ಮೂನ್ನೆ ಶಿರಡಿ ಪ್ರಸಾದ ಕೊಟ್ಟ ಬರೋಣಂತ ನಮ್ಮ ಕಿಲ್ಲೇದಾಗಿನ ದೋಸ್ತ ಜೋಶ್ಯಾನ ಮನಿಗೆ ಹೋಗಿದ್ದೆ, ಹಂಗ ನನಗ ತೀರ್ಥ ಯಾತ್ರಾಕ್ಕ ಹೋಗಿ ಬಂದಾಗ ಒಮ್ಮೆ ಊರ ಮಂದಿಗೆಲ್ಲಾ ಪ್ರಸಾದ ಹಂಚೊ ಚಟಾ. ಅದರಾಗ ನಾ ಶಿರಡಿಗೆ ಹೊಂಟೇನಿ ಅನ್ನೋದ ಜೋಶ್ಯಾಗ ಗೊತ್ತಾಗಿ, ಫೊನ್ ಮಾಡಿ ಒಂದ ನೂರ ರೂಪಾಯಿ ‘ಬಾಬಾ’ನ ಹುಂಡಿಗೆ ಹಾಕ ಅಂತ ಬ್ಯಾರೆ ಹೇಳಿದ್ದಾ. ಅದಕ್ಕ ನಾ ಪ್ರಸಾದ ಕೊಟ್ಟಂಗ ಆತು ಮತ್ತ ‘ಬಾಬಾ’ಗ ಹಾಕಿದ್ದ ನೂರ ರೂಪಾಯಿ ವಸೂಲ ಮಾಡಿದಂಗಾತು ಅಂತ ಹೋಗಿದ್ದೆ. ಪ್ರಸಾದದ್ದ ೨೦ ರೂಪಾಯಿ ರೊಕ್ಕಾನೂ ಕೇಳಿ ನೋಡೋದು, ಕೊಟ್ಟರ ಛಲೋ ಇಲ್ಲಾಂದರ ನನ್ನ ಕೈಲಿಂದ ಹೋದಂಗ ಆ ಮಾತ ಬ್ಯಾರೆ. ಏನ ಮಾಡೋದ, ಬಾಬಾ ದೊಡ್ಡಾಂವ ಎಲ್ಲಾ ನೋಡತಿರತಾನ ಮತ್ತೊಂದ ರೂಪದಾಗ ನನಗ ಕೊಟ್ಟ ಕೊಡತಾನ ಅನ್ನೋ ಧೈರ್ಯಾದ ಮ್ಯಾಲೆ ೨೦ ರೂಪಾಯಿ ಪ್ರಸಾದದಾಗ ಇನ್ವೆಸ್ಟ ಮಾಡಿದ್ದೆ.

ಮನ್ಯಾಗ ನಮ್ಮ ಜೋಶ್ಯಾ ಇದ್ದಿದ್ದಿಲ್ಲಾ, ಅವನ ಹೆಂಡತಿ ನೋಡಿ ನಾ “ಎಲ್ಲಿ ಇದ್ದಾನವಾ ನಿನ್ನ ಗಂಡಾ, ಇನ್ನೂ ಬಂದಿಲ್ಲಿನ ಆಫೀಸನಿಂದ “ಅಂತ ಕೇಳಿದೆ. “ಅಯ್ಯೋ, ಅಂವಾ ಎಲ್ಲೆ ಇಷ್ಟ ಲಗೂ ಬರತಾನರಿ, ರಾತ್ರಿ ಹತ್ತಕ್ಕ ಮನಿ ಹತ್ತಿದರ ನನ್ನ ಪುಣ್ಯಾ ” ಅಂದ್ಲು ,
“ಏ ಅವಂದೇನ ಐದುವರಿಗೆ ಆಫೀಸ್ ಬಿಟ್ಟ ಬಿಡತದ ” ಅಂತ ನಾ ಒಂದ ಸ್ವಲ್ಪ ಬೆಂಕಿ ಹಚ್ಚಿದೆ, “ಅದ ಖರೆರಿ, ಆದ್ರ ಆಫೀಸ್ ಬಿಟ್ಟ ಮ್ಯಾಲೆ ಸಾಯಲಿಕ್ಕೆ ಎಲ್ಲಿ ತಿರಗ್ಯಾಡಲಿಕ್ಕೆ ಹೋಗಿರತಾನೋ ಏನೋ, ಹೆಂಡ್ರು-ಮಕ್ಕಳು ಒಂದು ಖಬರ ಇರಂಗಿಲ್ಲಾ” ಅಂತ ಗಂಡನ್ನ ಒಗ್ಗರಣಿ ಹಾಕಿದ್ಲು. ಜೋಶ್ಯಾನ ಅವ್ವಾ-ಅಪ್ಪಾ ಭಕ್ತಿಯಿಂದ ಟಿ.ವಿ ನೋಡ್ಕೊತ ಕೂತಿದ್ದರು. ಇಲ್ಲೆ ಸೊಸಿ ಅವರ ಮಗಂದ ಅಭಿಷೇಕ ಮಾಡೊದನ್ನ ಕೇಳಿದ್ರು ಕೇಳಲಾರದಂಗ ಇದ್ದರು. ಹೋಗಲಿಬಿಡ ಅವರ ಮನಿ ಉಸಾಬರಿ ನನಗ್ಯಾಕ, ನನಗ ನನ್ನ ನೂರ ರೂಪಾಯಿ ಸಿಕ್ಕರ ಸಾಕೂ ಅಂತ ಪ್ರಸಾದ ಕೂಟ್ಟ “ಹುಂಡಿ ಒಳಗ ನೂರ ರೂಪಾಯಿ ಹಾಕ ಅಂದಿದ್ದಾ ನಿನ್ನ ಗಂಡಾ ” ಅಂದೆ, “ಹೌದಾ, ಭಾಳ ಶಾಣ್ಯಾ ಇದ್ದಾನ, ಅಂವಾ ಅಂತೂ ತನ್ನ ಜೀವನದಾಗ ನಮ್ಮನ್ನ ಒಮ್ಮೆನೂ ಶಿರಡಿಗೆ ಕರಕೊಂಡ ಹೋಗೊ ಹಂಗ ಕಾಣಂಗಿಲ್ಲಾ, ಬರೆ ಮಂದಿ ತಂದ ಕೊಟ್ಟಿದ್ದ ಪ್ರಸಾದ ತಿಂದ ಕೈ ಮುಗಿಯೋದ ಆತು. ಹಿಂಗ ನೂರ-ನೂರ ರೂಪಾಯಿ ಹೋದವರಿಗೆ-ಬಂದವರಿಗೆ ಕೊಡೊದಕಿಂತ ಇದ ರೊಕ್ಕಾ ಕೂಡಿಸಿ ಇಟ್ಟಿದ್ದರ ಮನಿಮಂದೆಲ್ಲಾ ವರ್ಷಕ್ಕೊಮ್ಮೆ ಹೋಗಿ ಬರಬಹುದಿತ್ತು, ಅದಕ್ಕ ಅಷ್ಟು ತಿಳಿಯಂಗಿಲ್ಲಾ ” ಅಂತ ನನ್ನ ಮಾರಿಗೆ ನೂರ ರೂಪಾಯಿ ಒಗದ್ಲು. ಇನ್ನ ಪ್ರಸಾದದ ರೊಕ್ಕಾ ಕೇಳಿ ನಾ ಇಷ್ಟ ಮಂಗಳಾರತಿ ಮಾಡಿಸಿಗೋಳ್ಳೋದ ಬ್ಯಾಡ ಅಂತ ಸುಮ್ಮನ ಹೊರಗ ಬಂದೆ.
ಆದ್ರೂ ಯಾಕೋ ನನ್ನ ಮನಸ್ಸಿಗೆ ಅಕಿ ಗಂಡಗ ಹಂಗ ‘ಅಂವಾ- ಇಂವಾ’ ಅಂದಿದ್ದ ಸರಿ ಬರಲಿಲ್ಲ. ನನ್ನ ಪುಣ್ಯಾ ನನಗರ ‘ರಿ’ ಹಚ್ಚಿದಲಾ ಅಲಾ ಸಾಕ ಅಂತ ಸುಮ್ಮನಾದೆ.

ಹಿಂಗ ಎರಡ ಮನಿ ದಾಟಿ ಮುಂದ ಹೋಗಿದ್ದೆ , ಮೂರನೆ ಮನಿ ಮುಂದ ಕಟ್ಟಿ ಮ್ಯಾಲೆ ನಮ್ಮ ಜೋಶ್ಯಾನ ಅಜ್ಜಿ ಅಂದರ ಕಾಶಕ್ಕ ಅಜ್ಜಿ ಕೂತಿದ್ಲು, ಅಕಿ ಇಡಿ ಕಿಲ್ಲೇಕ್ಕ ಕಾಶಕ್ಕ ಅಜ್ಜಿ ಅಂದರು ಅಡ್ಡಿಯಿಲ್ಲಾ ,ಅಕಿಗೆ ಏನ ಇಲ್ಲಾಂದರೂ ಒಂದ ೮೫ ವರ್ಷ ಇರಬೇಕು. ಬೆನ್ನ ಬಾಗಿ ಮೊಣಕಾಲ ಹಿಡದಿದ್ದರೂ ಬಾಯಿ – ಕಿವಿ – ಕಣ್ಣಿಗೆ ಇನ್ನೂ ಮುಪ್ಪಾಗಿದ್ದಿಲ್ಲಾ. ಗಂಡ ಸತ್ತ ಏನಿಲ್ಲಾಂದರೂ ಒಂದ ೫೦-೫೫ ವರ್ಷ ಆಗಿರಬಹುದು, ಸಾಯೊಕಿಂತಾ ಮದ್ಲ ಗಂಡ ಒಂದ ೧೦ ಮಕ್ಕಳನ್ನ ಹಡಿದಿಟ್ಟ ಹೋಗಿದ್ದನಂತ , ಇಕಿ ಅದರಾಗ ಒಂದ ಐದ ಉಳಿಸಿಗೊಂಡಿದ್ಲು. ಅದನ್ನ ನಮ್ಮ ಕಾಶಕ್ಕಜ್ಜಿ ಮಾತನಾಗ ಹೇಳಬೇಕಂದರ “ಹುಚ್ಚ ರಂಡೆಗಂಡಾ ನಂಗ ಜಂತಿನ ಔಷದ ಕೊಟ್ಟ ಹಡಸಿದಂಗ ವರ್ಷಾ ಒಂದರ ಹಿಂದ ಒಂದರಂತ ಹತ್ತ ಹಡಸಿ ತಾ ಶಟದ ಹೋದಾ, ಅದರಾಗ ಒಂದ ಅರ್ಧಾ ನಾ ಮನ್ಯಾಗ ಉಣ್ಣಿಪುಡಿ ಹಾಕಿದ ಮ್ಯಾಲೆ ಹೋದ್ವು “ಅಂತಿದ್ಲು. ‘ಮನ್ಯಾಗ ಉಣ್ಣಿಪುಡಿ ಹಾಕಿದ ಮ್ಯಾಲೆ ಹೋದ್ವು’ ಅಂದರ ಆ ಕಾಲದಾಗ ಯಾವದೋ ಒಂದ ದೊಡ್ಡ ಜಡ್ಡ ಬಂದ ಊರತುಂಬ ಮಂದಿ ಸಾಯಲಿಕತ್ತಿದ್ದರಂತ, ಹಿಂಗಾಗಿ ಊರಮಂದೆಲ್ಲಾ ಆ ಜಡ್ಡ ಹರಡಬಾರದಂತ ಮನ್ಯಾಗ ಉಣ್ಣಿಪುಡಿ ಹಾಕತಿದ್ದರಂತ. ಪಾಪ, ಅಜ್ಜಿವು ಒಂದ ಐದ ಮಕ್ಕಳ ಆ ಜಡ್ಡನಾಗ ಹೋಗಿದ್ವು. ಈ ಕಾಶಕ್ಕಜ್ಜಿ ಮಾತಾಡೋದ ಹಿಂಗ, ಅಗದಿ ಅಳ್ಳ ಹುರದಂಗ. ಗಂಡಸರಿಗೆಲ್ಲಾ ‘ರಂಡೆಗಂಡ’ – ಹೆಂಗಸರಿಗೆಲ್ಲಾ ‘ಹುಚ್ಚರಂಡೆ’ ಅನ್ನದ ಅಕಿ ಮಾತ ಇದ್ದಿದ್ದಿಲ್ಲಾ. ಇಕಿ ಬಾಯಾಗ ಹಿಂತಾ ನಾಲ್ಕ ನುಡಿಮುತ್ತ ಕೇಳಲಿಕ್ಕೆ ಇಡಿ ಕಿಲ್ಲೆ ಮಂದಿ ಇಕಿ ಕೂಡೋ ಕಟ್ಟಿಗೆ ಸಂಜಿಮುಂದ ಮುಕರತಿದ್ದರು.

ಇವತ್ತ ಕಾಶಕ್ಕಜ್ಜಿ ತನ್ನ ಗಂಡ ಸತ್ತ ೫೦-೫೫ ವರ್ಷಾದರು ದಿವಸಾ ಹಳೇದೆಲ್ಲಾ ನೆನಿಸಿಕೊಂಡ ಅಂವಂದ ಹೆಣಾ ಎತ್ತಾಳ. ಆ ‘ಗಂಡಾ ಅನ್ನೋ ರಂಡೆಗಂಡನ’ ನೆನಪನ್ಯಾಗ ತಲಿ ಬೋಳಿಸಿಕೊಂಡ ‘ಬೋಳಮ್ಮಾ’ ಆಗಿ ಮಕ್ಕಳು, ಮೊಮ್ಮಕ್ಕಳು ,ಮರಿಮೊಮ್ಮಕ್ಕಳ ಕೈಲೆ ತಿವಿಸಿಗೋತ ಜೀವನಾ ತೀಡಲಿಕತ್ತಾಳ. ಮಾತ ಮಾತಿಗೆ ಗಂಡಗ, ದೇವರಿಗೆ ಮಂಗಳಾರತಿ ಮಾಡ್ಕೋತ ಹೊರಗ ಕಟ್ಟಿ ಮ್ಯಾಲೆ ಕೂತ, ಹೊಗೋರನ – ಬರೋರನ ಕರದ ಅವರ ಮುಂದ ತನ್ನ ಹಣೆಬರಹದ ಒಂಬತ್ತವಾರಿ ಸಿರಿ ಬಿಚ್ಚಿ – ಮಡಚಿ – ಬಿಚ್ಚಿ ಇಡೋದ ಅಕಿ ದಿನಚರಿ ಆಗೆದ. ಬಹುಶಃ ನಮ್ಮ ಹುಬ್ಬಳ್ಯಾಗ ಇನ್ನೂ ಜೀವಂತ ಇರೋ “ಮಡಿ ಹೆಂಗಸ ” ಅಂದರ ಇಕಿ ಒಬ್ಬಕಿನ ಇರಬೇಕೋ ಏನೋ? ಹಂಗ ಧಾರವಾಡ ವೃದ್ಧಾಶ್ರಮದಾಗ ಮೂರ-ನಾಲ್ಕ ಮಂದಿ ಹುಬ್ಬಳ್ಳಿಯವರು ಇನ್ನೂ ಜೀವಂತ ಇದ್ದಾರ ಆ ಮಾತ ಬ್ಯಾರೆ.
ಯಪ್ಪಾ ಇನ್ನ ನಾ ಇಕಿ ಕಣ್ಣಿಗೆ ಬಿದ್ರ ನನ್ನ ಜೀವಾ ತಿಂತಾಳ, ನಾ ಹೆಂಗ ತಪ್ಪಿಸಿಗೋ ಬೇಕೂ ಅಂತ ವಿಚಾರ ಮಾಡೋದರಾಗ ಅಕಿ ನನ್ನ ಕಡೆ ನೋಡಿ
“ಏನಪಾ ಪ್ರಶಾಂತಾ, ಇಷ್ಟ ದಿವಸ ಎಲ್ಲೆ ಶಟದಿದ್ದಿ, ಭಾಳ ದಿವಸಾದ ಮ್ಯಾಲೆ ಬಂದಿಯಲಾ ಕಿಲ್ಲೇಕ್ಕ,” ಅಂತ ನನ್ನ ಒದರೆ ಬಿಟ್ಟಳು. ಆತ ಇನ್ನ ಸತ್ತೆ ಅಂತ ಅಕಿ ಕಡೆ ಹೋಗಿ ಎದರಗಿನ ಕಟ್ಟಿ ಮ್ಯಾಲೆ ಕುಕ್ಕರ ಬಡದೆ.

