಗೆ ರಶೀದನೂ ಕ್ಯಾಂಪಸ್ಸಿನಲ್ಲಿದ್ದ. ಆತನದು ನಿರುಮ್ಮಳ ಶಾಂತಿಯ ನಡೆ. ಅಬ್ಬರವೇ ಇಲ್ಲದೆ ಒಳಗೇ ಪ್ರವಹಿಸುವಂತಹ ಹೊಳೆಯ ದಾರಿ. ಇಂಗ್ಲೀಷ್ ಎಂ.ಎ. ಕಲಿಯುತ್ತಿದ್ದ. ಹೋರಾಟ ಎಂದರೆ ಅವನಿಗೆ ನೇರಾ ನೇರ ಕದನವಲ್ಲ. ಅವ್ಯಕ್ತ ಧಾಟಿಯ ಪ್ರತಿರೋಧ. ಇದ್ದೂ ಇಲ್ಲದಂತಿರುತ್ತಿದ್ದ. ನನಗಿಂತಲು ಹೆಚ್ಚಾಗಿ ಕ್ರಾಂತಿಯ ಮೋಹ ಕನ್ನೆಯ ತೊಡೆ ಮೇಲೆ ಹಾಲು ಕುಡಿದ ಹುಡುಗನಂತೆ ಮಲಗಿರುತ್ತಿದ್ದ. ಅದಾಗಲೆ ಅವನಿಗೆ ಸಂಗಾತಿ ಮೋಳಿ ವರ್ಗೀಸ್ ಸಿಕ್ಕಿಬಿಟ್ಟಿದ್ದಳು. ಜೋಡಿಯಾದವರನ್ನು ನಾನು ಮಾತಾಡಿಸಲು ಮುಂದಾಗುತ್ತಿರಲಿಲ್ಲ. ನನಗೆ ಆ ಸುಖ ಇಲ್ಲ ಎಂದಲ್ಲವೇನೊ.. ಗೊತ್ತಿಲ್ಲ ನಿಖರವಾಗಿ. ದೂರ ಸರಿಯುತಿದ್ದೆ. ಗೆಳೆಯರೆಲ್ಲ ಮತ್ತೆ ಸಂಗಮಿಸಿದ್ದೆವು. ಜೈಲಿನಿಂದ ಗೆದ್ದು ಬಂದಂತೆ ಜೆ.ಪಿ. ಕಂಡಿದ್ದ. ಹೆದರಿ ಬೇಕೆಂತಲೆ ಪೋಲಿಸರಿಂದ ತಪ್ಪಿಸಿಕೊಂಡಿದ್ದ ಎಂದರು ಕೆಲವರು. ಸಮರ್ಥಿಸಿಕೊಳ್ಳುವ ಅವಶ್ಯಕತೆ ಇರಲಿಲ್ಲ.

ರಾಮದಾಸ್ ರಾಮಲಿಂಗಂ ಮತ್ತೆ ಸಭೆ ಕರೆದರು. ವಿರೋಧ, ಪ್ರತಿಭಟನೆ ಯಾವತ್ತೂ ಇದ್ದಿದ್ದೇ; ಆದರೆ ಅದರಾಚೆಗೆ ಜನ ಹಿತವಾದದ್ದೇನನ್ನಾದರೂ ಮಾಡಬೇಕಲ್ಲಾ ಎಂದು ರಾಮದಾಸ್ ಪೀಠಿಕೆ ಹಾಕಿದರು. ನಾವು ಬರ ಪರಿಹಾರ ಚಳುವಳಿಯನ್ನು ನಾಳೆಯಿಂದಲೇ ಆರಂಭಿಸೋಣ… ಆ ಕೆಲಸ ಇಲ್ಲಿಂದಲೆ ಈಗಲೇ ಆರಂಭವಾಗಲಿ ಎಂದು; ಇದು ನನ್ನ ಪುಟ್ಟ ಸಹಾಯ ಎಂದು ಆಗ ಐದು ಸಾವಿರ ರೂಪಾಯಿಗಳನ್ನು ಸಭೆಯ ಮುಂದಿಟ್ಟರು. ಹತ್ತಾರು ಪ್ರಾಧ್ಯಾಪಕರು ಸಾಧ್ಯವಾದಷ್ಟು ನೀಡಿದರು. ಅಲ್ಲೇ ಹೋರಾಟದ ರೀತಿ ನೀತಿಗಳು ರೂಪುಗೊಂಡವು. ಪ್ರೊ. ಶ್ರೀರಾಂ, ತೇಜಸ್ವಿ ಅವರ ಎಲ್ಲ ಪುಸ್ತಕಗಳನ್ನು ಪ್ರಕಟಿಸುತ್ತಿದ್ದ ಸಭ್ಯ ಪ್ರಾಮಾಣಿಕರು. ಹಣಕಾಸಿನ ವಿಚಾರಗಳನ್ನು ಅವರಿಗೆ ವಹಿಸಿದರು. ನಗರದ ಪ್ರಮುಖ ಬಡಾವಣೆಗಳಲ್ಲಿ ಮನೆಮನೆಗೆ ಹೋಗಿ ಬಟ್ಟೆ, ಧಾನ್ಯ, ಹಣ… ಏನು ಸಾಧ್ಯವೊ ಅವನ್ನೆಲ್ಲ ಸಂಗ್ರಹಿಸಲು ಹುಡುಗ ಹುಡುಗಿಯರು ತಂಡತಂಡವಾಗಿ ಮೊದಲಿಗೆ ಸರಸ್ವತಿ ಪುರಂಗೆ ನುಗ್ಗಿದೆವು. ಜನ ಸ್ಪಂದಿಸಿದರು. ಮೂರು ದಿನ ಆ ಕಾರ್ಯವನ್ನು ತರಗತಿ ಮುಗಿಸಿ ಸಂಜೆ ವೇಳೆ ಮಾಡಿದೆವು. ನಿರೀಕ್ಷೆ ಮೀರಿ ಜನ ಸಾಮಾನ್ಯರು ಸಾಧ್ಯವಾದದ್ದನ್ನೆಲ್ಲ ಕೊಟ್ಟಿದ್ದರು. ಆ ಚಳುವಳಿಯಲ್ಲಿ ಇಡೀ ಗಂಗೋತ್ರಿ ಭಾಗವಹಿಸಿತ್ತು. ದನಕರುಗಳಿಗೆ ಮೇವನ್ನೂ ಸಂಗ್ರಹಿಸಿದ್ದೆವು. ಬರಗಾಲದ ಬವಣೆಯ ಜನರಿಗೆ ಅವನ್ನೆಲ್ಲ ಹಂಚುವ ಸಮಯ ಬಂದಿತ್ತು. ರಾಮಲಿಂಗಂ ಒಂದು ಲಾರಿಯನ್ನು ಬಾಡಿಗೆಗೆ ತಂದರು. ಬರಪರಿಹಾರ ಕಾರ್ಯದಲ್ಲು ಅವರು ತಮಟೆ ಬಾರಿಸಿ ಹಾಡು ಹೇಳಿ ಬೇಡುತ್ತಿದ್ದರು. ನಮ್ಮಲ್ಲಿ ನ್ಯಾಯದ ಕಿಚ್ಚು ಹಚ್ಚಿದ್ದರು.

ಆಗ ಚಾಮರಾಜನಗರ ಇನ್ನೂ ಜಿಲ್ಲೆ ಆಗಿರಲಿಲ್ಲ ಎನಿಸುತ್ತದೆ. ಎಂತಹ ವಿಪರ್ಯಾಸ ಎಂದರೆ ಯಾರು ಮಂಡ್ಯದ ಪುಂಡು ಹುಡುಗರು ಇದ್ದರೊ; ಅವರು ಕೂಡ ನಮ್ಮ ಚಳವಳಿಯಲ್ಲಿ ಭಾಗವಹಿಸಿದ್ದರು. ರೂಮಿಗೆ ಕೂಡಿ ಹಾಕಿ ನನ್ನ ಎದೆ ಮೇಲೆ ಶೂ ಕಾಲನ್ನು ಇಟ್ಟು ತುಳಿದಿದ್ದನೋ ಅವನೂ ಜೋರಾಗಿ ದಾನ ಮಾಡಿ ಎಂದು ಕೂಗುತಿದ್ದ. ಚಾಮರಾಜನಗರಕ್ಕೆ ಸಂಜೆ ಹೊತ್ತಿಗೆ ಬಂದೆವು. ರಾಮಲಿಂಗಂ ಅಲ್ಲಿನ ಸರ್ಕಾರಿ ಅಧಿಕಾರಿಗಳನ್ನು ಕರೆಸಿದ್ದರು. ಅವರ ಬಳಿ ಪ್ರತಿಯೊಂದು ವಿವರ ಇತ್ತು. ಎಷ್ಟು ಸಾವಿರಾರು ರೂಪಾಯಿಗಳ ಹಣವಿದೆ ಎಂದು ಎಣಿಸಿ ವಿವರ ಕೊಟ್ಟು ಜನರಿಂದ ಪಡೆದಿದ್ದ ಎಲ್ಲವನ್ನು ಸರ್ಕಾರಿ ಕ್ರಮದಲ್ಲಿ ಸಲ್ಲಿಸಿ ಕೂಡಲೆ ಇವನ್ನೆಲ್ಲ ಆದ್ಯತೆ ಮೇರೆಗೆ ಬಡಪಾಯಿಗಳಿಗೆ ಹಂಚಿ ಆ ವಿವರವನ್ನು ಫೋಟೊ ಸಹಿತ ನಮಗೆ ತಿಳಿಸಬೇಕೆಂದು ತಾಕೀತು ಮಾಡಿದರು.

ಅಷ್ಟರಲ್ಲಿ ಆ ಪುಂಡು ಹುಡುಗರು ಕಿತಾಪತಿ ತೆಗೆದರು. ವಿದ್ಯಾರ್ಥಿಗಳು ಸಂಗ್ರಹಿಸಿದ್ದ ಹಣವ ಕೊಡಲು ‘ಇವನ್ಯಾವುನ್ಲಾ ನನಲವುಡಾ’ ಎಂದು ಹಂಗಿಸಿದರು. ರಾಮಲಿಂಗಂ ಅಕ್ಷರಶಃ ಗರ್ಜಿಸಿದರು. ‘ಹೇ ಮುಠಾಳಾ; ನಾನೀಗಾಗಲೆ ನನ್ನ ಜೀವಮಾನದ ಐವತ್ತು ವರ್ಷಗಳ ಮುಗಿಸಿರುವೇ… ನಾನ್ಯಾರೆಂದು ನಿಮಗೆ ಪರಿಚಯ ಮಾಡಿಕೊಡಲಾ ಬ್ಲಾಸ್ಟ್ ಮಾಡಿ ಬಿಡುವೆ ನಿಮ್ಮನ್ನುʼ ಎಂದು ಕೈ ಬಾಂಬು ಸಿಡಿಸುವ ಮಾತಾಡಿದ್ದರು. ಆ ಒಂದು ಆಯುಧವನ್ನು ಹೇಗೆ ನಾವೇ ತಯಾರು ಮಾಡಬಹುದು ಎಂದು ನಮ್ಮ ಜೊತೆ ವಿವರಿಸಿ ಪಾಠ ಮಾಡಿದ್ದರು. ಬ್ಲೇಡೇಟಿನ ಚಿಕ್ಕಣ್ಣನ ಮುಂಜಾಗರೂಕತೆ ನೆನಪಾಗಿತ್ತು. ಆದರೆ ಆ ಬಗೆಯ ಯಾವ ಆಯುಧಗಳಲ್ಲು ವಿಶ್ವಾಸ ಇರಲಿಲ್ಲ. ಮರುವಾರದ ಲಂಕೇಶ್ ಪತ್ರಿಕೆಯಲ್ಲಿ ‘ಆ ಕಣ್ಣುಗಳ ಅನೀರ್ವಚನೀಯ ಪುಲಕ’ ಎಂದು ಲಂಕೇಶರು ಟೀಕೆ ಟಿಪ್ಪಣಿಯಲ್ಲಿ ಬರೆದು ಮೆಚ್ಚಿದ್ದರು. ಬರಪರಿಹಾರ ಚಳುವಳಿಯ ಸಲುವಾಗಿ ನಾವು ವಿದ್ಯಾರ್ಥಿಗಳು ಹುಲ್ಲು ಹೊರೆ ಹೊತ್ತು ಜಾಥಾ ಮಾಡಿ ಗಮನ ಸೆಳೆದಿದ್ದೆವು. ಮೈಸೂರಿನ ಕೆ.