ನಾ “ಏನ ಅಜ್ಜಿ ಆರಾಮ ಇದ್ದಿಯಾ “ಅಂತ ಇಷ್ಟ ಕೇಳಿದ್ದ ತಪ್ಪಾತ ನೋಡ್ರಿ
“ಹೂಂ ಇನ್ನೂ ಇದ್ದೇನಪಾ. ಸುಡಗಾಡ ಜೀವಾ ಇತ್ತಲಾಗ ಹೋಗವಲ್ತು, ಅತ್ತಲಾಗ ಬದುಕಲಿಕ್ಕ ಬಿಡವಲ್ತು. ಮನಿ ಮಂದಿಗೆಲ್ಲಾ ಭಾರ ಆಗಿ ಬದಕಲಿಕತ್ತೇನಿ, ನನ್ನ ಗಂಡಾ ಈ ಮುಂಡೆ ಮಕ್ಕಳನ್ನ ನನ್ನ ಉಡೆದಾಗ ಹಾಕಿ ಹೋದಾ, ಇವನ್ನ ಇಷ್ಟ ದೊಡ್ಡವರನ ಮಾಡಿ ಬೆಳಸಿ ಸಂಸಾರಕ್ಕ ಹಚ್ಚೊದರಾಗ ನಂಗ ಸಾಕ-ಸಾಕಾಗಿ ಹೋತ, ಈಗ ನೋಡ ನಾ ಮನಿ ಮಂದಿಗೆ ಬ್ಯಾಡ ಆಗಿ , ಬಾಜು ಮನಿ ಕಟ್ಟಿಗೆ ಭಾರ ಆಗಿ, ಆ ರಂಡೆಗಂಡನ್ನ ನೆನಸೋಗತ ಇವತ್ತ ಸಾಯ್ತೆನಿ – ನಾಳೆ ಸಾಯ್ತೆನಿ ಅಂತ ಕಾಯಲಿಕತ್ತೇನಿ” ಅಂದ್ಲು.
ಪಾಪಾ ಮುದಕಿಗೆ ಮುಂಜಾನಿಯಿಂದ ಅಕಿನ್ನ ಮಾತಾಡ್ಸೋರು ಯಾರು ಸಿಕ್ಕಿದ್ದಿಲ್ಲ ಕಾಣಸ್ತದ ನನ್ನ ನೋಡಿ ಭಾಳ ಖುಷಿಲೇ ತನ್ನ ಪುರಾಣ ಶುರು ಮಾಡಿದ್ಲು
“ಏ ಹಂಗ್ಯಾಕ ಅಂತಿ ಅಜ್ಜಿ, ನೀ ಇನ್ನು ಗಟ್ಟಿ ಇದ್ದಿ. ಇನ್ನೂ ಮರಿ ಮೊಮ್ಮಕ್ಕಳ ಬಾಣಂತನ ಮಾಡಬೇಕು” ಅಂತ ನಾ ಕಾಲ ಕೆದರಿದೆ.

“ಲೇ… ಖೋಡಿ ರಂಡೆಗಂಡಾ , ನಂಗ ಅದೊಂದ ಕಡಿಮೆ ಆಗೇದ ನೋಡ. ನಾ ನಮ್ಮವ್ವಂದ ಎರಡ ಬಾಣಂತನ ಹಿಡದ ಒಟ್ಟ ಹನ್ನೋಂದ ಬಾಣಂತನ ಮಾಡಿ ಸಾಕಾಗೇದ. ಇನ್ನ ಯಾವಕೆರ ಹುಚ್ಚರಂಡಿ ಹಡದರ ನಾ ತಿರಗಿನೂ ನೋಡಂಗಿಲ್ಲಾ “ಅಂತ ಸಿಟ್ಟಾದ್ಲು. ಅಕಿ ಹೇಳೋದು ಖರೇನ ಮನ್ಯಾಗ ಮಕ್ಕಳು-ಮೊಮ್ಮಕ್ಕಳು ಯಾರ ಹಡದಾಗೂ ಯಲ್ಲಾರು ಇಕಿನ್ನ ‘ಹತ್ತ ಹಡದ ಅನುಭವ ಇದ್ದೋಕಿ’ ಅಂತ ಬಾಣಂತನಕ್ಕ ಕರೆಯೋರು. ಇಕಿನೂ ಆವಾಗ ಖುಷಿಲೇ “ಅಯ್ಯ, ಈ ಬೋಕಾಣಗಿತ್ಯಾರರ ಎಷ್ಟ ಹಡಿಬೇಕ ತೊಗೊ, ಎರಡ ಹಡಿಲಿಕ್ಕೆ ತಿಣಕ್ಯಾಡತಾವ ” ಅಂತ ಹುರಪಿಲೆ ಬಾಣಂತನ ಮಾಡಿದ್ಲು. ಆದ್ರ ಇಗ ಅದ ಮಕ್ಕಳು- ಮರಿಮೊಮ್ಮಕ್ಕಳು ಇಕಿ ಕಡೆ ಮೂಸ ನೋಡವಲ್ಲರಾಗ್ಯಾರ.

ಅಷ್ಟರಾಗ ನಮ್ಮ ಜೋಶ್ಯಾನ ಮಗಾ ಆಡಾಡ್ತ ಇಕಿನ ಬಂದ ಮುಟ್ಟಿ ಬಿಡ್ತು. ತೋಗೊ ಮದ್ಲ ಇಕಿ ಹೊಟ್ಟ್ಯಾಗ ಬೆಂಕಿ ಬಿದ್ದಿತ್ತು, ಅಂವಾ ಇಕಿನ್ನ ಮುಟ್ಟೋದ ತಡಾ ಇಕಿ ಪಿತ್ತ ನೆತ್ತಿಗೇರಿ “ನಿನ್ನ ಸುಟ್ಟ ಬರಲಿ, ಹೆಣಾ ಎತ್ತಲಿ. ರಂಡೆಗಂಡಾ ಬುದ್ಧಿ ಎಲ್ಲಿ ಇಟ್ಟಿ. ಓಣಿ ಮಂದಿನೆಲ್ಲಾ ಮುಟ್ಟಿ ಬಂದಿರತಿ, ನನ್ನ ಮುಟ್ಟ ಬಾರದಂತ ಗೊತ್ತಾಗಂಗಿಲ್ಲಾ. ಇನ್ನ ಹಿಂತಾ ಥಂಡ್ಯಾಗ ನಾ ಮತ್ತ ಸ್ನಾನಾ ಮಾಡಬೇಕು” ಅಂತ ಪಾಪ ಆ ೫ ವರ್ಷದ ಕೂಸಿಗೆ ಚೀರಿದ್ಲು. ನಾ ಹೋಗಲಿ ಬಿಡ ಅಜ್ಜಿ ಆ ಸಣ್ಣ ಹುಡಗಗ ಏನ ತಿಳಿತದ ಅಂತ ಸಮಾಧಾನ ಮಾಡಿದೆ,
“ಆ ಹುಚ್ಚ ರಂಡೆಗಂಡಗ ತಿಳಿಲಿಲ್ಲಾಂದರ ಏನಾತು, ಅವರವ್ವಗ – ಅವರಜ್ಜಿಗೆರ ತಿಳಿತದ ಇಲ್ಲೋ ? ಆ ಹುಡಗನ ಇಲ್ಲ್ಯಾಕ್ ಬಿಡಬೇಕು ? ಅವರವ್ವ ಅಂತೂ ಕಡಿಗ್ಯಾದರೂ ಕೂಡಂಗಿಲ್ಲಾ, ಮಡಿ – ಮೈಲಗಿ ಒಂದೂ ಗೊತ್ತ ಇಲ್ಲಾ. ಮನಿ ಎಲ್ಲಾ ಏಕಾಕಾರ ಮಾಡಿ ಇಡ್ತಾವ ” ಅಂತ ಟಾರ್ಗೆಟ್ ಚೆಂಜ್ ಮಾಡಿದ್ಲು. ನಾ ಇದ ಯಾಕೋ ವಿಷಯ ಸಿರಿಯಸ್ ಹೊಂಡ್ತು, ಇನ್ನ ಹಗರಕ ‘ನಿಮ್ಮ ಮನ್ಯಾಗ ನಿನ್ನ ಹೆಂಡತಿ ಕೂಡ್ತಾಳಿಲ್ಲೋ’ ಅಂತ ನನ್ನ ಹೆಂಡತಿ ಮ್ಯಾಲೆ ಬಂದರು ಬಂದ್ಲ, ಸುಮ್ಮನ ಇನ್ನ ಇಲ್ಲಿಂದ ಕಾಲ ಕೀಳೋದ ಛಲೋ ಅಂತ ಎದ್ದೆ. ಅಕಿನೂ ತನ್ನ ಒಂಬತ್ತವಾರಿ ಪತ್ಲಾ ಮುದಡಿ ಮಾಡಿ ಮೂರವಾರಿ ಮಾಡ್ಕೋಂಡ ಮೊಣಕಾಲ ಮ್ಯಾಲೆ ಏರಿಸಿಕೊಂಡ ಬೆನ್ನ ಬಗ್ಗಿಸಿಕೊಂಡ ಎದ್ಲು.

ಆದ್ರ ಇತ್ತಿಚಿಗೆ ನಾವೆಲ್ಲಾ ಜೀವನದಾಗ ಮಡಿ -ಮೈಲಿಗೆ ಮರತ ಮುಟ್ಟಾಟ ಆಡೋದ ನೋಡಿ ಅಜ್ಜಿ ಪಾಪ ಭಾಳ ಮರಗಿ ಬಿಟ್ಟಿದ್ಲು. ಮದ್ಲ ಮಕ್ಕಳ ಸಾಲಿಗೆ ಹೋಗಿ ಬಂದಾಗ ಒಮ್ಮೆ ಮನ್ಯಾಗ “ಖೋಡಿ ರಂಡೆಗಂಡರು ,ಯಾರ ಯಾರನ ಮುಟ್ಟಿರತಾವೊ ಏನೋ ಸಾಲ್ಯಾಗ” ಅಂತ ಮನಿಗೆ ಬಂದ ಕೂಡ್ಲೆ ಬಾಯಾಗ ಪಂಚಗವ್ಯಾ ಹಾಕಿ ದಿವಸಾ ಶುಚಿ ಮಾಡತಿದ್ಲಂತ. ಬಹುಶಃ ಮನ್ಯಾಗ ದಿವಸಾ ಒಂದ ಕೊಡಾ ಪಂಚಗವ್ಯಾ ಮಾಡಿ ಇಟ್ಟಿರತಿದ್ದಳೊ ಏನೊ. ಆದ್ರ ಇತ್ತಿಚಿಗೆ ಮೊಮ್ಮಕ್ಕಳಿಗೆ ‘ಪಂಚಗವ್ಯಾ’ ಅಂದರ ಏನೂ ಅಂತ ಸಹಿತ ಗೊತ್ತಿಲ್ಲದಂಗ ಆಗಿ ಹೋಗೇದ ಅಂತಿದ್ಲು.