ಆರ್. ಸರ್ಕಲ್ಲಿನಲ್ಲಿ ಭಾಗಶಃ ನೇತ್ರರಾಜ ಚೆಂದದ ಫೋಟೊ ತೆಗೆದಿದ್ದರು. ಆ ಮೆರವಣಿಗೆಯ ಫೋಟೊದಲ್ಲಿ ನಾನಿದ್ದೆ. ಸ್ಪಷ್ಟವಾಗಿ ಕಾಣುತಿದ್ದೆ. ಕೊಡಗಿನ ಹುಡುಗಿಯರ ಜೊತೆಗಿದ್ದೆ. ಗೆಳೆಯ ಪರಮೇಶಿ ನಗುತ್ತ ಕೈ ಬೀಸಿದ್ದ. ರಶೀದನ ಪಟ ಅಸ್ಪಷ್ಟವಾಗಿ ಕಂಡಿತ್ತು. ಮೊದಲ ಬಾರಿಗೆ ಅಂತಹ ಒಂದು ವಿದ್ಯಾರ್ಥಿ ಚಳುವಳಿಯಲ್ಲಿ ನಾನು ದಾಖಲಾಗಿದ್ದೆ. ಪ್ರೊ. ರಾಮದಾಸರು ಲಂಕೇಶರಿಗೆ ಆತ್ಮೀಯ ಮಿತ್ರರು. ಲಂಕೇಶರು ಅವರ ಮನೆಗೆ ಬಂದು ಹೋಗುತ್ತಿದ್ದರು. ಆ ಕಾಲಕ್ಕೆ ನಡೆಯುತ್ತಿದ್ದ ವಿದ್ಯಾರ್ಥಿಗಳ ಹೋರಾಟಕ್ಕೆ ಲಂಕೇಶರು ಪುಳಕಗೊಂಡಿದ್ದರು. ಹಾಸನದಿಂದ ಕೆ.ಟಿ. ಶಿವಪ್ರಸಾದ್ ಬಂದಿದ್ದರು. ಒತ್ತಾಸೆ ನೀಡಿದ್ದರು. ಅವರೊಬ್ಬ ದೊಡ್ಡ ಚಿತ್ರಕಲಾವಿದ. ರೈತ ಸಂಘದಲ್ಲಿ ಗುರುತಿಸಿಕೊಂಡಿದ್ದರು. ಶ್ರೀಮಂತ ಕುಟುಂಬದಿಂದ ಬಂದಿದ್ದ ಅವರು ನಮ್ಮನ್ನು ಆಕರ್ಷಿಸಿದ್ದರು. ರೈತ ಸಂಘದ ಮಂಜುನಾಥ ದತ್ತ… ವೆಂಕಟೇಶ ಮೂರ್ತಿಯೂ ಬಂದು ಬೆನ್ನು ತಟ್ಟಿದ್ದರು. ನಂಜುಂಡಸ್ವಾಮಿ ಅವರಿಗೆ ನಮ್ಮ ಮೇಲೆ ವಿಶ್ವಾಸ ಮೂಡಿತ್ತು. ಅವತ್ತಿನ ಸಮಾಜವಾದಿಗಳು ಬೆರಗಾಗಿದ್ದರು. ಆ ಮಟ್ಟಕ್ಕೆ ನಮ್ಮ ನಡೆ ಸಂಚಲನವನ್ನು ಉಂಟು ಮಾಡಿತ್ತು. ಸಾಕೇತ್ ಒಳಗಿದೂ ಕಾಣಿಸಿಕೊಳ್ಳದಂತೆ ಎಚ್ಚರ ವಹಿಸಿದ್ದ. ಅದಾಗಲೆ ಗುಪ್ತಚರ ಇಲಾಖೆಗೆ ಅವನೊಬ್ಬ ವಾಂಟೆಡ್ ಆ್ಯಕ್ಟಿವಿಸ್ಟ್ ಎಂದು ಕೆಂಪುಪಟ್ಟಿ ಸೇರಿದ್ದ. ನಮ್ಮನ್ನು ಏನು ಮಾಡಿಕೊಳ್ಳುತ್ತಾರೆ ಎಂದು ಕೇರ್‍ಲೆಸ್ಸಾಗಿದ್ದೆವು.