ಹಂಗ ನಮ್ಮ ಜೋಶ್ಯಾ ವಾರಕ್ಕ ಎರಡಸರತೆ ಹೊರಗ ನಮ್ಮ ಜೊತಿ ಕಮರಿಪೆಟ್ ಸಾವಜಿ ಖಾನಾವಳಿ ಒಳಗ ‘ಪಂಚಗವ್ಯ’ ತೊಗತಿರತಾನ ಆ ಮಾತ ಬ್ಯಾರೆ.
“ನಿಮ್ಮ ಕರ್ಮಕ್ಕ ಪಂಚಗವ್ಯಾ ದಿವಸ ಹಾಕ್ಕೊತ ಹೋಗೊದಕಿಂತಾ ಸುಮ್ಮನ ಕಾರ್ಫೊರೇಶನವರಿಗೆ ಹೇಳಿ ಮೂರ ದಿವಸಕ್ಕೊಮ್ಮೆ ನಳದಾಗ ನೀರ ಬದ್ಲಿ ಪಂಚಗವ್ಯಾ ಬಿಡ ಅಂತ ಹೇಳಬೇಕು, ಅಷ್ಟ ಬ್ರಾಹ್ಮಣರು ಕೆಟ್ಟ ಹೋಗ್ಯಾರ” ಅಂತ ಕೊರಗತಿದ್ಲು.
ಮನ್ಯಾಗ ಮುದಕಿದ ಮೈಡಿ -ಮೈಲಿಗೆ ಒಂದೂ ನಡಿತಿದ್ದಿಲ್ಲಾ, ಇಕಿಗೆ ಅದನ್ನೆಲ್ಲಾ ನೋಡಿ ತಡ್ಕೊಳ್ಳಿಕ್ಕೆ ಆಗತಿದ್ದಿದ್ದಿಲ್ಲಾ. ಎಲ್ಲಾದಕ್ಕೂ ಆ ‘ಗಂಡಾ ಅನ್ನೋ ರಂಡೆಗಂಡನ’ ಕಾರಣಂತ ಮತ್ತ ತನ್ನ ಹಳೇ ಗಂಡನ ಪಾದಕ್ಕ ಬರತಿದ್ಲು. ಪಾಪಾ, ಆ ರಂಡೆಗಂಡ ಮ್ಯಾಲೆ ಹೋದರು ಈಕಿ ಕಯ್ಯಾಗ ದಿವಸಾ ಬೈಸಿಗೊಳ್ಳೊದ ಏನ ತಪ್ಪಿದ್ದಿಲ್ಲಾ.

ನಮ್ಮ ಕಾಶಕ್ಕಜ್ಜಿಗೆ ಮಾತ- ಮಾತಿಗೆ ‘ರಂಡೆಗಂಡಾ’ ಅನ್ನೋದ ರೂಡಿಯಾಗಿ ಬಿಟ್ಟಿತ್ತು. ಬಹುಶಃ ಅಕಿ ತವರಮನಿ ಅಡ್ರೆಸ್ ‘ರಂಡೆಗಂಡನವರ’ ಅಂತ ಇತ್ತೋ ಏನೋ ಅಕಿ ಬಾಯಾಗ ಗಂಡಸರೆಲ್ಲಾ ರಂಡೆಗಂಡರ. ಅಕಿ ಪ್ರೀತಿಲೇ ನಮಗ ಕರದರು ನಾವ ‘ರಂಡೆಗಂಡಾ’, ಸಿಟ್ಟಲೇ ಬೈದರು ನಾವ ‘ರಂಡೆಗಂಡಾ’. ಅದ್ರ ನನ್ನ ದೃಷ್ಟಿ ಒಳಗ ಖರೆ ರಂಡೆಗಂಡಾ ಅಂದ್ರ ಅಕಿ ಗಂಡ ಒಬ್ಬನ, ಯಾಕಂದರ ಅಕಿ ಕಡೆ ನಾವೂ ಅನಿಸಿಗೊಳ್ಳಿ ಅಂತ ಅಕಿನ್ನ ಇಲ್ಲೆ ಬಿಟ್ಟ ಮ್ಯಾಲೆ ಹೊಗ್ಯಾನಲಾ ಅದಕ್ಕ. ಹಂಗ ಇಕಿ ಮಾತ ಮಾತಿಗೆ ಎಲ್ಲಾ ಗಂಡಸರಿಗೂ ‘ರಂಡೆಗಂಡಾ’ ಅಂತ ಅನ್ನೋದರಾಗ ಅಂತಃ ಕರಣ ಇತ್ತ, ಆತ್ಮೀಯತೇ ಇತ್ತ, ಕಳಕಳಿ – ಕಾಳಜಿ ಇತ್ತ. ಅಕಿ ಮಾತನಾಗ ‘ನನ್ನ ರಂಡೆಗಂಡಾ’ ಅನ್ನೋ ಹೆಮ್ಮೆ ಇತ್ತ. ಇವತ್ತ ನಮ್ಮ ಹೆಂಡಂದರು ಸಿಟ್ಟಲೇ “ನೀ ಸಿರಿ ಕೊಡಸ್ತಿಯೋ ಇಲ್ಲೋ?” ಅಂತ ಅಂದರ ಅದರ ಅರ್ಥಾ ‘ರಂಡೆಗಂಡಾ ನೀ ಹೊಸಾ ಸಿರಿ ಕೊಡಸ್ತಿಯೋ, ಇಲ್ಲಾ ನಾ ಏನ ಇದ್ದಿದ್ದು ಕಳದ ಹೊರಗ ಒಗಿಲೋ” ಅಂದಂಗ ಅಂತ ನನಗ ಅನಸ್ತದ.