ನನ್ನ ಒಬ್ಬ ಗೆಳೆಯ ಸುಂದರ ರಾಜ್ ಇದ್ದ. ಕೊಳ್ಳೆಗಾಲದ ಕಡೆಯವನು. ಅವನ ಸಂಬಂಧಿಕರೊಬ್ಬರು ಪೋಲೀಸ್ ಇಲಾಖೆಯ ಇಂಟಲಿಜೆನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅವರು ನನ್ನ ಗೆಳೆಯನ ಮೂಲಕ ಎಚ್ಚರಿಕೆಯನ್ನು ರವಾನಿಸಿದ್ದರು. ಆ ಗೆಳೆಯ ಈಗ ಅದೇ ಇಲಾಖೆಯಲ್ಲಿ ಎಸ್.ಪಿ.ಆಗಿದ್ದಾನೆ. ‘ಲೋ ಅಣ್ಣಾ; ಇದೆಲ್ಲ ಬ್ಯಾಡ ಕಣೊ… ಲಿಸ್ಟೆಲಿ ನಿನ್ನೆಸುರ್ನೂ ಸೇರಿಸ್ಬುಟ್ಟವರೆ. ನಾಳೆ ದಿನ ಎಲ್ಲು ಕೆಲ್ಸ ಸಿಗಲ್ಲ… ಮುಗಿಸ್ಬುಡ್ತಾರೆ ಕಣೊ’ ಎಂದ. ‘ಹೋದ್ರೆ ಒಂಜೀವ ಹೋಗ್ಲಿ ಬಿಡೊ… ನಂಜೀವ್ನೆ ಏನ್ಬೆಲೆ’ ಎಂದಿದ್ದೆ. ‘ಅಣ್ಣಾ; ನಮ್ಗೆ ನಿಂಜೀವ ಮುಖ್ಯ ಅಣ್ಣಾ… ನಿನ್ನಂತವ್ನು ಇರ್ಬೇಕು’ ಎಂದು ಮುಖ ಸಪ್ಪಗೆ ಮಾಡಿಕೊಂಡ. ಮಮಕಾರದ ಸ್ನೇಹಿತ. ಒಂದು ಸಣ್ಣ ಅಳುಕು ಬೆನ್ನುರಿಯ ನರದಿಂದ ಹರಿದು ಹೋದಂತಾಯಿತು. ‘ಇರ್ಲಿ ಬಿಡೊ; ಅಂಗೇನು ಆಗಲ್ಲ’ ಎಂದಿದ್ದೆ. ಅಷ್ಟರಲ್ಲಿ ಎಂ.ಎ. ಅಂತಿಮ ಪರೀಕ್ಷೆ ಬಂದು ಬಡಿದಿದ್ದವು. ಸರಿಯಾಗಿ ಓದಿರಲಿಲ್ಲ. ಇವನೊಬ್ಬ ಪುಂಡ ಎಂದೆನಿಸಿದ್ದೆ ವಿಭಾಗದಲ್ಲಿ. ರೈತ ಸಂಘದ ಪ್ರಾಧ್ಯಾಪಕ ಬಸವರಾಜ್ ನನ್ನ ಮೇಲಿಟ್ಟಿದ್ದ ಸಿಂಪಥಿಯನ್ನು ಹಿಂಪಡೆದಿದ್ದರು. ಅತ್ಯಂತ ಬೇಸರದಲ್ಲಿ ಪರೀಕ್ಷೆ ಬರೆದು ಮುಗಿಸಿದೆ. ಅದೇ ಮೂರನೆ ದರ್ಜೆಯಲ್ಲಿ ಪಾಸಾಗಿದ್ದೆ. ಬುದ್ಧಿವಂತ ಅಂತಾ ಮೆಚ್ಚಿಕೊಂಡಿದ್ದೆವಲ್ಲೊ… ಇದೇನೊ ಹೀಗೆ ಮಾಡ್ಕೊಂಡೇ ಎಂದು ಗೆಳೆಯರೆಲ್ಲ ಬೇಸರ ಮಾಡಿಕೊಂಡರು. ಬೇರೆಯವರ ತೆಗಳಿ ಪ್ರಯೋಜನ ಇರಲಿಲ್ಲ. ನನ್ನದೇ ತಪ್ಪು ಎಂದು ತಲೆ ತಗ್ಗಿಸಿದೆ. ಸೋಲನ್ನು ಒಪ್ಪಿಕೊಂಡೆ. ಎಲ್ಲಿ ಜಾರಿ ಬಿದ್ದೆನೊ ಅಲ್ಲಿಂದಲೆ ಮೇಲೇಳಬೇಕು ಎಂದು ಮನಸ್ಸನ್ನು ಗಟ್ಟಿ ಮಾಡಿಕೊಂಡೆ.