ಅನ್ನಂಗ ಇಕಿ ಬಗ್ಗೆ ಇನ್ನೊಂದ ವಿಷಯ ಹೇಳೋದ ಮರತೆ. ಒಂದ ಸರತೆ ಯಾವದೋ ಮಠದ ಸ್ವಾಮಿ ಇವರ ಮನಿಗೆ ಪಾದ ಪೂಜಾಕ್ಕ ಬಂದಿದ್ರಂತ. ಇಡಿ ಊರಾಗಿನ ಇವರ ಪೈಕಿ ಮಂದಿ ಇವರ ಮನಿಗೆ ಬಂದ ಮುದ್ರಾ ಹಾಕಿಸಿಗೊಳ್ಳಿಕತ್ತಿದ್ರಂತ . ಈಕಿ ಪಾಳೆ ಬರೊದಕ್ಕು , ಆ ಮುದ್ರಾ ಹಾಕೊ ‘ರಾಡ್ ‘ ಆರಿ ಹೋಗಿತ್ತಂತ. ಅದನ್ನ ಮತ್ತ ಕೆಂಡದ ಮ್ಯಾಲೆ ಕೆಂಪ ಕಾಯಿಸಿ ಸ್ವಾಮಿಗಳು ತಮ್ಮ ಗಡಬಿಡಿ ಒಳಗ ಇಕಿಗೆ ಮದ್ಲ ಒತ್ತಿ ಬಿಟ್ಟರಂತ. ತೊಗೋ , ಹೇಳ್ತಿನಿ ಊರ ಮಂದಿ ಮುಂದ ಇಕಿ ಒಮ್ಮಿಂದೊಮ್ಮಿಲೆ ” ಕೊಂದ್ಯೋ, ರಂಡೆ ಗಂಡಾ….ನಿನ್ನ ಸುಟ್ಟಬರಲಿ… ಕೊಂದ್ಯೋ ” ಅಂತ ಚೀರಿ ಬಿಟ್ಲಂತ . ಪಾಪಾ ಆ ಸ್ವಾಮಿಗಳು ಈಕಿ ಮಾರಿ ಒಂದ ಸರತೆ , ಫೊಟೊದಾಗಿನ ರಾಯರ ಮಾರಿ ಒಂದ ಸರತೆ ಮತ್ತೊಮ್ಮೆ ಮೂಲ ರಾಮನ ಮಾರಿ ನೋಡಿ ಸುಮ್ಮನ ತಲಿ ಕೆಳಗ ಮಾಡ್ಕೋಂಡ ಮುಂದಿನವರಿಗೆ ಮುದ್ರಾ ಕೊಟ್ಟ ಹೋದರಂತ. ಹಂಗ ಸ್ವಾಮಿಗಳಿಗೆ ಬಿಡಲಾರದೋಕಿ ಇನ್ನ ಗಂಡಗ, ನಮಗ ಬಿಟ್ಟಾಳ?

ಇನ್ನ ನಮ್ಮ ಜೋಶ್ಯಾ ಈ ಮನೆತನದ ಇನ್ನೂ ಜೀವಂತ ಇರೊ ‘ರಂಡೆಗಂಡ’, ಅಂವಾ ತನ್ನ ಹೆಂಡ್ತಿ ಕಡೆ ದಿವಸಾ ಬೈಸಿಗೊಳ್ಳೊದ ಏನ ದೊಡ್ಡದ ? ಅವನ ಹೆಂಡತಿ ಗಂಡಗ ಬರೆ ಏಕವಚನಲೇ ಮಾತೋಡದರಾಗ ಏನ ತಪ್ಪ, ಹೇಳ್ರಿ?
ಇರಲಿ, ಇದ ಬರೆ ನಮ್ಮ ಜೋಶ್ಯಾ ಮತ್ತ ಅವನ ಹೆಂಡತಿ ವಿಷಯ ಒಂದ ಅಲ್ಲಾ, ನಮ್ಮೇಲ್ಲಾರದು ಅದ ಹಣೇಬರಹ. ಇತ್ತೀಚಿಗೆ ನಮ್ಮ ಜನರೇಶನ್ ಹೆಂಡಂದ್ರು ಗಂಡಂದರಿಗೆ ಏಕವಚನದಲೆ ‘ಅಂವಾ-ಇಂವಾ’ ಅನ್ನೋದ ಭಾಳ ಕಾಮನ್ ಆಗಿ ಬಿಟ್ಟದ ,ಇದಕ್ಕ ಫ್ಯಾಶನ್ ಅಂದ್ರೂ ಅಡ್ಡಿಯಿಲ್ಲಾ ಅನ್ರಿ. ನಿಮಗ ಇದ ಏನರ ಅನಸವಲ್ತಾಕ, ನಂಗಂತೂ ಸರಿ ಕಾಣವಲ್ತು. ಅಲ್ಲಾ ನನ್ನ ಹೆಂಡತಿ ನನಗ ತನ್ನ ನಿದ್ದಿಗಣ್ಣಾಗೂ “ರ್ರೀ…” ನ ಅಂತಾಳ ಅಂತ ನಾ ಈ ಮಾತ ಹೇಳಲಿಕತ್ತಿಲ್ಲಾ. ಆದ್ರೂ ಗಂಡಾ ಅನ್ನೋ ಪ್ರಾಣಿಗೆ ಹೆಂಡತಿ ಅನ್ನೋಕಿ ಇಷ್ಟ ಹಗರ ಮಾತಾಡಬಾರದ ಅನ್ನೋದ ನನ್ನ ವಿಚಾರ. ಅಲ್ಲಾ, ಹಂಗ ‘ಹೋಗೊ-ಬಾರೊ’ ಒಳಗ ನಿಮ್ಮ ನಿಮ್ಮ ಗಂಡಾ -ಹೆಂಡ್ತಿ ಪ್ರೀತಿ ಜಾಸ್ತಿ ಇದ್ದರ ನೀವ ನಿಮ್ಮ ಮನ್ಯಾಗ ಏನರ ಹಾಳಗುಂಡಿ ಬೀಳರಿ ಅದಕ್ಯಾರ ಬ್ಯಾಡ ಅನ್ನಂಗಿಲ್ಲಾ, ಆದ್ರ ನಾಲ್ಕ ಮಂದಿ ಮುಂದರ ಛಂದಾಗಿ ಹೆಂಡತಿ ಕಡೆಯಿಂದ ರಿಸ್ಪೆಕ್ಟಲೆ ಕರಿಸಿಗೋಬೇಕರಿ.

ಆದ್ರು ಒಟ್ಟ ಈ ಗಂಡಾ ಅನ್ನೋಂವಾ ಇತ್ತಿಚಿಗೆ ಹೆಂಡತಿ ಬಾಯಾಗ ಸಿಕ್ಕ ರಂಡೆಗಂಡ ಆಗಿ ಹೋಗ್ಯಾನ . ಒಂದ ಕಾಲದಾಗ ಇದ ಹೆಣ್ಣ ಮಕ್ಕಳ ಗಂಡನ್ನ ಹೆಸರ ಹೇಳಬೇಕಾರ ಒಗಟ ಹಚ್ಚಿ ಹೇಳ್ತಿದ್ದರು, ಈಗ ಒಗಟ ದೂರ ಹೋತ, ಆ ಒರಟ ಬಾಯಾಗ ‘ಬರ್ರಿ-ಹೋಗರಿ’ ಬಂದರ ಸಾಕಾಗೇದ. ಹಂಗ ಅಕಸ್ಮಾತ ಒತ್ತಾಯದ್ಲೆ ಒಗಟ ಹಚ್ಚಿದರೂ
“ಆಡು, ಆಡಿಗೆ ಎರಡ ಕೋಡ, ನನ್ನ ರಂಡೆಗಂಡ ಪ್ರಶಾಂತ ಆಡೂರ ಭಾಳ ಕಾಡ” ಅಂತ ಹೇಳಿದ್ರು ಹೇಳಬಹುದು. ಹಂಗ ಏನರ ಈ ಒಗಟ ಯಾರರ ಹೆಣ್ಣಮಕ್ಕಳು ಉಪಯೋಗ ಮಾಡ್ಬೇಕಂದರ ಆ ರಂಡೆಗಂಡ ಅನ್ನೊ ಶಬ್ದದ ಮುಂದ ನಿಮ್ಮ-ನಿಮ್ಮ ಗಂಡಂದರ ಹೆಸರ ಹಾಕರಿ ಮತ್ತ. ಎಲ್ಲರ ನನ್ನ ಹೆಸರ ಹಂಗ ಇಟ್ಟ ಹೇಳಿ-ಗಿಳಿರಿ.

ಅಲ್ಲಾ ಈ ಕಾಶಕ್ಕ ಅಜ್ಜಿಗೆ ಹೋಲಿಸಿದರ ನಾವು, ಅಂದರ ‘ರಂಡೆಗಂಡಂದರು’ ನಮ್ಮ-ನಮ್ಮ ಹೆಂಡಂದರ ನಮಗ ಏಕವಚನದಲೇ ಇಷ್ಟ ಅಲ್ಲಾ, ಬಾಲೇ – ಹೋಗಲೇ ಅಂದರೂ ಸುಮ್ಮನ ಬಾಯಿ ಮುಚಗೊಂಡ ಇರೋದ ಛಲೋ ಅಂತ ಅನಸ್ತದ. ನೀವ ಏನಂತರಿ?
“ರಂಡೆಗಂಡಾ , ನಿಂದಿಷ್ಟ ನೀ ನೋಡ್ಕೊಂಡ ಬಾಯಿಮುಚ್ಚಗೊಂಡ ಬರಿ, ನಮ್ಮನ್ನ ಯಾಕ ನಡಕ ತರತಿ” ಅಂತೀರಿನ ಮತ್ತ ?
ಅಂತಿದ್ರ ಅನ್ರಿ, ಏನ್ ತಪ್ಪಿಲ್ಲಾ. ನನಗೊತ್ತ ನಿಮ್ಮ ಆ ‘ರಂಡೆಗಂಡ’ ಅನ್ನೋ ಶಬ್ದದಾಗ ನನ್ನ ಬಗ್ಗೆ ಅಂತಃ ಕರಣ, ಆತ್ಮೀಯತೇ, ಕಳ ಕಳಿ – ಕಾಳಜಿ ಅದ ಅಂತ. ಆದ್ರ ಇಂವಾ ಏನ ಬರಿತಾನ್ಲೇ ‘ರಂಡೆಗಂಡಾ’ ಅಂತ ಸಿಟ್ಟಾಗಬ್ಯಾಡರಿ ಇಷ್ಟ.