ಹಾಸ್ಟಲನ್ನು ಬಿಟ್ಟು ಹೋಗಬೇಕಿತ್ತು. ಮೈಸೂರಿನ ಮೇಟಗಳ್ಳಿಯಲ್ಲಿದ್ದ ವಿಕ್ರಾಂತ್ ಟಯರ್ಸ್ ಪ್ಯಾಕ್ಟರಿಯಲ್ಲಿ ಕೆಲಸ ಕೇಳುವ ಎಂದು ಮಲಗಿದ್ದೆ. ಇನ್ನು ಒಂದು ವಾರ ಅಷ್ಟೇ ಇಲ್ಲಿರಲು ಅವಕಾಶ. ಪರೀಕ್ಷೆ ಮುಗಿದ ಮರುದಿನವೆ ಊಟ ನಿಲ್ಲಿಸಿದ್ದರು. ಏನು ಮಾಡಲಿ ಎಂದು ಖಿನ್ನತೆಯಿಂದ ಬಳಲುತ್ತಿದ್ದೆ. ಬಹುಪಾಲು ಹಾಸ್ಟಲು ಖಾಲಿ ಆಗಿತ್ತು. ಅಲ್ಲೊಂದು ಇಲ್ಲೊಂದು ಕೊಠಡಿಯಲ್ಲಿ ದೀಪ ಉರಿಯುತ್ತಿದ್ದವು. ಏನೊ ಚಡಪಡಿಕೆ. ಹಳ್ಳಿಗೆ ಈ ಸ್ಥಿತಿಯಲ್ಲಿ ಹಿಂತಿರುಗಿದರೆ ಅವರೆಲ್ಲ ಕಲ್ಲು ಹೊಡೆದು ಓಡಿಸಿಬಿಡುತ್ತಾರೆನಿಸಿತು. ನನ್ನ ತಮ್ಮ ಶ್ರೀನಿವಾಸನನ್ನು ವಿಪರೀತ ಕಿರುಕುಳ ಕೊಟ್ಟು ಊರು ಬಿಡಿಸಿದ್ದರು. ಯಾವುದು ನರಕ ಎಲ್ಲಿಹುದು ಸ್ವರ್ಗ ಎಂಬ ತಂತಿ ಬೇಲಿಗೆ ಮನಸ್ಸು ಸಿಲುಕಿ ಯಾರದೊ ಒಂದು ಅನಾಥ ಹರುಕು ಬಟ್ಟೆಯಂತೆ ತೊಯ್ದಾಡುತಿತ್ತು. ದುಃಖ ಬಂದು ಗಂಟಲಲ್ಲಿ ಕೂತಿತ್ತು. ಯಾವ ಗೆಳೆಯರೂ ಆಗಲ್ಲಿ ಇರಲಿಲ್ಲ. ಎಂ.ಎ. ಮುಗಿಸಿ ಅವರವರ ಹೊಸದಾರಿ ಹುಡುಕಲು ಕ್ಯಾಂಪಸ್ ಬಿಟ್ಟು ಹೋಗಿದ್ದರು. ಅರ್ಥಹೀನ ಕ್ರಾಂತಿ ಕನ್ನೆ ಎಂದುಕೊಂಡೆ. ಮೆಲ್ಲಗೆ ಬಾಗಿಲು ಬಡಿದಂತೆ ಸದ್ದು. ಬೀಸುವ ಗಾಯಿಂದಾದ ಸದ್ದು ಎಂದುಕೊಂಡೆ. ಕರೆದ ಸದ್ದಾಯಿತು. ಬಾಗಿಲು ತೆಗೆದೆ. ಅರೇ! ಸಾಕೇತ್‍ರಾಜ್! ಏನೊ ಚೈತನ್ಯ ಬಂದಿತ್ತು. ಆಗದು ಹನ್ನೆರಡು ಗಂಟೆ. ಅದೇ ಜ್ಞಾನಿಯ ಕಣ್ಣುಗಳು. ಕೆಳಗೆ ಕೂತುಕೊಂಡ. ಅದೇ ಆಪ್ತವಾಗಿತ್ತು. ‘ಎಂ.ಎ. ಮುಗೀತಲ್ಲಾ… ಹೋಗೋಣವೇ’ ಎಂದು ನಿರ್ಣಾಯಕವಾಗಿ ಕೇಳಿದ್ದ. ‘ಎಲ್ಲಿಗೆ ಅಣ್ಣಾ…’ ಅದೇ ನಮ್ಮ ಕನಸಿಗೆ…. ಕಾಡಿಗೆ… ಅಂತಿಮ ಗುರಿಗೆʼ ಎಂದು ಒಡಪಾಗಿ ನುಡಿದ. ‘ಅರ್ಥ ಆಗ್ಲಿಲ್ಲ’ ಎಂದೆ. ‘ಫೈನಲ್ ಸಲ್ಯೂಷನ್ಗೆ’ ಎಂದ ದಿಟ್ಟವಾಗಿ. ಆತನ ಕೋಡೆಡ್ ಮಾತುಗಳೆಲ್ಲ ಒಮ್ಮೆಗೇ ಲಿಂಕ್ ಆದವು. ಎದೆ ಬಡಿತ ಜೋರಾಯಿತು. ‘ನಮ್ಮವರು ಇಲ್ಲೇ ಹೊರಗೆ ಕ್ಯಾಂಪಸ್ಸಿನ ಮರೆಯಲ್ಲಿ ಇದ್ದಾರೆ… ಚಿಕ್ಕಮಗಳೂರಿನ ಡೀಪ್ ಫಾರೆಸ್ಟಿಗೆ ಹೋಗುವ ನಡೆ’ ಎಂದ. ಅದಾಗಲೇ ಈ ಬಗ್ಗೆ ನಮ್ಮಿಬ್ಬರ ಬಗ್ಗೆ ಮಾತುಗಳಾಗಿದ್ದವು. ಆಗ ‘ಹೂಂ’ ಎಂದಿದ್ದೆ. ಶಸಸ್ತ್ರ ಹೋರಾಟದ ಎಲ್ಲ ಕಷ್ಟನಷ್ಟಗಳೂ ಕಣ್ಣ ಮುಂದೆ ಬಂದವು. ನನಗೆ ಅಂತಹ ಟ್ರೈನಿಂಗ್ ಆಗಿರಲಿಲ್ಲ. ಅದೆಲ್ಲ ಕಾಡಲ್ಲಿ ನಡೆಯುವಂತದು. ಹೆಚ್ಚು ಸಮಯ ಇಲ್ಲಾ; ಬೇಗ ಹೇಳು ಎಂದು ಸಾಕೇತ್ ಏನೊ ವಾಸನೆ ಗ್ರಹಿಸಿದವನಂತೆ ಕೇಳಿದ. ಅವನು ಕಲಂ ಪತ್ರಿಕೆಯಲ್ಲಿ ಪ್ರಕಟಿಸಿದ್ದ ನನ್ನ ಕವಿತೆಯ ಸಾಲುಗಳು ನೆನಪಾದವು.